ಏಕಕಾಲಿಕ ಚುನಾವಣೆ ಮಸೂದೆ | ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)@2047 ಮಾರ್ಗಸೂಚಿ | ಪಕ್ಷಾಂತರ ನಿಷೇಧ ಕಾಯ್ದೆ | ರಾಷ್ಟ್ರೀಯ ಗೌರವಕ್ಕೆ (ಅಪಮಾನ) ತಡೆ ಕಾಯ್ದೆ, 1971

ಏಕಕಾಲಿಕ ಚುನಾವಣೆ ಮಸೂದೆ

ರಾಜ್ಯಶಾಸ್ತ್ರ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಕುರಿತ ಜಂಟಿ ಸಂಸದೀಯ ಸಮಿತಿಯು (JPC) ತನ್ನ ವರದಿಯನ್ನು ನೀಡಿದೆ. ಏಕಕಾಲಿಕ ಚುನಾವಣೆಗಳಿಂದ ಸುಮಾರು 7 ಲಕ್ಷ ಕೋಟಿ ರೂಪಾಯಿಗಳ ಉಳಿತಾಯವಾಗುತ್ತದೆ, ಆಡಳಿತದ ದಕ್ಷತೆ ಹೆಚ್ಚುತ್ತದೆ ಮತ್ತು ಭಾರತದ ಜಿಡಿಪಿ (GDP) ಬೆಳವಣಿಗೆಯನ್ನು 1.6% ರಷ್ಟು ಹೆಚ್ಚಿಸಬಹುದು ಎಂದು ವರದಿ ಹೇಳಿದೆ.

ಹಿನ್ನೆಲೆ:

  • ಏಕಕಾಲಿಕ ಚುನಾವಣೆಗಳನ್ನು ದೇಶದಲ್ಲಿ ಜಾರಿಗೊಳಿಸುವ ಉದ್ದೇಶದಿಂದ, 2024ರಲ್ಲಿ ಲೋಕಸಭೆಯಲ್ಲಿ ಸಂವಿಧಾನದ (129ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ, 2024 ಅನ್ನು ಮಂಡಿಸಲಾಗಿತ್ತು.

ಈ ಮಸೂದೆಗಳ ಪ್ರಮುಖ ಲಕ್ಷಣಗಳು:

  • ಜವಾಬ್ದಾರಿಯುತ ಸಂಸ್ಥೆಗಳು: ಸಂವಿಧಾನದ (129ನೇ ತಿದ್ದುಪಡಿ) ಮಸೂದೆ, 2024, ಲೋಕಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುತ್ತದೆ.
  • ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ, 2024 ಈ ಚೌಕಟ್ಟನ್ನು ಕೇಂದ್ರಾಡಳಿತ ಪ್ರದೇಶಗಳ (UT) ವಿಧಾನಸಭೆಗಳಿಗೂ ವಿಸ್ತರಿಸುತ್ತದೆ.
  • ಏಕಕಾಲಿಕ ಚುನಾವಣೆಗಳ ಪ್ರಾರಂಭ: ಅಧಿಸೂಚನೆಯ ದಿನಾಂಕದ ನಂತರ ರಚನೆಯಾಗುವ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಅಧಿಕಾರಾವಧಿಯು, ಲೋಕಸಭೆಯ ಪೂರ್ಣ ಅಧಿಕಾರಾವಧಿ ಮುಕ್ತಾಯದೊಂದಿಗೆ ಕೊನೆಗೊಳ್ಳುತ್ತದೆ.
  • ಆದ್ದರಿಂದ, ಆ ಬಳಿಕ ಲೋಕಸಭೆ ಮತ್ತು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಿಗೆ ಒಟ್ಟಾರೆಯಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆ.
  • ಲೋಕಸಭೆ ಅಥವಾ ವಿಧಾನಸಭೆಗಳ ಅವಧಿಗೂ ಮುನ್ನ ವಿಸರ್ಜನೆ: ಐದು ವರ್ಷಗಳ ಪೂರ್ಣ ಅವಧಿಗೆ ಮುನ್ನವೇ ಲೋಕಸಭೆ ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯು ವಿಸರ್ಜನೆಗೊಂಡರೆ, ಐದು ವರ್ಷಗಳ ಉಳಿದ ಅವಧಿಗೆ ಮಾತ್ರ ಹೊಸದಾಗಿ ಚುನಾವಣೆ ನಡೆಸಲಾಗುತ್ತದೆ.
  • ಈ ನಿಯಮವು ಪ್ರತಿ ಐದು ವರ್ಷಗಳಿಗೊಮ್ಮೆ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸಮನ್ವಯಗೊಳಿಸುತ್ತದೆ.
  • ರಾಜ್ಯ ಚುನಾವಣೆಯನ್ನು ಮುಂದೂಡುವುದು: ನಿರ್ದಿಷ್ಟ ರಾಜ್ಯ ವಿಧಾನಸಭೆಯ ಚುನಾವಣೆಯನ್ನು ಏಕಕಾಲಿಕ ಚುನಾವಣೆಗಳ ಭಾಗವಾಗಿ ನಡೆಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಅಭಿಪ್ರಾಯಪಟ್ಟರೆ, ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬಹುದು.
  • ನಂತರ, ಆ ರಾಜ್ಯದ ವಿಧಾನಸಭೆಗೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಸುವಂತೆ ರಾಷ್ಟ್ರಪತಿಗಳು ಆದೇಶ ಹೊರಡಿಸಬಹುದು.
  • ಆದರೆ, ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ ತಿದ್ದುಪಡಿ ಮಸೂದೆಯು ಇಂತಹ ಯಾವುದೇ ನಿಬಂಧನೆಗಳನ್ನು ಹೊಂದಿಲ್ಲ.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)@2047 ಮಾರ್ಗಸೂಚಿ

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ನೀತಿ ಆಯೋಗವು ‘ವಿಕಸಿತ ಭಾರತ’ಕ್ಕಾಗಿ DPI@2047 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದು ಒಳಗೊಳ್ಳುವಿಕೆ ಮತ್ತು ಉತ್ಪಾದಕತೆ ಆಧಾರಿತ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮುಂದಿನ ಹಂತದ ಮಾರ್ಗಸೂಚಿಯಾಗಿದೆ.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)ದ ಬಗ್ಗೆ:

  • ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಿರುವ, ಸುರಕ್ಷಿತವಾದ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ, ಹಾಗೂ ಅಗತ್ಯ ಸಾರ್ವಜನಿಕ ಸೇವೆಗಳನ್ನು ಬೆಂಬಲಿಸುವ ಮೂಲಭೂತ ಡಿಜಿಟಲ್ ವ್ಯವಸ್ಥೆಗಳನ್ನು ಇದು ಸೂಚಿಸುತ್ತದೆ.
  • ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ‘ಜಾಮ್ ತ್ರಿವಳಿ’ (JAM Trinity) ಅಂದರೆ ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಗುರುತು ಮತ್ತು ಮೊಬೈಲ್ ಸಂಪರ್ಕದೊಂದಿಗೆ ಪ್ರಾರಂಭವಾಯಿತು. ಇದು ನಾಗರಿಕರನ್ನು ನೇರವಾಗಿ ಸರ್ಕಾರದ ವ್ಯವಸ್ಥೆಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡಿದೆ.
  • ಮಹತ್ವ: ಇದು ಕಲ್ಯಾಣ ಯೋಜನೆಗಳ ಪ್ರಯೋಜನಗಳ ನೇರ ನಗದು ವರ್ಗಾವಣೆಯನ್ನು (DBT) ಸಕ್ರಿಯಗೊಳಿಸಿತು. ಇದರಿಂದಾಗಿ ಮಧ್ಯವರ್ತಿಗಳ ಹಸ್ತಕ್ಷೇಪ, ವಿಳಂಬ ಮತ್ತು ಸೋರಿಕೆಗಳು ಕಡಿಮೆಯಾದವು ಹಾಗೂ ಭಾರತದ ವ್ಯಾಪಕ ಡಿಜಿಟಲ್ ರೂಪಾಂತರಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (DPI) ಪ್ರಾಮುಖ್ಯತೆ:

  • ಆಡಳಿತದ ದಕ್ಷತೆ: ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ನೇರ ಲಾಭ ವರ್ಗಾವಣೆ, ಸಬ್ಸಿಡಿ ವಿತರಣೆ ಮತ್ತು ಇ-ಆಡಳಿತ ವೇದಿಕೆಗಳನ್ನು ಸಕ್ರಿಯಗೊಳಿಸುವ ಮೂಲಕ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ.
  • ಹಣಕಾಸು ಒಳಗೊಳ್ಳುವಿಕೆ: ಏಕೀಕೃತ ಪಾವತಿ ವ್ಯವಸ್ಥೆ (UPI)ಯನ್ನು ಸಂಪೂರ್ಣವಾಗಿ ರೂಪಾಂತರಿಸಿದೆ. ಇದು ಪ್ರಸ್ತುತ 8 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗಡಿಯಾಚೆಗಿನ ವಹಿವಾಟುಗಳನ್ನು ಬೆಂಬಲಿಸುತ್ತಿದೆ.
  • ಆರ್ಥಿಕ ಬೆಳವಣಿಗೆ: ಭಾರತವು ವಿಶ್ವದ 3ನೇ ಅತಿದೊಡ್ಡ ಡಿಜಿಟಲೀಕರಣಗೊಂಡ ಆರ್ಥಿಕತೆಯಾಗಿದೆ. ಡಿಜಿಟಲ್ ವೇದಿಕೆಗಳು ದೈನಂದಿನ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಆಳವಾಗಿ ಬೇರೂರಿವೆ.

ಪ್ರಮುಖ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಮತ್ತು ಡಿಜಿಟಲ್ ಪರಿಹಾರಗಳು:

  • ಆಧಾರ್ (Aadhaar): ಇದು ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ಗುರುತಿನ ವೇದಿಕೆಯಾಗಿದೆ. ಸಮರ್ಥ ಸೇವಾ ವಿತರಣೆಗಾಗಿ ನಿವಾಸಿಗಳ ವಿಶಿಷ್ಟ ಗುರುತಿಸುವಿಕೆ ಮತ್ತು ದೃಢೀಕರಣವನ್ನು ಇದು ಸಕ್ರಿಯಗೊಳಿಸುತ್ತದೆ.
  • ಯುಪಿಐ (UPI): ತ್ವರಿತ, ಪರಸ್ಪರ ಕಾರ್ಯನಿರ್ವಹಿಸಬಲ್ಲ ಮತ್ತು ಸುರಕ್ಷಿತವಾದ, ವ್ಯಕ್ತಿಯಿಂದ-ವ್ಯಕ್ತಿಗೆ ಮತ್ತು ವ್ಯಾಪಾರ ವಹಿವಾಟುಗಳನ್ನು ಸಕ್ರಿಯಗೊಳಿಸುವ ನೈಜ-ಸಮಯದ ಡಿಜಿಟಲ್ ಪಾವತಿಯ ಏಕಿಕೃತ ವ್ಯವಸ್ಥೆಯಾಗಿದೆ.
  1. ಯುಪಿಐ ಪ್ರಸ್ತುತ 8 ದೇಶಗಳಲ್ಲಿ ಸಕ್ರಿಯವಾಗಿದೆ. ಇದು ಗಡಿಯಾಚೆಗಿನ ಪಾವತಿಗಳು, ಹಣ ರವಾನೆ ಮತ್ತು ಹಣಕಾಸು ಒಳಗೊಳ್ಳುವಿಕೆಯನ್ನು ಸುಧಾರಿಸಿದ್ದು, ಜಾಗತಿಕವಾಗಿ ಭಾರತದ ಫಿನ್‌ಟೆಕ್ ಪ್ರಭಾವವನ್ನು ಬಲಪಡಿಸುತ್ತಿದೆ.
  • ಕೋವಿನ್ (CoWIN): ನೋಂದಣಿ, ವೇಳಾಪಟ್ಟಿ ನಿಗದಿಪಡಿಸುವಿಕೆ ಮತ್ತು ಪ್ರಮಾಣೀಕರಣವನ್ನು ಒಳಗೊಂಡಂತೆ ಲಸಿಕೆ (ವ್ಯಾಕ್ಸಿನೇಷನ್) ಸೇವೆಗಳ ಸಂಪೂರ್ಣ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ವೇದಿಕೆಯಾಗಿದೆ.
  • ಎಪಿಐ ಸೇತು (API Setu): ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (APIs) ಮೂಲಕ ಸರ್ಕಾರದ ದತ್ತಾoಶ ಮತ್ತು ಸೇವೆಗಳನ್ನು ಸುರಕ್ಷಿತವಾಗಿ ಹಾಗೂ ಪ್ರಮಾಣೀಕೃತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುವ ವೇದಿಕೆಯಾಗಿದೆ.
  • ಡಿಜಿಲಾಕರ್ (DigiLocker): ನಾಗರಿಕರಿಗೆ ದೃಢೀಕೃತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂಗ್ರಹಿಸಲು, ವೀಕ್ಷಿಸಲು ಮತ್ತು ಹಂಚಿಕೊಳ್ಳಲು ಅನುಮತಿಸುವ ಡಿಜಿಟಲ್ ಡಾಕ್ಯುಮೆಂಟ್ ವ್ಯಾಲೆಟ್ (Digital document wallet) ಆಗಿದೆ.
  • ಆರೋಗ್ಯ ಸೇತು (Aarogya Setu): ಅಪಾಯದ ಮೌಲ್ಯಮಾಪನ, ಆರೋಗ್ಯ ಸಲಹೆಗಳು ಮತ್ತು ಆರೋಗ್ಯ ಸಂಬಂಧಿತ ಸೇವೆಗಳಿಗೆ ಪ್ರವೇಶವನ್ನು ಒದಗಿಸುವ ಡಿಜಿಟಲ್ ಆರೋಗ್ಯ ಅಪ್ಲಿಕೇಶನ್ ಆಗಿದೆ.
  • ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM): ಸರ್ಕಾರಿ ಘಟಕಗಳಿಂದ ಸರಕು ಮತ್ತು ಸೇವೆಗಳ ಪಾರದರ್ಶಕ ಹಾಗೂ ಸಮರ್ಥ ಸಂಗ್ರಹಣೆಗಾಗಿ ರೂಪಿಸಲಾದ ಆನ್‌ಲೈನ್ ವೇದಿಕೆಯಾಗಿದೆ.
  • ಉಮಂಗ್ (UMANG): ವ್ಯಾಪಕ ಶ್ರೇಣಿಯ ಸರ್ಕಾರಿ ಸೇವೆಗಳಿಗೆ ಏಕ-ಗವಾಕ್ಷಿ ಪ್ರವೇಶವನ್ನು ಒದಗಿಸುವ ಏಕೀಕೃತ ಮೊಬೈಲ್ ಮತ್ತು ವೆಬ್ ವೇದಿಕೆಯಾಗಿದೆ.
  • ದೀಕ್ಷಾ (DIKSHA): ಇ-ಕಂಟೆಂಟ್, ತರಬೇತಿ ಮತ್ತು ಶೈಕ್ಷಣಿಕ ಸಂಪನ್ಮೂಲಗಳೊಂದಿಗೆ ಶಿಕ್ಷಕರು ಮತ್ತು ಕಲಿಯುವವರನ್ನು ಬೆಂಬಲಿಸುವ ರಾಷ್ಟ್ರೀಯ ಡಿಜಿಟಲ್ ವೇದಿಕೆಯಾಗಿದೆ.
  • ಇ-ಸಂಜೀವಿನಿ (e-Sanjeevani): ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ದೂರದಿಂದಲೇ ವೈದ್ಯರು ಮತ್ತು ರೋಗಿಗಳ ನಡುವೆ ಸಮಾಲೋಚನೆಗಳನ್ನು ಸಕ್ರಿಯಗೊಳಿಸುವ ಟೆಲಿಮೆಡಿಸಿನ್ ವೇದಿಕೆಯಾಗಿದೆ.
  • ಇ-ಆಸ್ಪತ್ರೆ (e-Hospital): ಇದು ಆನ್‌ಲೈನ್ ನೋಂದಣಿ, ವೈದ್ಯರ ಭೇಟಿಗೆ ಸಮಯ ನಿಗದಿ, ರೋಗನಿರ್ಣಯ ಮತ್ತು ಶುಲ್ಕ ಪಾವತಿ ಸೇವೆಗಳನ್ನು ಒದಗಿಸುವ ಸಮಗ್ರ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆಯಾಗಿದೆ.
  • ಇ-ಆಫೀಸ್ (e-Office): ಸರ್ಕಾರಿ ಕಚೇರಿಗಳಲ್ಲಿ ಎಲೆಕ್ಟ್ರಾನಿಕ್ ಕಡತ ನಿರ್ವಹಣೆ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಕ್ರಿಯಗೊಳಿಸುವ ಮೂಲಕ ಕಾಗದರಹಿತ ಆಡಳಿತವನ್ನು ಬೆಂಬಲಿಸುವ ಡಿಜಿಟಲ್ ವೇದಿಕೆಯಾಗಿದೆ.
  • ಇ-ಕೋರ್ಟ್ಸ್ (eCourts): ಇದು ನ್ಯಾಯಾಲಯದ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಜನಸಾಮಾನ್ಯರಿಗೆ ನ್ಯಾಯಾಂಗ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ರೂಪಿಸಲಾದ ನಿರ್ದಿಷ್ಟ ಗುರಿ ಮತ್ತು ಕಾಲಮಿತಿಯ ಯೋಜನೆಯಾಗಿದೆ.
  • ಪೋಷಣ್ ಟ್ರ್ಯಾಕರ್ (POSHAN Tracker): ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಅಡಿಯಲ್ಲಿ ಪೌಷ್ಟಿಕಾಂಶ ಸೇವೆಗಳ ವಿತರಣೆಯ ನೈಜ-ಸಮಯದ ಮೇಲ್ವಿಚಾರಣೆಗಾಗಿ ಬಳಸಲಾಗುವ ಮೊಬೈಲ್ ಆಧಾರಿತ ಅಪ್ಲಿಕೇಶನ್ ಆಗಿದೆ.
  • ರಾಷ್ಟ್ರೀಯ ಸಾಂಕ್ರಾಮಿಕವಲ್ಲದ ರೋಗಗಳ ವೇದಿಕೆ (NCD): ಪ್ರಮುಖ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ, ರೋಗನಿರ್ಣಯ ಮತ್ತು ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ವೇದಿಕೆಯಾಗಿದೆ.
  • ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (SIDH): ಕೌಶಲ್ಯ ಅಭಿವೃದ್ಧಿ, ತರಬೇತಿ ಮತ್ತು ಉದ್ಯೋಗ ಸಂಬಂಧಿತ ಸೇವೆಗಳನ್ನು ಸಂಯೋಜಿಸುವ ಏಕೀಕೃತ ಡಿಜಿಟಲ್ ವೇದಿಕೆಯಾಗಿದೆ.
  • ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS): ಸರ್ಕಾರಿ ನಿಧಿಗಳ ವಿತರಣೆ ಮತ್ತು ನೇರ ಲಾಭ ವರ್ಗಾವಣೆಯನ್ನು (DBT) ಸಮಗ್ರವಾಗಿ ಮೇಲ್ವಿಚಾರಣೆ ಮಾಡುವ ವೇದಿಕೆಯಾಗಿದೆ.
  • ಪಿಎಂ ಗತಿಶಕ್ತಿ (PM GatiShakti): ಮೂಲಸೌಕರ್ಯ ಯೋಜನೆಗಳ ಸಮಗ್ರ ಯೋಜನೆ ಮತ್ತು ಸಂಘಟಿತ ಅನುಷ್ಠಾನಕ್ಕಾಗಿ ರೂಪಿಸಲಾದ ಜಿಐಎಸ್ (GIS) ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.

ಪಕ್ಷಾಂತರ ನಿಷೇಧ ಕಾಯ್ದೆ

ರಾಜ್ಯಶಾಸ್ತ್ರ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಮೂರನೇ ಎರಡರಷ್ಟು (2/3) ಸಂಸದರು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯಿಸುವಿಕೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಕ್ಷಾಂತರ ನಿಷೇಧ ಕಾಯ್ದೆಯ ಹಿನ್ನೆಲೆ:

  • 1967ರಲ್ಲಿ ಹರಿಯಾಣದ ಶಾಸಕ ಗಯಾ ಲಾಲ್ ಒಂದೇ ದಿನದಲ್ಲಿ ಮೂರು ಬಾರಿ ತಮ್ಮ ಪಕ್ಷವನ್ನು ಬದಲಾಯಿಸಿದ ನಂತರ, ಭಾರತೀಯ ರಾಜಕೀಯದಲ್ಲಿ ‘ಆಯಾ ರಾಮ್ ಗಯಾ ರಾಮ್‘ ಎಂಬ ನುಡಿಗಟ್ಟು ಜನಪ್ರಿಯವಾಯಿತು.
  • ರಾಜಕೀಯ ಪಕ್ಷಾಂತರಗಳನ್ನು ತಡೆಯುವ ಉದ್ದೇಶದಿಂದ 1985ರಲ್ಲಿ 52ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸಂವಿಧಾನದ ಹತ್ತನೇ ಅನುಸೂಚಿಗೆ ಸೇರಿಸಲಾಯಿತು.

ಸಾಂವಿಧಾನಿಕ ಅನರ್ಹತೆಗಳು [ವಿಧಿ 102(1) ಮತ್ತು 191(1)]

ಒಬ್ಬ ವ್ಯಕ್ತಿಯು ಈ ಕೆಳಗಿನ ಸಂದರ್ಭಗಳಲ್ಲಿ ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಸದಸ್ಯತ್ವದಿಂದ ಅನರ್ಹನಾಗುತ್ತಾನೆ:

  • ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು (Office of profit) ಹೊಂದಿದ್ದರೆ.
  • ಸಮರ್ಥ ನ್ಯಾಯಾಲಯದಿಂದ ಮಾನಸಿಕ ಅಸ್ವಸ್ಥ ಎಂದು ಘೋಷಿಸಲ್ಪಟ್ಟಿದ್ದರೆ.
  • ತೀರಿಸಲಾಗದ ದಿವಾಳಿ (Undischarged insolvent) ಯಾಗಿದ್ದರೆ.
  • ಭಾರತದ ಪ್ರಜೆಯಾಗಿಲ್ಲದಿದ್ದರೆ, ಅಥವಾ ಸ್ವಯಂಪ್ರೇರಣೆಯಿಂದ ವಿದೇಶಿ ರಾಷ್ಟ್ರದ ಪೌರತ್ವವನ್ನು ಪಡೆದುಕೊಂಡಿದ್ದರೆ, ಅಥವಾ ವಿದೇಶಿ ರಾಷ್ಟ್ರಕ್ಕೆ ನಿಷ್ಠೆಯನ್ನು ತೋರಿದರೆ.
  • ಸಂಸತ್ತು ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿದ್ದರೆ.

ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಮುಖ ಲಕ್ಷಣಗಳು:

  • ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ: ರಾಜಕೀಯ ಪಕ್ಷಕ್ಕೆ ಸೇರಿದ ಶಾಸಕನೊಬ್ಬ ಸ್ವಯಂಪ್ರೇರಣೆಯಿಂದ ತನ್ನ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ, ಅಥವಾ ತನ್ನ ರಾಜಕೀಯ ಪಕ್ಷ ಹೊರಡಿಸಿದ ನಿರ್ದೇಶನಕ್ಕೆ (Whip) ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ ಅಥವಾ ಮತದಾನದಿಂದ ದೂರವುಳಿದರೆ, ಆತನನ್ನು ಅನರ್ಹಗೊಳಿಸಲಾಗುತ್ತದೆ.
  • ಸದಸ್ಯನು ತನ್ನ ಪಕ್ಷದಿಂದ ಪೂರ್ವಾನುಮತಿ ಪಡೆದಿದ್ದರೆ, ಅಥವಾ ಆತನ ಮತದಾನ ಅಥವಾ ಗೈರುಹಾಜರಿಯನ್ನು ಪಕ್ಷವು 15 ದಿನಗಳೊಳಗೆ ಕ್ಷಮಿಸಿದರೆ ಆತನನ್ನು ಅನರ್ಹಗೊಳಿಸಲಾಗುವುದಿಲ್ಲ.
  • ಸ್ವತಂತ್ರ ಸದಸ್ಯರು ಸದನಕ್ಕೆ ಆಯ್ಕೆಯಾದ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅವರನ್ನು ಅನರ್ಹಗೊಳಿಸಲಾಗುತ್ತದೆ.
  • ನಾಮನಿರ್ದೇಶಿತ ಸದಸ್ಯರು ನಾಮನಿರ್ದೇಶನಗೊಂಡ ಆರು ತಿಂಗಳ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅವರು ಅನರ್ಹರಾಗುತ್ತಾರೆ.
  • ಸದನದ ಸದಸ್ಯನನ್ನು ಅನರ್ಹಗೊಳಿಸುವ ನಿರ್ಧಾರವು ಸದನದ ಸಭಾಪತಿ ಅಥವಾ ಸಭಾಧ್ಯಕ್ಷರ ವಿವೇಚನೆಗೆ ಒಳಪಟ್ಟಿರುತ್ತದೆ.

ವಿನಾಯಿತಿಗಳು:

ಹತ್ತನೇ ಅನುಸೂಚಿಯು ಮೂಲತಃ ಸದಸ್ಯರನ್ನು ಅನರ್ಹಗೊಳಿಸದಂತೆ ಎರಡು ವಿನಾಯಿತಿಗಳನ್ನು ಒಳಗೊಂಡಿತ್ತು:

  • ‘ಶಾಸಕಾಂಗ ಪಕ್ಷ’ದ ಮೂರನೇ ಒಂದು (1/3) ಸದಸ್ಯರು ವಿಭಜನೆಗೊಂಡು ಪ್ರತ್ಯೇಕ ಗುಂಪನ್ನು ರಚಿಸುವುದು.
  • ‘ಶಾಸಕಾಂಗ ಪಕ್ಷ’ದ ಮೂರನೇ ಎರಡರಷ್ಟು (2/3) ಸದಸ್ಯರ ಅನುಮೋದನೆಯೊಂದಿಗೆ ತಮ್ಮ ರಾಜಕೀಯ ಪಕ್ಷವನ್ನು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸುವುದು.
  • ಆದರೆ, ಕಾನೂನನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2003ರಲ್ಲಿ 91ನೇ ತಿದ್ದುಪಡಿಯ ಮೂಲಕ ಮೊದಲ ವಿನಾಯಿತಿಯನ್ನು ( ಮೂರನೇ ಒಂದು ವಿಭಜನೆ) ತೆಗೆದುಹಾಕಲಾಯಿತು.

ಸರ್ವೋಚ್ಚ ನ್ಯಾಯಾಲಯದ ಪ್ರಮುಖ ತೀರ್ಪುಗಳು

  • ಕಿಹೋಟೊ ಹೊಲ್ಲೋಹಾನ್ v/s ಜಚಿಲ್ಹು (1992): ಸಂವಿಧಾನದ ಹತ್ತನೇ ಅನುಸೂಚಿಯ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಅನರ್ಹತೆಗೆ ಸಂಬಂಧಿಸಿದಂತೆ ಸಭಾಪತಿ ನೀಡುವ ನಿರ್ಧಾರಗಳು ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ವಿಮರ್ಶೆಗೆ ಒಳಪಟ್ಟಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
  • ಕೀಶಮ್ ಮೇಘಚಂದ್ರ ಸಿಂಗ್ v/s ಸ್ಪೀಕರ್, ಮಣಿಪುರ (2020): ಅನರ್ಹತೆಯ ಅರ್ಜಿಯ ಮೇಲೆ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಗರಿಷ್ಠ ಮೂರು ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿದೆ.

ರಾಷ್ಟ್ರೀಯ ಗೌರವಕ್ಕೆ (ಅಪಮಾನ) ತಡೆ ಕಾಯ್ದೆ, 1971

ರಾಜ್ಯಶಾಸ್ತ್ರ ಮತ್ತು ಆಡಳಿತ

ಇತ್ತೀಚೆಗೆ ಸುದ್ದಿಯಲ್ಲಿದೆ: 

  • ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆ, 1971 ಅನ್ನು ತಿದ್ದುಪಡಿ ಮಾಡಲು ಅನುಮೋದನೆ ನೀಡಿದೆ.

ಈ ಕಾಯ್ದೆಯ ಕುರಿತು:

  • ಉದ್ದೇಶ: ರಾಷ್ಟ್ರೀಯ ಹಾಡು ವಂದೇ ಮಾತರಂ ಅನ್ನು ಹಾಡುವುದಕ್ಕೆ ಮಾಡುವ ಯಾವುದೇ ಅವಮಾನ ಅಥವಾ ಅಡ್ಡಿಪಡಿಸುವಿಕೆಯನ್ನು ದಂಡಾರ್ಹ ಅಪರಾಧವನ್ನಾಗಿಸುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ.
  • ಪ್ರಸ್ತುತ ಚಾಲ್ತಿಯಲ್ಲಿರುವ 1971ರ ಕಾಯ್ದೆಯ ಪ್ರಕಾರ ರಾಷ್ಟ್ರಗೀತೆ, ರಾಷ್ಟ್ರಧ್ವಜ ಮತ್ತು ಭಾರತದ ಸಂವಿಧಾನಕ್ಕೆ ಅಪಚಾರ ಎಸಗುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ರಾಷ್ಟ್ರೀಯ ಹಾಡು ವಂದೇ ಮಾತರಂ ಹಿನ್ನೆಲೆ:

  • ವಂದೇ ಮಾತರಂ ಗೀತೆಯನ್ನು ಸಂಸ್ಕೃತ ಭಾಷೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದರು. ಇದು ಮೊದಲ ಬಾರಿಗೆ 1882ರಲ್ಲಿ ಪ್ರಕಟವಾದ ‘ಆನಂದಮಠ‘ ಕಾದಂಬರಿಯಲ್ಲಿ ಸೇರ್ಪಡೆಯಾಯಿತು.
  • ಆನಂದಮಠ ಕಾದಂಬರಿಯನ್ನು 1769–73ರ ಬಂಗಾಳದ ಭೀಕರ ಬರಗಾಲ ಮತ್ತು ಸನ್ಯಾಸಿ ದಂಗೆಯ ಹಿನ್ನೆಲೆಯಲ್ಲಿ ರಚಿಸಲಾಗಿದೆ.
  • 1896ರ ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಇದನ್ನು ಮೊದಲ ಬಾರಿಗೆ ಹಾಡುವ ಮೂಲಕ ಇದಕ್ಕೆ ರಾಷ್ಟ್ರೀಯ ಮಾನ್ಯತೆ ತಂದುಕೊಟ್ಟರು.
  • ವಂದೇ ಮಾತರಂ ಅನ್ನು ಒಂದು ರಾಜಕೀಯ ಘೋಷಣೆಯಾಗಿ ಮೊದಲ ಬಾರಿಗೆ ಆಗಸ್ಟ್ 7, 1905ರಂದು ಬಳಸಲಾಯಿತು.
  • 1905ರ ಸ್ವದೇಶಿ ಚಳವಳಿಯ ಸಮಯದಲ್ಲಿ ವಂದೇ ಮಾತರಂ ಗೀತೆಯು ನಾಗರಿಕ ಪ್ರತಿರೋಧದ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿತು.
  • ರಾಷ್ಟ್ರೀಯ ಹಾಡು: ಜನವರಿ 24, 1950ರಂದು ಸಂವಿಧಾನ ಸಭೆಯು ವಂದೇ ಮಾತರಂ ಅನ್ನು ಭಾರತದ ಅಧಿಕೃತ ರಾಷ್ಟ್ರೀಯ ಹಾಡು (National Song) ಎಂದು ಅಂಗೀಕರಿಸಿತು.

ಸಾಂವಿಧಾನಿಕ ನಿಬಂಧನೆಗಳು:

  • ವಿಧಿ 51A(a) ಮೂಲಭೂತ ಕರ್ತವ್ಯಗಳು: ಪ್ರತಿಯೊಬ್ಬ ನಾಗರಿಕನು ಸಂವಿಧಾನಕ್ಕೆ ಬದ್ಧನಾಗಿರಬೇಕು ಮತ್ತು ಅದರ ಆದರ್ಶಗಳು, ಸಂಸ್ಥೆಗಳು, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸಬೇಕೆಂದು ಇದು ಕಡ್ಡಾಯಗೊಳಿಸುತ್ತದೆ.
  • ಸ್ಪಷ್ಟ ಸಾಂವಿಧಾನಿಕ ರಕ್ಷಣೆಯ ಕೊರತೆ: ‘ಜನಗಣಮನ’ ರಾಷ್ಟ್ರಗೀತೆಯಂತೆ, ವಂದೇ ಮಾತರಂ ಗೀತೆಗೆ ಸಂವಿಧಾನದಲ್ಲಿ ಯಾವುದೇ ನೇರ ಅಥವಾ ಸ್ಪಷ್ಟವಾದ ರಕ್ಷಣೆ ಇರಲಿಲ್ಲ.
  • ಇದರ ಪ್ರಸ್ತುತ ಸ್ಥಾನಮಾನವು ಕೇವಲ ಸಂವಿಧಾನ ಸಭೆಯ ನಿರ್ಣಯಗಳಿಂದ ಬಂದಿದೆಯೇ ಹೊರತು, ಜಾರಿಗೊಳಿಸಬಹುದಾದ ಯಾವುದೇ ಸಾಂವಿಧಾನಿಕ ನಿಯಮಗಳಿಂದಲ್ಲ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts