ಭಾರತ-ಶ್ರೀಲಂಕಾ ಒಪ್ಪಂದ, 1987
ಅಂತರರಾಷ್ಟ್ರೀಯ ಸಂಬಂಧಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
- ಶ್ರೀಲಂಕಾದಲ್ಲಿರುವ ತಮಿಳು ರಾಜಕೀಯ ಪಕ್ಷಗಳು, ‘ಭಾರತ-ಶ್ರೀಲಂಕಾ ಒಪ್ಪಂದ’ದ ಸಂಪೂರ್ಣ ಅನುಷ್ಠಾನಕ್ಕಾಗಿ ಶ್ರೀಲಂಕಾ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವಂತೆ ಭಾರತವನ್ನು ಒತ್ತಾಯಿಸಿವೆ.
ಭಾರತ-ಶ್ರೀಲಂಕಾ ಒಪ್ಪಂದ, 1987 ದ ಬಗ್ಗೆ:
- ಇದು ಜುಲೈ 1987 ರಲ್ಲಿ ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮತ್ತು ಶ್ರೀಲಂಕಾದ ಅಧ್ಯಕ್ಷ ಜೆ.ಆರ್. ಜಯವರ್ಧನೆ ಅವರ ನಡುವೆ ಸಹಿ ಹಾಕಲ್ಪಟ್ಟ ದ್ವಿಪಕ್ಷೀಯ ಒಪ್ಪಂದವಾಗಿದೆ.
- ಧ್ಯೇಯೋದ್ದೇಶ:- ಶ್ರೀಲಂಕಾದಲ್ಲಿನ ಜನಾಂಗೀಯ ಸಂಘರ್ಷವನ್ನು ಪರಿಹರಿಸುವುದು.
- ಉದ್ದೇಶಗಳು:- ಸಿಂಹಳೀಯರ-ಬಹುಮತವಿರುವ ಸರ್ಕಾರ ಮತ್ತು ತಮಿಳು ಅಲ್ಪಸಂಖ್ಯಾತರ ನಡುವಿನ ಸುದೀರ್ಘ ಸಂಘರ್ಷವನ್ನು ಬಗೆಹರಿಸುವ ಗುರಿಯನ್ನು ಈ ಒಪ್ಪಂದ ಹೊಂದಿತ್ತು.
- ಪ್ರಮುಖ ನಿಬಂಧನೆಗಳು:
- ಪ್ರಾಂತ್ಯಗಳಿಗೆ ಹೆಚ್ಚಿನ ‘ಪ್ರಾದೇಶಿಕ ಸ್ವಾಯತ್ತತೆ’ ಒದಗಿಸುವ ಉದ್ದೇಶದಿಂದ, ರಾಜಕೀಯ ಅಧಿಕಾರಗಳ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಇದು ಪ್ರಯತ್ನಿಸಿತು.
- ಇದು ಸಿಂಹಳ ಭಾಷೆಯ ಜೊತೆಗೆ ತಮಿಳು ಭಾಷೆಗೂ ಅಧಿಕೃತ ಸ್ಥಾನಮಾನವನ್ನು ನೀಡಿತು.
ಶ್ರೀಲಂಕಾದ ಸಂವಿಧಾನದಕ್ಕೇ 13ನೇ ತಿದ್ದುಪಡಿ, 1987 ರಲ್ಲಿ ಜಾರಿ:
- ಉದ್ದೇಶ:- ಭಾರತ-ಶ್ರೀಲಂಕಾ ಒಪ್ಪಂದದ ನಿಬಂಧನೆಗಳನ್ನು ಜಾರಿಗೆ ತರುವುದು ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಸಾಂವಿಧಾನಿಕ ಚೌಕಟ್ಟನ್ನು ಒದಗಿಸುವುದು.
- ಪ್ರಮುಖ ಲಕ್ಷಣಗಳು:
- ಎಲ್ಲಾ 9 ಪ್ರಾಂತ್ಯಗಳಲ್ಲಿ ‘ಪ್ರಾಂತೀಯ ಮಂಡಳಿ’ಗಳ ಸ್ಥಾಪನೆ:- ವಿಕೇಂದ್ರೀಕೃತ ಆಡಳಿತವನ್ನು ಸುಗಮಗೊಳಿಸಲು, ಈ ತಿದ್ದುಪಡಿಯ ಮೂಲಕ ಪ್ರಾಂತೀಯ ಮಂಡಳಿ’ಗಳನ್ನು ಸ್ಥಾಪಿಸಲಾಯಿತು.
- ಮೂರು-ಹಂತದ ಅಧಿಕಾರ ಹಂಚಿಕೆ:- ಇದು ಭಾರತದ ಒಕ್ಕೂಟ ವ್ಯವಸ್ಥೆಯ ರಚನೆಯನ್ನು ಹೋಲುವಂತೆ, ಪ್ರಾಂತೀಯ ಪಟ್ಟಿ, ಕಾಯ್ದಿರಿಸಿದ (ಮೀಸಲು) ಪಟ್ಟಿ ಮತ್ತು ಸಮವರ್ತಿ ಪಟ್ಟಿಗಳನ್ನು ಪರಿಚಯಿಸಿತು.
- ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸ್ಥಳೀಯ ಆಡಳಿತದಂತಹ ಹಲವಾರು ಕ್ರಿಯಾತ್ಮಕ ವಿಷಯಗಳನ್ನು ಪ್ರಾಂತೀಯ ಪಟ್ಟಿಗೆ ವರ್ಗಾಯಿಸಲು ಇದು ಅನುವು ಮಾಡಿಕೊಟ್ಟಿತು.
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)
ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
- ವೈದ್ಯಕೀಯ ಶಿಕ್ಷಣದ ಪ್ರವೇಶಾತಿ ಸಾಮರ್ಥ್ಯವನ್ನು ವಿಸ್ತರಿಸುವ ಹಾಗೂ ಗುಣಮಟ್ಟದ ಮಾನದಂಡಗಳನ್ನು ಬಲಪಡಿಸುವ ಉದ್ದೇಶದಿಂದ, ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ‘ವೈದ್ಯಕೀಯ ವೃತ್ತಿಗಾರರ ನೋಂದಣಿ ಮತ್ತು ವೈದ್ಯಕೀಯ ವೃತ್ತಿ ನಿರ್ವಹಣಾ ಪರವಾನಗಿ (ತಿದ್ದುಪಡಿ) ನಿಯಮಾವಳಿಗಳು, 2026’ಕ್ಕೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ದ ಬಗ್ಗೆ:
- ಇದು ಭಾರತದಲ್ಲಿ ವೈದ್ಯಕೀಯ ಶಿಕ್ಷಣ, ವೃತ್ತಿಪರರು ಮತ್ತು ಸಂಸ್ಥೆಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಹೊಂದಿರುವ ಭಾರತದ ಅತ್ಯುನ್ನತ ಶಾಸನಬದ್ಧ ಸಂಸ್ಥೆಯಾಗಿದೆ.
- ದೇಶಾದ್ಯಂತ ಆರೋಗ್ಯ ರಕ್ಷಣೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಆಡಳಿತವನ್ನು ಸುಗಮಗೊಳಿಸಲು, ‘ಭಾರತೀಯ ವೈದ್ಯಕೀಯ ಮಂಡಳಿ’ಯನ್ನು (MCI) ಬದಲಾಯಿಸಿ, ‘ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ, 2019’ರ ಅಡಿಯಲ್ಲಿ 2020 ರಲ್ಲಿ ಇದನ್ನು ಸ್ಥಾಪಿಸಲಾಯಿತು.
- ಇದು ಪ್ರಮುಖವಾಗಿ ನಾಲ್ಕು ಸ್ವಾಯತ್ತ ಮಂಡಳಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಅವುಗಳೆಂದರೆ,
- ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿ (UGMEB).
- ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿ (PGMEB).
- ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಣೀಕರಣ ಮಂಡಳಿ (MARB).
- ನೈತಿಕತೆ ಮತ್ತು ವೈದ್ಯಕೀಯ ನೋಂದಣಿ ಮಂಡಳಿ (EMRB).
- ಆಯೋಗ (NMC)ದ ಸಂಯೋಜನೆ:
- ಒಬ್ಬರು ಅಧ್ಯಕ್ಷರು.
- 10 ಪದನಿಮಿತ್ತ ಸದಸ್ಯರು: (ಸಚಿವಾಲಯಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ).
- 22 ಅರೆಕಾಲಿಕ ಸದಸ್ಯರು: (ರಾಜ್ಯ ಪ್ರತಿನಿಧಿಗಳು ಮತ್ತು ತಜ್ಞರನ್ನು ಒಳಗೊಂಡಂತೆ).
ಒಡಿಶಾ: ‘ಕಡಲ-ವಲಯದ ಪ್ರಾದೇಶಿಕ ಯೋಜನೆ’ ಆರಂಭಿಸಿದ ಭಾರತದ ಮೊದಲ ರಾಜ್ಯ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಸಮಗ್ರ ಕರಾವಳಿ ಮತ್ತು ಕಡಲ ಯೋಜನೆಗಾಗಿ ರಾಜ್ಯದಲ್ಲಿ ‘ಕಡಲ-ವಲಯದ ಪ್ರಾದೇಶಿಕ ಯೋಜನೆ’ಯನ್ನು ಪ್ರಾರಂಭಿಸಲು ಒಡಿಶಾ ಸರ್ಕಾರವು ಇತ್ತೀಚಿಗೆ ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ‘ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರ’ (NCCR) ದೊಂದಿಗೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ.
ಕಡಲ-ವಲಯದ ಪ್ರಾದೇಶಿಕ ಯೋಜನೆಯ ಬಗ್ಗೆ (MSP – Marine Spatial Plan):
- ಈ ಯೋಜನೆಯು ಒಡಿಶಾದ 550 ಕ್ಕೂ ಅಧಿಕ ಕಿ.ಮೀ ಉದ್ದದ ಕರಾವಳಿಯನ್ನು ಒಳಗೊಂಡಿದೆ.
- ‘ಚಿಲ್ಕಾ ಸರೋವರ’, ‘ಭಿತರ್ಕನಿಕಾ’ ಮತ್ತು ‘ಗಹಿರ್ಮಾತಾ’ದಂತಹ ಪರಿಸರ-ಸೂಕ್ಷ್ಮ ವಲಯಗಳ ರಕ್ಷಣೆಯೊಂದಿಗೆ ಆರ್ಥಿಕ ಚಟುವಟಿಕೆಗಳನ್ನು ಸಮತೋಲನಗೊಳಿಸುವ ಗುರಿಯನ್ನು ಇದು ಹೊಂದಿದೆ.
ಈ ಯೋಜನೆಯ ಪ್ರಮುಖ ಉದ್ದೇಶಗಳು:
- ನೀಲಿ ಆರ್ಥಿಕತೆಯ ಬೆಳವಣಿಗೆ:- ಮೀನುಗಾರಿಕೆ, ಪ್ರವಾಸೋದ್ಯಮ, ಬಂದರುಗಳು ಮತ್ತು ನವೀಕರಿಸಬಹುದಾದ ಸಾಗರ ಇಂಧನದಂತಹ ವಲಯಗಳಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದು.
- ಸಂಘರ್ಷ ಪರಿಹಾರ:- ಸಾಂಪ್ರದಾಯಿಕ ಮೀನುಗಾರಿಕಾ ಸಮುದಾಯಗಳು ಮತ್ತು ಕೈಗಾರಿಕಾ-ಬಂದರು ಅಭಿವೃದ್ಧಿಗಾರರಂತಹ ವಿವಿಧ ಪಾಲುದಾರರ ನಡುವಿನ ಅತಿಕ್ರಮಣ ಮತ್ತು ವಿವಾದಗಳನ್ನು ಕಡಿಮೆ ಮಾಡುವುದು.
- ಹವಾಮಾನ ಸ್ಥಿತಿಸ್ಥಾಪಕತ್ವ:- ಪದೇ ಪದೇ ಸಂಭವಿಸುವ ಚಂಡಮಾರುತಗಳು ಮತ್ತು ಸಮುದ್ರ-ಮಟ್ಟದ ಏರಿಕೆಯ ವಿರುದ್ಧ ನೈಸರ್ಗಿಕ ರಕ್ಷಾಕವಚವಾಗಿ ಕಾರ್ಯನಿರ್ವಹಿಸುವ ಕರಾವಳಿ ಪರಿಸರ ವ್ಯವಸ್ಥೆಗಳ ರಕ್ಷಣೆಯನ್ನು ಬಲಪಡಿಸುವುದು.
- SDG ಹೊಂದಾಣಿಕೆ:- ಇದು ‘ಸುಸ್ಥಿರ ಅಭಿವೃದ್ಧಿ ಗುರಿ-14’ (SDG 14 -ನೀರಿನೊಳಗಿನ ಜೀವಸಂಕುಲ/ ಜಲಚರಗಳ ರಕ್ಷಣೆ) ಅನ್ನು ಬೆಂಬಲಿಸುತ್ತದೆ.
ಲುಂಪೊಂಗ್‌ಡೆಂಗ್ ದ್ವೀಪ (Lumpongdeng Island) – ಮೇಘಾಲಯ
ಭೂಗೋಳ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಪರಿಸರ ಸಂರಕ್ಷಣಾ ಸಂಘಟನೆಗಳ ತೀವ್ರ ಪ್ರತಿಭಟನೆಯ ನಂತರ, ಮೇಘಾಲಯ ಸರ್ಕಾರವು ಲುಂಪೊಂಗ್‌ಡೆಂಗ್ ದ್ವೀಪದಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದ ‘ಐಷಾರಾಮಿ ರೆಸಾರ್ಟ್ ಯೋಜನೆ’ಯನ್ನು ಕೈಬಿಟ್ಟಿದೆ.
ಲುಂಪೊಂಗ್‌ಡೆಂಗ್ ದ್ವೀಪದ ಬಗ್ಗೆ:
- ಭೌಗೋಳಿಕ ಸ್ಥಾನ:- ಇದು ಇದು ಮೇಘಾಲಯದ ಶಿಲ್ಲಾಂಗ್‌ನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ‘ಉಮಿಯಮ್ ಸರೋವರ’ದಲ್ಲಿ ನೆಲೆಗೊಂಡಿದೆ.
- ಜಲವಿದ್ಯುತ್ ಯೋಜನೆಗಾಗಿ ಉಮಿಯಮ್ ನದಿಗೆ ಅಣೆಕಟ್ಟು ಕಟ್ಟುವ ಮೂಲಕ 1960 ರ ದಶಕದ ಆರಂಭದಲ್ಲಿ ನಿರ್ಮಿಸಲಾದ ‘ಮಾನವ ನಿರ್ಮಿತ ಜಲಾಶಯ’ ಇದಾಗಿದೆ.
- ಈ ದ್ವೀಪವು ಪ್ರಮುಖವಾಗಿ ಸೂಚಿಪರ್ಣ/ಎಲೆ ಮೊನಚಾದ (Coniferous) ಸಸ್ಯವರ್ಗದಿಂದ ಕೂಡಿದ್ದು, ಸರೋವರದ ಮಧ್ಯಭಾಗದಲ್ಲಿ ಕಂಡುಬರುತ್ತದೆ.







ನಿಮ್ಮದೊಂದು ಉತ್ತರ