ಕೌಶಲ್ಯ ಫಲಿತಾಂಶಗಳ ನಿಧಿ (Skills Outcomes Fund)
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಕೇಂದ್ರ ‘ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ’ವು (MSDE) ವಿನೂತನವಾದ ‘ಕೌಶಲ್ಯ ಫಲಿತಾಂಶಗಳ ನಿಧಿ’ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹೊಸ ಅಭಿಯಾನವೊಂದನ್ನು ಪ್ರಾರಂಭಿಸಿದೆ.
ಕೌಶಲ್ಯ ಫಲಿತಾಂಶಗಳ ನಿಧಿಯ ಬಗ್ಗೆ:
- ಉದ್ದೇಶ:- ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಜನತೆಗೆ ಉತ್ತಮ ವೃತ್ತಿ ಅವಕಾಶಗಳನ್ನು ಸೃಷ್ಟಿಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
- ಅನುಷ್ಠಾನಗೊಳಿಸುವ ಸಂಸ್ಥೆ:- ‘ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ’ (NSDC)
- ‘ಮಿಶ್ರಿತ ಹಣಕಾಸು ವಿಧಾನ’ದ ಮಾದರಿಯನ್ನು ಬಳಸಲಗುತ್ತಿದೆ:- ಅಂದರೆ, ಸರ್ಕಾರಿ ನಿಧಿಯೊಂದಿಗೆ ಖಾಸಗಿ ವಲಯದ CSR ಅನುದಾನ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ), ಗೇಟ್ಸ್ ಫೌಂಡೇಶನ್‌ನಂತಹ ದತ್ತಿ ಸಂಸ್ಥೆಗಳ ಮತ್ತು ಅಭಿವೃದ್ಧಿ ಏಜೆನ್ಸಿಗಳ ಬಂಡವಾಳವನ್ನು ಇದು ಒಗ್ಗೂಡಿಸುತ್ತದೆ.
- ಉದ್ದೇಶಿತ ಫಲಾನುಭವಿಗಳು:- ಮುಂದಿನ 4 ವರ್ಷಗಳಲ್ಲಿ ಕಡಿಮೆ-ಆದಾಯದ ಹಿನ್ನೆಲೆಯಿಂದ ಬಂದ 2 ಲಕ್ಷಕ್ಕೂ ಹೆಚ್ಚು ಯುವಜನರನ್ನು ಬೆಂಬಲಿಸುವ ಗುರಿಯನ್ನು ಇದು ಹೊಂದಿದೆ. ಇದರಲ್ಲಿ ವಿಶೇಷವಾಗಿ ‘ಕಡಿಮೆ-ಆದಾಯದ ಮಹಿಳೆಯರ’ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ.
- ಹೆಚ್ಚಿನ ಬೆಳವಣಿಗೆಯ ವಲಯಗಳು:- ಇಲ್ಲಿ ನೀಡಲಾಗುವ ತರಬೇತಿಯು ಉದ್ಯೋಗದಾತ-ಚಾಲಿತ ಹಾಗೂ ಬೇಡಿಕೆ-ಆಧಾರಿತವಾಗಿರುತ್ತದೆ. ಪ್ರಮುಖವಾಗಿ BFSI (ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು), IT-ITeS (ಮಾಹಿತಿ ತಂತ್ರಜ್ಞಾನ), ಹಸಿರು ವಲಯದಲ್ಲಿನ ಉದ್ಯೋಗಗಳು, ಆರೋಗ್ಯ ಸೇವೆ, ಸರಕು ಸಾಗಣೆ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳ ಉದ್ಯೋಗಗಳ ಮೇಲೆ ಈ ನಿಧಿ ಗಮನ ಕೇಂದ್ರೀಕರಿಸುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸರೋವರಗಳ ಅವನತಿ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರು (CAG of India) ನೀಡಿದ ಇತ್ತೀಚಿನ ವರದಿಯ ಪ್ರಕಾರ, 1967 ರಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದ ಸುಮಾರು ಅರ್ಧದಷ್ಟು ಸರೋವರಗಳು ಕಣ್ಮರೆಯಾಗಿವೆ. ಇದು ಗಂಭೀರವಾದ ಪರಿಸರ ಬಿಕ್ಕಟ್ಟಿನ ಮುನ್ಸೂಚನೆಯಾಗಿದೆ ಎಂದು ಸಿಎಜಿ ಎಚ್ಚರಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಸರೋವರಗಳ ಅವನತಿಗೆ ಪ್ರಮುಖ ಕಾರಣಗಳು:
- ಅನಿಯಂತ್ರಿತ ಮಾನವ ಚಟುವಟಿಕೆಗಳು ಮತ್ತು ಭೂ ಒತ್ತುವರಿ.
- ಸಂಬಂಧಪಟ್ಟ ಇಲಾಖೆಗಳ ನಡುವೆ ಸಾಂಸ್ಥಿಕ ಸಮನ್ವಯತೆಯ ಕೊರತೆ.
- ಏಕೀಕೃತ ನಿಯಂತ್ರಣ ಚೌಕಟ್ಟಿನ ಅನುಪಸ್ಥಿತಿ. ಈ ಕಾರಣಗಳಿಂದಾಗಿ ಭೂ-ಬಳಕೆಯ ಸ್ವರೂಪದಲ್ಲಿ ಭಾರಿ ಬದಲಾವಣೆಗಳಾಗಿವೆ.
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿರುವ ಪ್ರಮುಖ ಸರೋವರಗಳು:
- ದಾಲ್ ಸರೋವರ:- ಇದು ವಸತಿ ದೋಣಿಗಳು, ಸಾಂಪ್ರದಾಯಿಕ ‘ಶಿಕಾರಾ’ ದೋಣಿಗಳು ಮತ್ತು ತೇಲುವ ಉದ್ಯಾನವನಗಳಿಗೆ (ರಾಡ್) ಹೆಸರುವಾಸಿಯಾದ ಪ್ರಸಿದ್ಧ ಸಿಹಿನೀರಿನ ಸರೋವರವಾಗಿದೆ.
- ವುಲಾರ್ ಸರೋವರ:- ಇದು ಭಾರತದ ಅತ್ಯಂತ ದೊಡ್ಡ ಸಿಹಿನೀರಿನ ಸರೋವರವಾಗಿದ್ದು , ಭೂಪದರಗಳ (ಟೆಕ್ಟೋನಿಕ್) ಚಟುವಟಿಕೆಯಿಂದಾಗಿ ರೂಪುಗೊಂಡಿದೆ. ಇದಕ್ಕೆ ‘ಝೇಲಂ ನದಿ’ಯು ನೀರನ್ನು ಪೂರೈಸುತ್ತದೆ ಮತ್ತು ಇದು ‘ರಾಮ್ಸರ್ ತಾಣ’ದ ಮಾನ್ಯತೆ ಪಡೆದಿದೆ.
- ಪ್ಯಾಂಗಾಂಗ್ ತ್ಸೋ:- ಇದೊಂದು ಅತಿ-ಎತ್ತರದ ಪ್ರದೇಶದಲ್ಲಿರುವ ಉಪ್ಪುನೀರಿನ ಸರೋವರವಾಗಿದ್ದು, ಟಿಬೆಟ್‌ವರೆಗೂ ವಿಸ್ತರಿಸಿದೆ. ಇದು ತನ್ನ ಬಣ್ಣ ಬದಲಾಯಿಸುವ ವಿಶಿಷ್ಟತೆ ಮತ್ತು ಆಯಕಟ್ಟಿನ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ.
- ತ್ಸೋ ಮೊರಿರಿ:- ಇದು ಸಹ ಅತಿ-ಎತ್ತರದಲ್ಲಿರುವ ಮತ್ತೊಂದು ಉಪ್ಪುನೀರಿನ ಸರೋವರವಾಗಿದ್ದು, ‘ರಾಮ್ಸರ್ ತಾಣ’ದ ಮಾನ್ಯತೆ ಪಡೆದಿದೆ.
- ಮಾನಸ್‌ಬಲ್ ಸರೋವರ:- ಇದು ಈ ಪ್ರದೇಶದ ಅತ್ಯಂತ ಆಳವಾದ ಸಿಹಿನೀರಿನ ಸರೋವರಗಳಲ್ಲಿ ಒಂದಾಗಿದೆ. ನೂರ್ ಜಹಾನ್ ನಿರ್ಮಿಸಿದ ಪ್ರಸಿದ್ಧ ಮೊಘಲ್ ಉದ್ಯಾನವನವಾದ ‘ಜರೋಕಾ ಬಾಗ್’ ಈ ಸರೋವರದ ಮೇಲ್ಭಾಗದಲ್ಲಿದೆ.
- ಹೊಕೇರ್ಸರ್ ಜೌಗು ಪ್ರದೇಶ:- ಇದನ್ನು ಹೆಚ್ಚಾಗಿ “ಜೌಗು ಪ್ರದೇಶಗಳ ರಾಣಿ” ಎಂದು ಕರೆಯಲಾಗುತ್ತದೆ.
- ಸುರಿನ್ಸರ್ ಸರೋವರ ಮತ್ತು ಮಾನ್ಸರ್ ಸರೋವರ:- ಇವು ಅವಳಿ ಸರೋವರಗಳಾಗಿದ್ದು, ‘ರಾಮ್ಸರ್ ತಾಣ’ದ ಮಾನ್ಯತೆ ಪಡೆದಿದೆ.
ಯಥಾಸ್ಥಿತಿಯಲ್ಲಿ ರೆಪೋ ದರ (ಶೇ. 5.25) ಮುಂದುವರಿಕೆ : RBI
ಆರ್ಥಿಕತೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ‘ಹಣಕಾಸು ನೀತಿ ಸಮಿತಿ’ಯು (MPC) ತನ್ನ ಪ್ರಮುಖ ನೀತಿ ದರವಾದ ರೆಪೋ ದರವನ್ನು ಯಾವುದೇ ಬದಲಾವಣೆಯಿಲ್ಲದೆ ಶೇ. 5.25 ರಲ್ಲೇ ಮುಂದುವರಿಸಲು ನಿರ್ಧರಿಸಿದೆ.
ಹಣಕಾಸು ನೀತಿ ಸಮಿತಿಯ ಬಗ್ಗೆ (MPC – Monetary Policy Committee):
- ಸ್ಥಾಪನೆ:- ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಯ್ದೆ, 1934 ರ ಸೆಕ್ಷನ್ 45ZB ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಹಣಕಾಸು ನೀತಿ ಸಮಿತಿಯನ್ನು (MPC) ರಚಿಸಿದೆ.
- ಈ ಸಮಿತಿಯು ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿಯಾದರೂ ಸಭೆ ಸೇರುವುದು ಕಡ್ಡಾಯವಾಗಿದೆ.
- ಈ ಸಮಿತಿಯು ಒಟ್ಟು 6 ಸದಸ್ಯರನ್ನು ಒಳಗೊಂಡಿದೆ:
- ಈ ಆರು ಸದಸ್ಯರ ಪೈಕಿ ಮೂವರು ‘ಆರ್‌ಬಿಐ’ನ ಆಂತರಿಕ ಸದಸ್ಯರಾಗಿರುತ್ತಾರೆ. ಇದರಲ್ಲಿ ಸಮಿತಿಯ ಅಧ್ಯಕ್ಷತೆ ವಹಿಸುವ ಆರ್‌ಬಿಐ ಗವರ್ನರ್ ಕೂಡ ಸೇರಿದ್ದಾರೆ.
- ಆರ್‌ಬಿಐನ ಡೆಪ್ಯುಟಿ ಗವರ್ನರ್ ಎರಡನೇ ಆಂತರಿಕ ಸದಸ್ಯರಾಗಿರುತ್ತಾರೆ.
- ಮೂರನೇ ಸದಸ್ಯರಾಗಿ ಆರ್‌ಬಿಐನ ಕೇಂದ್ರ ಮಂಡಳಿಯು ಓರ್ವ ಆರ್‌ಬಿಐನ ಅಧಿಕಾರಿಯನ್ನು ನಾಮನಿರ್ದೇಶನ ಮಾಡುತ್ತದೆ. (ಸಾಮಾನ್ಯವಾಗಿ, ಹಣಕಾಸು ನೀತಿಯ ಉಸ್ತುವಾರಿ ವಹಿಸುವ ‘ಕಾರ್ಯನಿರ್ವಾಹಕ ನಿರ್ದೇಶಕರು’ ಈ ಸ್ಥಾನದಲ್ಲಿರುತ್ತಾರೆ).
- ಉಳಿದ ಮೂವರು ಬಾಹ್ಯ ಸದಸ್ಯರಾಗಿದ್ದು, ಅವರನ್ನು ಕೇಂದ್ರ ಸರ್ಕಾರವು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡುತ್ತದೆ.
- MPC ಯ ಪ್ರತಿಯೊಬ್ಬ ಸದಸ್ಯರಿಗೂ ತಲಾ ಒಂದು ಮತದಾನದ ಹಕ್ಕಿರುತ್ತದೆ:- ಒಂದು ವೇಳೆ ನಿರ್ಣಯದ ಮೇಲಿನ ಮತಗಳು ಸಮಬಲಗೊಂಡರೆ, ಆರ್‌ಬಿಐ ಗವರ್ನರ್ ಅವರು ಎರಡನೇ ಅಥವಾ ‘ನಿರ್ಣಾಯಕ ಮತವನ್ನು’ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
- ರಚನೆಯ ಪ್ರಾಮುಖ್ಯತೆ:- ಬೆಲೆ ಸ್ಥಿರತೆ ಮತ್ತು ಹಣದುಬ್ಬರವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಆರ್‌ಬಿಐಗೆ ವಹಿಸಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವೆ ಏರ್ಪಟ್ಟ ಒಪ್ಪಂದದ ಪರಿಣಾಮವಾಗಿ ಈ MPC ಯನ್ನು ಸ್ಥಾಪಿಸಲಾಯಿತು. ಇದಕ್ಕಾಗಿ ಭಾರತ ಸರ್ಕಾರ ಮತ್ತು ಆರ್‌ಬಿಐ ‘ಹಣಕಾಸು ನೀತಿ ಚೌಕಟ್ಟಿನ ಒಪ್ಪಂದ’ಕ್ಕೆ (Monetary Policy Framework Agreement) ಸಹಿ ಹಾಕಿವೆ.
- ಕಾರ್ಯಗಳು:- ನಿಗದಿತ ಹಣದುಬ್ಬರ ಗುರಿಯನ್ನು ಸಾಧಿಸಲು ಅಗತ್ಯವಿರುವ ನೀತಿ ‘ರೆಪೋ ದರ’ವನ್ನು ಈ ಸಮಿತಿಯು ನಿರ್ಧರಿಸುತ್ತದೆ. ಇದು ಆರ್ಥಿಕತೆಯಲ್ಲಿನ ಇತರೆಲ್ಲಾ ಬಡ್ಡಿದರಗಳಿಗೆ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ.
ಭಾರತದಲ್ಲಿ ಹಣಕಾಸು ನೀತಿಯ ಪ್ರಮುಖ ಸಾಧನಗಳು:
- ರೆಪೋ ದರ:- ಇದು ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗಳಿಗೆ ಅಲ್ಪಾವಧಿ ನಿಧಿಯನ್ನು ಸಾಲವಾಗಿ ನೀಡುವಾಗ ವಿಧಿಸುವ ಬಡ್ಡಿದರವಾಗಿದೆ. ಇದಕ್ಕೆ ವಾಣಿಜ್ಯ ಬ್ಯಾಂಕ್‌ಗಳು ಭದ್ರತೆಯನ್ನು ಒದಗಿಸಬೇಕಾಗುತ್ತದೆ.
- ರಿವರ್ಸ್ ರೆಪೋ ದರ:- ಇದು ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗಳಿಂದ ಹೆಚ್ಚುವರಿ ಹಣದ ಹರಿವನ್ನು (ದ್ರವ್ಯತೆ) ತನ್ನತ್ತ ಸೆಳೆಯುವಾಗ ನೀಡುವ ಬಡ್ಡಿದರವಾಗಿದೆ.
- ನಗದು ಮೀಸಲು ಅನುಪಾತ (Cash Reserve Ratio – CRR):- ಇದು ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಒಟ್ಟು ಠೇವಣಿಯ ನಿರ್ದಿಷ್ಟ ಭಾಗವನ್ನು ಕಡ್ಡಾಯವಾಗಿ ಆರ್‌ಬಿಐ ಬಳಿ ಕೇವಲ ನಗದು ರೂಪದಲ್ಲಿ ಕಾಯ್ದಿರಿಸಬೇಕಾದ ಪ್ರಮಾಣವಾಗಿದೆ.
- ಶಾಸನಬದ್ಧ ದ್ರವ್ಯತೆ ಅನುಪಾತ (Statutory Liquidity Ratio – SLR):- ಇದು ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಠೇವಣಿಯ ನಿರ್ದಿಷ್ಟ ಭಾಗವನ್ನು ಕಡ್ಡಾಯವಾಗಿ ದ್ರವ್ಯ ಚಿರಾಸ್ತಿಗಳ ರೂಪದಲ್ಲಿ (Liquid assets) ಅಂದರೆ ಚಿನ್ನ, ನಗದು, ಸರ್ಕಾರಿ ಭದ್ರತೆಗಳನ್ನು ತಮ್ಮ ಬಳಿಯೇ ಕಾಯ್ದಿರಿಸಿಕೊಳ್ಳಬೇಕಾದ ಪ್ರಮಾಣವಾಗಿದೆ.
- ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳು (Open Market Operations – OMO):- ಇದು ಮಾರುಕಟ್ಟೆಯಲ್ಲಿ ಹಣದ ಹರಿವನ್ನು ನಿಯಂತ್ರಿಸಲು ಆರ್‌ಬಿಐ ಸರ್ಕಾರಿ ಭದ್ರತೆಗಳನ್ನು (G- secs) ಖರೀದಿಸುವ ಅಥವಾ ಮಾರಾಟ ಮಾಡುವ ಪ್ರಕ್ರಿಯೆಯಾಗಿದೆ.
- ಸೀಮಾಂತ ಸ್ಥಾಯಿ ಸೌಲಭ್ಯ (Marginal Standing Facility – MSF):- ವಾಣಿಜ್ಯ ಬ್ಯಾಂಕ್‌ಗಳು ತುರ್ತು ಪರಿಸ್ಥಿತಿಯಲ್ಲಿ (ತೀವ್ರ ನಗದು ಕೊರತೆಯಾದಾಗ) ದಂಡದ ದರದಲ್ಲಿ ಆರ್‌ಬಿಐನಿಂದ ಸಾಲ ಪಡೆಯಲು ಇರುವ ವಿಶೇಷ ವ್ಯವಸ್ಥೆಯಾಗಿದೆ.
- ದ್ರವ್ಯತೆ ಹೊಂದಾಣಿಕೆ ಸೌಲಭ್ಯ (Liquidity Adjustment Facility – LAF):- ಇದು ರೆಪೋ ಮತ್ತು ರಿವರ್ಸ್ ರೆಪೋ ಕಾರ್ಯಾಚರಣೆಗಳನ್ನು ನಿರ್ವಹಿಸುವ ಒಟ್ಟಾರೆ ಚೌಕಟ್ಟಾಗಿದೆ.
- ಮಾರುಕಟ್ಟೆ ಸ್ಥಿರೀಕರಣ ಯೋಜನೆ (Market Stabilisation Scheme – MSS):- ಆರ್ಥಿಕತೆಯಲ್ಲಿನ ಹೆಚ್ಚುವರಿ ದ್ರವ್ಯತೆಯನ್ನು ಹೀರಿಕೊಳ್ಳಲು ಸರ್ಕಾರಿ ಬಾಂಡ್‌ಗಳನ್ನು ವಿತರಿಸುವ ವ್ಯವಸ್ಥೆಯಾಗಿದೆ.
ಭಾರತದಲ್ಲಿ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಹಂತಹಂತವಾದ ಕಡಿತ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಡಿಸೆಂಬರ್ 31, 2027 ರ ನಂತರ ಯಾವುದೇ ಹೊಸ ಹೈಡ್ರೋಫ್ಲೋರೋಕಾರ್ಬನ್ (Hydrofluorocarbon – HFC) ಉತ್ಪಾದನಾ ಯೋಜನೆಗಳಿಗೆ ಪರಿಸರ ಅನುಮತಿಯನ್ನು ನೀಡುವುದಿಲ್ಲ ಎಂದು ಭಾರತ ಸರ್ಕಾರವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
- ಸರ್ಕಾರದ ಈ ಮಹತ್ವದ ನಿರ್ಧಾರವು, ‘ಮಾಂಟ್ರಿಯಲ್ ಶಿಷ್ಟಾಚಾರ’ (Montreal Protocol) ಮತ್ತು ‘ಕಿಗಾಲಿ ತಿದ್ದುಪಡಿ’ (Kigali Amendment) ಅಡಿಯಲ್ಲಿ ಭಾರತ ಮಾಡಿಕೊಂಡಿರುವ ಅಂತರರಾಷ್ಟ್ರೀಯ ಬದ್ಧತೆಗಳಿಗೆ ಅನುಗುಣವಾಗಿದೆ.
ಮಾಂಟ್ರಿಯಲ್ ಶಿಷ್ಟಾಚಾರ (Montreal Protocol)ದ ಬಗ್ಗೆ:
- ಜಾರಿ:- ಕೆನಡಾದ ಮಾಂಟ್ರಿಯಲ್‌ನಲ್ಲಿ 1987 ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು ಇದು 1989 ರಿಂದ ಅಧಿಕೃತವಾಗಿ ಜಾರಿಗೆ ಬಂದಿತು.
- ಉದ್ದೇಶ:- ಓಝೋನ್ ಪದರದ ಸವೆತಕ್ಕೆ ಕಾರಣವಾಗಿರುವ ವಸ್ತುಗಳ ಉತ್ಪಾದನೆಯನ್ನು ಗಣನೀಯವಾಗಿ ತಗ್ಗಿಸುವ ಮೂಲಕ ‘ಓಝೋನ್ ಪದರ’ವನ್ನು ರಕ್ಷಿಸುವುದು.
- ಕಿಗಾಲಿ ಒಪ್ಪಂದ, 2016:- ರುವಾಂಡಾ ದೇಶದ ಕಿಗಾಲಿಯಲ್ಲಿ 2016 ರಲ್ಲಿ ಅಂಗೀಕರಿಸಲ್ಪಟ್ಟ, ಕಾನೂನುಬದ್ಧವಾದ ‘ಕಿಗಾಲಿ ಒಪ್ಪಂದ’ವನ್ನು ಅನುಮೋದಿಸುವ ಮೂಲಕ ಈ ಮಾಂಟ್ರಿಯಲ್ ಶಿಷ್ಟಾಚಾರವನ್ನು ಮತ್ತಷ್ಟು ಬಲಪಡಿಸಲಾಯಿತು.
- ಪ್ರಾಮುಖ್ಯತೆ:- ಪ್ರಬಲ ಹಸಿರುಮನೆ ಅನಿಲಗಳಾಗಿರುವ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಉತ್ಪಾದನೆಯನ್ನು 2040 ರ ದಶಕದ ಅಂತ್ಯದ ವೇಳೆಗೆ ಹಂತಹಂತವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸುವ ಗುರಿಯನ್ನು ಇದು ಹೊಂದಿದೆ.
ಕಿಗಾಲಿ ತಿದ್ದುಪಡಿ (Kigali Amendment)ಯ ಬಗ್ಗೆ:
- ಕಿಗಾಲಿ ಒಪ್ಪಂದವು ಮೂಲತಃ ‘ಮಾಂಟ್ರಿಯಲ್ ಶಿಷ್ಟಾಚಾರ’ಕ್ಕೆ ತರಲಾದ ಅಧಿಕೃತ ತಿದ್ದುಪಡಿಯಾಗಿದೆ.
- ಉದ್ದೇಶ:- ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಉತ್ಪಾದನೆ ಮತ್ತು ಬಳಕೆ ಎರಡನ್ನೂ ನಿಯಂತ್ರಿಸುವ ಮೂಲಕ, ಅವುಗಳನ್ನು ವ್ಯವಸ್ಥಿತವಾಗಿ ಹಂತಹಂತವಾಗಿ ತಗ್ಗಿಸುವುದು.
- 2047 ರ ವೇಳೆಗೆ ಜಾಗತಿಕ HFC ಬಳಕೆಯಲ್ಲಿ ಶೇ. 80 ಕ್ಕಿಂತ ಹೆಚ್ಚಿನ ಕಡಿತವನ್ನು ಸಾಧಿಸುವುದು ಇದರ ಪ್ರಮುಖ ಗುರಿಯಾಗಿದೆ. ಇದು ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನದಲ್ಲಿನ ಹೆಚ್ಚಳವನ್ನು 0.5 ಡಿಗ್ರಿ ಸೆಲ್ಸಿಯಸ್‌ನಷ್ಟು ತಡೆಯಲು ಸಹಾಯ ಮಾಡುತ್ತದೆ.
ಓಝೋನ್ ಪದರ (O3)ದ ಕುರಿತು:
- ಓಜೋನ್ ಎಂಬುದು ಮೂರು ಆಮ್ಲಜನಕದ ಪರಮಾಣುಗಳಿಂದ ಮಾಡಲ್ಪಟ್ಟ ಅತ್ಯಂತ ಕ್ರಿಯಾಶೀಲ ಅಣುವಾಗಿದೆ.
- ‘ಸಮೋಷ್ಣ ಮಂಡಲ’ (Stratosphere) ವಲಯದಲ್ಲಿ ಕಂಡುಬರುತ್ತದೆ:- ಇದು ಭೂಮಿಯ ಮೇಲ್ಮೈಯಿಂದ ಸುಮಾರು 10 ರಿಂದ 50 ಕಿ.ಮೀ ಎತ್ತರದಲ್ಲಿ ಅಸ್ತಿತ್ವದಲ್ಲಿದೆ ಮತ್ತು ಇದೊಂದು ತೆಳುವಾದ ಓಝೋನ್ ಪದರವಾಗಿ ರೂಪುಗೊಂಡಿದೆ.
- ನೈಸರ್ಗಿಕ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ:- ಸೂರ್ಯನಿಂದ ಹೊರಹೊಮ್ಮುವ ಮಾರಕವಾದ ‘ನೇರಳಾತೀತ ವಿಕಿರಣ’ಗಳನ್ನು (UV Radiation) ತಡೆ ಹಿಡಿಯುವ ಮೂಲಕ ಭೂಮಿಯ ಮೇಲಿರುವ ಮಾನವ ಸಂಕುಲ ಹಾಗೂ ಇತರ ಜೀವಿಗಳ ಉಳಿವಿಗೆ ಈ ‘ಓಝೋನ್ ಕವಚ’ವು ಅತ್ಯಂತ ಅವಶ್ಯಕವಾಗಿದೆ.
ಓಝೋನ್ ಪದರದ ಸವೆತ (OZONE LAYER DEPLETION)ನ ಕುರಿತು:
- ವ್ಯಾಖ್ಯಾನ:- ವಾತಾವರಣದ ಮಧ್ಯದ ಪದರಗಳಲ್ಲಿ, ಅದರಲ್ಲೂ ಪ್ರಮುಖವಾಗಿ ‘ಸಮೋಷ್ಣ ಮಂಡಲ’ ವಲಯದಲ್ಲಿ ಓಝೋನ್ ಅನಿಲದ ಸಾಂದ್ರತೆಯು ಕಡಿಮೆಯಾಗುವ ಪ್ರಕ್ರಿಯೆಯನ್ನು ‘ಓಝೋನ್ ಪದರದ ಸವೆತ’ ಎಂದು ಕರೆಯಲಾಗುತ್ತದೆ.
- ಸವೆತಕ್ಕೇ ಕಾರಣಗಳು:- ಮಾನವ-ನಿರ್ಮಿತ ಹ್ಯಾಲೊಜನ್-ಯುಕ್ತ ಹೈಡ್ರೋಕಾರ್ಬನ್‌ಗಳ ನಿರಂತರ ಹೊರಸೂಸುವಿಕೆಯಿಂದಾಗಿ ಓಝೋನ್ ಸವೆತ ಉಂಟಾಗುತ್ತದೆ. ಅವುಗಳೆಂದರೆ,
- ಕ್ಲೋರೋಫ್ಲೋರೋಕಾರ್ಬನ್ (CFCs),
- ಹೈಡ್ರೋಕ್ಲೋರೋಫ್ಲೋರೋಕಾರ್ಬನ್ (HCFCs),
- ಹ್ಯಾಲಾನ್ (Halons),
- ಕಾರ್ಬನ್ ಟೆಟ್ರಾಕ್ಲೋರೈಡ್ (Carbon tetrachloride) ಮತ್ತು
- ಮೀಥೈಲ್ ಬ್ರೋಮೈಡ್ (Methyl bromide).
- ಓಝೋನ್ ರಂಧ್ರ:- 1970 ರ ದಶಕದ ಆರಂಭದಿಂದಲೂ, ಭೂಮಿಯ ಕೆಲವು ನಿರ್ದಿಷ್ಟ ಪ್ರದೇಶಗಳ ಮೇಲೆ, ವಿಶೇಷವಾಗಿ ‘ಅಂಟಾರ್ಕ್ಟಿಕ್ ಪ್ರದೇಶ’ದ ಮೇಲೆ ಸಮೋಷ್ಣ ಮಂಡಲ ವಲಯದ ಓಝೋನ್ ಪದರವು ಗಣನೀಯವಾಗಿ ತೆಳುವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿ ಕಂಡುಬಂದಿದೆ.
ವಿನಾಯಕ ದಾಮೋದರ ಸಾವರ್ಕರ್
ಇತಿಹಾಸ
ಇತ್ತೀಚೆಗೆ ಸುದ್ದಿಯಲ್ಲಿ:
- ವಿನಾಯಕ ದಾಮೋದರ ಸಾವರ್ಕರ್ ಕುರಿತಾದ ಟೀಕೆಗಳಿಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದು, ‘ಸ್ವಾತಂತ್ರ್ಯವೀರ’ ಎಂಬ ಬಿರುದಿನ ಮೂಲದ ಬಗ್ಗೆ ಪುಣೆ ನ್ಯಾಯಾಲಯದ ಮುಂದೆ ಗಮನ ಸೆಳೆದಿದೆ.
ವಿನಾಯಕ ದಾಮೋದರ ಸಾವರ್ಕರ್ (1883–1966) ಅವರ ಬಗ್ಗೆ:
- ಜನಪ್ರಿಯವಾಗಿ ‘ವೀರ ಸಾವರ್ಕರ್’ ಎಂದು ಕರೆಯಲ್ಪಡುವ ಇವರು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಚಿಂತಕ ಮತ್ತು ಬರಹಗಾರರಾಗಿದ್ದರು.
- ಇವರು ಹಿಂದುತ್ವ ಸಿದ್ಧಾಂತದ ಬೆಳವಣಿಗೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕ್ರಾಂತಿಕಾರಿ ರಾಷ್ಟ್ರೀಯತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
- ಶಿಕ್ಷಣ:- ಸಾವರ್ಕರ್ ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು ಮತ್ತು ನಂತರ ಕಾನೂನು ಅಧ್ಯಯನಕ್ಕಾಗಿ ಲಂಡನ್‌ಗೆ ಪ್ರಯಾಣ ಬೆಳೆಸಿದರು.
- ಸ್ವಾತಂತ್ರ್ಯ ಹೋರಾಟದಲ್ಲಿನ ಪಾತ್ರ:- ಇವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಶಸ್ತ್ರ ಕ್ರಾಂತಿಗೆ ಮುಡಿಪಾದ ‘ಅಭಿನವ್ ಭಾರತ್ ಸೊಸೈಟಿ’ ಎಂಬ ರಹಸ್ಯ ಸಂಘಟನೆಯನ್ನು 1904 ರಲ್ಲಿ ಸ್ಥಾಪಿಸಿದರು.
- ಲಂಡನ್‌ನಲ್ಲಿದ್ದಾಗ, ಇವರು ‘ಇಂಡಿಯಾ ಹೌಸ್’ ಮತ್ತು ‘ಫ್ರೀ ಇಂಡಿಯಾ ಸೊಸೈಟಿ’ಯ ನೇತೃತ್ವ ವಹಿಸಿದ್ದರು. ಅಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ವಿಧ್ವಂಸಕ ಕೃತ್ಯ ಮತ್ತು ಹತ್ಯೆಯ ವಿಧಾನಗಳಲ್ಲಿ ತರಬೇತಿ ನೀಡುತ್ತಿದ್ದರು.
- ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಸೇವೆ:- ಇವರು 1937 ರಿಂದ 1943 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ಆ ಮೂಲಕ “ಹಿಂದೂ ರಾಷ್ಟ್ರ”ದ ಪರಿಕಲ್ಪನೆಯನ್ನು ಪ್ರತಿಪಾದಿಸಿದರು.
- ಸಾಮಾಜಿಕ ಸುಧಾರಣೆ:- ಸಾವರ್ಕರ್ ಅವರು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಕಡು ವಿರೋಧಿಯಾಗಿದ್ದರು.
- ಸಾಹಿತ್ಯಿಕ ಕೃತಿ:- ಇವರು ‘ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್, 1857’ (The Indian War of Independence, 1857) ಎಂಬ ಕೃತಿಯನ್ನು ರಚಿಸಿದರು. 1857 ರ ದಂಗೆಯನ್ನು ಭಾರತದ ‘ಮೊದಲ ಸ್ವಾತಂತ್ರ್ಯ ಸಂಗ್ರಾಮ’ವೆಂದು ಬಣ್ಣಿಸಿದ ಮೊದಲ ಕೃತಿ ಇದಾಗಿದೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPF’s)
ರಕ್ಷಣೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಅಧಿಕಾರಿಗಳ ನೇಮಕಾತಿ, ನಿಯೋಜನೆ, ಬಡ್ತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸಲು ಏಕೀಕೃತ ಕಾನೂನು ಚೌಕಟ್ಟನ್ನು ರಚಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಇತ್ತೀಚೆಗೆ ‘ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಾಮಾನ್ಯ ಆಡಳಿತ) ಕಾಯ್ದೆ, 2026’ ಅನ್ನು (Central Armed Police Forces (General Administration) Act, 2026 ಅಧಿಸೂಚನೆ ಹೊರಡಿಯಲಾಗಿದೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) ಬಗ್ಗೆ:
- ಕಾರ್ಯನಿರ್ವಹಣೆ:- ಇದು ಕೇಂದ್ರ ‘ಗೃಹ ಸಚಿವಾಲಯ’ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಕಾರ್ಯಾದೇಶ:- ಗಡಿ ಕಾವಲು, ಆಂತರಿಕ ಭದ್ರತೆ, ಬಂಡಾಯ ನಿಗ್ರಹ ಮತ್ತು ಮೂಲಸೌಕರ್ಯ ರಕ್ಷಣೆಯ ಪ್ರಮುಖ ಜವಾಬ್ದಾರಿಯನ್ನು ಈ ಪಡೆಗಳು ಹೊಂದಿವೆ.
- ಪ್ರಾಮುಖ್ಯತೆ:- ರಾಜ್ಯ ಪೊಲೀಸರಿಗೆ ನೆರವಾಗಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ವಿನ್ಯಾಸಗೊಳಿಸಲಾದ ಈ ಪಡೆಗಳು ಪ್ರಮುಖವಾಗಿ CRPF, BSF, CISF, ITBP, SSB, NSG, ಮತ್ತು ಅಸ್ಸಾಂ ರೈಫಲ್ಸ್ ಅನ್ನು ಒಳಗೊಂಡಿವೆ.
ಪ್ರಮುಖ ಘಟಕಗಳು ಮತ್ತು ಅವುಗಳ ಪಾತ್ರಗಳು:
- ಗಡಿ ಕಾವಲು:- ಗಡಿ ಭದ್ರತಾ ಪಡೆ (BSF), ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ (SSB), ಮತ್ತು ಅಸ್ಸಾಂ ರೈಫಲ್ಸ್ (AR) ಪಡೆಗಳು ದೇಶದ ಗಡಿಗಳಲ್ಲಿ ಕಾವಲು ಮತ್ತು ಗಸ್ತು ಕಾಯುತ್ತವೆ.
- ಆಂತರಿಕ ಭದ್ರತೆ:- ನಕ್ಸಲ್ ನಿಗ್ರಹ ಮತ್ತು ಬಂಡಾಯ-ನಿಗ್ರಹ ಕಾರ್ಯಾಚರಣೆಗಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (CRPF) ಪ್ರಾಥಮಿಕ ಪಡೆಯಾಗಿ ಕಾರ್ಯನಿರ್ವಹಿಸುತ್ತದೆ.
- ಕೈಗಾರಿಕಾ ಭದ್ರತೆ:- ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (CISF) ವಿಮಾನ ನಿಲ್ದಾಣಗಳು ಸೇರಿದಂತೆ ನಿರ್ಣಾಯಕ ಮೂಲಸೌಕರ್ಯಗಳಿಗೆ ಭದ್ರತೆ ಒದಗಿಸುತ್ತದೆ.
- ವಿಶೇಷ ಕಾರ್ಯಾಚರಣೆಗಳು:- ರಾಷ್ಟ್ರೀಯ ಭದ್ರತಾ ಪಡೆಯು (NSG) ವಿಶಿಷ್ಟ ಕಮಾಂಡೋ ಘಟಕವಾಗಿ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತದೆ.







ನಿಮ್ಮದೊಂದು ಉತ್ತರ