ಸರ್ಕಾರದಿಂದ ಸಕ್ಕರೆ ರಫ್ತು ನಿಷೇಧ | ಅಸ್ಸಾಂನಿಂದ ಮೊದಲ ಅಧಿಕೃತ ‘ಅಗರ್‌ವುಡ್’ ಪಶ್ಚಿಮ ಏಷ್ಯಕ್ಕೆ ರಫ್ತು | ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್) | ಪ್ರಧಾನ ಮಂತ್ರಿಯವರ ಯುಎಇ (UAE) ಭೇಟಿ | ಚಾಬಹಾರ್ ಬಂದರು

ಸರ್ಕಾರದಿಂದ ಸಕ್ಕರೆ ರಫ್ತು ನಿಷೇಧ

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಭಾರತ ಸರ್ಕಾರವು ‘ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ’ದ (Directorate General of Foreign Trade – DGFT) ಮೂಲಕ ಕಚ್ಚಾ, ಬಿಳಿ ಮತ್ತು ಸಂಸ್ಕರಿಸಿದ ಸಕ್ಕರೆಯ ರಫ್ತನ್ನು 2026 ರ ಸೆಪ್ಟೆಂಬರ್ 30 ರವರೆಗೆ ನಿಷೇಧಿತ ವರ್ಗದಲ್ಲಿ ಇರಿಸಿದೆ.

ಸಕ್ಕರೆ ರಫ್ತು ನಿಷೇಧದ ಹಿಂದಿನ ಪ್ರಮುಖ ಕಾರಣಗಳು:

  • ಎಲ್-ನಿನೋ ಮತ್ತು ಮುಂಗಾರು ಆತಂಕಗಳು: ಮುಂಬರುವ ಸಂಭಾವ್ಯ ‘ಎಲ್-ನಿನೋ’ ಪ್ರಭಾವವು ಮುಂಗಾರು ಮಳೆಯನ್ನು ದುರ್ಬಲಗೊಳಿಸಬಹುದು. ಇದರಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿ ಭವಿಷ್ಯದ ಸಕ್ಕರೆ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಸರ್ಕಾರಕ್ಕಿದೆ.
  • ರಸಗೊಬ್ಬರ ಪೂರೈಕೆಯ ಅಪಾಯಗಳು: ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಬಹುದು. ಕಬ್ಬಿನ ಬೆಳೆಗೆ ಹೆಚ್ಚಿನ ರಸಗೊಬ್ಬರದ ಅಗತ್ಯತೆ ಇರುವುದರಿಂದ ಇದು ಅತ್ಯಂತ ಮಹತ್ವದ ಅಂಶವಾಗಿದೆ.
  • ಸಾಕಷ್ಟು ದೇಶೀಯ ದಾಸ್ತಾನು ಕಾಯ್ದುಕೊಳ್ಳುವಿಕೆ: ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆಯನ್ನು ನಿಯಂತ್ರಿಸಲು, ಅಭಾವವನ್ನು ತಡೆಗಟ್ಟಲು ಮತ್ತು ದೇಶೀಯ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಪ್ರಮಾಣದ ಸಕ್ಕರೆ ದಾಸ್ತಾನನ್ನು ಕಾಪಾಡಿಕೊಳ್ಳುವುದು ಈ ನಿಷೇಧದ ಪ್ರಮುಖ ಗುರಿಯಾಗಿದೆ.

ಅಸ್ಸಾಂನಿಂದ ಮೊದಲ ಅಧಿಕೃತ ‘ಅಗರ್‌ವುಡ್’ ಪಶ್ಚಿಮ ಏಷ್ಯಕ್ಕೆ ರಫ್ತು

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ಅಗರ್‌ವುಡ್ ಮರದ ತುಣುಕುಗಳನ್ನು ಕಾನೂನುಬದ್ಧವಾಗಿ ರಫ್ತು ಮಾಡಲು ಅಸ್ಸಾಂ ಸರ್ಕಾರವು ಇತ್ತೀಚೆಗೆ ಅನುಮೋದನೆ ನೀಡಿದೆ.

ಅಗರ್‌ವುಡ್ (Agarwood) ಬಗ್ಗೆ:

  • ಇದನ್ನು ಸಾಮಾನ್ಯವಾಗಿ “ಊದ್” (Oud) ಎಂದೂ ಕರೆಯಲಾಗುತ್ತದೆ.
  • ಸೋಂಕಿಗೆ ತುತ್ತಾದ ‘ಅಕ್ವಿಲೇರಿಯಾ’ (Aquilaria) ಮತ್ತು ‘ಗೈರಿನೋಪ್ಸ್’ (Gyrinops) ಮರಗಳಲ್ಲಿ ನೈಸರ್ಗಿಕವಾಗಿ ಸ್ರವಿಸುವ ಸುಗಂಧಭರಿತ ರಾಳದಿಂದ ಇದನ್ನು ಉತ್ಪಾದಿಸಲಾಗುತ್ತದೆ.
  • ಅಗರ್‌ವುಡ್, ಜಾಗತಿಕವಾಗಿ ಐಷಾರಾಮಿ ಸುಗಂಧ ದ್ರವ್ಯಗಳು, ಧೂಪದ್ರವ್ಯ, ಸೌಂದರ್ಯವರ್ಧಕಗಳು ಮತ್ತು ಸಾಂಪ್ರದಾಯಿಕ ಉತ್ಪನ್ನಗಳಲ್ಲಿ ಬಳಸಲಾಗುವ ಅತ್ಯಂತ ಬೆಲೆಬಾಳುವ ವಸ್ತುವಾಗಿದೆ.
  • ಭಾರತ, ಕಾಂಬೋಡಿಯಾ, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಲಾವೋಸ್ ಮತ್ತು ಭೂತಾನ್‌ನಂತಹ ದೇಶಗಳಲ್ಲಿ ಅಗರ್‌ವುಡ್ ಅನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.
  • ಭಾರತದಲ್ಲಿ, ಅಕ್ವಿಲೇರಿಯಾ ಮಲಾಸೆನ್ಸಿಸ್ (Aquilaria malaccensis) ಮತ್ತು ಅಕ್ವಿಲೇರಿಯಾ ಖಾಸಿಯಾನಾ (Aquilaria khasiana) ದಂತಹ ಪ್ರಮುಖ ಪ್ರಭೇದಗಳು ಪ್ರಧಾನವಾಗಿ ಅಸ್ಸಾಂ ಮತ್ತು ಅದರ ಸುತ್ತಮುತ್ತಲಿನ ರಾಜ್ಯಗಳು ಸೇರಿದಂತೆ ಈಶಾನ್ಯ ಭಾರತದಲ್ಲಿ ಕಂಡುಬರುತ್ತವೆ.
  • ‘ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ’ದ (CITES) ಅನುಬಂಧ II ರ ಅಡಿಯಲ್ಲಿ ಅಗರ್‌ವುಡ್ ಅನ್ನು ಸಂರಕ್ಷಿಸಲಾಗಿದೆ.

ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್)

ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನ ನಡುವೆ, ಸಾಗರೋತ್ತರ ಬಂಡವಾಳದ ಒಳಹರಿವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ವಿತ್‌ಹೋಲ್ಡಿಂಗ್ ಟ್ಯಾಕ್ಸ್ (‘ಮೂಲದಲ್ಲಿ ತೆರಿಗೆ ತಡೆಹಿಡಿಯುವಿಕೆ) ದರವನ್ನು 20% ದಿಂದ ಹಿಂದಿನ 5% ಕ್ಕೆ ಕಡಿತಗೊಳಿಸಲು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.

ಆದಾಯದ ಮೂಲದಲ್ಲಿಯೇ ತೆರಿಗೆ ಕಡಿತ/ಸಂಗ್ರಹಣೆ (ವಿತ್‌ಹೋಲ್ಡಿಂಗ್ ಟ್ಯಾಕ್ಸ್)ಯ ಬಗ್ಗೆ:

  • ‘ವಿತ್‌ಹೋಲ್ಡಿಂಗ್ ಟ್ಯಾಕ್’ ಅಥವಾ WHT ಎಂಬುದು ಆದಾಯದ ಮೂಲದಲ್ಲಿಯೇ ಸಂಗ್ರಹಿಸಲಾಗುವ ತೆರಿಗೆಯಾಗಿದೆ.
  • ಹೂಡಿಕೆದಾರ ಅಥವಾ ವಿದೇಶಿ ಕಂಪನಿಯು ಆರ್ಥಿಕ ವರ್ಷದ ಕೊನೆಯಲ್ಲಿ ತೆರಿಗೆ ಪಾವತಿಸಲು ಕಾಯುವ ಬದಲು, ಆದಾಯವನ್ನು ಸ್ವೀಕರಿಸುವವರ ಕೈಸೇರುವ ಮುನ್ನವೇ ಅದರ ಒಂದು ನಿರ್ದಿಷ್ಟ ಭಾಗವನ್ನು ಕಡಿತಗೊಳಿಸುವಂತೆ ಸರ್ಕಾರವು ಪಾವತಿದಾರರಿಗೆ ಕಡ್ಡಾಯಗೊಳಿಸುತ್ತದೆ.
  • ಹೀಗೆ ಕಡಿತಗೊಳಿಸಲಾದ ಮೊತ್ತವನ್ನು ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಲಾಗುತ್ತದೆ.
  • ಸರಳವಾಗಿ ಹೇಳುವುದಾದರೆ, ಉದ್ಯೋಗ, ಹೂಡಿಕೆಗಳು, ಸ್ವಾಮ್ಯಧನ (Royalties) ಅಥವಾ ಇತರ ಯಾವುದೇ ಮೂಲಗಳ ಮೂಲಕ ಆದಾಯವನ್ನು ಗಳಿಸಿದಾಗ, ಸರ್ಕಾರವು ಈ ತೆರಿಗೆಯ ಮೂಲಕ ಮುಂಗಡವಾಗಿ ತೆರಿಗೆ ಸಂಗ್ರಹವಾಗುವುದನ್ನು ಖಚಿತಪಡಿಸಿಕೊಳ್ಳುತ್ತದೆ.
  • ಹಾಂಗ್ ಕಾಂಗ್ ಮತ್ತು ಸಿಂಗಾಪುರ್ ದೇಶಗಳಲ್ಲಿ ಈ ವ್ಯವಸ್ಥೆ ಇರುವುದಿಲ್ಲ.

ಈ ತೆರಿಗೆಯನ್ನು ಕಡಿತಗೊಳಿಸುವುದರ ಮಹತ್ವ:

  • ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ: ಈ ತೆರಿಗೆ ದರ ಕಡಿಮೆಯಾದರೆ ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಲಾಭಾಂಶವನ್ನು ಒದಗಿಸುತ್ತದೆ. ಇದು ಹೆಚ್ಚಿನ ವಿದೇಶಿ ನೇರ ಹೂಡಿಕೆ (FDI) ಮತ್ತು ಹಣಕಾಸು ಮಾರುಕಟ್ಟೆ ಹೂಡಿಕೆಗಳನ್ನು ಉತ್ತೇಜಿಸುತ್ತದೆ.
  • ಸುಗಮ ವ್ಯಾಪಾರ ವ್ಯವಸ್ಥೆಯನ್ನು (EoDB) ಸುಧಾರಿಸುತ್ತದೆ: ಗಡಿಯಾಚೆಗಿನ ವಹಿವಾಟುಗಳಲ್ಲಿ ತೊಡಗಿರುವ ಕಂಪನಿಗಳ ಮೇಲಿನ ತೆರಿಗೆ ಮತ್ತು ನಿಯಮಾನುಸರಣೆಯ ಹೊರೆಯನ್ನು ಇದು ಗಣನೀಯವಾಗಿ ಕಡಿಮೆ ಮಾಡುತ್ತದೆ.
  • ಬಂಡವಾಳ ಮತ್ತು ವ್ಯಾಪಾರದ ಹರಿವನ್ನು ಹೆಚ್ಚಿಸುತ್ತದೆ: ಅಂತರರಾಷ್ಟ್ರೀಯ ವ್ಯಾಪಾರ, ತಂತ್ರಜ್ಞಾನ ವರ್ಗಾವಣೆ ಮತ್ತು ಜಾಗತಿಕ ಬಂಡವಾಳದ ಮುಕ್ತ ಚಲನೆಯನ್ನು ಇದು ಪ್ರೋತ್ಸಾಹಿಸುತ್ತದೆ.
  • ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ: ಹೆಚ್ಚಿದ ಹೂಡಿಕೆ ಮತ್ತು ವ್ಯಾಪಾರ ಚಟುವಟಿಕೆಗಳು ನವ ಉದ್ಯೋಗಗಳ ಸೃಷ್ಟಿ, ನಾವೀನ್ಯತೆ ಮತ್ತು ಉನ್ನತ ಮಟ್ಟದ ಆರ್ಥಿಕ ಉತ್ಪಾದಕತೆಗೆ ಕಾರಣವಾಗಬಹುದು.

ಪ್ರಧಾನ ಮಂತ್ರಿಯವರ ಯುಎಇ (UAE) ಭೇಟಿ

ಅಂತರರಾಷ್ಟ್ರೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳನ್ನು ಒಳಗೊಂಡ ಐದು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಭಾರತದ ಪ್ರಧಾನ ಮಂತ್ರಿಯವರು ಯುಎಇ (UAE) ನಲ್ಲಿ ಐತಿಹಾಸಿಕ ರಾಜತಾಂತ್ರಿಕ ಭೇಟಿಯನ್ನು ಕೈಗೊಂಡರು.

ಪ್ರಮುಖ ಫಲಿತಾಂಶಗಳು:

  • ‘ಭಾರತೀಯ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಸಂಸ್ಥೆ’ (ISPRL) ಮತ್ತು ‘ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ’ (ADNOC) ನಡುವೆ ಕಾರ್ಯತಂತ್ರದ ಸಹಯೋಗಕ್ಕಾಗಿ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು.
  • ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಪೂರೈಕೆ ಕುರಿತಂತೆ ಭಾರತೀಯ ತೈಲ ನಿಗಮ ನಿಯಮಿತ (IOCL) ಮತ್ತು ‘ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ’ (ADNOC) ನಡುವೆ ಕಾರ್ಯತಂತ್ರದ ಸಹಯೋಗ ಒಪ್ಪಂದವನ್ನು ಏರ್ಪಡಿಸಲಾಯಿತು.
  • ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಗೆ ಚೌಕಟ್ಟು: ಗುಜರಾತ್‌ನ ವಾಡಿನಾರ್‌ನಲ್ಲಿ ‘ಹಡಗು ದುರಸ್ತಿ ಸಮುಚ್ಚಯ’ ಸ್ಥಾಪಿಸಲು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಮತ್ತು ಡ್ರೈಡಾಕ್ಸ್ ವರ್ಲ್ಡ್ (DDW) ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.
  • ಭಾರತ ಸರ್ಕಾರವು ಪ್ರಾರಂಭಿಸಿರುವ ‘ಕಡಲ ಅಭಿವೃದ್ಧಿ ನಿಧಿ ಯೋಜನೆ’ಯ ಅಡಿಯಲ್ಲಿ, ಕಡಲಾಚೆಯ ನಿರ್ಮಾಣ ಕಾರ್ಯಗಳು ಸೇರಿದಂತೆ ವಿವಿಧ ಮಹತ್ವದ ಕ್ಷೇತ್ರಗಳಲ್ಲಿ ಪರಸ್ಪರ ಸಹಕರಿಸಲು ಉಭಯ ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ.

ಭಾರತ ಮತ್ತು ಯುಎಇ ಸಂಬಂಧಗಳು:

  • ರಾಜಕೀಯ ಸಂಬಂಧಗಳು: ಭಾರತ ಮತ್ತು ಯುಎಇ ದೇಶಗಳು 1972 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು. 2017 ರಲ್ಲಿ ಈ ಬಾಂಧವ್ಯವನ್ನು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ಯಾಗಿ (CSP) ಉನ್ನತೀಕರಿಸಲಾಯಿತು.
  • ವ್ಯಾಪಾರ ಮತ್ತು ಹೂಡಿಕೆ: ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸರಕು ವ್ಯಾಪಾರವು ಐತಿಹಾಸಿಕವಾಗಿ ಮೊದಲ ಬಾರಿಗೆ 100 ಬಿಲಿಯನ್ ಅಮೆರಿಕನ್ ಡಾಲರ್ (US$100 billion) ಗಡಿಯನ್ನು ದಾಟಿದೆ.
  • ಬಾಹ್ಯಾಕಾಶ ಸಹಕಾರ: ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶದ ಪರಿಶೋಧನೆ ಮತ್ತು ಬಳಕೆಯಲ್ಲಿ ಸಹಕರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಯುಎಇ ಬಾಹ್ಯಾಕಾಶ ಸಂಸ್ಥೆ 2016 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ.
  • ಭಾರತೀಯ ಸಮುದಾಯ: ಸುಮಾರು 35 ಲಕ್ಷ ಭಾರತೀಯ ವಲಸಿಗ ಸಮುದಾಯವು ಯುಎಇ ದೇಶದಲ್ಲಿರುವ ಅತಿ ದೊಡ್ಡ ಜನಾಂಗೀಯ ಸಮುದಾಯವಾಗಿದೆ. ಇದು ಆ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 35% ರಷ್ಟಿದೆ.
  • ಬಹುಪಕ್ಷೀಯ ಸಹಕಾರ: ಭಾರತ ಮತ್ತು ಯುಎಇ ಪ್ರಸ್ತುತ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC), I2U2 (ಭಾರತ, ಇಸ್ರೇಲ್, ಯುಎಇ, ಅಮೆರಿಕಾ) ಮತ್ತು UFI (ಯುಎಇ, ಫ್ರಾನ್ಸ್, ಭಾರತ) ತ್ರಿಪಕ್ಷೀಯ ವೇದಿಕೆಗಳಂತಹ ಹಲವು ಬಹುಪಕ್ಷೀಯ ವೇದಿಕೆಗಳ ಸಕ್ರಿಯ ಭಾಗವಾಗಿವೆ.

ಚಾಬಹಾರ್ ಬಂದರು

ಅಂತರರಾಷ್ಟ್ರೀಯ

ಇತ್ತೀಚೆಗೆ ಸುದ್ದಿಯಲ್ಲಿದೆ:

  • ಇರಾನ್ ದೇಶದ ವಿದೇಶಾಂಗ ಸಚಿವರು ಚಾಬಹಾರ್ ಬಂದರನ್ನು “ಸುವರ್ಣ ಹೆಬ್ಬಾಗಿಲು” ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಈ ಆಯಕಟ್ಟಿನ ಬಂದರನ್ನು ಭಾರತವು ಇನ್ನಷ್ಟು ಅಭಿವೃದ್ಧಿಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಚಾಬಹಾರ್ ಬಂದರಿನ ಬಗ್ಗೆ:

  • ಸ್ಥಳ: ಇದು ಇರಾನ್‌ನ ಆಗ್ನೇಯ ಭಾಗದಲ್ಲಿ, ಓಮನ್ ಕೊಲ್ಲಿಯ (ಗಲ್ಫ್ ಆಫ್ ಓಮನ್) ಕರಾವಳಿಯಲ್ಲಿರುವ ಪ್ರಮುಖ ಸಮುದ್ರ ಬಂದರಾಗಿದೆ.
  • ಇದು ‘ಶಾಹಿದ್ ಕಲಾಂತರಿ’ ಮತ್ತು ‘ಶಾಹಿದ್ ಬೆಹೇಶ್ತಿ ‘ ಎಂಬ ಎರಡು ಪ್ರತ್ಯೇಕ ಬಂದರುಗಳನ್ನು ಒಳಗೊಂಡಿದೆ.
  • ಇದು ಪಾಕಿಸ್ತಾನದ ಗ್ವಾದರ್ ಬಂದರಿನಿಂದ ಪಶ್ಚಿಮಕ್ಕೆ ಕೇವಲ 170 ಕಿಲೋಮೀಟರ್ ದೂರದಲ್ಲಿದೆ.
  • ಆಯಕಟ್ಟಿನ ಸ್ಥಳ: ಅಫ್ಘಾನಿಸ್ತಾನದ ‘ಹಾಜಿಗಕ್’ ಕಬ್ಬಿಣದ ಗಣಿಗೆ ಹಾಗೂ ಕಝಾಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನಂತಹ ಮಧ್ಯ ಏಷ್ಯಾದ ದೇಶಗಳ ನೈಸರ್ಗಿಕ ಸಂಪನ್ಮೂಲಗಳನ್ನು ತಲುಪಲು ಭಾರತಕ್ಕೆ ಚಾಬಹಾರ್ ಬಂದರು ಅತ್ಯಂತ ಪ್ರಮುಖ ಸಂಪರ್ಕ ಮಾರ್ಗವನ್ನು ಕಲ್ಪಿಸುತ್ತದೆ.
  • ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಂಚಾರ ಪಥ (International North-South Transport Corridor): ಹಿಂದೂ ಮಹಾಸಾಗರವನ್ನು ಉತ್ತರ ಯುರೋಪ್‌ಗೆ ಸಂಪರ್ಕಿಸುವ ಬಹು-ಮಾದರಿ ಸಾರಿಗೆ ಯೋಜನೆಯಾದ INSTC ಯ ಪ್ರಮುಖ ಭಾಗವಾಗಿ ಈ ಬಂದರು ಕಾರ್ಯನಿರ್ವಹಿಸುತ್ತಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts