ಲೇಖಕ: instakas

  • ಕೆಎಂಎಫ್ ‘ನಂದಿನಿ’ ತುಪ್ಪದ ರಫ್ತು: ಅಮೆರಿಕ, ಯುಎಇ ಮತ್ತು ಆಸ್ಟ್ರೇಲಿಯಾಕ್ಕೆ ವಿಸ್ತರಣೆ

    ಕೆಎಂಎಫ್ ‘ನಂದಿನಿ’ ತುಪ್ಪದ ರಫ್ತು: ಅಮೆರಿಕ, ಯುಎಇ ಮತ್ತು ಆಸ್ಟ್ರೇಲಿಯಾಕ್ಕೆ ವಿಸ್ತರಣೆ

    ಇದೀಗ ಸುದ್ದಿಯಲ್ಲಿದೆ:

    • ವಿದೇಶಿ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ವು ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುಎಇ ದೇಶಗಳಿಗೆ ಅಧಿಕೃತವಾಗಿ ‘ನಂದಿನಿ’ ತುಪ್ಪದ ರಫ್ತನ್ನು ಪ್ರಾರಂಭಿಸಿದೆ.

    ಕೆಎಂಎಫ್ ‘ನಂದಿನಿ’ ತುಪ್ಪದ ರಫ್ತು ವಿಸ್ತರಣೆಯ ಬಗ್ಗೆ:

    • ಯುಎಇಯಿಂದ 8 ಟನ್, ಅಮೆರಿಕದಿಂದ 5 ಟನ್ ಮತ್ತು ಆಸ್ಟ್ರೇಲಿಯಾದಿಂದ 1 ಟನ್ ತುಪ್ಪ ಪೂರೈಕೆಗಾಗಿ ಕೆಎಂಎಫ್ ಖರೀದಿ ಆದೇಶಗಳನ್ನು ಪಡೆದುಕೊಂಡಿದೆ.
    • ಪ್ರಸ್ತುತವಾಗಿ, ಕೆಎಂಎಫ್ ತನ್ನ ಪ್ರೀಮಿಯಂ ಉತ್ಪನ್ನಗಳಾದ ಯುಎಚ್‌ಟಿ (UHT) ಟೆಟ್ರಾ ಪ್ಯಾಕ್ ಹಾಲು, ತುಪ್ಪ, ಬೆಣ್ಣೆ, ಗಿಣ್ಣು, ಪುಡಿ ರೂಪದ ಹಾಲಿನ ಉತ್ಪನ್ನ, ಐಸ್‌ಕ್ರೀಮ್, ಸುವಾಸನೆಭರಿತ ಹಾಲು, ಸಿಹಿತಿಂಡಿಗಳು ಮತ್ತು ಸವಿಯಾದ ಪದಾರ್ಥಗಳನ್ನು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ದುಬೈ, ಕತಾರ್, ಬ್ರೂನಿ, ಮಾಲ್ಡೀವ್ಸ್ ಮತ್ತು ಸಿಂಗಾಪುರ ದೇಶಗಳಿಗೆ ರಫ್ತು ಮಾಡುತ್ತಿದೆ.

    ಕರ್ನಾಟಕ ಹಾಲು ಒಕ್ಕೂಟ (KMF)ದ ಬಗ್ಗೆ:

      • ಅತ್ಯುನ್ನತ ಸಂಸ್ಥೆ:- ಕೆಎಂಎಫ್ ಕರ್ನಾಟಕದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ಅತ್ಯುನ್ನತ ಸಂಸ್ಥೆಯಾಗಿದ್ದು, 
      • ಸ್ವತಃ ಮಾಲೀಕತ್ವ ಮತ್ತು ನಿರ್ವಹಣೆ:- ಇದು ಹಾಲು ಉತ್ಪಾದಕರಿಂದಲೇ ಮಾಲೀಕತ್ವಹೊಂದಿ ನಿರ್ವಹಣೆಯಾಗುತ್ತದೆ.
    • ದೇಶದ 2ನೇ ಅತಿದೊಡ್ಡ ಸಹಕಾರಿ ಹಾಲು ಒಕ್ಕೂಟ:- ಹಾಲು ಖರೀದಿ ಮತ್ತು ಮಾರಾಟದ ದೃಷ್ಟಿಯಿಂದ ಇದು ದಕ್ಷಿಣ ಭಾರತದ ಅತಿದೊಡ್ಡ ಸಹಕಾರಿ ಹಾಲು ಒಕ್ಕೂಟವಾಗಿದ್ದು, ದೇಶದಲ್ಲೇ 2ನೇ ಅತಿದೊಡ್ಡ ಸಹಕಾರಿ ಹಾಲು ಒಕ್ಕೂಟವಾಗಿದೆ.
    • ಸ್ಥಾಪನೆ:- ದೇಶದ ಮೊದಲ ವಿಶ್ವಬ್ಯಾಂಕ್ ಅನುದಾನಿತ “ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮ”ದ ಭಾಗವಾಗಿ 1974 ರಲ್ಲಿ ಗ್ರಾಮ ಮಟ್ಟದ ಹಾಲು ಸಹಕಾರ ಸಂಘಗಳ ಸಂಘಟನೆಯಾಗಿ ಪ್ರಾರಂಭವಾಯಿತು.
    • ಧ್ಯೇಯೋದ್ದೇಶ:- ಹೈನುಗಾರಿಕೆ ಅಭಿವೃದ್ಧಿಯ ಮೂಲಕ ಗ್ರಾಮೀಣ ಸಮೃದ್ಧಿಯನ್ನು ತರುವುದೇ ಇದರ ಪ್ರಮುಖ ಗುರಿ.
    • ಧ್ಯೇಯವಾಕ್ಯ:- “ಹಸುವಿನಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಕೃಷ್ಟತೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೆಎಂಎಫ್, “ಆರೋಗ್ಯ ಸಂಪತ್ತನ್ನು” ಹರಡುವ ಗುರಿ ಹೊಂದಿದೆ.
    • ವ್ಯಾಪಿಸಿರುವ ಜಾಲ:- ಈ ಒಕ್ಕೂಟವು 13 ಜಿಲ್ಲಾ ಸಹಕಾರಿ ಹಾಲು ಸಂಘಗಳು, 10,500ಕ್ಕೂ ಹೆಚ್ಚು ಹಾಲು ಸಹಕಾರಿ ಸಂಘಗಳು ಮತ್ತು 20 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬೃಹತ್ ಜಾಲವನ್ನು ಒಳಗೊಂಡಿದೆ.
  • ಸಂವಿಧಾನ ದಿನ | ಡಾ. ವರ್ಗೀಸ್ ಕುರಿಯನ್

    ಸಂವಿಧಾನ ದಿನ

    ಸಾಮಾನ್ಯ ಅಧ್ಯಯನ-2/ ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ‘ಸಂವಿಧಾನ ದಿನ’ವನ್ನಾಗಿ ಆಚರಿಸಲಾಗುತ್ತದೆ.

    ಸಂವಿಧಾನ ದಿನ (ಸಂವಿಧಾನ್ ದಿವಸ್ / ರಾಷ್ಟ್ರೀಯ ಕಾನೂನು ದಿನ) ದ ಬಗ್ಗೆ:

    • ಅಧಿಸೂಚನೆ:- 2015 ರಲ್ಲಿ, ಭಾರತ ಸರ್ಕಾರವು ಪ್ರತಿ ವರ್ಷ ನವೆಂಬರ್ 26 ಅನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸುವ ನಿರ್ಧಾರವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಅಧಿಕೃತವಾಗಿ ಪ್ರಕಟಿಸಿತು.
    • ಗೌರವ ಸಲ್ಲಿಕೆ:- ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

    ಐತಿಹಾಸಿಕ ಹಿನ್ನೆಲೆ:

    • 1934ರಲ್ಲಿ ಭಾರತಕ್ಕೆ ಪ್ರತ್ಯೇಕ “ಸಂವಿಧಾನ ರಚನಾ ಸಭೆ”ಯ ಅಗತ್ಯವಿದೆ ಎಂಬ ಬೇಡಿಕೆಯನ್ನು ಮೊದಲ ಬಾರಿಗೆ ಎಂ.ಎನ್. ರಾಯ್ ಅವರು ಮಂಡಿಸಿದರು.
    • 1940ರಲ್ಲಿ ಈ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರವು ಅಂತಿಮವಾಗಿ ಅಂಗೀಕರಿಸಿತು.
    • ಡಿಸೆಂಬರ್ 9, 1946ರಂದು ಸಂವಿಧಾನದ ಕರಡು ಕುರಿತು ಚರ್ಚಿಸಲು ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು.
    • ನವೆಂಬರ್ 26, 1949ರಂದು ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿತು.
    • ಜನವರಿ 26, 1950ರಂದು ಭಾರತದ ಸಂವಿಧಾನವು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿತು.

    ಸಂವಿಧಾನ ರಚನಾ ಸಭೆಯ ಪ್ರಮುಖಾಂಶಗಳು:

    • ಅವಧಿ:- ಭಾರತದ ಸಂವಿಧಾನವನ್ನು ಸಿದ್ಧಪಡಿಸಲು ಸಂವಿಧಾನ ರಚನಾ ಸಭೆಯು ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.
    • ಅಧ್ಯಕ್ಷರು:-
      • ಸಂವಿಧಾನ ರಚನಾ ಸಭೆಯ ಮೊದಲ (ತಾತ್ಕಾಲಿಕ) ಅಧ್ಯಕ್ಷರಾಗಿ ಡಾ. ಸಚ್ಚಿದಾನಂದ ಸಿನ್ಹಾ ನೇಮಕಗೊಂಡಿದ್ದರು.
      • ನಂತರ ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷರಾಗಿ ಆಯ್ಕೆಯಾದರು.
    • ಧ್ಯೇಯೋದ್ದೇಶಗಳ ನಿರ್ಣಯ:- ಪ್ರಧಾನಿ ಜವಾಹರಲಾಲ್ ನೆಹರು ಅವರು ಡಿಸೆಂಬರ್ 13, 1946 ರಂದು ‘ಧ್ಯೇಯೋದ್ದೇಶಗಳ ನಿರ್ಣಯ’ವನ್ನು ಮಂಡಿಸಿದರು. ಇದನ್ನು ನಂತರ ಜನವರಿ 22, 1947 ರಂದು ಸಂವಿಧಾನದ ಪೀಠಿಕೆಯಾಗಿ ಅಂಗೀಕರಿಸಲಾಯಿತು.
    • ತಾತ್ಕಾಲಿಕ ಶಾಸಕಾಂಗ:- ಹೊಸ ಶಾಸಕಾಂಗವು ರಚನೆಯಾಗುವವರೆಗೆ ಸಂವಿಧಾನ ರಚನಾ ಸಭೆಯು ದೇಶದ ತಾತ್ಕಾಲಿಕ ಶಾಸಕಾಂಗವಾಗಿ ಕಾರ್ಯನಿರ್ವಹಿಸಿತು.

    ಭಾರತದ ಸಂವಿಧಾನದ ಕಿರು ಪರಿಚಯ:

    • ವಿಶ್ವದ ಅತಿ ಉದ್ದವಾದ ಲಿಖಿತ ಸಂವಿಧಾನ:- ಪ್ರಸ್ತುತ 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಒಳಗೊಂಡಿದೆ.
    • ಸಂಪೂರ್ಣವಾಗಿ ಕೈಬರಹದ ಮೂಲಕವೇ ಸಿದ್ಧಪಡಿಸಲಾಗಿದೆ:- ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಂಪೂರ್ಣವಾಗಿ ಕೈಬರಹದ ಮೂಲಕವೇ (ಹಸ್ತಪ್ರತಿ) ಸಿದ್ಧಪಡಿಸಲಾಗಿದ್ದು, ಸಂಸತ್ತಿನ ಗ್ರಂಥಾಲಯದಲ್ಲಿರುವ ಹೀಲಿಯಂ ಅನಿಲ ತುಂಬಿದ ವಿಶೇಷ ಪೆಟ್ಟಿಗೆಯಲ್ಲಿ ಈ ಐತಿಹಾಸಿಕ ದಾಖಲೆಯನ್ನು ಇಂದಿಗೂ ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿದೆ.
    • ಕಲಾತ್ಮಕವಾಗಿ ವಿನ್ಯಾಸ:- ಆಚಾರ್ಯ ನಂದಲಾಲ್ ಬೋಸ್ ಅವರ ಮಾರ್ಗದರ್ಶನದಲ್ಲಿ ಶಾಂತಿನಿಕೇತನದ ಕಲಾವಿದರು ಸಂವಿಧಾನದ ಪ್ರತಿ ಪುಟಗಳನ್ನು ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದಾರೆ.

    ಡಾ. ವರ್ಗೀಸ್ ಕುರಿಯನ್

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ರತಿ ವರ್ಷ ನವೆಂಬರ್ 26 ರಂದು ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆಯನ್ನು ಸ್ಮರಿಸಲಾಗುತ್ತದೆ.

    ಡಾ.ವರ್ಗೀಸ್ ಕುರಿಯನ್ (1921-2012) ಅವರ ಬಗ್ಗೆ:

    • ಶ್ವೇತಕ್ರಾಂತಿಯ ಪಿತಾಮಹ:- ಇವರು ಭಾರತದ ಶ್ವೇತಕ್ರಾಂತಿಯ ಮುಖ್ಯ ರೂವಾರಿಯಾಗಿದ್ದು, ಇವರನ್ನು “ಶ್ವೇತಕ್ರಾಂತಿಯ ಪಿತಾಮಹ” ಎಂದು ಗೌರವಿಸಲಾಗುತ್ತದೆ.
    • ಆಪರೇಷನ್ ಫ್ಲಡ್:- ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಇವರು , 1970 ರಲ್ಲಿ ‘ಆಪರೇಷನ್ ಫ್ಲಡ್’ ನ ನೇತೃತ್ವ ವಹಿಸಿದರು. ಇದರ ಯಶಸ್ಸಿನಿಂದಾಗಿ ಹಾಲಿನ ಕೊರತೆ ಎದುರಿಸುತ್ತಿದ್ದ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿ ಮಾರ್ಪಟ್ಟಿತು.
    • ಆನಂದ್ ಸಹಕಾರಿ ಮಾದರಿ:- ಡಾ. ವರ್ಗೀಸ್ ಕುರಿಯನ್ ಅವರು ಅಮುಲ್ ಮೂಲಕ ಯಶಸ್ವಿಯಾದ ‘ಆನಂದ್ ಸಹಕಾರಿ ಮಾದರಿ’ಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮಾದರಿಯು ದೇಶಾದ್ಯಂತ ಡೈರಿ ಕ್ಷೇತ್ರದ ಅಭಿವೃದ್ಧಿಗೆ ಸಮರ್ಥವಾದ ನೀಲನಕ್ಷೆಯಾಗಿ ಹೊರಹೊಮ್ಮಿತು.
    • ಸಂಸ್ಥೆಗಳ ಸ್ಥಾಪನೆ: ಇವರ ಸಕ್ರಿಯ ಶ್ರಮದಿಂದಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ‘ಆನಂದ್‌’ನಲ್ಲಿರುವ ಗ್ರಾಮೀಣ ನಿರ್ವಹಣಾ ಸಂಸ್ಥೆಯಂತಹ ಪ್ರಮುಖ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.
    • ಖಾದ್ಯ ತೈಲ ಉದ್ಯಮ:- 1979 ರಲ್ಲಿ ‘ಧಾರಾ’ ಬ್ರ್ಯಾಂಡ್ ಅನ್ನು ಪ್ರಾರಂಭಿಸುವ ಮೂಲಕ ಡಾ. ಕುರಿಯನ್ ಅವರು ಖಾದ್ಯ ತೈಲ ಉದ್ಯಮದಲ್ಲೂ ಕ್ರಾಂತಿಕಾರಿ ಬದಲಾವಣೆ ತಂದರು.
    • ಪ್ರಮುಖ ಪ್ರಶಸ್ತಿಗಳು: ಪದ್ಮವಿಭೂಷಣ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
  • ವಿಜ್ ಎಐ ಪಥ(VijAIpatha) ಪ್ರಯೋಗಾಲಯ

    ವಿಜ್ ಎಐ ಪಥ(VijAIpatha) ಪ್ರಯೋಗಾಲಯ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಹೊಸಪೇಟೆಯಲ್ಲಿ ‘ವಿಜ್ ಎಐ ಪಥ’ (VijAIpatha) ಎಂಬ ಪ್ರಾಯೋಗಿಕ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಉಪಕ್ರಮಕ್ಕೆ ಚಾಲನೆ ನೀಡಿದರು.

    ‘ವಿಜ್ ಎಐ ಪಥ’ ಪ್ರಯೋಗಾಲಯಗಳ ಬಗ್ಗೆ:

    • ಗುರಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI), ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM), ರೋಬೋಟಿಕ್ಸ್, ಕೋಡಿಂಗ್ ಮತ್ತು ಡಿಜಿಟಲ್ ನಾವೀನ್ಯತೆಗಳಲ್ಲಿ ಭವಿಷ್ಯಕ್ಕೆ ಪೂರಕವಾಗುವ ಕೌಶಲಗಳನ್ನು ಒದಗಿಸುವುದು.
    • ಅನುಷ್ಠಾನ: ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ‘ಸೈಯಂಟ್ ಫೌಂಡೇಶನ್’ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಅಮರಾವತಿಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಈ ಉಪಕ್ರಮವನ್ನು ಉದ್ಘಾಟಿಸಲಾಯಿತು.
    • ಪ್ರಯೋಜನೆಗಳು: ‘ವಿಜ್ ಎಐ ಪಥ’ ದಂತಹ ಕಾರ್ಯಕ್ರಮಗಳು ಡಿಜಿಟಲ್ ಕಂದಕವನ್ನು ಹೋಗಲಾಡಿಸಲು ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಿದ್ಧಪಡಿಸಲು ಸಹಾಯ ಮಾಡುತ್ತವೆ.
  • “ಸಂಪರ್ಕದಿಂದ ದೂರವಿರುವ ಹಕ್ಕಿನ” ಕುರಿತಾದ ಖಾಸಗಿ ಸದಸ್ಯರ ಮಸೂದೆ | ವಿಕಸಿತ ಭಾರತ ಶಿಕ್ಷಾ ಅಧೀಕ್ಷಣ ಮಸೂದೆ

    “ಸಂಪರ್ಕದಿಂದ ದೂರವಿರುವ ಹಕ್ಕಿನ” ಕುರಿತಾದ ಖಾಸಗಿ ಸದಸ್ಯರ ಮಸೂದೆ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • “ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ, 2025” ಎಂಬ ಖಾಸಗಿ ಸದಸ್ಯರ ಮಸೂದೆಯನ್ನು ಲೋಕಸಭೆಯಲ್ಲಿ ಮರುಮಂಡಿಸಲಾಗಿದೆ.

    ಸಂಪರ್ಕದಿಂದ ದೂರವಿರುವ ಹಕ್ಕಿನ ಬಗ್ಗೆ:

    • “ಸಂಪರ್ಕದಿಂದ ದೂರವಿರುವ ಹಕ್ಕು” ಎನ್ನುವುದು ನೌಕರರು ಅಧಿಕೃತ ಕೆಲಸದ ಅವಧಿಯ ನಂತರ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಇಮೇಲ್‌ಗಳು ಅಥವಾ ಸಂದೇಶಗಳಂತಹ ಸಂವಹನಗಳಲ್ಲಿ ತೊಡಗಿಸಿಕೊಳ್ಳದಿರುವ ಹಕ್ಕನ್ನು ಸೂಚಿಸುತ್ತದೆ.
    • ಇದು ಅತಿಯಾದ ಡಿಜಿಟಲ್ ಸಂಪರ್ಕದಿಂದ ಕಾರ್ಮಿಕರನ್ನು ರಕ್ಷಿಸುವ ಮತ್ತು ಆರೋಗ್ಯಕರ ‘ಕೆಲಸ ಮತ್ತು ಜೀವನ ಸಮತೋಲನ’ವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.

    ಮಸೂದೆಯ ಪ್ರಮುಖ ಲಕ್ಷಣಗಳು:

    • ಈ ಕರಡು ಮಸೂದೆಯು ನಿಗದಿತ ಕೆಲಸದ ಅವಧಿಯ ಹೊರತಾಗಿ ಬರುವ ಅಧಿಕೃತ ಸಂವಹನಗಳನ್ನು ಯಾವುದೇ ಶಿಸ್ತು ಕ್ರಮದ ಭೀತಿಯಿಲ್ಲದೆ ನಿರ್ಲಕ್ಷಿಸುವ ಕಾನೂನುಬದ್ಧ ಹಕ್ಕನ್ನು ಕಾರ್ಮಿಕರಿಗೆ ನೀಡಲು ಉದ್ದೇಶಿಸಿದೆ.
    • ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಎದುರಿಸುವ ಭೀತಿಯಿಲ್ಲದೆ ಕೆಲಸದ ಅವಧಿಯ ನಂತರದ ಕರೆಗಳು, ಸಂದೇಶಗಳು ಮತ್ತು ಇಮೇಲ್‌ಗಳನ್ನು ನಿರಾಕರಿಸುವ ಹಕ್ಕನ್ನು ಇದು ಒಳಗೊಂಡಿದೆ.
    • ಉದ್ಯೋಗಿಗಳ ಕಲ್ಯಾಣ ಪ್ರಾಧಿಕಾರ:- ಸಂಪರ್ಕದಿಂದ ದೂರವಿರುವ ಹಕ್ಕನ್ನು ಅನುಷ್ಠಾನಗೊಳಿಸಲು ಮತ್ತು ಅದರ ಮೇಲ್ವಿಚಾರಣೆ ನಡೆಸಲು ‘ಉದ್ಯೋಗಿಗಳ ಕಲ್ಯಾಣ ಪ್ರಾಧಿಕಾರ’ವನ್ನು ಸ್ಥಾಪಿಸುವುದು.
    • ಕೆಲಸದ ಅವಧಿಯ ಹೊರತಾಗಿ ಉದ್ಯೋಗಿಗಳ ಮೇಲಿರುವ ಡಿಜಿಟಲ್ ಸಂವಹನದ ಹೊರೆಯನ್ನು ಮೌಲ್ಯಮಾಪನ ಮಾಡಲು ರಾಷ್ಟ್ರೀಯ ಮಟ್ಟದ ಮೂಲಭೂತ ಅಧ್ಯಯನವನ್ನು ನಡೆಸುವುದು.

    ವಿಕಸಿತ ಭಾರತ ಶಿಕ್ಷಾ ಅಧೀಕ್ಷಣ ಮಸೂದೆ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಸಚಿವ ಸಂಪುಟವು ‘ವಿಕಸಿತ ಭಾರತ ಶಿಕ್ಷಾ ಅಧೀಕ್ಷಣ ಮಸೂದೆ’ಗೆ ಇತ್ತೀಚೆಗೆ ಅನುಮೋದನೆಯನ್ನು ನೀಡಿದೆ.

    ವಿಕಸಿತ ಭಾರತ ಶಿಕ್ಷಾ ಅಧೀಕ್ಷಣ ಮಸೂದೆಯ ಬಗ್ಗೆ:

    • ‘ಏಕೀಕೃತ ನಿಯಂತ್ರಕ’ ಪ್ರಾಧಿಕಾರ:- ಈ ಮಸೂದೆಯು ಉನ್ನತ ಶಿಕ್ಷಣಕ್ಕಾಗಿ ‘ಏಕೀಕೃತ ನಿಯಂತ್ರಕ’ ಪ್ರಾಧಿಕಾರವನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತದೆ. ಇದು ಪ್ರಸ್ತುತ ಅಸ್ತಿತ್ವದಲ್ಲಿರುವ ಶಾಸನಬದ್ಧ ಸಂಸ್ಥೆಗಳಾದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCTE) ಗಳನ್ನು ಬದಲಾಯಿಸುತ್ತದೆ.
    • ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಡಳಿತ ಮತ್ತು ಮೇಲ್ವಿಚಾರಣೆಯನ್ನು ಸರಳಗೊಳಿಸುವ ಉದ್ದೇಶದಿಂದ ಏಕೈಕ ನಿಯಂತ್ರಕ ಪ್ರಾಧಿಕಾರವನ್ನು ಹೊಂದುವ ಬಗ್ಗೆ “ರಾಷ್ಟ್ರೀಯ ಶಿಕ್ಷಣ ನೀತಿ, 2020” ನೀಡಿದ ಶಿಫಾರಸುಗಳನ್ನು ಈ ಮಸೂದೆಯು ಅನುಸರಿಸುತ್ತದೆ.

    ಉನ್ನತ ಶಿಕ್ಷಣ ಕ್ಷೇತ್ರದ ಶಾಸನಬದ್ಧ ಸಂಸ್ಥೆಗಳ ಪಾತ್ರ:

    • ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC): ತಾಂತ್ರಿಕೇತರ ಉನ್ನತ ಶಿಕ್ಷಣದ ಮೇಲ್ವಿಚಾರಣೆಯನ್ನು ನಡೆಸುತ್ತದೆ.
    • ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE): ತಾಂತ್ರಿಕ ಉನ್ನತ ಶಿಕ್ಷಣದ ಮೇಲ್ವಿಚಾರಣೆಯನ್ನು ನಡೆಸುತ್ತದೆ.
    • ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCTE): ಇದು ಶಿಕ್ಷಕರ ಶಿಕ್ಷಣದ ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
  • ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳು (MHUs)

    ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳು (MHUs)

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 81 ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳಿಗೆ (MHUs) ಚಾಲನೆ ನೀಡಿದ್ದಾರೆ.

    ‘ಆರೋಗ್ಯ ಸೇತು’ ಸಂಚಾರಿ ಆರೋಗ್ಯ ಘಟಕಗಳ ಬಗ್ಗೆ:

    • ಗುರಿ:- ಕರ್ನಾಟಕದ ದೂರದ, ತಲುಪಲು ಅಸಾಧ್ಯವಾದ, ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ. 
    • ಇಲ್ಲಿಯವರೆಗೆ ಔಪಚಾರಿಕ ಆರೋಗ್ಯ ವ್ಯವಸ್ಥೆಯ ಹೊರಗೆ ಉಳಿದಿದ್ದ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸೇವೆಗಳು ತಲುಪುವಂತೆ ಮಾಡಲು ಈ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು.
    • ವ್ಯಾಪ್ತಿ:- “ಅತಿದೂರದ ಗ್ರಾಮಗಳಿಗೂ ಆರೋಗ್ಯ ಸೇವೆ” ಎಂಬ ಧ್ಯೇಯವಾಕ್ಯದಡಿ ಪ್ರಾರಂಭಿಸಲಾದ ಈ ಸಂಚಾರಿ ಘಟಕಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 32 ಮೀಸಲು ಕ್ಷೇತ್ರಗಳು ಸೇರಿದಂತೆ, ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸಲಿವೆ.
    • ಅನುಷ್ಠಾನ ಮತ್ತು ನಿಧಿ: ಒಟ್ಟು 81 ಘಟಕಗಳ ಪೈಕಿ 49 ಘಟಕಗಳನ್ನು “ರಾಷ್ಟ್ರೀಯ ಆರೋಗ್ಯ ಅಭಿಯಾನ” (NHM)ದ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ಇನ್ನುಳಿದ 32 ಘಟಕಗಳಿಗೆ ರಾಜ್ಯ ಸರ್ಕಾರದ “ಪರಿಶಿಷ್ಟ ಜಾತಿಗಳ ಉಪ-ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ- ಯೋಜನೆ” (SCSP/TSP) ಹಂಚಿಕೆಯಡಿ ಹಣಕಾಸು ಒದಗಿಸಲಾಗುತ್ತಿದೆ.
    • ಸಿಬ್ಬಂದಿ:- ಪ್ರತಿಯೊಂದು ಸಂಚಾರಿ ಆರೋಗ್ಯ ಘಟಕವು ಒಬ್ಬರು ಎಂಬಿಬಿಎಸ್ ವೈದ್ಯರು, ಒಬ್ಬರು ದಾದಿ (ನರ್ಸ್) ಮತ್ತು ಒಬ್ಬರು ಪ್ರಯೋಗಾಲಯ ತಂತ್ರಜ್ಞರನ್ನು ಒಳಗೊಂಡಿರುತ್ತದೆ.
    • ಒದಗಿಸಲಾಗುವ ಸೇವೆಗಳು: ಹೊರರೋಗಿ ಸಮಾಲೋಚನೆ (OPD), ತ್ವರಿತ ರೋಗನಿರ್ಣಯ ಕಿಟ್‌ಗಳ ಮೂಲಕ ಮೂಲಭೂತ ಪರೀಕ್ಷೆಗಳು, ಉಚಿತ ಔಷಧಿಗಳು, ಉಲ್ಲೇಖಿತ ಸೇವೆಗಳು ಮತ್ತು ಸಮುದಾಯ ಆರೋಗ್ಯ ಮೇಲ್ವಿಚಾರಣೆ ಈ ಸೇವೆಯಲ್ಲಿ ಒಳಗೊಂಡಿವೆ.
    • ವಿಕೇಂದ್ರೀಕೃತ ಮೇಲ್ವಿಚಾರಣೆ: ಈ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕೃತ ಮೇಲ್ವಿಚಾರಣೆಯೊಂದಿಗೆ ಜಾರಿಗೆ ತರಲಾಗುತ್ತಿದ್ದು, ಇದು ಸ್ಥಳೀಯ ಅಗತ್ಯ ಮತ್ತು ಭೌಗೋಳಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಆದ್ಯತೆ ನೀಡುತ್ತದೆ.
    • ತುರ್ತು ಬಳಕೆ: ಈ ಘಟಕಗಳನ್ನು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮತ್ತು ವಿಪತ್ತು ನಿರ್ವಹಣೆ ವೇಳೆಯೂ ನಿಯೋಜಿಸಲಾಗುವುದು.
    • ಹಂಚಿಕೆ: ಒಟ್ಟು ಘಟಕಗಳ ಪೈಕಿ 41 ವಾಹನಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ನಿಯೋಜಿಸಲಾಗಿದೆ.
  • ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯುನಿಕ್ ವರ್ಚುವಲ್ ಅಡ್ರೆಸ್ (DHRUVA) | ಟರ್ಕಿಯ “ಸ್ಟೋನ್ ಹಿಲ್ಸ್” ಯೋಜನೆ

    ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯುನಿಕ್ ವರ್ಚುವಲ್ ಅಡ್ರೆಸ್ (DHRUVA)

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಸಂವಹನ ಸಚಿವಾಲಯದ ಅಧೀನದಲ್ಲಿರುವ ಅಂಚೆ ಇಲಾಖೆಯು, ‘ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯುನಿಕ್ ವರ್ಚುವಲ್ ಅಡ್ರೆಸ್’ (DHRUVA) ಎಂಬ ನೂತನ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ.

    ಧ್ರುವ (DHRUVA) ವ್ಯವಸ್ಥೆಯ ಬಗ್ಗೆ:

    • ಇದು ಭೌತಿಕ ಸ್ಥಳಗಳ ಪರ್ಯಾಯ ವಿಳಾಸವಾಗಿ ಕಾರ್ಯನಿರ್ವಹಿಸುವ, ‘name@entity’ ಮಾದರಿಯ ಯುಪಿಐ ವಿಳಾಸಗಳನ್ನೇ ಹೋಲುವ ವರ್ಚುವಲ್ ವಿಳಾಸ ಲೇಬಲ್‌ಗಳನ್ನು ಸೃಷ್ಟಿಸುವ ಒಂದು ರಾಷ್ಟ್ರೀಯ ಚೌಕಟ್ಟಾಗಿದೆ.
    • ಈ ವ್ಯವಸ್ಥೆಯನ್ನು ‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ’ (DPI) ಉಪಕ್ರಮಗಳ ಒಂದು ಭಾಗವಾಗಿ ರೂಪಿಸಲಾಗಿದ್ದು, ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೂ ಇದು ಅವಕಾಶ ಕಲ್ಪಿಸುತ್ತದೆ.

    ಟರ್ಕಿಯ “ಸ್ಟೋನ್ ಹಿಲ್ಸ್” ಯೋಜನೆ

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಟರ್ಕಿಯ ಆಗ್ನೇಯ ಬೆಟ್ಟಗಳ ಪ್ರದೇಶಗಳಲ್ಲಿ ಕೈಗೊಳ್ಳಲಾದ ಪುರಾತತ್ವ ಸಂಶೋಧನೆಗಳು ಸುಮಾರು 11,000 ವರ್ಷಗಳ ಹಿಂದಿನ ಜೀವನಕ್ರಮವನ್ನು ಅನಾವರಣಗೊಳಿಸಿವೆ. ಇದು ಮಾನವ ಇತಿಹಾಸದಲ್ಲಿ ಆರಂಭಿಕ ವಸಾಹತು ಸಮುದಾಯಗಳು ಉದಯಿಸಿದ ಕಾಲಘಟ್ಟವನ್ನು ಪ್ರತಿಬಿಂಬಿಸುತ್ತದೆ.

    “ಸ್ಟೋನ್ ಹಿಲ್ಸ್” (ಶಿಲಾ ಬೆಟ್ಟಗಳ) ಯೋಜನೆಯ ಬಗ್ಗೆ:

    • ಪ್ರಾರಂಭ:- ಈ ಯೋಜನೆಯನ್ನು 2020 ರಲ್ಲಿ ಪ್ರಾರಂಭಿಸಲಾಯಿತು. 
    • ಒಳಗೊಳ್ಳುವಿಕೆ:- ಇದು ವಿಶ್ವದ ‘ನವಶಿಲಾಯುಗದ ರಾಜಧಾನಿ’ ಎಂದು ಕರೆಯಲ್ಪಟ್ಟ “ಸಾನ್ಲಿಯುರ್ಫಾ ಪ್ರಾಂತ್ಯ”ದ 12 ತಾಣಗಳನ್ನು ಒಳಗೊಂಡಿದೆ.
    • ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ “ಗೋಬೆಕ್ಲಿ ಟೆಪೆ”ಯನ್ನು ಒಳಗೊಂಡಿದೆ. ಇದು ಉತ್ತರ ಮೆಸೊಪಟೇಮಯಾದಲ್ಲಿ ಪತ್ತೆಯಾದ ಅತ್ಯಂತ ಹಳೆಯ ಬೃಹತ್ ಶಿಲಾಯುಗದ ರಚನೆಯಾಗಿದೆ.
    • ಭಾರತದಲ್ಲಿ ನವಶಿಲಾಯುಗದ ವಸಾಹತುಗಳು:- ವಾಯುವ್ಯ ಭಾಗ (ಕಾಶ್ಮೀರ), ದಕ್ಷಿಣ ಭಾಗ (ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ), ಈಶಾನ್ಯ ಭಾಗ (ಮೇಘಾಲಯ) ಮತ್ತು ಪೂರ್ವ ಭಾಗಗಳಲ್ಲಿ (ಬಿಹಾರ ಮತ್ತು ಒಡಿಶಾ) ಕಂಡುಬಂದಿವೆ.
    • ಭಾರತದ ಕೆಲವು ಪ್ರಮುಖ ನವಶಿಲಾಯುಗದ ನೆಲೆಗಳೆಂದರೆ:- ಬುರ್ಜಾಹೋಮ್ (ಕಾಶ್ಮೀರ), ಗುಫ್ಕ್ರಾಲ್ (ಕಾಶ್ಮೀರ), ಚಿರಾಂಡ್ (ಬಿಹಾರ) ಮತ್ತು ಉತನೂರು (ಆಂಧ್ರಪ್ರದೇಶ).

    ಶಿಲಾಯುಗದ ಬಗ್ಗೆ:

    • ಇದು ಶಿಲಾ ಉಪಕರಣಗಳ ಬಳಕೆಯಿಂದ ಗುರುತಿಸಲ್ಪಟ್ಟ ಇತಿಹಾಸಪೂರ್ವ ಕಾಲವಾಗಿದ್ದು, ಇದನ್ನು ಮೂರು ಪ್ರಮುಖ ಕಾಲಘಟ್ಟಗಳಾಗಿ ವಿಂಗಡಿಸಲಾಗಿದೆ: 
    • ಹಳೆಯ (ಪ್ರಾಚೀನ) ಶಿಲಾಯುಗ
    • ಮಧ್ಯ ಶಿಲಾಯುಗ 
    • ನವಶಿಲಾಯುಗ
    1. ಹಳೆಯ (ಪ್ರಾಚೀನ) ಶಿಲಾಯುಗ: ಬೇಟೆಗಾರರು ಮತ್ತು ಆಹಾರ ಸಂಗ್ರಹಕಾರರು
    • ಇದು ಸುಮಾರು 26 ಲಕ್ಷ ವರ್ಷಗಳ ಹಿಂದೆ ಪ್ರಾರಂಭವಾಗಿ ಕ್ರಿ.ಪೂ. 10,000 ರವರೆಗೆ ಮುಂದುವರಿಯಿತು.
    • ಈ ಕಾಲದ ಮಾನವರು ಬೇಟೆಗಾರರು ಮತ್ತು ಆಹಾರ ಸಂಗ್ರಹಕಾರರಾಗಿದ್ದರು. ಇವರು ಬೇಟೆ, ಮಾಂಸ ಕತ್ತರಿಸುವುದು ಮತ್ತು ಆಹಾರ ಸಂಸ್ಕರಣೆಗಾಗಿ ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದರು.
    1. ಮಧ್ಯ ಶಿಲಾಯುಗ: ಸಸ್ಯ ಹಾಗೂ ಪ್ರಾಣಿಗಳ ಸಾಕಾಣಿಕೆ
    • ಈ ಕಾಲಘಟ್ಟವು ಕ್ರಿ.ಪೂ. 10,000 ರಿಂದ ಕ್ರಿ.ಪೂ. 5,000 ರ ನಡುವೆ ಸಂಭವಿಸಿದೆ (ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ).
    • ಇದು ವಿಶಿಷ್ಟವಾದ ಸೂಕ್ಷ್ಮ ಶಿಲಾ ಉಪಕರಣಗಳ ಬಳಕೆ, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವಿಕೆ ಮತ್ತು ಸಸ್ಯ ಹಾಗೂ ಪ್ರಾಣಿಗಳ ಆರಂಭಿಕ ಸಾಕಾಣಿಕೆ/ ಪಳಗಿಸುವಿಕೆಯಿಂದ ಗುರುತಿಸಲ್ಪಟ್ಟಿದೆ.
    1. ನವಶಿಲಾಯುಗ: ಸ್ಥಿರ ಸಮುದಾಯಗಳಾಗಿ ನೆಲೆಸುವಿಕೆ
    • ಇದು ಸುಮಾರು ಕ್ರಿ.ಪೂ. 12,000 ವರ್ಷಗಳ ಹಿಂದೆ ಪ್ರಾರಂಭವಾಗಿ ಕ್ರಿ.ಪೂ. 4500 ರಿಂದ ಕ್ರಿ.ಪೂ. 2000 ರ ನಡುವಿನ ಅವಧಿಯಲ್ಲಿ ಕೊನೆಗೊಂಡಿತು.
    • ಕೃಷಿ ಪದ್ಧತಿಯ ಅಳವಡಿಕೆ, ಪ್ರಾಣಿಗಳ ಸಾಕಣೆ ಮತ್ತು ಸ್ಥಿರ ಸಮುದಾಯಗಳಾಗಿ ನೆಲೆಸುವಿಕೆಯು ಈ ಯುಗದ ಪ್ರಮುಖ ಲಕ್ಷಣಗಳಾಗಿವೆ.
    • ಇದು ಕುಂಬಾರಿಕೆ, ನೇಯ್ಗೆ ಮತ್ತು ಜಟಿಲ ಸಾಮಾಜಿಕ ರಚನೆಗಳ ಅಭಿವೃದ್ಧಿಗೆ ನಾಂದಿ ಹಾಡಿತು.
    • ಕೃಷಿಯು ಮಾನವ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು ಮತ್ತು ನಾಗರಿಕತೆಗಳ ಉದಯಕ್ಕೆ ದಾರಿ ಮಾಡಿಕೊಟ್ಟಿತು.
  • ತುಂಗಭದ್ರಾ ಅಣೆಕಟ್ಟು

    ತುಂಗಭದ್ರಾ ಅಣೆಕಟ್ಟು

    ಇದೀಗ ಸುದ್ದಿಯಲ್ಲಿದೆ:

    • ತುಂಗಭದ್ರ ಅಣೆಕಟ್ಟಿಗೆ ಹೊಸ ಕ್ರೆಸ್ಟ್ ಗೇಟ್‌ಗಳನ್ನು ಜೂನ್ ವೇಳೆಗೆ ಸ್ಥಾಪಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
    • ಡಿಸೆಂಬರ್ ಅಂತ್ಯದ ವೇಳೆಗೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟವು 1,613 ಅಡಿಗಳಿಗೆ ಇಳಿಕೆಯಾದ ನಂತರ, ಹೊಸ ಕ್ರೆಸ್ಟ್ ಗೇಟ್‌ಗಳ ಅಳವಡಿಕೆ ಕಾಮಗಾರಿ ಆರಂಭಿಸಲಾಗುವುದು ಮತ್ತು ಇದನ್ನು ಜೂನ್ 2026ರ ವೇಳೆಗೆ ಪೂರ್ಣಗೊಳಿಸಲಾಗುವುದು.

    ತುಂಗಭದ್ರಾ ಅಣೆಕಟ್ಟಿನ ಕುರಿತು:

    • ಸ್ಥಳ:- ಈ ಅಣೆಕಟ್ಟನ್ನು ಕರ್ನಾಟಕದ ಹೊಸಪೇಟೆ ಮತ್ತು ಕೊಪ್ಪಳದ ಸಂಗಮದಲ್ಲಿ ತುಂಗಭದ್ರಾ ನದಿಗೆ (ಕೃಷ್ಣಾ ನದಿಯ ಉಪನದಿ) ಅಡ್ಡಲಾಗಿ ನಿರ್ಮಿಸಲಾಗಿದೆ.
    • ಪರ್ಯಾಯ ಹೆಸರು:- ಇದನ್ನು ‘ಪಂಪ ಸಾಗರ’ ಎಂದೂ ಕರೆಯುತ್ತಾರೆ.
    • ಸಂಗ್ರಹಣಾ ಸಾಮರ್ಥ್ಯ:- ತುಂಗಭದ್ರಾ ಜಲಾಶಯವು 101 ಟಿಎಂಸಿ (TMC – ಸಾವಿರ ಮಿಲಿಯನ್ ಘನ ಅಡಿಗಳು) ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.
    • ಜಲಾನಯನ ಪ್ರದೇಶ:- 28,000 ಚದರ ಕಿಲೋಮೀಟರ್‌ಗಳಷ್ಟು ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಅಣೆಕಟ್ಟು ಸುಮಾರು 49.5 ಮೀಟರ್ ಎತ್ತರವಿದೆ.
    • ಉದ್ದೇಶ:- ಇದು ನೀರಾವರಿ, ಜಲವಿದ್ಯುತ್ ಉತ್ಪಾದನೆ ಮತ್ತು ಪ್ರವಾಹ ನಿಯಂತ್ರಣದ ಉದ್ದೇಶಗಳನ್ನು ಪೂರೈಸುವ ಬಹು ಉದ್ದೇಶಗಳ ಜಲಾಶಯವಾಗಿದೆ.
    • ರಚನಾತ್ಮಕ ಸಂಯೋಜನೆ:- ಇದು ಭಾರತದ ಅತಿದೊಡ್ಡ ಕಲ್ಲಿನ ಕಟ್ಟಡದ ಅಣೆಕಟ್ಟು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
  • ಶ್ಯೋಕ್ ಸುರಂಗಮಾರ್ಗ (Shyok Tunnel) | ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (BRO) | ರೆಲೋಸ್ (RELOS) ಒಪ್ಪಂದ

    ಶ್ಯೋಕ್ ಸುರಂಗಮಾರ್ಗ (Shyok Tunnel)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ರಕ್ಷಣಾ ಸಚಿವರು ಪೂರ್ವ ಲಡಾಖ್‌ನಲ್ಲಿ “ಶ್ಯೋಕ್ ಸುರಂಗಮಾರ್ಗ” ಹಾಗೂ ಗಡಿ ಭಾಗದ ಇತರ 124 ಕಾರ್ಯತಂತ್ರದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು.

    ಶ್ಯೋಕ್ ಸುರಂಗಮಾರ್ಗದ ಬಗ್ಗೆ:

    • ಇದು 920 ಮೀಟರ್ ಉದ್ದದ ‘ಕಟ್-ಅಂಡ್-ಕವರ್’ (ಮುಚ್ಚಿದ) ಮಾದರಿಯ ಸುರಂಗಮಾರ್ಗವಾಗಿದೆ.
    • ಭಾರತ ಮತ್ತು ಚೀನಾ ನಡುವೆ ಸೇನಾ ಬಿಕ್ಕಟ್ಟು ಏರ್ಪಟ್ಟಿರುವ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (LAC) ಸಮೀಪದ ಪ್ರದೇಶಗಳಿಗೆ ಇದು ಸರ್ವಕಾಲಿಕ ಸಂಪರ್ಕವನ್ನು ಕಲ್ಪಿಸುತ್ತದೆ.
    • ಮಹತ್ವ:- ಈ ಸುರಂಗಮಾರ್ಗವು ವಾಯು ಮಾರ್ಗದ ನಿರ್ವಹಣೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಮತ್ತು ಕಠಿಣ ಭೂಪ್ರದೇಶಗಳಲ್ಲಿನ ಸಾರಿಗೆ ಹಾಗೂ ಸರಬರಾಜು ಸವಾಲುಗಳನ್ನು ಪರಿಹರಿಸುತ್ತದೆ.
    • ವಿಶೇಷತೆ:- ವಿಶ್ವದ ಅತ್ಯಂತ ಕಠಿಣ ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ಒಂದಾದ ಈ ಭಾಗದಲ್ಲಿ ಸುರಂಗಮಾರ್ಗವನ್ನು ನಿರ್ಮಿಸಿರುವುದು ಇದರ ವಿಶೇಷವಾಗಿದೆ.

    ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (BRO)

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಗಡಿಗಳ ಮೂಲಸೌಕರ್ಯ ಬಲವರ್ಧನೆಯ ಪ್ರಮುಖ ಕ್ರಮವಾಗಿ, ರಕ್ಷಣಾ ಸಚಿವರು ಲಡಾಖ್, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ಏಳು ರಾಜ್ಯಗಳಲ್ಲಿ ₹5,000 ಕೋಟಿ ವೆಚ್ಚದ ‘ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ’ (BRO) ನಿರ್ಮಿತ ರಸ್ತೆಗಳು, ಸೇತುವೆಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಲೋಕಾರ್ಪಣೆಗೊಳಿಸಿದರು.

    ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (BRO)ಯ ಬಗ್ಗೆ:

    • ಸ್ಥಾಪನೆ:- ಇದನ್ನು 1960 ರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರು ಸ್ಥಾಪಿಸಿದರು.
    • ಉದ್ದೇಶ:- ದೇಶದ ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶಗಳಲ್ಲಿ ಸಮರ್ಪಕ ರಸ್ತೆ ಸಂವಹನ ಜಾಲದ ತ್ವರಿತ ಅಭಿವೃದ್ಧಿಯನ್ನು ಸಮನ್ವಯಗೊಳಿಸುವುದು.
    • ಆಡಳಿತಾತ್ಮಕ ನಿಯಂತ್ರಣ:- ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಮಹತ್ವ:- ಮೂಲಸೌಕರ್ಯಗಳ ಬದ್ಧ, ಸಮರ್ಪಿತ ಮತ್ತು ವೆಚ್ಚ-ಪರಿಣಾಮಕಾರಿ ಅಭಿವೃದ್ಧಿ ಹಾಗೂ ನಿರ್ವಹಣೆಯ ಮೂಲಕ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಅಗತ್ಯಗಳನ್ನು ಪೂರೈಸುವುದು.
    • ಕಾರ್ಯವಿಧಾನ:- ಇದು ಗಡಿ ರಸ್ತೆ ಕಾರ್ಯಪಡೆಗಳು (BRTFs) ಮತ್ತು ವಿವಿಧ ಯೋಜನೆಗಳ ಮೂಲಕ (ಉದಾಹರಣೆಗೆ: ಪ್ರಾಜೆಕ್ಟ್ ಹಿಮಾಂಕ್, ಪ್ರಾಜೆಕ್ಟ್ ವಿಜಯಕ್, ಪ್ರಾಜೆಕ್ಟ್ ದಂತಕ್, ಪ್ರಾಜೆಕ್ಟ್ ವರ್ತಕ್, ಪ್ರಾಜೆಕ್ಟ್ ಉದಯಕ್ ಇತ್ಯಾದಿ) ಕಾರ್ಯನಿರ್ವಹಿಸುತ್ತದೆ.

    ರೆಲೋಸ್ (RELOS) ಒಪ್ಪಂದ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ರಷ್ಯಾದ ಸಂಸತ್ತಿನ ಕೆಳಮನೆಯು ಭಾರತದೊಂದಿಗೆ ಮಾಡಿಕೊಂಡಿರುವ “ಪರಸ್ಪರ ಸಾರಿಗೆ ಮತ್ತು ಸರಬರಾಜು ಬೆಂಬಲ ವಿನಿಮಯ (RELOS) ಒಪ್ಪಂದ”ವನ್ನು ಅಧಿಕೃತವಾಗಿ ಅನುಮೋದಿಸಲಾಗಿದೆ.
    • ಭಾರತವು ಈ ಹಿಂದೆ ಅಮೆರಿಕ, ಯುನೈಟೆಡ್ ಕಿಂಗಡೋಮ್, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ದೇಶಗಳೊಂದಿಗೆ ಮಾಡಿಕೊಂಡಿರುವ ಸಾರಿಗೆ ಮತ್ತು ಸರಬರಾಜು ಒಪ್ಪಂದಗಳಂತೆಯೇ ಈ ‘ರೆಲೋಸ್’ ಒಪ್ಪಂದವೂ ಸಹ ಕಾರ್ಯನಿರ್ವಹಿಸುತ್ತದೆ.

    ಭಾರತ-ರಷ್ಯಾ ಪರಸ್ಪರ ಸಾರಿಗೆ ಮತ್ತು ಸರಬರಾಜು ಬೆಂಬಲ ವಿನಿಮಯ (RELOS) ಒಪ್ಪಂದದ ಬಗ್ಗೆ:

    • ಇದೊಂದು ದ್ವಿಪಕ್ಷೀಯ ಸೇನಾ ಸಾರಿಗೆ ಮತ್ತು ಸರಬರಾಜು ಒಪ್ಪಂದವಾಗಿದೆ. 
    • ಇದು ಎರಡೂ ದೇಶಗಳ ಸೇನಾ ವಿಮಾನಗಳು, ಹಡಗುಗಳು ಮತ್ತು ಸಿಬ್ಬಂದಿಗೆ ಪರಸ್ಪರರ ಸೇನಾ ನೆಲೆಗಳನ್ನು ಇಂಧನ ತುಂಬಿಕೆ, ನಿರ್ವಹಣೆ, ಬಿಡಿಭಾಗಗಳ ಪೂರೈಕೆ, ತರಬೇತಿ, ಜಂಟಿ ಸಮರಾಭ್ಯಾಸಗಳು, ಮಾನವೀಯ ಕಾರ್ಯಾಚರಣೆಗಳು ಮತ್ತು ವಿಪತ್ತು ಪರಿಹಾರಕ್ಕಾಗಿ ಬಳಸಲು ಅವಕಾಶ ಕಲ್ಪಿಸುತ್ತದೆ.
    • ಇದು ಕಾಗದದ ಕಾರ್ಯವ್ಯವಹಾರವನ್ನು ಕಡಿಮೆ ಮಾಡುವ ಮೂಲಕ ಸಾರಿಗೆ ಮತ್ತು ಸರಬರಾಜು ಪ್ರಕ್ರಿಯೆಯನ್ನು ಸುಗಮಗೊಳಿಸಿ, ತ್ವರಿತ ಬೆಂಬಲವನ್ನು ಖಚಿತಪಡಿಸುತ್ತದೆ ಮತ್ತು ವೆಚ್ಚಗಳ ಹಂತ ಹಂತದ ಸಮನ್ವಯ/ನಿರವಸ್ಥೆಯನ್ನು ಅನುಮತಿಸುತ್ತದೆ.”
  • ರಾಷ್ಟ್ರೀಯ ಗುಪ್ತಚರ ಜಾಲ (NATGRID) | 11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF) | ಸರಸ್ ಆಹಾರ ಮೇಳ, 2025

    ರಾಷ್ಟ್ರೀಯ ಗುಪ್ತಚರ ಜಾಲ (NATGRID)

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್) ಪ್ರತಿ ತಿಂಗಳು ಸುಮಾರು 45,000 ವಿನಂತಿಗಳನ್ನು ಸ್ವೀಕರಿಸುತ್ತಿದ್ದು, ಇದು ಕೇಂದ್ರ ಮತ್ತು ರಾಜ್ಯ ಭದ್ರತಾ ಸಂಸ್ಥೆಗಳಿಂದ ಈ ವ್ಯವಸ್ಥೆಯ ಬಳಕೆಯು ಗಮನಾರ್ಹವಾಗಿ ಏರಿಕೆಯಾಗಿರುವುದನ್ನು ಪ್ರತಿಬಿಂಬಿಸುತ್ತದೆ.

    ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್‌)ದ ಬಗ್ಗೆ:

    • ಇದು 2008ರ 26/11ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಅಭಿವೃದ್ಧಿಪಡಿಸಲಾದ ನೈಜ-ಸಮಯದ ಗುಪ್ತಚರ ಮಾಹಿತಿ ಮತ್ತು ದತ್ತಾಂಶ ಪ್ರವೇಶ ವೇದಿಕೆಯಾಗಿದೆ.
    • ಉದ್ದೇಶ:- ವಿವಿಧ ಭದ್ರತಾ ಮತ್ತು ತನಿಖಾ ಸಂಸ್ಥೆಗಳ ನಡುವೆ ತಡೆರಹಿತ ಮಾಹಿತಿ ಹಂಚಿಕೆಯನ್ನು ಸುಗಮಗೊಳಿಸುವುದು.
    • ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ದತ್ತಾಂಶಗಳ ಕ್ರೂಢೀಕರಣ:- ಇದು ಬ್ಯಾಂಕ್ ವಹಿವಾಟುಗಳು, ಟೆಲಿಕಾಂ ಬಳಕೆ, ಪಾಸ್‌ಪೋರ್ಟ್/ವಲಸೆ ದಾಖಲೆಗಳು, ತೆರಿಗೆ ಗುರುತಿನ ಸಂಖ್ಯೆಗಳು (PAN), ಪೊಲೀಸ್ ಪ್ರಥಮ ಮಾಹಿತಿ ವರದಿಗಳು (CCTNS/FIRs) ಮತ್ತು ಇತರ ಇ-ಆಡಳಿತ ಮೂಲಗಳನ್ನೊಳಗೊಂಡ 20ಕ್ಕೂ ಹೆಚ್ಚು ವಿಭಾಗಗಳ ನಾಗರಿಕ ಹಾಗೂ ವಾಣಿಜ್ಯ ದತ್ತಾಂಶಗಳನ್ನು ಕ್ರೂಢೀಕರಿಸುತ್ತದೆ.
    • ದತ್ತಾಂಶ ಪ್ರವೇಶಾವಕಾಶ:- ಆರಂಭದಲ್ಲಿ ಪ್ರವೇಶವನ್ನು 
    1. ಗುಪ್ತಚರ ಕಚೇರಿ (IB), 
    2. ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW), 
    3. ರಾಷ್ಟ್ರೀಯ ತನಿಖಾ ಸಂಸ್ಥೆ (NIA), 
    4. ಜಾರಿ ನಿರ್ದೇಶನಾಲಯ (ED), 
    5. ಹಣಕಾಸು ಗುಪ್ತಚರ ಘಟಕ (FIU), 
    6. ಮಾದಕ ದ್ರವ್ಯ ನಿಯಂತ್ರಣ ಕಚೇರಿ (NCB),
    7. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮುಂತಾದ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು.
    • ಪ್ರಸ್ತುತ, ನ್ಯಾಟ್‌ಗ್ರಿಡ್ ದತ್ತಾಂಶಗಳ ಪ್ರವೇಶಾವಕಾಶವನ್ನು ಪೊಲೀಸ್ ಅಧೀಕ್ಷಕರ (SP) ಶ್ರೇಣಿಯ ಅಧಿಕಾರಿಗಳಿಗೂ ವಿಸ್ತರಿಸಲಾಗಿದೆ.

    ನ್ಯಾಟ್‌ಗ್ರಿಡ್‌ನ ಮಹತ್ವ:

    • ಭಯೋತ್ಪಾದನಾ ನಿಗ್ರಹ:- ವ್ಯಕ್ತಿಗಳ ಪ್ರಯಾಣದ ಮಾದರಿ, ಹಣಕಾಸು ವಹಿವಾಟು, ಟೆಲಿಕಾಂ ದತ್ತಾಂಶ ಮತ್ತು ಸಾಮಾಜಿಕ ಸಂಪರ್ಕಗಳನ್ನು ಪರಸ್ಪರ ವಿಶ್ಲೇಷಿಸುವ ಮೂಲಕ ಭಯೋತ್ಪಾದಕ ಜಾಲಗಳನ್ನು ಪತ್ತೆಹಚ್ಚುವ ಹಾಗೂ ಹತ್ತಿಕ್ಕುವ ಸಾಮರ್ಥ್ಯವನ್ನು ನ್ಯಾಟ್‌ಗ್ರಿಡ್ ವೃದ್ಧಿಸುತ್ತದೆ.
    • ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಸುಧಾರಣೆ: ಸಂಘಟಿತ ಅಪರಾಧ, ಮಾದಕ ದ್ರವ್ಯ ಜಾಲಗಳು, ಮಾನವ ಅಕ್ರಮ ಸಾಗಣೆ, ಸೈಬರ್ ಅಪರಾಧ, ನಕಲಿ ನೋಟಿನ ಜಾಲ ಮತ್ತು ಗಡಿಯಾಚೆಗಿನ ಅಕ್ರಮ ಸಾಗಣೆಗೆ ಸಂಬಂಧಿಸಿದ ತನಿಖೆಗಳಿಗೆ ಈ ವೇದಿಕೆಯು ವ್ಯವಸ್ಥಿತ ನೆರವು ನೀಡುತ್ತದೆ.

    11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)ದ 11ನೇ ಆವೃತ್ತಿಯು ಹರಿಯಾಣದ ಪಂಚಕುಳದಲ್ಲಿ ಆರಂಭವಾಯಿತು.

    ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬದ ಬಗ್ಗೆ:

    • ಪ್ರಾರಂಭ:- ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
    • ಇದು ವೈಜ್ಞಾನಿಕ ವಿನಿಮಯ, ನಾವೀನ್ಯತೆ, ಜನಸಂಪರ್ಕ ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ ಒಂದು ಪ್ರಮುಖ ವೇದಿಕೆಯಾಗಿದೆ.
    • 2025ರ ಧ್ಯೇಯವಾಕ್ಯ:- “ವಿಜ್ಞಾನದಿಂದ ಸಮೃದ್ಧಿ: ಆತ್ಮನಿರ್ಭರ ಭಾರತಕ್ಕಾಗಿ”

    IISF, 2025 ಐದು ಪ್ರಮುಖ ಧ್ಯೇಯಗಳ ಮೇಲೆ ಕೇಂದ್ರೀಕರಿಸುತ್ತದೆ:

    • ವಾಯುವ್ಯ ಭಾರತ ಮತ್ತು ಹಿಮಾಲಯ ಪ್ರದೇಶದ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ವಿಜ್ಞಾನ;
    • ಸಮಾಜ ಮತ್ತು ಶಿಕ್ಷಣಕ್ಕಾಗಿ ವಿಜ್ಞಾನ;
    • ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆತ್ಮನಿರ್ಭರ ಭಾರತ;
    • ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕತೆ;
    • ಆಧುನಿಕ ವಿಜ್ಞಾನದೊಂದಿಗೆ ಸಾಂಪ್ರದಾಯಿಕ ಜ್ಞಾನದ ಸಂಯೋಜನೆ.

    ಸರಸ್ ಆಹಾರ ಮೇಳ, 2025

    ಇತರೆ

    ಇದೀಗ ಸುದ್ದಿಯಲ್ಲಿದೆ:

    • ದೆಹಲಿಯ ಸುಂದರ್ ನರ್ಸರಿಯಲ್ಲಿ ಆಯೋಜಿಸಲಾದ ‘ಸರಸ್ ಆಹಾರ ಮೇಳ, 2025’, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (NRLM)ಯ ಅಡಿಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ ಒಂದು ಉಜ್ವಲ ಪ್ರದರ್ಶನವಾಗಿ ಮೂಡಿಬಂದಿದೆ.

    ಸರಸ್ ಆಹಾರ ಮೇಳ, 2025 ರ ಬಗ್ಗೆ:

    • ಈ ಮೇಳವು ಹರಿಯಾಣ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಕೇರಳ, ಅಸ್ಸಾಂ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 62 ಮಳಿಗೆಗಳಲ್ಲಿ 500 ಕ್ಕೂ ಹೆಚ್ಚು ಸಾಂಪ್ರದಾಯಿಕ ಖಾದ್ಯಗಳನ್ನು ಒಳಗೊಂಡಿತ್ತು.
    • ಇದು ಮಹಿಳಾ ಉದ್ಯಮಶೀಲತೆ ಮತ್ತು ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತಿದ್ದು, ಭಾರತದಾದ್ಯಂತ ಇರುವ ಸ್ವಸಹಾಯ ಸಂಘಗಳ ಸುಮಾರು 300 “ಲಖ್ಪತಿ ದೀದಿಯರು” ಈ ಮೇಳದಲ್ಲಿ ವಿವಿಧ ಆಹಾರ ಪದಾರ್ಥ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ.

    ಸರಸ್ ಅಜೀವಿಕ ಮೇಳದ ಬಗ್ಗೆ:

    • ಆಯೋಜಕರು:- ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಅಡಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದನ್ನು ಆಯೋಜಿಸುತ್ತದೆ.
    • ಇದು ಗ್ರಾಮೀಣ ಮಹಿಳೆಯರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಪ್ರಮುಖ ಮಾರುಕಟ್ಟೆ ಮಾನ್ಯತೆಯನ್ನು ಪಡೆಯಲು ಒಂದು ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ.
    • ಮುಚ್ಚಳಿಕರಣ (ಪ್ಯಾಕೇಜಿಂಗ್), ವಿನ್ಯಾಸ, ಸಂವಹನ ಮತ್ತು ಮಾರುಕಟ್ಟೆ ಪ್ರಕ್ರಿಯೆಗಳ ಕುರಿತಾದ ಕಾರ್ಯಾಗಾರಗಳ ಮೂಲಕ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸಲು, ಆದಾಯವನ್ನು ಹೆಚ್ಚಿಸಲು ಮತ್ತು ದೇಶ-ವಿದೇಶಗಳ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಾದ ಕೌಶಲಗಳನ್ನು ಈ ಮೇಳಗಳು ಅವರಿಗೆ ಒದಗಿಸುತ್ತವೆ.
  • ರಾಜ್ಯದ ವಿಪತ್ತು ನಿರ್ವಹಣೆಯಲ್ಲಿ ಅಗತ್ಯ ಮಟ್ಟದ ಸಿದ್ಧತೆಯ ಕೊರತೆಯಿದೆ ಎಂದ CAG ವರದಿ

    ರಾಜ್ಯದ ವಿಪತ್ತು ನಿರ್ವಹಣೆಯಲ್ಲಿ ಅಗತ್ಯ ಮಟ್ಟದ ಸಿದ್ಧತೆಯ ಕೊರತೆಯಿದೆ ಎಂದ CAG ವರದಿ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರ (CAG) ವರದಿಯು ಕರ್ನಾಟಕದ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿನ ದುರ್ಬಲತೆಗಳು ಹಾಗೂ ಅಸಮರ್ಪಕ ಸಿದ್ಧತೆಗಳನ್ನು ಎತ್ತಿ ತೋರಿಸಿದೆ.

    ಸಿಎಜಿ ವರದಿಯಲ್ಲಿರುವ ಪ್ರಮುಖ ಅಂಶಗಳು:

    • ಈ ವರದಿಯು 2017-18 ರಿಂದ 2022-23 ರವರೆಗಿನ ಅವಧಿಯಲ್ಲಿ ವಿಪತ್ತುಗಳ ನಿರ್ವಹಣೆ ಮತ್ತು ಅಪಾಯ ತಗ್ಗಿಸುವಿಕೆಯಲ್ಲಿನ ಪ್ರಯತ್ನಗಳನ್ನು ವಿಶ್ಲೇಷಿಸಿದೆ.
    • ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (KSDMA) 2008 ರಲ್ಲಿ ಸ್ಥಾಪನೆಯಾಗಿದ್ದರೂ, ‘ರಾಜ್ಯ ವಿಪತ್ತು ನಿರ್ವಹಣಾ ನೀತಿ, 2020’ ಅನ್ನು 12 ವರ್ಷಗಳ ವಿಳಂಬದ ನಂತರ ಮಾತ್ರ ಪ್ರಕಟಿಸಲಾಗಿದೆ ಎಂದು ವರದಿಯು ಎತ್ತಿ ತೋರಿಸಿದೆ.
    • ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ಅಗತ್ಯ ಸೌಲಭ್ಯಗಳನ್ನು ಹೊಂದಿಲ್ಲದಿರುವುದು ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ.
    • ವಿಪತ್ತು ಸ್ಪಂದನಾ ಪಡೆಯ ಘಟಕಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ 67% ರಿಂದ 96% ರಷ್ಟು ಬೃಹತ್ ಪ್ರಮಾಣದ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಈ ಘಟಕಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ತೊಂದರೆಗಳನ್ನು ಎದುರಿಸುತ್ತಿವೆ.
    • ಪ್ರವಾಹದ ಅಪಾಯಕ್ಕಾಗಿ “ರಾಜ್ಯ ಕ್ರಿಯಾ ಯೋಜನೆ”ಯನ್ನು 2021 ರಲ್ಲಿ ರೂಪಿಸಲಾಗಿದ್ದರೂ, ನಿರ್ಣಾಯಕ ವಲಯಗಳಲ್ಲಿ ಪ್ರವಾಹ ನಿರ್ವಹಣೆಗಾಗಿ ಅಗತ್ಯ ಸಿದ್ಧತೆಗಳ ಕೊರತೆಯಿದೆ ಎಂದು ಸಿಎಜಿ ಪತ್ತೆಹಚ್ಚಿದೆ.
    • ಬೆಂಗಳೂರಿನಲ್ಲಿ ಅಳವಡಿಸಲಾಗಿರುವ 100 ನೀರಿನ ಮಟ್ಟ ಅಳೆಯುವ ಸಂವೇದಕಗಳ ಪೈಕಿ 49 ಸಂವೇದಕಗಳು ಡಿಸೆಂಬರ್ 2023 ರ ವೇಳೆಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂಡುಬಂದಿದೆ. ಅಲ್ಲದೆ, ರಾಜ್ಯವು ಪ್ರವಾಹ ಮೂಲಸೌಕರ್ಯಕ್ಕಾಗಿ ಯಾವುದೇ ಕಾನೂನು ಚೌಕಟ್ಟನ್ನು ಸ್ಥಾಪಿಸಿಲ್ಲ.