ಭಾರತ-ನೇಪಾಳ ಸಂಬಂಧಗಳಲ್ಲಿ ಹೊಸ ಪರ್ವ | ಪ್ರಾಜೆಕ್ಟ್ ಕುಶ (Project Kusha) | ಸ್ವದೇಶಿ ಕೃತಕ ಬುದ್ಧಿಮತ್ತೆ ಮಾದರಿ ‘ವರ್ಯ’ (Varya) | ಹವಳ ದಿಬ್ಬಗಳ ಸ್ಥಳಾಂತರ: ನಿಕೋಬಾರ್‌ನಲ್ಲಿ 4 ತಾಣಗಳ ಗುರುತು

ಭಾರತ-ನೇಪಾಳ ಸಂಬಂಧಗಳಲ್ಲಿ ಹೊಸ ಪರ್ವ

ಅಂತರರಾಷ್ಟ್ರೀಯ

ಇದೀಗ ಸುದ್ದಿಯಲ್ಲಿ:

  • ಭಾರತ ಮತ್ತು ನೇಪಾಳದ ನಡುವಿನ ಇತ್ತೀಚಿನ ಉನ್ನತ ಮಟ್ಟದ ಮಾತುಕತೆಗಳು ಗಡಿ ಸಮಸ್ಯೆಗಳ ಕುರಿತಾದ ಭಿನ್ನಾಭಿಪ್ರಾಯಗಳ ನಡುವೆಯೂ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಉಭಯ ದೇಶಗಳ ಪ್ರಯತ್ನಗಳನ್ನು ಸೂಚಿಸುತ್ತವೆ.

ಭಾರತ – ನೇಪಾಳ ಗಡಿ ವಿವಾದಗಳು

  • ಭಾರತ ಮತ್ತು ನೇಪಾಳದ ನಡುವೆ ಕೆಲವು ನಿರ್ದಿಷ್ಟ ಭೂಪ್ರದೇಶಗಳ ವಿಚಾರದಲ್ಲಿ ವಿವಾದಗಳಿವೆ.
  • ಕಾಲಪಾನಿ, ಲಿಂಪಿಯಾಧುರಾ, ಲಿಪುಲೇಖ್ ಮತ್ತು ಸುಸ್ತಾ (Susta) ಪ್ರದೇಶಗಳು ಈ ಗಡಿ ವಿವಾದದ ಪ್ರಮುಖ ಪ್ರದೇಶಗಳಾಗಿವೆ.

ಭಾರತ – ನೇಪಾಳ ಸಂಬಂಧಗಳು

  • ಭಾರತ ಮತ್ತು ನೇಪಾಳವು ಸುಮಾರು 1,751 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ.
  • ಹಂಚಿಕೆಯಾದ ಗಡಿ: ನೇಪಾಳವು ಭಾರತದ ಐದು ರಾಜ್ಯಗಳಾದ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
  • ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದ: ಈ ಒಪ್ಪಂದಕ್ಕೆ 1950 ರಲ್ಲಿ ಸಹಿ ಹಾಕಲಾಗಿದ್ದು, ಇದು ಭಾರತ ಮತ್ತು ನೇಪಾಳದ ನಡುವೆ ಅಸ್ತಿತ್ವದಲ್ಲಿರುವ ವಿಶೇಷ ಬಾಂಧವ್ಯಕ್ಕೆ ಅಡಿಪಾಯವನ್ನು ಹಾಕಿದೆ.
  • ರಕ್ಷಣಾ ಸಹಕಾರ: ಎರಡೂ ದೇಶಗಳು ‘ಸೂರ್ಯ ಕಿರಣ್’ (SURYA KIRAN) ಎಂಬ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ಪರ್ಯಾಯವಾಗಿ ಭಾರತ ಮತ್ತು ನೇಪಾಳದಲ್ಲಿ ನಡೆಸುತ್ತವೆ.
    • ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ಗಳನ್ನು ಭಾಗಶಃ ನೇಪಾಳದ ಗುಡ್ಡಗಾಡು ಜಿಲ್ಲೆಗಳಿಂದ ನೇಮಕಾತಿ ಮಾಡುವ ಮೂಲಕ ರಚಿಸಲಾಗುತ್ತದೆ.
  • ವ್ಯಾಪಾರ ಮತ್ತು ಆರ್ಥಿಕತೆ: ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಹೂಡಿಕೆದಾರ ರಾಷ್ಟ್ರವಾಗಿ ಮುಂದುವರಿದಿದ್ದು, ನೇಪಾಳದಲ್ಲಿನ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ (FDI) ಭಾರತೀಯ ಸಂಸ್ಥೆಗಳು 33.5% ಪಾಲನ್ನು ಹೊಂದಿವೆ.
  • ಆಪರೇಷನ್ ಮೈತ್ರಿ: 2015 ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತಕ್ಷಣವೇ ಸ್ಪಂದಿಸಿ, ವಿದೇಶದಲ್ಲಿ ತನ್ನ ಅತಿದೊಡ್ಡ ವಿಪತ್ತು ಪರಿಹಾರ ಕಾರ್ಯಾಚರಣೆಯಾದ ‘ಆಪರೇಷನ್ ಮೈತ್ರಿ’ಯನ್ನು ಕೈಗೊಂಡಿತು.
  • ಸಾಂಸ್ಕೃತಿಕ ಬಾಂಧವ್ಯ: ಉಭಯ ದೇಶಗಳ ನಾಯಕರು ಆಗಾಗ್ಗೆ ‘ರೋಟಿ-ಬೇಟಿ’ (Roti-beti) ಸಂಬಂಧವನ್ನು ಉಲ್ಲೇಖಿಸುತ್ತಾರೆ, ಇದು ಎರಡು ದೇಶಗಳ ಜನರ ನಡುವಿನ ಗಡಿಯಾಚೆಗಿನ ವೈವಾಹಿಕ ಸಂಬಂಧಗಳನ್ನು ಸೂಚಿಸುತ್ತದೆ.

ಪ್ರಾಜೆಕ್ಟ್ ಕುಶ (Project Kusha)

ರಕ್ಷಣೆ

ಇದೀಗ ಸುದ್ದಿಯಲ್ಲಿ:

  • ಸ್ವದೇಶಿ ನಿರ್ಮಿತ ‘ಪ್ರಾಜೆಕ್ಟ್ ಕುಶ’ (Project Kusha) ವಾಯು ರಕ್ಷಣಾ ವ್ಯವಸ್ಥೆಯು ಭಾರತದ ಭದ್ರತಾ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

ಪ್ರಾಜೆಕ್ಟ್ ಕುಶ (Project Kusha) ಬಗ್ಗೆ: 

  • ಇದು ಭಾರತದ ಮಹತ್ವಾಕಾಂಕ್ಷೆಯ ಮತ್ತು ಸಂಪೂರ್ಣ ಸ್ವದೇಶಿ ನಿರ್ಮಿತ, ದೂರಗಾಮಿ ಭೂ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ (Surface-to-air missile – SAM) ರಕ್ಷಣಾ ವ್ಯವಸ್ಥೆಯಾಗಿದೆ.
  • ಶತ್ರುಗಳ ಸುಧಾರಿತ ಗುರಿಗಳನ್ನು ಬಹುದೂರದಲ್ಲೇ ಪತ್ತೆಹಚ್ಚಿ ನಾಶಪಡಿಸುವ ಪ್ರಬಲವಾದ, ಬಹು-ಪದರದ ವಾಯು ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
  • ಅಭಿವೃದ್ಧಿಪಡಿಸಿದವರು: ಇದನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದೆ.
  • ಬಹು-ಹಂತದ ಪ್ರತಿಬಂಧಕ: ವಿವಿಧ ದೂರದಲ್ಲಿರುವ ಬೆದರಿಕೆಗಳನ್ನು ತಡೆಯಲು ಈ ವ್ಯವಸ್ಥೆಯು ಮೂರು ರೀತಿಯ ಇಂಟರ್ಸೆಪ್ಟರ್ (Interceptor) ಕ್ಷಿಪಣಿಗಳನ್ನು ಒಳಗೊಂಡಿದೆ:
    • ಸುಮಾರು 150 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ M1 ಇಂಟರ್ಸೆಪ್ಟರ್.
    • ಸುಮಾರು 250 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ M2 ಇಂಟರ್ಸೆಪ್ಟರ್.
    • 350-400 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ M3 ಇಂಟರ್ಸೆಪ್ಟರ್.

ಪ್ರಾಮುಖ್ಯತೆ: 

  • S-400 ಗೆ ಸರಿಸಮಾನ: ರಷ್ಯಾದ ಪ್ರಸಿದ್ಧ ‘S-400 ಟ್ರಯಂಫ್’ ವಾಯು ರಕ್ಷಣಾ ವ್ಯವಸ್ಥೆಗೆ ಪ್ರಾಜೆಕ್ಟ್ ಕುಶಾವನ್ನು ಭಾರತದ ಸ್ವದೇಶಿ ಉತ್ತರವೆಂದು ಕರೆಯಲಾಗುತ್ತದೆ.
  • ಈ ಯೋಜನೆಯು 2035 ರ ವೇಳೆಗೆ ಭಾರತಕ್ಕಾಗಿ ಬಹು-ಪದರದ ವಾಯು ಮತ್ತು ಕ್ಷಿಪಣಿ ರಕ್ಷಣಾ ಕವಚವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ವಿಶಾಲವಾದ “ಮಿಷನ್ ಸುದರ್ಶನ್ ಚಕ್ರ” ಉಪಕ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿದೆ.

ಸ್ವದೇಶಿ ಕೃತಕ ಬುದ್ಧಿಮತ್ತೆ ಮಾದರಿ ‘ವರ್ಯ’ (Varya)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:

  • ಅವತಾರ್ (Avataar) ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ವರ್ಯ’ (Varya) ಎಂಬ ಸ್ವದೇಶಿ ಕೃತಕ ಬುದ್ಧಿಮತ್ತೆ (AI) ಆಧಾರಿತ ವೀಡಿಯೊ ಸೃಷ್ಟಿ ಮಾದರಿಯ (Video generation model) ಬಿಡುಗಡೆಗೆ ‘ಇಂಡಿಯಾ ಎಐ ಮಿಷನ್’ (IndiaAI Mission) ಬೆಂಬಲ ನೀಡಿದೆ.

ವರ್ಯ (Varya) ಮಾದರಿಯ ಬಗ್ಗೆ:

  • ‘ವರ್ಯ’ ಒಂದು ಸುಧಾರಿತ ವೀಡಿಯೊ ಸೃಷ್ಟಿ ಮಾದರಿಯಾಗಿದ್ದು, ಇದು ಪಠ್ಯ ಸೂಚನೆಗಳನ್ನು (Text prompts) ಮತ್ತು ಚಿತ್ರಗಳನ್ನು ನೇರವಾಗಿ ವೀಡಿಯೊಗಳಾಗಿ ಪರಿವರ್ತಿಸುತ್ತದೆ.
  • ಭಾರತದ ವಿವಿಧ ಪ್ರದೇಶಗಳು, ಹಬ್ಬಗಳು, ಸಂಪ್ರದಾಯಗಳು, ಉಡುಪುಗಳು, ಆಹಾರ ಮತ್ತು ದಿನನಿತ್ಯದ ಜೀವನವನ್ನು ಬಿಂಬಿಸುವಂತಹ, ಸಾಂಸ್ಕೃತಿಕವಾಗಿ ಸೂಕ್ತವಾದ ದೃಶ್ಯಾವಳಿಗಳನ್ನು (Visual content) ರಚಿಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
  • ಈ ವೇದಿಕೆಯು ‘ಪರಿಕಲ್ಪನೆಯಿಂದ ವೀಡಿಯೊಗೆ ಮತ್ತು ಕಥೆಗೆ’ (Idea to Video to Story) ಎಂಬ ಕಾರ್ಯವಿಧಾನವನ್ನು ಅನುಸರಿಸುತ್ತದೆ ಹಾಗೂ ಬಳಕೆದಾರರು ಸರಳವಾದ ಸೂಚನೆಗಳ(Prompts) ಮೂಲಕ ದೃಶ್ಯ ಕಥೆಗಳನ್ನು ಸುಲಭವಾಗಿ ರಚಿಸಲು ಮತ್ತು ವಿಸ್ತರಿಸಲು ಇದು ಅನುವು ಮಾಡಿಕೊಡುತ್ತದೆ.

ಹವಳ ದಿಬ್ಬಗಳ ಸ್ಥಳಾಂತರ: ನಿಕೋಬಾರ್‌ನಲ್ಲಿ 4 ತಾಣಗಳ ಗುರುತು

ಪರಿಸರ

ಇದೀಗ ಸುದ್ದಿಯಲ್ಲಿ:

  • ಗ್ರೇಟ್ ನಿಕೋಬಾರ್ ದ್ವೀಪದ (GNI) ಬೃಹತ್ ಯೋಜನೆಯ (ಮೆಗಾ ಪ್ರಾಜೆಕ್ಟ್) ಭಾಗವಾಗಿ ಗ್ಯಾಲಥಿಯಾ ಕೊಲ್ಲಿಯಲ್ಲಿ ಉದ್ದೇಶಿಸಲಾದ ಸರಕು ವರ್ಗಾವಣೆ (Transshipment) ಬಂದರಿನ ಕಾಮಗಾರಿಯಿಂದಾಗಿ ಪ್ರಭಾವಕ್ಕೊಳಗಾಗುವ ಹವಳದ ದಿಬ್ಬಗಳ ಸಮೂಹಗಳು (Colonies) ಮತ್ತು ದೈತ್ಯ ಮೃದ್ವಂಗಿಗಳನ್ನು ಪಶ್ಚಿಮ ಕರಾವಳಿಯ ನಾಲ್ಕು ತಾಣಗಳಿಗೆ ಸ್ಥಳಾಂತರಿಸಲಾಗುವುದು.

‘ಗ್ರೇಟ್ ನಿಕೋಬಾರ್ ದ್ವೀಪ (GNI) ಯೋಜನೆ’ಯ ಬಗ್ಗೆ

  • ಈ ಯೋಜನೆಯನ್ನು ನೀತಿ ಆಯೋಗವು ರೂಪಿಸಿದ್ದು, 2021 ರಲ್ಲಿ ಪ್ರಾರಂಭಿಸಲಾಯಿತು.
  • ಇದು ಸುಮಾರು ₹72,000 ದಿಂದ ₹81,000 ಕೋಟಿ ವೆಚ್ಚದ ಬೃಹತ್ ಮೂಲಸೌಕರ್ಯ ಉಪಕ್ರಮವಾಗಿದೆ.
  • ಭಾರತದ ದಕ್ಷಿಣ ತುದಿಯ ದ್ವೀಪವನ್ನು ಪ್ರಮುಖ ಕಾರ್ಯತಂತ್ರದ ಹಾಗೂ ಆರ್ಥಿಕ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಇದು ಹೊಂದಿದೆ.
  • ಪ್ರಾಮುಖ್ಯತೆ: ಈ ಯೋಜನೆಯು ಭಾರತದ ‘ಸಾಗರ ದೃಷ್ಟಿಕೋನ 2030’ (Maritime Vision 2030) ಮತ್ತು ‘ಅಮೃತ್ ಕಾಲ್ ವಿಷನ್ 2047’ ರ ಪ್ರಮುಖ ಕೇಂದ್ರಬಿಂದುವಾಗಿದೆ.

ಯೋಜನೆಯ ಪ್ರಮುಖ ಘಟಕಗಳು

  • ಅಂತರರಾಷ್ಟ್ರೀಯ ಕಂಟೇನರ್ ಸರಕು ವರ್ಗಾವಣೆ ಕೇಂದ್ರ (ICTT): ಪ್ರಾದೇಶಿಕ ಸರಕುಗಳನ್ನು ನಿರ್ವಹಿಸಲು ಗ್ಯಾಲಥಿಯಾ ಕೊಲ್ಲಿಯಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಇದು 14.2 ದಶಲಕ್ಷ TEU ಗಳ ನಿರ್ವಹಣಾ ಸಾಮರ್ಥ್ಯವನ್ನು ಗುರಿಯಾಗಿರಿಸಿಕೊಂಡಿದೆ.
  • ಗ್ರೀನ್ ಫೀಲ್ಡ್ (Greenfield) ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಇದು ಪ್ರವಾಸೋದ್ಯಮ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ಬಳಸಲಾಗುವ ದ್ವಿ-ಬಳಕೆಯ ಸೌಲಭ್ಯವಾಗಿದೆ.
  • ಸಮಗ್ರ ಟೌನ್‌ಶಿಪ್: 2050 ರ ವೇಳೆಗೆ ಅಂದಾಜು 6.5 ಲಕ್ಷ ಜನಸಂಖ್ಯೆಗೆ ವಸತಿ ಕಲ್ಪಿಸಲು ಯೋಜಿತ ಅಭಿವೃದ್ಧಿ ಮಾಡಲಾಗುತ್ತಿದೆ.
  • ವಿದ್ಯುತ್ ಸ್ಥಾವರ: ಇದು ಅನಿಲ ಮತ್ತು ಸೌರ-ಆಧಾರಿತ 450 MVA ಸಾಮರ್ಥ್ಯದ ವಿದ್ಯುತ್ ಸೌಲಭ್ಯವಾಗಿದೆ.

ಹವಳದ ದಿಬ್ಬಗಳು (Coral Reefs)

  • ಹವಳದ ದಿಬ್ಬಗಳು ಭೂಮಿಯ ಮೇಲಿನ ಪ್ರಮುಖ ಜೀವ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಾಗಿವೆ.
  • ರಚನೆ ಮತ್ತು ಸಹಜೀವನ ಸಂಬಂಧ: ಹವಳ ದಿಬ್ಬಗಳನ್ನು ನಿರ್ಮಿಸಲು ಪ್ರಧಾನವಾಗಿ ಕಾರಣವಾಗಿರುವ ‘ಕೋರಲ್ ಪಾಲಿಪ್ಸ್’ ಎಂಬ ಜೀವಿಗಳು, ತಮ್ಮ ಅಂಗಾಂಶಗಳಲ್ಲಿ ವಾಸಿಸುವ ‘ಜೂಕ್ಸಾಂಥೆಲ್ಲೆ’ ಎಂಬ ದ್ಯುತಿಸಂಶ್ಲೇಷಕ ಶೈವಲಗಳೊಂದಿಗೆ ಸಹಜೀವನ ಸಂಬಂಧವನ್ನು ಬೆಳೆಸಿದಾಗ ಇವು ರೂಪುಗೊಳ್ಳುತ್ತವೆ.
  • ರಚನೆ: ಮುಕ್ತವಾಗಿ ಈಜುವ ಹವಳದ ಲಾರ್ವಾಗಳು ದ್ವೀಪಗಳು ಅಥವಾ ಭೂಖಂಡಗಳ ಅಂಚುಗಳಲ್ಲಿರುವ ಮುಳುಗಿದ ಬಂಡೆಗಳು ಅಥವಾ ಇತರ ಕಠಿಣ ಮೇಲ್ಮೈಗಳಿಗೆ ಅಂಟಿಕೊಂಡಾಗ ಹವಳದ ದಿಬ್ಬಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ.
  • ಹವಳಗಳು ಶೈವಲಗಳಿಗೆ ರಕ್ಷಿತ ಪರಿಸರವನ್ನು ಮತ್ತು ದ್ಯುತಿಸಂಶ್ಲೇಷಣೆಗೆ ಬೇಕಾದ ಸಂಯುಕ್ತಗಳನ್ನು ಒದಗಿಸುತ್ತವೆ.
  • ಇದಕ್ಕೆ ಪ್ರತಿಯಾಗಿ, ಶೈವಲಗಳು ಕಾರ್ಬೋಹೈಡ್ರೇಟ್‌ಗಳನ್ನು ಉತ್ಪಾದಿಸುತ್ತವೆ, ಇದನ್ನು ಹವಳಗಳು ಆಹಾರವಾಗಿ ಬಳಸುತ್ತವೆ; ಅಲ್ಲದೆ ಪಾಚಿಗಳು ಆಮ್ಲಜನಕವನ್ನು ಒದಗಿಸುವುದರ ಜೊತೆಗೆ ಹವಳಗಳು ತಮ್ಮ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.

ರಚನೆಗೆ ಪೂರಕವಾದ ವಾತಾವರಣ: 

  • ಕನಿಷ್ಠ 20 ಡಿಗ್ರಿ ತಾಪಮಾನವಿರುವ ಬೆಚ್ಚಗಿನ ಉಷ್ಣವಲಯದ ಸಾಗರಗಳು ಇವುಗಳ ಬೆಳವಣಿಗೆಗೆ ಅತ್ಯಗತ್ಯವಾಗಿವೆ (ಉತ್ತರಕ್ಕೆ 30 ಡಿಗ್ರಿ ಮತ್ತು ದಕ್ಷಿಣಕ್ಕೆ 25 ಡಿಗ್ರಿ ಅಕ್ಷಾಂಶಗಳು).
  • ಸಾಗರದ ನೀರು ಸಂಪೂರ್ಣವಾಗಿ ಹೂಳು ಅಥವಾ ಕೆಸರು ಮುಕ್ತವಾಗಿರಬೇಕು.
  • ಸಾಗರದ ನೀರು ಸ್ಪಷ್ಟ ಮತ್ತು ಪಾರದರ್ಶಕವಾಗಿರುವುದು ಅವಶ್ಯಕವಾಗಿದೆ.
  • ಈ ದಿಬ್ಬಗಳ ಬೆಳವಣಿಗೆಗೆ ತುಲನಾತ್ಮಕವಾಗಿ ಕಡಿಮೆ ಲವಣಾಂಶವಿರುವ ಸಾಗರದ ಪ್ರದೇಶಗಳು ಸೂಕ್ತವಾಗಿವೆ.

ಹವಳದ ದಿಬ್ಬಗಳ ವಿಧಗಳು

  • ಅಂಚಿನ ಹವಳದ ದಿಬ್ಬಗಳು (Fringing reefs): ಇವು ಅತ್ಯಂತ ಸಾಮಾನ್ಯವಾದ ಹವಳದ ದಿಬ್ಬಗಳಾಗಿದ್ದು, ಕರಾವಳಿಯಿಂದ ನೇರವಾಗಿ ಸಮುದ್ರದ ಕಡೆಗೆ ಚಾಚಿಕೊಳ್ಳುವ ಮೂಲಕ ದ್ವೀಪಗಳ ಸುತ್ತಲೂ ಗಡಿಗಳನ್ನು ನಿರ್ಮಿಸುತ್ತವೆ.
  • ಪ್ರತಿಬಂಧಕ (ತಡೆಗೋಡೆ) ಹವಳದ ದಿಬ್ಬಗಳು (Barrier reefs): ಇವು ಕರಾವಳಿಯ ಅಂಚಿನಲ್ಲಿಯೇ ಬೆಳೆಯುತ್ತವೆ, ಆದರೆ ಆಳವಾದ ಮತ್ತು ತೆರೆದ ನೀರಿನ ಲಗೂನ್ ಸರೋವರಗಳು (Lagoons) ಇವುಗಳನ್ನು ಪಕ್ಕದ ಭೂಪ್ರದೇಶದಿಂದ ಪ್ರತ್ಯೇಕಿಸುತ್ತವೆ.
  • ಅಟಾಲ್ / ಉಂಗುರಾಕಾರದ ಹವಳದ ದಿಬ್ಬಗಳು (Atoll): ಜ್ವಾಲಾಮುಖಿ ದ್ವೀಪದ ಸುತ್ತಲೂ ರೂಪುಗೊಂಡ ಅಂಚಿನ ದಿಬ್ಬವು ಸಮುದ್ರಮಟ್ಟಕ್ಕಿಂತ ಸಂಪೂರ್ಣವಾಗಿ ಕೆಳಗೆ ಮುಳುಗಿದಾಗ ಮತ್ತು ಹವಳಗಳು ಮೇಲ್ಮುಖವಾಗಿ ಬೆಳೆಯುತ್ತಲೇ ಇದ್ದಾಗ ‘ಉಂಗುರಾಕಾರದ ಹವಳದ ದಿಬ್ಬ’ ರೂಪುಗೊಳ್ಳುತ್ತದೆ. ಇವು ಸಾಮಾನ್ಯವಾಗಿ ವೃತ್ತಾಕಾರ ಅಥವಾ ಅಂಡಾಕಾರದಲ್ಲಿರುತ್ತವೆ ಮತ್ತು ಮಧ್ಯದಲ್ಲಿ ಲಗೂನ್‌ಗಳನ್ನು ಹೊಂದಿರುತ್ತವೆ.

ಭಾರತದಲ್ಲಿ ಹವಳದ ದಿಬ್ಬಗಳ ಹಂಚಿಕೆ

  • ಗುಜರಾತ್‌ನ ಕಚ್ ಕೊಲ್ಲಿ.
  • ಭಾರತದ ಪಶ್ಚಿಮ ಕರಾವಳಿ ಪ್ರದೇಶ.
  • ಲಕ್ಷದ್ವೀಪದ ದ್ವೀಪ ಸಮೂಹ.
  • ತಮಿಳುನಾಡಿನ ಮನ್ನಾರ್ ಕೊಲ್ಲಿ.
  • ಪಾಕ್ ಜಲಸಂಧಿಯ (Palk Bay) ಪ್ರದೇಶ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ.

ಪ್ರಮುಖ ಅಪಾಯಗಳು: 

  • ಅವೈಜ್ಞಾನಿಕ ಮೀನುಗಾರಿಕೆ ಅಭ್ಯಾಸಗಳು ಮತ್ತು ಮಿತಿಮೀರಿದ ಮೀನುಗಾರಿಕೆ ಚಟುವಟಿಕೆಯು ಹವಳಗಳಿಗೆ ಮಾರಕವಾಗಿದೆ.
  • ಅಜಾಗರೂಕ ಪ್ರವಾಸೋದ್ಯಮ ಮತ್ತು ಮಾಲಿನ್ಯವು ದಿಬ್ಬಗಳನ್ನು ನಾಶಪಡಿಸುತ್ತವೆ.
  • ಹೂಳು ತುಂಬುವಿಕೆ, ಹವಳದ ಗಣಿಗಾರಿಕೆ ಮತ್ತು ಹವಾಮಾನ ಬದಲಾವಣೆಯು ಇವುಗಳಿಗೆ ಇರುವ ಪ್ರಮುಖ ಅಪಾಯಗಳಾಗಿವೆ.

ಹವಳದ ವಿವರ್ಣವಾಗುವಿಕೆ / ಬಿಳಿಚುವಿಕೆ (Coral Bleaching)

  • ತಾಪಮಾನ, ಬೆಳಕು ಅಥವಾ ಪೋಷಕಾಂಶಗಳಂತಹ ಪರಿಸ್ಥಿತಿಗಳಲ್ಲಿ ಉಂಟಾಗುವ ಬದಲಾವಣೆಗಳಿಂದ ಹವಳಗಳು ಒತ್ತಡಕ್ಕೆ ಒಳಗಾದಾಗ, ಅವು ತಮ್ಮ ಅಂಗಾಂಶಗಳಲ್ಲಿ ವಾಸಿಸುವ ಸಹಜೀವನದ ಶೈcವಲ ‘ಜೂಕ್ಸಾಂಥೆಲ್ಲೆ’ಯನ್ನು ಹೊರಹಾಕುತ್ತವೆ, ಇದರಿಂದಾಗಿ ಅವು ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಈ ವಿದ್ಯಮಾನವನ್ನು ಹವಳದ ವಿವರ್ಣವಾಗುವಿಕೆ ಅಥವಾ ಬಿಳಿಚುವಿಕೆ (Bleaching) ಎಂದು ಕರೆಯಲಾಗುತ್ತದೆ.

ಹವಳದ ವಿವರ್ಣವಾಗುವಿಕೆ / ಬಿಳಿಚುವಿಕೆಗೆ ಕಾರಣಗಳು

  • ಸಮುದ್ರದ ತಾಪಮಾನದಲ್ಲಿನ ಏರಿಕೆಯು ಬಿಳಿಚುವಿಕೆಗೆ ಪ್ರಮುಖ ಕಾರಣವಾಗಿದೆ.
  • ಸಾಗರದ ಆಮ್ಲೀಕರಣವು ಹವಳಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
  • ಸೌರ ವಿಕಿರಣ ಮತ್ತು ನೇರಳಾತೀತ ವಿಕಿರಣಗಳು ಹವಳಗಳಿಗೆ ಹಾನಿಯನ್ನುಂಟುಮಾಡುತ್ತವೆ.
  • ಸಾಂಕ್ರಾಮಿಕ ರೋಗಗಳು ಹವಳಗಳ ಬಣ್ಣ ಕಳೆದುಕೊಳ್ಳುವಿಕೆಗೆ ಕಾರಣವಾಗುತ್ತವೆ.
  • ರಾಸಾಯನಿಕ ಮಾಲಿನ್ಯದಿಂದ ಹವಳಗಳು ತ್ವರಿತವಾಗಿ ನಾಶವಾಗುತ್ತವೆ.
  • ಹೆಚ್ಚಿದ ಹೂಳು ತುಂಬುವಿಕೆಯು ಹವಳಗಳಿಗೆ ದೊಡ್ಡ ಅಪಾಯಕಾರಿಯಾಗಿದೆ.
  • ನೀರು ಕದಡುವುದರಿಂದ (Turbidity) ಬೆಳಕಿನ ಲಭ್ಯತೆ ಕಡಿಮೆಯಾಗುವುದು ಬಿಳಿಚುವಿಕೆಗೆ ಕಾರಣವಾಗುತ್ತದೆ.
  • ವಿವಿಧ ರೀತಿಯ ಮಾನವ ಪ್ರೇರಿತ ಚಟುವಟಿಕೆಗಳು ಹವಳಗಳ ನಾಶಕ್ಕೆ ಕಾರಣವಾಗುತ್ತವೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts