Blog

  • ಹಂಟಿಂಗ್‌ಟನ್ ಕಾಯಿಲೆ (Huntington’s Disease) | ಪಾವತಿ ನಿಯಂತ್ರಣ ಮಂಡಳಿ (PRB) | ತಾಜ್ ತ್ರಾಪಿಜ್ಯ/ಟ್ರಾಪೆಜಿಯಂ ವಲಯ (TTZ)

    ಹಂಟಿಂಗ್‌ಟನ್ ಕಾಯಿಲೆ (Huntington’s Disease)

    ಸಾಮಾನ್ಯ ಅಧ್ಯಯನ-2 / ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಭಾರತದಲ್ಲಿ ಹಂಟಿಂಗ್‌ಟನ್ ಕಾಯಿಲೆಯು ಸೀಮಿತ ಅರಿವು ಮತ್ತು ವಿಳಂಬವಾದ ರೋಗನಿರ್ಣಯದಿಂದಾಗಿ, ಸಮರ್ಪಕವಾಗಿ ಪತ್ತೆಯಾಗದೇ ಉಳಿದಿದೆ ಎಂಬ ವಿಷಯವನ್ನು ಗುರುತಿಸಲಾಗುತ್ತಿದೆ.

    ಹಂಟಿಂಗ್‌ಟನ್ ಕಾಯಿಲೆ (HD)ಯ ಬಗ್ಗೆ:

    • ಇದು ಮೆದುಳಿನ ಮೇಲೆ ಪರಿಣಾಮ ಬೀರುವ ಅಪರೂಪದ, ಹಂತ ಹಂತವಾಗಿ ಉಲ್ಬಣಗೊಳ್ಳುವ, ಅನುವಂಶಿಕ ನರಕ್ಷಯ ಕಾಯಿಲೆಯಾಗಿದೆ. 
    • ಪರಿಣಾಮ:- ಚಲನಾ ವೈಫಲ್ಯ, ಬೌದ್ಧಿಕ ಕ್ಷಮತೆ ಕುಸಿತ ಮತ್ತು ಮಾನಸಿಕ ಅಡಚಣೆಗಳಿಗೆ (ಖಿನ್ನತೆ, ಮನೋವಿಕಾರ, ಸಿಡುಕುತನ, ಒ.ಸಿ.ಡಿ) ಹಾಗೂ ಜೀವಮಾನದ ಅಸಾಮರ್ಥ್ಯಕ್ಕೆ ಎಡೆಮಾಡಿಕೊಡುತ್ತದೆ.
    • ಕಾರಣ:- ಈ ಕಾಯಿಲೆಯು ಹಂಟಿಂಗ್‌ಟಿನ್ (HTT) ವಂಶವಾಹಿಯಲ್ಲಿನ ರೂಪಾಂತರದಿಂದ ಉಂಟಾಗುತ್ತದೆ. 
    • ಇದು ‘ಆಟೋಸೋಮಲ್ ಡಾಮಿನೆಂಟ್’ (ದೈಹಿಕ ಪ್ರಬಲ) ಆನುವಂಶಿಕ ಮಾದರಿಯನ್ನು ಅನುಸರಿಸುತ್ತದೆ. ಅಂದರೆ, ತಂದೆ ಅಥವಾ ತಾಯಿಯಿಂದ ರೂಪಾಂತರಗೊಂಡ ವಂಶವಾಹಿಯನ್ನು ಅನುವಂಶಿಕವಾಗಿ ಪಡೆಯುವ ಮಗುವಿಗೆ ಈ ಕಾಯಿಲೆ ಬರುತ್ತದೆ.
    • ರಕ್ತಸಂಬಂಧಿಗಳ ನಡುವಿನ ವಿವಾಹಗಳು:- ಈ ಕಾಯಿಲೆ ಹರಡುವ ಸಾಧ್ಯತೆಯನ್ನು 75% ರಷ್ಟು ಗಣನೀಯವಾಗಿ ಹೆಚ್ಚಿಸುತ್ತವೆ.
    • ರೋಗಲಕ್ಷಣಗಳು ಸಾಮಾನ್ಯವಾಗಿ 40 ಮತ್ತು 50 ವರ್ಷ ವಯಸ್ಸಿನ ನಡುವೆ ಪ್ರಾರಂಭವಾಗುತ್ತವೆ ಮತ್ತು 15–20 ವರ್ಷಗಳ ಅವಧಿಯವರೆಗೆ ಉಲ್ಬಣಗೊಳ್ಳುತ್ತವೆ.
    • ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧಿ ಲಭ್ಯವಿಲ್ಲ:- ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಆರೈಕೆದಾರರ ಹೊರೆಯನ್ನು ತಗ್ಗಿಸಲು ಚಿಕಿತ್ಸೆಗಳು ಲಭ್ಯವಿವೆ.

    ನೀತಿ ದೃಷ್ಟಿಕೋನ:

    • ಅಪರೂಪದ ಕಾಯಿಲೆಗಳ ವ್ಯಾಖ್ಯಾನ:- ವಿಶ್ವ ಆರೋಗ್ಯ ಸಂಸ್ಥೆಯು (WHO), ಪ್ರತಿ 1,000 ಜನರಲ್ಲಿ 1 ಅಥವಾ ಅದಕ್ಕಿಂತ ಕಡಿಮೆ ಜನರ ಮೇಲೆ ಪರಿಣಾಮ ಬೀರುವ ಕಾಯಿಲೆಗಳನ್ನು ಅಪರೂಪದ ಕಾಯಿಲೆಗಳೆಂದು ವ್ಯಾಖ್ಯಾನಿಸುತ್ತದೆ. 
    • ಕಡಿಮೆ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ:- ಜಾಗತಿಕವಾಗಿ 7,000ಕ್ಕೂ ಹೆಚ್ಚು ಅಪರೂಪದ ಕಾಯಿಲೆಗಳು ಅಸ್ತಿತ್ವದಲ್ಲಿದ್ದರೂ, 5% ಕ್ಕಿಂತ ಕಡಿಮೆ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆಯ ಆಯ್ಕೆಗಳಿವೆ.

    ಅಪರೂಪದ ಕಾಯಿಲೆಗಳಿಗೆ ರಾಷ್ಟ್ರೀಯ ನೀತಿಯನ್ನು (NPRD), 2021

    • ಉದ್ದೇಶ:- ಅಪರೂಪದ ಕಾಯಿಲೆಗಳ ಗುರುತಿಸುವಿಕೆ, ತಡೆಗಟ್ಟುವಿಕೆ ಮತ್ತು ಅಂತಹ ಕಾಯಿಲೆಗಳಿರುವ ಕುಟುಂಬಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
    • 63 ಅಪರೂಪದ ಕಾಯಿಲೆಗಳನ್ನು ಗುರುತಿಸಿದೆ:- ಈ ನೀತಿಯು ಭಾರತದಲ್ಲಿ 63 ಅಪರೂಪದ ಕಾಯಿಲೆಗಳನ್ನು ಗುರುತಿಸಿದೆ, ಆದರೆ ಹಂಟಿಂಗ್‌ಟನ್ ಕಾಯಿಲೆಯನ್ನು ಇದರಲ್ಲಿ ಸೇರಿಸಲಾಗಿಲ್ಲ.
    • ಗುರುತಿಸಲಾದ 63 ಕಾಯಿಲೆಗಳಲ್ಲಿ ಯಾವುದಾದರೂ ಕಾಯಿಲೆ ಹೊಂದಿರುವ ರೋಗಿಗಳು ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (PM-JAY)ಯ ಅಡಿಯಲ್ಲಿ ₹50 ಲಕ್ಷದವರೆಗೆ ಆರ್ಥಿಕ ನೆರವು ಪಡೆಯಲು ಅರ್ಹರಾಗಿರುತ್ತಾರೆ.

    ಪಾವತಿ ನಿಯಂತ್ರಣ ಮಂಡಳಿ (PRB)

    ಸಾಮಾನ್ಯ ಅಧ್ಯಯನ-3 / ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ‘ಭಾರತೀಯ ರಿಸರ್ವ್ ಬ್ಯಾಂಕ್’(RBI)ನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ಪಾವತಿ ನಿಯಂತ್ರಣ ಮಂಡಳಿ (PRB)ಯ ಮೊದಲ ಸಭೆ ನಡೆಯಿತು. ಇದು ಭಾರತದ ಹೊಸ ಪಾವತಿ ಆಡಳಿತ ಚೌಕಟ್ಟಿನ ಕಾರ್ಯಾರಂಭವನ್ನು ಸೂಚಿಸುತ್ತದೆ.

    ‘ಪಾವತಿ ನಿಯಂತ್ರಣ ಮಂಡಳಿ’ (Payment Regulatory Board)ಯ ಬಗ್ಗೆ:

    • ಶಾಸನಬದ್ಧ ಸಂಸ್ಥೆ:- ಇದೊಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಇದರ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿನ ಪಾವತಿ ಮತ್ತು ವ್ಯವಹಾರ ನಿವಾರಣಾ ವ್ಯವಸ್ಥೆಗಳ ಮೇಲೆ ನಿಯಂತ್ರಣ ಮತ್ತು ಮೇಲ್ವಿಚಾರಣಾ ಅಧಿಕಾರವನ್ನು ಚಲಾಯಿಸುತ್ತದೆ.
    • ಸ್ಥಾಪನೆ:- ಪಾವತಿ ಮತ್ತು ವ್ಯವಹಾರ ನಿವಾರಣಾ ವ್ಯವಸ್ಥೆಗಳ (PSS) ಕಾಯ್ದೆ, 2007ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
    • ಧ್ಯೇಯೋದ್ದೇಶ:- ಡಿಜಿಟಲ್ ಮತ್ತು ನಗದು ರಹಿತ ಪಾವತಿಗಳಲ್ಲಿ ಸುರಕ್ಷತೆ, ದಕ್ಷತೆ, ಸ್ಥಿರತೆ ಮತ್ತು ಗ್ರಾಹಕರ ರಕ್ಷಣೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.

    ತಾಜ್ ತ್ರಾಪಿಜ್ಯ/ಟ್ರಾಪೆಜಿಯಂ ವಲಯ (TTZ)

    ಸಾಮಾನ್ಯ ಅಧ್ಯಯನ- 3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ತಾಜ್ ಟ್ರಾಪೆಜಿಯಂ ವಲಯದಲ್ಲಿ (TTZ) ಪರಿಸರ ನಿಯಮಗಳ ಪಾಲನೆಯಾಗದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯು  ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ಜಾರಿ ಮಾಡಿದೆ.

    ತಾಜ್ ತ್ರಾಪಿಜ್ಯ/ ಟ್ರಾಪೆಜಿಯಂ ವಲಯ (TTZ)ದ ಬಗ್ಗೆ:

    • ಉದ್ದೇಶ:- ಇದು ತಾಜ್ ಮಹಲ್, ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ (ಇವೆಲ್ಲವೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು) ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ರೂಪಿಸಲಾದ, 10,400 ಚದರ ಕಿ.ಮೀ. ವಿಸ್ತೀರ್ಣದ ತ್ರಾಪಿಜ್ಯ ಆಕಾರದ ಪರಿಸರ ಸಂರಕ್ಷಣಾ ವಲಯದ ಪ್ರದೇಶವಾಗಿದೆ.
    • ಇದು ಕೈಗಾರಿಕಾ ಮಾಲಿನ್ಯವನ್ನು ನಿಯಂತ್ರಿಸಲು ವಿಶೇಷ ನಿಯಮಗಳನ್ನು ಹೊಂದಿದೆ.
    • ಸ್ಥಾಪನೆ:- ತಾಜ್ ಮಹಲ್ ಮೇಲೆ ಪರಿಣಾಮ ಬೀರುವ ಮಾಲಿನ್ಯವನ್ನು ನಿಯಂತ್ರಿಸಲು 1996ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇದನ್ನು ಸ್ಥಾಪಿಸಿತು.
    • ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ:- TTZ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು ಕಲ್ಲಿದ್ದಲು ಮತ್ತು ಕೋಕ್ ಬಳಕೆಯನ್ನು ನಿಲ್ಲಿಸಿ, ನೈಸರ್ಗಿಕ ಅನಿಲದಂತಹ ಶುದ್ಧ ಇಂಧನಗಳ ಬಳಕೆಗೆ ಬದಲಾಗುವಂತೆ ಸರ್ವೋಚ್ಚ ನ್ಯಾಯಾಲಯವು ಕಡ್ಡಾಯಗೊಳಿಸಿತು.

    ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯ ಬಗ್ಗೆ:

    • ಶಾಸನಬದ್ಧ ಸಂಸ್ಥೆ:- ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ, 2010ರ ಅಡಿಯಲ್ಲಿ ಸ್ಥಾಪಿಸಲಾದ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
    • ಧ್ಯೇಯೋದ್ದೇಶ:- ಪರಿಸರ ರಕ್ಷಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಮತ್ತು ಪರಿಣಾಮಕಾರಿ ತೀರ್ಪುನ್ನು ಖಚಿತಪಡಿಸುವುದು.
    • ಇದು ‘ಅನುಸೂಚಿ I’ ರಲ್ಲಿ ಉಲ್ಲೇಖಿಸಲಾದ ಪ್ರಮುಖ ಪರಿಸರ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತದೆ. ಅವುಗಳೆಂದರೆ:
    • ಪರಿಸರ (ಸಂರಕ್ಷಣೆ) ಕಾಯ್ದೆ-1986, 
    • ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ-1974,
    • ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ-1981 ಮತ್ತು ಇತರೆ ಕಾಯ್ದೆಗಳನ್ನು ಒಳಗೊಂಡಿದೆ.
  • ಕರ್ನಾಟಕದಾದ್ಯಂತ ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಗಣನೀಯ ಏರಿಕೆ | ಸಂಚಾರ ಯುಕ್ತ ಯೋಜನೆ

    ಕರ್ನಾಟಕದಾದ್ಯಂತ ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಗಣನೀಯ ಏರಿಕೆ

    ಇದೀಗ ಸುದ್ದಿಯಲ್ಲಿದೆ: 

    • ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ 9,639 ಕಾಣೆಯಾದ ಮಕ್ಕಳ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 1,094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ.

    ಪ್ರಮುಖ ಅಂಶಗಳು:

    • ಪ್ರಾದೇಶಿಕ ಹಂಚಿಕೆ:- ಒಟ್ಟು ಪ್ರಕರಣಗಳಲ್ಲಿ ಬೆಂಗಳೂರು ನಗರವು ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ಇದರ ನಂತರದ ಸ್ಥಾನಗಳಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿವೆ.
    • ಲಿಂಗ ಅಂಕಿಅಂಶಗಳು:– ಕಾಣೆಯಾದ ಪ್ರಕರಣಗಳಲ್ಲಿ ಗಮನಾರ್ಹ ಸಂಖ್ಯೆಯು ಬಾಲಕಿ (6,894 ಪ್ರಕರಣಗಳು)ಯರನ್ನು ಒಳಗೊಂಡಿದೆ ಮತ್ತು ಇವುಗಳಲ್ಲಿ 825 ಪ್ರಕರಣಗಳು ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿವೆ.
    • ವಾರ್ಷಿಕ ಪ್ರಕರಣಗಳು:-
      • 2023:- 3,039 ಪ್ರಕರಣಗಳು ವರದಿಯಾಗಿದ್ದು, 77 ಪ್ರಕರಣಗಳು ಬಗೆಹರಿದಿಲ್ಲ.
      • 2024:– 3,411 ಪ್ರಕರಣಗಳು ವರದಿಯಾಗಿದ್ದು, 145 ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ.
      • 2025 (ನವೆಂಬರ್ 15 ರವರೆಗೆ):- 3,189 ಪ್ರಕರಣಗಳು ವರದಿಯಾಗಿದ್ದು, 872 ಪ್ರಕರಣಗಳು ಬಗೆಹರಿದಿಲ್ಲ.
    • ಜಿಲ್ಲಾವಾರು ವಿವರ:-
      • ಬೆಂಗಳೂರು:- 3,268 ಪ್ರಕರಣಗಳು ವರದಿಯಾಗಿದ್ದು, 426 ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ.
      • ಬೆಂಗಳೂರು ಗ್ರಾಮಾಂತರ:– 694 ಪ್ರಕರಣಗಳು ವರದಿಯಾಗಿದ್ದು, 55 ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ.
      • ತುಮಕೂರು:- 450 ಪ್ರಕರಣಗಳು ವರದಿಯಾಗಿದ್ದು, 33 ಪ್ರಕರಣಗಳು ಬಗೆಹರಿದಿಲ್ಲ.

    ಗಮನಿಸಿ:- 6 ವರ್ಷಗಳ ರಾಷ್ಟ್ರಮಟ್ಟದ ದತ್ತಾಂಶವನ್ನು ಒದಗಿಸಲು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

    ಸಂಚಾರ ಯುಕ್ತ ಯೋಜನೆ

    ಇದೀಗ ಸುದ್ದಿಯಲ್ಲಿದೆ:

    • ಸಂಚಾರ ಯುಕ್ತ ಯೋಜನೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮಿತಿಗಳನ್ನು ಮೀರಿ 90 ಕಿ.ಮೀ ರಸ್ತೆಯನ್ನು ಸೇರಿಸುವ ಸಾಧ್ಯತೆಯಿದೆ.

    ಸಂಚಾರ ಯುಕ್ತ ಯೋಜನೆಯ ಬಗ್ಗೆ:

    • ಯೋಜನೆಯ ಅವಲೋಕನ:- ಈ ಯೋಜನೆಯು ಆರಂಭದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮಿತಿಯೊಳಗೆ 228 ಕಿ.ಮೀ ರಸ್ತೆ ಜಾಲವನ್ನು ಯೋಜಿಸಿತ್ತು.
    • ಪ್ರಾರಂಭಿಸಿದವರು:- ಗ್ರೇಟರ್ ಬೆಂಗಳೂರು ಪ್ರಾಧಿಕಾರ
    • ವಿಸ್ತರಣಾ ವ್ಯಾಪ್ತಿ:- ಬಿ-ಸ್ಮೈಲ್ (B-SMILE) ಉಪಕ್ರಮವು ಹೆಚ್ಚುವರಿ 90 ಕಿ.ಮೀ ವಿಸ್ತರಣೆಯ ಸಾಮರ್ಥ್ಯವನ್ನು ಗುರುತಿಸಿದೆ ಮತ್ತು ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ವ್ಯಾಪ್ತಿಯಲ್ಲಿ ಬರುತ್ತದೆ.
    • ಉದ್ದೇಶ:- ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿರ್ವಹಿಸಲು, ಮಳೆನೀರು ಚರಂಡಿಗಳು ಮತ್ತು ಕೆರೆಗಳ ಸಂರಕ್ಷಿತ ವಲಯಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ಸರ್ಕಾರವು ಉದ್ದೇಶಿಸಿದೆ.
    • 7 ಪ್ರಮುಖ ರಸ್ತೆ ಜಾಲಗಳು:- ಬಿ-ಸ್ಮೈಲ್ ಉಪಕ್ರಮವು ಕೋರಮಂಗಲದಿಂದ ಸರ್ಜಾಪುರದ ನಡುವಿನ ನಿರ್ದಿಷ್ಟ ಸಂಪರ್ಕವನ್ನು ಒಳಗೊಂಡಂತೆ 7 ಪ್ರಮುಖ ರಸ್ತೆ ಜಾಲಗಳನ್ನು ಯೋಜಿಸಿದೆ.
    • ಯೋಜನೆಗೆ ಮರುಚಾಲನೆ:- ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, 2022ರಲ್ಲಿ ಕೈಬಿಡಲಾಗಿದ್ದ ವಿಂಡ್ ಟನಲ್ ರಸ್ತೆ ವಿಸ್ತರಣೆ ಕಾಮಗಾರಿಗೆ ಮರುಚಾಲನೆ ನೀಡುವುದು ಈ ಯೋಜನೆಯ ಗುರಿಯಾಗಿದೆ.
    • ಪೂರ್ವ ಬೆಂಗಳೂರು:- ಈ ಯೋಜನೆಯ ಪ್ರಮುಖ ಭಾಗವು ನಗರದ ಪೂರ್ವ ವಲಯವನ್ನು ಒಳಗೊಂಡಿದ್ದು, ಒಟ್ಟು 96.132 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಕಡಿಮೆ ರಸ್ತೆ ಸಾಂದ್ರತೆ (ಪ್ರತಿ ಚದರ ಕಿ.ಮೀ.ಗೆ 8–10 ಕಿ.ಮೀ), ಅಧಿಕ ಉದ್ಯೋಗ ಕೇಂದ್ರಗಳು ಮತ್ತು ಅಸ್ಥಿರ ಜನಸಂಖ್ಯೆಯಿಂದಾಗಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳನ್ನು ಇದು ಗುರಿಯಾಗಿಸಿಕೊಂಡಿದೆ.
    • ಹಣಕಾಸಿನ ನೆರವು:- ಈ ಯೋಜನೆಯು ₹3,000 ಕೋಟಿ (₹30 ಬಿಲಿಯನ್) ಮೌಲ್ಯದ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯ ಭಾಗವಾಗಿದೆ.
  • ಭಾರತ: ವಿಶ್ವದ ಅತಿದೊಡ್ಡ ಅಕ್ಕಿ (ಭತ್ತ) ಉತ್ಪಾದಕ ರಾಷ್ಟ್ರ | SAMPANN (ಸಂಪನ್ನ- ಪಿಂಚಣಿ ಲೆಕ್ಕಪತ್ರ ಹಾಗೂ ನಿರ್ವಹಣಾ ವ್ಯವಸ್ಥೆ) | ವುಲ್ಫ್ ಸೂಪರ್‌ಮೂನ್/ ತೋಳ ಸಂಪೂರ್ಣಚಂದ್ರ (Wolf Supermoon) | ಸೂರ್ಯಾಸ್ತ್ರ ರಾಕೆಟ್ ಉಡಾವಣೆ ವ್ಯವಸ್ಥೆ

    ಭಾರತ: ವಿಶ್ವದ ಅತಿದೊಡ್ಡ ಅಕ್ಕಿ (ಭತ್ತ) ಉತ್ಪಾದಕ ರಾಷ್ಟ್ರ

    ಸಾಮಾನ್ಯ ಅಧ್ಯಯನ-3 / ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ.
    • ಚೀನಾದ 145.28 ದಶ ಲಕ್ಷ ಟನ್‌ಗಳ ಉತ್ಪಾದನೆಗೆ ಹೋಲಿಸಿದರೆ, ಭಾರತದ ಅಕ್ಕಿ ಉತ್ಪಾದನೆಯು 150.18 ದಶ ಲಕ್ಷ ಟನ್‌ಗಳನ್ನು ತಲುಪಿದೆ.

    ಅಕ್ಕಿ (ಭತ್ತ)ಯ ಬಗ್ಗೆ:

    • ಇದು ಭಾರತದ ಅತ್ಯಂತ ಪ್ರಮುಖ ಆಹಾರ ಬೆಳೆಯಾಗಿದೆ.
    • ಇದು ಪ್ರಮುಖವಾಗಿ ಖಾರಿಫ್ (ಮುಂಗಾರು) ಅಥವಾ ಬೇಸಿಗೆಯ ಬೆಳೆಯಾಗಿದೆ.

    ಭತ್ತದ ಬೆಳೆಗೆ ಭೌಗೋಳಿಕ ಪರಿಸ್ಥಿತಿಗಳು:

    • ಅಗತ್ಯವಿರುವ ವಾರ್ಷಿಕ ಸರಾಸರಿ ತಾಪಮಾನ:- 22°C ನಿಂದ 32°C.
    • ವಾರ್ಷಿಕ ಸರಾಸರಿ ಮಳೆ:- 150-300 ಸೆಂ.ಮೀ.
    • ಮಣ್ಣು:- ಜೇಡಿ ಮಣ್ಣು ಮತ್ತು ಕಡುಮಣ್ಣು (ಲೋಮಿ ಮಣ್ಣು)
    • ಅತಿ ಹೆಚ್ಚು ಉತ್ಪಾದಿಸುವ ರಾಜ್ಯಗಳು:- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ 2024–25ರ ಬೆಳೆ ವರ್ಷದ (2025ರ ಅಂತ್ಯದಲ್ಲಿ ಅಂತಿಮಗೊಂಡ) ದತ್ತಾಂಶವನ್ನು ಆಧರಿಸಿ, ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯಗಳು ಈ ಕೆಳಗಿನಂತಿವೆ:
      • ಉತ್ತರ ಪ್ರದೇಶ: 20.93 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.
      • ತೆಲಂಗಾಣ: 17.09 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.
      • ಪಶ್ಚಿಮ ಬಂಗಾಳ: 16.49 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.

    ಮಹತ್ವ:

    • ಇದು ಭಾರತದ ಬಹುಸಂಖ್ಯಾತ ಜನರ ಪ್ರಧಾನ ಆಹಾರ ಬೆಳೆಯಾಗಿದೆ.
    • ರಾಷ್ಟ್ರೀಯ ಆಹಾರ ಮತ್ತು ಜೀವನೋಪಾಯ ಭದ್ರತಾ ವ್ಯವಸ್ಥೆಯಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ.

    ನಿಮಗಿದು ತಿಳಿದಿದೆಯೇ?

    • DRR ರೈಸ್ 100 (ಕಮಲಾ) ಮತ್ತು ಪೂಸಾ DST ರೈಸ್:- ICAR ಸಂಸ್ಥೆಯು ಭಾರತದ ಮೊದಲ ‘ಜೀನೋಮ್-ಸಂಪಾದಿತ’ ಭತ್ತದ ತಳಿಗಳಾದ ‘ಡಿಆರ್‌ಆರ್ ರೈಸ್ 100 (ಕಮಲಾ)’ ಮತ್ತು ‘ಪೂಸಾ ಡಿಎಸ್‌ಟಿ ರೈಸ್’ ಅನ್ನು ಅಭಿವೃದ್ಧಿಪಡಿಸಿದೆ.
    • ಈ ತಳಿಗಳು ಹೆಚ್ಚಿನ ಉತ್ಪಾದನೆ, ಹವಾಮಾನ ಹೊಂದಾಣಿಕೆ ಮತ್ತು ಜಲ ಸಂರಕ್ಷಣೆಯ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿವೆ.

    SAMPANN (ಸಂಪನ್ನ- ಪಿಂಚಣಿ ಲೆಕ್ಕಪತ್ರ ಹಾಗೂ ನಿರ್ವಹಣಾ ವ್ಯವಸ್ಥೆ)

    ಸಾಮಾನ್ಯ ಅಧ್ಯಯನ-2 / ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • SAMPANN (‘ಸಂಪನ್ನ’- ಪಿಂಚಣಿ ಲೆಕ್ಕಪತ್ರ ಹಾಗೂ ನಿರ್ವಹಣಾ ವ್ಯವಸ್ಥೆ) ಎಂಬುದು ದೂರಸಂಪರ್ಕ ಇಲಾಖೆಯ (DoT) ಪಿಂಚಣಿದಾರರಿಗಾಗಿ ರೂಪಿಸಲಾದ ಒಂದು ಏಕೀಕೃತ, ಆನ್‌ಲೈನ್ ಪಿಂಚಣಿ ನಿರ್ವಹಣಾ ವ್ಯವಸ್ಥೆಯಾಗಿದೆ.

    SAMPANN (ಸಂಪನ್ನ) ವ್ಯವಸ್ಥೆಯ ಬಗ್ಗೆ:

    • ವಿಸ್ತರಿತ ರೂಪ:- SAMPANN- ಸಿಸ್ಟಮ್ ಫಾರ್ ಅಕೌಂಟಿಂಗ್ ಅಂಡ್ ಮ್ಯಾನೇಜಮೆಂಟ್ ಆಫ್ ಪೆನ್ಷನ್ಸ್.
    • ಇದು ದೂರಸಂಪರ್ಕ ಇಲಾಖೆಯ (DoT) ಪಿಂಚಣಿದಾರರಿಗಾಗಿ ಪಿಂಚಣಿಯ ಸಂಸ್ಕರಣೆ, ಮಂಜೂರಾತಿ ಮತ್ತು ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವಿತರಣೆ ಮಾಡಲು ಒಂದೇ ವೇದಿಕೆಯನ್ನು ಸೃಷ್ಟಿಸುತ್ತದೆ.
    • ಅನುಷ್ಠಾನ ಸಂಸ್ಥೆ:- ಸಂವಹನ ಲೆಕ್ಕಪತ್ರಗಳ ಮಹಾನಿಯಂತ್ರಕರು, ದೂರಸಂಪರ್ಕ ಇಲಾಖೆ, ಸಂವಹನ ಸಚಿವಾಲಯ.
    • ಇತರೆ ಕಾರ್ಯ:- ಇದು ಆನ್‌ಲೈನ್ ಕುಂದುಕೊರತೆ ನಿವಾರಣೆ, ಡಿಜಿಟಲ್ ವಿವರ/ಪ್ರೊಫೈಲ್ ನಿರ್ವಹಣೆ ಮತ್ತು ವಹಿವಾಟು ದಾಖಲೆಗಳನ್ನು ಒದಗಿಸುವ ಮೂಲಕ, ನಿವೃತ್ತ ದೂರಸಂಪರ್ಕ ನೌಕರರ ಸೇವೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ.

    ವುಲ್ಫ್ ಸೂಪರ್‌ಮೂನ್/ ತೋಳ ಸಂಪೂರ್ಣಚಂದ್ರ (Wolf Supermoon)

    ಸಾಮಾನ್ಯ ಅಧ್ಯಯನ-3 / ಬಾಹ್ಯಾಕಾಶ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಜನವರಿ 2026 ರಲ್ಲಿ ‘ವುಲ್ಫ್ ಸೂಪರ್‌ಮೂನ್’ ಸಂಭವಿಸಿತು.
    • ವುಲ್ಫ್ ಸೂಪರ್‌ಮೂನ್ ಎಂಬುದು “ವುಲ್ಫ್ ಮೂನ್ (ತೋಳ ಚಂದ್ರ)” ಮತ್ತು “ಸೂಪರ್‌ಮೂನ್ (ಸಂಪೂರ್ಣಚಂದ್ರ)” ಎಂಬ ಎರಡು ವಿಭಿನ್ನ ಪರಿಕಲ್ಪನೆಗಳ ಸಂಯೋಜನೆಯಾಗಿದೆ.

    ವುಲ್ಫ್ ಮೂನ್ (ತೋಳ ಚಂದ್ರ)ನ ಬಗ್ಗೆ:

    • ಈ ಪದವು ಜನವರಿ ತಿಂಗಳಲ್ಲಿ ಸಂಭವಿಸುವ ಹುಣ್ಣಿಮೆ (ಪೂರ್ಣಚಂದ್ರ)ಯನ್ನು ಸೂಚಿಸುತ್ತದೆ.
    • ಕಾಲಗಣನೆ ಮಾಡಲು:- ಇದು ಹುಣ್ಣಿಮೆಗಳಿಗೆ ಇರುವ ಇಂತಹ ಸಾಂಪ್ರದಾಯಿಕ ಹೆಸರುಗಳು ಋತುಮಾನದ ಮಾದರಿಗಳಿಂದ ಹುಟ್ಟಿಕೊಂಡಿವೆ. ಆಧುನಿಕ ಕ್ಯಾಲೆಂಡರ್‌ಗಳಿಗಿಂತ ಮೊದಲು ಕಾಲಗಣನೆ ಮಾಡಲು ಜಾನಪದ ಮತ್ತು ಪಂಚಾಂಗಗಳ ಮೂಲಕ ಇವು ಜನಪ್ರಿಯಗೊಂಡವು.
    • ಈ ಹೆಸರು ಬರಲು ಕಾರಣ:- ಚಳಿಗಾಲದಲ್ಲಿ ಆಹಾರದ ಕೊರತೆಯಿಂದ ತೋಳಗಳು ಹೆಚ್ಚಾಗಿ ಕೂಗುತ್ತಿದ್ದುದರಿಂದ ಈ ಹೆಸರು ಬಂದಿದೆ ಎಂಬ ನಂಬಿಕೆ ಇದೆ. ಆದಾಗ್ಯೂ, ಇದಕ್ಕೆ ಯಾವುದೇ ಖಗೋಳವೈಜ್ಞಾನಿಕ ಮಹತ್ವವಿಲ್ಲ.

    ಸೂಪರ್‌ಮೂನ್ (ಸಂಪೂರ್ಣಚಂದ್ರ)ನ ಬಗ್ಗೆ:

    • ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪವಾಗಿರುವ ಹಂತವಾದ ‘ಪೆರಿಜಿ’ಯೊಂದಿಗೆ (perigee – ಭೂಮಿಗೆ ಸಮೀಪ ಬಿಂದು) ಹುಣ್ಣಿಮೆ ಏಕಕಾಲದಲ್ಲಿ ಸಂಭವಿಸಿದಾಗ ಉಂಟಾಗುವ ಖಗೋಳ ವಿದ್ಯಮಾನವೇ ಸೂಪರ್‌ಮೂನ್ (ಅಮಾವಾಸ್ಯೆ) ಆಗಿದೆ.
    • ಈ ವೇಳೆ ಚಂದ್ರನು ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ.
    • ಚಂದ್ರನು ದೀರ್ಘವೃತ್ತಾಕಾರದ ಕಕ್ಷೆಯನ್ನು ಅನುಸರಿಸಲಿದ್ದು, ಭೂಮಿಯಿಂದ ಅದರ ಅತ್ಯಂತ ದೂರದ ಬಿಂದುವನ್ನು ‘ಅಪೋಜಿ’ (apogee – ಭೂಮಿಗೆ ದೂರದ ಬಿಂದು) ಎಂದು ಕರೆಯಲಾಗುತ್ತದೆ.

    ಪ್ರಮುಖ ಲಕ್ಷಣಗಳು:

    • ವುಲ್ಫ್ ಸೂಪರ್‌ಮೂನ್ ಸಮಯದಲ್ಲಿ, ಚಂದ್ರನು ಸಾಮಾನ್ಯ ಹುಣ್ಣಿಮೆಗಿಂತ ಸ್ವಲ್ಪ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಾನೆ.
    • ಇದಕ್ಕೆ ಸಂಬಂಧಿಸಿದ ದೃಶ್ಯ ಪರಿಣಾಮವೇ ‘ಮೂನ್ ಇಲ್ಯೂಷನ್’ (ಚಂದ್ರನ ದೃಷ್ಟಿಭ್ರಮೆ).
    • ಇಲ್ಲಿ ಚಂದ್ರನು ದಿಗಂತದ ಬಳಿ ಇದ್ದಾಗ ದೊಡ್ಡದಾಗಿ ಕಾಣುತ್ತಾನೆ. ಇದು ಮಾನವನ ಕಣ್ಣಿನ ಗ್ರಹಿಕೆಯೇ ಹೊರತು, ಚಂದ್ರನ ಗಾತ್ರದಲ್ಲಿ ಉಂಟಾಗುವ ನಿಜವಾದ ಬದಲಾವಣೆಯಲ್ಲ.

    ಸೂರ್ಯಾಸ್ತ್ರ ರಾಕೆಟ್ ಉಡಾವಣೆ ವ್ಯವಸ್ಥೆ

    ಸಾಮಾನ್ಯ ಅಧ್ಯಯನ-3 / ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ದೀರ್ಘ ಶ್ರೇಣಿಯ ಸೂರ್ಯಾಸ್ತ್ರ ರಾಕೆಟ್ ಉಡಾವಣೆ ವ್ಯವಸ್ಥೆಯನ್ನು ಪೂರೈಸಲು, ಭಾರತೀಯ ಸೇನೆಯು ಇಸ್ರೇಲ್ ದೇಶದ ಸಹಯೋಗದೊಂದಿಗೆ ‘NIBE ಲಿಮಿಟೆಡ್’ ಜೊತೆಗೆ ₹293 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.

    ಸೂರ್ಯಾಸ್ತ್ರ ರಾಕೆಟ್ (ಉಡಾವಣ ವಾಹನ) ಉಡಾವಣೆ ವ್ಯವಸ್ಥೆಯ ಬಗ್ಗೆ:

    • ಇದು ಭಾರತದ ಮೊದಲ ದೇಶೀಯವಾಗಿ ತಯಾರಿಸಲಾದ ಸಾರ್ವತ್ರಿಕ ಬಹು- ಸಾಮರ್ಥ್ಯದ ರಾಕೆಟ್ (ಉಡಾವಣ ವಾಹನ) ಉಡಾವಣೆ ವ್ಯವಸ್ಥೆಯಾಗಿದೆ.
    • ಇದು 300 ಕಿ.ಮೀ.ವರೆಗೆ ನಿಖರವಾದ ‘ಭೂಮೇಲ್ಮೈಯಿಂದ  ಭೂಮೇಲ್ಮೈಗೆ’ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
  • ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಮಾ ಭದ್ರತೆ | ರಾಜ್ಯ ಶಿಕ್ಷಣ ನೀತಿ (SEP), 2025

    ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಮಾ ಭದ್ರತೆ

    ಇದೀಗ ಸುದ್ದಿಯಲ್ಲಿದೆ: 

    • ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಹೊರಗುತ್ತಿಗೆ ನೌಕರರಿಗೆ ವಿಮಾ ಭದ್ರತೆಯನ್ನು ಒದಗಿಸಲಾಗಿದೆ.

    ಪ್ರಮುಖ ಅಂಶಗಳು:

    • ತಿಳುವಳಿಕೆ ಒಡಂಬಡಿಕೆಗೆ (MoU) ಸಹಿ:- ಕರ್ನಾಟಕ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹಾಗೂ “ಬ್ಯಾಂಕ್ ಆಫ್ ಬರೋಡಾ” ನಡುವೆ ಹಾಕಲಾಗಿದೆ.
    • ₹1 ಕೋಟಿ ಅಪಘಾತ ಮರಣ ವಿಮೆ:- ಇದು ಎಲ್ಲಾ ಕಾಯಂ ಅಧಿಕಾರಿಗಳು, ಸಿಬ್ಬಂದಿ ಮತ್ತು ಹೊರಗುತ್ತಿಗೆ ನೌಕರರಿಗೆ, ಅವರ ಹುದ್ದೆಯ ಶ್ರೇಣಿ ಅಥವಾ ವೇತನವನ್ನು ಪರಿಗಣಿಸದೆ, ವಿಮೆಯನ್ನು ಒದಗಿಸುತ್ತದೆ.
    • ಬ್ಯಾಂಕ್ ಹೆಚ್ಚುವರಿಯಾಗಿ ₹25 ಲಕ್ಷವನ್ನು ನೀಡುತ್ತದೆ:- ಕರ್ತವ್ಯದಲ್ಲಿರುವಾಗ ಅಪಘಾತ ಸಂಭವಿಸಿ ಮರಣ ಹೊಂದಿದಾಗ ಈ ಹೆಚ್ಚುವರಿ ಮೊತ್ತವನ್ನು ನೀಡುತ್ತದೆ.
    • ಕಾಯಂ ಉದ್ಯೋಗಿಗಳಿಗೆ ₹10 ಲಕ್ಷ ಜೀವ ವಿಮೆ:- ಈ ಜೀವ ವಿಮೆ ಭದ್ರತೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ಹೊರಗುತ್ತಿಗೆ ಸಿಬ್ಬಂದಿ ವಿಮಾ ಭದ್ರತೆ:- ಹೊರಗುತ್ತಿಗೆ ಸಿಬ್ಬಂದಿಗೆ ₹20 ಲಕ್ಷ ವಿಮಾ ಭದ್ರತೆಯನ್ನು ಒದಗಿಸಲಾಗಿದೆ.
    • ನಿವೃತ್ತ ಸಿಬ್ಬಂದಿಗಳಿಗೆ ವೈಯಕ್ತಿಕ ಅಪಘಾತ ವಿಮಾ ಭದ್ರತೆಯ ವಿಸ್ತರಣೆ:- ಬ್ಯಾಂಕ್ ಆಫ್ ಬರೋಡಾದಲ್ಲಿ ತಮ್ಮ ಪಿಂಚಣಿ ಖಾತೆಗಳನ್ನು ಮುಂದುವರಿಸುವವರಿಗೆ 70 ವರ್ಷ ವಯಸ್ಸಿನವರೆಗೆ ಈ ಭದ್ರತೆಯು ಮಾನ್ಯವಾಗಿರುತ್ತದೆ.

    ರಾಜ್ಯ ಶಿಕ್ಷಣ ನೀತಿ (SEP), 2025

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯ ಶಿಕ್ಷಣ ನೀತಿ (SEP), 2025 ತ್ರಿಭಾಷಾ ಸೂತ್ರವನ್ನು ಕೈಬಿಟ್ಟು, ಅದರ ಬದಲಿಗೆ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವಂತಹ ಹಲವಾರು ಪ್ರಮುಖ ಶಿಫಾರಸುಗಳನ್ನು ಮಾಡಿದೆ.

    ಪ್ರಮುಖ ಶಿಫಾರಸುಗಳು:

    • ದ್ವಿಭಾಷಾ ಸೂತ್ರ:- ತ್ರಿಭಾಷಾ ಸೂತ್ರವನ್ನು ಕೈಬಿಟ್ಟು, ಅದರ ಬದಲಿಗೆ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ.
    • ಕನ್ನಡ ಅಥವಾ ಮಾತೃಭಾಷೆಯ ಬೋಧನಾ ಮಾಧ್ಯಮ:- ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ.
    • ಆರ್‌ಟಿಇ 18 ವರ್ಷಗಳವರೆಗೆ ವಿಸ್ತರಣೆ:- ಶಿಕ್ಷಣ ಹಕ್ಕು (RTE) ಅರ್ಹತೆಯನ್ನು 18 ವರ್ಷಗಳವರೆಗೆ ವಿಸ್ತರಿಸಲು ಸಲಹೆ ನೀಡಲಾಗಿದೆ.
    • ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಹ ಮೀಸಲಾತಿ ನೀತಿ:- ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಹ ಮೀಸಲಾತಿ ಮ್ಯಾಟ್ರಿಕ್ಸ್ (ರೋಸ್ಟರ್) ಅಳವಡಿಸಲು ಶಿಫಾರಸು ಮಾಡಲಾಗಿದೆ.

    ರಾಜ್ಯ ಶಿಕ್ಷಣ ನೀತಿ, 2025ರ ಪ್ರಸ್ತುತ ಸ್ಥಿತಿ:

    • ಇನ್ನೂ ಅನುಷ್ಠಾನಗೊಂಡಿಲ್ಲ:- ಇದು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಜಾರಿಯಾಗುವ ನಿರೀಕ್ಷೆಯಿದೆ. ಉನ್ನತ ಶಿಕ್ಷಣದ ಅನುಷ್ಠಾನಕ್ಕಾಗಿ ತಜ್ಞರ ಸಮಿತಿ ಇದ್ದರೂ, ಶಾಲಾ ಶಿಕ್ಷಣಕ್ಕಾಗಿ ಅಂತಹ ಯಾವುದೇ ಪ್ರಕ್ರಿಯೆಯು ಇನ್ನೂ ಪ್ರಾರಂಭವಾಗಿಲ್ಲ.
    • 900 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳು:- ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB)ನ ಸಾಲವನ್ನು ಬಳಸಿಕೊಂಡು 900 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) “ಮ್ಯಾಗ್ನೆಟ್ ಶಾಲೆಗಳನ್ನಾಗಿ” (ಪೂರ್ವ ಪ್ರಾಥಮಿಕದಿಂದ ದ್ವೀತಿಯ ಪಿಯುಸಿ ವರೆಗೆ) ಅಭಿವೃದ್ಧಿಪಡಿಸಲು ಸರ್ಕಾರವು ಯೋಜಿಸಿದೆ. ಇವುಗಳಲ್ಲಿ 509 ಶಾಲೆಗಳನ್ನು 2025 ಮತ್ತು 2027 ರ ನಡುವೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
  • ವೆನೆಜುವೆಲಾ ಮೇಲೆ ಅಮೆರಿಕದ ದಾಳಿಗಳು | ಸೋಮನಾಥ ಸ್ವಾಭಿಮಾನ ಪರ್ವ | ದೆಹಲಿಯಲ್ಲಿ ಮಾನವ ರೇಬಿಸ್: ಅಧಿಸೂಚಿತ ರೋಗ ಎಂದು ಘೋಷಿಸಲು ನಿರ್ಧಾರ

    ವೆನೆಜುವೆಲಾ ಮೇಲೆ ಅಮೆರಿಕದ ದಾಳಿಗಳು

    ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ವೆನೆಜುವೆಲಾ ದೇಶದ ಮೇಲಿನ ಅಮೆರಿಕದ ದಾಳಿಗಳು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ, ರಾಷ್ಟ್ರೀಯ ಸಾರ್ವಭೌಮತ್ವದ ಭಂಗ ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಯ ಬಗೆಗಿನ ಕಳವಳಗಳನ್ನು ಮುನ್ನೆಲೆಗೆ ತಂದಿವೆ.
    • ಆದಾಗ್ಯೂ, ದತ್ತಾಂಶಗಳ ಪ್ರಕಾರ, ವೆನೆಜುವೆಲಾ ಮೇಲಿನ ಅಮೆರಿಕದ ಈ ಕ್ರಮವು ಭಾರತದ ಇಂಧನ ಭದ್ರತೆಯ ಮೇಲೆ ಯಾವುದೇ ನೇರ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

    ವೆನೆಜುವೆಲಾ ದೇಶದ ಮೇಲಿನ ಅಮೆರಿಕದ ದಾಳಿಗೆ ಸಂಭವನೀಯ ಕಾರಣಗಳು:

    • ತೈಲ ನಿಕ್ಷೇಪಗಳು:- ವೆನೆಜುವೆಲಾ ವಿಶ್ವದ 18% ರಷ್ಟು ತೈಲ ನಿಕ್ಷೇಪಗಳನ್ನು ಹೊಂದಿದೆ. ಇದು ಸೌದಿ ಅರೇಬಿಯಾ (ಸುಮಾರು 16%), ರಷ್ಯಾ (ಸುಮಾರು 5-6%) ಅಥವಾ ಅಮೆರಿಕಕ್ಕಿಂತ (ಸುಮಾರು 4%) ಹೆಚ್ಚಾಗಿದೆ.
    • ಎರಡು ಪಟ್ಟಿಗಿಂತ ಹೆಚ್ಚು ಕಚ್ಚಾ ತೈಲ ನಿಕ್ಷೇಪ:- ಕೇವಲ ವೆನೆಜುವೆಲಾ ಒಂದೇ, ಅಮೆರಿಕ ಮತ್ತು ರಷ್ಯಾ ಎರಡೂ ಸೇರಿ ಹೊಂದಿರುವುದಕ್ಕಿಂತ ಹೆಚ್ಚಿನ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದೆ.
    • ಲ್ಯಾಟಿನ್ ಅಮೆರಿಕದಲ್ಲಿ ಚೀನಾದ ವಿಸ್ತರಣೆಯನ್ನು ಎದುರಿಸುವುದು:– ವಿಶ್ವದ ಅತಿದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರವಾದ ಚೀನಾ, ವೆನೆಜುವೆಲಾ ತೈಲದ ಅತಿದೊಡ್ಡ ಖರೀದಿದಾರನಾಗಿ ಹೊರಹೊಮ್ಮಿದೆ.
    • ಚೀನಾ ಭೂರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದೆ:- ಚೀನಾದ ಇಂಧನ ಭದ್ರತೆ ಮತ್ತು ಜಾಗತಿಕ ಪ್ರಭಾವದಲ್ಲಿ ವೆನೆಜುವೆಲಾ ಒಂದು ಕಾರ್ಯತಂತ್ರದ ಕೇಂದ್ರವಾಗಿದೆ. ಇದರಿಂದಾಗಿ ಇದು ಅಮೆರಿಕಕ್ಕೆ ಭೂರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದೆ.
    • ಅಮೆರಿಕದ ಒಪ್ಪಂದಗಳು:– ಅಮೆರಿಕವು ಯುರೋಪಿಯನ್ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ ಪಾಲುದಾರರೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ತಾನು ಸಾಕಷ್ಟು ಕಚ್ಚಾ ತೈಲ ಅಥವಾ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೂ, ಅಮೆರಿಕದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಎನ್‌ಜಿಯನ್ನು (LNG) ಖರೀದಿಸುವಂತೆ ಈ ದೇಶಗಳಿಂದ ಬದ್ಧತೆಯನ್ನು ಪಡೆದುಕೊಂಡಿದೆ.
    • ಮನ್ರೋ ಸಿದ್ಧಾಂತದ ಪುನರುಜ್ಜೀವನ:– ಈ ಕಾರ್ಯಾಚರಣೆಯು ‘ಮನ್ರೋ ಸಿದ್ಧಾಂತ’ ಎಂದು ಕರೆಯಲ್ಪಡುವ ಅಮೆರಿಕದ ವಿದೇಶಾಂಗ ನೀತಿಗೆ ಅನುಗುಣವಾಗಿದೆ ಎಂದು ಅಮೆರಿಕ ವಿವರಿಸಿದೆ.
    • ಇತರ ಘೋಷಿತ ಮತ್ತು ಅಘೋಷಿತ ಉದ್ದೇಶಗಳು:
      • ರಾಷ್ಟ್ರ-ಪ್ರಾಯೋಜಿತ ಮಾದಕವಸ್ತು ಕಳ್ಳಸಾಗಣೆ ಆರೋಪಗಳು.
      • ಸಮಾಜವಾದಿ ರಾಜಕೀಯ ಸಿದ್ಧಾಂತವನ್ನು ನಿಯಂತ್ರಿಸುವುದು.
      • ಅಮೆರಿಕದ ಕಡೆಗೆ ಸಾಗುವ ಸಾಮೂಹಿಕ ವಲಸೆ ಹರಿವನ್ನು ತಡೆಯುವುದು.

    ತೈಲ ಪೂರೈಕೆಯಲ್ಲಿ ವೆನೆಜುವೆಲಾದ ಪಾಲು:

    • OPEC ಸದಸ್ಯ ರಾಷ್ಟ್ರ:- ಇದು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (OPEC) ಸದಸ್ಯ ರಾಷ್ಟ್ರವಾಗಿದ್ದು, ಈ ರಾಷ್ಟ್ರಗಳ ಗುಂಪು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ.

    ಭಾರತದ ಮೇಲೆ ಪರಿಣಾಮ:

    • 2025ರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತವು ವೆನೆಜುವೆಲಾದಿಂದ $ 255.3 ದಶಲಕ್ಷ ಡಾಲರ್ ಮೌಲ್ಯದ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಈ ಅವಧಿಯ ಒಟ್ಟು ತೈಲ ಆಮದಿನ 0.3% ರಷ್ಟು ಮಾತ್ರವಾಗಿದೆ.

    ಸೋಮನಾಥ ಸ್ವಾಭಿಮಾನ ಪರ್ವ

    ಸಾಮಾನ್ಯ ಅಧ್ಯಯನ-1 / ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಕ್ರಿ. ಶ. 1026ರಲ್ಲಿ ಸೋಮನಾಥ ದೇವಾಲಯದ ಮೇಲೆ ನಡೆದ ಪ್ರಥಮ ಆಕ್ರಮಣಕ್ಕೆ 1,000 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಘಟನೆಯನ್ನು ಸ್ಮರಿಸಿದರು. 
    • ಅವರು ಈ ಪವಿತ್ರ ದೇಗುಲವನ್ನು ಭಾರತೀಯ ನಾಗರಿಕತೆಯ ಸ್ಥಿತಿಸ್ಥಾಪಕತ್ವ ಹಾಗೂ ಅಚಲ ಚೈತನ್ಯದ ‘ಕಾಲಾತೀತ ಪ್ರತೀಕ’ ಎಂದು ಬಣ್ಣಿಸಿದ್ದಾರೆ.

    ಸೋಮನಾಥ ದೇವಾಲಯದ ಬಗ್ಗೆ:

    • ಮೊದಲನೆಯ ಜ್ಯೋತಿರ್ಲಿಂಗ:- ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದಲ್ಲಿ ಉಲ್ಲೇಖಿಸಿರುವಂತೆ, ಸೋಮನಾಥ ದೇವಾಲಯದ ಜ್ಯೋತಿರ್ಲಿಂಗವನ್ನು ಭಗವಾನ್ ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಎಂದು ಪೂಜಿಸಲಾಗುತ್ತದೆ.
    • ಸ್ಥಳ:- ಈ ದೇವಾಲಯವು ಗುಜರಾತ್‌ನ ಪಶ್ಚಿಮ ಕರಾವಳಿಯ ಪ್ರಭಾಸ ಪಾಟನ್‌ನಲ್ಲಿದೆ. ಈ ಪ್ರದೇಶವು ಐತಿಹಾಸಿಕವಾಗಿ ಕಡಲ ವ್ಯಾಪಾರ, ಸಾಂಸ್ಕೃತಿಕ ವಿನಿಮಯ ಮತ್ತು ಸಮೃದ್ಧಿಯೊಂದಿಗೆ ನಂಟು ಹೊಂದಿದೆ.
    • ಘಜ್ನಿ ಮೊಹಮ್ಮದನು 1026ರ ಜನವರಿಯಲ್ಲಿ, ಈ ದೇಗುಲದ ಮೇಲೆ ಮೊದಲ ಬಾರಿಗೆ ದಾಳಿ ನಡೆಸಿದನು. ಇದು ಭಾರತೀಯ ನಾಗರಿಕತೆಯ ಸಂಕೇತಗಳನ್ನು ನಾಶಮಾಡುವ ಗುರಿಯನ್ನು ಹೊಂದಿದ್ದ ಸರಣಿ ಆಕ್ರಮಣಗಳ ಆರಂಭವಾಗಿತ್ತು.
    • ಪದೇ ಪದೇ ಧ್ವಂಸಗೊಳಿಸಿದರೂ, ಈ ದೇವಾಲಯವನ್ನು ಹಲವು ಬಾರಿ ಪುನರ್ನಿರ್ಮಿಸಲಾಯಿತು.

    ದೇವಾಲಯದ ಪುನರ್ನಿರ್ಮಾಣ/ ಜೀರ್ಣೋದ್ಧಾರ:

    • ಅಹಲ್ಯಾಬಾಯಿ ಹೋಳ್ಕರ್:- ಸಾಂಸ್ಕೃತಿಕ ಪುನರುಜ್ಜೀವನದಲ್ಲಿ ದೇಶೀಯ ಆಡಳಿತಗಾರರ ಪಾತ್ರವನ್ನು ಎತ್ತಿಹಿಡಿಯುವ ಮೂಲಕ, 18ನೇ ಶತಮಾನದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅವರು ದೇವಾಲಯದ ಜೀರ್ಣೋದ್ಧಾರದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
    • ಸರ್ದಾರ್ ವಲ್ಲಭಭಾಯಿ ಪಟೇಲ್:- ಸ್ವಾತಂತ್ರ್ಯದ ನಂತರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಸಂಕಲ್ಪ ಮಾಡಿದರು.
    • ಡಾ. ರಾಜೇಂದ್ರ ಪ್ರಸಾದ್ ಉದ್ಘಾಟನೆ:- ಪ್ರಸ್ತುತ ಕಟ್ಟಡವನ್ನು ಪೂರ್ಣಗೊಳಿಸಿ, ಮೇ 11, 1951ರಂದು ಡಾ. ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು. ಇದು ಸಾಂಸ್ಕೃತಿಕ ಸ್ವಾತಂತ್ರ್ಯದ ಸಾಂವಿಧಾನಿಕ ಆಶಯವನ್ನು ಪ್ರತಿಬಿಂಬಿಸುತ್ತದೆ.
    • ಕೆ.ಎಂ. ಮುನ್ಷಿ ಮಹತ್ವದ ಪಾತ್ರ:- ದೇವಾಲಯದ ಪುನರ್ನಿರ್ಮಾಣದಲ್ಲಿ ಕೆ.ಎಂ. ಮುನ್ಷಿ ಅವರು ಮಹತ್ವದ ಪಾತ್ರ ವಹಿಸಿದ್ದರು.
    • ಸ್ವಾಮಿ ವಿವೇಕಾನಂದರು ಸೋಮನಾಥವನ್ನು, ಎಷ್ಟೇ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ಮತ್ತೆ ಪುನರ್ ಸ್ಥಾಪನೆಗೊಳ್ಳುವ ಭಾರತದ ರಾಷ್ಟ್ರೀಯ ಚೈತನ್ಯದ ಸಂಕೇತವಾಗಿ ಕಂಡಿದ್ದರು.

    ದೆಹಲಿಯಲ್ಲಿ ಮಾನವ ರೇಬಿಸ್: ಅಧಿಸೂಚಿತ ರೋಗ ಎಂದು ಘೋಷಿಸಲು ನಿರ್ಧಾರ

    ಸಾಮಾನ್ಯ ಅಧ್ಯಯನ-2 / ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • “ಸಾಂಕ್ರಾಮಿಕ ರೋಗಗಳ ಕಾಯ್ದೆ”ಯ ಅಡಿಯಲ್ಲಿ, ದೆಹಲಿ ಸರ್ಕಾರವು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ‘ಮಾನವ ರೇಬಿಸ್’ ಅನ್ನು ‘ಅಧಿಸೂಚಿತ ರೋಗ’ ಎಂದು ಘೋಷಿಸಲು ನಿರ್ಧರಿಸಿದೆ.

    ‘ಅಧಿಸೂಚಿತ (ಕಡ್ಡಾಯ ವರದಿ) ರೋಗ’ ದ ಬಗ್ಗೆ:

    • ಕಾನೂನುಬದ್ಧವಾಗಿ ವರದಿ:- ರೋಗ ನಿರ್ಣಯವಾದಾಗ ಅಥವಾ ಸೋಂಕಿನ ಶಂಕೆ ಕಂಡುಬಂದಾಗ, ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ವರದಿ ಮಾಡಲೇಬೇಕಾದ ರೋಗವನ್ನು ‘ಅಧಿಸೂಚಿತ ರೋಗ’ ಎನ್ನಲಾಗುತ್ತದೆ.
    • ರೋಗದ ಕುರಿತಾದ ಕಡ್ಡಾಯ ವರದಿಯು ನೈಜ-ಸಮಯದ ಕಣ್ಗಾವಲು, ಆರಂಭಿಕ ಪತ್ತೆ, ತ್ವರಿತ ಪ್ರತಿಕ್ರಿಯೆ ಮತ್ತು ಸಾಕ್ಷ್ಯಾಧಾರಿತ ಯೋಜನೆಗೆ ಅನುವು ಮಾಡಿಕೊಡುತ್ತದೆ.

    ‘ರೇಬಿಸ್’ ರೋಗದ ಬಗ್ಗೆ:

    • ಝೂನೋಟಿಕ್ ವೈರಲ್ ಕಾಯಿಲೆ:- ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಾಣುವಿನಿಂದ ಉಂಟಾಗುವ ರೋಗ.
    • ರೋಗಕಾರಕ:- ಇದು ‘ರಾಬ್ಡೋವಿರಿಡೆ’ ಕುಟುಂಬದ ‘ಲಿಸ್ಸಾವೈರಸ್’ ಕುಲಕ್ಕೆ ಸೇರಿದ ರೇಬಿಸ್ ವೈರಸ್‌ನಿಂದ ಉಂಟಾಗುತ್ತದೆ.
    • RNA ವೈರಾಣು:- ಇದು ರೈಬೋನ್ಯೂಕ್ಲಿಯಿಕ್ ಆಮ್ಲ (RNA) ವೈರಸ್ ಆಗಿದ್ದು, ರೇಬಿಸ್ ಪೀಡಿತ ಪ್ರಾಣಿಯ (ನಾಯಿ, ಬೆಕ್ಕು, ಕೋತಿ ಇತ್ಯಾದಿ) ಲಾಲಾರಸದಲ್ಲಿ ಇರುತ್ತದೆ.
    • ಲಸಿಕೆಯ ಮೂಲಕ ತಡೆಗಟ್ಟಬಹುದು:- ರೇಬಿಸ್ 100% ರಷ್ಟು ಮಾರಣಾಂತಿಕವಾಗಿದೆ, ಆದರೆ ಲಸಿಕೆಯ ಮೂಲಕ 100% ರಷ್ಟು ತಡೆಗಟ್ಟಬಹುದಾಗಿದೆ.
    • ಸಾವುಗಳ ಸಂಖ್ಯೆಯಲ್ಲಿ ಭಾರತ ಅಗ್ರ ಸ್ಥಾನ:- ಜಾಗತಿಕವಾಗಿ ರೇಬಿಸ್‌ನಿಂದ ಸಂಭವಿಸುವ ಸಾವುಗಳಲ್ಲಿ 33% ರಷ್ಟು ಸಾವುಗಳು ಭಾರತದಲ್ಲಿಯೇ ದಾಖಲಾಗುತ್ತವೆ.

    ವೈರಸ್‌ನ ಸಾಮಾನ್ಯ ವಾಹಕಗಳು ಮತ್ತು ಆಶ್ರಯದಾತರುಗಳು:-

    • ಬಹುತೇಕ ಸಸ್ತನಿಗಳು ಈ ವೈರಸ್‌ನ ವಾಹಕಗಳಾಗಿ ಕಾರ್ಯನಿರ್ವಹಿಸಬಲ್ಲವು ಮತ್ತು ಈ ಮೂಲಕ ರೋಗವನ್ನು ಉಂಟುಮಾಡಬಲ್ಲವು.
    • ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳಲ್ಲಿ, ಸಾಕು ಹಾಗೂ ಬೀದಿ ನಾಯಿಗಳು ಈ ವೈರಸ್‌ನ ಅತ್ಯಂತ ಸಾಮಾನ್ಯ ವಾಹಕಗಳಾಗಿವೆ.
    • ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಾವಲಿಗಳು, ನರಿಗಳು, ರಕೂನ್‌ಗಳು ಮತ್ತು ಸ್ಕಂಕ್‌ಗಳು ರೇಬಿಸ್ ರೋಗವನ್ನು ಹರಡುವ ಪ್ರಮುಖ ಪ್ರಾಣಿಗಳಾಗಿವೆ.

    ‘ರೇಬಿಸ್’ ರೋಗದ ಲಕ್ಷಣಗಳು:

    • ಆತಂಕ, ಗೊಂದಲ, ಲಾಲಾರಸ ಸ್ರವಿಸುವಿಕೆ, ಸೆಳವು, ಭ್ರಮೆ ಮತ್ತು ಪಾರ್ಶ್ವವಾಯು.

    ನಾಯಿಗಳಿಂದ ಹರಡುವ ರೇಬಿಸ್ ನಿರ್ಮೂಲನೆಗಾಗಿ ರಾಷ್ಟ್ರೀಯ ಕಾರ್ಯಯೋಜನೆ (NAPRE), 2030ರ ಬಗ್ಗೆ:

    • ಇದರ ಅಡಿಯಲ್ಲಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೇಬಿಸ್ ಅನ್ನು ಅಧಿಸೂಚಿತ ರೋಗವನ್ನಾಗಿ ಮಾಡುವಂತೆ ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತದೆ.
    • ಸರ್ಕಾರಿ ಅಧಿಕಾರಿಗಳಿಗೆ ವರದಿ ಮಾಡುವುದನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಲಾದ ಯಾವುದೇ ರೋಗವನ್ನು ಅಧಿಸೂಚಿತ ರೋಗ ಎನ್ನಲಾಗುತ್ತದೆ.
    • 2030ರ ವೇಳೆಗೆ ಭಾರತದಿಂದ ನಾಯಿಗಳ ಮೂಲಕ ಹರಡುವ ರೇಬಿಸ್ ಅನ್ನು ನಿರ್ಮೂಲನೆ ಮಾಡಲು “ಜಂಟಿ ಅಂತರ-ಸಚಿವಾಲಯ ಘೋಷಣೆ ಬೆಂಬಲ ಹೇಳಿಕೆ”ಯನ್ನು ಸಹ ಬಿಡುಗಡೆ ಮಾಡಲಾಯಿತು.

    ‘ವಿಶ್ವ ರೇಬಿಸ್ ದಿನ’ದ ಬಗ್ಗೆ:

    • ಆಚರಣೆ:– ಲೂಯಿಸ್ ಪಾಶ್ಚರ್ ಅವರ ಪುಣ್ಯತಿಥಿಯ ಸ್ಮರಣಾರ್ಥವಾಗಿ ಸೆಪ್ಟೆಂಬರ್ 28 ರಂದು ಇದನ್ನು ಆಚರಿಸಲಾಗುತ್ತದೆ.
    • ಲೂಯಿಸ್ ಪಾಶ್ಚರ್ ಅವರು ಫ್ರೆಂಚ್ ರಸಾಯನಶಾಸ್ತ್ರಜ್ಞ ಮತ್ತು ಸೂಕ್ಷ್ಮಜೀವಿ ವಿಜ್ಞಾನಿಯಾಗಿದ್ದು, ಇವರು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದರು.
    • ಇವರು ಪಾಶ್ಚರೀಕರಣ, ಆಂಥ್ರಾಕ್ಸ್ ಮತ್ತು ಕಾಲರಾ ಲಸಿಕೆಗಳು ಹಾಗೂ ಚೇಂಬರ್‌ಲ್ಯಾಂಡ್ ಶೋಧಕಗಳನ್ನು ಸಹ ಕಂಡುಹಿಡಿಡಿದ್ದಾನೆ.
  • ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ

    ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ

    ಸಾಮಾನ್ಯ ಅಧ್ಯಯನ-1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿರುವ ಮತ್ತು ಭಾರತದ ಅತ್ಯಂತ ಪೂರ್ವದ ಹಳ್ಳಿಯಾದ ‘ಡಾಂಗ್‌’ ನಲ್ಲಿ, 2026ರ ಸಾಲಿನ ಭಾರತದ ಮೊದಲ ಸೂರ್ಯೋದಯವನ್ನು “ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ” (ಡ್ಯಾನ್ಸ್ ಆಫ್ ದಿ ಡಾನ್) ಎಂಬ ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.

    “ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ”(ಡ್ಯಾನ್ಸ್ ಆಫ್ ದಿ ಡಾನ್)ದ ಬಗ್ಗೆ:

    • “ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ” ಎಂಬ ಶೀರ್ಷಿಕೆಯ ವಿಶಿಷ್ಟ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಹೊಸ ವರ್ಷದ ಪ್ರಥಮ ಸೂರ್ಯೋದಯವನ್ನು ಸ್ವಾಗತಿಸಲಾಯಿತು.
    • ಆಚರಿಸುವವರು:- ಈ ಆಚರಣೆಯನ್ನು ಪ್ರಮುಖವಾಗಿ ಸ್ಥಳೀಯ ‘ಮೇಯೋರ್’ ಮತ್ತು ‘ಮಿಶ್ಮಿ’ ಸಮುದಾಯಗಳು ನೆರವೇರಿಸಿದವು. ಈ ಸಮುದಾಯಗಳ ಸದಸ್ಯರು ತಮ್ಮ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ಬಳಸಿಕೊಂಡು, ಪಾರಂಪರಿಕ ಮಂತ್ರ ಪಠಣಗಳು, ಹಾಡುಗಳು ಹಾಗೂ ಸ್ಥಳೀಯ ಲಯಗಳೊಂದಿಗೆ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮದಿಂದ ಆಚರಿಸಿದರು.
  • 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ | KPME (ತಿದ್ದುಪಡಿ) ಮಸೂದೆ, 2025

    17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

    ಇದೀಗ ಸುದ್ದಿಯಲ್ಲಿದೆ: 

    • 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಜನವರಿ 29 ರಂದು ಪ್ರಾರಂಭವಾಗಲಿದೆ.

    ಪ್ರಮುಖ ಅಂಶಗಳು:

    • ರಾಯಭಾರಿ:- ನಟ ಪ್ರಕಾಶ್ ರಾಜ್ 
    • ದಿನಾಂಕ:- ಜನವರಿ 29 ರಿಂದ ಫೆಬ್ರವರಿ 6
    • ಸ್ಥಳ:- ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನಿಪೊಲಿಸ್‌.
    • ಆಸ್ಕರ್ ಗೆ ಆಯ್ಕೆಯಾದ ಚಲನಚಿತ್ರಗಳ ಪ್ರದರ್ಶನ:- 98ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಚಲನಚಿತ್ರಗಳನ್ನು ಪ್ರದರ್ಶಿಸಲು ಸಜ್ಜಾಗಿದೆ.
    • ಅಂತರರಾಷ್ಟ್ರೀಯ ಮೆಚ್ಚುಗೆ ಗಳಿಸಿದ ಚಲನಚಿತ್ರಗಳ ಪ್ರದರ್ಶನ:- ಕಾನ್, ರೋಟರ್‌ಡ್ಯಾಮ್, ಬರ್ಲಿನ್, ಬುಸಾನ್ ಮತ್ತು ಲೊಕರ್ನೋದಂತಹ ಪ್ರತಿಷ್ಠಿತ ಜಾಗತಿಕ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿದ ಚಲನಚಿತ್ರಗಳನ್ನು ಸಹ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ.
    • 17ನೇ ಆವೃತ್ತಿಯ ಧ್ಯೇಯವಾಕ್ಯ:- “ಮಹಿಳಾ ಸಬಲೀಕರಣ” (‘ಮಹಿಳೆ: ಅವಳಂತೆಯೇ’ /‘Woman: As She Is’ ‘).

    KPME (ತಿದ್ದುಪಡಿ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ: 

    • KPME (ತಿದ್ದುಪಡಿ) ಮಸೂದೆ, 2025 ರ ಬಗ್ಗೆ ಖಾಸಗಿ ಆಸ್ಪತ್ರೆಗಳು ಕಳವಳವನ್ನು ವ್ಯಕ್ತಪಡಿಸಿವೆ.

    ಪ್ರಮುಖ ಆಕ್ಷೇಪಣೆಗಳು:

    • ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರಾತಿನಿಧ್ಯವನ್ನು ತೆಗೆದುಹಾಕಿರುವುದು ಪ್ರಮುಖ ಆಕ್ಷೇಪಣೆಯಾಗಿದೆ.
    • ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಖಾಸಗಿ ಆಸ್ಪತ್ರೆಗಳ ಆಡಳಿತಗಾರರನ್ನು ಹೊರಗಿಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ.
    • ಹಿಂದಿನ “ಅನುಮತಿಸಲಾಗಿದೆ ಎಂದು ಪರಿಗಣಿಸುವ” ನಿಬಂಧನೆಯನ್ನು 6 ತಿಂಗಳ ತಾತ್ಕಾಲಿಕ ನೋಂದಣಿ ವ್ಯವಸ್ಥೆಯೊಂದಿಗೆ ಬದಲಾಯಿಸಿರುವುದು ಆಕ್ಷೇಪಣೆಗೆ ಕಾರಣವಾಗಿದೆ. ಮೂಲ ಕಾಯಿದೆಯ ಅಡಿಯಲ್ಲಿ, ಈ ಅವಧಿಯು 3 ತಿಂಗಳುಗಳಿತ್ತು.
  • ರಾಜ್ಯದಿಂದ ನದಿ ಜೋಡಣೆ ಯೋಜನೆಗಳಲ್ಲಿ 40 ರಿಂದ 45 ಟಿಎಂಸಿ ನೀರು ಹಂಚಿಕೆಗೆ ಬೇಡಿಕೆ | ಶಿರಸಿಯಲ್ಲಿ ಮಂಗನ ಕಾಯಿಲೆಯ ರಾಜ್ಯದ 2ನೇ ಪ್ರಯೋಗಾಲಯ

    ರಾಜ್ಯದಿಂದ ನದಿ ಜೋಡಣೆ ಯೋಜನೆಗಳಲ್ಲಿ 40 ರಿಂದ 45 ಟಿಎಂಸಿ ನೀರು ಹಂಚಿಕೆಗೆ ಬೇಡಿಕೆ

    ಇದೀಗ ಸುದ್ದಿಯಲ್ಲಿದೆ:

    • ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರದ (NWDA) 24ನೇ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದರು.

    ಪ್ರಮುಖ ಅಂಶಗಳು:

    • ಉದ್ದೇಶ:- ರಾಷ್ಟ್ರೀಯ ನದಿ ಜೋಡಣೆ ಚೌಕಟ್ಟಿನ ವ್ಯಾಪ್ತಿಯಲ್ಲಿ ಕರ್ನಾಟಕಕ್ಕೆ ಒಟ್ಟು ನೀರಿನ ಹಂಚಿಕೆಯನ್ನು 40 ರಿಂದ 45 ಟಿಎಂಸಿ ಅಡಿಗಳಿಗೆ ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪೂರೈಸಲು ಈ ಬೇಡಿಕೆಯನ್ನು ಮಂಡಿಸಲಾಗಿದೆ.
    • ಪ್ರಮುಖ ಬೇಡಿಕೆಗಳು:- ಗೋದಾವರಿ-ಕಾವೇರಿ ನದಿಗಳ ಜೋಡಣೆ ಯೋಜನೆಯ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ, ಮುಖ್ಯವಾಗಿ ಕುಡಿಯುವ ನೀರಿನ ಉದ್ದೇಶಗಳಿಗಾಗಿ ಹೆಚ್ಚುವರಿಯಾಗಿ 5 ಟಿಎಂಸಿ ನೀರನ್ನು ಒದಗಿಸುವಂತೆ ರಾಜ್ಯ ಸರ್ಕಾರವು ಕೇಂದ್ರವನ್ನು ಒತ್ತಾಯಿಸಿದೆ.
    • ಕರ್ನಾಟಕಕ್ಕೆ ಪ್ರಸ್ತುತ ಹಂಚಿಕೆ ಸ್ಥಿತಿ:- 2 ಪ್ರಮುಖ ಯೋಜನೆಗಳ ಅಡಿಯಲ್ಲಿ ಒಟ್ಟು 34.40 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ:
    • ಗೋದಾವರಿ-ಕಾವೇರಿ ನದಿಗಳ ಜೋಡಣೆಯಿಂದ 15.90 ಟಿಎಂಸಿ.
    • ವರದಾ-ಬೇಡ್ತಿ ನದಿಗಳ ಜೋಡಣೆಯಿಂದ 18.50 ಟಿಎಂಸಿ.
    • ಗೋದಾವರಿ-ಕಾವೇರಿ ಯೋಜನೆಯ ಮಾಹಿತಿ:- ಮೊದಲ ಹಂತದಲ್ಲಿ, ಒಟ್ಟು 148 ಟಿಎಂಸಿ ನೀರನ್ನು ತಿರುಗಿಸಲು ನಿರ್ಧರಿಸಲಾಗಿದೆ; ತನ್ನ ಪಾಲಿನ 15.90 ಟಿಎಂಸಿ ನೀರಿನ ಬಳಕೆ ಮತ್ತು ವಿತರಣೆಯ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕರ್ನಾಟಕ ಸರ್ಕಾರವು ಕೋರಿದೆ.
    • ವರದಾ-ಬೇಡ್ತಿ ಯೋಜನೆಯ ವಿವರಗಳು:- ಈ ಅಂತರ್ ರಾಜ್ಯ ನದಿಗಳ ಜೋಡಣೆಗಾಗಿ ವಿವರವಾದ ಯೋಜನಾ ವರದಿಯನ್ನು (DPR) ಸಿದ್ಧಪಡಿಸಲಾಗುತ್ತಿದೆ. ಇದರ ಅಂದಾಜು ವೆಚ್ಚ ₹10,000 ಕೋಟಿಗಳಾಗಿದ್ದು, 90% ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

    ಗಮನಿಸಿ:- ನದಿಗಳ ಜೋಡಣೆಗಾಗಿ ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರವನ್ನು (NWDA) ರಚಿಸಲಾಗಿದೆ ಮತ್ತು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದರ ಸದಸ್ಯರಾಗಿವೆ.

     

    ಗೋದಾವರಿ-ಕಾವೇರಿ ನದಿಗಳ ಜೋಡಣೆ ಯೋಜನೆಯ ಬಗ್ಗೆ:

      • 3-ಹಂತದ ಮಾರ್ಗ ಜೋಡಣೆ):- ಈ ಯೋಜನೆಯು ಈ ಕೆಳಗಿನ ಮಾರ್ಗಗಳ ಮೂಲಕ ಭಾರೀ ಪ್ರಮಾಣದ ನೀರಿನ ವರ್ಗಾವಣೆಯನ್ನು ಪ್ರಸ್ತಾಪಿಸುತ್ತದೆ:
    • ಗೋದಾವರಿ (ಇಂಚಂಪಲ್ಲಿ ಅಣೆಕಟ್ಟು) – ಕೃಷ್ಣಾ (ನಾಗಾರ್ಜುನಸಾಗರ ಅಣೆಕಟ್ಟು)
    • ಕೃಷ್ಣಾ (ನಾಗಾರ್ಜುನಸಾಗರ ಅಣೆಕಟ್ಟು) – ಪೆನ್ನಾರ್ (ಸೋಮಶಿಲಾ ಅಣೆಕಟ್ಟು)
    • ಪೆನ್ನಾರ್ (ಸೋಮಶಿಲಾ ಅಣೆಕಟ್ಟು) – ಕಾವೇರಿ (ಗ್ರಾಂಡ್ ಸ್ಟಾನ್ಲೆ ಆಣೆಕಟ್ಟು)
    • ಪ್ರಮುಖ ಅಂಕಿಅಂಶಗಳು:-
      • ಒಟ್ಟು ತಿರುವು:- ಗೋದಾವರಿ ಜಲಾನಯನ ಪ್ರದೇಶದಿಂದ ಬಳಕೆಯಾಗದ ಸುಮಾರು 148 ಟಿಎಂಸಿ (4,189 MCM) ನೀರು ಲಭ್ಯವಿದೆ.
      • ತಮಿಳುನಾಡಿನ ಪಾಲು:- ಚೆನ್ನೈಗೆ ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆಗಾಗಿ 41 ಟಿಎಂಸಿ ನೀರನ್ನು ಮೀಸಲಿಡಲಾಗಿದೆ.
      • ಕರ್ನಾಟಕದ ನಿಲುವು:- ಯೋಜನೆಗೆ ಅನುಮೋದನೆ ನೀಡುವ ಮೊದಲು ರಾಜ್ಯವು 45 ಟಿಎಂಸಿ ನೀರಿನ ಹಕ್ಕನ್ನು ಪ್ರತಿಪಾದಿಸಿದೆ.
    • ಮೂಲಸೌಕರ್ಯ ಮತ್ತು ತಂತ್ರಜ್ಞಾನ:-
      • ಪ್ರಾಥಮಿಕ ಮೂಲ:- ಗೋದಾವರಿ ನದಿಯ ಮೇಲ್ದಂಡೆಯಲ್ಲಿರುವ ಇಂಚಂಪಲ್ಲಿ ಅಣೆಕಟ್ಟು.
      • ಸಾಗಣೆ ವ್ಯವಸ್ಥೆ:- ಆವಿಯಾಗುವಿಕೆಯಿಂದ ಉಂಟಾಗುವ ನೀರಿನ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಲು, ನಿರ್ದಿಷ್ಟ ವಿಭಾಗಗಳಲ್ಲಿ ಸಾಂಪ್ರದಾಯಿಕ ತೆರೆದ ಕಾಲುವೆಗಳ ಬದಲಿಗೆ ಉಕ್ಕಿನ ಕೊಳವೆಗಳನ್ನು ಬಳಸುವುದನ್ನು ಈ ಯೋಜನೆಯು ಒಳಗೊಂಡಿದೆ.
    • ಫಲಾನುಭವಿಗಳ ಶ್ರೇಣಿ:-
      • ಪ್ರಮುಖ ಫಲಾನುಭವಿಗಳು:- ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು.
      • ಇತರ ಫಲಾನುಭವಿಗಳು:- ಪುದುಚೇರಿ ಕೇಂದ್ರಾಡಳಿತ ಪ್ರದೇಶ.

    ಬೇಡ್ತಿ- ವರದಾ ನದಿಗಳ ಜೋಡಣೆ ಯೋಜನೆಯ ಬಗ್ಗೆ:

    • ಪ್ರಸ್ತಾಪಿಸಿದವರು:- ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರ. 
    • ಮೂಲ ಉದ್ದೇಶ:- ಉತ್ತರ ಕರ್ನಾಟಕದ ನೀರಿನ ಕೊರತೆಯನ್ನು ತಗ್ಗಿಸಲು, ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯಿಂದ ಸರಿಸುಮಾರು 22 ಟಿಎಂಸಿ “ಹೆಚ್ಚುವರಿ” ನೀರನ್ನು ಪೂರ್ವಕ್ಕೆ ಹರಿಯುವ ವರದಾ ನದಿಗೆ (ತುಂಗಭದ್ರಾದ ಉಪನದಿ) ತಿರುಗಿಸುವುದು ಇದರ ಉದ್ದೇಶವಾಗಿದೆ.
    • ಮಾರ್ಗ ಮತ್ತು ಕಾರ್ಯವಿಧಾನ:-
      • ಮೂಲ:- ಬೇಡ್ತಿ ನದಿ (ಪಶ್ಚಿಮ ಘಟ್ಟಗಳು, ಅರಬ್ಬೀ ಸಮುದ್ರವನ್ನು ಸೇರುತ್ತದೆ).
      • ಅಂತಿಮ ಸ್ಥಳ:- ವರದಾ ನದಿ (ಪೂರ್ವಕ್ಕೆ ಹರಿಯುತ್ತದೆ).
      • ತಾಂತ್ರಿಕ ವಿನ್ಯಾಸ:- ಪಟ್ಟಣಹಳ್ಳ ಮತ್ತು ಸುರೇಮನೆಯಲ್ಲಿ 6.8 ಕಿ.ಮೀ ಉದ್ದದ ಸುರಂಗಗಳು ಮತ್ತು ನೀರೆತ್ತುವ ಘಟಕಗಳನ್ನು ಬಳಸಿಕೊಂಡು ಎರಡು ಸಂಯುಕ್ತ ಕೊಂಡಿಗಳನ್ನು ಈ ಯೋಜನೆಯು ಒಳಗೊಂಡಿದೆ.
    • ಉದ್ದೇಶಿತ ಗುರಿಗಳು:-
      • ನೀರಾವರಿ:- ತುಂಗಭದ್ರಾ ಎಡದಂಡೆ ಪ್ರದೇಶದಲ್ಲಿ ಸುಮಾರು 1 ಲಕ್ಷ ಹೆಕ್ಟೇರ್‌ಗೆ ನೀರಾವರಿ ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
      • ಬಳಕೆ:- ಕಡಿಮೆ ನೀರಿನ ಲಭ್ಯತೆ ಇರುವ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಹತ್ತಿ ಹಾಗೂ ಜೋಳದಂತಹ ಮಳೆಯಾಶ್ರಿತ ಬೆಳೆಗಳನ್ನು ಸ್ಥಿರವಾಗಿಸುವುದು.
    • ಫಲಾನುಭವಿಗಳು:- ರಾಯಚೂರು, ಗದಗ, ಹಾವೇರಿ ಮತ್ತು ಕೊಪ್ಪಳದ ಬರಪೀಡಿತ ಜಿಲ್ಲೆಗಳನ್ನು ಈ ಯೋಜನೆಯು ಒಳಗೊಂಡಿದೆ.
    • ಮೂಲಸೌಕರ್ಯ:-
      • ಅಣೆಕಟ್ಟು 1:- ಮೆಣಸಗೋಡದಲ್ಲಿ (ಪಟ್ಟಣಹಳ್ಳ ತೊರೆ).
      • ಅಣೆಕಟ್ಟು 2:- ಹಿರೇವಡ್ಡಟ್ಟಿಯಲ್ಲಿ (ಗದಗ ಜಿಲ್ಲೆ).
    • ಹಣಕಾಸು:- ಅಂದಾಜು ವೆಚ್ಚವು ₹2,000 ಕೋಟಿಯಿಂದ ₹10,000 ಕೋಟಿಯವರೆಗೆ ಆಗಲಿದೆ (ಅಂತಿಮ ಯೋಜನೆಯ ಮಾರ್ಪಾಡುಗಳಿಗೆ ಒಳಪಟ್ಟಿರುತ್ತದೆ).
    • ಸಂಘರ್ಷ ಮತ್ತು ಸ್ಥಿತಿ:-
      • ಪರ:- ಬರ ಪರಿಹಾರವನ್ನು ಬಯಸುವ ಉತ್ತರ ಕರ್ನಾಟಕದ ರೈತರು ಇದನ್ನು ಬೆಂಬಲಿಸುತ್ತಿದ್ದಾರೆ.
      • ವಿರೋಧ:- ಪರಿಸರವಾದಿಗಳು ಮತ್ತು ಉತ್ತರ ಕನ್ನಡದ ‘ಶಿರಸಿ’ ಭಾಗದ ಸ್ಥಳೀಯರು ಇದನ್ನು ವಿರೋಧಿಸುತ್ತಿದ್ದಾರೆ. 2,100 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ ಮತ್ತು ಪರಿಸರ ಸೂಕ್ಷ್ಮ ರಾಮಪತ್ರೆ (ಮೈರಿಸ್ಟಿಕಾ) ಜೌಗು ಪ್ರದೇಶಗಳಿಗೆ ಹಾನಿಯಾಗುವ ಸಾಧ್ಯತೆಯನ್ನು ಇವರು ಉಲ್ಲೇಖಿಸಿದ್ದಾರೆ.
      • ಪ್ರಸ್ತುತ ಸ್ಥಿತಿ:- ಇದು ಹೆಚ್ಚು ವಿವಾದಾತ್ಮಕವಾಗಿದೆ; “ವಿವರವಾದ ಯೋಜನಾ ವರದಿ”ಯನ್ನು (DPR) ಸಿದ್ಧಪಡಿಸಲು ಸರ್ಕಾರ ಅನುಮೋದನೆ ನೀಡಿದ್ದರೂ, ಪ್ರತಿಭಟನೆಗಳ ಕಾರಣದಿಂದಾಗಿ ವ್ಯಾಪಕ ಅನುಷ್ಠಾನವು ಸ್ಥಗಿತಗೊಂಡಿದೆ.

    ಶಿರಸಿಯಲ್ಲಿ ಮಂಗನ ಕಾಯಿಲೆಯ ರಾಜ್ಯದ 2ನೇ ಪ್ರಯೋಗಾಲಯ

    ಇದೀಗ ಸುದ್ದಿಯಲ್ಲಿದೆ:

    • ‘ಕ್ಯಾಸನೂರು ಅರಣ್ಯ ಕಾಯಿಲೆ’ (KFD)ಯ 2ನೇ ಪರೀಕ್ಷಾ ಪ್ರಯೋಗಾಲಯವು ಶೀಘ್ರದಲ್ಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾರಂಭವಾಗಲಿದೆ.

    ಪ್ರಮುಖ ಮುಖ್ಯಾಂಶಗಳು:

    • ಪ್ರಾರಂಭಿಸಿದವರು:- ಆರೋಗ್ಯ ಇಲಾಖೆ, ಕರ್ನಾಟಕ ಸರ್ಕಾರ.
    • ಪ್ರಮುಖ ಗುರಿ:- ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು. 
    • ಮೊದಲ ಪ್ರಯೋಗಾಲಯ:- ಪ್ರಸ್ತುತ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ.
    • ಪ್ರಯೋಜನಗಳು:- ಹೊಸ ಪ್ರಯೋಗಾಲಯವು ತ್ವರಿತ ರೋಗನಿರ್ಣಯಕ್ಕೆ ಅನುವು ಮಾಡಿಕೊಡುವ ಮೂಲಕ ಶಿರಸಿ, ಸಿದ್ದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಪ್ರಯೋಜನವನ್ನು ನೀಡಲಿದೆ. ಇದು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಕ್ಯಾಸನೂರು ಅರಣ್ಯ ಕಾಯಿಲೆ (ಮಂಗನ ಕಾಯಿಲೆ)ಯ ಬಗ್ಗೆ:

    • ಮೂಲ:- ಇದನ್ನು 1957 ರಲ್ಲಿ ಕರ್ನಾಟಕದ ಕ್ಯಾಸನೂರು ಅರಣ್ಯದಲ್ಲಿ ಮೊದಲು ಪತ್ತೇಹಚ್ಚಲಾಯಿತು ಮತ್ತು ಇದನ್ನು ಸಾಮಾನ್ಯವಾಗಿ ‘ಮಂಗನ ಕಾಯಿಲೆ’ ಎಂತಲೂ ಕರೆಯಲಾಗುತ್ತದೆ.
    • ಉಣ್ಣಿಗಳಿಂದ ಹರಡುವ ವೈರಾಣು ರಕ್ತಸ್ರಾವದ ಜ್ವರವಾಗಿದೆ:- ಇದು ‘ಕ್ಯಾಸನೂರು ಅರಣ್ಯ ಕಾಯಿಲೆ ವೈರಾಣು’ವಿನಿಂದ (ಫ್ಲಾವಿವಿರಿಡೆ ಕುಟುಂಬ) ಉಂಟಾಗುತ್ತದೆ.
    • ಮನುಷ್ಯರಿಗೆ ಹರಡುವಿಕೆ:- ಇದು ಉಣ್ಣಿಗಳ ಕಚ್ಚುವಿಕೆಯಿಂದ (ಮುಖ್ಯವಾಗಿ ಹಿಮಾಫಿಸಾಲಿಸ್ ಸ್ಪಿನಿಗೆರಾ) ಅಥವಾ ಸೋಂಕಿತ ಪ್ರಾಣಿಗಳ, ವಿಶೇಷವಾಗಿ ಅನಾರೋಗ್ಯಪೀಡಿತ ಅಥವಾ ಸತ್ತ ಮಂಗಗಳ ಸಂಪರ್ಕದಿಂದ ಮನುಷ್ಯರಿಗೆ ಹರಡುತ್ತದೆ. 
    • ಈ ರೋಗವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.
    • ಋತುಮಾನ:- ಈ ಸಾಂಕ್ರಾಮಿಕ ರೋಗವು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಜೂನ್‌ವರೆಗೆ ಕಂಡುಬರುತ್ತದೆ ಮತ್ತು ಜನವರಿ ಹಾಗೂ ಏಪ್ರಿಲ್ ನಡುವಿನ ಅವಧಿಯಲ್ಲಿ ಇದು ಉತ್ತುಂಗದಲ್ಲಿರುತ್ತದೆ.
    • ರೋಗಲಕ್ಷಣಗಳು:- ಹಠಾತ್ ತೀವ್ರ ಜ್ವರ, ತಲೆನೋವು ಮತ್ತು ವಾಂತಿ. ತೀವ್ರತರವಾದ ಪ್ರಕರಣಗಳು ರಕ್ತಸ್ರಾವ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಒಳಗೊಂಡಿರಬಹುದು.
    • ಮರಣ ಪ್ರಮಾಣ:- ಸುಮಾರು ಶೇಕಡಾ 5 ರಿಂದ 10 ರಷ್ಟಿದೆ.
    • ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ:- ರೋಗ ನಿರ್ವಹಣೆಯು ಬೆಂಬಲಿತ ಆರೈಕೆಯನ್ನು (ಜಲಸಂಚಯನ, ಆಮ್ಲಜನಕ ಪೂರೈಕೆ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದು) ಅವಲಂಬಿಸಿದೆ.
    • ಲಸಿಕೆ ಲಭ್ಯವಿದೆ:- ಭಾರತದಲ್ಲಿ ಈ ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಇದನ್ನು ಪಡೆಯಲು ವ್ಯಾಪಕವಾಗಿ ಶಿಫಾರಸು ಮಾಡಲಾಗಿದೆ.
  • ಗಂಗಾ ನದಿ ಒಪ್ಪಂದ | ಸಂಗೀತ ಕಲಾನಿಧಿ ಪ್ರಶಸ್ತಿ

    ಗಂಗಾ ನದಿ ಒಪ್ಪಂದ

    ಸಾಮಾನ್ಯ ಅಧ್ಯಯನ – 2/ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಗಂಗಾ ನದಿ ನೀರು ಹಂಚಿಕೆ ಒಪ್ಪಂದವು ಡಿಸೆಂಬರ್ 2026ರಲ್ಲಿ ಮುಕ್ತಾಯಗೊಳ್ಳಲಿದ್ದು, ತನ್ನ ಅಂತಿಮ ವರ್ಷವನ್ನು ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತ ಮತ್ತು ಬಾಂಗ್ಲಾದೇಶಗಳು ಗಂಗಾ ಮತ್ತು ಪದ್ಮಾ ನದಿಗಳಲ್ಲಿ ಜಂಟಿ ನೀರಿನ ಮಾಪನ ಉಪಕ್ರಮವನ್ನು ಆರಂಭಿಸಿವೆ.

    ಗಂಗಾ ನದಿ ನೀರು ಹಂಚಿಕೆ ಒಪ್ಪಂದ, 1996 ರ ಬಗ್ಗೆ:

    • ಈ ಒಪ್ಪಂದಕ್ಕೆ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಡಿಸೆಂಬರ್ 12, 1996 ರಂದು ಸಹಿ ಹಾಕಲಾಯಿತು.
    • ಇದು ಬಾಂಗ್ಲಾದೇಶದ ಗಡಿಯಿಂದ ಸುಮಾರು 18 ಕಿ.ಮೀ. ಮೇಲ್ಭಾಗದಲ್ಲಿ, ಪಶ್ಚಿಮ ಬಂಗಾಳದಲ್ಲಿರುವ ಫರಕ್ಕಾ ಆಣೆಕಟ್ಟಿನಲ್ಲಿ ಗಂಗಾ ನದಿ ನೀರಿನ ಹಂಚಿಕೆಯನ್ನು ನಿಯಂತ್ರಿಸುತ್ತದೆ.

    ಗಂಗಾ ನದಿ ನೀರಿನ ವಿವಾದದ ಹಿನ್ನೆಲೇ:

    • ಭಾರತದಿಂದ ಫರಕ್ಕಾ ಆಣೆಕಟ್ಟು ನಿರ್ಮಾಣ (1975):- ಹೂಗ್ಲಿ ನದಿಗೆ ನೀರನ್ನು ತಿರುಗಿಸಲು 1975 ರಲ್ಲಿ ಫರಕ್ಕಾ ಆಣೆಕಟ್ಟನ್ನು ಪೂರ್ಣಗೊಳಿಸಿತು.
    • ಉದ್ದೇಶ:- ಹೂಳನ್ನು ಹೊರಹಾಕುವುದು ಮತ್ತು ಕೋಲ್ಕತ್ತಾ ಬಂದರಿನ ನೌಕಾಯಾನ ಸಾಮರ್ಥ್ಯವನ್ನು ಸುಧಾರಿಸುವುದಾಗಿತ್ತು.
      • ಬಾಂಗ್ಲಾದೇಶದ ಕಳವಳ:- ನದಿ ಪಾತ್ರದ ಕೆಳಭಾಗದ ರಾಷ್ಟ್ರವಾಗಿ, ಹರಿವು ಕಡಿಮೆಯಾಗಿರುವುದರಿಂದ ಈ ಕೆಳಗಿನ ಸಮಸ್ಯೆಗಳು ಉಂಟಾಗುತ್ತವೆ ಎಂದು ಬಾಂಗ್ಲಾದೇಶ ವಾದಿಸಿತು:
    • ಕೃಷಿ ಮತ್ತು ಮೀನುಗಾರಿಕೆಗೆ ಹಾನಿ.
    • ನದಿ ನೌಕಾಯಾನಕ್ಕೆ ಅಡಚಣೆ.
    • ಕರಾವಳಿ ಪ್ರದೇಶಗಳಲ್ಲಿ ಉಪ್ಪಿನಂಶದ ನುಗ್ಗುವಿಕೆ ಹೆಚ್ಚಳ.
    • ಸುಂದರಬನ್ಸ್ ಪರಿಸರ ವ್ಯವಸ್ಥೆಗೆ ಹಾನಿ.
    • ಈ ಭಿನ್ನಾಭಿಪ್ರಾಯವು ದಕ್ಷಿಣ ಏಷ್ಯಾದ ಅತ್ಯಂತ ದೀರ್ಘಕಾಲದ ಗಡಿಯಾಚೆಗಿನ ಜಲ ವಿವಾದಗಳಲ್ಲಿ ಒಂದಾಗಿದೆ.

    ಕೈಗೊಂಡ ಕ್ರಮಗಳು:

    • 5 ವರ್ಷಗಳ ಗಂಗಾ ಒಪ್ಪಂದ (ಮಧ್ಯಂತರ), 1977.
    • 1982 ಮತ್ತು 1985 ರಲ್ಲಿ ನೀರಿನ ಹರಿವು ಹಂಚಿಕೆ ಕುರಿತು ತಿಳುವಳಿಕಾ ಒಪ್ಪಂದಗಳು (MoUs).
    • ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ, 2011; ಪ್ರಸ್ತಾಪಿಸಲಾಗಿದೆ ಆದರೆ ಸಹಿ ಹಾಕಲಾಗಿಲ್ಲ.

    ಗಂಗಾ ನದಿಯ ಬಗ್ಗೆ:

    • ಉಗಮ:- ಉತ್ತರಾಖಂಡದ ಗಂಗೋತ್ರಿ ಹಿಮನದಿ.
    • ಉದ್ದ:- ಸುಮಾರು 2,525 ಕಿ.ಮೀ.
    • ಜಲಾನಯನ ಪ್ರದೇಶ:- ಇದು ಭಾರತದಲ್ಲಿ ಸುಮಾರು 8,61,452 ಚ. ಕಿ.ಮೀ. ಪ್ರದೇಶವನ್ನು ಆವರಿಸಿದ್ದು, 11 ಭಾರತದ ರಾಜ್ಯಗಳ ಮೂಲಕ ಭಾರತದ ಭೂಪ್ರದೇಶದ ಸುಮಾರು 27% ರಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ.
    • ಮಹತ್ವ:- ಇದು ಭಾರತದ ಜನಸಂಖ್ಯೆಯ 45% ಕ್ಕೂ ಹೆಚ್ಚು ಜನರನ್ನು ಪೋಷಿಸುತ್ತದೆ.
    • ಒಳಪಡುವ ರಾಜ್ಯಗಳು:- ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಇತರ ಕೆಲವು ರಾಜ್ಯಗಳ ಭಾಗಗಳು.
    • ಗಂಗಾ ನದಿಯ ಪ್ರಮುಖ ಉಪನದಿಗಳು:
      • ಎಡದಂಡೆಯ ಉಪನದಿಗಳು:- ರಾಮಗಂಗಾ, ಗೋಮತಿ, ಘಾಘ್ರಾ, ಗಂದಕ್, ಬುರ್ಹಿ ಗಂದಕ್, ಕೋಸಿ, ಮಹಾನಂದಾ.
      • ಬಲದಂಡೆಯ ಉಪನದಿಗಳು:– ಯಮುನಾ, ತೊನ್ಸ್, ಕರ್ಮನಾಸಾ, ಸೋನ್, ಪುನ್‌ಪುನ್, ಫಲ್ಗು, ಕಿಯುಲ್, ಚಂದನ್, ಅಜಯ್, ದಾಮೋದರ್, ರೂಪನಾರಾಯಣ್.
    • ‘ಪದ್ಮಾ’ ನದಿಯಾಗಿ ಬಾಂಗ್ಲಾದೇಶ ಪ್ರವೇಶ:- ಗಂಗಾ ನದಿಯು ಫರಕ್ಕಾ ಆಣೆಕಟ್ಟಿನ ಕೆಳಭಾಗದಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸುತ್ತದೆ. 
    • ಬಂಗಾಳ ಕೊಲ್ಲಿಯನ್ನು ಸೇರುತ್ತದೆ:- ಅಂತಿಮವಾಗಿ ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳೊಂದಿಗೆ ವಿಲೀನಗೊಂಡು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
    • ವಿಶ್ವದ ಅತಿದೊಡ್ಡ ನದಿ ಮುಖಜಭೂಮಿ ಸುಂದರಬನ್ಸ್:– ಇದು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹಂಚಿಕೆಯಾಗಿರುವ ಸುಂದರಬನ್ಸ್ ಅನ್ನು ರೂಪಿಸುತ್ತದೆ.

    ಸಂಗೀತ ಕಲಾನಿಧಿ ಪ್ರಶಸ್ತಿ

    ಸಾಮಾನ್ಯ ಅಧ್ಯಯನ – 1/ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಪಿಟೀಲು ವಾದಕ ಆರ್.ಕೆ. ಶ್ರೀರಾಮ್‌ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.

    ‘ಸಂಗೀತ ಕಲಾನಿಧಿ ಪ್ರಶಸ್ತಿ’ ಯ ಬಗ್ಗೆ:

    • ಇದನ್ನು 1942ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯು ಸ್ಥಾಪಿಸಿತು.
    • ಈ ಪ್ರಶಸ್ತಿಯನ್ನು ಕರ್ನಾಟಕ ಸಂಗೀತದಲ್ಲಿನ ಶ್ರೇಷ್ಠತೆಗಾಗಿ ನೀಡುವ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗಿದೆ. 
    • ಕರ್ನಾಟಕ ಸಂಗೀತದ “ನೊಬೆಲ್ ಪ್ರಶಸ್ತಿ”:- ಎಂದು ಸಾಮಾನ್ಯವಾಗಿ ಇದನ್ನು ಕರೆಯಲಾಗುತ್ತದೆ.
    • ಈ ಪ್ರಶಸ್ತಿಯು ಚಿನ್ನದ ಪದಕ ಮತ್ತು ಬಿರುದು ಪತ್ರವನ್ನು ಒಳಗೊಂಡಿದೆ.
    • 2005ರಿಂದ, ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತರು ‘ದಿ ಹಿಂದೂ’ ಸಂಸ್ಥೆಯು ಸ್ಥಾಪಿಸಿದ ‘ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ’ಯನ್ನು ಸಹ ಪಡೆಯುತ್ತಿದ್ದಾರೆ.

    ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪರಂಪರೆ ಮತ್ತು ಸಾಧನೆಗಳು:

    ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯ ಅತ್ಯುನ್ನತ ಹಾಗೂ ಮೇರು ಗಾಯಕಿಯಾಗಿದ್ದರು. ಅವರ ಐತಿಹಾಸಿಕ ಸಾಧನೆಗಳು ಈ ಕೆಳಗಿನಂತಿವೆ:

    • 1974ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ:- ಇವರು ಈ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ಸಂಗೀತ ಕಲಾವಿದೆಯಾಗಿದ್ದಾರೆ.
    • 1966ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ:- ಸಂಗೀತ ಪ್ರದರ್ಶನವನ್ನು ನೀಡಿದ ಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
    • 1998ರಲ್ಲಿ ‘ಭಾರತ ರತ್ನ’ ಪ್ರಶಸ್ತಿ:- ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಸಂಗೀತಗಾರ್ತಿ ಎಂಬ ಕೀರ್ತಿ ಇವರಿಗೆ ಸಲ್ಲುತ್ತದೆ.
  • ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ: ಸರ್ವೋಚ್ಚ ನ್ಯಾಯಾಲಯ (SC) | “ಮಿಷನ್ 40+” – ಕಲ್ಯಾಣ ಕರ್ನಾಟಕ ಶಿಕ್ಷಣದ ಉಪಕ್ರಮ

    ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ: ಸರ್ವೋಚ್ಚ ನ್ಯಾಯಾಲಯ (SC)

    ಇದೀಗ ಸುದ್ದಿಯಲ್ಲಿದೆ:

    • 134 ಎಕರೆ ಅರಣ್ಯ ಭೂಮಿಯ ಗುತ್ತಿಗೆ ವಿಸ್ತರಣೆಯನ್ನು ಕೋರಿದ್ದ ‘ಗಾಂಧಿ ಜೀವನ್ ಸಾಮೂಹಿಕ ಕೃಷಿ ಸಹಕಾರ ಸಂಘ,’ v/s ಕರ್ನಾಟಕ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಪೀಠವು ಎತ್ತಿಹಿಡಿದಿದೆ.

    ಪ್ರಮುಖ ಅಂಶಗಳು:

    • ತೀರ್ಪು ನೀಡಿದವರು:- ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಭಾರತದ ಸರ್ವೋಚ್ಚ ನ್ಯಾಯಾಲಯದ ಪೀಠವು ಈ ತೀರ್ಪನ್ನು ನೀಡಿದೆ.
    • ತೀರ್ಪು:- ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ನ್ಯಾಯಾಲಯವು ದೃಢವಾಗಿ ಹೇಳಿದೆ. ಕೃಷಿಯು ಮೂಲಭೂತವಾಗಿ ಕಾಡುಗಳನ್ನು ಕಡಿಯುವುದನ್ನು ಒಳಗೊಂಡಿರುವುದರಿಂದ, ಅದು ಈ ನಿಷೇಧದ ಅಡಿಯಲ್ಲಿ ಬರುತ್ತದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ತಿಳಿಸಿದೆ.
    • ಪ್ರಕರಣದ ಹಿನ್ನೆಲೆ:- ‘ಗಾಂಧಿ ಜೀವನ್ ಸಾಮೂಹಿಕ ಕೃಷಿ ಸಹಕಾರ ಸಂಘ,’ v/s ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ತೀರ್ಪು ಎತ್ತಿಹಿಡಿದಿದೆ. ಈ ಸಂಘವು 134 ಎಕರೆ ಅರಣ್ಯ ಭೂಮಿಯ ಗುತ್ತಿಗೆ ವಿಸ್ತರಣೆಯನ್ನು ಕೋರಿತ್ತು ಮತ್ತು ಇದನ್ನು ಆರಂಭದಲ್ಲಿ ಕೃಷಿಗಾಗಿ ಅವರಿಗೆ “ಅಕ್ರಮವಾಗಿ ನೀಡಲಾಗಿತ್ತು” ಎಂದು ನ್ಯಾಯಾಲಯವು ಗಮನಿಸಿದೆ.
    • ಅರಣ್ಯ (ಸಂರಕ್ಷಣೆ) ಕಾಯ್ದೆ, 1980 ರ ಸೆಕ್ಷನ್ 2 ರ ಅಡಿಯಲ್ಲಿ:- ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೆ ಅರಣ್ಯ ಭೂಮಿಯ ಮೀಸಲಾತಿಯನ್ನು ರದ್ದುಪಡಿಸುವುದನ್ನು ಅಥವಾ ಅರಣ್ಯೇತರ ಉದ್ದೇಶಗಳಿಗೆ ಬಳಸುವುದನ್ನು ತಡೆಯುವ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 
    • ಸರ್ವೋಚ್ಚ ನ್ಯಾಯಾಲಯ ಅನುಮತಿ ಅಗತ್ಯ:- ಅರಣ್ಯ ಭೂಮಿಯ ಮೀಸಲಾತಿಯನ್ನು ರದ್ದುಪಡಿಸಲು ಸರ್ವೋಚ್ಚ ನ್ಯಾಯಾಲಯ ಅನುಮತಿ ಅಗತ್ಯ ಎಂದು ಹೇಳುವ 2000 ಇಸವಿಯ ತೀರ್ಪನ್ನು ಪೀಠವು ಪುನರುಚ್ಚರಿಸಿತು.
    • ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ:- ಭೂಮಿಯನ್ನು ಹಿಂಪಡೆಯಲು ಮತ್ತು ಸ್ಥಳೀಯ ಮರಗಳೊಂದಿಗೆ ಅರಣ್ಯವನ್ನು ಮರುಸ್ಥಾಪಿಸಲು ರಾಜ್ಯಕ್ಕೆ ನಿರ್ದೇಶನ ನೀಡಿತು.
    • ರಾಜ್ಯದ ನಿಲುವು:- ವಿವಾದಿತ ಭೂ ಪ್ರದೇಶಗಳು “ಅರಣ್ಯ” ವರ್ಗದ ಅಡಿಯಲ್ಲಿ ಬರುತ್ತವೆ ಮತ್ತು ಅವು ರಾಜ್ಯ ಅರಣ್ಯ ಇಲಾಖೆಯ ಮಾಲೀಕತ್ವ ಮತ್ತು ಸ್ವಾಧೀನದಲ್ಲಿವೆ ಎಂದು ಕರ್ನಾಟಕ ಸರ್ಕಾರವು ಪ್ರಮಾಣ ಪತ್ರ (ಅಫಿಡವಿಟ್)ದ ಮೂಲಕ ದೃಢಪಡಿಸಿದೆ.

    “ಮಿಷನ್ 40+” – ಕಲ್ಯಾಣ ಕರ್ನಾಟಕ ಶಿಕ್ಷಣದ ಉಪಕ್ರಮ

    ಇದೀಗ ಸುದ್ದಿಯಲ್ಲಿದೆ: 

    • ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶಗಳನ್ನು ಸುಧಾರಿಸುವ ಉದ್ದೇಶದಿಂದ ವಿಶೇಷ (ಪರಿಹಾರ ಬೋಧನಾ) ತರಗತಿಗಳನ್ನು ಕೈಗೊಳ್ಳಲಾಗಿದೆ.

    “ಮಿಷನ್ 40+” – ಕಲ್ಯಾಣ ಕರ್ನಾಟಕ ಶಿಕ್ಷಣದ ಉಪಕ್ರಮದ ಬಗ್ಗೆ:

    • ಪರಿಹಾರ ಬೋಧನಾ ಕಾರ್ಯಕ್ರಮವನ್ನು:- ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಾದ– ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಯ ಫಲಿತಾಂಶಗಳನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.
    • ಪ್ರಾರಂಭಿಸಿದವರು:- ‘ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ‘ (KKRDB) ಮತ್ತು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ.
    • ಗುರಿ:- ವಿದ್ಯಾರ್ಥಿಗಳು ತೇರ್ಗಡೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಈ ಜಿಲ್ಲೆಗಳಲ್ಲಿ ಒಟ್ಟಾರೆ 90% ರಷ್ಟು ಉತ್ತೀರ್ಣ ಫಲಿತಾಂಶವನ್ನು ಸಾಧಿಸುವುದು ಇದರ ನಿರ್ದಿಷ್ಟ ಗುರಿಯಾಗಿದೆ.
    • ವಿಶೇಷ ತರಗತಿಗಳು:- “ನಿಧಾನವಾಗಿ ಕಲಿಯುವವರಿಗಾಗಿ” ಅಥವಾ ಹೆಚ್ಚಿನ ಸಹಾಯದ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ ಜನವರಿಯಿಂದ ಮಾರ್ಚ್‌ವರೆಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ.
    • ಹಣಕಾಸು:- ಈ ತರಗತಿಗಳನ್ನು ನಡೆಸುವ ಶಿಕ್ಷಕರು ತಿಂಗಳಿಗೆ ₹1,000 ಹೆಚ್ಚುವರಿ ಗೌರವಧನವನ್ನು ಪಡೆಯುತ್ತಾರೆ ಮತ್ತು ವಿದ್ಯಾರ್ಥಿಗಳ ಪ್ರಯಾಣ ವೆಚ್ಚವನ್ನು ಭರಿಸಲು ಶಾಲೆಗಳು ₹6,000 ಹಣವನ್ನು  ಪಡೆಯುತ್ತವೆ.
    • ಮೇಲ್ವಿಚಾರಣೆ:- ಏಳು ದಿನಗಳಿಗಿಂತ ಹೆಚ್ಚು ಕಾಲ ಗೈರುಹಾಜರಾದ ವಿದ್ಯಾರ್ಥಿಗಳನ್ನು ಮತ್ತೆ ತರಗತಿಗೆ ಕರೆತರಲು ಮನೆ ಭೇಟಿಗಳನ್ನು ನೀಡುವುದನ್ನು ಇದು ಒಳಗೊಂಡಿದೆ.
    • ರಾಜ್ಯ ಸರ್ಕಾರವು ಈ ಯೋಜನೆಗಾಗಿ ₹3.44 ಕೋಟಿ ಹಣವನ್ನು ಮೀಸಲಿಟ್ಟಿದೆ ಮತ್ತು ಇದನ್ನು ‘ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ’ (KKRDB) ಭರಿಸಲಿದೆ.

    ಹೆಚ್ಚಿನ ಮಾಹಿತಿ: 2024-25 ನೇ ಸಾಲಿನಲ್ಲಿ, ಕಲಬುರಗಿ ಜಿಲ್ಲೆಯು 41.35% ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿತ್ತು. ರಾಯಚೂರು (50.76%), ಬಳ್ಳಾರಿ (50.91%), ಬೀದರ್ (52.3%), ಕೊಪ್ಪಳ (56.57%), ಯಾದಗಿರಿ (59.6%) ಮತ್ತು ವಿಜಯಪುರ (66.78%) ಜಿಲ್ಲೆಗಳೂ ಸಹ ಕಳಪೆ ಫಲಿತಾಂಶಗಳನ್ನು ಹೊಂದಿದ್ದವು.