ಗುಜರಾತಿನ ಸಾನಂದ್: ಭಾರತದ ಸೆಮಿಕಂಡಕ್ಟರ್ ಹಬ್
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಭಾರತದ ಪ್ರಧಾನಮಂತ್ರಿಯವರು ಗುಜರಾತಿನ ಸಾನಂದ್ನಲ್ಲಿ ‘ಕೇನ್ಸ್ ಸೆಮಿಕಾನ್’ ಸಂಸ್ಥೆಯ ಅರೆವಾಹಕ (ಸೆಮಿಕಂಡಕ್ಟರ್)ಗಳನ್ನು ಜೋಡಿಸುವ ಮತ್ತು ಪರೀಕ್ಷಾ ಘಟಕವನ್ನು ಉದ್ಘಾಟಿಸಿದರು.
- ಈ ಯೋಜನೆಯು “ಇಂಡಿಯಾ ಸೆಮಿಕಂಡಕ್ಟರ್ ಮಿಷನ್” (ISM)ನ ಒಂದು ಪ್ರಮುಖ ಭಾಗವಾಗಿದೆ.
- ಇದು ಭಾರತವನ್ನು ಜಾಗತಿಕ ಅರೆವಾಹಕ (ಸೆಮಿಕಂಡಕ್ಟರ್) ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
- ಜಾಗತಿಕ ಅರೆವಾಹಕ ಪೂರೈಕೆ ಸರಪಳಿಯಲ್ಲಿ ಸಾನಂದ್ ಅನ್ನು ಒಂದು ನಿರ್ಣಾಯಕ ಕೊಂಡಿಯಾಗಿ ರೂಪಿಸಲಾಗುತ್ತಿದೆ.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM):
- ಪ್ರಾರಂಭ:- ಡಿಸೆಂಬರ್ 2021
- ಅನುಷ್ಠಾನ ಸಂಸ್ಥೆ:- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY).
- ಉದ್ದೇಶ:- ದೇಶದಲ್ಲಿ ಸುಸ್ಥಿರವಾದ ಅರೆವಾಹಕ ಮತ್ತು ಪರದೆ (display)ಗಳ ಸಮಗ್ರ ಪೂರಕ ವ್ಯವಸ್ಥೆಯನ್ನು ನಿರ್ಮಿಸುವುದು.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 (ISM 2.0):
- ಇದನ್ನು 2026-27ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಯಿತು.
- ಭಾರತದಲ್ಲಿ ಸಂಪೂರ್ಣ ಪ್ರಮಾಣದ ಅರೆವಾಹಕಗಳ ಸಮಗ್ರ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಇದು ಅರೆವಾಹಕ ಉಪಕರಣಗಳು ಮತ್ತು ಕಚ್ಚಾ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತದೆ.
ಸರ್ಕಾರದ ಇತರ ಯೋಜನೆಗಳು:
- ವಿನ್ಯಾಸ ಆಧಾರಿತ ಪ್ರೋತ್ಸಾಹ ಯೋಜನೆ (DLI Scheme):- ಚಿಪ್ ವಿನ್ಯಾಸ ಮಾಡುವ ಸ್ಟಾರ್ಟ್ಅಪ್ಗಳಿಗೆ ಹಣಕಾಸು ಮತ್ತು ಮೂಲಸೌಕರ್ಯ ಬೆಂಬಲ ಒದಗಿಸುತ್ತದೆ.
- ದೇಶೀಯವಾಗಿ 100 ಕ್ಕೂ ಹೆಚ್ಚು ಅರೆವಾಹಕ ವಿನ್ಯಾಸ ಸಂಸ್ಥೆಗಳನ್ನು ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ.
- ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ – ಉತ್ಪಾದನೆ ಆಧಾರಿತ ಪ್ರೋತ್ಸಾಹ (PLI) ಯೋಜನೆ:- ಇದು ಮೊಬೈಲ್ ಉತ್ಪಾದನೆಯ ಬೆಳವಣಿಗೆಯ ಜೊತೆಗೆ ಬೇಡಿಕೆಯ ಆಧಾರಿತ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
- ಚಿಪ್ಸ್-ಟು-ಸ್ಟಾರ್ಟ್ಅಪ್ ಕಾರ್ಯಕ್ರಮ:- 300 ಕ್ಕೂ ಹೆಚ್ಚು ಸಂಸ್ಥೆಗಳಿಗೆ ಇಡಿಎ (EDA) ಉಪಕರಣಗಳು ಮತ್ತು ಉತ್ಪಾದನಾ ನಿರ್ಮಾಣ ಬೆಂಬಲವನ್ನು ಇದು ಒದಗಿಸುತ್ತದೆ.
- ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಮತ್ತು ವಿರಳ ಭೂ-ಖನಿಜ ಸಂಚಾರ ಪಥ (Rare Earth Corridor):- ವಿರಳ ಭೂ-ಖನಿಜಗಳಿಗಾಗಿ ಚೀನಾ ಹಾಗೂ ಸೆಮಿಕಂಡಕ್ಟರ್ ‘ಫ್ಯಾಬ್’ (Fabs) ಘಟಕಗಳಿಗಾಗಿ ತೈವಾನ್ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಜಾಗತಿಕ ಪೂರೈಕೆ ಸರಪಳಿ ಮತ್ತು ಕಾರ್ಯತಂತ್ರದ ಸ್ಥಾನಮಾನ:
- ಅಮೆರಿಕ ನೇತೃತ್ವದ ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮ:- ಈ ಉಪಕ್ರಮದಲ್ಲಿ ಭಾರತದ ಸದಸ್ಯತ್ವವು ಅರೆವಾಹಕ ಮತ್ತು ಕೃತಕ ಬುದ್ಧಿಮತ್ತೆಯಂತಹ (AI) ನಿರ್ಣಾಯಕ ತಂತ್ರಜ್ಞಾನಗಳ ಪೂರೈಕೆ ಸರಪಳಿಯನ್ನು ಭದ್ರಪಡಿಸುವ ಗುರಿಯನ್ನು ಹೊಂದಿದೆ.
ಪ್ಯಾಕ್ಸ್ ಸಿಲಿಕಾ ಉಪಕ್ರಮದ ಬಗ್ಗೆ:
- ಉದ್ದೇಶ:- ನಿರ್ಣಾಯಕ ಖನಿಜಗಳಿಂದ ಸುಭದ್ರ, ಸಮೃದ್ಧ ಮತ್ತು ನಾವೀನ್ಯತೆ ಆಧಾರಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸುವ ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮ ಇದಾಗಿದೆ.
- ಸದಸ್ಯ ರಾಷ್ಟ್ರಗಳು:- ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್ಡಮ್, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾ.
ಭಾರತದಲ್ಲಿ ಸಹಕಾರ ಸಂಘಗಳು
ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ದೇಶದಲ್ಲಿ ಕೇವಲ 3.49 ಲಕ್ಷ ಸಹಕಾರ ಸಂಘಗಳು ಮಾತ್ರ ಲಾಭದಲ್ಲಿವೆ ಎಂದು ಕೇಂದ್ರ ಸರ್ಕಾರವು ಇತ್ತೀಚಿಗೆ ಲೋಕಸಭೆಗೆ ಮಾಹಿತಿ ನೀಡಿದೆ.
ಸಹಕಾರ ಸಂಘಗಳ ಬಗ್ಗೆ:
- ಸಾಮಾನ್ಯ ಹಿತಾಸಕ್ತಿ, ಗುರಿ ಅಥವಾ ಅಗತ್ಯವನ್ನು ಹೊಂದಿರುವ ವ್ಯಕ್ತಿಗಳ ಗುಂಪೊಂದು ಒಟ್ಟಾಗಿ ಮಾಲೀಕತ್ವ ಹೊಂದಿ, ನಿರ್ವಹಿಸುವ ಸಂಸ್ಥೆ ಅಥವಾ ವ್ಯವಹಾರವನ್ನು ‘ಸಹಕಾರ ಸಂಘ’ ಎಂದು ಕರೆಯಲಾಗುತ್ತದೆ.
- ಉದ್ದೇಶ:- ಬಾಹ್ಯ ಷೇರುದಾರರಿಗೆ ಗರಿಷ್ಠ ಲಾಭ ಗಳಿಸಿಕೊಡುವುದಕ್ಕಿಂತ ಹೆಚ್ಚಾಗಿ, ತನ್ನ ಸದಸ್ಯರ ಆರ್ಥಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವುದು.
ಸಹಕಾರ ಸಂಘಗಳ ಪ್ರಯೋಜನಗಳು:
- ಪ್ರಜಾಸತ್ತಾತ್ಮಕ ನಿಯಂತ್ರಣ:- ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾದ ಧ್ವನಿ ಇರುತ್ತದೆ.
- ಆರ್ಥಿಕ ಭಾಗವಹಿಸುವಿಕೆ:- ಸದಸ್ಯರ ಬಳಕೆ ಅಥವಾ ಅವರ ಕೊಡುಗೆಯ ಆಧಾರದ ಮೇಲೆ ಲಾಭವನ್ನು ವಿತರಿಸಲಾಗುತ್ತದೆ. ಹೂಡಿಕೆ ಮಾಡಿದ ಬಂಡವಾಳದ ಆಧಾರದ ಮೇಲೆ ಅಲ್ಲ.
- ಸಮುದಾಯದ ಮೇಲಿನ ಗಮನ:- ಸಂಪನ್ಮೂಲಗಳು ಮತ್ತು ಲಾಭವನ್ನು ಗುಂಪಿನೊಳಗೆ ಉಳಿಸಿಕೊಳ್ಳುವ ಮೂಲಕ ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವನ್ನು ಒದಗಿಸುವುದು.
- ಉತ್ತಮ ಸೇವೆಗಳು ಮತ್ತು ಬೆಲೆಗಳು:- ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ, ಲಾಭದಾಯಕ ಉದ್ದಿಮೆಗಳಿಗಿಂತ ಉತ್ತಮ ಸೇವೆಗಳನ್ನು ಅಥವಾ ಕೈಗೆಟುಕುವ ಬೆಲೆಗಳನ್ನು ಇವು ನೀಡುತ್ತವೆ.
97ನೇ ಸಂವಿಧಾನ ತಿದ್ದುಪಡಿ ಕಾಯ್ದೆ 2011 ರ ಬಗ್ಗೆ:
- ಇದು ಸಹಕಾರ ಸಂಘಗಳನ್ನು ರಚಿಸುವ ಹಕ್ಕನ್ನು ಮೂಲಭೂತ ಹಕ್ಕಾಗಿ (ವಿಧಿ 19) ಸ್ಥಾಪಿಸಿದೆ.
- ಸಹಕಾರ ಸಂಘಗಳ ಉತ್ತೇಜನಕ್ಕಾಗಿ ರಾಜ್ಯ ನಿರ್ದೇಶಕ ತತ್ವಗಳಲ್ಲಿ (DPSP) ಹೊಸ ವಿಧಿ 43-B ಸೇರಿಸಲಾಗಿದೆ.
- ಸಂವಿಧಾನಕ್ಕೆ “ಸಹಕಾರ ಸಂಘಗಳು” ಎಂಬ ಶೀರ್ಷಿಕೆಯ ಹೊಸ ಭಾಗ IX-B ಯಲ್ಲಿ ವಿಧಿ 243-ZH ನಿಂದ 243-ZT ವರೆಗೆ ಸೇರ್ಪಡೆಗೊಳಿಸಲಾಗಿದೆ.
ಭಾರತದಲ್ಲಿ ಸಹಕಾರ ಸಂಘಗಳ ಕಾನೂನು ಚೌಕಟ್ಟು ಮತ್ತು ಬೆಂಬಲ:
- ಸಹಕಾರ ಸಂಘಗಳ ಕಾಯ್ದೆ:- ಸಹಕಾರ ಸಂಘಗಳನ್ನು ನಿಯಂತ್ರಿಸಲಾಗುತ್ತದೆ ಮತ್ತು ಇದನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲಾಗುತ್ತದೆ.
- ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ, 2002:- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಸಹಕಾರ ಸಂಘಗಳನ್ನು ನಿಯಂತ್ರಿಸುತ್ತದೆ.
- ರಾಷ್ಟ್ರೀಯ ಸಹಕಾರ ನೀತಿ, 2002:- ಸಹಕಾರಿ ಚಳವಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು, ಇದು ಆಡಳಿತ, ಸದಸ್ಯರ ಭಾಗವಹಿಸುವಿಕೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸುವತ್ತ ಗಮನಹರಿಸುತ್ತದೆ.
- ಸಹಕಾರ ಸಚಿವಾಲಯ:- 2021 ರಲ್ಲಿ ಸ್ಥಾಪನೆಯಾದ ಈ ಸಚಿವಾಲಯವು, ಭಾರತದಲ್ಲಿ ಸಹಕಾರ ಸಂಘಗಳ ಆಡಳಿತವನ್ನು ಸುಧಾರಿಸುವ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವ ಮೂಲಕ ಅವುಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
- ರಾಷ್ಟ್ರೀಯ ಸಹಕಾರ ನೀತಿ, 2025:- ಭಾರತದ ಸಹಕಾರಿ ಸಂಪ್ರದಾಯದ ವಿಶಿಷ್ಟ ಸಾಮರ್ಥ್ಯಗಳನ್ನು ಬೆಳೆಸುವುದು, ಆರ್ಥಿಕ ಪ್ರಜಾಪ್ರಭುತ್ವೀಕರಣವನ್ನು ಉತ್ತೇಜಿಸುವುದು ಮತ್ತು ಸಾಮೂಹಿಕ ಭಾಗವಹಿಸುವಿಕೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಉನ್ನತೀಕರಿಸುವುದು ಇದರ ಪ್ರಮುಖ ಗುರಿಯಾಗಿದೆ.
ಬಾಬ್-ಅಲ್-ಮಂದೇಬ್ ಜಲಸಂಧಿ
ಭೂಗೋಳ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದಲ್ಲಿ ‘ಇರಾನ್’ ಬೆಂಬಲಿತ ‘ಯೆಮನ್’ನ ‘ಹೌತಿ’ ಬಂಡುಕೋರರು ಪ್ರವೇಶಿಸಿದ ನಂತರ, ಬಾಬ್-ಎಲ್-ಮಂದೇಬ್ ಜಲಸಂಧಿಗೆ ಅಡ್ಡಿಯಾಗುವ ಸಾಧ್ಯತೆಯ ಬಗ್ಗೆ ತೀವ್ರ ಕಳವಳಗಳು ವ್ಯಕ್ತವಾಗಿವೆ.
ಬಾಬ್-ಅಲ್-ಮಂದೇಬ್ ಜಲಸಂಧಿಯ ಬಗ್ಗೆ:
- ಅರೇಬಿಕ್ ಭಾಷೆಯಲ್ಲಿ ಇದನ್ನು “ಕಣ್ಣೀರಿನ ಹೆಬ್ಬಾಗಿಲು” ಎಂದೂ ಕರೆಯಲಾಗುತ್ತಿದ್ದು, ಇದು ಕೆಂಪು ಸಮುದ್ರದ ದಕ್ಷಿಣ ತುದಿಯಲ್ಲಿದೆ.
- ಇದು ಒಂದು ಕಡೆಯಲ್ಲಿ ಯೆಮನ್ ಹಾಗೂ ಮತ್ತೊಂದು ಕಡೆಯಲ್ಲಿ ‘ಹಾರ್ನ್ ಆಫ್ ಆಫ್ರಿಕಾ’ (ಆಫ್ರಿಕಾದ ಶೃಂಗ) ಪ್ರದೇಶದ ನಡುವೆ ನೆಲೆಗೊಂಡಿದೆ.
- ಇದು ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಮತ್ತು ಮುಂದುವರಿದು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುತ್ತದೆ.
- ಇದು ಸೂಯೆಜ್ ಕಾಲುವೆಯೊಂದಿಗೆ ಸಂಪರ್ಕ ಹೊಂದುವುದರಿಂದ ಆಯಕಟ್ಟಿನ ಪ್ರಾಮುಖ್ಯತೆಯನ್ನು ಪಡೆದಿದೆ ಮತ್ತು ಇದು ಮುಂದುವರಿದು ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.
- ಇದು ಪ್ರಪಂಚದ ಅತ್ಯಂತ ಪ್ರಮುಖ ಕಡಲ-ಮಾರ್ಗದ ಕಾರ್ಯತಂತ್ರದ ಪ್ರದೇಶಗಳಲ್ಲಿ ಒಂದಾಗಿದೆ. ಏಕೆಂದರೆ,
- ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸರಿಸುಮಾರು 10-12% ರಷ್ಟು ಪಾಲು ಬಾಬ್-ಎಲ್-ಮಂಡೇಬ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ.
- ಇದು ಸುಮೆಡ್ (SUMED) ಪೈಪ್ಲೈನ್ಗೂ ಸಂಪರ್ಕ ಹೊಂದಿದ್ದು, ಜಾಗತಿಕ ಇಂಧನ ಮತ್ತು ವ್ಯಾಪಾರ ಹರಿವಿಗೆ ನಿರ್ಣಾಯಕ ಸಂಚಾರ ಮಾರ್ಗವಾಗಿದೆ.
ಸುಮೆಡ್ (SUMED- ಸೂಯೆಜ್-ಮೆಡಿಟರೇನಿಯನ್) ಪೈಪ್ಲೈನ್:

- ಈಜಿಪ್ಟ್ನಲ್ಲಿರುವ 200-ಮೈಲಿ ಉದ್ದದ ಪೈಪ್ಲೈನ್ ಆಗಿದೆ:- ಇದು ಕೆಂಪು ಸಮುದ್ರದ ಮೇಲಿರುವ ‘ಐನ್ ಸುಖ್ನಾ’ವನ್ನು ಮೆಡಿಟರೇನಿಯನ್ ಮೇಲಿರುವ ‘ಸಿಡಿ ಕೆರಿರ್’ಗೆ ಸಂಪರ್ಕಿಸುತ್ತದೆ.
- ಸೂಯೆಜ್ ಕಾಲುವೆಗೆ ಒಂದು ಆಯಕಟ್ಟಿನ ಪರ್ಯಾಯ ಮಾರ್ಗವಾಗಿದೆ:- ಏಕೆಂದರೆ, ಪರ್ಷಿಯನ್ ಕೊಲ್ಲಿಯ ತೈಲವನ್ನು ಯುರೋಪ್ ಮತ್ತು ಉತ್ತರ ಅಮೆರಿಕಾಗೆ ಸಾಗಿಸಲು ಇದು ಅನುಕೂಲಮಾಡಿಕೊಡುತ್ತದೆ.
- ಉದ್ದೇಶ:- ಇದು ಸೂಯೆಜ್ ಕಾಲುವೆಗೆ ಪರ್ಯಾಯವಾಗಿ ಕಚ್ಚಾ ತೈಲವನ್ನು ಸಾಗಿಸುವ ಪ್ರಮುಖ ಮಾರ್ಗವಾಗಿದ್ದು, ಹಡಗು ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಇದು ಅತ್ಯಗತ್ಯವಾಗಿದೆ.
- ಮಾರ್ಗ:- ಐನ್ ಸುಖ್ನಾವನ್ನು (ಸೂಯೆಜ್ ಕೊಲ್ಲಿ, ಕೆಂಪು ಸಮುದ್ರ) ಸಿಡಿ ಕೆರಿರ್ಗೆ (ಅಲೆಕ್ಸಾಂಡ್ರಿಯಾ ಬಳಿ, ಮೆಡಿಟರೇನಿಯನ್ ಸಮುದ್ರ) ಸಂಪರ್ಕಿಸುತ್ತದೆ.
- ಸಾಮರ್ಥ್ಯ:- ಪ್ರತಿದಿನ ಸರಿಸುಮಾರು 2.5 ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
- ಮಾಲೀಕತ್ವ:- ‘ಅರಬ್ ಪೆಟ್ರೋಲಿಯಂ ಪೈಪ್ಲೈನ್ ಕಂಪನಿಯು’ ಇದನ್ನು ನಿರ್ವಹಿಸುತ್ತಿದ್ದು, ಇದು ಈಜಿಪ್ಟ್, ಸೌದಿ ಅರೇಬಿಯಾ, ಕುವೈತ್, ಯುಎಇ ಮತ್ತು ಕತಾರ್ ನಡುವಿನ ಜಂಟಿ ಉದ್ಯಮವಾಗಿದೆ.
ಸಮ್ರಾಟ್ ಸಂಪ್ರತಿ
ಕಲೆ ಮತ್ತು ಸಂಸ್ಕೃತಿ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಪ್ರಧಾನಮಂತ್ರಿಯವರು ಗುಜರಾತಿನ ಗಾಂಧಿನಗರದಲ್ಲಿರುವ ಕೋಬಾ ತೀರ್ಥದಲ್ಲಿ ಜೈನ ಪರಂಪರೆ ವಸ್ತುಸಂಗ್ರಹಾಲಯವಾದ ‘ಸಮ್ರಾಟ್ ಸಂಪ್ರತಿ’ ಸಂಗ್ರಹಾಲಯ’ವನ್ನು ಉದ್ಘಾಟಿಸಿದರು.
ಸಮ್ರಾಟ್ ಸಂಪ್ರತಿ ಕುರಿತು:
- ಇವರು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಹಾಗೂ ಸಾಮ್ರಾಟ್ ಅಶೋಕನ ಮೊಮ್ಮಗನಾಗಿದ್ದಾರೆ.
- ಇವರನ್ನು ಇಂದ್ರಪಾಲಿತ, ಸಂಗತ ಮತ್ತು ವಿಗತಾಶೋಕ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.
- ಇವರ ಜೀವನ ಚರಿತ್ರೆಯನ್ನು ಸಂಪ್ರತಿಕಥಾ, ಪರಿಶಿಷ್ಟಪರ್ವ ಮತ್ತು ಪ್ರಭಾವಕಚರಿತ ಸೇರಿದಂತೆ ಪ್ರಮುಖ ಜೈನ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ.
- ಭಾರತ ಉಪಖಂಡದಾದ್ಯಂತ ಜೈನ ಧರ್ಮ ಮತ್ತು ಅಹಿಂಸಾ ತತ್ತ್ವವನ್ನು ಹರಡುವಲ್ಲಿ ಇವರ ನಿರ್ಣಾಯಕ ಪಾತ್ರಕ್ಕಾಗಿ, ಇವರನ್ನು ‘ಜೈನ ಅಶೋಕ’ ಎಂದು ಕರೆಯಲಾಗುತ್ತದೆ.
- ಅಧಿಕಾರವನ್ನು ಕೇವಲ ಆಡಳಿತಕ್ಕಾಗಿ ಅಲ್ಲದೆ ಸೇವೆ ಮತ್ತು ಸಾಧನೆ ಎಂದು ಪರಿಗಣಿಸಿದ್ದ ಸಮ್ರಾಟ್ ಸಂಪ್ರತಿಯವರು ಸಿಂಹಾಸನದಿಂದಲೇ ಅಹಿಂಸೆಯನ್ನು ಹರಡಿದರು. ಜೊತೆಗೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು) ಮತ್ತು ಅಪರಿಗ್ರಹವನ್ನು (ಸಂಪತ್ತನ್ನು ಕೂಡಿಡದಿರುವುದು) ನಿಸ್ವಾರ್ಥತೆ ಹಾಗೂ ನಿರ್ಲಿಪ್ತತೆಯಿಂದ ಪ್ರಚಾರ ಮಾಡಿದರು ಎಂದು ಭಾರತದ ಪ್ರಧಾನಮಂತ್ರಿಯವರು ಶ್ಲಾಘಿಸಿದರು.
- ಇವರು ಭಾರತ ಉಪಖಂಡದಾದ್ಯಂತ ಅನೇಕ ಜೈನ ಬಸದಿಗಳನ್ನು ನಿರ್ಮಿಸಿದ್ದಾರೆ ಮತ್ತು ಜೀರ್ಣೋದ್ಧಾರ ಮಾಡಿದ್ದಾರೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe)
ವಿಜ್ಞಾನ ಮತ್ತು ತಂತ್ರಜ್ಞಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರವು (IN-SPACe) ತನ್ನ ಪ್ರತಿಷ್ಠಿತ ‘ಮಾದರಿ ರಾಕೆಟ್ರಿ ಸ್ಪರ್ಧೆಯ’ 2ನೇ ಆವೃತ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe)ದ ಬಗ್ಗೆ:
- IN-SPACe ಸಂಪೂರ್ಣ ರೂಪ:- ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಅಂಡ್ ಆಥೋರೈಝೆಷನ್ ಸೆಂಟರ್.
- ಇದು ಬಾಹ್ಯಾಕಾಶ ಇಲಾಖೆಯ (DOS) ಅಡಿಯಲ್ಲಿ ಕಾರ್ಯನಿರ್ವಹಿಸುವ ‘ಏಕ-ಗವಾಕ್ಷಿ’ ಮತ್ತು ಸ್ವಾಯತ್ತ ನೋಡಲ್ ಸಂಸ್ಥೆಯಾಗಿದೆ.
- ಇದನ್ನು ಭಾರತ ಸರ್ಕಾರವು ಜೂನ್ 2020 ರಲ್ಲಿ ಸ್ಥಾಪಿಸಿತು.
- ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಾಗೂ ಖಾಸಗಿ ಕಂಪನಿಗಳು ಮತ್ತು ಶೈಕ್ಷಣಿಕ ವಲಯ ಸೇರಿದಂತೆ ಸರ್ಕಾರೇತರ ಸಂಸ್ಥೆಗಳ (NGEs) ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
- ಅಧ್ಯಕ್ಷರು:- ಡಾ. ಪವನ್ ಕುಮಾರ್ ಗೋಯೆಂಕಾ.
- ಪ್ರಧಾನ ಕಚೇರಿ:- ಗುಜರಾತಿನ ಅಹಮದಾಬಾದ ಜಿಲ್ಲೆಯ ಬೋಪಾಲ್ನಲ್ಲಿದೆ.
ಪ್ರಮುಖ ಕಾರ್ಯಗಳು ಮತ್ತು ಜವಾಬ್ದಾರಿಗಳು:
- ಭಾರತದಲ್ಲಿ ಖಾಸಗಿ ವಲಯದ ಬಾಹ್ಯಾಕಾಶ ಚಟುವಟಿಕೆಗಳನ್ನು ಉತ್ತೇಜಿಸುವ, ಸಕ್ರಿಯಗೊಳಿಸುವ, ಅನುಮೋದಿಸುವ ಮತ್ತು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು IN-SPACe ಹೊಂದಿದೆ.
- ಸೌಲಭ್ಯ ಒದಗಿಸುವಿಕೆ:- ಬಾಹ್ಯಾಕಾಶ ಗುರಿಗಳನ್ನು ನಿರ್ಮಿಸಲು ಮತ್ತು ಉಡಾವಣೆ ಮಾಡಲು ಇಸ್ರೋದ (ISRO) ಮೂಲಸೌಕರ್ಯ ಹಾಗೂ ತಾಂತ್ರಿಕ ಪರಿಣತಿಯನ್ನು ಬಳಸಿಕೊಳ್ಳಲು ಸರ್ಕಾರೇತರ ಸಂಸ್ಥೆ (NGEs)ಗಳಿಗೆ ಇದು ಅವಕಾಶ ಕಲ್ಪಿಸುತ್ತದೆ.
- ಉತ್ತೇಜನ:- ಇದು ಈ ಕೆಳಗಿನ ಉಪಕ್ರಮಗಳ ಮೂಲಕ ಭಾರತೀಯ ಬಾಹ್ಯಾಕಾಶ ಆರ್ಥಿಕತೆಯನ್ನು ವಿಸ್ತರಿಸುವತ್ತ ಇದು ಗಮನಹರಿಸುತ್ತದೆ.
- ‘ತಂತ್ರಜ್ಞಾನ ಅಳವಡಿಕೆ ನಿಧಿ’ (Technology Adoption Fund) – ₹500 ಕೋಟಿ ಮೌಲ್ಯದ್ದಾಗಿದೆ..
- ‘ಸ್ಯಾಟಲೈಟ್ ಬಸ್ ಆಸ್ ಎ ಸರ್ವೀಸ್’ (SBaaS).
ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026
ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ‘ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026’ ಅನ್ನು ಅಧಿಸೂಚನೆ ಹೊರಡಿಸಿದೆ.
ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026 ರ ಬಗ್ಗೆ:
- ಅನುಷ್ಠಾನ ಸಚಿವಾಲಯ:- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
- ಈ ಹೊಸ ನಿಯಮಗಳು ಏಪ್ರಿಲ್ 1, 2026 ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿವೆ.
- ಇವು ಪ್ರಸ್ತುತ ಇರುವ ‘SWM ನಿಯಮಗಳು 2016’ ಅನ್ನು ಬದಲಾಯಿಸಲಿವೆ ಮತ್ತು ಭಾರತವನ್ನು ‘ವೃತ್ತಾಕಾರದ ಆರ್ಥಿಕತೆ’ ಹಾಗೂ “ಶೂನ್ಯ ತ್ಯಾಜ್ಯ” ಮಾದರಿಯತ್ತ ಕೊಂಡೊಯ್ಯುವ ಗುರಿಯನ್ನು ಹೊಂದಿವೆ.
SWM ನಿಯಮಗಳು 2026 ರ ಪ್ರಮುಖ ನಿಬಂಧನೆಗಳು:
- ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವುದು ಕಡ್ಡಾಯ:- ತ್ಯಾಜ್ಯವನ್ನು ಹಸಿ, ಒಣ, ನೈರ್ಮಲ್ಯ ಮತ್ತು ವಿಶೇಷ ಕಾಳಜಿಯ (ಅಪಾಯಕಾರಿ) ತ್ಯಾಜ್ಯಗಳೆಂದು 4 ವಿಭಾಗಗಳಾಗಿ ವಿಂಗಡಿಸುವುದನ್ನು ಇದು ಕಡ್ಡಾಯಗೊಳಿಸಿದೆ.
- ಬೃಹತ್ ತ್ಯಾಜ್ಯ ಉತ್ಪಾದಕರು:- ಪ್ರತಿದಿನ 100 ಕೆಜಿ ಅಥವಾ ಅದಕ್ಕಿಂತ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸುವ ಸಂಸ್ಥೆಗಳು ಹಸಿ ತ್ಯಾಜ್ಯವನ್ನು ಸ್ಥಳೀಯವಾಗಿಯೇ ನಿರ್ವಹಿಸಬೇಕು ಅಥವಾ ‘ವಿಸ್ತರಿತ ಉತ್ಪಾದಕರ ಜವಾಬ್ದಾರಿ’ (EPR) ನೀತಿಯನ್ನು ಅಳವಡಿಸಿಕೊಳ್ಳಬೇಕು.
- ತ್ಯಾಜ್ಯ ಸಂಸ್ಕರಿತ ಇಂಧನದ ಬಳಕೆ:- ಕೈಗಾರಿಕೆಗಳು ಮತ್ತು ಸಿಮೆಂಟ್ ಕಾರ್ಖಾನೆಗಳು ಮುಂದಿನ 6 ವರ್ಷಗಳೊಳಗೆ ‘ತ್ಯಾಜ್ಯ ಸಂಸ್ಕರಿತ ಇಂಧನ’ದ (RDF) ಬಳಕೆಯನ್ನು 5% ರಿಂದ 15% ಕ್ಕೆ ಕಡ್ಡಾಯವಾಗಿ ಹೆಚ್ಚಿಸಬೇಕು.
- CPCB ಪೋರ್ಟಲ್:- ತ್ಯಾಜ್ಯದ ಸಂಪೂರ್ಣ ಜೀವನಚಕ್ರವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಕೇಂದ್ರೀಕೃತ ಪೋರ್ಟಲ್ ಅನ್ನು ಬಳಸಲಾಗುತ್ತದೆ.
- “ಮಾಲಿನ್ಯ ಮಾಡುವವರೇ ದಂಡ ತೆರಬೇಕು” (Polluter Pays Principle) ನಿಯಮಗಳ ಕಟ್ಟುನಿಟ್ಟಿನ ಜಾರಿ:- ಮತ್ತು ಹಳೆಯ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಮರುಸ್ಥಾಪಿಸಲಾಗುತ್ತದೆ.







ನಿಮ್ಮದೊಂದು ಉತ್ತರ