ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves)
ಅರ್ಥವ್ಯವಸ್ಥೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಮದು ಸರಕುಗಳ ಬಳಕೆಯನ್ನು ತಗ್ಗಿಸಬೇಕೆಂದು ನೀಡಿದ ಕರೆಯು, ಭಾರತವು ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Forex) ಉಳಿಸಲು ಬಳಕೆಯನ್ನು ಕಡಿಮೆ ಮಾಡಬೇಕೇ ಅಥವಾ ದೀರ್ಘಕಾಲೀನ ಆರ್ಥಿಕ ಪ್ರಗತಿಗಾಗಿ ದೇಶೀಯ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಬಲಪಡಿಸಬೇಕೇ ಎಂಬ ಚರ್ಚೆ ಮತ್ತೆ ಪ್ರಾರಂಭವಾಗಿದೆ.
ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves):
- ವಿದೇಶಿ ವಿನಿಮಯ ಮೀಸಲು ನಿಧಿ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಬಳಿ ಕಾಯ್ದಿರಿಸಿಕೊಂಡಿರುವ ವಿದೇಶಿ ಹಣದ (ಕರೆನ್ಸಿ) ಆಸ್ತಿಗಳಾಗಿವೆ.
- ಈ ಮೀಸಲು ನಿಧಿಯು ಪ್ರಮುಖವಾಗಿ ಅಮೆರಿಕಾದ ಡಾಲರ್ನಂತಹ ವಿದೇಶಿ ಹಣ, ಚಿನ್ನದ ಸಂಗ್ರಹ, ವಿಶೇಷ ಸ್ವೀಕಾರದ ಹಕ್ಕುಗಳು (Special Drawing Rights – SDRs) ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (IMF) ಮೀಸಲು ಪಾಲನ್ನು ಒಳಗೊಂಡಿರುತ್ತದೆ.
- ಪ್ರಾಮುಖ್ಯತೆ: ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಆಮದುಗಳಿಗೆ ಹಣ ಪಾವತಿಸಲು, ರೂಪಾಯಿಯ ಮೌಲ್ಯವನ್ನು ಸ್ಥಿರವಾಗಿಡಲು, ಹೂಡಿಕೆದಾರರಲ್ಲಿ ನಂಬಿಕೆ ಉಳಿಸಿಕೊಳ್ಳಲು ಮತ್ತು ವಿದೇಶಿ ಸಾಲಗಳನ್ನು ಮರುಪಾವತಿಸಲು ಈ ನಿಧಿಯು ಅತ್ಯಗತ್ಯವಾಗಿದೆ.
ಭಾರತಕ್ಕೆ ಸದೃಢ ವಿದೇಶಿ ವಿನಿಮಯ ಮೀಸಲು ನಿಧಿಯ ಅಗತ್ಯತೆ:
- ಆಮದಿನ ಮೇಲಿನ ಅವಲಂಬನೆ: ಭಾರತವು ಕಚ್ಚಾ ತೈಲ, ರಸಗೊಬ್ಬರ, ಖಾದ್ಯ ತೈಲ, ಚಿನ್ನ, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಯಂತ್ರಗಳಿಗಾಗಿ ಬೇರೆ ದೇಶಗಳನ್ನು ತೀವ್ರವಾಗಿ ಅವಲಂಬಿಸಿದೆ. ಹೀಗಾಗಿ, ವ್ಯಾಪಾರವು ತಡೆರಹಿತವಾಗಿ ನಡೆಯಲು ಮತ್ತು ಆರ್ಥಿಕತೆ ಸ್ಥಿರವಾಗಿರಲು ಸಾಕಷ್ಟು ವಿದೇಶಿ ವಿನಿಮಯ ನಿಧಿಯ ಅಗತ್ಯವಿದೆ.
- ಬಾಹ್ಯ ಆಘಾತಗಳಿಂದ ರಕ್ಷಣೆ: ಜಾಗತಿಕ ಹಣಕಾಸು ಅಸ್ಥಿರತೆ, ಏರುತ್ತಿರುವ ತೈಲ ಬೆಲೆಗಳು, ಹಣಕಾಸಿನ ಏರಿಳಿತಗಳು ಮತ್ತು ದೇಶದಿಂದ ಬಂಡವಾಳವು ದಿಢೀರನೆ ಹೊರಹೋಗುವ ಸಂದರ್ಭಗಳಲ್ಲಿ ಆರ್ಥಿಕತೆಯನ್ನು ರಕ್ಷಿಸಲು ಬಲವಾದ ಮೀಸಲು ನಿಧಿ ನೆರವಾಗುತ್ತದೆ.
- ಕಡಿಮೆ ಮೀಸಲು ನಿಧಿ ಹೊಂದಿರುವ ದೇಶಗಳು ಹೆಚ್ಚಾಗಿ “ಪಾವತಿ ಶಿಲ್ಕು” (BOP) ಬಿಕ್ಕಟ್ಟು ಮತ್ತು ಹಣದ ತೀವ್ರ ಅಪಮೌಲ್ಯವನ್ನು (ರೂಪಾಯಿ ಬೆಲೆ ಕುಸಿಯುವುದು) ಎದುರಿಸಬೇಕಾಗುತ್ತದೆ.
ಪಾವತಿಗಳ ಶಿಲ್ಕು (Balance of Payments – BoP):
- ‘ಪಾವತಿಗಳ ಶಿಲ್ಕು’ (BoP) ಎಂಬುದು ಒಂದು ನಿರ್ದಿಷ್ಟ ಅವಧಿಯಲ್ಲಿ ಭಾರತ ಮತ್ತು ಪ್ರಪಂಚದ ಉಳಿದ ದೇಶಗಳ ನಡುವೆ ನಡೆಯುವ ಎಲ್ಲಾ ಆರ್ಥಿಕ ವಹಿವಾಟುಗಳ ಸಮಗ್ರ ದಾಖಲೆಯಾಗಿದೆ.
- ಪಾವತಿ ಶಿಲ್ಕಿನ ಪ್ರಮುಖ ವಿಭಾಗಗಳು (Components of BoP):
- ಚಾಲ್ತಿ ಖಾತೆ (Current Account): ಇದು ಸರಕು ಮತ್ತು ಸೇವೆಗಳ ವ್ಯಾಪಾರ, ವಿದೇಶಿ ಹಣ ರವಾನೆ (Remittances) ಮತ್ತು ಆದಾಯ ವರ್ಗಾವಣೆಯನ್ನು ಒಳಗೊಂಡಿದೆ. ಭಾರತವು ಸಾಮಾನ್ಯವಾಗಿ ರಫ್ತು ಮಾಡುವುದಕ್ಕಿಂತ ಹೆಚ್ಚು ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ, ಇದು ‘ಚಾಲ್ತಿ ಖಾತೆ ಕೊರತೆ’ಗೆ (Current Account Deficit – CAD) ಕಾರಣವಾಗುತ್ತದೆ.
- ಬಂಡವಾಳ ಖಾತೆ (Capital Account): ಇದು ವಿದೇಶಿ ನೇರ ಹೂಡಿಕೆ (FDI), ವಿದೇಶಿ ಬಂಡವಾಳ ಹೂಡಿಕೆ (FPI) ಮತ್ತು ಬಾಹ್ಯ ಸಾಲಗಳಂತಹ (External borrowings) ವಿದೇಶಿ ಹೂಡಿಕೆಗಳನ್ನು ಒಳಗೊಂಡಿದೆ.
- ಭಾರತವು ಸಾಂಪ್ರದಾಯಿಕವಾಗಿ ವಿದೇಶಿ ಹೂಡಿಕೆದಾರರಿಂದ ಹರಿದುಬರುವ ಬಂಡವಾಳದ ಒಳಹರಿವಿನ (Capital inflows) ಮೂಲಕ ತನ್ನ ಚಾಲ್ತಿ ಖಾತೆಯ ಕೊರತೆಯನ್ನು ಸರಿದೂಗಿಸಿಕೊಳ್ಳುತ್ತಿದೆ.
ರಾಷ್ಟ್ರೀಯ ಸೆಣಬು ಮಂಡಳಿ (National Jute Board)
ಅರ್ಥವ್ಯವಸ್ಥೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ರಾಷ್ಟ್ರೀಯ ಸೆಣಬು ಮಂಡಳಿಯು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಭಾರತೀಯ ಸೆಣಬು ನಿಗಮದ (Jute Corporation of India) ಸಹಯೋಗದೊಂದಿಗೆ 2023 ರಿಂದ ‘ಸೆಣಬು ಬೆಳೆ ಮಾಹಿತಿ ವ್ಯವಸ್ಥೆ’ ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಸೆಣಬು ಬೆಳೆ ಮಾಹಿತಿ ವ್ಯವಸ್ಥೆ ಯೋಜನೆ (Jute Crop Information System project):
- ಉದ್ದೇಶ: ಉಪಗ್ರಹ ಆಧಾರಿತ ದೂರಸಂವೇದಿ (Remote sensing) ತಂತ್ರಜ್ಞಾನ ಮತ್ತು ಕೃಷಿ ಭೂಮಿಯ ದತ್ತಾಂಶಗಳನ್ನು ಬಳಸಿ ಸೆಣಬು ಕೃಷಿಯನ್ನು ಮೇಲ್ವಿಚಾರಣೆ ಮಾಡುವುದು.
- ಈ ಉಪಕ್ರಮದ ಅಡಿಯಲ್ಲಿ ಎರಡು ಪ್ರಮುಖ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ:
- ಭುವನ್ ಜಂಪ್ (BHUVAN JUMP) ಮೊಬೈಲ್ ಅಪ್ಲಿಕೇಶನ್- ಇದು ಕೃಷಿ ಭೂಮಿಗೆ ಖುದ್ದಾಗಿ ಭೇಟಿ ನೀಡಿ ಸೆಣಬು ಬೆಳೆಯನ್ನು ಪರಿಶೀಲಿಸಲು ಬಳಸುವ ಮೊಬೈಲ್ ಅಪ್ಲಿಕೇಶನ್ ಆಗಿದೆ.
- ಪಾಟ್ಸನ್ (PATSAN – Prospective Assessment of Jute Using Mobile App-Based Field Observations) – ಇದು ಅಧಿಕಾರಿಗಳು ಮತ್ತು ರೈತರಿಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ, ಸೆಣಬು ಕೃಷಿಯ ಬಹುತೇಕ ನೈಜ-ಸಮಯದ ಕಣ್ಗಾವಲು ಮತ್ತು ವಿಶ್ಲೇಷಣೆ ಒದಗಿಸುವ ವೆಬ್-ಆಧಾರಿತ ವೇದಿಕೆಯಾಗಿದೆ.
ಭಾರತದಲ್ಲಿ ಸೆಣಬು ಉತ್ಪಾದನೆ:
- ಇದು ನೈಸರ್ಗಿಕ, ಮರುಬಳಕೆ ಮಾಡಬಹುದಾದ, ಮಣ್ಣಿನಲ್ಲಿ ಕರಗುವ ಮತ್ತು ಪರಿಸರ ಸ್ನೇಹಿ ನಾರು ಬೆಳೆ ಆಗಿರುವ ಕಾರಣ, ಇದನ್ನು ‘ಸುವರ್ಣ ನಾರು’ (Golden fibre) ಎಂದು ಕರೆಯಲಾಗುತ್ತದೆ.
- ಪ್ರಪಂಚದಲ್ಲೇ ಅತಿ ಹೆಚ್ಚು ಸೆಣಬು ಬೆಳೆಯುವ ದೇಶ ಭಾರತವಾಗಿದೆ. ಇದರ ನಂತರದ ಸ್ಥಾನಗಳಲ್ಲಿ ಬಾಂಗ್ಲಾದೇಶ ಮತ್ತು ಚೀನಾ ಇವೆ.
- ಭಾರತದ ಒಟ್ಟು ಸೆಣಬು ಉತ್ಪಾದನೆಯಲ್ಲಿ ಶೇ. 99% ರಷ್ಟು ಪಾಲನ್ನು ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳೇ ಹೊಂದಿವೆ.
ಸೆಣಬು ಕೃಷಿಗೆ ಅಗತ್ಯವಿರುವ ಭೌಗೋಳಿಕ ಪರಿಸ್ಥಿತಿಗಳು:
- ತಾಪಮಾನ: ಸರಾಸರಿ ಗರಿಷ್ಠ 34°C ಮತ್ತು ಕನಿಷ್ಠ 15°C ತಾಪಮಾನ ಹಾಗೂ ಶೇ. 65% ರಷ್ಟು ವಾತಾವರಣದ ಆರ್ದ್ರತೆ (ತೇವಾಂಶ) ಇರಬೇಕು.
- ಮಳೆ: ವಾರ್ಷಿಕ ಸುಮಾರು 150-250 ಸೆಂ.ಮೀ. ಮಳೆಯಾಗಬೇಕು.
- ಮಣ್ಣು: ನದಿಪಾತ್ರದ ಮೆಕ್ಕಲು ಗೋಡು ಮಣ್ಣು (Loamy alluvial soils) ಇದಕ್ಕೆ ಅತಿ ಹೆಚ್ಚು ಸೂಕ್ತವಾಗಿದೆ. ಆದರೆ, ಜೇಡಿಮಣ್ಣಿನಿಂದ ಹಿಡಿದು ಮರಳು ಮಿಶ್ರಿತ ಗೋಡುಮಣ್ಣಿನವರೆಗೆ ಎಲ್ಲ ರೀತಿಯ ಮಣ್ಣಿನಲ್ಲೂ ಸೆಣಬನ್ನು ಬೆಳೆಯಬಹುದು.
ಬೈಗಾ ಬುಡಕಟ್ಟು (Baiga Tribe)
ಬುಡಕಟ್ಟು ಗುಂಪುಗಳು

ಇತ್ತೀಚೆಗೆ ಸುದ್ದಿಯಲ್ಲಿದೆ:
- ಛತ್ತೀಸ್ಗಢದಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ಬೈಗಾ ಬುಡಕಟ್ಟಿಗೆ ಸೇರಿದ ಮಕ್ಕಳನ್ನು ಇತ್ತೀಚೆಗೆ ರಕ್ಷಿಸಲಾಗಿದೆ.
ಬೈಗಾ ಬುಡಕಟ್ಟು ಜನಾಂಗದ ಬಗ್ಗೆ:
- ಭೌಗೋಳಿಕ ಹಂಚಿಕೆ: ಬೈಗಾ ಸಮುದಾಯವು ಮಧ್ಯ ಭಾರತದಲ್ಲಿ, ಪ್ರಮುಖವಾಗಿ ಮಧ್ಯಪ್ರದೇಶ ರಾಜ್ಯದಲ್ಲಿ ಕಂಡುಬರುವ ಒಂದು ಜನಾಂಗೀಯ ಗುಂಪಾಗಿದೆ (Ethnic group). ಅಲ್ಲದೆ, ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಛತ್ತೀಸ್ಗಢ ಮತ್ತು ಜಾರ್ಖಂಡ್ನಲ್ಲಿಯೂ ಇವರು ಅಲ್ಪಸಂಖ್ಯೆಯಲ್ಲಿ ಕಂಡುಬರುತ್ತಾರೆ.
- ‘ಬೈಗಾ’ ಎಂದರೆ “ಮಾಂತ್ರಿಕ-ವೈದ್ಯ” ಎಂದರ್ಥ.
- ಛತ್ತೀಸ್ಗಢದಲ್ಲಿರುವ ಬೈಗಾ ಜನಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ಮತ್ತು ಅವರಲ್ಲಿ ಸಾಕ್ಷರತಾ ಪ್ರಮಾಣವು ಅತಿ ಕಡಿಮೆಯಿರುವುದರಿಂದ, ಛತ್ತೀಸ್ಗಢದ ಸರ್ಕಾರವು ಇವರನ್ನು ‘ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪು’ (PVTG) ಎಂದು ವರ್ಗೀಕರಿಸಿದೆ.
- ಇವರು ಸಾಂಪ್ರದಾಯಿಕವಾಗಿ ‘ಸ್ಥಳಾಂತರ ಬೇಸಾಯ’ವನ್ನು ರೂಢಿಸಿಕೊಂಡಿದ್ದು, ಇದನ್ನು ಸ್ಥಳೀಯವಾಗಿ “ಬೇವಾರ್” (Bewar) ಕೃಷಿ ಎಂದು ಕರೆಯಲಾಗುತ್ತದೆ.
ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳು (Particularly Vulnerable Tribal Groups – PVTGs):
- ಪರಿಶಿಷ್ಟ ಪಂಗಡಗಳಲ್ಲಿಯೇ (STs) ಅತ್ಯಂತ ದುರ್ಬಲವಾಗಿರುವ ಮುಖ್ಯವಾಹಿನಿಯಿಂದ ಹೊರಗುಳಿದಿರುವ ತೀವ್ರ ಹಿಂದುಳಿದ ವರ್ಗಗಳನ್ನು ಪಿವಿಟಿಜಿ (PVTGs) ಎಂದು ಕರೆಯಲಾಗುತ್ತದೆ.
- ಯಾವುದೇ ಬುಡಕಟ್ಟು ಗುಂಪನ್ನು ‘ಪಿವಿಟಿಜಿ’ (PVTG) ಎಂದು ಗುರುತಿಸಲು ಪರಿಗಣಿಸುವ ಪ್ರಮುಖ ಮಾನದಂಡಗಳು:
- ಪುರಾತನ ಜೀವನಾಧಾರಿತ ಕೃಷಿ ತಂತ್ರಜ್ಞಾನದ ಬಳಕೆ.
- ಅತ್ಯಂತ ಕಡಿಮೆ ಸಾಕ್ಷರತಾ ಪ್ರಮಾಣ.
- ತೀವ್ರ ಆರ್ಥಿಕ ಹಿಂದುಳಿದಿರುವಿಕೆ.
- ಕ್ಷೀಣಿಸುತ್ತಿರುವ ಅಥವಾ ಸ್ಥಗಿತಗೊಂಡಿರುವ ಜನಸಂಖ್ಯೆ.
ಪಿವಿಟಿಜಿ (PVTG)ಗಳ ಇತಿಹಾಸ: ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಬುಡಕಟ್ಟು ಸಮುದಾಯಗಳ ನಡುವೆಯೇ ಅಸಮಾನತೆ ಇದೆ ಎಂಬುದನ್ನು ‘ಧೇಬರ್ ಆಯೋಗ’ವು (1960-61) ಗುರುತಿಸಿತು.
- 1975 ರಲ್ಲಿ, ಧೇಬರ್ ಆಯೋಗದ ವರದಿಯ ಅನ್ವಯ, ಸರ್ಕಾರವು ‘ಪುರಾತನ ಬುಡಕಟ್ಟು ಗುಂಪುಗಳನ್ನು’ (Primitive Tribal Groups – PTGs) ಪ್ರತ್ಯೇಕ ವರ್ಗವಾಗಿ ಗುರುತಿಸಿತು ಮತ್ತು 52 ಬುಡಕಟ್ಟು ಗುಂಪುಗಳನ್ನು ಈ ಪಟ್ಟಿಗೆ ಸೇರಿಸಿತು.
- 2001 ರ ಜನಗಣತಿಯ ಪ್ರಕಾರ, ದೇಶದಲ್ಲಿ 75 ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳಿದ್ದು (PVTGs), ಇವರ ಒಟ್ಟು ಜನಸಂಖ್ಯೆ 27,68,322 ಆಗಿದೆ, ಹಾಗೂ ಇವರು 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೆಲೆಸಿದ್ದಾರೆ.
- 2006 ರಲ್ಲಿ, PTG ಗಳನ್ನು ‘ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳು’ (PVTGs) ಎಂದು ಮರುನಾಮಕರಣ ಮಾಡಲಾಯಿತು.
PVTGs ಗೆ ಸಂಭಂದಿಸಿದ ಇತ್ತೀಚಿನ ಸರ್ಕಾರಿ ಉಪಕ್ರಮಗಳು:
- ಪಿಎಂ-ಪಿವಿಟಿಜಿ ಅಭಿವೃದ್ಧಿ ಗುರಿ ಯೋಜನೆ (PM-PVTG Development Mission): ಸಂಪರ್ಕ, ವಿದ್ಯುತ್, ಸಾರ್ವಜನಿಕ ಶಿಕ್ಷಣ, ಆರೋಗ್ಯ ರಕ್ಷಣೆ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕದಂತಹ ಮೂಲಭೂತ ಸರ್ಕಾರಿ ಸೇವೆಗಳನ್ನು ಎಲ್ಲಾ 22,544 ಪಿವಿಟಿಜಿ (PVTG) ಹಳ್ಳಿಗಳಿಗೆ ತಲುಪಿಸುವ ದೃಷ್ಟಿಕೋನವನ್ನು ಈ ಯೋಜನೆ ಹೊಂದಿದೆ.
- ಪ್ರಧಾನ ಮಂತ್ರಿ-ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN): ಇದು ಶಾಶ್ವತ ಮನೆಗಳ ನಿರ್ಮಾಣ, ರಸ್ತೆ ಸಂಪರ್ಕ, ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆ, ಸಮುದಾಯ ನೀರು ಸರಬರಾಜು, ಉಚಿತ ಔಷಧಿಗಳೊಂದಿಗೆ ಸಂಚಾರಿ ವೈದ್ಯಕೀಯ ಘಟಕಗಳು ಸೇರಿದಂತೆ 11 ಪ್ರಮುಖ ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಗಮನ ಹರಿಸಲಿದೆ.
ರಾಷ್ಟ್ರೀಯ ತಂತ್ರಜ್ಞಾನ ದಿನ
ವಿಜ್ಞಾನ ಮತ್ತು ತಂತ್ರಜ್ಞಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಪ್ರತಿ ವರ್ಷ ಮೇ 11 ರಂದು ‘ರಾಷ್ಟ್ರೀಯ ತಂತ್ರಜ್ಞಾನ ದಿನ’ವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ತಂತ್ರಜ್ಞಾನ ದಿನದ ಬಗ್ಗೆ:
- 1998 ರಲ್ಲಿ ರಾಜಸ್ಥಾನದ ಪೋಖ್ರಾನ್ನಲ್ಲಿ ‘ಆಪರೇಷನ್ ಶಕ್ತಿ’ ಕಾರ್ಯಾಚರಣೆಯ ಅಡಿಯಲ್ಲಿ ಭಾರತವು ನಡೆಸಿದ ಯಶಸ್ವಿ ಪರಮಾಣು ಪರೀಕ್ಷೆಗಳ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
- ರಾಷ್ಟ್ರದ ಸಮಗ್ರ ಅಭಿವೃದ್ಧಿ ಹಾಗೂ ಕಾರ್ಯತಂತ್ರದ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಭಾರತೀಯ ವಿಜ್ಞಾನಿಗಳು, ಅಭಿಯಂತರರು ಮತ್ತು ತಾಂತ್ರಿಕ ಸಂಸ್ಥೆಗಳು ನೀಡಿದ ಅತ್ಯಮೂಲ್ಯ ಕೊಡುಗೆಯನ್ನು ಈ ದಿನವು ಗೌರವಿಸುತ್ತದೆ.
‘ಒನ್ ಕೇಸ್ ಒನ್ ಡೇಟಾ’ ಮತ್ತು ‘ಸು-ಸಹಾಯ್’ ಉಪಕ್ರಮ : ಸುಪ್ರೀಂ ಕೋರ್ಟ್
ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ, ದೇಶದ ಸರ್ವೋಚ್ಚ ನ್ಯಾಯಾಲಯವು ‘ಒನ್ ಕೇಸ್ ಒನ್ ಡೇಟಾ’ ಮತ್ತು ‘ಸು-ಸಹಾಯ್’ ಎಂಬ ಹೊಸ ಉಪಕ್ರಮಗಳಿಗೆ ಚಾಲನೆ ನೀಡಿದೆ.
ಒನ್ ಕೇಸ್ ಒನ್ ಡೇಟಾ ಉಪಕ್ರಮ (One Case One Data initiative):
- ಇದು ಏಕೀಕೃತ ದತ್ತಾಂಶ ವ್ಯವಸ್ಥೆಯ (Unified database system) ಮೂಲಕ ತಾಲ್ಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಿಂದ ಹಿಡಿದು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದವರೆಗಿನ ಎಲ್ಲಾ ಹಂತದ ನ್ಯಾಯಾಲಯಗಳನ್ನು ಪರಸ್ಪರ ಜೋಡಿಸುವ ಒಂದು ಪ್ರಮುಖ ಡಿಜಿಟಲ್ ಉಪಕ್ರಮವಾಗಿದೆ.
- ಪ್ರಮುಖ ಉದ್ದೇಶ: ಒಂದು ಸಮಗ್ರ ಮತ್ತು ಅಂತರ-ಸಂಪರ್ಕಿತ ಡಿಜಿಟಲ್ ನ್ಯಾಯಾಂಗ ಮಾಹಿತಿ ವ್ಯವಸ್ಥೆಯನ್ನು ರೂಪಿಸುವ ಮೂಲಕ, ಪ್ರಕರಣಗಳ ನಿರ್ವಹಣೆಯನ್ನು ಸುಧಾರಿಸುವುದು.
‘ಸು-ಸಹಾಯ್’ ಚಾಟ್ಬಾಟ್ (‘Su Sahay’ Chatbot):
- ಇದೊಂದು ಕೃತಕ ಬುದ್ಧಿಮತ್ತೆ (AI) ಚಾಲಿತ ಸಹಾಯಕ ಸಂವಾದ ಯಂತ್ರ (ಚಾಟ್ಬಾಟ್)ವಾಗಿದೆ.
- ಕಕ್ಷಿದಾರರಿಗೆ ನ್ಯಾಯ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ಸೇವೆಗಳನ್ನು ಅತ್ಯಂತ ಸುಲಭವಾಗಿ ಒದಗಿಸುವ ದೃಷ್ಟಿಯಿಂದ ಇದನ್ನು ಸರ್ವೋಚ್ಚ ನ್ಯಾಯಾಲಯದ ವೆಬ್ಸೈಟ್ನೊಂದಿಗೆ ಸಂಯೋಜಿಸಲಾಗಿದೆ.
- ಇದನ್ನು ಸರ್ವೋಚ್ಚ ನ್ಯಾಯಾಲಯದ ನೋಂದಣಿ ವಿಭಾಗ (ರಿಜಿಸ್ಟ್ರಿ)ದ ಸಹಯೋಗದೊಂದಿಗೆ ‘ರಾಷ್ಟ್ರೀಯ ಮಾಹಿತಿ ಕೇಂದ್ರ’ (NIC) ಅಭಿವೃದ್ಧಿಪಡಿಸಿದೆ.
ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು, 2025
ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ::
- ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಾಡಿದ ಅತ್ಯುತ್ತಮ ಕಾರ್ಯಗಳಿಗಾಗಿ, ಮಿಜೋರಾಂ ರಾಜ್ಯದ ‘ಕಾವರ್ಥಾ ನಾರ್ಥ್ ಗ್ರಾಮ ಪಂಚಾಯಿತಿ’ಯು ‘ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ 2025’ರ “ಸ್ವಚ್ಛ ಮತ್ತು ಹಸಿರು ಪಂಚಾಯತ್” ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು:
- ಪ್ರದಾನಿಸುವವರು: ಕೇಂದ್ರ ಪಂಚಾಯತಿ ರಾಜ್ ಸಚಿವಾಲಯ.
- ಗ್ರಾಮೀಣ ಭಾರತದಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿರುವ ಪಂಚಾಯಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಎಲ್ಲರನ್ನೂ ಒಳಗೊಂಡ, ಜನರ ಸಹಭಾಗಿತ್ವದ ಮತ್ತು ದೀರ್ಘಕಾಲೀನ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.
- ಪ್ರಶಸ್ತಿ ವಿಜೇತ ಪಂಚಾಯಿತಿಗಳು ಅವುಗಳ ಹಂತ (ಗ್ರಾಮ, ತಾಲೂಕು, ಜಿಲ್ಲಾ ಮಟ್ಟ) ಮತ್ತು ವರ್ಗವನ್ನು ಆಧರಿಸಿ ರೂ. 50 ಲಕ್ಷದಿಂದ ರೂ. 5 ಕೋಟಿಗಳವರೆಗೆ ಆರ್ಥಿಕ ಪ್ರೋತ್ಸಾಹಧನವನ್ನು ಪಡೆಯುತ್ತವೆ.
- ಪ್ರಶಸ್ತಿಯ ವಿಭಾಗಗಳು:
- ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ: ಬಡತನ-ಮುಕ್ತ ಜೀವನೋಪಾಯ, ಉತ್ತಮ ಆರೋಗ್ಯ, ನೀರಿನ ಲಭ್ಯತೆ, ನೈರ್ಮಲ್ಯ, ಮಹಿಳಾ-ಸ್ನೇಹಿ ಆಡಳಿತ ಮತ್ತು ಸಾಮಾಜಿಕ ನ್ಯಾಯದಂತಹ ‘ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ’ (SDGs) ಸಂಬಂಧಿಸಿದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ‘ಗ್ರಾಮ ಪಂಚಾಯಿತಿಗಳನ್ನು’ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
- ನಾನಾಜಿ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ: ಜಿಲ್ಲಾ, ಬ್ಲಾಕ್ (ತಾಲೂಕು) ಮತ್ತು ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪಂಚಾಯಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇತ್ತೀಚಿನ ವಿಜೇತರು:
- ಈ ಬಾರಿಯ ಪ್ರಶಸ್ತಿಗಳಲ್ಲಿ ಒಟ್ಟು 6 ಪಂಚಾಯಿತಿಗಳು ಆಯ್ಕೆಯಾಗುವ ಮೂಲಕ ಕರ್ನಾಟಕವು ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಮೊದಲ ಸ್ಥಾನದಲ್ಲಿದೆ. ತಲಾ 5 ಪ್ರಶಸ್ತಿಗಳನ್ನು ಪಡೆದಿರುವ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.
ಸೇಹತ್ ಯೋಜನೆ (SEHAT Mission)
ಯೋಜನೆಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ‘ಸೇಹತ್ ಯೋಜನೆ’ಗೆ (SEHAT Mission) ಚಾಲನೆ ನೀಡಿದ್ದಾರೆ.
ಸೇಹತ್ – ಕೃಷಿ ರೂಪಾಂತರದ ಮೂಲಕ ಆರೋಗ್ಯಕ್ಕಾಗಿ ವಿಜ್ಞಾನದ ಶ್ರೇಷ್ಠತೆ (SEHAT):
- SEHAT ವಿಸ್ತೃತ ರೂಪ: ಸೈನ್ಸ್ ಎಕ್ಸಲೆನ್ಸ್ ಫಾರ್ ಹೆಲ್ತ್ ಥ್ರೂ ಅಗ್ರಿಕಲ್ಚರಲ್ ಟ್ರಾನ್ಸ್ ಫಾರ್ಮೆಷನ್ (Science Excellence for Health through Agricultural Transformation).
- ಇದು ಕೃಷಿಯಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ದೇಶದ ಜನರ ಆರೋಗ್ಯವನ್ನು ಸುಧಾರಿಸುವುದು, ಹಾಗೂ ಕೃಷಿ, ಪೌಷ್ಟಿಕಾಂಶ ಮತ್ತು ಸಾರ್ವಜನಿಕ ಆರೋಗ್ಯವನ್ನು ಪರಸ್ಪರ ಬೆಸೆಯುವ ಉದ್ದೇಶ ಹೊಂದಿರುವ ರಾಷ್ಟ್ರೀಯ ಯೋಜನೆಯಾಗಿದೆ.
- ಇದು ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ (ICMR) ಮತ್ತು ‘ಭಾರತೀಯ ಕೃಷಿ ಸಂಶೋಧನಾ ಮಂಡಳಿ’ಯ (ICAR) ಜಂಟಿ ಸಹಭಾಗಿತ್ವದ ಯೋಜನೆಯಾಗಿದೆ.
- ಪ್ರಮುಖ ಉದ್ದೇಶ: ಪೋಷಕಾಂಶ ಭರಿತ ಜೈವಿಕ ಆಹಾರಗಳು, ಸಮಗ್ರ ಕೃಷಿ, ಕೃಷಿ ಕಾರ್ಮಿಕರ ವೃತ್ತಿಪರ ಆರೋಗ್ಯ ಮತ್ತು ಒಂದು ಆರೋಗ್ಯ (‘ಒನ್ ಹೆಲ್ತ್) ಮಿಷನ್’ಗೆ ಬೆಂಬಲ ನೀಡುವ ಮೂಲಕ ಸಾರ್ವಜನಿಕ ಆರೋಗ್ಯ ಹಾಗೂ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸುವುದು.
- ಮಹತ್ವ: ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು, ರೋಗ ಬರದಂತೆ ತಡೆಯುವ ಮುಂಜಾಗ್ರತಾ ಆರೋಗ್ಯ ರಕ್ಷಣೆಗೆ, ಅಸಾಂಕ್ರಾಮಿಕ ರೋಗಗಳನ್ನು ತಡೆಯಲು ಹಾಗೂ ರೈತರ ಕಲ್ಯಾಣ ಮತ್ತು ಸಾರ್ವಜನಿಕ ಆರೋಗ್ಯದ ಸವಾಲುಗಳನ್ನು ಎದುರಿಸಲು ಇದು ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ.








ನಿಮ್ಮದೊಂದು ಉತ್ತರ