ಭಾರತದ ಹೊಸ ಗಡಿಪಾರು ನೀತಿ
ಆಡಳಿತ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚಿಗೆ , ಕೇಂದ್ರ ಗೃಹ ಸಚಿವಾಲಯವು ಹೊಸ ಗಡಿಪಾರು ನೀತಿಯನ್ನು (Deportation policy) ಹೊರಡಿಸಿದೆ.
ಗಡಿಪಾರು (Deportation) ಎಂದರೇನು?
- ಇದೊಂದು ಔಪಚಾರಿಕ ಕಾನೂನು ಪ್ರಕ್ರಿಯೆಯಾಗಿದ್ದು, ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಶಂಕಿತ ವಿದೇಶಿಯರನ್ನು ವಶಕ್ಕೆ ಪಡೆದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮತ್ತು ಅವರ ತಾಯ್ನಾಡಿನೊಂದಿಗೆ ಅವರ ಗುರುತನ್ನು ಖಚಿತಪಡಿಸಿಕೊಂಡ ನಂತರವೇ ಅವರನ್ನು ತಮ್ಮ ದೇಶಕ್ಕೆ ಹಿಂತಿರುಗಿಸಲಾಗುತ್ತದೆ ಅಥವಾ ಗಡಿಪಾರು ಮಾಡಲಾಗುತ್ತದೆ.
- ಪೌರತ್ವ ಕಾಯ್ದೆ, 1955 ರ ಪ್ರಕಾರ, ಮಾನ್ಯವಾದ ಪ್ರಯಾಣ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ ಅಥವಾ ಕಾನೂನುಬದ್ಧವಾಗಿ ಪ್ರವೇಶಿಸಿ ಅನುಮತಿಸಲಾದ ಅವಧಿಯ ನಂತರವೂ ದೇಶದಲ್ಲಿ ಉಳಿದುಕೊಂಡಿರುವ ವಿದೇಶಿ ವ್ಯಕ್ತಿಯನ್ನು “ಅಕ್ರಮ ವಲಸಿಗ” ಎಂದು ವ್ಯಾಖ್ಯಾನಿಸಲಾಗಿದೆ.
ಹೊಸ ಗಡಿಪಾರು ನೀತಿಯ ಪ್ರಮುಖ ವೈಶಿಷ್ಟ್ಯಗಳು:
- 30-ದಿನಗಳ ಪರಿಶೀಲನಾ ಗಡುವು:- ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಕ್ರಮ ವಲಸಿಗರನ್ನು ಗುರುತಿಸಿ ಕಡ್ಡಾಯವಾಗಿ 30 ದಿನಗಳೊಳಗೆ ಅವರ ಹಿನ್ನೆಲೆಯನ್ನು ಪರಿಶೀಲಿಸಬೇಕು. ಒಂದು ವೇಳೆ ಈ ಗಡುವಿನ ಅವಧಿಯಲ್ಲಿ ಅವರ ಹಿನ್ನೆಲೆಯನ್ನು ಸಾಬೀತುಪಡಿಸಲು ವಿಫಲವಾದರೆ, ಅದು ಸ್ವಯಂಚಾಲಿತ ಗಡಿಪಾರಿಗೆ ಕಾರಣವಾಗುತ್ತದೆ.
- ಜಿಲ್ಲಾ-ಮಟ್ಟದ ವಿಶೇಷ ಪೊಲೀಸ್ ಘಟಕಗಳನ್ನು ಸ್ಥಾಪಿಸಲಾಗಿದೆ:- ದಾಖಲೆಗಳಿಲ್ಲದ ವಲಸಿಗರನ್ನು ಗುರುತಿಸಲು ಮತ್ತು ಅವರನ್ನು ಗೊತ್ತುಪಡಿಸಿದ ಬೇಲಿ ಹಾಕಿದ ಕೇಂದ್ರಗಳಲ್ಲಿ (Fenced Centers) ಇರಿಸಲು ಜಿಲ್ಲಾ ಮಟ್ಟದಲ್ಲಿ ಹೊಸ ಪೊಲೀಸ್ ಘಟಕಗಳನ್ನು ಸ್ಥಾಪಿಸಲಾಗಿದೆ.
- ಬಯೋಮೆಟ್ರಿಕ್ ಮತ್ತು ದತ್ತಾಂಶ ಮೇಲ್ವಿಚಾರಣೆ:- ವಲಸಿಗರ ಪತ್ತೆಗಾಗಿ ‘ವಿದೇಶಿಯರ ಗುರುತಿನ ಪೋರ್ಟಲ್’ (FIP) ಮೂಲಕ ಬಯೋಮೆಟ್ರಿಕ್ ದತ್ತಾಂಶವನ್ನು ಡಿಜಿಟಲೀಕರಣಗೊಳಿಸುವುದು ಕಡ್ಡಾಯವಾಗಿದೆ.
- ಗುರುತಿನ ವಂಚನೆಯನ್ನು ತಡೆಯಲು ಈ ದತ್ತಾಂಶವನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI – ಆಧಾರ್), ಭಾರತದ ಚುನಾವಣಾ ಆಯೋಗ (ECI) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ನಡುವೆ ಹಂಚಿಕೊಳ್ಳಲಾಗುತ್ತದೆ.
ವಲಸೆ ಮತ್ತು ವಿದೇಶಿಯರ ಕಾಯ್ದೆ, 2025 (Immigration and Foreigners Act, 2025):
- ಈ ಕಾಯ್ದೆಯು ಸೆಪ್ಟೆಂಬರ್ 1, 2025 ರಿಂದ ಜಾರಿಗೆ ಬಂದಿದ್ದು, ಇದು ವಿದೇಶಿಯರ ಕಾಯ್ದೆ, 1946 ರ ಸೇರಿದಂತೆ ವಸಾಹತುಶಾಹಿ ಕಾಲದ ಹಳೆಯ ಕಾನೂನುಗಳನ್ನು ಬದಲಾಯಿಸುತ್ತದೆ.
- ಈ ಕಾಯ್ದೆಯು ‘ಬ್ಯೂರೋ ಆಫ್ ಇಮಿಗ್ರೇಷನ್’ (ವಲಸೆ ಬ್ಯೂರೋ) ಗೆ ಶಾಸನಬದ್ಧ ಸ್ಥಾನಮಾನವನ್ನು ನೀಡುತ್ತದೆ. ಇದು “ಪ್ರತಿಕೂಲ ಭದ್ರತಾ ವರದಿಗಳ” ಆಧಾರದ ಮೇಲೆ ವಿದೇಶಿಯರ ಪ್ರವೇಶವನ್ನು ನಿರಾಕರಿಸಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ.
- ಕಠಿಣ ದಂಡನೆಗಳು:- ಅಕ್ರಮವಾಗಿ ದೇಶ ಪ್ರವೇಶಿಸುವವರಿಗೆ ನೀಡುವ ಶಿಕ್ಷೆಯನ್ನು ಹೆಚ್ಚಿಸಲಾಗಿದೆ. ಇದು 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹5 ಲಕ್ಷದವರೆಗೆ ದಂಡವನ್ನು ಒಳಗೊಂಡಿದೆ.
- ವಿನಾಯಿತಿಗಳು:- ‘ಪೌರತ್ವ ತಿದ್ದುಪಡಿ ಕಾಯ್ದೆ’ (CAA) ಯ ಆಶಯಕ್ಕೆ ಅನುಗುಣವಾಗಿ, ‘ವಲಸೆ ಮತ್ತು ವಿದೇಶಿಯರ (ವಿನಾಯಿತಿ) ಆದೇಶ, 2025’ ಅನ್ನು ಹೊರಡಿಸಲಾಗಿದೆ. ಇದು 2025 ರ ಮೊದಲು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತವನ್ನು ಪ್ರವೇಶಿಸಿದ ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳಿಗೆ ಗಡಿಪಾರಿನಿಂದ ವಿನಾಯಿತಿ ನೀಡುತ್ತದೆ.
ಬ್ರಿಕ್ಸ್ ಮತ್ತು ಕ್ವಾಡ್ (BRICS and QUAD)
ಅಂತರರಾಷ್ಟ್ರೀಯ ಸಂಬಂಧಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತವು ಬ್ರಿಕ್ಸ್ (BRICS) ವಿದೇಶಾಂಗ ಸಚಿವರ ಸಭೆ ಹಾಗೂ ಕ್ವಾಡ್ (Quad) ವಿದೇಶಾಂಗ ಸಚಿವರ ಸಭೆ ಸೇರಿದಂತೆ ಪ್ರಮುಖ ರಾಜತಾಂತ್ರಿಕ ಸಭೆಗಳ ಆತಿಥ್ಯವನ್ನು ಮುಂಬರುವ ದಿನಗಳಲ್ಲಿ ವಹಿಸಲಿದೆ.
ಬ್ರಿಕ್ಸ್ (BRICS) ಒಕ್ಕೂಟದ ಬಗ್ಗೆ:
- ಸ್ಥಾಪನೆ:- 2009.
- ಪ್ರಧಾನ ಕಚೇರಿ:- ಚೀನಾದ ಶಾಂಘೈ.
- ಇದು ಪ್ರಪಂಚದ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳನ್ನು ಹೊಂದಿರುವ ದೇಶಗಳ ಒಕ್ಕೂಟವಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (2010 ರಲ್ಲಿ ಸೇರ್ಪಡೆ) ರಾಷ್ಟ್ರಗಳ ಇಂಗ್ಲಿಷ್ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ‘BRICS’ ಎಂಬ ಸಂಕ್ಷಿಪ್ತ ರೂಪವನ್ನು ರಚಿಸಲಾಗಿದೆ.
- ಮೂಲ: “BRIC” ಎಂಬ ಪದವನ್ನು 2001 ರಲ್ಲಿ ಬ್ರಿಟಿಷ್ ಅಥಶಾಸ್ತ್ರಜ್ಞ ಜಿಮ್ ಒ’ನೀಲ್ ಅವರು ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ– ಈ ನಾಲ್ಕು ಉದಯೋನ್ಮುಖ ಆರ್ಥಿಕತೆಗಳನ್ನು ವಿವರಿಸಲು ಬಳಸಿದರು.
- BRICS+:- 2024–2025 ರ ಅವಧಿಯಲ್ಲಿ, ಈ ಒಕ್ಕೂಟವು ಈಜಿಪ್ಟ್, ಇಥಿಯೋಪಿಯಾ, ಇರಾನ್, UAE ಮತ್ತು ಇಂಡೋನೇಷ್ಯಾ ದೇಶಗಳನ್ನು ಸೇರಿಸಿಕೊಳ್ಳುವ ಮೂಲಕ ವಿಸ್ತರಣೆಗೊಂಡಿದೆ. ಸೌದಿ ಅರೇಬಿಯಾಕ್ಕೆ ಆಹ್ವಾನ ನೀಡಲಾಗಿದ್ದರೂ, ಅದು ಇನ್ನೂ ತನ್ನ ಸದಸ್ಯತ್ವವನ್ನು ಅಧಿಕೃತಗೊಳಿಸಿಲ್ಲ.
- ಬ್ರಿಕ್ಸ್‌ನ ಜಾಗತಿಕ ಪಾಲು:- ಪ್ರಪಂಚದ ಅತಿ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸಿರುವ ಈ ಒಕ್ಕೂಟವು, ಜಾಗತಿಕ ಜನಸಂಖ್ಯೆಯ ಶೇ. 41 ರಷ್ಟು, ಜಾಗತಿಕ GDP ಯ ಶೇ. 24 ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ. 16 ರಷ್ಟು ಪಾಲನ್ನು ಪ್ರತಿನಿಧಿಸುತ್ತದೆ (2028 ರ ವೇಳೆಗೆ, ಜಾಗತಿಕ ಆರ್ಥಿಕತೆಯಲ್ಲಿ ಬ್ರಿಕ್ಸ್‌ನ ಪಾಲು ಶೇ. 35 ಕ್ಕೆ ತಲುಪುವ ನಿರೀಕ್ಷೆಯಿದೆ).
- ಅಧ್ಯಕ್ಷತೆ:- ಈ ವೇದಿಕೆಯ ಅಧ್ಯಕ್ಷತೆಯು ಸದಸ್ಯ ರಾಷ್ಟ್ರಗಳ ನಡುವೆ ವಾರ್ಷಿಕವಾಗಿ ಸರದಿಯ ಆಧಾರದ ಮೇಲೆ ಬದಲಾಗುತ್ತದೆ.
ಬ್ರಿಕ್ಸ್‌ನ ಪ್ರಮುಖ ಉಪಕ್ರಮಗಳು:
- ಹೊಸ ಅಭಿವೃದ್ಧಿ ಬ್ಯಾಂಕ್ (New Development Bank).
- ಆಕಸ್ಮಿಕ ಮೀಸಲು ವ್ಯವಸ್ಥೆ (Contingent Reserve Arrangement)
- ಬ್ರಿಕ್ಸ್ ಪಾವತಿ ವ್ಯವಸ್ಥೆ
- ಕಸ್ಟಮ್ಸ್ ಒಪ್ಪಂದಗಳು
- ದೂರಸಂವೇದಿ ಉಪಗ್ರಹಗಳ ಸಮೂಹ
ಹೊಸ ಉಪಕ್ರಮ:
- ಬ್ರಿಕ್ಸ್ ಒಕ್ಕೂಟವು ತನ್ನದೇ ಆದ “ಹೊಸ ಕರೆನ್ಸಿ” ವ್ಯವಸ್ಥೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇದು ವ್ಯಾಪಾರಕ್ಕಾಗಿ ಅಮೆರಿಕನ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ (‘ಡಿ-ಡಾಲರೈಸೇಶನ್’) ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ
ಭಾರತದ 2026 ರ ಬ್ರಿಕ್ಸ್ ಅಧ್ಯಕ್ಷತೆ:
- ಬ್ರೆಜಿಲ್‌ನಿಂದ ಅಧಿಕಾರ ವಹಿಸಿಕೊಂಡ ಭಾರತವು ಜನವರಿ 1, 2026 ರಂದು ಅಧಿಕೃತವಾಗಿ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ.
- 2026 ರಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ಭಾರತ ವಹಿಸಲಿದೆ.
- ಧ್ಯೇಯವಾಕ್ಯ: “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” (Building for Resilience, Innovation, Cooperation and Sustainability).
- ಪ್ರಮುಖ ಆಧಾರಸ್ತಂಭಗಳು: ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ, ಮತ್ತು ಪರಿಸರ ಸುಸ್ಥಿರತೆ.
ಕೋನ್ಯಾಕ್ ನಾಗಾ ಬುಡಕಟ್ಟು ಜನಾಂಗದ ಕ್ಯಾನ್ಸರ್-ನಿರೋಧಕ ಗಿಡಮೂಲಿಕೆಗಳು
ಆರೋಗ್ಯ
ಇತ್ತೀಚೆಗೆ ಸುದ್ದಿಯಲ್ಲಿದೆ:
- ನಾಗಾಲ್ಯಾಂಡ್ ವಿಶ್ವವಿದ್ಯಾಲಯವು ಇತ್ತೀಚಿಗೆ ನಡೆಸಿದ ಅಧ್ಯಯನದಲ್ಲಿ, ‘ಕೋನ್ಯಾಕ್ ನಾಗಾ’ ಬುಡಕಟ್ಟು ಜನಾಂಗದವರು ಬಳಸುವ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಯು ಕ್ಯಾನ್ಸರ್ – ವಿರೋಧಿ ಸಾಮರ್ಥ್ಯವನ್ನು ಹೊಂದಿದೆ ಎಂದು ಗುರುತಿಸಿದೆ.
ಕೋನ್ಯಾಕ್ ನಾಗಾ ಬುಡಕಟ್ಟು ಜನಾಂಗದ ಕುರಿತು:
- ಈ ಬುಡಕಟ್ಟು ಜನಾಂಗವು ನಾಗಾಲ್ಯಾಂಡ್‌ನ ಅತಿ ದೊಡ್ಡ ನಾಗಾ ಬುಡಕಟ್ಟುಗಳಲ್ಲಿ ಒಂದಾಗಿದ್ದು, ಇವರು ಪ್ರಮುಖವಾಗಿ ನಾಗಾಲ್ಯಾಂಡ್‌ನ ‘ಮೋನ್’ ಜಿಲ್ಲೆಯಲ್ಲಿ ವಾಸಿಸುತ್ತಾರೆ.
- ಕೋನ್ಯಾಕ್ ಜನಾಂಗದವರು ಐತಿಹಾಸಿಕವಾಗಿ ಶತ್ರುಗಳ ‘ತಲೇಬೇಟೆ’ (Headhunting) ಪದ್ಧತಿಗೆ ಹೆಸರುವಾಸಿಯಾಗಿದ್ದರು. ಈ ಆಚರಣೆಯು ಅಂದಿನ ಕಾಲದಲ್ಲಿ ಯೋಧ ಸ್ಥಾನಮಾನ ಮತ್ತು ಪ್ರತಿಷ್ಠೆಯ ಸಂಕೇತವಾಗಿತ್ತು.
- ಇವರ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯ ನೇತೃತ್ವವನ್ನು ‘ಅಂಗ್’ ಎಂದು ಕರೆಯಲ್ಪಡುವ ವಂಶಪಾರಂಪರ್ಯವಾಗಿ ಬರುವ ಮುಖ್ಯಸ್ಥರು ವಹಿಸುತ್ತಾರೆ.
- ಇವರ ಕೋನ್ಯಾಕ್ ಭಾಷೆಯು ‘ಟಿಬೆಟೊ-ಬರ್ಮನ್’ ಭಾಷಾ ಕುಟುಂಬಕ್ಕೆ ಸೇರಿದೆ.
- ಇವರ ಪ್ರಮುಖ ಉದ್ಯೋಗ ‘ಜೂಮ್ ಕೃಷಿ’ (Jhum) ಅಂದರೆ ‘ಸ್ಥಳಾಂತರ ಬೇಸಾಯ’ ಆಗಿದೆ.
- ಪ್ರಮುಖ ಹಬ್ಬ: ಇವರು ಹೊಸ ವರ್ಷ ಹಾಗೂ ಬಿತ್ತನೆ ಋತುವಿನ ಸಂಕೇತವಾಗಿ ಏಪ್ರಿಲ್ ತಿಂಗಳಲ್ಲಿ ‘ಅಯೋಲಿಯಾಂಗ್ ಹಬ್ಬ’ವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಗ್ಲುಫೋಸಿನೇಟ್ (Glufosinate) – ಕೃಷಿಯಲ್ಲಿ ಬಳಸುವ ಕಳೆನಾಶಕ
ವಿಜ್ಞಾನ ಮತ್ತು ತಂತ್ರಜ್ಞಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಸಲಾಗುವ ಪ್ರಬಲ ಕಳೆನಾಶಕವಾದ ‘ಗ್ಲುಫೋಸಿನೇಟ್’ ಮತ್ತು ಅದರ ಲವಣಗಳ ಆಮದಿನ ಮೇಲೆ ಕೇಂದ್ರ ಸರ್ಕಾರವು ಆರು ತಿಂಗಳ ಕಾಲ ನಿರ್ಬಂಧವನ್ನು ವಿಧಿಸಿದೆ.
ಗ್ಲುಫೋಸಿನೇಟ್-ಅಮೋನಿಯಂ ಬಗ್ಗೆ:
- ಇದು ಬಹುತೇಕ ಎಲ್ಲಾ ರೀತಿಯ ಕಳೆಗಳನ್ನು ನಿಯಂತ್ರಿಸಲು ಬಳಸುವ ಕಳೆನಾಶಕವಾಗಿದೆ.
- ಇದು ನೀರಿನಲ್ಲಿ ಸುಲಭವಾಗಿ ಕರಗುವ ಗುಣವನ್ನು ಹೊಂದಿದ್ದರೂ, ಅಂತರ್ಜಲಕ್ಕೆ ಸೋರಿಕೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
- ಗಂಭೀರ ಅಪಾಯಗಳು: ಇದನ್ನು ಅತ್ಯಂತ ಅಪಾಯಕಾರಿ ರಾಸಾಯನಿಕವೆಂದು ಪರಿಗಣಿಸಲಾಗಿದೆ. ಇದು ನರಮಂಡಲದ ಮೇಲಿನ ವಿಷಕಾರಿ ಪ್ರಭಾವ, ಸಂತಾನೋತ್ಪತ್ತಿ ಹಾನಿ, ಹೃದಯರಕ್ತನಾಳದ ದುಷ್ಪರಿಣಾಮಗಳು ಮತ್ತು ಗರ್ಭದಲ್ಲಿನ ಭ್ರೂಣಕ್ಕೆ ಹಾನಿ ಉಂಟುಮಾಡುವ ಅಪಾಯಗಳನ್ನು ಹೊಂದಿದೆ.
- ಇದು ಬೇಗನೆ ಆವಿಯಾಗುವ ಗುಣವನ್ನು ಹೊಂದಿರುವುದರಿಂದ, ಉಸಿರಾಟ ಹಾಗೂ ಚರ್ಮದ ಸಂಪರ್ಕದ ಮೂಲಕ ರೈತರಿರು ಹಾಗೂ ಹತ್ತಿರದ ನಿವಾಸಿಗಳು ಇದರ ಅಪಾಯಕ್ಕೆ ತುತ್ತಾಗುತ್ತಾರೆ.







ನಿಮ್ಮದೊಂದು ಉತ್ತರ