NPCI ನಿಂದ ‘ಡ್ರೂನಿಕ್ಸ್’ ಪ್ಲಾಟ್‌ಫಾರ್ಮ್‌ ಬಿಡುಗಡೆ | ‘ಶಿ-ಬಾಕ್ಸ್ 2.0’ ಪೋರ್ಟಲ್ (SHe-Box 2.0 Portal) | ಡಾರ್ಕ್ ವೆಬ್ (Dark Web) | ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆ (PM-VBRY) | QS ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕ 2027 | ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 | ಖಾನ್ ಕ್ವೆಸ್ಟ್ (KHAAN QUEST) 2026 ಸಮರಾಭ್ಯಾಸ

NPCI ನಿಂದ ‘ಡ್ರೂನಿಕ್ಸ್’ ಪ್ಲಾಟ್‌ಫಾರ್ಮ್‌ ಬಿಡುಗಡೆ

ಆರ್ಥಿಕತೆ

ಇದೀಗ ಸುದ್ದಿಯಲ್ಲಿ: 

  • ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (NPCI) ಇತ್ತೀಚೆಗೆ ‘ಡ್ರೂನಿಕ್ಸ್’ (Drunix) ಎಂಬ ನೂತನ ಪ್ಲಾಟ್‌ಫಾರ್ಮ್‌ ಅನ್ನು ಬಿಡುಗಡೆಗೊಳಿಸಿದೆ.

ಡ್ರೂನಿಕ್ಸ್ ಪ್ಲಾಟ್‌ಫಾರ್ಮ್‌ ಬಗ್ಗೆ: 

  • ಇದು ಒಂದು ಮುಕ್ತ-ಮೂಲ ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್ (Open-Source Blockchain Platform) ಆಗಿದ್ದು, ಕಾರ್ಪೊರೇಟ್ ಸಂಸ್ಥೆಗಳಿಗೆ ತಮ್ಮದೇ ಆದ ಟೋಕನೈಸೇಶನ್ ಪ್ಲಾಟ್‌ಫಾರ್ಮ್‌ಗಳನ್ನು, ಡಿಜಿಟಲ್ ಆಸ್ತಿ ಪರಿಸರ ವ್ಯವಸ್ಥೆಗಳನ್ನು (Digital Asset Ecosystems) ಮತ್ತು ಬಹು-ಸಂಸ್ಥೆಗಳ ನೆಟ್ ವರ್ಕ್ ಗಳನ್ನು ನಿರ್ಮಿಸಲು ಹಾಗೂ ವಿಸ್ತರಿಸಲು ನೆರವಾಗುತ್ತದೆ.

ಮಹತ್ವ: 

  • ದತ್ತಾಂಶವನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು ಹಾಗೂ ಡಿಜಿಟಲ್ ಆಸ್ತಿಗಳನ್ನು ಸಮರ್ಪಕವಾಗಿ ಪತ್ತೆಹಚ್ಚಲು ಬ್ಯಾಂಕುಗಳು ಮತ್ತು ವ್ಯವಹಾರ ಸಂಸ್ಥೆಗಳಿಗೆ ಇದು ಸುಭದ್ರವಾದ ವ್ಯವಸ್ಥೆಯನ್ನು ಒದಗಿಸುತ್ತದೆ.

  • ಬ್ಲಾಕ್‌ಚೈನ್ ತಂತ್ರಜ್ಞಾನದ ಬಳಕೆ: ಈ ತಂತ್ರಜ್ಞಾನದ ಬಳಕೆಯಿಂದ ದತ್ತಾಂಶವು ಅತ್ಯಂತ ಸುರಕ್ಷಿತವಾಗಿರುತ್ತದೆ, ಪಾರದರ್ಶಕವಾಗಿ ಹಂಚಿಕೆಯಾಗುತ್ತದೆ ಮತ್ತು ಯಾವುದೇ ವಂಚನೆಗಳ ಮೂಲಕ ದತ್ತಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲ.

  • ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ: ಜಾಗತಿಕ ಮಟ್ಟದಲ್ಲಿ ಬಳಕೆಯಲ್ಲಿರುವ ‘ಹೈಪರ್‌ಲೆಡ್ಜರ್ ಫ್ಯಾಬ್ರಿಕ್’ (Hyperledger Fabric) ಎಂಬ ತಂತ್ರಾಂಶವನ್ನು ಭಾರತೀಯ ಆಡಳಿತಾತ್ಮಕ ಅಗತ್ಯಗಳಿಗೆ ತಕ್ಕಂತೆ, ಇನ್ನಷ್ಟು ವೇಗವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಭಾರತವು ಮಾರ್ಪಡಿಸಿದೆ.

  • ಇದು ಮುಕ್ತ-ಮೂಲ (Open-Source) ಆಗಿದೆ: ಇದರ ಸೋರ್ಸ್ ಕೋಡ್ (Source Code) ಯಾರಿಗಾದರೂ ವೀಕ್ಷಿಸಲು ಮತ್ತು ಬಳಸಲು ಉಚಿತವಾಗಿ ಲಭ್ಯವಿದ್ದು, ಇದರಿಂದ ಕಂಪನಿಗಳು ಒಟ್ಟಾಗಿ ಸುಲಭವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಪ್ರಮುಖ ಪರಿಕಲ್ಪನೆಗಳು

  • ಟೋಕನೈಸೇಶನ್ (Tokenization): ಇದು ಆಸ್ತಿಗಳು ಅಥವಾ ಮಾಲೀಕತ್ವದ ಹಕ್ಕುಗಳನ್ನು ಬ್ಲಾಕ್‌ಚೈನ್ ವ್ಯವಸ್ಥೆಯಲ್ಲಿ ಡಿಜಿಟಲ್ ಟೋಕನ್‌ಗಳಾಗಿ ಪರಿವರ್ತಿಸುವ ಒಂದು ಪ್ರಕ್ರಿಯೆಯಾಗಿದೆ.

  • ಈ ಡಿಜಿಟಲ್ ಆಸ್ತಿಗಳು ಆರ್ಥಿಕ ಭದ್ರತೆಗಳು, ರಿಯಲ್ ಎಸ್ಟೇಟ್, ಸರಕುಗಳು, ಡಿಜಿಟಲ್ ಕರೆನ್ಸಿಗಳು ಮತ್ತು ಗುರುತಿನ ರುಜುವಾತುಗಳನ್ನು (Identity Credentials) ಒಳಗೊಂಡಿರುತ್ತವೆ.

  • ಕ್ರಿಪ್ಟೋಕರೆನ್ಸಿ (Cryptocurrency): ಇದು ಆರ್ಥಿಕ ವಹಿವಾಟುಗಳಿಗಾಗಿ ಬಳಸಲಾಗುವ ಒಂದು ರೀತಿಯ ವರ್ಚುವಲ್ ಕರೆನ್ಸಿ ಆಗಿದ್ದು, ವಿವಿಧ ವಹಿವಾಟುಗಳನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

  • ಬ್ಲಾಕ್‌ಚೈನ್ (Blockchain): ಬ್ಲಾಕ್‌ಚೈನ್ ಎಂಬುದು ಮೌಲ್ಯಯುತವಾದ ಪ್ರತಿಯೊಂದು ಅಂಶವನ್ನೂ ದಾಖಲಿಸಲು ಪ್ರೋಗ್ರಾಂ ಮಾಡಬಹುದಾದ, ಎಂದಿಗೂ ತಿರುಚಲಾಗದ ಡಿಜಿಟಲ್ ವಹಿವಾಟುಗಳ ಲೆಕ್ಕದ ಪುಸ್ತಕವಾಗಿದೆ. (Immutable Digital Ledger). ಇದರಲ್ಲಿರುವ ಪ್ರತಿಯೊಂದು ದಾಖಲೆಗಳ ಪಟ್ಟಿಯನ್ನು ‘ಬ್ಲಾಕ್’ (Block) ಎಂದು ಕರೆಯಲಾಗುತ್ತದೆ.

‘ಶಿ-ಬಾಕ್ಸ್ 2.0’ ಪೋರ್ಟಲ್ (SHe-Box 2.0 Portal)

ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ: 

  • ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾನೂನುಗಳ ಅನುಷ್ಠಾನವನ್ನು ಬಲಪಡಿಸುವಲ್ಲಿ ಮತ್ತು ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಖಚಿತಪಡಿಸುವಲ್ಲಿ ‘ಮಿಷನ್ ಶಕ್ತಿ’ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶಿ-ಬಾಕ್ಸ್ 2.0 ಪೋರ್ಟಲ್’ನ (SHe-Box 2.0 Portal) ಪಾತ್ರವನ್ನು ಸರ್ಕಾರವು ಪ್ರಸ್ತುತ ಒತ್ತಿಹೇಳಿದೆ.

ಶಿ-ಬಾಕ್ಸ್ (SHe-Box) ಪೋರ್ಟಲ್’ನ ಬಗ್ಗೆ

  • ಇದು ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 (Sexual Harassment of Women at Workplace (Prevention, Prohibition and Redressal) Act, 2013) ರ ನಿಬಂಧನೆಗಳನ್ನು ಜಾರಿಗೆ ತರಲು ಅಭಿವೃದ್ಧಿಪಡಿಸಲಾದ ಒಂದು ಪೋರ್ಟಲ್ ಆಗಿದೆ.
  • ಈ ಪೋರ್ಟಲ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು (MWCD) ಪ್ರಾರಂಭಿಸಿದೆ.

ಶಿ-ಬಾಕ್ಸ್ 2.0 (SHe-Box 2.0) ಬಗ್ಗೆ 

  • ಈ ನವೀಕೃತ ಆವೃತ್ತಿಯನ್ನು 2024 ರಲ್ಲಿ ಪ್ರಾರಂಭಿಸಲಾಗಿದೆ.
  • ಉದ್ದೇಶ: ಇದು ಮಹಿಳೆಯರು ಯಾವುದೇ ಕಳಂಕ ಅಥವಾ ಸೇಡಿನ ಭಯವಿಲ್ಲದೆ ಲೈಂಗಿಕ ಕಿರುಕುಳದ ಘಟನೆಗಳನ್ನು ವರದಿ ಮಾಡಲು ಅನುವು ಮಾಡಿಕೊಡುವ ಸುರಕ್ಷಿತ, ಗೌಪ್ಯ ಮತ್ತು ಬಳಕೆದಾರ-ಸ್ನೇಹಿ  ವ್ಯವಸ್ಥೆಯನ್ನು ಒದಗಿಸುತ್ತದೆ.
  • ಪ್ರಾಮುಖ್ಯತೆ: ಸಂಘಟಿತ, ಅಸಂಘಟಿತ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಾದ್ಯಂತ ಕೆಲಸ ಮಾಡುವ ಎಲ್ಲಾ ಮಹಿಳೆಯರಿಗೆ ದೂರುಗಳನ್ನು ದಾಖಲಿಸಲು ಮತ್ತು ಆ ದೂರುಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಇದು ಏಕ-ಗವಾಕ್ಷಿ ವ್ಯವಸ್ಥೆಯನ್ನು ಒದಗಿಸುತ್ತದೆ.
  • ಈ ಪೋರ್ಟಲ್ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಒಳಗೊಂಡಂತೆ ಒಟ್ಟು 22 ಭಾಷೆಗಳಲ್ಲಿ ಲಭ್ಯವಿದೆ.

ಮಿಷನ್ ಶಕ್ತಿ (Mission Shakti) ಬಗ್ಗೆ: 

  • ಇದು ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಮೀಸಲಾಗಿರುವ ಒಂದು ಸಮಗ್ರ ಯೋಜನೆಯಾಗಿದೆ.
  • ಈ ಯೋಜನೆಯನ್ನು ಎರಡು ಉಪ-ಯೋಜನೆಗಳಾಗಿ ವಿಂಗಡಿಸಲಾಗಿದೆ:
  1. ಸಂಬಲ್ (Sambal) (ಸುರಕ್ಷತೆ ಮತ್ತು ಭದ್ರತೆ):
  • ಒನ್ ಸ್ಟಾಪ್ ಕೇಂದ್ರಗಳು (One Stop Centres – OSC): ಇದು ಹಿಂಸಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರಿಗೆ ಸಂಯೋಜಿತ ಮತ್ತು ಸಮಗ್ರ ಬೆಂಬಲವನ್ನು ಒದಗಿಸುತ್ತದೆ.
  • ಮಹಿಳಾ ಸಹಾಯವಾಣಿ – 181: ಇದು ಮಹಿಳೆಯರಿಗೆ ದಿನದ 24 ಗಂಟೆಗಳ ಕಾಲ ತುರ್ತು ನೆರವನ್ನು ಒದಗಿಸುವ ವ್ಯವಸ್ಥೆಯಾಗಿದೆ.
  • ಬೇಟಿ ಬಚಾವೋ ಬೇಟಿ ಪಡಾವೋ (BBBP): ಲಿಂಗ-ಆಧಾರಿತ ಭ್ರೂಣ ಹತ್ಯೆಯನ್ನು ತಡೆಯುವುದು ಮತ್ತು ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
  • ನಾರಿ ಅದಾಲತ್ : ಇವು ಸಮುದಾಯ ಮಟ್ಟದಲ್ಲಿ ಮಹಿಳಾ ಸಮಸ್ಯೆಗಳನ್ನು ಬಗೆಹರಿಸುವ ಪರ್ಯಾಯ ವಿವಾದ ಪರಿಹಾರ ವೇದಿಕೆಗಳಾಗಿವೆ.
  1. ಸಾಮರ್ಥ್ಯ (Samarthya) (ಸಬಲೀಕರಣ):
  • ಶಕ್ತಿ ಸದನ್: ಹಿಂದಿನ ‘ಸ್ವಾಧಾರ್ ಗೃಹ’ ಮತ್ತು ‘ಉಜ್ವಲ’ ಯೋಜನೆಗಳನ್ನು ವಿಲೀನಗೊಳಸಿ, ಮಹಿಳೆಯರಿಗಾಗಿ ಈ ಪುನರ್ವಸತಿ ಗೃಹಗಳನ್ನು ಸ್ಥಾಪಿಸಲಾಗಿದೆ.
  • ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY): ಇದು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆರ್ಥಿಕ ನೆರವು ನೀಡುವ ಮಾತೃತ್ವ ಭತ್ಯೆ ಯೋಜನೆಯಾಗಿದೆ.
  • ಮಹಿಳಾ ಸಬಲೀಕರಣ ಕೇಂದ್ರ (HEW): ಇದು ಸರ್ಕಾರಿ ಸೇವೆಗಳನ್ನು ಮಹಿಳೆಯರಿಗೆ ಸುಲಭವಾಗಿ ತಲುಪಿಸಲು ಅನುಕೂಲ ಮಾಡಿಕೊಡುತ್ತದೆ.

ಡಾರ್ಕ್ ವೆಬ್ (Dark Web)

ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿ:

  • ಕೇಂದ್ರ ಸರ್ಕಾರವು, ಸಂದೇಶ ಕಳುಹಿಸುವ ವೇದಿಕೆಯಾದ ಟೆಲಿಗ್ರಾಮ್ “ಹೊಸ ಡಾರ್ಕ್ ವೆಬ್” ಆಗಿ ಮಾರ್ಪಟ್ಟಿದೆ ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಡಾರ್ಕ್ ವೆಬ್ (Dark Web) ಬಗ್ಗೆ

  • ಡಾರ್ಕ್ ವೆಬ್ ಎಂಬುದು ಅಂತರ್ಜಾಲದ (ಇಂಟರ್ನೆಟ್) ಒಂದು ಗುಪ್ತ ಭಾಗವಾಗಿದ್ದು, ಇದನ್ನು ಗೂಗಲ್‌ನಂತಹ ಸಾಮಾನ್ಯ ಸರ್ಚ್ ಎಂಜಿನ್‌ಗಳನ್ನು ಬಳಸಿಕೊಂಡು ಹುಡುಕಲು ಸಾಧ್ಯವಿಲ್ಲ.
  • ಈ ಗುಪ್ತ ಜಾಲವನ್ನು ಪ್ರವೇಶಿಸಲು ಟಾರ್ ಬ್ರೌಸರ್‌ನಂತಹ (Tor browser) ವಿಶೇಷ ಸಾಫ್ಟ್‌ವೇರ್‌ಗಳ ಅವಶ್ಯಕತೆಯಿರುತ್ತದೆ.
  • ಇದು ಸೈಬರ್ ಅಪರಾಧ ಚಟುವಟಿಕೆಗಳನ್ನು ಮರೆಮಾಚಲು ಪ್ರಸಿದ್ಧವಾಗಿದ್ದರೂ ಸಹ, ಇದನ್ನು ಗೌಪ್ಯತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಸಹ ಬಳಸಲಾಗುತ್ತದೆ.

ಡಾರ್ಕ್ ವೆಬ್ ಅನ್ನು ಅರ್ಥಮಾಡಿಕೊಳ್ಳಲು, ಇಂಟರ್ನೆಟ್ ಅನ್ನು ಮುಖ್ಯವಾಗಿ ಮೂರು ವಿಭಿನ್ನ ಭಾಗಗಳಾಗಿ ವಿಂಗಡಿಸಬಹುದು:

  • ಸರ್ಫೇಸ್ ವೆಬ್ (The Surface Web): ಇದು ನಾವು ಪ್ರತಿದಿನ ಬಳಸುವ ಇಂಟರ್ನೆಟ್ ಆಗಿದ್ದು, ಇದರಲ್ಲಿ ಸುದ್ದಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ಮಳಿಗೆಗಳಂತಹ ವೆಬ್‌ಸೈಟ್‌ಗಳನ್ನು ನೀವು ಸುಲಭವಾಗಿ ಹುಡುಕಬಹುದಾಗಿದೆ.
  • ಡೀಪ್ ವೆಬ್ (The Deep Web): ಇದು ಇಂಟರ್ನೆಟ್ ನ ಅತಿ ದೊಡ್ಡ ಭಾಗವಾಗಿದ್ದು, ಇದು ಗುಪ್ತವಾಗಿದ್ದರೂ ಹಾನಿಕಾರಕವಲ್ಲ. ಇದು ಖಾಸಗಿ ಡೇಟಾಬೇಸ್‌ಗಳು, ಆನ್‌ಲೈನ್ ಬ್ಯಾಂಕ್ ಖಾತೆಗಳು ಮತ್ತು ಪಾಸ್‌ವರ್ಡ್-ರಕ್ಷಿತ ಇಮೇಲ್ ಇನ್‌ಬಾಕ್ಸ್‌ಗಳನ್ನು ಒಳಗೊಂಡಿರುತ್ತದೆ.
  • ಡಾರ್ಕ್ ವೆಬ್ (The Dark Web): ಇದು ಡೀಪ್ ವೆಬ್‌ನ ಒಂದು ಸಣ್ಣ ಮತ್ತು ನಿರ್ದಿಷ್ಟ ವಿಭಾಗವಾಗಿದ್ದು, ಇದನ್ನು ಅತ್ಯುನ್ನತ ಗೂಢಲಿಪೀಕರಣದ (ಎನ್‌ಕ್ರಿಪ್ಶನ್ ) ಮೂಲಕ ಉದ್ದೇಶಪೂರ್ವಕವಾಗಿ ಮರೆಮಾಡಲಾಗಿರುತ್ತದೆ.

ಡಾರ್ಕ್ ವೆಬ್‌ನ ಪ್ರಮುಖ ಲಕ್ಷಣಗಳು: 

  • ಅನಾಮಧೇಯತೆ: ಇದರಲ್ಲಿ ಬಳಕೆದಾರರು ಮತ್ತು ವೆಬ್‌ಸೈಟ್ ಹೋಸ್ಟ್‌ಗಳನ್ನು ಮರೆಮಾಡಲಾಗಿರುತ್ತದೆ ಮತ್ತು ಜನರ ಗುರುತು ಅಥವಾ ಸ್ಥಳಗಳನ್ನು ಪತ್ತೆಹಚ್ಚುವುದನ್ನು ತಡೆಯಲು ದತ್ತಾಂಶವನ್ನು ಅನೇಕ ಎನ್‌ಕ್ರಿಪ್ಟೆಡ್ ಸರ್ವರ್‌ಗಳ ಮೂಲಕ ರವಾನಿಸಲಾಗುತ್ತದೆ.
  • ವಿಶೇಷ ವೆಬ್‌ಸೈಟ್‌ಗಳು: ಡಾರ್ಕ್ ವೆಬ್ ಸೈಟ್‌ಗಳು ಸಾಮಾನ್ಯವಾಗಿ .com ಅಥವಾ .org ನೊಂದಿಗೆ ಕೊನೆಗೊಳ್ಳುವ ಬದಲು, .onion ನಂತಹ ಡೊಮೇನ್‌ಗಳನ್ನು ಬಳಸುತ್ತವೆ.
  • ಕಾನೂನುಬದ್ಧ ಮತ್ತು ಕಾನೂನುಬಾಹಿರ ಬಳಕೆಗಳು: ಇದು ಅಕ್ರಮ ಸರಕುಗಳು ಅಥವಾ ಕದ್ದ ದತ್ತಾಂಶಗಳಂತಹ ಕಾನೂನುಬಾಹಿರ ಮಾರುಕಟ್ಟೆಗಳೊಂದಿಗೆ ಹೆಚ್ಚು ಸಂಬಂಧ ಹೊಂದಿದ್ದರೂ ಸಹ, ಪತ್ರಕರ್ತರು, ವಿಸ್ಲ್‌ಬ್ಲೋವರ್‌ಗಳು (ಶಿಳ್ಳೆದಾರರು) ಮತ್ತು ದಬ್ಬಾಳಿಕೆಯ ಆಡಳಿತಗಳಲ್ಲಿ ಕಣ್ಗಾವಲಿನಿಂದ ಗೌಪ್ಯತೆಯನ್ನು ಬಯಸುವ ವ್ಯಕ್ತಿಗಳು ಇದನ್ನು ಕಾನೂನುಬದ್ಧವಾಗಿ ಪ್ರವೇಶಿಸುತ್ತಾರೆ.

ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆ (PM-VBRY)

ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ:

  • ಪ್ರಧಾನ ಮಂತ್ರಿಯವರು ‘ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆ‘ಯ (PM-VBRY) ಅಡಿಯಲ್ಲಿ ₹2,400 ಕೋಟಿ ಮೌಲ್ಯದ ಪ್ರೋತ್ಸಾಹಕಗಳನ್ನು ವಿತರಿಸಲಿದ್ದಾರೆ.

PM-VBRY ಯೋಜನೆಯ ಬಗ್ಗೆ  ಕುರಿತು: 

  • ಇದು ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಇದನ್ನು 2025 ರಲ್ಲಿ ಪ್ರಾರಂಭಿಸಲಾಗಿದೆ.
  • ಅನುಷ್ಠಾನ: ಈ ಯೋಜನೆಯನ್ನು ‘ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ’ವು ಜಾರಿಗೊಳಿಸುತ್ತದೆ.
  • ಉದ್ದೇಶ: ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ಎಲ್ಲಾ ವಲಯಗಳಾದ್ಯಂತ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವುದು, ಉದ್ಯೋಗಾವಕಾಶವನ್ನು ಹೆಚ್ಚಿಸುವುದು ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಪ್ರಮುಖ ಲಕ್ಷಣಗಳು:

  • ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ನೌಕರರು ₹15,000 ವರೆಗಿನ ಪ್ರೋತ್ಸಾಹಕಗಳಿಗೆ ಅರ್ಹರಾಗಿರುತ್ತಾರೆ.
  • ಉದ್ಯೋಗದಾತರ ಕಡೆಯಿಂದ, ಆರು ತಿಂಗಳ ಸುಸ್ಥಿರ ಉದ್ಯೋಗದ ನಂತರ ಪ್ರತಿಯೊಬ್ಬ ಹೊಸ ನೌಕರನ ನೇಮಕಾತಿಗೆ ಸರ್ಕಾರವು ₹3,000 ವರೆಗಿನ ಬಹುಮಾನವನ್ನು ಒದಗಿಸುತ್ತದೆ.
  • ಈ ಉಪಕ್ರಮವು ಔಪಚಾರಿಕ ಕಾರ್ಯಪಡೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ ಮತ್ತು ನಿರಂತರ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತದೆ.

QS ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕ 2027

ಸೂಚ್ಯಂಕಗಳು ಮತ್ತು ವರದಿಗಳು

ಇದೀಗ ಸುದ್ದಿಯಲ್ಲಿ:

  • ಇತ್ತೀಚೆಗೆ ಜಗತ್ತಿನಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅತ್ಯುನ್ನತ ಶ್ರೇಯಾಂಕವನ್ನು ನೀಡುವ QS ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕ 2027 ಬಿಡುಗಡೆಯಾಗಿದೆ.

ಪ್ರಮುಖ ಅವಲೋಕನಗಳು: 

  • ಈ ಶ್ರೇಯಾಂಕ ವ್ಯವಸ್ಥೆಯು ಜಗತ್ತಿನ 106 ದೇಶಗಳು ಮತ್ತು ಪ್ರಾಂತ್ಯಗಳ 1,500 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿದೆ
  • ಈ ಪ್ರತಿಷ್ಠಿತ ಪಟ್ಟಿಯಲ್ಲಿ 52 ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿದ್ದು, ಇದರೊಂದಿಗೆ ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿದ 5ನೇ ಅತಿದೊಡ್ಡ ಉನ್ನತ ಶಿಕ್ಷಣ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
  • ಜಾಗತಿಕ ಮಟ್ಟದ ಅಗ್ರ 5 ಉನ್ನತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಅಮೆರಿಕ (US) ಮತ್ತು ಬ್ರಿಟನ್ (UK) ದೇಶಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿವೆ.

ಜಾಗತಿಕ ಮಟ್ಟದ ಅಗ್ರ 5 ವಿಶ್ವವಿದ್ಯಾಲಯಗಳು:

  1. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಅಮೆರಿಕ (US)
  2. ಇಂಪೀರಿಯಲ್ ಕಾಲೇಜ್ ಲಂಡನ್, ಬ್ರಿಟನ್ (UK) (ಜಂಟಿ ಸ್ಥಾನ – Tied)
  3. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಅಮೆರಿಕ (US) (ಜಂಟಿ ಸ್ಥಾನ – Tied)
  4. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಬ್ರಿಟನ್ (UK)
  5. ಹಾರ್ವರ್ಡ್ ವಿಶ್ವವಿದ್ಯಾಲಯ, ಅಮೆರಿಕ (US)

ಅಗ್ರ 5 ಭಾರತೀಯ ಸಂಸ್ಥೆಗಳು: QS ಜಾಗತಿಕ ಶ್ರೇಯಾಂಕ 2027

ಭಾರತೀಯ ಶ್ರೇಯಾಂಕ  ಶಿಕ್ಷಣ ಸಂಸ್ಥೆ ಜಾಗತಿಕ ಶ್ರೇಯಾಂಕ 
1 IIT ದೆಹಲಿ  118
2 IIT ಬಾಂಬೆ  134
3 IIT ಮದ್ರಾಸ್  170
4 IIT ಖರಗ್‌ಪುರ  205
5 IIT ಕಾನ್ಪುರ  221 (ಜಂಟಿ ಸ್ಥಾನ – Tied)
6 IISc ಬೆಂಗಳೂರು  221 (ಜಂಟಿ ಸ್ಥಾನ – Tied)

QS ಶ್ರೇಯಾಂಕದ ಕುರಿತು: 

  • QS (Quacquarelli Symonds) ಸಂಸ್ಥೆಯು 1990 ರಲ್ಲಿ ಅಧಿಕೃತವಾಗಿ ಸ್ಥಾಪನೆಯಾಯಿತು.
  • ಈ ಜಾಗತಿಕ ಸಂಸ್ಥೆಯು ಬ್ರಿಟನ್‌ನ ಲಂಡನ್ ನಗರದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ.
  • ಇದು ಅಂತರರಾಷ್ಟ್ರೀಯ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವ ದತ್ತಾಂಶ, ಉನ್ನತ ಸಂಶೋಧನೆ ಮತ್ತು ಸಲಹಾ ಸೇವೆಗಳನ್ನು ಒದಗಿಸುವಲ್ಲಿ ಜಾಗತಿಕ ಪರಿಣತಿಯನ್ನು ಪಡೆದಿದೆ.
  • 2004 ರಲ್ಲಿ ಸ್ಥಾಪಿತವಾದ QS ಶ್ರೇಯಾಂಕವು ಜಾಗತಿಕ ಪ್ರಮುಖ ವಿಶ್ವವಿದ್ಯಾಲಯಗಳ ಶ್ರೇಯಾಂಕಗಳಲ್ಲಿ ಅತ್ಯಂತ ಪ್ರತಿಷ್ಠಿತವಾಗಿದ್ದು, ಶಿಕ್ಷಣ ಸಂಸ್ಥೆಗಳ ನಿಷ್ಪಕ್ಷಪಾತ ಮೌಲ್ಯಮಾಪನವನ್ನು ಒದಗಿಸುತ್ತದೆ.
  • ಈ ಸಂಸ್ಥೆಯು ಜಾಗತಿಕ ಶಿಕ್ಷಣ ಸಂಸ್ಥೆಗಳನ್ನು ಒಟ್ಟು 10 ಪ್ರಮುಖ ಸೂಚಕಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಅವುಗಳಲ್ಲಿ ಶೈಕ್ಷಣಿಕ ಪ್ರತಿಷ್ಠೆ, ಉದ್ಯೋಗದ ಫಲಿತಾಂಶಗಳು, ಅಂತರರಾಷ್ಟ್ರೀಯ ಅಧ್ಯಾಪಕರ ಅನುಪಾತ, ಅಂತರರಾಷ್ಟ್ರೀಯ ಸಂಶೋಧನಾ ಜಾಲ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೈವಿಧ್ಯತೆ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಅನುಪಾತ ಹಾಗೂ ಸುಸ್ಥಿರತೆ ಇತ್ಯಾದಿಗಳನ್ನು ಒಳಗೊಂಡಿವೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0

ಸರ್ಕಾರಿ ಯೋಜನೆಗಳು

ಇದೀಗ ಸುದ್ದಿಯಲ್ಲಿ:

  • ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 (PMAY-U 2.0) ಅಡಿಯಲ್ಲಿ ಅರ್ಹ ನಗರ ಬಡ ಕುಟುಂಬಗಳಿಗೆ 2.13 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 ಬಗ್ಗೆ

  • ಇದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಪ್ರಮುಖ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ₹2.50 ಲಕ್ಷ ಕೋಟಿಗಳವರೆಗೆ ಕೇಂದ್ರ ಸಹಾಯವನ್ನು ಒದಗಿಸಲಾಗುತ್ತದೆ.
  • 25 ಜೂನ್ 2015 ರಂದು ಪ್ರಾರಂಭಿಸಲಾದ ಮೂಲ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರದ (PMAY-U) ನವೀಕರಿಸಿದ ಮತ್ತು ವಿಸ್ತರಿತ ಆವೃತ್ತಿಯಾಗಿ ಈ 2.0 ಯೋಜನೆಯನ್ನು ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭಿಸಲಾಯಿತು.
  • ದೇಶದ ಯಾವುದೇ ಭಾಗದಲ್ಲಿ ತಮ್ಮದೇ ಆದ ಶಾಶ್ವತವಾದ  ಮನೆಯನ್ನು ಹೊಂದಿರದ ಆರ್ಥಿಕವಾಗಿ ದುರ್ಬಲ ವರ್ಗದ (EWS), ಕಡಿಮೆ ಆದಾಯದ ಗುಂಪಿನ (LIG) ಮತ್ತು ಮಧ್ಯಮ ಆದಾಯದ ಗುಂಪಿನ (MIG) ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲು ಸಂಪೂರ್ಣವಾಗಿ ಅರ್ಹರಾಗಿರುತ್ತಾರೆ.
  • ಈ ಯೋಜನೆಯ ಅರ್ಹತೆಗಾಗಿ ನಿಗದಿಪಡಿಸಲಾದ ಆದಾಯದ ಮಾನದಂಡಗಳು ಕೆಳಗಿನಂತಿವೆ:
    • ಆರ್ಥಿಕವಾಗಿ ದುರ್ಬಲ ವರ್ಗದ (EWS) ಕುಟುಂಬಗಳು: ಈ ಕುಟುಂಬಗಳ ವಾರ್ಷಿಕ ಆದಾಯವು ₹3 ಲಕ್ಷಗಳವರೆಗೆ ಇರಬೇಕು.
    • ಕಡಿಮೆ ಆದಾಯದ ಗುಂಪಿನ (LIG) ಕುಟುಂಬಗಳು: ಈ ಕುಟುಂಬಗಳ ವಾರ್ಷಿಕ ಆದಾಯವು ₹3 ಲಕ್ಷದಿಂದ ₹6 ಲಕ್ಷಗಳವರೆಗೆ ಇರಬೇಕು.
    • ಮಧ್ಯಮ ಆದಾಯದ ಗುಂಪಿನ (MIG) ಕುಟುಂಬಗಳು: ಈ ಕುಟುಂಬಗಳ ವಾರ್ಷಿಕ ಆದಾಯವು ₹6 ಲಕ್ಷದಿಂದ ₹9 ಲಕ್ಷಗಳವರೆಗೆ ಇರಬೇಕು.
  • ಮನೆ ನಿರ್ಮಾಣದ ವೆಚ್ಚವನ್ನು ಕೇಂದ್ರ ಸರ್ಕಾರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ನಗರ ಸ್ಥಳೀಯ ಸಂಸ್ಥೆಗಳು (ULBs) ಮತ್ತು ಫಲಾನುಭವಿಗಳ ನಡುವೆ ಹಂಚಿಕೆಯಾಗುತ್ತದೆ ಹಾಗೂ ಈ ವೆಚ್ಚ-ಹಂಚಿಕೆ ಮಾದರಿಯು ಪ್ರದೇಶಗಳಾದ್ಯಂತ ಭಿನ್ನವಾಗಿರುತ್ತದೆ.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 2.0 (PMAY-U 2.0) ಎರಡೂ ಯೋಜನೆಗಳು ಸೇರಿ ದೇಶಾದ್ಯಂತ 1.27 ಕೋಟಿಗೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿವೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಬಗ್ಗೆ: 

  • ಪ್ರಾರಂಭಿಸಿದ ಸಚಿವಾಲಯ: ಈ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು (MoRD) ಪ್ರಾರಂಭಿಸಿದೆ.
  • ಹಿನ್ನೆಲೆ: ಗ್ರಾಮೀಣ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಶಾಶ್ವತ ಮನೆಗಳನ್ನು ಒದಗಿಸುವ ಉದ್ದೇಶದಿಂದ, ಈ ಹಿಂದಿನ ಇಂದಿರಾ ಆವಾಸ್ ಯೋಜನೆಯನ್ನು (IAY) ಪುನರ್ರಚಿಸುವ ಮೂಲಕ 1 ಏಪ್ರಿಲ್ 2016 ರಂದು ಈ ಹೊಸ ಯೋಜನೆಯನ್ನು ಪರಿಚಯಿಸಲಾಯಿತು.

ಖಾನ್ ಕ್ವೆಸ್ಟ್ (KHAAN QUEST) 2026 ಸಮರಾಭ್ಯಾಸ

ರಕ್ಷಣೆ

ಇದೀಗ ಸುದ್ದಿಯಲ್ಲಿ:

  • ಮಂಗೋಲಿಯಾದ ಉಲಾನ್‌ಬಾಟರ್‌ನ ಫೈವ್ ಹಿಲ್ಸ್ ತರಬೇತಿ ಪ್ರದೇಶದಲ್ಲಿ ಜೂನ್ 20 ರಿಂದ ಜುಲೈ 3 ರವರೆಗೆ ‘ಖಾನ್ ಕ್ವೆಸ್ಟ್’ ಸಮರಾಭ್ಯಾಸವನ್ನು ಆಯೋಜಿಸಲಾಗಿದೆ.

 ‘ಖಾನ್ ಕ್ವೆಸ್ಟ್’ ಸಮರಾಭ್ಯಾಸದ ಬಗ್ಗೆ:

  • ಈ ಸಮರಾಭ್ಯಾಸವು 2003 ರಲ್ಲಿ ಅಮೆರಿಕಾ (USA) ಮತ್ತು ಮಂಗೋಲಿಯಾದ ಸಶಸ್ತ್ರ ಪಡೆಗಳ ನಡುವೆ ನಡೆಯುವ ದ್ವಿಪಕ್ಷೀಯ ಸಮರಾಭ್ಯಾಸವಾಗಿ ಪ್ರಾರಂಭವಾಯಿತು.
  • ನಂತರ, 2006 ರಿಂದ ಈ ಸಮರಾಭ್ಯಾಸವನ್ನು ಬಹುರಾಷ್ಟ್ರೀಯ ಶಾಂತಿಪಾಲನಾ ಸಮರಾಭ್ಯಾಸವಾಗಿ ವಿಸ್ತರಿಸಲಾಗಿದ್ದು, ಪ್ರಸ್ತುತ ವರ್ಷ ನಡೆಯುತ್ತಿರುವುದು ಇದರ 23 ನೇ ಆವೃತ್ತಿಯಾಗಿದೆ.
  • ವಿಶ್ವಸಂಸ್ಥೆಯ ಸನ್ನದಿನ 7 ನೇ ಅಧ್ಯಾಯದ (Chapter VII of the United Nations Charter) ಅಡಿಯಲ್ಲಿ ನಡೆಯುವ ಶಾಂತಿ ಬೆಂಬಲ ಕಾರ್ಯಾಚರಣೆಗಳಲ್ಲಿ, ಭಾಗವಹಿಸುವ ದೇಶಗಳ ಸೈನ್ಯದ ನಡುವೆ ಕಾರ್ಯಾಚರಣೆಯ ಹೊಂದಾಣಿಕೆ ಮತ್ತು ಸಹಕಾರವನ್ನು ವೃದ್ಧಿಸುವುದು ಈ ಸಮರಾಭ್ಯಾಸದ ಪ್ರಮುಖ ಉದ್ದೇಶವಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts