COP – 33 ಪಕ್ಷಗಳ ಸಮ್ಮೇಳನ, 2028 : ಭಾರತ ಆತಿಥ್ಯ ವಹಿಸಲು ಸಲ್ಲಿಸಿದ್ದ ಪ್ರಸ್ತಾವನೆ ಹಿಂಪಡೆತ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶದ (UNFCCC) ಪ್ರಕ್ರಿಯೆಯ ಅಡಿಯಲ್ಲಿ 2028 ರಲ್ಲಿ ನಡೆಯಲಿರುವ ಪಕ್ಷಗಳ ಸಮ್ಮೇಳನ (COP)- 33 ಶೃಂಗಸಭೆಯ ಆತಿಥ್ಯ ವಹಿಸುವ ತನ್ನ ಪ್ರಸ್ತಾವನೆಯನ್ನು ಭಾರತ ಹಿಂಪಡೆದಿದೆ.
ಪ್ರಸ್ತಾವನೆ ಹಿಂಪಡೆಯಲು ಸಂಭವನೀಯ ಕಾರಣಗಳು:
- ಆಡಳಿತಾತ್ಮಕ ಹೊರೆ:- COP ಶೃಂಗಸಭೆಯನ್ನು ಆಯೋಜಿಸಲು ಗಣನೀಯ ಮೂಲಸೌಕರ್ಯ, ಭದ್ರತೆ ಮತ್ತು ಅಪಾರ ಆರ್ಥಿಕ ವೆಚ್ಚದ ಅಗತ್ಯವಿರುತ್ತದೆ.
- ಇತರ ದೊಡ್ಡ ಪ್ರಮಾಣದ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಸಿದ್ಧತೆ:- ಉದಾಹರಣೆಗೆ ಅಹಮದಾಬಾದ್‌ನಲ್ಲಿ ಉದ್ದೇಶಿಸಲಾದ 2030 ರ ಕಾಮನ್‌ವೆಲ್ತ್ ಕ್ರೀಡಾಕೂಟದಂತಹ ಕಾರ್ಯಕ್ರಮಗಳಿಗೂ ಇದೇ ರೀತಿಯ ಆಡಳಿತಾತ್ಮಕ ಮತ್ತು ಆರ್ಥಿಕ ಸಂಪನ್ಮೂಲಗಳು ಬೇಕಾಗುತ್ತವೆ.
- ರಾಜಕೀಯ ಸಮಯ:- 2028 ನೇ ವರ್ಷವು 2029 ರ ಲೋಕಸಭಾ ಚುನಾವಣೆಗಳಿಗೆ ತೀರಾ ಹತ್ತಿರದಲ್ಲಿರುತ್ತದ ಈ ಅವಧಿಯು ತೀವ್ರವಾದ ಆಡಳಿತಾತ್ಮಕ, ರಾಜಕೀಯ ಮತ್ತು ಸಾಗಾಟ ವ್ಯವಸ್ಥೆಯ ಕಾರ್ಯಚಟುವಟಿಕೆಗಳಿಂದ ಕೂಡಿರುತ್ತದೆ.
ಪಕ್ಷಗಳ ಸಮ್ಮೇಳನ (COP- Conference of Parties):
- UNFCCC ಯ ಅತ್ಯುನ್ನತ ನಿರ್ಧಾರ-ತೆಗೆದುಕೊಳ್ಳುವ ಸಂಸ್ಥೆಯಾಗಿದೆ:- ಇದು ವಾರ್ಷಿಕವಾಗಿ ಜರುಗುವ ‘ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ’ದ (UNFCCC) ಅತ್ಯುನ್ನತ ನಿರ್ಧಾರ-ತೆಗೆದುಕೊಳ್ಳುವ ಸಂಸ್ಥೆಯಾಗಿದೆ.
- ಇದು ಜಾಗತಿಕ ಹವಾಮಾನ ಕ್ರಮ, ಹವಾಮಾನ ಹಣಕಾಸು ಮತ್ತು ಹೊರಸೂಸುವಿಕೆ ಕಡಿತದ ಬದ್ಧತೆಗಳ ಕುರಿತು ಮಾತುಕತೆ ನಡೆಸಲು ಸುಮಾರು 200 ದೇಶಗಳನ್ನು ಒಟ್ಟುಗೂಡಿಸುತ್ತದೆ.
- ಮೊದಲ COP ಅಧಿವೇಶನವು 1995 ರ ಮಾರ್ಚ್‌ನಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಿತು.
- ಪ್ರತಿ ವರ್ಷ ಕಡ್ಡಾಯ ಸಭೆ:- ಸದಸ್ಯ ರಾಷ್ಟ್ರಗಳು ಬೇರೆ ರೀತಿಯಲ್ಲಿ ನಿರ್ಧರಿಸದ ಹೊರತು, COP ಪ್ರತಿ ವರ್ಷವೂ ಕಡ್ಡಾಯವಾಗಿ ಸಭೆ ಸೇರುತ್ತದೆ.
ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ (UNFCCC)ದ ಬಗ್ಗೆ:
- ‘ಭೂ ಶೃಂಗಸಭೆ’, 1992 ರ ಅಡಿಯಲ್ಲಿ ಅಂಗೀಕರಿಸಲ್ಪಟ್ಟ 3 ‘ರಿಯೋ ಸಮಾವೇಶ’ಗಳಲ್ಲಿ ಒಂದಾಗಿದೆ. ಇನ್ನುಳಿದ ಎರಡು ಸಮಾವೇಶಗಳೆಂದರೆ:
- ಜೈವಿಕ ವೈವಿಧ್ಯತೆಯ ಸಮಾವೇಶ (CBD)
- ಮರುಭೂಮೀಕರಣವನ್ನು ತಡೆಗಟ್ಟುವ ಸಮಾವೇಶ (UNCCD)
- ಈ ಸಮಾವೇಶವು 1994 ರಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು.
- ಉದ್ದೇಶ:- ಹವಾಮಾನ ವ್ಯವಸ್ಥೆಯೊಂದಿಗೆ ಅಪಾಯಕಾರಿ ಮಾನವ-ಪ್ರೇರಿತ ಹಸ್ತಕ್ಷೇಪವನ್ನು ತಡೆಯುವ ಮಟ್ಟದಲ್ಲಿ ವಾತಾವರಣದಲ್ಲಿ ‘ಹಸಿರುಮನೆ ಅನಿಲಗಳ’ ಸಾಂದ್ರತೆಯನ್ನು ಸ್ಥಿರಗೊಳಿಸುವುದು.
- ಸಚಿವಾಲಯ:- ಜರ್ಮನಿಯ ‘ಬಾನ್’.
- ಇದು 2 ಪ್ರಮುಖ ಕಾನೂನುಬದ್ಧ ಒಪ್ಪಂದಗಳಿಗೆ ಮೂಲ ಒಪ್ಪಂದವಾಗಿದೆ. ಅವುಗಳೆಂದರೆ,
- ಕ್ಯೋಟೋ ಶಿಷ್ಟಾಚಾರ, 1997:- ಇದು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೊರಸೂಸುವಿಕೆ ಗುರಿಗಳನ್ನು ನಿಗದಿಪಡಿಸಿತು.
- ಪ್ಯಾರಿಸ್ ಒಪ್ಪಂದ, 2015:- ಇದು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ-ಪೂರ್ವ ಮಟ್ಟದ 2°C ಕ್ಕಿಂತ ಕಡಿಮೆ ಮಾಡುವುದು, ಆದ್ಯತೆಯ ಮೇರೆಗೆ 1.5°C ಗೆ ಸೀಮಿತಗೊಳಿಸುವ ಗುರಿಯನ್ನು ಹೊಂದಿರುವ ಐತಿಹಾಸಿಕ ಜಾಗತಿಕ ಒಪ್ಪಂದವಾಗಿದೆ.
- ಹಣಕಾಸು ಕಾರ್ಯವಿಧಾನಗಳು:- ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗಲು ಈ ಕೆಳಗಿನ ನಿಧಿಗಳನ್ನು ನಿರ್ವಹಿಸುತ್ತದೆ ಮತ್ತು ಸಂಯೋಜಿಸುತ್ತದೆ.
- ಹಸಿರು ಹವಾಮಾನ ನಿಧಿ (GCF),
- ಜಾಗತಿಕ ಪರಿಸರ ಸೌಲಭ್ಯ (GEF)
- ಹೊಂದಾಣಿಕೆ ನಿಧಿ
ಇತ್ತೀಚಿನ COP ಶೃಂಗಸಭೆಗಳು:
- COP 27:- ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ 2022 ರಲ್ಲಿ ನಡೆಯಿತು.
- COP 28:- ಇದು UAE ಯ ದುಬೈನಲ್ಲಿ 2023 ರಲ್ಲಿ ನಡೆಯಿತು. ಇದು ಪಳೆಯುಳಿಕೆ ಇಂಧನಗಳಿಂದ ಹಂತಹಂತವಾಗಿ ಹೊರಬರುವತ್ತ ಗಮನಹರಿಸಿದ “UAE ಒಮ್ಮತ”ಕ್ಕೆ (UAE Consensus) ಕಾರಣವಾಯಿತು.
- COP 29:- ಅಜೆರ್ಬೈಜಾನ್‌ನ ‘ಬಾಕು’ವಿನಲ್ಲಿ 2024 ರಲ್ಲಿ ನಡೆಯಿತು.
- COP 30:- ಬ್ರೆಜಿಲ್‌ನ ‘ಬೆಲೆಮ್’ನಲ್ಲಿ 2025 ರಲ್ಲಿ ನಡೆಯಿತು.
- COP 31:- ಟರ್ಕಿಯ ‘ಅಂಟಾಲ್ಯಾ’ದಲ್ಲಿ 2026 ರಲ್ಲಿ ನಿಗದಿಯಾಗಿದೆ.
ಗ್ರೇಟ್ ನಿಕೋಬಾರ್ ದ್ವೀಪದ ಅಭಿವೃದ್ಧಿ ಯೋಜನೆಗಳ ಕರಡು ಯೋಜನೆ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಗ್ರೇಟ್ ನಿಕೋಬಾರ್ ದ್ವೀಪದ (GNI) ಅಭಿವೃದ್ಧಿಗಾಗಿ ರೂಪಿಸಿದ ಕರಡು ಪೂರ್ಣ ಪ್ರಮಾಣದ ಯೋಜನೆಯಾಗಿದೆ, ಆರ್ಥಿಕ ಬೆಳವಣಿಗೆಯ ‘ಪ್ರಮುಖ ಚಾಲಕ’ವಾಗಿ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಳ್ಳುವಂತೆ ಪ್ರಸ್ತಾಪಿಸಲಾಗಿದೆ.
ಗ್ರೇಟ್ ನಿಕೋಬಾರ್ ದ್ವೀಪದ ಅಭಿವೃದ್ಧಿ ಯೋಜನೆಯ ಬಗ್ಗೆ:
- ಇದರ ಪರಿಕಲ್ಪನೆಯನ್ನು ನೀತಿ ಆಯೋಗವು 2021 ರಲ್ಲಿ ರೂಪಿಸಿ, ಪ್ರಾರಂಭಿಸಿದೆ.
- ಇದೊಂದು ₹72,000 ದಿಂದ ₹81,000 ಕೋಟಿ ವೆಚ್ಚದ ಬೃಹತ್ ಮೂಲಸೌಕರ್ಯ ಉಪಕ್ರಮವಾಗಿದೆ.
- ಇದು ಭಾರತದ ದಕ್ಷಿಣ ತುದಿಯ ದ್ವೀಪವನ್ನು ಪ್ರಮುಖ ಆಯಕಟ್ಟಿನ ಮತ್ತು ಆರ್ಥಿಕ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
- ಪ್ರಾಮುಖ್ಯತೆ:- ಈ ಯೋಜನೆಯು ಭಾರತದ ‘ಕಡಲಯಾನ ದೃಷ್ಟಿಕೋನ 2030’ ಮತ್ತು ‘ಅಮೃತ ಕಾಲ ದೃಷ್ಟಿಕೋನ 2047’ ಗಳ ಕೇಂದ್ರಬಿಂದುವಾಗಿದೆ.
ಪ್ರಮುಖ ಘಟಕಗಳು:
- ಗಲಾಥಿಯಾ ಕೊಲ್ಲಿಯಲ್ಲಿ ಅಂತರರಾಷ್ಟ್ರೀಯ ಸರಕು ಪೆಟ್ಟಿಗೆ ಮರು ಸಾಗಣೆ ಕೇಂದ್ರ (ICTT):- ಪ್ರಾದೇಶಿಕ ಸರಕುಗಳನ್ನು ಸೆಳೆಯಲು 14.2 ಮಿಲಿಯನ್ TEU (ಒಂದು ಅಳತೆಯ ಮಾನದಂಡ) ಗಳನ್ನು ನಿರ್ವಹಿಸುವ ಉದ್ದೇಶದೊಂದಿಗೆ ಇದನ್ನು ನಿರ್ಮಿಸಲಾಗುತ್ತಿದೆ.
- ಹೊಸದಾಗಿ ಅಭಿವೃದ್ಧಿಪಡಿಸಲಾಗುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ:- ಇದು ಪ್ರವಾಸೋದ್ಯಮ ಮತ್ತು ರಕ್ಷಣಾ ಉದ್ದೇಶಗಳಿಗಾಗಿ ನಿರ್ಮಿಸಲಾಗುತ್ತಿರುವ ದ್ವಿ-ಬಳಕೆಯ ಸೌಲಭ್ಯವನ್ನು ಒಳಗೊಂಡಿದೆ.
- ಸಮಗ್ರ ಯೋಜಿತ ನಗರ:- ಇದು 2050 ರ ವೇಳೆಗೆ ಸುಮಾರು 6.5 ಲಕ್ಷ ಜನರಿಗೆ ಸ್ಥಳಾವಕಾಶ ಕಲ್ಪಿಸುವ ಯೋಜನೆಯಾಗಿದೆ.
- ವಿದ್ಯುತ್ ಸ್ಥಾವರ:- ಇದು 450 MVA ಸಾಮರ್ಥ್ಯದ ಅನಿಲ ಮತ್ತು ಸೌರ-ಆಧಾರಿತ ಸೌಲಭ್ಯವನ್ನು ಹೊಂದಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಗ್ಗೆ:
- ಈ ದ್ವೀಪ ಸಮೂಹಗಳ ದಕ್ಷಿಣ ತುದಿಯ ದ್ವೀಪವು ಗ್ರೇಟ್ ನಿಕೋಬಾರ್ ಆಗಿದ್ದು, ಇದರ ದಕ್ಷಿಣದ ತುದಿಯು ಇಂಡೋನೇಷ್ಯಾದ ಸುಮಾತ್ರಾದಿಂದ ಕೇವಲ 150 ಕಿ.ಮೀ ದೂರದಲ್ಲಿದೆ.
- ಅತ್ಯುನ್ನತ ಶಿಖರಗಳು:- ಉತ್ತರ ಅಂಡಮಾನ್‌ನ ‘ಸ್ಯಾಡಲ್ ಶಿಖರ’ (732 ಮೀಟರ್) ಮತ್ತು ಗ್ರೇಟ್ ನಿಕೋಬಾರ್‌ನ “ಥುಲ್ಲಿಯರ್ ಪರ್ವತ” (642 ಮೀಟರ್).
- ‘ಪಾಂಡುನಸ್’ ಅಥವಾ ‘ನಿಕೋಬಾರ್ ಬ್ರೆಡ್‌ಫ್ರೂಟ್’ ಎಂಬುದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುವ ಅಪರೂಪದ ಹಣ್ಣಾಗಿದೆ.
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ‘ಬ್ಯಾರೆನ್ ದ್ವೀಪ್ ಭಾರತದಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿ ದೃಢೀಕರಿಸಲ್ಪಟ್ಟ ಏಕೈಕ ಸಕ್ರಿಯ ಜ್ವಾಲಾಮುಖಿಯಾಗಿದೆ.
- ಗ್ರೇಟ್ ನಿಕೋಬಾರ್‌ನಲ್ಲಿರುವ ‘ಇಂದಿರಾ ಪಾಯಿಂಟ್’ ಭಾರತದ ಅತ್ಯಂತ ದಕ್ಷಿಣದ ತುದಿಯಾಗಿದೆ.
ಮಹಾತ್ಮ ಜ್ಯೋತಿರಾವ್ ಫುಲೆ
ಇತಿಹಾಸ
ಇತ್ತೀಚೆಗೆ ಸುದ್ದಿಯಲ್ಲಿ:
- ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಮಹಾತ್ಮ ಜ್ಯೋತಿರಾವ್ ಫುಲೆ ಅವರ ಬಗ್ಗೆ:
- ಜನನ:- ಏಪ್ರಿಲ್ 11, 1827 ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ‘ಖತ್ಗುನ್’ ಗ್ರಾಮದಲ್ಲಿ ಜನಿಸಿದರು.
- ಇವರ ಕುಟುಂಬವು ‘ಮಾಲಿ’ ಜಾತಿಗೆ ಸೇರಿತ್ತು ಮತ್ತು ಅವರ ಮೂಲ ಉಪನಾಮವು ‘ಗೋರ್ಹೆ’ ಎಂದಾಗಿತ್ತು.
- ಇವರ ಸಿದ್ಧಾಂತವು ಸ್ವಾತಂತ್ರ್ಯ, ಸಮಾನತೆ ಮತ್ತು ಸಮಾಜವಾದವನ್ನು ಕೇಂದ್ರೀಕರಿಸಿತ್ತು.
- ಇವರಿಗೆ ಕೇವಲ 13 ವರ್ಷ ವಯಸ್ಸಿದ್ದಾಗ ಸಾವಿತ್ರಿಬಾಯಿ ಅವರೊಂದಿಗೆ ವಿವಾಹವಾಯಿತು.
- ಈ ದಂಪತಿಗಳು 1848 ರಲ್ಲಿ ಪುಣೆಯ ಭಿಡೆವಾಡದಲ್ಲಿ ಹೆಣ್ಣುಮಕ್ಕಳಿಗಾಗಿ ದೇಶದ ಪ್ರಥಮ ಶಾಲೆಯನ್ನು ಸ್ಥಾಪಿಸಿದರು.
- ಬಾಲಹತ್ಯಾ ಪ್ರತಿಬಂಧಕ ಗೃಹ, 1863:- ಹೆಣ್ಣು ಭ್ರೂಣಹತ್ಯೆಯನ್ನು ತಡೆಯಲು ಹಾಗೂ ಗರ್ಭಿಣಿ ಬ್ರಾಹ್ಮಣ ವಿಧವೆ ಮತ್ತು ಅತ್ಯಾಚಾರ ಸಂತ್ರಸ್ತರಿಗೆ ಬೆಂಬಲ ನೀಡಲು ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಅವರು ಭಾರತದ ಮೊದಲ ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಪ್ರಾರಂಭಿಸಿದರು.
- ಸತ್ಯಶೋಧಕ ಸಮಾಜ, 1873:- ಫುಲೆಯವರು ತಮ್ಮ ಅನುಯಾಯಿಗಳೊಂದಿಗೆ ಸೇರಿ ಸ್ಥಾಪಿಸಿದರು. ಇದರರ್ಥ ‘ಸತ್ಯವನ್ನು ಹುಡುಕುವವರು’ ಎಂಬುದಾಗಿದೆ, ಇದು ದಲಿತರ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಶ್ರಮಿಸಿತು.
- ‘ದಲಿತ’ ಎಂಬ ಪದ ಮೊದಲ ಬಾರಿಗೆ ಬಳಕೆ:- ‘ವರ್ಣ ವ್ಯವಸ್ಥೆ’ಯಿಂದ ಹೊರಗಿಡಲ್ಪಟ್ಟ ಮತ್ತು ದಮನಿತ ಜನಸಾಮಾನ್ಯರನ್ನು ಗುರುತಿಸಲು ಈ ಪದವನ್ನು ಮೊದಲ ಬಾರಿಗೆ ಫುಲೆ ಬಳಸಿದ್ದಾರೆ.
- ಮೇ 11, 1888 ರಂದು, ಫುಲೆಯವರಿಗೆ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ವಿಠಲರಾವ್ ಕೃಷ್ಣಾಜೀ ವಂಡೇಕರ್ ಅವರು ಜ್ಯೋತಿರಾವ್ ಫುಲೆ ಅವರಿಗೆ ‘ಮಹಾತ್ಮ’ ಎಂದು ಕರೆದರು.
- ಪ್ರಮುಖ ಕೃತಿಗಳು:- ‘ಗುಲಾಮಗಿರಿ’, ‘ಶೇತ್ಕರ್ಯಾಚಾ ಆಸೂದ್’ (ರೈತನ ಚಾಟಿ) ಮತ್ತು ‘ತೃತೀಯ ರತ್ನ’ ಗ್ರಂಥಗಳು ಸೇರಿವೆ.







ನಿಮ್ಮದೊಂದು ಉತ್ತರ