ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಲ್ಲಿ ‘ಕಲಾಲೋಕ’ ಮಳಿಗೆ ಉದ್ಘಾಟನೆ
ಇದೀಗ ಸುದ್ದಿಯಲ್ಲಿದೆ:
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಲ್ಲಿ, ದೇಶೀಯ ಹಾಗೂ ವಿದೇಶಿ ಪ್ರಯಾಣಿಕರಿಗೆ ರಾಜ್ಯದ ಸಾಂಪ್ರದಾಯಿಕ ಮತ್ತು ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಉತ್ಪನ್ನಗಳನ್ನು ಪರಿಚಯಿಸುವ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ‘ಕಲಾಲೋಕ’ ಮಳಿಗೆಯನ್ನು ಪ್ರಾರಂಭಿಸಲಾಗಿದೆ.
‘ಕಲಾಲೋಕ’ ಮಳಿಗೆಯ ವಿಶೇಷತೆಗಳು:
ಸ್ಥಾಪನೆ: ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವಂತೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಈ ಮಳಿಗೆಯನ್ನು, ವಿಮಾನ ನಿಲ್ದಾಣದ ಟರ್ಮಿನಲ್-2 ರಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯು ಸ್ಥಾಪಿಸಿದೆ.
ಲಭ್ಯವಿರುವ ಉತ್ಪನ್ನಗಳು: ಇಲ್ಲಿ ಕರ್ನಾಟಕದ ಹೆಮ್ಮೆಯ ಪ್ರತೀಕಗಳಾದ ಮೈಸೂರು ಸ್ಯಾಂಡಲ್ ಸಾಬೂನು, ಶ್ರೀಗಂಧದ ಎಣ್ಣೆ, ಅಗರಬತ್ತಿಗಳು, ಮೈಸೂರು ರೇಷ್ಮೆ, ಚನ್ನಪಟ್ಟಣದ ಆಟಿಕೆಗಳು, ಲಿಡ್ಕರ್ ಚರ್ಮದ ವಸ್ತುಗಳು , ಸುಗಂಧಭರಿತ ಕಾಫಿ ಪುಡಿ ಮತ್ತು ಪಾನೀಯಗಳು, ಕೈಮಗ್ಗ ಉತ್ಪನ್ನಗಳು, ಇಳಕಲ್ ಸೀರೆಗಳು, ಲಂಬಾಣಿ ಕಸೂತಿ ವಸ್ತ್ರಗಳು, ಶ್ರೀಗಂಧದ ಕಲಾಕೃತಿಗಳು, ಬಿದರಿ ಕಲೆ ಮತ್ತು ಮೈಸೂರು ಶೈಲಿಯ ವರ್ಣಚಿತ್ರಗಳು ಲಭ್ಯವಿವೆ.
ವ್ಯಾಪ್ತಿ: ಒಟ್ಟಾರೆಯಾಗಿ, ಕರ್ನಾಟಕದ 45 ಭೌಗೋಳಿಕಸೂಚ್ಯಂಕ ಪ್ರಮಾಣೀಕೃತ ಉತ್ಪನ್ನಗಳನ್ನು ಒಂದೇ ಸೂರಿನಡಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ.
ದತ್ತು ಮಕ್ಕಳ ಸಂಖ್ಯೆ: ದೇಶದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ
ಇದೀಗ ಸುದ್ದಿಯಲ್ಲಿದೆ:
ಮಕ್ಕಳ ಸಂರಕ್ಷಣೆ ನಿರ್ದೇಶನಾಲಯದ ಅಧಿಕೃತ ದತ್ತಾಂಶಗಳ ಪ್ರಕಾರ, ದತ್ತು ಪ್ರಕ್ರಿಯೆಯ ಸಂಖ್ಯೆಯಲ್ಲಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ನಂತರ ಕರ್ನಾಟಕವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಮಕ್ಕಳನ್ನು ದತ್ತು ಪಡೆಯಲು ಪೋಷಕರಿಂದ ಆಸಕ್ತಿ ಹೆಚ್ಚುತ್ತಿದ್ದರೂ, ದತ್ತು ನೀಡಲು ಲಭ್ಯವಿರುವ ಮಕ್ಕಳ ಕೊರತೆಯನ್ನು ಕರ್ನಾಟಕ ಎದುರಿಸುತ್ತಿದೆ.
ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ದ ಬಗ್ಗೆ:
ಕಾನೂನು ಸ್ಥಾನಮಾನ: ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಒಂದು ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಗಿದೆ.
ಕಾರ್ಯವ್ಯಾಪ್ತಿ: ಇದು ಭಾರತೀಯ ಮಕ್ಕಳ ದತ್ತು ಸ್ವೀಕಾರಕ್ಕೆ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ದೇಶದೊಳಗಿನ ಮತ್ತು ಅಂತರ-ದೇಶೀಯ ದತ್ತು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಇದಕ್ಕೆ ಸಚಿವಾಲಯವು ಆದೇಶ ನೀಡಿದೆ.
ಅಂತರರಾಷ್ಟ್ರೀಯ ಮಾನ್ಯತೆ: 2003 ರಲ್ಲಿ ಭಾರತ ಸರ್ಕಾರವು ಅನುಮೋದಿಸಿದ, ಅಂತರ-ದೇಶೀಯ ದತ್ತು ಸ್ವೀಕಾರದ ಮೇಲಿನ 1993 ರ ಹೇಗ್ ಸಮಾವೇಶಗಳ ಅಡಿಯಲ್ಲಿ ವ್ಯವಹರಿಸಲು ಇದನ್ನು ‘ಕೇಂದ್ರ ಪ್ರಾಧಿಕಾರ’ವನ್ನಾಗಿ ನೇಮಿಸಲಾಗಿದೆ.
CARINGS ಪೋರ್ಟಲ್ (ಮಕ್ಕಳ ದತ್ತು ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ)
ಆರಂಭ: 2011.
ಮಹತ್ವ: ಇದು ಹೇಗ್ ಸಮಾವೇಶ, ಅಂತರರಾಷ್ಟ್ರೀಯ ಶಿಷ್ಟಾಚಾರಗಳು ಮತ್ತು ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ, ಪಾರದರ್ಶಕ ದತ್ತು ಪ್ರಕ್ರಿಯೆಗೆ ಏಕೈಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಭಾರತದ ಜೋಗ್ಬಾನಿ ಮತ್ತು ನೇಪಾಳದ ಬಿರಾಟ್‌ನಗರಗಳ ನಡುವೆ ರೈಲು ಆಧಾರಿತ ಸರಕು ಸಾಗಣೆಗೆ ಅನುಕೂಲವಾಗುವಂತೆ ಭಾರತ ಮತ್ತು ನೇಪಾಳ ಸಾರಿಗೆ ಒಪ್ಪಂದವನ್ನು ತಿದ್ದುಪಡಿ ಮಾಡಿವೆ.
ಭಾರತ – ನೇಪಾಳ ಸಂಬಂಧಗಳು:
ಗಡಿ ಹಂಚಿಕೆ:- ನೇಪಾಳ ದೇಶವು, ಭಾರತದ ಐದು ರಾಜ್ಯಗಳಾದ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಜೊತೆ ಗಡಿಯನ್ನು ಹಂಚಿಕೊಂಡಿದೆ.
ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದ:- 1950 ರಲ್ಲಿ ಸಹಿ ಹಾಕಲಾಯಿತು, ಇದು ಭಾರತ ಮತ್ತು ನೇಪಾಳ ನಡುವೆ ಇರುವ ವಿಶೇಷ ಸಂಬಂಧಗಳನ್ನು ರೂಪಿಸುತ್ತದೆ.
ರಕ್ಷಣಾ ಸಹಕಾರ:- ಎರಡೂ ದೇಶಗಳು ಭಾರತ ಮತ್ತು ನೇಪಾಳದಲ್ಲಿ ಪರ್ಯಾಯವಾಗಿ ಸೂರ್ಯ ಕಿರಣ್ ಎಂಬ ಜಂಟಿ ಸೇನಾ ಸಮಾರಾಭ್ಯಾಸವನ್ನು ನಡೆಸುತ್ತವೆ.
ಭಾರತೀಯ ಸೇನೆಯ ಗೊರ್ಕಾ ಪಡೆಯನ್ನು ಭಾಗಶಃ ನೇಪಾಳದ ಗುಡ್ಡ ಪ್ರದೇಶಗಳ ಜಿಲ್ಲೆಗಳ ಜನರನ್ನು ನೇಮಕಾತಿ ಮಾಡುವ ಮೂಲಕ ರಚಿಸಲಾಗುತ್ತದೆ.
ವ್ಯಾಪಾರ ಮತ್ತು ಆರ್ಥಿಕತೆ:- ಭಾರತವು ನೇಪಾಳದ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಹೂಡಿಕೆಯ ದೇಶವಾಗಿದೆ, ಅಲ್ಲಿ ಭಾರತೀಯ ಸಂಸ್ಥೆಗಳು ನೇಪಾಳದ ಒಟ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ 33.5% ರಷ್ಟು ಪಾಲನ್ನು ಹೊಂದಿವೆ.
ಆಪರೇಷನ್ ಮೈತ್ರಿ ಮತ್ತು ಭೂಕಂಪದ ನಂತರದ ಪುನರ್ನಿರ್ಮಾಣ ನೆರವು:- 2015 ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದ ನಂತರ, ಭಾರತ ಸರ್ಕಾರವು ಮೊದಲು ಸ್ಪಂದಿಸಿತು ಮತ್ತು ವಿದೇಶದಲ್ಲಿ ತನ್ನ ಅತಿದೊಡ್ಡ ವಿಪತ್ತು ಪರಿಹಾರ ಕಾರ್ಯಾಚರಣೆಯನ್ನು ನಡೆಸಿತು.
ಸಾಂಸ್ಕೃತಿಕ ಸಂಬಂಧಗಳು:- ಎರಡು ದೇಶಗಳ ನಾಯಕರು ಸಹಜವಾಗಿಯೇ ಪುರಾತನ ‘ರೊಟಿ–ಬೇಟಿ’ ಸಂಬಂಧವನ್ನು ಉಲ್ಲೇಖಿಸುತ್ತಾರೆ, ಇದು ಎರಡು ದೇಶಗಳ ಜನರ ನಡುವೆ ನಡೆಯುವ ಗಡಿಯಾಚೆಗಿನ ವಿವಾಹಗಳನ್ನು ಸೂಚಿಸುತ್ತದೆ.
ಭಾರತ ಮತ್ತು ನೇಪಾಳ ನಡುವಿನ ವಿವಾದಿತ ಪ್ರದೇಶಗಳ ಬಗ್ಗೆ:
ಕಾಲಾಪಾನಿ ವಿವಾದ:- ಈ ಪ್ರದೇಶವು ಭಾರತದ ನಿಯಂತ್ರಣದಲ್ಲಿದೆ ಆದರೆ ಐತಿಹಾಸಿಕ ಕಾರಣಗಳಿಂದಾಗಿ ನೇಪಾಳವು ಈ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುತ್ತದೆ. ಈ ಪ್ರದೇಶವು ನೇಪಾಳ ಮತ್ತು ಭಾರತದ ನಡುವಿನ ಅತಿದೊಡ್ಡ ಪ್ರಾದೇಶಿಕ ವಿವಾದವಾಗಿದೆ.
ಕೆಲಸದ ಸ್ಥಳದ ಒತ್ತಡ ಮತ್ತು ಮಧುಮೇಹ
ಸಾಮಾನ್ಯ ಅಧ್ಯಾಯನ-2/ಆರೋಗ್ಯ
ಸಂದರ್ಭ:
ICMR–INDIAB, 2023 ರ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು 10.1 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಕೆಲಸದ ಸ್ಥಳದಲ್ಲಿನ ಒತ್ತಡವು ಈ ಹೊರೆಯನ್ನು ಹೆಚ್ಚಿಸುವ ಅಂಶಗಳಲ್ಲಿ ಒಂದಾಗಿರಬಹುದು.
ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಮಧುಮೇಹದ ದುಸ್ಥಿತಿ:
ಭಾರತವನ್ನು ಕೆಲವುಬಾರಿ ವಿಶ್ವದ ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ.
ICMR–INDIAB ಅಧ್ಯಯನದ ಪ್ರಕಾರ, 2000ನೇ ಇಸವಿಯಲ್ಲಿ ಸುಮಾರು 3.2 ಕೋಟಿಗೆ ಇದ್ದ ಮಧುಮೇಹಿಗಳ ಸಂಖ್ಯೆ 2024 ರಲ್ಲಿ ಸುಮಾರು 9 ಕೋಟಿ ವಯಸ್ಕರ ವರೆಗೆ ಏರಿದೆ .
ಇತ್ತೀಚಿನ ವರದಿಗಳ ಪ್ರಕಾರ, 9 ಜನ ಭಾರತೀಯ ವಯಸ್ಕರಲ್ಲಿ ಒಬ್ಬರು ಮಧುಮೇಹದಿಂದ ಬಳಲುತ್ತಿದ್ದಾರೆ.
ಮಧುಮೇಹದ ಬಗ್ಗೆ:
ಮಧುಮೇಹವು ದೀರ್ಘಕಾಲದ ಚಯಾಪಚಯ ಅಸ್ವಸ್ಥತೆಯಾಗಿದ್ದು , ಇದರಲ್ಲಿ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಿಲ್ಲ ಅಥವಾ ಅದು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ.
ಇದರಿಂದಾಗಿ ರಕ್ತದಲ್ಲಿ ಗ್ಲೂಕೋಸ್ (ಸಕ್ಕರೆ) ನ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ.
ಇನ್ಸುಲಿನ್: ಇನ್ಸುಲಿನ್ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಆಗಿದೆ.
ಇದು ಆಹಾರದ ಮೂಲಕ ಗ್ಲೂಕೋಸ್ ಜೀವಕೋಶಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ,ಅಲ್ಲಿ ಇದನ್ನು ಶಕ್ತಿಗಾಗಿ ಬಳಸಲಾಗುತ್ತದೆ.
ಮಧುಮೇಹದ ವಿಧಗಳು:
ಇದು ಸ್ವಯಂಪ್ರತಿರಕ್ಷಣಾ (autoimmune) ರೋಗವಾಗಿದ್ದು, ದೇಹದ ರೋಗನಿರೋಧಕ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಪಡಿಸುತ್ತದೆ. ದೇಹವು ಬಹಳ ಕಡಿಮೆ ಅಥವಾ ಯಾವುದೇ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ.
ಇದು ಸಾಮಾನ್ಯವಾಗಿ ಬಾಲ್ಯವಸ್ತೆ ಅಥವಾ ಹದಿಹರೆಯದಲ್ಲಿ ಪ್ರಾರಂಭವಾಗುತ್ತದೆ.
ಇದಕ್ಕಾಗಿ ಜೀವನಪರ್ಯಂತ ಇನ್ಸುಲಿನ್ ಚುಚ್ಚುಮದ್ದು ಬೇಕಾಗುತ್ತದೆ.
ಟೈಪ್ 2 ಮಧುಮೇಹದ ಬಗ್ಗೆ:
ಇದು ಅತ್ಯಂತ ಸಾಮಾನ್ಯವಾದ ಮಧುಮೇಹ. ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಿಲ್ಲ.
ಇದು ಸಾಮಾನ್ಯವಾಗಿ ಬೊಜ್ಜು, ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕುಟುಂಬದ ಹಿರಿಯರಿಂದ ಬಂದ ರೋಗಗಳೊಂದಿಗೆ ಸಂಬಂಧ ಹೊಂದಿದೆ.
ಇದನ್ನು ಆಹಾರ, ವ್ಯಾಯಾಮ, ಮೌಖಿಕ ಔಷಧಿಗಳು ಮತ್ತು ಕೆಲವೊಮ್ಮೆ ಇನ್ಸುಲಿನ್ ಮೂಲಕ ನಿರ್ವಹಣೆ ಮಾಡಬಹುದು.
ಗರ್ಭಾವಸ್ಥೆಯ ಮಧುಮೇಹದ ಬಗ್ಗೆ:
ಇದು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ಹೆರಿಗೆಯ ನಂತರ ಕಣ್ಮರೆಯಾಗುತ್ತದೆ, ಆದರೆ ನಂತರದ ವರ್ಷಗಳಲ್ಲಿ ಟೈಪ್ 2 ಮಧುಮೇಹ ಬರುವ ಅಪಾಯವನ್ನು ಹೆಚ್ಚಿಸುತ್ತದೆ.
ಹೆಪಟೈಟಿಸ್ A
ಸಾಮಾನ್ಯ ಅಧ್ಯಾಯನ-2/ಆರೋಗ್ಯ
ಸಂದರ್ಭ:
ಭಾರತವು ತನ್ನ ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದಲ್ಲಿಟೈಫಾಯಿಡ್ ಕಾಂಜುಗೇಟ್ ಲಸಿಕೆಯನ್ನು ಸೇರಿಸುವ ಬಗ್ಗೆ ಚರ್ಚಿಸುತ್ತಿರುವಾಗ, ಹೆಪಟೈಟಿಸ್ A ಲಸಿಕೆಯು ಸೇರ್ಪಡೆಯ ಆದ್ಯತೆಗೆ ಅರ್ಹವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಹೆಪಟೈಟಿಸ್:
ಹೆಪಟೈಟಿಸ್ ಕಾಯಿಲೆ ಎಂಬುದು, ಯಕೃತ್ತಿನ ಉರಿಯೂತವಾಗಿದೆ. ಹೆಪಟೈಟಿಸ್ ವೈರಸ್‌ನಲ್ಲಿ 5 ಪ್ರಮುಖ ತಳಿಗಳಿವೆ, ಇವುಗಳನ್ನು ಹೆಪಟೈಟಿಸ್ -A, ಹೆಪಟೈಟಿಸ್- B, ಹೆಪಟೈಟಿಸ್ -C, ಹೆಪಟೈಟಿಸ್- D ಮತ್ತು ಹೆಪಟೈಟಿಸ್- E ಎಂದು ಕರೆಯಲಾಗುತ್ತದೆ.
ಹೆಪಟೈಟಿಸ್ -B ಮತ್ತು ಹೆಪಟೈಟಿಸ್ -C ಪ್ರಕಾರಗಳು ದೀರ್ಘಕಾಲಿಕ ರೋಗಗಳಿಗೆ ಕಾರಣವಾಗುತ್ತವೆ ಮತ್ತು ಒಟ್ಟಿಗೆ ಅವು ಯಕೃತ್ತಿನ ಸಿರೋಸಿಸ್, ಯಕೃತ್ತಿನ ಕ್ಯಾನ್ಸರ್ ಮತ್ತು ವೈರಲ್ ಹೆಪಟೈಟಿಸ್-ಸಂಬಂಧಿತ ಸಾವುಗಳಿಗೆ ಸಾಮಾನ್ಯ ಕಾರಣಗಳಾಗಿವೆ.
ಹೆಪಟೈಟಿಸ್ A ಕಾಯಿಲೆಯ ಬಗ್ಗೆ:
ಇದು ಹೆಪಟೈಟಿಸ್ A ವೈರಸ್ (HAV) ನಿಂದ ಉಂಟಾಗುತ್ತದೆ. ಇದು ದೀರ್ಘಕಾಲಿಕ ಸೋಂಕನ್ನು ಉಂಟುಮಾಡುವುದಿಲ್ಲ ಮತ್ತು ಸಾಮಾನ್ಯವಾಗಿ ಸ್ವಯಂ-ನಿಯಂತ್ರಿತವಾಗುತ್ತದೆ.
ಇದು ಅಶುದ್ಧ ಆಹಾರ ಮತ್ತು ಅಶುದ್ಧ ನೀರಿನ ಮೂಲಕ (ಮಲ–ಮೌಖಿಕ ಮಾರ್ಗಗಳ) ಹರಡುತ್ತದೆ.
ಇದು ಸಂಪೂರ್ಣವಾಗಿ ತಡೆಗಟ್ಟಬಹುದಾದ ರೋಗವಾಗಿದ್ದು, ಲಸಿಕೆಗಳು 90% ರಿಂದ 95% ವರೆಗೆ ರಕ್ಷಣೆಯನ್ನು ಒದಗಿಸುತ್ತವೆ.
ಹೆಪಟೈಟಿಸ್ B ಕಾಯಿಲೆಯ ಬಗ್ಗೆ:
ಇದು ತೀವ್ರವಾದ ಸೋಂಕನ್ನು ಉಂಟುಮಾಡುತ್ತದೆ, ತೀವ್ರವಾದ ಪ್ರಕರಣಗಳಲ್ಲಿ ಯಕೃತ್ತು ವೈಫಲ್ಯ ಸಂಭವಿಸುತ್ತದೆ.
ಹರಡುವಿಕೆ: ರಕ್ತ ಮತ್ತು ದೇಹದ ದ್ರವಗಳ ಮೂಲಕ, ಲೈಂಗಿಕ ಸಂಪರ್ಕ, ತಾಯಿಯಿಂದ ಮಗುವಿಗೆ ಹರಡುತ್ತದೆ.
ಚಿಕಿತ್ಸೆ: ಲಸಿಕೆ ಹಾಕಿಸುವುದರಿಂದ ತಡೆಗಟ್ಟಬಹುದು, ಇದು ವೈರಸ್ ವಿರುದ್ಧ ಸುಮಾರು 100% ರಕ್ಷಣೆ ನೀಡುತ್ತದೆ. ಲಸಿಕೆಯನ್ನು ಸಾಮಾನ್ಯವಾಗಿ ಜನನದ ನಂತರ ತಕ್ಷಣವೇ ನೀಡಲಾಗುತ್ತದೆ ಮತ್ತು ಕೆಲವು ವಾರಗಳ ನಂತರ ಬೂಸ್ಟರ್‌ಗಳನ್ನು ನೀಡಲಾಗುತ್ತದೆ.
ಹೆಪಟೈಟಿಸ್ C ಕಾಯಿಲೆಯ ಬಗ್ಗೆ:
ಸಣ್ಣ ಪ್ರಮಾಣದ ಅನಾರೋಗ್ಯದಿಂದ ಹಿಡಿದು ಯಕೃತ್ತಿನ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ ಸೇರಿದಂತೆ ಜೀವನಪರ್ಯಂತ ಅನುಭವಿಸುವ ಗಂಭೀರವಾದ ಅನಾರೋಗ್ಯದವರೆಗೆ ತೀವ್ರತೆ ಕಂಡುಬರುತ್ತದೆ.
ಹರಡುವಿಕೆ:- ಇದು ರಕ್ತದಿಂದ ಹರಡುವ ವೈರಸ್ ಆಗಿದ್ದು, ಹೆಚ್ಚಿನ ಸೋಂಕುಗಳು ಅಸುರಕ್ಷಿತ ಇಂಜೆಕ್ಷನ್ ಪದ್ಧತಿಗಳಿಂದ ರಕ್ತಕ್ಕೆ ಒಡ್ಡಿಕೊಳ್ಳುವುದರಿಂದ ಸಂಭವಿಸುತ್ತವೆ.
ಚಿಕಿತ್ಸೆ:- ನೇರ-ಕಾರ್ಯನಿರ್ವಹಿಸುವ ಆಂಟಿವೈರಲ್ ಔಷಧಿಗಳು (DAAs ) ಬಾಧಿತ 95% ಕ್ಕಿಂತ ಹೆಚ್ಚು ಜನರನ್ನು ಗುಣಪಡಿಸಬಹುದು, ಪ್ರಸ್ತುತ ಯಾವುದೇ ಪರಿಣಾಮಕಾರಿ ಲಸಿಕೆ ಇರುವುದಿಲ್ಲ.
ಹೆಪಟೈಟಿಸ್ D ಕಾಯಿಲೆಯ ಬಗ್ಗೆ:
ಇದು ಹೆಪಟೈಟಿಸ್ B ವೈರಸ್‌ನಿಂದ ಬಳಲುತ್ತಿರುವವರಿಗೆ ಮಾತ್ರ ಪರಿಣಾಮ ಬೀರುತ್ತದೆ, ಏಕೆಂದರೆ ದೇಹದಲ್ಲಿ ಉಳಿಯಲು ಇದಕ್ಕೆ ಹೆಪಟೈಟಿಸ್ B ವೈರಸ್‌ನ ಅಗತ್ಯವಿರುತ್ತದೆ.
ಇದು ಸಾಮಾನ್ಯವಾಗಿ ರಕ್ತ ಸಂಪರ್ಕದಿಂದ ಅಥವಾ ಲೈಂಗಿಕ ಸಂಪರ್ಕದ ಮೂಲಕ ಹರಡುತ್ತದೆ.
ಹೆಪಟೈಟಿಸ್ Dಗೆ ವಿಶೇಷ ಲಸಿಕೆ ಇಲ್ಲ, ಆದರೆ ಹೆಪಟೈಟಿಸ್ B ಲಸಿಕೆಯೇ ಇದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ..
ಹೆಪಟೈಟಿಸ್ E ಕಾಯಿಲೆಯ ಬಗ್ಗೆ:
ಇದು ಸಾಮಾನ್ಯವಾಗಿ ಸಣ್ಣ ಪ್ರಮಾಣದ ಮತ್ತು ಅಲ್ಪಾವಧಿಯ ಸೋಂಕಾಗಿದ್ದು,ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ, ಆದರೆ ರೋಗನಿರೋಧಕ ಶಕ್ತಿ ದುರ್ಬಲಗೊಂಡವರಲ್ಲಿ ಇದು ಗಂಭೀರವಾಗಬಹುದು.
ಹೆಪಟೈಟಿಸ್ E ಗೆ ಯಾವುದೇ ಲಸಿಕೆ ಇಲ್ಲ.
ರೂಮೇಟಾಯ್ಡ್ ಸಂಧಿವಾತ
ಸಾಮಾನ್ಯ ಅಧ್ಯಾಯನ-2/ಆರೋಗ್ಯ; ಸಾಮಾನ್ಯ ಅಧ್ಯಾಯನ -3/ವಿಜ್ಞಾನ ಮತ್ತು ತಂತ್ರಜ್ಞಾನ
ಸಂದರ್ಭ:
ಸಂಶೋಧಕರು ರೂಮೇಟಾಯ್ಡ್ ಸಂಧಿವಾತದ ಗುಪ್ತ ಪೂರ್ವ ವೈದ್ಯಕೀಯ ವಿಕಾಸವನ್ನು ನಕ್ಷೆ ಮಾಡಿದ ಹೊಸ ಅಧ್ಯಯನ.
ರೂಮೇಟಾಯ್ಡ್ ಸಂಧಿವಾತ (RA) ದ ಬಗ್ಗೆ:
ಇದು ದೀರ್ಘಕಾಲದ ಸ್ವಯಂ ನಿರೋಧಕ ರೋಗವಾಗಿದ್ದು, ಇದರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಕೀಲುಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತದೆ.
ವಯಸ್ಸು ಮತ್ತು ಲಿಂಗ ಮಾದರಿ:- ಇದು ಸಾಮಾನ್ಯವಾಗಿ 30–60 ವರ್ಷ ವಯಸ್ಸಿನ ವ್ಯಕ್ತಿಗಳಮೇಲೆ ಪರಿಣಾಮ ಬೀರುತ್ತದೆ.ಪುರುಷರಿಗಿಂತ ಮಹಿಳೆಯರುಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚು.
ಕಾರಣಗಳು ಮತ್ತು ಅಪಾಯಕಾರಿ ಅಂಶಗಳು:- ನಿಖರವಾದಕಾರಣವಿರುವುದಿಲ್ಲ. ಸಂಭಾವ್ಯ ಕಾರಣಗಳಲ್ಲಿ ಅನುವಂಶಿಕ ಅಂಶಗಳು, ಹಾರ್ಮೋನುಗಳು ಮತ್ತು ಧೂಮಪಾನ ಅಥವಾ ಕೆಲವು ಸೋಂಕುಗಳಂತಹ ಪರಿಸರ ಪ್ರಚೋದಕಗಳು ಕಾರಣವಾಗುತ್ತವೆ.
ವ್ಯವಸ್ಥಿತ ಸ್ವಭಾವ:- ಇದು ವ್ಯವಸ್ಥಿತ ಕಾಯಿಲೆಯಾಗಿದ್ದು, ಕೀಲುಗಳು ಮಾತ್ರವಲ್ಲದೆ ಶ್ವಾಸಕೋಶಗಳು, ಹೃದಯ, ಕಣ್ಣುಗಳು, ಚರ್ಮ, ನರಗಳು ಮತ್ತು ರಕ್ತನಾಳಗಳ ಮೇಲೂ ಪರಿಣಾಮ ಬೀರುತ್ತದೆ.
ನಿರಂತರ ಉರಿಯೂತವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಆಯಾಸ, ಜ್ವರ ಮತ್ತು ಖಿನ್ನತೆಗೆ ಕಾರಣವಾಗುತ್ತದೆ.
ಚಿಕಿತ್ಸೆ ಮತ್ತು ನಿರ್ವಹಣೆ : ಇದನ್ನು ಗುಣಪಡಿಸಲು ಸಾಧ್ಯವಿಲ್ಲ , ಆದರೆ ಆರಂಭಿಕ ರೋಗನಿರ್ಣಯ ಮತ್ತು ಸಮಯೋಚಿತ ನಿರ್ವಹಣೆಯು, ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು, ರೋಗದ ಪ್ರಗತಿಯನ್ನು ಕಡಿಮೆ ಮಾಡಬಹುದು ಮತ್ತು ದೀರ್ಘಕಾಲೀನ ಅಂಗವೈಕಲ್ಯವನ್ನು ತಡೆಯಬಹುದು.
ಕರ್ನಾಟಕದಲ್ಲಿ ತಾಯಿಯ ಮರಣದ ಪ್ರಮಾಣದಲ್ಲಿ ಶೇ. 24 ರಷ್ಟು ಇಳಿಕೆಯ ದಾಖಲು
ಇದೀಗ ಸುದ್ದಿಯಲ್ಲಿದೆ:
ಕರ್ನಾಟಕದಲ್ಲಿ ತಾಯಿಯ ಮರಣದ ಸಂಖ್ಯೆಯಲ್ಲಿ ಕಳೆದ ವರ್ಷದ (2024) ಇದೇ ಅವಧಿಗೆ ಹೋಲಿಸಿದರೆ, ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಶೇ. 24 ರಷ್ಟು ಇಳಿಕೆಯ ದಾಖಲಾಗಿದೆ.
ರಾಜ್ಯ ಆರೋಗ್ಯ ಇಲಾಖೆಯು ಜಾರಿಗೊಳಿಸಿದ “ತಡೆಗಟ್ಟಬಹುದಾದ ತಾಯಿಯ ಮರಣವನ್ನು ಶೂನ್ಯಕ್ಕೆ ತರುವ ಗುರಿ” ಎಂಬ ಮಹತ್ವಾಕಾಂಕ್ಷಿ ಉಪಕ್ರಮವು ಇದಕ್ಕೆ ಪ್ರಮುಖ ಕಾರಣವಾಗಿದೆ.
“ತಡೆಗಟ್ಟಬಹುದಾದ ತಾಯಿಯ ಮರಣವನ್ನು ಶೂನ್ಯಕ್ಕೆ ತರುವ ಗುರಿ”ಯ ಬಗ್ಗೆ:
ಇದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ಪ್ರಾರಂಭಿಸಿದ ಒಂದು ಪ್ರಮುಖ ಆರೋಗ್ಯ ಉಪಕ್ರಮವಾಗಿದೆ.
ಉದ್ದೇಶ: ರಾಜ್ಯದ ತಾಯಿಯ ಮರಣ ದರದ ಪ್ರಮಾಣವನ್ನು (MMR) ತಗ್ಗಿಸುವುದು ಇದರ ಮೂಲ ಉದ್ದೇಶವಾಗಿದೆ.
ಪ್ರಸ್ತುತ ಸ್ಥಿತಿ: ಮಾದರಿ ನೋಂದಣಿ ವ್ಯವಸ್ಥೆಯ (SRS) 2021-2023 ರ ವಿಶೇಷ ವರದಿಯ ಪ್ರಕಾರ, ಕರ್ನಾಟಕದ ತಾಯಿಯ ಮರಣ ದರದ ಪ್ರಮಾಣವು (MMR) ಪ್ರತಿ 100,000 ಜೀವಂತ ಜನನಗಳಿಗೆ 68 ರಷ್ಟಿದೆ.
ಗುರಿ: ಆರೋಗ್ಯ ಮೂಲಸೌಕರ್ಯ, ಸೇವೆಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ, ತಡೆಗಟ್ಟಬಹುದಾದ ಎಲ್ಲಾ ರೀತಿಯ ತಾಯಿಯ ಮರಣಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ಇದರ ಗುರಿಯಾಗಿದೆ.
ಈ ಉಪಕ್ರಮದ ಪ್ರಮುಖ ಅಂಶಗಳು:
ಕೇಂದ್ರ ಸರ್ಕಾರದ ರಾಷ್ಟ್ರೀಯ‘ಸುರಕ್ಷಿತ ಮಾತೃತ್ವ ಆಶ್ವಾಸನ್’ (SUMAN) ಯೋಜನೆಯೊಂದಿಗೆ ಸಂಯೋಜನೆಗೊಂಡಿರುವ ಈ ಉಪಕ್ರಮವು, ಗುಣಮಟ್ಟದ ಮತ್ತು ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆಯನ್ನು ಖಾತ್ರಿಪಡಿಸಲು ಬಹುಮುಖಿ ಕಾರ್ಯತಂತ್ರದ ಮೇಲೆ ಗಮನಹರಿಸುತ್ತದೆ.
ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ತರ್ಕಬದ್ಧಗೊಳಿಸುವಿಕೆ: ರಾಜ್ಯದ ಎಲ್ಲಾ 147 ತಾಲೂಕು ಆಸ್ಪತ್ರೆಗಳು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 42 ಸಮುದಾಯ ಆರೋಗ್ಯ ಕೇಂದ್ರಗಳನ್ನು (CHCs) ಬಲಪಡಿಸುವುದು ಇದರ ಭಾಗವಾಗಿದೆ. ಇಲ್ಲಿ ದಿನದ 24 ಗಂಟೆಯೂ ಲಭ್ಯವಿರುವ ‘ಸಮಗ್ರ ತುರ್ತು ಪ್ರಸೂತಿ ಮತ್ತು ನವಜಾತ ಶಿಶು ಆರೈಕೆ’ (CEmONC) ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಅಧಿಕ ಅಪಾಯದ ಗರ್ಭಧಾರಣೆಗಳ ನಿರ್ವಹಣೆ: ಕರ್ನಾಟಕದಲ್ಲಿ ಸಂಭವಿಸುವ ತಾಯಿ ಮರಣಗಳಲ್ಲಿ ಬಹುಪಾಲು (ಅಂದಾಜು 70%) ತಡೆಗಟ್ಟಬಹುದು. ಹೀಗಾಗಿ, ಈ ಗುರಿಯು ಅಧಿಕ ಅಪಾಯದ ಗರ್ಭಧಾರಣೆಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಅವುಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲು ಒತ್ತು ನೀಡುತ್ತದೆ. ರಕ್ತಸ್ರಾವ, ಅಧಿಕ ರಕ್ತದೊತ್ತಡದ ಅಸ್ವಸ್ಥತೆಗಳು ಮತ್ತು ರಕ್ತಹೀನತೆಯಂತಹ ಗಂಭೀರ ತೊಡಕುಗಳಿಗೆ ಸಮಯೋಚಿತ ಚಿಕಿತ್ಸೆಯನ್ನು ಇದು ಖಚಿತಪಡಿಸುತ್ತದೆ.
ಆರ್ಥಿಕ ಮತ್ತು ಪೌಷ್ಟಿಕಾಂಶದ ಬೆಂಬಲ: ಈ ಯೋಜನೆಯಡಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಗರ್ಭಿಣಿ ಮತ್ತು ಬಾಣಂತಿಯರಿಗೆ ಅಗತ್ಯವಿರುವ ಪೌಷ್ಟಿಕಾಂಶದ ಪೊಟ್ಟಣ ಹಾಗೂ ನಗದು ಪ್ರೋತ್ಸಾಹಧನವನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಕೋಟಿ ವೃಕ್ಷ ಅಭಿಯಾನ
ಇದೀಗ ಸುದ್ದಿಯಲ್ಲಿದೆ:
“ಕೋಟಿ ವೃಕ್ಷ ಅಭಿಯಾನ”ದ ಪರಿಣಾಮವಾಗಿ ವಿಜಯಪುರ ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ.
ಕೋಟಿ ವೃಕ್ಷ ಅಭಿಯಾನದ ಬಗ್ಗೆ:
ಸ್ವರೂಪ: “ಕೋಟಿ ವೃಕ್ಷ ಅಭಿಯಾನ” (ಒಂದು ಕೋಟಿ ಮರಗಳ ಅಭಿಯಾನ) ಎಂಬುದು ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಬೃಹತ್ ಪ್ರಮಾಣದ ಮರ ನೆಡುವ ಉಪಕ್ರಮವಾಗಿದೆ. ಜಿಲ್ಲೆಯ ಶುಷ್ಕ ಭೂಪ್ರದೇಶವನ್ನು ಹಸಿರುಮಯವಾಗಿ ಪರಿವರ್ತಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಆರಂಭ: ಈ ಅಭಿಯಾನಕ್ಕೆ 2015 ರಲ್ಲಿ ಸಚಿವರಾದ ಎಂ. ಬಿ. ಪಾಟೀಲ್ ಅವರು ಚಾಲನೆ ನೀಡಿದರು.
ಸಾಧನೆ: ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸುವ ಮೂಲಕ ಸಮುದಾಯದ ಸಹಭಾಗಿತ್ವವನ್ನು ಉತ್ತೇಜಿಸಲಾಯಿತು. ಈ ಕಾರ್ಯಕ್ರಮದ ಅಡಿಯಲ್ಲಿ 1.5 ಕೋಟಿಗೂಹೆಚ್ಚು ಮರಗಳನ್ನು ಯಶಸ್ವಿಯಾಗಿ ನೆಡಲಾಗಿದೆ.
ಪರಿಣಾಮ: ಈ ಮಹತ್ವದ ಪ್ರಯತ್ನವು ಜಿಲ್ಲೆಯ ಅರಣ್ಯ ವ್ಯಾಪ್ತಿಯನ್ನು ವಿಸ್ತರಿಸಿದ್ದಲ್ಲದೆ, ಜೀವಿ ಪರಿಸರ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಿದೆ. ಅಷ್ಟೇ ಅಲ್ಲದೆ, ಇದು ವನ್ಯಜೀವಿಗಳ ಆವಾಸಸ್ಥಾನಗಳ ಮರುಸ್ಥಾಪನೆಗೆ ಕಾರಣವಾಗಿದೆ ಮತ್ತು ಇತರ ಪ್ರದೇಶಗಳಿಗೆ ಮಾದರಿಯಾಗಿ ಸ್ಫೂರ್ತಿ ನೀಡಿದೆ.
ಭಾರತೀಯ ರೈಲ್ವೆಯು ಹೊಸ ‘ಆಭಾರ್’ ಆನ್‌ಲೈನ್ ಮಳಿಗೆಗೆ ಪ್ರೋತ್ಸಾಹ ಮತ್ತು ಸಹಾಯ ಒದಗಿಸುತ್ತಿದೆ.
ಆಯೋಜಕರು:- ಸರ್ಕಾರಿ ಇ-ಮಾರುಕಟ್ಟೆ ವೇದಿಕೆ (GeM).
ಉದ್ದೇಶ:- ಈ ಆನ್‌ಲೈನ್ ಮಳಿಗೆಯು ಪ್ರಧಾನವಾಗಿ ಈ ಕೆಳಗಿನ ವರ್ಗದ ತಯಾರಕರಿಂದ ಸಿದ್ಧಪಡಿಸಿದ ಉಡುಗೊರೆ ವಸ್ತುಗಳನ್ನು ಪ್ರದರ್ಶಿಸುತ್ತದೆ:
ಸ್ಥಳೀಯ ಬುಡಕಟ್ಟು ಜನಾಂಗದವರು ಮತ್ತು ಕೈಮಗ್ಗ ನೇಕಾರರು.
“ಒಂದು ಜಿಲ್ಲೆ ಒಂದು ಉತ್ಪನ್ನ” (ODOP) ಯೋಜನೆಯ ತಯಾರಕರು.
ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಹೊಂದಿರುವ ಉತ್ಪನ್ನಗಳ ತಯಾರಕರು.
ಕೇಂದ್ರ ಗುಡಿ ಕೈಗಾರಿಕೆಗಳ ಮಳಿಗೆ (CCIE).
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC).
ಮಹತ್ವ:
ಇದನ್ನು ‘ವೋಕಲ್ ಫಾರ್ ಲೋಕಲ್’ (‘ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ’) ಅಭಿಯಾನದೊಂದಿಗೆ ಉತ್ತೇಜಿಸಲಾಗಿದೆ.
ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಕುಶಲಕರ್ಮಿಗಳು, ಮಹಿಳಾ ನೇತೃತ್ವದ ಉದ್ದಿಮೆಗಳು ಹಾಗೂ ಸಾಂಪ್ರದಾಯಿಕಕೈಗಾರಿಕೆಗಳಿಗೆ ಬೆಂಬಲ ನೀಡುವುದು ಇದರ ಪ್ರಮುಖ ಗುರಿಯಾಗಿದೆ.
ನಿಮಗಿದು ಗೊತ್ತೇ ?
ಭಾರತೀಯ ರೈಲ್ವೇ ಇಲಾಖೆಯು ಸ್ಥಳೀಯ ಮತ್ತು ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಒದಗಿಸಲು “ಒಂದು ನಿಲ್ದಾಣ ಒಂದು ಉತ್ಪನ್ನ” (OSOP) ಯೋಜನೆಯನ್ನು ಪ್ರಾರಂಭಿಸಿದೆ.
ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ಧಿಯಲ್ಲಿದೆ:
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು “ವ್ಯಾಸ್-ನಾವ್ (VYAS –NAV), ವ್ಯಾಸ್-ಭಾರತ್ (VYAS – BHARAT) ಮತ್ತು ವ್ಯಾಸ್-ಸೂತ್ರ (VYAS- SUTRA)” ಆ್ಯಪ್‌ಗಳನ್ನು ಬಳಸುವ ಮೂಲಕ ‘ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025’ ಕ್ಕೆ ಚಾಲನೆ ನೀಡಿತು.
ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025 ರ ಬಗ್ಗೆ:
ಡಿಜಿಟಲ್ ರಚನೆ:- ಈ ಡಿಜಿಟಲ್ ಪ್ರಕ್ರಿಯೆಯು ಐಸಿಎಆರ್-ಕೇಂದ್ರ ಸಾಗರಿಕ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ICAR-CMFRI) ಅಭಿವೃದ್ಧಿಪಡಿಸಿದ 3 ಬಹುಭಾಷಾ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ:
ವ್ಯಾಸ್-ನಾವ್ : ಇದನ್ನು ಮೀನುಗಾರಿಕಾ ಗ್ರಾಮಗಳು ಮತ್ತು ಬಂದರುಗಳ ದೃಢೀಕರಣಕ್ಕಾಗಿ ಬಳಸಲಾಗುತ್ತದೆ.
ವ್ಯಾಸ್-ಭಾರತ್: ಇದನ್ನು ಕುಟುಂಬಗಳು ಮತ್ತು ಮೂಲಸೌಕರ್ಯಗಳ ಗಣತಿಗಾಗಿ ಬಳಸಲಾಗುತ್ತದೆ.
ವ್ಯಾಸ್-ಸೂತ್ರ : ಇದನ್ನು ದತ್ತಾಂಶ ಸಂಗ್ರಹಣೆಯ ನೈಜ ಸಮಯದ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ಬಳಸಲಾಗುತ್ತದೆ.
ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ
ಇತರೆ
ಇದೀಗ ಸುದ್ಧಿಯಲ್ಲಿದೆ:
2025ನೇ ಸಾಲಿನ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ವನ್ನು 1,466 ಸಿಬ್ಬಂದಿಗೆ ಪ್ರದಾನ ಮಾಡಲಾಗಿದೆ.
ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕದ ಬಗ್ಗೆ:
ಸ್ಥಾಪನೆ: ಕೇಂದ್ರ ಗೃಹ ಸಚಿವಾಲಯ (MHA).
ಗುರುತಿಸುವ ಪ್ರಮುಖ ಕ್ಷೇತ್ರಗಳು: ಇದು ವಿಶೇಷ ಕಾರ್ಯಾಚರಣೆಗಳು, ತನಿಖೆ, ಗುಪ್ತಚರ ಮತ್ತು ವಿಧಿ ವಿಜ್ಞಾನ ಕ್ಷೇತ್ರಗಳಲ್ಲಿನ ಅತ್ಯುನ್ನತ ಸೇವೆಯನ್ನು ಗುರುತಿಸುತ್ತದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ, ಪ್ರತಿ ವರ್ಷ ಅಕ್ಟೋಬರ್ 31 ರಂದು ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.
ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಂತದ ಪೊಲೀಸ್ ಪಡೆಗಳು, ಭದ್ರತಾ ಸಂಸ್ಥೆಗಳು, ಗುಪ್ತಚರ ವಿಭಾಗಗಳು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPFs), ಕೇಂದ್ರೀಯ ಪೊಲೀಸ್ ಸಂಸ್ಥೆಗಳು (CPOs) ಮತ್ತು ವಿಧಿ ವಿಜ್ಞಾನ ಘಟಕಗಳ ಸದಸ್ಯರಿಗೆ ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.
ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025
ಇದೀಗ ಸುದ್ದಿಯಲ್ಲಿದೆ:
ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ‘ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ-2025’ ಅನ್ನು ಮತ್ತಷ್ಟು ಬಲಪಡಿಸುವಂತೆ ‘ಕರ್ನಾಟಕ ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ’ವು ಸರ್ಕಾರವನ್ನು ಒತ್ತಾಯಿಸಿದೆ.
ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025 ರ ಬಗ್ಗೆ:
ಪ್ರಸ್ತುತ ಅಸಂಘಟಿತ (ಅನೌಪಚಾರಿಕ) ವಾಗಿರುವ ಗೃಹ ಕೆಲಸದ ವಲಯವನ್ನು ಸಂಘಟಿತ (ಔಪಚಾರಿಕ) ಗೊಳಿಸುವುದು ಮತ್ತು ರಾಜ್ಯದಅಂದಾಜು 15 ಲಕ್ಷ ಗೃಹ ಕಾರ್ಮಿಕರಿಗೆಸಾಮಾಜಿಕ ಭದ್ರತೆಹಾಗೂ ಕಲ್ಯಾಣ ಸವಲತ್ತುಗಳನ್ನು ಒದಗಿಸುವುದು ಈ ಮಸೂದೆಯ ಪ್ರಮುಖ ಗುರಿಯಾಗಿದೆ.
ಕರಡು ಮಸೂದೆಯ ಪ್ರಮುಖ ನಿಬಂಧನೆಗಳು
ಕಡ್ಡಾಯ ನೋಂದಣಿ: ಗೃಹ ಕಾರ್ಮಿಕರು ಮತ್ತು ಅವರನ್ನು ನೇಮಿಸಿಕೊಳ್ಳುವ ಉದ್ಯೋಗದಾತರು (ಗೃಹ ಮಾಲೀಕರು, ಏಜೆನ್ಸಿಗಳು ಮತ್ತು ಡಿಜಿಟಲ್ ವೇದಿಕೆಗಳು ಸೇರಿದಂತೆ) ನಿಗದಿತ ಸರ್ಕಾರಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಡ್ಡಾಯ ಲಿಖಿತ ಉದ್ಯೋಗ ಒಪ್ಪಂದಗಳು: ಉದ್ಯೋಗದಾತರು ಕಾರ್ಮಿಕರಿಗೆ ವೇತನ, ಕೆಲಸದ ಅವಧಿ, ಸೌಲಭ್ಯಗಳು ಮತ್ತು ಕೆಲಸದ ಷರತ್ತುಗಳನ್ನು ಸ್ಪಷ್ಟಪಡಿಸುವ ಲಿಖಿತ ಒಪ್ಪಂದವನ್ನು ಕಡ್ಡಾಯವಾಗಿ ನೀಡಬೇಕು. ನೋಂದಾಯಿಸದ ಉದ್ಯೋಗವನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ.
ಕಡ್ಡಾಯವಾಗಿ ಕನಿಷ್ಠ ವೇತನ ಮತ್ತು ಕೆಲಸದ ಅವಧಿ: ಕಾರ್ಮಿಕರು ನಿಗದಿತ ಕನಿಷ್ಠ ವೇತನಕ್ಕೆ ಅರ್ಹರಾಗಿರುತ್ತಾರೆ. ವಾರಕ್ಕೆ ಗರಿಷ್ಠ 48 ಗಂಟೆಗಳ ಕೆಲಸದ ಅವಧಿ, ಅಧಿಕ ಅವಧಿಯ ಕೆಲಸಕ್ಕೆ ವೇತನ , ವಿಶ್ರಾಂತಿ ಅವಧಿಗಳು ಮತ್ತು ವಾರಕ್ಕೊಮ್ಮೆ ರಜೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ: ಕಲ್ಯಾಣ ನಿಧಿಯನ್ನು ನಿರ್ವಹಿಸಲು ‘ಕರ್ನಾಟಕ ರಾಜ್ಯ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ’ಯನ್ನು ಸ್ಥಾಪಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಈ ನಿಧಿಯ ಮೂಲಕ ಆರೋಗ್ಯ ವಿಮೆ, ಹೆರಿಗೆ/ಪಿತೃತ್ವ ಸವಲತ್ತುಗಳು, ಪಿಂಚಣಿ, ಅಪಘಾತ ಪರಿಹಾರ ಮತ್ತು ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಧನಸಹಾಯದಂತಹ ಪ್ರಯೋಜನಗಳನ್ನು ಒದಗಿಸಲಾಗುತ್ತದೆ.
ದಂಡನೆಗಳು : ಮಸೂದೆಯ ನಿಯಮಗಳನ್ನು ಪಾಲಿಸದ ಉದ್ಯೋಗದಾತರು ಅಥವಾ ಏಜೆನ್ಸಿಗಳಿಗೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. ಬಾಲ ಕಾರ್ಮಿಕ ಪದ್ಧತಿ ಅಥವಾ ಮಾನವ ಕಳ್ಳಸಾಗಣೆಯಂತಹ ಗಂಭೀರ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು (7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡ) ಪ್ರಸ್ತಾಪಿಸಲಾಗಿದೆ.
ಕುಂದುಕೊರತೆ ನಿವಾರಣೆ : ಕಾರ್ಮಿಕರು ಮತ್ತು ಉದ್ಯೋಗದಾತರ ನಡುವಿನ ವಿವಾದಗಳನ್ನು ಇತ್ಯರ್ಥಪಡಿಸಲು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲು ಪ್ರಸ್ತಾಪಿಸಲಾಗಿದೆ.
ರಾಜ್ಯದ ಕಾರಾಗೃಹಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚನೆ
ಇದೀಗ ಸುದ್ದಿಯಲ್ಲಿದೆ:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳು ಮತ್ತು ವಿಶೇಷ ಆತಿಥ್ಯದ ವರದಿಗಳ ನಂತರ, ಕರ್ನಾಟಕದಾದ್ಯಂತ ಕಾರಾಗೃಹಗಳ ಕಾರ್ಯನಿರ್ವಹಣೆ, ಆಡಳಿತ ಮತ್ತು ಭದ್ರತೆಯನ್ನು ಪರಿಶೀಲಿಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಉನ್ನತ ಮಟ್ಟದ ಸಮಿತಿಯ ಸದಸ್ಯರು:
ಅಧ್ಯಕ್ಷತೆ:- ಹಿತೇಂದ್ರ (ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ)).
ಇತರೆ ಸದಸ್ಯರು:
ಸಂದೀಪ್ ಪಾಟೀಲ್ (ಪೊಲೀಸ್ ಮಹಾನಿರೀಕ್ಷಕ).
ಅಮರನಾಥ್ ರೆಡ್ಡಿ ಮತ್ತು ರಿಷ್ಯಂತ್ (ಪೊಲೀಸ್ ವರಿಷ್ಠಾಧಿಕಾರಿಗಳು)
ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025 ಅನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳು ಮಾತನಾಡಿ ಸಮಾಜ ಸುಧಾರಣೆ, ಶಿಕ್ಷಣ ಮತ್ತು ವೈದಿಕ ಚಿಂತನೆಗಳಲ್ಲಿ ಆರ್ಯ ಸಮಾಜದ 150 ವರ್ಷಗಳ ಪರಂಪರೆಯನ್ನು ಅವರು ಶ್ಲಾಘಿಸಿದರು.
“ಜ್ಞಾನ ಭಾರತಂ ಮಿಷನ್” ಗೆ ಬೆಂಬಲ ನೀಡುವಂತೆ ಪ್ರಧಾನಿ ಮೋದಿ ಆರ್ಯ ಸಮಾಜವನ್ನು ಕೋರಿದರು. ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಮತ್ತು ಭಾರತದ ಜ್ಞಾನ ಪರಂಪರೆಯ ಸಂರಕ್ಷಣೆಯಲ್ಲಿ ಯುವಜನರು ಸಕ್ರಿಯರಾಗುವಂತೆ ಅವರು ಒತ್ತಾಯಿಸಿದರು.
ಆರ್ಯ ಸಮಾಜದ ಬಗ್ಗೆ
ಸ್ಥಾಪಕರು:- ಸ್ವಾಮಿ ದಯಾನಂದ ಸರಸ್ವತಿ.
ಸ್ಥಾಪನೆ:- ಇದನ್ನು 1875 ರಲ್ಲಿ ಬಾಂಬೆಯಲ್ಲಿ ಸ್ಥಾಪಿಸಿ , 1877 ರಲ್ಲಿ ಲಾಹೋರ್‌ನಲ್ಲಿ ಸ್ಥಾಪನೆಗೆ ಅಂತಿಮ ಸ್ವರೂಪ ನೀಡಲಾಯಿತು.
ಪ್ರಮುಖ ಸುಧಾರಣೆಗಳು
ಧಾರ್ಮಿಕ ನಂಬಿಕೆ:- ಮೂರ್ತಿ ಪೂಜೆ, ಆಚರಣೆಗಳು ಮತ್ತು ಪುರೋಹಿತಶಾಹಿ ಪ್ರಾಬಲ್ಯವನ್ನು ತಿರಸ್ಕರಿಸಿತು.
ಸಾಮಾಜಿಕ ಸೇವೆ:- ಜನ್ಮ ಆಧಾರಿತ ಜಾತಿ ಪದ್ಧತಿ, ಅಸ್ಪೃಶ್ಯತೆ, ಬಾಲ್ಯ ವಿವಾಹ ಮತ್ತು ಬಲವಂತದ ವಿಧವೆಯತ್ವವನ್ನು ವಿರೋಧಿಸಿತು. ಅಂತರ್ಜಾತಿ ವಿವಾಹ, ವಿಧವಾ ಮರುವಿವಾಹ, ಮಹಿಳಾ ಶಿಕ್ಷಣ ಮತ್ತು ಸಮಾಜ ಸೇವೆಯನ್ನು ಪ್ರತಿಪಾದಿಸಿತು.
ಶೈಕ್ಷಣಿಕ ಉತ್ತೇಜನ:- ವೈದಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಲು, ಸಾಮಾಜಿಕ ಚಲನಶೀಲತೆ ಮತ್ತು ರಾಷ್ಟ್ರೀಯತೆಯನ್ನು ಬೆಳೆಸಲು ಡಿ.ಎ.ವಿ ಶಾಲೆಗಳು ಮತ್ತು ಗುರುಕುಲ ಕಾಂಗ್ರಿಯನ್ನು ಸ್ಥಾಪಿಸಿತು.
ಭಾರತದ ರಾಷ್ಟ್ರೀಯತೆ ಮತ್ತು ಸಾಮಾಜಿಕ ಬದಲಾವಣೆಯಲ್ಲಿನ ಇದರ ಪಾತ್ರ:
ಲಾಲಾ ಲಜಪತ್ ರಾಯ್, ಭಗತ್ ಸಿಂಗ್ ಮತ್ತು ಇತರರು ಸೇರಿದಂತೆ ಆರ್ಯ ಸಮಾಜದ ಸದಸ್ಯರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇವರು ಸ್ವದೇಶಿ ಮತ್ತು ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸಿದರು.
ಸಮಕಾಲೀನ ಭಾರತದಲ್ಲಿ ಆರ್ಯ ಸಮಾಜದ ಪ್ರಸ್ತುತತೆ:
ಮಹಿಳಾ ನೇತೃತ್ವದ ಪ್ರಗತಿ: ಮಹಿಳಾ ಸಬಲೀಕರಣಕ್ಕಾಗಿ ಆರ್ಯ ಸಮಾಜದ ಆರಂಭಿಕ ಪ್ರತಿಪಾದನೆಯು ರಾಷ್ಟ್ರೀಯ ಉಪಕ್ರಮಗಳಾದ “ಬೇಟಿ ಬಚಾವೋ ಬೇಟಿ ಪಢಾವೋ”, “ನಾರಿ ಶಕ್ತಿ ವಂದನ್ ಅಧಿನಿಯಮ್” ಮತ್ತು “ಡ್ರೋನ್ ದೀದಿ” ಗಳೊಂದಿಗೆ ಹೊಂದಾಣಿಕೆಯಾಗುತ್ತದೆ.
ಗುರುಕುಲ ಸಂಪ್ರದಾಯ ಮತ್ತು ಶೈಕ್ಷಣಿಕ ಸುಧಾರಣೆಯ ಸಂರಕ್ಷಣೆ: ಆರ್ಯ ಸಮಾಜವು ಭಾರತದ ಗುರುಕುಲ ಪದ್ಧತಿಯನ್ನು ಪುನರುಜ್ಜೀವನಗೊಳಿಸಿತು, ವೈದಿಕ ಕಲಿಕೆಯನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಿತು.
ವೈದಿಕ ಆದರ್ಶಗಳು ಮತ್ತು ಜಾಗತಿಕ ಪ್ರಸ್ತುತತೆ:“ಕೃಣ್ವಂತೋ ವಿಶ್ವಂ ಆರ್ಯಂ” ಎಂಬ ಧ್ಯೇಯವಾಕ್ಯವು ಜಾಗತಿಕ ಕಲ್ಯಾಣಕ್ಕಾಗಿ ರಾಷ್ಟ್ರೀಯ ಪ್ರಗತಿ ಎಂಬ ಭಾರತದ ಅಭಿವೃದ್ಧಿ ತತ್ವವನ್ನು ಪ್ರತಿಬಿಂಬಿಸುತ್ತದೆ. ಸುಸ್ಥಿರ ಮತ್ತು ಆಧ್ಯಾತ್ಮಿಕ ಜೀವನವನ್ನು ಪ್ರಪಂಚದಾದ್ಯಂತ ಹರಡುವ ‘ಮಿಷನ್ ಲೈಫ್’, ‘ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್’ ಮತ್ತು ಅಂತರರಾಷ್ಟ್ರೀಯ ಯೋಗ ದಿನದಂತಹ ಉಪಕ್ರಮಗಳಲ್ಲಿ ಇದರ ಆದರ್ಶಗಳು ಪ್ರತಿಧ್ವನಿಸುತ್ತವೆ.
ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ, 2025
ಸಾಮಾನ್ಯ ಅಧ್ಯಯನ – 2 / ಅಂತರರಾಷ್ಟ್ರೀಯ ಸಂಬಂಧಗಳು; ಜಾಗತಿಕ ಸಂಘಟನೆಗಳು
ಇದೀಗ ಸುದ್ದಿಯಲ್ಲಿ
ಇತ್ತೀಚೆಗೆ, ದಕ್ಷಿಣ ಕೊರಿಯಾದ ಗ್ಯುಂಗ್‌ಜುನಲ್ಲಿ ನಡೆದ ‘ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ’ಯು (2025), APECನಾಯಕರಗ್ಯುಂಗ್ಜು ಘೋಷಣೆ’ಯನ್ನುಅಂಗೀಕರಿಸುವುದರೊಂದಿಗೆ ಮುಕ್ತಾಯಗೊಂಡಿತು.
ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ, 2025 ಯ ಬಗ್ಗೆ:
ನಾಯಕರ ಘೋಷಣೆಯ (ಗ್ಯುಂಗ್‌ಜು ಘೋಷಣೆ) ಅಂಗೀಕಾರ: APEC ನಾಯಕರು ಈ ಕೆಳಗಿನ ವಿಷಯಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಜಂಟಿ ಘೋಷಣೆಯನ್ನು ಅನುಮೋದಿಸಿದರು:
ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತ ಮುಕ್ತ ಮತ್ತು ತೆರೆದ ವ್ಯಾಪಾರ;
ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು;
ಅಂತರ್ಗತ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು;
ಡಿಜಿಟಲ್ ಪರಿವರ್ತನೆ ಮತ್ತು ಹವಾಮಾನ ಕ್ರಿಯೆಯನ್ನು ಮುನ್ನಡೆಸುವುದು.
ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ದ ಬಗ್ಗೆ
ಇದು 1989 ರಲ್ಲಿ ಸ್ಥಾಪನೆಯಾದ ಪ್ರಾದೇಶಿಕ ಆರ್ಥಿಕ ವೇದಿಕೆಯಾಗಿದೆ.
ಉದ್ದೇಶ – ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತದ ಆರ್ಥಿಕತೆಗಳ ಪರಸ್ಪರ ಅವಲಂಬನೆಯನ್ನು ಬಲಪಡಿಸುವುದು.
ಸದಸ್ಯ ಆರ್ಥಿಕತೆ ರಾಷ್ಟ್ರಗಳು (21 ಸದಸ್ಯರು): ಆಸ್ಟ್ರೇಲಿಯಾ; ಬ್ರೂನಿ ದಾರುಸ್ಸಲಾಮ್; ಕೆನಡಾ; ಚಿಲಿ; ಚೀನಾ; ಹಾಂಗ್ ಕಾಂಗ್, ಚೀನಾ; ಇಂಡೋನೇಷ್ಯಾ; ಜಪಾನ್; ರಿಪಬ್ಲಿಕ್ ಆಫ್ ಕೊರಿಯಾ; ಮಲೇಷ್ಯಾ; ಮೆಕ್ಸಿಕೊ; ನ್ಯೂಜಿಲೆಂಡ್; ಪಪುವಾ ನ್ಯೂ ಗಿನಿಯಾ; ಪೆರು; ಫಿಲಿಪೈನ್ಸ್; ರಷ್ಯನ್ ಫೆಡರೇಶನ್; ಸಿಂಗಾಪುರ್ (APEC ಸಚಿವಾಲಯ ಮತ್ತು ಕೇಂದ್ರ ಕಛೇರಿ); ಚೈನೀಸ್ ತೈಪೆ; ಥೈಲ್ಯಾಂಡ್; ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ; ಮತ್ತು ವಿಯೆಟ್ನಾಂ.
ನಿವ್ವಳ-ಶೂನ್ಯ ಭಾರತಕ್ಕಾಗಿ ಇಂಗಾಲದ ಸೆರೆಹಿಡಿಯುವಿಕೆ
ಸಾಮಾನ್ಯ ಅಧ್ಯಯನ – 3 / ಪರಿಸರ ಅಧ್ಯಯನ
ಇದೀಗ ಸುದ್ಧಿಯಲ್ಲಿದೆ:
ಸಾಗರ ಆಧಾರಿತ ಇಂಗಾಲದ ಸೆರೆಹಿಡಿಯುವಿಕೆ (ಕಾರ್ಬನ್ ಕ್ಯಾಪ್ಚರ್) ತಂತ್ರಜ್ಞಾನವು 2070ರೊಳಗೆ ಭಾರತವನ್ನು ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿ ತಲುಪಲು ಸಹಾಯ ಮಾಡಬಹುದು. ಈ ತಂತ್ರಜ್ಞಾನವು ಸಮುದ್ರಗಳನ್ನು ಇಂಗಾಲ ಹೀರಿಕೊಳ್ಳುವ ಸಾಮರ್ಥ್ಯವುಳ್ಳ ಮತ್ತು ನೀಲಿ ಬೆಳವಣಿಗೆಯ ಕೇಂದ್ರಗಳಾಗಿ ಪರಿವರ್ತಿಸುತ್ತವೆ.
ಇಂಗಾಲದ ಸೆರೆಹಿಡಿಯುವಿಕೆ, ಬಳಸುವಿಕೆ ಮತ್ತು ಸಂಗ್ರಹಿಸುವಿಕೆ (CCUS) ಎಂದರೇನು?
ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಯ ಪ್ರಕಾರ, CCUS ಎಂದರೆ, ಪಳಿಯುಳಿಕೆ ಇಂಧನ ಆಧಾರಿತ ವಿದ್ಯುತ್ ಸ್ಥಾವರಗಳು ಮತ್ತು ಇತರೆ ಕೈಗಾರಿಕೆಗಳಂತಹ ದೊಡ್ಡ ಮತ್ತು ಸ್ಥಿರ ಇಂಗಾಲದ ಡೈ ಆಕ್ಸೈಡ್ (CO2) ಹೊರಸೂಸುವ ಮೂಲಗಳಿಂದ CO2 ಅನ್ನು ಸೆರೆಹಿಡಿಯುವ, ಬಳಸಿಕೊಳ್ಳುವ ಮತ್ತು ಸುರಕ್ಷಿತವಾಗಿ ಸಂಗ್ರಹಿಸುವ ತಂತ್ರಜ್ಞಾನಗಳ ಗುಂಪಾಗಿದೆ. ಈ ಪ್ರಕ್ರಿಯೆಯು ವಾತಾವರಣಕ್ಕೆ CO2 ಸೇರುವುದನ್ನು ತಡೆಯುತ್ತದೆ.
ಇಂಗಾಲದ ಹೊರಸೂಸುವಿಕೆ ಕಡಿತದ ಕುರಿತು ಭಾರತದ ಬದ್ಧತೆಗಳು:
ಭಾರತವು ‘ಮಿಷನ್ ಲೈಫ್ ‘(ಪರಿಸರಕ್ಕಾಗಿ ಜೀವನಶೈಲಿ) ಅನ್ನು ಪ್ರಾರಂಭಿಸಿದೆ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (NDCs) ನವೀಕರಿಸಿದೆ.
ನವೀಕರಿಸಿದ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ, 2022 ರ ಅಡಿಯಲ್ಲಿ ಭಾರತದ ಪ್ರಮುಖ ಬದ್ಧತೆಗಳು:
ಹೊರಸೂಸುವಿಕೆ ತೀವ್ರತೆಯ ಕಡಿತ: 2005ರ ಮಟ್ಟಕ್ಕೆ ಹೋಲಿಸಿದರೆ, 2030ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ ಪ್ರತಿ ಘಟಕಕ್ಕೆ CO₂ ಹೊರಸೂಸುವಿಕೆಯನ್ನು 45%ರಷ್ಟು ಕಡಿಮೆ ಮಾಡುವುದು.
ಪಳೆಯುಳಿಕೆಯೇತರ ಇಂಧನ ಮೂಲಗಳು: 2030ರ ವೇಳೆಗೆ ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 50% ಅನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಪಡೆಯುವುದು.
ಇಂಗಾಲದ ತೊಟ್ಟಿ (ಕಾರ್ಬನ್ ಸಿಂಕ್) ಯ ಸೃಷ್ಟಿ:ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ 2.5 ರಿಂದ 3 ಶತಕೋಟಿ ಟನ್‌ಗಳಷ್ಟು CO₂ ಸಮಾನ (GtCO₂e) ಹೆಚ್ಚುವರಿ ಇಂಗಾಲದ ತೊಟ್ಟಿಯನ್ನು ಸೃಷ್ಟಿಸುವುದು.
ಹೆಚ್ಚುವರಿ ಮಾಹಿತಿ:
ಭಾರತವು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯನ್ನು ತಲುಪುವ ಯೋಜನೆಯನ್ನು 2021ರ COP26ನಲ್ಲಿ ಘೋಷಿಸಿತು.
ಸಾಗರ ಆಧಾರಿತ CCUS ತಂತ್ರಜ್ಞಾನಗಳೊಂದಿಗೆ, ಸಮುದ್ರದೊಳಗಿನ ಭೂವೈಜ್ಞಾನಿಕ ರಚನೆಗಳಲ್ಲಿ CO2 ಅನ್ನು ಸಂಗ್ರಹಿಸಬಹುದು, ಇದು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತೊಂದು ಮಾರ್ಗ ಒದಗಿಸುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯದಿಂದ 3 ಗಿನ್ನೆಸ್ ವಿಶ್ವ ದಾಖಲೆಗಳ ನಿರ್ಮಾಣ
ಸಾಮಾನ್ಯ ಅಧ್ಯಯನ – 2 / ಆರೋಗ್ಯ
ಇದೀಗ ಸುದ್ಧಿಯಲ್ಲಿದೆ:
ರಾಷ್ಟ್ರವ್ಯಾಪಿ “ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನ”ದ (SNSPA) ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮೂರು ಗಿನ್ನೆಸ್ ವಿಶ್ವ ದಾಖಲೆಗಳ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
3 ಗಿನ್ನೆಸ್ ವಿಶ್ವ ದಾಖಲೆಗಳು:
ಒಂದು ತಿಂಗಳಲ್ಲಿ ಅತೀ ಹೆಚ್ಚಿನ ಜನರು “ಆರೋಗ್ಯ ರಕ್ಷಣಾ ವೇದಿಕೆ”ಯಲ್ಲಿ ನೋಂದಾಯಿಸಿಕೊಂಡಿರುವುದು.
ಒಂದು ವಾರದಲ್ಲಿ ಆನ್‌ಲೈನ್ ಮೂಲಕ ಸ್ತನ ಕ್ಯಾನ್ಸರ್ ತಪಾಸಣೆಗಾಗಿ ಅತಿ ಹೆಚ್ಚು ಜನರು ನೋಂದಾಯಿಸಿಕೊಂಡಿರುವುದು.
ಒಂದು ವಾರದಲ್ಲಿ ಆನ್‌ಲೈನ್ ಮೂಲಕ ಪ್ರಮುಖ ಆರೋಗ್ಯ ಲಕ್ಷಣಗಳ ತಪಾಸಣೆಗಾಗಿ (ರಾಜ್ಯ ಮಟ್ಟದಲ್ಲಿ) ಅತಿ ಹೆಚ್ಚು ಜನರು ನೋಂದಾಯಿಸಿಕೊಂಡಿರುವುದು.
ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನದ ಬಗ್ಗೆ:
ಚಾಲನೆ: ‘ರಾಷ್ಟ್ರೀಯ ಪೋಷಣಾ ಮಾಸಾಚರಣೆ’ಯ (ಪೋಷಣ್ ಮಾಹ್) ಅಂಗವಾಗಿ, 2025 ರ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ಅವಧಿಯಲ್ಲಿ ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಯಿತು.
ಉದ್ದೇಶ: ದೇಶದ ಮಹಿಳೆಯರು, ಕಿಶೋರಿಯರು ಮತ್ತು ಮಕ್ಕಳ ಆರೋಗ್ಯಹಾಗೂ ಸಮಗ್ರಪೋಷಣೆಯ ಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಅಭಿಯಾನವು ಪ್ರಮುಖವಾಗಿ ಗಮನ ಹರಿಸುತ್ತದೆ.
ಕರ್ನಾಟಕದ ಸಂಪನ್ಮೂಲ ಕ್ರೂಢೀಕರಣ ಸಮಿತಿಯು (RMC) ರಾಜ್ಯದ ರಾಜಸ್ವವನ್ನು (ಆದಾಯ) ಹೆಚ್ಚಿಸಲು ಸಮಗ್ರ ಸುಧಾರಣೆಗಳನ್ನು ಶಿಫಾರಸು ಮಾಡಲು, ನವೆಂಬರ್ 2025 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು.
ಕರ್ನಾಟಕದ ಸಂಪನ್ಮೂಲ ಕ್ರೂಢೀಕರಣ ಸಮಿತಿ (RMC) ಯ ಬಗ್ಗೆ:
ರಚನೆ – ಆಗಸ್ಟ್- 2024.
ನೇತೃತ್ವ – ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ಅವರ ನೇತೃತ್ವದ ಸಮಿತಿ.
ಕಾರ್ಯವ್ಯಾಪ್ತಿ – ಇದು ರಾಜ್ಯದ ರಾಜಸ್ವವನ್ನು ಹೆಚ್ಚಿಸಲು ಸಮಗ್ರ ಸುಧಾರಣೆಗಳನ್ನು ಶಿಫಾರಸು ಮಾಡುವ ಸರ್ಕಾರ ನೇಮಿಸಿದ ಸಮಿತಿಯಾಗಿದೆ.
ಪ್ರಮುಖ ಶಿಫಾರಸುಗಳು
ಬಳಕೆದಾರರ ಶುಲ್ಕಗಳ ಹೆಚ್ಚಳ ಮತ್ತು ತರ್ಕಬದ್ಧಗೊಳಿಸುವಿಕೆ: ಸರ್ಕಾರಿ ಸೇವೆ ಮತ್ತು ಸೌಲಭ್ಯಗಳಿಗೆ ವಿಧಿಸುವ ಶುಲ್ಕಗಳನ್ನು ತರ್ಕಬದ್ಧಗೊಳಿಸುವುದು ಮತ್ತು ಹೆಚ್ಚಿಸುವುದು. ಸ್ವಯಂಚಾಲಿತ ಹಣದುಬ್ಬರ ಸೂಚ್ಯಂಕದೊಂದಿಗೆ ಕೂಡಿದ ಗಾತ್ರಾಧಾರಿತ ಶುಲ್ಕ ಪದ್ಧತಿಗೆ ಬದಲಾಗುವುದು.
ತೆರಿಗೆ ಸುಧಾರಣೆಗಳು:ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ವಾಣಿಜ್ಯ ತೆರಿಗೆಗಳು ಹಾಗೂ ಅಬಕಾರಿ ಸುಂಕಗಳಂತಹ ಕೆಲವೇ ಮೂಲಗಳ ಮೇಲಿನ ರಾಜ್ಯದ ಅವಲಂಬನೆಯನ್ನು ಕಡಿಮೆ ಮಾಡಲು ತೆರಿಗೆ ಪದ್ಧತಿಯನ್ನು ಪುನಾರಚಿಸುವುದು.
ಅಬಕಾರಿ ವ್ಯವಸ್ಥೆಯ ಆಧುನೀಕರಣ: ಅಬಕಾರಿ ವಲಯದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಹರಾಜು ಆಧಾರಿತ ಡಿಜಿಟಲ್ ಪರವಾನಗಿಯನ್ನು ಪರಿಚಯಿಸುವುದು.
ಆಸ್ತಿ ನಗದೀಕರಣ: ಸರ್ಕಾರಿ ಆಸ್ತಿಗಳ ವೈಜ್ಞಾನಿಕ ಮೌಲ್ಯಮಾಪನ ನಡೆಸಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಅಡಿಯಲ್ಲಿ ಗುತ್ತಿಗೆ ನೀಡುವ ಮೂಲಕ ಆಸ್ತಿಗಳ ಮೌಲ್ಯವನ್ನು ವರ್ಧಿಸುವುದು.
ಆಸ್ತಿ ನಿರ್ವಹಣೆಯನ್ನು ಬಲಪಡಿಸುವುದು: ಆಸ್ತಿ ದತ್ತಾಂಶ ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಸರ್ಕಾರಿ ಆಸ್ತಿಗಳ ವ್ಯವಸ್ಥಿತ ಸಮೀಕ್ಷೆಗಳನ್ನು ನಡೆಸುವುದು.
ಆರ್ಥಿಕ ನೀತಿ ವಿಭಾಗದ ಸ್ಥಾಪನೆ: ತೆರಿಗೆಯೇತರ ರಾಜಸ್ವವನ್ನು ಮೇಲ್ವಿಚಾರಣೆ ಮಾಡಲು ಮತ್ತು ಆಸ್ತಿ ನಗದೀಕರಣ ಉಪಕ್ರಮಗಳ ಉಸ್ತುವಾರಿ ನೋಡಿಕೊಳ್ಳಲು ಹಣಕಾಸು ಇಲಾಖೆಯ ಅಡಿಯಲ್ಲಿ ಪ್ರತ್ಯೇಕ ‘ಆರ್ಥಿಕ ನೀತಿ ವಿಭಾಗ’ವನ್ನು ಸ್ಥಾಪಿಸುವುದು.
ನಗರ ಭೂಮಿ ನಗದೀಕರಣ: ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸುವ ಕ್ರಮಗಳ ಭಾಗವಾಗಿ ‘ನಗರ ಭೂಮಿ ನಗದೀಕರಣ’ಕ್ಕೂ ಒತ್ತು ನೀಡಲಾಗಿದೆ.
ಕೃಷಿ ಮೇಳ, 2025
ಇದೀಗ ಸುದ್ದಿಯಲ್ಲಿದೆ:
ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು, ನವೆಂಬರ್ 13 ರಿಂದ 16 ರವರೆಗೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ‘ಕೃಷಿ ಮೇಳ 2025’ ಅನ್ನು ಆಯೋಜಿಸಿತ್ತು.
2025 ರ ಧ್ಯೇಯವಾಕ್ಯ: ‘ಸಮೃದ್ಧ ಕೃಷಿ – ವಿಕಸಿತ ಭಾರತ: ನೆಲ, ಜಲ, ಬೆಳೆ’.
ಮೈಸೂರಿನ ಹೊರವಲಯದಲ್ಲಿ ಗಂಗರ ಕಾಲದ 10ನೇ ಶತಮಾನದ ಶಾಸನ ಪತ್ತೆಯಾಗಿದೆ
ಇದೀಗ ಸುದ್ದಿಯಲ್ಲಿದೆ:
ಮೈಸೂರಿನ ಹೊರವಲಯದಲ್ಲಿರುವ ನಾಡನಹಳ್ಳಿಯ ಮಹಾಲಿಂಗೇಶ್ವರ ದೇವಾಲಯದ ಒಳಗೆ ಗಂಗರ ಕಾಲದ 10ನೇ ಶತಮಾನದ ಶಾಸನವೊಂದು ಪತ್ತೆಯಾಗಿದೆ.
ಈ ಶಾಸನದ ಬಗ್ಗೆ ಹೆಚ್ಚಿನ ಮಾಹಿತಿ:
ಇದು ಕ್ರಿ.ಶ. 948 ರ ಗಂಗರ ದೊರೆ ಇಮ್ಮಡಿ ಬೂತುಗನ ಕಾಲದ ಕನ್ನಡ ಶಾಸನವಾಗಿದೆ.
ಇಮ್ಮಡಿ ಬೂತುಗನ ಆಳ್ವಿಕೆಯ ಸಮಯದಲ್ಲಿ, ಅವನ ಅಂಗರಕ್ಷಕಿಯಾದ ಮಾರೆಮ್ಮಳು ತೋಟವನ್ನು ದೇವಾಲಯಕ್ಕೆ ತೆರಿಗೆ ರಹಿತವಾಗಿ ದಾನ ನೀಡಿರಬಹುದು ಮತ್ತು ಅದರ ನಿರ್ವಹಣೆಯನ್ನು ಗ್ರಾಮದ ಮುಖ್ಯಸ್ಥ ವಿಜಕೇತ ಗಾವುಂಡನಿಗೆ ಒಪ್ಪಿಸಿರಬಹುದು ಎಂದು ನಂಬಲಾಗಿದೆ.
ಕರ್ನಾಟಕ ನವೋದ್ಯಮ ನೀತಿ, 2025-30
ಇದೀಗ ಸುದ್ದಿಯಲ್ಲಿದೆ:
‘ಕರ್ನಾಟಕ ನವೋದ್ಯಮ ನೀತಿ, 2025-30’ ಕ್ಕೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಇದು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 25,000 ಹೊಸ ನವೋದ್ಯಮಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿದೆ.
ಕರ್ನಾಟಕ ನವೋದ್ಯಮ ನೀತಿ, 2025-30 ರ ಬಗ್ಗೆ:
ಗುರಿ:- ಒಟ್ಟು ಉದ್ದೇಶಿತ 25,000 ನವೋದ್ಯಮಗಳ ಪೈಕಿ, ಕನಿಷ್ಠ 10,000 ನವೋದ್ಯಮಗಳನ್ನು ಬೆಂಗಳೂರಿನ ಆಚೆಗೆ ಸ್ಥಾಪನೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಈ ನೀತಿಯ ಪ್ರಮುಖ ಗುರಿಯಾಗಿದೆ.
ದೃಷ್ಟಿಕೋನ:
ಜಾಗತಿಕ ನಾವೀನ್ಯತಾ ಕೇಂದ್ರ: ಕರ್ನಾಟಕವನ್ನು ‘ಜಾಗತಿಕ ನಾವೀನ್ಯತಾ ಕೇಂದ್ರವನ್ನಾಗಿ’ ರೂಪಿಸುವುದು ಮತ್ತು ನವೋದ್ಯಮಗಳ ಸಂಪೂರ್ಣ ಅವಧಿಯಲ್ಲಿ ಅವುಗಳನ್ನು ಪೋಷಿಸಲು ಪೂರಕವಾದ ಹಾಗೂ ಚೈತನ್ಯದಾಯಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು.
ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಸಂಪನ್ಮೂಲ: ಸುಸ್ಥಿರ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಯನ್ನು ಸಾಧಿಸಲು ಅತ್ಯಗತ್ಯವಾದ ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು.
ಧ್ಯೇಯ:
ಬೆಂಗಳೂರಿನ ಆಚೆಗಿನ ವಲಯಗಳು: ಈ ನೀತಿಯ ಅಡಿಯಲ್ಲಿ 25,000 ಹೆಚ್ಚುವರಿ ಹೊಸ ನವೋದ್ಯಮಗಳನ್ನು ಸ್ಥಾಪಿಸಲು ರಾಜ್ಯವು ಬದ್ಧವಾಗಿದೆ. ಇದರಲ್ಲಿ 10,000 ನವೋದ್ಯಮಗಳು ‘ಬೆಂಗಳೂರಿನ ಆಚೆಗಿನ’ ವಲಯಗಳಲ್ಲಿ ಆರಂಭವಾಗಲಿವೆ.
ಉದ್ಯಮಶೀಲತೆಯ ವಿಸ್ತರಣೆ: ಉದ್ಯಮಶೀಲತೆಯ ಹೆಜ್ಜೆಗುರುತುಗಳನ್ನು ರಾಜ್ಯದಾದ್ಯಂತ ವಿಸ್ತರಿಸುವ ಮೂಲಕ, ಪ್ರಮುಖ ನಾವೀನ್ಯತಾ ಕೇಂದ್ರವಾಗಿ ಕರ್ನಾಟಕದ ಸ್ಥಾನಮಾನವನ್ನು ಮತ್ತಷ್ಟು ಉನ್ನತೀಕರಿಸುವುದು.
ಬೆಂಬಲಿತ ವ್ಯವಸ್ಥೆ: ವಿವಿಧ ಪ್ರದೇಶಗಳಲ್ಲಿ ಉದ್ಯಮಿಗಳಿಗೆ ಉತ್ತೇಜನ ನೀಡಲು ನಾವೀನ್ಯತಾ ಕೇಂದ್ರಗಳು, ಇನ್ಕ್ಯುಬೇಷನ್ ಕೇಂದ್ರಗಳು ಮತ್ತು ಸಹ-ಕೆಲಸದ ಸ್ಥಳಗಳನ್ನು ವಿಸ್ತರಿಸುವುದು.
ಜಾಗತಿಕ ಸಂಪರ್ಕ: ನವೋದ್ಯಮಗಳು ತಮ್ಮ ವ್ಯಾಪ್ತಿಯನ್ನು ವಿಶ್ವಮಟ್ಟದಲ್ಲಿ ವಿಸ್ತರಿಸಿಕೊಳ್ಳಲು, ಅಂತರರಾಷ್ಟ್ರೀಯ ಸಹಯೋಗಗಳು, ವಾಣಿಜ್ಯ ಪಾಲುದಾರಿಕೆಗಳು ಮತ್ತು ಜಾಗತಿಕ ಸಂಪರ್ಕ ಜಾಲದ ಅವಕಾಶಗಳನ್ನು ಬಲಪಡಿಸುವುದು
ಇಸ್ರೋದ ಎಲ್ ವಿಎಂ 3 ರಾಕೆಟ್ ಮೂಲಕ ‘ಜಿ ಸ್ಯಾಟ್ -7 R’ ಉಪಗ್ರಹ ಉಡಾವಣೆ
ಸಾಮಾನ್ಯ ಅಧ್ಯಯನ – 3 / ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಭಾರತೀಯ ನೌಕಾಪಡೆಯ ಸುಧಾರಿತ ಸಂವಹನ ಉಪಗ್ರಹವಾದ ಜಿ ಸ್ಯಾಟ್ -7 R (CMS-03) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.
ಜಿ ಸ್ಯಾಟ್ -7 R ಉಪಗ್ರಹದ ಬಗ್ಗೆ:
ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಉಪಗ್ರಹವಾಗಿದ್ದು, ಅಂದಾಜು 4,400 ಕೆ.ಜಿ ತೂಕವನ್ನು ಹೊಂದಿದೆ. ಇದು ಇಲ್ಲಿಯವರೆಗೆ ಭಾರತದಲ್ಲಿ ಉಡಾವಣೆಯಾದ ದೇಶದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದೆ.
ಇದು 2013 ರಲ್ಲಿ ಉಡಾವಣೆಗೊಂಡಿದ್ದ ಮತ್ತು ಪ್ರಮುಖವಾಗಿ ಭಾರತೀಯ ನೌಕಾಪಡೆಗೆ ಮೀಸಲಾಗಿದ್ದ ಜಿ ಸ್ಯಾಟ್ -7 (ರುಕ್ಮಿಣಿ) ಉಪಗ್ರಹವನ್ನು ಬದಲಾಯಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ಉಡಾವಣಾ ವಾಹನ: LVM3 (ತನ್ನ M5 ಕಾರ್ಯಾಚರಣೆಯಲ್ಲಿ).
ಈ ಉಪಗ್ರಹವನ್ನು ಯಶಸ್ವಿಯಾಗಿ “ಭೂ ಹೊಂದಾಣಿಕೆ ವರ್ಗಾವಣೆ ಕಕ್ಷೆಗೆ” (GTO) ಸೇರಿಸಲಾಗಿದೆ.
ಲಕ್ನೋವನ್ನು ಯುನೆಸ್ಕೋದ ಪಾಕಶಾಸ್ತ್ರ (ಅನುಗುಣವಾದ ಆಹಾರ ಸಂಸ್ಕೃತಿ) ವಿಭಾಗದ ಸೃಜನಾತ್ಮಕ ನಗರವಾಗಿ ಘೋಷಿಸಲಾಗಿದೆ.
ಇತರೆ
ಇದೀಗ ಸುದ್ದಿಯಲ್ಲಿದೆ:
ಲಕ್ನೋದ ಶ್ರೀಮಂತ ಮತ್ತು ವೈವಿಧ್ಯಮಯ ಅಡುಗೆ ಪರಂಪರೆಯನ್ನು, ವಿಶೇಷವಾಗಿ ಅದರ ಪ್ರಖ್ಯಾತ ‘ಅವಧಿ’ ಖಾದ್ಯಗಳನ್ನು ಗುರುತಿಸಿ, ಯುನೆಸ್ಕೋ ಲಕ್ನೋವನ್ನು ‘ಪಾಕಶಾಸ್ತ್ರದ ಸೃಜನಾತ್ಮಕ ನಗರ’ ಎಂದು ಘೋಷಿಸಿದೆ.
ಹೈದರಾಬಾದ್ (2019) ನ ನಂತರ, ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲದ (UCCN) ಪಾಕಶಾಸ್ತ್ರ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರವಾದ ಭಾರತದ ಎರಡನೇ ನಗರ ಲಕ್ನೋ ಆಗಿದೆ.
ಯುನೆಸ್ಕೋ ಪಾಕಶಾಸ್ತ್ರದ ಸೃಜನಾತ್ಮಕ ನಗರ:
ಶ್ರೀಮಂತ ಅಡುಗೆ ಸಂಪ್ರದಾಯಗಳು ಮತ್ತು ನವೀನ ಆಹಾರ ಸಂಸ್ಕೃತಿಗಳನ್ನು ಹೊಂದಿರುವ ನಗರಗಳನ್ನು ‘ಯುನೆಸ್ಕೋ ಪಾಕಶಾಸ್ತ್ರದ ಸೃಜನಾತ್ಮಕ ನಗರ’ ಎಂಬ ಹೆಸರಿನಡಿ ಗೌರವಿಸಲಾಗುತ್ತದೆ.
ಈ ಮನ್ನಣೆಯು ‘ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲ’ದ ಭಾಗವಾಗಿದೆ.
ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲದ (UCCN) ಬಗ್ಗೆ:
ಪ್ರಾರಂಭ: 2004 ರಲ್ಲಿ.
ಉದ್ದೇಶ:ಸುಸ್ಥಿರ ನಗರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ಚೈತನ್ಯಕ್ಕಾಗಿ ಸೃಜನಶೀಲತೆಯಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
ಪ್ರಸ್ತುತ, ಈ ಜಾಲವು 8 ಸೃಜನಾತ್ಮಕ ಕ್ಷೇತ್ರಗಳನ್ನು ಒಳಗೊಂಡಿದೆ – ಕರಕುಶಲ ಮತ್ತು ಜಾನಪದ ಕಲೆಗಳು, ಮಾಧ್ಯಮ ಕಲೆಗಳು, ಚಲನಚಿತ್ರ, ವಿನ್ಯಾಸ , ಪಾಕಶಾಸ್ತ್ರ ಸಾಹಿತ್ಯ ಮತ್ತು ಸಂಗೀತ.
ಇವುಗಳ ಜೊತೆಗೆ 2025ರಲ್ಲಿ UCCN ಗೆ ‘ವಾಸ್ತುಶಿಲ್ಪ’ ವನ್ನು ಎಂಟನೇ ಸೃಜನಾತ್ಮಕ ಕ್ಷೇತ್ರವಾಗಿ ಸೇರಿಸಲಾಯಿತು.
ಈ ಮೂಲಕ ಲಕ್ನೋ 100 ಕ್ಕೂಅಧಿಕ ದೇಶಗಳಾದ್ಯಂತ ಇರುವ 408 ನಗರಗಳ ಜಾಗತಿಕ ಜಾಲವನ್ನು ಸೇರಿಕೊಂಡಿದೆ.
ನಿಫಾ ವೈರಸ್
ಸಾಮಾನ್ಯ ಅಧ್ಯಯನ – 2 / ಆರೋಗ್ಯ – ಸಾಮಾನ್ಯ ಅಧ್ಯಯನ – 3 / ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
ನಿಫಾ ವೈರಾಣು ಕಾಯಿಲೆಯ ವಿರುದ್ಧ “ಏಕಕೋಶೀಯ (ಮೊನೋಕ್ಲೋನಲ್) ಪ್ರತಿಕಾಯಗಳ” (mAbs) ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ (ICMR) ಉತ್ತೇಜಿಸುತ್ತಿದೆ.
ನಿಫಾ ವೈರಾಣುವಿನ ಬಗ್ಗೆ:
ನಿಫಾ ಒಂದು ಪ್ರಾಣಿಜನ್ಯ ರೋಗವಾಗಿದೆ. ಇದರರ್ಥ ಇದು ಸೋಂಕಿತ ಪ್ರಾಣಿಗಳು ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡುತ್ತದೆ.
ಮೊದಲು ಪತ್ತೆಯಾಗಿದ್ದು: ಮನುಷ್ಯರಲ್ಲಿ ನಿಫಾ ವೈರಸ್‌ನ ಮೊದಲ ಹರಡುವಿಕೆಯು ಮಲೇಷ್ಯಾ (1998) ಮತ್ತು ಸಿಂಗಾಪುರಗಳಲ್ಲಿ (1999) ವರದಿಯಾಯಿತು.
ಮೂಲ ಆಶ್ರಯದಾತ: ಸಾಮಾನ್ಯವಾಗಿ ತೊಗಲು ಬಾವಲಿ (‘ಫ್ಲೈಯಿಂಗ್ ಫಾಕ್ಸ್’) ಎಂದು ಕರೆಯಲ್ಪಡುವ ಹಣ್ಣು ತಿನ್ನುವ ಬಾವಲಿಗಳು ಈ ವೈರಸ್‌ನ ನೈಸರ್ಗಿಕ ಆಶ್ರಯದಾತಗಳಾಗಿವೆ.
ಹಣ್ಣು ತಿನ್ನುವ ಬಾವಲಿಗಳಿಂದ ಹಂದಿಗಳಿಗೆ, ನಾಯಿಗಳಿಗೆ, ಬೆಕ್ಕುಗಳಿಗೆ, ಮೇಕೆಗಳಿಗೆ, ಕುದುರೆಗಳಿಗೆ ಮತ್ತು ಕುರಿಗಳಂತಹ ಇತರ ಪ್ರಾಣಿಗಳಿಗೆ ಈ ವೈರಸ್ ಹರಡುತ್ತದೆ ಎಂದು ತಿಳಿದುಬಂದಿದೆ.
ರೋಗಲಕ್ಷಣಗಳು: ಜ್ವರ, ತಲೆನೋವು, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಮತ್ತು ವಾಂತಿ. ಗಂಭೀರ ಪ್ರಕರಣಗಳಲ್ಲಿ, ದಿಗ್ಭ್ರಮೆ , ಅರೆ ನಿದ್ರಾವಸ್ಥೆ, ಸೆಳವು (seizures), ಮೆದುಳಿನ ಉರಿಯೂತ (ಎನ್ಸೆಫಾಲಿಟಿಸ್) ಸಂಭವಿಸಬಹುದು ಮತ್ತು ಇದು ಕೋಮಾ ಹಂತಕ್ಕೂ ತಲುಪಿ ಸಾವಿಗೆ ಕಾರಣವಾಗಬಹುದು.
ಹರಡುವಿಕೆ :ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕದ ಮೂಲಕ ಇದು ನೇರವಾಗಿ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡಬಹುದು. ಬಾವಲಿಗಳು ಸಾಮಾನ್ಯವಾಗಿ ವಾಸಿಸುವ ಮರಗಳನ್ನು ಏರುವ ಜನರಲ್ಲಿಯೂ ಸೋಂಕು ಕಂಡುಬಂದಿರುವ ಕೆಲವು ಪ್ರಕರಣಗಳು ವರದಿಯಾಗಿವೆ.
ರಷ್ಯಾದ ‘ಡೂಮ್ಸ್‌ಡೇ ಕ್ಷಿಪಣಿ’
ಸಾಮಾನ್ಯ ಅಧ್ಯಯನ – 3 / ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
ರಷ್ಯಾ ತನ್ನ ಅತ್ಯಾಧುನಿಕ ಪರಮಾಣು ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆ “ಖಬರೋವ್ಸ್ಕ್” ಗೆ ಚಾಲನೆ ನೀಡಿದೆ. ಇದು ನೀರಿನೊಳಗೆ ಸಂಚರಿಸುವ ಪರಮಾಣು ಶಕ್ತಿ ಡ್ರೋನ್ ‘ಡೂಮ್ಸ್‌ಡೇ ಕ್ಷಿಪಣಿ’ಯನ್ನು ಹೊತ್ತೊಯ್ಯಲು ವಿನ್ಯಾಸಗೊಳಿಸಲಾಗಿದೆ.
‘ಡೂಮ್ಸ್‌ಡೇ ಕ್ಷಿಪಣಿ’ ಯ ಬಗ್ಗೆ:
ಇದನ್ನು “ಪೊಸಿಡಾನ್” ಎಂದೂ ಕರೆಯಲಾಗುತ್ತದೆ.
ಇದು ಪ್ರಸ್ತುತ ಬಳಕೆಯಲ್ಲಿರುವ ಜಲಾಂತರ್ಗಾಮಿ ನೌಕೆ ಮತ್ತು ‘ಟಾರ್ಪಿಡೊ’ಗಳಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದು ಸಮುದ್ರದ ಅತ್ಯಂತ ಆಳದಲ್ಲಿ ಮತ್ತು ಖಂಡಾಂತರದ ದೂರದವರೆಗೆ ಕಾರ್ಯಾಚರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಇದನ್ನು ಪತ್ತೆಹಚ್ಚಿ ತಡೆಹಿಡಿಯುವುದು ಕಷ್ಟಸಾಧ್ಯವಾಗಿದೆ.
ಇದು ಖಂಡಾಂತರ ಪ್ರಯಾಣದ ಸಾಮರ್ಥ್ಯ ಮತ್ತು ಅಪಾರ ವಿನಾಶವನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದೆ.
ಪರಮಾಣು ಶಕ್ತಿಯ ಮೂಲವನ್ನು ಹೊಂದಿರುವುದರಿಂದ, ಇದು ದೀರ್ಘ ದೂರದವರೆಗೆ ನೀರಿನ ಆಳದಲ್ಲಿ ಚಲಿಸಬಲ್ಲದು.
ಇದು ಕರಾವಳಿಯ ಗುರಿಗಳನ್ನು ತಲುಪಬಲ್ಲದು ಮತ್ತು ಕಾರ್ಯತಂತ್ರದ ಪ್ರತಿರೋಧಕವಾಗಿ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ.
ನೌಕರರ ನೋಂದಣಿ ಯೋಜನೆ, 2025
ಸಾಮಾನ್ಯ ಅಧ್ಯಯನ – 3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಕೇಂದ್ರ ಸರ್ಕಾರವು ‘ನೌಕರರ ನೋಂದಣಿ ಯೋಜನೆ 2025’ಕ್ಕೆ ಚಾಲನೆ ನೀಡಿದೆ. ನೌಕರರನ್ನು ‘ನೌಕರರ ಭವಿಷ್ಯ ನಿಧಿ ಸಂಘಟನೆ’ಯ (EPFO) ಅಡಿಯಲ್ಲಿ ಸ್ವಯಂಪ್ರೇರಿತವಾಗಿ ನೋಂದಾಯಿಸುವುದು ಇದರ ಉದ್ದೇಶವಾಗಿದೆ.
ನೌಕರರ ನೋಂದಣಿ ಯೋಜನೆ, 2025 ರ ಬಗ್ಗೆ:
ಇದನ್ನು ‘ನೌಕರರ ಭವಿಷ್ಯ ನಿಧಿ ಸಂಘಟನೆ’ಯ 73 ನೇ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಚಿವರು ಉದ್ಘಾಟಿಸಿದರು.
ಅರ್ಹ ನೌಕರರನ್ನು ಸ್ವಯಂಪ್ರೇರಿತವಾಗಿ ಘೋಷಿಸಲು ಮತ್ತು ನೋಂದಾಯಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವುದು ಇದರ ಗುರಿಯಾಗಿದೆ.
ಜುಲೈ 1, 2017 ಮತ್ತು ಅಕ್ಟೋಬರ್ 31, 2025 ರ ನಡುವೆ ಸಂಸ್ಥೆಗೆ ಸೇರಿದ, ಆದರೆ ಯಾವುದೇ ಕಾರಣಕ್ಕಾಗಿ ‘ನೌಕರರ ಭವಿಷ್ಯ ನಿಧಿ’ (EPF) ಅಡಿಯಲ್ಲಿ ನೋಂದಾಯಿಸಲ್ಪಡದ ಕೆಲಸಗಾರರನ್ನು ಉದ್ಯೋಗದಾತರು ಈ ಯೋಜನೆಯಡಿ ನೋಂದಾಯಿಸಬಹುದು.
ಮಹತ್ವ: ಈ ಯೋಜನೆಯು ಉದ್ಯೋಗದಾತರಿಗೆ ಭಾರಿ ದಂಡಗಳು ಅಥವಾ ಕಾನೂನು ಕ್ರಮಗಳ ಭಯವಿಲ್ಲದೆ ತಮ್ಮ ಉದ್ಯೋಗಿಗಳನ್ನು ಸಕ್ರಮಗೊಳಿಸಲು ಅವಕಾಶವನ್ನು ಒದಗಿಸುತ್ತದೆ.
ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಯ ಬಗ್ಗೆ:
ಇದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿರುವ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
ಸ್ಥಾಪನೆ: ನೌಕರರ ಭವಿಷ್ಯ ನಿಧಿ ಮತ್ತು ಇತರೆ ನಿಬಂಧನೆಗಳ ಕಾಯಿದೆ , 1952 ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
ಉದ್ದೇಶಗಳು:
ನಿವೃತ್ತಿಯ ನಂತರ ನೌಕರರ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣವನ್ನು ಖಚಿತಪಡಿಸುವುದು.
ನೌಕರರಲ್ಲಿ ಸ್ವಯಂಪ್ರೇರಿತ ಉಳಿತಾಯವನ್ನು ಉತ್ತೇಜಿಸುವುದು.
ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಯೋಜನೆಗಳನ್ನು ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.
ರೌಮಾರಿ-ದೊಂಡುವಾ ಜೌಗು ಸಂಕೀರ್ಣ
ಸಾಮಾನ್ಯ ಅಧ್ಯಯನ – 3 / ಪರಿಸರ ಅಧ್ಯಯನ
ಇದೀಗ ಸುದ್ದಿಯಲ್ಲಿದೆ:
ಅಸ್ಸಾಂನ ರೌಮಾರಿ ಮತ್ತು ದೊಂಡುವಾ ಜೌಗು ಪ್ರದೇಶಗಳನ್ನು ‘ರಾಮ್ಸರ್ ತಾಣ’ವನ್ನಾಗಿ ಘೋಷಿಸಲು ಪ್ರಸ್ತಾಪ ಸಲ್ಲಿಸುವ ನಿಟ್ಟಿನಲ್ಲಿ, ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂರಕ್ಷಣಾ ಗುಂಪುಗಳ ತಜ್ಞರು ಪರಸ್ಪರ ಸಹಕರಿಸುತ್ತಿದ್ದಾರೆ.
ರೌಮಾರಿ-ದೊಂಡುವಾ ಜೌಗು ಸಂಕೀರ್ಣದ ಬಗ್ಗೆ:
ಸ್ಥಳ : ಇದು ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿರುವ ‘ಲಾವೊಖೋವಾ ವನ್ಯಜೀವಿ ಅಭಯಾರಣ್ಯ’ದ ವ್ಯಾಪ್ತಿಯಲ್ಲಿದೆ.
ಲಾವೊಖೋವಾ ಮತ್ತು ಅದಕ್ಕೇ ಹತ್ತಿಕೊಂಡಿರುವ ಬುರಾಚಾಪೋರಿ ವನ್ಯಜೀವಿ ಅಭಯಾರಣ್ಯಗಳು, ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶ ಮತ್ತು ಒರಾಂಗ್ ರಾಷ್ಟ್ರೀಯ ಉದ್ಯಾನವನಗಳ (ಕಾಜಿರಂಗ-ಒರಾಂಗ್ ಭೂದೃಶ್ಯ) ನಡುವೆ ಸಂಚರಿಸುವ ವನ್ಯಜೀವಿಗಳಿಗೆ ಪ್ರಮುಖ ‘ಸಂಪರ್ಕ ಮಾರ್ಗ’ಗಳಾಗಿ ಕಾರ್ಯನಿರ್ವಹಿಸುತ್ತವೆ.
ಇದು ಜಾಗತಿಕವಾಗಿ ಅಪಾಯಕ್ಕೊಳಗಾದ ‘ಗಂಟು ಕೊಕ್ಕಿನ ಬಾತುಕೋಳಿ’, ಕಪ್ಪು ಕುತ್ತಿಗೆಯ ಕೊಕ್ಕರೆ ಮತ್ತು ಕೆಂಗಂದು ಬಾತುಕೋಳಿಗಳಂತಹ ಪ್ರಭೇದಗಳು ಸೇರಿದಂತೆ, ವಾರ್ಷಿಕವಾಗಿ ಸುಮಾರು 120 ಪ್ರಭೇದಗಳ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡುತ್ತದೆ.
ಈ ಸಂಕೀರ್ಣವು ಈಶಾನ್ಯ ಭಾರತದ ಏಕೈಕ ಎರಡು ರಾಮ್ಸರ್ ತಾಣಗಳಾದ ಅಸ್ಸಾಂನ ‘ದೀಪೋರ್ ಬೀಲ್’ ಮತ್ತು ಮಣಿಪುರದ ‘ಲೋಕ್ಟಕ್ ಸರೋವರ’ಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಪಕ್ಷಿಗಳನ್ನು ದಾಖಲಿಸಿದೆ.
ರಾಮ್ಸರ್ ಸಮಾವೇಶದ ಬಗ್ಗೆ
ರಾಮ್ಸರ್ ಸಮಾವೇಶದ ಅಡಿಯಲ್ಲಿ ಅಂತರರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಜೌಗು ಪ್ರದೇಶವನ್ನು ‘ರಾಮ್ಸರ್ ತಾಣ’ ಎಂದು ಗುರುತಿಸಲಾಗುತ್ತದೆ.
ಅಂತರರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಜೌಗು ಪ್ರದೇಶಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಮ್ಸರ್ ಸಮಾವೇಶವು ಒಂದುಪ್ರಮುಖ ಅಂತರ-ಸರ್ಕಾರಿ ಒಪ್ಪಂದವಾಗಿದೆ.
ಈ ಒಪ್ಪಂದಕ್ಕೆ ಇರಾನ್‌ನ ರಾಮ್ಸರ್‌ನಲ್ಲಿ ಫೆಬ್ರವರಿ 2, 1971 ರಂದು ಸಹಿ ಹಾಕಲಾಯಿತು ಮತ್ತು ಇದು 1975 ರಲ್ಲಿ ಜಾರಿಗೆ ಬಂದಿತು.
ಭಾರತವು 1982 ರಲ್ಲಿ ರಾಮ್ಸರ್ ಸಮಾವೇಶಕ್ಕೆ ಸಹಿ ಹಾಕುವ ಮೂಲಕ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಯಿತು.
ಈ ಶೃಂಗಸಭೆಯನ್ನು ಕರ್ನಾಟಕ ಸರ್ಕಾರದ ‘ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯು (SDEL), ‘ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ’ (KSDC), ‘ಕರ್ನಾಟಕ ರಾಜ್ಯ ಕೃಷಿ ಇಲಾಖೆ’ ಮತ್ತು ‘ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್’ ಸಹಯೋಗದೊಂದಿಗೆಆಯೋಜಿಸಿತ್ತು.
ಉದ್ದೇಶಗಳು ಮತ್ತು ದೃಷ್ಟಿಕೋನ
ಸಾಂಸ್ಥಿಕ ಬಲವರ್ಧನೆ: ಸಂಸ್ಥೆಗಳನ್ನು ಬಲಪಡಿಸುವುದು, ಸಾಂಪ್ರದಾಯಿಕ ಮತ್ತು ಉದಯೋನ್ಮುಖ ಕೌಶಲ್ಯಗಳಿಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು, ಕೌಶಲ್ಯ ತರಬೇತಿಯ ಗುಣಮಟ್ಟ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಜೊತೆಗೆ, ನಾವೀನ್ಯತೆ ಮತ್ತು ಜಾಗತಿಕ ಕಾರ್ಯಪಡೆ ಚಲನಶೀಲತೆಯನ್ನು ಉತ್ತೇಜಿಸುವುದನ್ನು ಇದು ಒಳಗೊಂಡಿದೆ.
ಜಾಗತಿಕ ಮನ್ನಣೆ: ಅಂತರರಾಷ್ಟ್ರೀಯ ಪ್ರಮಾಣೀಕರಣ ಮಾನದಂಡಗಳು ಮತ್ತು ವೃತ್ತಿಪರ ಶಿಕ್ಷಣದ ಚೌಕಟ್ಟುಗಳೊಂದಿಗೆ ಹೊಂದಾಣಿಕೆ ಸಾಧಿಸುವ ಮೂಲಕ, ಕರ್ನಾಟಕವನ್ನು “ವಿಶ್ವಕ್ಕೆ ಕೌಶಲ್ಯದ ಹೆಬ್ಬಾಗಿಲು” ಆಗಿ ರೂಪಿಸುವ ಗುರಿಯನ್ನು ಹೊಂದಿದೆ.
ಕಬ್ಬಿಗೆ – ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP)
ಇದೀಗ ಸುದ್ದಿಯಲ್ಲಿದೆ:
ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಯ ಕಳವಳಗಳನ್ನು ಪರಿಹರಿಸಲು ಸಭೆಯನ್ನು ಸೇರುವಂತೆ ಕೋರಿ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಭಾರತದಲ್ಲಿ ಸಕ್ಕರೆ ಉತ್ಪಾದನೆಯ ಬಗ್ಗೆ:
2021-2022 ರಲ್ಲಿ ಬ್ರೆಜಿಲ್ ಅನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಸಕ್ಕರೆ ಉತ್ಪಾದಕ ರಾಷ್ಟ್ರವಾಯಿತು.
ಭಾರತದಲ್ಲಿ ಸಕ್ಕರೆ ಉದ್ಯಮದ ಸ್ಥಳಗಳು: ಸಕ್ಕರೆ ಉದ್ಯಮವು ಉತ್ಪಾದನೆಯ ಎರಡು ಪ್ರಮುಖ ಪ್ರದೇಶಗಳಲ್ಲಿ ಹಂಚಿಕೆಯಾಗಿದೆ:
ಉತ್ತರದಲ್ಲಿ – ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮತ್ತು ಪಂಜಾಬ್.
ದಕ್ಷಿಣದಲ್ಲಿ – ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ.
ಕಬ್ಬು ಬೆಳೆಯ ಉಪಯೋಗಗಳು:
ಇದು ಬಿದಿರು ಸಸ್ಯ ಕುಟುಂಬಕ್ಕೆ ಸೇರಿದೆ ಮತ್ತು ಭಾರತಕ್ಕೆ ಸ್ಥಳೀಯವಾಗಿದೆ.
ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಕಬ್ಬಿನ ಸುಮಾರು ಮೂರನೇ ಎರಡರಷ್ಟು ಭಾಗ ಬೆಲ್ಲ ಮತ್ತು ಖಂಡಸಾರಿ ತಯಾರಿಕೆಗೆ ಬಳಕೆಯಾದರೆ, ಕೇವಲ ಮೂರನೇ ಒಂದರಷ್ಟು ಭಾಗ ಮಾತ್ರ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜಾಗುತ್ತದೆ.
ಇದು ಮದ್ಯದ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುವನ್ನಾಗಿ ಬಳಸಲಾಗುತ್ತದೆ.
ಕಬ್ಬಿನ ರಸ ತೆಗೆದ ನಂತರ ಉಳಿಯುವ ಸಿಪ್ಪೆ (ಬಗಾಸ್) ಯನ್ನು ಕಾಗದ ತಯಾರಿಕಾ ಕೈಗಾರಿಕೆಯಲ್ಲಿ ಹೆಚ್ಚು ಲಾಭದಾಯಕವಾಗಿ ಬಳಸಬಹುದಾಗಿದೆ.
ಇಥೆನಾಲ್ ಉತ್ಪಾದನೆ: ಇದು ಪೆಟ್ರೋಲಿಯಂ ಉತ್ಪನ್ನಗಳಿಗೆ ಮತ್ತು ಇತರ ಹಲವಾರು ರಾಸಾಯನಿಕ ಉತ್ಪನ್ನಗಳಿಗೆ ಒಂದು ಸಮರ್ಥ ಪರ್ಯಾಯವಾಗಿದೆ.
ಇಥೆನಾಲ್ ಉತ್ಪಾದನೆಯಲ್ಲಿ ಅಮೆರಿಕ ಮತ್ತು ಬ್ರೆಜಿಲ್ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.
ಕಬ್ಬು ಬೆಳೆಯಲು ಅಗತ್ಯವಾದ ಭೌಗೋಳಿಕ ಪರಿಸ್ಥಿತಿಗಳು:
ಬೆಳೆಯ ಅವಧಿ: ಭೌಗೋಳಿಕ ಪರಿಸ್ಥಿತಿಗಳನ್ನು ಅವಲಂಬಿಸಿ ಪಕ್ವವಾಗಲು 10-15 ತಿಂಗಳುಗಳು, ಅಥವಾ 18 ತಿಂಗಳುಗಳೂ ಬೇಕಾಗಬಹುದು.
ಮಣ್ಣು: ತೇವಾಂಶವನ್ನು ಉಳಿಸಿಕೊಳ್ಳಬಲ್ಲ ಯಾವುದೇ ರೀತಿಯ ಮಣ್ಣಿನಲ್ಲಾದರೂ ಕಬ್ಬನ್ನು ಬೆಳೆಯಬಹುದು.
ಉದಾಹರಣೆಗೆ – ಮೆಕ್ಕಲು ಮಣ್ಣು, ಜೇಡಿಮಣ್ಣು, ಕಪ್ಪು ಹತ್ತಿ ಮಣ್ಣು, ಕಂದು ಅಥವಾ ಕೆಂಪು ಮೆಕ್ಕಲು ಮಣ್ಣು ಮತ್ತು ಜಂಬಿಟ್ಟಿಗೆ ಮಣ್ಣು.
ಈ ಮಣ್ಣು ಸಾರಜನಕ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರಬೇಕು.
ವಾಯುಗುಣ: ಈ ಬೆಳೆಗೆ ಉಷ್ಣ ಮತ್ತು ತೇವಾಂಶಭರಿತ ವಾಯುಗುಣದ ಅಗತ್ಯವಿದ್ದು, 21°C ನಿಂದ 27°C ತಾಪಮಾನ ಹಾಗೂ 75 ರಿಂದ 150 ಸೆಂ.ಮೀ ಮಳೆಯ ಅವಶ್ಯಕತೆ ಇರುತ್ತದೆ.
ಸರ್ಕಾರದ ಕ್ರಮಗಳು:
ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ ಬಗ್ಗೆ:
ಶಿಫಾರಸು ಮಾಡುವವರು:- ಈ ಬೆಲೆಯನ್ನು ‘ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ’ದ (CACP) ಶಿಫಾರಸಿನ ಮೇರೆಗೆ ನಿರ್ಧರಿಸಲಾಗುತ್ತದೆ.
ಉದ್ದೇಶ: ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೆ, ರೈತರಿಗೆ ಅವರ ಶ್ರಮಕ್ಕೆ ತಕ್ಕ ಲಾಭ ಹಾಗೂ ಕೃಷಿಯಲ್ಲಿನ ಅಪಾಯವನ್ನು ಸರಿದೂಗಿಸುವಂತಹ ನಿಶ್ಚಿತ ಲಾಭಾಂಶವನ್ನು ಖಾತ್ರಿಪಡಿಸುವುದು ಇದರ ಉದ್ದೇಶವಾಗಿದೆ.