ವರ್ಗ: State Current Affairs Kannada

  • ರಾಜ್ಯದ ವಿಪತ್ತು ನಿರ್ವಹಣೆಯಲ್ಲಿ ಅಗತ್ಯ ಮಟ್ಟದ ಸಿದ್ಧತೆಯ ಕೊರತೆಯಿದೆ ಎಂದ CAG ವರದಿ

    ರಾಜ್ಯದ ವಿಪತ್ತು ನಿರ್ವಹಣೆಯಲ್ಲಿ ಅಗತ್ಯ ಮಟ್ಟದ ಸಿದ್ಧತೆಯ ಕೊರತೆಯಿದೆ ಎಂದ CAG ವರದಿ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರ (CAG) ವರದಿಯು ಕರ್ನಾಟಕದ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿನ ದುರ್ಬಲತೆಗಳು ಹಾಗೂ ಅಸಮರ್ಪಕ ಸಿದ್ಧತೆಗಳನ್ನು ಎತ್ತಿ ತೋರಿಸಿದೆ.

    ಸಿಎಜಿ ವರದಿಯಲ್ಲಿರುವ ಪ್ರಮುಖ ಅಂಶಗಳು:

    • ಈ ವರದಿಯು 2017-18 ರಿಂದ 2022-23 ರವರೆಗಿನ ಅವಧಿಯಲ್ಲಿ ವಿಪತ್ತುಗಳ ನಿರ್ವಹಣೆ ಮತ್ತು ಅಪಾಯ ತಗ್ಗಿಸುವಿಕೆಯಲ್ಲಿನ ಪ್ರಯತ್ನಗಳನ್ನು ವಿಶ್ಲೇಷಿಸಿದೆ.
    • ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (KSDMA) 2008 ರಲ್ಲಿ ಸ್ಥಾಪನೆಯಾಗಿದ್ದರೂ, ‘ರಾಜ್ಯ ವಿಪತ್ತು ನಿರ್ವಹಣಾ ನೀತಿ, 2020’ ಅನ್ನು 12 ವರ್ಷಗಳ ವಿಳಂಬದ ನಂತರ ಮಾತ್ರ ಪ್ರಕಟಿಸಲಾಗಿದೆ ಎಂದು ವರದಿಯು ಎತ್ತಿ ತೋರಿಸಿದೆ.
    • ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ಅಗತ್ಯ ಸೌಲಭ್ಯಗಳನ್ನು ಹೊಂದಿಲ್ಲದಿರುವುದು ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ.
    • ವಿಪತ್ತು ಸ್ಪಂದನಾ ಪಡೆಯ ಘಟಕಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ 67% ರಿಂದ 96% ರಷ್ಟು ಬೃಹತ್ ಪ್ರಮಾಣದ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಈ ಘಟಕಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ತೊಂದರೆಗಳನ್ನು ಎದುರಿಸುತ್ತಿವೆ.
    • ಪ್ರವಾಹದ ಅಪಾಯಕ್ಕಾಗಿ “ರಾಜ್ಯ ಕ್ರಿಯಾ ಯೋಜನೆ”ಯನ್ನು 2021 ರಲ್ಲಿ ರೂಪಿಸಲಾಗಿದ್ದರೂ, ನಿರ್ಣಾಯಕ ವಲಯಗಳಲ್ಲಿ ಪ್ರವಾಹ ನಿರ್ವಹಣೆಗಾಗಿ ಅಗತ್ಯ ಸಿದ್ಧತೆಗಳ ಕೊರತೆಯಿದೆ ಎಂದು ಸಿಎಜಿ ಪತ್ತೆಹಚ್ಚಿದೆ.
    • ಬೆಂಗಳೂರಿನಲ್ಲಿ ಅಳವಡಿಸಲಾಗಿರುವ 100 ನೀರಿನ ಮಟ್ಟ ಅಳೆಯುವ ಸಂವೇದಕಗಳ ಪೈಕಿ 49 ಸಂವೇದಕಗಳು ಡಿಸೆಂಬರ್ 2023 ರ ವೇಳೆಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂಡುಬಂದಿದೆ. ಅಲ್ಲದೆ, ರಾಜ್ಯವು ಪ್ರವಾಹ ಮೂಲಸೌಕರ್ಯಕ್ಕಾಗಿ ಯಾವುದೇ ಕಾನೂನು ಚೌಕಟ್ಟನ್ನು ಸ್ಥಾಪಿಸಿಲ್ಲ.
  • ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ (ತಿದ್ದುಪಡಿ) ಮಸೂದೆ, 2025

    ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ (ತಿದ್ದುಪಡಿ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ‘ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ (ತಿದ್ದುಪಡಿ) ಮಸೂದೆ, 2025’ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

    ಈ ಮಸೂದೆಯ ಪ್ರಮುಖ ಅಂಶಗಳು:

    • ಸದಸ್ಯರ ನಾಮನಿರ್ದೇಶನ:- ಪರಿಶಿಷ್ಟ ಪಂಗಡಕ್ಕೆ (ST) ಸೇರಿದ ಒಬ್ಬ ವ್ಯಕ್ತಿ ಮತ್ತು ಒಬ್ಬ ಮಹಿಳೆಯನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಉದ್ದೇಶಿಸಿದೆ.
    • ಉದ್ದೇಶ:- ಸರ್ಕಾರದಿಂದ ಹೊಸ ದತ್ತಾಂಶ ಅಥವಾ ಮಾಹಿತಿಯನ್ನು ಸ್ವೀಕರಿಸಿದ ನಂತರ, ಪರಿಶಿಷ್ಟ ಜಾತಿಗಳ ಉಪ -ವರ್ಗೀಕರಣದ ಮೀಸಲಾತಿ ಶೇಕಡಾವಾರು ಪ್ರಮಾಣದಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧಿಕಾರ ನೀಡುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ.
  • ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025

    ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ವಿಧಾನಸಭೆಯು ಬಹುಚರ್ಚಿತ ‘ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025’ ಅನ್ನು ಅಂಗೀಕರಿಸಿದೆ.

    ಮಸೂದೆಯ ಪ್ರಮುಖ ಲಕ್ಷಣಗಳು:

    • ಧ್ಯೇಯೋದ್ದೇಶ:- 17% ಮೀಸಲಾತಿ ಹಂಚಿಕೆಯನ್ನು ಹೊಂದಿರುವ 101 ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳಿಗೆ ಕಾನೂನುಬದ್ಧ ಮಾನ್ಯತೆ ನೀಡುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
    • ಮೀಸಲಾತಿ ಹಂಚಿಕೆ:ಈ ಮಸೂದೆಯ ಅನ್ವಯ, 
    1. ಪ್ರವರ್ಗ- ಎ (16 ಜಾತಿಗಳನ್ನೊಳಗೊಂಡ ಅತೀ ಹಿಂದುಳಿದ ಅಸ್ಪೃಶ್ಯರು)- 6% ರಷ್ಟು ಮೀಸಲಾತಿ ಹೊಂದಿದೆ.
    2. ಪ್ರವರ್ಗ- ಬಿ (19 ಜಾತಿಗಳನ್ನೊಳಗೊಂಡ ಹಿಂದುಳಿದ ಅಸ್ಪೃಶ್ಯರು)- 6% ರಷ್ಟು ಮೀಸಲಾತಿ ಹೊಂದಿದೆ.
    3. ಪ್ರವರ್ಗ- ಸಿ (63 ಜಾತಿಗಳನ್ನೊಳಗೊಂಡ ಸ್ಪೃಶ್ಯರು)- 5% ರಷ್ಟು ಮೀಸಲಾತಿ ಹೊಂದಿದೆ.
    • ವರ್ಗೀಕರಿಸದ ಜಾತಿಗಳು:- ಅಂತೆಯೇ, ಈ ಮಸೂದೆಯಲ್ಲಿ ಯಾವುದೇ ವರ್ಗಕ್ಕೆ ಸೇರಿಸದ 3 ಪರಿಶಿಷ್ಟ ಜಾತಿಗಳಾದ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕಗಳನ್ನು ಗುರುತಿಸಲಾಗಿದೆ. ಇವುಗಳು ತಮ್ಮ ಜಾತಿ ಪ್ರಮಾಣಪತ್ರಗಳ ಆಧಾರದ ಮೇಲೆ ಪ್ರವರ್ಗ- ಎ ಅಥವಾ ಪ್ರವರ್ಗ- ಬಿ ಯ ಅಡಿಯಲ್ಲಿ ಮೀಸಲಾತಿ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಲು ಅರ್ಹವಾಗಿರುತ್ತವೆ.
    • ನಾಗಮೋಹನ್ ದಾಸ್ ಆಯೋಗದ ವರದಿ:- ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು, ಪರಿಶಿಷ್ಟ ಜಾತಿಗಳ ವಿವಿಧ ಉಪ-ಗುಂಪುಗಳ ನಡುವಿನ ಉಪ-ವರ್ಗೀಕರಣಕ್ಕೆ ಸಂಬಂಧಿಸಿದ ನಿರ್ದಿಷ್ಟ ಶಿಫಾರಸುಗಳೊಂದಿಗೆ ಈ ವರ್ಷದ ಆಗಸ್ಟ್ 4 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
    • ಅನುಷ್ಠಾನ:- ಮೀಸಲಾತಿ ಸೌಲಭ್ಯಗಳ ನ್ಯಾಯೋಚಿತ ಮತ್ತು ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಆಯೋಗದ ಶಿಫಾರಸುಗಳಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಅನುಮೋದಿಸಿ, ಪರಿಶಿಷ್ಟ ಜಾತಿಗಳ ನಡುವೆ ಈ ಉಪ -ವರ್ಗೀಕರಣವನ್ನು ಜಾರಿಗೆ ತಂದಿದೆ.
  • ಕರ್ನಾಟಕ ಫ್ಲಾಟ್ ಫಾರ್ಮ್ (ವೇದಿಕೆ) ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025

    ಕರ್ನಾಟಕ ಫ್ಲಾಟ್ ಫಾರ್ಮ್ (ವೇದಿಕೆ) ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಕರ್ನಾಟಕ ಸರ್ಕಾರವು ‘ಕರ್ನಾಟಕ ಫ್ಲಾಟ್ ಫಾರ್ಮ್ (ವೇದಿಕೆ) ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025’ ಅನ್ನು ಅಂಗೀಕರಿಸಿದೆ.

    ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ, 2025 ರ ಬಗ್ಗೆ:

    • ಧ್ಯೇಯೋದ್ದೇಶ:- ಅಂದಾಜು 4,00,000 ಗಿಗ್ ಕಾರ್ಮಿಕರಿಗೆ ಕಾನೂನುಬದ್ಧ ಮಾನ್ಯತೆ ಮತ್ತು ಸಾಮಾಜಿಕ ರಕ್ಷಣೆಯನ್ನು ಒದಗಿಸುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ.
    • ಈ ಮಸೂದೆಯು 2025ರ ಮೇ ತಿಂಗಳಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯ ಸ್ಥಾನವನ್ನು ಪಡೆದಿದ್ದು, 12 ಸೆಪ್ಟೆಂಬರ್ 2025 ರಂದು ಅಧಿಕೃತವಾಗಿ ಅಧಿಸೂಚಿಸಲಾಗಿದೆ.

    ಮಸೂದೆಯ ಪ್ರಮುಖ ಲಕ್ಷಣಗಳು:

    • ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ:- ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಮತ್ತು ಯೋಜನೆಗಳ ಮೇಲ್ವಿಚಾರಣೆಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ತ್ರಿಪಕ್ಷೀಯ ‘ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ’ಯನ್ನು ಸ್ಥಾಪಿಸಲಾಗುವುದು.
    • ಗಿಗ್ ಕಾರ್ಮಿಕರ ಕಲ್ಯಾಣ ನಿಧಿ:- ಸಂಘಟಕ ವೇದಿಕೆ (ಅಗ್ರಿಗೇಟರ್ ಪ್ಲಾಟ್ ಫಾರ್ಮ್)ಗಳ  ಪ್ರತಿ ವಹಿವಾಟಿನ ಪಾವತಿಯ ಮೇಲೆ 1% ರಿಂದ 5% ರಷ್ಟು ‘ಕಲ್ಯಾಣ ಶುಲ್ಕ’ವನ್ನು ವಿಧಿಸುವ ಮೂಲಕ ಮೀಸಲಾದ ‘ಕಲ್ಯಾಣ ನಿಧಿ’ಯನ್ನು ರಚಿಸುತ್ತದೆ.
    • ನೋಂದಣಿ ಮತ್ತು ವಿಶಿಷ್ಟ ಗುರುತಿನ ಸಂಖ್ಯೆ:- ಎಲ್ಲಾ ಗಿಗ್ ಕಾರ್ಮಿಕರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಿದ್ದು, ವಿವಿಧ ಸೌಲಭ್ಯಗಳನ್ನು ಪಡೆಯಲು ಎಲ್ಲಾ ವೇದಿಕೆಗಳಿಗೂ ಅನ್ವಯವಾಗುವಂತೆ ಅವರಿಗೆ ‘ವಿಶಿಷ್ಟ ಗುರುತಿನ ಸಂಖ್ಯೆ’ಯನ್ನು ನೀಡಲಾಗುತ್ತದೆ.
    • ಕ್ರಮವಿಧಾನ ಆಧಾರಿತ (ಅಲ್ಗಾರಿದಮಿಕ್) ಪಾರದರ್ಶಕತೆ: ಕಾರ್ಯ ಹಂಚಿಕೆ ಮತ್ತು ಗಳಿಕೆಯಲ್ಲಿ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು, ವೇದಿಕೆಗಳು ತಮ್ಮ ಸ್ವಯಂಚಾಲಿತ ಮೇಲ್ವಿಚಾರಣೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕ್ರಮವಿಧಾನದ (ಅಲ್ಗಾರಿದಮ್‌ಗಳ) ವಿವರಗಳನ್ನು ಸರಳ ಭಾಷೆಯಲ್ಲಿ ಬಹಿರಂಗಪಡಿಸುವುದು ಕಡ್ಡಾಯವಾಗಿದೆ.
    • ಕುಂದುಕೊರತೆ ನಿವಾರಣೆ:- ಇದಕ್ಕಾಗಿ ದ್ವಿಸ್ತರದ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಮೊದಲು ವೇದಿಕೆ ಹಂತದ “ಆಂತರಿಕ ವಿವಾದ ಪರಿಹಾರ ಸಮಿತಿ”ಯ ಮೂಲಕ ಮತ್ತು ನಂತರ “ಕಲ್ಯಾಣ ಮಂಡಳಿ”ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
    • ಸೇವಾ ವಜಾ ಸಂರಕ್ಷಣೆಗಳು: ಸಮರ್ಥನೀಯ ಲಿಖಿತ ಕಾರಣ ಮತ್ತು 14 ದಿನಗಳ ಮುನ್ಸೂಚನೆ ನೀಡದೆ ವೇದಿಕೆಗಳು ಯಾವುದೇ ಕಾರ್ಮಿಕರನ್ನು ನಿಷ್ಕ್ರಿಯಗೊಳಿಸುವಂತಿಲ್ಲ ಅಥವಾ ಸೇವೆಯಿಂದ ವಜಾಗೊಳಿಸುವಂತಿಲ್ಲ (ದೈಹಿಕ ಹಾನಿಯ ಪ್ರಕರಣಗಳನ್ನು ಹೊರತುಪಡಿಸಿ).
  • ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025

    ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಕರ್ನಾಟಕ ವಿಧಾನಸಭೆಯು ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025’ ಅನ್ನು ಅಂಗೀಕರಿಸಿದೆ.

    ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025:

    • ಉದ್ದೇಶ:- ಜಾತಿ ಅಥವಾ ಸಮುದಾಯ ಪಂಚಾಯಿತಿಗಳಂತಹ ಅನೌಪಚಾರಿಕ ಸಂಸ್ಥೆಗಳು ವಿಧಿಸುವ ಸಾಮಾಜಿಕ ಬಹಿಷ್ಕಾರ ಮತ್ತು “ಅಸಾಂವಿಧಾನಿಕ ಪದ್ಧತಿಗಳನ್ನು” ಅಪರಾಧೀಕರಿಸುವುದು ಈ ಶಾಸನದ ಪ್ರಮುಖ ಉದ್ದೇಶವಾಗಿದೆ.
    • ವಿಶಿಷ್ಟತೆ:- 2016 ರಲ್ಲಿ ಮಹಾರಾಷ್ಟ್ರ ರಾಜ್ಯವು ಜಾರಿಗೆ ತಂದ ಕಾಯ್ದೆಯ ನಂತರ, ಇಂತಹ ಕಾನೂನನ್ನು ರೂಪಿಸಿದ ಭಾರತದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

    ಪ್ರಮುಖ ನಿಬಂಧನೆಗಳು ಮತ್ತು ಲಕ್ಷಣಗಳು:

    • ಸಾಮಾಜಿಕ ಬಹಿಷ್ಕಾರದ ವ್ಯಾಖ್ಯಾನ:- ಸಾಮಾಜಿಕ ತಾರತಮ್ಯಕ್ಕೆ ಎಡೆಮಾಡಿಕೊಡುವ ಯಾವುದೇ ಮೌಖಿಕ ಅಥವಾ ಲಿಖಿತ ಕೃತ್ಯ ಅಥವಾ ನಟನೆ/ಸನ್ನೆಗಳನ್ನು ಬಹಿಷ್ಕಾರ ಎಂದು ಇದು ವ್ಯಾಖ್ಯಾನಿಸುತ್ತದೆ. 
    • ಬಹಿಷ್ಕಾರ ಗುರುತಿಸುವಿಕೆ:- ಈ ಮಸೂದೆಯು 20 ವಿಧದ ಬಹಿಷ್ಕಾರಗಳನ್ನು ಗುರುತಿಸಿದೆ, ಅವುಗಳೆಂದರೆ:
      • ವೃತ್ತಿಪರ, ಸಾಮಾಜಿಕ ಅಥವಾ ಆರ್ಥಿಕ ಒಡನಾಟಗಳನ್ನು ನಿರಾಕರಿಸುವುದು.
      • ಧಾರ್ಮಿಕ ಅಥವಾ ಸಮುದಾಯದ ಕಾರ್ಯಕ್ರಮ, ವಿವಾಹ ಮತ್ತು ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಭಾಗವಹಿಸದಂತೆ ತಡೆಯುವುದು.
      • ಸಾರ್ವಜನಿಕ ಸ್ಥಳ, ಸೇವೆಗಳು, ಶಿಕ್ಷಣ ಸಂಸ್ಥೆಗಳು ಅಥವಾ ನೀರಿನ ಮೂಲಗಳ ಬಳಕೆಯನ್ನು ನಿರ್ಬಂಧಿಸುವುದು.
      • ನಿರ್ದಿಷ್ಟ ಸಾಂಸ್ಕೃತಿಕ ಪದ್ಧತಿಗಳನ್ನು (ಉದಾಹರಣೆಗೆ: ಉಡುಗೆ ಅಥವಾ ಭಾಷೆ) ಅನುಸರಿಸುವಂತೆ ವ್ಯಕ್ತಿಗಳ ಮೇಲೆ ಒತ್ತಡ ಹೇರುವುದು.
    • ಗುರಿಪಡಿಸಲಾದ ಘಟಕಗಳು:- ಸಾಮಾಜಿಕ ಬಹಿಷ್ಕಾರವನ್ನು ಹೇರುವ ಜಾತಿ ಪಂಚಾಯಿತಿಗಳು, ಸಮುದಾಯದ ಗುಂಪುಗಳು ಅಥವಾ ಪ್ರಭಾವಿ ವ್ಯಕ್ತಿಗಳನ್ನು ಈ ಕಾನೂನು ವಿಶೇಷವಾಗಿ ಗುರಿಪಡಿಸುತ್ತದೆ.
    • ಅಪರಾಧದ ಹೊಣೆಗಾರಿಕೆ:- ನೇರವಾಗಿ ಬಹಿಷ್ಕಾರ ಹೇರುವವರು ಮಾತ್ರವಲ್ಲದೆ, ಅಂತಹ ಕೃತ್ಯಕ್ಕೆ ಪ್ರೇರಣೆ ನೀಡುವವರು ಮತ್ತು ಬಹಿಷ್ಕಾರದ ನಿರ್ಧಾರದ ಪರವಾಗಿ ಮತ ಚಲಾಯಿಸುವ ಯಾವುದೇ ಸಂಸ್ಥೆಯ ಸದಸ್ಯರಿಗೂ ಈ ಹೊಣೆಗಾರಿಕೆ ಅನ್ವಯಿಸುತ್ತದೆ.
    • ದಂಡನೆಗಳು:- ಅಪರಾಧಿಗಳಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ₹1 ಲಕ್ಷದವರೆಗೆ ದಂಡ ಅಥವಾ ಈ ಎರಡನ್ನೂ ವಿಧಿಸಲು ಅವಕಾಶವಿದೆ.

    ಅನುಷ್ಠಾನ ಕಾರ್ಯವಿಧಾನ:

    • ಸಾಮಾಜಿಕ ಬಹಿಷ್ಕಾರ ನಿಷೇಧ ಅಧಿಕಾರಿ: ಅಪರಾಧಗಳನ್ನು ಪತ್ತೆಹಚ್ಚಲು ಮತ್ತು ಕಾನೂನು ಪ್ರಕ್ರಿಯೆಯ ಸಮಯದಲ್ಲಿ ಸಂತ್ರಸ್ತರಿಗೆ ನೆರವಾಗಲು ಗ್ರೂಪ್ ‘ಎ’ ಶ್ರೇಣಿಯ ಅಧಿಕಾರಿಯನ್ನು ನೇಮಿಸಲಾಗುತ್ತದೆ.
    • ಪೊಲೀಸರ ಅಧಿಕಾರಗಳು: ಈ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ದೂರುಗಳನ್ನು ದಾಖಲಿಸಿಕೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.
    • ಸಂತ್ರಸ್ತರಿಗೆ ನೆರವು: ಅಪರಾಧಿಗಳಿಂದ ವಸೂಲಿ ಮಾಡಿದ ದಂಡದ ಮೊತ್ತವನ್ನು ಸಂತ್ರಸ್ತರಿಗೆ ಪರಿಹಾರವಾಗಿ ನೀಡಬಹುದಾಗಿದೆ.
  • ಮೇಕೆದಾಟು ಯೋಜನೆ

    ಮೇಕೆದಾಟು ಯೋಜನೆ

    ಇದೀಗ ಸುದ್ದಿಯಲ್ಲಿದೆ:

    • ಸರ್ವೋಚ್ಚ ನ್ಯಾಯಾಲಯದ ಅನುಕೂಲಕರ ಆದೇಶದ ಹಿನ್ನೆಲೆಯಲ್ಲಿ, ಮೇಕೆದಾಟು ಯೋಜನೆಯನ್ನು ತ್ವರಿತಗೊಳಿಸಲು ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರದ (KERS) ನಿರ್ದೇಶಕ ಕೆ.ಜಿ. ಮಹೇಶ್ ಅವರ ನೇತೃತ್ವದಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲು ಕರ್ನಾಟಕ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

    ಸುದ್ದಿಯ ಕುರಿತು ಇನ್ನಷ್ಟು ಮಾಹಿತಿ:

    • ಸಮಿತಿಯ ರಚನೆ:- ಕೆಇಆರ್‌ಎಸ್ ನಿರ್ದೇಶಕರ ನೇತೃತ್ವದ ಈ ತಂಡವು ಒಬ್ಬರು ಕಾರ್ಯಪಾಲಕ ಎಂಜಿನಿಯರ್, ಮೂವರು ತಾಂತ್ರಿಕ ಸಹಾಯಕರು, ಆರು ಜನ ಸಹಾಯಕ ಎಂಜಿನಿಯರ್‌ಗಳು, ಒಬ್ಬರು ಲೆಕ್ಕಿಗರು, ಒಬ್ಬರು ಅಧೀಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ.
    • ಯೋಜನಾ ಕಚೇರಿ:- ಮೇಕೆದಾಟು ಯೋಜನೆಯ ಯೋಜನಾ ಕಚೇರಿಯನ್ನು ರಾಮನಗರದಲ್ಲಿ ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ಘೋಷಿಸಿದ್ದಾರೆ. 
    • ಕಾವೇರಿ ನೀರಾವರಿ ನಿಗಮ ನಿಯಮಿತವು (CNNL) ಈ ಯೋಜನಾ ಕಚೇರಿಯನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

    ಕಾವೇರಿ ನದಿ ವ್ಯವಸ್ಥೆಯ ಬಗ್ಗೆ:

    • ಮೂಲ:- ತಲಕಾವೇರಿ
    • ನದಿಯ ಒಟ್ಟು ಉದ್ದ:- 805 ಕಿ.ಮೀ
    • ಹರಿಯುವ ದಿಕ್ಕು:- ಪೂರ್ವಕ್ಕೆ
    • ಹರಿಯುವ ರಾಜ್ಯಗಳು:- ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿ.
    • ಉಪನದಿಗಳು:- ಅರ್ಕಾವತಿ, ಶಿಂಷಾ, ಹೇಮಾವತಿ, ಕಪಿಲಾ, ಹೊನ್ನುಹೊಳೆ, ಅಮರಾವತಿ, ಲಕ್ಷ್ಮಣ ತೀರ್ಥ, ಕಬಿನಿ, ಲೋಕಪಾವನಿ, ಭವಾನಿ ಮತ್ತು ನೊಯ್ಯಾಲ್.

    ಮೇಕೆದಾಟು ಯೋಜನೆಯ ಬಗ್ಗೆ:

    • ಮೇಕೆದಾಟು ಯೋಜನೆಯು ಒಂದು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯಾಗಿದೆ.
    • ನಿರ್ಮಾಣ:- ಇದನ್ನು ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಲ್ಲಿ ಕರ್ನಾಟಕ ಸರ್ಕಾರವು ನಿರ್ಮಿಸಲಿದೆ.
    • ಉದ್ದೇಶ:- ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
    • ಪ್ರಾಮುಖ್ಯತೆ:- ಇದು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ.
    • ಯೋಜನೆಯ ಕುರಿತಾದ ಕಳವಳಗಳು:- ಈ ಯೋಜನೆಯಿಂದಾಗಿ ಕಾವೇರಿ ವನ್ಯಜೀವಿ ಅಭಯಾರಣ್ಯದ ಸುಮಾರು 63% ಅರಣ್ಯ ಪ್ರದೇಶವು ಮುಳುಗಡೆಯಾಗಲಿದೆ.
  • ಪರಿಶಿಷ್ಟ ಜಾತಿಗಳ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (TSP) ನಿಧಿಗಳು

    ಪರಿಶಿಷ್ಟ ಜಾತಿಗಳ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (TSP) ನಿಧಿಗಳು

    ಇದೀಗ ಸುದ್ದಿಯಲ್ಲಿದೆ:

    • 2023 ರಿಂದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (TSP) ಅಡಿಯಲ್ಲಿ ಮೀಸಲಿರಿಸಿದ್ದ ಮೊತ್ತದ ಗಣನೀಯ ಪಾಲನ್ನು ಬಳಸಿಕೊಂಡಿದೆ.

    SCSP ಮತ್ತು TSP ನಿಧಿಯ ಬಗ್ಗೆ:

    • ಕರ್ನಾಟಕ ಸರ್ಕಾರವು ‘ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ-ಹಂಚಿಕೆ ಮತ್ತು ಪರಿಶಿಷ್ಟ ಪಂಗಡಗಳ ಉಪ-ಹಂಚಿಕೆ (ಹಣಕಾಸು ಸಂಪನ್ಮೂಲಗಳ ಯೋಜಿಸುವಿಕೆ, ಹಂಚಿಕೆ ಮತ್ತು ಬಳಕೆ) ಕಾಯ್ದೆ, 2013’ ಮತ್ತು ನಿಯಮಗಳು 2017 ಅನ್ನು ಜಾರಿಗೆ ತಂದಿದೆ.
    • ಉದ್ದೇಶ:- ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಆಯವ್ಯಯ (ಬಜೆಟ್)ದಲ್ಲಿ ಅನುದಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ.
    • ಇಂತಹ ಶಾಸನಬದ್ಧ ಕಾಯ್ದೆಯನ್ನು ಜಾರಿಗೆ ತಂದ ಭಾರತದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
  • ರಾಜ್ಯ ಸರ್ಕಾರ ನೇಮಿಸಿದ ತನಿಖೆ KKHRAC ಸಂಸ್ಥೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಿದೆ

    ರಾಜ್ಯ ಸರ್ಕಾರ ನೇಮಿಸಿದ ತನಿಖೆ KKHRAC ಸಂಸ್ಥೆಯಲ್ಲಿನ ಲೋಪದೋಷಗಳನ್ನು ಪತ್ತೆಹಚ್ಚಿದೆ

    ಇದೀಗ ಸುದ್ದಿಯಲ್ಲಿದೆ: 

    • ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆಯಲ್ಲಿನ (KKHRAC) ಆಡಳಿತಾತ್ಮಕ ಹಾಗೂ ಆರ್ಥಿಕ ಲೋಪದೋಷಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಅವರು ತಮ್ಮ ವರದಿಯನ್ನು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.

    ಮುಖ್ಯಾಂಶಗಳು:

    • ರಾಜ್ಯ ಸರ್ಕಾರವು ನೇಮಿಸಿದ ತನಿಖಾ ಸಮಿತಿಯು ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆ’ (KKHRAC)ಯಲ್ಲಿ ವ್ಯಾಪಕವಾದ ಹಣಕಾಸಿನ ಮತ್ತು ಆಡಳಿತಾತ್ಮಕ ಅಕ್ರಮಗಳನ್ನು ಪತ್ತೆಹಚ್ಚಿದೆ.
    • 2020–21 ರಿಂದ 2022–23 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಈ ದುರಾಡಳಿತವನ್ನು, ಕರ್ನಾಟಕದಲ್ಲಿ ಸಂಭವಿಸಿದ ನಿಧಿ ದುರ್ಬಳಕೆಯ ಅತಿದೊಡ್ಡ ಪ್ರಕರಣಗಳಲ್ಲಿ ಒಂದು ಎಂದು ತನಿಖಾಧಿಕಾರಿಯು ವಿವರಿಸಿದ್ದಾರೆ.

    ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಬಗ್ಗೆ:

    • ಸ್ವರೂಪ:- ಇದು ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಒಂದು ನೋಂದಾಯಿತ ಸಂಸ್ಥೆಯಾಗಿದ್ದು, ಇದು ಸಾಂವಿಧಾನಿಕ ಅಥವಾ ಶಾಸನಬದ್ಧ ಆಯೋಗವಲ್ಲ.
    • ಕೇಂದ್ರ ಕಚೇರಿ:- ಕಲಬುರಗಿ (ಗುಲ್ಬರ್ಗ).
    • ಧ್ಯೇಯೋದ್ದೇಶ:- ಕಲ್ಯಾಣ ಕರ್ನಾಟಕ ಪ್ರದೇಶದ (ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ) ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಉತ್ತೇಜಿಸುವುದು.
  • ಐಐಎಸ್‌ಸಿ ಯಲ್ಲಿ ಆರೋಗ್ಯ ರಕ್ಷಣೆಗಾಗಿ ‘ಎಐ ಉತ್ಕೃಷ್ಟತಾ ಕೇಂದ್ರ’ ಸ್ಥಾಪನೆ

    ಐಐಎಸ್‌ಸಿ ಯಲ್ಲಿ ಆರೋಗ್ಯ ರಕ್ಷಣೆಗಾಗಿ ‘ಎಐ ಉತ್ಕೃಷ್ಟತಾ ಕೇಂದ್ರ’ ಸ್ಥಾಪನೆ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ‘ಟ್ರಾನ್ಸ್‌ಲೇಶನಲ್ ಎಐ ಫಾರ್ ನೆಟ್‌ವರ್ಕ್ಡ್ ಯುನಿವರ್ಸಲ್ ಹೆಲ್ತ್‌ಕೇರ್’ (TANUH) ಫೌಂಡೇಶನ್ ಅನ್ನು ಸ್ಥಾಪಿಸಲಾಗಿದೆ.

    IISc ಯಲ್ಲಿರುವ ಆರೋಗ್ಯ ರಕ್ಷಣೆಗಾಗಿ ಎಐ ಉತ್ಕೃಷ್ಟತಾ ಕೇಂದ್ರದ ಬಗ್ಗೆ:

    • ಗುರಿ:- ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ರಕ್ಷಣಾ ನಾವೀನ್ಯತೆಗಳನ್ನು ಮುಂದುವರಿಸಲು ಸಮರ್ಪಿತ ‘ಆರೋಗ್ಯ ರಕ್ಷಣಾ ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ’ವಾಗಿ ಕಾರ್ಯನಿರ್ವಹಿಸುವುದು ಇದರ ಗುರಿಯಾಗಿದೆ.
    • ಧ್ಯೇಯೋದ್ದೇಶ:- ಇದನ್ನು ಭಾರತ ಸರ್ಕಾರದ “ಮೇಕ್ ಎಐ ಇನ್ ಇಂಡಿಯಾ” (ಭಾರತದಲ್ಲಿ ಎಐ ಸೃಜಿಸಿ) ಮತ್ತು “ಮೇಕ್ ಎಐ ವರ್ಕ್ ಫಾರ್ ಇಂಡಿಯಾ” (ಭಾರತಕ್ಕಾಗಿ ಎಐ ಕಾರ್ಯನಿರ್ವಹಿಸುವಂತೆ ಮಾಡಿ) ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಥಾಪಿಸಲಾಗಿದೆ.
    • ಇದು ಲಾಭರಹಿತ ಕಂಪನಿಯಾಗಿದ್ದು, ಅಸಾಂಕ್ರಾಮಿಕ ರೋಗಗಳ (NCD) ಪರಿಣಾಮಕಾರಿ ನಿರ್ವಹಣೆಗಾಗಿ ಚಿಕಿತ್ಸಾ ಸ್ಥಳದಲ್ಲಿಯೇ ಅನ್ವಯಿಸಬಹುದಾದ ಮತ್ತು ವಿಸ್ತರಿಸಬಹುದಾದ ಎಐ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅಳವಡಿಸುವತ್ತ ಗಮನಹರಿಸುತ್ತದೆ.
    • ಈ ಕೇಂದ್ರವು ಬಹುವಿಷಯಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ವೈದ್ಯರು, ದತ್ತಾಂಶ ವಿಜ್ಞಾನಿಗಳು ಮತ್ತು ಎಐ ಸಂಶೋಧಕರನ್ನು ಒಂದೇ ವೇದಿಕೆಯಡಿ ಸಂಯೋಜಿಸಲಿದೆ.
  • ಹಂಪಿಯಲ್ಲಿ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)

    ಹಂಪಿಯಲ್ಲಿ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)

    ಇದೀಗ ಸುದ್ದಿಯಲ್ಲಿದೆ:

    • ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಪ್ರವಾಸಿಗರ ಅನುಭವವನ್ನು ಸುಧಾರಿಸುವ ಉದ್ದೇಶದ ನೂತನ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು) ಕೇಂದ್ರಗಳು ಮಾರ್ಚ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)ಗಳ ಬಗ್ಗೆ:

    • ಹಿನ್ನೆಲೆ:- ಈ ಪಾರಂಪರಿಕ ಸ್ಥಳಕ್ಕೇ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಅಗತ್ಯ ಮೂಲಸೌಕರ್ಯ ಮತ್ತು ಮಾಹಿತಿ ನೆರವು ಒದಗಿಸುವುದು.
    • ಗುರಿ:– ಹಂಪಿಯ ಪುರಾತತ್ವ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಧಕ್ಕೆ ಬಾರದಂತೆ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ಇ ಮೂಲಕ ಹಂಪಿಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಬೆಂಬಲಿಸುವುದು.
    • ಚಾಲನೆ ನೀಡಿದವರು:- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2024ರಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು.
    • ಸಚಿವಾಲಯ:- ಕೇಂದ್ರ ಪ್ರವಾಸೋದ್ಯಮ ಸಚಿವಾಲಯ
    • ಕೇಂದ್ರ ಯೋಜನೆ:- ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಪ್ರವಾಸಿಗರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ₹25.64 ಕೋಟಿ ವೆಚ್ಚದ ‘ಹಂಪಿಯಲ್ಲಿ ಟ್ರಾವೆಲರ್ ನೂಕ್ಸ್ ಸ್ಥಾಪನೆ’ಗೆ ಮಂಜೂರಾತಿ ನೀಡಿದೆ.
    • ರಾಜ್ಯದಲ್ಲಿ ಅನುಷ್ಠಾನ ಸಂಸ್ಥೆ:- ‘ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಯಮಿತ ’ (KTIL).
    • ಪ್ರಯೋಜನೆಗಳು:- ಈ ‘ಟ್ರಾವೆಲರ್ ನೂಕ್ಸ್’ ಕೇಂದ್ರಗಳು ಪ್ರವಾಸಿಗರ ಸೌಲಭ್ಯಗಳಲ್ಲಿನ ಪ್ರಮುಖ ಕೊರತೆಗಳನ್ನು ನಿವಾರಿಸುವ ಸಲುವಾಗಿ ಕುಡಿಯುವ ನೀರಿನ ಘಟಕಗಳು, ನೈರ್ಮಲ್ಯಯುತ ಶೌಚಾಲಯಗಳು, ಎಟಿಎಂಗಳು, ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ವಿಶ್ರಾಂತಿಗಾಗಿ ನೆರಳಿನ ಆಸರೆಗಳನ್ನು ಒದಗಿಸಲಿವೆ.