ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (KDEM) ವಾರ್ಷಿಕ ವರದಿ
ಇದೀಗ ಸುದ್ದಿಯಲ್ಲಿದೆ:
2024-25ನೇ ಸಾಲಿನ ಹಣಕಾಸು ವರ್ಷದ ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ (KDEM) ವಾರ್ಷಿಕ ವರದಿಯು ರಾಜ್ಯದ ತಂತ್ರಜ್ಞಾನ ವಲಯದಲ್ಲಿನ ಗಮನಾರ್ಹ ವಿಸ್ತರಣೆಯನ್ನು ಎತ್ತಿತೋರಿಸಿದೆ.
ನಿರ್ದಿಷ್ಟವಾಗಿ 50 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCCs) ಸೇರ್ಪಡೆಯನ್ನು ಇದು ಪ್ರಮುಖವಾಗಿ ಉಲ್ಲೇಖಿಸಿದೆ.
KDEM ವಾರ್ಷಿಕ ವರದಿಯ ಪ್ರಮುಖ ಅಂಶಗಳು:
GCC ಹಂಚಿಕೆ:- ಹೊಸದಾಗಿ ಸ್ಥಾಪಿಸಲಾದ 50 GCC ಕೇಂದ್ರಗಳ ಪೈಕಿ 40 GCC ಕೇಂದ್ರಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಉಳಿದ 10 GCC ಕೇಂದ್ರಗಳನ್ನು “ಬಿಯಾಂಡ್ ಬೆಂಗಳೂರು” (ಬೆಂಗಳೂರಿನ ಹೊರಗಿನ ಪ್ರದೇಶಗಳು) ವಲಯಗಳಲ್ಲಿ ಸ್ಥಾಪಿಸಲಾಗಿದೆ.
ಉದ್ಯೋಗ ಮತ್ತು ಪ್ರತಿಭೆ:- ರಾಜ್ಯದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ಪ್ರತಿಭಾವಂತರ ಸಮೂಹವು 2021 ರಲ್ಲಿದ್ದ 3.5 ಲಕ್ಷದಿಂದ 2024-25 ನೇ ಹಣಕಾಸು ವರ್ಷದಲ್ಲಿ 6.5 ಲಕ್ಷ ವೃತ್ತಿಪರರಿಗೆ ಏರಿಕೆಯಾಗಿದೆ.
ನವೋದ್ಯಮಗಳ ಬೆಳವಣಿಗೆ:- ಕರ್ನಾಟಕದಲ್ಲಿ DPIIT-ನೋಂದಾಯಿತ ನವೋದ್ಯಮಗಳ ಸಂಖ್ಯೆ 16,700 ತಲುಪಿದೆ. ಇವುಗಳಲ್ಲಿ 3,300 ಕ್ಕೂ ಹೆಚ್ಚು ನವೋದ್ಯಮಗಳು ಬೆಂಗಳೂರಿನ ಹೊರಗೆ ನೋಂದಣಿಯಾಗಿವೆ.
ಮೂಲಸೌಕರ್ಯ:- ವಿಕೇಂದ್ರೀಕೃತ ಬೆಳವಣಿಗೆಯನ್ನು ಬೆಂಬಲಿಸುವ ಉದ್ದೇಶದಿಂದ, “ಬಿಯಾಂಡ್ ಬೆಂಗಳೂರು” ವಲಯಗಳಲ್ಲಿ ಇದೀಗ 1.1 ದಶಲಕ್ಷ ಚದರ ಅಡಿಗೂ ಹೆಚ್ಚು ವಿಸ್ತೀರ್ಣದ ಐಟಿ ಪಾರ್ಕ್ ಮೂಲಸೌಕರ್ಯ ಲಭ್ಯವಿದೆ.
ನಿಪುಣ ಕರ್ನಾಟಕ:- ಈ ಕೌಶಲ್ಯಾಭಿವೃದ್ಧಿ ಉಪಕ್ರಮದ ಪ್ರಗತಿಯನ್ನು ವರದಿಯು ಉಲ್ಲೇಖಿಸಿದೆ. ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಅಂದಾಜು 10,000 ಫಲಾನುಭವಿಗಳಿಗೆ ತರಬೇತಿ ನೀಡಲು ನಾಲ್ಕು ಕಾರ್ಪೊರೇಟ್ ಪ್ರಸ್ತಾವನೆಗಳನ್ನು ಸರ್ಕಾರ ಅನುಮೋದಿಸಿದೆ.
ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ (GCC) ನೀತಿ 2024–2029:
ಈ ನೀತಿಯನ್ನು ನವೆಂಬರ್19, 2024 ರಂದು ಪ್ರಾರಂಭಿಸಲಾಯಿತು.
ಇದು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (GCCs) ಆಕರ್ಷಿಸಲು ಮತ್ತು ಅವುಗಳ ವಿಸ್ತರಣೆಗೆ ಉತ್ತೇಜನ ನೀಡಲು ರೂಪಿಸಲಾದ ಭಾರತದ ಮೊಟ್ಟಮೊದಲಮೀಸಲಾದ ಚೌಕಟ್ಟಾಗಿದೆ.
ಉದ್ದೇಶ:- ರಾಜ್ಯದಲ್ಲಿ ಪ್ರಸ್ತುತ ಇರುವ 500 ಕ್ಕೂ ಹೆಚ್ಚು GCC ಗಳನ್ನು 2029 ರ ವೇಳೆಗೆ 1,000 ಕ್ಕೆ ದ್ವಿಗುಣಗೊಳಿಸುವ ಗುರಿಯನ್ನು ಈ ನೀತಿಯು ಹೊಂದಿದೆ. ಆ ಮೂಲಕ $50 ಬಿಲಿಯನ್ ಆರ್ಥಿಕ ಉತ್ಪನ್ನವನ್ನು ಸೃಷ್ಟಿಸುವ ಮತ್ತು 3.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಾವಿತ್ರಿಬಾಯಿ ಫುಲೆ ಅವರ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿದರು.
ಸಾವಿತ್ರಿಬಾಯಿ ಫುಲೆ (1831 – 1897) ಅವರ ಬಗ್ಗೆ:
ಇವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಯಿಗಾಂವ್ ಗ್ರಾಮದಲ್ಲಿ ಜನಿಸಿದರು.
ವಿವಾಹ:-1840 ರಲ್ಲಿ, ತಮ್ಮ 9 ನೇ ವಯಸ್ಸಿನಲ್ಲಿ, ಇವರು 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು.
ಇವರನ್ನು ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂದು ಅಧಿಕೃತವಾಗಿ ಗುರುತಿಸಲಾಗಿದೆ.
ಹೆಣ್ಣುಮಕ್ಕಳಿಗಾಗಿ ದೇಶದ ಮೊದಲ ಶಾಲೆಯನ್ನು ಸ್ಥಾಪಿಸಿದರು:- ಈ ದಂಪತಿಗಳು 1848 ರಲ್ಲಿ, ಪುಣೆಯ ಭಿಡೆವಾಡದಲ್ಲಿ ಸ್ಥಾಪಿಸಿದರು.
‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಪ್ರಾರಂಭಿಸಿದರು:- ಈ ದಂಪತಿಗಳು 1863 ರಲ್ಲಿ,ಶಿಶುಹತ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ಭಾರತದ ಮೊದಲ ಶಿಶು ಆಶ್ರಯ ತಾಣವನ್ನು ಪ್ರಾರಂಭಿಸಿದರು.
ಇವರು ಅಂತರ್ಜಾತಿ ವಿವಾಹ ಹಾಗೂ ವಿಧವಾ ಪುನರ್ವಿವಾಹಗಳನ್ನು ಸಕ್ರಿಯವಾಗಿ ಪ್ರತಿಪಾದಿಸಿದರು. ಇದರೊಂದಿಗೆ ಬಾಲ್ಯವಿವಾಹ, ಸತಿ ಪದ್ಧತಿ ಮತ್ತು ವರದಕ್ಷಿಣೆ ಪಿಡುಗಿನ ನಿರ್ಮೂಲನೆ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದರು.
‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು:- ಫುಲೆ ದಂಪತಿಗಳು 1873 ರಲ್ಲಿ,ಸಮಾಜದಲ್ಲಿ ಸಮಾನತೆಯನ್ನು ತರುವ ಏಕೈಕ ಉದ್ದೇಶದಿಂದ ಸ್ಥಾಪಿಸಿದರು. ಇದು ಜಾತಿ, ಧರ್ಮ ಅಥವಾ ವರ್ಗ ತಾರತಮ್ಯವಿಲ್ಲದೆ ಎಲ್ಲರಿಗೂ ಮುಕ್ತವಾದ ವೇದಿಕೆಯಾಗಿತ್ತು.
ಸಾಹಿತ್ಯ ಕೃತಿಗಳು:- ಇವರು 1854 ರಲ್ಲಿ ‘ಕಾವ್ಯ ಫುಲೆ’ ಹಾಗೂ 1892 ರಲ್ಲಿ ‘ಬವನ್ ಕಾಶಿ ಸುಬೋಧ್ ರತ್ನಾಕರ್’ ಎಂಬ ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ.
ಕುರುಂಬ ವರ್ಣಚಿತ್ರ ಕಲೆ
ಇತಿಹಾಸ / ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
ಕುರುಂಬ ವರ್ಣಚಿತ್ರ ಕಲೆಯ ಪ್ರಕಾರವನ್ನು ರೂಢಿಸಿಕೊಂಡಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣ, ಈ ಪರಂಪರೆಯು ಪ್ರಸ್ತುತ ಅಳಿವಿನಂಚಿನಲ್ಲಿದೆ.
ಕುರುಂಬ ವರ್ಣಚಿತ್ರಗಳ ಬಗ್ಗೆ:
ಕುರುಂಬ ಬುಡಕಟ್ಟು ಜನಾಂಗವು ರೂಢಿಸಿಕೊಂಡು ಬಂದಿರುವ ಈ ಕಲೆಯು 3000 ವರ್ಷಗಳಿಗಿಂತಲೂ ಹಳೆಯದಾದ ಇತಿಹಾಸವನ್ನು ಹೊಂದಿದೆ. ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ‘ಎಳುತುಪಾರೈ’ಯಂತಹ ಶಿಲಾ ಕಲಾ ತಾಣಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ.
ಕುರುಂಬ ಬುಡಕಟ್ಟು ಜನಾಂಗವನ್ನು ‘ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು’ (PVTG) ಎಂದು ವರ್ಗೀಕರಿಸಲಾಗಿದೆ.
ಮೂಲತಃ ಈ ಚಿತ್ರಗಳನ್ನು ಮನೆ ಮತ್ತು ದೇವಾಲಯಗಳ ಗೋಡೆಗಳ ಮೇಲೆ ಅಥವಾ ಹಬ್ಬಗಳ ಸಂದರ್ಭದಲ್ಲಿ ಬಿಡಿಸಲಾಗುತ್ತಿತ್ತು. ಕಲಾವಿದರು ಮರದ ಅಂಟು ಸೇರಿದಂತೆ ನೈಸರ್ಗಿಕ ಅರಣ್ಯ ಮೂಲಗಳಿಂದ ಈ ವರ್ಣಚಿತ್ರಗಳಿಗೆ ಬೇಕಾದ ಬಣ್ಣಗಳನ್ನು ತಯಾರಿಸಿಕೊಳ್ಳುತ್ತಾರೆ.
ಈ ಜಾನಪದ ವರ್ಣಚಿತ್ರಗಳು ಸರಳವಾದ ರೇಖಾಕೃತಿಗಳು, ಚುಕ್ಕೆಗಳು ಮತ್ತು ಜ್ಯಾಮಿತೀಯ ವಿನ್ಯಾಸಗಳನ್ನು ಒಳಗೊಂಡಿರುತ್ತವೆ. ಇವುಗಳ ಮೂಲಕ ಬುಡಕಟ್ಟು ಆಚರಣೆಗಳು, ಹಬ್ಬಗಳು, ಜೇನುತುಪ್ಪ ಬೇಟೆ, ಪ್ರಕೃತಿ, ಪ್ರಾಣಿಗಳು ಹಾಗೂ ದೈನಂದಿನ ಸಮುದಾಯದ ಚಟುವಟಿಕೆಗಳನ್ನು ಚಿತ್ರಿಸಲಾಗುತ್ತದೆ.
ಹಣಕಾಸು ಆರೋಗ್ಯ ಸೂಚ್ಯಂಕ, 2026
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
ನೀತಿ ಆಯೋಗವು 2026ನೇ ಸಾಲಿನ ಎರಡನೇ ವಾರ್ಷಿಕ ‘ಹಣಕಾಸು ಆರೋಗ್ಯ ಸೂಚ್ಯಂಕ’ವನ್ನು (FHI) ಬಿಡುಗಡೆ ಮಾಡಿದೆ.
ಹಣಕಾಸು ಆರೋಗ್ಯ ಸೂಚ್ಯಂಕದ ಬಗ್ಗೆ:
ಕಾರ್ಯವ್ಯಾಪ್ತಿ:- ಈ ಸೂಚ್ಯಂಕವು ಭಾರತದಲ್ಲಿನವಿವಿಧ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಅಥವಾ ಹಣಕಾಸಿನ ಆರೋಗ್ಯವನ್ನು ಮೌಲ್ಯಮಾಪನ ಮಾಡುತ್ತದೆ.
ಮಾನದಂಡಗಳು:- ವೆಚ್ಚದ ಗುಣಮಟ್ಟ, ಆದಾಯ ಕ್ರೂಢೀಕರಣ, ಆರ್ಥಿಕ ವಿವೇಚನೆ, ಸಾಲದ ಸೂಚ್ಯಂಕ ಮತ್ತು ಸಾಲದ ಸುಸ್ಥಿರತೆ ಮುಂತಾದ ಪ್ರಮುಖ ಮಾನದಂಡಗಳನ್ನು ಆಧರಿಸಿ ಈ ಮೌಲ್ಯಮಾಪನವನ್ನು ಮಾಡಲಾಗುತ್ತದೆ.
ದತ್ತಾಂಶ ಮೂಲ:- ಈ ವರದಿಗಾಗಿ ಅಗತ್ಯವಾದ ದತ್ತಾಂಶವನ್ನು ‘ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು’ (CAG) ಅವರಿಂದ ಪಡೆಯಲಾಗಿದೆ.
ಹಣಕಾಸು ಆರೋಗ್ಯ ಸೂಚ್ಯಂಕ, 2026ರ ಪ್ರಮುಖ ಅಂಶಗಳು:
ಒಟ್ಟಾರೆ ರಾಜ್ಯಗಳ ಶ್ರೇಯಾಂಕ:-
ಅಗ್ರಸ್ಥಾನ:- ಒಡಿಶಾ ರಾಜ್ಯವು ತನ್ನ ಆರ್ಥಿಕ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
‘ಸಾಧಕ’ (Achiever) ರಾಜ್ಯಗಳು:- ಗೋವಾ ಮತ್ತು ಜಾರ್ಖಂಡ್.
ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಗ್ರ ಐದು ಸ್ಥಾನಗಳಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿವೆ.
ಹರಿಯಾಣ ರಾಜ್ಯವು ಮೂರು ಸ್ಥಾನಗಳಷ್ಟು ಮೇಲೇರುವ ಮೂಲಕ ಗಮನಾರ್ಹ ಸುಧಾರಣೆ ಕಂಡಿದೆ.
ಚೇತರಿಕೆ ತೋರಿಸುತ್ತಿರುವ ರಾಜ್ಯಗಳು:-ಬಿಹಾರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸಾಧಾರಣ ಮಟ್ಟದ ಸುಧಾರಣೆಯನ್ನುಪ್ರದರ್ಶಿಸಿವೆ.
ಕಳಪೆ ಕಾರ್ಯಕ್ಷಮತೆಯ ರಾಜ್ಯಗಳು:-ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಶ್ರೇಯಾಂಕದ ಕೊನೆಯ ಸ್ಥಾನಗಳಲ್ಲಿ ಮುಂದುವರಿದಿದ್ದು, ಇದು ಈ ರಾಜ್ಯಗಳು ಎದುರಿಸುತ್ತಿರುವ ನಿರಂತರ ಆರ್ಥಿಕ ಸಂಕಷ್ಟವನ್ನು ಪ್ರತಿಬಿಂಬಿಸುತ್ತದೆ.
ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳು:- ಇದೇ ಮೊದಲ ಬಾರಿಗೆ ಈ ರಾಜ್ಯಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗಿದೆ. ಬಲವಾದ ಆದಾಯದ ಬೆಳವಣಿಗೆಯೊಂದಿಗೆ ಅರುಣಾಚಲ ಪ್ರದೇಶವು ‘ಸಾಧಕ’ ರಾಜ್ಯವಾಗಿ ಅಗ್ರಸ್ಥಾನದಲ್ಲಿದ್ದರೆ, ಉತ್ತರಾಖಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ರಾಷ್ಟ್ರೀಯ ನೌಕಾಯಾನ ಮಂಡಳಿ (NSB)
ಆಡಳಿತ
ಇದೀಗ ಸುದ್ದಿಯಲ್ಲಿದೆ:
ಬದಲಾಗುತ್ತಿರುವ ಜಾಗತಿಕ ಭೂ-ರಾಜಕೀಯ ಸನ್ನಿವೇಶಗಳ ನಡುವೆ ಭಾರತದ ನೌಕಾಯಾನ ವಲಯದಲ್ಲಿ ಎದುರಾಗುತ್ತಿರುವ ಉದಯೋನ್ಮುಖ ಸವಾಲುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ನೌಕಾಯಾನ ಮಂಡಳಿ’ಯೊಂದಿಗೆ (NSB) ಉನ್ನತ ಮಟ್ಟದ ಸಂವಾದವನ್ನು ನಡೆಸಿದೆ.
ರಾಷ್ಟ್ರೀಯ ನೌಕಾಯಾನ ಮಂಡಳಿಯ (NSB) ಬಗ್ಗೆ:
ಭಾರತದ ನೌಕಾಯಾನ ಮತ್ತು ಕಡಲ ಸಂಬಂಧಿತ ವಿಷಯಗಳ ಅತ್ಯುನ್ನತ ಸಲಹಾ ಸಂಸ್ಥೆಯಾಗಿದೆ:- ವಾಣಿಜ್ಯ ನೌಕಾಯಾನ ಕಾಯ್ದೆ, 1958ರ ಸೆಕ್ಷನ್ 23ರ ಅಡಿಯಲ್ಲಿ ಇದನ್ನು ಶಾಸನಬದ್ಧವಾಗಿ ರಚಿಸಲಾಗಿದೆ.
ಈ ಮಂಡಳಿಯು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರಮುಖ ಉದ್ದೇಶ:-ರಾಷ್ಟ್ರೀಯ ನೌಕಾಯಾನ ನೀತಿಗಳು ಮತ್ತು ಕಡಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವುದು.
ಈ ಮಂಡಳಿಯ ಅಧ್ಯಕ್ಷರನ್ನು ಕೇಂದ್ರ ಸರ್ಕಾರವು ನೇಮಕ ಮಾಡುತ್ತದೆ.
ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ನಿಯಂತ್ರಿಸುವ (ತಗ್ಗಿಸುವ) ಉದ್ದೇಶದಿಂದ ‘ಆಯಕಟ್ಟಿನ ತೈಲ ನಿಕ್ಷೇಪ’ಗಳನ್ನು ಬಳಕೆಗೆ ಮುಕ್ತಗೊಳಿಸಲು (ಮಾರುಕಟ್ಟೆಗೆ ಬಿಡುಗಡೆ ಮಾಡಲು) ‘ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಕೈಗೊಂಡಿರುವ ಉಪಕ್ರಮದಲ್ಲಿ ಭಾರತವು ಪಾಲ್ಗೊಳ್ಳುತ್ತಿಲ್ಲ ಎಂದು ಸರ್ಕಾರವು ಸ್ಪಷ್ಟಪಡಿಸಿದೆ.
ಭಾರತವು ‘ಅಂತರರಾಷ್ಟ್ರೀಯ ಇಂಧನ ಸಂಸ್ಥೆ’ಯ ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರವಲ್ಲದ ಕಾರಣ, ಈ ಅಂತರರಾಷ್ಟ್ರೀಯ ಸಂಸ್ಥೆಯ ಆದೇಶವನ್ನು ಕಡ್ಡಾಯವಾಗಿ ಪಾಲಿಸುವ ಯಾವುದೇ ಜವಾಬ್ದಾರಿಯನ್ನು ಭಾರತ ಹೊಂದಿಲ್ಲ.
ಭಾರತದ ತೈಲ ಆಮದು:
ಭಾರತವು ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆದಾರ ರಾಷ್ಟ್ರವಾಗಿದೆ:- ಭಾರತವು 5.33 ದಶಲಕ್ಷ ಟನ್ ಸಾಮರ್ಥ್ಯದ ‘ಭೂಗತ ಕಾರ್ಯತಂತ್ರದ ತೈಲ ನಿಕ್ಷೇಪ’ಗಳನ್ನು ಹೊಂದಿದ್ದು, ಪ್ರಸ್ತುತ ಇದು ಶೇ 80 ರಷ್ಟು ಮಾತ್ರ ಭರ್ತಿಯಾಗಿದೆ.
ಭಾರತವು ತನ್ನ ಕಚ್ಚಾ ತೈಲದ ಒಟ್ಟು ಅವಶ್ಯಕತೆಯ ಸುಮಾರು ಶೇ 88 ರಷ್ಟನ್ನು ವಿಶ್ವದ 41 ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
ಫೆಬ್ರವರಿ ತಿಂಗಳಲ್ಲಿ ಆಮದಾದ ತೈಲ ಪೂರೈಕೆಯ ಒಟ್ಟು ಪ್ರಮಾಣದಲ್ಲಿ ಸುಮಾರು ಅರ್ಧದಷ್ಟು ಭಾಗವು ಆಯಕಟ್ಟಿನ ‘ಹಾರ್ಮುಜ್ ಜಲಸಂಧಿ’ಯ ಮುಖಾಂತರವೇ ಸಾಗಾಣಿಕೆಯಾಗಿದೆ.
ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)ಯ ಬಗ್ಗೆ:
ಸ್ಥಾಪನೆ:-1974.
ಸಂಸ್ಥಾಪಕ ಸದಸ್ಯ ರಾಷ್ಟ್ರಗಳು:-ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಜರ್ಮನಿ, ಐರ್ಲೆಂಡ್, ಇಟಲಿ, ಜಪಾನ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಟರ್ಕಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ.
ಸ್ಥಾಪನೆಯ ಹಿನ್ನೆಲೆ:-1970ರ ದಶಕದಲ್ಲಿ ಪ್ರಮುಖ ತೈಲ ರಫ್ತು ಮಾಡುವ ರಾಷ್ಟ್ರಗಳು ತೈಲ ಪೂರೈಕೆಯನ್ನು ತೀವ್ರವಾಗಿ ಕಡಿತಗೊಳಿಸಿದಾಗ, ಕೈಗಾರಿಕೀಕರಣಗೊಂಡ ರಾಷ್ಟ್ರಗಳಲ್ಲಿ ಎದುರಾದ ತೀವ್ರ ಆರ್ಥಿಕ ಅಡಚಣೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಲಾಯಿತು.
ಮೂಲ ಉದ್ದೇಶ:- ಜಾಗತಿಕ ತೈಲ ಪೂರೈಕೆಯನ್ನು ಸ್ಥಿರವಾಗಿರಿಸುವುದು ಹಾಗೂ ಸಕಾಲಿಕ ಕ್ರಮಗಳ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಸಂಭವನೀಯ ಅಡಚಣೆಗಳನ್ನು ನಿರೀಕ್ಷಿಸಿ ತಡೆಯುವುದು.
ಸದಸ್ಯತ್ವ:- ಈ ಸಂಸ್ಥೆಯ ಸದಸ್ಯತ್ವವನ್ನು ಕೇವಲ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ’ಯ (OECD) ರಾಷ್ಟ್ರಗಳಿಗೆ ಮಾತ್ರ ಮುಕ್ತವಾಗಿಡಲಾಗಿತ್ತು.
ಪ್ರಸ್ತುತ ಇದು 33 ಪೂರ್ಣಪ್ರಮಾಣದ ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಇತ್ತೀಚಿಗೆ ‘ಕೊಲಂಬಿಯಾ’ ದೇಶವನ್ನು 33ನೇ ಸದಸ್ಯ ರಾಷ್ಟ್ರವಾಗಿ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.
ಪ್ರಸ್ತುತ 13 ಸಹವರ್ತಿ ಸದಸ್ಯ ರಾಷ್ಟ್ರಗಳು:- 2015 ರಲ್ಲಿ, OECD-ಯೇತರ ರಾಷ್ಟ್ರಗಳಿಗೂ ಸಹವರ್ತಿ ಸದಸ್ಯರಾಗಲು IEA ಮುಕ್ತಗೊಳಿಸಿತು.
ಭಾರತವು 2017 ರಲ್ಲಿ ಇದರ ಸಹವರ್ತಿ ಸದಸ್ಯತ್ವವನ್ನು ಪಡೆದುಕೊಂಡಿತು.
ಸಹವರ್ತಿ ಸದಸ್ಯರು ನೀತಿ ನಿರೂಪಣೆಯ ಚರ್ಚೆಗಳು ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು, ಆದರೆ ಅವರಿಗೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ (ಮತದಾನದ) ಹಕ್ಕು ಇರುವುದಿಲ್ಲ.
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD)ಯ ಬಗ್ಗೆ:
ಇದೊಂದು ಅಂತರ್-ಸರ್ಕಾರಿ ಸಂಸ್ಥೆಯಾಗಿದ್ದು, ಜಾಗತಿಕವಾಗಿ ಆರ್ಥಿಕ ಅಭಿವೃದ್ಧಿ, ನೀತಿ ಸಮನ್ವಯ ಮತ್ತು ಜಾಗತಿಕ ಸಹಕಾರವನ್ನು ಉತ್ತೇಜಿಸುವ ಕಾರ್ಯ ಮಾಡುತ್ತದೆ.
ಧ್ಯೇಯವಾಕ್ಯ:-“ಉತ್ತಮ ಬದುಕಿಗಾಗಿ ಉತ್ತಮ ನೀತಿಗಳು”.
ಸ್ಥಾಪನೆ:-‘ಐರೋಪ್ಯ ಆರ್ಥಿಕ ಸಹಕಾರ ಸಂಸ್ಥೆ’ಯ (OEEC) ಉತ್ತರಾಧಿಕಾರಿಯಾಗಿ 1961 ರಲ್ಲಿ ಇದನ್ನು ಸ್ಥಾಪಿಸಲಾಯಿತು.
ಕೇಂದ್ರ ಕಚೇರಿ:- ಪ್ಯಾರಿಸ್ (ಫ್ರಾನ್ಸ್).
ಸದಸ್ಯತ್ವ:- ಪ್ರಸ್ತುತ ಇದು 38 ಸದಸ್ಯ ರಾಷ್ಟ್ರಗಳನ್ನು, ಮುಖ್ಯವಾಗಿ ಅಭಿವೃದ್ಧಿ ಹೊಂದಿದ ಆರ್ಥಿಕತೆಯ ರಾಷ್ಟ್ರಗಳು ಹೊಂದಿದೆ.
ಭಾರತವು ಈ ಸಂಸ್ಥೆಯ ಸದಸ್ಯ ರಾಷ್ಟ್ರವಲ್ಲ.
ತೆಹ್ರಾನ್‌ನಲ್ಲಿ ಕಪ್ಪು ಮಳೆ
ಪರಿಸರ
ಇದೀಗ ಸುದ್ದಿಯಲ್ಲಿದೆ:
ತೈಲ ನೆಲೆಗಳ ಮೇಲಿನ ದಾಳಿಯ ಬೆನ್ನಲ್ಲೇ ಇರಾನಿನ ರಾಜಧಾನಿ ತೆಹ್ರಾನ್‌ನಲ್ಲಿ “ಕಪ್ಪು ಮಳೆ” ಹಾಗೂ ತೀವ್ರ ಪ್ರಮಾಣದ ವಿಷಕಾರಿ ವಾಯುಮಾಲಿನ್ಯ ಉಂಟಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.
ಕಪ್ಪು ಮಳೆ (Black Rain) ಎಂದರೇನು?
ಬೃಹತ್ ಅಗ್ನಿ ಅನಾಹುತಗಳು ಅಥವಾ ಸ್ಫೋಟಗಳ ನಂತರ ವಾತಾವರಣಕ್ಕೆ ಬಿಡುಗಡೆಯಾಗುವ ಮಸಿ, ಬೂದಿ, ತೈಲದ ಕಣಗಳು ಮತ್ತು ರಾಸಾಯನಿಕ ಮಾಲಿನ್ಯಕಾರಕಗಳಿಂದ ಕಲುಷಿತಗೊಂಡ ಮಳೆಯನ್ನು ಇದು ಸೂಚಿಸುತ್ತದೆ.
ಸಾಮಾನ್ಯ ಮಳೆಯ ಶುದ್ಧ ನೀರಿನ ಹನಿಗಳ ಬದಲಾಗಿ, ಈ ಮಳೆಯು ಕಪ್ಪು ಬಣ್ಣದ ಎಣ್ಣೆಯುಕ್ತ ಕಣಗಳನ್ನು ಒಳಗೊಂಡಿರುತ್ತದೆ; ಇದರಿಂದಾಗಿ ಮಳೆಯ ನೀರು ಕಪ್ಪು ಅಥವಾ ಬೂದು ಬಣ್ಣಕ್ಕೆ ತಿರುಗುತ್ತದೆ.
ಬೃಹತ್ ಪ್ರಮಾಣದ ಬೆಂಕಿಯಿಂದಾಗಿ ಅಪಾರ ಮಾಲಿನ್ಯಕಾರಕಗಳು ಗಾಳಿಗೆ ಸೇರ್ಪಡೆಯಾದಾಗ ಮತ್ತು ಆ ಮಾಲಿನ್ಯದ ಕಣಗಳನ್ನು ಮಳೆಯು ಭೂಮಿಯನ್ನು ತಲುಪುವ ಮುನ್ನವೇ ಹೀರಿಕೊಂಡಾಗ ಸಾಮಾನ್ಯವಾಗಿ ಇಂತಹ ‘ಕಪ್ಪು ಮಳೆ’ ಸುರಿಯುತ್ತದೆ.
ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದರೆ, 1945 ರಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯ ನಂತರ ವಿಕಿರಣಶೀಲ ಕಣಗಳು ಮತ್ತು ಛಿದ್ರಗೊಂಡ ಅವಶೇಷಗಳು ಮಳೆನೀರಿನೊಂದಿಗೆ ಬೆರೆತಾಗ ಇಂತಹದ್ದೇ ಭೀಕರ ವಿದ್ಯಮಾನಗಳು ಕಂಡುಬಂದಿದ್ದವು.
ಮಾರ್ಚ್ 2026 ರಲ್ಲಿ, ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯಕ್ಕೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಹೊರಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಾಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು, 2019 ರ ಅಧಿಸೂಚನೆಯಲ್ಲಿ ಅಭಯಾರಣ್ಯದ ವಿಸ್ತೀರ್ಣವನ್ನು 244.15 ಚದರ ಕಿ.ಮೀ ಗೆ ಕಡಿತಗೊಳಿಸಿರುವುದು ಮೇಲ್ನೋಟಕ್ಕೆ ‘ಸ್ವೇಚ್ಛಾಚಾರದಿಂದ ಕೂಡಿದೆ’ ಎಂದು ತೀರ್ಪು ನೀಡಿದೆ.
ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ (KWS) ದ ಬಗ್ಗೆ:
ಸ್ಥಳ:- ಇದು ಕರ್ನಾಟಕದ ಗದಗ ಜಿಲ್ಲೆಯಲ್ಲಿದೆ.
ಇದನ್ನು ಹೆಚ್ಚಾಗಿ “ಉತ್ತರ ಕರ್ನಾಟಕದ ಪಶ್ಚಿಮ ಘಟ್ಟಗಳು” ಎಂದು ಕರೆಯಲಾಗುತ್ತದೆ.
ವಿಶೇಷತೆ:-ಅರಣ್ಯ ಸಸ್ಯವರ್ಗದ ಸಂರಕ್ಷಣೆಗಾಗಿ ಪ್ರತ್ಯೇಕವಾಗಿ ಘೋಷಿಸಲಾದ ರಾಜ್ಯದ ಏಕೈಕ ಅಭಯಾರಣ್ಯ ಎಂಬ ವಿಶಿಷ್ಟತೆಯನ್ನು ಇದು ಹೊಂದಿದೆ.
ಸ್ಥಾಪನೆ:- ಮೂಲತಃ ಮೀಸಲು ಅರಣ್ಯವಾಗಿದ್ದ ಇದನ್ನು ಮೇ 2019 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಅಧಿಕೃತವಾಗಿ ಘೋಷಿಸಲಾಯಿತು.
ಒಣಭೂಮಿ ಪರಿಸರ ವ್ಯವಸ್ಥೆಯನ್ನು ಹೊಂದಿದೆ:- ಇದು ಕುರುಚಲು ಕಾಡುಗಳು, ಹುಲ್ಲುಗಾವಲುಗಳು ಮತ್ತು ಒಣ ಎಲೆ ಉದುರುವ ಕಾಡುಗಳನ್ನು ಒಳಗೊಂಡಿದೆ.
ಜಲಮೂಲ:- ಇದು ತುಂಗಭದ್ರಾ ನದಿಯ ಪ್ರಮುಖ ಜಲಾನಯನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತದೆ.
ಸಸ್ಯವರ್ಗ:- ಔಷಧೀಯ ಮೌಲ್ಯಕ್ಕೆ ಹೆಸರುವಾಸಿಯಾದ ಇದು, 400 ಕ್ಕೂ ಹೆಚ್ಚು ಪ್ರಭೇದದ ಔಷಧೀಯ ಸಸ್ಯಗಳನ್ನು ಹೊಂದಿದೆ. ಇಲ್ಲಿನ ಪ್ರಮುಖ ಸಸ್ಯವರ್ಗವು ತೇಗ, ಮುತ್ತುಗ ಮತ್ತು ಅಕೇಶಿಯ ಕುರುಚಲು ಗಿಡಗಳನ್ನು ಒಳಗೊಂಡಿದೆ.
ಪ್ರಾಣಿವರ್ಗ:- ಇದು ಚಿರತೆಗಳು, ಭಾರತೀಯ ತೋಳಗಳು, ಪಟ್ಟೆ ಕತ್ತೆಕಿರುಬಗಳು, ಕೃಷ್ಣಮೃಗಗಳು ಮತ್ತು ಅಪರೂಪದ ನಾಲ್ಕು ಕೊಂಬಿನ ಹುಲ್ಲೆಗಳಿಗೆ ನೆಲೆಯಾಗಿದೆ.
ಸಾಂಸ್ಕೃತಿಕ ಪ್ರಾಮುಖ್ಯತೆ:- ಇದು 12 ನೇ ಶತಮಾನದಡಂಬಳ ದೇವಾಲಯ ಸೇರಿದಂತೆ ಚಾಲುಕ್ಯ ಮತ್ತು ರಾಷ್ಟ್ರಕೂಟರ ಪ್ರಾಚೀನ ಅವಶೇಷಗಳು ಮತ್ತು ದೇವಾಲಯಗಳನ್ನು ಒಳಗೊಂಡಿದೆ.
ಇತ್ತೀಚಿನ ಬೆಳವಣಿಗೆಗಳು (2025–2026):
ಪರಿಸರ ಸೂಕ್ಷ್ಮ ವಲಯ (ESZ):- ಜೂನ್ 2025 ರಲ್ಲಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ಅಭಯಾರಣ್ಯದ ಸುತ್ತಲಿನ ಅಂದಾಜು 323 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು (ESZ) ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ಗಡಿ ವಿಸ್ತರಣೆ:- ಮಾರ್ಚ್ 2026 ರಲ್ಲಿ, ಮೂಲ 2019 ರ ಅಧಿಸೂಚನೆಯಿಂದ ಕೈಬಿಡಲಾಗಿದ್ದ ಹೆಚ್ಚುವರಿ 55 ಚದರ ಕಿ.ಮೀ ಮೀಸಲು ಅರಣ್ಯವನ್ನು ಸೇರಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದು ಅಭಯಾರಣ್ಯದ ಉದ್ದೇಶಿತ ವಿಸ್ತೀರ್ಣವನ್ನು ಸರಿಸುಮಾರು 300 ಚದರ ಕಿ.ಮೀ ಗೆ ಮರುಸ್ಥಾಪಿಸುತ್ತದೆ.
ಅಪರೂಪದ ಪಕ್ಷಿ ವೀಕ್ಷಣೆ:- ಇತ್ತೀಚಿಗೆ ಅಭಯಾರಣ್ಯದ ಕುರುಚಲು-ಮುಳ್ಳಿನ ಆವಾಸಸ್ಥಾನದಲ್ಲಿ ಅಪರೂಪದ ಬಿಳಿ-ಕತ್ತಿನ ಟಿಟ್ (ಪ್ಯಾರಸ್ ನುಚಾಲಿಸ್) ಪಕ್ಷಿಯನ್ನು ದಾಖಲಿಸಲಾಗಿದೆ.
ಅಪಾಯಗಳು ಮತ್ತು ಸಂರಕ್ಷಣೆ:
ಈ ಅಭಯಾರಣ್ಯವು ಗಣಿಗಾರಿಕೆ ಹಿತಾಸಕ್ತಿಗಳು (ಚಿನ್ನ ಮತ್ತು ಕಬ್ಬಿಣದ ಅದಿರು), ಅಕ್ರಮ ಉರುವಲು ಸಂಗ್ರಹಣೆ, ಅತಿಯಾದ ಮೇಯಿಸುವಿಕೆ ಮತ್ತು ಆವಾಸಸ್ಥಾನ ವಿಘಟನೆಯ ತೀವ್ರ ಒತ್ತಡವನ್ನು ಎದುರಿಸುತ್ತಿದೆ.
ಇತ್ತೀಚಿಗೆ ‘ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ಯ (SIPRI) ‘ಶಸ್ತ್ರಾಸ್ತ್ರ ವರ್ಗಾವಣೆ ದತ್ತಾಂಶ’ವನ್ನು (1950–2025) ನವೀಕರಿಸಲಾಗಿದೆ.
ಸಿಪ್ರಿ (SIPRI) ವರದಿಯ ಪ್ರಮುಖ ಅಂಶಗಳು:
ಅಗ್ರ ಪೂರೈಕೆದಾರರು:-2021-25ರ ಅವಧಿಯಲ್ಲಿ ಪ್ರಮುಖ ಶಸ್ತ್ರಾಸ್ತ್ರಗಳನ್ನು ಪೂರೈಸಿದ (ರಫ್ತು ಮಾಡಿದ) ವಿಶ್ವದ ಐದು ಅತಿದೊಡ್ಡ ರಾಷ್ಟ್ರಗಳೆಂದರೆ – ಅಮೆರಿಕ, ಫ್ರಾನ್ಸ್, ರಷ್ಯಾ, ಜರ್ಮನಿ ಮತ್ತು ಚೀನಾ.
ಅಗ್ರ ಆಮದುದಾರರು:- ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ 35 ರಷ್ಟು ಪಾಲನ್ನು ಹೊಂದಿರುವ ಅಗ್ರ ಐದು ಆಮದುದಾರ ರಾಷ್ಟ್ರಗಳೆಂದರೆ – ಉಕ್ರೇನ್, ಭಾರತ, ಸೌದಿ ಅರೇಬಿಯಾ, ಕತಾರ್ ಮತ್ತು ಪಾಕಿಸ್ತಾನ.
ಭಾರತ 2ನೇ ಅತಿದೊಡ್ಡ ಆಮದುದಾರ ರಾಷ್ಟ್ರ:- 2021 ಮತ್ತು 2025ರ ನಡುವಿನ ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತವು ಶೇ 8.2 ರಷ್ಟು ಪಾಲನ್ನು ಹೊಂದಿದೆ.
ರಷ್ಯಾದ ಪಾಲು ಕುಸಿತ:- ಭಾರತವು ಅತಿ ಹೆಚ್ಚು ಅಂದರೆ ಶೇ 40 ರಷ್ಟು ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಆದರೆ, ಈ ಪ್ರಮಾಣವು 2016-20ರ ಅವಧಿಗಿಂತ (ಶೇ 51) ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು 2011-15ರ ಅವಧಿಗೆ (ಶೇ 70) ಹೋಲಿಸಿದರೆ ಬಹುತೇಕ ಅರ್ಧದಷ್ಟು ಕುಸಿದಿದೆ.
ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (SIPRI)ಯ ಬಗ್ಗೆ:
SIPRI ಯ ಸಂಪೂರ್ಣ ರೂಪ:-ಸ್ಟಾಕ್ಹೋಲ್ಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್.
ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ:- ಜಾಗತಿಕ ಸಂಘರ್ಷಗಳು, ಶಸ್ತ್ರಾಸ್ತ್ರಗಳ ಉತ್ಪಾದನೆ, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿಶ್ಯಸ್ತ್ರೀಕರಣದ ಕುರಿತು ಉನ್ನತ ಮಟ್ಟದ ಸಂಶೋಧನೆ ನಡೆಸಲು ಮೀಸಲಾಗಿದೆ.
ಈ ಸಂಸ್ಥೆಯನ್ನು 1966 ರಲ್ಲಿ ಸ್ವೀಡನ್ ದೇಶದ ‘ಸ್ಟಾಕ್‌ಹೋಮ್’ನಲ್ಲಿ ಸ್ಥಾಪಿಸಲಾಯಿತು.
ವಿಶಾಖಪಟ್ಟಣದಲ್ಲಿ ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯ
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
ಭಾರತದ ದೀರ್ಘಕಾಲೀನ ಪರಮಾಣು ಸಂಶೋಧನಾ ಕಾರ್ಯಕ್ರಮದ ಭಾಗವಾಗಿ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಉನ್ನತ-ಶಕ್ತಿಯ ‘ಪ್ರೋಟಾನ್ ವೇಗೋತ್ಕರ್ಷಕ’ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ.
ಪ್ರೋಟಾನ್ ಎಂದರೇನು?
ಪ್ರೋಟಾನ್ ಎಂಬುದು ಧನಾತ್ಮಕ ವಿದ್ಯುದಾವೇಶವನ್ನು ಹೊಂದಿರುವ ಉಪ-ಪರಮಾಣು ಕಣವಾಗಿದೆ.
ಪ್ರೋಟಾನ್ ಪ್ರತಿಯೊಂದು ಮೂಲವಸ್ತುವಿನ ಪ್ರತಿಯೊಂದು ಪರಮಾಣು ನ್ಯೂಕ್ಲಿಯಸ್‌ನಲ್ಲಿ (ಕೇಂದ್ರದಲ್ಲಿ) ಕಂಡುಬರುತ್ತದೆ.
ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯದ ಬಗ್ಗೆ:
ವಿಶಾಖಪಟ್ಟಣದಲ್ಲಿ ಸ್ಥಾಪನೆಯಾಗುತ್ತಿರುವ ಈ ಉನ್ನತ-ಶಕ್ತಿಯ ಪ್ರೋಟಾನ್ ವೇಗೋತ್ಕರ್ಷಕವು, ‘ಥೋರಿಯಂ’ ಧಾತುವನ್ನು ಯುರೇನಿಯಂ ಇಂಧನವನ್ನಾಗಿ ಪರಿವರ್ತಿಸಲು ಅಗತ್ಯವಾದ ಉನ್ನತ-ಶಕ್ತಿಯ ನ್ಯೂಟ್ರಾನ್‌ಗಳನ್ನು ಉತ್ಪಾದಿಸುತ್ತದೆ.
ವಿಶಾಖಪಟ್ಟಣದಲ್ಲಿರುವ ಅತ್ಯುತ್ತಮ ತಾಂತ್ರಿಕ ಪರಿಸರ ವ್ಯವಸ್ಥೆ ಹಾಗೂ ರಿಯಾಕ್ಟರ್‌ಗಳನ್ನು ತಂಪುಗೊಳಿಸುವ ಪ್ರಕ್ರಿಯೆಗೆ ಸಮುದ್ರದ ನೀರು ಸುಲಭವಾಗಿ ಲಭ್ಯವಿರುವುದು ಈ ಯೋಜನೆಯ ಸ್ಥಾಪನೆಗೆ ವರದಾನವಾಗಿದೆ.
ಪ್ರಾಮುಖ್ಯತೆ:- ಈ ಪ್ರೋಟಾನ್ ವೇಗೋತ್ಕರ್ಷಕವನ್ನು ಭಾರತದ ಮಹತ್ವಾಕಾಂಕ್ಷೆಯ ದೀರ್ಘಕಾಲೀನ ಪರಮಾಣು ಕಾರ್ಯಕ್ರಮದ ಅತ್ಯಂತ ಪ್ರಮುಖ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಹಲೀಮ್
ಇತರೆ
ಇದೀಗ ಸುದ್ದಿಯಲ್ಲಿದೆ:
ಪ್ರಸ್ತುತ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಎಲ್.ಪಿ.ಜಿ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿರುವುದರಿಂದ, ಹೈದರಾಬಾದಿನ ಪ್ರಸಿದ್ಧ ರಂಜಾನ್ ಆಹಾರ ಪಟ್ಟಿಯಿಂದ (ಮೆನುವಿನಿಂದ) ‘ಹಲೀಮ್’ ಖಾದ್ಯವು ಕಣ್ಮರೆಯಾಗುವ ಆತಂಕ ಎದುರಾಗಿದೆ.
ಹಲೀಮ್ ಖಾದ್ಯದ ವಿಶೇಷತೆ:
ಭೌಗೋಳಿಕ ಸೂಚ್ಯಾಂಕ (GI ಟ್ಯಾಗ್) ಮಾನ್ಯತೆ ಪಡೆದ ಒಂದು ವಿಶಿಷ್ಟ ಖಾದ್ಯವಾಗಿದೆ. ಹೈದರಾಬಾದಿನಲ್ಲಿ ಇಸ್ಲಾಂ ಧರ್ಮದ ಪವಿತ್ರ ‘ರಂಜಾನ್’ ತಿಂಗಳಿನಲ್ಲಿ ಮಾತ್ರ ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ ಹಾಗೂ ಅನೇಕ ರೆಸ್ಟೋರೆಂಟ್ ಗಳ ಮೂಲಕ ದೇಶಾದ್ಯಂತ ಪೂರೈಕೆ ಮಾಡಲಾಗುತ್ತದೆ.
‘ಭಟ್ಟಿ’ ಎಂದು ಕರೆಯಲಾಗುವ, ಸೌದೆ (ಉರುವಲು) ಬಳಸುವ ಸಾಂಪ್ರದಾಯಿಕ ಒಲೆಗಳ ಮೇಲೆ ಸತತ 12 ಗಂಟೆಗಳ ಕಾಲ ಈ ಖಾದ್ಯವನ್ನು ಬೇಯಿಸಲಾಗುತ್ತದೆ.
ಗೋಧಿ, ಮಾಂಸ ಮತ್ತು ವಿವಿಧ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ಖಾದ್ಯವು ಸಂಜೆಯ ವೇಳೆಗೆ ಮೃದುವಾದ (ಅರೆ-ಘನ) ಹದಕ್ಕೆ ಬರುತ್ತದೆ. ರಂಜಾನ್ ತಿಂಗಳಿನಲ್ಲಿ ಉಪವಾಸವನ್ನು ಅಂತ್ಯಗೊಳಿಸುವ ‘ಇಫ್ತಾರ್’ ಸಮಯದಲ್ಲಿ ಸೇವಿಸುವ ಪ್ರಮುಖ ಆಹಾರಗಳ ಪಟ್ಟಿಯಲ್ಲಿ ಇದು ಅವಿಭಾಜ್ಯ ಅಂಗವಾಗಿದೆ.
ರಾಷ್ಟ್ರೀಯ ಹೆದ್ದಾರಿ ಹಸಿರು ಹೊದಿಕೆ ಸೂಚ್ಯಂಕ (NH-GCI)
ಇತರೆ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI)ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಸಮನ್ವಯದೊಂದಿಗೆ 2025-26ನೇ ಸಾಲಿನ ‘ರಾಷ್ಟ್ರೀಯ ಹೆದ್ದಾರಿ ಹಸಿರು ಹೊದಿಕೆ ಸೂಚ್ಯಂಕ’ದ (NH-GCI) ಚೊಚ್ಚಲ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಹಸಿರು ಹೊದಿಕೆ ಸೂಚ್ಯಂಕ (NH-GCI):
ಇದು ‘ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ವು (NHAI) ಪ್ರಾರಂಭಿಸಿರುವ ಒಂದು ‘ಉಪಗ್ರಹ ಆಧಾರಿತ’ ವ್ಯವಸ್ಥೆಯಾಗಿದೆ.
ಪ್ರಮುಖ ಉದ್ದೇಶ:-ಭಾರತದ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ (ರಸ್ತೆಬದಿಯ) ಸಸ್ಯವರ್ಗವನ್ನು ವೈಜ್ಞಾನಿಕವಾಗಿ ಮೇಲ್ವಿಚಾರಣೆ ಮಾಡುವುದು ಹಾಗೂ ಸಮರ್ಪಕವಾಗಿ ನಿರ್ವಹಿಸುವುದು.
ಮಹತ್ವ:-ಇಸ್ರೋದ ‘ರಾಷ್ಟ್ರೀಯ ದೂರಸಂವೇದಿ ಕೇಂದ್ರ’ದ (NRSC) ಸಹಯೋಗದೊಂದಿಗೆ ಈ ಸೂಚ್ಯಂಕವನ್ನು ಅಭಿವೃದ್ಧಿಪಡಿಸಲಾಗಿದೆ. ರಸ್ತೆಬದಿಯ ಸಸ್ಯಗಳ (ನೆಡುತೋಪುಗಳ) ಬೆಳವಣಿಗೆ ಮತ್ತು ಅವುಗಳ ಉಳಿವನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗುತ್ತದೆ.
ಈ ವ್ಯವಸ್ಥೆಯು ಕೇವಲ ಅಂದಾಜಿನ ಆಧಾರದ ಮೇಲಿನ ಸಾಮಾನ್ಯ ಕ್ಷೇತ್ರ ಸಮೀಕ್ಷೆಗಳ ಬದಲಾಗಿ, ನಿಖರವಾದ ಹಾಗೂ ತಂತ್ರಜ್ಞಾನ-ಚಾಲಿತ ದತ್ತಾಂಶಗಳನ್ನು ಒದಗಿಸುತ್ತದೆ.
ಭಾರತದ ನವೀಕರಿಸಬಹುದಾದ ಇಂಧನ ವಲಯ
ಪರಿಸರ
ಇದೀಗ ಸುದ್ದಿಯಲ್ಲಿದೆ:
2026ರ ‘ಭಾರತ್ ಕ್ಲೈಮೇಟ್ ಫೋರಮ್’ನಲ್ಲಿ ಇಂಧನ ತಜ್ಞರು ಭಾರತದ ಇಂಧನ ಪರಿವರ್ತನೆಯಲ್ಲಿನ ಗಂಭೀರ ಸವಾಲಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯು ವೇಗವಾಗಿ ಹೆಚ್ಚಾಗುತ್ತಿದ್ದರೂ, ವಿದ್ಯುತ್ ಜಾಲ ಮತ್ತು ಸಾಂಸ್ಥಿಕ ಮಿತಿಗಳಿಂದಾಗಿ ಆ ವಿದ್ಯುತ್‌ನ ಸಮರ್ಪಕ ಬಳಕೆಯು ಸಾಧ್ಯವಾಗುತ್ತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಭಾರತದ ನವೀಕರಿಸಬಹುದಾದ ಇಂಧನ ವಲಯದ ಪ್ರಗತಿ:
2025ರ ನವೆಂಬರ್ ಅಂತ್ಯದ ವೇಳೆಗೆ ಭಾರತದ ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 253.96 ಗಿಗಾವ್ಯಾಟ್‌ಗಳಿಗೆ (GW) ತಲುಪಿದೆ. ಇದು 2024ರಲ್ಲಿ ಇದ್ದ 205.52 ಗಿಗಾವ್ಯಾಟ್‌ಗಳ ಸಾಮರ್ಥ್ಯಕ್ಕಿಂತ ಶೇಕಡಾ 23 ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದೆ.
ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯವು 132.85 ಗಿಗಾವ್ಯಾಟ್‌ಗಳಿಗೆ ತಲುಪಿದ್ದರೆ, ಪವನ ಶಕ್ತಿಯ ಸಾಮರ್ಥ್ಯವು ಅಂದಾಜು 53.99 ಗಿಗಾವ್ಯಾಟ್‌ಗಳಷ್ಟಿದೆ.
ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಜಾಗತಿಕ ಸ್ಥಾನಮಾನ:
ಒಟ್ಟಾರೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಭಾರತವು ವಿಶ್ವದಲ್ಲಿ 4ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.
ಜಾಗತಿಕ ಮಟ್ಟದಲ್ಲಿ ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು 3ನೇ ಸ್ಥಾನದಲ್ಲಿದೆ.
ಪವನ ಶಕ್ತಿಯ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು 4ನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳು:-ರಾಜಸ್ಥಾನ, ಗುಜರಾತ್, ತಮಿಳುನಾಡು ಮತ್ತು ಕರ್ನಾಟಕ.
ಗುರಿ:- ಜಾಗತಿಕ ಹವಾಮಾನ ಬದಲಾವಣೆಯ ನಿಯಂತ್ರಣದ ಬದ್ಧತೆಯ ಭಾಗವಾಗಿ, 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ ಬೃಹತ್ ಗುರಿಯನ್ನು ಭಾರತ ಹೊಂದಿದೆ.
ಶುದ್ಧ ಇಂಧನ ಬಳಕೆಯನ್ನು ಸುಧಾರಿಸಲು ಸರ್ಕಾರದ ಉಪಕ್ರಮಗಳು:
ಹಸಿರು ಇಂಧನ ಕಾರಿಡಾರ್ (GEC):- ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಬೇಡಿಕೆಯಿರುವ ಪ್ರದೇಶಗಳಿಗೆ ನವೀಕರಿಸಬಹುದಾದ ಇಂಧನವನ್ನು ಸಮರ್ಥವಾಗಿ ರವಾನಿಸಲು ‘ವಿದ್ಯುತ್ ಪ್ರಸರಣ ಮೂಲಸೌಕರ್ಯ’ವನ್ನು ಬಲಪಡಿಸುವುದು.
ಪಿಎಂ-ಕುಸುಮ ಯೋಜನೆ:-ಕೃಷಿ ವಲಯದಲ್ಲಿ ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಹಾಗೂ ರೈತರಿಗೆ ಆರ್ಥಿಕ ಬೆಂಬಲ ನೀಡಲು, ಗ್ರಾಮೀಣ ಪ್ರದೇಶಗಳಲ್ಲಿ ಸೌರ ಪಂಪ್‌ಗಳು ಮತ್ತು ಜಾಲ (ಗ್ರಿಡ್) ಸಂಪರ್ಕಿತ ಸೌರ ವಿದ್ಯುತ್ ಸ್ಥಾವರಗಳ ಅಳವಡಿಕೆಯನ್ನು ಉತ್ತೇಜಿಸುವುದು.
ರಾಷ್ಟ್ರೀಯ ಹಸಿರು ಜಲಜನಕ ಮಿಷನ್:-ತೈಲ ಸಂಸ್ಕರಣೆ, ಉಕ್ಕು ಮತ್ತು ರಸಗೊಬ್ಬರಗಳಂತಹ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು, ‘ಹಸಿರು ಜಲಜನಕ ‘ ಉತ್ಪಾದನೆ ಹಾಗೂ ಬಳಕೆಯನ್ನು ಇದು ಪ್ರೋತ್ಸಾಹಿಸುತ್ತದೆ.
₹10,000 ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ (ನೀರನ್ನೆತ್ತಿ ಸಂಗ್ರಹಿಸುವ) ಜಲವಿದ್ಯುತ್ ಯೋಜನೆಗೆ ವನ್ಯಜೀವಿ ಮಂಡಳಿಗಳು ನೀಡಿರುವ ಅನುಮೋದನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಮುಂದಿನ ಆದೇಶದವರೆಗೆ ಶರಾವತಿ ಕಣಿವೆ ಸಿಂಹಬಾಲದ ಸಿಂಗಳೀಕ (LTM) ವನ್ಯಜೀವಿ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಎಲ್ಲಾ ಭೂಮಟ್ಟದ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ (KPCL) ನಿರ್ದೇಶನ ನೀಡಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಬಗ್ಗೆ:
ಸ್ಥಳ:- ಇದು ಕರ್ನಾಟಕದ ಶರಾವತಿ ನದಿಯ ಮೇಲಿರುವ ಒಂದು ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಯಾಗಿದೆ.
ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ:-2000 MW(ಮೆಗಾವ್ಯಾಟ್).
ವಿಶೇಷತೆ:- ಇದು ದೇಶದ ಅತಿದೊಡ್ಡ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಘಟಕವಾಗಿ ಹೊರಹೊಮ್ಮಲಿದೆ.
ಇದನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಎರಡು ಜಲಾಶಯಗಳ ನಡುವೆ ನಿರ್ಮಿಸಲಾಗುತ್ತದೆ.
62.48 ಮೀಟರ್ ಎತ್ತರವಿರುವ ತಳಕಳಲೆ ಅಣೆಕಟ್ಟು ಈ ಯೋಜನೆಯ ಮೇಲ್ಭಾಗದ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ.
ಈ ಅಣೆಕಟ್ಟು ಪ್ರಸ್ತುತ ಅಸ್ತಿತ್ವದಲ್ಲಿರುವ ಶರಾವತಿ ಜಲವಿದ್ಯುತ್ ಯೋಜನೆಗೆ ನೀರಿನ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಸುಮಾರು 64 ಮೀಟರ್ ಎತ್ತರವಿರುವ ಗೇರುಸೊಪ್ಪ ಅಣೆಕಟ್ಟು ಈ ಯೋಜನೆಯ ಕೆಳಭಾಗದ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ.
ವಿದ್ಯುತ್ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ಗ್ರಿಡ್ ವಿದ್ಯುತ್ ಬಳಸಿ ನೀರನ್ನು ಮೇಲ್ಭಾಗದ ಜಲಾಶಯಕ್ಕೆ ಕಳುಹಿಸಲಾಗುತ್ತದೆ ಮತ್ತು ವಿದ್ಯುತ್ ಬೇಡಿಕೆ ಗರಿಷ್ಠ ಮಟ್ಟದಲ್ಲಿರುವಾಗ ವಿದ್ಯುತ್ ಉತ್ಪಾದಿಸಲು ಆ ನೀರನ್ನು ಕೆಳಮುಖವಾಗಿ ಹರಿಸಲಾಗುತ್ತದೆ.
ತೆಲಂಗಾಣದ ಕಾಳೇಶ್ವರಂ ಯೋಜನೆಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಈ ಯೋಜನೆಯು, ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನೂ ಸಹ ಹೊಂದಿದೆ.
ಕಳವಳಗಳು:- ಈ ಯೋಜನೆಯು ರಾಣಿ ಚೆನ್ನಭೈರಾದೇವಿಯವರ ಪರಂಪರೆಯಾಗಿರುವ 16ನೇ ಶತಮಾನದ ಪ್ರಾಚೀನ ಸ್ಮಾರಕಗಳನ್ನು ನಾಶಪಡಿಸುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.
ಶರಾವತಿ ನದಿಯ ಬಗ್ಗೆ:
ಇದು ಕರ್ನಾಟಕದಲ್ಲಿ ಪಶ್ಚಿಮಾಭಿಮುಖವಾಗಿಹರಿಯುವ ಅತ್ಯಂತ ಉದ್ದವಾದ ನದಿಯಾಗಿದೆ.
ಈ ನದಿ ಜಲಾನಯನ ಪ್ರದೇಶದ ಬಹುಪಾಲು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ.
ನದಿಪಾತ್ರ:- ಪಶ್ಚಿಮ ಘಟ್ಟಗಳಲ್ಲಿ ಉಗಮಿಸುವ ಈ ನದಿಯು, ವಾಯುವ್ಯ ದಿಕ್ಕಿನಲ್ಲಿ ಹರಿದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿಅರಬ್ಬಿ ಸಮುದ್ರವನ್ನು ಸೇರುತ್ತದೆ.
ಉದ್ದ:- ಈ ನದಿಯ ಒಟ್ಟು ಉದ್ದ 128 ಕಿ.ಮೀ, ಮತ್ತು ಇದರ ಜಲಾನಯನ ಪ್ರದೇಶವು 2,985 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.
ಜಲಪಾತಗಳು:- ಶರಾವತಿ ನದಿಯು ತನ್ನ ನದಿಪಾತ್ರದಲ್ಲಿ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗ ಜಲಪಾತವನ್ನು ಸೃಷ್ಟಿಸುತ್ತದೆ. ಇಲ್ಲಿ ನದಿಯು 253 ಮೀಟರ್ ಎತ್ತರದಿಂದ ಧುಮುಕುತ್ತದೆ.
ಪ್ರಮುಖ ಉಪನದಿಗಳು:-ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಿಲ್ಕುಂಜಿ, ಎಣ್ಣೆಹೊಳೆ, ಹುರ್ಲಿಹೊಳೆ ಮತ್ತು ನಾಗೋಡಿಹೊಳೆ.
ರಾಣಿ ಚೆನ್ನಭೈರಾದೇವಿ ಅವರ ಬಗ್ಗೆ:
ಇವರು ಕ್ರಿ. ಶ. 1552 ರಿಂದ 1606 ರವರೆಗೆ ತಮ್ಮ ರಾಜಧಾನಿ ಗೇರುಸೊಪ್ಪದಿಂದ ಆಡಳಿತ ನಡೆಸಿದರು.
ಇವರು ಭಾರತೀಯ ಇತಿಹಾಸದಲ್ಲೇ ಅತಿ ದೀರ್ಘಕಾಲ ಆಡಳಿತ ನಡೆಸಿದ ರಾಣಿಯಾಗಿದ್ದಾರೆ.
ಇವರು ಪೋರ್ಚುಗೀಸರ ವಿರುದ್ಧ ಹೋರಾಡಿದರು. ಇವರ ಸಾಮ್ರಾಜ್ಯದಲ್ಲಿ ಮೆಣಸು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ಪೋರ್ಚುಗೀಸರು ಇವರಿಗೆ ‘ರೈನಾ ಡಿ ಪಿಮೆಂಟಾ’ ಅಂದರೆ ‘ಕಾಳುಮೆಣಸಿನ ರಾಣಿ’ ಎಂಬ ಬಿರುದನ್ನು ನೀಡಿದ್ದರು.
ಇವರು ಐರೋಪ್ಯ ಮತ್ತು ಅರಬ್ ದೇಶಗಳಿಗೆ ಮಸಾಲೆ ಪದಾರ್ಥಗಳನ್ನು ರಫ್ತು ಮಾಡಲು ಹೆಸರುವಾಸಿಯಾಗಿದ್ದರು.
ರಾಜ್ಯದಲ್ಲಿ ನೋಂದಾಯಿತವಾಗಿರುವ ಮತ್ತು ಕಾರ್ಯಾಚರಣೆ ನಡೆಸುತ್ತಿರುವ ವಾಣಿಜ್ಯ ವಾಹನಗಳಿಗೆ ಯೋಗ್ಯತಾ ಪ್ರಮಾಣಪತ್ರಗಳನ್ನು (FC) ನೀಡುವುದರಲ್ಲಿ ಆಗುವ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ, ಕರ್ನಾಟಕ ಸಾರಿಗೆ ಇಲಾಖೆಯು ಜಿಯೋ-ಫೆನ್ಸಿಂಗ್ ಆಧಾರಿತ ಎಂ-ವಾಹನ್ (mVahan) ಫಿಟ್‌ನೆಸ್ ಮೊಬೈಲ್ ಆ್ಯಪ್ ಅನ್ನು ಎಲ್ಲಾ 66 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಪ್ರಾರಂಭಿಸಿದೆ.
ಎಂ-ಪರಿವಾಹನ್ (mParivahan) ಫಿಟ್‌ನೆಸ್ ಆ್ಯಪ್:
ಇದನ್ನು “ವಾಹನ್ ಆ್ಯಪ್” ಎಂತಲೂ ಕರೆಯಲಾಗುತ್ತದೆ.
ಇದು ವಾಹನ ಮತ್ತು ಚಾಲಕ ಸೇವೆಗಳಿಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ.
ಹಿಂದೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಭೇಟಿ ನೀಡಿ ಪಡೆಯಬೇಕಾಗಿದ್ದ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಇದು ಸುಲಭ ವೇದಿಕೆಯನ್ನು ಒದಗಿಸುತ್ತದೆ.
ಈ ಆ್ಯಪ್ ನ ಪ್ರಮುಖ ಲಕ್ಷಣಗಳು:
ಡಿಜಿಟಲ್ ದಾಖಲೆಗಳು:- ನಾಗರಿಕರು ತಮ್ಮ ಫೋನ್‌ನಲ್ಲಿ ವಾಹನ ನೋಂದಣಿ ಪ್ರಮಾಣಪತ್ರ (RC) ಮತ್ತು ಚಾಲನಾ ಪರವಾನಗಿಯ (DL) ಕಾನೂನುಬದ್ಧ ವರ್ಚುವಲ್ ಆವೃತ್ತಿಗಳನ್ನು ಸುಲಭವಾಗಿ ರಚಿಸಬಹುದು ಹಾಗೂ ಕೊಂಡೊಯ್ಯಬಹುದು.
ವಾಹನ ಹುಡುಕಾಟ:-ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಮಾಲೀಕರ ಹೆಸರು, ವಾಹನದ ವಯಸ್ಸು, ಇಂಧನದ ಪ್ರಕಾರ, ವಿಮೆಯ ಮಾನ್ಯತೆ ಮತ್ತು ಫಿಟ್‌ನೆಸ್ ಸ್ಥಿತಿಯಂತಹ ವಿವರಗಳನ್ನು ತಕ್ಷಣವೇ ಪಡೆಯಬಹುದಾಗಿದೆ.
ಚಲನ್ ಸ್ಥಿತಿ:-ಸಂಚಾರ ನಿಯಮ ಉಲ್ಲಂಘನೆಯ ದಂಡಗಳನ್ನು (eChallans) ನೇರವಾಗಿ ಆ್ಯಪ್ ಮೂಲಕ ಪರಿಶೀಲಿಸಬಹುದು ಮತ್ತು ಪಾವತಿಸಬಹುದು.
ಸುರಕ್ಷತೆ ಮತ್ತು ಪರಿಶೀಲನೆ:- ಹಳೆಯ ವಾಹನಗಳನ್ನು ಖರೀದಿಸುವ ಮೊದಲು ಅವುಗಳ ವಿವರಗಳನ್ನು ಪರಿಶೀಲಿಸಲು ಅಥವಾ ಅಪಘಾತ ಮತ್ತು ಕಳ್ಳತನದ ಸಂದರ್ಭಗಳಲ್ಲಿ ವಾಹನಗಳನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) – 57ನೇ ಸಂಸ್ಥಾಪನಾ ದಿನ
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) 57ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯ ಬಗ್ಗೆ:
ಅರೆಸೇನಾ ಪಡೆಯಾಗಿದೆ:- ಇದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ, 1968ರ ಅಡಿಯಲ್ಲಿ 1969ರಲ್ಲಿ ಸ್ಥಾಪಿಸಲಾದ ಅರೆಸೇನಾ ಪಡೆಯಾಗಿದೆ.
ಪ್ರತಿ ವರ್ಷ ಮಾರ್ಚ್ 10ರಂದುಸಿಐಎಸ್ಎಫ್ (CISF) ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ.
ಕಾರ್ಯನಿರ್ವಹಣೆ:- ಭಾರತ ಸರ್ಕಾರದ ಗೃಹ ಸಚಿವಾಲಯ
ಕಾರ್ಯಗಳು:- ಈ ಕೆಳಗಿನ ಕಾರ್ಯತಂತ್ರದ ಸಂಸ್ಥೆಗಳಿಗೆ ಮತ್ತು ಭಾರತದ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳಿಗೆ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ.
ಬಾಹ್ಯಾಕಾಶ ಇಲಾಖೆ
ಪರಮಾಣು ಶಕ್ತಿ ಇಲಾಖೆ
ವಿಮಾನ ನಿಲ್ದಾಣಗಳು
ದೆಹಲಿ ಮೆಟ್ರೋ ಮತ್ತು ಬಂದರುಗಳು
ರಾಷ್ಟ್ರದ ಐತಿಹಾಸಿಕ ಸ್ಮಾರಕಗಳು
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ.
ಮಿನ್ಯೂಟ್‌ಮ್ಯಾನ್ III (Minuteman III) ಕ್ಷಿಪಣಿ
ಅಂತರರಾಷ್ಟ್ರೀಯ
ಇದೀಗ ಸುದ್ದಿಯಲ್ಲಿದೆ:
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕವು ತನ್ನ ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ.
ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯ ಬಗ್ಗೆ:
ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ICBM):- ‘ಡೂಮ್ಸ್‌ಡೇ’ ಕ್ಷಿಪಣಿ ಎಂದು ಅಡ್ಡಹೆಸರಿನಿಂದ ಕರೆಯಲ್ಪಡುವ ಇದು, ಅತ್ಯಂತ ಶಕ್ತಿಶಾಲಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ (ICBM).
ಸಾಮರ್ಥ್ಯ:- ಇದು ಮ್ಯಾಕ್ 23ರ ಗರಿಷ್ಠ ವೇಗವನ್ನು ತಲುಪಬಲ್ಲದು. ಅಂದರೆ ಇದು ಗಂಟೆಗೆ ಸರಿಸುಮಾರು 28,400 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಮತ್ತು 9,600 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
ಅಭಿವೃದ್ಧಿಪಡಿಸಿದವರು:- 1950ರ ದಶಕದಲ್ಲಿ ಬೋಯಿಂಗ್ ಕಂಪನಿ.
ಉದ್ದೇಶ:-ಅಮೆರಿಕದ ಪ್ರದೇಶಗಳ ರಕ್ಷಣೆಯನ್ನು ಬಲಪಡಿಸುವ ದೃಷ್ಟಿಯಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ.
ಉಡಾವಣೆ ವ್ಯವಸ್ಥೆ:- ಶತ್ರುಗಳ ದಾಳಿಯಿಂದ ಕ್ಷಿಪಣಿಯನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ‘ಸೈಲೊ’ ಎಂಬ ಭದ್ರಪಡಿಸಿದ ಭೂಗತ ಬಂಕರ್‌ಗಳಿಂದ ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯನ್ನು ಸಂಗ್ರಹಿಸಿ ಉಡಾವಣೆ ಮಾಡಲಾಗುತ್ತದೆ.
ಗಮನಾರ್ಹ ಸಂಗತಿಯೆಂದರೆ, ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯನ್ನು ಇದುವರೆಗೆ ಯಾವುದೇ ನೈಜ ಯುದ್ಧದಲ್ಲಿ ಬಳಸಲಾಗಿಲ್ಲ. ಇದು ಯುದ್ಧದಲ್ಲಿ ಬಳಕೆಯಾಗದ ವಿಶ್ವದ ಅತ್ಯಂತ ಶಕ್ತಿಶಾಲಿ ಅಸ್ತ್ರಗಳಲ್ಲಿ ಒಂದಾಗಿದೆ.
ನಿಮಗಿದು ಗೊತ್ತೆ? ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯನ್ನು 2030ರ ದಶಕದಲ್ಲಿ ಬದಲಾಯಿಸಲು ನಿರ್ಧರಿಸಲಾಗಿತ್ತು. ಆದರೆ, ಹೊಸ ಸೆಂಟಿನೆಲ್ ಐಸಿಬಿಎಂ (ICBM) ಅಭಿವೃದ್ಧಿಯಲ್ಲಿನ ವಿಳಂಬದಿಂದಾಗಿ, ಈ ಹಳೆಯ ಕ್ಷಿಪಣಿಯನ್ನೇ 2050ರವರೆಗೆ ಸೇವೆಗೆ ಬಳಸಲು ಅಧಿಕಾರಿಗಳು ಚಿಂತಿಸುತ್ತಿದ್ದಾರೆ.
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF)
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
‘ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ’ಯು (NIIF) ತನ್ನ ‘ಎರಡನೇ ಖಾಸಗಿ ಮಾರುಕಟ್ಟೆ ನಿಧಿ’ಗಾಗಿ (PMF-II) $ 750 ದಶಲಕ್ಷ ಡಾಲರ್‌ಗಳ ಬಂಡವಾಳವನ್ನು ಯಶಸ್ವಿಯಾಗಿ ಸಂಗ್ರಹಿಸಿದೆ.
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF)ಯ ಬಗ್ಗೆ:
ಈ ಸಂಸ್ಥೆಯನ್ನು 2015 ರಲ್ಲಿ ಭಾರತದ ‘ಸಾರ್ವಭೌಮ ಸಂಪತ್ತು ನಿಧಿ’ಯಾಗಿ ಸ್ಥಾಪಿಸಲಾಯಿತು.
ಪ್ರಮುಖ ಉದ್ದೇಶ:- ದೇಶದ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ದೀರ್ಘಾವಧಿಯ ಬಂಡವಾಳವನ್ನು ಒದಗಿಸುವುದು.
ಹೂಡಿಕೆದಾರರ ಒಡೆತನದ ನಿಧಿ ನಿರ್ವಾಹಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ:- ಇದರಲ್ಲಿ ಭಾರತ ಸರ್ಕಾರವು ಶೇಕಡಾ 49 ರಷ್ಟು ಪಾಲುದಾರಿಕೆ ಹೊಂದಿದ್ದು, ಪ್ರಮುಖ ಜಾಗತಿಕ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಉಳಿದ ಶೇಕಡಾ 51 ರಷ್ಟು ಪಾಲನ್ನು ಹೊಂದಿದ್ದಾರೆ.
ಕ್ಷುದ್ರಗ್ರಹ 2024 YR4
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದ ವೀಕ್ಷಣೆಗಳ ಆಧಾರದ ಮೇಲೆ, 2024 YR4 ಕ್ಷುದ್ರಗ್ರಹವು 2032 ರಲ್ಲಿ ಚಂದ್ರನಿಗೆ ಅಪ್ಪಳಿಸುವ ಯಾವುದೇ ಅಪಾಯವನ್ನು ಹೊಂದಿಲ್ಲ ಎಂಬುದನ್ನು ನಾಸಾ (NASA) ಖಚಿತಪಡಿಸಿದೆ.
2024 YR4 ಕ್ಷುದ್ರಗ್ರಹವನ್ನು ಭೂ-ಸಮೀಪದ ಕ್ಷುದ್ರಗ್ರಹ (NEA)ಎಂದು ವರ್ಗೀಕರಿಸಲಾಗಿದೆ. ಅಂದರೆ, ಇದರ ಕಕ್ಷೆಯು ಭೂಮಿಯ ಕಕ್ಷೆಯ ಮಾರ್ಗಕ್ಕೆ ಬಹುಸಮೀಪದಲ್ಲಿ ಹಾದುಹೋಗುತ್ತದೆ.
ಕ್ಷುದ್ರಗ್ರಹ, ಉಲ್ಕಾಖಂಡ, ಉಲ್ಕೆ ಮತ್ತು ಉಲ್ಕಾಪಿಂಡಗಳ ನಡುವಿನ ವ್ಯತ್ಯಾಸ:
ಕ್ಷುದ್ರಗ್ರಹ (Asteroid):- ಇದು ಸೂರ್ಯನ ಸುತ್ತ ಪರಿಭ್ರಮಿಸುವ ಸಣ್ಣ, ಕಲ್ಲಿನಿಂದ ಕೂಡಿದ ಆಕಾಶಕಾಯವಾಗಿದೆ.
ಉಲ್ಕಾಖಂಡ/ಉಲ್ಕಾಶಿಲೆ (Meteoroid):- ಇದು ಬಾಹ್ಯಾಕಾಶದಲ್ಲಿ ಸೂರ್ಯನ ಸುತ್ತ ಸುತ್ತುವಾಗ ಕ್ಷುದ್ರಗ್ರಹ ಅಥವಾ ಧೂಮಕೇತುವಿನಿಂದ ಬೇರ್ಪಟ್ಟ ಸಣ್ಣ ಕಣ ಅಥವಾ ಚೂರು ಆಗಿದೆ.
ಉಲ್ಕೆ (Meteor):-ಉಲ್ಕಾಖಂಡವು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ, ಗಾಳಿಯ ಘರ್ಷಣೆಯಿಂದಾಗಿ ಸುಟ್ಟುಹೋಗುವಾಗ ಕಾಣಿಸಿಕೊಳ್ಳುವ ಬೆಳಕಿನ ಗೆರೆ (ಬೀಳುವ ನಕ್ಷತ್ರ).
ಉಲ್ಕಾಪಿಂಡ/ಉಲ್ಕಾಶಿಲೆ (Meteorite):- ಭೂಮಿಯ ವಾತಾವರಣವನ್ನು ಪ್ರವೇಶಿಸಿ ಬರುವಾಗ ಸಂಪೂರ್ಣವಾಗಿ ಸುಟ್ಟುಹೋಗದೆ, ಭೂಮಿಯ ಮೇಲ್ಮೈಗೆ ಅಪ್ಪಳಿಸುವ ಉಲ್ಕೆಯ ಉಳಿಕೆ ಭಾಗ.
ಜಾಗತಿಕ ಕ್ಷುದ್ರಗ್ರಹ ಅಧ್ಯಯನ/ಅನ್ವೇಷಣಾ ‘ಮಿಷನ್’ಗಳು:
ನಾಸಾದ ಡಾರ್ಟ್ (DART) ಮಿಷನ್, 2022:- ಇದು ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸುವ ಮೂಲಕ ಅದರ ಚಲನಾ ಪಥವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ವಿಶ್ವದ ಮೊದಲಗ್ರಹಗಳ ರಕ್ಷಣಾ ಪರೀಕ್ಷೆಯಾಗಿದೆ. ಇದು ನಿರ್ದಿಷ್ಟವಾಗಿ ಡಿಡಿಮೋಸ್ ಎಂಬ ಜೋಡಿ ಕ್ಷುದ್ರಗ್ರಹವನ್ನು ಗುರಿಯಾಗಿಸಿಕೊಂಡಿತ್ತು.
ನಾಸಾದ ಒಸಿರಿಸ್-ರೆಕ್ಸ್ (OSIRIS-REx), 2016-2023:-ಇದು ಬೆನ್ನು (Bennu) ಕ್ಷುದ್ರಗ್ರಹದಿಂದ ಮಾದರಿಗಳನ್ನು ತರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದು ಸೌರಮಂಡಲದ ರಚನೆಯ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ.
ಜಪಾನಿನ ಹಯಾಬುಸಾ-2 (Hayabusa2 – JAXA), 2014-2020:- ಈ ಯೋಜನೆಯು ರಿಯೂಗು (Ryugu) ಕ್ಷುದ್ರಗ್ರಹದಿಂದ ಯಶಸ್ವಿಯಾಗಿ ಮಾದರಿಗಳನ್ನು ಸಂಗ್ರಹಿಸಿದೆ. ಈ ಮಾದರಿಯು ಜೀವಿಗಳ ಉಗಮಕ್ಕೆ ಅಗತ್ಯವಾದ ಮೂಲಭೂತ ಅಂಶಗಳನ್ನು ಒಳಗೊಂಡಿದೆ.
ನಾಸಾದ ಲೂಸಿ (LUCY) ಮಿಷನ್, 2021-ಪ್ರಸ್ತುತ:- ಇದು ಗುರುಗ್ರಹದ ಕಕ್ಷೆಯಲ್ಲಿರುವ ಬಹುಪಾಲು ಟ್ರೋಜನ್ ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲು ಹಮ್ಮಿಕೊಂಡಿರುವ 12 ವರ್ಷಗಳ ಸುದೀರ್ಘ ಕಾರ್ಯಾಚರಣೆಯಾಗಿದೆ.
ಯುರೋಪಿನ ಬಾಹ್ಯಾಕಾಶ ಸಂಸ್ಥೆ (ESA)ಯ ಹೆರಾ ಮಿಷನ್, 2024:- ಡಾರ್ಟ್ (DART) ಯೋಜನೆಯು ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದಾಗ ಉಂಟಾದ ಕುಳಿಯನ್ನು ಅಧ್ಯಯನ ಮಾಡಲು ಹಾಗೂ ಅದರ ಪಥ ಬದಲಾವಣೆಯ ಯಶಸ್ಸನ್ನು ವಿಶ್ಲೇಷಿಸಲು ಈ ಮಿಷನ್ ಅನ್ನು ನಿಯೋಜಿಸಿದೆ.
ಚೀನಾದ ಟಿಯಾನ್‌ವೆನ್-2 (Tianwen-2), 2025:-ಇದು ಭೂ-ಸಮೀಪದ ಕ್ಷುದ್ರಗ್ರಹವಾದ ಕಾಮೊಓಲೆವಾ (Kamo’oalewa) ದಿಂದ ಮಾದರಿಯನ್ನು ಸಂಗ್ರಹಿಸಲು ನಿಯೋಜಿತ ಯೋಜನೆಯಾಗಿದೆ.
ಕರ್ನಾಟಕದಲ್ಲಿ ಕಾರ್ಮಿಕ ಸಂಹಿತೆ ನಿಯಮಗಳಿಗಾಗಿ ತ್ರಿಪಕ್ಷೀಯ ಸಮಿತಿಗಳು
ಇದೀಗ ಸುದ್ದಿಯಲ್ಲಿದೆ:
ರಾಜ್ಯ-ನಿರ್ದಿಷ್ಟ ನಿಯಮಗಳನ್ನು ಪರಿಷ್ಕರಿಸಲು ಮತ್ತು ಅಂತಿಮಗೊಳಿಸಲು ಕರ್ನಾಟಕ ಸರ್ಕಾರವು ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ತಲಾ ಒಂದರಂತೆ ಒಟ್ಟು ನಾಲ್ಕು ತ್ರಿಪಕ್ಷೀಯ ಸಮಿತಿಗಳನ್ನು ಸ್ಥಾಪಿಸಿದೆ.
ಅಧಿಕಾರಿಗಳು, ಕಾರ್ಮಿಕ ಸಂಘದ ಸದಸ್ಯರು ಮತ್ತು ಉದ್ಯೋಗದಾತರ ಪ್ರತಿನಿಧಿಗಳನ್ನು ಒಳಗೊಂಡಿರುವ ಈ ಸಮಿತಿಗಳು ವೇತನ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕರಡು ನಿಯಮಗಳನ್ನು ಪರಿಶೀಲಿಸಲಿವೆ.
ಇವುಗಳನ್ನು ಏಪ್ರಿಲ್ 1, 2026 ರೊಳಗೆ ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ.
ಪ್ರಮುಖ ವಿವರಗಳು:
ಉದ್ದೇಶ:-ಸ್ವೀಕರಿಸಲಾದ ಪ್ರತಿಕ್ರಿಯೆಗಳ ಆಧಾರದ ಮೇಲೆ ರಾಜ್ಯದ ಕರಡು ನಿಯಮಗಳನ್ನು ಪರಿಷ್ಕರಿಸುವುದು. ಅಲ್ಲದೆ, ಕೆಲಸದ ಸಮಯ ಮತ್ತು ಮುಷ್ಕರಗಳ ಕುರಿತು ಕಾರ್ಮಿಕ ಸಂಘಗಳು ವ್ಯಕ್ತಪಡಿಸಿದ ಕಳವಳಗಳನ್ನು ಇವು ಪರಿಹರಿಸಲಿವೆ.
ನಾಲ್ಕು ಪ್ರತ್ಯೇಕ ಸಮಿತಿಗಳ ರಚನೆ:- ಕೇಂದ್ರದ ಈ ಕೆಳಗಿನ ನಾಲ್ಕು ಕಾರ್ಮಿಕ ಸಂಹಿತೆಗಳ ನಿರ್ದಿಷ್ಟ ಸೂಕ್ಷ್ಮತೆಗಳನ್ನು ಪರಿಹರಿಸಲು ರಚಿಸಲಾಗಿದೆ:
ವೇತನ ಸಂಹಿತೆ
ಕೈಗಾರಿಕಾ ಸಂಬಂಧಗಳ ಸಂಹಿತೆ
ಸಾಮಾಜಿಕ ಭದ್ರತಾ ಸಂಹಿತೆ
ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ
ಹಿನ್ನೆಲೆ:- ಈ ಕ್ರಮಗಳು ಹೊಸ ಕಾನೂನುಗಳನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿವೆ. ಇದು ಕಾರ್ಮಿಕ ನಿಯಮಗಳನ್ನು ಸುಗಮಗೊಳಿಸಲು ಮತ್ತು ಕಾನೂನು ಜಾರಿಗೊಳಿಸುವಿಕೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.
ಪ್ರಾಮುಖ್ಯತೆ:- ಕರ್ನಾಟಕದಲ್ಲಿ ಹೊಸ ಕಾರ್ಮಿಕ ಆಡಳಿತವನ್ನು ಜಾರಿಗೆ ತರುವಲ್ಲಿ ಒಮ್ಮತದ ವಿಧಾನವನ್ನು ಅಳವಡಿಸಿಕೊಳ್ಳುವುದು ಈ ಉಪಕ್ರಮದ ಪ್ರಮುಖ ಗುರಿಯಾಗಿದೆ.
ಇತ್ತೀಚಿಗೆ, ಕೇಂದ್ರ ರಕ್ಷಣಾ ಸಚಿವರು ‘ರಕ್ಷಣಾ ಪಡೆಗಳ ದೃಷ್ಟಿಕೋನ 2047: ಭವಿಷ್ಯಕ್ಕೆ ಸಜ್ಜಾದ ಭಾರತೀಯ ಸೇನೆಗಾಗಿನ ಮಾರ್ಗಸೂಚಿ’ ಎಂಬ ಮಹತ್ವದ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಈ ದಾಖಲೆಯನ್ನು ‘ಸಮಗ್ರ ರಕ್ಷಣಾ ಸಿಬ್ಬಂದಿ ಕೇಂದ್ರ ಕಚೇರಿ’ಯು ಸಿದ್ಧಪಡಿಸಿದೆ.
ಉದ್ದೇಶಗಳು:
ಭವಿಷ್ಯದ ಯುದ್ಧ ಸಿದ್ಧತೆಗಳು:- ಸೈಬರ್, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ (AI) ಮತ್ತು ಮಾಹಿತಿ ಯುದ್ಧವೂ ಸೇರಿದಂತೆ ಬಹು-ಕ್ಷೇತ್ರದ ಯುದ್ಧಗಳಿಗೆ ಭಾರತೀಯ ಸೇನೆಯನ್ನು ಸಜ್ಜುಗೊಳಿಸುವುದಕ್ಕೆ ಈ ದೃಷ್ಟಿಕೋನವು ವಿಶೇಷ ಒತ್ತು ನೀಡುತ್ತದೆ.
ರಾಷ್ಟ್ರೀಯ ಅಭಿವೃದ್ಧಿ ಗುರಿಗಳೊಂದಿಗೆ ಸಮನ್ವಯ:- ರಕ್ಷಣಾ ಸಾಮರ್ಥ್ಯಗಳ ಈ ಸಮಗ್ರ ಪರಿವರ್ತನೆಯನ್ನು, 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸುವ ವಿಶಾಲ ಉದ್ದೇಶದೊಂದಿಗೆ ಬೆಸೆಯಲಾಗಿದೆ.
ಈ ಮಾರ್ಗಸೂಚಿಯ ಪ್ರಮುಖ ಲಕ್ಷಣಗಳು:
ಸಮಗ್ರ ಮತ್ತು ಬಹು-ಕ್ಷೇತ್ರಗಳ ಸೇನೆ:- ಭೂಮಿ, ಸಮುದ್ರ, ವಾಯು, ಸೈಬರ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವುಳ್ಳ ಸಮಗ್ರ ಹಾಗೂ ಚುರುಕಾದ ಸೇನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಈ ದೃಷ್ಟಿಕೋನವು ಪ್ರಸ್ತಾಪಿಸಿದೆ.
ಸೇನೆಯ ದಕ್ಷತೆ ಮತ್ತು ತ್ವರಿತ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಸುಧಾರಿಸುವುದು:- ಮೂರೂ ಸೇನಾ ಪಡೆಗಳ (ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ) ನಡುವೆ ಜಂಟಿ ಕಾರ್ಯಾಚರಣೆಯ ಯೋಜನೆಗಳನ್ನು ಬಲಪಡಿಸುವುದರಿಂದ ಗಣನೀಯವಾಗಿ ಸುಧಾರಿಸಲಿದೆ.
ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯ ಬಲವರ್ಧನೆ:- ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಆತ್ಮನಿರ್ಭರ್ ಭಾರತ್’ (ಸ್ವಾವಲಂಬಿ ಭಾರತ) ಉಪಕ್ರಮಕ್ಕೆ ಈ ಮಾರ್ಗಸೂಚಿಯು ಬಲವಾದ ಬೆಂಬಲ ನೀಡುತ್ತದೆ.
ತಾಂತ್ರಿಕ ಪ್ರಗತಿ:- ಕೃತಕ ಬುದ್ಧಿಮತ್ತೆ, ಸ್ವಾಯತ್ತ ವ್ಯವಸ್ಥೆಗಳು , ಸೈಬರ್ ಸಾಮರ್ಥ್ಯಗಳು ಮತ್ತು ಸುಧಾರಿತ ಕಣ್ಗಾವಲು ಸಾಧನಗಳಂತಹ ಉದಯೋನ್ಮುಖ ತಂತ್ರಜ್ಞಾನಗಳ ಹೆಚ್ಚಿನ ಬಳಕೆಗೆ ಈ ವರದಿಯು ಶಿಫಾರಸು ಮಾಡಿದೆ.
ಮುಖ್ಯ ಚುನಾವಣಾ ಆಯುಕ್ತರ ವಜಾಗೊಳಿಸುವ ಪ್ರಕ್ರಿಯೆ
ರಾಜಕೀಯ
ಇದೀಗ ಸುದ್ದಿಯಲ್ಲಿದೆ:
ವಿರೋಧ ಪಕ್ಷಗಳು ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾದ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂಸತ್ತಿನಲ್ಲಿ ಅವರನ್ನು ವಜಾಗೊಳಿಸಲು ಮಹಾಭಿಯೋಗ ನಿರ್ಣಯವನ್ನು ಮಂಡಿಸಲು ಚಿಂತನೆ ನಡೆಸುತ್ತಿವೆ.
‘ಸಂವಿಧಾನದ 324ನೇ ವಿಧಿ’ಯ ಬಗ್ಗೆ:
ಭಾರತದ ಸಂವಿಧಾನದ 324ನೇ ವಿಧಿಯ ಪ್ರಕಾರ, ಭಾರತದ ಚುನಾವಣಾ ಆಯೋಗವು (ECI) ಒಬ್ಬರು ಮುಖ್ಯ ಚುನಾವಣಾ ಆಯುಕ್ತರನ್ನು (CEC) ಹಾಗೂ ರಾಷ್ಟ್ರಪತಿಗಳು ನಿರ್ಧರಿಸುವಷ್ಟು ಸಂಖ್ಯೆಯ ಇತರ ಚುನಾವಣಾ ಆಯುಕ್ತರನ್ನು (ECs) ಒಳಗೊಂಡಿರುತ್ತದೆ.
ಭಾರತದ ಚುನಾವಣಾ ಆಯೋಗವು ಈ ಕೆಳಗಿನ ಜವಾಬ್ದಾರಿಗಳನ್ನು ಹೊಂದಿದೆ:
ಸಂಸತ್ತು, ರಾಜ್ಯ ಶಾಸಕಾಂಗಗಳು ಹಾಗೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸುವುದು ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು.
ಚುನಾವಣಾ ಆಯುಕ್ತರನ್ನು ನೇಮಕ:- ಸಂಸತ್ತಿನ ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟು, ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ ಎಂದು ಸಂವಿಧಾನವು ಸ್ಪಷ್ಟಪಡಿಸುತ್ತದೆ.
ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಸಾಂವಿಧಾನಿಕ ನಿಬಂಧನೆಗಳು:
ಭಾರತದ ಸಂವಿಧಾನದ 324(5) ನೇ ವಿಧಿಯ ಅನ್ವಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸುವ ಪ್ರಕ್ರಿಯೆಯ ರೀತಿಯಲ್ಲಿಯೇ ಮತ್ತು ಅದೇ ಆಧಾರಗಳ ಮೇರೆಗೆ ಮಾತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬಹುದು (ಪದಚ್ಯುತಿಗೊಳಿಸಬಹುದು).
ಮುಖ್ಯ ಚುನಾವಣಾ ಆಯುಕ್ತರ ವಜಾ ಕೋರುವ ನಿರ್ಣಯವನ್ನು ಸಂಸತ್ತಿನ ಯಾವುದೇ ಸದನದಲ್ಲಿ (ಲೋಕಸಭೆ ಅಥವಾ ರಾಜ್ಯಸಭೆ) ಮಂಡಿಸಬಹುದು. ಆದರೆ, ಆ ನಿರ್ಣಯದಲ್ಲಿ ವಜಾಗೊಳಿಸಲು ಇರುವ ನಿಖರವಾದ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
ಈ ನಿರ್ಣಯವನ್ನು ಮಂಡಿಸಲು ಕೆಳಕಂಡ ರೀತಿಯಲ್ಲಿ ಬೆಂಬಲ ಅಗತ್ಯವಿರುತ್ತದೆ:
ಲೋಕಸಭೆಯ ಕನಿಷ್ಠ 100 ಸದಸ್ಯರ ಬೆಂಬಲ, ಅಥವಾ
ರಾಜ್ಯಸಭೆಯ ಕನಿಷ್ಠ 50 ಸದಸ್ಯರ ಬೆಂಬಲ.
ಒಮ್ಮೆ ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಆರೋಪಗಳ ಕುರಿತು ತನಿಖೆ ನಡೆಸಲು ಲೋಕಸಭೆಯ ಸಭಾಧ್ಯಕ್ಷರು ಅಥವಾ ರಾಜ್ಯಸಭೆಯ ಸಭಾಪತಿಯವರು ಒಂದು ವಿಚಾರಣಾ ಸಮಿತಿಯನ್ನು ರಚಿಸುತ್ತಾರೆ.
ಒಂದು ವೇಳೆ ಈ ಸಮಿತಿಯು ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿದರೆ, ಆ ನಿರ್ಣಯವನ್ನು ಸಂಸತ್ತಿನಲ್ಲಿ ಮತದಾನಕ್ಕೆ ತೆಗೆದುಕೊಳ್ಳಲಾಗುತ್ತದೆ.
ನಂತರ, ಎರಡೂ ಸದನಗಳು ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (2/3ರಷ್ಟು) ‘ವಿಶೇಷ ಬಹುಮತ’ದೊಂದಿಗೆ ಆ ನಿರ್ಣಯವನ್ನು ಅಂಗೀಕರಿಸಬೇಕು. ಎರಡೂ ಸದನಗಳು ಈ ನಿರ್ಣಯವನ್ನು ಒಪ್ಪಿದ ನಂತರ, ಅಂತಿಮವಾಗಿ ರಾಷ್ಟ್ರಪತಿಗಳು ವಜಾಗೊಳಿಸುವ ಆದೇಶವನ್ನು ಹೊರಡಿಸುತ್ತಾರೆ.
ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರ (NDSA)
ಆಡಳಿತ
ಇದೀಗ ಸುದ್ದಿಯಲ್ಲಿದೆ:
ನವದೆಹಲಿಯ ಆರ್.ಕೆ. ಪುರಂನಲ್ಲಿ ‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರ’ದ (NDSA) ನೂತನ ಕಚೇರಿಯನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು.
ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರ (NDSA)ದ ಬಗ್ಗೆ:
ಶಾಸನಬದ್ಧ ಸಂಸ್ಥೆಯಾಗಿದೆ:- ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರವು ‘ಅಣೆಕಟ್ಟು ಸುರಕ್ಷತಾ ಕಾಯ್ದೆ, 2021’ ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
ಕಾರ್ಯಾನಿರ್ವಹಣೆ:-ಕೇಂದ್ರ ‘ಜಲಶಕ್ತಿ ಸಚಿವಾಲಯ
ಉದ್ದೇಶ:- ಭಾರತದಲ್ಲಿ ಅಣೆಕಟ್ಟುಗಳ ಸುರಕ್ಷತೆಯನ್ನು ಖಾತರಿಪಡಿಸುವ ‘ರಾಷ್ಟ್ರೀಯ ಮಟ್ಟದ ನಿಯಂತ್ರಕ ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುವುದು.
ಪ್ರಮುಖ ಡಿಜಿಟಲ್ ಉಪಕ್ರಮಗಳು:
ನೇತ್ರಾ (NETRA):- ಇದು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಂಡು ಅಣೆಕಟ್ಟುಗಳ ಮೇಲ್ವಿಚಾರಣೆ ಮತ್ತು ವಿಮರ್ಶೆ ನಡೆಸುವ ವ್ಯವಸ್ಥೆಯಾಗಿದೆ. ಈ ತಂತ್ರಜ್ಞಾನವನ್ನು ‘ಧರ್ಮ’ (DHARMA) ಎಂಬ ಅಣೆಕಟ್ಟು ಸುರಕ್ಷತಾ ದತ್ತಾಂಶ ಕೇಂದ್ರದೊಂದಿಗೆ ಸಂಯೋಜಿಸಲಾಗಿದೆ.
ರಾಷ್ಟ್ರೀಯ ಬಾಂಧ್ ಸುರಕ್ಷಾ ದರ್ಪಣ್ (RBSD):- ಅಣೆಕಟ್ಟು ಕುಸಿತದ ವಿಶ್ಲೇಷಣೆಯ (DBA) ಕುರಿತು ನಿಖರವಾದ ನೈಜ ಚಿತ್ರಣವನ್ನು ಒದಗಿಸಲು (ಅಥವಾ ದೃಶ್ಯರೂಪದಲ್ಲಿ ಪ್ರಸ್ತುತಪಡಿಸಲು) ಈ ಡಿಜಿಟಲ್ ವೇದಿಕೆಯನ್ನು ರೂಪಿಸಲಾಗಿದೆ. ಇದನ್ನು ‘ಸುಧಾರಿತ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ’ವು (C-DAC) ಅಭಿವೃದ್ಧಿಪಡಿಸಿದೆ.
GNA ಇಂಡಿಯಾ ಪ್ರೈವೇಟ್ ಲಿಮಿಟೆಡ್, BSNL ಮತ್ತು Acer ಇಂಡಿಯಾ ಸಹಯೋಗದೊಂದಿಗೆ ಉತ್ತರ ಕನ್ನಡದ ಕುಗ್ರಾಮ ಪ್ರವಾಸಿ ತಾಣಗಳಾದ ಯಾಣ, ಸಹಸ್ರಲಿಂಗ, ಸಾತೋಡಿ ಜಲಪಾತ ಮತ್ತು ಮಾಗೋಡು ಜಲಪಾತಗಳಲ್ಲಿಅತ್ಯಧಿಕ ವೇಗದವೈ-ಫೈ 7 (Wi-Fi 7) ಸಂಪರ್ಕವನ್ನು ಪ್ರಾರಂಭಿಸಲಾಗಿದೆ.
ಗ್ರಾಮೀಣ ಸ್ಮಾರ್ಟ್ ವಿಲೇಜ್ ಸೆಂಟರ್ ಯೋಜನೆ:
ಈ ಉಪಕ್ರಮವು ದಟ್ಟವಾದ ಅರಣ್ಯ ಪ್ರದೇಶಗಳಲ್ಲಿನ“ಬ್ಲೈಂಡ್ ಸ್ಪಾಟ್‌ಗಳನ್ನು” (ಸಂಪರ್ಕವಿಲ್ಲದ ಪ್ರದೇಶಗಳು) ನಿವಾರಿಸುತ್ತದೆ. ಇದು ಪ್ರವಾಸಿಗರಿಗೆ ಡಿಜಿಟಲ್ ಪಾವತಿ, ಭದ್ರತೆ ಮತ್ತು ಅಂತರ್ಜಾಲ ಸಂಪರ್ಕವನ್ನು ಸುಗಮಗೊಳಿಸುತ್ತದೆ.
ಗುರಿ:-ಪ್ರವಾಸಿಗರ ಅನುಭವಗಳನ್ನು ಉತ್ತಮಗೊಳಿಸುವುದು, ಗ್ರಾಮೀಣ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು “ಗ್ರಾಮೀಣ ಸ್ಮಾರ್ಟ್ ವಿಲೇಜ್ ಸೆಂಟರ್ ಯೋಜನೆ”ಗೆ ಬೆಂಬಲ ನೀಡುವುದು.
ಉದ್ದೇಶ:-ಪಶ್ಚಿಮ ಘಟ್ಟಗಳ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಸಂಪರ್ಕವನ್ನು ಸುಧಾರಿಸುವುದು. ಇದು ಡಿಜಿಟಲ್ ಪಾವತಿಗಳನ್ನು ಬೆಂಬಲಿಸುತ್ತದೆ ಮತ್ತು ನೈಜ-ಸಮಯದ ಮಾಹಿತಿ ಲಭ್ಯತೆಯನ್ನು ಒದಗಿಸುತ್ತದೆ.
‘ಯಾಣ’ದ ಬಂಡೆಗಳು ಮತ್ತು ಗುಹೆಗಳ ಬಗ್ಗೆ:
ದಟ್ಟವಾದ ಸಹ್ಯಾದ್ರಿ ಅರಣ್ಯದ ನಡುವೆ ಎತ್ತರವಾಗಿ ನಿಂತಿರುವ ಎರಡು ಬೃಹತ್, ಕಪ್ಪು ಸುಣ್ಣದ ಕಲ್ಲಿನ ಏಕಶಿಲಾ ಬಂಡೆಗಳಾದ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳಿಗೆ ಇದು ಅತ್ಯಂತ ಪ್ರಸಿದ್ಧವಾಗಿದೆ.
ಪ್ರಮುಖ ಅಂಶ:-ಭೈರವೇಶ್ವರ ಬಂಡೆಯ ತಳಭಾಗದಲ್ಲಿ ಶಿವನಿಗೆ ಸಮರ್ಪಿತವಾದ ಗುಹಾಂತರ ದೇವಾಲಯವು ನೆಲೆಗೊಂಡಿದೆ.
ಸಹಸ್ರಲಿಂಗ:
ಇದು ಶಾಲ್ಮಲಾ ನದಿಯ ದಡದಲ್ಲಿರುವ ಒಂದು ವಿಶಿಷ್ಟವಾದ ಯಾತ್ರಾಸ್ಥಳ ಮತ್ತು ಪಾರಂಪರಿಕ ತಾಣವಾಗಿದೆ. ಇಲ್ಲಿ ನದಿಯ ಪಾತ್ರದ ಬಂಡೆಗಳ ಮೇಲೆ ಸಾವಿರಾರು ಶಿವಲಿಂಗಗಳು ಮತ್ತು ನಂದಿ ವಿಗ್ರಹಗಳನ್ನು ನೇರವಾಗಿ ಕೆತ್ತಲಾಗಿದೆ.
ಪ್ರಮುಖ ಅಂಶ:- ನೀರಿನ ಹರಿವು ಕಡಿಮೆಯಿರುವ ಋತುವಿನಲ್ಲಿ ಈ ಸಂಕೀರ್ಣ ಕೆತ್ತನೆಗಳು ಸಂಪೂರ್ಣವಾಗಿ ಗೋಚರಿಸುತ್ತವೆ. ಆದರೆ ಮಳೆಗಾಲದಲ್ಲಿ ಲಿಂಗಗಳ ಮೇಲೆ ನೀರು ಹರಿಯುವ ದೃಶ್ಯವು ಈ ತಾಣವನ್ನು ದಿವ್ಯವಾಗಿ ಕಾಣುವಂತೆ ಮಾಡುತ್ತದೆ.
ವಾತಾವರಣ:-ನದಿಗೆ ಇಳಿಯುವ ಮೆಟ್ಟಿಲುಗಳು ಮತ್ತು ಕಿರು ನಡಿಗೆಯ ಮೂಲಕ ಪ್ರವೇಶಿಸಬಹುದಾದ ಈ ತಾಣವು ಅತ್ಯಂತ ಶಾಂತ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ಹೊಂದಿದೆ.
ಸಾತೋಡಿ ಜಲಪಾತ:
“ಕರ್ನಾಟಕದ ಮಿನಿ-ನಯಾಗರಾ” ಎಂದು ಕರೆಯಲ್ಪಡುವ ಈ 15 ಮೀಟರ್ ಎತ್ತರದ ಜಲಪಾತವು ಹಲವಾರು ಸಣ್ಣ ತೊರೆಗಳಿಂದ ರೂಪುಗೊಂಡಿದೆ. ಇದು ಅಂತಿಮವಾಗಿ ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರನ್ನು ಸೇರುತ್ತದೆ.
ಪ್ರಮುಖ ಅಂಶ:- ಇತರ ಅನೇಕ ಜಲಪಾತಗಳಿಗಿಂತ ಭಿನ್ನವಾಗಿ, ಇದರ ತಳಭಾಗದಲ್ಲಿರುವ ಕೊಳವು ಈಜಲು ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಆದ್ದರಿಂದ ಇದು ಜನಪ್ರಿಯ ವಿಹಾರ ತಾಣವಾಗಿ ಹೊರಹೊಮ್ಮಿದೆ.
ಮಾಗೋಡು ಜಲಪಾತ:
ಇದು ಎರಡು ಹಂತಗಳ ಅದ್ಭುತ ಜಲಪಾತವಾಗಿದೆ. ಇಲ್ಲಿ ಬೇಡ್ತಿ ನದಿಯು ಸುಮಾರು 200 ಮೀಟರ್ (650 ಅಡಿ) ಎತ್ತರದಿಂದ ಆಳವಾದ, ಕಲ್ಲಿನ ಕಣಿವೆಗೆ ಧುಮುಕುತ್ತದೆ.
ಪ್ರಮುಖ ಅಂಶ:- ಕಣಿವೆಯಾದ್ಯಂತ ಉತ್ತಮವಾಗಿ ನಿರ್ವಹಿಸಲಾದ ವೀಕ್ಷಣಾ ಸ್ಥಳಗಳಿಂದ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಮೀಪದ ಸ್ಥಳಗಳು:- ಪಶ್ಚಿಮ ಘಟ್ಟಗಳ ವಿಹಂಗಮ ಸೂರ್ಯಾಸ್ತವನ್ನು ವೀಕ್ಷಿಸಲು ಸಮೀಪದ ಜೇನುಕಲ್ಲು ಗುಡ್ಡ ವೀಕ್ಷಣಾ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.