ವರ್ಗ: State Current Affairs Kannada

  • ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, 2025 (BTS)

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, 2025 (BTS)

    ಇದೀಗ ಸುದ್ದಿಯಲ್ಲಿದೆ:

    • ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025’ (BTS 2025) ನವೆಂಬರ್ 18 ರಿಂದ 20 ರವರೆಗೆ ‘ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ’ದಲ್ಲಿ (BIEC) ಯಶಸ್ವಿಯಾಗಿ ಜರುಗಿತು.

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, 2025 ರ ಪ್ರಮುಖ ಅಂಶಗಳು:

    • 2025ರ ಧ್ಯೇಯವಾಕ್ಯ: “ಫ್ಯೂಚರೈಸ್”
    • ಆಯೋಜಕರು: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು, ಉದ್ಯಮ ವಲಯದ ಪಾಲುದಾರರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
    • ಮಹತ್ವ: ಜಾಗತೀಕ ನಾವೀನ್ಯಕಾರರು, ಸಂಶೋಧಕರು, ಉದ್ಯಮಿಗಳು ಮತ್ತು ನೀತಿ ನಿರೂಪಕರನ್ನು ಒಂದೇ ವೇದಿಕೆಯಡಿ ತರುವುದು ಈ ಶೃಂಗಸಭೆಯ ಉದ್ದೇಶವಾಗಿತ್ತು. ಈ ಮೂಲಕ, ಜಾಗತೀಕ ತಂತ್ರಜ್ಞಾನ ಮತ್ತು ನಾವೀನ್ಯತಾ ಕೇಂದ್ರವಾಗಿ ಕರ್ನಾಟಕದ ಸ್ಥಾನಮಾನವನ್ನು ಈ ಶೃಂಗಸಭೆಯು ಮತ್ತಷ್ಟು ಬಲಪಡಿಸಿದೆ.
  • ಮಕ್ಕಳ ಹಕ್ಕುಗಳ ಸೂಚ್ಯಂಕ

    ಮಕ್ಕಳ ಹಕ್ಕುಗಳ ಸೂಚ್ಯಂಕ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು (KSCPCR) ‘ಮಕ್ಕಳ ಹಕ್ಕುಗಳ ಸೂಚ್ಯಂಕ’ವನ್ನು ಬಿಡುಗಡೆ ಮಾಡಿದೆ. ಇಡೀ ದೇಶದಲ್ಲೇ ಇಂತಹದೊಂದು ಸಮಗ್ರ ದಾಖಲೆಯನ್ನು ಸಿದ್ಧಪಡಿಸಿರುವುದು ಇದೇ ಮೊದಲಾಗಿದೆ.

    ಮಕ್ಕಳ ಹಕ್ಕುಗಳ ಸೂಚ್ಯಂಕದ ಬಗ್ಗೆ:

    • ಸಮಗ್ರ ಮಾಹಿತಿ: ಈ ದಾಖಲೆಯು ಮಕ್ಕಳ ಕಲ್ಯಾಣಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಜಾರಿಯಲ್ಲಿರುವ ಕಾನೂನುಗಳು ಮತ್ತು ಯೋಜನೆಗಳ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
    • ಮೌಲ್ಯಮಾಪನ: ಯೋಜನೆಗಳ ಅನುಷ್ಠಾನದ ಪರಿಣಾಮಕಾರಿತ್ವವನ್ನು ಇದು ವಿಶ್ಲೇಷಿಸುತ್ತದೆ. ಜೊತೆಗೆ, ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯವಾದ ಬದಲಾವಣೆಗಳನ್ನು ಸೂಚಿಸುತ್ತದೆ.
    • ಗುರಿ: ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಕಲ್ಯಾಣವನ್ನು ಖಾತ್ರಿಪಡಿಸುವುದು ಇದರ ಪ್ರಮುಖ ಗುರಿಯಾಗಿದೆ.

    ಈ ಸೂಚ್ಯಂಕದಲ್ಲಿ ಕರ್ನಾಟಕದ 10ನೇ ಸ್ಥಾನ ಪಡೆದಿದೆ:

    • ಶ್ರೇಯಾಂಕ: ಮಕ್ಕಳ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಸಾಕಾರಗೊಳಿಸುವಲ್ಲಿ ಕರ್ನಾಟಕದ ಸಾಧನೆಯು ‘ಮಧ್ಯಮ’ ಮಟ್ಟದಲ್ಲಿದೆ. ‘ಮಕ್ಕಳ ಹಕ್ಕುಗಳ ಸೂಚ್ಯಂಕ 2023’ ರ ವರದಿಯ ಪ್ರಕಾರ, ದೇಶದ 30 ರಾಜ್ಯಗಳ ಪೈಕಿ ಕರ್ನಾಟಕವು 10ನೇ ಸ್ಥಾನ ಪಡೆದಿದೆ.
    • ಆಯಾಮಗಳು : ಈ ಸೂಚ್ಯಂಕವನ್ನು ಈ ಕೆಳಗಿನ ಆರು ಪ್ರಮುಖ ಆಯಾಮಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ:
      1. ಜೀವಿಸುವ ಹಕ್ಕು 
      2. ಬದುಕಲು ಪೂರಕವಾದ ಪರಿಸರದ ಹಕ್ಕು 
      3. ಪೋಷಣೆಯ ಹಕ್ಕು 
      4. ರಕ್ಷಣೆಯ ಹಕ್ಕು
      5. ಶಿಕ್ಷಣದ ಹಕ್ಕು
      6. ಭಾಗವಹಿಸುವಿಕೆಯ ಹಕ್ಕು
  • ಟಾಟಾ ಟ್ರಾನ್ಸ್‌ಫಾರ್ಮೇಷನ್ (ಪರಿವರ್ತನಾ) ಪ್ರಶಸ್ತಿ, 2025

    ಟಾಟಾ ಟ್ರಾನ್ಸ್‌ಫಾರ್ಮೇಷನ್ (ಪರಿವರ್ತನಾ) ಪ್ರಶಸ್ತಿ, 2025

    ಇದೀಗ ಸುದ್ದಿಯಲ್ಲಿದೆ:

    • ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಟಾಟಾ ಸನ್ಸ್ ಸಂಸ್ಥೆಗಳು ಜಂಟಿಯಾಗಿ, 2025ನೇ ಸಾಲಿನ ಪ್ರತಿಷ್ಠಿತ ‘ಟಾಟಾ ಟ್ರಾನ್ಸ್‌ಫಾರ್ಮೇಷನ್ ಪ್ರಶಸ್ತಿ’ಗೆ ಬೆಂಗಳೂರು ಮೂಲದ ಮೂವರು ವಿಜ್ಞಾನಿಗಳನ್ನು ವಿಜೇತರನ್ನಾಗಿ ಘೋಷಿಸಿವೆ.

    ಪ್ರಶಸ್ತಿ ವಿಜೇತರು ಮತ್ತು ಅವರ ಕ್ಷೇತ್ರಗಳು:

    1. ಪಡುಬಿದ್ರಿ ವಿ. ಶಿವಪ್ರಸಾದ್: ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS).
    2. ಬಾಲಸುಬ್ರಮಣಿಯನ್ ಗೋಪಾಲ್: ಭಾರತೀಯ ವಿಜ್ಞಾನ ಸಂಸ್ಥೆ (IISc). ಇವರು ಆಹಾರ ಭದ್ರತೆಯಲ್ಲಿನ  ಸಂಶೋಧನೆಗಾಗಿ ಆಯ್ಕೆಯಾಗಿದ್ದಾರೆ.
    3. ಅಂಬರೀಶ್ ಘೋಷ್: ಇವರು ಸುಸ್ಥಿರತೆ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಆಯ್ಕೆಯಾಗಿದ್ದಾರೆ.

    ಆಯ್ಕೆ ಪ್ರಕ್ರಿಯೆ ಮತ್ತು ಪ್ರಶಸ್ತಿ ವಿವರ

    • ಆಯ್ಕೆ: ದೇಶದ 27 ರಾಜ್ಯಗಳಿಂದ ಸಲ್ಲಿಕೆಯಾಗಿದ್ದ 212 ನಾಮನಿರ್ದೇಶನಗಳನ್ನು ಪರಿಶೀಲಿಸಿ, ವಿಜ್ಞಾನಿಗಳು, ವೈದ್ಯರು, ತಂತ್ರಜ್ಞರು ಮತ್ತು ಇಂಜಿನಿಯರ್‌ಗಳನ್ನೊಳಗೊಂಡ ಅಂತರರಾಷ್ಟ್ರೀಯ ತೀರ್ಪುಗಾರರ ಮಂಡಳಿಯು ಈ ವಿಜೇತರನ್ನು ಅಂತಿಮಗೊಳಿಸಿದೆ.
    • ಬಹುಮಾನ: ಪ್ರತಿಯೊಬ್ಬ ವಿಜೇತರಿಗೆ ತಮ್ಮ ಸಂಶೋಧನೆಯನ್ನು ಮುಂದುವರಿಸಲು ಮತ್ತು ಅದರ ನೈಜ ಪರಿಣಾಮವನ್ನು ವಿಸ್ತರಿಸಲು ತಲಾ ₹2 ಕೋಟಿ ಅನುದಾನವನ್ನು ನೀಡಲಾಗುತ್ತದೆ.
  • “ಸನ್ಮಿತ್ರ” ಉಪಕ್ರಮ

    “ಸನ್ಮಿತ್ರ” ಉಪಕ್ರಮ

    ಇದೀಗ ಸುದ್ದಿಯಲ್ಲಿದೆ: 

    • ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ, ‘ಸನ್ಮಿತ್ರ’ (ಒಬ್ಬ ಒಳ್ಳೆಯ ಸ್ನೇಹಿತ) ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.

    ‘ಸನ್ಮಿತ್ರ’ ಉಪಕ್ರಮದದ ಬಗ್ಗೆ 

    • ಉದ್ದೇಶ: ಮಾದಕ ದ್ರವ್ಯ ವ್ಯಸನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನಿರಂತರ ಬೆಂಬಲ, ಪುನರ್ವಸತಿ ಮತ್ತು ಮೇಲ್ವಿಚಾರಣೆಯನ್ನು ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
    • ವಿಶಿಷ್ಟ ವಿಧಾನ: ಈ ಕಾರ್ಯಕ್ರಮವು ಮಾದಕ ವ್ಯಸನದ ಸಮಸ್ಯೆಯನ್ನು ಕೇವಲ ಕಾನೂನು ಜಾರಿ ದೃಷ್ಟಿಕೋನದಿಂದ ನೋಡದೆ, ಸಹಾನುಭೂತಿ, ಸೂಕ್ತ ಮಾರ್ಗದರ್ಶನ ಮತ್ತು ರಚನಾತ್ಮಕ ಪುನರ್ವಸತಿಯ ಮೂಲಕ ಪರಿಹರಿಸಲು ಯತ್ನಿಸುತ್ತದೆ.
    • ಸನ್ಮಿತ್ರ ಸಹಾಯವಾಣಿ: ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಮೀಸಲಾದ ‘ಸನ್ಮಿತ್ರ ಸಹಾಯವಾಣಿ’ ಅನ್ನು ಸ್ಥಾಪಿಸಲಾಗುವುದು.
    • ಸಿಬ್ಬಂದಿಯ ಜವಾಬ್ದಾರಿ: ಸನ್ಮಿತ್ರ ಯೋಜನೆಯಡಿ ನಿಯೋಜಿತರಾದ ಪೊಲೀಸ್ ಸಿಬ್ಬಂದಿ , ಬಾಧಿತ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅವರ ಕುಟುಂಬದ ಸದಸ್ಯರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಮಾನಸಿಕ ಆರೋಗ್ಯ ತಜ್ಞರೊಂದಿಗೆ ಸಮನ್ವಯ ಸಾಧಿಸುವ ಮೂಲಕ ವ್ಯಕ್ತಿಯ ಚೇತರಿಕೆಯ ಮಾಸಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬೇಕು.
    • ವರದಿ ನಿರ್ವಹಣೆ: ಪೊಲೀಸ್ ಠಾಣಾಧಿಕಾರಿಗಳು ಪ್ರತಿ ಎರಡು ವಾರಗಳಿಗೊಮ್ಮೆ ಸನ್ಮಿತ್ರ ಸಿಬ್ಬಂದಿಯಿಂದ ಪ್ರಗತಿಯ ವರದಿಗಳನ್ನು ಸಂಗ್ರಹಿಸಬೇಕು. ತದನಂತರ, ಗೌಪ್ಯ ಮಾಸಿಕ ವರದಿಗಳನ್ನು ಮೊಹರು ಮಾಡಿದ ಲಕೋಟೆಗಳಲ್ಲಿ  ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿ (SP) ಅಥವಾ ಉಪ ಪೊಲೀಸ್ ಆಯುಕ್ತರಿಗೆ (DCP) ಸಲ್ಲಿಸಬೇಕು.
  • ಇನ್ಫೋಸಿಸ್ ಪ್ರಶಸ್ತಿ, 2025

    ಇನ್ಫೋಸಿಸ್ ಪ್ರಶಸ್ತಿ, 2025

    ಇದೀಗ ಸುದ್ದಿಯಲ್ಲಿದೆ:

    • 2025ನೇ ಸಾಲಿನ ಪ್ರತಿಷ್ಠಿತ ಇನ್ಫೋಸಿಸ್ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಶಸ್ತಿ ಪುರಸ್ಕೃತರಾಗಿ ಆಯ್ಕೆಯಾದ ಒಟ್ಟು ಆರು ಗಣ್ಯರ ಪಟ್ಟಿಯಲ್ಲಿ ಪ್ರಾಕೃತ ಮತ್ತು ಕನ್ನಡ ಕಾವ್ಯಶಾಸ್ತ್ರದ ವಿದ್ವಾಂಸರಾದ ಆಂಡ್ರ್ಯೂ ಒಲೆಟ್ ಹಾಗೂ ಬೆಂಗಳೂರು ಮೂಲದ ವಿಜ್ಞಾನಿ ಅಂಜನಾ ಬದ್ರಿನಾರಾಯಣನ್ ಅವರು ಸೇರಿದ್ದಾರೆ.

    2025 ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪುರಸ್ಕೃತರ ವಿವರಣೆ:

    ವಿಭಾಗ

    ಪುರಸ್ಕೃತರು

    ಅರ್ಥಶಾಸ್ತ್ರ 

    ನಿಖಿಲ್ ಅಗರ್ವಾಲ್

    ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ

    ಸುಶಾಂತ್ ಸಚ್‌ದೇವ

    ಮಾನವಿಯ ಮತ್ತು ಸಮಾಜ ವಿಜ್ಞಾನ

    ಆಂಡ್ರ್ಯೂ ಒಲೆಟ್

    ಜೀವ ವಿಜ್ಞಾನ

    ಅಂಜನಾ ಬದ್ರಿನಾರಾಯಣನ್

    ಗಣಿತ ವಿಜ್ಞಾನ

    ಸವ್ಯಸಾಚಿ ಮುಖರ್ಜಿ

    ಭೌತ ವಿಜ್ಞಾನ

    ಕಾರ್ತಿಶ್ ಮಂತಿರಾಮ್

    ಇನ್ಫೋಸಿಸ್ ಪ್ರಶಸ್ತಿಯ ಬಗ್ಗೆ:

    • ಘೋಷಣೆ: ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ (ISF), ಆರು ವಿಭಿನ್ನ ವಿಭಾಗಗಳಲ್ಲಿ 2025ನೇ ಸಾಲಿನ ಪ್ರಶಸ್ತಿ ವಿಜೇತರನ್ನು ಘೋಷಿಸಿದೆ. ಅವುಗಳೆಂದರೆ:
    1. ಅರ್ಥಶಾಸ್ತ್ರ
    2. ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ
    3. ಮಾನವಿಯ ಮತ್ತು ಸಮಾಜ ವಿಜ್ಞಾನ
    4. ಜೀವ ವಿಜ್ಞಾನ
    5. ಗಣಿತ ವಿಜ್ಞಾನ
    6. ಭೌತ ವಿಜ್ಞಾನ
    • ಉದ್ದೇಶ: ಭಾರತದ ಪ್ರಗತಿಯ ಮೇಲೆ ಗಮನಾರ್ಹ ಪ್ರಭಾವ ಬೀರುವಂತಹ ಸಂಶೋಧನೆ ಮತ್ತು ಪಾಂಡಿತ್ಯಪೂರ್ಣ ಸಾಧನೆಗಳನ್ನು ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮೂಲ ಉದ್ದೇಶವಾಗಿದೆ.
    • ಪ್ರಶಸ್ತಿಯ ಸ್ವರೂಪ: ಪ್ರತಿಯೊಂದು ವಿಭಾಗದ ಪ್ರಶಸ್ತಿಯು ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು $100,000 (ಅಥವಾ ಅದಕ್ಕೆ ಸಮನಾದ ಭಾರತೀಯ ರೂಪಾಯಿ ಮೌಲ್ಯ) ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
  • ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030 | ಮೇಕೆದಾಟು ಜಲಾಶಯ ಯೋಜನೆ

    ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯ ಸರ್ಕಾರವು ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030’ ಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದೆ.

    ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030 ರ ಕುರಿತು:

    • ಅನಾವರಣ: ನವೆಂಬರ್ 2025 ರಲ್ಲಿ ನಡೆದ ಪ್ರತಿಷ್ಠಿತ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯಲ್ಲಿ ಈ ನೀತಿಯನ್ನು ಅನಾವರಣಗೊಳಿಸಲಾಯಿತು.
    • ದೃಷ್ಟಿಕೋನ: ಬಾಹ್ಯಾಕಾಶ ನಾವೀನ್ಯತೆ ಮತ್ತು ಉತ್ಪಾದನಾ ವಲಯದಲ್ಲಿ ರಾಜ್ಯವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿಯನ್ನು ಹೊಂದಿರುವ ಮಹತ್ವದ ಕಾರ್ಯತಂತ್ರದ ನೀಲನಕ್ಷೆಯಾಗಿದೆ.

    ಪ್ರಮುಖ ಉದ್ದೇಶಗಳು

    ಈ ನೀತಿಯು ರಾಜ್ಯದ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಗಾಗಿ ಈ ಕೆಳಗಿನ ಮಹತ್ವಾಕಾಂಕ್ಷೆಯ ಗುರಿ ಮತ್ತು ಉದ್ದೇಶಗಳನ್ನು ಹೊಂದಿದೆ:

    1. ಮಾರುಕಟ್ಟೆ ಪಾಲು:- ರಾಷ್ಟ್ರೀಯ ಬಾಹ್ಯಾಕಾಶ ಮಾರುಕಟ್ಟೆಯ ಶೇ. 50 ರಷ್ಟು ಪಾಲನ್ನು (2033 ರ ವೇಳೆಗೆ 22 ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ) ಮತ್ತು ಜಾಗತಿಕ ಮಾರುಕಟ್ಟೆಯ ಶೇ. 5 ರಷ್ಟು ಪಾಲನ್ನು ವಶಪಡಿಸಿಕೊಳ್ಳುವುದು.
    2. ಹೂಡಿಕೆ ಆಕರ್ಷಣೆ:- ರಾಜ್ಯದ ಬಾಹ್ಯಾಕಾಶ ಪರಿಸರ ವ್ಯವಸ್ಥೆಗೆ ಒಟ್ಟಾರೆಯಾಗಿ 3 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವುದು.
    3. ಮಾನವ ಸಂಪನ್ಮೂಲ ಅಭಿವೃದ್ಧಿ:- ವಿಶೇಷ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ 15,000 ಮಹಿಳೆಯರು ಸೇರಿದಂತೆ ಒಟ್ಟು 50,000 ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಉನ್ನತ ತರಬೇತಿ ಮತ್ತು ಕೌಶಲ್ಯವನ್ನು  ಒದಗಿಸುವುದು.
    4. ನವೋದ್ಯಮಗಳಿಗೆ ಪ್ರೋತ್ಸಾಹ:- 500 ಬಾಹ್ಯಾಕಾಶ ನವೋದ್ಯಮಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ  ಪ್ರೋತ್ಸಾಹ ನೀಡುವುದು. ಕರ್ನಾಟಕದಿಂದಲೇ 50 ಉಪಗ್ರಹಗಳ ವಿನ್ಯಾಸ, ತಯಾರಿಕೆ ಮತ್ತು ಉಡಾವಣೆಗೆ ಅಗತ್ಯವಾದ ನೆರವು ನೀಡುವುದು.

    ನೀತಿಯ ಮಹತ್ವ 

    • ಈ ನೀತಿಯು ಕೇಂದ್ರ ಸರ್ಕಾರದ ‘ಭಾರತೀಯ ಬಾಹ್ಯಾಕಾಶ ನೀತಿ 2023’ ರೊಂದಿಗೆ ಮತ್ತು 2035 ರ ವೇಳೆಗೆ ‘ಭಾರತೀಯ ಅಂತರಿಕ್ಷ ನಿಲ್ದಾಣ‘ವನ್ನು ಸ್ಥಾಪಿಸುವ ಹಾಗೂ 2040 ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವ ರಾಷ್ಟ್ರೀಯ ಗುರಿಗಳಿಗೆ ಪೂರಕವಾಗಲಿದೆ.

    ಮೇಕೆದಾಟು ಜಲಾಶಯ ಯೋಜನೆ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಮತ್ತು ತಮಿಳುನಾಡು ನಡುವಿನ ಅಂತರರಾಜ್ಯ ನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಕರ್ನಾಟಕವು ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಿದ ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು, ಸರ್ವೋಚ್ಚ ನ್ಯಾಯಾಲಯವು “ಅಕಾಲಿಕ” ಎಂದು ಪರಿಗಣಿಸಿ, ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದೆ.

    ಕಾವೇರಿ ನದಿ ವ್ಯವಸ್ಥೆಯ ಬಗ್ಗೆ:

    • ಉಗಮ: ತಲಕಾವೇರಿ (ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟಗಳಲ್ಲಿ).
    • ಒಟ್ಟು ಉದ್ದ: 805 ಕಿ.ಮೀ.
    • ಹರಿವಿನ ದಿಕ್ಕು: ಪೂರ್ವಾಭಿಮುಖ.
    • ಹರಿಯುವ ರಾಜ್ಯಗಳು: ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ.
    • ಉಪನದಿಗಳು: ಅರ್ಕಾವತಿ, ಶಿಂಷಾ, ಹೇಮಾವತಿ, ಕಪಿಲಾ, ಹೊನ್ನುಹೊಳೆ, ಅಮರಾವತಿ, ಲಕ್ಷ್ಮಣತೀರ್ಥ, ಕಬಿನಿ, ಲೋಕಪಾವನಿ, ಭವಾನಿ ಮತ್ತು ನೊಯ್ಯಲ್.

    ಮೇಕೆದಾಟು ಯೋಜನೆಯ ಬಗ್ಗೆ:

    • ಯೋಜನೆಯ ಸ್ವರೂಪ: ಮೇಕೆದಾಟು ಯೋಜನೆಯು ಒಂದು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಪೂರೈಕೆ ಯೋಜನೆಯಾಗಿದೆ.
    • ನಿರ್ಮಾಣ ಸ್ಥಳ: ಇದನ್ನು ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದಲ್ಲಿ ನಿರ್ಮಿಸಲು ಕರ್ನಾಟಕ ಸರ್ಕಾರವು ಉದ್ದೇಶಿಸಿದೆ.
    • ಉದ್ದೇಶ: ಬೆಂಗಳೂರು ಮಹಾನಗರ ಮತ್ತು ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
    • ಮಹತ್ವ : ಕುಡಿಯುವ ನೀರು ಪೂರೈಕೆಯ ಜೊತೆಗೆ, ಈ ಯೋಜನೆಯು 400 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಉತ್ಪಾದನೆಗೂ ಸಹಕಾರಿಯಾಗಲಿದೆ.
    • ಯೋಜನೆಯ ಬಗೆಗಿನ ಕಳವಳಗಳು: ಈ ಯೋಜನೆಯ ಅನುಷ್ಠಾನದಿಂದಾಗಿ “ಕಾವೇರಿ ವನ್ಯಜೀವಿ ಧಾಮ”ದ ಸುಮಾರು 63% ರಷ್ಟು ಅರಣ್ಯ ಪ್ರದೇಶವು ಮುಳುಗಡೆಯಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.
  • ನಾಡೋಜ ಬರಗೂರು ಪ್ರಶಸ್ತಿ | ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030

    ನಾಡೋಜ ಬರಗೂರು ಪ್ರಶಸ್ತಿ

    ಇದೀಗ ಸುದ್ದಿಯಲ್ಲಿ

    • 2025 ನೇ ಸಾಲಿನ ‘ನಾಡೋಜ ಬರಗೂರು ಪ್ರಶಸ್ತಿ’ಗೆ ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ (ಸಾಹಿತ್ಯ ಕ್ಷೇತ್ರ) ಮತ್ತು ಶಿವರುದ್ರಯ್ಯ (ಚಲನಚಿತ್ರ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ.

    ಬರಗೂರು ಪ್ರಶಸ್ತಿಯ ಬಗ್ಗೆ:

    • ಪ್ರಶಸ್ತಿ ನೀಡುವ ಸಂಸ್ಥೆ: ಈ ಪ್ರಶಸ್ತಿಯನ್ನು ‘ನಾಡೋಜ ಡಾ. ಬರಗೂರು ಪ್ರತಿಷ್ಠಾನ’ ನೀಡುತ್ತದೆ.
    • ಉದ್ದೇಶ:- ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಗೂ ಕೊಡುಗೆ ನೀಡಿದ ಸಾಧಕರಿಗೆ ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ.
    • ಪ್ರಶಸ್ತಿಯ ಸ್ವರೂಪ:- ಈ ಪ್ರಶಸ್ತಿಯು ಒಂದು ಫಲಕ ಮತ್ತು ₹25,000 ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

    2025 ನೇ ಸಾಲಿನ ಪುರಸ್ಕೃತರು

    1. ಬಿ.ಟಿ. ಲಲಿತಾ ನಾಯಕ್: ಸಾಹಿತ್ಯ ಕ್ಷೇತ್ರ.
    2. ಶಿವರುದ್ರಯ್ಯ: ಚಲನಚಿತ್ರ ಕ್ಷೇತ್ರ.

    ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030

    ಇದೀಗ ಸುದ್ದಿಯಲ್ಲಿದೆ:

    • ‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025-2030’ ರ ಅಡಿಯಲ್ಲಿ ವಿವಿಧ ಪ್ರೋತ್ಸಾಹಕಗಳಿಗಾಗಿ ರಾಜ್ಯ ಸರ್ಕಾರವು ₹967 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.

    ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030 ರ ಕುರಿತು: 

    • ಕಾರ್ಯತಂತ್ರದ ಬದಲಾವಣೆ: ರಾಜ್ಯದ ಗಮನವನ್ನು ಸಾಂಪ್ರದಾಯಿಕ ಮಾಹಿತಿ ತಂತ್ರಜ್ಞಾನ (IT) ಸೇವೆಗಳಿಂದ, ಡೀಪ್ ಟೆಕ್ ನಾವೀನ್ಯತೆಗೆ ಪರಿವರ್ತಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಇದೊಂದು ಮಹತ್ವದ ಕಾರ್ಯತಂತ್ರದ ನೀಲನಕ್ಷೆಯಾಗಿದೆ.
    • ಜಾಗತಿಕ ನಾಯಕತ್ವ: ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೈಬರ್ ಭದ್ರತೆ ಯಂತಹ ಆಧುನಿಕ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನನ್ನಾಗಿ ರೂಪಿಸುವುದು ಇದರ ಗುರಿಯಾಗಿದೆ.
    • ಸಮತೋಲಿತ ಬೆಳವಣಿಗೆ: ನವೆಂಬರ್ 2025 ರಲ್ಲಿ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆಗೊಂಡ ಈ ನೀತಿಯು, ‘ಬೆಂಗಳೂರಿನ ಆಚೆಗೆ’ ಈ ಉಪಕ್ರಮದ ಮೂಲಕ ರಾಜ್ಯದಾದ್ಯಂತ ಸಮಾನ ಬೆಳವಣಿಗೆಗೆ ಒತ್ತು ನೀಡುತ್ತದೆ. ಐದು ವರ್ಷಗಳ ಅವಧಿಗೆ ಒಟ್ಟು ₹967.12 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ.

    ನೀತಿಯ ಪ್ರಮುಖ ದೃಷ್ಟಿಕೋನ ಮತ್ತು ಗುರಿಗಳು: 

    • ಈ ನೀತಿಯನ್ನು “FRAME” (ಮುಂಬರುವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಪ್ರಾದೇಶಿಕ ಅಭಿವೃದ್ಧಿ, ಹೊಂದಾಣಿಕೆ, ಮಾರುಕಟ್ಟೆ ಸೃಷ್ಟಿ, ಉದ್ಯಮ ಸೌಲಭ್ಯ) ಚೌಕಟ್ಟಿನ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ.

    ಉದ್ದೇಶ

    ಪ್ರಸ್ತುತ ಸ್ಥಿತಿ (ಅಂದಾಜು)

    2030 ರ ವೇಳೆಗೆ ಗುರಿ

    ಸಾಫ್ಟ್ ವೇರ್ ರಫ್ತು 

    ₹4.09 ಲಕ್ಷ ಕೋಟಿ

    ₹11.5 ಲಕ್ಷ ಕೋಟಿ

    ಉದ್ಯೋಗ ಸೃಷ್ಟಿ

    12 ಲಕ್ಷ ನೇರ ಐಟಿ ಉದ್ಯೋಗಗಳು

    31 ಲಕ್ಷ ಪರೋಕ್ಷ ಉದ್ಯೋಗಗಳು

    90 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು

    ಜಿಎಸ್‌ಡಿಪಿಗೆ (GSDP) ಐಟಿ ವಲಯದ ಕೊಡುಗೆ

    26%

    36%

  • ಆಗುಂಬೆಯಲ್ಲಿ ಹೆಲ್ತ್ (HEALTH) ಉಪಕ್ರಮದ ಉತ್ತೇಜನ | “ಫ್ಲೈಬಸ್” ಸೇವೆ

    ಆಗುಂಬೆಯಲ್ಲಿ ಹೆಲ್ತ್ (HEALTH) ಉಪಕ್ರಮದ ಉತ್ತೇಜನ

    ಇದೀಗ ಸುದ್ದಿಯಲ್ಲಿ

    • ಸುರತ್ಕಲ್‌ನ NITK ತಂಡವು, ‘ಆಗುಂಬೆಯಲ್ಲಿ ಹೆಲ್ತ್ (HEALTH) ಉತ್ತೇಜನ’ ಯೋಜನೆಯ ಅಡಿಯಲ್ಲಿ ನವೆಂಬರ್ 8 ರಂದು ಆಗುಂಬೆ ಭಾಗದಲ್ಲಿ 100 ಇಂಟರ್ನೆಟ್ ಸಂಪರ್ಕಗಳನ್ನು ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ಹೆಲ್ತ್ (HEALTH) ಉಪಕ್ರಮದ ಉತ್ತೇಜನ ಕುರಿತು: 

    • ಇದು ಎನ್‌ಐಟಿಕೆ ಸುರತ್ಕಲ್‌ನ ಡಾ. ಮೋಹಿತ್ ಪಿ. ತಹಿಲಿಯಾನಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ.
    • HEALTH ಎಂದರೆ:- ಆರೋಗ್ಯ ರಕ್ಷಣೆ (H), ಶಿಕ್ಷಣ (E), ಕೃಷಿ (A), ಜೀವನೋಪಾಯ (L), ತಂತ್ರಜ್ಞಾನ (T) ಮತ್ತು ಪರಂಪರೆ (H).
    • ಉದ್ದೇಶ:- ಪಶ್ಚಿಮ ಘಟ್ಟಗಳಂತಹ ದೂರದ ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಸ್ಥಳೀಯ ಸಂಸ್ಥೆಗಳು, ಉದ್ದಿಮೆಗಳು ಮತ್ತು ಮನೆಗಳಿಗೆ ಡಿಜಿಟಲ್ ಪ್ರವೇಶವನ್ನು ಕಲ್ಪಿಸುವುದು ಇದರ ಮೂಲ ಉದ್ದೇಶವಾಗಿದೆ. ಆಗುಂಬೆಯ 100 ತಾಣಗಳಿಗೆ ವಿಶ್ವಾಸಾರ್ಹ ಅಂತರ್ಜಾಲ ಸಂಪರ್ಕವನ್ನು ಒದಗಿಸಿರುವುದು ಯೋಜನೆಯ ಇತ್ತೀಚಿನ ಮೈಲಿಗಲ್ಲಾಗಿದೆ..

    HEALTH ಉಪಕ್ರಮದ ಆಧಾರಸ್ತಂಭಗಳು

    1. ಆರೋಗ್ಯ ರಕ್ಷಣೆ (H): ಗ್ರಾಮೀಣ ಜನರಿಗೆ ಆನ್‌ಲೈನ್ ಮೂಲಕ ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಸೇವೆಗಳ ಲಭ್ಯತೆಯನ್ನು ಸುಗಮಗೊಳಿಸುವುದು.
    2. ಶಿಕ್ಷಣ (E): ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆನ್‌ಲೈನ್ ಸಂಪನ್ಮೂಲಗಳು ಹಾಗೂ ಡಿಜಿಟಲ್ ಕಲಿಕಾ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುವುದು.
    3. ಕೃಷಿ (A): ಕೃಷಿ ಸಮುದಾಯಕ್ಕೆ ಅಗತ್ಯ ಮಾಹಿತಿ ಮತ್ತು ಉತ್ತಮ ಸಂವಹನ ವ್ಯವಸ್ಥೆಯನ್ನು ಒದಗಿಸುವುದು.
    4. ಜೀವನೋಪಾಯ (L): ಆನ್‌ಲೈನ್ ಪ್ರಚಾರ, ಕಾಯ್ದಿರಿಸುವಿಕೆ ವ್ಯವಸ್ಥೆಗಳು ಮತ್ತು ತಂಗುಮನೆ (ಹೋಮ್‌ಸ್ಟೇ) ಗಳಂತಹ ಸ್ಥಳೀಯ ಉದ್ಯಮಗಳಿಗೆ ತಾಂತ್ರಿಕ ಬೆಂಬಲ ನೀಡುವ ಮೂಲಕ ಸ್ಥಳೀಯ ವಾಣಿಜ್ಯ ವಹಿವಾಟನ್ನು ಸುಧಾರಿಸುವುದು.
    5. ತಂತ್ರಜ್ಞಾನ (T): ವಿದ್ಯುತ್ ವ್ಯತ್ಯಯ ಮತ್ತು ಕಠಿಣ ಭೌಗೋಳಿಕ ಸವಾಲುಗಳಿರುವ ಪ್ರದೇಶಕ್ಕೂ ವಿಶ್ವಾಸಾರ್ಹ ಅಂತರ್ಜಾಲ ಸೇವೆಯನ್ನು ತಲುಪಿಸುವುದು.
    6. ಪರಂಪರೆ (H): ಆಗುಂಬೆಯ ಪ್ರಮುಖ ಜೀವವೈವಿಧ್ಯ ಪ್ರಭೇದವಾದ ಕಾಳಿಂಗ ಸರ್ಪಗಳ ಸಂರಕ್ಷಣೆ ಮತ್ತು ಸಂಶೋಧನಾ ಪ್ರಯತ್ನಗಳಿಗೆ ಬೆಂಬಲ ನೀಡುವುದು.

    “ಫ್ಲೈಬಸ್” ಸೇವೆ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC), ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ದಾವಣಗೆರೆ ನಗರದ ನಡುವೆ ನೇರವಾದ ನೂತನ ‘ಫ್ಲೈಬಸ್’ (ವೋಲ್ವೋ ಮಲ್ಟಿ-ಆಕ್ಸಲ್) ಸೇವೆಯನ್ನು ಪ್ರಾರಂಭಿಸಿದೆ.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಗ್ಗೆ:

    • ಮಾಲೀಕತ್ವ:- ಈ ನಿಗಮವು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ.
    • ಸಾರಿಗೆ ಸೇವೆಗಳು:- ಕೆಎಸ್‌ಆರ್‌ಟಿಸಿಯು ಸಾಮಾನ್ಯ ದರ್ಜೆಯ “ಕರ್ನಾಟಕ ಸಾರಿಗೆ” ಮತ್ತು “ಗ್ರಾಮಾಂತರ ಸಾರಿಗೆ” (ಹವಾನಿಯಂತ್ರಣ ರಹಿತ) ಬಸ್‌ಗಳಿಂದ ಹಿಡಿದು, ಐಷಾರಾಮಿ ದರ್ಜೆಯ “ಐರಾವತ ಕ್ಲಬ್ ಕ್ಲಾಸ್,” “ಅಂಬಾರಿ ಡ್ರೀಮ್ ಕ್ಲಾಸ್” ಮತ್ತು ಪರಿಸರ ಸ್ನೇಹಿ ವಿದ್ಯುತ್ ಚಾಲಿತ “ಇವಿ- ಪವರ್ ಪ್ಲಸ್+” ಬಸ್‌ಗಳವರೆಗೆ ವೈವಿಧ್ಯಮಯ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ.
    • ಕಾರ್ಯವ್ಯಾಪ್ತಿ:- ಇದು ದಕ್ಷಿಣ ಕರ್ನಾಟಕದ 17 ಜಿಲ್ಲೆಗಳಿಗೆ ಸಾರಿಗೆ ಸೇವೆ ಒದಗಿಸುವುದಲ್ಲದೆ, ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುತ್ತದೆ.
    • ಆಡಳಿತಾತ್ಮಕ ವಿಭಜನೆ : ಆಡಳಿತಾತ್ಮಕ ದಕ್ಷತೆ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ, ಕೆಎಸ್‌ಆರ್‌ಟಿಸಿಯನ್ನು ಕಾಲಕ್ರಮೇಣ ವಿಭಜಿಸಿ ಸ್ವತಂತ್ರ ಪ್ರಾದೇಶಿಕ ಸಾರಿಗೆ ನಿಗಮಗಳನ್ನು ರಚಿಸಲಾಗಿದೆ. ಅವುಗಳೆಂದರೆ:
      1. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): ಬೆಂಗಳೂರು ಮಹಾನಗರ ಪ್ರದೇಶಕ್ಕಾಗಿ.
      2. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): ವಾಯುವ್ಯ ಕರ್ನಾಟಕದ ಜಿಲ್ಲೆಗಳಿಗಾಗಿ.
      3. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC): ಈಶಾನ್ಯ ಕರ್ನಾಟಕದ (ಕಲ್ಯಾಣ ಕರ್ನಾಟಕ) ಜಿಲ್ಲೆಗಳಿಗಾಗಿ.
  • ಏಕ್ಯಾ ವನ : ದೇಶದ ಮೊದಲ ನಿಸರ್ಗ-ಪ್ರೇರಿತ ಶಾಲೆ | ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯಿದೆ, 2007

    ಏಕ್ಯಾ ವನ : ದೇಶದ ಮೊದಲ ನಿಸರ್ಗ-ಪ್ರೇರಿತ ಶಾಲೆ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರು ಮೂಲದ ‘ಏಕ್ಯಾ ವನ’ ಶಾಲೆಯು, ಭಾರತದ ಮೊಟ್ಟಮೊದಲ ನಿಸರ್ಗ-ಪ್ರೇರಿತ ಕೆ-12 ಶಾಲೆಯಾಗಿ ಹೊರಹೊಮ್ಮುವ ಮೂಲಕ ಸುದ್ದಿಯಲ್ಲಿದೆ.

    ಏಕ್ಯಾ ವನ ಶಾಲೆಯ ಬಗ್ಗೆ:

    • ಸ್ಥಳ : ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶ.
    • ಸ್ವರೂಪ: ಇದು ಒಂದು ನೂತನ ಹಾಗೂ ನಿರ್ದಿಷ್ಟ ಧ್ಯೇಯ-ಪ್ರೇರಿತ ಕೆ-12 ಮಾದರಿಯ ಶಾಲೆಯಾಗಿದೆ.
    • ದೃಷ್ಟಿಕೋನ: ಇದು ಮುಖ್ಯವಾಗಿ ಸಂರಕ್ಷಣೆ, ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ನಾವೀನ್ಯತೆಗೆ ಒತ್ತು ನೀಡುತ್ತದೆ.
    • ವಿನ್ಯಾಸ: ವಿದ್ಯಾರ್ಥಿಗಳು ನಿಸರ್ಗದ ಮಡಿಲಲ್ಲಿ ಮತ್ತು ನಿಸರ್ಗದೊಂದಿಗೆ ಬೆರೆಯುತ್ತಾ ಕಲಿಯುವಂತಾಗಲು, ಈ ಶಾಲೆಯನ್ನು ಒಂದು “ಜೀವಂತ ಮತ್ತು ಕ್ರಿಯಾಶೀಲ ಜೀವಿ ಪರಿಸರ ವ್ಯವಸ್ಥೆ“ಯನ್ನಾಗಿ ರೂಪಿಸಲಾಗಿದೆ.
    • ಧ್ಯೇಯ: ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯದ ನಾಶದಂತಹ ಸಮಕಾಲೀನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಇದರ ಗುರಿಯಾಗಿದೆ. ಅವರನ್ನು ಸುಸ್ಥಿರತೆಯ ನಾವೀನ್ಯಕಾರರು, ಪ್ರತಿಪಾದಕರು ಮತ್ತು ನಾಯಕರನ್ನಾಗಿ ಸಬಲೀಕರಣಗೊಳಿಸುವುದು ಶಾಲೆಯ ಪ್ರಮುಖ ದೃಷ್ಟಿಕೋನವಾಗಿದೆ.
    • ಸಲಹಾ ಮಂಡಳಿ: ಪ್ರಖ್ಯಾತ ಪರಿಸರವಾದಿಗಳು ಮತ್ತು ಉದ್ಯಮ ರಂಗದ ನಾಯಕರನ್ನೊಳಗೊಂಡ ವಿಶೇಷ ಸಲಹಾ ಮಂಡಳಿಯು ಈ ಉಪಕ್ರಮಕ್ಕೆ ಮಾರ್ಗದರ್ಶನ ನೀಡುತ್ತಿದೆ.

    ಏಕ್ಯಾ ವನ ಶಾಲೆಯ ಪ್ರಮುಖ ಲಕ್ಷಣಗಳು: 

      1. ನಿಸರ್ಗ ಆಧಾರಿತ ಕಲಿಕೆ: ಈ ಶಾಲೆಯ ಪಠ್ಯಕ್ರಮವು ಸಾಂಪ್ರದಾಯಿಕ ತರಗತಿ ಬೋಧನೆಯ ಸಹಿತ, ಹೊರಾಂಗಣ ತರಗತಿಗಳು, ಚಿಟ್ಟೆ ಮತ್ತು ಗಿಡಮೂಲಿಕೆ ಉದ್ಯಾನಗಳು, ಮಿಶ್ರಗೊಬ್ಬರ ಘಟಕಗಳು ಮತ್ತು ಪರಿಸರ ಪ್ರಯೋಗಾಲಯಗಳನ್ನು ಪ್ರಧಾನ ಕಲಿಕಾ ನೆಲೆಗಳಾಗಿ ಬಳಸಿಕೊಳ್ಳುತ್ತದೆ.
      2. ಪಠ್ಯಕ್ರಮದ ಮಾರ್ಗಗಳು: ಜಾಗತಿಕ ಸುಸ್ಥಿರತೆಯ ವಿಷಯಗಳನ್ನು ನೈಜ ಪ್ರಪಂಚದ ಕಲಿಕೆಯೊಂದಿಗೆ ಜೋಡಿಸಲು ನಾಲ್ಕು ಪ್ರಮುಖ ಶೈಕ್ಷಣಿಕ ಮಾರ್ಗಗಳನ್ನು ರೂಪಿಸಲಾಗಿದೆ:
    • ಜನರು ಮತ್ತು ಗ್ರಹ 
    • ಭೂಮಿಯ ಆರೈಕೆ
    • ಜೀವ ವ್ಯವಸ್ಥೆಗಳು 
    • ಶಕ್ತಿ ಮತ್ತು ನಾವೀನ್ಯತೆ

    ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯಿದೆ, 2007

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಸರ್ಕಾರವು ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯಿದೆ, 2007’ ಕ್ಕೆ ಮಹತ್ವದ ತಿದ್ದುಪಡಿಗಳನ್ನು ಮಾಡಿದೆ.

    ತಿದ್ದುಪಡಿಗಳ ಮುಖ್ಯಾಂಶಗಳು:

    • ಉದ್ದೇಶ: ನಾಯಿ, ಇತರ ಪ್ರಾಣಿ ಮತ್ತು ಹಾವು ಕಡಿತಕ್ಕೆ ಒಳಗಾದ ಸಂತ್ರಸ್ತರಿಗೆ, ಸಮಯೋಚಿತ ಹಾಗೂ ಜೀವ ರಕ್ಷಕ ಚಿಕಿತ್ಸೆಯು ಲಭ್ಯವಾಗುವುದನ್ನು ಖಚಿತಪಡಿಸಲು ಅಸ್ತಿತ್ವದಲ್ಲಿರುವ ಕಾನೂನು ಉಪಬಂಧಗಳನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
    • ಹಿನ್ನೆಲೆ: ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ರೇಬೀಸ್ ನಿರೋಧಕ ಲಸಿಕೆ (ARV), ಇಮ್ಯುನೊಗ್ಲಾಬ್ಯುಲಿನ್ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳು ಏಕರೂಪವಾಗಿ ಲಭ್ಯವಿರಬೇಕೆಂದು ಕೋರಿ ದಾಖಲಾದ ಸ್ವಯಂಪ್ರೇರಿತ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ನವೆಂಬರ್ 7, 2025 ರಂದು ನೀಡಿದ ನಿರ್ದೇಶನಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ತಿದ್ದುಪಡಿಯನ್ನು ತರಲಾಗಿದೆ.
    • ಕಡ್ಡಾಯ ಚಿಕಿತ್ಸೆ: ಕಾಯಿದೆಗೆ ಸೇರ್ಪಡೆಗೊಳಿಸಲಾದ ಹೊಸ ನಿಯಮದನ್ವಯ, ಹಾವು ಕಡಿತ ಅಥವಾ ನಾಯಿ/ಪ್ರಾಣಿ ಕಡಿತದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ಮುನ್ನ ಮುಂಗಡ ಹಣ ಪಾವತಿಗೆ ಒತ್ತಾಯಿಸಬಾರದು. ಮತ್ತು ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಯು ಸಂತ್ರಸ್ತರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸೆಯನ್ನು ನೀಡುವುದು ಕಡ್ಡಾಯವಾಗಿದೆ.
  • ಮೆಂಟರಿಂಗ್ ಸಮ್ಮಿಟ್ ಇಂಡಿಯಾ (ಭಾರತ ಮಾರ್ಗದರ್ಶನ ಶೃಂಗಸಭೆ), 2025 | ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವು; ಸೋಂಕಿನ ಶಂಕೆ

    ಮೆಂಟರಿಂಗ್ ಸಮ್ಮಿಟ್ ಇಂಡಿಯಾ (ಭಾರತ ಮಾರ್ಗದರ್ಶನ ಶೃಂಗಸಭೆ), 2025

    ಇದೀಗ ಸುದ್ದಿಯಲ್ಲಿದೆ:

    • ‘ಮೆಂಟರ್ ಟುಗೆದರ್’ ಸಂಸ್ಥೆಯ ವತಿಯಿಂದ, ಬೆಂಗಳೂರಿನಲ್ಲಿರುವ ‘ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ’ದಲ್ಲಿ ‘ಮೆಂಟರಿಂಗ್ ಸಮ್ಮಿಟ್ ಇಂಡಿಯಾ 2025’ ಆಯೋಜನೆಗೊಳ್ಳಲಿದೆ.

    ಮೆಂಟರಿಂಗ್ ಸಮ್ಮಿಟ್ ಇಂಡಿಯಾ, 2025 ರ ಬಗ್ಗೆ: 

    • ದಿನಾಂಕ:- ನವೆಂಬರ್ 19-20, 2025.
    • ಸ್ಥಳ:- ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ, ಬೆಂಗಳೂರು.
    • ಆಯೋಜಕರು:- ಮೆಂಟರ್ ಟುಗೆದರ್ ಸಂಸ್ಥೆ.
    • ಉದ್ದೇಶ:- ಮಾರ್ಗದರ್ಶನ ಪ್ರಕ್ರಿಯೆಯನ್ನು ಒಂದು “ಸಾರ್ವಜನಿಕ ಸರಕು”  ಎಂದು ಪರಿಗಣಿಸಿ, ಆ ದೃಷ್ಟಿಕೋನವನ್ನು ಮುನ್ನಡೆಸುವುದು ಈ ಶೃಂಗಸಭೆಯ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಮಾರ್ಗದರ್ಶನ ನೀಡುವ ಪರಿಣಿತರು, ಸಂಶೋಧಕರು ಮತ್ತು ಬದಲಾವಣೆಯ ಹರಿಕಾರರನ್ನು ಒಂದೇ ವೇದಿಕೆಯಡಿ ತರುವುದು ಹಾಗೂ ದೇಶಾದ್ಯಂತ ಯುವಜನರನ್ನು ಬೆಂಬಲಿಸಲು ಪರಸ್ಪರ ಸಹಯೋಗವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

    ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವು; ಸೋಂಕಿನ ಶಂಕೆ

    ಇದೀಗ ಸುದ್ದಿಯಲ್ಲಿದೆ:

    • ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿಯಲ್ಲಿರುವ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಮೃತಪಟ್ಟಿವೆ. 
    • ಪ್ರಾಥಮಿಕ ಮಾಹಿತಿಯ ಪ್ರಕಾರ, ಬ್ಯಾಕ್ಟೀರಿಯಾ ಸೋಂಕಿನಿಂದ ಈ ಪ್ರಾಣಿಗಳು ಸಾವನ್ನಪ್ಪಿರುವ ಶಂಕೆ ಇದ್ದು, ಹೆಚ್ಚಿನ ತಪಾಸಣೆಗಾಗಿ ಆಂತರಿಕ ಅಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಕೃಷ್ಣಮೃಗ (ಆಂಟಿಲೋಪ್ ಸರ್ವಿಕಾಪ್ರಾ) ಗಳ ಬಗ್ಗೆ:

    • ದೈಹಿಕ ಲಕ್ಷಣಗಳು: 
    • ಗಂಡು ಕೃಷ್ಣಮೃಗಗಳು ಆಕರ್ಷಕವಾದ ಮತ್ತು ಸುರುಳಿಯಾಕಾರದ ಕೊಂಬುಗಳನ್ನು ಹೊಂದಿದ್ದು, ಇವು 75 ಸೆಂ.ಮೀ (30 ಇಂಚು) ವರೆಗೆ ಬೆಳೆಯುತ್ತವೆ. ಗಂಡು ಕೃಷ್ಣಮೃಗಗಳ ಮೈಬಣ್ಣ ಗಾಢ ಕಂದು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತದೆ. 
    • ಹೆಣ್ಣು ಕೃಷ್ಣಮೃಗಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಕೋಡುಗಳಿರುವುದಿಲ್ಲ ಮತ್ತು ಕೆಂಪು-ಕಂದು ಬಣ್ಣವನ್ನು ಹೊಂದಿರುತ್ತವೆ.
      • ಆವಾಸಸ್ಥಾನ: ಇವು ಸಾಮಾನ್ಯವಾಗಿ ಹುಲ್ಲುಗಾವಲುಗಳು, ಸವನ್ನಾಗಳು ಮತ್ತು ತೆರೆದ ಅರಣ್ಯಗಳಲ್ಲಿ ಕಂಡುಬರುತ್ತವೆ. ಮೇಯಲು ಕಡಿಮೆ ಎತ್ತರದ ಹುಲ್ಲು ಇರುವ ಪ್ರದೇಶಗಳನ್ನು ಇವು ಹೆಚ್ಚು ಇಷ್ಟಪಡುತ್ತವೆ.
      • ಬೆದರಿಕೆಗಳು : ಐತಿಹಾಸಿಕವಾಗಿ ಭಾರತದ ದೇಶೀಯ ಸಂಸ್ಥಾನಗಳಲ್ಲಿ ಇವುಗಳ ಅತಿಯಾದ ಬೇಟೆ ನಡೆಯುತ್ತಿತ್ತು. ಪ್ರಸ್ತುತ, ಆವಾಸಸ್ಥಾನಗಳ ನಾಶ ಮತ್ತು ವಾಣಿಜ್ಯ/ಆರ್ಥಿಕ ಬಳಕೆಗಾಗಿ ನಡೆಯುವ ಅಕ್ರಮ ಬೇಟೆ ಇವುಗಳ ಅಸ್ತಿತ್ವಕ್ಕೆ ಪ್ರಮುಖ ಬೆದರಿಕೆಗಳಾಗಿವೆ.
    • ಸಂರಕ್ಷಣಾ ಸ್ಥಾನಮಾನ:
    • IUCN ಕೆಂಪು ಪಟ್ಟಿ: ಕನಿಷ್ಠ ಕಾಳಜಿ (LC)
    • CITES: ಅನುಬಂಧ III
    • ವನ್ಯಜೀವಿ (ಸಂರಕ್ಷಣಾ) ಕಾಯಿದೆ, 1972: ಅನುಸೂಚಿ I 

    ಇತರೆ ಪ್ರಮುಖ ಅಂಶಗಳು

    • ರಾಜ್ಯ ಪ್ರಾಣಿ: ಕೃಷ್ಣಮೃಗವನ್ನು ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ‘ರಾಜ್ಯ ಪ್ರಾಣಿ’ಯನ್ನಾಗಿ ಘೋಷಿಸಲಾಗಿದೆ.
    • ಸಾಂಸ್ಕೃತಿಕ ಮಹತ್ವ: ಹಿಂದೂ ಧರ್ಮದಲ್ಲಿ, ಕೃಷ್ಣಮೃಗವನ್ನು ಪಾವಿತ್ರ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಇದರ ಚರ್ಮ ಮತ್ತು ಕೊಂಬುಗಳನ್ನು ಪವಿತ್ರ ವಸ್ತುಗಳಾಗಿ ಪೂಜಿಸಲಾಗುತ್ತದೆ. ಬೌದ್ಧ ಧರ್ಮದಲ್ಲಿ, ಇದನ್ನು ಅದೃಷ್ಟದ ಸಂಕೇತವೆಂದು ನಂಬಲಾಗಿದೆ.