ಲೇಖಕ: instakas

  • ಗೌರಿಬಿದನೂರಿನಲ್ಲಿ ‘ಫಿಕ್ಕಿ ಫ್ಲೋ’ (FICCI FLO) ಮಹಿಳಾ-ನೇತೃತ್ವದ ಕೈಗಾರಿಕಾ ಪಾರ್ಕ್

    ಗೌರಿಬಿದನೂರಿನಲ್ಲಿ ‘ಫಿಕ್ಕಿ ಫ್ಲೋ’ (FICCI FLO) ಮಹಿಳಾ-ನೇತೃತ್ವದ ಕೈಗಾರಿಕಾ ಪಾರ್ಕ್

    ಇದೀಗ ಸುದ್ದಿಯಲ್ಲಿದೆ:

    • ಗೌರಿಬಿದನೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಫಿಕ್ಕಿ ಫ್ಲೋ (FICCI FLO) ಮಹಿಳಾ-ನೇತೃತ್ವದ ಕೈಗಾರಿಕಾ ಪಾರ್ಕ್’ ಅನ್ನು 2026 ರ ಫೆಬ್ರವರಿ 4 ರಂದು ಅಧಿಕೃತವಾಗಿ ಉದ್ಘಾಟಿಸಲಾಯಿತು.
    • 50 ಎಕರೆ ವಿಸ್ತೀರ್ಣದ ಈ ಸೌಲಭ್ಯವು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಕೈಗೊಂಡಿರುವ ವಿಶಿಷ್ಟ ಉಪಕ್ರಮವಾಗಿದ್ದು, ವಿಶೇಷವಾಗಿ ಉತ್ಪಾದನಾ ವಲಯ ಮತ್ತು ಬೃಹತ್ ಉದ್ಯಮಗಳಲ್ಲಿನ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

    ಈ ಕೈಗಾರಿಕಾ ಪಾರ್ಕ್ ನ ಪ್ರಮುಖ ವಿವರಗಳು:

    • ಸ್ಥಳ:- ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿದೆ.
    • ವಿಸ್ತೀರ್ಣ:- ಈ ಪಾರ್ಕ್ 50 ಎಕರೆ ಮೀಸಲಾದ ಕೈಗಾರಿಕಾ ಭೂಮಿಯನ್ನು ಒಳಗೊಂಡಿದೆ.
    • ಉದ್ದೇಶಿತ ಸಮೂಹ:- ಇದು ಪ್ರತ್ಯೇಕವಾಗಿ ‘ಫ್ಲೋ (FLO) ಬೆಂಗಳೂರು’ ಸದಸ್ಯರಿಗಾಗಿ ಮೀಸಲಾಗಿದ್ದು, ವಿಶೇಷವಾಗಿ ಮೊದಲ ತಲೆಮಾರಿನ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ.
    • ಪಾಲುದಾರಿಕೆ:- ಇದನ್ನು ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ’ (KIADB) ಮತ್ತು ‘ಕರ್ನಾಟಕ ಉದ್ಯೋಗ ಮಿತ್ರ’ (KUM) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
  • ಜೀತದಾಳು ಪದ್ಧತಿ ನಿರ್ಮೂಲನೆ ಕಾಯ್ದೆ,1976 : 50 ವರ್ಷಗಳು | ಸೀಶೆಲ್ಸ್ (Seychelles) | ಮ್ಯಾಂಗ್ರೋವ್ ಕಪ್ಪೆಚಿಪ್ಪು / ಕ್ಲಾಮ್

    ಜೀತದಾಳು ಪದ್ಧತಿ ನಿರ್ಮೂಲನೆ ಕಾಯ್ದೆ,1976 : 50 ವರ್ಷಗಳು

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಫೆಬ್ರವರಿ 9, 1976 ರಂದು ‘ಜೀತದಾಳು ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆ’ಯನ್ನು ಜಾರಿಗೊಳಿಸುವ ಮೂಲಕ ಭಾರತೀಯ ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ತಲುಪಲಾಯಿತು. ಈ ಕಾಯ್ದೆಯು ಜಾರಿಗೆಯಾಗಿ ಇದೀಗ 50 ವರ್ಷಗಳು ಸಂದಿವೆ.

    ಜೀತದಾಳು ಪದ್ಧತಿ ನಿರ್ಮೂಲನೆ ಕಾಯ್ದೆ, 1976 ರ ಬಗ್ಗೆ:

    • ವ್ಯಾಖ್ಯಾನ:- ಜೀತದಾಳು ಪದ್ಧತಿ (ಋಣಬಾಧೆ) ಎಂದರೆ, ಸಾಲ ಪಡೆದ ವ್ಯಕ್ತಿಯು ಆ ಸಾಲವನ್ನು ಹಣದ ರೂಪದಲ್ಲಿ ಹಿಂದಿರುಗಿಸುವ ಬದಲು, ಸಾಲಗಾರನ ಬಲವಂತಕ್ಕೆ ಒಳಪಟ್ಟು ತನ್ನ ಶ್ರಮದ (ದುಡಿಮೆಯ) ಮೂಲಕವೇ ತೀರಿಸಬೇಕಾದ ಒಂದು ಶೋಷಣಾತ್ಮಕ ಪರಿಸ್ಥಿತಿಯಾಗಿದೆ.
    • ಸಂವಿಧಾನಾತ್ಮಕ ಹಿನ್ನೆಲೆ:- ಭಾರತೀಯ ಸಂವಿಧಾನದ 23ನೇ ವಿಧಿಗೆ (ಮಾನವ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯ ನಿಷೇಧ) ಕಾನೂನಾತ್ಮಕ ಬಲವನ್ನು ನೀಡುವ ಹಾಗೂ ಅದನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
    • ಜೀತದಾಳು ಪದ್ಧತಿಗೆ ಮೂಲ ಕಾರಣಗಳು:- ಬಡತನ, ಜಾತಿ ಶ್ರೇಣೀಕರಣ, ಭೂರಹಿತತೆ ಮತ್ತು ಋಣಭಾರದ ಕಾರಣಗಳಿಂದಾಗಿ ಜೀತದಾಳು ಪದ್ಧತಿಯು ಸಮಾಜದಲ್ಲಿ ಆಳವಾಗಿ ಬೇರೂರಿತ್ತು.
    • ILO ‘ಒಪ್ಪಂದ ಸಂಖ್ಯೆ 29’ ನ್ನು ಭಾರತ 1954 ರಲ್ಲಿ ಅನುಮೋದಿಸಿತದೆ:- ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ‘ಒಪ್ಪಂದ ಸಂಖ್ಯೆ 29’ (ಬಲವಂತದ ದುಡಿಮೆಗೆ ಸಂಬಂಧಿಸಿದ ಒಪ್ಪಂದ) ಅನ್ನು ಅನುಮೋದಿಸಿತು. ಇದು ಬಲವಂತದ ದುಡಿಮೆಯನ್ನು ನಿರ್ಮೂಲನೆ ಮಾಡುವ ಭಾರತದ ಕಾನೂನಾತ್ಮಕ ಬದ್ಧತೆಯನ್ನು ಇನ್ನಷ್ಟು ಬಲಪಡಿಸಿತು.

    ಈ ಕಾಯ್ದೆಯ ಪ್ರಮುಖ ಉದ್ದೇಶಗಳು:

    • ಜೀತ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು.
    • ಜೀತದಾಳುಗಳನ್ನು ಮುಕ್ತಗೊಳಿಸುವುದು ಮತ್ತು ಅವರ ಮೇಲಿದ್ದ ಸಾಲದ ಹೊರೆಯನ್ನು (ಋಣಭಾರವನ್ನು) ವಜಾಗೊಳಿಸುವುದು.
    • ಆರ್ಥಿಕ ಮತ್ತು ಸಾಮಾಜಿಕ ಶೋಷಣೆಯನ್ನು ತಡೆಯುವುದು.
    • ಮುಕ್ತಗೊಂಡ ಜೀತದಾಳುಗಳ ಪುನರ್ವಸತಿಗಾಗಿ ಕಾನೂನಾತ್ಮಕ ಚೌಕಟ್ಟನ್ನು ಒದಗಿಸುವುದು.

    ಸೀಶೆಲ್ಸ್ (Seychelles)

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೀಶೆಲ್ಸ್‌ಗೆ 175 ದಶಲಕ್ಷ ಡಾಲರ್‌ಗಳ ‘ವಿಶೇಷ ಆರ್ಥಿಕ ಪ್ಯಾಕೇಜ್’ ಅನ್ನು ಘೋಷಿಸಿದರು.

    ಸೀಶೆಲ್ಸ್ ದೇಶದ ಬಗ್ಗೆ:

    • ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡಿದೆ:- ಮಡಗಾಸ್ಕರ್‌ನ ಈಶಾನ್ಯಕ್ಕೆ ನೆಲೆಗೊಂಡ 115 ದ್ವೀಪಗಳನ್ನು ಒಳಗೊಂಡ ಒಂದು ದ್ವೀಪಸಮೂಹ ರಾಷ್ಟ್ರವಾಗಿದೆ. 
    • ಇದು ಆಫ್ರಿಕಾ ಖಂಡದ ಅತ್ಯಂತ ಚಿಕ್ಕ ಮತ್ತು ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ.
    • ರಾಜಧಾನಿ:- ಮಾಹೆ ದ್ವೀಪದಲ್ಲಿರುವ ‘ವಿಕ್ಟೋರಿಯಾ’.
    • ಜೀವ ವೈವಿಧ್ಯತೆ:- ಇದು ‘ಕೊಕೊ ಡಿ ಮೆರ್’ , ‘ಅಲ್ಡಾಬ್ರಾ ದೈತ್ಯ ಆಮೆ’ ಮತ್ತು ಅಪರೂಪದ ‘ಕಪ್ಪು ಗಿಳಿ’ಯಂತಹ ಅಪರೂಪದ ಪ್ರಭೇದಗಳಿಗೆ ಹೆಸರುವಾಸಿಯಾಗಿದೆ.

    ಮ್ಯಾಂಗ್ರೋವ್ ಕಪ್ಪೆಚಿಪ್ಪು / ಕ್ಲಾಮ್

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಐಸಿಎಆರ್-ಕೇಂದ್ರೀಯ ಕಡಲ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ICAR-CMFRI)’ಯು ಜಗತ್ತಿನಲ್ಲಿಯೇ ಮೊದಲ ಬಾರಿಗೆ ಮ್ಯಾಂಗ್ರೋವ್/ಕೆಸರು ಕಪ್ಪೆಚಿಪ್ಪು (ಗೆಲೋಯಿನಾ ಎರೋಸಾ) ಪ್ರಭೇದವನ್ನು ‘ಬಂಧಿತ ಪರಿಸರದಲ್ಲಿ ಪ್ರೇರೇಪಿತ ಸಂತಾನೋತ್ಪತ್ತಿ’ಗೆ ಒಳಪಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 
    • ಇದು ಭಾರತೀಯ ಮ್ಯಾಂಗ್ರೋವ್ ಕಾಡುಗಳಲ್ಲಿ ಮಿತಿಮೀರಿದ ಬಳಕೆಯಿಂದ ಕ್ಷೀಣಿಸಿದ ಇವುಗಳ ಸಂತತಿಯನ್ನು ಮರುಸ್ಥಾಪಿಸುವ ಭರವಸೆಯನ್ನು ಮೂಡಿಸಿದೆ.

    ಮ್ಯಾಂಗ್ರೋವ್ ಕಪ್ಪೆಚಿಪ್ಪಿನ ಬಗ್ಗೆ:

    • ವೈಜ್ಞಾನಿಕ ಹೆಸರು:- ‘ಗೆಲೋಯಿನಾ ಎರೋಸಾ’ (ಪಾಲಿಮೆಸೊಡಾ ಎರೋಸಾ ಎಂತಲೂ ಕರೆಯಲ್ಪಡುತ್ತದೆ). 
    • ಆವಾಸಸ್ಥಾನ:- ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಮ್ಯಾಂಗ್ರೋವ್‌ಗಳು ಮತ್ತು ಅಳಿವೆಗಳ ಸಾವಯವ-ಸಮೃದ್ಧ, ಕೆಸರುಮಯ ‘ಉಬ್ಬರವಿಳಿತದ ವಲಯಗಳಲ್ಲಿ’ ವಾಸಿಸುವ ದೊಡ್ಡ ಗಾತ್ರದ ‘ದ್ವಿಕವಾಟ ಮೃದ್ವಂಗಿ’ ( 10 ಸೆಂ.ಮೀ ವರೆಗಿನ ಕವಚದ ಅಗಲವನ್ನು ಹೊಂದಿರುತ್ತದೆ)ಯಾಗಿದೆ.
    • ಉತ್ತರ ಕೇರಳದಲ್ಲಿ ಇದನ್ನು ಸ್ಥಳೀಯವಾಗಿ “ಕಂಡಲ್ ಕಕ್ಕಾ” ಎಂದು ಕರೆಯಲಾಗುತ್ತದೆ.
    • ಪರಿಸರ ವ್ಯವಸ್ಥೆಯಲ್ಲಿನ ಪಾತ್ರ:- ಇದು ಸಮರ್ಥ ‘ಶೋಧಕ ಭಕ್ಷಕ’ವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಪೋಷಕಾಂಶಗಳ ಮರುಬಳಕೆಯ ಮೂಲಕ ಅಳಿವೆಗಳ ನೀರಿನ ಗುಣಮಟ್ಟವನ್ನು ಸುಧಾರಿಸುತ್ತದೆ.
    • ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ ಸಾಮರ್ಥ್ಯವನ್ನು ಬಲಪಡಿಸುತ್ತದೆ:- ಇದರ ಬಿಲ ತೋಡುವ ನಡವಳಿಕೆಯು ಹೂಳನ್ನು ಸ್ಥಿರಗೊಳಿಸುತ್ತದೆ, ಪೋಷಕಾಂಶಗಳ ಚಕ್ರವನ್ನು ವೃದ್ಧಿಸುತ್ತದೆ.
  • ‘ಕರ್ನಾಟಕಕ್ಕೆ ನ್ಯಾಯ – ನ್ಯಾಯಸಮ್ಮತ ಪಾಲು, ಬಲವಾದ ಒಕ್ಕೂಟ ವ್ಯವಸ್ಥೆ’ ಅಭಿಯಾನ

    ‘ಕರ್ನಾಟಕಕ್ಕೆ ನ್ಯಾಯ – ನ್ಯಾಯಸಮ್ಮತ ಪಾಲು, ಬಲವಾದ ಒಕ್ಕೂಟ ವ್ಯವಸ್ಥೆ’ ಅಭಿಯಾನ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026 ರ ಜನವರಿ 30 ರಂದು “ಕರ್ನಾಟಕಕ್ಕೆ ನ್ಯಾಯ – ನ್ಯಾಯಸಮ್ಮತ ಪಾಲು, ಬಲವಾದ ಒಕ್ಕೂಟ ವ್ಯವಸ್ಥೆ” ಎಂಬ ಶೀರ್ಷಿಕೆಯಡಿ ಸಾರ್ವಜನಿಕ ಸಂಪರ್ಕ ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಿದರು.
    • ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಆಗಿರುವ ಆಪಾದಿತ ‘ಅನ್ಯಾಯ’ ಮತ್ತು ರಾಜ್ಯದ ಆರ್ಥಿಕ ಬೇಡಿಕೆಗಳ ಕುರಿತು ನಾಗರಿಕರಿಗೆ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಈ ಅಭಿಯಾನದ ಪ್ರಮುಖ ಉದ್ದೇಶಗಳು :

    16ನೇ ಹಣಕಾಸು ಆಯೋಗದ ಮುಂದಿಡಲಾದ ಹಲವಾರು ನಿರ್ಣಾಯಕ ಬೇಡಿಕೆಗಳ ಮೇಲೆ ಈ ಅಭಿಯಾನವು ಕೇಂದ್ರೀಕರಿಸುತ್ತದೆ:

    • ತೆರಿಗೆ ಪಾಲಿನ ಮರುಸ್ಥಾಪನೆ:- ಹಿಂದಿನ ಹಣಕಾಸು ಆಯೋಗದ ಅವಧಿಯಲ್ಲಿ 4.71% ರಿಂದ 3.64% ಕ್ಕೆ ಕುಸಿದಿದ್ದ ಕೇಂದ್ರ ತೆರಿಗೆ ಹಂಚಿಕೆಯಲ್ಲಿನ ರಾಜ್ಯದ ಪಾಲನ್ನು ಮರಳಿ ಪಡೆಯುವುದು. ಈ ಕುಸಿತದಿಂದಾಗಿ ರಾಜ್ಯಕ್ಕೆ ಅಂದಾಜು ₹80,000 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
    • ಪರಿಷ್ಕೃತ ಹಂಚಿಕೆ ಸೂತ್ರ:- ಅಭಿವೃದ್ಧಿ ಮತ್ತು ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಸಾಧಿಸಿದ ರಾಜ್ಯಗಳಿಗೆ ದಂಡ ವಿಧಿಸುವಂತಹ “ದೋಷಪೂರಿತ” ಮಾನದಂಡಗಳನ್ನು ಸರಿಪಡಿಸುವುದು. ಆದಾಯದ ಅಂತರದ ಮಾಪನದ ತೂಕವನ್ನು 45% ರಿಂದ 25% ಕ್ಕೆ ಇಳಿಸುವುದು ಮತ್ತು 1971 ರ ಜನಗಣತಿಯ ದತ್ತಾಂಶವನ್ನು ಮರಳಿ ಬಳಸುವಂತೆ ರಾಜ್ಯವು ಒತ್ತಾಯಿಸುತ್ತಿದೆ.
    • ಹಂಚಿಕೆ ಮಾಡಬಹುದಾದ ನಿಧಿಯ ವಿಸ್ತರಣೆ:- ವಿಭಜಿಸಬಹುದಾದ ಒಟ್ಟು ತೆರಿಗೆಗಳಲ್ಲಿ ಎಲ್ಲಾ ರಾಜ್ಯಗಳ ಒಟ್ಟಾರೆ ಪಾಲನ್ನು 50% ಕ್ಕೆ ಹೆಚ್ಚಿಸುವುದು. ಅಲ್ಲದೆ, ಕೇಂದ್ರ ಸರ್ಕಾರ ವಿಧಿಸುವ ಸೆಸ್  ಹಾಗೂ ಸರ್‌ಚಾರ್ಜ್‌ (ಮೇಲ್ತೆರಿಗೆ) ಗಳ ಮೇಲೆ 5% ಮಿತಿಯನ್ನು ವಿಧಿಸುವುದು.
    • ಮೂಲಸೌಕರ್ಯ ಮತ್ತು ಪ್ರಾದೇಶಿಕ ಬೆಂಬಲ:- ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ₹1.15 ಲಕ್ಷ ಕೋಟಿ ಮತ್ತು ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ₹10,000 ಕೋಟಿಗಳ ವಿಶೇಷ ಪ್ಯಾಕೇಜ್‌ಗಾಗಿ ಬೇಡಿಕೆ ಇಡಲಾಗಿದೆ.
  • ಪಿಎಂ-ಕೇರ್ಸ್, ಪರಿಹಾರ ಮತ್ತು ರಕ್ಷಣಾ ನಿಧಿಗಳ ಕುರಿತು ಪ್ರಶ್ನೆಗಳಿಗೆ ಅವಕಾಶವಿಲ್ಲ: ಪಿಎಂಒ (PMO) | ಜಾಲಾಕಾರದ ಹೆಬ್ಬಾವು (Reticulated Python) | ಬಸ್ತಾರ್ ಪಾಂಡುಮ್ ಉತ್ಸವ

    ಪಿಎಂ-ಕೇರ್ಸ್, ಪರಿಹಾರ ಮತ್ತು ರಕ್ಷಣಾ ನಿಧಿಗಳ ಕುರಿತು ಪ್ರಶ್ನೆಗಳಿಗೆ ಅವಕಾಶವಿಲ್ಲ: ಪಿಎಂಒ (PMO)

    ರಾಜಕೀಯ ಮತ್ತು ಆಡಳಿತ

     

    ಇದೀಗ ಸುದ್ದಿಯಲ್ಲಿದೆ:

    • ಪಿಎಂ-ಕೇರ್ಸ್ ನಿಧಿ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF) ಮತ್ತು ರಾಷ್ಟ್ರೀಯ ರಕ್ಷಣಾ ನಿಧಿ (NDF) ಗಳಿಗೆ ಸಂಬಂಧಿಸಿದ ಸಂಸದೀಯ ಪ್ರಶ್ನೆಗಳು ಮತ್ತು ಚರ್ಚೆಗಳು ‘ಲೋಕಸಭೆಯ ನಡವಳಿಕೆ ಮತ್ತು ಕಾರ್ಯವಿಧಾನದ ನಿಯಮಗಳ’ ಅಡಿಯಲ್ಲಿ ಅಂಗೀಕಾರಾರ್ಹವಲ್ಲ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯವು ಲೋಕಸಭಾ ಸಚಿವಾಲಯಕ್ಕೆ ತಿಳಿಸಿದೆ.

    ಪ್ರಧಾನಮಂತ್ರಿಗಳ ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರ ಸಹಾಯ ಮತ್ತು ಪರಿಹಾರ ನಿಧಿ (PM CARES) v/s ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯ (PMNRF):

    ವೈಶಿಷ್ಟ್ಯಗಳು

    ಪಿಎಂ-ಕೇರ್ಸ್ ನಿಧಿ

    ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯ

    ಉದ್ದೇಶ

    ತುರ್ತು ಮತ್ತು ಸಂಕಷ್ಟದ ಪರಿಸ್ಥಿತಿಗಳನ್ನು (ಉದಾ: ಕೋವಿಡ್-19 ಸಾಂಕ್ರಾಮಿಕ ಮತ್ತು ಭವಿಷ್ಯದ ತುರ್ತು ಪರಿಸ್ಥಿತಿಗಳು) ನಿಭಾಯಿಸುವ ಉದ್ದೇಶ.

    ಮೂಲತಃ ದೇಶ ವಿಭಜನೆಯ (1948) ನಿರಾಶ್ರಿತರನ್ನು ಬೆಂಬಲಿಸಲು ರಚಿಸಲಾಗಿತ್ತು; ಪ್ರಸ್ತುತ ವಿಪತ್ತು ಪರಿಹಾರ ಮತ್ತು ವೈದ್ಯಕೀಯ ನೆರವಿಗಾಗಿ ಬಳಸಲಾಗುತ್ತಿದೆ.

    ಸ್ಥಾಪನೆ

    ಮಾರ್ಚ್ 27, 2020

    ಜನವರಿ 1948

    ಆಡಳಿತ / ನಿರ್ವಹಣೆ

    ಪ್ರಧಾನ ಮಂತ್ರಿ, ಗೃಹ ಸಚಿವ, ಹಣಕಾಸು ಸಚಿವ ಮತ್ತು ರಕ್ಷಣಾ ಸಚಿವರು ಇದರ ಧರ್ಮದರ್ಶಿ (ಟ್ರಸ್ಟಿ)ಗಳಾಗಿರುತ್ತಾರೆ 

    ಆರಂಭದಲ್ಲಿ (1985 ರವರೆಗೆ) ಸಮಿತಿಯಿಂದ ನಿರ್ವಹಿಸಲ್ಪಡುತ್ತಿತ್ತು. ಪ್ರಸ್ತುತ, ಪ್ರಧಾನ ಮಂತ್ರಿಗಳು ಇದರ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದಾರೆ.

    ನಿಧಿಯ ಬಳಕೆ

    ಪ್ರಾಥಮಿಕವಾಗಿ ಸಾಂಕ್ರಾಮಿಕ ರೋಗದ ನಿರ್ವಹಣೆ, ಆರೋಗ್ಯ ಮೂಲಸೌಕರ್ಯ ಮತ್ತು ವಿಪತ್ತು ಪರಿಹಾರಕ್ಕಾಗಿ ಈ ನಿಧಿಯನ್ನು ಬಳಸಲಾಗುತ್ತದೆ. 

    ನೈಸರ್ಗಿಕ ವಿಕೋಪಗಳು, ಅಪಘಾತಗಳು, ಗಲಭೆಗಳ ಸಂತ್ರಸ್ತರಿಗೆ ಮತ್ತು ವೈದ್ಯಕೀಯ ಚಿಕಿತ್ಸೆಗಳಿಗೆ ನೆರವು ನೀಡುತ್ತದೆ.

    ತೆರಿಗೆ ಪ್ರಯೋಜನಗಳು

    ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80G ಅಡಿಯಲ್ಲಿ ತೆರಿಗೆ ವಿನಾಯಿತಿಗಳಿಗೆ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ವೆಚ್ಚವಾಗಿ ಪರಿಗಣಿಸಲ್ಪಡಲು ಅರ್ಹವಾಗಿದೆ.

    ಇದು ಸೆಕ್ಷನ್ 80G ಅಡಿಯಲ್ಲಿ ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿದೆ, ಆದರೆ ಸಿಎಸ್‌ಆರ್ (CSR) ವೆಚ್ಚವಾಗಿ ಪರಿಗಣಿಸಲ್ಪಡಲು ಅರ್ಹವಾಗಿಲ್ಲ.

    ವಿದೇಶಿ ದೇಣಿಗೆಗಳು

    ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ, 2010 ರ (FCRA) ಅಡಿಯಲ್ಲಿ ಅನುಮತಿಸಲಾಗಿದೆ.

    ಇದು ಕೂಡ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುತ್ತದೆ.

    ಲೆಕ್ಕಪರಿಶೋಧನೆ 

    ಲೆಕ್ಕಪರಿಶೋಧನೆಗೆ ಒಳಪಡುತ್ತದೆ.

    ಸ್ವತಂತ್ರ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆಗೆ ಒಳಪಡುತ್ತದೆ.

    ಮಾಹಿತಿ ಹಕ್ಕು (RTI)

    ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಗೆ ಬರುವುದಿಲ್ಲ.

    ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಗೆ ಬರುವುದಿಲ್ಲ.

    ಸರ್ಕಾರದ ಮೇಲ್ವಿಚಾರಣೆ

    ಇದು ಸಂಸತ್ತು ಅಥವಾ ಸಿಎಜಿ (ಭಾರತದ ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರು – CAG) ನಿಯಂತ್ರಣಕ್ಕೆ ಒಳಪಡುವುದಿಲ್ಲ.

    ಇದೂ ಕೂಡ ಸಂಸತ್ತು ಅಥವಾ ಸಿಎಜಿ (CAG) ನಿಯಂತ್ರಣಕ್ಕೆ ಒಳಪಡುವುದಿಲ್ಲ.

    ಜಾಲಾಕಾರದ ಹೆಬ್ಬಾವು (Reticulated Python)

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಇಂಡೋನೇಷ್ಯಾದ ಸುಲವೆಸಿಯ ‘ಇಬು ಬ್ಯಾರನ್’ ಅಥವಾ ‘ದಿ ಬ್ಯಾರನೆಸ್’ ಎಂಬ ಹೆಸರಿನ 7.22 ಮೀಟರ್ ಉದ್ದದ ಜಾಲಾಕಾರದ ಹೆಣ್ಣು ಹೆಬ್ಬಾವನ್ನು, ಅಳೆಯಲಾದ ವಿಶ್ವದ ಅತಿ ಉದ್ದದ ಹಾವು ಎಂದು ‘ಗಿನ್ನೆಸ್ ವಿಶ್ವ ದಾಖಲೆ’ ದೃಢೀಕರಿಸಿದೆ.

    ಜಾಲಾಕಾರದ ಹೆಬ್ಬಾವಿನ ಬಗ್ಗೆ:

    • ವೈಜ್ಞಾನಿಕ ಹೆಸರು:- ಮಲಯೋಪೈಥಾನ್ ರೆಟಿಕ್ಯುಲೇಟಸ್ (Malayopython reticulatus)
    • ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿದೆ:- ಈ ಪ್ರಭೇದವು ಇಂಡೋನೇಷ್ಯಾ, ಫಿಲಿಪೈನ್ಸ್, ಮಲೇಷ್ಯಾ, ಥೈಲ್ಯಾಂಡ್ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.

    ಜಾಲಾಕಾರದ ಹೆಬ್ಬಾವಿನ ಭೌತಿಕ ಲಕ್ಷಣಗಳು:

    • ಇದು ವಿಶ್ವದ ಅತಿ ಉದ್ದದ ಹಾವಿನ ಪ್ರಭೇದವಾಗಿದೆ.
    • ವಿಶ್ವದ ಅತ್ಯಂತ ಭಾರವಾದ ಹಾವಿನ ಪ್ರಭೇದಗಳಲ್ಲಿ 3ನೇಯದು:- ಹಸಿರು ಅನಾಕೊಂಡ ಮತ್ತು ಬರ್ಮೀಸ್ ಹೆಬ್ಬಾವಿನ ನಂತರ, ಇದು ವಿಶ್ವದ ಮೂರು ಅತ್ಯಂತ ಭಾರವಾದ ಹಾವಿನ ಪ್ರಭೇದಗಳಲ್ಲಿ ಒಂದಾಗಿದೆ.
    • ಜಾಲಾಕಾರದ ವಿನ್ಯಾಸ:- ಇದು ತನ್ನ ಮೈಮೇಲಿನ ಹುರುಪೆಗಳಲ್ಲಿ/ಪೊರೆಗಳಲ್ಲಿ ಈ ವಿಶಿಷ್ಟವಾದ ವಿನ್ಯಾಸಗಳನ್ನು ಹೊಂದಿದೆ.
    • ಮಾನವರ ಭಕ್ಷಣೆ:- ಮಾನವರನ್ನು ಬೇಟೆಯಾಡುವ ಗುಣಹೊಂದಿರುವ, ತಿಳಿದುಬಂದಿರುವ ಕೆಲವೇ ಹಾವಿನ ಪ್ರಭೇದಗಳಲ್ಲಿ ಈ ಜಾಲಾಕಾರದ ಹೆಬ್ಬಾವುಗಳೂ ಕೂಡ ಸೇರಿವೆ. ಅವು ತಮ್ಮ ಬೇಟೆಯನ್ನು ಸುತ್ತುವರಿದು ಬಿಗಿಯುವ ಮೂಲಕ ಉಸಿರುಗಟ್ಟಿಸಿ ಕೊಲ್ಲುತ್ತವೆ ಮತ್ತು ನಂತರ ಅದನ್ನು ಇಡಿಯಾಗಿ ನುಂಗುತ್ತವೆ.

    ಬಸ್ತಾರ್ ಪಾಂಡುಮ್ ಉತ್ಸವ

    ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ‘ಬಸ್ತಾರ್ ಪಾಂಡುಮ್’ ಉತ್ಸವದ ವಿಶೇಷ ಆಚರಣೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಛತ್ತೀಸ್‌ಗಢದ ಜನತೆಗೆ ಶುಭಾಶಯ ಕೋರಿದ್ದಾರೆ.

    ‘ಬಸ್ತಾರ್ ಪಾಂಡುಮ್ ಉತ್ಸವದ ಬಗ್ಗೆ:

    • ಆಚರಣೆಯ ಸ್ಥಳ:- ಇದು ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಆಚರಿಸಲಾಗುವ ಸಾಂಸ್ಕೃತಿಕ ಉತ್ಸವವಾಗಿದ್ದು, ಬುಡಕಟ್ಟು ಪರಂಪರೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಅನಾವರಣಗೊಳಿಸುತ್ತದೆ.
    • ಮಹತ್ವ:- ಕಲೆ, ಸಂಗೀತ, ನೃತ್ಯ, ಕರಕುಶಲ ಕಲೆಗಳು ಮತ್ತು ದೇಶೀಯ ಪಾಕಪದ್ಧತಿಯ ಮೂಲಕ ಬಸ್ತಾರ್‌ನ ‘ಬುಡಕಟ್ಟು ಅಸ್ಮಿತೆ’ಯನ್ನು ಬಿಂಬಿಸುವ ಪ್ರಮುಖ ಸಾಂಸ್ಕೃತಿಕ ವೇದಿಕೆಯಾಗಿ ಇದು ಹೊರಹೊಮ್ಮಿದೆ.
  • ಭಾರತದ ಪ್ರಧಾನ ಮಂತ್ರಿಗಳ ಮಲೇಷ್ಯಾಗೆ ಭೇಟಿ | ಭಾರತದಲ್ಲಿ ಆಯುಷ್ (AYUSH) ವಲಯ | ಎರಿಟ್ರಿಯಾ

    ಭಾರತದ ಪ್ರಧಾನ ಮಂತ್ರಿಗಳ ಮಲೇಷ್ಯಾಗೆ ಭೇಟಿ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ಇಂಧನ, ಸುಧಾರಿತ ಉತ್ಪಾದನೆ ಹಾಗೂ ಅರೆವಾಹಕ(ಸೆಮಿಕಂಡಕ್ಟರ್) ಗಳಂತಹ ಉನ್ನತ ಆದ್ಯತೆಯ ವಲಯಗಳಲ್ಲಿ ತಮ್ಮ ಬಾಂಧವ್ಯವನ್ನು ವಿಸ್ತರಿಸಲು ಭಾರತ ಮತ್ತು ಮಲೇಷ್ಯಾ ಉಭಯ ದೇಶಗಳು ಬದ್ಧತೆಯನ್ನು ವ್ಯಕ್ತಪಡಿಸಿವೆ.

    ಈ ಸಭೆಯ ಪ್ರಮುಖ ಫಲಿತಾಂಶಗಳು:

    • ‘ಅಂತರರಾಷ್ಟ್ರೀಯ ದೊಡ್ಡ ಬೆಕ್ಕುಗಳ ಮೈತ್ರಿಕೂಟ’ದ (IBCA) ಚೌಕಟ್ಟು ಒಪ್ಪಂದವನ್ನು ಅಂತಿಮಗೊಳಿಸಲಾಯಿತು:- ಜೀವ ವೈವಿಧ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯೆಡೆಗಿನ ಪರಸ್ಪರ ಬದ್ಧತೆಯನ್ನು ಪ್ರತಿಬಿಂಬಿಸುವ ಈ ಒಪ್ಪಂದವನ್ನು ಅಂತಿಮಗೊಳಿಸಲಾಯಿತು.
    • ವ್ಯಾಪಾರ, ಹೂಡಿಕೆ ಮತ್ತು ಭವಿಷ್ಯದ ಸಹಯೋಗದ ಕುರಿತಾದ ಖಾಸಗಿ ವಲಯದ ದೃಷ್ಟಿಕೋನಗಳನ್ನು ಎತ್ತಿ ತೋರಿಸುವ ’10ನೇ ಮಲೇಷ್ಯಾ-ಭಾರತ ಸಿಇಒ ವೇದಿಕೆ’ಯ ವರದಿಯನ್ನು ಉಭಯ ದೇಶಗಳು ಸ್ವೀಕರಿಸಿದವು.

    ಭಾರತ ಮತ್ತು ಮಲೇಷ್ಯಾ ಸಂಬಂಧಗಳು:

    • 1957 ರಿಂದ ರಾಜತಾಂತ್ರಿಕ ಸಂಬಂಧಗಳು:- ಇದನ್ನು 2024 ರಲ್ಲಿ ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ‘ಯಾಗಿ (CSP) ಉನ್ನತೀಕರಿಸಲಾಯಿತು.
    • ಅಂತರರಾಷ್ಟ್ರೀಯ ಸಂಸ್ಥೆಗಳ ಸದಸ್ಯತ್ವ:- ಉಭಯ ದೇಶಗಳು ವಿಶ್ವಸಂಸ್ಥೆ, ಆಸಿಯಾನ್ (ASEAN- ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಮತ್ತು ಅಲಿಪ್ತ ಚಳವಳಿಯಂತಹ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳ ಸದಸ್ಯತ್ವವನ್ನು ಹೊಂದಿವೆ.
    • ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳು:- ಮಲೇಷ್ಯಾವು ಭಾರತದ 13 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದರೆ, ಜಾಗತಿಕ ಮಟ್ಟದಲ್ಲಿ ಮಲೇಷ್ಯಾದ 10 ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಭಾರತವು ಸ್ಥಾನ ಪಡೆದಿದೆ.
    • ‘ಹರಿಮಾವು ಶಕ್ತಿ’ ಸಮರಾಭ್ಯಾಸ:- ಭಾರತೀಯ ಸೇನೆ ಮತ್ತು ಮಲೇಷ್ಯಾ ಸೇನೆಗಳ ನಡುವಿನ ಪ್ರಾಥಮಿಕ ದ್ವಿಪಕ್ಷೀಯ ತರಬೇತಿ ಸಮರಾಭ್ಯಾಸವಾಗಿದೆ.
    • ಆಸಿಯಾನ್ ಕೇಂದ್ರಿಕೃತ:- ಆಸಿಯಾನ್ ಒಕ್ಕೂಟದೊಂದಿಗೆ ಭಾರತದ ವ್ಯಾಪಾರವನ್ನು ವಿಸ್ತರಿಸುವಲ್ಲಿ ಮಲೇಷ್ಯಾ ನಿರ್ಣಾಯಕ ಸ್ಥಾನವನ್ನು ಹೊಂದಿದೆ. ಇದು ಭಾರತದ ‘ಪೂರ್ವದೊಡನೆ ಸಕ್ರಿಯ ಸಹಭಾಗಿತ್ವ’ (ಆಕ್ಟ್ ಈಸ್ಟ್) ನೀತಿಯೊಂದಿಗೆ ಹೊಂದಾಣಿಕೆಯಾಗಿದ್ದು, ಮಲಕ್ಕಾ ಜಲಸಂಧಿ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಕಡಲ ಸಂಪರ್ಕವನ್ನು ವೃದ್ಧಿಸಲು ಹಾಗೂ ಆಸಿಯಾನ್‌ನ ‘ಇಂಡೋ-ಪೆಸಿಫಿಕ್ ದೃಷ್ಟಿಕೋನ’ (AOIP) ಮತ್ತು ‘ಇಂಡೋ-ಪೆಸಿಫಿಕ್ ಉಪಕ್ರಮ’ಗಳಿಗೆ (IPOI) ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  
    • ಪ್ರವಾಸೋದ್ಯಮ ಮತ್ತು ವಲಸಿಗರು:- ಮಲೇಷ್ಯಾದ ಪ್ರವಾಸೋದ್ಯಮ ವಲಯಕ್ಕೆ ಸಂಬಂಧಿಸಿದಂತೆ, ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಅಗ್ರ ಮೂಲ ರಾಷ್ಟ್ರಗಳಲ್ಲಿ ಭಾರತವು 5ನೇ ಸ್ಥಾನದಲ್ಲಿದೆ.
    • ಭಾರತೀಯ ಸಮುದಾಯ:- ವಿಶ್ವದಲ್ಲಿಯೇ 3ನೇ ಅತಿದೊಡ್ಡ ಭಾರತೀಯ ವಲಸಿಗರ (2.9 ದಶಲಕ್ಷ) ನೆಲೆಬೀಡಾಗಿ ಮಲೇಷ್ಯಾ ಗುರುತಿಸಿಕೊಂಡಿದೆ.
    • ಸಾಂಸ್ಕೃತಿಕ ಸಂಬಂಧಗಳು:- ಮಲೇಷ್ಯಾದ ಸಂಸ್ಕೃತಿಯ ವಿವಿಧ ಆಯಾಮಗಳಾದ ಭಾಷೆ, ಧರ್ಮ (ಹಿಂದೂ ಮತ್ತು ಬೌದ್ಧ ಧರ್ಮ), ವಾಸ್ತುಶಿಲ್ಪ, ಪಾಕಪದ್ಧತಿ ಹಾಗೂ ಹಬ್ಬ-ಹರಿದಿನಗಳಲ್ಲಿ ಭಾರತೀಯ ಪ್ರಭಾವವನ್ನು ಕಾಣಬಹುದಾಗಿದೆ.

    ಭಾರತದಲ್ಲಿ ಆಯುಷ್ (AYUSH) ವಲಯ

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಐರೋಪ್ಯ ಒಕ್ಕೂಟ (EU)ದೊಂದಿಗೆ ಭಾರತವು ಏರ್ಪಡಿಸಿಕೊಂಡಿರುವ ಹೊಸ ಮುಕ್ತ ವ್ಯಾಪಾರ ಒಪ್ಪಂದವು (FTA), ಭಾರತೀಯ ವೈದ್ಯರು ಮತ್ತು ಆಯುಷ್ ಉತ್ಪನ್ನಗಳಿಗೆ ಐರೋಪ್ಯ ಮಾರುಕಟ್ಟೆಯನ್ನು ಸುಲಭವಾಗಿ ಪ್ರವೇಶಿಸಲು ಮಾರ್ಗವನ್ನು ಸುಗಮಗೊಳಿಸಿದೆ.

    ಭಾರತದಲ್ಲಿ ಆಯುಷ್ ವಲಯ:

    • ಆಯುಷ್ (AYUSH) ಎಂಬುದು ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಂತಹ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ಒಳಗೊಂಡಿದೆ.

    ಆಯುಷ್ ವಲಯದ ಉತ್ತೇಜನಕ್ಕಾಗಿ ಪ್ರಮುಖ ಉಪಕ್ರಮಗಳು:

    • ರಾಷ್ಟ್ರೀಯ ಆಯುಷ್ ಅಭಿಯಾನ (NAM):- ಇದು ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಆಯುಷ್ ಅನ್ನು ಸಂಯೋಜಿಸುವ ಪ್ರಮುಖ ನೀತಿ ಸಾಧನವಾಗಿದ್ದು, ಇದನ್ನು ಈ ಕೆಳಗಿನವುಗಳ ಮೂಲಕ ಜಾರಿಗೊಳಿಸಲಾಗುತ್ತಿದೆ:
    • ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು:- ಅಖಿಲ ಭಾರತ ಆಯುರ್ವೇದ ಸಂಸ್ಥೆ (ನವದೆಹಲಿ), ರಾಷ್ಟ್ರೀಯ ಹೋಮಿಯೋಪತಿ ಸಂಸ್ಥೆ (ಕೋಲ್ಕತ್ತಾ) ಹಾಗೂ ಸಿದ್ಧ, ಯುನಾನಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಮೀಸಲಾದ ರಾಷ್ಟ್ರೀಯ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
    • ನಿಯಂತ್ರಕ ಮತ್ತು ಸಂಶೋಧನಾ ಸಂಸ್ಥೆಗಳು:- ಆಯುರ್ವೇದ ವಿಜ್ಞಾನಗಳ ಕೇಂದ್ರೀಯ ಸಂಶೋಧನಾ ಮಂಡಳಿ (CCRAS), ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಮತ್ತು ರಾಷ್ಟ್ರೀಯ ಹೋಮಿಯೋಪತಿ ಆಯೋಗಗಳು ಕಾರ್ಯನಿರ್ವಹಿಸುತ್ತಿವೆ.
    • ಔಷಧೀಯ ಸಸ್ಯಗಳ ಉತ್ತೇಜನ:- ಗುಣಮಟ್ಟದ ಕೃಷಿ, ಮೌಲ್ಯ ಸರಪಳಿಗಳು ಮತ್ತು ರಫ್ತುಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ‘ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ’ಯು (NMPB) 32 ರಾಜ್ಯ ಮಂಡಳಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. 
    • ಮಹತ್ವಾಕಾಂಕ್ಷಿ ಯೋಜನೆಗಳು:-
    1. ಆಯುರ್ಜ್ಞಾನ್ (AYURGYAN):- ಆಯುಷ್ ಶಿಕ್ಷಣ ಮತ್ತು ಸಾಮರ್ಥ್ಯ ವೃದ್ಧಿಯ ಉದ್ದೇಶವನ್ನು ಇದು ಹೊಂದಿದೆ. 

    2. ಆಯುರ್‌ಸ್ವಾಸ್ಥ್ಯ ಯೋಜನೆ:- ಆಯುಷ್ ಪದ್ಧತಿಗಳನ್ನು ಬಳಸಿಕೊಂಡು ಸಮುದಾಯ ಆರೋಗ್ಯ ಮತ್ತು ರೋಗನಿರೋಧಕ (ತಡೆಗಟ್ಟುವ) ಆರೈಕೆಯನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.

    ಎರಿಟ್ರಿಯಾ

    ಸುದ್ದಿಯಲ್ಲಿರುವ ಸ್ಥಳಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಇಥಿಯೋಪಿಯಾ ದೇಶವು ತನ್ನ ಭೂಪ್ರದೇಶದಿಂದ ಎರಿಟ್ರಿಯಾದ ಸೇನಾಪಡೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದೆ. ಇದು ‘ಹಾರ್ನ್ ಆಫ್ ಆಫ್ರಿಕಾ’ (ಆಫ್ರಿಕಾದ ಕೊಂಬು) ಪ್ರದೇಶದಲ್ಲಿ ಮರುಕಳಿಸುತ್ತಿರುವ ಉದ್ವಿಗ್ನತೆಯನ್ನು ಎತ್ತಿತೋರಿಸುತ್ತದೆ.

    ಎರಿಟ್ರಿಯಾ ದೇಶದ ಬಗ್ಗೆ:

    • ರಾಜಧಾನಿ:- ಅಸ್ಮಾರಾ (ಯುನೆಸ್ಕೋದ ವಿಶ್ವ ಪರಂಪರೆಯ ತಾಣ).
    • ಭೌಗೋಳಿಕ ನೆಲೆ:- ಇದು ‘ಹಾರ್ನ್ ಆಫ್ ಆಫ್ರಿಕಾ’ (ಈಶಾನ್ಯ ಆಫ್ರಿಕಾ) ಪ್ರದೇಶದಲ್ಲಿ ನೆಲೆಗೊಂಡಿದೆ. ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾವನ್ನು ಬೆಸೆಯುವ ನಿರ್ಣಾಯಕ ಭೌಗೋಳಿಕ-ಕಾರ್ಯತಂತ್ರದ ಸಂಚಾರ ಪಥದುದ್ದಕ್ಕೂ ಇದು ವ್ಯಾಪಿಸಿದೆ.
    • ಬಾಬ್-ಎಲ್-ಮಂದೇಬ್ ಜಲಸಂಧಿಯ ಪಶ್ಚಿಮ ಕರಾವಳಿಯ ಮೇಲೆ ಎರಿಟ್ರಿಯಾ ನಿಯಂತ್ರಣ:- ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಪ್ರಮುಖ ಜಾಗತಿಕ ಕಡಲ ಆಯಕಟ್ಟಿನ ಪ್ರದೇಶವಾಗಿದೆ.
    • ಭೌಗೋಳಿಕ ಲಕ್ಷಣಗಳು:- 
    • ಕೆಂಪು ಸಮುದ್ರದ ಕರಾವಳಿಯುದ್ದಕ್ಕೂ ಬಿಸಿ ಮರುಭೂಮಿ ಹವಾಮಾನವನ್ನು ಹೊಂದಿದೆ.
    • ಕೇಂದ್ರ ಪ್ರಸ್ಥಭೂಮಿ ಪ್ರದೇಶಗಳಲ್ಲಿ ಸಮಶೀತೋಷ್ಣ / ಮೆಡಿಟರೇನಿಯನ್ ಮಾದರಿಯ ಹವಾಮಾನವನ್ನು ಕಾಣಬಹುದು.
    • ಅಂತರರಾಷ್ಟ್ರೀಯ ಒಕ್ಕೂಟಗಳ ಸದಸ್ಯತ್ವ:- ಆಫ್ರಿಕಾದ ಒಕ್ಕೂಟ (AU) ಹಾಗೂ ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ಸಾಮಾನ್ಯ ಮಾರುಕಟ್ಟೆ (COMESA).
  • ಎಂ. ಗೋವಿಂದರಾವ್ ಸಮಿತಿ – ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ

    ಎಂ. ಗೋವಿಂದರಾವ್ ಸಮಿತಿ – ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ

    ಇದೀಗ ಸುದ್ದಿಯಲ್ಲಿದೆ:

    • ಪ್ರಖ್ಯಾತ ಅರ್ಥಶಾಸ್ತ್ರಜ್ಞ ಎಂ. ಗೋವಿಂದರಾವ್ ನೇತೃತ್ವದ ‘ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ’ಯು 2026 ರ ಜನವರಿ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
    • 2002 ರ ಐತಿಹಾಸಿಕ ‘ನಂಜುಂಡಪ್ಪ ಸಮಿತಿ’ ವರದಿಯ ಬಳಿಕ ರಾಜ್ಯದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಯು ಬಲವಾಗಿದ್ದರೂ, ಪ್ರಾದೇಶಿಕ ಅಸಮತೋಲನವು ಮತ್ತಷ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಪ್ರವೃತ್ತಿಯನ್ನು 2026 ರ ಈ ವರದಿಯು ಎತ್ತಿತೋರಿಸಿದೆ.

    ಈ ವರದಿಯ ಪ್ರಮುಖ ಅಂಶಗಳು ಮತ್ತು ವರ್ಗೀಕರಣ:

    ಸಮಿತಿಯು ರಾಜ್ಯದ ಎಲ್ಲಾ 236 ತಾಲ್ಲೂಕುಗಳನ್ನು ಮೌಲ್ಯಮಾಪನ ಮಾಡಿದ್ದು, ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಹಿಂದುಳಿದಿರುವಿಕೆ ಕೇಂದ್ರೀಕೃತವಾಗಿದೆ ಎಂಬುದನ್ನು ಕಂಡುಕೊಂಡಿದೆ.

    • ಅತ್ಯಂತ ಹಿಂದುಳಿದ (Most Backward) ತಾಲ್ಲೂಕುಗಳು:- 93 ತಾಲ್ಲೂಕುಗಳು (ಮುಖ್ಯವಾಗಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿವೆ).
    • ಹೆಚ್ಚು ಹಿಂದುಳಿದ (More Backward) ತಾಲ್ಲೂಕುಗಳು:- 36 ತಾಲ್ಲೂಕುಗಳು.
    • ಹಿಂದುಳಿದ ತಾಲ್ಲೂಕುಗಳು:- 43 ತಾಲ್ಲೂಕುಗಳು.
    • ಅಭಿವೃದ್ಧಿ ಹೊಂದಿದ ತಾಲ್ಲೂಕುಗಳು:- 64 ತಾಲ್ಲೂಕುಗಳು.
    • ಪ್ರಾದೇಶಿಕ ಕೇಂದ್ರೀಕರಣ:- ರಾಜ್ಯದ ಒಟ್ಟು ಹಿಂದುಳಿದ ತಾಲ್ಲೂಕುಗಳಲ್ಲಿ ಅಂದಾಜು ಶೇ 60 ರಷ್ಟು ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿವೆ.

    ಈ ವರದಿಯ ಪ್ರಮುಖ ಶಿಫಾರಸುಗಳು:

    ಕರ್ನಾಟಕವು ಪ್ರಾದೇಶಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಮಿತಿಯು ಪ್ರಮುಖ ರಚನಾತ್ಮಕ ಸುಧಾರಣೆಗಳನ್ನು ಪ್ರಸ್ತಾಪಿಸಿದೆ:

    • ಮಂಡಳಿಗಳ ರದ್ದತಿ:- ಕಳೆದ ಮೂರು ದಶಕಗಳಲ್ಲಿ ಮೂಲಸೌಕರ್ಯಗಳ ಮೇಲೆ ಯಾವುದೇ ಅರ್ಥಪೂರ್ಣ ಪ್ರಭಾವ ಬೀರುವಲ್ಲಿ ವಿಫಲವಾಗಿವೆ ಎಂದು ಉಲ್ಲೇಖಿಸಿ, ‘ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ’ ಹಾಗೂ ‘ಬಯಲುಸೀಮೆ ಅಭಿವೃದ್ಧಿ ಮಂಡಳಿ’ಯನ್ನು ರದ್ದುಗೊಳಿಸುವಂತೆ ಸಮಿತಿ ಶಿಫಾರಸು ಮಾಡಿದೆ.
    • ಕೆಕೆಆರ್‌ಡಿಬಿ (KKRDB) ಪುನರ್‌ರಚನೆ:- ಕಾರ್ಯಾಚರಣೆಯ ವೈಫಲ್ಯಗಳು ಮತ್ತು ತಾತ್ಕಾಲಿಕ ಯೋಜನೆಗಳ ಕಾರಣದಿಂದಾಗಿ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಯನ್ನು (KKRDB) ಸಂಪೂರ್ಣವಾಗಿ ಪುನರ್‌ರಚಿಸುವಂತೆ ಸಮಿತಿಯು ಕರೆ ನೀಡಿದೆ.
    • ಅನುದಾನ ಮೀಸಲಾತಿ:- 2026-27 ರಿಂದ 2030-31 ರವರೆಗಿನ ಅವಧಿಗೆ ಕೆಕೆಆರ್‌ಡಿಬಿಗೆ ₹29,009 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಒದಗಿಸುವಂತೆ ಶಿಫಾರಸು ಮಾಡಿದೆ.
    • ಶಿಕ್ಷಣ ಸುಧಾರಣೆ:- ಕಲಬುರಗಿ ವಿಭಾಗದಲ್ಲಿನ ತೀವ್ರ ಶಿಕ್ಷಕರ ಕೊರತೆಯನ್ನು ಗಮನಿಸಿರುವ ಸಮಿತಿಯು, ಕಡಿಮೆ ದಾಖಲಾತಿಯಿರುವ (25 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು) ಶಾಲೆಗಳನ್ನು ತರ್ಕಬದ್ಧಗೊಳಿಸಿ ವಿಲೀನಗೊಳಿಸುವಂತೆ ಸೂಚಿಸಿದೆ.
  • ಜಿಯೋ ಪಾರ್ಸಿ ಯೋಜನೆ | ಜಾಗತಿಕ ಶಿಕ್ಷಕ ಪ್ರಶಸ್ತಿ, 2026 | ಅಪ್ರಾಪ್ತೆಯ 30 ವಾರಗಳ ಗರ್ಭಧಾರಣೆಯ ಗರ್ಭಪಾತಕ್ಕೆ ಸರ್ವೋಚ್ಚ ನ್ಯಾಯಾಲಯದ ಅನುಮತಿ | ಹಕ್ಕಿ-ಪಿಕ್ಕಿ ಬುಡಕಟ್ಟು ಸಮುದಾಯ | ದೊಡ್ಡ ಕೆಂಪು ನೀರು ಹಕ್ಕಿ (ರಾಜಹಂಸ) | ಕುಡಗೋಲು ಕಣ ಕಾಯಿಲೆ (Sickle Cell Disease) | ಪರ್ವತ ಗೊರಿಲ್ಲಾಗಳು

    ಜಿಯೋ ಪಾರ್ಸಿ ಯೋಜನೆ

    ಸಾಮಾಜಿಕ ನ್ಯಾಯ

    ಇದೀಗ ಸುದ್ದಿಯಲ್ಲಿದೆ:

    • ‘ಜಿಯೋ ಪಾರ್ಸಿ’ ಯೋಜನೆಯು 490ಕ್ಕೂ ಹೆಚ್ಚು ಪಾರ್ಸಿ ಜನನಕ್ಕೆ ಅನುವು ಮಾಡಿಕೊಟ್ಟಿದೆ. ಮತ್ತು ಪಾರ್ಸಿ ದಂಪತಿಗಳಿಗೆ 35.05 ಕೋಟಿ ರೂ. ಆರ್ಥಿಕ ನೆರವನ್ನು ಒದಗಿಸಿದೆ.

    ಭಾರತದಲ್ಲಿ ಪಾರ್ಸಿ ಸಮುದಾಯ:

    • 2011ರ ಭಾರತದ ಜನಗಣತಿಯ ಪ್ರಕಾರ, ದೇಶದಲ್ಲಿ ಪಾರ್ಸಿ ಜನಸಂಖ್ಯೆಯು 57,264 ಆಗಿತ್ತು.
    • ಇದು 2001ರ ಜನಗಣತಿಯ ಅಂಕಿಅಂಶವಾದ 69,601ಕ್ಕೆ ಹೋಲಿಸಿದರೆ ಸರಿಸುಮಾರು ಶೇ. 22 ರಷ್ಟು ಗಣನೀಯ ಇಳಿಕೆಯನ್ನು ಸೂಚಿಸುತ್ತದೆ.

    ಜಿಯೋ ಪಾರ್ಸಿ ಯೋಜನೆಯ ಬಗ್ಗೆ:

    • ಜಾರಿಗೆ ಬಂದ ವರ್ಷ:- 2013-14
    • ಉದ್ದೇಶ:- ವೈಜ್ಞಾನಿಕ ವಿಧಾನ ಮತ್ತು ರಚನಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪಾರ್ಸಿ ಜನಸಂಖ್ಯೆಯ ಇಳಿಕೆಯ ಪ್ರವೃತ್ತಿಯನ್ನು ಹಿಮ್ಮುಖವಾಗಿಸುವುದು. 

    ಈ ಯೋಜನೆಯು ಮೂರು ಘಟಕಗಳು:

    • ವೈದ್ಯಕೀಯ ನೆರವು:- ಇದು ಬಂಜೆತನ ನಿವಾರಣಾ ಚಿಕಿತ್ಸೆಗಳಾದ ಐವಿಎಫ್ (IVF), ಐಸಿಎಸ್‌ಐ (ICSI), ಬಾಡಿಗೆ ತಾಯ್ತನ ಮತ್ತು ಗರ್ಭಧಾರಣೆಯ ನಂತರದ ಆರೈಕೆಗಾಗಿ ಆರ್ಥಿಕ ನೆರವನ್ನು ಒದಗಿಸುತ್ತದೆ.
    • ಜಾಗೃತಿ ಮತ್ತು ಸಮಾಲೋಚನೆ:- ಇದು ಫಲವತ್ತತೆಯ ಸಮಸ್ಯೆಗಳನ್ನು ಹೊಂದಿರುವ ದಂಪತಿಗಳಿಗೆ ಸಮಾಲೋಚನೆಯನ್ನು ಒದಗಿಸುತ್ತದೆ.
    • ಸಮುದಾಯದ ಆರೋಗ್ಯ:- ಇದು ಮಕ್ಕಳನ್ನು ಹೊಂದಿರುವ ಪಾರ್ಸಿ ದಂಪತಿಗಳಿಗೆ ಹಾಗೂ ಅವಲಂಬಿತ ಹಿರಿಯ ಸದಸ್ಯರಿಗೆ ಮಾಸಿಕ ಆರ್ಥಿಕ ಬೆಂಬಲವನ್ನು ನೀಡುತ್ತದೆ.

    ಜಾಗತಿಕ ಶಿಕ್ಷಕ ಪ್ರಶಸ್ತಿ, 2026

    ಇತರೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ಶಿಕ್ಷಕಿ ‘ರೂಬಲ್ ನಾಗಿ’ ಅವರು 2026ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದುಬೈನಲ್ಲಿ ನಡೆದ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಅವರು 1 ಮಿಲಿಯನ್ ಡಾಲರ್ ಮೊತ್ತದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

    ‘ಜಾಗತಿಕ ಶಿಕ್ಷಕ ಪ್ರಶಸ್ತಿ’ಯ ಬಗ್ಗೆ:

    • ಇದನ್ನು 2014ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದನ್ನು ಸಾಮಾನ್ಯವಾಗಿ “ಬೋಧನಾ ಕ್ಷೇತ್ರದ ನೊಬೆಲ್ ಪ್ರಶಸ್ತಿ” ಎಂದು ಕರೆಯಲಾಗುತ್ತದೆ.
    • ಪ್ರಸ್ತುತಪಡಿಸುವವರು:- ‘ಜೆಮ್ಸ್ ಎಜುಕೇಶನ್’ 
    • ಆಯೋಜಕರು:- ಯುನೆಸ್ಕೋ ಸಹಯೋಗದೊಂದಿಗೆ ‘ವರ್ಕಿ ಫೌಂಡೇಶನ್’.
    • ಧ್ಯೇಯ:- ಬೋಧನೆ ಮತ್ತು ಸಾಮಾಜಿಕ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಅಪ್ರತಿಮ ಶಿಕ್ಷಕರನ್ನು ಇದು ಗುರುತಿಸುತ್ತದೆ.

    ನಿಮಗೆ ತಿಳಿದಿದೆಯೇ?

    • ‘ರೂಬಲ್ ನಾಗಿ’ ಅವರು ಭಾರತದ ಪ್ರವರ್ತಕ ಶಿಕ್ಷಕಿಯಾಗಿದ್ದು, ಸಮಾಜದ ಅತ್ಯಂತ ಅಂಚಿನಲ್ಲಿರುವ ಸಮುದಾಯಗಳಿಗೆ ಕಲಿಕೆಯನ್ನು ಲಭ್ಯವಾಗುವಂತೆ ಮಾಡಲು ತಮ್ಮನ್ನು ತಾವು ಮುಡಿಪಾಗಿಟ್ಟಿದ್ದಾರೆ.
    • ಕಳೆದ ಎರಡು ದಶಕಗಳಲ್ಲಿ, ಅವರು 100ಕ್ಕೂ ಹೆಚ್ಚು ಸೌಲಭ್ಯ ವಂಚಿತ ಸಮುದಾಯಗಳು ಮತ್ತು ಹಳ್ಳಿಗಳಲ್ಲಿ 800ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

    ಅಪ್ರಾಪ್ತೆಯ 30 ವಾರಗಳ ಗರ್ಭಧಾರಣೆಯ ಗರ್ಭಪಾತಕ್ಕೆ ಸರ್ವೋಚ್ಚ ನ್ಯಾಯಾಲಯದ ಅನುಮತಿ

    ರಾಜಕೀಯ ವ್ಯವಸ್ಥೆ ಮತ್ತು ಆಡಳಿತ; ಸಾಮಾಜಿಕ ನ್ಯಾಯ

    ಇದೀಗ ಸುದ್ದಿಯಲ್ಲಿದೆ:

    • ಯಾವುದೇ ಮಹಿಳೆಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಪೂರ್ಣಾವಧಿಯವರೆಗೆ ಗರ್ಭ ಧರಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಒತ್ತಿಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಅಪ್ರಾಪ್ತೆಯೊಬ್ಬರ 30 ವಾರಗಳ ಗರ್ಭವನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡಿದೆ.

    ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯಿದೆ, 2021:

    • 20 ವಾರಗಳವರೆಗೆ ಗರ್ಭಪಾತಕ್ಕೆ ಅನುಮತಿ:- ಒಬ್ಬರು ನೋಂದಾಯಿತ ವೈದ್ಯಕೀಯ ವೃತ್ತಿಪರರ ಅಭಿಪ್ರಾಯದ ಮೇರೆಗೆ ಈ ಕಾಯಿದೆ ಅನುಮತಿ ನೀಡುತ್ತದೆ.
    • 20 ರಿಂದ 24 ವಾರಗಳ ನಡುವೆ ನಿರ್ದಿಷ್ಟ ವರ್ಗದ ಮಹಿಳೆಯರಿಗೆ ಗರ್ಭಪಾತಕ್ಕೆ ಅನುಮತಿ:- ಅಪ್ರಾಪ್ತರು, ಅತ್ಯಾಚಾರ ಸಂತ್ರಸ್ತರು ಮತ್ತು ವಿಶೇಷ ಚೇತನ ಮಹಿಳೆಯರು ಸೇರಿದಂತೆ, ಇಬ್ಬರು ವೈದ್ಯರ ಅಭಿಪ್ರಾಯದ ಮೇರೆಗೆ ಗರ್ಭಪಾತಕ್ಕೆ ಅವಕಾಶವಿರುತ್ತದೆ.
    • ಭ್ರೂಣದಲ್ಲಿ ಗಂಭೀರವಾದ ಅಸಹಜತೆಗಳು ಕಂಡುಬಂದ ಪ್ರಕರಣಗಳಲ್ಲಿ ಮಾತ್ರ 24 ವಾರಗಳ ನಂತರ ಗರ್ಭಪಾತಕ್ಕೆ ಅನುಮತಿ:- ವೈದ್ಯಕೀಯ ಮಂಡಳಿಯು ದೃಢಪಡಿಸಿದಂತೆ ಅನುಮತಿ ನೀಡಲಾಗುತ್ತದೆ.

    ಸರ್ವೋಚ್ಚ ನ್ಯಾಯಾಲಯದ ಪ್ರಮುಖ ಅವಲೋಕನಗಳು:

    • ‘ಸಂತಾನೋತ್ಪತ್ತಿಯ ಸ್ವಾಯತ್ತತೆ’- ಸಂವಿಧಾನದ 21ನೇ ವಿಧಿ:- ಈ ವಿಧಿಯ ಅಡಿಯಲ್ಲಿ ಬರುವ ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.
    • ಅಪ್ರಾಪ್ತೆಯ ಗರ್ಭಧಾರಣೆಯು “ಮೇಲ್ನೋಟಕ್ಕೆ ಕಾನೂನುಬಾಹಿರ”:- ಅಪ್ರಾಪ್ತೆಯು ಲೈಂಗಿಕ ಸಂಬಂಧಗಳಿಗೆ ಸಮ್ಮತಿ ನೀಡುವ ಕಾನೂನುಬದ್ಧ ಸಾಮರ್ಥ್ಯವನ್ನು ಹೊಂದಿರುವುದಿಲ್ಲವಾದ್ದರಿಂದ, ಇದು “ಮೇಲ್ನೋಟಕ್ಕೆ ಕಾನೂನುಬಾಹಿರ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಹಕ್ಕಿ-ಪಿಕ್ಕಿ ಬುಡಕಟ್ಟು ಸಮುದಾಯ

    ಸಮಾಜ

    ಇದೀಗ ಸುದ್ದಿಯಲ್ಲಿದೆ:

    • ಚಾಡ್ ದೇಶದಲ್ಲಿ ಜೈಲು ಶಿಕ್ಷೆಗೆ ಗುರಿಯಾಗುವ ಅಪಾಯದಲ್ಲಿದ್ದ ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಕ್ಕಿ-ಪಿಕ್ಕಿ ಸಮುದಾಯದ ಸದಸ್ಯರಿಗೆ ಭಾರತೀಯ ರಾಯಭಾರ ಕಚೇರಿಯು ನೆರವು ನೀಡಿದೆ.

    ಹಕ್ಕಿ-ಪಿಕ್ಕಿ ಬುಡಕಟ್ಟು ಸಮುದಾಯದ ಬಗ್ಗೆ:

    • ಇವರು ಪಶ್ಚಿಮ ಮತ್ತು ದಕ್ಷಿಣ ಭಾರತದ ಹಲವಾರು ರಾಜ್ಯಗಳಲ್ಲಿ, ವಿಶೇಷವಾಗಿ ಅರಣ್ಯ ಪ್ರದೇಶಗಳ ಬಳಿ ವಾಸಿಸುವ ಬುಡಕಟ್ಟು ಸಮುದಾಯದವರಾಗಿದ್ದಾರೆ.
    • ಅರೆ-ಅಲೆಮಾರಿ ಬುಡಕಟ್ಟು ಸಮುದಾಯದವರು:- ಹಕ್ಕಿ-ಪಿಕ್ಕಿಗಳು (ಕನ್ನಡದಲ್ಲಿ ‘ಹಕ್ಕಿ’ ಎಂದರೆ ಪಕ್ಷಿ ಮತ್ತು ‘ಪಿಕ್ಕಿ’ ಎಂದರೆ ಹಿಡಿಯುವವರು) ಸಾಂಪ್ರದಾಯಿಕವಾಗಿ ಪಕ್ಷಿ ಹಿಡಿಯುವವರು ಮತ್ತು ಬೇಟೆಗಾರರಾಗಿದ್ದಾರೆ.
    • ಹಕ್ಕಿ-ಪಿಕ್ಕಿ ಜನರು ಮೂಲತಃ ಗುಜರಾತ ಮತ್ತು ರಾಜಸ್ಥಾನದ ಗಡಿ ಜಿಲ್ಲೆಗಳಿಂದ ಬಂದವರು ಎಂದು ನಂಬಲಾಗಿದೆ.
    • ಹಿಂದೂ ಸಂಪ್ರದಾಯ ಅನುಸರಿಸುತ್ತಾರೆ:- ಕರ್ನಾಟಕದಲ್ಲಿರುವ ಹಕ್ಕಿ-ಪಿಕ್ಕಿಗಳು ಎಲ್ಲಾ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ.
    • ಮಾಂಸಾಹಾರಿಗಳಾಗಿದ್ದಾರೆ:- ಕುಟುಂಬದ ಹಿರಿಯ ಮಗನನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ, ಅವನು ತನ್ನ ಕೂದಲನ್ನು ಕತ್ತರಿಸಬಾರದು ಎಂಬ ವಾಡಿಕೆ ಇದೆ.
    • ಸೋದರಸಂಬಂಧಿ ವಿವಾಹಗಳಿಗೆ ಆದ್ಯತೆ:- ಇವರ  ಸಮಾಜವು ಮಾತೃಪ್ರಧಾನವಾಗಿದ್ದು, ಇಲ್ಲಿ ವರನು ವಧುವಿನ ಕುಟುಂಬಕ್ಕೆ ವಧುದಕ್ಷಿಣೆಯನ್ನು ನೀಡುತ್ತಾನೆ. ಏಕಪತ್ನಿತ್ವವು ಇಲ್ಲಿನ ರೂಢಿಯಾಗಿದೆ.

    ದೊಡ್ಡ ಕೆಂಪು ನೀರು ಹಕ್ಕಿ (ರಾಜಹಂಸ)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶದ ಕಾಕಿನಾಡ ಕೊಲ್ಲಿಯ ಕೋರಿಂಗಾ ವನ್ಯಜೀವಿ ಧಾಮದಲ್ಲಿರುವ ಹೋಪ್ ದ್ವೀಪದಲ್ಲಿ ಇದೇ ಮೊದಲ ಬಾರಿಗೆ ಸುಮಾರು 70 ರಾಜಹಂಸ (ಗ್ರೇಟರ್ ಫ್ಲೆಮಿಂಗೊ) ಪಕ್ಷಿಗಳು  ಕಂಡುಬಂದಿವೆ.

    ದೊಡ್ಡ ಕೆಂಪು ನೀರು ಹಕ್ಕಿ (ಗ್ರೇಟರ್ ಫ್ಲೆಮಿಂಗೊ)ಗಳ ಬಗ್ಗೆ: 

    • ವೈಜ್ಞಾನಿಕ ಹೆಸರು:- ಫೀನಿಕ್ಯಾಪ್ಟರಸ್ ರೋಸಿಯಸ್
    • ದೊಡ್ಡ ಕೆಂಪು ನೀರು ಹಕ್ಕಿ ಕುಟುಂಬದಲ್ಲಿಯೇ ಅತಿದೊಡ್ಡ ಪ್ರಭೇದವಾಗಿದೆ:- ಇದು ಸರಾಸರಿ 110–150 ಸೆಂ.ಮೀ. ಎತ್ತರವಿದ್ದು, 2–4 ಕೆ.ಜಿ. ತೂಕ ವಿರುತ್ತದೆ ಮತ್ತು ಅತ್ಯಂತ ವ್ಯಾಪಕವಾಗಿ ಹರಡಿರುವ ಪ್ರಭೇದವಾಗಿದೆ.
    • ಹಂಚಿಕೆ:- ಉತ್ತರ (ಕರಾವಳಿ) ಮತ್ತು ಸಹಾರಾ ಮರುಭೂಮಿಯ ದಕ್ಷಿಣ ಭಾಗದಲ್ಲಿರುವ ಆಫ್ರಿಕಾ ಪ್ರದೇಶ, ಭಾರತೀಯ ಉಪಖಂಡ (ಹಿಮಾಲಯದ ದಕ್ಷಿಣಕ್ಕೆ), ಮಧ್ಯಪ್ರಾಚ್ಯ, ಪರ್ಷಿಯನ್ ಕೊಲ್ಲಿ, ಏಡನ್ ಕೊಲ್ಲಿ, ಕೆಂಪು ಸಮುದ್ರ ಮತ್ತು ದಕ್ಷಿಣ ಯುರೋಪಿನ ಮೆಡಿಟರೇನಿಯನ್ ದೇಶಗಳಲ್ಲಿ ಕಂಡುಬರುತ್ತವೆ.
    • ದೊಡ್ಡ ಕೆಂಪು ನೀರು ಹಕ್ಕಿಗಳು ಸಾಮಾನ್ಯವಾಗಿ ಇಸ್ರೇಲ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬರುತ್ತವೆ.
    • ಸರಾಸರಿ ಜೀವಿತಾವಧಿ:- 30–40 ವರ್ಷಗಳು
    • ಆಹಾರ:- ಸಣ್ಣ ಮೀನುಗಳು ಮತ್ತು ಇತರೆ ಜಲಚರ ಜೀವಿಗಳು.
    • ಅಪಾಯಗಳು:- ಬ್ಯಾಕ್ಟೀರಿಯಾ, ವಿಷಕಾರಿ ವಸ್ತುಗಳು, ಆವಾಸಸ್ಥಾನದ ನಾಶ ಮತ್ತು ನೀರಿನ ಪೂರೈಕೆಯಲ್ಲಿನ ಮಾಲಿನ್ಯವಾಗಿದೆ. ಈ ಮಾಲಿನ್ಯವು ಸಾಮಾನ್ಯವಾಗಿ ಉತ್ಪಾದನಾ ಕಂಪನಿಗಳಿಂದ ಹರಿದುಬರುವ ತ್ಯಾಜ್ಯದಿಂದ ಉಂಟಾಗುತ್ತದೆ.
    • ಗುಜರಾತಿನ ರಾಜ್ಯ ಪಕ್ಷಿ:- ಗ್ರೇಟರ್ ಫ್ಲೆಮಿಂಗೊ ಗುಜರಾತಿನ ರಾಜ್ಯ ಪಕ್ಷಿಯಾಗಿದೆ.

    ನೀರು ಹಕ್ಕಿಯ ವಿಧಗಳು ಮತ್ತು IUCN ಕೆಂಪು ಪಟ್ಟಿಯಲ್ಲಿ ಸ್ಥಿತಿಗತಿ:

    • ದೊಡ್ಡ ಕೆಂಪು ನೀರು ಹಕ್ಕಿ/ರಾಜಹಂಸ (ಗ್ರೇಟರ್ ಫ್ಲೆಮಿಂಗೊ) – ಕನಿಷ್ಠ ಕಾಳಜಿ (LC)
    • ಚಿಲಿಯ ನೀರು ಹಕ್ಕಿ (ಫ್ಲೆಮಿಂಗೊ) – ಅಪಾಯದ ಅಂಚಿನಲ್ಲಿರುವ (NT)
    • ಅಮೆರಿಕಾದ ನೀರು ಹಕ್ಕಿ (ಫ್ಲೆಮಿಂಗೊ) – ಕನಿಷ್ಠ ಕಾಳಜಿ (LC) 
    • ಸಣ್ಣ ಕೆಂಪು ನೀರು ಹಕ್ಕಿ (ಲೆಸ್ಸರ್ ಫ್ಲೆಮಿಂಗೊ) – ಅಪಾಯದ ಅಂಚಿನಲ್ಲಿರುವ (NT)
    • ಆಂಡೀಸ್ ಪರ್ವತ ಪ್ರದೇಶದ ನೀರು ಹಕ್ಕಿ (ಫ್ಲೆಮಿಂಗೊ) – ದುರ್ಬಲ (VU)
    • ಜೇಮ್ಸ್ ನೀರು ಹಕ್ಕಿ (ಫ್ಲೆಮಿಂಗೊ) – ಅಪಾಯದ ಅಂಚಿನಲ್ಲಿರುವ (NT)

    ಕುಡಗೋಲು ಕಣ ಕಾಯಿಲೆ (Sickle Cell Disease)

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (U.S. FDA), ಸಿಕ್ಕಲ್ ಸೆಲ್ ಕಾಯಿಲೆಗೆ (SCD) ಚಿಕಿತ್ಸೆ ನೀಡಲು ಅಪರೂಪದ ಕಾಯಿಲೆಗಳ ಔಷಧಿಗಳಿಗೆ ನೀಡುವ ವಿಶೇಷ (ODD – ‘ಆರ್ಫನ್ ಡ್ರಗ್ ಡೆಸಿಗ್ನೇಷನ್’) ಮಾನ್ಯತೆಯನ್ನು ನೀಡಿದೆ.

    ODD – ಆರ್ಫನ್ ಡ್ರಗ್ ಡೆಸಿಗ್ನೇಷನ್ (ಅಪರೂಪದ ಕಾಯಿಲೆಗಳ ಔಷಧಿಗಳಿಗೆ ವಿಶೇಷ ಮಾನ್ಯತೆ) ಬಗ್ಗೆ:

    • ಔಷಧೀಯ ವಸ್ತುಗಳಾಗಿವೆ:- ‘ಆರ್ಫನ್ ಡ್ರಗ್‌’ಗಳು (Orphan drugs) ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ.
    • ಒಮ್ಮೆ ಈ ಮಾನ್ಯತೆ ದೊರೆತ ನಂತರ, ಈ ಔಷಧಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಹಲವಾರು ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ. ಮಾರುಕಟ್ಟೆ ಏಕಸ್ವಾಮ್ಯ, ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚಗಳಿಗೆ ತೆರಿಗೆ ವಿನಾಯಿತಿಗಳು ಮತ್ತು ನಿಯಂತ್ರಕ ಅರ್ಜಿಗಳಿಗೆ ಶುಲ್ಕ ಮನ್ನಾ ಇದರಲ್ಲಿ ಸೇರಿವೆ.

    ಕುಡಗೋಲು ಕಣ ರಕ್ತಹೀನತೆ (ಸಿಕ್ಕಲ್ ಸೆಲ್ ಅನಮಿಯಾ)ಯ ಬಗ್ಗೆ:

    • ಸ್ವಭಾವಿಕವಾಗಿ ಅನುವಂಶಿಕ ರೋಗವಾಗಿದೆ:- ಇದು ವಂಶಪಾರಂಪರ್ಯವಾಗಿ ಬಂದಿರುವ ರಕ್ತ ಸಂಬಂಧಿತ ಕಾಯಿಲೆಗಳ ಒಂದು ಗುಂಪಾಗಿದೆ.
    • ಕಾರಣ:- 11ನೇ ವರ್ಣತಂತುವಿನಲ್ಲಿ (Chromosome) ಕಂಡುಬರುವ ಹಿಮೋಗ್ಲೋಬಿನ್-ಬೀಟಾ ವಂಶವಾಹಿಯಲ್ಲಿನ ರೂಪಾಂತರದಿಂದ ಇದು ಉಂಟಾಗುತ್ತದೆ. ಈ ರೂಪಾಂತರವು ದೋಷಪೂರಿತ ಹಿಮೋಗ್ಲೋಬಿನ್ (Hb) ಉಂಟಾಗಲು ಕಾರಣವಾಗುತ್ತದೆ.
    • ಲಕ್ಷಣಗಳು:- 
    • ಆಮ್ಲಜನಕವನ್ನು ಬಿಡುಗಡೆ ಮಾಡಿದ ನಂತರ, ಈ ದೋಷಪೂರಿತ ಹಿಮೋಗ್ಲೋಬಿನ್ ಅಣುಗಳು ಒಗ್ಗೂಡಿ ಕೋಲಿನಂತಹ ರಚನೆಗಳನ್ನು ರೂಪಿಸುತ್ತವೆ.
    • ಕೆಂಪು ರಕ್ತ ಕಣಗಳು ಗಡುಸಾಗುತ್ತವೆ ಮತ್ತು ಕುಡಗೋಲಿನ ಆಕಾರವನ್ನು ಪಡೆಯುತ್ತವೆ.
    • ಹರಡುವಿಕೆ:- ಇದು ಸಾಮಾನ್ಯವಾಗಿ ಮಗುವಿನ ಜನನದ ಸಮಯದಲ್ಲಿ ಪೋಷಕರಿಂದ ಮಗುವಿಗೆ ವರ್ಗಾವಣೆಯಾಗುತ್ತದೆ. ಅಂದರೆ, ತಂದೆ ಮತ್ತು ತಾಯಿ ಇಬ್ಬರೂ ಕುಡಗೋಲು ಕಣ (ಸಿಕ್ಕಲ್ ಸೆಲ್) ಕಾಯಿಲೆಯ ವಾಹಕರಾಗಿರಬಹುದು.
    • ರೋಗಲಕ್ಷಣಗಳು:- 
      • ಕುಡಗೋಲು ಕಣ ರಕ್ತಹೀನತೆಯೊಂದಿಗೆ ಜನಿಸಿದ ಮಕ್ಕಳು ಹಲವು ತಿಂಗಳುಗಳವರೆಗೆ ರೋಗಲಕ್ಷಣಗಳನ್ನು ತೋರಿಸದಿರಬಹುದು.
    • ವಿಪರೀತ ಆಯಾಸ, ಕಿರಿಕಿರಿ, ಕೈ ಮತ್ತು ಕಾಲುಗಳ ನೋವಿನಿಂದ ಕೂಡಿದ ಊತ ಮತ್ತು ಕಾಮಾಲೆ.
    • ಪರಿಣಾಮಗಳು:- 
    • ಆಕಾರ ಕಳೆದುಕೊಂಡ ಈ ಕಣಗಳು ನಮ್ಯತೆಯನ್ನು ಹೊಂದಿರುವುದಿಲ್ಲ ಮತ್ತು ಸಣ್ಣ ರಕ್ತನಾಳಗಳನ್ನು ನಿರ್ಬಂಧಿಸಬಹುದು. ಇದರಿಂದ ರಕ್ತದ ಹರಿವಿಗೆ ಅಡ್ಡಿಯಾಗುತ್ತದೆ.
    • ಕುಡಗೋಲು ಕಣಗಳು ಅಕಾಲಿಕವಾಗಿ ಸಾಯುತ್ತವೆ. ಇದರಿಂದ ಕೆಂಪು ರಕ್ತ ಕಣಗಳ ದೀರ್ಘಕಾಲದ ಕೊರತೆ (ರಕ್ತಹೀನತೆ) ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಕುಡಗೋಲು ಕಣ (ಸಿಕ್ಕಲ್ ಸೆಲ್) ರಕ್ತಹೀನತೆ’ ಎಂದು ಕರೆಯಲಾಗುತ್ತದೆ.
    • ಚಿಕಿತ್ಸೆ:- ಔಷಧಗಳು, ರಕ್ತ ವರ್ಗಾವಣೆ ಮತ್ತು ಅಪರೂಪದ ಸಂದರ್ಭಗಳಲ್ಲಿ ಮೂಳೆ ಮಜ್ಜೆಯ ಕಸಿ ಮಾಡಲಾಗುತ್ತದೆ.

    ಹಿಮೋಗ್ಲೋಬಿನ್ (Hb) ಎನ್ನುವುದು ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಪ್ರೋಟೀನ್ ಆಗಿದ್ದು, ಇದು ದೇಹದಲ್ಲಿ ಆಮ್ಲಜನಕವನ್ನು ಸಾಗಿಸುತ್ತದೆ ಮತ್ತು ರಕ್ತಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ.

    ಪರ್ವತ ಗೊರಿಲ್ಲಾಗಳು

    ಪರಿಸರ,ಸುದ್ದಿಯಲ್ಲಿರುವ ಪ್ರಭೇದಗಳು

    ಸಂದರ್ಭ:

    • ಇತ್ತೀಚಿಗೆ, ಪೂರ್ವ ‘ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ’ದಲ್ಲಿ (ಡಿಆರ್‌ಸಿ) ಅಪರೂಪದ ಅವಳಿ ಪರ್ವತ ಗೊರಿಲ್ಲಾಗಳು ಜನಿಸಿವೆ.

    ಪರ್ವತ ಗೊರಿಲ್ಲಾಗಳು (ಗೊರಿಲ್ಲಾ ಬೆರಿಂಗೆ ಬೆರಿಂಗೆ): 

    • ಪೂರ್ವದ ಗೊರಿಲ್ಲಾದ ಒಂದು ಉಪ-ಪ್ರಭೇದವಾಗಿದೆ:- ಪರ್ವತ ಗೊರಿಲ್ಲಾಗಳು ಜಾಗತಿಕವಾಗಿ ಕಂಡುಬರುವ ಎರಡು ಗೊರಿಲ್ಲಾ ಪ್ರಭೇದಗಳು ಪೈಕಿ ಒಂದು (ಪೂರ್ವದ ಮತ್ತು ಪಶ್ಚಿಮದ ಗೊರಿಲ್ಲಾಗಳು).
    • ಕಾಡಿನಲ್ಲಿ, ಗೊರಿಲ್ಲಾಗಳು 40 ವರ್ಷಗಳಿಗೂ ಹೆಚ್ಚು ಕಾಲ ಬದುಕಬಲ್ಲವು. 
    • ವಿಶೇಷವೆಂದರೆ, ಮಾನವರು ಈ ಜೀವಿಗಳೊಂದಿಗೆ ಸುಮಾರು ಶೇ. 98 ರಷ್ಟು ಡಿಎನ್‌ಎ (DNA) ಯನ್ನು ಹಂಚಿಕೊಳ್ಳುತ್ತಾರೆ.
    • ಆವಾಸಸ್ಥಾನ:- ಇವು ಸುಮಾರು 8,000 ದಿಂದ 13,000 ಅಡಿ ಎತ್ತರದ ಪ್ರದೇಶಗಳಲ್ಲಿ ವಾಸಿಸುತ್ತವೆ. ತಂಪಾದ ಪರ್ವತ ಹವಾಮಾನಕ್ಕೆ ಹೊಂದಿಕೊಳ್ಳಲು ಇತರೆ ದೈತ್ಯ ವಾನರಗಳಿಗಿಂತ “ದಪ್ಪವಾದ ತುಪ್ಪಳ”ವನ್ನು ಇವು ಹೊಂದಿವೆ.
    • ಹಂಚಿಕೆ:- ಇವು ಸಾಮಾನ್ಯವಾಗಿ ಆಫ್ರಿಕಾದ ರುವಾಂಡಾ, ಉಗಾಂಡಾ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಕಂಡುಬರುತ್ತವೆ.
    • ಆಹಾರ:- ಮುಖ್ಯವಾಗಿ ಎಲೆಗಳು, ಚಿಗುರುಗಳು ಮತ್ತು ಕಾಂಡಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಖನಿಜಗಳ ಮೂಲವಾಗಿ ಕೀಟಗಳು, ಬೇರುಗಳು, ಮರದ ತೊಗಟೆ ಮತ್ತು ಕೊಳೆಯುತ್ತಿರುವ ಮರಗಳನ್ನು ಇವು ಸೇವಿಸುತ್ತವೆ.
    • IUCN ಕೆಂಪು ಪಟ್ಟಿ ಸ್ಥಿತಿಗತಿ:- ಅಳಿವಿನಂಚಿನಲ್ಲಿರುವ (EN)
    • ಗಣತಿ:- ಕಾಡಿನಲ್ಲಿ ಇವುಗಳ ಅಂದಾಜು ಗಣತಿ ಸುಮಾರು 1,063 ರಷ್ಟಿದೆ.
  • ಎಸ್. ಸದಾಗೋಪನ್ ಸಮಿತಿ

    ಎಸ್. ಸದಾಗೋಪನ್ ಸಮಿತಿ

    ಇದೀಗ ಸುದ್ದಿಯಲ್ಲಿದೆ:

    • 2026 ರ ಫೆಬ್ರವರಿಯಲ್ಲಿ, ಎಂಜಿನಿಯರಿಂಗ್ ಪ್ರವೇಶಾತಿ ಮತ್ತು ಉದ್ಯೋಗಾರ್ಹತೆಯಲ್ಲಿ ಕಂಡುಬಂದಿರುವ ಆತಂಕಕಾರಿ ಕುಸಿತವನ್ನು ಪರಿಹರಿಸಲು ಕರ್ನಾಟಕ ಉನ್ನತ ಶಿಕ್ಷಣ ಇಲಾಖೆಯು 10 ಸದಸ್ಯರ ತಜ್ಞರ ಸಮಿತಿಯನ್ನು ಅಧಿಕೃತವಾಗಿ ರಚಿಸಿದೆ.
    • ಐಐಐಟಿ-ಬೆಂಗಳೂರಿನ ಸಂಸ್ಥಾಪಕ ನಿರ್ದೇಶಕರಾದ ಪ್ರೊ. ಎಸ್. ಸದಾಗೋಪನ್ ಅವರು ಈ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾರೆ.

    ಸುಧಾರಣೆಯ ಪ್ರಮುಖ ಉದ್ದೇಶಗಳು:

    • ಪಠ್ಯಕ್ರಮದ ನವೀಕರಣ:- ಮೂಲಭೂತ ಎಂಜಿನಿಯರಿಂಗ್ ಕೋರ್ಸ್‌ಗಳನ್ನು (ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್) ಪ್ರಸ್ತುತ ಕೈಗಾರಿಕಾ ಮತ್ತು ಉದ್ಯೋಗದ ಅಗತ್ಯಗಳಿಗೆ ತಕ್ಕಂತೆ ಸರಿಹೊಂದಿಸುವುದು.
    • ಪ್ರವೇಶಾತಿ ಪರಿಶೀಲನೆ:- ಕಂಪ್ಯೂಟರ್ ವಿಜ್ಞಾನ ಮತ್ತು ಸಂಬಂಧಿತ ವಿಭಾಗಗಳಲ್ಲಿನ ಹೆಚ್ಚುವರಿ ಸೀಟುಗಳ ಲಭ್ಯತೆಯನ್ನು ಮೌಲ್ಯಮಾಪನ ಮಾಡುವುದು; (ಗಮನಿಸಿ: 2025-26 ನೇ ಶೈಕ್ಷಣಿಕ ವರ್ಷದಲ್ಲಿ ಈ ವಿಭಾಗಗಳಲ್ಲಿ 9,000 ಕ್ಕೂ ಹೆಚ್ಚು ಸೀಟುಗಳು ಖಾಲಿ ಉಳಿದಿದ್ದವು).
    • ಬೇಡಿಕೆ ಹೆಚ್ಚಿಸುವುದು:- ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮುಚ್ಚುವ ಹಂತ ತಲುಪಿರುವ ‘ಕೋರ್ ಎಂಜಿನಿಯರಿಂಗ್’ ವಿಭಾಗಗಳತ್ತ ವಿದ್ಯಾರ್ಥಿಗಳನ್ನು ಮರಳಿ ಆಕರ್ಷಿಸಲು ಸೂಕ್ತ ಕಾರ್ಯತಂತ್ರಗಳನ್ನು ಗುರುತಿಸುವುದು.
    • ಉದ್ಯೋಗಾರ್ಹತೆಯ ಕೊರತೆ ನಿವಾರಣೆ:- ರಾಜ್ಯದಲ್ಲಿ ಕೇವಲ 17% ರಷ್ಟು ಎಂಜಿನಿಯರಿಂಗ್ ಪದವೀಧರರು ಮಾತ್ರ ಯಶಸ್ವಿಯಾಗಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಈ ಅಂತರವನ್ನು ನಿವಾರಿಸಲು ಕ್ರಮಕೈಗೊಳ್ಳುವುದು.

    ಈ ಸಮಿತಿಯ ಸದಸ್ಯರು: 

    • ಈ 10 ಸದಸ್ಯರ ಸಮಿತಿಯು ಐಐಎಸ್‌ಸಿ (IISc) ಮತ್ತು ಯುವಿಸಿಇಯ (UVCE) ಉನ್ನತ ಮಟ್ಟದ ಶೈಕ್ಷಣಿಕ ತಜ್ಞರ ಮಿಶ್ರಣವನ್ನು ಒಳಗೊಂಡಿದೆ. ಇದರ ಜೊತೆಗೆ ವಿಟಿಯು (VTU) ಪ್ರತಿನಿಧಿಗಳು, ಕೈಗಾರಿಕಾ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳು ಸಹ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
  • ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (FNTA) | ವಿಝಿಂಜಂ ಬಂದರು | ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) | ವಿಪತ್ತು ಸಂತ್ರಸ್ತರ ಗುರುತಿಸುವಿಕೆಗಾಗಿ NDMAಯ ಮೊದಲ ಮಾರ್ಗಸೂಚಿಗಳು | ಸಿಎಆರ್ ಟಿ-ಕೋಶ ಚಿಕಿತ್ಸೆ (CAR T-cell therapy) | ಅಗ್ನಿ-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ

    ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (FNTA)

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಪೂರ್ವ ನಾಗಾಲ್ಯಾಂಡ್‌ನ ಜನತಾ ಸಂಸ್ಥೆ (ENPO), ನಾಗಾಲ್ಯಾಂಡ್ ಸರ್ಕಾರ ಮತ್ತು ಭಾರತ ಸರ್ಕಾರ ಇತ್ತೀಚೆಗೆ ಐತಿಹಾಸಿಕ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಗಡಿನಾಡು ನಾಗಾಲ್ಯಾಂಡ್‌ಗಾಗಿ ಪ್ರಾದೇಶಿಕ ಪ್ರಾಧಿಕಾರವನ್ನು (FNTA) ಸ್ಥಾಪಿಸಲಾಗುವುದು.

    ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (FNTA)ದ ಬಗ್ಗೆ:

    • ವ್ಯಾಪ್ತಿ:- ಇದರಲ್ಲಿ 6 ಜಿಲ್ಲೆಗಳು ಒಳಗೊಂಡಿವೆ – ಟ್ಯುಯೆನ್ಸಾಂಗ್, ಮೋನ್, ಕಿಫಿರೆ, ಲಾಂಗ್ಲೆಂಗ್, ನೋಕ್ಲಾಕ್ ಮತ್ತು ಶಾಮಟೋರ್. ಇಲ್ಲಿ 8 ಪ್ರಮುಖ ನಾಗಾ ಬುಡಕಟ್ಟುಗಳು ನೆಲೆಸಿವೆ.
    • ಉದ್ದೇಶ:- ಆಡಳಿತಾತ್ಮಕ ಮತ್ತು ಅಭಿವೃದ್ಧಿ ಸ್ವಾಯತ್ತತೆಯನ್ನು ಹೆಚ್ಚಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಈ ಒಪ್ಪಂದವು ಅವಕಾಶ ಕಲ್ಪಿಸುತ್ತದೆ.
    • ಕಿರು-ಸಚಿವಾಲಯ:- ಇದು ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿರುತ್ತದೆ.
    • ಮಹತ್ವ:- ಐತಿಹಾಸಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ಆರ್ಥಿಕ ಸ್ವಾಯತ್ತತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
    • ಗಮನಿಸಿ:- ಆದಾಗ್ಯೂ, ಈ ವ್ಯವಸ್ಥೆಯು ಸಂವಿಧಾನದ ವಿಧಿ 371(A) ಅಡಿಯಲ್ಲಿ ನಾಗಾ ಸಾಂಪ್ರದಾಯಿಕ ಆಚರಣೆಗಳು, ಭೂ ಹಕ್ಕುಗಳು ಮತ್ತು ಸಾಮಾಜಿಕ ಸಂಸ್ಥೆಗಳಿಗೆ ಒದಗಿಸಲಾದ ರಕ್ಷಣೆಗಳನ್ನು ದುರ್ಬಲಗೊಳಿಸುವುದಿಲ್ಲ.

    ವಿಝಿಂಜಂ ಬಂದರು

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಸರಕು ಪೆಟ್ಟಿಗೆಗಳ (ಕಂಟೈನರ್) ನಿರ್ವಹಣೆಯಲ್ಲಿ ಕೇರಳದ ವಿಝಿಂಜಂ ಅಂತರರಾಷ್ಟ್ರೀಯ ಬಂದರು ಜಾಗತಿಕವಾಗಿ 83ನೇ ಸ್ಥಾನಕ್ಕೇರಿದೆ. ಈ ಸಾಧನೆಯು ಭಾರತದ ಅತ್ಯಂತ ಹೊಸ ಆಳಸಮುದ್ರದ ಸರಕು ವರ್ಗಾವಣೆ ಕೇಂದ್ರದ ತ್ವರಿತ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.

    ವಿಝಿಂಜಂ  ಬಂದರಿನ ಬಗ್ಗೆ:

    • ಸ್ಥಳ:- ತಿರುವನಂತಪುರಂ, (ಕೇರಳ)

    ಪ್ರಮುಖ ವೈಶಿಷ್ಟ್ಯಗಳು:

    • ಇದು ಭಾರತದ ಅತ್ಯಂತ ಆಳವಾದ ಬಂದರುಗಳಲ್ಲಿ ಒಂದಾಗಿದೆ.
    • ಇದು ಬೃಹತ್ ಸರಕು ಪೆಟ್ಟಿಗೆಗಳ ಹಡಗು (ULCVs- ಅಲ್ಟ್ರಾ ಲಾರ್ಜ್ ಕಂಟೈನರ್ ವೆಸೆಲ್ )ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
    • ಇದನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ಹಸ್ತಾಂತರ (DBFOT) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

    ಮಹತ್ವ:

    • ಪರಿಣಾಮಕಾರಿ ಸರಕು ಸಾಗಣೆ.
    • ಸರಕು ವರ್ಗಾವಣೆ (ಟ್ರಾನ್ಸ್‌ಶಿಪ್‌ಮೆಂಟ್‌)ಗಾಗಿ ಕೊಲಂಬೊ (ಶ್ರೀಲಂಕಾ), ಸಿಂಗಾಪುರ ಮತ್ತು ಯುಎಇಯಂತಹ ವಿದೇಶಿ ಬಂದರುಗಳ ಮೇಲಿನ ಭಾರತದ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ.
    • ಭಾರತದ ಕಡಲ ಭದ್ರತೆಯನ್ನು ಬಲಪಡಿಸುತ್ತದೆ.

    ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) 2030ರಲ್ಲಿ ಕಕ್ಷೆಯಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ. ಇದು ಬಾಹ್ಯಾಕಾಶದಲ್ಲಿ ಮಾನವನ ಸುಮಾರು ಮೂರು ದಶಕಗಳ ನಿರಂತರ ಉಪಸ್ಥಿತಿಯ ಅಂತ್ಯವನ್ನು ಸೂಚಿಸುತ್ತದೆ.

    ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದ ಬಗ್ಗೆ:

    • ಇದು ಭೂ ಮೇಲ್ಮೈಯಿಂದ 400 ಕಿ.ಮೀ ಎತ್ತರದಲ್ಲಿರುವ ‘ಭೂಮಿಗೆ ಸನಿಹದ ಕಕ್ಷೆ’ಯಲ್ಲಿ (LEO) ಸುತ್ತುತ್ತಿರುವ, ವಾಸಯೋಗ್ಯವಾದ ಮತ್ತು ವಿವಿಧ ಘಟಕಗಳ ಜೋಡಣೆಯ ಒಂದು ‘ಸೂಕ್ಷ್ಮ ಗುರುತ್ವ ಪ್ರಯೋಗಾಲಯ‘ವಾಗಿದೆ.
    • ಇದನ್ನು 1998ರಲ್ಲಿ ಉಡಾವಣೆ ಮಾಡಲಾಯಿತು ಮತ್ತು 2000ನೇ ಇಸವಿಯಿಂದ ಇಲ್ಲಿ ಮಾನವರು ನಿರಂತರವಾಗಿ ನೆಲೆಸಿದ್ದಾರೆ. ಇದು ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ನಡೆದ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಲ್ಲಿ ಒಂದಾಗಿದೆ.
    • 5 ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳು ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತದೆ:- ನಾಸಾ (ಅಮೆರಿಕ), ರಾಸ್‌ಕಾಸ್ಮೋಸ್ (ರಷ್ಯಾ), ಇಎಸ್‌ಎ (ಯುರೋಪ್), ಜಾಕ್ಸಾ (ಜಪಾನ್) ಮತ್ತು ಸಿಎಸ್‌ಎ (ಕೆನಡಾ).

    ಪ್ರಮುಖ ವೈಶಿಷ್ಟ್ಯಗಳು:

    • ಬಾಹ್ಯಾಕಾಶದಲ್ಲಿರುವ ಮಾನವ ನಿರ್ಮಿತ ಅತ್ಯಂತ ದೊಡ್ಡ ರಚನೆಯಾಗಿದೆ:- ಇದರ ದ್ರವ್ಯರಾಶಿ 4,00,000 ಕೆ.ಜಿ.ಗೂ ಅಧಿಕವಿದ್ದು, ಸುಮಾರು 109 ಮೀಟರ್ ಉದ್ದವಿದೆ.
    • ಹತ್ತಾರು ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳ ಮೂಲಕ ಇದಕ್ಕೆ ವಿದ್ಯುತ್ ಪೂರೈಕೆಯಾಗುತ್ತದೆ.
    • ಮಹತ್ವ:- ದೀರ್ಘಕಾಲದ ಬಾಹ್ಯಾಕಾಶ ವಿಕಿರಣ ಮತ್ತು ಸೂಕ್ಷ್ಮ ಗುರುತ್ವವು ಮಾನವನ ದೇಹದ ಮೇಲೆ ಬೀರುವ ಪರಿಣಾಮಗಳನ್ನು ಅಧ್ಯಯನ ಮಾಡುವಲ್ಲಿ ISS ನಿರ್ಣಾಯಕ ಪಾತ್ರ ವಹಿಸುತ್ತದೆ. ವಿಜ್ಞಾನಿಗಳಿಗೆ ಮೂಳೆ ಸವೆತ, ಸ್ನಾಯು ಕ್ಷೀಣತೆ ಮತ್ತು ರೋಗನಿರೋಧಕ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

    ವಿಪತ್ತು ಸಂತ್ರಸ್ತರ ಗುರುತಿಸುವಿಕೆಗಾಗಿ NDMAಯ ಮೊದಲ ಮಾರ್ಗಸೂಚಿಗಳು

    ವಿಪತ್ತು ನಿರ್ವಹಣೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಸಾಮೂಹಿಕ ಸಾವು ಸಂಭವಿಸುವ ಘಟನೆಗಳ’ ಸಂದರ್ಭದಲ್ಲಿ ಸಂತ್ರಸ್ತರನ್ನು ಗುರುತಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDMA) ದೇಶದ ಮೊಟ್ಟಮೊದಲ ‘ಪ್ರಮಾಣಿತ ಕಾರ್ಯಾಚರಣಾ ವಿಧಾನ’ವನ್ನು (SOP) ಮಾರ್ಗಸೂಚಿಗಳೊಂದಿಗೆ ಬಿಡುಗಡೆ ಮಾಡಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ ಬಗ್ಗೆ:

    • ಮುಖ್ಯಸ್ಥರು:- ಭಾರತದ ಪ್ರಧಾನ ಮಂತ್ರಿಗಳು.
    • ಇದು ಭಾರತದಲ್ಲಿ ವಿಪತ್ತು ನಿರ್ವಹಣೆಗಾಗಿ ಇರುವ ಅತ್ಯುನ್ನತ ಸಂಸ್ಥೆಯಾಗಿದೆ.
    • ಇದನ್ನು ವಿಪತ್ತು ನಿರ್ವಹಣಾ ಕಾಯ್ದೆ, 2005ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
    • ಉದ್ದೇಶ:- ವಿಪತ್ತು ನಿರ್ವಹಣೆಗಾಗಿ ನೀತಿಗಳು, ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವುದು ಹಾಗೂ ತಡೆಗಟ್ಟುವಿಕೆ, ಉಪಶಮನ, ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ನೀತಿಯನ್ನು ಉತ್ತೇಜಿಸುವುದು ಇದರ ಜವಾಬ್ದಾರಿಯಾಗಿದೆ.

    ಸಿಎಆರ್ ಟಿ-ಕೋಶ ಚಿಕಿತ್ಸೆ (CAR T-cell therapy)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಐಐಟಿ ಬಾಂಬೆಯ ಸಂಶೋಧಕರು ‘ಸಿಎಆರ್ ಟಿ-ಕೋಶ’ (CAR T-cell) ಮತ್ತು ಇತರೆ ‘ಅಡಾಪ್ಟಿವ್ ಟಿ-ಕೋಶ ವರ್ಗಾವಣೆ’ (Adoptive T-cell Transfer – ACT) ಚಿಕಿತ್ಸೆಗಳಲ್ಲಿನ ನಿರ್ಣಾಯಕ ಸವಾಲೊಂದನ್ನು ಪರಿಹರಿಸಿದ್ದಾರೆ.

    ಟಿ-ಕೋಶಗಳ ಬಗ್ಗೆ:

    • ಇವು ದೇಹದ ಮುಂಚೂಣಿ ರಕ್ಷಕರಂತೆ ಕಾರ್ಯನಿರ್ವಹಿಸುವ ಬಿಳಿ ರಕ್ತಕಣಗಳಾಗಿವೆ.
    • ಇವು ಸೋಂಕುಗಳು ಅಥವಾ ಕ್ಯಾನ್ಸರ್‌ನಂತಹ ಅಸಹಜ ಕೋಶಗಳನ್ನು ಪತ್ತೆಹಚ್ಚಿ ನಾಶಪಡಿಸುತ್ತವೆ ಹಾಗೂ ಪ್ರತಿಕ್ರಿಯಿಸಲು ಇತರ ರೋಗನಿರೋಧಕ ಕೋಶಗಳನ್ನು ಸಂಯೋಜಿಸುತ್ತವೆ. ಈ ಕಾರಣದಿಂದಾಗಿ, ರೋಗನಿರೋಧಕ ಚಿಕಿತ್ಸೆಯಲ್ಲಿ ಇವು ನಿರ್ಣಾಯಕ ಪಾತ್ರ ವಹಿಸುತ್ತವೆ.

    ಸಿಎಆರ್ ಟಿ-ಕೋಶ ಚಿಕಿತ್ಸೆಯ ಬಗ್ಗೆ:

    • ಸುಧಾರಿತ ಚಿಕಿತ್ಸೆ:- ಇದು ಕ್ಯಾನ್ಸರ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ರೋಗಿಯ ಟಿ-ಕೋಶಗಳನ್ನು ಮಾರ್ಪಡಿಸುವ ಒಂದು ಸುಧಾರಿತ ಚಿಕಿತ್ಸೆಯಾಗಿದೆ.
    • ಕಾರ್ಯ ವಿಧಾನ:- 
    1. ವೈದ್ಯರು ಮೊದಲು ರೋಗಿಯ ರಕ್ತದಿಂದ ಟಿ-ಕೋಶಗಳನ್ನು ಸಂಗ್ರಹಿಸುತ್ತಾರೆ ಮತ್ತು ನಂತರ ಅವುಗಳಿಗೆ ‘ಕೈಮೆರಿಕ್ ಆಂಟಿಜೆನ್ ರಿಸೆಪ್ಟರ್‌ಗಳು’ (CARs – Chimeric Antigen Receptors) ಎಂದು ಕರೆಯಲ್ಪಡುವ ವಿಶೇಷ ಗ್ರಾಹಕಗಳನ್ನು ನೀಡುವ ವಂಶವಾಹಿಯನ್ನು ಸೇರಿಸುತ್ತಾರೆ.
    2. ಈ ಗ್ರಾಹಕಗಳು ಜಿಪಿಎಸ್ (GPS) ನಂತೆ ಕಾರ್ಯನಿರ್ವಹಿಸುತ್ತವೆ; ಅಂದರೆ, ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲು ಮತ್ತು ಗುರಿಯಾಗಿಸಲು ಇವು ಟಿ-ಕೋಶಗಳಿಗೆ ನಿರ್ದೇಶನ ನೀಡುತ್ತವೆ.
    3. ಹೀಗೆ ತಾಂತ್ರಿಕವಾಗಿ ಮಾರ್ಪಡಿಸಿದ ನಂತರ, ಈ ಟಿ-ಕೋಶಗಳನ್ನು ಪ್ರಯೋಗಾಲಯದಲ್ಲಿ ವಿಸ್ತರಿಸಲಾಗುತ್ತದೆ (ಸಂಖ್ಯಾಭಿವೃದ್ಧಿ ಮಾಡಲಾಗುತ್ತದೆ) ಮತ್ತು ನಂತರ ರೋಗಿಯ ದೇಹಕ್ಕೆ ಮರು-ಸೇರ್ಪಡೆ ಮಾಡಲಾಗುತ್ತದೆ.

    ನೆಕ್ಸ್‌ಕಾರ್19 (NexCAR 19):- 

    • ಎಂಬುದು ‘ಇಮ್ಯುನೊ ಎಸಿಟಿ’ (Immune ACT) ಸಂಸ್ಥೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಹ್ಯೂಮನೈಸ್ಡ್  ಸಿಎಆರ್-ಟಿ ಚಿಕಿತ್ಸೆಯಾಗಿದೆ.

    ಪ್ರಯೋಜನಗಳು:

    • ನಿಖರ ಗುರಿ:- ಸಿಎಆರ್-ಟಿ ಕೋಶ ಚಿಕಿತ್ಸೆಯು ನಿರ್ದಿಷ್ಟವಾಗಿ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಆರೋಗ್ಯಕರ ಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ‘ಕೀಮೋಥೆರಪಿ’ಗೆ (ರಾಸಾಯನಿಕ ಚಿಕಿತ್ಸೆ) ಹೋಲಿಸಿದರೆ ಅಡ್ಡಪರಿಣಾಮಗಳು ಕಡಿಮೆಯಾಗಿರುತ್ತವೆ.
    • ವೈಯಕ್ತೀಕರಿಸಿದ ಚಿಕಿತ್ಸೆ:- ಇದು ರೋಗಿಯ ಸ್ವಂತ ಟಿ-ಕೋಶಗಳನ್ನು ಬಳಸುತ್ತದೆ ಮತ್ತು ಅವರ ವಿಶಿಷ್ಟ ಕ್ಯಾನ್ಸರ್ ಅನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾಗಿರುವುದರಿಂದ, ಚಿಕಿತ್ಸೆಯ ಪರಿಣಾಮಕಾರಿತ್ವ ಹೆಚ್ಚುತ್ತದೆ.
    • ದೀರ್ಘಕಾಲೀನ ಪರಿಣಾಮಗಳು:- ಮಾರ್ಪಡಿಸಿದ ಟಿ-ಕೋಶಗಳು ದೇಹದಲ್ಲಿ ಉಳಿಯಬಲ್ಲವು. ಈ ಮೂಲಕ ಕ್ಯಾನ್ಸರ್ ಮರುಕಳಿಸದಂತೆ ದೀರ್ಘಕಾಲದ ರಕ್ಷಣೆ ಒದಗಿಸುತ್ತವೆ.
    • ಕಡಿಮೆ ಆಸ್ಪತ್ರೆ ವಾಸ ಮತ್ತು ವೆಚ್ಚಗಳು:- ಆಸ್ಪತ್ರೆಯಲ್ಲಿ ಉಳಿಯುವ ಅವಧಿ ಕಡಿಮೆ ಮತ್ತು ಕಡಿಮೆ ಬೆಂಬಲ ಚಿಕಿತ್ಸೆ ಅಗತ್ಯವಿರುವುದರಿಂದ, ಇದು ಸಂಭಾವ್ಯ ವೆಚ್ಚದ  ಉಳಿತಾಯಕ್ಕೆ ಕಾರಣವಾಗುತ್ತದೆ.
    • ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಪ್ರಗತಿ:- ಇದು ರೋಗನಿರೋಧಕ ಚಿಕಿತ್ಸೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ ಹಾಗೂ ಚಿಕಿತ್ಸಾ ಆಯ್ಕೆಗಳು ಮತ್ತು ಸಂಶೋಧನಾ ಸಾಧ್ಯತೆಗಳನ್ನು ವಿಸ್ತರಿಸುತ್ತದೆ.
    • ತಾಂತ್ರಿಕ ವಿಕಸನ:- ಸಿಎಆರ್ ರಚನೆಗಳ ನಿರಂತರ ಅಭಿವೃದ್ಧಿಯು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ಗುರಿಯಾಗಿಸಲು ಮತ್ತು ಸಂಯೋಜಿತ ಚಿಕಿತ್ಸೆಗಳಿಗೆ ಅವಕಾಶ ನೀಡುತ್ತದೆ.
    • ಕೈಗೆಟುಕುವ ದರ:- ಭಾರತದಲ್ಲಿ ನೆಕ್ಸ್‌ಕಾರ್19 (NexCAR 19) ನಂತಹ ಸ್ವದೇಶಿ ಚಿಕಿತ್ಸೆಗಳು ಸಿಎಆರ್-ಟಿ ಚಿಕಿತ್ಸೆಯನ್ನು ಹೆಚ್ಚು ಲಭ್ಯವಾಗುವಂತೆ ಮತ್ತು ಕಡಿಮೆ ವೆಚ್ಚದಾಯಕವಾಗಿಸುತ್ತವೆ.

    ಅಗ್ನಿ-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಒಡಿಶಾದ ಚಂಡಿಪುರದಿಂದ 3,000 ಕಿ.ಮೀ.ಗೂ ಅಧಿಕ ದಾಳಿ ವ್ಯಾಪ್ತಿಯನ್ನು ಹೊಂದಿರುವ, ಅಣ್ವಸ್ತ್ರ ಸಾಮರ್ಥ್ಯದ ‘ಅಗ್ನಿ-3 ಬ್ಯಾಲಿಸ್ಟಿಕ್ ಕ್ಷಿಪಣಿ’ಯನ್ನು ಭಾರತವು ಯಶಸ್ವಿಯಾಗಿ ಪರೀಕ್ಷಿಸಿದೆ.

    ಅಗ್ನಿ-3 ಬ್ಯಾಲಿಸ್ಟಿಕ್ ಕ್ಷಿಪಣಿಯ ಬಗ್ಗೆ:

    • ಅಭಿವೃದ್ಧಿಪಡಿಸಿದವರು:- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO).
    • ದಾಳಿ ವ್ಯಾಪ್ತಿ:- 3,000 ಕಿ.ಮೀ.
    • ವಿಶಿಷ್ಟತೆ:- ಇದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಸಿಡಿತಲೆಗಳೆರಡನ್ನೂ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

    ಅಗ್ನಿ ಕ್ಷಿಪಣಿ ಸರಣಿಯ ಬಗ್ಗೆ:

    • ಇದು ಡಿಆರ್‌ಡಿಒ (DRDO) ಅಭಿವೃದ್ಧಿಪಡಿಸಿದ ಸ್ವದೇಶಿ ನಿರ್ಮಿತ ದೀರ್ಘ-ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯಾಗಿದೆ.
    • ಅಗ್ನಿ-I ರಿಂದ ಅಗ್ನಿ-IV:- 1990ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು 2000ರ ದಶಕದ ಮಧ್ಯಭಾಗದಲ್ಲಿ ನಿಯೋಜಿಸಲಾಯಿತು.
    • ವ್ಯಾಪ್ತಿ:- 700–3,500 ಕಿ.ಮೀ. 
    • ಸಿಡಿತಲೆ (ಪೇಲೋಡ್):- 12–40 kt, 
    • ಅಗ್ನಿ-V:-
    • 3 ಹಂತದ ಘನ ಇಂಧನ ವ್ಯವಸ್ಥೆಯನ್ನು ಹೊಂದಿದೆ.
    • ‘ಎಂಐಆರ್‌ವಿ’ (MIRV – ಒಂದೇ ಕ್ಷಿಪಣಿಯಲ್ಲಿ ಹಲವು ಸಿಡಿತಲೆಗಳನ್ನು ಅಳವಡಿಸಿ ಬೇರೆ ಬೇರೆ ಗುರಿಗಳನ್ನು ತಲುಪುವ ತಂತ್ರಜ್ಞಾನ) ಸಾಮರ್ಥ್ಯವನ್ನು ಒಳಗೊಂಡಿದೆ. 
    • ದಾಳಿ ವ್ಯಾಪ್ತಿ:- 5,000 ಕಿ.ಮೀ.
    • 5,500 ಕಿ.ಮೀ.ಗೂ ಅಧಿಕ ದೂರ ಕ್ರಮಿಸಬಲ್ಲ ಸಂಭಾವ್ಯ ಖಂಡಾಂತರ ಕ್ಷಿಪಣಿಯಾಗಿದೆ.
    • ಅಗ್ನಿ-ಪಿ (Agni-P):- 
    • 2 ಹಂತದ ಘನ ಇಂಧನ ವ್ಯವಸ್ಥೆಯನ್ನು ಹೊಂದಿದ್ದು, 11,000 ಕೆ.ಜಿ. ತೂಕವನ್ನು ಹೊಂದಿದೆ. 
    • ದಾಳಿ ವ್ಯಾಪ್ತಿ:- 1,000 ದಿಂದ 2,000 ಕಿ.ಮೀ. 
    • ಇದು ಸುಧಾರಿತ ನೋದನ ಮತ್ತು ಪಥ ನಿರ್ದೇಶನ (Propulsion and Navigation) ವ್ಯವಸ್ಥೆಯನ್ನು ಒಳಗೊಂಡಿದೆ.
    • ಇದು ತೀವ್ರ ಸ್ಫೋಟಕ, ಥರ್ಮೋಬ್ಯಾರಿಕ್ ಅಥವಾ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
  • ನಮ್ಮ 112 ಸಹಾಯವಾಣಿ

    ನಮ್ಮ 112 ಸಹಾಯವಾಣಿ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನ ತುರ್ತು ಸ್ಪಂದನಾ ವ್ಯವಸ್ಥೆಯಾದ ‘ನಮ್ಮ 112’ರ ಬಳಕೆಯಲ್ಲಿ ಭಾರಿ ಏರಿಕೆ ಹಾಗೂ ತಾಂತ್ರಿಕ ಸುಧಾರಣೆಗಳು ಕಂಡುಬಂದಿದ್ದು, ಇದರ ಜೊತೆಗೆ ಅಪರಾಧ ಪ್ರಕರಣಗಳಲ್ಲಿ 9% ರಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿದೆ.

    ‘ನಮ್ಮ 112’ ಸಹಾಯವಾಣಿ ವ್ಯವಸ್ಥೆಯ ಬಗ್ಗೆ:

    • ಇದು ಬೆಂಗಳೂರಿನ ಏಕೀಕೃತ ತುರ್ತು ಸಹಾಯವಾಣಿಯಾಗಿದ್ದು, ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಒಂದೇ ಸಂಪರ್ಕ ಕೇಂದ್ರದಡಿ ಸಂಯೋಜಿಸುತ್ತದೆ.
    • ನಿರ್ವಹಣೆ:- ‘ಬೆಂಗಳೂರು ನಗರ ಪೊಲೀಸ್’ ಇಲಾಖೆ.
    • ಪ್ರಮುಖ ಉದ್ದೇಶ:- ಜೀವನ್ಮರಣದ ಹೋರಾಟದ ನಿರ್ಣಾಯಕ ‘ಸುವರ್ಣ ಅವಧಿ’ಯಲ್ಲಿ (golden hours) ತ್ವರಿತ ನೆರವು ಒದಗಿಸುವುದು.

    ‘ನಮ್ಮ 112’ ಸಹಾಯವಾಣಿಯ ಪ್ರಮುಖ ಸೇವೆಗಳು ಮತ್ತು ವೈಶಿಷ್ಟ್ಯಗಳು:

    • ಏಕೀಕೃತ ಬೆಂಬಲ:- ಇದು ಸಾಂಪ್ರದಾಯಿಕ ಸಹಾಯವಾಣಿಗಳಾದ 100 (ಪೊಲೀಸ್), 101 (ಅಗ್ನಿಶಾಮಕ) ಮತ್ತು 108 (ಆಂಬ್ಯುಲೆನ್ಸ್) ಸಂಖ್ಯೆಗಳನ್ನು ಬದಲಾಯಿಸಿ ಒಂದೇ ಏಕೀಕೃತ ಸಂಖ್ಯೆಯಡಿ ಕಾರ್ಯನಿರ್ವಹಿಸುತ್ತದೆ.
    • ಮಾನಸಿಕ ಆರೋಗ್ಯ ಬೆಂಬಲ:- ಮನೋವೈದ್ಯಕೀಯ ತುರ್ತುಸ್ಥಿತಿಗಳನ್ನು ‘ನಮ್ಮ 112’ ವ್ಯವಸ್ಥೆಯ ಮೂಲಕ ನೇರವಾಗಿ ನಿಭಾಯಿಸಲು, ಇತ್ತೀಚೆಗೆ ಇದನ್ನು ‘ಟೆಲಿ ಮಾನಸ್’ (14416) ಜೊತೆಗೆ ಸಂಯೋಜಿಸಲಾಗಿದೆ.
    • ತ್ವರಿತ ಸ್ಪಂದನೆ:- ನಗರ ಪ್ರದೇಶಗಳಲ್ಲಿ ‘ಹೊಯ್ಸಳ’ ಗಸ್ತು ತಂಡಗಳು ಸಾಮಾನ್ಯವಾಗಿ 5 ರಿಂದ 10 ನಿಮಿಷಗಳಲ್ಲಿ ದೂರುದಾರರನ್ನು ತಲುಪುವ ಮೂಲಕ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತವೆ.
    • ಗೌಪ್ಯತೆ ಮತ್ತು ಅನಾಮಧೇಯತೆ:- ಕರೆ ಮಾಡುವವರು ಮಾತನಾಡುವಾಗ “ದಯವಿಟ್ಟು ನನ್ನ ಮಾಹಿತಿಯನ್ನು ಅನಾಮಧೇಯವಾಗಿಡಿ” ಎಂದು ವಿನಂತಿಸುವ ಮೂಲಕ ತಮ್ಮ ಗುರುತನ್ನು ಗೌಪ್ಯವಾಗಿಡಬಹುದು.
    • ವಾಟ್ಸ್ಆ್ಯಪ್ ಸಂಯೋಜನೆ:- ನಾಗರಿಕರು 9480801000 ಸಂಖ್ಯೆಗೆ ವಾಟ್ಸ್ಆ್ಯಪ್ ಮಾಡುವ ಮೂಲಕವೂ ಈ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.
    • ಬಹುಭಾಷಾ ಬೆಂಬಲ:- ನಗರದ ವೈವಿಧ್ಯಮಯ ನಿವಾಸಿಗಳಿಗೆ ತಮ್ಮ ಆದ್ಯತೆಯ ಭಾಷೆಯಲ್ಲಿ ಸಂವಹನ ನಡೆಸಲು ಅನುಕೂಲವಾಗುವಂತೆ, ಈ ವ್ಯವಸ್ಥೆಯನ್ನು ಬಹುಭಾಷಾ ವೈಶಿಷ್ಟ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ.