ಟಾಟಾ ಟ್ರಾನ್ಸ್‌ಫಾರ್ಮೇಷನ್ (ಪರಿವರ್ತನಾ) ಪ್ರಶಸ್ತಿ, 2025
ಇದೀಗ ಸುದ್ದಿಯಲ್ಲಿದೆ:
ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಟಾಟಾ ಸನ್ಸ್ ಸಂಸ್ಥೆಗಳು ಜಂಟಿಯಾಗಿ, 2025ನೇ ಸಾಲಿನ ಪ್ರತಿಷ್ಠಿತ ‘ಟಾಟಾ ಟ್ರಾನ್ಸ್‌ಫಾರ್ಮೇಷನ್ ಪ್ರಶಸ್ತಿ’ಗೆ ಬೆಂಗಳೂರು ಮೂಲದ ಮೂವರು ವಿಜ್ಞಾನಿಗಳನ್ನು ವಿಜೇತರನ್ನಾಗಿ ಘೋಷಿಸಿವೆ.
ಪ್ರಶಸ್ತಿ ವಿಜೇತರು ಮತ್ತು ಅವರ ಕ್ಷೇತ್ರಗಳು:
ಪಡುಬಿದ್ರಿ ವಿ. ಶಿವಪ್ರಸಾದ್: ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS).
ಬಾಲಸುಬ್ರಮಣಿಯನ್ ಗೋಪಾಲ್: ಭಾರತೀಯ ವಿಜ್ಞಾನ ಸಂಸ್ಥೆ (IISc). ಇವರು ಆಹಾರ ಭದ್ರತೆಯಲ್ಲಿನ ಸಂಶೋಧನೆಗಾಗಿ ಆಯ್ಕೆಯಾಗಿದ್ದಾರೆ.
ಅಂಬರೀಶ್ ಘೋಷ್: ಇವರು ಸುಸ್ಥಿರತೆ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆ ಮತ್ತು ಪ್ರಶಸ್ತಿ ವಿವರ
ಆಯ್ಕೆ: ದೇಶದ 27 ರಾಜ್ಯಗಳಿಂದ ಸಲ್ಲಿಕೆಯಾಗಿದ್ದ 212 ನಾಮನಿರ್ದೇಶನಗಳನ್ನು ಪರಿಶೀಲಿಸಿ, ವಿಜ್ಞಾನಿಗಳು, ವೈದ್ಯರು, ತಂತ್ರಜ್ಞರು ಮತ್ತು ಇಂಜಿನಿಯರ್‌ಗಳನ್ನೊಳಗೊಂಡ ಅಂತರರಾಷ್ಟ್ರೀಯ ತೀರ್ಪುಗಾರರ ಮಂಡಳಿಯು ಈ ವಿಜೇತರನ್ನು ಅಂತಿಮಗೊಳಿಸಿದೆ.
ಬಹುಮಾನ: ಪ್ರತಿಯೊಬ್ಬ ವಿಜೇತರಿಗೆ ತಮ್ಮ ಸಂಶೋಧನೆಯನ್ನು ಮುಂದುವರಿಸಲು ಮತ್ತು ಅದರ ನೈಜ ಪರಿಣಾಮವನ್ನು ವಿಸ್ತರಿಸಲು ತಲಾ ₹2 ಕೋಟಿ ಅನುದಾನವನ್ನು ನೀಡಲಾಗುತ್ತದೆ.
ಅಮೇರಿಕಾದ ರಾಜ್ಯ ಇಲಾಖೆಯು ಭಾರತಕ್ಕೆ 93 ದಶಲಕ್ಷ ಡಾಲರ್ ಮೌಲ್ಯದ ಎಫ್‌ಜಿಎಂ-148 ಜಾವೆಲಿನ್ ಟ್ಯಾಂಕ್ ವಿರೋಧಿ ಕ್ಷಿಪಣಿ ವ್ಯವಸ್ಥೆಯ ಮಾರಾಟಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದೆ.
ಎಫ್‌ಜಿಎಂ-148 ಜಾವೆಲಿನ್ ಟ್ಯಾಂಕ್ ವಿರೋಧಿ ಕ್ಷಿಪಣಿ ವ್ಯವಸ್ಥೆಯ ಬಗ್ಗೆ:
ಇದು ಅತ್ಯಾಧುನಿಕ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ವ್ಯವಸ್ಥೆಯಾಗಿದೆ (ATGM).
ಇದು ಒಬ್ಬನೇ ಸೈನಿಕನಿಂದ ಹೊತ್ತೋಯ್ಯಬಲ್ಲ ಮಧ್ಯಮ ಶ್ರೇಣಿಯ, “ಪ್ರಯೋಗಿಸಿ ಮತ್ತು ಮರೆತುಬಿಡಿ” ತತ್ವದ ಮೇಲೆ ಕಾರ್ಯನಿರ್ವಹಿಸುವ (ಅಂದರೆ, ಒಮ್ಮೆ ಗುರಿ ಇಟ್ಟು ಉಡಾಯಿಸಿದ ನಂತರ, ಅದು ತನ್ನಷ್ಟಕ್ಕೇ ಗುರಿಯನ್ನು ತಲುಪುತ್ತದೆ) ಅಸ್ತ್ರವಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಎಲ್ಲಾ ಬಗೆಯ ರಕ್ಷಾ ಕವಚಗಳನ್ನು ಭೇದಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಸೇನಾ ಸಮರಾಭ್ಯಾಸಗಳ ಬಗ್ಗೆ:
ಯುದ್ಧ ಅಭ್ಯಾಸ: ಭೂಸೇನೆಗಳ ನಡುವಿನ ಸಮರಾಭ್ಯಾಸ.
ಮಲಬಾರ್: ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನೊಳಗೊಂಡ ನೌಕಾಪಡೆಯ ಕ್ವಾಡ್ ಒಕ್ಕೂಟದ ಸಮರಾಭ್ಯಾಸ.
ಕೋಪ್ ಇಂಡಿಯಾ: ವಾಯುಪಡೆಯ ಸಮರಾಭ್ಯಾಸ.
ಟೈಗರ್ ಟ್ರಯಂಫ್: ಮೂರು ಸೇನೆ (ಭೂ, ಜಲ, ವಾಯು) ಗಳ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಸಮರಾಭ್ಯಾಸ.
ವಜ್ರ ಪ್ರಹಾರ: ವಿಶೇಷ ಪಡೆಗಳ ಸಮರಾಭ್ಯಾಸ.
ತಪ್ಪು ದಾರಿಗೆ ಎಳೆಯುವ ಒಆರ್‌ಎಸ್ (ORS) ಗುರುತು ಪಟ್ಟಿ ಹೊಂದಿರುವ ಪಾನೀಯಗಳನ್ನು ತಕ್ಷಣವೇ ತೆಗೆದುಹಾಕುವಂತೆ FSSAI ಆದೇಶಿಸಿದೆ
ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
ಹಣ್ಣಿನ ಆಧಾರಿತ ಪಾನೀಯಗಳು, ಕುಡಿಯಲು ಸಿದ್ಧವಿರುವ ಪಾನೀಯಗಳು, ಶಕ್ತಿವರ್ಧಕ ಪಾನೀಯಗಳು, ವಿದ್ಯುತ್ಲವಣ (ಎಲೆಕ್ಟ್ರೋಲೈಟ್) ಪಾನೀಯಗಳು ಮತ್ತು ಇದೇ ಮಾದರಿಯ ಇತರೆ ಉತ್ಪನ್ನಗಳನ್ನು ‘ಒಆರ್‌ಎಸ್’ (ORS) ಎಂಬ ಹೆಸರಿನಲ್ಲಿ ತಪ್ಪಾಗಿ ಮಾರಾಟ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಅಂತಹ ಸರಕುಗಳನ್ನು ಮಾರುಕಟ್ಟೆಯಿಂದ ತೆರವುಗೊಳಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರವು (FSSAI) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಮೌಖಿಕ ಪುನರ್ಜಲೀಕರಣ ಲವಣ (ORS – Oral Rehydration Salts) ದ ಬಗ್ಗೆ:
ಇದನ್ನು “ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಸಂಸ್ಥೆಯ ಮಕ್ಕಳ ನಿಧಿ” (UNICEF) ಶಿಫಾರಸು ಮಾಡಿದ ಲವಣಗಳ ಮಿಶ್ರಣದ ಪ್ಯಾಕೆಟ್‌ಗಳಾಗಿವೆ. ಇವುಗಳನ್ನು ಶುದ್ಧ ನೀರಿನಲ್ಲಿ ಕರಗಿಸಿ “ಮೌಖಿಕ ಪುನರ್ಜಲೀಕರಣ ದ್ರಾವಣ” (ORS) ವನ್ನಾಗಿತಯಾರಿಸಲಾಗುತ್ತದೆ.
ಉದ್ದೇಶ:- ಎಲ್ಲಾ ವಯಸ್ಸಿನವರಲ್ಲಿ ಕಾಲರಾ ಸೇರಿದಂತೆ, ತೀವ್ರ ಅತಿಸಾರದಿಂದ ಉಂಟಾಗುವ ನಿರ್ಜಲೀಕರಣವನ್ನು (ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು) ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
ಒಆರ್‌ಎಸ್ ಸಂಯೋಜನೆಯು ನಿರ್ದಿಷ್ಟ ಪ್ರಮಾಣದಲ್ಲಿ ಸೋಡಿಯಂ ಕ್ಲೋರೈಡ್, ನಿರ್ಜಲೀಕೃತ ಗ್ಲೂಕೋಸ್, ಪೊಟ್ಯಾಸಿಯಮ್ ಕ್ಲೋರೈಡ್ ಮತ್ತು ಟ್ರೈಸೋಡಿಯಂ ಸಿಟ್ರೇಟ್ ಡೈಹೈಡ್ರೇಟ್‌ಗಳನ್ನು ಒಳಗೊಂಡಿರುತ್ತದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ದ ಕುರಿತು:
ಸ್ಥಾಪನೆ: 2006ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಅಡಿಯಲ್ಲಿ 2011ರಲ್ಲಿ ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆಯಾಗಿದೆ.
ಕಾರ್ಯವ್ಯಾಪ್ತಿ: ಇದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಉದ್ದೇಶ: ಭಾರತದಲ್ಲಿ ಆಹಾರ ಸುರಕ್ಷತೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಶಾಸನಬದ್ಧ ಸಂಸ್ಥೆಯಾಗಿದೆ.
ಪ್ರಧಾನ ಕಚೇರಿ: ನವದೆಹಲಿ.
FSSAI ನ ಪ್ರಮುಖ ಉಪಕ್ರಮಗಳು:
ಈಟ್ ರೈಟ್ ಮೂವ್‌ಮೆಂಟ್ ಅಭಿಯಾನ: ಎಲ್ಲಾ ಭಾರತೀಯರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಸುಸ್ಥಿರ ಆಹಾರವನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
ಕ್ಲೀನ್ ಸ್ಟ್ರೀಟ್ ಫುಡ್: ಬೀದಿ ಬದಿಯ ಆಹಾರ ಮಾರಾಟಗಾರರಿಗೆ ತರಬೇತಿ ನೀಡುವುದು ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಉಲ್ಲಂಘನೆಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು.
ಡಯಟ್ ಫಾರ್ ಲೈಫ್ (Diet4Life): ವಿವಿಧ ರೀತಿಯ ಚಯಾಪಚಯ ಅಸ್ವಸ್ಥತೆ ಮತ್ತು ಅವುಗಳನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವುದು.
ಆಹಾರ ಉಳಿಸಿ, ಆಹಾರ ಹಂಚಿ, ಸಂತೋಷ ಹಂಚಿ (Save Food, Share Food, Share Joy): ಆಹಾರ ವ್ಯರ್ಥವಾಗುವುದನ್ನು ತಡೆಯಲು ಮತ್ತು ಆಹಾರ ದಾನವನ್ನು ಉತ್ತೇಜಿಸಲು ಜನರನ್ನು ಪ್ರೇರೇಪಿಸುವುದು.
ಹಾರ್ಟ್ ಅಟ್ಯಾಕ್ ರಿವೈಂಡ್: ಇದು 2022ರ ವೇಳೆಗೆ ಭಾರತದಲ್ಲಿ ಟ್ರಾನ್ಸ್ ಫ್ಯಾಟ್ (ಕೆಟ್ಟ ಕೊಬ್ಬು) ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಬೆಂಬಲಿಸಲು ನಡೆಸಿದ ಸಮೂಹ ಮಾಧ್ಯಮ ಅಭಿಯಾನವಾಗಿದೆ.
ಜಂಟಿ ಸಾಲದ ಕಾರ್ಯವಿಧಾನ (JCM)
ಪಠ್ಯಕ್ರಮ: ಜಿ.ಎಸ್-3/ ಪರಿಸರ ಅಧ್ಯಾಯನ
ಸಂದರ್ಭ
‘ಬ್ರೆಜಿಲ್’ನ ‘ಬೆಲೆಮ್’ನಲ್ಲಿ ನಡೆಯಲಿರುವ COP30 ಶೃಂಗಸಭೆಯಲ್ಲಿ, ನ್ಯಾಯಯುತ ಮತ್ತು ತಂತ್ರಜ್ಞಾನ ಚಾಲಿತ ಹವಾಮಾನ ಪ್ರಕ್ರಿಯೆಯನ್ನು ವಿಸ್ತರಿಸಲು “ಜಂಟಿ ಸಾಲದ ಕಾರ್ಯವಿಧಾನ” (JCM) ಪ್ರಮುಖ ಸಾಧನವಾಗಿದೆ ಎಂದು ಭಾರತ ಬಣ್ಣಿಸಿದೆ.
ಜಂಟಿ ಸಾಲದ ಕಾರ್ಯವಿಧಾನ (ಜಾಯಿಂಟ್ ಕ್ರೆಡಿಟಿಂಗ್ ಮೆಕ್ಯಾನಿಸಮ್ – JCM) ಯ ಬಗ್ಗೆ:
ಇದು ಒಂದು ದ್ವಿಪಕ್ಷೀಯ ಉಪಕ್ರಮವಾಗಿದ್ದು, ಇದರ ಅಡಿಯಲ್ಲಿ ಭಾರತದಂತಹ ಪಾಲುದಾರ ರಾಷ್ಟ್ರವು ಜಪಾನ್‌ನೊಂದಿಗೆ ಸಹಕರಿಸಿ ಕಡಿಮೆ ಇಂಗಾಲದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಅದಕ್ಕೆ ಪ್ರತಿಯಾಗಿ ಇಂಗಾಲದ ಕ್ರೆಡಿಟ್‌ಗಳನ್ನು (ಕಾರ್ಬನ್ ಕ್ರೆಡಿಟ್ಸ್) ಪಡೆಯಲು ಅವಕಾಶವಿದೆ.
ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಯೋಜನೆಗಳಿಂದ ಉತ್ಪತ್ತಿಯಾಗುವ ಈ ‘ಕ್ರೆಡಿಟ್’ಗಳನ್ನು (ಸಾಲದ ಅಂಕಗಳನ್ನು), ಎರಡೂ ದೇಶಗಳು ತಮ್ಮ ರಾಷ್ಟ್ರೀಯ ಹವಾಮಾನ ಗುರಿಗಳನ್ನು ತಲುಪಲು ಬಳಸಿಕೊಳ್ಳಬಹುದು.
ಇದು, ತಂತ್ರಜ್ಞಾನ ವರ್ಗಾವಣೆ ಮತ್ತು ಹಸಿರು ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ಸುಗಮಗೊಳಿಸುತ್ತದೆ ಹಾಗೂ ಪಾಲುದಾರ ರಾಷ್ಟ್ರದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
ಅಕಾಂಥೋಸಿಸ್ ನಿಗ್ರಿಕಾನ್ಸ್ (Acanthosis Nigricans)
ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ
ಸಂದರ್ಭ:
ಅಕಾಂಥೋಸಿಸ್ ನಿಗ್ರಿಕಾನ್ಸ್ ತ್ವಚೆಯ (ಚರ್ಮದ) ಮಡಿಚುಗಳ ಮತ್ತು ಮುದುಡಿನ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಇದು ಇನ್ಸುಲಿನ್ ಪ್ರತಿರೋಧದೊಂದಿಗೆ ನಿಕಟವಾಗಿ ಸಂಬಂಧಿಸಿದೆ ಎಂದು ಇತ್ತೀಚಿನ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಅಕಾಂಥೋಸಿಸ್ ನಿಗ್ರಿಕಾನ್ಸ್ (AN) ನ ಬಗ್ಗೆ:
ಇದು ಚರ್ಮದ ಒಂದು ಸ್ಥಿತಿಯಾಗಿದ್ದು, ಚರ್ಮದ ಮಡಿಚುಗಳ ಮೇಲೆ ಕಪ್ಪಾದ, ನಯವಾದ ಕಲೆಗಳು ಕಾಣಿಸಿಕೊಳ್ಳುವುದು ಇದರ ಲಕ್ಷಣವಾಗಿದೆ.
ಚರ್ಮದಲ್ಲಿನ ಈ ಬದಲಾವಣೆಗಳು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ, ಬದಲಿಗೆ ಕೆಲವು ತಿಂಗಳುಗಳ ಅವಧಿಯಲ್ಲಿ ನಿಧಾನವಾಗಿ ಬೆಳೆಯುತ್ತವೆ.
ಇದು ಇನ್ಸುಲಿನ್ ಪ್ರತಿರೋಧದೊಂದಿಗೆ ಬಲವಾದ ನಂಟನ್ನು ಹೊಂದಿದೆ. ಆದ್ದರಿಂದ, ಇದು ಮಧುಮೇಹಪೂರ್ವ ಮತ್ತು ಮಧುಮೇಹದ ಪ್ರಮುಖ ಮುನ್ಸೂಚನೆಯಾಗಿದೆ.
ಕಾರಣಗಳು:- ಸ್ಥೂಲಕಾಯತೆ (ಬೊಜ್ಜು), ಇನ್ಸುಲಿನ್ ಪ್ರತಿರೋಧ, ಚಯಾಪಚಯ ಲಕ್ಷಣ, ಮಧುಮೇಹ ಮತ್ತು ಬಹಳ ಅಪರೂಪವಾಗಿ ಮೆಲನೋಮಾಗಳು, ಹೊಟ್ಟೆ ಅಥವಾ ಯಕೃತ್ತಿನ ಕ್ಯಾನ್ಸರ್ ನಿಂದಲೂ ಇದು ಉಂಟಾಗಬಹುದು.
ಚಿಕಿತ್ಸೆ: ಬೊಜ್ಜಿಗೆ ಅಥವಾ ಇನ್ಸುಲಿನ್ ಪ್ರತಿರೋಧಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ, ಚಯಾಪಚಯ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಮೂಲಕ ಚರ್ಮದ ಬಣ್ಣವನ್ನು ತಿಳಿಯಾಗಿಸಲು ಸಹಾಯವಾಗುತ್ತದೆ.
ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (IITF)
ಪಠ್ಯಕ್ರಮ: ಜಿ.ಎಸ್-3/ ಆರ್ಥಿಕತೆ
ಸಂದರ್ಭ:
ದೆಹಲಿಯ ಭಾರತ ಮಂಟಪದಲ್ಲಿ ನಡೆದ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳವು (IITF), ಭಾರತದ ಅತೀ ದೊಡ್ಡ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದರ್ಶನಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (IITF) ದ ಬಗ್ಗೆ:
ಆಯೋಜಕರು: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ.
ಉದ್ದೇಶ: ಈ ವಾರ್ಷಿಕ ಮೇಳವು ತಯಾರಕರಿಗೆ, ವ್ಯಾಪಾರಿಗಳಿಗೆ, ರಫ್ತುದಾರರಿಗೆ ಮತ್ತು ಆಮದುದಾರರಿಗೆ ಒಂದೇ ಸೂರಿನಡಿ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ.
ಇದನ್ನು ಪ್ರತಿ ವರ್ಷ ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗುತ್ತದೆ.
ಇದು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸಮಗ್ರ ವ್ಯಾಪಾರ ಮೇಳಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.
ಇದನ್ನು ಮೊದಲ ಬಾರಿಗೆ 1980ರಲ್ಲಿ ಆಯೋಜಿಸಲಾಗಿತ್ತು.
ಘೋಷವಾಕ್ಯ: ‘ಏಕ್ ಭಾರತ್ ಶ್ರೇಷ್ಠ ಭಾರತ್’ (ಒಂದೇ ಭಾರತ, ಶ್ರೇಷ್ಠ ಭಾರತ).
ಜಾಗತಿಕ ಮೀಥೇನ್ ಸ್ಥಿತಿಗತಿ ವರದಿ, 2025
ಪಠ್ಯಕ್ರಮ: ಜಿ.ಎಸ್-3/ ಪರಿಸರ
ಸಂದರ್ಭ:
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ವು ಇತ್ತೀಚಿಗೆ ಬ್ರೆಜಿಲ್ ನ ಬೆಲೆಮ್‌ನಲ್ಲಿ ನಡೆದ COP30 ಶೃಂಗಸಭೆಯಲ್ಲಿ ಜಾಗತಿಕ ಮೀಥೇನ್ ಸ್ಥಿತಿಗತಿ ವರದಿಯನ್ನು ಬಿಡುಗಡೆ ಮಾಡಿದೆ.
ವರದಿಯ ಮುಖ್ಯಾಂಶಗಳು:
ಮೀಥೇನ್ ಹೊರಸೂಸುವಿಕೆಯಲ್ಲಿ ಏರಿಕೆ: ಕಠಿಣ ತ್ಯಾಜ್ಯ ನಿಯಂತ್ರಣ ಮತ್ತು ಸುಧಾರಿತ ಕಣ್ಗಾವಲು ವ್ಯವಸ್ಥೆಗಳ ಹೊರತಾಗಿಯೂ, 2030ರ ವೇಳೆಗೆ ಮೀಥೇನ್ ಪ್ರಮಾಣವನ್ನು 30% ರಷ್ಟು ಕಡಿಮೆ ಮಾಡುವ ಗುರಿಯನ್ನು ತಲುಪುವಲ್ಲಿ ಜಾಗತಿಕ ಪ್ರಯತ್ನಗಳು ಇನ್ನೂ ಹಿಂದುಳಿದಿವೆ.
ತೀವ್ರತೆ ಮತ್ತು ಪರಿಣಾಮ: 20 ವರ್ಷಗಳ ಅವಧಿಯಲ್ಲಿ ಮೀಥೇನ್, ಇಂಗಾಲದ ಡೈ ಆಕ್ಸೈಡ್ (CO₂) ಗಿಂತ ಸುಮಾರು 80 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಪ್ರಸ್ತುತ ಸುಮಾರು ಮೂರನೇ ಒಂದರಷ್ಟು ಭಾಗ ಜಾಗತಿಕ ತಾಪಮಾನ ಏರಿಕೆಯಲ್ಲಿ ಇದು ಕಾರಣವಾಗಿದೆ.
ಮೀಥೇನ್ ಹೊರಸೂಸುವಿಕೆಯಲ್ಲಿ ಭಾರತದ ಪಾಲು: 2020ರಲ್ಲಿ ಸುಮಾರು 31 ಮಿಲಿಯನ್ ಟನ್ ಮೀಥೇನ್ ಅನ್ನು ಹೊರಸೂಸಿದೆ, ಇದು ಜಾಗತಿಕ ಹೊರಸೂಸುವಿಕೆಯ 9% ರಷ್ಟಿದೆ. ಜಾಗತಿಕ ಕೃಷಿ ಆಧಾರಿತ ಮೀಥೇನ್ ಹೊರಸೂಸುವಿಕೆಯಲ್ಲಿ ಭಾರತದ ಪಾಲು 12% ರಷ್ಟಿದ್ದು, ಇದು ಪ್ರಪಂಚದಲ್ಲೇ ಅತ್ಯಧಿಕವಾಗಿದೆ.
ಕೃಷಿ ವಲಯದ ವಿವರಣೆ: ಜಾನುವಾರುಗಳು (ಜಾನುವಾರುಗಳ ಜೀರ್ಣಕ್ರಿಯೆ) ಮೀಥೇನ್‌ನ ಅತೀ ದೊಡ್ಡ ಮೂಲವಾಗಿದೆ. ಇದರ ನಂತರದ ಸ್ಥಾನದಲ್ಲಿ ಭತ್ತದ ಕೃಷಿ ಇದ್ದು, 2030ರ ವೇಳೆಗೆ ಇದರಿಂದಾಗುವ ಹೊರಸೂಸುವಿಕೆ 8% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಬೆಳೆ ತ್ಯಾಜ್ಯ ಸುಡುವುದೂ ಕೂಡ ಹೆಚ್ಚುತ್ತಿದ್ದು, ಇವೆಲ್ಲವೂ ಕೂಡ ಹೊರಸೂಸುವಿಕೆಯಲ್ಲಿ ಭಾರತವನ್ನು ಜಾಗತಿಕವಾಗಿ ಪ್ರಮುಖ ಕೇಂದ್ರವನ್ನಾಗಿಸಿವೆ.
ಮೀಥೇನ್ ನ ಬಗ್ಗೆ:
ಇದು ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕವಾಗಿದೆ (ವಾತಾವರಣದಲ್ಲಿ ಇದರ ಜೀವಿತಾವಧಿ 12 ವರ್ಷಗಳು).
20 ವರ್ಷಗಳ ಅವಧಿಯಲ್ಲಿ ಇದು ಇಂಗಾಲದ ಡೈ ಆಕ್ಸೈಡ್ (CO₂) ಗಿಂತ 80–84 ಪಟ್ಟು ಹೆಚ್ಚು ಪ್ರಬಲವಾಗಿರುತ್ತದೆ.
ಜಾಗತಿಕ ಪ್ರಮುಖ ಮೂಲಗಳು: ಕೃಷಿ (40%), ಇಂಧನ (35%), ಮತ್ತು ತ್ಯಾಜ್ಯ (20%).
ಮೀಥೇನ್ ಮಾಲಿನ್ಯವನ್ನು ತಡೆಗಟ್ಟಲು ಜಾಗತಿಕ ಉಪಕ್ರಮಗಳು:
ಜಾಗತಿಕ ಮೀಥೇನ್ ಪ್ರತಿಜ್ಞೆ (Global Methane Pledge), 2021:
ಇದು 2030ರ ವೇಳೆಗೆ ಮೀಥೇನ್ ಹೊರಸೂಸುವಿಕೆಯನ್ನು 2020ರ ಮಟ್ಟಕ್ಕಿಂತ 30% ರಷ್ಟು ಕಡಿಮೆ ಮಾಡುವ ಸ್ವಯಂಪ್ರೇರಿತ ಅಂತರರಾಷ್ಟ್ರೀಯ ಚೌಕಟ್ಟಾಗಿದೆ.
ಇದನ್ನು COP26 ರಲ್ಲಿ ಅಮೆರಿಕ, ಯುರೋಪಿಯನ್ ಒಕ್ಕೂಟ ಮತ್ತು ಹವಾಮಾನ ಮತ್ತು ಶುದ್ಧ ವಾಯು ಒಕ್ಕೂಟ (CCAC) ಜಂಟಿಯಾಗಿ ಪ್ರಾರಂಭಿಸಿದವು.
ಗಮನಿಸಿ: ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ.
ಭಾರತದ ಉಪಕ್ರಮಗಳು:
ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಗುರಿ (NMSA):
ಇದು ಹವಾಮಾನ-ಸ್ಥಿತಿಸ್ಥಾಪಕ ಮತ್ತು ಕಡಿಮೆ ಹೊರಸೂಸುವಿಕೆಯ ಕೃಷಿಯನ್ನು ಉತ್ತೇಜಿಸುತ್ತದೆ.
ಮಣ್ಣಿನ ಆರೋಗ್ಯ, ನೀರಿನ ದಕ್ಷತೆ ಮತ್ತು ಬೆಳೆ ವೈವಿಧ್ಯೀಕರಣದ ಮೇಲೆ ಗಮನಹರಿಸುವ ಮೂಲಕ ಪರೋಕ್ಷವಾಗಿ ಮೀಥೇನ್ ಅನ್ನು ಕಡಿಮೆ ಮಾಡುತ್ತದೆ.
ಭತ್ತದ ಕೃಷಿಯಿಂದ ಮೀಥೇನ್ ಹೊರಸೂಸಿಕೆಯನ್ನು ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನ ಮತ್ತು ಕೃಷಿ ಪದ್ಧತಿಗಳ ಬಳಕೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ,‘ಸನ್ಮಿತ್ರ’ (ಒಬ್ಬ ಒಳ್ಳೆಯ ಸ್ನೇಹಿತ) ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.
‘ಸನ್ಮಿತ್ರ’ ಉಪಕ್ರಮದದ ಬಗ್ಗೆ
ಉದ್ದೇಶ: ಮಾದಕ ದ್ರವ್ಯ ವ್ಯಸನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನಿರಂತರ ಬೆಂಬಲ, ಪುನರ್ವಸತಿ ಮತ್ತು ಮೇಲ್ವಿಚಾರಣೆಯನ್ನು ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ವಿಶಿಷ್ಟ ವಿಧಾನ: ಈ ಕಾರ್ಯಕ್ರಮವು ಮಾದಕ ವ್ಯಸನದ ಸಮಸ್ಯೆಯನ್ನು ಕೇವಲ ಕಾನೂನು ಜಾರಿ ದೃಷ್ಟಿಕೋನದಿಂದ ನೋಡದೆ, ಸಹಾನುಭೂತಿ, ಸೂಕ್ತ ಮಾರ್ಗದರ್ಶನ ಮತ್ತು ರಚನಾತ್ಮಕ ಪುನರ್ವಸತಿಯ ಮೂಲಕ ಪರಿಹರಿಸಲು ಯತ್ನಿಸುತ್ತದೆ.
ಸನ್ಮಿತ್ರ ಸಹಾಯವಾಣಿ: ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಮೀಸಲಾದ ‘ಸನ್ಮಿತ್ರ ಸಹಾಯವಾಣಿ’ ಅನ್ನು ಸ್ಥಾಪಿಸಲಾಗುವುದು.
ಸಿಬ್ಬಂದಿಯ ಜವಾಬ್ದಾರಿ: ಸನ್ಮಿತ್ರ ಯೋಜನೆಯಡಿ ನಿಯೋಜಿತರಾದ ಪೊಲೀಸ್ ಸಿಬ್ಬಂದಿ , ಬಾಧಿತ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅವರ ಕುಟುಂಬದ ಸದಸ್ಯರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಮಾನಸಿಕ ಆರೋಗ್ಯ ತಜ್ಞರೊಂದಿಗೆ ಸಮನ್ವಯ ಸಾಧಿಸುವ ಮೂಲಕ ವ್ಯಕ್ತಿಯ ಚೇತರಿಕೆಯ ಮಾಸಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬೇಕು.
ವರದಿ ನಿರ್ವಹಣೆ: ಪೊಲೀಸ್ ಠಾಣಾಧಿಕಾರಿಗಳುಪ್ರತಿ ಎರಡು ವಾರಗಳಿಗೊಮ್ಮೆ ಸನ್ಮಿತ್ರ ಸಿಬ್ಬಂದಿಯಿಂದ ಪ್ರಗತಿಯ ವರದಿಗಳನ್ನು ಸಂಗ್ರಹಿಸಬೇಕು. ತದನಂತರ, ಗೌಪ್ಯ ಮಾಸಿಕ ವರದಿಗಳನ್ನು ಮೊಹರು ಮಾಡಿದ ಲಕೋಟೆಗಳಲ್ಲಿ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿ (SP) ಅಥವಾ ಉಪ ಪೊಲೀಸ್ ಆಯುಕ್ತರಿಗೆ (DCP) ಸಲ್ಲಿಸಬೇಕು.
ರಾಷ್ಟ್ರೀಯ ವನ್ಯಜೀವಿ ಮಂಡಳಿಯು, ವನ್ಯಜೀವಿ (ಸಂರಕ್ಷಣಾ) ಕಾಯಿದೆ, 1972 ರ ಅನುಸೂಚಿ II ರ ಅಡಿಯಲ್ಲಿ ರೀಸೆಸ್ ಮಂಗಗಳನ್ನು ಮರುಸೇರ್ಪಡೆಗೊಳಿಸಲು ಶಿಫಾರಸು ಮಾಡಿದೆ.
ರೀಸೆಸ್ ಮಕಾಕ್ (ಮಕಾಕಾ ಮುಲಟ್ಟಾ) ಗಳ ಬಗ್ಗೆ:
ಆವಾಸಸ್ಥಾನ: ಇದು ಹಗಲು ಹೊತ್ತಿನಲ್ಲಿ ಸಕ್ರಿಯವಾಗಿರುವ ಸರ್ವಭಕ್ಷಕ ಪ್ರಭೇದವಾಗಿದ್ದು, ಮರಗಳು ಮತ್ತು ನೆಲದ ಮೇಲೆ ಎರಡೂ ಕಡೆ ವಾಸಿಸುತ್ತದೆ. ಇದು ಶಂಕುವೃಕ್ಷದ ಕಾಡುಗಳು (ಕೊನಿಫೆರಸ್), ಎಲೆ ಉದುರುವ ಕಾಡುಗಳು, ಬಿದಿರು ಮತ್ತು ಮಿಶ್ರ ಕಾಡುಗಳಿಂದ ಹಿಡಿದು ಮ್ಯಾಂಗ್ರೋವ್‌ಗಳು (ಜೌಗು ಕಾಡುಗಳು), ಕುರುಚಲು ಕಾಡುಗಳು , ಮಳೆಕಾಡುಗಳು ಮತ್ತು ಮಾನವ ವಸತಿ ಪ್ರದೇಶಗಳ ಸಮೀಪವಿರುವ ಪ್ರದೇಶಗಳವರೆಗೆ ವಿಶಾಲವಾದ ಆವಾಸಸ್ಥಾನಗಳಲ್ಲಿ ಜೀವಿಸುತ್ತದೆ.
ಹಂಚಿಕೆ : ಇದು ದಕ್ಷಿಣ ಏಷ್ಯಾದ ಬಹುತೇಕ ಭಾಗಗಳಲ್ಲಿ, ಪೂರ್ವ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ ಮತ್ತು ಭಾರತದಲ್ಲಿ ಕಂಡುಬರುತ್ತದೆ.
ಪರಿಸರ ಪಾತ್ರಗಳು: ಇವು ಪ್ರಮುಖ ಬೀಜ ಪ್ರಸಾರಕಗಳಾಗಿವೆ.ಅರಣ್ಯ ಪುನರುತ್ಪಾದನೆ ಮತ್ತು ಜೀವವೈವಿಧ್ಯಕ್ಕೆ ಸಹಾಯ ಮಾಡುತ್ತವೆ. ಆದುದರಿಂದ ಜೀವಿ ಪರಿಸರದ ಸಮತೋಲನ ಮತ್ತು ಸುಸ್ಥಿರ ಸಹಬಾಳ್ವೆಗೆ ಇವುಗಳ ರಕ್ಷಣೆ ಅತ್ಯಗತ್ಯವಾಗಿದೆ.
ಬೆದರಿಕೆಗಳು: ಇವುಗಳಿಗೆ ಸಾಮಾನ್ಯವಾಗಿ ಯಾವುದೇ ಬೆದರಿಕೆಯಿಲ್ಲದಿದ್ದರೂ, ಅಭಿವೃದ್ಧಿಯ ಕಾರಣದಿಂದಾಗಿ ಇವುಗಳ ಮೂಲ ಆವಾಸಸ್ಥಾನವು ಹೆಚ್ಚು ನಶಿಸುತ್ತಿದೆ.
ಸಂರಕ್ಷಣಾ ಸ್ಥಾನಮಾನ:
ಐಯುಸಿಎನ್ ನ ಕೆಂಪು ಪಟ್ಟಿಯಲ್ಲಿ ‘ಕನಿಷ್ಠ ಕಾಳಜಿ’ ಎಂದು ಪಟ್ಟಿ ಮಾಡಲಾಗಿದೆ.
ಇದನ್ನು CITES ನ ‘ಅನುಬಂಧ II‘ ರಲ್ಲಿ ಪಟ್ಟಿ ಮಾಡಲಾಗಿದೆ.
ಅಜೇಯ ವಾರಿಯರ್-25
ಸಾಮಾನ್ಯ ಅಧ್ಯಯನ – 3/ ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಜಂಟಿ ಸೇನಾ ಸಮರಾಭ್ಯಾಸವಾದ “ಅಜೇಯ ವಾರಿಯರ್-25” ರ 8ನೇ ಆವೃತ್ತಿಯು ಇತ್ತೀಚಿಗೆ ರಾಜಸ್ಥಾನದಲ್ಲಿ ಪ್ರಾರಂಭವಾಯಿತು.
ಅಜೇಯ ವಾರಿಯರ್-25 ರ ಬಗ್ಗೆ:
ಉದ್ದೇಶ – ಈ ಸಮರಾಭ್ಯಾಸವು ಅರೆ-ನಗರ ಪರಿಸರಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮೇಲೆ ಗಮನಹರಿಸುತ್ತದೆ.
ಭಾರತ-ಯುನೈಟೆಡ್ ಕಿಂಗ್‌ಡಮ್ ನಡುವೆ ನಡೆಯುವ ಇತರ ಸಮರಾಭ್ಯಾಸಗಳು:
“ಕೊಂಕಣ್” ಎಂಬುದು ಭಾರತೀಯ ನೌಕಾಪಡೆ ಮತ್ತು ಯುನೈಟೆಡ್ ಕಿಂಗ್‌ಡಮ್ ನ ರಾಯಲ್ ನೇವಿ’ ಯ ನಡುವೆ ನಡೆಯುವ ದ್ವಿಪಕ್ಷೀಯ ನೌಕಾ ಸಮರಾಭ್ಯಾಸವಾಗಿದೆ.
“ಇಂದ್ರಧನುಷ್” ಎಂಬುದು ಭಾರತೀಯ ವಾಯುಪಡೆ (IAF) ಮತ್ತು ಯುಕೆ ರಾಯಲ್ ಏರ್ ಫೋರ್ಸ್ ನಡುವೆ ನಡೆಯುವ ದ್ವಿಪಕ್ಷೀಯ ವಾಯು ಸಮರಾಭ್ಯಾಸವಾಗಿದೆ.
ಸೆಂಟಿನೆಲ್ -6B
ಸಾಮಾನ್ಯ ಅಧ್ಯಯನ – 3/ ಬಾಹ್ಯಾಕಾಶ
ಇದೀಗ ಸುದ್ದಿಯಲ್ಲಿದೆ:
ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ವಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆಯ ನೆಲೆಯಿಂದ “ಸೆಂಟಿನೆಲ್ -6B” ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಸೆಂಟಿನೆಲ್ -6B ಯ ಬಗ್ಗೆ:
ಇದು ಸಾಗರ ವೀಕ್ಷಣಾ ಉಪಗ್ರಹವಾಗಿದ್ದು, ಏರುತ್ತಿರುವ ಸಮುದ್ರ ಮಟ್ಟ ಮತ್ತು ಭೂಮಿಯ ಮೇಲೆ ಅವುಗಳ ಪರಿಣಾಮಗಳನ್ನು ಅಳೆಯುವ ಆರು ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿದೆ.
ಇದು ಭೂಮಿಯನ್ನು ಪ್ರತಿ ಸೆಕೆಂಡಿಗೆ 7.2 ಕಿ.ಮೀ ವೇಗದಲ್ಲಿ ಸುತ್ತುತ್ತದೆ ಮತ್ತು ಪ್ರತಿ 112 ನಿಮಿಷಗಳಿಗೊಮ್ಮೆ ಒಂದು ಪ್ರದಕ್ಷಿಣೆಯನ್ನು ಪೂರ್ಣಗೊಳಿಸುತ್ತದೆ.
ಈ ಯೋಜನೆಯು ನಾಸಾ, ಎನ್‌ಒಎಎ, ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಗಳ ಜಂಟಿ ಸಹಯೋಗವಾಗಿದೆ.
2025ನೇ ಸಾಲಿನ ಪ್ರತಿಷ್ಠಿತ ಇನ್ಫೋಸಿಸ್ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಶಸ್ತಿ ಪುರಸ್ಕೃತರಾಗಿಆಯ್ಕೆಯಾದ ಒಟ್ಟು ಆರು ಗಣ್ಯರ ಪಟ್ಟಿಯಲ್ಲಿ ಪ್ರಾಕೃತ ಮತ್ತು ಕನ್ನಡ ಕಾವ್ಯಶಾಸ್ತ್ರದ ವಿದ್ವಾಂಸರಾದ ಆಂಡ್ರ್ಯೂ ಒಲೆಟ್ ಹಾಗೂ ಬೆಂಗಳೂರು ಮೂಲದ ವಿಜ್ಞಾನಿ ಅಂಜನಾ ಬದ್ರಿನಾರಾಯಣನ್ ಅವರು ಸೇರಿದ್ದಾರೆ.
2025 ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪುರಸ್ಕೃತರ ವಿವರಣೆ:
ವಿಭಾಗ
ಪುರಸ್ಕೃತರು
ಅರ್ಥಶಾಸ್ತ್ರ
ನಿಖಿಲ್ ಅಗರ್ವಾಲ್
ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ
ಸುಶಾಂತ್ ಸಚ್‌ದೇವ
ಮಾನವಿಯ ಮತ್ತು ಸಮಾಜ ವಿಜ್ಞಾನ
ಆಂಡ್ರ್ಯೂ ಒಲೆಟ್
ಜೀವ ವಿಜ್ಞಾನ
ಅಂಜನಾ ಬದ್ರಿನಾರಾಯಣನ್
ಗಣಿತ ವಿಜ್ಞಾನ
ಸವ್ಯಸಾಚಿ ಮುಖರ್ಜಿ
ಭೌತ ವಿಜ್ಞಾನ
ಕಾರ್ತಿಶ್ ಮಂತಿರಾಮ್
ಇನ್ಫೋಸಿಸ್ ಪ್ರಶಸ್ತಿಯ ಬಗ್ಗೆ:
ಘೋಷಣೆ: ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ (ISF), ಆರು ವಿಭಿನ್ನ ವಿಭಾಗಗಳಲ್ಲಿ 2025ನೇ ಸಾಲಿನ ಪ್ರಶಸ್ತಿ ವಿಜೇತರನ್ನು ಘೋಷಿಸಿದೆ. ಅವುಗಳೆಂದರೆ:
ಅರ್ಥಶಾಸ್ತ್ರ
ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ
ಮಾನವಿಯ ಮತ್ತು ಸಮಾಜ ವಿಜ್ಞಾನ
ಜೀವ ವಿಜ್ಞಾನ
ಗಣಿತ ವಿಜ್ಞಾನ
ಭೌತ ವಿಜ್ಞಾನ
ಉದ್ದೇಶ: ಭಾರತದ ಪ್ರಗತಿಯ ಮೇಲೆ ಗಮನಾರ್ಹ ಪ್ರಭಾವ ಬೀರುವಂತಹ ಸಂಶೋಧನೆ ಮತ್ತು ಪಾಂಡಿತ್ಯಪೂರ್ಣ ಸಾಧನೆಗಳನ್ನು ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮೂಲ ಉದ್ದೇಶವಾಗಿದೆ.
ಪ್ರಶಸ್ತಿಯ ಸ್ವರೂಪ: ಪ್ರತಿಯೊಂದು ವಿಭಾಗದ ಪ್ರಶಸ್ತಿಯು ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು $100,000 (ಅಥವಾ ಅದಕ್ಕೆ ಸಮನಾದ ಭಾರತೀಯ ರೂಪಾಯಿ ಮೌಲ್ಯ) ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಚೀನಾ ಕರಾವಳಿ ರಕ್ಷಕ ಪಡೆಯ ಹಡಗುಗಳ ತುಕಡಿಯು ಸೆಂಕಾಕು/ಡಿಯಾಯು ದ್ವೀಪಗಳ ಬಳಿ “ಹಕ್ಕುಗಳ ಜಾರಿ ಗಸ್ತು” ನಡೆಸಿದ್ದು, ಇದು ಜಪಾನ್‌ನೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಸೆಂಕಾಕು/ಡಿಯಾಯು ದ್ವೀಪಗಳ ಬಗ್ಗೆ:
‘ಸೆಂಕಾಕು ದ್ವೀಪಗಳು’ ಎಂಬುದು ಉಟ್ಸುರಿ, ಕಿತಾಕೋಜಿಮಾ, ಮಿನಾಮಿಕ್ಯೋಜಿಮಾ, ಕುಬಾ, ತೈಶೋ, ಒಕಿನೋಕಿತೈವಾ, ಒಕಿನೋಮಿನಾಮಿವಾ ಮತ್ತು ಟೋಬಿಸ್ ದ್ವೀಪಗಳನ್ನು ಒಳಗೊಂಡಿರುವ ದ್ವೀಪಗಳ ಸಮೂಹವನ್ನು ಸೂಚಿಸುವ ಒಂದು ಸಾಮೂಹಿಕ ಹೆಸರಾಗಿದೆ.
ವಿವಾದ : ಸೆಂಕಾಕು ದ್ವೀಪಗಳು ಜಪಾನ್ ಮತ್ತು ಚೀನಾ ದೇಶಗಳ ನಡುವೆ ದೀರ್ಘಕಾಲದಿಂದ ಒಂದು ವಿವಾದಾತ್ಮಕ ವಿಷಯವಾಗಿದೆ.
ಪ್ರಸ್ತುತ ಈ ದ್ವೀಪಗಳು ಜಪಾನ್ ದೇಶದ ನಿಯಂತ್ರಣದಲ್ಲಿವೆ.
ಸಿಲಿಗುರಿ ಕಾರಿಡಾರ್
ಸಾಮಾನ್ಯ ಅಧ್ಯಯನ – 3/ ಆಂತರಿಕ ಭದ್ರತೆ
ಇದೀಗ ಸುದ್ದಿಯಲ್ಲಿ
ಭಾರತೀಯ ಸೇನೆಯು ಕಾರ್ಯತಂತ್ರದ ಮಹತ್ವವುಳ್ಳ ‘ಸಿಲಿಗುರಿ ಕಾರಿಡಾರ್’ ಬಳಿ ಮೂರು ಹೊಸ ಸೇನಾ ನೆಲೆಗಳನ್ನು ಸ್ಥಾಪಿಸಿದೆ.
ಸಿಲಿಗುರಿ ಕಾರಿಡಾರ್ ನ ಬಗ್ಗೆ:
ಸಿಲಿಗುರಿ ಕಾರಿಡಾರ್ ಅನ್ನು ‘ಚಿಕನ್ಸ್ ನೆಕ್’ (ಕೋಳಿಯ ಕುತ್ತಿಗೆ) ಎಂದೂ ಕೂಡ ಕರೆಯಲಾಗುತ್ತದೆ.
ಇದು ಪಶ್ಚಿಮ ಬಂಗಾಳದಲ್ಲಿರುವ ಒಂದು ಕಿರಿದಾದ ಭೂಭಾಗವಾಗಿದ್ದು,ಈಶಾನ್ಯ ಭಾರತದ ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
ಇದು ಮಹಾನಂದಾ ಮತ್ತು ತೀಸ್ತಾ ನದಿಗಳ ನಡುವೆ ನೆಲೆಗೊಂಡಿರುವ ಪೂರ್ವ ಭಾರತದ ಅತ್ಯಂತ ಪ್ರಮುಖ ಕಾರ್ಯತಂತ್ರದ ಪ್ರದೇಶವಾಗಿದೆ.
ಸಿಲಿಗುರಿ ಕಾರಿಡಾರ್‌ನ ಮಹತ್ವ:
ಕಾರ್ಯತಂತ್ರದ ಸ್ಥಳ : ಒಂದು ವೇಳೆ ಈ ಕಾರಿಡಾರ್‌ನ ಸಂಪರ್ಕ ಕಡಿತಗೊಂಡರೆ, ಅದು ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಅಗತ್ಯ ಸರಕುಗಳು, ಸೇವೆಗಳು ಮತ್ತು ಸೇನಾ ಬೆಂಬಲವನ್ನು ಪೂರೈಸುವುದು ಕಷ್ಟಕರವಾಗುತ್ತದೆ.
ಸೇನಾ ಮತ್ತು ರಕ್ಷಣಾ ಪರಿಗಣನೆಗಳು : ಇದು ಸೂಕ್ಷ್ಮವಾದ ಅಂತರರಾಷ್ಟ್ರೀಯ ಗಡಿಗಳಿಗೆ, ನಿರ್ದಿಷ್ಟವಾಗಿ ಚೀನಾ, ನೇಪಾಳ ಮತ್ತು ಬಾಂಗ್ಲಾದೇಶದ ಗಡಿಗಳಿಗೆ ಹತ್ತಿರದಲ್ಲಿದೆ.
ಸರ್ವೋಚ್ಚ ನ್ಯಾಯಾಲಯವು ಹುಲಿಯ ಮೂಲ ವಾಸಸ್ಥಳಗಳಲ್ಲಿ ಹುಲಿ ಸಫಾರಿ ನಡೆಸುವುದನ್ನು ನಿಷೇಧಿಸಿದೆ
ಸಾಮಾನ್ಯ ಅಧ್ಯಯನ – 3/ ಪರಿಸರ, ಸಂರಕ್ಷಣೆ
ಇದೀಗ ಸುದ್ಧಿಯಲ್ಲಿದೆ.
ಸರ್ವೋಚ್ಚ ನ್ಯಾಯಾಲಯವು ಮೂಲ ಅಥವಾ ನಿರ್ಣಾಯಕ ಹುಲಿ ಆವಾಸಸ್ಥಾನಗಳಲ್ಲಿ ಹುಲಿ ಸಫಾರಿ ನಡೆಸುವುದನ್ನು ನಿಷೇಧಿಸಲು ನಿರ್ದೇಶನಗಳನ್ನು ನೀಡಿದೆ.
ಪರಿಸರ ಸೂಕ್ಷ್ಮ ವಲಯಗಳ ಬಗ್ಗೆ:
ಅಧಿಸೂಚನೆ: ಪರಿಸರ ಸೂಕ್ಷ್ಮ ವಲಯಗಳನ್ನು ಪರಿಸರ (ಸಂರಕ್ಷಣಾ) ಕಾಯ್ದೆ, 1986 ರ ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಧಿಸೂಚನೆ ಹೊರಡಿಸುತ್ತದೆ.
ವ್ಯಾಖ್ಯಾನ: ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಗಳ ಗಡಿಯಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಪರಿಸರ ದುರ್ಬಲ ವಲಯಗಳು ಅಥವಾ ಪರಿಸರ ಸೂಕ್ಷ್ಮ ವಲಯಗಳು ಎಂದು ಅಧಿಸೂಚನೆ ಹೊರಡಿಸಲಾಗುತ್ತದೆ.
ಪರಿಸರ ಸೂಕ್ಷ್ಮ ವಲಯಗಳಲ್ಲಿನ (ESZs) ಚಟುವಟಿಕೆಗಳು:
ನಿಷೇಧಿತ ಚಟುವಟಿಕೆಗಳು: ವಾಣಿಜ್ಯ ಗಣಿಗಾರಿಕೆ, ಗರಗಸದ ಕಾರ್ಖಾನೆಗಳು, ಮಾಲಿನ್ಯವನ್ನು (ವಾಯು, ಜಲ, ಮಣ್ಣು, ಶಬ್ದ ಇತ್ಯಾದಿ) ಉಂಟುಮಾಡುವ ಕೈಗಾರಿಕೆಗಳು, ಪ್ರಮುಖ ಜಲವಿದ್ಯುತ್ ಯೋಜನೆಗಳ ಸ್ಥಾಪನೆ, ಮರದ ವಾಣಿಜ್ಯ ಬಳಕೆ ಇತ್ಯಾದಿ.
ನಿಯಂತ್ರಿತ ಚಟುವಟಿಕೆಗಳು : ಮರಗಳನ್ನು ಕಡಿಯುವುದು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಸ್ಥಾಪನೆ, ನೈಸರ್ಗಿಕ ನೀರಿನ ವಾಣಿಜ್ಯ ಬಳಕೆ, ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವುದು, ಕೃಷಿ ಪದ್ಧತಿಯಲ್ಲಿನ ತೀವ್ರ ಬದಲಾವಣೆ ಇತ್ಯಾದಿ.
ಅನುಮತಿ ನೀಡಿದ ಚಟುವಟಿಕೆಗಳು : ಪ್ರಸ್ತುತ ನಡೆಯುತ್ತಿರುವ ಕೃಷಿ ಅಥವಾ ತೋಟಗಾರಿಕೆ ಪದ್ಧತಿಗಳು, ಮಳೆನೀರು ಕೊಯ್ಲು, ಸಾವಯವ ಕೃಷಿ ಇತ್ಯಾದಿ.
ರಾಜ್ಯ ಸರ್ಕಾರವು ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030’ ಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದೆ.
ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030 ರ ಕುರಿತು:
ಅನಾವರಣ: ನವೆಂಬರ್ 2025 ರಲ್ಲಿ ನಡೆದ ಪ್ರತಿಷ್ಠಿತ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯಲ್ಲಿ ಈ ನೀತಿಯನ್ನು ಅನಾವರಣಗೊಳಿಸಲಾಯಿತು.
ದೃಷ್ಟಿಕೋನ: ಬಾಹ್ಯಾಕಾಶ ನಾವೀನ್ಯತೆ ಮತ್ತು ಉತ್ಪಾದನಾ ವಲಯದಲ್ಲಿ ರಾಜ್ಯವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿಯನ್ನು ಹೊಂದಿರುವ ಮಹತ್ವದ ಕಾರ್ಯತಂತ್ರದ ನೀಲನಕ್ಷೆಯಾಗಿದೆ.
ಪ್ರಮುಖ ಉದ್ದೇಶಗಳು
ಈ ನೀತಿಯು ರಾಜ್ಯದ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಗಾಗಿ ಈ ಕೆಳಗಿನ ಮಹತ್ವಾಕಾಂಕ್ಷೆಯ ಗುರಿ ಮತ್ತು ಉದ್ದೇಶಗಳನ್ನು ಹೊಂದಿದೆ:
ಮಾರುಕಟ್ಟೆ ಪಾಲು:- ರಾಷ್ಟ್ರೀಯ ಬಾಹ್ಯಾಕಾಶ ಮಾರುಕಟ್ಟೆಯ ಶೇ. 50 ರಷ್ಟು ಪಾಲನ್ನು (2033 ರ ವೇಳೆಗೆ 22 ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ) ಮತ್ತು ಜಾಗತಿಕ ಮಾರುಕಟ್ಟೆಯ ಶೇ. 5 ರಷ್ಟು ಪಾಲನ್ನು ವಶಪಡಿಸಿಕೊಳ್ಳುವುದು.
ಹೂಡಿಕೆ ಆಕರ್ಷಣೆ:- ರಾಜ್ಯದ ಬಾಹ್ಯಾಕಾಶ ಪರಿಸರ ವ್ಯವಸ್ಥೆಗೆ ಒಟ್ಟಾರೆಯಾಗಿ 3 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವುದು.
ಮಾನವ ಸಂಪನ್ಮೂಲ ಅಭಿವೃದ್ಧಿ:- ವಿಶೇಷ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ 15,000 ಮಹಿಳೆಯರು ಸೇರಿದಂತೆ ಒಟ್ಟು 50,000 ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಉನ್ನತ ತರಬೇತಿ ಮತ್ತು ಕೌಶಲ್ಯವನ್ನು ಒದಗಿಸುವುದು.
ನವೋದ್ಯಮಗಳಿಗೆ ಪ್ರೋತ್ಸಾಹ:- 500 ಬಾಹ್ಯಾಕಾಶ ನವೋದ್ಯಮಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವುದು. ಕರ್ನಾಟಕದಿಂದಲೇ 50 ಉಪಗ್ರಹಗಳ ವಿನ್ಯಾಸ, ತಯಾರಿಕೆ ಮತ್ತು ಉಡಾವಣೆಗೆ ಅಗತ್ಯವಾದ ನೆರವು ನೀಡುವುದು.
ನೀತಿಯ ಮಹತ್ವ
ಈ ನೀತಿಯು ಕೇಂದ್ರ ಸರ್ಕಾರದ ‘ಭಾರತೀಯ ಬಾಹ್ಯಾಕಾಶ ನೀತಿ 2023’ ರೊಂದಿಗೆ ಮತ್ತು 2035 ರ ವೇಳೆಗೆ ‘ಭಾರತೀಯ ಅಂತರಿಕ್ಷ ನಿಲ್ದಾಣ‘ವನ್ನು ಸ್ಥಾಪಿಸುವ ಹಾಗೂ 2040 ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವ ರಾಷ್ಟ್ರೀಯ ಗುರಿಗಳಿಗೆ ಪೂರಕವಾಗಲಿದೆ.
ಮೇಕೆದಾಟು ಜಲಾಶಯ ಯೋಜನೆ
ಇದೀಗ ಸುದ್ದಿಯಲ್ಲಿದೆ:
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಅಂತರರಾಜ್ಯ ನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಕರ್ನಾಟಕವು ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಿದ ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು, ಸರ್ವೋಚ್ಚ ನ್ಯಾಯಾಲಯವು “ಅಕಾಲಿಕ” ಎಂದು ಪರಿಗಣಿಸಿ, ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದೆ.
ಕಾವೇರಿ ನದಿ ವ್ಯವಸ್ಥೆಯ ಬಗ್ಗೆ:
ಉಗಮ: ತಲಕಾವೇರಿ (ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟಗಳಲ್ಲಿ).
ಒಟ್ಟು ಉದ್ದ: 805 ಕಿ.ಮೀ.
ಹರಿವಿನ ದಿಕ್ಕು: ಪೂರ್ವಾಭಿಮುಖ.
ಹರಿಯುವ ರಾಜ್ಯಗಳು: ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ.
ಇತ್ತೀಚೆಗೆ, ಭಾರತ ಸರ್ಕಾರವು ವಿದ್ಯುನ್ಮಾನ/ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಧಿಯನ್ನು (EDF) ಪ್ರಾರಂಭಿಸಿದೆ.
ವಿದ್ಯುನ್ಮಾನ/ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಧಿಯ ಬಗ್ಗೆ:
ಪ್ರಾರಂಭ: ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳ ಪ್ರಮುಖ ಅಂಗವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 2016 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
ಉದ್ದೇಶ : ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯಗಳಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಗುರಿಯಾಗಿದೆ.
ಕಾರ್ಯತಂತ್ರದ ಮಹತ್ವ:
ಆಮದು ಅವಲಂಬನೆ ತಗ್ಗಿಸುವಿಕೆ: ಎಲೆಕ್ಟ್ರಾನಿಕ್ಸ್ ಸರಕುಗಳಿಗಾಗಿ ಭಾರತವು ಇತರ ದೇಶಗಳ ಆಮದಿನ ಮೇಲೆ ಹೊಂದಿರುವ ಅವಲಂಬನೆಯನ್ನು ಕಡಿಮೆ ಮಾಡುವುದು.
ದೇಶೀಯ ನಾವೀನ್ಯತೆಗೆ ಉತ್ತೇಜನ: ಸೆಮಿಕಂಡಕ್ಟರ್‌ಗಳು (ಅರೆವಾಹಕಗಳು), ಇಂಟರ್ನೆಟ್ ಆಫ್ ಥಿಂಗ್ಸ್, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ಗಳಂತಹ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ದೇಶೀಯ ನಾವೀನ್ಯತೆಯನ್ನು ಪ್ರೋತ್ಸಾಹಿಸುವುದು.
ಜಾಗತಿಕ ತಾಣವಾಗಿ ಭಾರತ: ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು.
ಸಾಲುಮರದ ತಿಮ್ಮಕ್ಕ
ಸಾಮಾನ್ಯ ಅಧ್ಯಯನ – 4/ ನೀತಿಶಾಸ್ತ್ರ ; ಪರಿಸರ ನೀತಿಶಾಸ್ತ್ರ
ಇದೀಗ ಸುದ್ದಿಯಲ್ಲಿ:
ನಾಡಿನ ಹಿರಿಯ ಚೇತನ, ‘ಪದ್ಮಶ್ರೀ’ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಅಗಲುವಿಕೆಗೆ ಇಡೀ ಭಾರತವೇ ಕಂಬನಿ ಮಿಡಿದಿದೆ.
ಇವರು ಕೇವಲ ಒಬ್ಬ ಪರಿಸರವಾದಿ ಮಾತ್ರವಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ತಳಮಟ್ಟದ ಅರಣ್ಯೀಕರಣದ ಅಪ್ರತಿಮ ಸಂಕೇತವಾಗಿದ್ದರು.
ಸಾಲುಮರದ ತಿಮ್ಮಕ್ಕ ಅವರ ಕುರಿತು:
ಹಿನ್ನೆಲೆ: ತುಮಕೂರು ಜಿಲ್ಲೆಯಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು, ವಿವಾಹದ ನಂತರ ಹುಲಿಕಲ್ ಗ್ರಾಮದಲ್ಲಿ ನೆಲೆಸಿದರು.
ಕಾಯಕದ ಆರಂಭ: 1950 ರ ದಶಕದ ಆರಂಭದಲ್ಲಿ, ತಿಮ್ಮಕ್ಕ ಮತ್ತು ಅವರ ಪತಿ ಬಿಕ್ಕಲ ಚಿಕ್ಕಯ್ಯ ಅವರು ನಿಸ್ವಾರ್ಥ ಪರಿಸರ ಸೇವೆಯನ್ನು ಆರಂಭಿಸಿದರು.
ದಂಪತಿಗಳು ಪ್ರತಿದಿನ ಮೈಲುಗಟ್ಟಲೆ ದೂರದಿಂದ ನೀರನ್ನು ಹೊತ್ತು ತಂದು ಸಸಿಗಳಿಗೆ ಎರೆಯುತ್ತಿದ್ದರು. ಮೇಯುವ ಜಾನುವಾರುಗಳಿಂದ ಎಳೆಯ ಸಸಿಗಳನ್ನು ರಕ್ಷಿಸಲು ಮುಳ್ಳಿನ ಕೊಂಬೆಗಳನ್ನು ಬಳಸಿ ಬೇಲಿ ಹಾಕುತ್ತಿದ್ದರು.
ವೈಜ್ಞಾನಿಕ ಅರಿವು: ಮರಗಳು ಬದುಕಿ ಉಳಿಯುವ ಸಾಧ್ಯತೆಯನ್ನು ಹೆಚ್ಚಿಸಲು, ಅವರು ಪ್ರಮುಖವಾಗಿ ‘ಮುಂಗಾರು’ ಋತುಗಳಲ್ಲಿ ಸಸಿಗಳನ್ನು ನೆಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು.
ಸ್ಫೂರ್ತಿಯ ಸೆಲೆ: ಅವರ ಪರಿಸರ ಕಾಳಜಿಯ ಪರಂಪರೆಯು ಕರ್ನಾಟಕದ ಅರಣ್ಯೀಕರಣ ನೀತಿಗಳ ಮೇಲೆ ಪ್ರಭಾವ ಬೀರಿದೆ. ಅಷ್ಟೇ ಅಲ್ಲದೆ, ಭಾರತದಾದ್ಯಂತ ಹಲವಾರು ಗಿಡ ನೆಡುವ ಚಳವಳಿಗಳಿಗೆ ಅವರು ಪ್ರೇರಣೆಯಾಗಿದ್ದಾರೆ.
2019 ರ ಐತಿಹಾಸಿಕ ರಕ್ಷಣೆ: ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶವನ್ನು ಅವರು ಬಲವಾಗಿ ವಿರೋಧಿಸಿದ್ದರು. 2019 ರಲ್ಲಿ ರಸ್ತೆ ಅಗಲೀಕರಣ ಯೋಜನೆಯ ಸಂದರ್ಭದಲ್ಲಿ, ತಾವು ಮಕ್ಕಳಂತೆ ಸಲುಹಿದ್ದ 385 ಮರಗಳು ಕಡಿಯಲ್ಪಡುವ ಭೀತಿ ಎದುರಾಯಿತು. ಆಗ ಅವರು ನೇರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಆ ಮರಗಳನ್ನು ಉಳಿಸುವಲ್ಲಿ ಯಶಸ್ವಿಯಾದರು.
ಪರಿಸರಕ್ಕಾದ ಲಾಭ ಮತ್ತು ಪರಿಣಾಮ:
ಅವರ ದಶಕಗಳ ದಣಿವರಿಯದ ಪ್ರಯತ್ನಗಳು ಇಂದು ಬೃಹತ್ ಹೆಮ್ಮರಗಳಾಗಿ ಬೆಳೆದು ನಿಂತಿವೆ.
ಹಸಿರು ಪಥ : ಅವರ ಶ್ರಮವು ಒಂದು ವಿಶಾಲವಾದ ಹಸಿರು ಪಥದ ನಿರ್ಮಾಣಕ್ಕೆ ಕಾರಣವಾಗಿದೆ.
ಜೀವವೈವಿಧ್ಯದ ರಕ್ಷಣೆ: ಈ ಮರಗಳು ಪ್ರಯಾಣಿಕರಿಗೆ ತಂಪಾದ ನೆರಳು ನೀಡುತ್ತಿವೆ ಮತ್ತು ಅಸoಖ್ಯಾತ ಪಕ್ಷಿಸಂಕುಲಕ್ಕೆ ಆಶ್ರಯ ತಾಣವಾಗಿವೆ.
ವಾಯುಗುಣ ನಿಯಂತ್ರಣ: ಈ ಮರಗಳು ಆ ಪ್ರದೇಶದ ‘ಸೂಕ್ಷ್ಮ ವಾಯುಗುಣವನ್ನು’ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ಮಾದರಿ ಕಾರ್ಯ: ಇದು ಸಮುದಾಯ ನೇತೃತ್ವದ ಅರಣ್ಯೀಕರಣಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.
ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳು (NGRA), 2025
ಸಾಮಾನ್ಯ ಅಧ್ಯಯನ – 3/ ಹೈನುಗಾರಿಕೆ ವಲಯ
ಇದೀಗ ಸುದ್ದಿಯಲ್ಲಿದೆ:
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು 2025 ನೇ ಸಾಲಿನ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳ (NGRA) ವಿಜೇತರನ್ನು ಘೋಷಿಸಿದೆ.
ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳ ಬಗ್ಗೆ:
ಈ ಪ್ರಶಸ್ತಿಗಳು ಜಾನುವಾರು ಮತ್ತು ಹೈನುಗಾರಿಕೆ ವಲಯದಲ್ಲಿ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಗೌರವಗಳಲ್ಲಿ ಒಂದಾಗಿವೆ.
ರಾಷ್ಟ್ರೀಯ ಕ್ಷೀರ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ನವೆಂಬರ್ 26 ರಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ರಾಷ್ಟ್ರೀಯ ಗೋಕುಲ್ ಮಿಷನ್‌ನ ಭಾಗವಾಗಿ 2014 ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
ದೇಶೀಯ ಜಾನುವಾರು ತಳಿಗಳ ವೈಜ್ಞಾನಿಕ ಸಂರಕ್ಷಣೆ ಮತ್ತು ಅಭಿವೃದ್ಧಿಯ ಮೇಲೆ ಇದು ಕೇಂದ್ರೀಕರಿಸುತ್ತದೆ.
ಹಾಲು ಉತ್ಪಾದಿಸುವ ರೈತರು, ಹೈನುಗಾರಿಕೆ ಸಹಕಾರ ಸಂಘಗಳು/ ಕಂಪನಿಗಳು/ರೈತ ಉತ್ಪಾದಕರ ಸಂಘಗಳು ಮತ್ತು ಕೃತಕ ಗರ್ಭಧಾರಣೆ ತಂತ್ರಜ್ಞರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರಿಗೆ ಅರ್ಹತಾ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಅನುಕ್ರಮವಾಗಿ ₹5,00,000, ₹3,00,000 ಮತ್ತು ₹2,00,000 ನಗದು ಬಹುಮಾನವನ್ನು ನೀಡಲಾಗುತ್ತದೆ.
2025 ನೇ ಸಾಲಿನ ‘ನಾಡೋಜ ಬರಗೂರು ಪ್ರಶಸ್ತಿ’ಗೆ ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ (ಸಾಹಿತ್ಯ ಕ್ಷೇತ್ರ) ಮತ್ತು ಶಿವರುದ್ರಯ್ಯ (ಚಲನಚಿತ್ರ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ.
ಬರಗೂರು ಪ್ರಶಸ್ತಿಯ ಬಗ್ಗೆ:
ಪ್ರಶಸ್ತಿ ನೀಡುವ ಸಂಸ್ಥೆ: ಈ ಪ್ರಶಸ್ತಿಯನ್ನು ‘ನಾಡೋಜ ಡಾ. ಬರಗೂರು ಪ್ರತಿಷ್ಠಾನ’ ನೀಡುತ್ತದೆ.
ಉದ್ದೇಶ:- ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಗೂ ಕೊಡುಗೆ ನೀಡಿದ ಸಾಧಕರಿಗೆವಾರ್ಷಿಕವಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ.
ಪ್ರಶಸ್ತಿಯ ಸ್ವರೂಪ:- ಈ ಪ್ರಶಸ್ತಿಯು ಒಂದು ಫಲಕ ಮತ್ತು ₹25,000 ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
2025 ನೇ ಸಾಲಿನ ಪುರಸ್ಕೃತರು
ಬಿ.ಟಿ. ಲಲಿತಾ ನಾಯಕ್: ಸಾಹಿತ್ಯ ಕ್ಷೇತ್ರ.
ಶಿವರುದ್ರಯ್ಯ: ಚಲನಚಿತ್ರ ಕ್ಷೇತ್ರ.
ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030
ಇದೀಗ ಸುದ್ದಿಯಲ್ಲಿದೆ:
‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025-2030’ ರ ಅಡಿಯಲ್ಲಿ ವಿವಿಧ ಪ್ರೋತ್ಸಾಹಕಗಳಿಗಾಗಿ ರಾಜ್ಯ ಸರ್ಕಾರವು ₹967 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.
ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030 ರ ಕುರಿತು:
ಕಾರ್ಯತಂತ್ರದ ಬದಲಾವಣೆ: ರಾಜ್ಯದ ಗಮನವನ್ನು ಸಾಂಪ್ರದಾಯಿಕ ಮಾಹಿತಿ ತಂತ್ರಜ್ಞಾನ (IT) ಸೇವೆಗಳಿಂದ, ಡೀಪ್ ಟೆಕ್ ನಾವೀನ್ಯತೆಗೆ ಪರಿವರ್ತಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಇದೊಂದು ಮಹತ್ವದ ಕಾರ್ಯತಂತ್ರದ ನೀಲನಕ್ಷೆಯಾಗಿದೆ.
ಜಾಗತಿಕ ನಾಯಕತ್ವ:ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೈಬರ್ ಭದ್ರತೆ ಯಂತಹ ಆಧುನಿಕ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನನ್ನಾಗಿ ರೂಪಿಸುವುದು ಇದರ ಗುರಿಯಾಗಿದೆ.
ಸಮತೋಲಿತ ಬೆಳವಣಿಗೆ: ನವೆಂಬರ್ 2025 ರಲ್ಲಿ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆಗೊಂಡ ಈ ನೀತಿಯು, ‘ಬೆಂಗಳೂರಿನ ಆಚೆಗೆ’ ಈ ಉಪಕ್ರಮದ ಮೂಲಕ ರಾಜ್ಯದಾದ್ಯಂತ ಸಮಾನ ಬೆಳವಣಿಗೆಗೆ ಒತ್ತು ನೀಡುತ್ತದೆ. ಐದು ವರ್ಷಗಳ ಅವಧಿಗೆ ಒಟ್ಟು ₹967.12 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ.
ನೀತಿಯ ಪ್ರಮುಖ ದೃಷ್ಟಿಕೋನ ಮತ್ತು ಗುರಿಗಳು:
ಈ ನೀತಿಯನ್ನು “FRAME” (ಮುಂಬರುವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಪ್ರಾದೇಶಿಕ ಅಭಿವೃದ್ಧಿ, ಹೊಂದಾಣಿಕೆ, ಮಾರುಕಟ್ಟೆ ಸೃಷ್ಟಿ, ಉದ್ಯಮ ಸೌಲಭ್ಯ) ಚೌಕಟ್ಟಿನ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ.
ಅಮೇರಿಕ ಸಂಯುಕ್ತ ಸಂಸ್ಥಾನವು ಲ್ಯಾಟಿನ್ ಅಮೇರಿಕದಲ್ಲಿ ‘ಆಪರೇಷನ್ ಸದರ್ನ್ ಸ್ಪಿಯರ್’ ಎಂಬ ಮಹತ್ವದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. “ನಾರ್ಕೋ-ಭಯೋತ್ಪಾದಕರನ್ನು” (ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರ ಜಾಲ) ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಕಾರ್ಯಾಚರಣೆಯ ಮೂಲ ಉದ್ದೇಶವಾಗಿದೆ.
ಆಪರೇಷನ್ ಸದರ್ನ್ ಸ್ಪಿಯರ್ಕಾರ್ಯಾಚರಣೆಯ ಪ್ರಮುಖಾಂಶಗಳು:
ಸ್ವರೂಪ: ಇದೊಂದು ಪ್ರಮುಖ ಸೇನಾ ಮತ್ತು ಕಣ್ಗಾವಲು ಕಾರ್ಯಾಚರಣೆಯಾಗಿದ್ದು ನಾರ್ಕೋ-ಭಯೋತ್ಪಾದಕ ಜಾಲಗಳನ್ನು ಗುರಿಯಾಗಿಸಿಕೊಂಡಿದೆ.
ನಿರ್ವಹಣೆ: ಈ ಕಾರ್ಯಾಚರಣೆಯನ್ನು ಅಮೆರಿಕದ ‘ಸೌತ್ ಕಾಮ್’ (SOUTHCOM) ಮುನ್ನಡೆಸುತ್ತಿದೆ.
‘ಸೌತ್ ಕಾಮ್’ ನ ಬಗ್ಗೆ
ಪೂರ್ಣ ರೂಪ: ‘ಯು.ಎಸ್. ಸದರ್ನ್ ಕಮಾಂಡ್’
ಕಾರ್ಯವ್ಯಾಪ್ತಿ: ಇದರ ಕಾರ್ಯವ್ಯಾಪ್ತಿಯು ದಕ್ಷಿಣ ಅಮೆರಿಕ, ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದಾದ್ಯಂತ ಇರುವ 31 ದೇಶಗಳನ್ನು ಒಳಗೊಂಡಿದೆ.
ಕಾರ್ಯಾಚರಣೆಯ ಉದ್ದೇಶಗಳು
ಅಮೆರಿಕ ಸರ್ಕಾರದ ಪ್ರಕಾರ, ಈ ಕಾರ್ಯಾಚರಣೆಯು ಮೂರು ಪ್ರಮುಖ ಗುರಿಗಳನ್ನು ಹೊಂದಿದೆ:
ತಾಯ್ನಾಡಿನ ರಕ್ಷಣೆ: ಅಮೆರಿಕದ ತಾಯ್ನಾಡನ್ನು ಬಾಹ್ಯ ಬೆದರಿಕೆಗಳಿಂದ ರಕ್ಷಿಸುವುದು.
ಭಯೋತ್ಪಾದನೆ ನಿಗ್ರಹ: ಪಶ್ಚಿಮ ಗೋಳಾರ್ಧದಿಂದ ನಾರ್ಕೋ-ಭಯೋತ್ಪಾದಕ ಬೆದರಿಕೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದು.
ಮಾದಕ ದ್ರವ್ಯ ತಡೆಗಟ್ಟುವಿಕೆ: ಅಮೆರಿಕದ ಜನಸಂಖ್ಯೆಗೆ ಗಂಭೀರ ಹಾನಿಯನ್ನುಂಟು ಮಾಡುತ್ತಿರುವ ಅಕ್ರಮ ಮಾದಕ ದ್ರವ್ಯಗಳ ಹರಿವನ್ನು ತಡೆಗಟ್ಟುವುದು.
ಕೊಲಂಬೊ ಭದ್ರತಾ ಸಮಾವೇಶ (CSC)
ಸಾಮಾನ್ಯ ಅಧ್ಯಯನ – 2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಕೊಲಂಬೊ ಭದ್ರತಾ ಸಮಾವೇಶವು ಅಧಿಕೃತವಾಗಿ ಬಾಂಗ್ಲಾದೇಶವನ್ನು ತನ್ನ ಐದನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆಗೊಳಿಸಿಕೊಂಡಿದೆ.
ಕೊಲಂಬೊ ಭದ್ರತಾ ಸಮಾವೇಶದ ಬಗ್ಗೆ:
ಸ್ಥಾಪನೆ – 2020.
ಉದ್ದೇಶ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಸಹಕಾರವನ್ನು ವಿಸ್ತರಿಸುವುದು ಮತ್ತು ಪ್ರಾದೇಶಿಕ ಭದ್ರತೆಯನ್ನು ಬಲಪಡಿಸುವುದು.
ಸದಸ್ಯ ರಾಷ್ಟ್ರಗಳು: ಭಾರತ, ಶ್ರೀಲಂಕಾ, ಮಾಲ್ಡೀವ್ಸ್, ಮಾರಿಷಸ್ ಮತ್ತು ಬಾಂಗ್ಲಾದೇಶ.
ಸೀಶೆಲ್ಸ್ ಒಂದು ವೀಕ್ಷಕ ರಾಷ್ಟ್ರವಾಗಿದೆ.
ಸಹಕಾರದ ಆಧಾರಸ್ತಂಭಗಳು : ಕಡಲ ಭದ್ರತೆ, ಭಯೋತ್ಪಾದನಾ ನಿಗ್ರಹ, ಗಡಿಯಾಚೆಗಿನ ಸಂಘಟಿತ ಅಪರಾಧಗಳ ತಡೆಗಟ್ಟುವಿಕೆ, ಸೈಬರ್ ಭದ್ರತೆ ಹಾಗೂ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ.