ಸಿಂಧಿ ಭಾಷೆಯಲ್ಲಿ ಭಾರತದ ಸಂವಿಧಾನ
ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಭಾರತದ ಉಪರಾಷ್ಟ್ರಪತಿಯವರು, ದೇವನಾಗರಿ ಮತ್ತು ಪರ್ಷಿಯಾ ಲಿಪಿಗಳೆರಡರಲ್ಲೂ ಮುದ್ರಿತವಾಗಿರುವ ಭಾರತದ ಸಂವಿಧಾನದ ‘ಸಿಂಧಿ ಭಾಷೆಯ’ ಹೊಸ ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಸಿಂಧಿ ಭಾಷೆಯ ಕುರಿತು:
- ಇದೊಂದು ‘ಇಂಡೋ-ಆರ್ಯನ್’ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯಾಗಿದೆ. ಇದನ್ನು ಪ್ರಮುಖವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಹಾಗೂ ಪ್ರಪಂಚದಾದ್ಯಂತ ಹರಡಿರುವ ಸಣ್ಣ ಸಮುದಾಯಗಳು ಈ ಭಾಷೆಯನ್ನು ಮಾತನಾಡುತ್ತಾರೆ.
- ಸಿಂಧಿ ಭಾಷೆಯನ್ನು 21ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1967ರ ಮೂಲಕ ಭಾರತದ ಸಂವಿಧಾನದ ‘8ನೇ ಅನುಸೂಚಿ’ಗೆ ಅಧಿಕೃತವಾಗಿ ಸೇರಿಸಲಾಯಿತು.
- ಸಿಂಧಿ ಭಾಷೆಯು ಭಾರತದ ಅತ್ಯಂತ ಪ್ರಾಚೀನ ಹಾಗೂ ಮಧುರವಾದ ಭಾಷೆಗಳಲ್ಲಿ ಒಂದಾಗಿದೆ. ಏಕತೆ, ಪ್ರೀತಿ ಮತ್ತು ಸಹೋದರತ್ವವನ್ನು ಸಾರುವ ‘ವೇದಾಂತ’ ಮತ್ತು ‘ಸೂಫಿ’ ತತ್ವಗಳನ್ನು ಒಗ್ಗೂಡಿಸುವ ಅತ್ಯಂತ ಶ್ರೀಮಂತ ಸಾಹಿತ್ಯ ಪರಂಪರೆ ಈ ಭಾಷೆಗಿದೆ.
ಸೂಚಕ ಪ್ರಭೇದಗಳು (Sentinel Species)
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ಸಮುದ್ರದ ಮಂಜುಗಡ್ಡೆಗಳು ಕರಗುತ್ತಿರುವುದರಿಂದ, ‘ಚಕ್ರವರ್ತಿ ಪೆಂಗ್ವಿನ್’ ಪ್ರಭೇದವನ್ನು IUCN ತನ್ನ ಕೆಂಪು ಪಟ್ಟಿಯಲ್ಲಿ ‘ಅಪಾಯದ ಅಂಚಿನಲ್ಲಿರುವ ಪ್ರಭೇದ’ (NT) ವರ್ಗದಿಂದ, ‘ಅಳಿವಿನಂಚಿನಲ್ಲಿರುವ ಪ್ರಭೇದ’ (En) ವರ್ಗಕ್ಕೆ ಸೇರಿಸಲಾಗಿದೆ.
- ಚಕ್ರವರ್ತಿ ಪೆಂಗ್ವಿನ್ ಒಂದು ‘ಸೂಚಕ ಪ್ರಭೇದ’ವಾಗಿರುವುದರಿಂದ, ಇವುಗಳ ಸಂಖ್ಯೆಯಲ್ಲಿನ ಕುಸಿತವು ಒಟ್ಟಾರೆ ‘ಅಂಟಾರ್ಕ್ಟಿಕ್ ಪರಿಸರ ವ್ಯವಸ್ಥೆಯ’ ಮೇಲಿರುವ ತೀವ್ರ ಒತ್ತಡವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. 2080ರ ದಶಕದ ವೇಳೆಗೆ ಇವುಗಳ ಸಂತತಿ ಅರ್ಧದಷ್ಟು ಕಡಿಮೆಯಾಗುವ ಆತಂಕವಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸೂಚಕ ಪ್ರಭೇದಗಳ (Sentinel Species) ಬಗ್ಗೆ:
- ಇದು ಒಂದು ನಿರ್ದಿಷ್ಟ ಸಸ್ಯ ಅಥವಾ ಪ್ರಾಣಿಯ ಪ್ರಭೇದವಾಗಿದ್ದು, ಇದರ ಆರೋಗ್ಯದ ಸ್ಥಿತಿಯು ಇದು ವಾಸಿಸುವ ಪರಿಸರ ವ್ಯವಸ್ಥೆಯ ಒಟ್ಟಾರೆ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
- ಪರಿಸರದಲ್ಲಿ ಉಂಟಾಗುವ ಮಾಲಿನ್ಯ, ರೋಗಗಳು ಹಾಗೂ ಹವಾಮಾನ ಬದಲಾವಣೆಯಂತಹ ಪರಿಸರದ ಒತ್ತಡಗಳಿಗೆ ಇವು ಬಹಳ ವೇಗವಾಗಿ ಮತ್ತು ಸ್ಪಷ್ಟವಾಗಿ ಸ್ಪಂದಿಸುತ್ತವೆ.
- ಪರಿಸರದಲ್ಲಿನ ಅಸಮತೋಲನವು ವ್ಯಾಪಕವಾಗಿ ಹರಡುವ ಮುನ್ನವೇ ಅದನ್ನು ಪತ್ತೆಹಚ್ಚಲು, ಇವು ನಮಗೆ ‘ಮುನ್ಸೂಚನಾ ವ್ಯವಸ್ಥೆಗಳಂತೆ’ ಕಾರ್ಯನಿರ್ವಹಿಸುತ್ತವೆ.
ಸೂಚಕ ಪ್ರಭೇದಗಳಿಗೆ ಪ್ರಮುಖ ಉದಾಹರಣೆಗಳು:
- ಉಭಯವಾಸಿಗಳು (ಕಪ್ಪೆಗಳು):- ಕಪ್ಪೆಗಳು ಪಾರದರ್ಶಕ ಅಥವಾ ರಂಧ್ರಗಳನ್ನು ಹೊಂದಿರುವ ತೆಳುವಾದ ಚರ್ಮವನ್ನು ಹೊಂದಿರುತ್ತವೆ. ಇದರಿಂದಾಗಿ ಅವು ನೀರು ಮತ್ತು ಪರಿಸರದಲ್ಲಿನ ಮಾಲಿನ್ಯಕಾರಕ ಹಾಗೂ ರೋಗಕಾರಕಗಳಿಗೆ ಹೆಚ್ಚು ಸೂಕ್ಷ್ಮವಾಗಿ ಸ್ಪಂದಿಸುತ್ತವೆ. ಹೀಗಾಗಿ ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಆ ಪರಿಸರ ವ್ಯವಸ್ಥೆಯು ಕಲುಷಿತಗೊಂಡು ಒತ್ತಡದಲ್ಲಿದೆ ಎನ್ನುವುದರ ಆರಂಭಿಕ ಸೂಚನೆಯಾಗಿರುತ್ತದೆ.
- ಕಲ್ಲಿದ್ದಲು ಗಣಿಗಳಲ್ಲಿನ ಕ್ಯಾನರಿ ಹಕ್ಕಿಗಳು:- ಹಿಂದಿನ ಕಾಲದಲ್ಲಿ, ಕಲ್ಲಿದ್ದಲು ಗಣಿಗಳಲ್ಲಿ ‘ಕಾರ್ಬನ್ ಮೊನಾಕ್ಸೈಡ್’ನಂತಹ ವಿಷಾನಿಲಗಳು ಸೋರಿಕೆಯಾಗುವುದನ್ನು ಪತ್ತೆಹಚ್ಚಲು ಈ ಹಕ್ಕಿಗಳನ್ನು ಬಳಸಲಾಗುತ್ತಿತ್ತು. ಇವು ಮನುಷ್ಯರಿಗಿಂತ ಅತಿ ವೇಗದ ಚಯಾಪಚಯ ಕ್ರಿಯೆಯನ್ನು ಹೊಂದಿರುವುದರಿಂದ, ವಿಷಾನಿಲದ ಪ್ರಭಾವಕ್ಕೆ ಮನುಷ್ಯರಿಗಿಂತ ಮೊದಲೇ ಸಿಲುಕಿ, ಒದ್ದಾಡುವ ಮೂಲಕ ಕಾರ್ಮಿಕರಿಗೆ ಎಚ್ಚರಿಕೆ ನೀಡುತ್ತಿದ್ದವು.
- ಜೇನುನೊಣಗಳು:- ಕೃಷಿಯಲ್ಲಿ ಬಳಕೆಯಾಗುವ ರಾಸಾಯನಿಕ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯ ಪ್ರಮಾಣವನ್ನು ಅರಿಯಲು ಜೇನುನೊಣಗಳನ್ನು ಬಳಸಲಾಗುತ್ತದೆ. ಜೇನುನೊಣಗಳ ಸಂಖ್ಯೆಯಲ್ಲಿ ಇಳಿಕೆಯು ಪರಿಸರದ ಅಸಮತೋಲನದ ಏರುಪೇರು ಮತ್ತು ಪರಾಗಸ್ಪರ್ಶ ಬಿಕ್ಕಟ್ಟನ್ನು ಸೂಚಿಸುತ್ತದೆ.
- ಹಿಮಕರಡಿಗಳು:- ಇವು ಆರ್ಕ್ಟಿಕ್ ಪ್ರದೇಶದ ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಹಾಗೂ ಅಲ್ಲಿ ಮಾಲಿನ್ಯಕಾರಕಗಳು ಶೇಖರಣೆಯಾಗುತ್ತಿರುವುದನ್ನು ಸೂಚಿಸುವ ಪ್ರಮುಖ ಜೀವಿಗಳಾಗಿವೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಮಂಜುಗಡ್ಡೆ ಕರಗುವಿಕೆಯಿಂದ ಆಗುತ್ತಿರುವ ಭೀಕರ ಪರಿಣಾಮಗಳನ್ನು ಇವು ಸ್ಪಷ್ಟವಾಗಿ ತೋರುತ್ತವೆ.
ಅಂತರರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ(IUCN)ದ ಬಗ್ಗೆ:
- ಸ್ಥಾಪನೆ:- 1948 ರಲ್ಲಿ.
- ಪ್ರಧಾನ ಕಚೇರಿ:- ಸ್ವಿಟ್ಜರ್ಲೆಂಡ್ನ ‘ಗ್ಲಾಂಡ್’.
- ಪ್ರಮುಖ ಉದ್ದೇಶ:- ಪರಿಸರ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಕಾರವನ್ನು ಉತ್ತೇಜಿಸುವುದು ಮತ್ತು ಸಂರಕ್ಷಣಾ ಕಾರ್ಯಗಳಿಗೆ ಅಗತ್ಯವಿರುವ ವೈಜ್ಞಾನಿಕ ಜ್ಞಾನ ಹಾಗೂ ತಾಂತ್ರಿಕ ಬೆಂಬಲವನ್ನು ಒದಗಿಸುವುದು.
- IUCN ಕೆಂಪು ಪಟ್ಟಿ:- ಪ್ರಪಂಚದಾದ್ಯಂತ ಅಪಾಯದಲ್ಲಿರುವ ಜೀವಿಗಳ ಸಂರಕ್ಷಣೆಗಾಗಿ, ಈ ಸಂಸ್ಥೆಯು 1964ರಲ್ಲಿ ‘ಅಪಾಯದಲ್ಲಿರುವ ಪ್ರಭೇದಗಳ ಕೆಂಪು ಪಟ್ಟಿ’ಯನ್ನು ಬಿಡುಗಡೆ ಮಾಡಲು ಪ್ರಾರಂಭಿಸಿತು.
IUCN ಕೆಂಪು ಪಟ್ಟಿಯ ಪ್ರಮುಖ ಅಂಶಗಳು:
- ಇದು IUCN ಸಂಗ್ರಹಿಸಿದ ಪಟ್ಟಿಯಾಗಿದ್ದು, ಇದು ಸಸ್ಯಗಳು, ಪ್ರಾಣಿಗಳು ಮತ್ತು ಶಿಲೀಂಧ್ರ ಪ್ರಭೇದಗಳ ಸಂರಕ್ಷಣಾ ಸ್ಥಿತಿಗತಿಗಳ ಕುರಿತಾದ ಪ್ರಪಂಚದ ಅತ್ಯಂತ ಅಧಿಕೃತ ಹಾಗೂ ಸಮಗ್ರವಾದ ಮಾಹಿತಿಯನ್ನು ಒಳಗೊಂಡಿದೆ.
- ಪಟ್ಟಿಯಲ್ಲಿರುವ ಪ್ರಭೇದಗಳು:- ಪ್ರಸ್ತುತ ಈ ಕೆಂಪು ಪಟ್ಟಿಯಲ್ಲಿ ಒಟ್ಟು 1,43,000 ಕ್ಕೂ ಹೆಚ್ಚು ಪ್ರಭೇದಗಳನ್ನು ಮೌಲ್ಯಮಾಪನ ಮಾಡಿ ಪಟ್ಟಿಮಾಡಲಾಗಿದೆ.
- ಭಾರತ ಸದಸ್ಯತ್ವ ಪಡೆದುಕೊಂಡಿದೆ:- ಭಾರತ ದೇಶವು 1969 ರಲ್ಲಿ IUCN ನ ಅಧಿಕೃತ ಸದಸ್ಯತ್ವವನ್ನು ಪಡೆಯಿತು.
- IUCN ಕೆಂಪು ಪಟ್ಟಿಯಲ್ಲಿ ಪ್ರಭೇದಗಳ ವರ್ಗೀಕರಣ:- ಯಾವುದೇ ಪ್ರಭೇದವು ಅಳಿವಿನ ಅಂಚಿಗೆ ಎಷ್ಟು ಹತ್ತಿರದಲ್ಲಿದೆ ಎನ್ನುವ ಸಂರಕ್ಷಣಾ ಸ್ಥಿತಿಯ ಆಧಾರದ ಮೇಲೆ, IUCN ಪ್ರಭೇದಗಳನ್ನು ಪ್ರಮುಖವಾಗಿ ಈ ಕೆಳಗಿನಂತೆ ವರ್ಗೀಕರಿಸುತ್ತದೆ:
- ಅಳಿದುಹೋದ (Extinct – EX):- ಭೂಮಿಯ ಮೇಲೆ ಸಂಪೂರ್ಣ ಸಂತತಿ ನಾಶವಾದಾಗ.
- ಕಾಡಿನಲ್ಲಿ ಅಳಿದುಹೋದ (Extinct in the Wild – EW):- ಕೇವಲ ಮೃಗಾಲಯ ಅಥವಾ ಕೃತಕ ವ್ಯವಸ್ಥೆಯಲ್ಲಿ ಮಾತ್ರ ಉಳಿದುಕೊಂಡಾಗ.
- ತೀವ್ರವಾಗಿ ಅಳಿವಿನಂಚಿನಲ್ಲಿರುವ (Critically Endangered – CR)
- ಅಳಿವಿನಂಚಿನಲ್ಲಿರುವ (Endangered – EN)
- ದುರ್ಬಲವಾಗಿರುವ ಅಥವಾ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿರುವ (Vulnerable – VU)
- ಅಪಾಯದ ಅಂಚಿನಲ್ಲಿರುವ (Near Threatened – NT)
- ಕಡಿಮೆ ಕಾಳಜಿಯ (Least Concern – LC)
- ದತ್ತಾಂಶ ಕೊರತೆಯಿರುವ (Data Deficient – DD)
- ಮೌಲ್ಯಮಾಪನ ಮಾಡದ (Not Evaluated – NE)








ನಿಮ್ಮದೊಂದು ಉತ್ತರ