ರಾಜ್ಯದ ಮೀನುಗಾರಿಕೆ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ‘ಮೀನುಗಾರರ ಸಂಕಷ್ಟ ಪರಿಹಾರ ನಿಧಿ’ಯ ಅಡಿಯಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ₹6 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
2024–25 ನೇ ಸಾಲಿನಲ್ಲಿ 9.63 ಲಕ್ಷ ಟನ್ ಮೀನು ಉತ್ಪಾದನೆ ಮಾಡುವ ಮೂಲಕ, ಒಟ್ಟು ಮೀನು ಉತ್ಪಾದನೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಬಗ್ಗೆ:
ಉದ್ದೇಶ:-ಮೀನುಗಾರಿಕೆಯಲ್ಲಿ ತೊಡಗಿರುವಾಗ ಸಮುದ್ರದಲ್ಲಿ ಅಥವಾ ಭೂಮಿಯ ಮೇಲೆ ಸಂಭವಿಸುವ ಅಪಘಾತಗಳು, ನೈಸರ್ಗಿಕ ವಿಪತ್ತುಗಳು ಅಥವಾ ಅಕಾಲಿಕ ಮರಣದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಮೀನುಗಾರರಿಗೆ ಮತ್ತು ಅವರ ಕುಟುಂಬಗಳಿಗೆ ತಕ್ಷಣದ ಆರ್ಥಿಕ ಪರಿಹಾರ ಹಾಗೂ ಬೆಂಬಲವನ್ನು ಒದಗಿಸುವುದುಇದರ ಮೂಲ ಉದ್ದೇಶವಾಗಿದೆ.
ನಿರ್ವಹಣಾ ಪ್ರಾಧಿಕಾರ: ಈ ನಿಧಿಯ ನಿರ್ವಹಣೆಯನ್ನು ಕರ್ನಾಟಕ ಸರ್ಕಾರದ ‘ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ’ಯು ನಿರ್ವಹಿಸುತ್ತದೆ.
ಪರಿಹಾರದ ಮೊತ್ತ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದಾಗ ಕಣ್ಮರೆಯಾದ ಅಥವಾ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ₹6 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಿದೆ.
ಅರ್ಹತೆ:-ಪರಿಹಾರವನ್ನು ಕೋರುವ ಅರ್ಜಿದಾರರು ಇಲಾಖೆಯಲ್ಲಿ ನೋಂದಾಯಿತ ಮೀನುಗಾರರಾಗಿರಬೇಕು. ಅಲ್ಲದೆ, ಪರಿಹಾರದ ನಷ್ಟದ ಸ್ವರೂಪಕ್ಕೆ (ಉದಾಹರಣೆಗೆ: ಜೀವಹಾನಿ, ದೋಣಿ ಅಥವಾ ಮೀನುಗಾರಿಕೆ ಉಪಕರಣಗಳಿಗೆ ಹಾನಿ) ಅನುಗುಣವಾಗಿ ನಿಗದಿಪಡಿಸಲಾದ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿರಬೇಕು.
ದಶಕಗಳಿಂದಲೂ ಸಶಸ್ತ್ರ ಪಡೆಗಳ ಕಸರತ್ತು, ಯುದ್ಧಗಳು, ಸಮಾರಂಭಗಳು ಮತ್ತು ಪಥಸಂಚಲನಗಳಲ್ಲಿ ಅವಿಭಾಜ್ಯ ಸಾಧನವಾಗಿ ಬಳಕೆಯಾಗುತ್ತಿದ್ದ ‘ಬ್ಯೂಗಲ್’ ವಾದ್ಯವು ಇತ್ತೀಚೆಗೆ ಪ್ರತಿಷ್ಠಿತ “ಭೌಗೋಳಿಕ ಸೂಚ್ಯಂಕ” (GI) ಟ್ಯಾಗ್‌ಗೆ ಭಾಜನವಾಗಿದೆ.
ಮೀರತ್ ಬ್ಯೂಗಲ್ ವಾದ್ಯದ ಬಗ್ಗೆ:
ಮೀರತ್‌ನಲ್ಲಿ ಬ್ಯೂಗಲ್ ತಯಾರಿಕೆಯು 19ನೇ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ.
ಭಾರತದ ಸೇನಾ ಸಂಸ್ಕೃತಿ ಬೆಳೆದಂತೆಲ್ಲಾ, ಈ ವಾದ್ಯದ ಇತಿಹಾಸವೂ ಅದರೊಂದಿಗೇ ಸಾಗಿಬಂದಿದೆ.
ಬ್ರಿಟಿಷರ ಕಾಲದಲ್ಲಿ ಇದನ್ನು ‘ಆದೇಶ ನೀಡುವ ಸಾಧನ’ವಾಗಿ ಬಳಸುತ್ತಿದ್ದರು. ಸೇನೆ ಎಷ್ಟೇ ಆಧುನಿಕವಾದರೂ, ಬ್ಯೂಗಲ್ ತನ್ನ ಗೌರವದ ಸ್ಥಾನವನ್ನು ಇಂದಿಗೂ ಉಳಿಸಿಕೊಂಡಿದೆ.
ಸರ್ಕಾರಿ ಭದ್ರತಾ ಪತ್ರಗಳು (G-Secs)
ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದ್ದರೂ ಸಹ, ಸರ್ಕಾರಿ ಭದ್ರತಾ ಪತ್ರಗಳ ಇಳುವರಿಯು ಸ್ವಲ್ಪಮಟ್ಟಿಗೆ ಏರುಗತಿಯನ್ನು ಸಾಧಿಸಿದೆ.
ಸರ್ಕಾರಿ ಭದ್ರತಾ ಪತ್ರ (G-Sec) ಗಳ ಬಗ್ಗೆ:
ವ್ಯಾಖ್ಯಾನ:- ಈ ಪತ್ರಗಳು ಕೇಂದ್ರ ಸರ್ಕಾರ ಇಲ್ಲವೇ ರಾಜ್ಯ ಸರ್ಕಾರಗಳಿಂದ ಹೊರಡಿಸಲ್ಪಡುವ ಒಂದು ವ್ಯಾಪಾರಾರ್ಹ ಭದ್ರತಾ ಸಾಧನಗಳಾಗಿವೆ.
ಹೊಣೆಗಾರಿಕೆ:- ಈ ಪತ್ರಗಳು ಸರ್ಕಾರದಸಾಲದ ಹೊಣೆಗಾರಿಕೆಯನ್ನು ಔಪಚಾರಿಕವಾಗಿ ಅಥವಾ ಅಧಿಕೃತವಾಗಿ ಅಂಗೀಕರಿಸುತ್ತವೆ.
ಸ್ವರೂಪ: ಈ ಪತ್ರಗಳು ಅಲ್ಪಾವಧಿ ಮತ್ತು ದೀರ್ಘಾವಧಿ ಸ್ವರೂಪಗಳನ್ನು ಒಳಗೊಂಡಿರುತ್ತವೆ:
ಅಲ್ಪಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಖಜಾನೆ ಬಿಲ್ಲುಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಇರುತ್ತದೆ.
ದೀರ್ಘಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಸರ್ಕಾರಿ ಬಾಂಡ್‌ಗಳು ಅಥವಾ ದಿನಾಂಕ ಸಹಿತ ಭದ್ರತಾ ಪತ್ರಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)
ಸಾಮಾನ್ಯ ಅಧ್ಯಯನ – 3/ ಆಂತರಿಕ ಭದ್ರತೆ
ಇದೀಗ ಸುದ್ದಿಯಲ್ಲಿದೆ:
‘ಅಂತರರಾಷ್ಟ್ರೀಯ ಹಡಗು ಮತ್ತು ಬಂದರು ಸೌಲಭ್ಯ ಭದ್ರತಾ ಸಂಹಿತೆ’ಯ (ISPS Code) ಅಡಿಯಲ್ಲಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ‘ಮಾನ್ಯತೆ ಪಡೆದ ಭದ್ರತಾ ಸಂಸ್ಥೆ’ ಯನ್ನಾಗಿ ಅಧಿಕೃತವಾಗಿ ನಾಮನಿರ್ದೇಶನ ಮಾಡಲಾಗಿದೆ.
ಭಾರತದಲ್ಲಿ ಸುಮಾರು 250 ಬಂದರುಗಳಿದ್ದು, ಅವುಗಳಲ್ಲಿ 65–68 ಬಂದರುಗಳು ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯ ಬಗ್ಗೆ:
ಸ್ಥಾಪನೆ ಮತ್ತು ಸ್ಥಾನಮಾನ: ಇದು 1968 ರ ‘ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಕಾಯಿದೆ’ ಯ ಅನ್ವಯ 1969 ರಲ್ಲಿ ಅಸ್ತಿತ್ವಕ್ಕೆ ಬಂದ ಒಂದು ಅರೆಸೇನಾ ಪಡೆಯಾಗಿದೆ.
ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸ್ಥಾಪನಾ ದಿನ’ವನ್ನು ಆಚರಿಸಲಾಗುತ್ತದೆ.
ಆಡಳಿತಾತ್ಮಕ ನಿಯಂತ್ರಣ: ಈ ಪಡೆಯು ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರಮುಖ ಕಾರ್ಯಗಳು: ದೇಶದ ತಂತ್ರಾತ್ಮಕ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವುದು ಇದರ ಪ್ರಮುಖ ಕರ್ತವ್ಯವಾಗಿದೆ. ಪ್ರಮುಖವಾಗಿ ಈ ಕೆಳಗಿನ ಸಂಸ್ಥೆಗಳಿಗೆ ಈ ಪಡೆಯು ರಕ್ಷಣೆ ನೀಡುತ್ತದೆ:
ಬಾಹ್ಯಾಕಾಶ ಇಲಾಖೆ
ಪರಮಾಣು ಶಕ್ತಿ ಇಲಾಖೆ
ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು
ಐತಿಹಾಸಿಕ ಸ್ಮಾರಕಗಳು
ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುಚ್ಛಕ್ತಿ, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ ಸ್ಥಾವರಗಳಿಗೆ ಇದು ಭದ್ರತೆಯನ್ನು ಒದಗಿಸುತ್ತದೆ.
ಸಂವಿಧಾನದ ವಿಧಿ 240
ಸಾಮಾನ್ಯ ಅಧ್ಯಯನ – 2/ ಆಡಳಿತ
ಇದೀಗ ಸುದ್ದಿಯಲ್ಲಿದೆ:
ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಚಂಡೀಗಢವನ್ನು ಸಂವಿಧಾನದ ‘ವಿಧಿ 240’ ರವ್ಯಾಪ್ತಿಗೆ ತರಲು ಯಾವುದೇ ‘ಸಂವಿಧಾನ ತಿದ್ದುಪಡಿ ಮಸೂದೆ’ಯನ್ನು ಮಂಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟಪಡಿಸಿದೆ.
131 ನೇ ಸಂವಿಧಾನ ತಿದ್ದುಪಡಿ ಮಸೂದೆ, 2025 ರ ಬಗ್ಗೆ:
ಈ ಮಸೂದೆಯು ಚಂಡೀಗಢವನ್ನುವಿಧಿ 240 ರ ಅಡಿಯಲ್ಲಿ ತರಲು ಪ್ರಸ್ತಾಪಿಸುತ್ತದೆ. ಈ ಮೂಲಕ ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳ ಗುಂಪಿಗೆ ಇದನ್ನು ಸೇರಿಸುತ್ತದೆ ಮತ್ತು ಅದಕ್ಕಾಗಿ ನಿಯಮಾವಳಿಗಳನ್ನು ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುತ್ತದೆ.
ಇದು ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವತಂತ್ರ ‘ಆಡಳಿತಾಧಿಕಾರಿ’ಯ ನೇಮಕಕ್ಕೆ ದಾರಿ ಮಾಡಿಕೊಡುತ್ತದೆ.
ಚಂಡೀಗಢಕ್ಕಾಗಿ ಕೇಂದ್ರ ಸರ್ಕಾರದ ಕಾನೂನು ರಚನಾ ಪ್ರಕ್ರಿಯೆಯನ್ನು ಸರಳಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ.
ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಆಡಳಿತದಲ್ಲಿ ಏಕರೂಪತೆಯನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
ಸಂಸತ್ತಿನ ಕಾಯಿದೆಗಳಿಗೆ ಸಮನಾದ ನಿಯಮಾವಳಿಗಳನ್ನು ಚಂಡೀಗಢಕ್ಕಾಗಿ ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುವುದು ಇದರ ಉದ್ದೇಶವಾಗಿದೆ.
ಸಂವಿಧಾನದ 240 ನೇ ವಿಧಿಯ ಬಗ್ಗೆ:
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಸೇರಿದಂತೆ, ನಿರ್ದಿಷ್ಟ ಕೇಂದ್ರಾಡಳಿತ ಪ್ರದೇಶಗಳ ಶಾಂತಿ, ಪ್ರಗತಿ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ಸಂವಿಧಾನದ 240 ನೇ ವಿಧಿಯು ರಾಷ್ಟ್ರಪತಿಯವರಿಗೆ ನೀಡುತ್ತದೆ.
ಹಂತ -3 ರ ‘ಪ್ರವೇಶಸಾಧ್ಯತೆ ವರ್ಧನೆ ಮಾನ್ಯತೆ’ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ
ಇದೀಗ ಸುದ್ದಿಯಲ್ಲಿದೆ:
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ACI) ನೀಡುವ ಪ್ರತಿಷ್ಠಿತ ‘ಪ್ರವೇಶಸಾಧ್ಯತೆ ವರ್ಧನೆ ಮಾನ್ಯತೆ’ (AEA) ಕಾರ್ಯಕ್ರಮದ ಅಡಿಯಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ‘ಹಂತ- 3’ ರ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಮೂಲಕ, ಈ ಸಾಧನೆಗೈದ ಭಾರತದ ಮೊಟ್ಟಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯು, ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ 10 ಗಡಿ ಹೊರಠಾಣೆಗಳನ್ನು ಸ್ಥಾಪಿಸುತ್ತಿದೆ. ಗಡಿ ಭದ್ರತಾ ವ್ಯವಸ್ಥೆಯಲ್ಲಿ ಲಿಂಗ ಸಮನ್ವಯತೆ ಮತ್ತು ಒಳಗೊಳ್ಳುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ನ ಬಗ್ಗೆ:
ಸ್ಥಾಪನೆ: ಭಾರತ ಮತ್ತು ಚೀನಾ ಯುದ್ಧದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, 1962 ರ ಅಕ್ಟೋಬರ್ 24 ರಂದು ಈ ಪಡೆಯನ್ನು ಅಸ್ತಿತ್ವಕ್ಕೆ ತರಲಾಯಿತು.
ಸ್ಥಾನಮಾನ: ಇದು ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ‘ಕೇಂದ್ರ ಸಶಸ್ತ್ರ ಪೊಲೀಸ್ ಪಡೆ’ಗಳಲ್ಲಿ (CAPF) ಒಂದಾಗಿದೆ.
ಧ್ಯೇಯವಾಕ್ಯ: “ಶೌರ್ಯ-ದೃಢತೆ-ಕರ್ಮ ನಿಷ್ಠೆ”.
ಕಾರ್ಯನಿರ್ವಹಣಾ ಪಾತ್ರ: ಲಡಾಖ್‌ನ ಕಾರಾಕೋರಂ ಕಣಿವೆಮಾರ್ಗದಿಂದ ಅರುಣಾಚಲ ಪ್ರದೇಶದ ಜಾಚೆಪ್ ಲಾ ವರೆಗೆ ಹಬ್ಬಿರುವ, ಸುಮಾರು 3,488 ಕಿ.ಮೀ. ಉದ್ದವಾದ ಭಾರತ-ಚೀನಾ ಗಡಿಯ ಕಾವಲು ಕಾಯುವುದು ಮತ್ತು ರಕ್ಷಣೆ ಒದಗಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ.
ಕಾನೂನಾತ್ಮಕ ಚೌಕಟ್ಟು: ಈ ಪಡೆಯ ಕಾರ್ಯನಿರ್ವಹಣೆಗೆ ಕಾನೂನು ಬಲ ನೀಡಲು, 1992 ರಲ್ಲಿ ‘ಐಟಿಬಿಪಿಎಫ್ ಕಾಯಿದೆ’ ಯನ್ನು ಜಾರಿಗೆ ತರಲಾಯಿತು. ನಂತರ , 2004 ರಲ್ಲಿ ಭಾರತ-ಚೀನಾ ಗಡಿಯ ಸಮಗ್ರ ಕಾವಲು ಜವಾಬ್ದಾರಿಯನ್ನು ಈ ಪಡೆಗೆ ನಿಯೋಜಿಸಲಾಯಿತು.
ಆಫ್ರಿಕಾದ ಬೂದು ಗಿಳಿ
ಸಾಮಾನ್ಯ ಅಧ್ಯಯನ – 3/ ಪ್ರಭೇದಗಳು
ಇದೀಗ ಸುದ್ದಿಯಲ್ಲಿದೆ:
ದೇಶದ ಮಾರುಕಟ್ಟೆಗಳಲ್ಲಿ ಆಫ್ರಿಕಾದ ಬೂದು ಗಿಳಿಗಳು ವ್ಯಾಪಕವಾಗಿ ಲಭ್ಯವಿದ್ದರೂ ಕೂಡ, ಇವುಗಳಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ನೋಂದಾಯಿತ ತಳಿಗಾರರು ಅಥವಾ ಅಧಿಕೃತ ಸಾಕುಪ್ರಾಣಿ ಮಾರಾಟ ಮಳಿಗೆಗಳು ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ರಾಜ್ಯ ಅರಣ್ಯ ಇಲಾಖೆಗಳು ಸ್ಪಷ್ಟಪಡಿಸಿವೆ.
‘ಆಫ್ರಿಕಾದ ಬೂದು ಗಿಳಿ’ ಯ ಬಗ್ಗೆ:
ವೈಜ್ಞಾನಿಕ ಹೆಸರು:- ಸಿಟ್ಟಾಕಸ್ ಎರಿಥಾಕಸ್ (Psittacus erithacus). ಇದು ಮಧ್ಯಮ ಗಾತ್ರದ ಹಾಗೂ ಅತ್ಯಂತ ಬುದ್ಧಿವಂತ ಗಿಳಿ ಪ್ರಭೇದವಾಗಿದೆ.
ಇದನ್ನು ಸಾಮಾನ್ಯವಾಗಿ “ಪಕ್ಷಿ ಸಂಕುಲದ ಐನ್‌ಸ್ಟೀನ್‌ಗಳು” ಎಂದು ಪರಿಗಣಿಸಲಾಗುತ್ತದೆ.
ಮೂಲ ಆವಾಸಸ್ಥಾನ:- ಇದು ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಸ್ಥಳೀಯವಾಗಿದ್ದು, ಪ್ರಮುಖವಾಗಿ ಸವನ್ನಾ (ಹುಲ್ಲುಗಾವಲು) ಪ್ರದೇಶಗಳು ಮತ್ತು ಕರಾವಳಿ ಮ್ಯಾಂಗ್ರೋವ್‌ಗಳಲ್ಲಿ ಕಂಡುಬರುತ್ತದೆ.
ಇದರಲ್ಲಿ ಎರಡು ಪ್ರಮುಖ ಉಪ-ಪ್ರಭೇದಗಳಿವೆ:-
ಕಾಂಗೋ ಆಫ್ರಿಕಾದ ಬೂದು (CAG) ಗಿಳಿ: ಇದು ತನ್ನ ಪ್ರಕಾಶಮಾನವಾದ ಕೆಂಪು ಬಾಲಕ್ಕೆ ಹೆಸರುವಾಸಿಯಾಗಿದೆ.
ಟಿಮ್ನೆ ಆಫ್ರಿಕಾದ ಬೂದು (CAG) ಗಿಳಿ: ಇದು ಗಾಢವಾದ ಕಡುಗೆoಪು ಮಿಶ್ರಣ ಬಣ್ಣದ ಬಾಲವನ್ನು ಹೊಂದಿರುತ್ತದೆ.
ವಿಶಿಷ್ಟತೆ – ಆಫ್ರಿಕಾದ ಬೂದು ಗಿಳಿಗಳು ತಮ್ಮ ಅಸಾಧಾರಣ ಮಾತುಗಾರಿಕೆ ಮತ್ತು ಗ್ರಹಿಕೆ ಸಾಮರ್ಥ್ಯಗಳಿಗೆ ಪ್ರಖ್ಯಾತವಾಗಿವೆ. ಇವು ದೊಡ್ಡ ಶಬ್ದಕೋಶವನ್ನು ನೆನಪಿನಲ್ಲಿಟ್ಟುಕೊಳ್ಳುವ ಮತ್ತು ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿವೆ.
IUCN ಕೆಂಪು ಪಟ್ಟಿಯಲ್ಲಿ ಸ್ಥಾನ:- ಇದನ್ನು “ಅಳಿವಿನಂಚಿನಲ್ಲಿರುವ (EN)” ಪ್ರಭೇದಎಂದು ವರ್ಗೀಕರಿಸಲಾಗಿದೆ.
ಸೆಮೆರು ಪರ್ವತ (Mount Semeru)
ಸಾಮಾನ್ಯ ಅಧ್ಯಯನ – 1 / ಪ್ರಾಕೃತಿಕ ಭೂಗೋಳಶಾಸ್ತ್ರ
ಇದೀಗ ಸುದ್ದಿಯಲ್ಲಿದೆ:
ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ ನೆಲೆಗೊಂಡಿರುವ ಸೆಮೆರು ಪರ್ವತದ ಜ್ವಾಲಾಮುಖಿಯು ಇತ್ತೀಚೆಗೆ ಸ್ಫೋಟಗೊಂಡಿದೆ.
ಇಂಡೋನೇಷ್ಯಾ ಜ್ವಾಲಾಮುಖಿ ಸ್ಫೋಟಗಳಿಗೆ ಹೆಚ್ಚು ತುತ್ತಾಗಲು ಕಾರಣಗಳು:
ಇಂಡೋ-ಆಸ್ಟ್ರೇಲಿಯನ್ ಭೂಫಲಕವು ಯುರೇಷಿಯನ್ ಭೂಫಲಕದ ಅಡಿಯಲ್ಲಿ ಕುಸಿಯುವ ‘ಒಮ್ಮುಖ ಭೂಫಲಕ ಗಡಿ’ಯ ಮೇಲೆ ಇಂಡೋನೇಷ್ಯಾ ನೆಲೆಗೊಂಡಿದೆ.
ಈ ಪ್ರಕ್ರಿಯೆಯು ಜಾವಾ, ಸುಮಾತ್ರಾ ಮತ್ತು ಸುಂಡಾ ದ್ವೀಪದುದ್ದಕ್ಕೂ ಸ್ತರ ಜ್ವಾಲಾಮುಖಿಗಳ ಸರಪಳಿಯನ್ನು ಸೃಷ್ಟಿಸುತ್ತದೆ.
ಇದು ಫೆಸಿಫಿಕ್ ನ ‘ಅಗ್ನಿ ವರ್ತುಲ’ದ (Ring of Fire) ಹೃದಯಭಾಗದಲ್ಲಿದೆ. ವಿಶ್ವದ ಶೇಕಡಾ 75 ರಷ್ಟು ಜ್ವಾಲಾಮುಖಿಗಳು ಮತ್ತು ಶೇಕಡಾ 90 ರಷ್ಟು ಭೂಕಂಪಗಳು ಈ ವಲಯದಲ್ಲೇ ಸಂಭವಿಸುತ್ತವೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI)
ಸಾಮಾನ್ಯ ಅಧ್ಯಯನ – 1/ ಭೂಗೋಳಶಾಸ್ತ್ರ
ಇದೀಗ ಸುದ್ದಿಯಲ್ಲಿದೆ:
ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ (GSI) 175ನೇ ಸ್ಥಾಪನಾ ವರ್ಷದ ಆಚರಣೆಯ ಭಾಗವಾಗಿ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರು “ಭೂತಕಾಲದ ಶೋಧನೆ, ಭವಿಷ್ಯದ ರೂಪಿಸುವಿಕೆ: GSI ನ 175 ವರ್ಷಗಳು” ಎಂಬ ಶೀರ್ಷಿಕೆಯ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.
ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI) ಯ ಬಗ್ಗೆ:
ಈ ಸಂಸ್ಥೆಯುಭಾರತದ ಅಗ್ರಗಣ್ಯ ರಾಷ್ಟ್ರೀಯ ಭೂವೈಜ್ಞಾನಿಕ ಸಂಸ್ಥೆಯಾಗಿದೆ.
ಕಾರ್ಯನಿರ್ವಹಣೆ:- ಇದು ಕೇಂದ್ರ ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಥಾಪನೆ:- ಈ ಸಂಸ್ಥೆಯನ್ನು 1851 ರಲ್ಲಿ ಸರ್ ಥಾಮಸ್ ಓಲ್ಡ್‌ಹ್ಯಾಮ್ ಅವರು ಸ್ಥಾಪಿಸಿದರು.
ಜಾನ್ ಮೆಕ್ಲೆಲ್ಯಾಂಡ್ ಅವರ ನೇತೃತ್ವದಲ್ಲಿ ನಡೆದ ಕಲ್ಲಿದ್ದಲು ಅನ್ವೇಷಣೆಯ ಸಂದರ್ಭದಲ್ಲಿ, 1848 ರಲ್ಲಿ ಮೊದಲ ಬಾರಿಗೆ “ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ” ಎಂಬ ಪದವನ್ನು ಬಳಸಲಾಯಿತು.
ಪ್ರಮುಖ ಕಾರ್ಯಗಳು:
ಭೂವೈಜ್ಞಾನಿಕ ನಕ್ಷೆ ಮತ್ತು ಸಮೀಕ್ಷೆಗಳು:- ಭೂ, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳನ್ನು ಒಳಗೊಂಡಂತೆ, ಮೇಲ್ಮೈ ಹಾಗೂ ಉಪ-ಮೇಲ್ಮೈ ಭೂವಿಜ್ಞಾನದ ಸಮಗ್ರ ನಕ್ಷೆಗಳನ್ನು ತಯಾರಿಸುವುದು ಮತ್ತು ನಿರ್ವಹಿಸುವುದು.
ಖನಿಜ ಅನ್ವೇಷಣೆ : ಖನಿಜ, ಇಂಧನ (ಕಲ್ಲಿದ್ದಲು, ತೈಲ ಸೇರಿದಂತೆ) ಮತ್ತು ಜಲ ಸಂಪನ್ಮೂಲಗಳ ವೈಜ್ಞಾನಿಕ ಅನ್ವೇಷಣೆ ಹಾಗೂ ಮೌಲ್ಯಮಾಪನ ಮಾಡುವುದು.
ಭೂವೈಪರೀತ್ಯ ಅಧ್ಯಯನಗಳು:- ಭೂಕಂಪನ-ಭೂರಚನಾ ಸಂಶೋಧನೆ, ಹಿಮನದಿ ಶಾಸ್ತ್ರ, ಹವಾಮಾನ ಸಂಬಂಧಿತ ಭೂ-ಅಧ್ಯಯನಗಳು ಮತ್ತು ವಿಪತ್ತು ಅಪಾಯದ ವಿಶ್ಲೇಷಣೆಯನ್ನು ನಡೆಸುವುದು.
ಭೂತಾಂತ್ರಿಕ ಮತ್ತು ಭೂಪರಿಸರೀಯ ಅಧ್ಯಯನಗಳು : ಮೂಲಸೌಕರ್ಯ ಯೋಜನೆ, ಅಂತರ್ಜಲ ಅಧ್ಯಯನಗಳು, ಭೂಸ್ಥಿರತೆ ವಿಶ್ಲೇಷಣೆ ಮತ್ತು ಪರಿಸರ ಮೌಲ್ಯಮಾಪನಗಳಿಗೆ ಉತ್ತೇಜನ ನೀಡುವುದು.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಕಾರ್ಯಕ್ರಮ (ICDS)
ಸಾಮಾನ್ಯ ಅಧ್ಯಯನ – 2/ ಸರ್ಕಾರಿ ಯೋಜನೆಗಳು
ಇದೀಗ ಸುದ್ದಿಯಲ್ಲಿ
ಅಂಗನವಾಡಿಗಳ ಮುಖಾಂತರ ಪೌಷ್ಟಿಕಾಂಶ, ಶಿಕ್ಷಣ ಮತ್ತು ಬಾಲ್ಯಾವಸ್ಥೆಯ ಆರೈಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ‘ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರವನ್ನು ವ್ಯಾಪಕವಾಗಿ ವಿಸ್ತರಣೆಗೊಂಡಿದೆ.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರಮದ ಬಗ್ಗೆ:
ಆರಂಭ: 1975ರ ಅಕ್ಟೋಬರ್ 2
ಇದೊಂದು ದೇಶದ ಮಹತ್ವಾಕಾಂಕ್ಷೆಯ ‘ಪೂರ್ವ ಬಾಲ್ಯಾವಸ್ಥೆಯ ಆರೈಕೆ ಮತ್ತು ಅಭಿವೃದ್ಧಿ’ (ECCD) ಯೋಜನೆಯಾಗಿದೆ.
ಇದು ದೇಶಾದ್ಯಂತದ ಅಂಗನವಾಡಿ ಕೇಂದ್ರಗಳ ಜಾಲದ ಮೂಲಕ, 6 ವರ್ಷದೊಳಗಿನ ಮಕ್ಕಳು ಹಾಗೂ ತಾಯಂದಿರಿಗೆಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಮತ್ತು ಶಾಲಾ ಪೂರ್ವ ಶಿಕ್ಷಣದಂತಹ ಸಮಗ್ರ ಸೇವೆಗಳನ್ನು ಒದಗಿಸುತ್ತದೆ.
ಹಣಕಾಸು: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಪೌಷ್ಟಿಕಾಂಶ ಮತ್ತು ಬಾಲ್ಯದ ಆರಂಭಿಕ ಆರೈಕೆಯನ್ನು ಏಕೀಕರಿಸುವ ಸಲುವಾಗಿ, ಪ್ರಸ್ತುತ ಇದನ್ನು ‘ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0’ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ.
ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್
ಸಾಮಾನ್ಯ ಅಧ್ಯಯನ – 2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅಥವಾ ಮೆದುಳು ಜ್ವರದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ಶಬರಿಮಲೆ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ನ ಬಗ್ಗೆ:
ರೋಗಕಾರಕ – ಇದು ‘ನೇಗ್ಲೆರಿಯಾ ಫೌಲೆರಿ’ ಎಂಬ ರೋಗಕಾರಕದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕಾಗಿದೆ.
‘ನೇಗ್ಲೆರಿಯಾ ಫೌಲೆರಿ’ ಎಂಬುದು ಬೆಚ್ಚಗಿನ ಸಿಹಿನೀರು ಮತ್ತು ಮಣ್ಣಿನಲ್ಲಿ ಕಂಡುಬರುವ ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದೆ.
ಹರಡುವಿಕೆ: ಈಜುವುದು, ಧಾರ್ಮಿಕ ಆಚರಣೆಗಳಲ್ಲಿ ಮೂಗನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಚಟುವಟಿಕೆಗಳ ಸಂದರ್ಭದಲ್ಲಿ, ಕಲುಷಿತ ನೀರು ಮೂಗಿನ ಮೂಲಕ ಪ್ರವೇಶಿಸಿದಾಗ ಸಾಮಾನ್ಯವಾಗಿ ಈ ಸೋಂಕು ಉಂಟಾಗುತ್ತದೆ.
ಇದು ನೀರನ್ನು ಕುಡಿಯುವುದರಿಂದ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ನೇರ ಸಂಪರ್ಕದ ಮೂಲಕ ಹರಡುವುದಿಲ್ಲ.
ಲಕ್ಷಣಗಳು: ಇದು ಮೆದುಳಿಗೆ ಸಂಚರಿಸಿ, ಅಲ್ಲಿನ ಅಂಗಾಂಶಗಳನ್ನು ನಾಶಪಡಿಸುತ್ತದೆ ಮತ್ತು ಮೆದುಳಿನ ಊತಕ್ಕೆ ಕಾರಣವಾಗುತ್ತದೆ.
ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು: ಅಪಾಯವನ್ನು ತಗ್ಗಿಸಲು, ನೀರಿನ ಚಟುವಟಿಕೆಗಳ ಸಮಯದಲ್ಲಿ ಮೂಗಿನೊಳಗೆ ನೀರು ಹೋಗದಂತೆ ನಿಯಂತ್ರಿಸಬೇಕು.
‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025’ (BTS 2025) ನವೆಂಬರ್ 18 ರಿಂದ 20 ರವರೆಗೆ ‘ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ’ದಲ್ಲಿ (BIEC) ಯಶಸ್ವಿಯಾಗಿ ಜರುಗಿತು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, 2025 ರ ಪ್ರಮುಖ ಅಂಶಗಳು:
2025ರ ಧ್ಯೇಯವಾಕ್ಯ: “ಫ್ಯೂಚರೈಸ್”
ಆಯೋಜಕರು: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್,ಮಾಹಿತಿ ತಂತ್ರಜ್ಞಾನಮತ್ತುಜೈವಿಕ ತಂತ್ರಜ್ಞಾನಇಲಾಖೆಯು, ಉದ್ಯಮ ವಲಯದ ಪಾಲುದಾರರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಮಹತ್ವ: ಜಾಗತೀಕ ನಾವೀನ್ಯಕಾರರು, ಸಂಶೋಧಕರು, ಉದ್ಯಮಿಗಳು ಮತ್ತು ನೀತಿ ನಿರೂಪಕರನ್ನು ಒಂದೇ ವೇದಿಕೆಯಡಿ ತರುವುದು ಈ ಶೃಂಗಸಭೆಯ ಉದ್ದೇಶವಾಗಿತ್ತು. ಈ ಮೂಲಕ, ಜಾಗತೀಕತಂತ್ರಜ್ಞಾನಮತ್ತು ನಾವೀನ್ಯತಾ ಕೇಂದ್ರವಾಗಿ ಕರ್ನಾಟಕದ ಸ್ಥಾನಮಾನವನ್ನು ಈ ಶೃಂಗಸಭೆಯು ಮತ್ತಷ್ಟು ಬಲಪಡಿಸಿದೆ.
ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ (IBSA) ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿಯವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳು ಇನ್ನು ಮುಂದೆ ಕೇವಲ ಒಂದು ಆಯ್ಕೆಯಾಗಿರದೆ, ಅದೊಂದು ಜಾಗತಿಕ ಅನಿವಾರ್ಯತೆಯಾಗಿದೆ ಎಂದು ಒತ್ತು ನೀಡಿದರು.
ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ (IBSA) ನಾಯಕರ ಶೃಂಗಸಭೆ, 2025 ರ ಬಗ್ಗೆ:
ಗಮನಿಸಿ: ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಜಿ-20 ಶೃಂಗಸಭೆಯೊಂದಿಗೆ ಇದು ಏಕಕಾಲದಲ್ಲಿ ಜರುಗಿತು.
ಐಬಿಎಸ್‌ಎ (IBSA) ಸಂವಾದ ವೇದಿಕೆಯ ಬಗ್ಗೆ:
ಸ್ಥಾಪನೆ:- ‘ಗ್ಲೋಬಲ್ ಸೌತ್’ನ (ದಕ್ಷಿಣ ಗೋಳಾರ್ಧದ ರಾಷ್ಟ್ರಗಳ) ಸಾಮೂಹಿಕ ದನಿಯಾಗಿ, 2003 ರ ‘ಬ್ರೆಸಿಲಿಯಾ ಘೋಷಣೆ’ಯ ಮೂಲಕ ಇದನ್ನು ಸ್ಥಾಪಿಸಲಾಯಿತು.
ಸದಸ್ಯತ್ವ: ಇದು ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾವನ್ನು (ಐಬಿಎಸ್‌ಎ ಟ್ರೋಯಿಕಾ ) ಒಳಗೊಂಡಿದೆ. ಈ ರಾಷ್ಟ್ರಗಳು ಬಹುಪಕ್ಷೀಯತೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಅಂತರ್ಗತ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು.
ಮಹತ್ವ: ಇದು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಮುಖ ಉಪಕ್ರಮಗಳು: ದಕ್ಷಿಣ-ದಕ್ಷಿಣ ಸಹಕಾರವನ್ನು ವರ್ಧಿಸಲು ಸ್ಥಾಪಿತವಾದ “IBSA ಟ್ರಸ್ಟ್ ನಿಧಿ” (2006 ರಲ್ಲಿ ಕಾರ್ಯಾರಂಭ) ಮತ್ತು “ಇಬ್ಸಾಮಾರ್” (IBSAMAR) ಬಹುರಾಷ್ಟ್ರೀಯ ಕಡಲ ಸಮರಾಭ್ಯಾಸಗಳು ಇದರಲ್ಲಿ ಸೇರಿವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯ ಬಗ್ಗೆ:
ಇದು ವಿಶ್ವಸಂಸ್ಥೆಯ (UN) ಪ್ರಮುಖ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು, ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದೆ.
ವಿಶ್ವಸಂಸ್ಥೆಯ ಸನ್ನದಿನ ಅಡಿಯಲ್ಲಿ ಇದನ್ನು 1945 ರಲ್ಲಿ ಸ್ಥಾಪಿಸಲಾಯಿತು.
ರಚನೆ: ಇದು 15 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇದರಲ್ಲಿ ವೀಟೋ ಅಧಿಕಾರಹೊಂದಿರುವಐದು ಕಾಯಂ ಸದಸ್ಯರು (P5) ಮತ್ತು ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾದ ಹತ್ತು ಕಾಯಂ ಅಲ್ಲದ ಸದಸ್ಯರು ಇರುತ್ತಾರೆ.
ಕೇಂದ್ರ ಕಚೇರಿ: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿದೆ.
ದಕ್ಷಿಣ ಆಫ್ರಿಕಾ ಜಿ-20 ಶೃಂಗಸಭೆ
ಸಾಮಾನ್ಯ ಅಧ್ಯಯನ – 2 / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ 2025 ರ ಜಿ-20 ಶೃಂಗಸಭೆ ಜರುಗಿತು. ಆಫ್ರಿಕಾ ಖಂಡದ ನೆಲದಲ್ಲಿ ನಡೆದ ಚೊಚ್ಚಲ ಜಿ-20 ಶೃಂಗಸಭೆ ಇದಾಗಿದೆ. “ಒಗ್ಗಟ್ಟು, ಸಮಾನತೆ, ಸುಸ್ಥಿರತೆ” ಎಂಬುದು ಈ ಶೃಂಗಸಭೆಯ ಧ್ಯೇಯವಾಕ್ಯವಾಗಿತ್ತು.
ಶೃಂಗಸಭೆಯ ಮುಖ್ಯಾಂಶಗಳು:
ಜಿ-20 ನಾಯಕರ ಘೋಷಣೆಯ ಅಂಗೀಕಾರ: ಹವಾಮಾನ ಬದಲಾವಣೆ ತಡೆಗಟ್ಟುವ ಕ್ರಮಗಳಿಗೆ (ಹೊಂದಾಣಿಕೆಗಾಗಿ ಹಣಕಾಸು ಮತ್ತು ನವೀಕರಿಸಬಹುದಾದ ಇಂಧನದ ಮೇಲೆ ಕೇಂದ್ರೀಕರಿಸುವುದು) ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಸೇರಿದಂತೆ ಜಾಗತಿಕ ಸಾಂಸ್ಥಿಕ ಸುಧಾರಣೆಗಳಿಗೆ ಒತ್ತು ನೀಡಲಾಯಿತು.
ಮಹಿಳೆಯರು ಮತ್ತು ಬಾಲಕಿಯರ ಸಬಲೀಕರಣಕ್ಕೆ ವಿಶೇಷ ಪ್ರಾಧಾನ್ಯತೆ ಹಾಗೂ ಭಯೋತ್ಪಾದನೆಯ ತೀವ್ರ ಖಂಡನೆ ಮಾಡಲಾಯಿತು.
ಜಿ- 20 ಒಕ್ಕೂಟದಲ್ಲಿ ‘ಆಫ್ರಿಕಾದ ಒಕ್ಕೂಟ’ಕ್ಕೆ ಖಾಯಂ ಸದಸ್ಯತ್ವ ನೀಡಲಾಯಿತು.
ಭಾರತದ ನಿಲುವು/ಉಪಕ್ರಮಗಳು
ಸಾಮೂಹಿಕ ಮಾನವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ‘ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ’ವನ್ನು ಸ್ಥಾಪಿಸಲು ಪ್ರಸ್ತಾಪಿಸಿತು.
ಆಫ್ರಿಕಾದ ಯುವಜನತೆಗೆ ಕೌಶಲ ತರಬೇತಿ ನೀಡಲು, ಒಂದು ಮಿಲಿಯನ್ ಪ್ರಮಾಣೀಕೃತ ತರಬೇತುದಾರರನ್ನು ರೂಪಿಸುವ ‘ಜಿ-20-ಆಫ್ರಿಕಾ ಸ್ಕಿಲ್ಸ್ ಮಲ್ಟಿಪ್ಲೈಯರ್’ ಉಪಕ್ರಮಕ್ಕೆ ಚಾಲನೆ ನೀಡಲಾಯಿತು.
ಆರೋಗ್ಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಸ್ಪಂದಿಸಲು ‘ಜಾಗತಿಕ ಆರೋಗ್ಯ ಪ್ರತಿಕ್ರಿಯೆ ತಂಡ’ವನ್ನು ರಚಿಸಲು ಪ್ರತಿಪಾದಿಸಿತು.
ಕೃಷಿ, ಮೀನುಗಾರಿಕೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ದತ್ತಾಂಶ ಹಂಚಿಕೆಗಾಗಿ ‘ಮುಕ್ತ ಉಪಗ್ರಹ ದತ್ತಾಂಶ ಪಾಲುದಾರಿಕೆ’ಯನ್ನು ಆರಂಭಿಸಿತು.
ಮರುಬಳಕೆ ಮತ್ತು ಸುಸ್ಥಿರ ಪೂರೈಕೆ ಸರಪಳಿಗಳನ್ನು ಉತ್ತೇಜಿಸುವ ‘ನಿರ್ಣಾಯಕ ಖನಿಜಗಳ ಆವರ್ತಕತೆ ಉಪಕ್ರಮ’ವನ್ನು ಮಂಡಿಸಿತು.
ನಿರ್ಣಾಯಕ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ (AI), ಪೂರೈಕೆ ಸರಪಳಿಗಳು ಮತ್ತು ಶುದ್ಧ ಇಂಧನ ವಲಯದಲ್ಲಿನ ಸಹಕಾರಕ್ಕಾಗಿ ಆಸ್ಟ್ರೇಲಿಯಾ ಮತ್ತು ಕೆನಡಾದೊಂದಿಗೆ ‘ಎಸಿಐಟಿಐ ತ್ರಿಪಕ್ಷೀಯ ಚೌಕಟ್ಟಿಗೆ’ ಚಾಲನೆ ನೀಡಲಾಯಿತು.
ಅಸ್ಸಾಂ ಒಪ್ಪಂದ (1985)
ಸಾಮಾನ್ಯ ಅಧ್ಯಯನ – 2 / ಸರ್ಕಾರಿ ನೀತಿ ಮತ್ತು ಹಸ್ತಕ್ಷೇಪ
ಇದೀಗ ಸುದ್ದಿಯಲ್ಲಿದೆ:
1985 ರ ಅಸ್ಸಾಂ ಒಪ್ಪಂದದ 6ನೇ ಉಪಬಂಧದ ಅನುಷ್ಠಾನದ ಕುರಿತು ವಿಸ್ತಾರವಾದ ಒಮ್ಮತವನ್ನು ಸಾಧಿಸಲಾಗಿದೆ ಎಂದು ಇತ್ತೀಚೆಗೆ ಅಸ್ಸಾಂ ಸರ್ಕಾರವು ಘೋಷಿಸಿದೆ.
ಅಸ್ಸಾಂ ಒಪ್ಪಂದ, 1985 ರ ಬಗ್ಗೆ:
ಭಾರತ ಸರ್ಕಾರ, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (AASU) ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ್ ಪರಿಷತ್ (AAGSP) ನಡುವೆ 1985 ರ ಆಗಸ್ಟ್ 15 ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರ ವಿರುದ್ಧ 1979 ರಿಂದ 1985 ರವರೆಗೆ ಅಸ್ಸಾಂನಲ್ಲಿ ನಡೆದ ಆರು ವರ್ಷಗಳ ಸುದೀರ್ಘ ಆಂದೋಲನಕ್ಕೇ (ವಿದೇಶಿಯರ ವಿರೋಧಿ ಆಂದೋಲನ) ಈ ಒಪ್ಪಂದವು ಅಂತ್ಯ ಹಾಡಿತು. ಅಕ್ರಮ ವಲಸೆಯು ರಾಜ್ಯದ ಜನಸಂಖ್ಯಾ ಸ್ವರೂಪ, ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು.
ಅಸ್ಸಾಂ ಒಪ್ಪಂದದ 6ನೇ ಉಪಬಂಧ : ಅಸ್ಸಾಮಿ ಜನರ ‘ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾಷಾ ಅಸ್ಮಿತೆಯನ್ನು’ ಸಂರಕ್ಷಿಸಲು ಅಗತ್ಯವಾದ ‘ಸಂವಿಧಾನಾತ್ಮಕ, ಶಾಸಕಾಂಗೀಯ ಮತ್ತು ಆಡಳಿತಾತ್ಮಕ ರಕ್ಷಣೆಗಳನ್ನು’ ಒದಗಿಸುವ ಭರವಸೆಯನ್ನು ಇದು ನೀಡುತ್ತದೆ.
ಗಡಿ ಭದ್ರತೆ: ಅಕ್ರಮ ವಲಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಭಾರತ-ಬಾಂಗ್ಲಾದೇಶ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲು ಮತ್ತು ತಂತಿ ಬೇಲಿ ಹಾಕಲು ಈ ಒಪ್ಪಂದವು ಹೇಳುತ್ತದೆ.
ಭಾರತೀಯ ಆಹಾರದಲ್ಲಿ ಔರಮೈನ್
ಸಾಮಾನ್ಯ ಅಧ್ಯಯನ – 2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
ಭಾರತದಲ್ಲಿ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಕಲಬೆರಕೆ ಪ್ರಕರಣಗಳು ಮರುಕಳಿಸುತ್ತಲೇ ಇದ್ದು, ಇದು ವಿಶೇಷವಾಗಿ, ‘ಔರಮೈನ್ O’ ನಂತಹ ನಿಷೇಧಿತ ಕೃತಕ ವರ್ಣದ್ರವ್ಯಗಳ ಬಳಕೆಯ ಮೂಲಕ ಇದು ಹೆಚ್ಚುತ್ತಿದೆ.
‘ಔರಮೈನ್ O’ ನ ಬಗ್ಗೆ:
ಇದೊಂದು ಕೃತಕ, ವಾಸನೆ ರಹಿತ, ಹಳದಿ ಬಣ್ಣದ ವರ್ಣದ್ರವ್ಯವಾಗಿದ್ದು. ಇದನ್ನು ಜವಳಿ, ಚರ್ಮ ಸಂಸ್ಕರಣೆ, ಮುದ್ರಣಕ್ಕೆ ಬಳಸುವ ಮಸಿ ಮತ್ತು ಕಾಗದ ತಯಾರಿಕೆಯಂತಹ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಭಾರತ, ಯುರೋಪಿಯನ್ ಒಕ್ಕೂಟ, ಅಮೇರಿಕಾ ಸಹಿತ ಇತರ ಪ್ರಮುಖ ನಿಯಂತ್ರಕ ವ್ಯಾಪ್ತಿಗಳಲ್ಲಿ ‘ಔರಮೈನ್ O’ ಬಣ್ಣವನ್ನು ಆಹಾರದಲ್ಲಿ ಬಳಸಲು ಅನುಮೋದನೆ ನೀಡಲಾಗಿಲ್ಲ.
ಸಿಹಿ ತಿನಿಸುಗಳ ಮಾದರಿಗಳಲ್ಲಿ ಮೆಟಾನಿಲ್ ಹಳದಿ, ರೋಡಮೈನ್ ಬಿ ಮತ್ತು ಮಲಾಕೈಟ್ ಹಸಿರಿನಂತಹ ಇತರ ಅನುಮೋದನೆ ನೀಡದ ಬಣ್ಣಗಳೂ ಕಂಡುಬರುತ್ತಿವೆ.
ಇದು ಯಕೃತ್ತು ಮತ್ತು ಮೂತ್ರಪಿಂಡದ ಹಾನಿ, ಗುಲ್ಮದ ಹಿಗ್ಗುವಿಕೆ, ಆನುವಂಶಿಕ ದ್ರವ್ಯವನ್ನು ಬದಲಾಯಿಸಬಲ್ಲ ವಿಕೃತಿಜನ್ಯ ಪರಿಣಾಮಗಳು ಮತ್ತು ಸಂಭಾವ್ಯ ಕ್ಯಾನ್ಸರ್ ಕಾರಕ ಅಪಾಯಗಳನ್ನು ಒಳಗೊಂಡಿದೆ.
ಗಂಭೀರ ವಂಚನೆ ತನಿಖಾ ಕಚೇರಿ (SFIO)
ಸಾಮಾನ್ಯ ಅಧ್ಯಯನ – 3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
‘ಗಂಭೀರ ವಂಚನೆ ತನಿಖಾ ಕಚೇರಿ’ (SFIO) ಯು ತನ್ನ ಹಾಜರಾಗುವ ಕರೆ (ಸಮನ್ಸ್) ಮತ್ತು ಸೂಚನೆ (ನೋಟಿಸ್) ಗಳ ದುರ್ಬಳಕೆಯನ್ನು ತಡೆಯಲು ಹಾಗೂ ಅಧಿಕಾರಿಗಳ ಸೋಗಿನಲ್ಲಿ ನಡೆಯುವ ವಂಚನೆಯನ್ನು ನಿಯಂತ್ರಿಸಲು, ನೂತನ ತಾಂತ್ರಿಕ ಮತ್ತು ಪ್ರಕ್ರಿಯಾತ್ಮಕ ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ.
ಗಂಭೀರ ವಂಚನೆ ತನಿಖಾ ಕಚೇರಿ (SFIO) ಯ ಬಗ್ಗೆ:
ಸ್ಥಾಪನೆ: ಕಂಪನಿಗಳ ಕಾಯ್ದೆ, 2013ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
ಕಾರ್ಯನಿರ್ವಹಣೆ: ಇದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಕಾರ್ಯವ್ಯಾಪ್ತಿ: ಇದು ಕೇವಲ ಸಾಮಾನ್ಯ ಕಂಪನಿ ಕಾನೂನು ಉಲ್ಲಂಘನೆಗಳಿಗಿಂತ ಭಿನ್ನವಾಗಿ, ‘ವೈಟ್ ಕಾಲರ್’ ಅಪರಾಧಗಳ (ಗಂಭೀರ ಆರ್ಥಿಕ ಅಪರಾಧಗಳ) ತನಿಖೆಗಾಗಿಯೇ ರಚಿಸಲಾದ ವಿಶೇಷ ಸಂಸ್ಥೆಯಾಗಿದೆ.
ಮಹತ್ವ: ಸಂಕೀರ್ಣ ಸ್ವರೂಪದ ಮತ್ತು ಗ೦ಭೀರವಾದ ಕಂಪನಿಗೆ ಸಂಬಂಧಿಸಿದ ವಂಚನೆಗಳನ್ನು ಭೇದಿಸಲು, ಇದು ಲೆಕ್ಕಪತ್ರ ನಿರ್ವಹಣೆ, ವಿಧಿವಿಜ್ಞಾನ ಲೆಕ್ಕಪರಿಶೋಧನೆ, ಬ್ಯಾಂಕಿಂಗ್, ಕಾನೂನು, ಮಾಹಿತಿ ತಂತ್ರಜ್ಞಾನ, ಬಂಡವಾಳ ಮಾರುಕಟ್ಟೆಗಳು ಹಾಗೂ ತೆರಿಗೆ ಕ್ಷೇತ್ರಗಳ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ.
ಭಾರತ ನೂತನ (ಹೊಸ) ಕಾರು ಮೌಲ್ಯಮಾಪನ ಕಾರ್ಯಕ್ರಮ (Bharat NCAP)
ಸಾಮಾನ್ಯ ಅಧ್ಯಯನ -3/ ಪರಿಸರ
ಇದೀಗ ಸುದ್ಧಿಯಲ್ಲಿದೆ:
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH), ‘ಭಾರತ ನೂತನ ಕಾರು ಮೌಲ್ಯಮಾಪನ ಕಾರ್ಯಕ್ರಮ ‘ 2.0 ನ (Bharat NCAP 2.0) ಪರಿಷ್ಕೃತ ಕರಡನ್ನು ಪ್ರಕಟಿಸಿದೆ.
ಭಾರತ ನೂತನ (ಹೊಸ) ಕಾರು ಮೌಲ್ಯಮಾಪನ ಕಾರ್ಯಕ್ರಮದ ಬಗ್ಗೆ:
ಈ ಯೋಜನೆಯನ್ನು 2023ರ ಅಕ್ಟೋಬರ್‌ನಲ್ಲಿ ಜಾರಿಗೆ ತರಲಾಯಿತು.
ಉದ್ದೇಶ: ವಾಹನಗಳ ಅಪಘಾತ ತಡೆ ಪರೀಕ್ಷೆ (‘ಕ್ರ್ಯಾಶ್ ಟೆಸ್ಟಿಂಗ್’) ಮತ್ತು ಮೌಲ್ಯಮಾಪನ ಮಾನದಂಡಗಳನ್ನು ಆಧರಿಸಿ, ವಾಹನಗಳಿಗೆ ಸುರಕ್ಷತಾ ಮೌಲ್ಯಾoಕಗಳನ್ನು ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಪ್ರಕ್ರಿಯೆ: ವಾಹನ ತಯಾರಕರು ಅಥವಾ ಆಮದುದಾರರು ತಮ್ಮ ವಾಹನಗಳನ್ನು ವಾಹನ ಉದ್ಯಮದ ಮಾನದಂಡಗಳ ಅನ್ವಯ ಪರೀಕ್ಷೆಗೆ ಒಳಪಡಿಸಲು ಅಗತ್ಯವಿರುವ ವಿವರವಾದ ಕಾರ್ಯವಿಧಾನವನ್ನು ಇದು ರೂಪಿಸಿದೆ.
ನಿಯೋಜಿತ ಸಂಸ್ಥೆ: ಭಾರತ್ NCAP ರೇಟಿಂಗ್‌ಗಳನ್ನು ನೀಡಲು ಪುಣೆಯಲ್ಲಿರುವ ‘ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ’ಯನ್ನು (CIRT) ಅಧಿಕೃತ ಸಂಸ್ಥೆಯನ್ನಾಗಿ ನಿಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು (KSCPCR) ‘ಮಕ್ಕಳ ಹಕ್ಕುಗಳ ಸೂಚ್ಯಂಕ’ವನ್ನು ಬಿಡುಗಡೆ ಮಾಡಿದೆ. ಇಡೀ ದೇಶದಲ್ಲೇ ಇಂತಹದೊಂದು ಸಮಗ್ರ ದಾಖಲೆಯನ್ನು ಸಿದ್ಧಪಡಿಸಿರುವುದು ಇದೇ ಮೊದಲಾಗಿದೆ.
ಮಕ್ಕಳ ಹಕ್ಕುಗಳ ಸೂಚ್ಯಂಕದ ಬಗ್ಗೆ:
ಸಮಗ್ರ ಮಾಹಿತಿ: ಈ ದಾಖಲೆಯು ಮಕ್ಕಳ ಕಲ್ಯಾಣಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಜಾರಿಯಲ್ಲಿರುವ ಕಾನೂನುಗಳು ಮತ್ತು ಯೋಜನೆಗಳ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
ಮೌಲ್ಯಮಾಪನ: ಯೋಜನೆಗಳ ಅನುಷ್ಠಾನದ ಪರಿಣಾಮಕಾರಿತ್ವವನ್ನು ಇದು ವಿಶ್ಲೇಷಿಸುತ್ತದೆ. ಜೊತೆಗೆ, ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯವಾದ ಬದಲಾವಣೆಗಳನ್ನು ಸೂಚಿಸುತ್ತದೆ.
ಗುರಿ:ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಕಲ್ಯಾಣವನ್ನು ಖಾತ್ರಿಪಡಿಸುವುದು ಇದರ ಪ್ರಮುಖ ಗುರಿಯಾಗಿದೆ.
ಈ ಸೂಚ್ಯಂಕದಲ್ಲಿ ಕರ್ನಾಟಕದ 10ನೇ ಸ್ಥಾನ ಪಡೆದಿದೆ:
ಶ್ರೇಯಾಂಕ: ಮಕ್ಕಳ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಸಾಕಾರಗೊಳಿಸುವಲ್ಲಿ ಕರ್ನಾಟಕದ ಸಾಧನೆಯು ‘ಮಧ್ಯಮ’ ಮಟ್ಟದಲ್ಲಿದೆ. ‘ಮಕ್ಕಳ ಹಕ್ಕುಗಳ ಸೂಚ್ಯಂಕ 2023’ ರ ವರದಿಯ ಪ್ರಕಾರ, ದೇಶದ 30 ರಾಜ್ಯಗಳ ಪೈಕಿ ಕರ್ನಾಟಕವು 10ನೇ ಸ್ಥಾನ ಪಡೆದಿದೆ.
ಆಯಾಮಗಳು : ಈ ಸೂಚ್ಯಂಕವನ್ನು ಈ ಕೆಳಗಿನ ಆರು ಪ್ರಮುಖ ಆಯಾಮಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ:
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿರುವ ಐದು ಪ್ರತ್ಯೇಕ ಸಂಸ್ಥೆಗಳನ್ನು ವಿಲೀನಗೊಳಿಸಿ, ಭೂ ವ್ಯವಸ್ಥೆ ವಿಜ್ಞಾನ ಮಂಡಳಿಎಂದು ಏಕೀಕೃತಗೊಳಿಸಿ ಒಂದೇ ಸೂರಿನಡಿ ತರಲಾಗಿದೆ.
ಭೂ ವ್ಯವಸ್ಥೆ ವಿಜ್ಞಾನ ಮಂಡಳಿ (“ಅರ್ತ್ ಸಿಸ್ಟಮ್ ಸೈನ್ಸಸ್ ಕೌನ್ಸಿಲ್” -ESSC) ಯ ಬಗ್ಗೆ:
ಗುರಿ: ಆಡಳಿತವನ್ನು ಸುಗಮಗೊಳಿಸುವುದು ಮತ್ತು ಬದಲಾಗುತ್ತಿರುವ ಹವಾಮಾನ, ಏರುಪೇರಾಗುವ ಮಾನ್ಸೂನ್ (ಮುಂಗಾರು) ಮತ್ತು ಕರಗುತ್ತಿರುವ ಧ್ರುವ ಪ್ರದೇಶಗಳಿಂದ ಎದುರಾಗುವ ವೈಜ್ಞಾನಿಕ ಮತ್ತು ಮಾನವೀಯ ಸಮಸ್ಯೆಗಳನ್ನು ಒಗ್ಗೂಡಿಸಿ ಪರಿಹರಿಸುವುದು.
ವಿಲೀನಗೊಂಡ ಸಂಸ್ಥೆಗಳು:
ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆ (IITM), ಪುಣೆ
ರಾಷ್ಟ್ರೀಯ ಧ್ರುವೀಯ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR), ಗೋವಾ
ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT), ಚೆನ್ನೈ
ರಾಷ್ಟ್ರೀಯ ಭೂ ವಿಜ್ಞಾನ ಅಧ್ಯಯನ ಕೇಂದ್ರ (NCESS), ತಿರುವನಂತಪುರಂ
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಮತ್ತು ಸೇವೆಗಳ ಕೇಂದ್ರ (INCOIS), ಹೈದರಾಬಾದ
ಭೂ ವ್ಯವಸ್ಥೆ ವಿಜ್ಞಾನ ಮಂಡಳಿ (ESSC) ಯು ಎರಡು ಅಧೀನ ಕಚೇರಿಗಳನ್ನು ಒಳಗೊಂಡಿದೆ:
ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಗಾಗಿ ರಾಷ್ಟ್ರೀಯ ಕೇಂದ್ರ (NCMRWF).
ESSC 2023 ರಲ್ಲಿ ಔಪಚಾರಿಕವಾಗಿ ಒಂದು ಮಂಡಳಿಯಾಗಿ ನೋಂದಾಯಿಸಲ್ಪಟ್ಟಿತು. ಭೂ ವಿಜ್ಞಾನ ಸಚಿವಾಲಯದ (MoES) ಕಾರ್ಯದರ್ಶಿಯವರು ESSC ಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ವಿಜ್ಞಾನ ಸಚಿವರು ESSC ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.
ಎಲ್ಲರಿಗಾಗಿ ಯುವ ಎ ಐ (AI)
ಪಠ್ಯಕ್ರಮ: ಜಿ.ಎಸ್-3/ ವಿಜ್ಞಾನ ಮತ್ತು ತಂತ್ರಜ್ಞಾನ
ಸಂದರ್ಭ:
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ‘ಇಂಡಿಯಾ ಎಐ ಮಿಷನ್’ ಅಡಿಯಲ್ಲಿ “ಎಲ್ಲರಿಗಾಗಿ ಯುವ ಎ ಐ” (YUVA AI for ALL) ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಇದು ಎಲ್ಲಾ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯ (AI) ಪ್ರಪಂಚವನ್ನು ಪರಿಚಯಿಸುವ, ತನ್ನದೇ ಆದ ರೀತಿಯ ಮೊದಲ ಉಚಿತ ತರಗತಿ ನೀಡುವುದಾಗಿದೆ.
ಎಲ್ಲರಿಗಾಗಿ ಯುವ ಎ ಐ (YUVA AI for ALL) ನ ಬಗ್ಗೆ:
ಇದು 4.5 ಗಂಟೆಗಳ ಅಲ್ಪಾವಧಿಯ, ಸ್ವಯಂ-ವೇಗದ ತರಗತಿ ಆಗಿದೆ. ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಕಲಿಯಲು ಆಸಕ್ತಿಯಿರುವ ಇತರರಿಗೆ ಎಐ (AI) ನ ಮೂಲಭೂತ ವಿಷಯಗಳನ್ನು ಸುಲಭವಾಗಿಸಲು ಮತ್ತು ಅದು ಪ್ರಪಂಚವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ತೋರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಗುರಿ: 1 ಕೋಟಿ ನಾಗರಿಕರಿಗೆ ಮೂಲಭೂತ ಎಐ ಕೌಶಲ್ಯಗಳನ್ನು ನೀಡಿ ಸಬಲೀಕರಣಗೊಳಿಸುವುದು. ಇದು ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು, ನೈತಿಕ ಎಐ ಬಳಕೆಯನ್ನು ಉತ್ತೇಜಿಸಲು ಮತ್ತು ಭವಿಷ್ಯಕ್ಕಾಗಿ ಭಾರತದ ಉದ್ಯೋಗಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ.
ಇಂಡಿಯಾ ಎಐ (AI) ಮಿಷನ್ ಬಗ್ಗೆ:
ಪ್ರಾರಂಭ: ಮಾರ್ಚ್ 2024.
ಉದ್ದೇಶ : ಇದು ಭಾರತದಲ್ಲಿ ಎಐ ಸಂಶೋಧನೆ, ಅಭಿವೃದ್ಧಿ ಮತ್ತು ನಾವಿನ್ಯತೆಯನ್ನು ಉತ್ತೇಜಿಸುವ ಅನುಷ್ಠಾನ ಸಂಸ್ಥೆ:ಡಿಜಿಟಲ್ ಇಂಡಿಯಾ ಕಾರ್ಪೊರೇಶನ್ ಅಡಿಯಲ್ಲಿರುವ ‘ಇಂಡಿಯಾ ಎಐ’ ಸ್ವತಂತ್ರ ವಹಿವಾಟು ವಿಭಾಗ.
ಹನೋಯಿ ಸಮಾವೇಶ
ಪಠ್ಯಕ್ರಮ: ಜಿ.ಎಸ್-3/ ಸೈಬರ್ ಭದ್ರತೆ
ಸಂದರ್ಭ:
ಸೈಬರ್ ಅಪರಾಧಗಳನ್ನು ಎದುರಿಸುವ ಗುರಿಯೊಂದಿಗೆ ವಿಯೆಟ್ನಾಂ ದೇಶದ ರಾಜಧಾನಿ ಹನೋಯಿ ನಗರದಲ್ಲಿ ನಡೆದ ಐತಿಹಾಸಿಕ ವಿಶ್ವಸಂಸ್ಥೆಯ ‘ಸೈಬರ್ ಅಪರಾಧಗಳ ವಿರುದ್ಧದ ಸಮಾವೇಶ’ದ ಒಪ್ಪಂದಕ್ಕೆ 72 ರಾಷ್ಟ್ರಗಳು ಸಹಿ ಹಾಕಿವೆ.
ಹನೋಯಿ ಸಮಾವೇಶದ ಕುರಿತು:
ಉದ್ದೇಶ: ಕಾನೂನು ಜಾರಿ ಸಂಸ್ಥೆಗಳ ನಡುವೆ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಇದು ಶಾಸಕಾಂಗ ಚೌಕಟ್ಟನ್ನು ಪ್ರಸ್ತಾಪಿಸುತ್ತದೆ. ಅಷ್ಟೇ ಅಲ್ಲದೆ, ಸೈಬರ್ ಅಪರಾಧಗಳನ್ನು ಎದುರಿಸಲು ಸಾಕಷ್ಟು ಮೂಲಸೌಕರ್ಯಗಳಿಲ್ಲದ ದೇಶಗಳಿಗೆ ತಾಂತ್ರಿಕ ನೆರವನ್ನು ಒದಗಿಸುತ್ತದೆ.
ಮೊದಲ ಸಾರ್ವತ್ರಿಕ ಸಮಾವೇಶ:ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಅಪರಾಧಗಳನ್ನು ತನಿಖೆ ಮಾಡಲು ಮತ್ತು ವಿಚಾರಣೆ ನಡೆಸಲು ಈ ಸಮಾವೇಶವು ಮೊದಲ ಸಾರ್ವತ್ರಿಕ ಚೌಕಟ್ಟನ್ನು ಸ್ಥಾಪಿಸುತ್ತದೆ.
ಕಾನೂನು ಬದ್ಧ: ವಿಶ್ವಸಂಸ್ಥೆಯ ಸೈಬರ್ ಅಪರಾಧ ಸಮಾವೇಶವು ಪ್ರಬಲವಾದ, ಕಾನೂನು ಬದ್ಧವಾಗಿರುವ ಸಾಧನವಾಗಿದೆ.
ಅಳವಡಿಕೆ: ಐದು ವರ್ಷಗಳ ಮಾತುಕತೆಯ ನಂತರ 2024 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅಳವಡಿಸಿಕೊಂಡಿತು.
ಇದಕ್ಕೆ ಸಹಿ ಹಾಕುವ ಪ್ರಕ್ರಿಯೆಯು ಮುಂದಿನ ವರ್ಷದವರೆಗೂ ತೆರೆದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರಮುಖ ನಿಬಂಧನೆಗಳು: ಇದು ಈ ಕೆಳಗಿನ ರೀತಿಯ ಅಪರಾಧವನ್ನು ಅಪರಾಧಗಳನ್ನಾಗಿ ಮಾಡುತ್ತದೆ:
ಸೈಬರ್-ಅವಲಂಬಿತ ಅಪರಾಧಗಳು : ಅನಧಿಕೃತ ಪ್ರವೇಶ (ಹ್ಯಾಕಿಂಗ್), ದತ್ತಾಂಶ (ಡೇಟಾ) ಹಸ್ತಕ್ಷೇಪ.
ಸೈಬರ್-ಶಕ್ತಗೊಂಡ ಅಪರಾಧಗಳು: ಆನ್‌ಲೈನ್ ವಂಚನೆ, ಅನ್ಯೋನ್ಯ ಚಿತ್ರಗಳ ಒಪ್ಪಿಗೆಯಿಲ್ಲದ ಹಂಚಿಕೆ.
ಮಕ್ಕಳ ಶೋಷಣೆ: ಆನ್‌ಲೈನ್ ಲೈಂಗಿಕ ದೌರ್ಜನ್ಯ, ನಿಂದನಾತ್ಮಕ ವಿಷಯಗಳ ವಿತರಣೆ, ಅಮಿಷವೊಡ್ಡುವುದು.
ಇದು ಗಡಿಗಳನ್ನು ಮೀರಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ ಮತ್ತು ಸದಸ್ಯ ರಾಷ್ಟ್ರಗಳ ನಡುವೆ 24/7 ಸಹಕಾರ ಜಾಲವನ್ನು ಸ್ಥಾಪಿಸುತ್ತದೆ.
ಐತಿಹಾಸಿಕ ಕ್ರಮ: ಅನ್ಯೋನ್ಯ ಚಿತ್ರಗಳ ಒಪ್ಪಿಗೆಯಿಲ್ಲದ ಹಂಚಿಕೆಯನ್ನು ಅಪರಾಧವೆಂದು ಗುರುತಿಸಿದ ಮೊದಲ ಅಂತರರಾಷ್ಟ್ರೀಯ ಒಪ್ಪಂದ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇದು ಆನ್‌ಲೈನ್ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಸಿಕ್ಕ ಮಹತ್ವದ ಗೆಲುವಾಗಿದೆ.
ಜಾರಿ: 40 ನೇ ರಾಷ್ಟ್ರವು ತನ್ನ ಅನುಮೋದನೆಯನ್ನು ಸಲ್ಲಿಸಿದ 90 ದಿನಗಳ ನಂತರ ಇದು ಜಾರಿಗೆ ಬರುತ್ತದೆ.
ಸದಸ್ಯ ರಾಷ್ಟ್ರಗಳ ಸಮ್ಮೇಳನ: ಜಾರಿಗೆ ಬಂದ ನಂತರ, ಸದಸ್ಯ ರಾಷ್ಟ್ರಗಳ ನಡುವಿನ ಸಾಮರ್ಥ್ಯ ಮತ್ತು ಸಹಕಾರವನ್ನು ಸುಧಾರಿಸಲು ‘ಸದಸ್ಯ ರಾಷ್ಟ್ರಗಳ ಸಮ್ಮೇಳನ’ವು ನಿಯತಕಾಲಿಕವಾಗಿ ನಡೆಯಲಿದೆ.
ಸಚಿವಾಲಯ: ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ಕಚೇರಿಯು (UNODC) ಇದರ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ.
ಸೈಬರ್ ದಾಳಿಗಳ ವಿಧಗಳು:
ಮಾಲ್ವೇರ್ (Malware): ಇದು ‘ದುರುದ್ದೇಶಪೂರಿತ ತಂತ್ರಾಂಶ’ದ ಸಂಕ್ಷಿಪ್ತ ರೂಪವಾಗಿದೆ. ಕಂಪ್ಯೂಟರ್, ಸರ್ವರ್ ಅಥವಾ ಕಂಪ್ಯೂಟರ್ ನೆಟ್‌ವರ್ಕ್‌ಗೆ ಹಾನಿ ಮಾಡಲು ವಿನ್ಯಾಸಗೊಳಿಸಲಾದ ಯಾವುದೇ ರೀತಿಯ ತಂತ್ರಾಂಶವನ್ನು ಇದು ಸೂಚಿಸುತ್ತದೆ.
ಉದಾಹರಣೆ: ರಾನ್ಸಮ್‌ವೇರ್, ಸ್ಪೈವೇರ್, ವರ್ಮ್‌ಗಳು, ವೈರಸ್‌ಗಳು ಮತ್ತು ಟ್ರೋಜನ್‌ಗಳು ಇವೆಲ್ಲವೂ ಮಾಲ್ವೇರ್‌ನ ವಿಧಗಳಾಗಿವೆ.
ಫಿಶಿಂಗ್ (Phishing): ಮೋಸದ ಇಮೇಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸಿಕೊಂಡು ವೈಯಕ್ತಿಕ ಮಾಹಿತಿಯನ್ನು ಕದಿಯಲುಪ್ರಯತ್ನಿಸುವ ವಿಧಾನ ಇದಾಗಿದೆ.
ಮಾಲ್ವೇರ್ (Malware) ನ ವಿಧಗಳು:
ಸ್ಪೈವೇರ್ (Spyware): ಇದು ನಿಮ್ಮ ಮೇಲೆ ಕಣ್ಣಿಡುವ ತಂತ್ರಾಂಶವಾಗಿದೆ. ಜಾಹೀರಾತುಗಳನ್ನು ನಿಮ್ಮ ಯಂತ್ರಣಕ್ಕೆ ಕಳುಹಿಸಲು ಇದು ನಿಮ್ಮ ಇಂಟರ್ನೆಟ್ ಚಟುವಟಿಕೆಗಳನ್ನು ಹುಡುಕಾಟ ಮಾಡುತ್ತಾ ಗಮನಿಸುತ್ತದೆ.
ವೈರಸ್ (Virus): ಇದೊಂದು ಸಾಂಕ್ರಾಮಿಕ ಕಾರ್ಯಕ್ರಮ ಅಥವಾ ಕೋಡ್ ಆಗಿದ್ದು, ಮತ್ತೊಂದು ತಂತ್ರಾಂಶಕ್ಕೆ ಅಂಟಿಕೊಳ್ಳುತ್ತದೆ ಮತ್ತು ಆ ತಂತ್ರಾಂಶ ಚಾಲನೆಯಾದಾಗ ತನ್ನನ್ನು ತಾನೇ ಪುನರುತ್ಪಾದಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಕಂಪ್ಯೂಟರ್‌ಗಳ ನಡುವೆ ಸಾಫ್ಟ್‌ವೇರ್ ಅಥವಾ ಫೈಲ್‌ಗಳನ್ನು ಹಂಚಿಕೊಳ್ಳುವ ಮೂಲಕ ಇದು ಹರಡುತ್ತದೆ.
ವರ್ಮ್ (Worm): ಇದು ತನ್ನನ್ನು ತಾನೇ ನಕಲು ಮಾಡಿಕೊಳ್ಳುವ ಮತ್ತು ಕಂಪ್ಯೂಟರ್‌ನಲ್ಲಿನ ದತ್ತಾoಶ ಮತ್ತು ಫೈಲ್‌ಗಳನ್ನು ನಾಶಪಡಿಸುವ ಕಾರ್ಯಕ್ರಮವಾಗಿದೆ.
ಡ್ರೈವ್ ಖಾಲಿಯಾಗುವವರೆಗೂ ವ್ಯವಸ್ಥೆಯನ್ನು ಕಾರ್ಯಗೊಳಿಸುವ ಕಡತಗಳು ಮತ್ತು ದತ್ತಾoಶದ ಕಡತಗಳನ್ನು “ತಿನ್ನುವ” ಕೆಲಸವನ್ನು ವರ್ಮ್‌ಗಳು ಮಾಡುತ್ತವೆ.
ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದಲ್ಲಿ ಇತ್ತೀಚೆಗೆ ತೆಗೆದುಕೊಂಡ ಕ್ರಮಗಳು:
ಸೈಬರ್ ಸುರಕ್ಷಿತ್ ಭಾರತ ಉಪಕ್ರಮ: ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಐಟಿ ಸಿಬ್ಬಂದಿಗೆ ಸುರಕ್ಷತಾ ಕ್ರಮಗಳ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯೊಂದಿಗೆ 2018 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
ರಾಷ್ಟ್ರೀಯ ಸೈಬರ್ ಭದ್ರತಾ ಸಮನ್ವಯ ಕೇಂದ್ರ (NCCC): ನೈಜ ಸಮಯದ ಸೈಬರ್ ಬೆದರಿಕೆಗಳನ್ನು ಪತ್ತೆಹಚ್ಚಲು, ದೇಶಕ್ಕೆ ಬರುವ ಇಂಟರ್ನೆಟ್ ಟ್ರಾಫಿಕ್ ಮತ್ತು ಸಂವಹನ ಮೆಟಾಡೇಟಾವನ್ನು ಸ್ಕ್ಯಾನ್ ಮಾಡಲು 2017 ರಲ್ಲಿ NCCC ಅನ್ನು ಅಭಿವೃದ್ಧಿಪಡಿಸಲಾಯಿತು.
ಸೈಬರ್ ಸ್ವಚ್ಛತಾ ಕೇಂದ್ರ: ವೈರಸ್‌ಗಳು ಮತ್ತು ಮಾಲ್ವೇರ್‌ಗಳನ್ನು ಅಳಿಸಿಹಾಕುವ ಮೂಲಕ ಇಂಟರ್ನೆಟ್ ಬಳಕೆದಾರರು ತಮ್ಮ ಕಂಪ್ಯೂಟರ್ ಮತ್ತು ಸಾಧನಗಳನ್ನು ಸ್ವಚ್ಛಗೊಳಿಸಲು 2017 ರಲ್ಲಿ ಈ ವೇದಿಕೆಯನ್ನು ಪರಿಚಯಿಸಲಾಯಿತು.
ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ – ಇಂಡಿಯಾ (CERT-IN): ಹ್ಯಾಕಿಂಗ್ ಮತ್ತು ಫಿಶಿಂಗ್‌ನಂತಹ ಸೈಬರ್ ಭದ್ರತಾ ಬೆದರಿಕೆಗಳನ್ನು ನಿರ್ವಹಿಸುವ ನೋಡಲ್ ಏಜೆನ್ಸಿ ಇದಾಗಿದೆ.
ಸಂಬಂಧಿತ ಕಾನೂನುಗಳು
ಮಾಹಿತಿ ತಂತ್ರಜ್ಞಾನ ಕಾಯಿದೆ, 2000.
ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, 2019 (2022ರಲ್ಲಿ ಹಿಂಪಡೆಯಲಾಗಿದೆ).
ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ, 2023 (DPDP ಕಾಯಿದೆ).
ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಗಳು, 2025.
ಅಂತರರಾಷ್ಟ್ರೀಯ ಕಾರ್ಯವಿಧಾನಗಳು
ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU): ಇದು ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದ್ದು, ದೂರಸಂಪರ್ಕ ಮತ್ತು ಸೈಬರ್ ಸುರಕ್ಷತೆಯ ವಿಷಯಗಳ ಪ್ರಮಾಣೀಕರಣ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೈಬರ್ ಅಪರಾಧಗಳಿಗಾಗಿ ಬುಡಾಪೆಸ್ಟ್ ಸಮಾವೇಶ:
ರಾಷ್ಟ್ರೀಯ ಕಾನೂನುಗಳನ್ನು ಸಮನ್ವಯಗೊಳಿಸುವುದು, ತನಿಖಾ ತಂತ್ರಗಳನ್ನು ಸುಧಾರಿಸುವುದು ಮತ್ತು ರಾಷ್ಟ್ರಗಳ ನಡುವಿನ ಸಹಕಾರವನ್ನು ಹೆಚ್ಚಿಸುವ ಮೂಲಕ ಇಂಟರ್ನೆಟ್ ಮತ್ತು ಕಂಪ್ಯೂಟರ್ ಅಪರಾಧಗಳನ್ನು (ಸೈಬರ್ ಅಪರಾಧ) ಎದುರಿಸಲು ಪ್ರಯತ್ನಿಸುವ ಅಂತರರಾಷ್ಟ್ರೀಯ ಒಪ್ಪಂದ ಇದಾಗಿದೆ.
ಇದು 1 ಜುಲೈ 2004 ರಂದು ಜಾರಿಗೆ ಬಂದಿತು.
ಭಾರತವು ಈ ಸಮಾವೇಶಕ್ಕೆ ಸಹಿಯನ್ನು ಹಾಕಿಲ್ಲ.
ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ (PPV&FRA Act))
ಪಠ್ಯಕ್ರಮ: ಜಿ.ಎಸ್-3/ ಕೃಷಿ
ಸಂದರ್ಭ:
ಕೇಂದ್ರ ಸರ್ಕಾರವು ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ’ (PPV&FRA Act) ಯನ್ನು ಪಾಲುದಾರರಿಂದ ಸಲಹೆಗಳನ್ನು ಅಳವಡಿಸಿಕೊಳ್ಳಲು ತಿದ್ದುಪಡಿ ಮಾಡಲಿದೆ ಎಂದು ಕೇಂದ್ರ ಕೃಷಿ ಸಚಿವರು ತಿಳಿಸಿದ್ದಾರೆ.
ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ (ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟಿ ಅಂಡ್ ಫಾರ್ಮರ್ಸ್ ರೈಟ್ಸ್ ಆಕ್ಟ್ – PPV&FRA Act), 2001 ರ ಬಗ್ಗೆ:
ಉದ್ದೇಶ: ಈ ಕೆಳಗಿನವುಗಳಿಗೆ ಪರಿಣಾಮಕಾರಿ ವ್ಯವಸ್ಥೆಯನ್ನು ಸ್ಥಾಪಿಸುವುದು:
ಸಸ್ಯ ತಳಿಗಳ ಸಂರಕ್ಷಣೆ.
ರೈತರು ಮತ್ತು ಸಸ್ಯ ತಳಿಗಳನ್ನು ಅಭಿವೃದ್ಧಿಪಡಿಸುವವರ ಹಕ್ಕುಗಳ ರಕ್ಷಣೆ
ಹೊಸ ತಳಿಯ ಸಸ್ಯಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು.
ಮಹತ್ವ :
ಇದು ನಾವೀನ್ಯತೆ ಮತ್ತು ರೈತರ ಸಾಂಪ್ರದಾಯಿಕ ಹಕ್ಕುಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
ಕೃಷಿ ಜೀವವೈವಿಧ್ಯದ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.
ಗ್ರಾಮೀಣ ಜೀವನೋಪಾಯವನ್ನು ರಕ್ಷಿಸುವ ಜೊತೆಗೆ ಬೀಜ ಉದ್ಯಮದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಅಪಾಯದಲ್ಲಿರುವ ಭಾರತದ ಡುಗಾಂಗ್‌ಗಳು (ಕಡಲ ಹಸುಗಳು)
ಪಠ್ಯಕ್ರಮ: ಜಿ.ಎಸ್-3/ ಸುದ್ದಿಯಲ್ಲಿರುವ ಪ್ರಭೇದಗಳು
ಸಂದರ್ಭ:
ಅಬುಧಾಬಿಯಲ್ಲಿ ನಡೆದ ಐಯುಸಿಎನ್ (IUCN) ಸಂರಕ್ಷಣಾ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾದ ಇತ್ತೀಚಿನ ವರದಿಯು ಭಾರತದ ಡುಗಾಂಗ್ ಜನಸಂಖ್ಯೆಗೆ ಎದುರಾಗಿರುವ ಅಪಾಯದ ಬಗ್ಗೆ ಎಚ್ಚರಿಸಿದೆ.
ಡುಗಾಂಗ್‌ಗಳು (ಡುಗಾಂಗ್ ಡುಗಾನ್)
ಡುಗಾಂಗ್‌ಗಳು ಪ್ರಮುಖವಾಗಿ ಸಸ್ಯಾಹಾರಿಗಳಾಗಿದ್ದು, ದಿನಕ್ಕೆ 30 ರಿಂದ 40 ಕೆಜಿ ಕಡಲ ಹುಲ್ಲನ್ನು (seagrass) ತಿನ್ನುತ್ತವೆ.
ಇವುಗಳನ್ನು “ಕಡಲ ಹಸುಗಳು” ಎಂದು ಕರೆಯಲಾಗುತ್ತದೆ. ಇವು ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಪೆಸಿಫಿಕ್ ಮಹಾಸಾಗರದ ಆಳವಿಲ್ಲದ ಕರಾವಳಿ ನೀರಿನಲ್ಲಿ ಶಾಂತಿಯಿಂದ ಕಡಲ ಹುಲ್ಲನ್ನು ಮೇಯುತ್ತವೆ.
ಕರಾವಳಿ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವಲ್ಲಿ ಮತ್ತು ಮೀನು ಉತ್ಪಾದನೆಗೆ ಸಹಾಯ ಮಾಡುವಲ್ಲಿ ಅವು ಪ್ರಮುಖ ಪಾತ್ರವಹಿಸುವುದರಿಂದ, ಇವುಗಳನ್ನು “ಸಮುದ್ರದ ರೈತರು ಅಥವಾ ತೋಟಗಾರರು” ಎಂದು ಕರೆಯಲಾಗುತ್ತದೆ.
ಭೌಗೋಳಿಕ ವ್ಯಾಪ್ತಿ: ಈ ಶಾಂತ ಸ್ವಭಾವದ ದೈತ್ಯ ಜೀವಿಗಳು ಕರಾವಳಿಯುದ್ದಕ್ಕೂ ಬೆಚ್ಚಗಿನ ನೀರಿನಲ್ಲಿ ಕಂಡುಬರುತ್ತವೆ. ಇವು ಮುಖ್ಯವಾಗಿ ಕೊಲ್ಲಿಗಳು ಮತ್ತು ಲಗೂನ್‌ಗಳಂತಹ ಶಾಂತವಾದ ಆವಾಸಸ್ಥಾನಗಳಲ್ಲಿ ಕಂಡುಬರುವ ಕಡಲ ಹುಲ್ಲು ಹಾಸುಗಳಿಗೆ ಸೀಮಿತವಾಗಿವೆ.
ಹಂಚಿಕೆ: ಇವು ಭಾರತದಲ್ಲಿ ಮನ್ನಾರ್ ಕೊಲ್ಲಿ, ಪಾಕ್ ಕೊಲ್ಲಿ, ಕಚ್ ಕೊಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ.
ಬೆದರಿಕೆಗಳು: ಮಾಂಸಕ್ಕಾಗಿ ಬೇಟೆಯಾಡುವುದು, ವಾಣಿಜ್ಯ ಮೀನುಗಾರಿಕೆಯಿಂದಾಗಿ ಆಕಸ್ಮಿಕವಾಗಿ ಬಲೆಯಲ್ಲಿ ಸಿಲುಕಿ ಸಾವು ಮತ್ತು ಆವಾಸಸ್ಥಾನದ ನಾಶ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಹಲವಾರು ದಶಕಗಳಲ್ಲಿ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ.
ಸಂರಕ್ಷಣಾ ಸ್ಥಿತಿ:
IUCN ಕೆಂಪು ಪಟ್ಟಿ – ದುರ್ಬಲ (Vulnerable).
ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 –ಅನುಸೂಚಿ I
ಭಾರತದಲ್ಲಿ ಸಂರಕ್ಷಣಾ ಪ್ರಯತ್ನಗಳು
ಡುಗಾಂಗ್ ಸಂರಕ್ಷಣಾ ಮೀಸಲು: ತಮಿಳುನಾಡಿನ ಪಾಕ್ ಕೊಲ್ಲಿಯಲ್ಲಿ ಭಾರತದಮೊದಲ ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶವನ್ನು ಸ್ಥಾಪಿಸಲಾಗಿದೆ. ಇದನ್ನು ಸಾಗರ ಜೀವವೈವಿಧ್ಯ ಸಂರಕ್ಷಣೆಗೆ ಜಾಗತಿಕ ಮಾದರಿ ಎಂದು ಐಯುಸಿಎನ್ (IUCN) ಗುರುತಿಸಿದೆ.
ರಾಷ್ಟ್ರೀಯ ಡುಗಾಂಗ್ ಚೇತರಿಕೆ ಕಾರ್ಯಕ್ರಮ: ಆವಾಸಸ್ಥಾನಗಳನ್ನು ಸಂರಕ್ಷಿಸಲು ಮತ್ತು ಡುಗಾಂಗ್ ಸಂರಕ್ಷಣೆಯನ್ನು ಉತ್ತೇಜಿಸಲು ತಮಿಳುನಾಡು, ಗುಜರಾತ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಹಯೋಗದೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ.
ಅಂತರರಾಷ್ಟ್ರೀಯ ಸಹಕಾರ: ಭಾರತದ ಪ್ರಯತ್ನಗಳು CITES ಮತ್ತು ವಲಸೆ ಪ್ರಭೇದಗಳ ಸಮಾವೇಶದಂತಹ (CMS) ಜಾಗತಿಕ ಸಂರಕ್ಷಣಾ ಚೌಕಟ್ಟುಗಳೊಂದಿಗೆ ಹೊಂದಿಕೆಯಾಗುತ್ತವೆ.
ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲಗಳು
ಪಠ್ಯಕ್ರಮ: ಜಿ.ಎಸ್-3/ ಸುದ್ದಿಯಲ್ಲಿರುವ ಪ್ರಭೇದಗಳು
ಸಂದರ್ಭ:
ಇತ್ತೀಚೆಗೆ, ವಿಜ್ಞಾನಿಗಳ ತಂಡವೊಂದು ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಅಪರೂಪದ ‘ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲಗಳನ್ನು’ ಪತ್ತೆಹಚ್ಚಿದೆ.
ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲ (ಮೆಸೊಪ್ಲೋದೊಂ ಗಿಂಕ್ಗೋಡೆನ್ಸ್) ಗಳ ಬಗ್ಗೆ:
ಇವು ಕೊಕ್ಕಿನ ತಿಮಿಂಗಿಲಗಳ 24 ಪ್ರಭೇದಗಳಲ್ಲಿ ಒಂದಾಗಿವೆ.
ಕೊಕ್ಕಿನ ತಿಮಿಂಗಿಲಗಳು ಭೂಮಿಯ ಮೇಲಿರುವ ಅತ್ಯಂತ ಆಳವಾಗಿ ಧುಮುಕುವ ಸಸ್ತನಿಗಳಾಗಿವೆ.
ಇವು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಸಾಗರಗಳಲ್ಲಿ ಕಳೆಯುತ್ತವೆ. ಉಸಿರಾಡಲು ಕೇವಲ ಕೆಲವೇ ನಿಮಿಷಗಳ ಕಾಲ ಮೇಲೆ ಬರುತ್ತವೆ, ಸಾಮಾನ್ಯವಾಗಿ ಕರಾವಳಿಯಿಂದ ಬಹಳ ದೂರದಲ್ಲಿರುತ್ತವೆ.
ಇವು ಪಶ್ಚಿಮ ಪೆಸಿಫಿಕ್‌ನ ಉಷ್ಣವಲಯದ ಮತ್ತು ಬೆಚ್ಚಗಿನ-ಸಮಶೀತೋಷ್ಣ ನೀರಿನಲ್ಲಿ ಕಂಡುಬರುತ್ತವೆ.
IUCN ಸ್ಥಿತಿ: ದತ್ತಾಂಶದ ಕೊರತೆ (DD).
ಲೀಡ್ ಐಟಿ (LeadIT)
ಪಠ್ಯಕ್ರಮ: ಜಿ.ಎಸ್-3/ ಪರಿಸರ
ಸಂದರ್ಭ
ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ COP30 ಶೃಂಗಸಭೆಯಲ್ಲಿ, ಭಾರತದ ಕೇಂದ್ರ ಪರಿಸರ ಸಚಿವರು ಲೀಡ್‌ಐಟಿ ಉದ್ಯಮ ನಾಯಕರ ದುಂಡುಮೇಜಿನ ಸಭೆ’ ಯನ್ನು ಉದ್ದೇಶಿಸಿ ಮಾತನಾಡಿದರು. ಕಡಿಮೆ ಇಂಗಾಲದ ಕೈಗಾರಿಕಾ ಪರಿವರ್ತನೆಗಳನ್ನು ಚಾಲನೆ ಮಾಡುವಲ್ಲಿ ಭಾರತದ ಪಾತ್ರವನ್ನು ಅವರು ಪುನರುಚ್ಚರಿಸಿದರು.
ಲೀಡ್‌ಐಟಿ (LeadIT) ಯ ಬಗ್ಗೆ:
ಪ್ರಾರಂಭ: ವಿಶ್ವಸಂಸ್ಥೆಯ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ, ವಿಶ್ವ ಆರ್ಥಿಕ ವೇದಿಕೆಯ ಬೆಂಬಲದೊಂದಿಗೆ, ಭಾರತ ಮತ್ತು ಸ್ವೀಡನ್ ಜಂಟಿಯಾಗಿ 2019 ರಲ್ಲಿ ಇದನ್ನು ಪ್ರಾರಂಭಿಸಿದವು.
ಉದ್ದೇಶ: ಉಕ್ಕು, ಸಿಮೆಂಟ್, ಅಲ್ಯೂಮಿನಿಯಂ, ರಾಸಾಯನಿಕಗಳು ಮತ್ತು ಭಾರೀ ಸಾರಿಗೆಯಂತಹ ‘ನಿಯಂತ್ರಿಸಲು ಕಷ್ಟಕರವಾದ’ ಹಾಗೂಹೆಚ್ಚು ಇಂಗಾಲ ಹೊರಸೂಸುವ ಕೈಗಾರಿಕೆಗಳನ್ನು, 2050 ರ ವೇಳೆಗೆ ‘ನಿವ್ವಳ-ಶೂನ್ಯ’ ಹೊರಸೂಸುವಿಕೆ ಸ್ಥಿತಿಗೆ ಪರಿವರ್ತಿಸುವುದನ್ನು ತ್ವರಿತಗೊಳಿಸುವುದು ಇದರ ಉದ್ದೇಶವಾಗಿದೆ.
ಇದು ನಿರ್ದಿಷ್ಟವಾಗಿ ‘ಕೈಗಾರಿಕಾ ಇಂಗಾಲ ಮುಕ್ತಗೊಳಿಸುವಿಕೆ’ಯ ಮೇಲೆ ಗಮನಹರಿಸಿದ ಪ್ರಪ್ರಥಮ ಜಾಗತಿಕ ಉನ್ನತ ಮಟ್ಟದ ಉಪಕ್ರಮಗಳಲ್ಲಿ ಒಂದಾಗಿದೆ.
ಲೀಡ್‌ಐಟಿ 2.0 (2024–2026):ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು. ಇದು ಕೇವಲ ‘ಸಂವಾದ’ದಿಂದ ಪ್ರಾಯೋಗಿಕ ‘ಅನುಷ್ಠಾನ’ದ ಹಂತಕ್ಕೆ ಸಾಗುವ ಧ್ಯೇಯವನ್ನು ಹೊಂದಿದೆ.
ಕ್ರಿಸ್ಪರ್-ಕ್ಯಾಸ್ ವ್ಯವಸ್ಥೆಗಳು (CRISPR-Cas systems)
ವಿಜ್ಞಾನ ಮತ್ತು ತಂತ್ರಜ್ಞಾನ
ಸಂದರ್ಭ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಹೊಂದಿರುವ ‘ಕ್ರಿಸ್ಪರ್-ಕ್ಯಾಸ್’ (CRISPR-Cas) ವ್ಯವಸ್ಥೆಗಳಿಗೆ ಪರ್ಯಾಯವಾಗಿ, ಐಸಿಎಆರ್ (ICAR) ನ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ (IIRR) ಯ ವಿಜ್ಞಾನಿಗಳು ‘ಟಿಎನ್‌ಪಿಬಿ ಪ್ರೋಟೀನ್‌ಗಳನ್ನು’ (TnpB proteins) ಬಳಸಿಕೊಂಡು, ಸಂಪೂರ್ಣ ಸ್ವದೇಶಿ ನಿರ್ಮಿತ ವಂಶವಾಹಿ ತಿದ್ದುವಿಕೆ (ಜಿನೋಮ್-ಎಡಿಟಿಂಗ್ -GE) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ನಿಮಗಿದು ತಿಳಿದಿದೆಯೇ?
ಮೇ 2025 ರಲ್ಲಿ, ಭಾರತೀಯ ಭತ್ತ ಸಂಶೋಧನಾ ಸಂಸ್ಥೆ (IIRR) ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ಅಭಿವೃದ್ಧಿಪಡಿಸಿದ ವಂಶವಾಹಿ ತಿದ್ದುಪಡಿ ಮಾಡಿದ ಎರಡು ಭತ್ತದ ಪ್ರಭೇದಗಳನ್ನು ICAR ಬಿಡುಗಡೆ ಮಾಡಿತು.
IIRR ಸಂಸ್ಥೆಯು CRISPR-Cas12a ತಂತ್ರಜ್ಞಾನ ಬಳಸಿ, ‘ಸೈಟೊಕಿನಿನ್ ಆಕ್ಸಿಡೇಸ್ 2’ ವಂಶವಾಹಿಯನ್ನು ಮಾರ್ಪಾಡು ಮಾಡುವ ಮೂಲಕ ಸಾಂಬಾ ಮಸೂರಿ ಭತ್ತದ ಇಳುವರಿಯನ್ನು ಹೆಚ್ಚಿಸಿದೆ. ಹಾಗೆಯೇ, IARI ಸಂಸ್ಥೆಯು CRISPR-Cas9 ಬಳಸಿ, ‘DST’ ಜೀನ್ ಅನ್ನು ತಿದ್ದುಪಡಿ ಮಾಡುವ ಮೂಲಕ ಎಂಟಿಯು-1010 (ಕಾಟನ್‌ದೊರ ಸನ್ನಲು) ತಳಿಯಲ್ಲಿ ಬರಗಾಲ ಮತ್ತು ಉಪ್ಪಿನಂಶವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದೆ.
ಟಿಎನ್‌ಪಿಬಿ (TnpB) ಅಥವಾ ಟ್ರಾನ್ಸ್‌ಪೋಸನ್-ಸಂಬಂಧಿತ ಪ್ರೋಟೀನ್‌ಗಳು (Transposon-associated proteins):
ಇದು ಒಂದು ರೀತಿಯ “ಆಣ್ವಿಕ ಕತ್ತರಿ” (molecular scissors) ಯಂತೆ ಕೆಲಸ ಮಾಡುತ್ತದೆ. ಇದು ಸಸ್ಯದ ಡಿಎನ್‌ಎ ಅನ್ನು ಅತ್ಯಂತ ನಿಖರವಾಗಿ ಕತ್ತರಿಸಿ, ಮಾರ್ಪಡಿಸುತ್ತದೆ. ವಿಶೇಷವೆಂದರೆ, ಇದು ಯಾವುದೇ ಹೊರಗಿನ ಜೀನ್‌ಗಳನ್ನು ಸೇರಿಸದೆಯೇ, ನಮಗೆ ಬೇಕಾದ ಗುಣಲಕ್ಷಣಗಳನ್ನು ಸಸ್ಯದಲ್ಲಿ ತರುತ್ತದೆ.
ಗಾತ್ರದಲ್ಲಿ ದೊಡ್ಡದಾದ Cas9 ಮತ್ತು Cas12a ಪ್ರೋಟೀನ್‌ಗಳಿಗೆ ಹೋಲಿಸಿದರೆ, TnpB ತುಂಬಾ ಚಿಕ್ಕದಾಗಿದೆ (ಕೇವಲ 408 ಅಮೈನೋ ಆಮ್ಲಗಳು). ಆದ್ದರಿಂದ, ಇದನ್ನು ವೈರಲ್ ವಾಹಕಗಳ ಮೂಲಕ ಸಸ್ಯದ ಜೀವಕೋಶದೊಳಗೆ ಕಳುಹಿಸುವುದು ಸುಲಭ. ಇದರಿಂದ ಪ್ರಯೋಗಾಲಯದ ಸಂಕೀರ್ಣ ಅಂಗಾಂಶ ಕೃಷಿ ವಿಧಾನಗಳನ್ನು ಅವಲಂಬಿಸುವುದು ತಪ್ಪುತ್ತದೆ.
ವಂಶವಾಹಿ ತಿದ್ದುವಿಕೆ ತಂತ್ರಜ್ಞಾನ(Gene Editing Technology) ದ ಬಗ್ಗೆ:
ಇದು ಒಂದು ಜೀವಿಯ ಡಿಎನ್‌ಎ ನಲ್ಲಿ ಬದಲಾವಣೆ ಮಾಡಲು ಬಳಸುವ ತಂತ್ರಜ್ಞಾನವಾಗಿದೆ. ಇದರ ಮೂಲಕ ವಂಶವಾಹಿಯ (ಜೀನೋಮ್) ನಿರ್ದಿಷ್ಟ ಭಾಗಗಳಲ್ಲಿ ಆನುವಂಶಿಕ ಅಂಶಗಳನ್ನು ಸೇರಿಸಬಹುದು, ತೆಗೆದುಹಾಕಬಹುದು ಅಥವಾ ಮಾರ್ಪಡಿಸಬಹುದಾಗಿದೆ.
ಕ್ರಿಸ್ಪರ್-ಕ್ಯಾಸ್ 9 ತಂತ್ರಜ್ಞಾನ (CRISPR Cas9 Technology) ದ ಬಗ್ಗೆ:
ಸಂಕ್ಷಿಪ್ತ ರೂಪ: ಕ್ಲಸ್ಟರ್ಡ್ ರೆಗ್ಯುಲರ್ಲಿ ಇಂಟರ್‌ಸ್ಪೇಸ್ಡ್ ಶಾರ್ಟ್ ಪ್ಯಾಲಿಂಡ್ರೊಮಿಕ್ ರಿಪೀಟ್ಸ್ (Clustered Regularly Interspaced Short Palindromic Repeats).
ಮಹತ್ವ: ಈ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಬಳಸಿ, ವಿಜ್ಞಾನಿಗಳು ಜೀವಿಗಳ ಡಿಎನ್‌ಎಯಲ್ಲಿ ಬೇಕಾದ ಬದಲಾವಣೆಗಳನ್ನು ಮಾಡಬಹುದು.
ಇದರಲ್ಲಿರುವ ‘ಕ್ಯಾಸ್ 9 (Cas9)’ ಎಂಬ ಕಿಣ್ವವು ಒಂದು ಅಣು ಕತ್ತರಿಯಂತೆ ಕೆಲಸ ಮಾಡುತ್ತದೆ. ಎಲ್ಲಿ ಕತ್ತರಿಸಬೇಕು ಎಂಬುದನ್ನು, ನಿರ್ದಿಷ್ಟ ಡಿಎನ್‌ಎ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ಸಿದ್ಧಪಡಿಸಿದ ಆರ್‌ಎನ್‌ಎ (RNA) ಅಣುಗಳು ತೋರಿಸಿಕೊಡುತ್ತವೆ.
ವಂಶವಾಹಿ ತಿದ್ದುವಿಕೆ (ಜಿನೋಮ್ ಎಡಿಟಿಂಗ್): ಇದು ಜೀವಿಯೊಂದರ ಜೀನೋಮ್‌ನಲ್ಲಿರುವ ಜೀನ್ (ವಂಶವಾಹಿ) ಗಳನ್ನೇ ತಿದ್ದುಪಡಿ ಮಾಡುವುದಾಗಿದೆ. ಇದರಲ್ಲಿ ಹೊರಗಿನ ಯಾವುದೇ ವಿದೇಶಿ ವಂಶವಾಹಿಗಳನ್ನು ಸೇರಿಸುವುದಿಲ್ಲ; ಬದಲಿಗೆ ನಮಗೆ ಬೇಕಾದ ಬದಲಾವಣೆಗಳನ್ನು ಅಸ್ತಿತ್ವದಲ್ಲಿರುವ ವಂಶವಾಹಿಗಳಲ್ಲೇ ಮಾಡಲಾಗುತ್ತದೆ.
ಕುಲಾಂತರಿ (ಜನಟಿಕಲಿ ಮೋಡಿಫೈಡ್): ಇದರಲ್ಲಿ ಒಂದು ಜೀವಿಗೆ ಹೊಸ ಗುಣವನ್ನು ನೀಡಲು, ಅದಕ್ಕೆ ಸಂಬಂಧವಿಲ್ಲದ ಬೇರೊಂದು ಜೀವಿಯ ವಿದೇಶಿ ಜೀನ್‌ಗಳನ್ನು ತಂದು ಸೇರಿಸಲಾಗುತ್ತದೆ.
ನಿಯಂತ್ರಕ ಸಂಸ್ಥೆಗಳು:
ಜನಟಿಕ್ ಇಂಜಿನಿಯರಿಂಗ್ ಅಪ್ಪರೈಸಲ್ ಸಮಿತಿ (GEAC): ಇದು ಕೇಂದ್ರ ಪರಿಸರ ಸಚಿವಾಲಯದ (MoEFCC) ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ನಿಯಂತ್ರಕ ಸಂಸ್ಥೆಯಾಗಿದೆ. ಕುಲಾಂತರಿ ಜೀವಿಗಳನ್ನು (GMOs) ಪರಿಶೀಲಿಸುವುದು ಮತ್ತು ಅವುಗಳಿಗೆ ಅನುಮತಿ ನೀಡುವುದು ಇದರ ಕಾರ್ಯವಾಗಿದೆ.
ಜೈವಿಕ ಸುರಕ್ಷತೆಗಾಗಿ ಕಾರ್ಟಜೆನಾ ಶಿಷ್ಟಾಚಾರ (Cartagena Protocol on Biosafety): ಇದು ಜೀವವೈವಿಧ್ಯತೆಯ ಸಂರಕ್ಷಣೆಗಿರುವ ಒಂದು ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಕುಲಾಂತರಿ ಜೀವಿಗಳಿಂದ (GMOs) ಪರಿಸರಕ್ಕೆ ಹಾನಿಯಾಗದಂತೆ ಅವುಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದನ್ನು ಇದು ಖಚಿತಪಡಿಸುತ್ತದೆ.
ನಗೋಯಾ-ಕೌಲಾಲಂಪುರ (Nagoya-Kuala Lumpur): ಇದು ಕಾರ್ಟಜೆನಾ ಶಿಷ್ಟಾಚಾರಕ್ಕೆ ಸೇರಿಸಲಾದ ಒಂದು ಹೆಚ್ಚುವರಿ ಒಪ್ಪಂದವಾಗಿದೆ. ಒಂದು ವೇಳೆ ಕುಲಾಂತರಿ ಜೀವಿಗಳಿಂದ ಹಾನಿ ಸಂಭವಿಸಿದರೆ, ಅದಕ್ಕೆ ಯಾರು ಹೊಣೆ ಮತ್ತು ಅದಕ್ಕೆ ಏನು ಪರಿಹಾರ ಎಂಬುದನ್ನು ಇದು ನಿರ್ಧರಿಸುತ್ತದೆ.
ಭಾರತವು ಏಷ್ಯಾ ಪ್ರದೇಶಕ್ಕಾಗಿ ಕೋಡೆಕ್ಸ್ ಅಲಿಮೆಂಟೇರಿಯಸ್ ಆಯೋಗದ ಕಾರ್ಯಕಾರಿ ಸಮಿತಿಗೆ 2027ರ CAC50 (50ನೇ ಅಧಿವೇಶನ) ಮುಕ್ತಾಯದವರೆಗೆ ಮರುಚುನಾಯಿತವಾಗಿದೆ.
ಕೋಡೆಕ್ಸ್ ಅಲಿಮೆಂಟರಿಯಸ್ ಆಯೋಗ (CAC) ದ ಬಗ್ಗೆ:
ಸ್ಥಾಪನೆ: 1963 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ ಸ್ಥಾಪಿಸಿದವು.
ಉದ್ದೇಶ: ಗ್ರಾಹಕರ ಆರೋಗ್ಯವನ್ನು ರಕ್ಷಿಸುವುದು ಮತ್ತು ಆಹಾರ ವ್ಯಾಪಾರದಲ್ಲಿ ನ್ಯಾಯಯುತ ಅಭ್ಯಾಸಗಳನ್ನು ಉತ್ತೇಜಿಸುವುದು.
ಸದಸ್ಯರು: ಯುರೋಪಿಯನ್ ಒಕ್ಕೂಟವೂ ಸೇರಿದಂತೆ ಒಟ್ಟು 189 ದೇಶಗಳು.
ಸಭೆಗಳು: ವಾರ್ಷಿಕ ಅಧಿವೇಶನಗಳು ಜಿನೇವಾ ಮತ್ತು ರೋಮ್ ನಡುವೆ ಪರ್ಯಾಯವಾಗಿ ನಡೆಯುತ್ತವೆ.
ಜಲ ಆಯವ್ಯಯ (Water Budgeting)
ಪಠ್ಯಕ್ರಮ: ಜಿ.ಎಸ್-3/ ಕೃಷಿ
ಸಂದರ್ಭ:
ಸ್ಥಳೀಯ ಜಲ ಭದ್ರತೆಯನ್ನು ಹೆಚ್ಚಿಸಲು ಮಹತ್ವಾಕಾಂಕ್ಷಿ ವಲಯಗಳಲ್ಲಿ (Aspiration Blocks) ಜಲ ಆಯವ್ಯಯದ ಕುರಿತು ನೀತಿ ಆಯೋಗವು ವರದಿಯನ್ನು ಬಿಡುಗಡೆ ಮಾಡಿದೆ.
ಜಲ ಆಯವ್ಯಯ (ವಾಟರ್ ಬಜೆಟಿಂಗ್) ಬಗ್ಗೆ:
ವ್ಯಾಖ್ಯಾನ: ಕೃಷಿ, ಮನೆಬಳಕೆ, ಜಾನುವಾರು, ಕೈಗಾರಿಕೆ ಮತ್ತು ಪರಿಸರ ವ್ಯವಸ್ಥೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ನೀರಿನ ಲಭ್ಯತೆ ಮತ್ತು ನೀರಿನ ಬೇಡಿಕೆಯನ್ನು ವ್ಯವಸ್ಥಿತವಾಗಿ ಅಂದಾಜು ಮಾಡುವುದಾಗಿದೆ.
ಇದು ಸುಸ್ಥಿರ ಅಭಿವೃದ್ಧಿ ಗುರಿ – SDG 6 (ಶುದ್ಧ ನೀರು ಮತ್ತು ನೈರ್ಮಲ್ಯ) ಮತ್ತು ನೀರಿನ ಬಳಕೆಯ ದಕ್ಷತೆಯ ಕಡೆಗಿನ ರಾಷ್ಟ್ರೀಯ ಪ್ರಯತ್ನಗಳಿಗೆ ನೇರವಾಗಿ ಬೆಂಬಲ ನೀಡುತ್ತದೆ.
ಮಹತ್ವ: ಜಲ ಜೀವನ್ ಮಿಷನ್, ಜಲ ಶಕ್ತಿ ಅಭಿಯಾನ ಮತ್ತು ಅಟಲ್ ಭೂಜಲ ಯೋಜನೆಯಡಿ ವಿಕೇಂದ್ರೀಕೃತ ಯೋಜನೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ.
ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ
ಪಠ್ಯಕ್ರಮ: ಇತರೆ
ಸಂದರ್ಭ:
ಚಿಲಿ ದೇಶದ ಮಾಜಿ ರಾಷ್ಟ್ರಪತಿಯಾದ ಮಿಚೆಲ್ ಬ್ಯಾಚೆಲೆಟ್ ಅವರು 2024ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಯ ಬಗ್ಗೆ:
ಇದು ಭಾರತದಲ್ಲಿನ ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಸ್ಥಾಪಿಸಿದ ವಾರ್ಷಿಕವಾಗಿ ನೀಡುವ ಪ್ರಶಸ್ತಿಯಾಗಿದೆ.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಗೌರವಾರ್ಥ ಪ್ರಶಸ್ತಿಗೆ ಈ ಹೆಸರನ್ನು ಇಡಲಾಗಿದೆ.
ಇದನ್ನು 1986ರಲ್ಲಿ ಸ್ಥಾಪಿಸಲಾಯಿತು.
ಪ್ರಶಸ್ತಿ ಮೊತ್ತ: ಇತ್ತೀಚೆಗೆ ಈ ಪ್ರಶಸ್ತಿಯ ನಗದು ಮೊತ್ತವನ್ನು ₹25 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದೆ.
ಉದ್ದೇಶ: ಅಂತರರಾಷ್ಟ್ರೀಯ ಶಾಂತಿ, ನಿಶ್ಶಸ್ತ್ರೀಕರಣ, ಅಭಿವೃದ್ಧಿ, ನೂತನ ಅಂತರರಾಷ್ಟ್ರೀಯ ಆರ್ಥಿಕ ಕ್ರಮಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಸಾಮಾನ್ಯವಾಗಿ, ಇಂದಿರಾ ಗಾಂಧಿಯವರ ಜನ್ಮದಿನವಾದ ನವೆಂಬರ್ 19 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಪ್ರಶಸ್ತಿಯನ್ನು ಮೂರು ಕ್ಷೇತ್ರಗಳಲ್ಲಿ ನೀಡಲಾಗುತ್ತದೆ:
ಶಾಂತಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಹಾಗೂ ಅದನ್ನು ಕಾಪಾಡುವ ನಿಟ್ಟಿನಲ್ಲಿ ನಡೆಸಲಾದ ಮಹತ್ವದ ಪ್ರಯತ್ನಗಳನ್ನು ಇದು ಗುರುತಿಸುತ್ತದೆ.
ನಿಶ್ಯಸ್ತ್ರೀಕರಣ: ಪರಮಾಣು ಅಸ್ತ್ರಗಳು ಸೇರಿದಂತೆ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಕಡಿತ ಮತ್ತು ಅವುಗಳ ಸಂಪೂರ್ಣ ನಿರ್ಮೂಲನೆಗೆ ನೀಡಿದ ಕೊಡುಗೆಗಳನ್ನು ಈ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.
ಅಭಿವೃದ್ಧಿ: ಜಾಗತಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಬಡತನ ನಿರ್ಮೂಲನೆಗೆ ಸಹಕರಿಸುವ ಕಾರ್ಯಗಳನ್ನು ಇದು ಗೌರವಿಸುತ್ತದೆ.
ಎಎಂಆರ್ 2.0 ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ ಬಿಡುಗಡೆ ಮಾಡಲಾಗಿದೆ
ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ ಸಂಬಂಧಿತ ವಿಷಯಗಳು
ಸಂದರ್ಭ:
ಇತ್ತೀಚೆಗೆ, ಕೇಂದ್ರ ಆರೋಗ್ಯ ಸಚಿವರುಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆಯ ಎರಡನೇ ಆವೃತ್ತಿಯನ್ನು (NAP – AMR, 2025–29) ಬಿಡುಗಡೆ ಮಾಡಿದರು.
ಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ 2.0 ದ ಬಗ್ಗೆ:
ಇದು ಎನ್‌ಎಪಿ-ಎಎಂಆರ್ 1.0 (2017–2021) ರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುತ್ತದೆ. ಇದರಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು, ಸಾರ್ವಜನಿಕ ಜಾಗೃತಿಯನ್ನು ವಿಸ್ತರಿಸುವುದು, ಖಾಸಗಿ ವಲಯದ ಸಹಭಾಗಿತ್ವವನ್ನು ಹೆಚ್ಚಿಸುವುದು ಮತ್ತು ನಿಯಂತ್ರಣ ಹಾಗೂ ಪ್ರಯೋಗಾಲಯಗಳ ಸಾಮರ್ಥ್ಯವನ್ನು ಸುಧಾರಿಸುವುದು ಸೇರಿದಂತೆ ಅನೇಕ ಅಂಶಗಳು ಸೇರಿವೆ.
ಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಕುರಿತ:
ವ್ಯಾಖ್ಯಾನ: ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿ ಜೀವಿಗಳು ಕಾಲಕ್ರಮೇಣ ಬದಲಾವಣೆಗೆ ಒಳಗಾಗಿ, ಔಷಧಿಗಳಿಗೆ ಸ್ಪಂದಿಸುವುದನ್ನು ನಿಲ್ಲಿಸಿದಾಗ ಈ ಸ್ಥಿತಿ ಉಂಟಾಗುತ್ತದೆ. ಇದರಿಂದ ಸೋಂಕಿನ ಚಿಕಿತ್ಸೆ ಕಷ್ಟಕರವಾಗುತ್ತದೆ ಹಾಗೂ ರೋಗ ಹರಡುವಿಕೆ, ತೀವ್ರ ಅನಾರೋಗ್ಯ ಮತ್ತು ಸಾವಿನ ಅಪಾಯ ಹೆಚ್ಚಾಗುತ್ತದೆ.
ಪ್ರತಿ ವರ್ಷ ಸುಮಾರು 700,000 ಜನರು ಎಎಂಆರ್ (AMR) ನಿಂದ ಸಾವನ್ನಪ್ಪುತ್ತಿದ್ದಾರೆ. 2050 ರ ಹೊತ್ತಿಗೆ ಈ ಸಂಖ್ಯೆ 1 ಕೋಟಿಗೆ ಏರಬಹುದು ಮತ್ತು ಜಾಗತಿಕ ಒಟ್ಟು ಆಂತರಿಕ ಉತ್ಪನ್ನದ (GDP) ಶೇಕಡಾ 3.8 ರಷ್ಟು ಈ ಸಮಸ್ಯೆಯಿಂದಲೇ ವ್ಯಾಪಿಸಬಹುದು.
ಸೂಕ್ಷ್ಮಾಣುಜೀವಿ ಪ್ರತಿರೋಧಕ್ಕೇ ಕಾರಣಗಳು:
ಪ್ರತಿಜೀವಕ ಔಷಧಿಗಳ (Antibiotics) ಅತಿಯಾದ ಮತ್ತು ದುರ್ಬಳಕೆ.
ಅಸಮರ್ಪಕ ಔಷಧದ ಪ್ರಮಾಣ ಮತ್ತು ಅವಧಿ.
ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವನೆ (ಸ್ವಯಂ-ಚಿಕಿತ್ಸೆ).
ಆಹಾರಕ್ಕಾಗಿ ಬಳಸುವ ಪ್ರಾಣಿಗಳಲ್ಲಿ ಪ್ರತಿಜೀವಕ ಔಷಧಿಗಳ ಬಳಕೆ.
ಅಸಮರ್ಪಕ ಸ್ವಚ್ಛತೆ.
ಸೂಕ್ಷ್ಮಾಣುಜೀವಿ ಪ್ರತಿರೋಧದ ವಿರುದ್ಧ ಜಾಗತಿಕ ಪ್ರಯತ್ನಗಳು:
ಸೂಕ್ಷ್ಮಾಣುಜೀವಿ ಪ್ರತಿರೋಧ(AMR) ದ ಮೇಲಿನ ಜಾಗತಿಕ ಕಾರ್ಯ ಯೋಜನೆ.
ವಿಶ್ವ ಸೂಕ್ಷ್ಮಾಣುಜೀವಿ ಪ್ರತಿರೋಧದ ಜಾಗೃತಿ ಸಪ್ತಾಹ (WAAW).
ಜಾಗತಿಕ ಸೂಕ್ಷ್ಮಾಣುಜೀವಿ ಪ್ರತಿರೋಧ ಮತ್ತು ಬಳಕೆಯ ಕಣ್ಗಾವಲು ವ್ಯವಸ್ಥೆ (GLASS).
ಜಾಗತಿಕ ಪ್ರತಿಜೀವಕ ಔಷಧಿ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆ (GARDP).
ಭಾರತದಲ್ಲಿ ಸೂಕ್ಷ್ಮಾಣುಜೀವಿ ಪ್ರತಿರೋಧದ ವಿರುದ್ಧ ತೆಗೆದುಕೊಂಡ ಕ್ರಮಗಳು:
ಸೂಕ್ಷ್ಮಾಣುಜೀವಿ ಪ್ರತಿರೋಧ (AMR) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ (NAP – AMR)
ಸೂಕ್ಷ್ಮಾಣುಜೀವಿ ಪ್ರತಿರೋಧ (AMR) ದ ಕಣ್ಗಾವಲು ಜಾಲ.
ಭಾರತದ ‘ರೆಡ್ ಲೈನ್’ ಅಭಿಯಾನ:ವೈದ್ಯರ ಚೀಟಿ ಇದ್ದರೆ ಮಾತ್ರ ಮಾರಾಟ ಮಾಡಬೇಕಾದ ಪ್ರತಿಜೀವಕ ಔಷಧಿಗಳ ಪ್ಯಾಕೆಟ್ ಮೇಲೆ ‘ಕೆಂಪು ಗೆರೆ’ಯನ್ನು ಕಡ್ಡಾಯವಾಗಿ ಮುದ್ರಿಸಬೇಕೆಂದು ಈ ಅಭಿಯಾನವು ಪ್ರತಿಪಾದಿಸುತ್ತದೆ. ಔಷಧ ಅಂಗಡಿಗಳಲ್ಲಿ ನೇರವಾಗಿ (ವೈದ್ಯರ ಸಲಹೆಯಿಲ್ಲದೆ) ಪ್ರತಿಜೀವಕ ಔಷಧಿಗಳನ್ನು ಮಾರಾಟ ಮಾಡುವುದನ್ನು ತಡೆಯಲು ಇದೊಂದು ದಿಟ್ಟ ಕ್ರಮವಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯ ಪಟ್ಟಿಯಿಂದ ಅನರ್ಹ ಫಲಾನುಭವಿಗಳ ತೆರವು
ಪಠ್ಯಕ್ರಮ: ಜಿ.ಎಸ್-3/ ಆಹಾರ ಭದ್ರತೆ
ಸಂದರ್ಭ:
ಕಳೆದ ನಾಲ್ಕೈದು ತಿಂಗಳುಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯ ಅಡಿಯಲ್ಲಿ ಉಚಿತ ಮಾಸಿಕ ಪಡಿತರ ಯೋಜನೆಯಿಂದ ಸುಮಾರು 2.25 ಕೋಟಿ ಅನರ್ಹ ಫಲಾನುಭವಿಗಳನ್ನು ಕೇಂದ್ರ ಸರ್ಕಾರವು ತೆಗೆದುಹಾಕಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA), 2013 ರ ಬಗ್ಗೆ:
ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಬರುವ “ಜೀವಿಸುವ ಹಕ್ಕಿ”ನ ಅಡಿಯಲ್ಲಿ “ಆಹಾರದ ಹಕ್ಕು” ಅಂತರ್ಗತವಾಗಿದೆ.
ಗುರಿ:ಇದು ಭಾರತದ ಜನಸಂಖ್ಯೆಯ ಹೆಚ್ಚಿನ ವರ್ಗಕ್ಕೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವುದು.
2011 ರ ಜನಗಣತಿ ದತ್ತಾಂಶದ ಆಧಾರದ ಮೇಲೆ, ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ (TPDS) ಅಡಿಯಲ್ಲಿ ಇದು ಸರಿಸುಮಾರು 81.35 ಕೋಟಿ ಜನರಿಗೆ ನೆರವಾಗಿದೆ.
ಇಷ್ಟು ಫಲಾನುಭವಿಗಳನ್ನು ಒಳಗೊಂಡಿದೆ:
ಗ್ರಾಮೀಣ ಜನಸಂಖ್ಯೆಯ 75% ರಷ್ಟು.
ನಗರ ಜನಸಂಖ್ಯೆಯ 50% ರಷ್ಟು.
ಫಲಾನುಭವಿಗಳ ವರ್ಗಗಳು: ಈ ಕಾಯ್ದೆಯು ಫಲಾನುಭವಿಗಳನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸುತ್ತದೆ, ಅವುಗಳೆಂದರೆ-
ಅಂತ್ಯೋದಯ ಅನ್ನ ಯೋಜನೆ (AAY) ಕುಟುಂಬಗಳು: ಪ್ರತಿ ಕುಟುಂಬ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಆದ್ಯತಾ ಕುಟುಂಬದ (PHH) ವ್ಯಕ್ತಿಗಳು: ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಪ್ರಸ್ತುತ, ಈ ವರ್ಗಗಳ ಅಡಿಯಲ್ಲಿ ಬರುವ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯಗಳನ್ನು (ಗೋಧಿ ಮತ್ತು ಅಕ್ಕಿ) ವಿತರಿಸಲಾಗುತ್ತಿದೆ.
ವಿತರಣೆಯ ಪ್ರಮಾಣ:
ಭಾರತವು ಪ್ರಸ್ತುತ 19 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರನ್ನು ಹೊಂದಿದೆ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 5 ಲಕ್ಷ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ.
ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಬಳಸಿಕೊಳ್ಳುತ್ತದೆ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳಂತಹ (ICDS) ಯೋಜನೆಗಳನ್ನು ಸಂಯೋಜಿಸುತ್ತದೆ.
ಕೇವಲ ‘ಅರ್ಹ’ ಫಲಾನುಭವಿಗಳನ್ನು ಗುರುತಿಸುವುದು:
ಕೇವಲ ನೈಜ ಫಲಾನುಭವಿಗಳು ಅಂದರೆ, ನಿಜವಾಗಿಯೂ ಸಹಾಯದ ಅಗತ್ಯವಿರುವವರು ಮಾತ್ರ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ವಿವಿಧ ಮಾನದಂಡಗಳನ್ನು ಉಪಯೋಗಿಸಿಕೊಂಡು ಅನರ್ಹ ವ್ಯಕ್ತಿಗಳನ್ನು ಗುರುತಿಸಿ ಮತ್ತು ಪರಿಶೀಲನೆ ಹಾಗೂ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ರಾಜ್ಯ ಸರ್ಕಾರಗಳೊಂದಿಗೆ ಪಟ್ಟಿಗಳನ್ನು ಹಂಚಿಕೊಂಡಿದೆ.
ಅನರ್ಹ ಹೆಸರುಗಳನ್ನು ಗುರುತಿಸಿ ತೆಗೆದುಹಾಕಲು ಇದು ಆಧಾರ್-ಆಧಾರಿತ ಪರಿಶೀಲನೆಯನ್ನು ಬಳಸಿದೆ.
ಪಟ್ಟಿಯಿಂದ ಹೆಸರುಗಳನ್ನುತೆಗೆದುಹಾಕಲು ಪ್ರಮುಖ ಕಾರಣಗಳು:
ನಾಲ್ಕು ಚಕ್ರದ ವಾಹನಗಳ ಒಡೆತನ ಹೊಂದಿದ್ದರೆ.
ಅರ್ಹತೆ ಮಿತಿ ಮೀರಿ ಹೆಚ್ಚಿನ ಆದಾಯ ಹೊಂದಿದ್ದರೆ.
ಕಂಪನಿಯ ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದರೆ.
ಮೃತಪಟ್ಟ ಫಲಾನುಭವಿಗಳು.
ಪರಿಷ್ಕೃತ “ಉಡಾನ್” (UDAN) ಪ್ರಾದೇಶಿಕ ವಾಯು ಸಂಪರ್ಕ ಯೋಜನೆ
ಪಠ್ಯಕ್ರಮ: ಜಿ.ಎಸ್-3/ ಆರ್ಥಿಕತೆ
ಸಂದರ್ಭ:
ಪರಿಷ್ಕೃತ ಉಡಾನ್ (UDAN) ಪ್ರಾದೇಶಿಕ ವಾಯು ಸಂಪರ್ಕ ಯೋಜನೆಯನ್ನು ಏಪ್ರಿಲ್ 2027 ರ ನಂತರವೂ ವಿಸ್ತರಿಸಲು ಕೇಂದ್ರ ಸರ್ಕಾರವು 30,000 ಕೋಟಿ ರೂಪಾಯಿಗಳ ವೆಚ್ಚವನ್ನು ಪ್ರಸ್ತಾಪಿಸಿದೆ.
ಇದರಲ್ಲಿ, ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 18,000 ಕೋಟಿ ರೂ.ಗಳನ್ನು ಮತ್ತು ಸೇವೆ ಲಭ್ಯವಿಲ್ಲದ ಪ್ರದೇಶಗಳನ್ನು ಸಂಪರ್ಕಿಸುವ ವಿಮಾನಯಾನ ಸಂಸ್ಥೆಗಳನ್ನು ಬೆಂಬಲಿಸಲು “ಲಾಭದಾಯಕತೆಯ ಅಂತರದ ಧನಸಹಾಯ” (ವಯಬಿಲಿಟಿ ಗ್ಯಾಪ್ ಫಂಡಿಂಗ್ -VGF) ಕ್ಕಾಗಿ 12,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಉಡಾನ್ ಯೋಜನೆಯ ಬಗ್ಗೆ:
ಇದು 2016 ರಲ್ಲಿ ಪ್ರಾರಂಭಿಸಲಾದ ಪ್ರಾದೇಶಿಕ ಸಂಪರ್ಕ ಯೋಜನೆಯಾಗಿದೆ.
ಮೊದಲ ಉಡಾನ್ ವಿಮಾನವು 2017 ರಲ್ಲಿ ಶಿಮ್ಲಾ ಮತ್ತು ದೆಹಲಿ ನಡುವೆ ಹಾರಾಟ ನಡೆಸಿತು.
ಸಚಿವಾಲಯ: ನಾಗರಿಕ ವಿಮಾನಯಾನ ಸಚಿವಾಲಯ.
ಗುರಿ:ಎರಡನೇ (Tier-2) ಮತ್ತು ಮೂರನೇ ಸ್ತರದ (Tier-3) ನಗರಗಳನ್ನು ಪ್ರಮುಖ ಕೇಂದ್ರಗಳಿಗೆ ಸಂಪರ್ಕಿಸುವ ಮೂಲಕ ಸಾಮಾನ್ಯ ನಾಗರಿಕರಿಗೆ ವಿಮಾನ ಪ್ರಯಾಣವನ್ನು ಕೈಗೆಟುಕುವ ಮತ್ತು ಸುಲಭವಾಗಿ ಸಿಗುವಂತೆ ಮಾಡುವುದು.
ಅನುಷ್ಠಾನ :
“ಲಾಭದಾಯಕತೆಯ ಅಂತರದ ಧನಸಹಾಯ” (ವಯಬಿಲಿಟಿ ಗ್ಯಾಪ್ ಫಂಡಿಂಗ್ -VGF): ಇದು ಕೈಗೆಟುಕುವ ದರಗಳನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ನೀಡುವ ಆರ್ಥಿಕ ಬೆಂಬಲವಾಗಿದೆ.
ದರಗಳು ಕೈಗೆಟುಕುವಂತೆ ನೋಡಿಕೊಳ್ಳಲು ವಿಮಾನ ಪ್ರಯಾಣ ದರಗಳ ಮೇಲೆ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.