ಅಂಡಮಾನ್ನಿಂದ ಎರಡು ಗಿನ್ನೆಸ್ ದಾಖಲೆಗಳು
ಭೂಗೋಳ

ಇತ್ತೀಚಿಗೆ ಸುದ್ದಿಯಲ್ಲಿದೆ:
- ಹ್ಯಾವ್ಲಾಕ್ ದ್ವೀಪ ಎಂದು ಹಿಂದೆ ಕರೆಯಲಾಗುತ್ತಿದ್ದ “ಸ್ವರಾಜ್ ದ್ವೀಪ”ದಲ್ಲಿ, ನೀರಿನ ಅಡಿಯಲ್ಲಿ ಅತಿ ಎತ್ತರದ ಮಾನವ ಗೋಪುರವನ್ನು (Tallest human stack) ರಚಿಸುವ ಮೂಲಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತೊಂದು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿವೆ.
ಈ ದಾಖಲೆಯ ಕುರಿತು:
- ಇಲ್ಲಿನ ಕೇಂದ್ರಾಡಳಿತ ಪ್ರದೇಶದ ಆಡಳಿತವು ನೀರಿನ ಅಡಿಯಲ್ಲಿ ಸುಮಾರು 60×40 ಮೀಟರ್ ವಿಸ್ತೀರ್ಣದ ವಿಶ್ವದ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಈ ದಾಖಲೆ ನಿರ್ಮಿಸಿದ ಕೇವಲ ಒಂದು ದಿನದ ಅಂತರದಲ್ಲಿಯೇ ಎರಡನೇ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದೆ.
- ಈ ಅವಳಿ ಗಿನ್ನೆಸ್ ವಿಶ್ವ ದಾಖಲೆಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆಯುವ ನಿರೀಕ್ಷೆಯಿದೆ. ಅಲ್ಲದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಸ್ಕೂಬಾ ಡೈವಿಂಗ್ (ಜಲಾಂತರ್ಗತ ಸಾಹಸ ಕ್ರೀಡೆ) ಹಾಗೂ ಪರಿಸರ ಪ್ರವಾಸೋದ್ಯಮದ ಜಾಗತಿಕ ಕೇಂದ್ರವನ್ನಾಗಿ ಉತ್ತೇಜಿಸಲು ಇವು ಪೂರಕವಾಗಲಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಗ್ಗೆ:
- ಸ್ಥಳ: ಈ ದ್ವೀಪಗಳು ಭಾರತದ ಮುಖ್ಯ ಭೂಭಾಗದಿಂದ ಆಗ್ನೇಯಕ್ಕೆ ಸುಮಾರು 1,300 ಕಿ.ಮೀ. ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ನೆಲೆಗೊಂಡಿವೆ.
- ವಿಸ್ತರಣೆ : ಇದು 6° 45′ N ನಿಂದ 13° 41′ N ಅಕ್ಷಾಂಶದವರೆಗೆ ಮತ್ತು 92° 12′ E ನಿಂದ 93° 57′ E ರೇಖಾಂಶದವರೆಗೆ ವಿಸ್ತರಿಸಿದೆ.
- ದಕ್ಷಿಣ ತುದಿಯಲ್ಲಿರುವ ದ್ವೀಪವನ್ನು ‘ಗ್ರೇಟ್ ನಿಕೋಬಾರ್’ ಎಂದು ಕರೆಯಲಾಗುತ್ತದೆ. ಇದರ ದಕ್ಷಿಣದ ತುತ್ತತುದಿಯಾದ ಇಂದಿರಾ ಪಾಯಿಂಟ್ (2004 ರ ಸುನಾಮಿಯಿಂದ ಮುಳುಗಡೆಯಾಗಿದೆ)ನಿಂದ ಇಂಡೋನೇಷ್ಯಾದ ಸುಮಾತ್ರಾ ದ್ವೀಪವು ಕೇವಲ 150 ಕಿ.ಮೀ. ದೂರದಲ್ಲಿದೆ.
- ಅತಿ ಎತ್ತರದ ಸ್ಥಳಗಳು: ಉತ್ತರ ಅಂಡಮಾನ್ನಲ್ಲಿರುವ ‘ಸ್ಯಾಡಲ್ ಪೀಕ್’ (732 ಮೀಟರ್) ಮತ್ತು ಗ್ರೇಟ್ ನಿಕೋಬಾರ್ನಲ್ಲಿರುವ ‘ಮೌಂಟ್ ಥುಲ್ಲಿಯರ್’ (642 ಮೀಟರ್) ಅತ್ಯುನ್ನತ ಶಿಖರಗಳಾಗಿವೆ.
- ವಿಶೇಷತೆ: ಪ್ಯಾಂಡನಸ್ ಅಥವಾ ನಿಕೋಬಾರ್ ಬ್ರೆಡ್ಫ್ರೂಟ್ ಎಂಬುದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾತ್ರ ಕಂಡುಬರುವ ಒಂದು ಅಪರೂಪದ ಹಣ್ಣಾಗಿದೆ.
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ‘ಬ್ಯಾರನ್ ದ್ವೀಪ’ ಕೇವಲ ಭಾರತದ ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾದ ಏಕೈಕ ಸಕ್ರಿಯ ಜ್ವಾಲಾಮುಖಿಯಾಗಿದೆ.
- ಗ್ರೇಟ್ ನಿಕೋಬಾರ್ನಲ್ಲಿರುವ ‘ಇಂದಿರಾ ಪಾಯಿಂಟ್’ ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ.
ಲಿಪುಲೆಖ್ ಕಣಿವೆಮಾರ್ಗ : ಉತ್ತರಾಖಂಡ
ಭೂಗೋಳ

ಇತ್ತೀಚೆಗೆ ಸುದ್ದಿಯಲ್ಲಿದೆ:
- ನೇಪಾಳವು ‘ಲಿಪುಲೆಖ್ ಕಣಿವೆಮಾರ್ಗದ’ ಪ್ರದೇಶವನ್ನು ‘ವಿವಾದಿತ ಭೂಭಾಗ’ ಎಂದು ಪರಿಗಣಿಸಿರುವುದರಿಂದ, ಈ ಮಾರ್ಗದ ಮೂಲಕ ಕೈಲಾಸ ಮಾನಸಸರೋವರ ಯಾತ್ರೆಯನ್ನು ಕೈಗೊಳ್ಳುವ ಭಾರತದ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದೆ.
ಲಿಪುಲೆಖ್ ಕಣಿವೆಮಾರ್ಗದ ಬಗ್ಗೆ:
- ಇದು ಉತ್ತರಾಖಂಡ (ಭಾರತ) ರಾಜ್ಯದ ಪಿಥೋರಗಢ ಜಿಲ್ಲೆಯಲ್ಲಿರುವ ಅತಿ ಎತ್ತರದ ಹಿಮಾಲಯದ ಕಣಿವೆ ಮಾರ್ಗವಾಗಿದೆ.
- ಇದು ಭಾರತ, ಚೀನಾ (ಟಿಬೆಟ್) ಮತ್ತು ನೇಪಾಳವನ್ನು ಸಂಪರ್ಕಿಸುವ ಒಂದು ಪ್ರಮುಖ ಕಾರ್ಯತಂತ್ರದ ತ್ರಿ-ಸಂಗಮವಾಗಿ ಕಾರ್ಯನಿರ್ವಹಿಸುತ್ತದೆ.
- ಭಾರತದಿಂದ ‘ಧಾರ್ಚುಲಾ’ ಮೂಲಕ ಇದನ್ನು ಪ್ರವೇಶಿಸಬಹುದು.
- ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳುವ ಭಾರತೀಯ ಯಾತ್ರಾರ್ಥಿಗಳಿಗೆ ಇದು ಸಾಂಪ್ರದಾಯಿಕ ಮಾರ್ಗವಾಗಿರುವುದರಿಂದ ಇದು ಕಾರ್ಯತಂತ್ರದ ದೃಷ್ಟಿಯಿಂದ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ್ದಾಗಿದೆ.
- 1992 ರಲ್ಲಿ ವ್ಯಾಪಾರಕ್ಕಾಗಿ ಮುಕ್ತವಾದಾಗ ಇದು ಮೊಟ್ಟಮೊದಲ ‘ಭಾರತ-ಚೀನಾ ಗಡಿ ವ್ಯಾಪಾರ ಕೇಂದ್ರ’ವಾದ ಕಾರಣದಿಂದ, ಇದು ಐತಿಹಾಸಿಕ ವಾಣಿಜ್ಯ ಮೌಲ್ಯವನ್ನೂ ಹೊಂದಿದೆ.
ವಿವಾದವೇನು?
- ಲಿಪುಲೆಖ್ ಕಣಿವೆಮಾರ್ಗದ ಕುರಿತು ಭಾರತ ಮತ್ತು ನೇಪಾಳ ನಡುವಿನ ಬಿಕ್ಕಟ್ಟು ಒಂದು ಸಂಕೀರ್ಣ ಗಡಿ ವಿವಾದವಾಗಿದ್ದು, ಇದು 1816 ರ ‘ಸುಗೌಲಿ ಒಪ್ಪಂದ’ದಿಂದ ಹುಟ್ಟಿಕೊಂಡಿದೆ.
- ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳ ಸಾಮ್ರಾಜ್ಯದ ನಡುವೆ ಸಹಿ ಹಾಕಲಾದ ಈ ಒಪ್ಪಂದವು, ಕಾಳಿ ನದಿಯನ್ನು (ಮಹಾಕಾಳಿ) ನೇಪಾಳದ ಪಶ್ಚಿಮ ಗಡಿಯಾಗಿ ನಿಗದಿಪಡಿಸಿತು.
- ಆದರೆ, ಈ ನದಿಯು ‘ಲಿಂಪಿಯಾಧುರ’ದಲ್ಲಿ ಉಗಮಿಸುತ್ತದೆ ಎಂದು ನೇಪಾಳ ಪ್ರತಿಪಾದಿಸುತ್ತಿದೆ. ಈ ಪ್ರತಿಪಾದದ ಅನ್ವಯ, ಲಿಪುಲೆಖ್ ಮತ್ತು ಕಾಲಾಪಾನಿ ಪ್ರದೇಶಗಳು ನೇಪಾಳದ ಭೂಪ್ರದೇಶದ ವ್ಯಾಪ್ತಿಗೆ ಸೇರುತ್ತವೆ.
ಪಲಾಯನಗೊಂಡ ಆರ್ಥಿಕ ಅಪರಾಧಿಗಳು (Fugitive Economic Offenders)
ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಜಾರಿ ನಿರ್ದೇಶನಾಲಯವು (ED) 21 ವ್ಯಕ್ತಿಗಳನ್ನು ‘ಪಲಾಯನಗೊಂಡ ಆರ್ಥಿಕ ಅಪರಾಧಿಗಳು’ (FEOs) ಎಂದು ಅಧಿಕೃತವಾಗಿ ಘೋಷಿಸಿದೆ.
ಪಲಾಯನಗೊಂಡ ಆರ್ಥಿಕ ಅಪರಾಧಿಗಳು (Fugitive Economic Offender – FEO):
- ‘ಪಲಾಯನಗೊಂಡ ಆರ್ಥಿಕ ಅಪರಾಧಿ’ (FEO) ಎಂದರೆ ₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆರ್ಥಿಕ ಅಪರಾಧಕ್ಕಾಗಿ ಭಾರತೀಯ ನ್ಯಾಯಾಲಯದಿಂದ ಬಂಧನ ವಾರಂಟ್ (Arrest warrant) ಎದುರಿಸುತ್ತಿರುವ ವ್ಯಕ್ತಿಯಾಗಿದ್ದು, ಅವರು ಕ್ರಿಮಿನಲ್ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಭಾರತವನ್ನು ತೊರೆದಿರುತ್ತಾರೆ ಅಥವಾ ಕಾನೂನನ್ನು ಎದುರಿಸಲು ವಿದೇಶದಿಂದ ಮರಳಲು ನಿರಾಕರಿಸುತ್ತಿರುತ್ತಾರೆ.
- ಆರ್ಥಿಕ ಅಪರಾಧಿಗಳು ಭಾರತೀಯ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗುಳಿದು ನ್ಯಾಯದಿಂದ ತಪ್ಪಿಸಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ, ‘ಪಲಾಯನಗೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ’ (FEOA), 2018ರ ಅಡಿಯಲ್ಲಿ ಈ ಕಾನೂನುಬದ್ಧ ಸ್ಥಾನಮಾನವನ್ನು ಸ್ಥಾಪಿಸಲಾಯಿತು.
ಪಲಾಯನಗೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ, 2018 (Fugitive Economic Offenders Act, 2018):
- ಆಸ್ತಿ ಮುಟ್ಟುಗೋಲು: ಭಾರತ ಮತ್ತು ವಿದೇಶಗಳಲ್ಲಿರುವ ಅಪರಾಧಿಯ ಆಸ್ತಿಗಳನ್ನು ಜಪ್ತಿ ಮಾಡಲು ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಈ ಕಾಯ್ದೆಯು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
- ಈ ಕಾನೂನು ಬೇನಾಮಿ ಆಸ್ತಿಗಳನ್ನು ಮತ್ತು ಅಪರಾಧಿಯು ಪರೋಕ್ಷವಾಗಿ ನಿಯಂತ್ರಿಸುವ ಸ್ವತ್ತುಗಳನ್ನು ಸಹ ಒಳಗೊಳ್ಳುತ್ತದೆ.
- ಸಿವಿಲ್ ದಾವೆಗಳ ಮೇಲಿನ ನಿರ್ಬಂಧ: ಘೋಷಿತ ಪಲಾಯನಗೊಂಡ ಆರ್ಥಿಕ ಅಪರಾಧಿಗಳು ಭಾರತೀಯ ನ್ಯಾಯಾಲಯಗಳಲ್ಲಿ ಯಾವುದೇ ಸಿವಿಲ್ ದಾವೆಗಳನ್ನು ಹೂಡುವುದನ್ನು ಅಥವಾ ಸಮರ್ಥಿಸಿಕೊಳ್ಳುವುದನ್ನು ಈ ಕಾಯ್ದೆಯು ನಿಷೇಧಿಸುತ್ತದೆ.
- ವಿಶೇಷ ನ್ಯಾಯಾಲಯ ವ್ಯವಸ್ಥೆ: ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002’ರ (PMLA) ಅಡಿಯಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಗಳ ಮೂಲಕ ಪ್ರಕರಣಗಳ ವಿಚಾರಣೆ ನಡೆಸಲು ಈ ಕಾಯ್ದೆಯು ಅವಕಾಶ ಕಲ್ಪಿಸುತ್ತದೆ.
ಜಾರಿ ನಿರ್ದೇಶನಾಲಯ (Enforcement Directorate – ED):
- ಸ್ಥಾಪನೆ: 1ನೇ ಮೇ 1956 ರಂದು ‘ಜಾರಿ ಘಟಕ’ವನ್ನು (Enforcement Unit) ರಚಿಸಲಾಯಿತು. ನಂತರ 1957 ರಲ್ಲಿ, ಈ ಘಟಕವನ್ನು ‘ಜಾರಿ ನಿರ್ದೇಶನಾಲಯ’ (ED) ಎಂದು ಮರುನಾಮಕರಣ ಮಾಡಲಾಯಿತು.
- ಇದು ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಒಂದು ವಿಶೇಷ ಹಣಕಾಸು ತನಿಖಾ ಸಂಸ್ಥೆಯಾಗಿದೆ.
- ಕಾರ್ಯಗಳು: ಇ.ಡಿ (ED) ಈ ಕೆಳಗಿನ ಪ್ರಮುಖ ಕಾನೂನುಗಳನ್ನು ಜಾರಿಗೊಳಿಸುತ್ತದೆ:
- ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (FEMA)
- ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 (PMLA)
- ಪಲಾಯನಗೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ, 2018 (FEOA)








ನಿಮ್ಮದೊಂದು ಉತ್ತರ