ಅಪಾಚೆ ಹೆಲಿಕಾಪ್ಟರ್ಗಳು (Apache Helicopters) : ಅಮೆರಿಕ
ರಕ್ಷಣೆ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್ಗಳ ನಿರ್ವಹಣಾ ಸೇವೆಗಳು ಮತ್ತು ಸಂಬಂಧಿತ ಉಪಕರಣಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ. ಇದರ ಅಂದಾಜು ವೆಚ್ಚ $ 198.2 ಮಿಲಿಯನ್ ಡಾಲರ್ ಆಗಿದೆ.
ಅಪಾಚೆ ಹೆಲಿಕಾಪ್ಟರ್ಗಳ ಬಗ್ಗೆ:
- ಅಪಾಚೆ ಹೆಲಿಕಾಪ್ಟರ್ಗಳು ವಿಶ್ವದ ಅತ್ಯಾಧುನಿಕ ಮತ್ತು ಬಹು-ಕಾರ್ಯಾಚರಣಾ ಸಾಮರ್ಥ್ಯದ ದಾಳಿಯ ಹೆಲಿಕಾಪ್ಟರ್ಗಳಾಗಿವೆ.
- “ಇದನ್ನು ‘ಬೋಯಿಂಗ್’ ಕಂಪನಿಯು ಅಭಿವೃದ್ಧಿಪಡಿಸಿದೆ. ಇದು ಅತ್ಯುತ್ತಮ ಶಸ್ತ್ರಾಸ್ತ್ರ ಸಾಮರ್ಥ್ಯ (Firepower), ಕಾರ್ಯಾಚರಣೆಯ ಚುರುಕುತನ ಮತ್ತು ಆಧುನಿಕ ವೈಮಾನಿಕ ವಿದ್ಯುನ್ಮಾನ ವ್ಯವಸ್ಥೆಗಳ (Avionics) ಅದ್ಭುತ ಸಂಯೋಜನೆಯಾಗಿದೆ.
- ಇದು ಹೆಲ್ಫೈರ್ ಕ್ಷಿಪಣಿಗಳು (Hellfire missiles), 70mm ರಾಕೆಟ್ಗಳು ಮತ್ತು 30mm ಚೈನ್ ಗನ್ ಗಳನ್ನು ಹೊಂದಿದ್ದು, ಭೂಮಿಯ ಮೇಲಿನ ಗುರಿಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಕಡಿಮೆ ಎತ್ತರದಲ್ಲಿ ಹಾರುವ ವಿಮಾನಗಳ ಮೇಲೆ ದಾಳಿ ಮಾಡಲು ಸಮರ್ಥವಾಗಿದೆ.
- ಇವು ಸುಧಾರಿತ ಸೆನ್ಸಾರ್ ಗಳು, ಗುರಿ ನಿರ್ದೇಶಕ ರಾಡಾರ್ ಮತ್ತು ರಾತ್ರಿ ದೃಷ್ಟಿ ವ್ಯವಸ್ಥೆಗಳನ್ನು ಹೊಂದಿದ್ದು; ಎತ್ತರದ ಪ್ರದೇಶಗಳು ಹಾಗೂ ಕಡಿಮೆ ಗೋಚರತೆಯ ಯುದ್ಧ ವಲಯಗಳು ಸೇರಿದಂತೆ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.
- ಭಾರತದ ಜೊತೆಗೆ, ಈಜಿಪ್ಟ್, ಇಸ್ರೇಲ್, ಜಪಾನ್, ಸೌದಿ ಅರೇಬಿಯಾ, ಯುಕೆ ಸೇರಿದಂತೆ ಇತರ ಹಲವು ದೇಶಗಳು ಇದನ್ನು ಬಳಸುತ್ತಿವೆ.
ಚಂದ್ರಯಾನ-3: ಇತ್ತೀಚಿನ ಸಂಶೋಧನೆ
ವಿಜ್ಞಾನ ಮತ್ತು ತಂತ್ರಜ್ಞಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭೌತಿಕ ಸಂಶೋಧನಾ ಪ್ರಯೋಗಾಲಯದ (PRL) ವಿಜ್ಞಾನಿಗಳು ಚಂದ್ರನ ಮೇಲ್ಮೈಯ ಹೊಸ ವಿವರಗಳನ್ನು ಬಹಿರಂಗಪಡಿಸಲು ಚಂದ್ರಯಾನ-3 ರಿಂದ ಪಡೆದ ದತ್ತಾಂಶವನ್ನು ಬಳಸಿದ್ದಾರೆ.
ಚಂದ್ರಯಾನ-3 ರ ಬಗ್ಗೆ:
- ಇದು ಚಂದ್ರಯಾನ-2 ರ ಮುಂದುವರೆದ ಮಿಷನ್ ಆಗಿದ್ದು, 2023 ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಸುರಕ್ಷಿತ ಮೃದು ಇಳಿಯುವಿಕೆಗೆ ಸಾಕ್ಷಿಯಾಗಿದೆ. ಇದರಿಂದ ಈ ಸಾಧನೆ ಮಾಡಿದ ಮೊದಲ ದೇಶ ಭಾರತವಾಗಿದೆ.
- ಲ್ಯಾಂಡರ್ನಲ್ಲಿ ಅಳವಡಿಸಲಾದ ವೈಜ್ಞಾನಿಕ ಸಾಧನಗಳು:
- ಚೇಸ್ಟ್ (ChaSTE – Chandra’s Surface Thermophysical Experiment): ಉಷ್ಣ ವಾಹಕತೆ ಮತ್ತು ತಾಪಮಾನವನ್ನು ಅಳೆಯಲು ಬಳಸಲಾಗುತ್ತದೆ.
- ಇಲ್ಸಾ (ILSA – Instrument for Lunar Seismic Activity): ಲ್ಯಾಂಡಿಂಗ್ ಪ್ರದೇಶದ ಸುತ್ತಮುತ್ತಲಿನ ಭೂಕಂಪನ ಚಟುವಟಿಕೆಯನ್ನು ಅಳೆಯಲು ಬಳಸಲಾಗುತ್ತದೆ.
- ರೋವರ್ ನಲ್ಲಿ ಅಳವಡಿಸಲಾದ ವೈಜ್ಞಾನಿಕ ಸಾಧನಗಳು:
- APXS (Alpha Particle X-ray Spectrometer) ಮತ್ತು LIBS (Laser Induced Breakdown Spectroscope): ಲ್ಯಾಂಡಿಂಗ್ ಪ್ರದೇಶದ ಸಮೀಪವಿರುವ ಮಣ್ಣಿನ ಮೂಲ ಧಾತುಗಳ ಸಂಯೋಜನೆಯನ್ನು ಅಧ್ಯಯನ ಮಾಡಲು ಇವುಗಳನ್ನು ಬಳಸಲಾಗಿದೆ.
ಚಂದ್ರಯಾನ-1 ರ ಬಗ್ಗೆ:
- ಇದನ್ನು 2008 ರಲ್ಲಿ ಉಡಾವಣೆ ಮಾಡಲಾಯಿತು.
- ಇದು ಭಾರತದ ಮೊದಲ ಚಂದ್ರಯಾನ ಮಿಷನ್ ಇದಾಗಿದೆ.
- ಈ ಮೂಲಕ ಭಾರತವು ಚಂದ್ರನನ್ನು ತಲುಪಿದ ವಿಶ್ವದ ಐದನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
- ಈ ಮಿಷನ್ ನ ಅತ್ಯಂತ ಪ್ರಮುಖ ಆವಿಷ್ಕಾರವೆಂದರೆ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಇರುವಿಕೆಯನ್ನು ಪತ್ತೆಹಚ್ಚಿದ್ದು; ಈ ಶೋಧನೆಯನ್ನು ನಾಸಾ (NASA) ಕೂಡ ದೃಢಪಡಿಸಿದೆ.
ಚಂದ್ರಯಾನ-2 ರ ಬಗ್ಗೆ:
- ಆರ್ಬಿಟರ್, ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಅನ್ನು ಒಳಗೊಂಡಿದ್ದು, ಇದನ್ನು 2019 ರಲ್ಲಿ ಉಡಾವಣೆ ಮಾಡಲಾಯಿತು.
- ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮೃದು ಇಳಿಯುವಿಕೆ (ಸಾಫ್ಟ್ ಲ್ಯಾಂಡಿಂಗ್) ಸಾಧಿಸುವುದು ಈ ಕಾರ್ಯಾಚರಣೆಯ ಪ್ರಮುಖ ಗುರಿಯಾಗಿತ್ತು. ಆದರೆ ಇಳಿಯುವ ಸ್ವಲ್ಪ ಮೊದಲು ಲ್ಯಾಂಡರ್ ಜೊತೆಗಿನ ಸಂಪರ್ಕ ಕಡಿತಗೊಂಡಿದ್ದರಿಂದ ಇದು ಚಂದ್ರನ ಮೇಲ್ಮೈಯನ್ನು ಅಪ್ಪಳಿಸಿತು.
- ಈ ಹಿನ್ನಡೆಯ ನಡುವೆಯೂ, ಆರ್ಬಿಟರ್ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿತು ಮತ್ತು ಚಂದ್ರನ ಮೇಲ್ಮೈ ಹಾಗೂ ವಾತಾವರಣದ ಬಗ್ಗೆ ನಿರ್ಣಾಯಕ ದತ್ತಾಂಶವನ್ನು ಒದಗಿಸಿದೆ.
ಭಾರತ-ಇಟಲಿ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’
ಅಂತರರಾಷ್ಟ್ರೀಯ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತ ಮತ್ತು ಇಟಲಿ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತೀಕರಿಸಿವೆ.
ಭಾರತ ಮತ್ತು ಇಟಲಿ ದ್ವಿಪಕ್ಷೀಯ ಸಂಬಂಧಗಳು:
- ಪಾಲುದಾರಿಕೆ: ಇಂಡೋ-ಮೆಡಿಟರೇನಿಯನ್ ವ್ಯಾಪಾರ ಸಂಪರ್ಕದ ಮೇಲೆ ಗಮನಹರಿಸುವ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತೀಕರಿಸಲಾಗಿದೆ.
- ಉಪಕ್ರಮಗಳು: ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಪಥ (IMEC – India-Middle East-Europe Economic Corridor)ದ ಕುರಿತು ಸಹಕಾರವನ್ನು ಹೆಚ್ಚಿಸಲಾಗಿದೆ.
- ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ (AI) ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ INNOVIT ಹಬ್ ಮೂಲಕ ಸಹಯೋಗವನ್ನು ವೃದ್ಧಿಸಲಾಗುತ್ತಿದೆ.
- ಸಾಂಸ್ಕೃತಿಕ ಗಮನ: ಭಾರತದ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣದ ನಿರ್ಮಾಣದಲ್ಲಿ ಇಟಲಿಯು ಸಹಭಾಗಿತ್ವವನ್ನು ಹೊಂದಿದೆ.
ಮಹಾರಾಷ್ಟ್ರ: 23,000 ಕ್ಕೂ ಹೆಚ್ಚು ಜೌಗು ಪ್ರದೇಶಗಳ ದಾಖಲಾತಿ
ಪರಿಸರ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಸುಸ್ಥಿರ ಕರಾವಳಿ ನಿರ್ವಹಣೆಯ ರಾಷ್ಟ್ರೀಯ ಕೇಂದ್ರವು (NCSCM) ಮಹಾರಾಷ್ಟ್ರದ 23,415 ಜೌಗು ಪ್ರದೇಶಗಳ ದಾಖಲಾತಿ ಮತ್ತು ಗ್ರೌಂಡ್-ಟ್ರುಥಿಂಗ್ (Ground-truthing) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಜೌಗು ಪ್ರದೇಶಗಳ ಬಗ್ಗೆ (Wetlands):
- ವ್ಯಾಖ್ಯಾನ: ಜೌಗು ಪ್ರದೇಶವು ಭೂಮಂಡಲ ಮತ್ತು ಜಲಚರ ಪರಿಸರ ವ್ಯವಸ್ಥೆಗಳ ನಡುವಿನ ಸ್ಥಿತ್ಯಂತರ (ಪರಿವರ್ತನಾ) ವಲಯವಾಗಿದೆ. ಇಲ್ಲಿ ಅಂತರ್ಜಲವು ಸಾಮಾನ್ಯವಾಗಿ ಭೂಮಿಯ ಮೇಲ್ಮೈಯಲ್ಲಿ ಅಥವಾ ಮೇಲ್ಮೈಗೆ ಅತ್ಯಂತ ಸಮೀಪದಲ್ಲಿರುತ್ತದೆ; ಅಥವಾ ಈ ಭೂಭಾಗವು ಆಳವಿಲ್ಲದ ನೀರಿನಿಂದ ಆವೃತವಾಗಿರುತ್ತದೆ.
- ಇವು ಭೂಮಂಡಲ ಮತ್ತು ಜಲಚರ ಪರಿಸರ ವ್ಯವಸ್ಥೆಗಳನ್ನು ಬೆಸೆಯುವ ಜೈವಿಕ ಸ್ಥಿತ್ಯಂತರ ವಲಯಗಳಾಗಿವೆ.
- ಭಾರತವು ತನ್ನ ಒಟ್ಟು ಭೌಗೋಳಿಕ ವಿಸ್ತೀರ್ಣದ ಸುಮಾರು 4.6% ರಷ್ಟು ಜೌಗು ಪ್ರದೇಶಗಳನ್ನು ಹೊಂದಿದೆ. ಭಾರತದ 99 ಜೌಗು ಪ್ರದೇಶಗಳನ್ನು ಅಂತರರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ‘ರಾಮ್ಸರ್ ತಾಣಗಳ’ ಪಟ್ಟಿಯಲ್ಲಿ ಗುರುತಿಸಲಾಗಿದೆ.
- ರಾಮ್ಸರ್ ತಾಣಗಳ ಸಂಖ್ಯೆಯ ಆಧಾರದ ಮೇಲೆ ಹೇಳುವುದಾದರೆ, ಭಾರತವು ಏಷ್ಯಾದಲ್ಲಿಯೇ ಅತಿದೊಡ್ಡ ರಾಮ್ಸರ್ ತಾಣಗಳ ಜಾಲವನ್ನು ಹೊಂದಿದೆ ಮತ್ತು ಜಾಗತಿಕ ಮಟ್ಟದಲ್ಲಿ 3ನೇ ಅತಿದೊಡ್ಡ ಜಾಲವನ್ನು ಹೊಂದಿದೆ.
- 2026 ರ ದತ್ತಾಂಶದ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ರಾಮ್ಸರ್ ತಾಣಗಳನ್ನು ತಮಿಳುನಾಡು ರಾಜ್ಯ (20 ತಾಣಗಳು) ಹೊಂದಿದೆ.
ರಾಮ್ಸರ್ ತಾಣಗಳ ಪಟ್ಟಿಗೆ ಭಾರತದ ಇತ್ತೀಚಿನ ಸೇರ್ಪಡೆಗಳು:
- ಸಿಲಿಸೇರ್ ಸರೋವರ (ರಾಜಸ್ಥಾನ): 95 ನೇ ರಾಮ್ಸರ್ ತಾಣ
- ಕೊಪ್ರಾ ಜಲಾಶಯ (ಛತ್ತೀಸ್ಗಢ): 96 ನೇ ರಾಮ್ಸರ್ ತಾಣ
- ಪಾಟ್ನಾ ಪಕ್ಷಿಧಾಮ (ಉತ್ತರ ಪ್ರದೇಶ): 97 ನೇ ರಾಮ್ಸರ್ ತಾಣ
- ಚಾರಿ-ಧಂಡ್ ಸಂರಕ್ಷಣಾ ಮೀಸಲು (ಗುಜರಾತ್): 98 ನೇ ರಾಮ್ಸರ್ ತಾಣ
- ಶೇಖಾ ಜೀಲ್ ಪಕ್ಷಿಧಾಮ (ಉತ್ತರ ಪ್ರದೇಶ): 99 ನೇ ರಾಮ್ಸರ್ ತಾಣ
ರಾಮ್ಸರ್ ಸಮಾವೇಶದ ಬಗ್ಗೆ:
- ರಾಮ್ಸರ್ ತಾಣ ಎಂದರೆ ರಾಮ್ಸರ್ ಸಮಾವೇಶದ ಅಡಿಯಲ್ಲಿ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶ ಎಂದು ಹೆಸರಿಸಲಾದ ತಾಣವಾಗಿದೆ.
- ರಾಮ್ಸರ್ ಒಪ್ಪಂದ: ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳನ್ನು ಸಂರಕ್ಷಿಸಲು ಮಾಡಿಕೊಂಡ ಅಂತರ-ಸರ್ಕಾರಿ ಒಪ್ಪಂದಗಳಲ್ಲಿ ಇದು ಒಂದಾಗಿದೆ.
- ಈ ಒಪ್ಪಂದಕ್ಕೆ ಫೆಬ್ರವರಿ 2, 1971 ರಂದು ಇರಾನಿನ ರಾಮ್ಸರ್ನಲ್ಲಿ ಸಹಿ ಹಾಕಲಾಯಿತು ಮತ್ತು ಇದು 1975 ರಲ್ಲಿ ಜಾರಿಗೆ ಬಂದಿತು.
- ಭಾರತವು 1982 ರಲ್ಲಿ ರಾಮ್ಸರ್ ಒಪ್ಪಂದಕ್ಕೆ ಸಹಿ ಹಾಕಿತು.
ವೀರ ಪಾಸಿ (Veera Pasi)
ಇತಿಹಾಸ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ 1857 ರ ದಂಗೆಯ “ಇತಿಹಾಸ ಮರೆತ ನಾಯಕ” ಎಂದು ಸ್ಮರಿಸಲಾಗುವ ವೀರ ಪಾಸಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ವೀರ ಪಾಸಿ ಅವರ ಬಗ್ಗೆ :
- ವೀರ ಪಾಸಿ (ಮೂಲ ಹೆಸರು: ಶಿವದೀನ್ ಪಾಸಿ) ಅವರು ಉತ್ತರ ಪ್ರದೇಶದ ರಾಯ್ ಬರೇಲಿಯ 19 ನೇ ಶತಮಾನದ ಅಪ್ರತಿಮ ಯೋಧ ಮತ್ತು ಸೇನಾ ದಂಡನಾಯಕರಾಗಿದ್ದರು. ಇವರು 1857 ರ ದಂಗೆಯಲ್ಲಿ ಮಹತ್ವದ ಮತ್ತು ವೀರೋಚಿತ ಪಾತ್ರವನ್ನು ನಿರ್ವಹಿಸಿದ್ದಾರೆ.
- ಇವರು 1835 ರ ನವೆಂಬರ್ 11 ರಂದು ಲೋಧ್ವಾರಿ ಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಅನಾಥರಾದ ಇವರು ತಮ್ಮ ಸಹೋದರಿಯ ಆಶ್ರಯದಲ್ಲಿ ಬೆಳೆದರು.
- ಆ ಕಾಲದ ಸ್ಥಳೀಯ ಉಪಭಾಷೆಯಲ್ಲಿ, ಸಹೋದರಿಯ ಮನೆಯಲ್ಲಿ ವಾಸಿಸುವ ಸಹೋದರನನ್ನು ಪ್ರೀತಿಯಿಂದ “ವೀರ್ನಾ” ಎಂದು ಕರೆಯುವ ರೂಢಿಯಿತ್ತು. ಇದೇ ಪದವು ಕಾಲಕ್ರಮೇಣ ‘ವೀರ’ ಎಂಬ ಹೆಸರಾಗಿ ಬದಲಾಯಿತು.
- ಅವರು ಅವಧ್ ಪ್ರಾಂತ್ಯದ ಶಂಕರ್ಪುರ ಸಂಸ್ಥಾನದ ಆಡಳಿತಗಾರರಾಗಿದ್ದ ರಾಣಾ ಬೇನಿ ಮಾಧವ್ ಬಕ್ಷ್ ಸಿಂಗ್ ಅವರ ಅತ್ಯಂತ ವಿಶ್ವಾಸಾರ್ಹ ದಂಡನಾಯಕ ಮತ್ತು ಆಪ್ತ ಸಹವರ್ತಿಯಾಗಿ ಕಾರ್ಯನಿರ್ವಹಿಸಿದರು.
- ಬ್ರಿಟಿಷ್ ಪಡೆಗಳು ರಾಣಾ ಬೇನಿ ಮಾಧವ್ ಸಿಂಗ್ ಅವರನ್ನು ಬಂಧಿಸಿ ಸೆರೆಮನೆಯಲ್ಲಿರಿಸಿದಾಗ, ವೀರ ಪಾಸಿ ಅವರು ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿ ಜೈಲಿನಿಂದ ತಮ್ಮ ನಾಯಕನನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು.








ನಿಮ್ಮದೊಂದು ಉತ್ತರ