Blog

  • ಕರ್ನಾಟಕ ಪ್ರವಾಸೋದ್ಯಮ ನೀತಿ, 2020-26

    ಕರ್ನಾಟಕ ಪ್ರವಾಸೋದ್ಯಮ ನೀತಿ, 2020-26

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕರ್ನಾಟಕದ ಪ್ರವಾಸೋದ್ಯಮ ವಲಯವು ಕೋವಿಡ್ ಸಾಂಕ್ರಾಮಿಕದ ನಂತರದ ಅವಧಿಯಲ್ಲಿ ಅಭೂತಪೂರ್ವ ಚೇತರಿಕೆ ಮತ್ತು ಬೆಳವಣಿಗೆಯನ್ನು ದಾಖಲಿಸಿದ್ದು, 2025 ರಲ್ಲಿ ಒಟ್ಟು ಪ್ರವಾಸಿಗರ ಸಂಖ್ಯೆ 21 ಕೋಟಿಯನ್ನು ಮೀರಿದೆ.

    ಕರ್ನಾಟಕ ಪ್ರವಾಸೋದ್ಯಮ ನೀತಿ, 2020-26 ರ ಬಗ್ಗೆ:

    • ಉದ್ದೇಶ – ಸುರಕ್ಷತೆ, ಉನ್ನತ ಗುಣಮಟ್ಟದ ಅನುಭವಗಳು ಮತ್ತು ಸುಸ್ಥಿರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮೇಲೆ ಗಮನಹರಿಸುವ ಮೂಲಕ ಕರ್ನಾಟಕವನ್ನು ಅಗ್ರ ಜಾಗತಿಕ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಉದ್ದೇಶವನ್ನು ಇದು ಹೊಂದಿದೆ.

    ಮೂಲ ದೃಷ್ಟಿಕೋನ ಮತ್ತು ಕಾರ್ಯತಂತ್ರದ ಗಮನ:

    ಈ ನೀತಿಯು “ಒಂದು ರಾಜ್ಯ, ಹಲವು ಜಗತ್ತುಗಳು” (One State, Many Worlds) ಬ್ರ್ಯಾಂಡ್‌ನ ಅಡಿಯಲ್ಲಿ 360-ಡಿಗ್ರಿ ಮಾರ್ಕೆಟಿಂಗ್ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ.

    • ಸುರಕ್ಷತೆ ಮತ್ತು ನೈರ್ಮಲ್ಯ:- ಸಾಂಕ್ರಾಮಿಕ-ನಂತರ ಪ್ರವಾಸಿಗರ ವಿಶ್ವಾಸವನ್ನು ಮರುಸ್ಥಾಪಿಸಲು “ಹೊಸ ಸಾಮಾನ್ಯ” ಮಾನದಂಡಗಳಿಗೆ ಒತ್ತು ನೀಡುವುದು.
    • ಮೂಲಸೌಕರ್ಯ:- ಪ್ರಮುಖ ತಾಣಗಳಲ್ಲಿ “ವಿಶ್ವ ದರ್ಜೆಯ” ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರಮುಖ ಪ್ರವಾಸೋದ್ಯಮ ಮಾರ್ಗಗಳಲ್ಲಿ ಪ್ರಮಾಣೀಕೃತ ರಸ್ತೆಬದಿಯ ಸೌಲಭ್ಯಗಳನ್ನು ನಿರ್ಮಿಸುವುದು.
    • ಡಿಜಿಟಲ್ ಉಪಕ್ರಮಗಳು:- ಸಂದರ್ಶಕರ ಅನುಭವವನ್ನು ಸುಧಾರಿಸಲು ಬಳಕೆದಾರ-ಸ್ನೇಹಿ ಮೊಬೈಲ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ವಿಶ್ಲೇಷಣೆ-ಆಧಾರಿತ ನಿರ್ಧಾರ-ತೆಗೆದುಕೊಳ್ಳುವಿಕೆಯನ್ನು ಬಳಸುವುದು.

    ಕೊಡುಗೆಗಳನ್ನು ವೈವಿಧ್ಯಗೊಳಿಸಲು ಈ ನೀತಿಯು 18 ವಿಶಿಷ್ಟ ವಿಷಯಗಳನ್ನು ಗುರುತಿಸುತ್ತದೆ:

    • ಸಾಹಸ ಮತ್ತು ಕರಾವಳಿ:- ಭೂಮಿ, ಜಲ ಮತ್ತು ವಾಯು-ಆಧಾರಿತ ಚಟುವಟಿಕೆಗಳ ಮೇಲೆ ಗಮನಹರಿಸುವುದು ಮತ್ತು ಕಡಲತೀರಗಳಿಗೆ ನೀಲಿ ಧ್ವಜ (ಬ್ಲೂ ಫ್ಲಾಗ್) ಪ್ರಮಾಣೀಕರಣವನ್ನು ಸಾಧಿಸುವುದು.
    • ಸಂಸ್ಕೃತಿ ಮತ್ತು ಪರಂಪರೆ:- ಮೈಸೂರನ್ನು ಜಾಗತಿಕ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವುದು ಮತ್ತು ಹಂಪಿಯಂತಹ ಯುನೆಸ್ಕೋ (UNESCO) ತಾಣಗಳ ಸುತ್ತ ಪಾರಂಪರಿಕ ಪ್ರವಾಸೋದ್ಯಮ ವಲಯಗಳನ್ನು ಸ್ಥಾಪಿಸುವುದು.
    • ಪ್ರಕೃತಿ ಮತ್ತು ಯೋಗಕ್ಷೇಮ:- ಪರಿಸರ-ಪ್ರವಾಸೋದ್ಯಮವನ್ನು ಉತ್ತೇಜಿಸಲು ‘ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್’ (JLR) ಸಂಸ್ಥೆಯನ್ನು ಪ್ರಧಾನ ಉಸ್ತುವಾರಿ ಸಂಸ್ಥೆಯಾಗಿ ನೇಮಿಸುವುದು.
    • ವಿಶೇಷ ವಿಷಯಗಳು:- ಕೃಷಿ-ಪ್ರವಾಸೋದ್ಯಮ, ಕಾರವಾನ್ (ಸಂಚಾರಿ ವಸತಿ ವಾಹನ) ಪ್ರವಾಸೋದ್ಯಮ, ಚಲನಚಿತ್ರ ಪ್ರವಾಸೋದ್ಯಮ ಮತ್ತು MICE (ಸಭೆಗಳು, ಉತ್ತೇಜಕಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು) ಒಳಗೊಂಡಿದೆ.
  • ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ನಿಯಂತ್ರಿಸಲು ಕೇರಳದ ಸಸ್ಯಶಾಸ್ತ್ರಜ್ಞರ ನಾವೀನ್ಯತೆ | ಶಾಹ್ತೂಷ್ ಉಣ್ಣೆ (Shahtoosh Wool) | ಆಪರೇಷನ್ ನಮ್ಖೋರ್ (Operation Numkhor) | ಭಾರತೀಯ ಬಾಹ್ಯಾಕಾಶ ಸನ್ನಿವೇಶದ ಜಾಗೃತಿ ವರದಿ, 2025 (ISSAR-2025)

    ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ನಿಯಂತ್ರಿಸಲು ಕೇರಳದ ಸಸ್ಯಶಾಸ್ತ್ರಜ್ಞರ ನಾವೀನ್ಯತೆ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಮಲಬಾರ್ ಸಸ್ಯೋದ್ಯಾನ ಮತ್ತು ಸಸ್ಯ ವಿಜ್ಞಾನ ಸಂಸ್ಥೆಯ (MBGIPS) ಸಸ್ಯಶಾಸ್ತ್ರಜ್ಞ ಎನ್. ಅಲಿಮ್ ಯೂಸುಫ್ ಅವರು, ಕೇರಳದಲ್ಲಿನ ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ಪತ್ತೆಹಚ್ಚುವ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಕ್ಕಾಗಿ ‘ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ರಾಷ್ಟ್ರೀಯ ಪ್ರಶಸ್ತಿ’ಯನ್ನು ಪಡೆದಿದ್ದಾರೆ.

    ಈ ನಾವೀನ್ಯತೆಯ ಬಗ್ಗೆ:

    • ‘ನಿಯೋಫೈಟ್ ಐಡಿ’ (Neophyte ID) ಎಂಬ ಈ ಅಪ್ಲಿಕೇಶನ್, ಕೃತಕ-ಬುದ್ಧಿಮತ್ತೆ (AI) ಚಾಲಿತ ಮೊಬೈಲ್ ಸಾಧನವಾಗಿದ್ದು, ಇದು ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ಗುರುತಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
    • ಈ ಆ್ಯಪ್ ಕೇರಳದಲ್ಲಿ ಕಂಡುಬರುವ ಸುಮಾರು 100 ಆಕ್ರಮಣಕಾರಿ ಸಸ್ಯ ಪ್ರಭೇದಗಳನ್ನು ಗುರುತಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. 
    • ಆಕ್ರಮಣಕಾರಿ ಪ್ರಭೇದಗಳ ಹರಡುವಿಕೆಯನ್ನು ಗುರುತಿಸಲು ಇದು ಭೌಗೋಳಿಕ ಅಂತರಿಕ್ಷ ನಿಗಾ ವ್ಯವಸ್ಥೆಯನ್ನು ಬಳಸುತ್ತದೆ, ಇದು ವೈಜ್ಞಾನಿಕ ಸಂಶೋಧನೆಗಳಿಗೆ ಹಾಗೂ ಭವಿಷ್ಯದ ನೀತಿ-ರೂಪಿಸುವ ಕ್ರಮಗಳಿಗೆ ಸಹಕಾರಿಯಾಗಿದೆ.

    ಆಕ್ರಮಣಕಾರಿ ಸಸ್ಯ ಪ್ರಭೇದಗಳು (Invasive plant species):

    • ವ್ಯಾಖ್ಯಾನ:- ಆಕ್ರಮಣಶೀಲ ಪ್ರಭೇದಗಳು ಸ್ಥಳೀಯವಲ್ಲದ ಜೀವಿಗಳಾಗಿದ್ದು (ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು, ಸೂಕ್ಷ್ಮಜೀವಿಗಳು), ಅವು ಸ್ವಯಂ-ಪೋಷಕ ಸಂತತಿಯನ್ನು ಸ್ಥಾಪಿಸುತ್ತವೆ ಮತ್ತು ಪರಿಸರ, ಆರ್ಥಿಕತೆ ಅಥವಾ ಮಾನವನ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ.
    • ಪರಿಣಾಮಗಳು:- ಅವು ಜೀವವೈವಿಧ್ಯತೆಯ ನಷ್ಟ ಮತ್ತು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತವೆ ಹಾಗೂ ಕೃಷಿ, ಅರಣ್ಯ ಮತ್ತು ಮೀನುಗಾರಿಕೆಯಲ್ಲಿ ಗಮನಾರ್ಹವಾದ ಆರ್ಥಿಕ ನಷ್ಟಕ್ಕೆ ದಾರಿ ಮಾಡಿಕೊಡುತ್ತವೆ.
    • ಕಾರಣಗಳು:- ಜಾಗತೀಕರಣ (ಹೆಚ್ಚಿದ ವ್ಯಾಪಾರ ಮತ್ತು ಪ್ರಯಾಣ), ಮಾನವ ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಯು ಅವುಗಳ ಹರಡುವಿಕೆ ಮತ್ತು ಸ್ಥಾಪನೆಗೆ ಅನುಕೂಲ ಮಾಡಿಕೊಡುತ್ತವೆ.
    • ಭಾರತೀಯ ಸನ್ನಿವೇಶ:- ಭಾರತವು ‘ಲಂಟಾನಾ ಕ್ಯಾಮಾರಾ’ ಮತ್ತು ಜಲಕುಂಭಿ (ವಾಟರ್ ಹಯಸಿಂತ್)  ನಂತಹ ಸಸ್ಯಗಳು, ಹಾಗೂ ‘ಆಫ್ರಿಕಾದ ಮಾಗೂರು ಮೀನು (ಕ್ಯಾಟ್‌ಫಿಶ್)’ ಮತ್ತು ‘ನೈಲ್  ತಿಲಾಪಿಯಾ ಮೀನು’ದಂತಹ ಪ್ರಾಣಿಗಳನ್ನು ಒಳಗೊಂಡಂತೆ ಹಲವಾರು ವ್ಯಾಪಕ ಆಕ್ರಮಣಶೀಲ ಪ್ರಭೇದಗಳನ್ನು ಹೊಂದಿದೆ.

    ಶಾಹ್ತೂಷ್ ಉಣ್ಣೆ (Shahtoosh Wool)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಶಾಹತೂಷ್ ಶಾಲುಗಳನ್ನು ಅಕ್ರಮವಾಗಿ ರಫ್ತು ಮಾಡಲು ಯತ್ನಿಸಿದ ಜೈಪುರ ಮೂಲದ ಕಲಾ ಪ್ರದರ್ಶನಾಲಯದ ಮಾಲೀಕನಿಗೆ ದೆಹಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

    ‘ಶಾಹ್ತೂಷ್ ಉಣ್ಣೆ’ಯ ಬಗ್ಗೆ:

    • ಇದನ್ನು ‘ಚಿರು’ (Chiru) ಎಂದೂ ಕರೆಯಲ್ಪಡುವ ಟಿಬೆಟಿನ ಹುಲ್ಲೆಯ ಕೂದಲಿನಿಂದ ಪಡೆಯಲಾಗುತ್ತದೆ.
    • ಈ ಉಣ್ಣೆಯನ್ನು ಪಡೆಯಲು ಆ ಪ್ರಾಣಿಯನ್ನು ಕೊಲ್ಲಲಾಗುತ್ತದೆ.
    • ಈ ಶಾಹ್ತೂಷ್ ವ್ಯಾಪಾರವನ್ನು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 

    ‘ಚಿರು’/ ಟಿಬೆಟಿನ ಹುಲ್ಲೆ (Tibetan Antelope) ಕುರಿತು:

      • ವೈಜ್ಞಾನಿಕ ಹೆಸರು:- ಪಾಂಥೋಲೋಪ್ಸ್ ಹಾಡ್ಗ್ಸೋನಿ (Pantholops hodgsonii)
      • ಚಿರು ಎನ್ನುವುದು ಟಿಬೆಟಿನ ಪ್ರಸ್ಥಭೂಮಿಯ (3,250-5,500 ಮೀಟರ್) ಎತ್ತರದ ಹುಲ್ಲುಗಾವಲು ಪ್ರದೇಶಗಳಿಗೆ ಸ್ಥಳೀಯವಾದ ಮಧ್ಯಮ-ಗಾತ್ರದ ಸೀಳುಗೊರಸಿನ ಸಸ್ತನಿಯಾಗಿದೆ (Bovid).
      • ಆವಾಸಸ್ಥಾನ:- ಅವು ಟಿಬೆಟ್, ಕಿಂಗ್ಹೈ ಮತ್ತು ಚೀನಾದ ಕ್ಸಿನ್‌ಜಿಯಾಂಗ್‌ನ ಶುಷ್ಕ, ಶೀತ ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ, ಜೊತೆಗೆ ಭಾರತದ ಲಡಾಖ್‌ನಲ್ಲಿ (ಚಾಂಗ್‌ಥಾಂಗ್ ಪ್ರದೇಶ) ಇವುಗಳ ಸಣ್ಣ ಪ್ರಮಾಣದ ಸಂತತಿಯಿದೆ.
      • ದೈಹಿಕ ಲಕ್ಷಣ:- ಅವು ಬಿಳಿ ಹೊಟ್ಟೆಯೊಂದಿಗೆ ತೆಳು-ಕಂದು ಬಣ್ಣದಿಂದ ಕೆಂಪು-ಕಂದು ಬಣ್ಣದ ತುಪ್ಪಟವನ್ನು ಹೊಂದಿರುತ್ತವೆ. ಗಂಡು ಹುಲ್ಲೆಗಳ ಮುಖ ಮತ್ತು ಕಾಲುಗಳ ಮೇಲೆ ಕಪ್ಪು ಗುರುತುಗಳಿರುತ್ತವೆ, ಇವು ಹೆಣ್ಣು ಚಿಗರೆಗಳಲ್ಲಿ ಕಂಡುಬರುವುದಿಲ್ಲ.
    • ಸಂರಕ್ಷಣಾ ಸ್ಥಿತಿ:-
      • IUCN ಕೆಂಪು ಪಟ್ಟಿ – ಅಪಾಯದ ಅಂಚಿನಲ್ಲಿರುವ (NT)
      • ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 – ಅನುಸೂಚಿ I

    CITES – ಅನುಬಂಧ I

    ಆಪರೇಷನ್ ನಮ್ಖೋರ್ (Operation Numkhor)

    ರಕ್ಷಣೆ/ಭದ್ರತೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ವಾಹನ ಕಳ್ಳಸಾಗಣೆ ಮತ್ತು ನಕಲಿ ನೋಂದಣಿ ಜಾಲಗಳ ವಿರುದ್ಧದ ರಾಷ್ಟ್ರವ್ಯಾಪಿ ಕಾರ್ಯಾಚರಣೆಯಾದ ‘ಆಪರೇಷನ್ ನಮ್ಖೋರ್’ ಕುರಿತು ಮುಂಬರುವ ಇಂಡೋ-ಭೂತಾನ್ ಜಂಟಿ ‘ಕಸ್ಟಮ್ಸ್ ಗ್ರೂಪ್ ಸಭೆ’ಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

    ಆಪರೇಷನ್ ನುಮ್ಖೋರ್ ಬಗ್ಗೆ:

    • ಪ್ರಾರಂಭಿಸಿದವರು:- ಸೆಪ್ಟೆಂಬರ್ 2025 ರಲ್ಲಿ ಕೊಚ್ಚಿಯ ಸುಂಕ (ತಡೆಗಟ್ಟುವ) ಆಯುಕ್ತಾಲಯ ಇದನ್ನು ಆರಂಭಿಸಿತು.
    • ಉದ್ದೇಶ:- ಭೂತಾನ್‌ನಿಂದ ಉನ್ನತ-ಮಟ್ಟದ ಐಷಾರಾಮಿ ವಾಹನಗಳ ಕಳ್ಳಸಾಗಣೆಯನ್ನು ಒಳಗೊಂಡ ವ್ಯಾಪಕ ಜಾಲವನ್ನು ಪತ್ತೆಹಚ್ಚುವುದು.
    • ಈ ಕಾರ್ಯಾಚರಣೆಯು ಭಾರಿ ಕಸ್ಟಮ್ಸ್ ಸುಂಕಗಳನ್ನು ತಪ್ಪಿಸುವ ಮೂಲಕ ಮತ್ತು ನಕಲಿ ದಾಖಲೆಗಳನ್ನು ಬಳಸಿಕೊಂಡು ಭಾರತದಾದ್ಯಂತ ಅಕ್ರಮವಾಗಿ ನೋಂದಾಯಿಸಲಾದ 15,000 ಕ್ಕೂ ಹೆಚ್ಚು ವಾಹನಗಳನ್ನು ಪತ್ತೆಹಚ್ಚಿದೆ.

    ಭಾರತೀಯ ಬಾಹ್ಯಾಕಾಶ ಸನ್ನಿವೇಶದ ಜಾಗೃತಿ ವರದಿ, 2025 (ISSAR-2025)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ 2ನೇ ಅಂತರರಾಷ್ಟ್ರೀಯ ಬಾಹ್ಯಾಕಾಶಯಾನ ಮಿಷನ್ ಕಾರ್ಯನಿರ್ವಹಣೆ (SMOPS-2026) ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ, ಇಸ್ರೋ ‘ಭಾರತೀಯ ಬಾಹ್ಯಾಕಾಶ ಸನ್ನಿವೇಶದ ಜಾಗೃತಿ ವರದಿ 2025′ (Indian Space Situational Awareness Report – ISSAR-2025) ಅನ್ನು ಬಿಡುಗಡೆ ಮಾಡಿದೆ.

    2025ರ ಪ್ರಮುಖ ಜಾಗತಿಕ ಮತ್ತು ಭಾರತೀಯ ಅಂಕಿಅಂಶಗಳು:

    • ಜಾಗತಿಕ ಚಟುವಟಿಕೆ:- 2025 ರಲ್ಲಿ ದಾಖಲೆಯ 315 ಯಶಸ್ವಿ ಉಡಾವಣೆಗಳ ಮೂಲಕ 4,198 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದೆ.
    • ಭಾರತೀಯ ಸನ್ನಿವೇಶ: ಭಾರತವು ತನ್ನ 100ನೇ ಕಾರ್ಯಾಚರಣೆ (GSLV-F15/NVS-02) ಸೇರಿದಂತೆ 5 ಉಡಾವಣೆಗಳನ್ನು ದಾಖಲಿಸಿದೆ. ನಿಸಾರ್ (NISAR) ಜಂಟಿ ಕಾರ್ಯಾಚರಣೆ, ಸ್ಪೇಡೆಕ್ಸ್ (SpaDeX) ಸ್ವಾಯತ್ತ ಜೋಡಣಾ ಪರೀಕ್ಷೆ (Autonomous docking test) ಮತ್ತು ‘ಆದಿತ್ಯ-ಎಲ್1’ ನ ನಿರಂತರ ಕಾರ್ಯಾಚರಣೆಗಳು ಪ್ರಮುಖ ಸಾಧನೆಗಳಲ್ಲಿ ಸೇರಿವೆ.
    • ಸುರಕ್ಷತೆ ಮತ್ತು ಅನ್ವೇಷಣೆ: ಇಸ್ರೋ, ನಿಸಾರ್ ಉಪಗ್ರಹವನ್ನು ಉಡಾವಣೆ ಮಾಡಿದೆ ಹಾಗೂ ತನ್ನ ‘ತ್ಯಾಜ್ಯ ಮುಕ್ತ ಬಾಹ್ಯಾಕಾಶ ಕಾರ್ಯಾಚರಣೆ 2030’ (DFSM 2030) ಅನ್ನು ಮುನ್ನಡೆಸುತ್ತಿದೆ.
    • ಮಾನವ ಬಾಹ್ಯಾಕಾಶಯಾನ: ಆಕ್ಸಿಯಮ್-4 (Axiom-4) ಮಿಷನ್ ನ ನೇತೃತ್ವವನ್ನು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ವಹಿಸಿಕೊಳ್ಳುವ ಮೂಲಕ ಮಾನವ ಬಾಹ್ಯಾಕಾಶಯಾನದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ.
  • ಚಿಕ್ಕಬಳ್ಳಾಪುರ : ಸಣ್ಣ ಪಟ್ಟಣಗಳ ಜಲ-ಸ್ಥಿತಿಸ್ಥಾಪಕತ್ವ ನಿರ್ಮಾಣ

    ಚಿಕ್ಕಬಳ್ಳಾಪುರ : ಸಣ್ಣ ಪಟ್ಟಣಗಳ ಜಲ-ಸ್ಥಿತಿಸ್ಥಾಪಕತ್ವ ನಿರ್ಮಾಣ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಣ್ಣ ಪಟ್ಟಣಗಳ ಜಲ-ಸ್ಥಿತಿಸ್ಥಾಪಕತ್ವ ನಿರ್ಮಾಣ’ ಯೋಜನೆಯನ್ನು 2026ರ ಏಪ್ರಿಲ್‌ನಲ್ಲಿ ಪ್ರಾರಂಭಿಸಲಾಯಿತು.

    ಈ ನಿರ್ಮಾಣ ಯೋಜನೆಯ ಬಗ್ಗೆ:

    • ಇದು ಕರ್ನಾಟಕದ ಆರು ಬರಪೀಡಿತ ಪಟ್ಟಣಗಳಾದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ, ಗುಡಿಬಂಡೆ ಮತ್ತು ಚಿಂತಾಮಣಿಯ 3,00,000 ನಿವಾಸಿಗಳಿಗೆ ಜಲ ಭದ್ರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
    • ಈ ಉಪಕ್ರಮವು ‘ವಿಪತ್ತು-ನಿರೋಧಕ ಮೂಲಸೌಕರ್ಯಗಳ ಒಕ್ಕೂಟ’ದ (CDRI) ಆರ್ಥಿಕ ಮತ್ತು ತಾಂತ್ರಿಕ ಬೆಂಬಲದೊಂದಿಗೆ, ‘ಭಾರತೀಯ ಮಾನವ ವಸತಿ ಸಂಸ್ಥೆ’ಯ (IIHS) ಮೂಲಕ ಅನುಷ್ಠಾನಗೊಳ್ಳುತ್ತಿದೆ.
    • ಪ್ರಾಮುಖ್ಯತೆ:- ನೀರಿನ ಕೊರತೆಯನ್ನು ನಿವಾರಿಸಲು, ಈ ಉಪಕ್ರಮವು ವಿಪತ್ತು-ಆಧಾರಿತ ಯೋಜನೆ, ಜಲ ಲೆಕ್ಕಪರಿಶೋಧನೆ ಮತ್ತು ಸಂಸ್ಕರಿಸಿದ ತ್ಯಾಜ್ಯನೀರಿನ ಮರುಬಳಕೆಯ ಮೇಲೆ ಗಮನಹರಿಸುತ್ತದೆ.
  • ಇಂಗಾಲದ ಗಡಿ ಸಮನ್ವಯ ಕಾರ್ಯವಿಧಾನ (CBAM) | ಸಾಗರದ ಉಷ್ಣ ಅಲೆಗಳು | “ಮೆಮ್‌ಫ್ಲೇಶನ್” (Memflation) : ಮೆಮೊರಿ ಬೆಲೆ ಹಣದುಬ್ಬರ | ಅಮೆಜಾನ್ ಮಳೆಕಾಡುಗಳು

    ಇಂಗಾಲದ ಗಡಿ ಸಮನ್ವಯ ಕಾರ್ಯವಿಧಾನ (CBAM)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಜನವರಿ 1, 2028 ರಿಂದ ಸುಮಾರು 180 ಹೆಚ್ಚುವರಿ ಉತ್ಪನ್ನಗಳನ್ನು ಸೇರ್ಪಡಿಸುವಂತೆ ‘ಇಂಗಾಲದ ಗಡಿ ಸಮನ್ವಯ ಕಾರ್ಯವಿಧಾನ’ (CBAM – Carbon Border Adjustment Mechanism)ದ ವ್ಯಾಪ್ತಿಯನ್ನು ವಿಸ್ತರಿಸಲು ಯುರೋಪಿಯನ್ ಆಯೋಗವು ಪ್ರಸ್ತಾಪಿಸಿದೆ.

    ಇಂಗಾಲದ ಗಡಿ ಸಮನ್ವಯ ಕಾರ್ಯವಿಧಾನ (CBAM)ದ ಬಗ್ಗೆ:

    • CBAM ಸಂಕ್ಷಿಪ್ತ ರೂಪ:- ಕಾರ್ಬನ್ ಬಾರ್ಡರ್ ಅಡ್ಜಸ್ಟಮೆಂಟ್ ಮೆಕ್ಯಾನಿಸ್ಮ್ (Carbon Border Adjustment Mechanism)
    • ಇದೊಂದು ಐರೋಪ್ಯಾ ಒಕ್ಕೂಟದ ಉಪಕ್ರಮವಾಗಿದೆ.
    • ಇದು ಐರೋಪ್ಯಾ ಒಕ್ಕೂಟವು ಆಮದು ಮಾಡಿಕೊಳ್ಳುವ ಸಿಮೆಂಟ್ ಮತ್ತು ಕೆಲವು ವಿದ್ಯುತ್‌ನಂತಹ ಇಂಗಾಲ-ಸಾಂದ್ರಿತ ಉತ್ಪನ್ನಗಳ ಮೇಲೆ ವಿಧಿಸುವ ಇಂಗಾಲದ ಸುಂಕವಾಗಿದೆ.
    • ಪ್ರಾಮುಖ್ಯತೆ:- ಇದೊಂದು ಇಂಗಾಲದ ಬೆಲೆ ನಿರ್ಧಾರದ ಕ್ರಮವಾಗಿದ್ದು, ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಿಸಲು ಪ್ರೇರೇಪಿಸುತ್ತದೆ. ಒಂದು ವಾಣಿಜ್ಯ-ಆಧಾರಿತ ಕ್ರಮವಾಗಿ, ಇದು ಜಾಗತಿಕ ಉತ್ಪಾದನಾ ಪ್ರಕ್ರಿಯೆ ಮತ್ತು ರಫ್ತು ಚಟುವಟಿಕೆಗಳ ಮೇಲೆ ನಿರ್ಣಾಯಕ ಪ್ರಭಾವ ಬೀರುತ್ತದೆ.

    ಸಾಗರದ ಉಷ್ಣ ಅಲೆಗಳು

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಸಾಗರದ ಉಷ್ಣ ಅಲೆಗಳ (MHWs) ಮೇಲೆ ಹಾದುಹೋಗುವ ಉಷ್ಣವಲಯದ ಚಂಡಮಾರುತಗಳು ‘ತ್ವರಿತ ತೀವ್ರತೆಯ’ ಮೂಲಕ 60% ರಷ್ಟು ಹೆಚ್ಚಿನ ಬಿಲಿಯನ್-ಡಾಲರ್ ಮೌಲ್ಯದ ವಿಪತ್ತುಗಳಿಗೆ ಕಾರಣವಾಗುತ್ತವೆ ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ.

    ಸಾಗರದ ಉಷ್ಣ ಅಲೆಗಳ (Marine Heatwaves – MHWs) ಬಗ್ಗೆ:

    • ವ್ಯಾಖ್ಯಾನ:- ಇದು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸಾಗರ ಮೇಲ್ಮೈ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ ಅಸಾಮಾನ್ಯವಾಗಿ ಸುದೀರ್ಘ ಅವಧಿಯವರೆಗೆ ಉಳಿಯುವ ಸ್ಥಿತಿಯನ್ನು ಸಾಗರದ ಉಷ್ಣ ಅಲೆಗಳು ಎಂದು ಕರೆಯುತ್ತಾರೆ.
    • ಇವುಗಳನ್ನು ಗುಣಲಕ್ಷಣಗಳನ್ನು ಎರಡು ಪ್ರಮುಖ ಮಾನದಂಡಗಳ ಮೂಲಕ ಗುರುತಿಸಲಾಗುತ್ತದೆ:-
    • ಅವಧಿ: ಇದು ಕೆಲವು ದಿನಗಳಿಂದ ಆರಂಭಿಸಿ ಹಲವಾರು ತಿಂಗಳುಗಳವರೆಗೆ ಇರುತ್ತದೆ.
    • ತೀವ್ರತೆ: ಇದನ್ನು ದೀರ್ಘಾವಧಿಯ ಋತುಮಾನದ ಸರಾಸರಿಯಿಂದ ಉಂಟಾದ ವಿಚಲನ ಅಥವಾ ಪಲ್ಲಟ ಎಂದು ಅಳೆಯಲಾಗುತ್ತದೆ. ಇದನ್ನು ‘ತಾಪಮಾನದ ಅಸಹಜತೆ’ ಎಂದು ಕರೆಯಲಾಗುತ್ತದೆ
    • ಪ್ರಮುಖ ಕಾರಣಗಳು:-
    • ಹವಾಮಾನ ಬದಲಾವಣೆ: ವಾತಾವರಣದ 90%+ ರಷ್ಟು ಹೆಚ್ಚುವರಿ ಶಾಖವನ್ನು ಸಾಗರಗಳು ಹೀರಿಕೊಳ್ಳುತ್ತವೆ, ಇದು ಮೂಲ ತಾಪಮಾನವನ್ನು ಹೆಚ್ಚಿಸುತ್ತದೆ.
    • ಸಾಗರ ಪ್ರವಾಹಗಳು: ಬೆಚ್ಚಗಿನ ನೀರಿನ ಪ್ರವಾಹಗಳು ತಂಪಾದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತವೆ.
    • ವಾತಾವರಣದ ವ್ಯವಸ್ಥೆಗಳು: ‘ಉತ್ತರ ಪೆಸಿಫಿಕ್ ಅಧಿಕ ಒತ್ತಡ ಕೇಂದ್ರ’ (North Pacific High) ನಂತಹ ಅಧಿಕ-ಒತ್ತಡದ ವ್ಯವಸ್ಥೆಗಳು ಸಾಗರ ಮೇಲ್ಮೈ ಶಾಖವನ್ನು ಅಲ್ಲಿಯೇ ಹಿಡಿದಿಟ್ಟುಕೊಳ್ಳುತ್ತವೆ.
    • ಎಲ್ ನಿನೋ (El Niño): ಇದು ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನವನ್ನು ಗಣನೀಯವಾಗಿ ಏರಿಕೆ ಮಾಡುತ್ತದೆ ಮತ್ತು ಇದುವರೆಗೂ ದಾಖಲಾದ ಅತಿ ದೊಡ್ಡ ಸಾಗರ ಉಷ್ಣ ಅಲೆಗಳಿಗೆ (MHWs) ಚಾಲನೆ ನೀಡುತ್ತದೆ. 
    • ಪ್ರಭಾವಗಳು:- ಹವಳದ ಬಿಳುಪು (coral bleaching), ಮೀನುಗಳ ಸ್ಥಳಾಂತರ, ಸಾಗರದ ಪರಿಸರದ ಹಾನಿ.

    “ಮೆಮ್‌ಫ್ಲೇಶನ್” (Memflation) : ಮೆಮೊರಿ ಬೆಲೆ ಹಣದುಬ್ಬರ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಗಾರ್ಟ್ನರ್ ಸಂಸ್ಥೆಯ ಮುನ್ಸೂಚನೆಯಂತೆ, 2026ರ ವೇಳೆಗೆ ಜಾಗತಿಕ ಅರೆವಾಹಕ (ಸೆಮಿಕಂಡಕ್ಟರ್) ಉದ್ಯಮದ ಆದಾಯವು $1.3 ಟ್ರಿಲಿಯನ್ ತಲುಪುವ ನಿರೀಕ್ಷೆಯಿದೆ. 
    • ಈ ಉದ್ಯಮವು ಸತತ ಮೂರನೇ ವರ್ಷವೂ ಎರಡಂಕಿಯ ಬೆಳವಣಿಗೆಯನ್ನು ಸಾಧಿಸಲು ‘ಮೆಮ್‌ಫ್ಲೇಶನ್’ (Memflation) ಅಥವಾ ಮೆಮೊರಿ ಬೆಲೆಗಳ ನಿರಂತರ ಏರಿಕೆಯ ಪ್ರವೃತ್ತಿಯೇ ಪ್ರಮುಖ ಪ್ರೇರಕ ಶಕ್ತಿಯಾಗಿದೆ.

    ಮೆಮ್‌ಫ್ಲೇಶನ್ (Memflation- Memory Price Inflation) ಬಗ್ಗೆ:

    • ಹಣದುಬ್ಬರ (Inflation): ಇದು ಕಾಲಕ್ರಮೇಣವಾಗಿ ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಒಟ್ಟಾರೆ ಬೆಲೆಗಳಲ್ಲಿನ ಸಾಮಾನ್ಯ ಏರಿಕೆಯನ್ನು ಸೂಚಿಸುತ್ತದೆ.
    • ಮೆಮ್‌ಫ್ಲೇಶನ್ (Memflation): ಇದು ಒಂದು ರಚನಾತ್ಮಕ ಆರ್ಥಿಕ ಪ್ರವೃತ್ತಿಯಾಗಿದ್ದು, ಇದರಲ್ಲಿ ಅರೆವಾಹಕ (ಸೆಮಿಕಂಡಕ್ಟರ್) ಮೆಮೊರಿ ಬೆಲೆಗಳು ಕಾಲಾನಂತರದಲ್ಲಿ ವೇಗವಾಗಿ ಮತ್ತು ನಿರಂತರವಾಗಿ ಏರಿಕೆಯಾಗುತ್ತವೆ.

    ಅಮೆಜಾನ್ ಮಳೆಕಾಡುಗಳು

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಇತ್ತೀಚಿನ ಅಧ್ಯಯನವೊಂದು, 2023-2024ರ ಸತತ ಬರಗಾಲವು ಅಮೆಜಾನ್ ಮಳೆಕಾಡಿನ ತೇವಾಂಶ ಮತ್ತು ಜೀವರಾಶಿಯು ಕಳೆದ ಮೂರು ದಶಕಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿಯುವಂತೆ ಮಾಡಿದೆ ಎಂದು ದೃಢಪಡಿಸಿದೆ. ಇದು ಅರಣ್ಯವು ಎದುರಿಸುತ್ತಿರುವ ತೀವ್ರವಾದ ಪರಿಸರ ಒತ್ತಡವನ್ನು ಸೂಚಿಸುತ್ತದೆ. 

    ಅಮೆಜಾನ್ ಮಳೆಕಾಡುಗಳ (Amazon Rainforests) ಬಗ್ಗೆ:

    • ಭೌಗೋಳಿಕ ಸ್ಥಾನ:- ಈ ಮಳೆಕಾಡುಗಳು ದಕ್ಷಿಣ ಅಮೆರಿಕಾ ಖಂಡದ 9 ರಾಷ್ಟ್ರಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಅವುಗಳೆಂದರೆ,
    • ಈ ಅರಣ್ಯದ ಬಹುಪಾಲು ಭಾಗ ಅಂದರೆ 60% ಬ್ರೆಜಿಲ್‌ನಲ್ಲಿ ಹರಡಿಕೊಂಡರೆ. ನಂತರದ ಸ್ಥಾನದಲ್ಲಿ ಪೆರು (13%), ಕೊಲಂಬಿಯಾ (10%), ಬೊಲಿವಿಯಾ, ಈಕ್ವೆಡಾರ್, ಫ್ರೆಂಚ್ ಗಯಾನಾ, ಗಯಾನಾ, ಸುರಿನಾಮ್ ಹಾಗೂ ವೆನೆಜುವೆಲಾದಲ್ಲಿ ಹರಡಿಕೊಂಡಿದೆ.
    • ಆವೃತ್ತವಾದ ಪ್ರದೇಶ:- ಇದು ಉತ್ತರಕ್ಕೆ ಗಯಾನಾ ಪ್ರಸ್ಥಭೂಮಿಗಳು, ಪಶ್ಚಿಮಕ್ಕೆ ಆಂಡಿಸ್ ಪರ್ವತಗಳು, ದಕ್ಷಿಣಕ್ಕೆ ಬ್ರೆಜಿಲ್ ನ ಕೇಂದ್ರ ಪ್ರಸ್ಥಭೂಮಿ ಮತ್ತು ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರದಿಂದ ಆವೃತವಾಗಿದೆ.
    • ಹವಾಮಾನ:- ಇಲ್ಲಿ ವರ್ಷಪೂರ್ತಿ 26-30°C ತಾಪಮಾನದೊಂದಿಗೆ ಬಿಸಿ ಮತ್ತು ಆರ್ದ್ರ  ವಾತಾವರಣವಿರುತ್ತದೆ. ಇಲ್ಲಿ ಯಾವುದೇ ನಿರ್ದಿಷ್ಟ ಋತುಮಾನಗಳಿಲ್ಲ. ವಾರ್ಷಿಕ ಮಳೆಯ ಪ್ರಮಾಣವು 2,000 ಮಿ.ಮೀ ನಿಂದ 10,920 ಮಿ.ಮೀ ವರೆಗೆ ಇರುತ್ತದೆ.
    • ಬುಡಕಟ್ಟು ಸಮುದಾಯಗಳು:- ಯಾನೊಮಾಮೊ, ಕಯಾಪೊ, ಅಕುಂಟ್ಸು, ಮ್ಯಾಟ್ಸೆಸ್, ತುಪಿ ಇತ್ಯಾದಿ.
    • ಪ್ರಾಣಿಸಂಕುಲ:- ಅನಕೊಂಡ, ಜೀಸಸ್ ಹಲ್ಲಿ (ಬಾಸಿಲಿಸ್ಕ್), ಹೌಲರ್ ಕೋತಿ, ಸುವರ್ಣ ಕೇಸರದ ಟಮರಿನ್, ಜಾಗ್ವಾರ್, ಸ್ಲಾತ್, ಸ್ಪೈಡರ್ ವಾನರ, ಅಮೆಜಾನ್ ನದಿ ಡಾಲ್ಫಿನ್, ಟೂಕನ್, ಸ್ಕಾರ್ಲೆಟ್, ವಾನರ, ವಿಷಪೂರಿತ ಡಾರ್ಟ್ ಕಪ್ಪೆ ಹಾಗೂ ಪಾರದರ್ಶಕ ಕಪ್ಪೆಗಳನ್ನು ಈ ಅರಣ್ಯದಲ್ಲಿ ಕಾಣಬಹುದು.
    • ಸಸ್ಯಸಂಕುಲ:-  ಮರ್ಟಲ್, ಲಾರೆಲ್, ತಾಳೆ, ಅಕೇಶಿಯ, ಬೀಟೆ ಮರ (ರೋಸ್‌ವುಡ್), ಬ್ರೆಜಿಲ್ ನಟ್, ರಬ್ಬರ್ ಮರ, ಮಹಾಗನಿ ಮತ್ತು ಅಮೆಜಾನಿಯನ್ ಸಿಡಾರ್‌ನಂತಹ ತೇವಭರಿತ ವಿಶಾಲ-ಎಲೆಗಳ ಉಷ್ಣವಲಯದ ಮಳೆಕಾಡುಗಳಿಂದ ಆವೃತವಾಗಿವೆ.

    ಅಮೆಜಾನ್ ಮಳೆಕಾಡುಗಳ ಪ್ರಾಮುಖ್ಯತೆ:

    • ಭೂಮಿಯ ಶ್ವಾಸಕೋಶಗಳು:- ಈ ಮಳೆಕಾಡುಗಳು ಪ್ರಪಂಚದ ಸುಮಾರು 20% ಆಮ್ಲಜನಕವನ್ನು ಉತ್ಪಾದಿಸುತ್ತವೆ ಮತ್ತು ಇಲ್ಲಿನ ಮರಗಳು ಮಾಲಿನ್ಯಕಾರಕಗಳ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
    • ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ:- ಇವುಗಳು ಇಂಗಾಲವನ್ನು ಸಂಗ್ರಹಿಸುವ ಅಪಾರ ಸಾಮರ್ಥ್ಯವನ್ನು ಹೊಂದಿರುವುದರಿಂದ ಹವಾಮಾನ ಬದಲಾವಣೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ನಿರ್ಣಾಯಕ ಸುರಕ್ಷತಾ ವಲಯವಾಗಿ ಕಾರ್ಯನಿರ್ವಹಿಸುತ್ತವೆ.
    • ಔಷಧೀಯ ಗುಣಗಳು:- ಇಲ್ಲಿನ ಅನೇಕ ಸಸ್ಯಗಳು ಜೈವಿಕ-ಸಕ್ರಿಯ ಸಂಯುಕ್ತಗಳನ್ನು ಹೊಂದಿದ್ದು, ವಿಶೇಷವಾಗಿ ಕ್ಯಾನ್ಸರ್ ನಂತಹ ಗುಣಪಡಿಸಲಾಗದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿವೆ.

    ಅರಣ್ಯಕ್ಕೆ ಎದುರಾಗಿರುವ ಬೆದರಿಕೆಗಳು:

    • ಹವಾಮಾನ ಬದಲಾವಣೆ:- ಹವಾಮಾನ ಬದಲಾವಣೆಯಿಂದಾಗಿ ಅರಣ್ಯಗಳು ಮಳೆಯ ಮಾದರಿಗಳಲ್ಲಿನ ಬದಲಾವಣೆ ಮತ್ತು ಮಾಲಿನ್ಯದಂತಹ ವಿವಿಧ ಸವಾಲುಗಳನ್ನು ಎದುರಿಸುತ್ತಿವೆ.
    • ಅರಣ್ಯನಾಶ:- ಮರದ ದಿಮ್ಮಿಗಳ ಸಂಗ್ರಹಣೆ, ಹುಲ್ಲುಗಾವಲು ಮತ್ತು ಕೃಷಿ ಭೂಮಿಯ ಸೃಷ್ಟಿಗಾಗಿ ವಲಸಿಗರು ಭೂಮಿಯನ್ನು ತೆರವುಗೊಳಿಸಿದ ಪರಿಣಾಮವಾಗಿ ಅಮೆಜಾನ್ ಕಾಡಿನ ವ್ಯಾಪ್ತಿಯು ತೀವ್ರವಾಗಿ ಕುಗ್ಗಿದೆ.
    • ಕಾಡ್ಗಿಚ್ಚು:- ಇದು ಪರಿಸರ ವ್ಯವಸ್ಥೆಗಳು ಮತ್ತು ಜೀವವೈವಿಧ್ಯದ ಉಳಿವಿಗೆ ಬೆದರಿಕೆಯೊಡ್ಡುತ್ತದೆ. 2019 ರ ಕಾಡ್ಗಿಚ್ಚು ಈ ಪ್ರದೇಶದಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗಿತ್ತು.

    ‘ಅಮೆಜಾನ್ ನದಿ’ಯ ಬಗ್ಗೆ:

    • ಇದು ನೀರಿನ ಪ್ರಮಾಣದಲ್ಲಿ ವಿಶ್ವದ ಅತಿದೊಡ್ಡ ನದಿಯಾಗಿದೆ ಮತ್ತು ಆಫ್ರಿಕಾದ ನೈಲ್ ನದಿಯ ನಂತರ ವಿಶ್ವದ ಎರಡನೇ ಅತಿ ಉದ್ದದ ನದಿಯಾಗಿದೆ.
    • ಉಗಮಸ್ಥಾನ:- ಈ ನದಿಯು 5,598 ಮೀಟರ್ ಎತ್ತರದ ಪೆರುವಿನ ಆಂಡಿಸ್ ಪರ್ವತ ಶ್ರೇಣಿಯಲ್ಲಿ ಉಗಮಿಸುತ್ತದೆ.
    • ಉದ್ದ:- 6400 ಕಿ.ಮೀ..
    • ಜಲಾನಯನ ಪ್ರದೇಶ:- ಇದು ಬ್ರೆಜಿಲ್ ಮತ್ತು ಪೆರುವಿನ ಬಹುಪಾಲು ಪ್ರದೇಶವನ್ನು ಒಳಗೊಂಡಂತೆ ಕೊಲಂಬಿಯಾ, ಈಕ್ವೆಡಾರ್, ಬೊಲಿವಿಯಾ ಹಾಗೂ ವೆನೆಜುವೆಲಾದ ಸಣ್ಣ ಪ್ರದೇಶವನ್ನು ಒಳಗೊಂಡಿದೆ.
    • ಉಪನದಿಗಳು:- ಜಪುರಾ, ಜುರುವಾ, ಮಡೈರಾ, ನೀಗ್ರೋ, ಪುರುಸ್ ಮತ್ತು ಜಿಂಗು ನದಿಗಳು.
    • ನದಿಮುಖ:- ಬ್ರೆಜಿಲ್‌ನ ಈಶಾನ್ಯ ಕರಾವಳಿಯಲ್ಲಿರುವ ಅಟ್ಲಾಂಟಿಕ್ ಮಹಾಸಾಗರ.
  • ಕರ್ನಾಟಕ ರಾಜ್ಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಶಸ್ತಿಗಳು, 2025-26

    ಕರ್ನಾಟಕ ರಾಜ್ಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಶಸ್ತಿಗಳು, 2025-26

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸಚಿವ ಶಿವರಾಜ್ ತಂಗಡಗಿ ನೇತೃತ್ವದ ಕರ್ನಾಟಕ ಸರ್ಕಾರದ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ಯು, 2025-26ನೇ ಸಾಲಿನ ರಾಜ್ಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿವಿಧ ಕ್ಷೇತ್ರಗಳ ಗಣ್ಯ ಸಾಧಕರನ್ನು ಗುರುತಿಸಿದೆ.

    2025-26ನೇ ಸಾಲಿನ ಪ್ರಶಸ್ತಿಗಳ ಪ್ರಮುಖ ಮುಖ್ಯಾಂಶಗಳು:

    • ಪಂಪ ಪ್ರಶಸ್ತಿ:- ದೇವನೂರ ಮಹಾದೇವ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
    • ಬಸವ ರಾಷ್ಟ್ರೀಯ ಪುರಸ್ಕಾರ:- ಎಸ್.ಆರ್. ಗುಂಜಾಳ್
    • ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ:- ಕಂಬದಹಳ್ಳಿಯ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಒಲಿದಿದೆ.

    ಸಾಹಿತ್ಯ ಮತ್ತು ರಂಗಭೂಮಿ ಪ್ರಶಸ್ತಿಗಳು:

    • ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ:- ಅಲ್ಲಾಬಕ್ಷ್ ಮೀರಾಸಾಹೇಬ್ ಮಿರ್ಜಿ
    • ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ:- ಸುಕನ್ಯಾ ಮಾರುತಿ
    • ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ:- ಜಿ.ವಿ. ಶಾರದಾ
    • ಬಿ.ವಿ. ಕಾರಂತ ಪ್ರಶಸ್ತಿ:- ಪ್ರಸನ್ನ
    • ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ:- ಗಂಗಾರಾಮ ಚಂಡಾಲ
    • ಕುಮಾರವ್ಯಾಸ ಪ್ರಶಸ್ತಿ:- ಕಲ್ಲಿನಾಥ ಶಾಸ್ತ್ರಿ

    ಕಲೆ ಮತ್ತು ನೃತ್ಯ ಪ್ರಶಸ್ತಿಗಳು:

    • ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ:- ವಿ. ಹರಿರಾಮ್
    • ಜಕಣಾಚಾರಿ ಪ್ರಶಸ್ತಿ:- ಅಶೋಕ್ ಗುಡಿಗಾರ
    • ನಾಟ್ಯರಾಣಿ ಶಾಂತಲಾ ಪ್ರಶಸ್ತಿ:- ಪ್ರತಿಭಾ ಪ್ರಹ್ಲಾದ್

    ಜಾನಪದ ಮತ್ತು ಸಾಮಾಜಿಕ ಪ್ರಶಸ್ತಿಗಳು:

    • ಜಾನಪದಶ್ರೀ ಪ್ರಶಸ್ತಿ:- ಎಂ. ಮಹಾದೇವಯ್ಯ ಮತ್ತು ಬಿ. ಲಕ್ಷ್ಮಣ
    • ಸಂಗೊಳ್ಳಿ ರಾಯಣ್ಣ ಪ್ರಶಸ್ತಿ:- ಸಿದ್ದನಗೌಡ ಪಾಟೀಲ
    • ಅಕ್ಕಮಹಾದೇವಿ ಪ್ರಶಸ್ತಿ:- ಕೆ. ನೀಲಾ
    • ಕಾಯಕಯೋಗಿ ಸಿದ್ದರಾಮೇಶ್ವರ ಪ್ರಶಸ್ತಿ:- ಎಸ್.ಜಿ. ಸಿದ್ದರಾಮಯ್ಯ

    ‘ಪಂಪ ಪ್ರಶಸ್ತಿ’ಯ ಬಗ್ಗೆ:

    • ಇದು ಕರ್ನಾಟಕ ರಾಜ್ಯದ ಅತ್ಯುನ್ನತ ಸಾಹಿತ್ಯ ಗೌರವವಾಗಿದೆ.
    • 1987 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗೆ, ಕನ್ನಡದ ಮೊದಲ ಶ್ರೇಷ್ಠ ಕವಿ ‘ಆದಿಕವಿ ಪಂಪ’ ಅವರ ಹೆಸರನ್ನು ಇಡಲಾಗಿದೆ.
    • ಕನ್ನಡ ಸಾಹಿತ್ಯಕ್ಕೆ ನೀಡಿದ ಅಸಾಧಾರಣ ಜೀವಮಾನದ ಕೊಡುಗೆಯನ್ನು ಪರಿಗಣಿಸಿ ಇದನ್ನು ನೀಡಲಾಗುತ್ತದೆ.
    • ಬಹುಮಾನ:- ₹5 ಲಕ್ಷ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಶಾಲು.
    • ಇತ್ತೀಚಿನ ವಿಜೇತರು:- 2025-26 ರ ಸಾಲಿಗೆ ದೇವನೂರ ಮಹಾದೇವ ಅವರನ್ನು ಆಯ್ಕೆ ಮಾಡಲಾಗಿದೆ.
    • ಐತಿಹಾಸಿಕ ಮಾಹಿತಿ:- 1987 ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕಾಗಿ ಅವರಿಗೆ ಈ ಚೊಚ್ಚಲ ಪ್ರಶಸ್ತಿಯನ್ನು ನೀಡಲಾಗಿತ್ತು.

    ‘ಬಸವ ರಾಷ್ಟ್ರೀಯ ಪುರಸ್ಕಾರ’ದ ಬಗ್ಗೆ:

    • ಬಸವ ಪುರಸ್ಕಾರವು 2000 ದಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಮಟ್ಟದ ಗೌರವವಾಗಿದ್ದು, 12 ನೇ ಶತಮಾನದ ದಾರ್ಶನಿಕ ಮತ್ತು ಸಮಾಜ ಸುಧಾರಕ ಬಸವಣ್ಣನವರ ಹೆಸರನ್ನು ಇಡಲಾಗಿದೆ.
    • ನೀಡುವ ಉದ್ದೇಶ:- ಸಮಾಜ ಸುಧಾರಣೆ, ಸಾಮಾಜಿಕ ಬದಲಾವಣೆ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಗಣನೀಯ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಇದನ್ನು ಪ್ರದಾನ ಮಾಡಲಾಗುತ್ತದೆ.
    • ಬಹುಮಾನ:- ₹10 ಲಕ್ಷ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ.
    • ಇತ್ತೀಚಿನ ವಿಜೇತರು (2025-26):- ಸಂಶೋಧಕ ಮತ್ತು ಸಾಹಿತಿ ಎಸ್.ಆರ್. ಗುಂಜಾಳ್.
    • ಐತಿಹಾಸಿಕ ಮಾಹಿತಿ:- 2000 ದಲ್ಲಿ ಪ್ರಪ್ರಥಮ ಬಸವ ಪುರಸ್ಕಾರವನ್ನು ಸಮಾಜ ಸುಧಾರಕಿ ಸರಸ್ವತಿ ಗೋರಾ ಅವರಿಗೆ ನೀಡಲಾಗಿತ್ತು.
  • ಘಗ್ಗರ್ ನದಿ | ಅಂಡಮಾನ್ ಸಮುದ್ರ | AZEC ಪ್ಲಸ್ ಮತ್ತು ಕಡಲ ಭದ್ರತೆ

    ಘಗ್ಗರ್ ನದಿ

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಘಗ್ಗರ್ ನದಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ  ಕಲುಷಿತ ನೀರಿಗೆ ಸಂಬಂಧಿಸಿದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವರದಿಯಾಗಿದೆ. ಆದರೆ, ಸೂಕ್ತ ದತ್ತಾಂಶಗಳ ಕೊರತೆ ಮತ್ತು ಕಳಪೆ ಆರೋಗ್ಯ ವ್ಯವಸ್ಥೆಯು ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಡ್ಡಿಯಾಗಿದೆ.

    ಘಗ್ಗರ್ ನದಿಯ ಕುರಿತು:

    • ಘಗ್ಗರ್ ನದಿಯು ಉತ್ತರ ಭಾರತದಲ್ಲಿ ಹರಿಯುವ ಒಂದು ಮಾನ್ಸೂನ್ ಮಳೆ ಆಧಾರಿತ (ಋತುಮಾನದ) ನದಿಯಾಗಿದೆ.
    • ಇದು ಹಿಮಾಚಲ ಪ್ರದೇಶದ ‘ಶಿವಾಲಿಕ್ ಬೆಟ್ಟಗಳಲ್ಲಿ’ ಸುಮಾರು 1,927 ಮೀಟರ್ ಎತ್ತರದಲ್ಲಿರುವ ‘ದಾಗಷಯ್’ ಗ್ರಾಮದಲ್ಲಿ ಉಗಮಿಸುತ್ತದೆ. ಈ ನದಿ ಪಂಜಾಬ್ ಹಾಗೂ ಹರಿಯಾಣದ ಮೂಲಕ ರಾಜಸ್ಥಾನವನ್ನು ಪ್ರವೇಶಿಸುತ್ತದೆ.
    • ಕೌಶಲ್ಯ, ಮಾರ್ಕಂಡ, ಸರಸುತಿ, ತಂಗ್ರಿ ಮತ್ತು ಚೌತಂಗ್ ನದಿಗಳು ಇದರ ಪ್ರಮುಖ ಉಪನದಿಗಳಾಗಿವೆ.

    ಅಂಡಮಾನ್ ಸಮುದ್ರ

    ಭೂಗೋಳ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಬಾಂಗ್ಲಾದೇಶದಿಂದ ಮಲೇಷ್ಯಾಕ್ಕೆ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶದ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಇತ್ತೀಚಿಗೆ ಅಂಡಮಾನ್ ಸಮುದ್ರದಲ್ಲಿ ಮುಳುಗಡೆಯಾಗಿದೆ.

    ಅಂಡಮಾನ್ ಸಮುದ್ರದ ಬಗ್ಗೆ:

    • ಅಂಡಮಾನ್ ಸಮುದ್ರವು ಈಶಾನ್ಯ ಹಿಂದೂ ಮಹಾಸಾಗರದ ಅಂಚಿನಲ್ಲಿರುವ ಒಂದು ಸಮುದ್ರವಾಗಿದೆ.
    • ಇದು ಉತ್ತರ ಮತ್ತು ಪೂರ್ವಕ್ಕೆ ಮ್ಯಾನ್ಮಾರ್, ಪೂರ್ವಕ್ಕೆ ಥೈಲ್ಯಾಂಡ್ ಮತ್ತು ಮಲೇಷ್ಯಾ, ದಕ್ಷಿಣಕ್ಕೆ ಇಂಡೋನೇಷ್ಯಾ ಮತ್ತು ಪಶ್ಚಿಮಕ್ಕೆ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಆವೃತವಾಗಿದೆ.
    • ಇದು ‘ಮಲಾಕ್ಕಾ ಜಲಸಂಧಿ’ಯ ಮೂಲಕ ದಕ್ಷಿಣ ಚೀನಾ ಸಮುದ್ರವನ್ನು ಸಂಪರ್ಕಿಸುತ್ತದೆ. ಇದು ವಿಶೇಷವಾಗಿ ಭಾರತ ಮತ್ತು ಚೀನಾ ನಡುವಿನ ಅತ್ಯಂತ ಪ್ರಮುಖ ಅಂತರರಾಷ್ಟ್ರೀಯ ಹಡಗು-ಸಾಗಣೆ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.

    ರೋಹಿಂಗ್ಯಾ ಬಿಕ್ಕಟ್ಟು:

    • ರೋಹಿಂಗ್ಯಾಗಳು: ಇವರು ಪ್ರಧಾನವಾಗಿ ಪಾಶ್ಚಿಮಾತ್ಯ ಮ್ಯಾನ್ಮಾರ್‌ನ ‘ರಾಖಿಣಿ’ ಪ್ರಾಂತ್ಯದಲ್ಲಿ ವಾಸಿಸುವ ಮುಸ್ಲಿಮರ ಒಂದು ಜನಾಂಗೀಯ ಗುಂಪಾಗಿದೆ.
    • ಮ್ಯಾನ್ಮಾರ್‌ನಲ್ಲಿ, ಇವರನ್ನು ಅಲ್ಲಿನ ಪ್ರಜೆಗಳೆಂದು ಪರಿಗಣಿಸದೆ ಅಕ್ರಮ ವಲಸಿಗರು ಮತ್ತು ವಿದೇಶಿ ನಿವಾಸಿಗಳೆಂದು ವರ್ಗೀಕರಿಸಲಾಗಿದೆ.

    ನಿರಾಶ್ರಿತರ ಸಮಾವೇಶ, 1951:

    • ಇದೊಂದು ವಿಶ್ವಸಂಸ್ಥೆಯ ಬಹುಪಕ್ಷೀಯ ಒಪ್ಪಂದವಾಗಿದ್ದು, ಇದು ನಿರಾಶ್ರಿತರ ಜೀವ ಅಥವಾ ಸ್ವಾತಂತ್ರ್ಯಕ್ಕೆ ಗಂಭೀರ ಬೆದರಿಕೆ ಇರುವಂತಹ ದೇಶಕ್ಕೆ ಅವರನ್ನು ಯಾವುದೇ ಕಾರಣಕ್ಕೂ ಮರಳಿ ಕಳುಹಿಸಬಾರದು ಎಂದು ಪ್ರತಿಪಾದಿಸುತ್ತದೆ.
    • ಭಾರತ ಸದಸ್ಯತ್ವ ಹೊಂದಿಲ್ಲ: ಭಾರತವು ಈ ಸಮಾವೇಶಕ್ಕೆ ಸಹಿ ಹಾಕಿಲ್ಲ.

    ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಕುರಿತಾದ ಅಂತರರಾಷ್ಟ್ರೀಯ ಒಪ್ಪಂದ (ICCPR):

    • ಇದು ವಿಶ್ವಸಂಸ್ಥೆಯು 1966 ರಲ್ಲಿ ಅಂಗೀಕರಿಸಿದ ಒಂದು ಬಹುಪಕ್ಷೀಯ ಒಪ್ಪಂದವಾಗಿದೆ.
    • ವ್ಯಕ್ತಿಗಳ ಬದುಕುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಸಭೆ ಸೇರುವ ಹಕ್ಕು, ಚುನಾವಣಾ ಹಕ್ಕುಗಳು ಹಾಗೂ ನ್ಯಾಯಸಮ್ಮತ ವಿಚಾರಣೆಯ ಹಕ್ಕುಗಳು ಸೇರಿದಂತೆ ಎಲ್ಲಾ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಗೌರವಿಸಲು ಈ ಒಪ್ಪಂದವು ಸದಸ್ಯ ರಾಷ್ಟ್ರಗಳನ್ನು ಬದ್ಧಗೊಳಿಸುತ್ತದೆ.

    ರೋಹಿಂಗ್ಯಾಗಳ ಕುರಿತು ಭಾರತದ ನಿಲುವು:

    • ಆಪರೇಷನ್ ಇನ್ಸಾನಿಯತ್: ಬಾಂಗ್ಲಾದೇಶದಲ್ಲಿರುವ ನಿರಾಶ್ರಿತರ ಶಿಬಿರಗಳಿಗೆ ಮಾನವೀಯತೆಯ ಆಧಾರದ ಮೇಲೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಭಾರತವು 2017 ರಲ್ಲಿ “ಆಪರೇಷನ್ ಇನ್ಸಾನಿಯತ್” ಅನ್ನು ಪ್ರಾರಂಭಿಸಿತು.

    AZEC ಪ್ಲಸ್ ಮತ್ತು ಕಡಲ ಭದ್ರತೆ

    ಅಂತರರಾಷ್ಟ್ರೀಯ ಸಂಬಂಧಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಜಾಗತಿಕ ಇಂಧನ ಪೂರೈಕೆಯ ನಿರ್ಣಾಯಕ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಉದ್ವಿಗ್ನತೆ ನೆಲೆಸಿರುವ ಸಮಯದಲ್ಲಿಯೇ, ಕಡಲ-ಇಂಧನ ಮಾರ್ಗಗಳಲ್ಲಿ ಉಂಟಾಗುತ್ತಿರುವ ಅಡಚಣೆಗಳ ಕುರಿತು ‘AZEC ಪ್ಲಸ್’ ಸಭೆಯಲ್ಲಿ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ.

    ಏಷ್ಯಾ ಶೂನ್ಯ-ಹೊರಸೂಸುವಿಕೆ ಸಮುದಾಯ (AZEC):

    • AZEC ಪೂರ್ಣ ರೂಪ:- ಏಷ್ಯಾ ಜೀರೋ ಎಮಿಷನ್ ಕಮ್ಯೂನಿಟಿ (Asia Zero Emission Community)
    • ಇದು 2023 ರಲ್ಲಿ ಜಪಾನ್ ನೇತೃತ್ವದಲ್ಲಿ ಪ್ರಾರಂಭವಾದ ಒಂದು ಪ್ರಮುಖ ಉಪಕ್ರಮವಾಗಿದೆ.
    • ಉದ್ದೇಶ:- ಏಷ್ಯಾ ಖಂಡದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿತ (ಡಿಕಾರ್ಬನೈಸೇಶನ್), ಶುದ್ಧ ಇಂಧನ ಪರಿವರ್ತನೆ ಮತ್ತು ಇಂಧನ ಭದ್ರತೆಯನ್ನು ಉತ್ತೇಜಿಸುವುದು.
    • ಇದು ಏಷ್ಯಾದ ಆರ್ಥಿಕತೆಗಳ ವಿಭಿನ್ನ ಅಭಿವೃದ್ಧಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಇಂಧನ ಪರಿವರ್ತನೆಗಾಗಿ ಏಷ್ಯಾ-ಕೇಂದ್ರಿತ ಪರ್ಯಾಯ ಮಾದರಿಯನ್ನು ಒದಗಿಸುತ್ತದೆ.

    AZEC ಯ ಪ್ರಮುಖ ಆದ್ಯತೆಗಳು:

    • ಶುದ್ಧ ಇಂಧನ ಕ್ಷೇತ್ರದಲ್ಲಿ (ಜಲಜನಕ, ಅಮೋನಿಯಾ, ನವೀಕರಿಸಬಹುದಾದ ಇಂಧನಗಳು) ತಂತ್ರಜ್ಞಾನ ವರ್ಗಾವಣೆಯನ್ನು ಸುಗಮಗೊಳಿಸುವುದು.
    • ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಳ್ಳುವ ಜೊತೆಗೆ, ಇಂಗಾಲ-ತಟಸ್ಥತೆಯ ಗುರಿಗಳನ್ನು ಸಾಧಿಸಲು ಬೆಂಬಲಿಸುವುದು.
    • ಈ ವಲಯದಲ್ಲಿ ಇಂಧನ ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು.

    AZEC ಪ್ಲಸ್ (AZEC Plus) ವ್ಯವಸ್ಥೆ:

    • ‘AZEC ಪ್ಲಸ್’ ಎಂಬುದು ಒಂದು ವಿಸ್ತರಿತ ಕಾರ್ಯಚೌಕಟ್ಟಾಗಿದ್ದು, ಇದು ಹೆಚ್ಚು ಏಷ್ಯಾದ ದೇಶಗಳನ್ನು ಹಾಗೂ ‘ಏಷ್ಯಾ ಅಭಿವೃದ್ಧಿ ಬ್ಯಾಂಕ್’ (ADB) ಮತ್ತು ‘ಅಂತರರಾಷ್ಟ್ರೀಯ ಇಂಧನ ಸಂಸ್ಥೆ’ (IEA) ಯಂತಹ ಜಾಗತಿಕ ಸಂಸ್ಥೆಗಳನ್ನು ಒಳಗೊಂಡಿದೆ.
    • ಇದು ಪೂರೈಕೆ ಅಡಚಣೆಗಳು, ನಿರ್ಣಾಯಕ ಖನಿಜಗಳ ಲಭ್ಯತೆ ಮತ್ತು ಕಡಲ ಭದ್ರತೆಯಂತಹ ಉದಯೋನ್ಮುಖ ಸವಾಲುಗಳನ್ನು ಪರಿಹರಿಸುತ್ತದೆ.
  • ಯಾಣದ ಗುಹೆಗಳು –  ಭೂ-ಪರಂಪರೆಯ ತಾಣ

    ಯಾಣದ ಗುಹೆಗಳು –  ಭೂ-ಪರಂಪರೆಯ ತಾಣ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಾಣದ ಗುಹೆಗಳನ್ನು, 2026 ರ ಏಪ್ರಿಲ್‌ನಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯು (Geological Survey of India – GSI) ಅಧಿಕೃತವಾಗಿ ‘ರಾಷ್ಟ್ರೀಯ ಪ್ರಾಮುಖ್ಯತೆಯ ಭೂ-ಪರಂಪರೆಯ ತಾಣ’ (Geo-Heritage Site of National Importance) ಎಂದು ಘೋಷಿಸಿದೆ.

    ಯಾಣದ ಗುಹೆಗಳ (Yana Caves) ಕುರಿತು:

    • ಸ್ಥಳ:- ಸಹ್ಯಾದ್ರಿ ಪರ್ವತ ಶ್ರೇಣಿಯ ಕುಮಟಾ ಅರಣ್ಯ ವಲಯದೊಳಗೆ, ಗೋಕರ್ಣದ ಸಮೀಪ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ.
    • ಸಂಯೋಜನೆ:- ಕಾರ್ಸ್ಟ್ ಪ್ರಕ್ರಿಯೆಯಿಂದ (ನೀರಿನಿಂದ ಬಂಡೆಯ ಕರಗುವಿಕೆ) ರೂಪುಗೊಂಡ ಘನ, ಕಪ್ಪು ಡಾಲೊಮೈಟ್-ಯುಕ್ತ ಸುಣ್ಣಕಲ್ಲಿನಿಂದ ಕೂಡಿದೆ.
    • ಭೂ-ಪರಂಪರೆ ತಾಣದ ಸ್ಥಾನಮಾನ:- ಸುತ್ತಮುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ 61 ವಿಭಿನ್ನ ಕಾರ್ಸ್ಟ್ ರಚನೆಗಳನ್ನು ಹೊಂದಿದ್ದು, ಅವುಗಳ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಮೌಲ್ಯಕ್ಕಾಗಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯಿಂದ (GSI) ಮನ್ನಣೆ ಪಡೆದಿದೆ.
    • ಭೂವೈಜ್ಞಾನಿಕ ಕಾಲ:- ಈ ಶಿಲಾ ರಚನೆಗಳು ಸುಮಾರು 2,700 ದಶಲಕ್ಷ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ.

    ಯಾಣದ ಪೌರಾಣಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ:

    • ಭಸ್ಮಾಸುರನ ದಂತಕಥೆ:- ವಿಷ್ಣುವು (ಮೋಹಿನಿ ರೂಪದಲ್ಲಿ) ಭಸ್ಮಾಸುರನನ್ನು ತನ್ನನ್ನು ತಾನೇ ಸುಟ್ಟುಕೊಳ್ಳುವಂತೆ ಮಾಡಿದ ಪ್ರಸಂಗದ ಬೆಂಕಿಯಿಂದ ಬಂಡೆಗಳು ಕಪ್ಪಾಗಿವೆ ಎಂದು ಸ್ಥಳೀಯ ಐತಿಹ್ಯಗಳು ಉಲ್ಲೇಖಿಸುತ್ತವೆ.
    • ದೇವಾಲಯದ ತಾಣ:- ಬೃಹತ್ ಶಿಖರದ ತಳಭಾಗದಲ್ಲಿ ಶಿವನಿಗೆ (ಭೈರವೇಶ್ವರ) ಅರ್ಪಿತವಾದ ಗುಹಾಂತರ ದೇವಾಲಯವಿದ್ದು, ಇದು ಅನೇಕ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.
    • ಗಂಗೋದ್ಭವ:- ಪವಿತ್ರವೆಂದು ನಂಬಲಾದ ‘ಚಂಡಿಹೊಳೆ’ ಎಂಬ ಸಣ್ಣ ಜಲಮೂಲವು ಗುಹೆಗಳ ಮೇಲ್ಛಾವಣಿಯಿಂದ ಉಗಮಿಸಿ ಅಘನಾಶಿನಿ ನದಿಯನ್ನು ಸೇರುತ್ತದೆ.

    ಪ್ರಾಮುಖ್ಯತೆ:

    • ಪರಿಸರ ಮತ್ತು ಜೀವವೈವಿಧ್ಯ:- ಈ ತಾಣವು ಜೀವವೈವಿಧ್ಯ-ಸಮೃದ್ಧವಾದ ಪಶ್ಚಿಮ ಘಟ್ಟಗಳಲ್ಲಿ (ಯುನೆಸ್ಕೋ ವಿಶ್ವ ಪರಂಪರೆಯ ತಾಣ) ನೆಲೆಗೊಂಡಿದೆ.
    • ಭೌಗೋಳಿಕತೆ:- ಉಷ್ಣವಲಯದ ಪ್ರದೇಶದಲ್ಲಿ ‘ಕಾರ್ಸ್ಟ್ ಭೂಸ್ವರೂಪದ‘ (ಬಿರುಕುಗಳು, ಗುಹೆಗಳು, ಕುಸಿತದ ಕುಳಿಗಳು) ಅತ್ಯುತ್ತಮ ಉದಾಹರಣೆಯಾಗಿದೆ.
    • ಸಂಸ್ಕೃತಿ:- ಭೂವಿಜ್ಞಾನ ಮತ್ತು ಪೌರಾಣಿಕತೆಯ ಸಮ್ಮಿಲನವನ್ನು ಇದು ಪ್ರತಿನಿಧಿಸುತ್ತದೆ.
  • ಭಾರತದ ಹೊಸ ಗಡಿಪಾರು ನೀತಿ | ಬ್ರಿಕ್ಸ್ ಮತ್ತು ಕ್ವಾಡ್ (BRICS and QUAD) | ಕೋನ್ಯಾಕ್ ನಾಗಾ ಬುಡಕಟ್ಟು ಜನಾಂಗದ ಕ್ಯಾನ್ಸರ್-ನಿರೋಧಕ ಗಿಡಮೂಲಿಕೆಗಳು | ಗ್ಲುಫೋಸಿನೇಟ್ (Glufosinate) – ಕೃಷಿಯಲ್ಲಿ ಬಳಸುವ ಕಳೆನಾಶಕ

    ಭಾರತದ ಹೊಸ ಗಡಿಪಾರು ನೀತಿ

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ , ಕೇಂದ್ರ ಗೃಹ ಸಚಿವಾಲಯವು ಹೊಸ ಗಡಿಪಾರು ನೀತಿಯನ್ನು (Deportation policy) ಹೊರಡಿಸಿದೆ.

    ಗಡಿಪಾರು (Deportation) ಎಂದರೇನು?

    • ಇದೊಂದು ಔಪಚಾರಿಕ ಕಾನೂನು ಪ್ರಕ್ರಿಯೆಯಾಗಿದ್ದು, ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಶಂಕಿತ ವಿದೇಶಿಯರನ್ನು ವಶಕ್ಕೆ ಪಡೆದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮತ್ತು ಅವರ ತಾಯ್ನಾಡಿನೊಂದಿಗೆ ಅವರ ಗುರುತನ್ನು ಖಚಿತಪಡಿಸಿಕೊಂಡ ನಂತರವೇ ಅವರನ್ನು ತಮ್ಮ ದೇಶಕ್ಕೆ ಹಿಂತಿರುಗಿಸಲಾಗುತ್ತದೆ ಅಥವಾ ಗಡಿಪಾರು ಮಾಡಲಾಗುತ್ತದೆ.
    • ಪೌರತ್ವ ಕಾಯ್ದೆ, 1955 ರ ಪ್ರಕಾರ, ಮಾನ್ಯವಾದ ಪ್ರಯಾಣ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ ಅಥವಾ ಕಾನೂನುಬದ್ಧವಾಗಿ ಪ್ರವೇಶಿಸಿ ಅನುಮತಿಸಲಾದ ಅವಧಿಯ ನಂತರವೂ ದೇಶದಲ್ಲಿ ಉಳಿದುಕೊಂಡಿರುವ ವಿದೇಶಿ ವ್ಯಕ್ತಿಯನ್ನು “ಅಕ್ರಮ ವಲಸಿಗ” ಎಂದು ವ್ಯಾಖ್ಯಾನಿಸಲಾಗಿದೆ.

    ಹೊಸ ಗಡಿಪಾರು ನೀತಿಯ ಪ್ರಮುಖ ವೈಶಿಷ್ಟ್ಯಗಳು:

    • 30-ದಿನಗಳ ಪರಿಶೀಲನಾ ಗಡುವು:- ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಕ್ರಮ ವಲಸಿಗರನ್ನು ಗುರುತಿಸಿ ಕಡ್ಡಾಯವಾಗಿ 30 ದಿನಗಳೊಳಗೆ ಅವರ ಹಿನ್ನೆಲೆಯನ್ನು ಪರಿಶೀಲಿಸಬೇಕು. ಒಂದು ವೇಳೆ ಈ ಗಡುವಿನ ಅವಧಿಯಲ್ಲಿ ಅವರ ಹಿನ್ನೆಲೆಯನ್ನು ಸಾಬೀತುಪಡಿಸಲು ವಿಫಲವಾದರೆ, ಅದು ಸ್ವಯಂಚಾಲಿತ ಗಡಿಪಾರಿಗೆ ಕಾರಣವಾಗುತ್ತದೆ.
    • ಜಿಲ್ಲಾ-ಮಟ್ಟದ ವಿಶೇಷ ಪೊಲೀಸ್ ಘಟಕಗಳನ್ನು ಸ್ಥಾಪಿಸಲಾಗಿದೆ:- ದಾಖಲೆಗಳಿಲ್ಲದ ವಲಸಿಗರನ್ನು ಗುರುತಿಸಲು ಮತ್ತು ಅವರನ್ನು ಗೊತ್ತುಪಡಿಸಿದ ಬೇಲಿ ಹಾಕಿದ ಕೇಂದ್ರಗಳಲ್ಲಿ (Fenced Centers) ಇರಿಸಲು ಜಿಲ್ಲಾ ಮಟ್ಟದಲ್ಲಿ ಹೊಸ ಪೊಲೀಸ್ ಘಟಕಗಳನ್ನು ಸ್ಥಾಪಿಸಲಾಗಿದೆ. 
    • ಬಯೋಮೆಟ್ರಿಕ್ ಮತ್ತು ದತ್ತಾಂಶ ಮೇಲ್ವಿಚಾರಣೆ:- ವಲಸಿಗರ ಪತ್ತೆಗಾಗಿ ‘ವಿದೇಶಿಯರ ಗುರುತಿನ ಪೋರ್ಟಲ್’ (FIP) ಮೂಲಕ ಬಯೋಮೆಟ್ರಿಕ್ ದತ್ತಾಂಶವನ್ನು ಡಿಜಿಟಲೀಕರಣಗೊಳಿಸುವುದು ಕಡ್ಡಾಯವಾಗಿದೆ. 
    • ಗುರುತಿನ ವಂಚನೆಯನ್ನು ತಡೆಯಲು ಈ ದತ್ತಾಂಶವನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI – ಆಧಾರ್), ಭಾರತದ ಚುನಾವಣಾ ಆಯೋಗ (ECI) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ನಡುವೆ ಹಂಚಿಕೊಳ್ಳಲಾಗುತ್ತದೆ.

    ವಲಸೆ ಮತ್ತು ವಿದೇಶಿಯರ ಕಾಯ್ದೆ, 2025 (Immigration and Foreigners Act, 2025):

    • ಈ ಕಾಯ್ದೆಯು ಸೆಪ್ಟೆಂಬರ್ 1, 2025 ರಿಂದ ಜಾರಿಗೆ ಬಂದಿದ್ದು, ಇದು ವಿದೇಶಿಯರ ಕಾಯ್ದೆ, 1946 ರ ಸೇರಿದಂತೆ ವಸಾಹತುಶಾಹಿ ಕಾಲದ ಹಳೆಯ ಕಾನೂನುಗಳನ್ನು ಬದಲಾಯಿಸುತ್ತದೆ.
    • ಈ ಕಾಯ್ದೆಯು ‘ಬ್ಯೂರೋ ಆಫ್ ಇಮಿಗ್ರೇಷನ್’ (ವಲಸೆ ಬ್ಯೂರೋ) ಗೆ ಶಾಸನಬದ್ಧ ಸ್ಥಾನಮಾನವನ್ನು ನೀಡುತ್ತದೆ. ಇದು “ಪ್ರತಿಕೂಲ ಭದ್ರತಾ ವರದಿಗಳ” ಆಧಾರದ ಮೇಲೆ ವಿದೇಶಿಯರ ಪ್ರವೇಶವನ್ನು ನಿರಾಕರಿಸಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ.
    • ಕಠಿಣ ದಂಡನೆಗಳು:- ಅಕ್ರಮವಾಗಿ ದೇಶ ಪ್ರವೇಶಿಸುವವರಿಗೆ ನೀಡುವ ಶಿಕ್ಷೆಯನ್ನು ಹೆಚ್ಚಿಸಲಾಗಿದೆ. ಇದು 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹5 ಲಕ್ಷದವರೆಗೆ ದಂಡವನ್ನು ಒಳಗೊಂಡಿದೆ.
    • ವಿನಾಯಿತಿಗಳು:- ‘ಪೌರತ್ವ ತಿದ್ದುಪಡಿ ಕಾಯ್ದೆ’ (CAA) ಯ ಆಶಯಕ್ಕೆ ಅನುಗುಣವಾಗಿ, ‘ವಲಸೆ ಮತ್ತು ವಿದೇಶಿಯರ (ವಿನಾಯಿತಿ) ಆದೇಶ, 2025’ ಅನ್ನು ಹೊರಡಿಸಲಾಗಿದೆ. ಇದು 2025 ರ ಮೊದಲು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತವನ್ನು ಪ್ರವೇಶಿಸಿದ ನಿರ್ದಿಷ್ಟ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳಿಗೆ ಗಡಿಪಾರಿನಿಂದ ವಿನಾಯಿತಿ ನೀಡುತ್ತದೆ.

    ಬ್ರಿಕ್ಸ್ ಮತ್ತು ಕ್ವಾಡ್ (BRICS and QUAD)

    ಅಂತರರಾಷ್ಟ್ರೀಯ ಸಂಬಂಧಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತವು ಬ್ರಿಕ್ಸ್ (BRICS) ವಿದೇಶಾಂಗ ಸಚಿವರ ಸಭೆ ಹಾಗೂ ಕ್ವಾಡ್ (Quad) ವಿದೇಶಾಂಗ ಸಚಿವರ ಸಭೆ ಸೇರಿದಂತೆ ಪ್ರಮುಖ ರಾಜತಾಂತ್ರಿಕ ಸಭೆಗಳ ಆತಿಥ್ಯವನ್ನು ಮುಂಬರುವ ದಿನಗಳಲ್ಲಿ ವಹಿಸಲಿದೆ.

    ಬ್ರಿಕ್ಸ್ (BRICS) ಒಕ್ಕೂಟದ ಬಗ್ಗೆ:

    • ಸ್ಥಾಪನೆ:- 2009.
    • ಪ್ರಧಾನ ಕಚೇರಿ:- ಚೀನಾದ ಶಾಂಘೈ.
    • ಇದು ಪ್ರಪಂಚದ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳನ್ನು ಹೊಂದಿರುವ ದೇಶಗಳ ಒಕ್ಕೂಟವಾಗಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (2010 ರಲ್ಲಿ ಸೇರ್ಪಡೆ) ರಾಷ್ಟ್ರಗಳ ಇಂಗ್ಲಿಷ್ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ‘BRICS’ ಎಂಬ ಸಂಕ್ಷಿಪ್ತ ರೂಪವನ್ನು ರಚಿಸಲಾಗಿದೆ.
    • ಮೂಲ: “BRIC” ಎಂಬ ಪದವನ್ನು 2001 ರಲ್ಲಿ ಬ್ರಿಟಿಷ್ ಅಥಶಾಸ್ತ್ರಜ್ಞ ಜಿಮ್ ಒ’ನೀಲ್ ಅವರು ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ– ಈ ನಾಲ್ಕು ಉದಯೋನ್ಮುಖ ಆರ್ಥಿಕತೆಗಳನ್ನು ವಿವರಿಸಲು ಬಳಸಿದರು.
    • BRICS+:- 2024–2025 ರ ಅವಧಿಯಲ್ಲಿ, ಈ ಒಕ್ಕೂಟವು ಈಜಿಪ್ಟ್, ಇಥಿಯೋಪಿಯಾ, ಇರಾನ್, UAE ಮತ್ತು ಇಂಡೋನೇಷ್ಯಾ ದೇಶಗಳನ್ನು ಸೇರಿಸಿಕೊಳ್ಳುವ ಮೂಲಕ ವಿಸ್ತರಣೆಗೊಂಡಿದೆ. ಸೌದಿ ಅರೇಬಿಯಾಕ್ಕೆ ಆಹ್ವಾನ ನೀಡಲಾಗಿದ್ದರೂ, ಅದು ಇನ್ನೂ ತನ್ನ ಸದಸ್ಯತ್ವವನ್ನು ಅಧಿಕೃತಗೊಳಿಸಿಲ್ಲ.
    • ಬ್ರಿಕ್ಸ್‌ನ ಜಾಗತಿಕ ಪಾಲು:- ಪ್ರಪಂಚದ ಅತಿ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸಿರುವ ಈ ಒಕ್ಕೂಟವು, ಜಾಗತಿಕ ಜನಸಂಖ್ಯೆಯ ಶೇ. 41 ರಷ್ಟು, ಜಾಗತಿಕ GDP ಯ ಶೇ. 24 ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ. 16 ರಷ್ಟು ಪಾಲನ್ನು ಪ್ರತಿನಿಧಿಸುತ್ತದೆ (2028 ರ ವೇಳೆಗೆ, ಜಾಗತಿಕ ಆರ್ಥಿಕತೆಯಲ್ಲಿ ಬ್ರಿಕ್ಸ್‌ನ ಪಾಲು ಶೇ. 35 ಕ್ಕೆ ತಲುಪುವ ನಿರೀಕ್ಷೆಯಿದೆ).
    • ಅಧ್ಯಕ್ಷತೆ:- ಈ ವೇದಿಕೆಯ ಅಧ್ಯಕ್ಷತೆಯು ಸದಸ್ಯ ರಾಷ್ಟ್ರಗಳ ನಡುವೆ ವಾರ್ಷಿಕವಾಗಿ ಸರದಿಯ ಆಧಾರದ ಮೇಲೆ ಬದಲಾಗುತ್ತದೆ.

    ಬ್ರಿಕ್ಸ್‌ನ ಪ್ರಮುಖ ಉಪಕ್ರಮಗಳು:

    1. ಹೊಸ ಅಭಿವೃದ್ಧಿ ಬ್ಯಾಂಕ್ (New Development Bank).
    2. ಆಕಸ್ಮಿಕ ಮೀಸಲು ವ್ಯವಸ್ಥೆ (Contingent Reserve Arrangement)
    3. ಬ್ರಿಕ್ಸ್ ಪಾವತಿ ವ್ಯವಸ್ಥೆ
    4. ಕಸ್ಟಮ್ಸ್ ಒಪ್ಪಂದಗಳು 
    5. ದೂರಸಂವೇದಿ ಉಪಗ್ರಹಗಳ ಸಮೂಹ 

    ಹೊಸ ಉಪಕ್ರಮ: 

    • ಬ್ರಿಕ್ಸ್ ಒಕ್ಕೂಟವು ತನ್ನದೇ ಆದ “ಹೊಸ ಕರೆನ್ಸಿ” ವ್ಯವಸ್ಥೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇದು ವ್ಯಾಪಾರಕ್ಕಾಗಿ ಅಮೆರಿಕನ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ (‘ಡಿ-ಡಾಲರೈಸೇಶನ್’) ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ

    ಭಾರತದ 2026 ರ ಬ್ರಿಕ್ಸ್ ಅಧ್ಯಕ್ಷತೆ:

    • ಬ್ರೆಜಿಲ್‌ನಿಂದ ಅಧಿಕಾರ ವಹಿಸಿಕೊಂಡ ಭಾರತವು ಜನವರಿ 1, 2026 ರಂದು ಅಧಿಕೃತವಾಗಿ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ.
    • 2026 ರಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ಭಾರತ ವಹಿಸಲಿದೆ.
    • ಧ್ಯೇಯವಾಕ್ಯ: “ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ” (Building for Resilience, Innovation, Cooperation and Sustainability).
    • ಪ್ರಮುಖ ಆಧಾರಸ್ತಂಭಗಳು: ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ, ಮತ್ತು ಪರಿಸರ ಸುಸ್ಥಿರತೆ.

    ಕೋನ್ಯಾಕ್ ನಾಗಾ ಬುಡಕಟ್ಟು ಜನಾಂಗದ ಕ್ಯಾನ್ಸರ್-ನಿರೋಧಕ ಗಿಡಮೂಲಿಕೆಗಳು

    ಆರೋಗ್ಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ನಾಗಾಲ್ಯಾಂಡ್ ವಿಶ್ವವಿದ್ಯಾಲಯವು ಇತ್ತೀಚಿಗೆ ನಡೆಸಿದ ಅಧ್ಯಯನದಲ್ಲಿ, ‘ಕೋನ್ಯಾಕ್ ನಾಗಾ’ ಬುಡಕಟ್ಟು ಜನಾಂಗದವರು ಬಳಸುವ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಯು ಕ್ಯಾನ್ಸರ್ – ವಿರೋಧಿ ಸಾಮರ್ಥ್ಯವನ್ನು ಹೊಂದಿದೆ ಎಂದು ಗುರುತಿಸಿದೆ.

    ಕೋನ್ಯಾಕ್ ನಾಗಾ ಬುಡಕಟ್ಟು ಜನಾಂಗದ ಕುರಿತು:

    • ಈ ಬುಡಕಟ್ಟು ಜನಾಂಗವು ನಾಗಾಲ್ಯಾಂಡ್‌ನ ಅತಿ ದೊಡ್ಡ ನಾಗಾ ಬುಡಕಟ್ಟುಗಳಲ್ಲಿ ಒಂದಾಗಿದ್ದು, ಇವರು ಪ್ರಮುಖವಾಗಿ ನಾಗಾಲ್ಯಾಂಡ್‌ನ ‘ಮೋನ್‌’ ಜಿಲ್ಲೆಯಲ್ಲಿ ವಾಸಿಸುತ್ತಾರೆ.
    • ಕೋನ್ಯಾಕ್ ಜನಾಂಗದವರು ಐತಿಹಾಸಿಕವಾಗಿ ಶತ್ರುಗಳ ‘ತಲೇಬೇಟೆ’ (Headhunting) ಪದ್ಧತಿಗೆ ಹೆಸರುವಾಸಿಯಾಗಿದ್ದರು. ಈ ಆಚರಣೆಯು ಅಂದಿನ ಕಾಲದಲ್ಲಿ ಯೋಧ ಸ್ಥಾನಮಾನ ಮತ್ತು ಪ್ರತಿಷ್ಠೆಯ ಸಂಕೇತವಾಗಿತ್ತು.
    • ಇವರ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯ ನೇತೃತ್ವವನ್ನು ‘ಅಂಗ್’ ಎಂದು ಕರೆಯಲ್ಪಡುವ ವಂಶಪಾರಂಪರ್ಯವಾಗಿ ಬರುವ ಮುಖ್ಯಸ್ಥರು ವಹಿಸುತ್ತಾರೆ.
    • ಇವರ ಕೋನ್ಯಾಕ್ ಭಾಷೆಯು ‘ಟಿಬೆಟೊ-ಬರ್ಮನ್’ ಭಾಷಾ ಕುಟುಂಬಕ್ಕೆ ಸೇರಿದೆ.
    • ಇವರ ಪ್ರಮುಖ ಉದ್ಯೋಗ ‘ಜೂಮ್ ಕೃಷಿ’ (Jhum) ಅಂದರೆ ‘ಸ್ಥಳಾಂತರ ಬೇಸಾಯ’ ಆಗಿದೆ.
    • ಪ್ರಮುಖ ಹಬ್ಬ: ಇವರು ಹೊಸ ವರ್ಷ ಹಾಗೂ ಬಿತ್ತನೆ ಋತುವಿನ ಸಂಕೇತವಾಗಿ ಏಪ್ರಿಲ್ ತಿಂಗಳಲ್ಲಿ ‘ಅಯೋಲಿಯಾಂಗ್ ಹಬ್ಬ’ವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

    ಗ್ಲುಫೋಸಿನೇಟ್ (Glufosinate) – ಕೃಷಿಯಲ್ಲಿ ಬಳಸುವ ಕಳೆನಾಶಕ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೃಷಿ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಸಲಾಗುವ ಪ್ರಬಲ ಕಳೆನಾಶಕವಾದ ‘ಗ್ಲುಫೋಸಿನೇಟ್’ ಮತ್ತು ಅದರ ಲವಣಗಳ ಆಮದಿನ ಮೇಲೆ ಕೇಂದ್ರ ಸರ್ಕಾರವು ಆರು ತಿಂಗಳ ಕಾಲ ನಿರ್ಬಂಧವನ್ನು ವಿಧಿಸಿದೆ.

    ಗ್ಲುಫೋಸಿನೇಟ್-ಅಮೋನಿಯಂ ಬಗ್ಗೆ:

    • ಇದು ಬಹುತೇಕ ಎಲ್ಲಾ ರೀತಿಯ ಕಳೆಗಳನ್ನು ನಿಯಂತ್ರಿಸಲು ಬಳಸುವ ಕಳೆನಾಶಕವಾಗಿದೆ.
    • ಇದು ನೀರಿನಲ್ಲಿ ಸುಲಭವಾಗಿ ಕರಗುವ ಗುಣವನ್ನು ಹೊಂದಿದ್ದರೂ, ಅಂತರ್ಜಲಕ್ಕೆ ಸೋರಿಕೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
    • ಗಂಭೀರ ಅಪಾಯಗಳು: ಇದನ್ನು ಅತ್ಯಂತ ಅಪಾಯಕಾರಿ ರಾಸಾಯನಿಕವೆಂದು ಪರಿಗಣಿಸಲಾಗಿದೆ. ಇದು ನರಮಂಡಲದ ಮೇಲಿನ ವಿಷಕಾರಿ ಪ್ರಭಾವ, ಸಂತಾನೋತ್ಪತ್ತಿ ಹಾನಿ, ಹೃದಯರಕ್ತನಾಳದ ದುಷ್ಪರಿಣಾಮಗಳು ಮತ್ತು ಗರ್ಭದಲ್ಲಿನ ಭ್ರೂಣಕ್ಕೆ ಹಾನಿ ಉಂಟುಮಾಡುವ ಅಪಾಯಗಳನ್ನು ಹೊಂದಿದೆ.
    • ಇದು ಬೇಗನೆ ಆವಿಯಾಗುವ ಗುಣವನ್ನು ಹೊಂದಿರುವುದರಿಂದ, ಉಸಿರಾಟ ಹಾಗೂ ಚರ್ಮದ ಸಂಪರ್ಕದ ಮೂಲಕ ರೈತರಿರು ಹಾಗೂ ಹತ್ತಿರದ ನಿವಾಸಿಗಳು ಇದರ ಅಪಾಯಕ್ಕೆ ತುತ್ತಾಗುತ್ತಾರೆ.
  • ಜಾಗತಿಕ ನಾವೀನ್ಯತಾ ಮೈತ್ರಿಕೂಟ 2.0 (GIA 2.0)

    ಜಾಗತಿಕ ನಾವೀನ್ಯತಾ ಮೈತ್ರಿಕೂಟ 2.0 (GIA 2.0)

    ಇತ್ತೀಚೆಗೆ ಸುದ್ದಿಯಲ್ಲಿದೆ:

    • 2026 ರ ಏಪ್ರಿಲ್ 17 ರಂದು ನವದೆಹಲಿಯಲ್ಲಿ ನಡೆಯಲಿರುವ ‘ಬ್ರಿಡ್ಜ್ ಟು ಬೆಂಗಳೂರು 2026’ (Bridge to Bengaluru 2026) ಕಾರ್ಯಕ್ರಮದಲ್ಲಿ, ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷಿ ‘ಜಾಗತಿಕ ನಾವೀನ್ಯತಾ ಮೈತ್ರಿಕೂಟ 2.0’ (Global Innovation Alliance – GIA 2.0) ಉಪಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದೆ.

    ಜಾಗತಿಕ ನಾವೀನ್ಯತಾ ಮೈತ್ರಿಕೂಟ 2.0 ರ ಬಗ್ಗೆ:

    • ಉದ್ದೇಶ:- ಅಂತರರಾಷ್ಟ್ರೀಯ ತಂತ್ರಜ್ಞಾನ ಪಾಲುದಾರಿಕೆಗಳನ್ನು ಬಲಪಡಿಸುವುದು, ಜಾಗತಿಕ ಮಾರುಕಟ್ಟೆ ಪ್ರವೇಶದೊಂದಿಗೆ ನವೋದ್ಯಮಗಳಿಗೆ ಬೆಂಬಲ ನೀಡುವುದು ಮತ್ತು ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್ ಟೆಕ್‌ನಂತಹ ಕ್ಷೇತ್ರಗಳಲ್ಲಿ ವಲಯ-ನಿರ್ದಿಷ್ಟ ಸಹಯೋಗಗಳನ್ನು ಹೆಚ್ಚಿಸುವುದು ಈ ಉಪಕ್ರಮದ ಗುರಿಯಾಗಿದೆ.
    • ಕರ್ನಾಟಕವನ್ನು ಜಾಗತಿಕ ನಾವೀನ್ಯತಾ ಹೆಬ್ಬಾಗಿಲಾಗಿ ಬಿಂಬಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮವು 80 ಕ್ಕೂ ಹೆಚ್ಚು ದೇಶಗಳ ಪ್ರಾತಿನಿಧ್ಯವನ್ನು ಒಳಗೊಂಡಿರುತ್ತದೆ.
  • ಅಂಬೇಡ್ಕರ್ ಜಯಂತಿ | 9ನೇ ಹಿಂದೂ ಮಹಾಸಾಗರ ಸಮ್ಮೇಳನ | ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾದ ‘ ಕಾಲ್ಪನಿಕ ಹೆಸರು’ಗಳನ್ನು ತಿರಸ್ಕರಿಸಿದ ಭಾರತ | ಹಿಮ್ ಸರೋವರ (HIM SAROVAR) ಯೋಜನೆ | ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM)

    ಅಂಬೇಡ್ಕರ್ ಜಯಂತಿ

    ಇತಿಹಾಸ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತವು ಏಪ್ರಿಲ್ 14ರಂದು ‘ಅಂಬೇಡ್ಕರ್ ಜಯಂತಿ’ ಯನ್ನು ಆಚರಿಸುವ ಮೂಲಕ, ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನದಂದು ಗೌರವ ನಮನ ಸಲ್ಲಿಸಿತು.

    ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಅವರ ಬಗ್ಗೆ: 

    • ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಪ್ರಮುಖ ಸಾಮಾಜ ಸುಧಾರಕ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಲೇಖಕ, ಬಹುಭಾಷಾ ಪಂಡಿತ, ವಾಗ್ಮಿ ಹಾಗೂ ವಿವಿಧ ಧರ್ಮಗಳ ತೌಲನಿಕ ಅಧ್ಯಯನಕಾರ ಮತ್ತು ಚಿಂತಕರಾಗಿದ್ದರು.
    • ಜನನ:- ಇವರು 1891ರಲ್ಲಿ ಪ್ರಸ್ತುತ ಮಧ್ಯಪ್ರದೇಶದಲ್ಲಿರುವ ಮಹೌ (Mhow) ಎಂಬ ಗ್ರಾಮದಲ್ಲಿ ಜನಿಸಿದರು.
    • ಇವರನ್ನು ‘ಭಾರತದ ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗುತ್ತದೆ ಮತ್ತು ಇವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದರು.
    • ಇವರು ಸಂವಿಧಾನದ ‘ಕರಡು ಸಮಿತಿಯ ಅಧ್ಯಕ್ಷರಾಗಿದ್ದರು’.
    • ಇವರು ದಲಿತರು ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಪ್ರಸಿದ್ಧ ರಾಷ್ಟ್ರನಾಯಕರಾಗಿದ್ದರು.

    ಇವರ ಪ್ರಮುಖ ಕೊಡುಗೆಗಳು:

    • ‘ಮಹಾಡ್  ಸತ್ಯಾಗ್ರಹ’, 1927:- ಮಹಾರಾಷ್ಟ್ರದ ಮಹಾಡ್ ಪುರಸಭೆಯು 1926ರಲ್ಲಿ ಸಾರ್ವಜನಿಕ ಕೆರೆಯನ್ನು ಎಲ್ಲಾ ಸಮುದಾಯಗಳಿಗೂ ಮುಕ್ತಗೊಳಿಸಲು ಆದೇಶ ಹೊರಡಿಸಿತ್ತು. ಆದರೆ, ಅಸ್ಪೃಶ್ಯರು ಈ ಕೆರೆಯ ನೀರನ್ನು ಬಳಸುವುದನ್ನು ವಿರೋಧಿಸಿದ ಸವರ್ಣೀಯ ಹಿಂದೂಗಳ ವಿರುದ್ಧ, ಅಂಬೇಡ್ಕರ್ ಅವರು ಮಾರ್ಚ್ 1927ರಲ್ಲಿ ಐತಿಹಾಸಿಕ ‘ಮಹಾಡ್  ಸತ್ಯಾಗ್ರಹ’ದ ನೇತೃತ್ವ ವಹಿಸಿದ್ದರು.
    • ಇವರು ಲಂಡನ್‌ನಲ್ಲಿ ನಡೆದ ಮೂರು ದುಂಡುಮೇಜಿನ ಸಮ್ಮೇಳನಗಳಲ್ಲೂ ಭಾಗವಹಿಸಿದ್ದರು.
    • ‘ಪೂನಾ ಒಪ್ಪಂದ’, 1932:- ಡಾ. ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿಯವರೊಂದಿಗೆ ಐತಿಹಾಸಿಕ ‘ಪೂನಾ ಒಪ್ಪಂದ’ಕ್ಕೆ ಸಹಿ ಹಾಕಿದರು. ಈ ಮೂಲಕ ಅವರು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಲಾಗಿದ್ದ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ (ಕಮ್ಯುನಲ್ ಅವಾರ್ಡ್) ಬೇಡಿಕೆಯನ್ನು ಕೈಬಿಟ್ಟರು.
    • ಆದಾಗ್ಯೂ, ಈ ಒಪ್ಪಂದದ ಪರಿಣಾಮವಾಗಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳ ಸಂಖ್ಯೆಯನ್ನು ಪ್ರಾಂತೀಯ ಶಾಸನಸಭೆಗಳಲ್ಲಿ 71 ರಿಂದ 147ಕ್ಕೆ ಮತ್ತು ಕೇಂದ್ರೀಯ ಶಾಸನಸಭೆಯಲ್ಲಿ ಒಟ್ಟು ಸ್ಥಾನಗಳ ಶೇ. 18ರಷ್ಟಕ್ಕೆ ಹೆಚ್ಚಿಸಲಾಯಿತು.
    • ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಇವರು ಮಂಡಿಸಿದ ಆರ್ಥಿಕ ವಿಚಾರಗಳೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಥಾಪನೆಗೆ ಅಡಿಪಾಯವಾದವು.

    ಚುನಾವಣೆ ಮತ್ತು ಹುದ್ದೆಗಳು:

    • 1937ರಲ್ಲಿ, ಇವರು ಶಾಸಕರಾಗಿ (MLA) ಬಾಂಬೆ ಶಾಸನಸಭೆಗೆ ಆಯ್ಕೆಯಾದರು.
    • 1942ರಲ್ಲಿ, ವೈಸ್‌ರಾಯ್ ಅವರ ಕಾರ್ಯಕಾರಿ ಮಂಡಳಿಗೆ ‘ಕಾರ್ಮಿಕ ಸದಸ್ಯ’ರಾಗಿ ನೇಮಕಗೊಂಡರು.
    • 1947ರಲ್ಲಿ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆಹ್ವಾನವನ್ನು ಸ್ವೀಕರಿಸಿ, ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾದರು.

    ಬೌದ್ಧ ಧರ್ಮದತ್ತ ಒಲವು:

    • ‘ಹಿಂದೂ ಕೋಡ್ ಬಿಲ್’ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು 1951ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. ತದನಂತರ, 1956ರಲ್ಲಿ ಅವರು ಅಧಿಕೃತವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
    • ಇವರ ಸಾಧನೆಗಳನ್ನು ಗುರುತಿಸಿ, ಇವರಿಗೆ ಮರಣೋತ್ತರವಾಗಿ 1990ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಯಿತು.

    ಪ್ರಮುಖ ಪತ್ರಿಕೆಗಳು, ಪುಸ್ತಕಗಳು ಮತ್ತು ಸಂಘಟನೆಗಳು:

      • ಪತ್ರಿಕೆಗಳು:
        • ಮೂಕನಾಯಕ ( 1920)
        • ಬಹಿಷ್ಕೃತ ಭಾರತ (1927)
    • ಸಮತಾ (1929)
    • ಜನತಾ (1930)
    • ಪುಸ್ತಕಗಳು:
      • ಅನಿಹಿಲೇಶನ್ ಆಫ್ ಕಾಸ್ಟ್
      • ಬುದ್ಧ ಆರ್ ಕಾರ್ಲ್ ಮಾರ್ಕ್ಸ್ (Buddha or Karl Marx)
      • ದ ಅನ್‌ಟಚಬಲ್: ಹೂ ಆರ್ ದೇ ಅಂಡ್ ವೈ ದೇ ಹ್ಯಾವ್ ಬಿಕಮ್ ಅನ್‌ಟಚಬಲ್ಸ್ (The Untouchable: Who are They and Why They Have Become Untouchables)
      • ಬುದ್ಧ ಅಂಡ್ ಹಿಸ್ ಧಮ್ಮ (Buddha and His Dhamma)
      • ದ ರೈಸ್ ಅಂಡ್ ಫಾಲ್ ಆಫ್ ಹಿಂದೂ ವುಮೆನ್ (The Rise and Fall of Hindu Women)
    • ಸ್ಥಾಪಿಸಿದ ಸಂಘಟನೆಗಳು:
      • ಬಹಿಷ್ಕೃತ ಹಿತಕಾರಿಣಿ ಸಭಾ (1923)
      • ಸ್ವತಂತ್ರ ಕಾರ್ಮಿಕ ಪಕ್ಷ (Independent Labor Party – 1936)
      • ಪರಿಶಿಷ್ಟ ಜಾತಿಗಳ ಒಕ್ಕೂಟ (Scheduled Castes Federation – 1942)

    ನಿಧನ:

    • ಇವರು ಡಿಸೆಂಬರ್ 6, 1956 ರಂದು ನಿಧನರಾದರು.
    • ಮುಂಬೈನಲ್ಲಿರುವ ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕವನ್ನು ‘ಚೈತ್ಯ ಭೂಮಿ’ ಎಂದು ಕರೆಯಲಾಗುತ್ತದೆ.

    ಪ್ರಸ್ತುತ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆ: 

    • ಭಾರತದಲ್ಲಿ ಜಾತಿ ಆಧಾರಿತ ಅಸಮಾನತೆಯು ಇಂದಿಗೂ ಮುಂದುವರಿದಿದೆ. ಮೀಸಲಾತಿ ಹಾಗೂ ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಕಟ್ಟುವ ಮೂಲಕ ದಲಿತರು ರಾಜಕೀಯ ಅಸ್ಮಿತೆಯನ್ನು ಪಡೆದುಕೊಂಡಿದ್ದರೂ, ಅವರು ಸಾಮಾಜಿಕ (ಆರೋಗ್ಯ ಮತ್ತು ಶಿಕ್ಷಣ) ಹಾಗೂ ಆರ್ಥಿಕ ಆಯಾಮಗಳಲ್ಲಿ ಇನ್ನೂ ಹಿಂದುಳಿದಿದ್ದಾರೆ.

    9ನೇ ಹಿಂದೂ ಮಹಾಸಾಗರ ಸಮ್ಮೇಳನ

    ರಕ್ಷಣೆ/ಭದ್ರತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು 9ನೇ ಹಿಂದೂ ಮಹಾಸಾಗರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿಯ ಸಮ್ಮೇಳನವು “ಹಿಂದೂ ಮಹಾಸಾಗರದ ಆಡಳಿತಕ್ಕಾಗಿ ಸಾಮೂಹಿಕ ಉಸ್ತುವಾರಿ” (Collective Stewardship for Indian Ocean Governance) ಎಂಬ ವಿಷಯವನ್ನು ಆಧರಿಸಿತ್ತು.

    ಹಿಂದೂ ಮಹಾಸಾಗರ ಸಮ್ಮೇಳನದ ಬಗ್ಗೆ:

    • ಇದು ಇಂಡಿಯಾ ಫೌಂಡೇಶನ್ ವತಿಯಿಂದ 2016ರಲ್ಲಿ ಪ್ರಾರಂಭಿಸಲಾದ ಪ್ರಮುಖ ವಾರ್ಷಿಕ ಸಲಹಾ ವೇದಿಕೆಯಾಗಿದೆ.
    • ಉದ್ದೇಶ:- ಹಿಂದೂ ಮಹಾಸಾಗರ ವಲಯದಲ್ಲಿ (IOR) ಪ್ರಾದೇಶಿಕ ಸಹಕಾರ, ಕಡಲ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯ ಕುರಿತು ಚರ್ಚಿಸುವುದು.
    • ಪ್ರಾಮುಖ್ಯತೆ:- ಈ ವೇದಿಕೆಯು ಸಚಿವರು ಮತ್ತು ತಜ್ಞರನ್ನು ಒಳಗೊಂಡಂತೆ ಸುಮಾರು 40ಕ್ಕೂ ಹೆಚ್ಚು ದೇಶಗಳನ್ನು ಸಂಪರ್ಕಿಸುತ್ತದೆ. ಇದು ಪ್ರಮುಖವಾಗಿ ‘ಸಾಗರ್’ (SAGAR – Security and Growth for All in the Region) ಹಿಂದೂ ಮಹಾಸಾಗರ ವಲಯದಲ್ಲಿನ ಎಲ್ಲರಿಗೂ ಭದ್ರತೆ ಮತ್ತು ಪ್ರಗತಿ ದೃಷ್ಟಿಕೋನದ ಮೇಲೆ ಕೇಂದ್ರೀಕರಿಸಿದೆ.
    • ಇದರ 9ನೇ ಆವೃತ್ತಿಯು ಏಪ್ರಿಲ್ 2026ರಲ್ಲಿ ‘ಮಾರಿಷಸ್’ ನಲ್ಲಿ ನಡೆಯಿತು ಹಾಗೂ 8ನೇ ಆವೃತ್ತಿಯು ‘ಒಮಾನ್‌’ನಲ್ಲಿ ನಡೆದಿತ್ತು.

    ಸರ್ಕಾರದ ಪ್ರಮುಖ ಉಪಕ್ರಮಗಳು:

      • ಸಾಗರಮಾಲಾ ಕಾರ್ಯಕ್ರಮ:- ಬಂದರುಗಳ ಮೂಲಸೌಕರ್ಯ, ಕರಾವಳಿ ಅಭಿವೃದ್ಧಿ ಮತ್ತು ಸಂಪರ್ಕ ವಿಸ್ತರಣೆಯನ್ನು ಈ ಕಾರ್ಯಕ್ರಮ ಬೆಂಬಲಿಸುತ್ತದೆ.
      • ಭಾರತದ ಕಡಲ ದೃಷ್ಟಿಕೋನ 2030 (MIV 2030):- 2030ರ ವೇಳೆಗೆ ಭಾರತವನ್ನು ಪ್ರಪಂಚದ ‘ಉನ್ನತ 10 ಹಡಗು-ನಿರ್ಮಾಣ ರಾಷ್ಟ್ರಗಳ’ ಸಾಲಿಗೆ ಸೇರಿಸುವ ಗುರಿ ಹೊಂದಿದೆ. ಜೊತೆಗೆ, ಇದು ವಿಶ್ವದರ್ಜೆಯ, ಸಮರ್ಥ ಹಾಗೂ ಸುಸ್ಥಿರ ಕಡಲ-ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
      • ಸಾಗರಮಂಥನ್ ಸಂವಾದ:- ಭಾರತವನ್ನು ಕಡಲ ವಲಯದ ಚರ್ಚೆಗಳ ಜಾಗತಿಕ ಕೇಂದ್ರವಾಗಿ ರೂಪಿಸಲು ನಡೆಸಲಾಗುವ ವಾರ್ಷಿಕ ಕಡಲ-ಕಾರ್ಯತಂತ್ರದ ಸಂವಾದವಾಗಿದೆ.
      • ಕಡಲ ಅಭಿವೃದ್ಧಿ ನಿಧಿ:- ಬಂದರುಗಳು ಮತ್ತು ಹಡಗು ಸಾಗಣೆ ಮೂಲಸೌಕರ್ಯಗಳನ್ನು ಆಧುನೀಕರಿಸಲು ಹಾಗೂ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ₹25,000 ಕೋಟಿ ಮೌಲ್ಯದ ದೀರ್ಘಾವಧಿ ಹಣಕಾಸು ನಿಧಿಯನ್ನು ಸ್ಥಾಪಿಸಲಾಗಿದೆ.
      • ಮಹಾಸಾಗರ್ ಉಪಕ್ರಮ (MAHASAGAR):- “ಹಿಂದೂ ಮಹಾಸಾಗರ ವಲಯದಲ್ಲಿನ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಹಾಗೂ ಸಮಗ್ರ ಪ್ರಗತಿ” (Mutual and Holistic Advancement for Security and Growth for All in the Region) ಹಿಂದೂ ಮಹಾಸಾಗರ ವಲಯದಲ್ಲಿ (IOR) ಭಾರತದ ಕಾರ್ಯತಂತ್ರದ ಮರು-ರೂಪಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ.
      • ನೌಕಾಪಡೆಯ ಆಧುನೀಕರಣ ಮತ್ತು ಸ್ವದೇಶಿ ಅಭಿವೃದ್ಧಿ:- ಭಾರತವು ತನ್ನ ನೌಕಾಪಡೆಯ ಸಾಮರ್ಥ್ಯಗಳನ್ನು ನಿರಂತರವಾಗಿ ಆಧುನೀಕರಿಸುತ್ತಿದೆ.
        • ಸ್ವದೇಶಿ-ನಿರ್ಮಿತ ಯುದ್ಧನೌಕೆಗಳ ನಿಯೋಜನೆ (ಉದಾಹರಣೆಗೆ: INS ವಿಕ್ರಾಂತ್, INS ವಿಶಾಖಪಟ್ಟಣಂ).
    • ಕಡಲ ಪ್ರದೇಶದ ಜಾಗೃತಿ ಮತ್ತು ಕಾರ್ಯತಂತ್ರದ ಪ್ರಭಾವವನ್ನು ಹೆಚ್ಚಿಸಲಾಗುತ್ತಿದೆ.

    ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾದ ‘ ಕಾಲ್ಪನಿಕ ಹೆಸರು’ಗಳನ್ನು ತಿರಸ್ಕರಿಸಿದ ಭಾರತ

    ಅಂತರರಾಷ್ಟ್ರೀಯ ಸಂಬಂಧಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ತನ್ನ ಭೂಪ್ರದೇಶದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ಸ್ಥಳಗಳಿಗೆ, ಚೀನಾ ದೇಶವು “ಕಾಲ್ಪನಿಕ ಹೆಸರುಗಳನ್ನು” ನೀಡುವ ಪ್ರಯತ್ನಗಳನ್ನು ಭಾರತವು ಕಟ್ಟುನಿಟ್ಟಾಗಿ ಹಾಗೂ ಬಲವಾಗಿ ತಿರಸ್ಕರಿಸಿದೆ. ಚೀನಾದ ಇಂತಹ ಕ್ರಮಗಳನ್ನು “ಕಿಡಿಗೇಡಿತನ” ಎಂದು ಕರೆದಿರುವ ಭಾರತ, ಇದು ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಕರ ಎಂದು ಎಚ್ಚರಿಸಿದೆ.

    ಚೀನಾದ ವಿವಾದಾತ್ಮಕ ಕ್ರಮಗಳು:

    • ಚೀನಾ ದೇಶವು ಭಾರತದ ಅರುಣಾಚಲ ಪ್ರದೇಶವನ್ನು “ದಕ್ಷಿಣ ಟಿಬೆಟ್” (ಜಂಗ್ನಾನ್) ಎಂದು ಪ್ರತಿಪಾದಿಸುತ್ತಿದೆ.
    • 2017 ರಿಂದಲೂ ಚೀನಾವು ಹೀಗೆ ಮರುನಾಮಕರಣಗೊಂಡ ಸ್ಥಳಗಳ ಹಲವು ಪಟ್ಟಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ, ಆದರೆ ಭಾರತವು ಇವುಗಳನ್ನು ಅಮಾನ್ಯವೆಂದು ಸತತವಾಗಿ ತಿರಸ್ಕರಿಸುತ್ತಾ ಬಂದಿದೆ.
    • ದೀರ್ಘ ಕಾಲದ ಗಡಿ ವಿವಾದಿತ ಪ್ರದೇಶವಾಗಿರುವ ‘ಅಕ್ಸಾಯ್ ಚಿನ್’ ನ ಕೆಲವು ಭಾಗಗಳು ಸೇರಿದಂತೆ ಲಡಾಖ್‌ನ ಪ್ರದೇಶಗಳಲ್ಲಿ ಚೀನಾವು ‘ಹೆ’ಆನ್’ ಮತ್ತು ‘ಹೆಕಾಂಗ್’ ನಂತಹ ಹೊಸ ಆಡಳಿತಾತ್ಮಕ ಜಿಲ್ಲೆಗಳನ್ನು (ಕೌಂಟಿಗಳು) ರಚಿಸುತ್ತಿದೆ.
    • ವರದಿಗಳ ಪ್ರಕಾರ, ಚೀನಾವು ‘ಸೆನ್ಲಿಂಗ್’ ಎಂಬ ಹೊಸ ಜಿಲ್ಲಾ ಘಟಕವನ್ನೂ (ಕೌಂಟಿ) ಸಹ ಸೃಷ್ಟಿಸಿದೆ.

    ಪ್ರಮುಖ ಪ್ರದೇಶಗಳು:

    • ಸೆನ್ಲಿಂಗ್ (Cenling):- ಇದು ‘ಕಾರಾಕೋರಂ ಪರ್ವತ ಶ್ರೇಣಿ’ಯ ಸಮೀಪದಲ್ಲಿದೆ. ಈ ಪ್ರದೇಶವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಅಫ್ಘಾನಿಸ್ತಾನದ ‘ವಾಖಾನ್ ಕಾರಿಡಾರ್’ನ ಹತ್ತಿರದಲ್ಲಿದೆ.
    • ಹೆ’ಆನ್ (He’an): ಇದು ‘ಅಕ್ಸಾಯ್ ಚಿನ್ ಪ್ರಸ್ಥಭೂಮಿ’ಯ ಕೆಲವು ಭಾಗಗಳನ್ನು ಒಳಗೊಂಡಿದೆ. ಭಾರತ ಮತ್ತು ಚೀನಾ ನಡುವಿನ ಸುದೀರ್ಘ ಗಡಿ ವಿವಾದದ ಕಾರಣದಿಂದಾಗಿ ಈ ಪ್ರದೇಶವು ಸದಾ ಸುದ್ದಿಯಲ್ಲಿರುತ್ತದೆ.

    ಭಾರತದ ಪ್ರತಿಕ್ರಿಯೆ:

    • ಅರುಣಾಚಲ ಪ್ರದೇಶ ಮತ್ತು ಇತರ ವಿವಾದಿತ ಪ್ರದೇಶಗಳು ಭಾರತದ “ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ” ಅಂಗಗಳಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪುನರುಚ್ಚರಿಸಿದೆ.

    ವಾಸ್ತವಿಕ ಗಡಿ ನಿಯಂತ್ರಣ ರೇಖೆ (Line of Actual Control – LAC):

    • LAC ಯು ಭಾರತ-ನಿಯಂತ್ರಿತ ಪ್ರದೇಶ ಮತ್ತು ಚೀನಾ-ನಿಯಂತ್ರಿತ ಪ್ರದೇಶಗಳನ್ನು ಪ್ರತ್ಯೇಕಿಸುವ ವಾಸ್ತವಿಕ ಗಡಿರೇಖೆಯಾಗಿದೆ.
    • ಭಾರತದ ಪ್ರಕಾರ LAC ಯ ಒಟ್ಟು ಉದ್ದವು 3,488 ಕಿ.ಮೀ ಇದೆ. ಆದರೆ, ಚೀನಾವು ಇದನ್ನು ಕೇವಲ 2,000 ಕಿ.ಮೀ ಉದ್ದವಿದೆ ಎಂದು ಪರಿಗಣಿಸುತ್ತದೆ.
    • ಈ ಗಡಿ ರೇಖೆಯನ್ನು ಪ್ರಮುಖವಾಗಿ ಮೂರು ವಲಯಗಳಾಗಿ ವಿಂಗಡಿಸಲಾಗಿದೆ:
      1. ಪೂರ್ವ ವಲಯ: ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ.
      2. ಮಧ್ಯ ವಲಯ: ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ.
    • ಪಶ್ಚಿಮ ವಲಯ: ಲಡಾಖ್.

    ಹಿಮ್ ಸರೋವರ (HIM SAROVAR) ಯೋಜನೆ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚಿಗೆ ಲಡಾಖ್ ಪ್ರದೇಶದಲ್ಲಿ ‘ಹಿಮ್ ಸರೋವರ ಯೋಜನೆ’ಯನ್ನು ಪ್ರಾರಂಭಿಸಲಾಗಿದೆ.

    ಹಿಮ್ ಸರೋವರ ಯೋಜನೆಯ ಬಗ್ಗೆ:

    • ಇದು ಏಪ್ರಿಲ್ 10, 2026 ರಂದು ಪ್ರಾರಂಭಿಸಲಾದ ಒಂದು ವೈಜ್ಞಾನಿಕ ಜಲ ಸಂರಕ್ಷಣಾ ಉಪಕ್ರಮವಾಗಿದೆ.
    • ಉದ್ದೇಶ:- ವಾರ್ಷಿಕ ಹಿಮ ಕರಗುವಿಕೆಯಿಂದ ಬರುವ ನೀರು ಮತ್ತು ಮಳೆನೀರನ್ನು ಸೆರೆಹಿಡಿದು ಸಂಗ್ರಹಿಸಲು 50 ಸಣ್ಣ ಜಲಮೂಲಗಳನ್ನು ನಿರ್ಮಿಸುವ ಮೂಲಕ, ಈ ಪ್ರದೇಶದಲ್ಲಿನ ತೀವ್ರವಾದ ನೀರಿನ ಅಭಾವವನ್ನು ಪರಿಹರಿಸುವುದು.

    ಪ್ರಮುಖ ಉದ್ದೇಶಗಳು ಮತ್ತು ಪರಿಣಾಮಗಳು: 

    • ಜಲ ಭದ್ರತೆ:- ಎತ್ತರದ ಪ್ರದೇಶದ ಈ ಶೀತ ಮರುಭೂಮಿಯಲ್ಲಿ, ಕರಗಿದ ಹಿಮ ನೀರು ಹೆಚ್ಚಾಗಿ ಪೋಲಾಗುತ್ತಿದೆ. ಇದನ್ನು ತಡೆದು ನೀರಾವರಿ ಮತ್ತು ಗ್ರಾಮೀಣ ಅಗತ್ಯಗಳಿಗಾಗಿ ವರ್ಷವಿಡೀ ನೀರು ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. 
    • ಹವಾಮಾನ ಸ್ಥಿತಿಸ್ಥಾಪಕತ್ವ:- ಇದು ಹಿಮನದಿಗಳ ಕರಗುವಿಕೆ ಮತ್ತು ಅಂತರ್ಜಲ ಮಟ್ಟ ಕುಸಿಯುವಂತಹ ಹವಾಮಾನ ಬದಲಾವಣೆಯ ಸ್ಪಷ್ಟ ಪರಿಣಾಮಗಳ ವಿರುದ್ಧ ‘ರಕ್ಷಾಕವಚವಾಗಿ’ ಕಾರ್ಯನಿರ್ವಹಿಸುತ್ತದೆ.
    • ಮೂಲಸೌಕರ್ಯ ಯೋಜನೆ:- ಮುಂದಿನ ಒಂದು ವರ್ಷದೊಳಗೆ ಲೇಹ್‌ನಲ್ಲಿ 30 ಮತ್ತು ಕಾರ್ಗಿಲ್‌ನಲ್ಲಿ 20 ಒಟ್ಟು 50 ಜಲಾಶಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
    • ಪುನಃಸ್ಥಾಪನಾ ಗುರಿಗಳು:- ಇದು 2030ರ ವೇಳೆಗೆ 2.6 ಕೋಟಿ ಹೆಕ್ಟೇರ್ ಕ್ಷೀಣಿಸಿದ ಭೂಮಿಯನ್ನು ಪುನಃಸ್ಥಾಪಿಸುವ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಹೊಂದಾಣಿಕೆಯಾಗುತ್ತದೆ.

    ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM)

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇ-ನ್ಯಾಮ್ (e-NAM) ಪೋರ್ಟಲ್ ಮಾರುಕಟ್ಟೆಗಳ ಏಕೀಕರಣದಲ್ಲಿ ಗಣನೀಯ ಪ್ರಗತಿ ಸಾಧಿಸುತ್ತಿದ್ದು, ಇದಕ್ಕೆ ಸಂಯೋಜನೆಗೊಂಡಿರುವ ಕೃಷಿ ಮಾರುಕಟ್ಟೆಗಳ (ಮಂಡಿಗಳ) ಸಂಖ್ಯೆಯು 2024ರಲ್ಲಿದ್ದ 1,389 ರಿಂದ ಮಾರ್ಚ್ 2026ರ ಹೊತ್ತಿಗೆ 1,656 ಕ್ಕೆ ಏರಿಕೆಯಾಗಿದೆ.
    • ಇದು ಪ್ರಸ್ತುತ 23 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿದೆ.

    ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM)ಯ ಬಗ್ಗೆ:

    • ಇದು ಏಪ್ರಿಲ್ 14, 2016 ರಂದು ಪ್ರಾರಂಭಿಸಲಾದ ಅಖಿಲ-ಭಾರತ ಎಲೆಕ್ಟ್ರಾನಿಕ್ ವ್ಯಾಪಾರ ಪೋರ್ಟಲ್ ಆಗಿದೆ.
    • ಇದು ‘ಕೃಷಿ ತಂತ್ರಜ್ಞಾನ ಮೂಲಸೌಕರ್ಯ ನಿಧಿ  (ATIF)ಯ ಮೂಲಕ ಕೇಂದ್ರ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ಪಡೆಯುವ “ಕೇಂದ್ರ ವಲಯದ ಯೋಜನೆ”ಯಾಗಿ ಕಾರ್ಯನಿರ್ವಹಿಸುತ್ತದೆ.
    • ಪ್ರಸ್ತುತ ಇರುವ ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ’ (APMC) ಮಂಡಿಗಳನ್ನು ಒಂದೇ ಜಾಲದ ಅಡಿಯಲ್ಲಿ ತರುವ ಮೂಲಕ, ಕೃಷಿ ಸರಕುಗಳಿಗೆ ಏಕೀಕೃತ ರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ.

    ಪ್ರಮುಖ ಉದ್ದೇಶಗಳು:

    • ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ:- “ಒಂದು ರಾಷ್ಟ್ರ, ಒಂದು ಮಾರುಕಟ್ಟೆ” ಎಂಬ ದೃಷ್ಟಿಕೋನದೊಂದಿಗೆ, ದೇಶಾದ್ಯಂತ ಕೃಷಿ ವ್ಯಾಪಾರವನ್ನು ಸುಗಮಗೊಳಿಸಲು ರಾಜ್ಯ-ಮಟ್ಟದ ಮಾರುಕಟ್ಟೆಗಳನ್ನು ಸಂಯೋಜಿಸುವುದು.
    • ಪಾರದರ್ಶಕ ಬೆಲೆ ನಿರ್ಧಾರ:- ಪಾರದರ್ಶಕವಾದ ಆನ್‌ಲೈನ್ ಹರಾಜು ಪ್ರಕ್ರಿಯೆಯ ಮೂಲಕ ನೈಜ ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ನೈಜ-ಸಮಯದ ಬೆಲೆ ನಿರ್ಧಾರಕ್ಕೆ ಅನುವು ಮಾಡಿಕೊಡುವುದು.
    • ಮಧ್ಯವರ್ತಿಗಳ ಹಾವಳಿ ಕಡಿತ:- ರೈತರಿಗೆ ಅಂತಿಮ ಗ್ರಾಹಕರು ನೀಡುವ ಬೆಲೆಯ ಹೆಚ್ಚಿನ ಪಾಲು ದಕ್ಕುವಂತೆ ಮಾಡಲು ಮಧ್ಯವರ್ತಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡುವುದು.
    • ಗುಣಮಟ್ಟದ ಖಾತರಿ:- ಕೃಷಿ ಉತ್ಪನ್ನದ ಗುಣಮಟ್ಟಕ್ಕೆ ತಕ್ಕಂತೆ ಸೂಕ್ತ ಬೆಲೆ ಸಿಗುವಂತೆ ಮಾಡಲು, ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು.