Blog

  • ನಯೀ ಚೇತನಾ 4.0

    ನಯೀ ಚೇತನಾ 4.0

    ಸಾಮಾನ್ಯ ಅಧ್ಯಯನ-2/ ಆರೋಗ್ಯ ಮತ್ತು ಸಮಾಜ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವ್‌ರಾಜ್ ಸಿಂಗ್ ಚೌಹಾಣ್ ಅವರು “ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ”ವನ್ನು ಉತ್ತೇಜಿಸುವ ಉದ್ದೇಶದಿಂದ ‘ನಯಿ ಚೇತನಾ 4.0’ ಎಂಬ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

    ನಯೀ ಚೇತನಾ 4.0 ಅಭಿಯಾನದ ಬಗ್ಗೆ:

    • ಆಯೋಜಕರು:- ಇದು ಒಂದು ತಿಂಗಳ ಕಾಲ ನಡೆಯುವ ಅಭಿಯಾನವಾಗಿದ್ದು, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM) ವತಿಯಿಂದ ಆಯೋಜಿಸಲ್ಪಟ್ಟಿದೆ.
    • ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು
    • ಧ್ಯೇಯೋದ್ದೇಶ:- ಗ್ರಾಮೀಣ ಭಾರತದಲ್ಲಿ ಲಿಂಗ ಆಧಾರಿತ ದೌರ್ಜನ್ಯದ ವಿರುದ್ಧ ಸಮುದಾಯದ ಕ್ರಿಯೆಯನ್ನು ಬಲಪಡಿಸುವುದು ಹಾಗೂ ಮಹಿಳೆಯರ ಸುರಕ್ಷತೆ, ಘನತೆ ಮತ್ತು ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದು.
    • ಮಹತ್ವ:- ಈ ಅಭಿಯಾನವು ಮಹಿಳೆಯರ ಸುರಕ್ಷಿತ ಸಂಚಾರವನ್ನು ಸಕ್ರಿಯಗೊಳಿಸುವುದು, ಅವರನ್ನು ಪ್ರಮುಖ ಆರ್ಥಿಕ ಕೊಡುಗೆದಾರರೆಂದು ಗುರುತಿಸುವುದು ಮತ್ತು ಹಂಚಿಕೆಯ ಸಮುದಾಯ ಜವಾಬ್ದಾರಿಯ ಮೂಲಕ ಸಂಭಾವನೆ ರಹಿತ ಶುಶ್ರೂಷಾ ಕೆಲಸಗಳನ್ನು ಪರಿಹರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
  • ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025

    ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ಹೊಸ ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025 ರ ಮೂಲಕ ವಿಕಲಚೇತನರ ಹಕ್ಕುಗಳನ್ನು ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

    ಮಸೂದೆಯ ಪ್ರಮುಖಾಂಶಗಳು:

    • ಉದ್ಯೋಗ ಮೀಸಲಾತಿ: 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸುವ ‘ಉದ್ಯೋಗ ಮತ್ತು ಶಿಕ್ಷಣದಲ್ಲಿ ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025’ ರ ಕರಡನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.
    • ಶೈಕ್ಷಣಿಕ ಮೀಸಲಾತಿ: ಶಿಕ್ಷಣ ಸಂಸ್ಥೆಗಳು ಪ್ರತಿ ಕೋರ್ಸ್‌ನಲ್ಲಿ ಶೇ. 10 ರಷ್ಟು ಆಸನಗಳನ್ನು ವಿಕಲಚೇತನ ವಿದ್ಯಾರ್ಥಿಗಳಿಗೆ ಕಾಯ್ದಿರಿಸುವುದನ್ನು ಈ ಕರಡು ಮಸೂದೆ ಕಡ್ಡಾಯಗೊಳಿಸಿದೆ. ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಒಳಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

    ಅನುಷ್ಠಾನದ ವಿವರಗಳು

    1. ಹಂತ-ಹಂತವಾಗಿ ಜಾರಿ: ಕರಡು ಮಸೂದೆಯು ಖಾಸಗಿ ವಲಯದಲ್ಲಿ ಶೇ. 5 ರಷ್ಟು ಉದ್ಯೋಗ ಮೀಸಲಾತಿಯನ್ನು ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಿದೆ.
    2. ನಿಯಂತ್ರಣ ಮತ್ತು ವರದಿ: ಪ್ರಸ್ತಾಪಿತ ರಾಜ್ಯ ನಿಯಂತ್ರಕ ಪ್ರಾಧಿಕಾರವು ಸೂಚಿಸುವ ಮಾನದಂಡಗಳ ಆಧಾರದ ಮೇಲೆ ಕಂಪನಿಗಳು ಈ ಹುದ್ದೆಗಳನ್ನು ಹಂಚಿಕೆ ಮಾಡಬೇಕು. ಸಂಸ್ಥೆಗಳು ವಾರ್ಷಿಕ ಅನುಸರಣಾ ವರದಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಭರ್ತಿಯಾಗದ ಹುದ್ದೆಗಳನ್ನು ಮುಂದಿನ ಮೂರು ನೇಮಕಾತಿಗಳವರೆಗೆ ಮುಂದುವರೆಸಲು ಅವಕಾಶವಿದೆ.
    3. ವಿನಾಯಿತಿಗಳು : ಸಮಂಜಸವಾದ ಸೌಕರ್ಯಗಳನ್ನು ಒದಗಿಸಿದಾಗಲೂ, ಅತ್ಯಗತ್ಯ ಉದ್ಯೋಗ ಕಾರ್ಯಗಳನ್ನು ನಿರ್ವಹಿಸಲು ಅಸಾಧ್ಯವಾದ ಸಂದರ್ಭಗಳಲ್ಲಿ ಮಾತ್ರ ವಿನಾಯಿತಿಗಳನ್ನು ನೀಡಲಾಗುತ್ತದೆ.
    4. ಶಿಕ್ಷಣದಲ್ಲಿ ನಿರ್ದಿಷ್ಟತೆ: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮಸೂದೆಯು ಶೇ. 10 ರಷ್ಟು ಮೀಸಲಾತಿಯನ್ನು ‘ಸಂಸ್ಥೆಯ ಮಟ್ಟದಲ್ಲಿ’ ಅನ್ವಯಿಸದೆ, ‘ಕೋರ್ಸ್-ನಿರ್ದಿಷ್ಟವಾಗಿ’  ಜಾರಿಗೊಳಿಸಲು ಸೂಚಿಸಿದೆ. ಕಾಲೇಜುಗಳು ವಿವಿಧ ವಿಭಾಗಗಳ ಸೀಟುಗಳನ್ನು ಸರಾಸರಿ ಮಾಡಿ ಮೀಸಲಾತಿ ಪ್ರಮಾಣವನ್ನು ತಗ್ಗಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
  • ಡಾ. ವರ್ಗೀಸ್ ಕುರಿಯನ್

    ಡಾ. ವರ್ಗೀಸ್ ಕುರಿಯನ್

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ರತಿ ವರ್ಷ ನವೆಂಬರ್ 26 ರಂದು ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆಯನ್ನು ಸ್ಮರಿಸಲಾಗುತ್ತದೆ.

    ಡಾ.ವರ್ಗೀಸ್ ಕುರಿಯನ್ (1921-2012) ಅವರ ಬಗ್ಗೆ:

    • ಶ್ವೇತಕ್ರಾಂತಿಯ ಪಿತಾಮಹ:- ಇವರು ಭಾರತದ ಶ್ವೇತಕ್ರಾಂತಿಯ ಮುಖ್ಯ ರೂವಾರಿಯಾಗಿದ್ದು, ಇವರನ್ನು “ಶ್ವೇತಕ್ರಾಂತಿಯ ಪಿತಾಮಹ” ಎಂದು ಗೌರವಿಸಲಾಗುತ್ತದೆ.
    • ಆಪರೇಷನ್ ಫ್ಲಡ್:- ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಇವರು , 1970 ರಲ್ಲಿ ‘ಆಪರೇಷನ್ ಫ್ಲಡ್’ ನ ನೇತೃತ್ವ ವಹಿಸಿದರು. ಇದರ ಯಶಸ್ಸಿನಿಂದಾಗಿ ಹಾಲಿನ ಕೊರತೆ ಎದುರಿಸುತ್ತಿದ್ದ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿ ಮಾರ್ಪಟ್ಟಿತು.
    • ಆನಂದ್ ಸಹಕಾರಿ ಮಾದರಿ:- ಡಾ. ವರ್ಗೀಸ್ ಕುರಿಯನ್ ಅವರು ಅಮುಲ್ ಮೂಲಕ ಯಶಸ್ವಿಯಾದ ‘ಆನಂದ್ ಸಹಕಾರಿ ಮಾದರಿ’ಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮಾದರಿಯು ದೇಶಾದ್ಯಂತ ಡೈರಿ ಕ್ಷೇತ್ರದ ಅಭಿವೃದ್ಧಿಗೆ ಸಮರ್ಥವಾದ ನೀಲನಕ್ಷೆಯಾಗಿ ಹೊರಹೊಮ್ಮಿತು.
    • ಸಂಸ್ಥೆಗಳ ಸ್ಥಾಪನೆ: ಇವರ ಸಕ್ರಿಯ ಶ್ರಮದಿಂದಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ‘ಆನಂದ್‌’ನಲ್ಲಿರುವ ಗ್ರಾಮೀಣ ನಿರ್ವಹಣಾ ಸಂಸ್ಥೆಯಂತಹ ಪ್ರಮುಖ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.
    • ಖಾದ್ಯ ತೈಲ ಉದ್ಯಮ:- 1979 ರಲ್ಲಿ ‘ಧಾರಾ’ ಬ್ರ್ಯಾಂಡ್ ಅನ್ನು ಪ್ರಾರಂಭಿಸುವ ಮೂಲಕ ಡಾ. ಕುರಿಯನ್ ಅವರು ಖಾದ್ಯ ತೈಲ ಉದ್ಯಮದಲ್ಲೂ ಕ್ರಾಂತಿಕಾರಿ ಬದಲಾವಣೆ ತಂದರು.
    • ಪ್ರಮುಖ ಪ್ರಶಸ್ತಿಗಳು: ಪದ್ಮವಿಭೂಷಣ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
  • ಉಡುಪಿ ಜಿಲ್ಲೆಯಲ್ಲಿ ಬೃಹತ್ ಶಿಲಾಯುಗದ ಮೆನ್ಹಿರ್‌ಗಳ ಪತ್ತೆ

    ಉಡುಪಿ ಜಿಲ್ಲೆಯಲ್ಲಿ ಬೃಹತ್ ಶಿಲಾಯುಗದ ಮೆನ್ಹಿರ್‌ಗಳ ಪತ್ತೆ

    ಇದೀಗ ಸುದ್ದಿಯಲ್ಲಿದೆ:

    • ಉಡುಪಿಯ ಆದಿಮ ಕಲಾ ಟ್ರಸ್ಟ್ (ರಿ.) ಕುಂದಾಪುರ ಪ್ರದೇಶದಲ್ಲಿ ಇತ್ತೀಚೆಗೆ ಕೈಗೊಂಡ ಪುರಾತತ್ವ ಅನ್ವೇಷಣೆಗಳಲ್ಲಿ ಎರಡು ಮೆನ್ಹಿರ್‌ಗಳನ್ನು ಪತ್ತೆಹಚ್ಚಲಾಗಿದೆ. 
    • ಸ್ಥಳೀಯವಾಗಿ ನಿಲ್ಸಕಲ್ಲು ಅಥವಾ ‘ಸ್ವತಂತ್ರವಾಗಿ ನಿಂತಿರುವ ಕಲ್ಲುಗಳು’ ಎಂದು ಕರೆಯಲ್ಪಡುವ ಈ ರಚನೆಗಳು, ಬೃಹತ್ ಶಿಲಾಯುಗದ ಅವಧಿಗೆ ಸೇರಿವೆ ಎಂದು ತಜ್ಞರು ಗುರುತಿಸಿದ್ದಾರೆ.

    ಪತ್ತೆಯಾದ ಸ್ಥಳಗಳು ಮತ್ತು ಅಳತೆಗಳು:

    ಈ ಎರಡು ಮೆನ್ಹಿರ್‌ಗಳು ಪ್ರತ್ಯೇಕ ಗ್ರಾಮಗಳಲ್ಲಿ ಪತ್ತೆಯಾಗಿದ್ದು, ವಿಶಿಷ್ಟ ಆಯಾಮಗಳನ್ನು ಹೊಂದಿವೆ:

    1. ಹಿಲ್ಕೋಡ್ ಮೆನ್ಹಿರ್: ನೇರಳಕಟ್ಟೆ-ಅಜ್ರಿ ರಸ್ತೆಯಲ್ಲಿರುವ ಹಿಲ್ಕೋಡ್‌ನಲ್ಲಿ ಒಂದು ಮೆನ್ಹಿರ್ ಪತ್ತೆಯಾಗಿದೆ. ಈ ನಿರ್ದಿಷ್ಟ ‘ನಿಲ್ಸ್ ಕಲ್’ ಸುಮಾರು 135 ಸೆಂ.ಮೀ ಎತ್ತರವಿದೆ.
    2. ಮಾವಿನಕೆರೆ ಮೆನ್ಹಿರ್: ಎರಡನೇ ಮೆನ್ಹಿರ್ ಕೆಂಚನೂರು ಗ್ರಾಮದ ಮಾವಿನಕೆರೆಯಲ್ಲಿ ಪತ್ತೆಯಾಗಿದೆ. ಇದು ಸುಮಾರು 112 ಸೆಂ.ಮೀ ಎತ್ತರವಿದ್ದು , ವಾಯುವ್ಯ ದಿಕ್ಕಿಗೆ ಸ್ವಲ್ಪ ವಾಲಿದಂತೆ ಕಂಡುಬರುತ್ತದೆ.

    “ನಿಲ್ಸಕಲ್ಲು” ಎಂದರೇನು?

    • ಭೂಮಿಯ ಮೇಲೆ ಲಂಭವಾಗಿ, ಸ್ವಲ್ಪ ವಾಲಿದಂತೆ ನಿಂತು ಬೃಹತ್ ಶಿಲಾಯುಗದ ಸಮಾಧಿಯ ಮೇಲೆ ಅಥವಾ ಸಮಾಧಿ ಸಮೀಪದಲ್ಲಿ ಮೃತರ ಸ್ಮರಣಾರ್ಥವಾಗಿ ನಿಲ್ಲಿಸಲಾದ ಒರಟಾದ ಬೃಹತ್ ಶಿಲೆಗಳನ್ನು ನಿಲ್ಸಕಲ್ಲು, ನಿಂತಿಕಲ್ಲು, ಗರ್ಭಿಣಿಕಲ್ಲು, ಆನೆಕಲ್ಲು, ರಕ್ಕಸಕಲ್ಲು ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣ ಭಾರತದೆಲ್ಲೆಡೆ ಇಂತಹ ಕಲ್ಲುಗಳು ಕಂಡುಬರುತ್ತವೆ.
  • ಸಂವಿಧಾನ ದಿನ

    ಸಂವಿಧಾನ ದಿನ

    (ಸಾಮಾನ್ಯ ಅಧ್ಯಯನ-2/ ರಾಜಕೀಯ ಮತ್ತು ಆಡಳಿತ)

    ಇದೀಗ ಸುದ್ದಿಯಲ್ಲಿದೆ: 

    • ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ‘ಸಂವಿಧಾನ ದಿನ’ವನ್ನಾಗಿ ಆಚರಿಸಲಾಗುತ್ತದೆ.

    ಸಂವಿಧಾನ ದಿನ (ಸಂವಿಧಾನ್ ದಿವಸ್ / ರಾಷ್ಟ್ರೀಯ ಕಾನೂನು ದಿನ) ದ ಬಗ್ಗೆ:

    • ಅಧಿಸೂಚನೆ:- 2015 ರಲ್ಲಿ, ಭಾರತ ಸರ್ಕಾರವು ಪ್ರತಿ ವರ್ಷ ನವೆಂಬರ್ 26 ಅನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸುವ ನಿರ್ಧಾರವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಅಧಿಕೃತವಾಗಿ ಪ್ರಕಟಿಸಿತು.
    • ಗೌರವ ಸಲ್ಲಿಕೆ:- ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

    ಐತಿಹಾಸಿಕ ಹಿನ್ನೆಲೆ:

    • 1934ರಲ್ಲಿ ಭಾರತಕ್ಕೆ ಪ್ರತ್ಯೇಕ “ಸಂವಿಧಾನ ರಚನಾ ಸಭೆ”ಯ ಅಗತ್ಯವಿದೆ ಎಂಬ ಬೇಡಿಕೆಯನ್ನು ಮೊದಲ ಬಾರಿಗೆ ಎಂ.ಎನ್. ರಾಯ್ ಅವರು ಮಂಡಿಸಿದರು.
    • 1940ರಲ್ಲಿ ಈ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರವು ಅಂತಿಮವಾಗಿ ಅಂಗೀಕರಿಸಿತು.
    • ಡಿಸೆಂಬರ್ 9, 1946ರಂದು ಸಂವಿಧಾನದ ಕರಡು ಕುರಿತು ಚರ್ಚಿಸಲು ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು.
    • ನವೆಂಬರ್ 26, 1949ರಂದು ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿತು.
    • ಜನವರಿ 26, 1950ರಂದು ಭಾರತದ ಸಂವಿಧಾನವು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿತು.

    ಸಂವಿಧಾನ ರಚನಾ ಸಭೆಯ ಪ್ರಮುಖಾಂಶಗಳು:

    • ಅವಧಿ:- ಭಾರತದ ಸಂವಿಧಾನವನ್ನು ಸಿದ್ಧಪಡಿಸಲು ಸಂವಿಧಾನ ರಚನಾ ಸಭೆಯು ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.
    • ಅಧ್ಯಕ್ಷರು:-
      • ಸಂವಿಧಾನ ರಚನಾ ಸಭೆಯ ಮೊದಲ (ತಾತ್ಕಾಲಿಕ) ಅಧ್ಯಕ್ಷರಾಗಿ ಡಾ. ಸಚ್ಚಿದಾನಂದ ಸಿನ್ಹಾ ನೇಮಕಗೊಂಡಿದ್ದರು.
      • ನಂತರ ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷರಾಗಿ ಆಯ್ಕೆಯಾದರು.
    • ಧ್ಯೇಯೋದ್ದೇಶಗಳ ನಿರ್ಣಯ:- ಪ್ರಧಾನಿ ಜವಾಹರಲಾಲ್ ನೆಹರು ಅವರು ಡಿಸೆಂಬರ್ 13, 1946 ರಂದು ‘ಧ್ಯೇಯೋದ್ದೇಶಗಳ ನಿರ್ಣಯ’ವನ್ನು ಮಂಡಿಸಿದರು. ಇದನ್ನು ನಂತರ ಜನವರಿ 22, 1947 ರಂದು ಸಂವಿಧಾನದ ಪೀಠಿಕೆಯಾಗಿ ಅಂಗೀಕರಿಸಲಾಯಿತು.
    • ತಾತ್ಕಾಲಿಕ ಶಾಸಕಾಂಗ:- ಹೊಸ ಶಾಸಕಾಂಗವು ರಚನೆಯಾಗುವವರೆಗೆ ಸಂವಿಧಾನ ರಚನಾ ಸಭೆಯು ದೇಶದ ತಾತ್ಕಾಲಿಕ ಶಾಸಕಾಂಗವಾಗಿ ಕಾರ್ಯನಿರ್ವಹಿಸಿತು.

    ಭಾರತದ ಸಂವಿಧಾನದ ಕಿರು ಪರಿಚಯ:

    • ವಿಶ್ವದ ಅತಿ ಉದ್ದವಾದ ಲಿಖಿತ ಸಂವಿಧಾನ:- ಪ್ರಸ್ತುತ 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಒಳಗೊಂಡಿದೆ.
    • ಸಂಪೂರ್ಣವಾಗಿ ಕೈಬರಹದ ಮೂಲಕವೇ ಸಿದ್ಧಪಡಿಸಲಾಗಿದೆ:- ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಂಪೂರ್ಣವಾಗಿ ಕೈಬರಹದ ಮೂಲಕವೇ (ಹಸ್ತಪ್ರತಿ) ಸಿದ್ಧಪಡಿಸಲಾಗಿದ್ದು, ಸಂಸತ್ತಿನ ಗ್ರಂಥಾಲಯದಲ್ಲಿರುವ ಹೀಲಿಯಂ ಅನಿಲ ತುಂಬಿದ ವಿಶೇಷ ಪೆಟ್ಟಿಗೆಯಲ್ಲಿ ಈ ಐತಿಹಾಸಿಕ ದಾಖಲೆಯನ್ನು ಇಂದಿಗೂ ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿದೆ.
    • ಕಲಾತ್ಮಕವಾಗಿ ವಿನ್ಯಾಸ:- ಆಚಾರ್ಯ ನಂದಲಾಲ್ ಬೋಸ್ ಅವರ ಮಾರ್ಗದರ್ಶನದಲ್ಲಿ ಶಾಂತಿನಿಕೇತನದ ಕಲಾವಿದರು ಸಂವಿಧಾನದ ಪ್ರತಿ ಪುಟಗಳನ್ನು ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದಾರೆ.
  • ಮೀನುಗಾರರ ಸಂಕಷ್ಟ ಪರಿಹಾರ ನಿಧಿ

    ಮೀನುಗಾರರ ಸಂಕಷ್ಟ ಪರಿಹಾರ ನಿಧಿ

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯದ ಮೀನುಗಾರಿಕೆ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ‘ಮೀನುಗಾರರ ಸಂಕಷ್ಟ ಪರಿಹಾರ ನಿಧಿ’ಯ ಅಡಿಯಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ₹6 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 
    • 2024–25 ನೇ ಸಾಲಿನಲ್ಲಿ 9.63 ಲಕ್ಷ ಟನ್ ಮೀನು ಉತ್ಪಾದನೆ ಮಾಡುವ ಮೂಲಕ, ಒಟ್ಟು ಮೀನು ಉತ್ಪಾದನೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.

    ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಬಗ್ಗೆ:

    • ಉದ್ದೇಶ:- ಮೀನುಗಾರಿಕೆಯಲ್ಲಿ ತೊಡಗಿರುವಾಗ ಸಮುದ್ರದಲ್ಲಿ ಅಥವಾ ಭೂಮಿಯ ಮೇಲೆ ಸಂಭವಿಸುವ ಅಪಘಾತಗಳು, ನೈಸರ್ಗಿಕ ವಿಪತ್ತುಗಳು ಅಥವಾ ಅಕಾಲಿಕ ಮರಣದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಮೀನುಗಾರರಿಗೆ ಮತ್ತು ಅವರ ಕುಟುಂಬಗಳಿಗೆ ತಕ್ಷಣದ ಆರ್ಥಿಕ ಪರಿಹಾರ ಹಾಗೂ ಬೆಂಬಲವನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ.
    • ನಿರ್ವಹಣಾ ಪ್ರಾಧಿಕಾರ: ಈ ನಿಧಿಯ ನಿರ್ವಹಣೆಯನ್ನು ಕರ್ನಾಟಕ ಸರ್ಕಾರದ ‘ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ’ಯು ನಿರ್ವಹಿಸುತ್ತದೆ.
    • ಪರಿಹಾರದ ಮೊತ್ತ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದಾಗ ಕಣ್ಮರೆಯಾದ ಅಥವಾ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ₹6 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಿದೆ.
    • ಅರ್ಹತೆ:- ಪರಿಹಾರವನ್ನು ಕೋರುವ ಅರ್ಜಿದಾರರು ಇಲಾಖೆಯಲ್ಲಿ ನೋಂದಾಯಿತ ಮೀನುಗಾರರಾಗಿರಬೇಕು. ಅಲ್ಲದೆ, ಪರಿಹಾರದ ನಷ್ಟದ ಸ್ವರೂಪಕ್ಕೆ (ಉದಾಹರಣೆಗೆ: ಜೀವಹಾನಿ, ದೋಣಿ ಅಥವಾ ಮೀನುಗಾರಿಕೆ ಉಪಕರಣಗಳಿಗೆ ಹಾನಿ) ಅನುಗುಣವಾಗಿ ನಿಗದಿಪಡಿಸಲಾದ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿರಬೇಕು.
  • ಮೀರತ್ ಬ್ಯೂಗಲ್ ವಾದ್ಯ | ಸರ್ಕಾರಿ ಭದ್ರತಾ ಪತ್ರಗಳು (G-Secs) | ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) | ಸಂವಿಧಾನದ ವಿಧಿ 240

    ಮೀರತ್ ಬ್ಯೂಗಲ್ ವಾದ್ಯ

    ಸಾಮಾನ್ಯ ಅಧ್ಯಯನ -3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ದಶಕಗಳಿಂದಲೂ ಸಶಸ್ತ್ರ ಪಡೆಗಳ ಕಸರತ್ತು, ಯುದ್ಧಗಳು, ಸಮಾರಂಭಗಳು ಮತ್ತು ಪಥಸಂಚಲನಗಳಲ್ಲಿ ಅವಿಭಾಜ್ಯ ಸಾಧನವಾಗಿ ಬಳಕೆಯಾಗುತ್ತಿದ್ದ ‘ಬ್ಯೂಗಲ್’ ವಾದ್ಯವು ಇತ್ತೀಚೆಗೆ ಪ್ರತಿಷ್ಠಿತ “ಭೌಗೋಳಿಕ ಸೂಚ್ಯಂಕ” (GI) ಟ್ಯಾಗ್‌ಗೆ ಭಾಜನವಾಗಿದೆ.

    ಮೀರತ್ ಬ್ಯೂಗಲ್ ವಾದ್ಯದ ಬಗ್ಗೆ:

    • ಮೀರತ್‌ನಲ್ಲಿ ಬ್ಯೂಗಲ್ ತಯಾರಿಕೆಯು 19ನೇ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ.
    • ಭಾರತದ ಸೇನಾ ಸಂಸ್ಕೃತಿ ಬೆಳೆದಂತೆಲ್ಲಾ, ಈ ವಾದ್ಯದ ಇತಿಹಾಸವೂ ಅದರೊಂದಿಗೇ ಸಾಗಿಬಂದಿದೆ.
    • ಬ್ರಿಟಿಷರ ಕಾಲದಲ್ಲಿ ಇದನ್ನು ‘ಆದೇಶ ನೀಡುವ ಸಾಧನ’ವಾಗಿ ಬಳಸುತ್ತಿದ್ದರು. ಸೇನೆ ಎಷ್ಟೇ ಆಧುನಿಕವಾದರೂ, ಬ್ಯೂಗಲ್ ತನ್ನ ಗೌರವದ ಸ್ಥಾನವನ್ನು ಇಂದಿಗೂ ಉಳಿಸಿಕೊಂಡಿದೆ.

    ಸರ್ಕಾರಿ ಭದ್ರತಾ ಪತ್ರಗಳು (G-Secs)

    ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದ್ದರೂ ಸಹ, ಸರ್ಕಾರಿ ಭದ್ರತಾ ಪತ್ರಗಳ ಇಳುವರಿಯು ಸ್ವಲ್ಪಮಟ್ಟಿಗೆ ಏರುಗತಿಯನ್ನು ಸಾಧಿಸಿದೆ.

    ಸರ್ಕಾರಿ ಭದ್ರತಾ ಪತ್ರ (G-Sec) ಗಳ ಬಗ್ಗೆ:

    • ವ್ಯಾಖ್ಯಾನ:- ಈ ಪತ್ರಗಳು ಕೇಂದ್ರ ಸರ್ಕಾರ ಇಲ್ಲವೇ ರಾಜ್ಯ ಸರ್ಕಾರಗಳಿಂದ ಹೊರಡಿಸಲ್ಪಡುವ ಒಂದು ವ್ಯಾಪಾರಾರ್ಹ ಭದ್ರತಾ ಸಾಧನಗಳಾಗಿವೆ.
    • ಹೊಣೆಗಾರಿಕೆ:- ಈ ಪತ್ರಗಳು ಸರ್ಕಾರದ ಸಾಲದ ಹೊಣೆಗಾರಿಕೆಯನ್ನು ಔಪಚಾರಿಕವಾಗಿ ಅಥವಾ ಅಧಿಕೃತವಾಗಿ ಅಂಗೀಕರಿಸುತ್ತವೆ. 
    • ಸ್ವರೂಪ: ಈ ಪತ್ರಗಳು ಅಲ್ಪಾವಧಿ ಮತ್ತು ದೀರ್ಘಾವಧಿ ಸ್ವರೂಪಗಳನ್ನು ಒಳಗೊಂಡಿರುತ್ತವೆ:
      • ಅಲ್ಪಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಖಜಾನೆ ಬಿಲ್ಲುಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಇರುತ್ತದೆ.
      • ದೀರ್ಘಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಸರ್ಕಾರಿ ಬಾಂಡ್‌ಗಳು ಅಥವಾ ದಿನಾಂಕ ಸಹಿತ ಭದ್ರತಾ ಪತ್ರಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)

    ಸಾಮಾನ್ಯ ಅಧ್ಯಯನ – 3/ ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ‘ಅಂತರರಾಷ್ಟ್ರೀಯ ಹಡಗು ಮತ್ತು ಬಂದರು ಸೌಲಭ್ಯ ಭದ್ರತಾ ಸಂಹಿತೆ’ಯ (ISPS Code) ಅಡಿಯಲ್ಲಿ, ಕೇಂದ್ರೀಯ  ಕೈಗಾರಿಕಾ ಭದ್ರತಾ ಪಡೆಯನ್ನು ‘ಮಾನ್ಯತೆ ಪಡೆದ ಭದ್ರತಾ ಸಂಸ್ಥೆ’ ಯನ್ನಾಗಿ ಅಧಿಕೃತವಾಗಿ ನಾಮನಿರ್ದೇಶನ ಮಾಡಲಾಗಿದೆ.
    • ಭಾರತದಲ್ಲಿ ಸುಮಾರು 250 ಬಂದರುಗಳಿದ್ದು, ಅವುಗಳಲ್ಲಿ 65–68 ಬಂದರುಗಳು ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯ ಬಗ್ಗೆ:

      • ಸ್ಥಾಪನೆ ಮತ್ತು ಸ್ಥಾನಮಾನ: ಇದು 1968 ರ ‘ಕೇಂದ್ರೀಯ  ಕೈಗಾರಿಕಾ ಭದ್ರತಾ ಪಡೆ ಕಾಯಿದೆ’ ಯ ಅನ್ವಯ 1969 ರಲ್ಲಿ ಅಸ್ತಿತ್ವಕ್ಕೆ ಬಂದ ಒಂದು ಅರೆಸೇನಾ ಪಡೆಯಾಗಿದೆ.
      • ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸ್ಥಾಪನಾ ದಿನ’ವನ್ನು ಆಚರಿಸಲಾಗುತ್ತದೆ.
      • ಆಡಳಿತಾತ್ಮಕ ನಿಯಂತ್ರಣ: ಈ ಪಡೆಯು ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
      • ಪ್ರಮುಖ ಕಾರ್ಯಗಳು: ದೇಶದ ತಂತ್ರಾತ್ಮಕ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವುದು ಇದರ ಪ್ರಮುಖ ಕರ್ತವ್ಯವಾಗಿದೆ. ಪ್ರಮುಖವಾಗಿ ಈ ಕೆಳಗಿನ ಸಂಸ್ಥೆಗಳಿಗೆ ಈ ಪಡೆಯು ರಕ್ಷಣೆ ನೀಡುತ್ತದೆ:
    • ಬಾಹ್ಯಾಕಾಶ ಇಲಾಖೆ 
    • ಪರಮಾಣು ಶಕ್ತಿ ಇಲಾಖೆ
    • ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು
    • ಐತಿಹಾಸಿಕ ಸ್ಮಾರಕಗಳು
    • ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುಚ್ಛಕ್ತಿ, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ ಸ್ಥಾವರಗಳಿಗೆ ಇದು ಭದ್ರತೆಯನ್ನು ಒದಗಿಸುತ್ತದೆ.

    ಸಂವಿಧಾನದ ವಿಧಿ 240

    ಸಾಮಾನ್ಯ ಅಧ್ಯಯನ – 2/ ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಚಂಡೀಗಢವನ್ನು ಸಂವಿಧಾನದ ‘ವಿಧಿ 240’ ವ್ಯಾಪ್ತಿಗೆ ತರಲು ಯಾವುದೇ ‘ಸಂವಿಧಾನ ತಿದ್ದುಪಡಿ ಮಸೂದೆ’ಯನ್ನು ಮಂಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟಪಡಿಸಿದೆ.

    131 ನೇ ಸಂವಿಧಾನ ತಿದ್ದುಪಡಿ ಮಸೂದೆ, 2025 ರ ಬಗ್ಗೆ:

    • ಈ ಮಸೂದೆಯು ಚಂಡೀಗಢವನ್ನು ವಿಧಿ 240 ರ ಅಡಿಯಲ್ಲಿ ತರಲು ಪ್ರಸ್ತಾಪಿಸುತ್ತದೆ. ಈ ಮೂಲಕ ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳ ಗುಂಪಿಗೆ ಇದನ್ನು ಸೇರಿಸುತ್ತದೆ ಮತ್ತು ಅದಕ್ಕಾಗಿ ನಿಯಮಾವಳಿಗಳನ್ನು ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುತ್ತದೆ.
    • ಇದು ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವತಂತ್ರ ‘ಆಡಳಿತಾಧಿಕಾರಿ’ಯ ನೇಮಕಕ್ಕೆ ದಾರಿ ಮಾಡಿಕೊಡುತ್ತದೆ.
    • ಪ್ರಸ್ತುತ, ಪಂಜಾಬ್‌ನ ರಾಜ್ಯಪಾಲರೇ ಚಂಡೀಗಢದ ಆಡಳಿತಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
    • ಚಂಡೀಗಢಕ್ಕಾಗಿ ಕೇಂದ್ರ ಸರ್ಕಾರದ ಕಾನೂನು ರಚನಾ ಪ್ರಕ್ರಿಯೆಯನ್ನು ಸರಳಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ.
    • ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಆಡಳಿತದಲ್ಲಿ ಏಕರೂಪತೆಯನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
    • ಸಂಸತ್ತಿನ ಕಾಯಿದೆಗಳಿಗೆ ಸಮನಾದ ನಿಯಮಾವಳಿಗಳನ್ನು ಚಂಡೀಗಢಕ್ಕಾಗಿ ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುವುದು ಇದರ ಉದ್ದೇಶವಾಗಿದೆ.

    ಸಂವಿಧಾನದ 240 ನೇ ವಿಧಿಯ ಬಗ್ಗೆ:

    • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಸೇರಿದಂತೆ, ನಿರ್ದಿಷ್ಟ ಕೇಂದ್ರಾಡಳಿತ ಪ್ರದೇಶಗಳ ಶಾಂತಿ, ಪ್ರಗತಿ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ಸಂವಿಧಾನದ 240 ನೇ ವಿಧಿಯು ರಾಷ್ಟ್ರಪತಿಯವರಿಗೆ ನೀಡುತ್ತದೆ.
  • ಹಂತ -3 ರ ‘ಪ್ರವೇಶಸಾಧ್ಯತೆ ವರ್ಧನೆ ಮಾನ್ಯತೆ’ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ

    ಹಂತ -3 ರ ‘ಪ್ರವೇಶಸಾಧ್ಯತೆ ವರ್ಧನೆ ಮಾನ್ಯತೆ’ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ

    ಇದೀಗ ಸುದ್ದಿಯಲ್ಲಿದೆ:

    • ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ACI) ನೀಡುವ ಪ್ರತಿಷ್ಠಿತ ‘ಪ್ರವೇಶಸಾಧ್ಯತೆ ವರ್ಧನೆ ಮಾನ್ಯತೆ’ (AEA) ಕಾರ್ಯಕ್ರಮದ ಅಡಿಯಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ‘ಹಂತ- 3’ ರ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಮೂಲಕ, ಈ ಸಾಧನೆಗೈದ ಭಾರತದ ಮೊಟ್ಟಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
  • ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) | ಆಫ್ರಿಕಾದ ಬೂದು ಗಿಳಿ | ಸೆಮೆರು ಪರ್ವತ (Mount Semeru) | ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI) | ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಕಾರ್ಯಕ್ರಮ (ICDS) | ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್

    ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)

    ಸಾಮಾನ್ಯ ಅಧ್ಯಯನ -3/ ರಕ್ಷಣೆ

    ಇದೀಗ ಸುದ್ಧಿಯಲ್ಲಿದೆ:

    • ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯು, ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ 10 ಗಡಿ ಹೊರಠಾಣೆಗಳನ್ನು ಸ್ಥಾಪಿಸುತ್ತಿದೆ. ಗಡಿ ಭದ್ರತಾ ವ್ಯವಸ್ಥೆಯಲ್ಲಿ ಲಿಂಗ ಸಮನ್ವಯತೆ ಮತ್ತು ಒಳಗೊಳ್ಳುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

    ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ನ ಬಗ್ಗೆ:

    • ಸ್ಥಾಪನೆ: ಭಾರತ ಮತ್ತು ಚೀನಾ ಯುದ್ಧದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, 1962 ರ ಅಕ್ಟೋಬರ್ 24 ರಂದು ಈ ಪಡೆಯನ್ನು ಅಸ್ತಿತ್ವಕ್ಕೆ ತರಲಾಯಿತು.
    • ಸ್ಥಾನಮಾನ: ಇದು ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ‘ಕೇಂದ್ರ ಸಶಸ್ತ್ರ ಪೊಲೀಸ್ ಪಡೆ’ಗಳಲ್ಲಿ (CAPF) ಒಂದಾಗಿದೆ.
    • ಧ್ಯೇಯವಾಕ್ಯ: “ಶೌರ್ಯ-ದೃಢತೆ-ಕರ್ಮ ನಿಷ್ಠೆ”.
    • ಕಾರ್ಯನಿರ್ವಹಣಾ ಪಾತ್ರ: ಲಡಾಖ್‌ನ ಕಾರಾಕೋರಂ ಕಣಿವೆಮಾರ್ಗದಿಂದ ಅರುಣಾಚಲ ಪ್ರದೇಶದ ಜಾಚೆಪ್ ಲಾ ವರೆಗೆ ಹಬ್ಬಿರುವ, ಸುಮಾರು 3,488 ಕಿ.ಮೀ. ಉದ್ದವಾದ ಭಾರತ-ಚೀನಾ ಗಡಿಯ ಕಾವಲು ಕಾಯುವುದು ಮತ್ತು ರಕ್ಷಣೆ ಒದಗಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ.
    • ಕಾನೂನಾತ್ಮಕ ಚೌಕಟ್ಟು: ಈ ಪಡೆಯ ಕಾರ್ಯನಿರ್ವಹಣೆಗೆ ಕಾನೂನು ಬಲ ನೀಡಲು, 1992 ರಲ್ಲಿ ‘ಐಟಿಬಿಪಿಎಫ್ ಕಾಯಿದೆ’ ಯನ್ನು ಜಾರಿಗೆ ತರಲಾಯಿತು. ನಂತರ , 2004 ರಲ್ಲಿ ಭಾರತ-ಚೀನಾ ಗಡಿಯ ಸಮಗ್ರ ಕಾವಲು ಜವಾಬ್ದಾರಿಯನ್ನು ಈ ಪಡೆಗೆ ನಿಯೋಜಿಸಲಾಯಿತು.

    ಆಫ್ರಿಕಾದ ಬೂದು ಗಿಳಿ

    ಸಾಮಾನ್ಯ ಅಧ್ಯಯನ – 3/ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ:

    • ದೇಶದ ಮಾರುಕಟ್ಟೆಗಳಲ್ಲಿ ಆಫ್ರಿಕಾದ ಬೂದು ಗಿಳಿಗಳು ವ್ಯಾಪಕವಾಗಿ ಲಭ್ಯವಿದ್ದರೂ ಕೂಡ, ಇವುಗಳಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ನೋಂದಾಯಿತ ತಳಿಗಾರರು ಅಥವಾ ಅಧಿಕೃತ ಸಾಕುಪ್ರಾಣಿ ಮಾರಾಟ ಮಳಿಗೆಗಳು ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ರಾಜ್ಯ ಅರಣ್ಯ ಇಲಾಖೆಗಳು ಸ್ಪಷ್ಟಪಡಿಸಿವೆ.

    ‘ಆಫ್ರಿಕಾದ ಬೂದು ಗಿಳಿ’ ಯ ಬಗ್ಗೆ: 

    • ವೈಜ್ಞಾನಿಕ ಹೆಸರು:- ಸಿಟ್ಟಾಕಸ್ ಎರಿಥಾಕಸ್ (Psittacus erithacus). ಇದು ಮಧ್ಯಮ ಗಾತ್ರದ ಹಾಗೂ ಅತ್ಯಂತ ಬುದ್ಧಿವಂತ ಗಿಳಿ ಪ್ರಭೇದವಾಗಿದೆ.
    • ಇದನ್ನು ಸಾಮಾನ್ಯವಾಗಿ “ಪಕ್ಷಿ ಸಂಕುಲದ ಐನ್‌ಸ್ಟೀನ್‌ಗಳು” ಎಂದು ಪರಿಗಣಿಸಲಾಗುತ್ತದೆ.
    • ಮೂಲ ಆವಾಸಸ್ಥಾನ:- ಇದು ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಸ್ಥಳೀಯವಾಗಿದ್ದು, ಪ್ರಮುಖವಾಗಿ ಸವನ್ನಾ (ಹುಲ್ಲುಗಾವಲು) ಪ್ರದೇಶಗಳು ಮತ್ತು ಕರಾವಳಿ ಮ್ಯಾಂಗ್ರೋವ್‌ಗಳಲ್ಲಿ ಕಂಡುಬರುತ್ತದೆ.
    • ಇದರಲ್ಲಿ ಎರಡು ಪ್ರಮುಖ ಉಪ-ಪ್ರಭೇದಗಳಿವೆ:-
      1. ಕಾಂಗೋ ಆಫ್ರಿಕಾದ ಬೂದು (CAG) ಗಿಳಿ: ಇದು ತನ್ನ ಪ್ರಕಾಶಮಾನವಾದ ಕೆಂಪು ಬಾಲಕ್ಕೆ ಹೆಸರುವಾಸಿಯಾಗಿದೆ.
      2. ಟಿಮ್ನೆ ಆಫ್ರಿಕಾದ ಬೂದು (CAG) ಗಿಳಿ: ಇದು ಗಾಢವಾದ ಕಡುಗೆoಪು ಮಿಶ್ರಣ ಬಣ್ಣದ ಬಾಲವನ್ನು ಹೊಂದಿರುತ್ತದೆ.
    • ವಿಶಿಷ್ಟತೆ – ಆಫ್ರಿಕಾದ ಬೂದು ಗಿಳಿಗಳು ತಮ್ಮ ಅಸಾಧಾರಣ ಮಾತುಗಾರಿಕೆ ಮತ್ತು ಗ್ರಹಿಕೆ ಸಾಮರ್ಥ್ಯಗಳಿಗೆ ಪ್ರಖ್ಯಾತವಾಗಿವೆ. ಇವು ದೊಡ್ಡ ಶಬ್ದಕೋಶವನ್ನು ನೆನಪಿನಲ್ಲಿಟ್ಟುಕೊಳ್ಳುವ ಮತ್ತು ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿವೆ.
    • IUCN ಕೆಂಪು ಪಟ್ಟಿಯಲ್ಲಿ ಸ್ಥಾನ:- ಇದನ್ನು “ಅಳಿವಿನಂಚಿನಲ್ಲಿರುವ (EN)” ಪ್ರಭೇದ ಎಂದು ವರ್ಗೀಕರಿಸಲಾಗಿದೆ.

    ಸೆಮೆರು ಪರ್ವತ (Mount Semeru)

    ಸಾಮಾನ್ಯ ಅಧ್ಯಯನ – 1 / ಪ್ರಾಕೃತಿಕ ಭೂಗೋಳಶಾಸ್ತ್ರ

    ಇದೀಗ ಸುದ್ದಿಯಲ್ಲಿದೆ:

    • ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ ನೆಲೆಗೊಂಡಿರುವ ಸೆಮೆರು ಪರ್ವತದ ಜ್ವಾಲಾಮುಖಿಯು ಇತ್ತೀಚೆಗೆ ಸ್ಫೋಟಗೊಂಡಿದೆ.

    ಇಂಡೋನೇಷ್ಯಾ ಜ್ವಾಲಾಮುಖಿ ಸ್ಫೋಟಗಳಿಗೆ ಹೆಚ್ಚು ತುತ್ತಾಗಲು ಕಾರಣಗಳು:

    • ಇಂಡೋ-ಆಸ್ಟ್ರೇಲಿಯನ್ ಭೂಫಲಕವು ಯುರೇಷಿಯನ್ ಭೂಫಲಕದ ಅಡಿಯಲ್ಲಿ ಕುಸಿಯುವ ‘ಒಮ್ಮುಖ ಭೂಫಲಕ ಗಡಿ’ಯ ಮೇಲೆ ಇಂಡೋನೇಷ್ಯಾ ನೆಲೆಗೊಂಡಿದೆ.
    • ಈ ಪ್ರಕ್ರಿಯೆಯು ಜಾವಾ, ಸುಮಾತ್ರಾ ಮತ್ತು ಸುಂಡಾ ದ್ವೀಪದುದ್ದಕ್ಕೂ ಸ್ತರ ಜ್ವಾಲಾಮುಖಿಗಳ ಸರಪಳಿಯನ್ನು ಸೃಷ್ಟಿಸುತ್ತದೆ.
    • ಇದು ಫೆಸಿಫಿಕ್ ನ ‘ಅಗ್ನಿ ವರ್ತುಲ’ದ (Ring of Fire) ಹೃದಯಭಾಗದಲ್ಲಿದೆ. ವಿಶ್ವದ ಶೇಕಡಾ 75 ರಷ್ಟು ಜ್ವಾಲಾಮುಖಿಗಳು ಮತ್ತು ಶೇಕಡಾ 90 ರಷ್ಟು ಭೂಕಂಪಗಳು ಈ ವಲಯದಲ್ಲೇ ಸಂಭವಿಸುತ್ತವೆ.

    ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI)

    ಸಾಮಾನ್ಯ ಅಧ್ಯಯನ – 1/ ಭೂಗೋಳಶಾಸ್ತ್ರ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ (GSI) 175ನೇ ಸ್ಥಾಪನಾ ವರ್ಷದ ಆಚರಣೆಯ ಭಾಗವಾಗಿ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರು “ಭೂತಕಾಲದ ಶೋಧನೆ, ಭವಿಷ್ಯದ ರೂಪಿಸುವಿಕೆ: GSI ನ 175 ವರ್ಷಗಳು”  ಎಂಬ ಶೀರ್ಷಿಕೆಯ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.

    ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI) ಯ ಬಗ್ಗೆ:

    • ಈ ಸಂಸ್ಥೆಯು ಭಾರತದ ಅಗ್ರಗಣ್ಯ ರಾಷ್ಟ್ರೀಯ ಭೂವೈಜ್ಞಾನಿಕ ಸಂಸ್ಥೆಯಾಗಿದೆ.
    • ಕಾರ್ಯನಿರ್ವಹಣೆ:- ಇದು ಕೇಂದ್ರ ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಸ್ಥಾಪನೆ:- ಈ ಸಂಸ್ಥೆಯನ್ನು 1851 ರಲ್ಲಿ ಸರ್ ಥಾಮಸ್ ಓಲ್ಡ್‌ಹ್ಯಾಮ್ ಅವರು ಸ್ಥಾಪಿಸಿದರು.
    • ಜಾನ್ ಮೆಕ್ಲೆಲ್ಯಾಂಡ್ ಅವರ ನೇತೃತ್ವದಲ್ಲಿ ನಡೆದ ಕಲ್ಲಿದ್ದಲು ಅನ್ವೇಷಣೆಯ ಸಂದರ್ಭದಲ್ಲಿ, 1848 ರಲ್ಲಿ ಮೊದಲ ಬಾರಿಗೆ “ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ” ಎಂಬ ಪದವನ್ನು ಬಳಸಲಾಯಿತು.

    ಪ್ರಮುಖ ಕಾರ್ಯಗಳು:

    • ಭೂವೈಜ್ಞಾನಿಕ ನಕ್ಷೆ ಮತ್ತು ಸಮೀಕ್ಷೆಗಳು:- ಭೂ, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳನ್ನು ಒಳಗೊಂಡಂತೆ, ಮೇಲ್ಮೈ ಹಾಗೂ ಉಪ-ಮೇಲ್ಮೈ ಭೂವಿಜ್ಞಾನದ ಸಮಗ್ರ ನಕ್ಷೆಗಳನ್ನು ತಯಾರಿಸುವುದು ಮತ್ತು  ನಿರ್ವಹಿಸುವುದು.
    • ಖನಿಜ ಅನ್ವೇಷಣೆ : ಖನಿಜ, ಇಂಧನ (ಕಲ್ಲಿದ್ದಲು, ತೈಲ ಸೇರಿದಂತೆ) ಮತ್ತು ಜಲ ಸಂಪನ್ಮೂಲಗಳ ವೈಜ್ಞಾನಿಕ ಅನ್ವೇಷಣೆ ಹಾಗೂ ಮೌಲ್ಯಮಾಪನ ಮಾಡುವುದು.
    • ಭೂವೈಪರೀತ್ಯ ಅಧ್ಯಯನಗಳು:- ಭೂಕಂಪನ-ಭೂರಚನಾ ಸಂಶೋಧನೆ, ಹಿಮನದಿ ಶಾಸ್ತ್ರ, ಹವಾಮಾನ ಸಂಬಂಧಿತ ಭೂ-ಅಧ್ಯಯನಗಳು ಮತ್ತು ವಿಪತ್ತು ಅಪಾಯದ ವಿಶ್ಲೇಷಣೆಯನ್ನು ನಡೆಸುವುದು.
    • ಭೂತಾಂತ್ರಿಕ ಮತ್ತು ಭೂಪರಿಸರೀಯ ಅಧ್ಯಯನಗಳು : ಮೂಲಸೌಕರ್ಯ ಯೋಜನೆ, ಅಂತರ್ಜಲ ಅಧ್ಯಯನಗಳು, ಭೂಸ್ಥಿರತೆ ವಿಶ್ಲೇಷಣೆ ಮತ್ತು ಪರಿಸರ ಮೌಲ್ಯಮಾಪನಗಳಿಗೆ ಉತ್ತೇಜನ ನೀಡುವುದು.

    ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಕಾರ್ಯಕ್ರಮ (ICDS)

    ಸಾಮಾನ್ಯ ಅಧ್ಯಯನ –  2/ ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿ

    • ಅಂಗನವಾಡಿಗಳ ಮುಖಾಂತರ ಪೌಷ್ಟಿಕಾಂಶ, ಶಿಕ್ಷಣ ಮತ್ತು ಬಾಲ್ಯಾವಸ್ಥೆಯ ಆರೈಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ‘ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರವನ್ನು ವ್ಯಾಪಕವಾಗಿ ವಿಸ್ತರಣೆಗೊಂಡಿದೆ.

    ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರಮದ ಬಗ್ಗೆ:

    • ಆರಂಭ: 1975ರ ಅಕ್ಟೋಬರ್ 2
    • ಇದೊಂದು ದೇಶದ ಮಹತ್ವಾಕಾಂಕ್ಷೆಯ ‘ಪೂರ್ವ ಬಾಲ್ಯಾವಸ್ಥೆಯ ಆರೈಕೆ ಮತ್ತು ಅಭಿವೃದ್ಧಿ’ (ECCD) ಯೋಜನೆಯಾಗಿದೆ.
    • ಇದು ದೇಶಾದ್ಯಂತದ ಅಂಗನವಾಡಿ ಕೇಂದ್ರಗಳ ಜಾಲದ ಮೂಲಕ, 6 ವರ್ಷದೊಳಗಿನ ಮಕ್ಕಳು ಹಾಗೂ ತಾಯಂದಿರಿಗೆ ಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಮತ್ತು ಶಾಲಾ ಪೂರ್ವ ಶಿಕ್ಷಣದಂತಹ ಸಮಗ್ರ ಸೇವೆಗಳನ್ನು ಒದಗಿಸುತ್ತದೆ.
    • ಹಣಕಾಸು: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಪೌಷ್ಟಿಕಾಂಶ ಮತ್ತು ಬಾಲ್ಯದ ಆರಂಭಿಕ ಆರೈಕೆಯನ್ನು ಏಕೀಕರಿಸುವ ಸಲುವಾಗಿ, ಪ್ರಸ್ತುತ ಇದನ್ನು ‘ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0’ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ.

    ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್

    ಸಾಮಾನ್ಯ ಅಧ್ಯಯನ – 2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅಥವಾ ಮೆದುಳು ಜ್ವರದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ಶಬರಿಮಲೆ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ನ ಬಗ್ಗೆ:

    • ರೋಗಕಾರಕ – ಇದು ನೇಗ್ಲೆರಿಯಾ ಫೌಲೆರಿ’ ಎಂಬ ರೋಗಕಾರಕದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕಾಗಿದೆ.
    • ನೇಗ್ಲೆರಿಯಾ ಫೌಲೆರಿ’ ಎಂಬುದು ಬೆಚ್ಚಗಿನ ಸಿಹಿನೀರು ಮತ್ತು ಮಣ್ಣಿನಲ್ಲಿ ಕಂಡುಬರುವ ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದೆ.
    • ಹರಡುವಿಕೆ: ಈಜುವುದು, ಧಾರ್ಮಿಕ ಆಚರಣೆಗಳಲ್ಲಿ ಮೂಗನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಚಟುವಟಿಕೆಗಳ ಸಂದರ್ಭದಲ್ಲಿ, ಕಲುಷಿತ ನೀರು ಮೂಗಿನ ಮೂಲಕ ಪ್ರವೇಶಿಸಿದಾಗ ಸಾಮಾನ್ಯವಾಗಿ ಈ ಸೋಂಕು ಉಂಟಾಗುತ್ತದೆ.
    • ಇದು ನೀರನ್ನು ಕುಡಿಯುವುದರಿಂದ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ನೇರ ಸಂಪರ್ಕದ ಮೂಲಕ ಹರಡುವುದಿಲ್ಲ.
    • ಲಕ್ಷಣಗಳು: ಇದು ಮೆದುಳಿಗೆ ಸಂಚರಿಸಿ, ಅಲ್ಲಿನ ಅಂಗಾಂಶಗಳನ್ನು ನಾಶಪಡಿಸುತ್ತದೆ ಮತ್ತು ಮೆದುಳಿನ ಊತಕ್ಕೆ ಕಾರಣವಾಗುತ್ತದೆ.
    • ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು: ಅಪಾಯವನ್ನು ತಗ್ಗಿಸಲು, ನೀರಿನ ಚಟುವಟಿಕೆಗಳ ಸಮಯದಲ್ಲಿ ಮೂಗಿನೊಳಗೆ ನೀರು ಹೋಗದಂತೆ ನಿಯಂತ್ರಿಸಬೇಕು.
  • ಮಲೆನಾಡು ಜೇಡ

    ಮಲೆನಾಡು ಜೇಡ

    ಇದೀಗ ಸುದ್ದಿಯಲ್ಲಿದೆ:

    • ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದರಲ್ಲಿ ಜಿಗಿಯುವ ಜೇಡಗಳ ಹೊಸ ಪ್ರಭೇದವೊಂದನ್ನು ಪತ್ತೆಹಚ್ಚಿರುವ ಸಂಶೋಧಕರು, ಅದಕ್ಕೆ ಮಲೆನಾಡಿನ ಹೆಸರನ್ನಿಟ್ಟು ಗೌರವಿಸಿದ್ದಾರೆ.

    ಶೋಧನೆಯ ವಿವರಗಳು:

    • ಅನ್ವೇಷಣೆ: ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಜೀವವೈವಿಧ್ಯತೆಯ ಕುರಿತು ಅಧ್ಯಯನ ನಡೆಸುತ್ತಿದ್ದ ಸಂಶೋಧಕರ ತಂಡವು ಈ ಹೊಸ ಪ್ರಭೇದವನ್ನು ಗುರುತಿಸಿದೆ.
    • ಸ್ಥಳ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಈ ಜೇಡ ಪತ್ತೆಯಾಗಿದೆ.
    • ವರ್ಗೀಕರಣ: ಇದು ‘ಪಿಲಿಯಾ’ ಎಂಬ ಜಿಗಿಯುವ ಜೇಡಗಳ ಕುಲಕ್ಕೆ ಸೇರಿದ ಹೊಸ ಪ್ರಭೇದವಾಗಿದೆ.
    • ನಾಮಕರಣ: ಈ ಜೇಡವು ಪತ್ತೆಯಾದ ಭೌಗೋಳಿಕ ಪ್ರದೇಶ ಮಲೆನಾಡಿಗೆ ಗೌರವ ಸಲ್ಲಿಸುವ ಸಂಕೇತವಾಗಿ , ಸಂಶೋಧಕರು ಇದಕ್ಕೆ ವೈಜ್ಞಾನಿಕವಾಗಿ “ಪಿಲಿಯಾ ಮಲೆನಾಡು” ಎಂದು ನಾಮಕರಣ ಮಾಡಿದ್ದಾರೆ.