ಲೇಖಕ: instakas

  • ಗಿಗ್ ಕಾರ್ಮಿಕರಿಗಾಗಿ ‘ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ’

    ಗಿಗ್ ಕಾರ್ಮಿಕರಿಗಾಗಿ ‘ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ’

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಡಿಜಿಟಲ್ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರಿಗಾಗಿ ಮೀಸಲಾದ ಡಿಜಿಟಲ್ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಿ ಮತ್ತು ಕಾರ್ಯಗತಗೊಳಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

    ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ವಿವರಗಳು:

    • ಪ್ರಾರಂಭಿಸಿದವರು: ಕರ್ನಾಟಕ ಸರ್ಕಾರ.
    • ಫಲಾನುಭವಿಗಳು: ಪ್ಲಾಟ್‌ಫಾರ್ಮ್ ಆಧಾರಿತ 12 ಲಕ್ಷ ಗಿಗ್ ಕಾರ್ಮಿಕರು.
    • ಪರಿಹರಿಸಲಾಗುವ ಪ್ರಮುಖ ಸಮಸ್ಯೆಗಳು: ಅಕೌಂಟ್ ರದ್ದತಿ, ಪಾವತಿಯನ್ನು ತಡೆಹಿಡಿಯುವುದು ಮತ್ತು ದಂಡ ವಿಧಿಸುವಿಕೆಗೆ ಸಂಬಂಧಿಸಿದ ಸಮಸ್ಯೆಗಳು.
    • ಕಂಪನಿಗಳ ಕಾಲಮಿತಿ: ಪ್ಲಾಟ್‌ಫಾರ್ಮ್‌ಗಳು ಯಾವುದೇ ವಿವಾದವನ್ನು 45 ದಿನಗಳೊಳಗೆ ಇತ್ಯರ್ಥಪಡಿಸುವುದು ಕಡ್ಡಾಯವಾಗಿದೆ.
    • ಮೇಲ್ಮನವಿ: ಪ್ಲಾಟ್‌ಫಾರ್ಮ್‌ಗಳ ನಿರ್ಧಾರದಿಂದ ಅಸಮಾಧಾನಗೊಂಡ ಕಾರ್ಮಿಕರು 30 ದಿನಗಳೊಳಗೆ ರಾಜ್ಯ ಕಲ್ಯಾಣ ಮಂಡಳಿಗೆ ಮೇಲ್ಮನವಿ ಸಲ್ಲಿಸಬಹುದು.

    ಕರ್ನಾಟಕ ಪ್ಲಾಟ್‌ಫಾರ್ಮ್-ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ, 2025:

    • ಉದ್ದೇಶ: ಸುಮಾರು 4 ಲಕ್ಷ ಗಿಗ್ ಕಾರ್ಮಿಕರಿಗೆ ಕಾನೂನು ಮಾನ್ಯತೆ ಮತ್ತು ಸಾಮಾಜಿಕ ರಕ್ಷಣೆಯನ್ನು ಒದಗಿಸುವುದು.
    • ಮೇ 2025 ರಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯ ಬದಲಿಗೆ ಈ ಕಾಯ್ದೆಯನ್ನು ತರಲಾಗಿದ್ದು, 12 ಸೆಪ್ಟೆಂಬರ್ 2025 ರಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದೆ.

    ಈ ಕಾಯ್ದೆಯ ಪ್ರಮುಖ ಲಕ್ಷಣಗಳು:

    • ಕಲ್ಯಾಣ ಮಂಡಳಿ ಮತ್ತು ನಿಧಿ: ನೋಂದಣಿ ಪ್ರಕ್ರಿಯೆ ಮತ್ತು ಯೋಜನೆಗಳ ಮೇಲ್ವಿಚಾರಣೆಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ತ್ರಿಪಕ್ಷೀಯ ‘ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ’ಯನ್ನು ಸ್ಥಾಪಿಸಲಾಗುತ್ತದೆ.
    • ಜೊತೆಗೆ, ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಪ್ರತಿ ವಹಿವಾಟಿನ ಪಾವತಿಯ ಮೇಲೆ 1% ರಿಂದ 5% ರಷ್ಟು “ಕಲ್ಯಾಣ ಶುಲ್ಕ”ವನ್ನು ವಿಧಿಸುವ ಮೂಲಕ ಮೀಸಲಾದ ‘ಕಲ್ಯಾಣ ನಿಧಿ’ಯನ್ನು ರಚಿಸಲಾಗುತ್ತದೆ.
    • ನೋಂದಣಿ ಕಡ್ಡಾಯ: ಎಲ್ಲಾ ಗಿಗ್ ಕಾರ್ಮಿಕರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಮತ್ತು ಸೌಲಭ್ಯಗಳನ್ನು ಪಡೆಯಲು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅನ್ವಯವಾಗುವಂತೆ ಅವರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು (Unique ID) ನೀಡಲಾಗುತ್ತದೆ.
    • ಅಲ್ಗಾರಿದಮಿಕ್ ಪಾರದರ್ಶಕತೆ: ಕಾರ್ಮಿಕರಿಗೆ ಕೆಲಸದ ಹಂಚಿಕೆ ಮತ್ತು ಗಳಿಕೆಯಲ್ಲಿ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು, ಪ್ಲಾಟ್‌ಫಾರ್ಮ್‌ಗಳು ತಮ್ಮ ಸ್ವಯಂಚಾಲಿತ ಮೇಲ್ವಿಚಾರಣೆ ಮತ್ತು ನಿರ್ಧಾರ-ತೆಗೆದುಕೊಳ್ಳುವ ವ್ಯವಸ್ಥೆಗಳ (ಅಲ್ಗಾರಿದಮ್‌ಗಳು) ವಿವರಗಳನ್ನು ಸರಳ ಭಾಷೆಯಲ್ಲಿ ಬಹಿರಂಗಪಡಿಸುವುದು ಕಡ್ಡಾಯವಾಗಿದೆ.
    • ಕುಂದುಕೊರತೆ ನಿವಾರಣೆ: ದೂರುಗಳ ನಿವಾರಣೆಗೆ ಎರಡು ಹಂತದ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ: ಮೊದಲನೆಯದಾಗಿ ಪ್ಲಾಟ್‌ಫಾರ್ಮ್ ಮಟ್ಟದಲ್ಲಿ ‘ಆಂತರಿಕ ವಿವಾದ ಪರಿಹಾರ ಸಮಿತಿ’ (IDRC), ಮತ್ತು ಎರಡನೆಯದಾಗಿ ಕಲ್ಯಾಣ ಮಂಡಳಿಗೆ ಮೇಲ್ಮನವಿ.
    • ಕೆಲಸದಿಂದ ವಜಾಗೊಳಿಸುವಿಕೆ: ಮಾನ್ಯವಾದ ಲಿಖಿತ ಕಾರಣ ಮತ್ತು 14 ದಿನಗಳ ಮುಂಚಿತ ನೋಟಿಸ್ (ದೈಹಿಕ ಹಾನಿಯ ಪ್ರಕರಣಗಳನ್ನು ಹೊರತುಪಡಿಸಿ) ನೀಡದೆ, ಪ್ಲಾಟ್‌ಫಾರ್ಮ್‌ಗಳು ಯಾವುದೇ ಕಾರ್ಮಿಕನನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ ಅಥವಾ ಅಕೌಂಟ್ ಅನ್ನು ರದ್ದುಗೊಳಿಸುವಂತಿಲ್ಲ.
  • ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves) | ರಾಷ್ಟ್ರೀಯ ಸೆಣಬು ಮಂಡಳಿ (National Jute Board) | ಬೈಗಾ ಬುಡಕಟ್ಟು (Baiga Tribe) | ರಾಷ್ಟ್ರೀಯ ತಂತ್ರಜ್ಞಾನ ದಿನ | ‘ಒನ್ ಕೇಸ್ ಒನ್ ಡೇಟಾ’ ಮತ್ತು ‘ಸು-ಸಹಾಯ್’ ಉಪಕ್ರಮ : ಸುಪ್ರೀಂ ಕೋರ್ಟ್ | ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು, 2025 | ಸೇಹತ್ ಯೋಜನೆ (SEHAT Mission)

    ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves)

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಮದು ಸರಕುಗಳ ಬಳಕೆಯನ್ನು ತಗ್ಗಿಸಬೇಕೆಂದು ನೀಡಿದ ಕರೆಯು, ಭಾರತವು ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Forex) ಉಳಿಸಲು ಬಳಕೆಯನ್ನು ಕಡಿಮೆ ಮಾಡಬೇಕೇ ಅಥವಾ ದೀರ್ಘಕಾಲೀನ ಆರ್ಥಿಕ ಪ್ರಗತಿಗಾಗಿ ದೇಶೀಯ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಬಲಪಡಿಸಬೇಕೇ ಎಂಬ ಚರ್ಚೆ ಮತ್ತೆ ಪ್ರಾರಂಭವಾಗಿದೆ.

    ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves):

    • ವಿದೇಶಿ ವಿನಿಮಯ ಮೀಸಲು ನಿಧಿ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಬಳಿ ಕಾಯ್ದಿರಿಸಿಕೊಂಡಿರುವ ವಿದೇಶಿ ಹಣದ (ಕರೆನ್ಸಿ) ಆಸ್ತಿಗಳಾಗಿವೆ.
    • ಈ ಮೀಸಲು ನಿಧಿಯು ಪ್ರಮುಖವಾಗಿ ಅಮೆರಿಕಾದ ಡಾಲರ್‌ನಂತಹ ವಿದೇಶಿ ಹಣ, ಚಿನ್ನದ ಸಂಗ್ರಹ, ವಿಶೇಷ ಸ್ವೀಕಾರದ  ಹಕ್ಕುಗಳು (Special Drawing Rights – SDRs) ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (IMF) ಮೀಸಲು ಪಾಲನ್ನು ಒಳಗೊಂಡಿರುತ್ತದೆ.
    • ಪ್ರಾಮುಖ್ಯತೆ: ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಆಮದುಗಳಿಗೆ ಹಣ ಪಾವತಿಸಲು, ರೂಪಾಯಿಯ ಮೌಲ್ಯವನ್ನು ಸ್ಥಿರವಾಗಿಡಲು, ಹೂಡಿಕೆದಾರರಲ್ಲಿ ನಂಬಿಕೆ ಉಳಿಸಿಕೊಳ್ಳಲು ಮತ್ತು ವಿದೇಶಿ ಸಾಲಗಳನ್ನು ಮರುಪಾವತಿಸಲು ಈ ನಿಧಿಯು ಅತ್ಯಗತ್ಯವಾಗಿದೆ.

    ಭಾರತಕ್ಕೆ ಸದೃಢ ವಿದೇಶಿ ವಿನಿಮಯ ಮೀಸಲು ನಿಧಿಯ ಅಗತ್ಯತೆ:

    • ಆಮದಿನ ಮೇಲಿನ ಅವಲಂಬನೆ: ಭಾರತವು ಕಚ್ಚಾ ತೈಲ, ರಸಗೊಬ್ಬರ, ಖಾದ್ಯ ತೈಲ, ಚಿನ್ನ, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಯಂತ್ರಗಳಿಗಾಗಿ ಬೇರೆ ದೇಶಗಳನ್ನು ತೀವ್ರವಾಗಿ ಅವಲಂಬಿಸಿದೆ. ಹೀಗಾಗಿ, ವ್ಯಾಪಾರವು ತಡೆರಹಿತವಾಗಿ ನಡೆಯಲು ಮತ್ತು ಆರ್ಥಿಕತೆ ಸ್ಥಿರವಾಗಿರಲು ಸಾಕಷ್ಟು ವಿದೇಶಿ ವಿನಿಮಯ ನಿಧಿಯ ಅಗತ್ಯವಿದೆ.
    • ಬಾಹ್ಯ ಆಘಾತಗಳಿಂದ ರಕ್ಷಣೆ: ಜಾಗತಿಕ ಹಣಕಾಸು ಅಸ್ಥಿರತೆ, ಏರುತ್ತಿರುವ ತೈಲ ಬೆಲೆಗಳು, ಹಣಕಾಸಿನ ಏರಿಳಿತಗಳು ಮತ್ತು ದೇಶದಿಂದ ಬಂಡವಾಳವು ದಿಢೀರನೆ ಹೊರಹೋಗುವ ಸಂದರ್ಭಗಳಲ್ಲಿ ಆರ್ಥಿಕತೆಯನ್ನು ರಕ್ಷಿಸಲು ಬಲವಾದ ಮೀಸಲು ನಿಧಿ ನೆರವಾಗುತ್ತದೆ.
    • ಕಡಿಮೆ ಮೀಸಲು ನಿಧಿ ಹೊಂದಿರುವ ದೇಶಗಳು ಹೆಚ್ಚಾಗಿ “ಪಾವತಿ ಶಿಲ್ಕು” (BOP) ಬಿಕ್ಕಟ್ಟು ಮತ್ತು ಹಣದ ತೀವ್ರ ಅಪಮೌಲ್ಯವನ್ನು (ರೂಪಾಯಿ ಬೆಲೆ ಕುಸಿಯುವುದು) ಎದುರಿಸಬೇಕಾಗುತ್ತದೆ.

    ಪಾವತಿಗಳ ಶಿಲ್ಕು (Balance of Payments – BoP):

    • ‘ಪಾವತಿಗಳ ಶಿಲ್ಕು’ (BoP) ಎಂಬುದು ಒಂದು ನಿರ್ದಿಷ್ಟ ಅವಧಿಯಲ್ಲಿ ಭಾರತ ಮತ್ತು ಪ್ರಪಂಚದ ಉಳಿದ ದೇಶಗಳ ನಡುವೆ ನಡೆಯುವ ಎಲ್ಲಾ ಆರ್ಥಿಕ ವಹಿವಾಟುಗಳ ಸಮಗ್ರ ದಾಖಲೆಯಾಗಿದೆ.
    • ಪಾವತಿ ಶಿಲ್ಕಿನ ಪ್ರಮುಖ ವಿಭಾಗಗಳು (Components of BoP):
    1. ಚಾಲ್ತಿ ಖಾತೆ (Current Account): ಇದು ಸರಕು ಮತ್ತು ಸೇವೆಗಳ ವ್ಯಾಪಾರ, ವಿದೇಶಿ ಹಣ ರವಾನೆ (Remittances) ಮತ್ತು ಆದಾಯ ವರ್ಗಾವಣೆಯನ್ನು ಒಳಗೊಂಡಿದೆ. ಭಾರತವು ಸಾಮಾನ್ಯವಾಗಿ ರಫ್ತು ಮಾಡುವುದಕ್ಕಿಂತ ಹೆಚ್ಚು ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ, ಇದು ‘ಚಾಲ್ತಿ ಖಾತೆ ಕೊರತೆ’ಗೆ (Current Account Deficit – CAD) ಕಾರಣವಾಗುತ್ತದೆ.
    2. ಬಂಡವಾಳ ಖಾತೆ (Capital Account): ಇದು ವಿದೇಶಿ ನೇರ ಹೂಡಿಕೆ (FDI), ವಿದೇಶಿ ಬಂಡವಾಳ ಹೂಡಿಕೆ (FPI) ಮತ್ತು ಬಾಹ್ಯ ಸಾಲಗಳಂತಹ (External borrowings) ವಿದೇಶಿ ಹೂಡಿಕೆಗಳನ್ನು ಒಳಗೊಂಡಿದೆ.
    • ಭಾರತವು ಸಾಂಪ್ರದಾಯಿಕವಾಗಿ ವಿದೇಶಿ ಹೂಡಿಕೆದಾರರಿಂದ ಹರಿದುಬರುವ ಬಂಡವಾಳದ ಒಳಹರಿವಿನ (Capital inflows) ಮೂಲಕ ತನ್ನ ಚಾಲ್ತಿ ಖಾತೆಯ ಕೊರತೆಯನ್ನು ಸರಿದೂಗಿಸಿಕೊಳ್ಳುತ್ತಿದೆ.

    ರಾಷ್ಟ್ರೀಯ ಸೆಣಬು ಮಂಡಳಿ (National Jute Board)

    ಅರ್ಥವ್ಯವಸ್ಥೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ರಾಷ್ಟ್ರೀಯ ಸೆಣಬು ಮಂಡಳಿಯು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಭಾರತೀಯ ಸೆಣಬು ನಿಗಮದ (Jute Corporation of India) ಸಹಯೋಗದೊಂದಿಗೆ 2023 ರಿಂದ ‘ಸೆಣಬು ಬೆಳೆ ಮಾಹಿತಿ ವ್ಯವಸ್ಥೆ’ ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿದೆ.

    ಸೆಣಬು ಬೆಳೆ ಮಾಹಿತಿ ವ್ಯವಸ್ಥೆ ಯೋಜನೆ (Jute Crop Information System project):

    • ಉದ್ದೇಶ: ಉಪಗ್ರಹ ಆಧಾರಿತ ದೂರಸಂವೇದಿ (Remote sensing) ತಂತ್ರಜ್ಞಾನ ಮತ್ತು ಕೃಷಿ ಭೂಮಿಯ ದತ್ತಾಂಶಗಳನ್ನು ಬಳಸಿ ಸೆಣಬು ಕೃಷಿಯನ್ನು ಮೇಲ್ವಿಚಾರಣೆ ಮಾಡುವುದು.
    • ಈ ಉಪಕ್ರಮದ ಅಡಿಯಲ್ಲಿ ಎರಡು ಪ್ರಮುಖ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ:
      • ಭುವನ್ ಜಂಪ್ (BHUVAN JUMP) ಮೊಬೈಲ್ ಅಪ್ಲಿಕೇಶನ್- ಇದು ಕೃಷಿ ಭೂಮಿಗೆ ಖುದ್ದಾಗಿ ಭೇಟಿ ನೀಡಿ ಸೆಣಬು ಬೆಳೆಯನ್ನು ಪರಿಶೀಲಿಸಲು ಬಳಸುವ ಮೊಬೈಲ್ ಅಪ್ಲಿಕೇಶನ್ ಆಗಿದೆ.
      • ಪಾಟ್ಸನ್ (PATSAN – Prospective Assessment of Jute Using Mobile App-Based Field Observations) – ಇದು ಅಧಿಕಾರಿಗಳು ಮತ್ತು ರೈತರಿಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ, ಸೆಣಬು ಕೃಷಿಯ ಬಹುತೇಕ ನೈಜ-ಸಮಯದ ಕಣ್ಗಾವಲು ಮತ್ತು ವಿಶ್ಲೇಷಣೆ ಒದಗಿಸುವ ವೆಬ್-ಆಧಾರಿತ ವೇದಿಕೆಯಾಗಿದೆ.

    ಭಾರತದಲ್ಲಿ ಸೆಣಬು ಉತ್ಪಾದನೆ:

    • ಇದು ನೈಸರ್ಗಿಕ, ಮರುಬಳಕೆ ಮಾಡಬಹುದಾದ, ಮಣ್ಣಿನಲ್ಲಿ ಕರಗುವ ಮತ್ತು ಪರಿಸರ ಸ್ನೇಹಿ ನಾರು ಬೆಳೆ ಆಗಿರುವ ಕಾರಣ, ಇದನ್ನು ‘ಸುವರ್ಣ ನಾರು’ (Golden fibre) ಎಂದು ಕರೆಯಲಾಗುತ್ತದೆ.
    • ಪ್ರಪಂಚದಲ್ಲೇ ಅತಿ ಹೆಚ್ಚು ಸೆಣಬು ಬೆಳೆಯುವ ದೇಶ ಭಾರತವಾಗಿದೆ. ಇದರ ನಂತರದ ಸ್ಥಾನಗಳಲ್ಲಿ ಬಾಂಗ್ಲಾದೇಶ ಮತ್ತು ಚೀನಾ ಇವೆ.
    • ಭಾರತದ ಒಟ್ಟು ಸೆಣಬು ಉತ್ಪಾದನೆಯಲ್ಲಿ ಶೇ. 99% ರಷ್ಟು ಪಾಲನ್ನು ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳೇ ಹೊಂದಿವೆ.

    ಸೆಣಬು ಕೃಷಿಗೆ ಅಗತ್ಯವಿರುವ ಭೌಗೋಳಿಕ ಪರಿಸ್ಥಿತಿಗಳು:

    • ತಾಪಮಾನ: ಸರಾಸರಿ ಗರಿಷ್ಠ 34°C ಮತ್ತು ಕನಿಷ್ಠ 15°C ತಾಪಮಾನ ಹಾಗೂ ಶೇ. 65% ರಷ್ಟು ವಾತಾವರಣದ ಆರ್ದ್ರತೆ (ತೇವಾಂಶ) ಇರಬೇಕು.
    • ಮಳೆ: ವಾರ್ಷಿಕ ಸುಮಾರು 150-250 ಸೆಂ.ಮೀ. ಮಳೆಯಾಗಬೇಕು.
    • ಮಣ್ಣು: ನದಿಪಾತ್ರದ ಮೆಕ್ಕಲು ಗೋಡು ಮಣ್ಣು (Loamy alluvial soils) ಇದಕ್ಕೆ ಅತಿ ಹೆಚ್ಚು ಸೂಕ್ತವಾಗಿದೆ. ಆದರೆ, ಜೇಡಿಮಣ್ಣಿನಿಂದ ಹಿಡಿದು ಮರಳು ಮಿಶ್ರಿತ ಗೋಡುಮಣ್ಣಿನವರೆಗೆ ಎಲ್ಲ ರೀತಿಯ ಮಣ್ಣಿನಲ್ಲೂ ಸೆಣಬನ್ನು ಬೆಳೆಯಬಹುದು.

    ಬೈಗಾ ಬುಡಕಟ್ಟು (Baiga Tribe)

    ಬುಡಕಟ್ಟು ಗುಂಪುಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಛತ್ತೀಸ್‌ಗಢದಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ಬೈಗಾ ಬುಡಕಟ್ಟಿಗೆ ಸೇರಿದ ಮಕ್ಕಳನ್ನು ಇತ್ತೀಚೆಗೆ ರಕ್ಷಿಸಲಾಗಿದೆ.

    ಬೈಗಾ ಬುಡಕಟ್ಟು ಜನಾಂಗದ ಬಗ್ಗೆ:

    • ಭೌಗೋಳಿಕ ಹಂಚಿಕೆ: ಬೈಗಾ ಸಮುದಾಯವು ಮಧ್ಯ ಭಾರತದಲ್ಲಿ, ಪ್ರಮುಖವಾಗಿ ಮಧ್ಯಪ್ರದೇಶ ರಾಜ್ಯದಲ್ಲಿ ಕಂಡುಬರುವ ಒಂದು ಜನಾಂಗೀಯ ಗುಂಪಾಗಿದೆ (Ethnic group). ಅಲ್ಲದೆ, ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಲ್ಲಿಯೂ ಇವರು ಅಲ್ಪಸಂಖ್ಯೆಯಲ್ಲಿ ಕಂಡುಬರುತ್ತಾರೆ.
    • ‘ಬೈಗಾ’ ಎಂದರೆ “ಮಾಂತ್ರಿಕ-ವೈದ್ಯ” ಎಂದರ್ಥ. 
    • ಛತ್ತೀಸ್‌ಗಢದಲ್ಲಿರುವ ಬೈಗಾ ಜನಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ಮತ್ತು ಅವರಲ್ಲಿ ಸಾಕ್ಷರತಾ ಪ್ರಮಾಣವು ಅತಿ ಕಡಿಮೆಯಿರುವುದರಿಂದ, ಛತ್ತೀಸ್‌ಗಢದ ಸರ್ಕಾರವು ಇವರನ್ನು ‘ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪು’ (PVTG) ಎಂದು ವರ್ಗೀಕರಿಸಿದೆ.
    • ಇವರು ಸಾಂಪ್ರದಾಯಿಕವಾಗಿ ‘ಸ್ಥಳಾಂತರ ಬೇಸಾಯ’ವನ್ನು ರೂಢಿಸಿಕೊಂಡಿದ್ದು, ಇದನ್ನು ಸ್ಥಳೀಯವಾಗಿ “ಬೇವಾರ್” (Bewar) ಕೃಷಿ ಎಂದು ಕರೆಯಲಾಗುತ್ತದೆ.

    ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳು (Particularly Vulnerable Tribal Groups – PVTGs):

    • ಪರಿಶಿಷ್ಟ ಪಂಗಡಗಳಲ್ಲಿಯೇ (STs) ಅತ್ಯಂತ ದುರ್ಬಲವಾಗಿರುವ ಮುಖ್ಯವಾಹಿನಿಯಿಂದ ಹೊರಗುಳಿದಿರುವ ತೀವ್ರ ಹಿಂದುಳಿದ ವರ್ಗಗಳನ್ನು ಪಿವಿಟಿಜಿ (PVTGs) ಎಂದು ಕರೆಯಲಾಗುತ್ತದೆ.
    • ಯಾವುದೇ ಬುಡಕಟ್ಟು ಗುಂಪನ್ನು ‘ಪಿವಿಟಿಜಿ’ (PVTG) ಎಂದು ಗುರುತಿಸಲು ಪರಿಗಣಿಸುವ ಪ್ರಮುಖ ಮಾನದಂಡಗಳು:
      • ಪುರಾತನ ಜೀವನಾಧಾರಿತ ಕೃಷಿ ತಂತ್ರಜ್ಞಾನದ ಬಳಕೆ.
      • ಅತ್ಯಂತ ಕಡಿಮೆ ಸಾಕ್ಷರತಾ ಪ್ರಮಾಣ.
      • ತೀವ್ರ ಆರ್ಥಿಕ ಹಿಂದುಳಿದಿರುವಿಕೆ.
      • ಕ್ಷೀಣಿಸುತ್ತಿರುವ ಅಥವಾ ಸ್ಥಗಿತಗೊಂಡಿರುವ ಜನಸಂಖ್ಯೆ.

    ಪಿವಿಟಿಜಿ (PVTG)ಗಳ ಇತಿಹಾಸ: ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಬುಡಕಟ್ಟು ಸಮುದಾಯಗಳ ನಡುವೆಯೇ ಅಸಮಾನತೆ ಇದೆ ಎಂಬುದನ್ನು ‘ಧೇಬರ್ ಆಯೋಗ’ವು (1960-61) ಗುರುತಿಸಿತು.

    • 1975 ರಲ್ಲಿ, ಧೇಬರ್ ಆಯೋಗದ ವರದಿಯ ಅನ್ವಯ, ಸರ್ಕಾರವು ‘ಪುರಾತನ ಬುಡಕಟ್ಟು ಗುಂಪುಗಳನ್ನು’ (Primitive Tribal Groups – PTGs) ಪ್ರತ್ಯೇಕ ವರ್ಗವಾಗಿ ಗುರುತಿಸಿತು ಮತ್ತು 52 ಬುಡಕಟ್ಟು ಗುಂಪುಗಳನ್ನು ಈ ಪಟ್ಟಿಗೆ ಸೇರಿಸಿತು.
    • 2001 ರ ಜನಗಣತಿಯ ಪ್ರಕಾರ, ದೇಶದಲ್ಲಿ 75 ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳಿದ್ದು (PVTGs), ಇವರ ಒಟ್ಟು ಜನಸಂಖ್ಯೆ 27,68,322 ಆಗಿದೆ, ಹಾಗೂ ಇವರು 18 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೆಲೆಸಿದ್ದಾರೆ.
    • 2006 ರಲ್ಲಿ, PTG ಗಳನ್ನು ‘ವಿಶೇಷವಾಗಿ ದುರ್ಬಲವಾದ ಬುಡಕಟ್ಟು ಗುಂಪುಗಳು’ (PVTGs) ಎಂದು ಮರುನಾಮಕರಣ ಮಾಡಲಾಯಿತು.

    PVTGs ಗೆ ಸಂಭಂದಿಸಿದ ಇತ್ತೀಚಿನ ಸರ್ಕಾರಿ ಉಪಕ್ರಮಗಳು:

    • ಪಿಎಂ-ಪಿವಿಟಿಜಿ ಅಭಿವೃದ್ಧಿ ಗುರಿ ಯೋಜನೆ (PM-PVTG Development Mission): ಸಂಪರ್ಕ, ವಿದ್ಯುತ್, ಸಾರ್ವಜನಿಕ ಶಿಕ್ಷಣ, ಆರೋಗ್ಯ ರಕ್ಷಣೆ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕದಂತಹ ಮೂಲಭೂತ ಸರ್ಕಾರಿ ಸೇವೆಗಳನ್ನು ಎಲ್ಲಾ 22,544 ಪಿವಿಟಿಜಿ (PVTG) ಹಳ್ಳಿಗಳಿಗೆ ತಲುಪಿಸುವ ದೃಷ್ಟಿಕೋನವನ್ನು ಈ ಯೋಜನೆ ಹೊಂದಿದೆ.
    • ಪ್ರಧಾನ ಮಂತ್ರಿ-ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN): ಇದು ಶಾಶ್ವತ ಮನೆಗಳ ನಿರ್ಮಾಣ, ರಸ್ತೆ ಸಂಪರ್ಕ, ಕೊಳವೆ ಮೂಲಕ ಕುಡಿಯುವ ನೀರು ಪೂರೈಕೆ, ಸಮುದಾಯ ನೀರು ಸರಬರಾಜು, ಉಚಿತ ಔಷಧಿಗಳೊಂದಿಗೆ ಸಂಚಾರಿ ವೈದ್ಯಕೀಯ ಘಟಕಗಳು ಸೇರಿದಂತೆ 11 ಪ್ರಮುಖ ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಗಮನ ಹರಿಸಲಿದೆ.

    ರಾಷ್ಟ್ರೀಯ ತಂತ್ರಜ್ಞಾನ ದಿನ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರತಿ ವರ್ಷ ಮೇ 11 ರಂದು ‘ರಾಷ್ಟ್ರೀಯ ತಂತ್ರಜ್ಞಾನ ದಿನ’ವನ್ನು ಆಚರಿಸಲಾಗುತ್ತದೆ.

    ರಾಷ್ಟ್ರೀಯ ತಂತ್ರಜ್ಞಾನ ದಿನದ ಬಗ್ಗೆ:

    • 1998 ರಲ್ಲಿ ರಾಜಸ್ಥಾನದ ಪೋಖ್ರಾನ್‌ನಲ್ಲಿ ‘ಆಪರೇಷನ್ ಶಕ್ತಿ’ ಕಾರ್ಯಾಚರಣೆಯ ಅಡಿಯಲ್ಲಿ ಭಾರತವು ನಡೆಸಿದ ಯಶಸ್ವಿ ಪರಮಾಣು ಪರೀಕ್ಷೆಗಳ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
    • ರಾಷ್ಟ್ರದ ಸಮಗ್ರ ಅಭಿವೃದ್ಧಿ ಹಾಗೂ ಕಾರ್ಯತಂತ್ರದ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಭಾರತೀಯ ವಿಜ್ಞಾನಿಗಳು, ಅಭಿಯಂತರರು ಮತ್ತು ತಾಂತ್ರಿಕ ಸಂಸ್ಥೆಗಳು ನೀಡಿದ ಅತ್ಯಮೂಲ್ಯ ಕೊಡುಗೆಯನ್ನು ಈ ದಿನವು ಗೌರವಿಸುತ್ತದೆ.

    ‘ಒನ್ ಕೇಸ್ ಒನ್ ಡೇಟಾ’ ಮತ್ತು ‘ಸು-ಸಹಾಯ್’ ಉಪಕ್ರಮ : ಸುಪ್ರೀಂ ಕೋರ್ಟ್

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ದೇಶದ ಸರ್ವೋಚ್ಚ ನ್ಯಾಯಾಲಯವು  ‘ಒನ್ ಕೇಸ್ ಒನ್ ಡೇಟಾ’ ಮತ್ತು ‘ಸು-ಸಹಾಯ್’ ಎಂಬ ಹೊಸ ಉಪಕ್ರಮಗಳಿಗೆ ಚಾಲನೆ ನೀಡಿದೆ.

    ಒನ್ ಕೇಸ್ ಒನ್ ಡೇಟಾ ಉಪಕ್ರಮ (One Case One Data initiative):

    • ಇದು ಏಕೀಕೃತ ದತ್ತಾಂಶ ವ್ಯವಸ್ಥೆಯ (Unified database system) ಮೂಲಕ ತಾಲ್ಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಿಂದ ಹಿಡಿದು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದವರೆಗಿನ ಎಲ್ಲಾ ಹಂತದ ನ್ಯಾಯಾಲಯಗಳನ್ನು ಪರಸ್ಪರ ಜೋಡಿಸುವ ಒಂದು ಪ್ರಮುಖ ಡಿಜಿಟಲ್ ಉಪಕ್ರಮವಾಗಿದೆ. 
    • ಪ್ರಮುಖ ಉದ್ದೇಶ: ಒಂದು ಸಮಗ್ರ ಮತ್ತು ಅಂತರ-ಸಂಪರ್ಕಿತ ಡಿಜಿಟಲ್ ನ್ಯಾಯಾಂಗ ಮಾಹಿತಿ ವ್ಯವಸ್ಥೆಯನ್ನು ರೂಪಿಸುವ ಮೂಲಕ, ಪ್ರಕರಣಗಳ ನಿರ್ವಹಣೆಯನ್ನು ಸುಧಾರಿಸುವುದು.

    ‘ಸು-ಸಹಾಯ್’ ಚಾಟ್‌ಬಾಟ್ (‘Su Sahay’ Chatbot):

    • ಇದೊಂದು ಕೃತಕ ಬುದ್ಧಿಮತ್ತೆ (AI) ಚಾಲಿತ ಸಹಾಯಕ ಸಂವಾದ ಯಂತ್ರ (ಚಾಟ್‌ಬಾಟ್)ವಾಗಿದೆ.
    • ಕಕ್ಷಿದಾರರಿಗೆ ನ್ಯಾಯ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ಸೇವೆಗಳನ್ನು ಅತ್ಯಂತ ಸುಲಭವಾಗಿ ಒದಗಿಸುವ ದೃಷ್ಟಿಯಿಂದ ಇದನ್ನು ಸರ್ವೋಚ್ಚ ನ್ಯಾಯಾಲಯದ  ವೆಬ್‌ಸೈಟ್‌ನೊಂದಿಗೆ ಸಂಯೋಜಿಸಲಾಗಿದೆ.
    • ಇದನ್ನು ಸರ್ವೋಚ್ಚ ನ್ಯಾಯಾಲಯದ ನೋಂದಣಿ ವಿಭಾಗ (ರಿಜಿಸ್ಟ್ರಿ)ದ ಸಹಯೋಗದೊಂದಿಗೆ ‘ರಾಷ್ಟ್ರೀಯ ಮಾಹಿತಿ ಕೇಂದ್ರ’ (NIC) ಅಭಿವೃದ್ಧಿಪಡಿಸಿದೆ.

    ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು, 2025

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ::

    • ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಾಡಿದ ಅತ್ಯುತ್ತಮ ಕಾರ್ಯಗಳಿಗಾಗಿ, ಮಿಜೋರಾಂ ರಾಜ್ಯದ ‘ಕಾವರ್ಥಾ ನಾರ್ಥ್ ಗ್ರಾಮ ಪಂಚಾಯಿತಿ’ಯು ‘ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ 2025’ರ “ಸ್ವಚ್ಛ ಮತ್ತು ಹಸಿರು ಪಂಚಾಯತ್” ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು:

    • ಪ್ರದಾನಿಸುವವರು: ಕೇಂದ್ರ ಪಂಚಾಯತಿ ರಾಜ್ ಸಚಿವಾಲಯ.
    • ಗ್ರಾಮೀಣ ಭಾರತದಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿರುವ ಪಂಚಾಯಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಎಲ್ಲರನ್ನೂ ಒಳಗೊಂಡ, ಜನರ ಸಹಭಾಗಿತ್ವದ ಮತ್ತು ದೀರ್ಘಕಾಲೀನ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.
    • ಪ್ರಶಸ್ತಿ ವಿಜೇತ ಪಂಚಾಯಿತಿಗಳು ಅವುಗಳ ಹಂತ (ಗ್ರಾಮ, ತಾಲೂಕು, ಜಿಲ್ಲಾ ಮಟ್ಟ) ಮತ್ತು ವರ್ಗವನ್ನು ಆಧರಿಸಿ ರೂ. 50 ಲಕ್ಷದಿಂದ ರೂ. 5 ಕೋಟಿಗಳವರೆಗೆ ಆರ್ಥಿಕ ಪ್ರೋತ್ಸಾಹಧನವನ್ನು ಪಡೆಯುತ್ತವೆ.
    • ಪ್ರಶಸ್ತಿಯ ವಿಭಾಗಗಳು:
    1. ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ: ಬಡತನ-ಮುಕ್ತ ಜೀವನೋಪಾಯ, ಉತ್ತಮ ಆರೋಗ್ಯ, ನೀರಿನ ಲಭ್ಯತೆ, ನೈರ್ಮಲ್ಯ, ಮಹಿಳಾ-ಸ್ನೇಹಿ ಆಡಳಿತ ಮತ್ತು ಸಾಮಾಜಿಕ ನ್ಯಾಯದಂತಹ ‘ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ’ (SDGs) ಸಂಬಂಧಿಸಿದ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ‘ಗ್ರಾಮ ಪಂಚಾಯಿತಿಗಳನ್ನು’ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
    2. ನಾನಾಜಿ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ: ಜಿಲ್ಲಾ, ಬ್ಲಾಕ್ (ತಾಲೂಕು) ಮತ್ತು ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪಂಚಾಯಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

    ಇತ್ತೀಚಿನ ವಿಜೇತರು:

    • ಈ ಬಾರಿಯ ಪ್ರಶಸ್ತಿಗಳಲ್ಲಿ ಒಟ್ಟು 6 ಪಂಚಾಯಿತಿಗಳು ಆಯ್ಕೆಯಾಗುವ ಮೂಲಕ ಕರ್ನಾಟಕವು ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಮೊದಲ ಸ್ಥಾನದಲ್ಲಿದೆ. ತಲಾ 5 ಪ್ರಶಸ್ತಿಗಳನ್ನು ಪಡೆದಿರುವ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.

    ಸೇಹತ್ ಯೋಜನೆ (SEHAT Mission)

    ಯೋಜನೆಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ‘ಸೇಹತ್ ಯೋಜನೆ’ಗೆ (SEHAT Mission) ಚಾಲನೆ ನೀಡಿದ್ದಾರೆ.

    ಸೇಹತ್ – ಕೃಷಿ ರೂಪಾಂತರದ ಮೂಲಕ ಆರೋಗ್ಯಕ್ಕಾಗಿ ವಿಜ್ಞಾನದ ಶ್ರೇಷ್ಠತೆ (SEHAT):

    • SEHAT ವಿಸ್ತೃತ ರೂಪ: ಸೈನ್ಸ್ ಎಕ್ಸಲೆನ್ಸ್ ಫಾರ್ ಹೆಲ್ತ್ ಥ್ರೂ ಅಗ್ರಿಕಲ್ಚರಲ್ ಟ್ರಾನ್ಸ್ ಫಾರ್ಮೆಷನ್ (Science Excellence for Health through Agricultural Transformation).
    • ಇದು ಕೃಷಿಯಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ದೇಶದ ಜನರ ಆರೋಗ್ಯವನ್ನು ಸುಧಾರಿಸುವುದು, ಹಾಗೂ ಕೃಷಿ, ಪೌಷ್ಟಿಕಾಂಶ ಮತ್ತು ಸಾರ್ವಜನಿಕ ಆರೋಗ್ಯವನ್ನು ಪರಸ್ಪರ ಬೆಸೆಯುವ ಉದ್ದೇಶ ಹೊಂದಿರುವ ರಾಷ್ಟ್ರೀಯ ಯೋಜನೆಯಾಗಿದೆ.
    • ಇದು ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ (ICMR) ಮತ್ತು ‘ಭಾರತೀಯ ಕೃಷಿ ಸಂಶೋಧನಾ ಮಂಡಳಿ’ಯ (ICAR) ಜಂಟಿ ಸಹಭಾಗಿತ್ವದ ಯೋಜನೆಯಾಗಿದೆ.
    • ಪ್ರಮುಖ ಉದ್ದೇಶ: ಪೋಷಕಾಂಶ ಭರಿತ ಜೈವಿಕ ಆಹಾರಗಳು, ಸಮಗ್ರ ಕೃಷಿ, ಕೃಷಿ ಕಾರ್ಮಿಕರ ವೃತ್ತಿಪರ ಆರೋಗ್ಯ ಮತ್ತು ಒಂದು ಆರೋಗ್ಯ (‘ಒನ್ ಹೆಲ್ತ್) ಮಿಷನ್’ಗೆ ಬೆಂಬಲ ನೀಡುವ ಮೂಲಕ ಸಾರ್ವಜನಿಕ ಆರೋಗ್ಯ ಹಾಗೂ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸುವುದು.
    • ಮಹತ್ವ: ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು, ರೋಗ ಬರದಂತೆ ತಡೆಯುವ ಮುಂಜಾಗ್ರತಾ ಆರೋಗ್ಯ ರಕ್ಷಣೆಗೆ, ಅಸಾಂಕ್ರಾಮಿಕ ರೋಗಗಳನ್ನು ತಡೆಯಲು ಹಾಗೂ ರೈತರ ಕಲ್ಯಾಣ ಮತ್ತು ಸಾರ್ವಜನಿಕ ಆರೋಗ್ಯದ ಸವಾಲುಗಳನ್ನು ಎದುರಿಸಲು ಇದು ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ.
  • ಬೃಹತ್ ಬೆಂಗಳೂರು ಸಂಯೋಜಿತ ಸ್ಯಾಟಲೈಟ್ ಟೌನ್‌ಶಿಪ್ (GBIST) : ರಾಮನಗರ

    ಬೃಹತ್ ಬೆಂಗಳೂರು ಸಂಯೋಜಿತ ಸ್ಯಾಟಲೈಟ್ ಟೌನ್‌ಶಿಪ್ (GBIST) : ರಾಮನಗರ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ರಾಮನಗರ ಜಿಲ್ಲೆಯ ಬಿಡದಿಯಲ್ಲಿ ‘ಬೃಹತ್ ಬೆಂಗಳೂರು ಸಂಯೋಜಿತ ಸ್ಯಾಟಲೈಟ್ ಟೌನ್‌ಶಿಪ್’ (Greater Bengaluru Integrated Satellite Township – GBIST) ನಿರ್ಮಾಣಕ್ಕೆ ಕರ್ನಾಟಕ ಸಚಿವ ಸಂಪುಟವು ಅಧಿಕೃತವಾಗಿ ಅನುಮೋದನೆ ನೀಡಿದೆ.

    GBIST ಕುರಿತಾದ ಪ್ರಮುಖ ಮಾಹಿತಿಗಳು:

    • ಇದನ್ನು ‘ಬೃಹತ್ ಬೆಂಗಳೂರು ನಾವೀನ್ಯತೆ ಮತ್ತು ತಂತ್ರಜ್ಞಾನ ನಗರ’ (Greater Bengaluru Innovation and Tech City – GBIT) ಎಂತಲೂ ಕರೆಯಲಾಗುತ್ತದೆ.
    • ಸ್ವರೂಪ: ಇದು 18,133 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭವಿಷ್ಯದ “ಕೆಲಸ-ವಾಸ-ಮನರಂಜನೆ” (“ವರ್ಕ್-ಲೈವ್-ಪ್ಲೇ”) ಮಾದರಿಯ ಬೃಹತ್ ಮಹಾನಗರವಾಗಿದೆ.
    • ಸ್ಥಳ ಮತ್ತು ವಿಸ್ತೀರ್ಣ: ಮಧ್ಯ ಬೆಂಗಳೂರಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಿಡದಿ ಪ್ರದೇಶದ ಒಂಬತ್ತು ಹಳ್ಳಿಗಳಾದ್ಯಂತ ಅಂದಾಜು 7,481 ಎಕರೆ ಪ್ರದೇಶದಲ್ಲಿ ಈ ಯೋಜನೆಯು ವ್ಯಾಪಿಸಿದೆ.
    • ಮಹತ್ವ: ಬೆಂಗಳೂರಿನ ಹೆಚ್ಚುತ್ತಿರುವ ನಗರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಇದನ್ನು ಬೆಂಗಳೂರಿನ ‘ಎರಡನೇ ಕೇಂದ್ರೀಯ ವಾಣಿಜ್ಯ ಜಿಲ್ಲೆ’ (Second Central Business District – CBD)ಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

    ಈ ಯೋಜನೆಯ ಪ್ರಮುಖ ಲಕ್ಷಣಗಳು:

    • ಭಾರತದ ಮೊದಲ ಕೃತಕ ಬುದ್ಧಿಮತ್ತೆ ನಗರ (India’s First AI City): ಕೃತಕ ಬುದ್ಧಿಮತ್ತೆ (AI) ಆಧಾರಿತ ಕೈಗಾರಿಕೆಗಳು, ತಂತ್ರಜ್ಞಾನ ಕೇಂದ್ರಗಳು ಮತ್ತು ಮುಂದಿನ ಪೀಳಿಗೆಯ ನಾವೀನ್ಯತಾ ಕೇಂದ್ರಗಳನ್ನು ಸ್ಥಾಪಿಸಲು ಸುಮಾರು 2,000 ಎಕರೆಗಳಷ್ಟು ಮೀಸಲಾದ ಜಾಗವನ್ನು ಒದಗಿಸಲಾಗಿದೆ.
    • ವಿನ್ಯಾಸ ಮತ್ತು ಪರಿಕಲ್ಪನೆ: “ವರ್ಕ್-ಲೈವ್-ಪ್ಲೇ” ಮಾದರಿಯಲ್ಲಿ ನಿರ್ಮಿಸಲಾಗುವ ಈ ಸ್ಮಾರ್ಟ್-ಗ್ರೀನ್ (ಹಸಿರು) ನಗರವು, ವಸತಿ ವಲಯಗಳು, ವಿಶ್ವದರ್ಜೆಯ ವೈದ್ಯಕೀಯ ಮತ್ತು ಶೈಕ್ಷಣಿಕ ಕೇಂದ್ರಗಳು, ವಾಣಿಜ್ಯ ಮಳಿಗೆಗಳು ಹಾಗೂ ಪರಸ್ಪರ ಸಂಪರ್ಕ ಹೊಂದಿರುವ ‘ನೀಲಿ-ಹಸಿರು ಮೂಲಸೌಕರ್ಯ’ಗಳನ್ನು (ಉದಾಹರಣೆಗೆ: ಪುನರುಜ್ಜೀವನಗೊಂಡ ಕೆರೆಗಳು ಮತ್ತು ಉದ್ಯಾನವನಗಳು) ಒಳಗೊಂಡಿರಲಿದೆ.
    • ಸಾರಿಗೆ ಸಂಪರ್ಕ: ಈ ಟೌನ್‌ಶಿಪ್ ಅತಿವೇಗದ ಸಾರಿಗೆ ವ್ಯವಸ್ಥೆಯೊಂದಿಗೆ ಸಂಯೋಜಿತವಾದ “ಶೂನ್ಯ-ಟ್ರಾಫಿಕ್” (Zero-traffic) ವಿನ್ಯಾಸವನ್ನು ಹೊಂದಿದೆ. ಇದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ನೈಸ್ ರಸ್ತೆ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ (STRR) ನಂತಹ ಪ್ರಮುಖ ಹೆದ್ದಾರಿಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಜೊತೆಗೆ ಮೆಟ್ರೋ ಮತ್ತು ಉಪನಗರ ರೈಲು ವ್ಯವಸ್ಥೆಯ ವಿಸ್ತರಣಾ ಯೋಜನೆಗಳನ್ನು ಇದು ಒಳಗೊಂಡಿದೆ.
    • ಭೂಸ್ವಾಧೀನ ಮತ್ತು ಪರಿಹಾರ: ಭೈರಮಂಗಲ, ಬನ್ನಿಗಿರಿ, ಹೊಸೂರು ಮತ್ತು ವಾಡೇರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಭೂಮಾಲೀಕರಿಗೆ ನೇರ ನಗದು ಪರಿಹಾರ ಅಥವಾ ಸ್ವಾಧೀನಪಡಿಸಿಕೊಂಡ ಪ್ರತಿ ಎಕರೆಗೆ 9,693 ಚದರ ಅಡಿಯಷ್ಟು ಅಭಿವೃದ್ಧಿಪಡಿಸಿದ ವಸತಿ ನಿವೇಶನವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಒದಗಿಸಿದೆ.
  • ಜನನಿ ಪ್ಲಾಟ್‌ಫಾರ್ಮ್ (JANANI Platform) | ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (AERB) | ವಡಿನಾರ್ ಹಡಗು ದುರಸ್ತಿ ಕೇಂದ್ರ

    ಜನನಿ ಪ್ಲಾಟ್‌ಫಾರ್ಮ್ (JANANI Platform)

    ಸರ್ಕಾರಿ ಯೋಜನೆಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಮುಕ್ತಾಯಗೊಂಡ ‘ನಾವೀನ್ಯತೆ ಮತ್ತು ಒಳಗೊಳ್ಳುವಿಕೆ ಕುರಿತಾದ ರಾಷ್ಟ್ರೀಯ ಶೃಂಗಸಭೆ’ಯಲ್ಲಿ (National Summit on Innovation and Inclusivity) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಜನನಿ’ (JANANI) ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಿತು.
    • ಜನನಿ (JANANI) ವಿಸ್ತೃತ ರೂಪ: ಜರ್ನಿ ಆಫ್ ಆಂಟೆನೇಟಲ್, ನೇಟಲ್ ಅಂಡ್ ನಿಯೋನೇಟಲ್ ಇಂಟಿಗ್ರೇಟೆಡ್ ಕೇರ್ (Journey of Antenatal, Natal and Neonatal Integrated Care – ಪ್ರಸವಪೂರ್ವ, ಹೆರಿಗೆ ಮತ್ತು ನವಜಾತ ಶಿಶುವಿನ ಸಮಗ್ರ ಆರೈಕೆಯ ಪ್ರಯಾಣ).

    ಜನನಿ ಪ್ಲಾಟ್‌ಫಾರ್ಮ್‌ನ ಪ್ರಮುಖ ಉದ್ದೇಶ ಮತ್ತು ವೈಶಿಷ್ಟ್ಯಗಳು

    • ಸಮಗ್ರ ಆರೋಗ್ಯ ನಿರ್ವಹಣೆ: ಇದು ಮಹಿಳೆಯರ ಸಂತಾನೋತ್ಪತ್ತಿಯ ವಯಸ್ಸಿನಲ್ಲಿ ಅವರ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಸಮಗ್ರವಾಗಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ವಿನ್ಯಾಸಗೊಳಿಸಲಾದ ಒಂದು ಸೇವಾ-ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.
    • ಸುಧಾರಿತ ಆವೃತ್ತಿ: ಪ್ರಸ್ತುತ ಬಳಕೆಯಲ್ಲಿರುವ ‘ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ’ (Reproductive and Child Health – RCH) ಪೋರ್ಟಲ್‌ನ ಸುಧಾರಿತ ಮತ್ತು ನವೀಕರಿಸಿದ ಆವೃತ್ತಿಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
    • ಕ್ಯೂಆರ್ (QR) ಆಧಾರಿತ ಕಾರ್ಡ್‌ಗಳು: ತಾಯಂದಿರು ಮತ್ತು ಮಕ್ಕಳ ಆರೋಗ್ಯ ದಾಖಲೆಗಳನ್ನು ಎಲ್ಲಿಂದಲಾದರೂ ಸುಲಭವಾಗಿ ಪಡೆಯಲು (portable access), ಈ ಪ್ಲಾಟ್‌ಫಾರ್ಮ್ ಕ್ಯೂಆರ್ (QR) ತಂತ್ರಜ್ಞಾನ ಆಧಾರಿತ ‘ಡಿಜಿಟಲ್ ತಾಯಿ ಮತ್ತು ಶಿಶು ಆರೋಗ್ಯ’ (MCH) ಕಾರ್ಡ್‌ಗಳನ್ನು ಪರಿಚಯಿಸುತ್ತದೆ.
    • ನೈಜ-ಸಮಯದ ನಿಗಾ ವ್ಯವಸ್ಥೆ: ಸಕಾಲಿಕ ವೈದ್ಯಕೀಯ ನೆರವು ಒದಗಿಸುವ ಸಲುವಾಗಿ, ಇದು ಅಧಿಕ-ಅಪಾಯದ ಗರ್ಭಧಾರಣೆಯ ಎಚ್ಚರಿಕೆಗಳು, ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್‌ಗಳು ಮತ್ತು ಬಾಕಿ ಉಳಿದಿರುವ ಸೇವೆಗಳ ಪಟ್ಟಿಯ ಮೂಲಕ ನಿರಂತರ ನಿಗಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.
    • ರಾಷ್ಟ್ರೀಯ ವ್ಯವಸ್ಥೆಗಳೊಂದಿಗೆ ಸಂಯೋಜನೆ: ನಿರಂತರ ಡೇಟಾ ಹಂಚಿಕೆ ಮತ್ತು ಫಲಾನುಭವಿಗಳನ್ನು ನಿಖರವಾಗಿ ಪತ್ತೆಹಚ್ಚಲು, ಈ ಪ್ಲಾಟ್‌ಫಾರ್ಮ್ ಅನ್ನು ಯು-ವಿನ್ (U-WIN) ಮತ್ತು ಪೋಷಣ್ (POSHAN) ನಂತಹ ಇತರ ಪ್ರಮುಖ ರಾಷ್ಟ್ರೀಯ ಡಿಜಿಟಲ್ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ.

    ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (AERB)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯು (AERB) ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಯ (KKNPP) ಘಟಕ 5 ಮತ್ತು 6 ರಲ್ಲಿ “ಪ್ರಮುಖ ಉಪಕರಣಗಳ ಸ್ಥಾಪನೆಗೆ” ಅನುಮತಿ ನೀಡಿದೆ.

    ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (Atomic Energy Regulatory Board – AERB)

    • ಇದು ಪರಮಾಣು ಶಕ್ತಿ ಮತ್ತು ಅಯಾನೀಕರಿಸುವ ವಿಕಿರಣಗಳ ಸುರಕ್ಷಿತ ಬಳಕೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಭಾರತದ ಪ್ರಮುಖ ನಿಯಂತ್ರಣ ಸಂಸ್ಥೆಯಾಗಿದೆ.
    • ಸ್ಥಾಪನೆ: ನವೆಂಬರ್ 15, 1983.
    • ಅಧಿಕಾರ: ಇದು 1962ರ ಪರಮಾಣು ಶಕ್ತಿ ಕಾಯ್ದೆ ಮತ್ತು 1986ರ ಪರಿಸರ (ಸಂರಕ್ಷಣೆ) ಕಾಯ್ದೆಯಿಂದ ತನ್ನ ಅಧಿಕಾರವನ್ನು ಪಡೆದುಕೊಂಡಿದೆ.
    • ನಾಯಕತ್ವ ಮತ್ತು ರಚನೆ:
      • ಪ್ರಸ್ತುತ ಅಧ್ಯಕ್ಷರು: ಶ್ರೀ ಎ.ಕೆ. ಬಾಲಸುಬ್ರಹ್ಮಣಿಯನ್.
      • ಪ್ರಧಾನ ಕಚೇರಿ: ಮುಂಬೈ, ಮಹಾರಾಷ್ಟ್ರ.
      • ಸಂಯೋಜನೆ: ಈ ಮಂಡಳಿಯು ಪೂರ್ಣಾವಧಿ ಅಧ್ಯಕ್ಷರು, ಪದನಿಮಿತ್ತ ಸದಸ್ಯರು (ಕಾರ್ಯನಿರ್ವಾಹಕ ನಿರ್ದೇಶಕರು) ಮತ್ತು ನಾಲ್ವರು ಅರೆಕಾಲಿಕ ಪ್ರಸಿದ್ಧ ತಜ್ಞರನ್ನು ಒಳಗೊಂಡಿದೆ.

    ಪ್ರಮುಖ ಕಾರ್ಯಗಳು ಮತ್ತು ಜವಾಬ್ದಾರಿಗಳು

    • ಸುರಕ್ಷತಾ ನಿಯಂತ್ರಣ : ಪರಮಾಣು ಮತ್ತು ವಿಕಿರಣ ಸೌಲಭ್ಯಗಳ ಜೀವಿತಾವಧಿಯುದ್ದಕ್ಕೂ (ಸ್ಥಳ ಆಯ್ಕೆಯಿಂದ ಹಿಡಿದು ನಿಷ್ಕ್ರಿಯಗೊಳಿಸುವವರೆಗೆ) ಸುರಕ್ಷತಾ ಸಂಕೇತಗಳು, ಮಾರ್ಗದರ್ಶಿಗಳು ಮತ್ತು ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು.
    • ಪರವಾನಗಿ: ಪರಮಾಣು ವಿದ್ಯುತ್ ಸ್ಥಾವರಗಳು, ಇಂಧನ ಚಕ್ರದ ಸೌಲಭ್ಯಗಳು, ಮತ್ತು ಕೈಗಾರಿಕಾ/ವೈದ್ಯಕೀಯ ವಿಕಿರಣ ಅನ್ವಯಿಕೆಗಳಿಗೆ ಕಡ್ಡಾಯ ಸಮ್ಮತಿ ಮತ್ತು ಪರವಾನಗಿಗಳನ್ನು ಮಂಜೂರು ಮಾಡುವುದು.
    • ತಪಾಸಣೆಗಳು: ಸುರಕ್ಷತಾ ಅಗತ್ಯತೆಗಳು ಮತ್ತು ಪರವಾನಗಿ ಷರತ್ತುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಕ ತಪಾಸಣೆಗಳನ್ನು ನಡೆಸುವುದು.
    • ಕೈಗಾರಿಕಾ ಸುರಕ್ಷತೆ ಮತ್ತು ಸಾರ್ವಜನಿಕ ಜಾಗೃತಿ: ಪರಮಾಣು ಶಕ್ತಿ ಇಲಾಖೆಯ (DAE) ಅಡಿಯಲ್ಲಿನ ಘಟಕಗಳಲ್ಲಿ ಕೈಗಾರಿಕಾ ಸುರಕ್ಷತೆಗಾಗಿ 1948ರ ಕಾರ್ಖಾನೆಗಳ ಕಾಯ್ದೆಯನ್ನು ನಿರ್ವಹಿಸುವುದು ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವುದು.

    ವಡಿನಾರ್ ಹಡಗು ದುರಸ್ತಿ ಕೇಂದ್ರ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇತ್ತೀಚೆಗೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCEA) ಗುಜರಾತ್‌ನ ವಡಿನಾರ್‌ನಲ್ಲಿ ಒಟ್ಟು ₹1,570 ಕೋಟಿ ಹೂಡಿಕೆಯಲ್ಲಿ ನೂತನ ‘ಹಡಗು ದುರಸ್ತಿ ಕೇಂದ್ರ’ವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಅನುಮೋದನೆ ನೀಡಿದೆ.

    ವಡಿನಾರ್ ಹಡಗು ದುರಸ್ತಿ ಕೇಂದ್ರದ ಬಗ್ಗೆ

    • ಸ್ಥಳ: ವಡಿನಾರ್ ಪ್ರದೇಶವು ಗುಜರಾತ್‌ನ ಪಶ್ಚಿಮ ಕರಾವಳಿಯಲ್ಲಿರುವ ಕಚ್ ಕೊಲ್ಲಿಯಲ್ಲಿದೆ (Gulf of Kutch).
    • ಆಯಕಟ್ಟಿನ ಸ್ಥಾನ : ಈ ಕೇಂದ್ರವು ಭಾರತದಲ್ಲಿಯೇ ಅತಿ ಹೆಚ್ಚು ವಹಿವಾಟು ನಡೆಸುವ ಎರಡು ಪ್ರಮುಖ ಸರಕು ಬಂದರುಗಳಾದ ಕಾಂಡ್ಲಾ (ದೀನದಯಾಳ್ ಬಂದರು) ಮತ್ತು ಮುಂದ್ರಾ ಬಂದರುಗಳಿಗೆ ಅತಿ ಸಮೀಪದಲ್ಲಿದೆ.
    • ಹಡಗು ಮಾರ್ಗಗಳ ಅನುಕೂಲ: ಅರಬ್ಬಿ ಸಮುದ್ರದ ಪ್ರಮುಖ ಹಡಗು ಮಾರ್ಗಗಳಿಗೆ ತೀರಾ ಹತ್ತಿರವಾಗಿರುವುದರಿಂದ, ಭೌಗೋಳಿಕವಾಗಿ ಇದು ಅತ್ಯಂತ ಅನುಕೂಲಕರವಾದ ಸ್ಥಾನವನ್ನು ಹೊಂದಿದೆ.
  • ಕರ್ನಾಟಕದಲ್ಲಿ ಡೇಟಾ ಪಾರ್ಕ್‌ಗಳ ಸ್ಥಾಪನೆ

    ಕರ್ನಾಟಕದಲ್ಲಿ ಡೇಟಾ ಪಾರ್ಕ್‌ಗಳ ಸ್ಥಾಪನೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಬೆಂಗಳೂರಿನ ಮೇಲಿರುವ ತಂತ್ರಜ್ಞಾನ ಮೂಲಸೌಕರ್ಯದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಐಟಿ ವಲಯವನ್ನು ರಾಜ್ಯದ ಇತರೆಡೆ ವಿಕೇಂದ್ರೀಕರಿಸಲು, ಕರ್ನಾಟಕ ಸರ್ಕಾರವು ಮೂರು ಸುಸ್ಥಿರ ‘ಡೇಟಾ ಪಾರ್ಕ್’ಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

    ಯೋಜನೆಯ ವಿವರಗಳು:

    • ಬೆಂಗಳೂರು: ಹೊಸಕೋಟೆಯ ಸಮೀಪ 500 ಮೆಗಾವ್ಯಾಟ್ (MW) ಸಾಮರ್ಥ್ಯದ ಡೇಟಾ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಪಾವಗಡ ಸೌರ ಉದ್ಯಾನವನದಿಂದ ನೇರವಾಗಿ ಸೌರಶಕ್ತಿಯನ್ನು ಒದಗಿಸಲಾಗುತ್ತದೆ. ಅಲ್ಲದೆ, ಬೆಂಗಳೂರು ಜಲಮಂಡಳಿಯು (BWSSB) ಪೂರೈಸುವ ಪ್ರತಿದಿನ 60 ಮಿಲಿಯನ್ ಲೀಟರ್ (60 MLD) ‘ದ್ವಿತೀಯ-ಹಂತದಲ್ಲಿ ಸಂಸ್ಕರಿಸಿದ ನೀರನ್ನು’ ಈ ಪಾರ್ಕ್ ಬಳಸಿಕೊಳ್ಳಲಿದೆ.
    • ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ’ಯ (KIADB) ಸುಮಾರು 350 ಎಕರೆ ಜಮೀನನ್ನು ಇದಕ್ಕಾಗಿ ಗುರುತಿಸಲಾಗಿದೆ.
    • ಮೈಸೂರು: ರಾಜ್ಯದ ಎರಡನೇ ಅತಿದೊಡ್ಡ ಐಟಿ ಕೇಂದ್ರವಾಗಿ (IT Hub) ಬೆಳೆಯುತ್ತಿರುವ ಮೈಸೂರಿನಲ್ಲಿ, ಮೂರನೇ ಡೇಟಾ ಪಾರ್ಕ್ ನಿರ್ಮಾಣಕ್ಕಾಗಿ ಸೂಕ್ತ ಜಮೀನನ್ನು ಪ್ರಸ್ತುತ ಮೌಲ್ಯಮಾಪನ ಮಾಡಿ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.
  • ಪಶ್ಚಿಮ ಘಟ್ಟಗಳ ಸಮೀಕ್ಷೆ: 143 ಓಡೊನೇಟಾ ಪ್ರಭೇದಗಳ ದಾಖಲಾತಿ | ಸಂಚಾರ ಅಪಘಾತಗಳಲ್ಲಿ ಪ್ರತಿದಿನ 546 ಸಾವು: NCRB | ಕೇರಳದ ತೈಲ ಸೋರಿಕೆ ತುರ್ತು ಕಾರ್ಯಯೋಜನೆ (Kerala’s Oil Spill Contingency Plan)

    ಪಶ್ಚಿಮ ಘಟ್ಟಗಳ ಸಮೀಕ್ಷೆ: 143 ಓಡೊನೇಟಾ ಪ್ರಭೇದಗಳ ದಾಖಲಾತಿ

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪಶ್ಚಿಮ ಘಟ್ಟಗಳಲ್ಲಿ ಇತ್ತೀಚೆಗೆ ನಡೆದ ಅಧ್ಯಯನವೊಂದು ಡ್ರ್ಯಾಗನ್‌ಫ್ಲೈಗಳು (ತುಂಬಿಗಳು) ಮತ್ತು ಡ್ಯಾಮ್ಸೆಲ್‌ಫ್ಲೈಗಳಲ್ಲಿನ ಗಮನಾರ್ಹ ಜೀವವೈವಿಧ್ಯತೆಯ ಅಂತರವನ್ನು ಎತ್ತಿ ತೋರಿಸುತ್ತದೆ.
    • ಐತಿಹಾಸಿಕವಾಗಿ ದಾಖಲಾದ ಪ್ರಭೇದಗಳಲ್ಲಿ ಕೇವಲ 65% ರಷ್ಟನ್ನು ಮಾತ್ರ ದಾಖಲಿಸಲಾಗಿದ್ದು, 35% ರಷ್ಟು ಕುಸಿತವಾಗಿರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ.

    ಓಡೊನೇಟಾ (Odonata) ಪ್ರಭೇದಗಳ ಬಗ್ಗೆ:

    • ಓಡೊನೇಟಾ ಎಂಬುದು ಕೀಟಗಳ ವರ್ಗವಾಗಿದ್ದು, ಇದು ಡ್ರ್ಯಾಗನ್‌ಫ್ಲೈಗಳನ್ನು (ಉಪವರ್ಗ: ಅನಿಷ್ಟೋಪ್ಟೆರಾ) ಮತ್ತು ಡ್ಯಾಮ್ಸೆಲ್‌ಫ್ಲೈಗಳನ್ನು (ಉಪವರ್ಗ: ಜೈಗೋಪ್ಟೆರಾ) ಒಳಗೊಂಡಿದೆ.
    • ಇವುಗಳು ಪಾರದರ್ಶಕ ರೆಕ್ಕೆಗಳು, ಉದ್ದವಾದ ತೆಳ್ಳಗಿನ ದೇಹಗಳು ಮತ್ತು ಇಳಿಜಾರಾದ ಎದೆಯ ಭಾಗವನ್ನು ಹೊಂದಿರುವುದು ಇವುಗಳ ಲಕ್ಷಣವಾಗಿದೆ.
    • ಸಾಮಾನ್ಯವಾಗಿ ನೀರಿನ ಬಳಿ ಕಂಡುಬರುವ ಓಡೊನೇಟಾಗಳು ಹಗಲಿನಲ್ಲಿ ಸಕ್ರಿಯವಾಗಿರುವ ಪರಭಕ್ಷಕಗಳಾಗಿವೆ, ಮತ್ತು ವಯಸ್ಕ ಕೀಟಗಳು ಹಾಗೂ ಜಲವಾಸಿ ಲಾರ್ವಾಗಳು ಎರಡೂ ಇತರ ಜೀವಿಗಳನ್ನು/ಕೀಟಗಳನ್ನು ತಿನ್ನುತ್ತವೆ.

    ಪಶ್ಚಿಮ ಘಟ್ಟಗಳ ಕುರಿತು:

    • ಸಹ್ಯಾದ್ರಿಯ ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಯುದ್ದಕ್ಕೂ 1,600-ಕಿ.ಮೀ ಉದ್ದದ ಸಮಾನಾಂತರವಾದ ಪರ್ವತ ಶ್ರೇಣಿಯಾಗಿದೆ.
    • ಇದು 6 ರಾಜ್ಯಗಳ ಮೂಲಕ ಹಾದುಹೋಗುತ್ತವೆ. ಅವುಗಳೆಂದರೆ, ಗುಜರಾತ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ.
    • ಇತರ ಹೆಸರುಗಳು: ಇದನ್ನು ‘ಭಾರತದ ಬೃಹತ್ ಕಡಿದಾದ ಇಳಿಜಾರು’ (The Great Escarpment of India) ಎಂದೂ ಕರೆಯಲಾಗುತ್ತದೆ.
    • ವಿಶೇಷ ಮಾನ್ಯತೆ: ಅಪಾರ ಪ್ರಮಾಣದ ಸ್ಥಳೀಯ ಜೀವವೈವಿಧ್ಯತೆ ಮತ್ತು ಅಪರೂಪದ ಪ್ರಭೇದಗಳಿಗೆ ಆಶ್ರಯತಾಣವಾಗಿರುವ ಕಾರಣದಿಂದಾಗಿ, ಇದು ಯುನೆಸ್ಕೋ ‘ವಿಶ್ವ ಪರಂಪರೆಯ ತಾಣ’ ಮತ್ತು ‘ಜೀವವೈವಿಧ್ಯತೆಯ ಬಿಸಿತಾಣ (biodiversity hotspot)’ ಎಂಬ ವಿಶೇಷ ಮಾನ್ಯತೆಗೆ ಪಾತ್ರವಾಗಿದೆ. 
    • ಬುಡಕಟ್ಟು ಜನಾಂಗಗಳು: ಇದು ಆಡರ್, ಕೋಟ, ಬಡಗ, ತೋಡ, ಕುರುಂಬ, ಮತ್ತು ಪಣಿಯ ಮುಂತಾದ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಾಂಗದವರಿಗೆ ನೆಲೆಯಾಗಿದೆ.
    • ಅರಣ್ಯಗಳು: ಪಶ್ಚಿಮ ಘಟ್ಟಗಳ ಪ್ರದೇಶವು ತೇವಾಂಶಯುಕ್ತ ಎಲೆ ಉದುರುವ ಕಾಡುಗಳು ಮತ್ತು ಮಳೆಕಾಡುಗಳನ್ನು ಹೊಂದಿದೆ.
    • ಸ್ಥಳೀಯತೆ (Endemism): ಈ ಪ್ರದೇಶವು ಹೆಚ್ಚಿನ ಪ್ರಭೇದಗಳ ವೈವಿಧ್ಯತೆ ಹಾಗೂ ಹೆಚ್ಚಿನ ಮಟ್ಟದ ಸ್ಥಳೀಯತೆಯನ್ನು ಹೊಂದಿದೆ.
    1. ಇಲ್ಲಿ ಕಂಡುಬರುವ ಶೇ. 77 ರಷ್ಟು ಉಭಯಚರಗಳು ಮತ್ತು ಶೇ. 62 ರಷ್ಟು ಸರೀಸೃಪ ಪ್ರಭೇದಗಳು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ.
    • ಜೀವವೈವಿಧ್ಯ ಸಂರಕ್ಷಣೆ: ನಿರ್ದಿಷ್ಟ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸಲು ಮಾನವರ ಪ್ರವೇಶವನ್ನು ನಿರ್ಬಂಧಿಸುವ ಉದ್ದೇಶದಿಂದ, ಭಾರತ ಸರ್ಕಾರವು 2 ಜೀವಗೋಳ ಮೀಸಲು ಪ್ರದೇಶಗಳು ಮತ್ತು 13 ರಾಷ್ಟ್ರೀಯ ಉದ್ಯಾನವನಗಳು ಸೇರಿದಂತೆ ಹಲವು ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸಿದೆ.

    ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಸಮಿತಿಗಳು:

    • ಸಂಜಯ್ ಕುಮಾರ್ ಸಮಿತಿ:
        • ಉದ್ದೇಶ: ಪರಿಸರ ಸೂಕ್ಷ್ಮ ವಲಯಗಳ ಗಡಿರೇಖೆಗಳ ಮೇಲಿನ ರಾಜ್ಯಗಳ ಆಕ್ಷೇಪಣೆಗಳನ್ನು ಪರಿಶೀಲಿಸಲು ಮತ್ತು ಪ್ರಸ್ತಾವಿತ ಪ್ರದೇಶಗಳನ್ನು ಹೊರಗಿಡುವ ಕುರಿತು ಮೌಲ್ಯಮಾಪನ ಮಾಡಲು ಇದನ್ನು ರಚಿಸಲಾಗಿದೆ.
        • ಮಹತ್ವ: ಇದು ಹಳ್ಳಿಗಳ ಪರಿಸರ ಸೂಕ್ಷ್ಮ ಪ್ರದೇಶ (ESA) ಸ್ಥಾನಮಾನವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತದೆ, ಮತ್ತು ಜೀವವೈವಿಧ್ಯತೆಗೆ ಹಾನಿಕಾರಕವಾದ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ.
    • ಮಾಧವ್ ಗಾಡ್ಗೀಳ್ ಸಮಿತಿ (2011):
        • ಉದ್ದೇಶ: ಪಶ್ಚಿಮ ಘಟ್ಟಗಳಿಗೆ ಸಂರಕ್ಷಣಾ ಕ್ರಮಗಳನ್ನು ಪ್ರಸ್ತಾಪಿಸುವುದು.
        • ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗೊತ್ತುಪಡಿಸಲು ಇದು ಶಿಫಾರಸು ಮಾಡಿದೆ.
        • ಅಭಿವೃದ್ಧಿಯನ್ನು ನಿಯಂತ್ರಿಸಲು ಮೀಸಲಾದ ಪರಿಸರ ಪ್ರಾಧಿಕಾರವನ್ನು ರಚಿಸುವಂತೆ ಇದು ಪ್ರಸ್ತಾಪಿಸಿತು.
        • ವರದಿಯು ಕಟ್ಟುನಿಟ್ಟಾದ ಸಂರಕ್ಷಣೆಯನ್ನು ಸೂಚಿಸಿತು, ಆದರೆ ಅದರ ಶಿಫಾರಸುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲಾಗಿಲ್ಲ.
    • ಕಸ್ತೂರಿರಂಗನ್ ಸಮಿತಿ (2012):
      • ಹೆಚ್ಚು ಸಮತೋಲಿತ ವಿಧಾನವನ್ನು ಒದಗಿಸುವ ಸಲುವಾಗಿ ಗಾಡ್ಗೀಳ್ ಸಮಿತಿಯ ಮುಂದುವರಿದ ಭಾಗವಾಗಿ ಇದನ್ನು ರಚಿಸಲಾಗಿದೆ.
      • ಪಶ್ಚಿಮ ಘಟ್ಟಗಳ 37% ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳಾಗಿ (Eco sensitive zones) ಗುರುತಿಸಲು ಇದು ಶಿಫಾರಸು ಮಾಡಿದೆ.
      • ಇದು ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನಕ್ಕೆ ಒತ್ತು ನೀಡುತ್ತದೆ, ಜೊತೆಗೆ ನಿರ್ದಿಷ್ಟ ಪ್ರದೇಶಗಳಲ್ಲಿ ಸೀಮಿತ ಚಟುವಟಿಕೆಗಳಿಗೆ ಅವಕಾಶ ನೀಡುತ್ತದೆ.

    ಸಂಚಾರ ಅಪಘಾತಗಳಲ್ಲಿ ಪ್ರತಿದಿನ 546 ಸಾವು: NCRB

    ರಾಜಕೀಯ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (NCRB)ದ ಇತ್ತೀಚಿನ ವರದಿಯ ಪ್ರಕಾರ, 2024 ರಲ್ಲಿ ಒಟ್ಟು 1.99 ಲಕ್ಷ ಜನರು ಸಂಚಾರ ಅಪಘಾತಗಳಲ್ಲಿ ಸಾವನ್ನಪ್ಪಿದ್ದು, ಇದು 2023 ಕ್ಕೆ ಹೋಲಿಸಿದರೆ 0.79% ರಷ್ಟು ಹೆಚ್ಚಳವಾಗಿದೆ.

    ಈ ವರದಿಯ ಪ್ರಮುಖ ಅಂಶಗಳು

    • ಸಂಚಾರ (ಟ್ರಾಫಿಕ್) ಅಪಘಾತಗಳು: ಇವುಗಳು ರಸ್ತೆ ಅಪಘಾತಗಳು, ರೈಲ್ವೆ ಅಪಘಾತಗಳು, ರೈಲ್ವೆ ಹಳಿಗಳ ಮೇಲಿನ ಅಥವಾ ರೈಲ್ವೆ ಆವರಣದಲ್ಲಿನ ಘಟನೆಗಳು ಹಾಗೂ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಸಂಭವಿಸುವ ಅಪಘಾತಗಳನ್ನು ಒಳಗೊಂಡಿರುತ್ತವೆ.
    • ರಸ್ತೆ ಅಪಘಾತಗಳೆ ಹೆಚ್ಚು: 2024 ರಲ್ಲಿ ದಾಖಲಾದ ಒಟ್ಟು 1.99 ಲಕ್ಷ ಸಂಚಾರ-ಸಂಬಂಧಿತ ಸಾವುಗಳ ಪೈಕಿ, 1.75 ಲಕ್ಷ (88%) ಸಾವುಗಳು ಕೇವಲ ರಸ್ತೆ ಅಪಘಾತಗಳಿಂದಲೇ ಸಂಭವಿಸಿವೆ.

    ಸರ್ಕಾರದ ಉಪಕ್ರಮಗಳು

    • ರಾಷ್ಟ್ರೀಯ ರಸ್ತೆ ಸುರಕ್ಷತಾ ನೀತಿ, 2010 (National Road Safety Policy India, 2010): ಇದು ಉತ್ತಮ ರಸ್ತೆ ಮೂಲಸೌಕರ್ಯ, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ, ಸುಧಾರಿತ ತುರ್ತು ವೈದ್ಯಕೀಯ ಸೇವೆಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳು ಮತ್ತು ಅಪಘಾತದ ನಂತರದ ಆರೈಕೆಯ ಸುಧಾರಣೆಯ ಅಗತ್ಯಕ್ಕೆ ಒತ್ತು ನೀಡಿದೆ.
    • ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ, 2019 (Motor Vehicles Amendment Act, 2019): ಈ ಕಾಯ್ದೆಯು ಮಿತಿಮೀರಿದ ವೇಗದ ಚಾಲನೆ, ಕುಡಿದು ವಾಹನ ಚಲಾಯಿಸುವುದು ಮತ್ತು ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಹೆಚ್ಚಿನ ದಂಡ ವಿಧಿಸುವ ನಿಯಮಗಳನ್ನು ಜಾರಿಗೆ ತಂದಿತು.

    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)

    • ಸ್ಥಾಪನೆ: 1986.
    • ಕಾರ್ಯನಿರ್ವಹಿಸುವ ಸಚಿವಾಲಯ: ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ: ಅಪರಾಧ ಮತ್ತು ಅಪರಾಧಿಗಳ ನಡುವಿನ ಜಾಲವನ್ನು ಪತ್ತೆಹಚ್ಚುವಲ್ಲಿ ತನಿಖಾಧಿಕಾರಿಗಳಿಗೆ ನೆರವಾಗುವಂತೆ, ಇದು ಅಪರಾಧ ಹಾಗೂ ಅಪರಾಧಿಗಳ ಮಾಹಿತಿಯ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ.
    • ಪ್ರಧಾನ ಕಚೇರಿ: ನವದೆಹಲಿ.
    • NCRB ಯಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು:
      • ಪರಸ್ಪರ ಕಾರ್ಯಸಾಧ್ಯವಾದ ಅಪರಾಧ ನ್ಯಾಯ ವ್ಯವಸ್ಥೆ (Inter-Operable Criminal Justice System – ICJS) ಯೋಜನೆ.
      • ಅಪರಾಧ ಮತ್ತು ಅಪರಾಧಿಗಳ ಪತ್ತೆಹಚ್ಚುವ ಜಾಲ ಮತ್ತು ವ್ಯವಸ್ಥೆಗಳು (Crime and Criminal Tracking Network & Systems – CCTNS).
    • ವರದಿಗಳು: NCRB ಮೂರು ವಾರ್ಷಿಕ ವರದಿಗಳನ್ನು ಹೊರತರುತ್ತದೆ. ಈ ವರದಿಗಳು ಪೊಲೀಸ್ ಅಧಿಕಾರಿಗಳು, ಸಂಶೋಧಕರು, ಮಾಧ್ಯಮಗಳು ಮತ್ತು ನೀತಿ ನಿರೂಪಕರಿಗೆ ಪ್ರಮುಖ ಉಲ್ಲೇಖಗಳಾಗಿವೆ:
      • ಭಾರತದಲ್ಲಿ ಅಪರಾಧ (Crime in India).
      • ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು (Accidental Deaths & Suicides in India).
      • ಭಾರತದ ಕಾರಾಗೃಹ ಅಂಕಿಅಂಶಗಳು (Prison Statistics India).

    ಕೇರಳದ ತೈಲ ಸೋರಿಕೆ ತುರ್ತು ಕಾರ್ಯಯೋಜನೆ (Kerala’s Oil Spill Contingency Plan)

    ಪರಿಸರ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಸಮುದ್ರ ಮಾಲಿನ್ಯ ಮತ್ತು ಕರಾವಳಿ ಪರಿಸರಕ್ಕೆ ಎದುರಾಗುವ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, 2025ರಲ್ಲಿ ಕೇರಳ ಕರಾವಳಿಯ ಆಚೆಗೆ ಸಂಭವಿಸಿದ ಹಡಗು ಮುಳುಗಡೆ ಘಟನೆಗಳ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ‘ತೈಲ ಸೋರಿಕೆ ತುರ್ತು ಕಾರ್ಯಯೋಜನೆ’ಯನ್ನು (Oil Spill Contingency Plan) ಸಿದ್ಧಪಡಿಸಲು ಮುಂದಾಗಿದೆ.

    ತೈಲ ಸೋರಿಕೆ (Oil Spill)

    • ವ್ಯಾಖ್ಯಾನ: ಟ್ಯಾಂಕರ್ ಅಪಘಾತಗಳು, ಕಡಲಾಚೆಯ ತೈಲ ಕೊರೆಯುವಿಕೆ ಅಥವಾ ಇಂಧನ ಸೋರಿಕೆಯಂತಹ ಮಾನವ ಚಟುವಟಿಕೆಗಳಿಂದಾಗಿ ಪೆಟ್ರೋಲಿಯಂ ವಸ್ತುಗಳು ಪರಿಸರಕ್ಕೆ, ವಿಶೇಷವಾಗಿ ಸಾಗರ ಮತ್ತು ಕರಾವಳಿ ನೀರಿಗೆ ಸೇರಿ ಗಂಭೀರ ಮಾಲಿನ್ಯವನ್ನು ಉಂಟುಮಾಡುವುದನ್ನು ಇದು ಸೂಚಿಸುತ್ತದೆ.

    ತೈಲ ಸೋರಿಕೆಯ ಪರಿಣಾಮಗಳು

    • ಸಮುದ್ರ ಜೀವಿಗಳು: ತೈಲವು ಪಕ್ಷಿಗಳ ಗರಿಗಳು ಮತ್ತು ಸಸ್ತನಿಗಳ ತುಪ್ಪಳವನ್ನು ಆವರಿಸಿಕೊಳ್ಳುವುದರಿಂದ, ಅವುಗಳ ನೈಸರ್ಗಿಕ ನಿರೋಧಕ ಶಕ್ತಿ ಮತ್ತು ನೀರಿನಲ್ಲಿ ತೇಲುವ ಸಾಮರ್ಥ್ಯವು ನಾಶವಾಗುತ್ತದೆ. ಇದು ದೇಹದ ಉಷ್ಣಾಂಶವು ತೀವ್ರವಾಗಿ ಕುಸಿಯುವಿಕೆಗೆ (ಹೈಪೋಥರ್ಮಿಯಾ – Hypothermia) ಅಥವಾ ನೀರಿನಲ್ಲಿ ಮುಳುಗಿ ಸಾಯಲು ಕಾರಣವಾಗುತ್ತದೆ.
    • ಪರಿಸರ ವ್ಯವಸ್ಥೆಯ ಅಡ್ಡಿ: ದಪ್ಪನಾದ ತೈಲದ ಪದರಗಳು ಸೂರ್ಯನ ಬೆಳಕು ಮತ್ತು ಆಮ್ಲಜನಕವನ್ನು ತಡೆಯುತ್ತವೆ. ಇದರಿಂದಾಗಿ ಸಮುದ್ರದ ಸಸ್ಯಪ್ಲವಕಗಳು (Phytoplanktons) ನಾಶವಾಗುತ್ತವೆ, ಜೊತೆಗೆ ಮ್ಯಾಂಗ್ರೋವ್‌ಗಳು, ಹವಳದ ಬಂಡೆಗಳು ಹಾಗೂ ಉಪ್ಪುನೀರಿನ ಜವುಗು ಪ್ರದೇಶಗಳಂತಹ ಸೂಕ್ಷ್ಮ ಆವಾಸಸ್ಥಾನಗಳು ಉಸಿರುಗಟ್ಟುತ್ತವೆ.
    • ಆರ್ಥಿಕ ನಷ್ಟ: ಈ ಸೋರಿಕೆಯು ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಕರಾವಳಿಯ ಜನರ ಜೀವನೋಪಾಯಕ್ಕೆ ತಕ್ಷಣದ ಹಾಗೂ ದೀರ್ಘಾವಧಿಯ ಹಾನಿಯನ್ನು ಉಂಟುಮಾಡುತ್ತದೆ.
    • ಮಾನವನ ಆರೋಗ್ಯ: ಕಲುಷಿತಗೊಂಡ ಸಮುದ್ರಾಹಾರ ಮತ್ತು ವಿಷಕಾರಿ ಅನಿಲಗಳು ಕರಾವಳಿ ಸಮುದಾಯಗಳಿಗೆ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.

    ತೈಲ ಸೋರಿಕೆಯನ್ನು ಸ್ವಚ್ಛಗೊಳಿಸಲು ಬಳಸುವ ವಿಧಾನಗಳು

    • ತೇಲುವ ತಡೆಗೋಡೆಗಳು ಮತ್ತು ತೈಲ ಹೀರುಯಂತ್ರಗಳು (Booms & Skimmers): ತೇಲುವ ತಡೆಗೋಡೆಗಳ (ಬೂಮ್ಸ್) ಮೂಲಕ ತೈಲವು ಹರಡದಂತೆ ನಿಯಂತ್ರಿಸಲಾಗುತ್ತದೆ, ನಂತರ ಸ್ಕಿಮ್ಮರ್‌ಗಳ (ನಿರ್ವಾತ-ರೀತಿಯ ಯಂತ್ರಗಳು) ಮೂಲಕ ಮೇಲ್ಮೈಯಲ್ಲಿರುವ ತೈಲವನ್ನು ಹೀರಿ ತೆಗೆಯಲಾಗುತ್ತದೆ.
    • ಪ್ರಸರಣಕಾರಕಗಳು (Dispersants): ಇವು ತೈಲವನ್ನು ಸಣ್ಣ ಹನಿಗಳಾಗಿ ಒಡೆಯುವ ರಾಸಾಯನಿಕಗಳಾಗಿದ್ದು, ಇವು ತೈಲವು ನೀರಿನೊಂದಿಗೆ ಬೆರೆತು ವೇಗವಾಗಿ ವಿಘಟನೆಗೊಳ್ಳಲು ಅನುವು ಮಾಡಿಕೊಡುತ್ತವೆ.
    • ಜೈವಿಕ ಪರಿಹಾರ (Bioremediation): ಹೈಡ್ರೋಕಾರ್ಬನ್‌ಗಳನ್ನು ಕಡಿಮೆ ಹಾನಿಕಾರಕ ವಸ್ತುಗಳಾಗಿ ವಿಭಜಿಸಲು, ತೈಲವನ್ನು ನಾಶಪಡಿಸುವ ಬ್ಯಾಕ್ಟೀರಿಯಾಗಳನ್ನು (ಉದಾಹರಣೆಗೆ: ಸೈಕ್ಲೋಕ್ಲಾಸ್ಟಿಕಸ್ ಬ್ಯಾಕ್ಟೀರಿಯಾ ಅಥವಾ ಟೆರಿ (TERI) ಸಂಸ್ಥೆಯು ಅಭಿವೃದ್ಧಿಪಡಿಸಿದ ‘ಆಯಿಲ್ ಜಾಪರ್’) ಬಳಸುವುದು.
    • ಸ್ಥಳದಲ್ಲೇ ಸುಡುವುದು (In-situ Burning): ಹೊಸದಾಗಿ ಸೋರಿಕೆಯಾದ ತೈಲಕ್ಕೆ ಬೆಂಕಿ ಹಚ್ಚುವ ಮೂಲಕ ಶೇ. 98 ರಷ್ಟು ತೈಲವನ್ನು ತೆಗೆದುಹಾಕಬಹುದು, ಆದರೂ ಇದು ಭಾರಿ ವಾಯುಮಾಲಿನ್ಯವನ್ನು ಉಂಟುಮಾಡುತ್ತದೆ.

    ಸಮುದ್ರ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನಗಳು

    • ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ತುರ್ತು ಕಾರ್ಯಯೋಜನೆ (NOS-DCP): ಭಾರತೀಯ ಕರಾವಳಿ ಕಾವಲು ಪಡೆ (Indian Coast Guard – ICG) ತೈಲ ಸೋರಿಕೆಗಳ ಕುರಿತು ವರದಿ ಮಾಡಲು ಮತ್ತು ಕಾರ್ಯಾಚರಣೆ ಕೈಗೊಳ್ಳಲು ಇರುವ ಕೇಂದ್ರ ಸಮನ್ವಯ ಪ್ರಾಧಿಕಾರವಾಗಿದೆ.
    • ಬಂಕರ್ ತೈಲ ಸಮಾವೇಶ, 2001 (Bunker Oil Convention, 2001): ಹಡಗುಗಳಿಂದ ಇಂಧನ ತೈಲ ಸೋರಿಕೆಯಾಗಿ ಉಂಟಾಗುವ ಹಾನಿಗೆ ತ್ವರಿತ ಪರಿಹಾರ ಒದಗಿಸುವುದನ್ನು ಇದು ಖಚಿತಪಡಿಸುತ್ತದೆ.
    • MARPOL 73/78 (ಅನುಬಂಧ I): ಇದು ಹಡಗುಗಳಿಂದಾಗುವ ಸಮುದ್ರ ಮಾಲಿನ್ಯವನ್ನು ತಡೆಗಟ್ಟುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
    • ಪರಿಸರ ಸಂರಕ್ಷಣಾ ಕಾಯ್ದೆ (EPA), 1986: ತೈಲ ಸೋರಿಕೆಯನ್ನು ನಿಭಾಯಿಸಲು ಪ್ರತ್ಯೇಕ ಕಾನೂನು ಇಲ್ಲದಿದ್ದರೂ, ಇಂತಹ ಘಟನೆಗಳನ್ನು ಹೆಚ್ಚಾಗಿ ಈ ಕಾಯ್ದೆಯಡಿ “ಆಕಸ್ಮಿಕ ಹೊರಸೂಸುವಿಕೆ” (Accidental discharge) ಎಂದು ಪರಿಗಣಿಸಿ ಮೊಕದ್ದಮೆ ಹೂಡಲಾಗುತ್ತದೆ.
  • ಕನ್ನಡ ಭಾಷಾ ಕಲಿಕಾ ಕಾಯ್ದೆ, 2015

    ಕನ್ನಡ ಭಾಷಾ ಕಲಿಕಾ ಕಾಯ್ದೆ, 2015

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ (KDA) ರಾಜ್ಯ ಸರ್ಕಾರಕ್ಕೆ “ಮಕ್ಕಳು ಕನ್ನಡದಲ್ಲಿ ಏಕೆ ಅನುತ್ತೀರ್ಣರಾಗುತ್ತಾರೆ?” ಎಂಬ ಶೀರ್ಷಿಕೆಯ ವರದಿಯೊಂದನ್ನು ಸಲ್ಲಿಸಿದೆ. ಇದು ಸಿಬಿಎಸ್‌ಇ (CBSE) ಮತ್ತು ಐಸಿಎಸ್‌ಇ (ICSE) ಸೇರಿದಂತೆ ಎಲ್ಲಾ ಶಾಲಾ ಮಂಡಳಿಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿದೆ.

    ಈ ವರದಿಯಲ್ಲಿರುವ ಪ್ರಮುಖ ಶಿಫಾರಸುಗಳು ಮತ್ತು ನೀತಿ ಕ್ರಮಗಳು:

    • ಎಲ್ಲಾ ಮಂಡಳಿಗಳಲ್ಲೂ ಕಡ್ಡಾಯ: ಶಾಲೆಯ ಪಠ್ಯಕ್ರಮ ಯಾವುದೇ ಆಗಿರಲಿ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸಲೇಬೇಕು.
    • ಸರ್ಕಾರಿ ಉದ್ಯೋಗಗಳಲ್ಲಿ 25% ಮೀಸಲಾತಿ: ಕನಿಷ್ಠ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ, ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಕನಿಷ್ಠ ಶೇ. 25ರಷ್ಟು ಮೀಸಲಾತಿಯನ್ನು ಒದಗಿಸಬೇಕು.
    • ದ್ವಿಭಾಷಾ ನೀತಿ: ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ‘ತ್ರಿಭಾಷಾ ಸೂತ್ರ’ದ ಬದಲಾಗಿ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳುವಂತೆ ಸಮಿತಿಯು ಸಲಹೆ ನೀಡಿದೆ.
    • ಆರಂಭಿಕ ಹಂತದ ಕಲಿಕೆ: ಅಂಗನವಾಡಿ ಮತ್ತು ಪೂರ್ವ-ಪ್ರಾಥಮಿಕ ಹಂತದಿಂದಲೇ ಪ್ರಾರಂಭಿಸಿ ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಅಲ್ಲದೆ, ಕೇವಲ ವಿಷಯ-ಆಧಾರಿತ ಪಠ್ಯಪುಸ್ತಕಗಳ ಬದಲಾಗಿ, ಭಾಷಾ ಕಲಿಕೆಯ ಮೇಲೆಯೇ ಹೆಚ್ಚು ಗಮನಹರಿಸುವ ಪಠ್ಯಪುಸ್ತಕಗಳನ್ನು ರೂಪಿಸಬೇಕು ಎಂದು ವರದಿ ಆಗ್ರಹಿಸಿದೆ.
    • ಕಾನೂನಿನ ಬೆಂಬಲ: ಈ ಮೇಲಿನ ಸಲಹೆಗಳು, 2017ರಿಂದ ಜಾರಿಯಲ್ಲಿರುವ ‘ಕನ್ನಡ ಭಾಷಾ ಕಲಿಕಾ ಕಾಯ್ದೆ, 2015’ರ ವ್ಯಾಪಕ ಅನುಷ್ಠಾನಕ್ಕೆ ಪೂರಕವಾಗಿವೆ.

    ಕನ್ನಡ ಭಾಷಾ ಕಲಿಕಾ ಕಾಯ್ದೆ, 2015 ರ ಬಗ್ಗೆ:

    • ಕಾನೂನಿನ ವ್ಯಾಪ್ತಿ: ಇದು 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು (ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ) ಕಡ್ಡಾಯ ವಿಷಯವಾಗಿ ಬೋಧಿಸುವುದನ್ನು ಕಡ್ಡಾಯಗೊಳಿಸುತ್ತದೆ.
    • ಸಿಬಿಎಸ್‌ಇ (CBSE), ಐಸಿಎಸ್‌ಇ (ICSE) ಮತ್ತು ರಾಜ್ಯ ಪಠ್ಯಕ್ರಮದ ಶಾಲೆಗಳನ್ನು ಒಳಗೊಂಡಂತೆ ರಾಜ್ಯಾದ್ಯಂತ ಇರುವ ಎಲ್ಲಾ ಶಾಲೆಗಳಿಗೂ ಈ ಕಾಯ್ದೆಯು ಅನ್ವಯಿಸುತ್ತದೆ.
  • ಜನ ಸುರಕ್ಷಾ ಯೋಜನೆಗಳಿಗೆ 11 ವರ್ಷಗಳು | ಬಹು ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ ವ್ಯವಸ್ಥೆ (MIRV system)

    ಜನ ಸುರಕ್ಷಾ ಯೋಜನೆಗಳಿಗೆ 11 ವರ್ಷಗಳು

    ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರ 11 ವರ್ಷಗಳ ಹಿಂದೆ ಪ್ರಾರಂಭಿಸಿದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಅಟಲ್ ಪಿಂಚಣಿ ಯೋಜನೆ (APY) ಗಳ ಪ್ರಭಾವ ಮತ್ತು ಪರಿಣಾಮಗಳ ಕುರಿತು ಮಾತನಾಡಿದರು. 

    ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY – Pradhan Mantri Suraksha Bima Yojana):

    • ಪ್ರಾರಂಭಿಸಿದ್ದು: ಮೇ 9, 2015.
    • ಅನುಷ್ಠಾನ: ಹಣಕಾಸು ಸಚಿವಾಲಯ.
    • ಉದ್ದೇಶ: ಸಮಾಜದ ಹಿಂದುಳಿದ ವರ್ಗಗಳ ಜನರಿಗೆ ವಿಮಾ ಯೋಜನೆಯನ್ನು ಒದಗಿಸುವುದು.
    • ಪ್ರಮುಖ ಲಕ್ಷಣಗಳು:
      • ಇದು ತನ್ನ ಎಲ್ಲಾ ಖಾತೆದಾರರಿಗೆ ಒಂದು ವರ್ಷದ ಅವಧಿಗೆ ರೂ. 2 ಲಕ್ಷದ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ ಈ ಜೀವ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.
      • ಭಾಗಶಃ ಅಂಗವೈಕಲ್ಯದ ಸಂದರ್ಭದಲ್ಲಿ ಫಲಾನುಭವಿಗೆ ರೂ. 1 ಲಕ್ಷದ ಜೀವ ವಿಮಾ ರಕ್ಷಣೆ ನೀಡಲಾಗುತ್ತದೆ.
      • 18 ರಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನ ಪಡೆಯಬಹುದು.
      • ಖಾತೆದಾರರ ಮರಣದ ಸಂದರ್ಭದಲ್ಲಿ, ಆತನ/ಆಕೆಯ ನಾಮನಿರ್ದೇಶಿತ ವ್ಯಕ್ತಿ (ವಾರಸುದಾರರು) ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
    • ವಿಮಾ ಕಂತು (ಪ್ರೀಮಿಯಂ): ಈ ಯೋಜನೆಯು ಪ್ರತಿ ಸದಸ್ಯರಿಗೆ ವಾರ್ಷಿಕ ರೂ. 12 ಪ್ರೀಮಿಯಂ ಅನ್ನು ಒದಗಿಸುತ್ತದೆ. ಪ್ರತಿ ವರ್ಷ ಜೂನ್ 1 ರಂದು ಅಥವಾ ಅದಕ್ಕೂ ಮೊದಲು ಈ ಪ್ರೀಮಿಯಂ ಅನ್ನು ಒಂದೇ ಕಂತಿನಲ್ಲಿ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.

    ಅಟಲ್ ಪಿಂಚಣಿ ಯೋಜನೆ (APY – Atal Pension Yojana):

    • ಪ್ರಾರಂಭಿಸಿದ್ದು: ಮೇ, 2015.
    • ಉದ್ದೇಶ: ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಬಡವರು, ಹಿಂದುಳಿದವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ರಚಿಸುವುದು.
    • ನಿರ್ವಹಣೆ: ರಾಷ್ಟೀಯ ಪಿಂಚಣಿ ಯೋಜನೆ (NPS)ಯ ಮೂಲಕ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ.
    • ಅರ್ಹತೆ: ಭಾರತದ ಯಾವುದೇ ನಾಗರಿಕರು ಅಟಲ್ ಪಿಂಚಣಿ ಯೋಜನೆಗೆ ಸೇರಬಹುದು. ಚಂದಾದಾರರ ವಯಸ್ಸು 18-40 ವರ್ಷಗಳ ನಡುವೆ ಇರಬೇಕು.
    • ಪ್ರಯೋಜನಗಳು:
      • ಇದು 60 ವರ್ಷ ವಯಸ್ಸನ್ನು ತಲುಪಿದ ನಂತರ ರೂ. 1000 ದಿಂದ ರೂ. 5000 ವರೆಗಿನ ಕನಿಷ್ಠ ಖಾತರಿಯ ಪಿಂಚಣಿಯನ್ನು ಒದಗಿಸುತ್ತದೆ.
      • ಚಂದಾದಾರರ ಮರಣದ ನಂತರ ಅವರ ಪತ್ನಿಗೆ/ಪತಿಗೆ ಜೀವಮಾನವಿಡೀ ಪಿಂಚಣಿಯ ಮೊತ್ತವನ್ನು ಖಾತರಿಪಡಿಸಲಾಗುತ್ತದೆ.
      • ಚಂದಾದಾರರು ಮತ್ತು ಅವರ ಪತ್ನಿ/ಪತಿ ಇಬ್ಬರ ಮರಣದ ಸಂದರ್ಭದಲ್ಲಿ, ಸಂಪೂರ್ಣ ಪಿಂಚಣಿ ನಿಧಿಯನ್ನು (ಕಾರ್ಪಸ್) ನಾಮನಿರ್ದೇಶಿತ ವ್ಯಕ್ತಿಗೆ (ವಾರಸುದಾರರಿಗೆ) ಪಾವತಿಸಲಾಗುತ್ತದೆ.

    ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY – Pradhan Mantri Jeevan Jyoti Bima Yojana):

    • ಪ್ರಾರಂಭಿಸಿದ್ದು: ಮೇ 9, 2015.
    • ಅನುಷ್ಠಾನ: ಹಣಕಾಸು ಸಚಿವಾಲಯ.
    • ಉದ್ದೇಶ: ಸಮಾಜದ ಬಡ ಮತ್ತು ಕಡಿಮೆ ಆದಾಯದ ವರ್ಗದವರಿಗೆ ಜೀವ ವಿಮಾ ಭದ್ರತೆಯನ್ನು ಒದಗಿಸುವುದು.
    • ಅರ್ಹತೆ: 18 ರಿಂದ 50 ವರ್ಷ ವಯಸ್ಸಿನ ಜನರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
    • ಯೋಜನೆಯ ಪ್ರಮುಖ ಲಕ್ಷಣಗಳು:
      • ಯೋಜನೆಯು ಗರಿಷ್ಠ ರೂ. 2 ಲಕ್ಷದ ಖಚಿತ ವಿಮಾ ಮೊತ್ತವನ್ನು ನೀಡುತ್ತದೆ.
      • ವಿಮೆ ಮಾಡಿದ ವ್ಯಕ್ತಿಯ ಮರಣದ ಸಂದರ್ಭದಲ್ಲಿ, ಮುಂದಿನ ಅರ್ಹ ಫಲಾನುಭವಿಗೆ ರೂ. 2,00,000 ಮರಣ ರಕ್ಷಣೆಯನ್ನು ಒಳಗೊಂಡ ಮರಣದ ಪ್ರಯೋಜನವನ್ನು ನೀಡಲಾಗುತ್ತದೆ.
    • ವಿಮಾ ಕಂತು (ಪ್ರೀಮಿಯಂ): ಈ ಯೋಜನೆಗೆ ವಾರ್ಷಿಕ ಪ್ರೀಮಿಯಂ ರೂ. 330 ಆಗಿದೆ.

    ಬಹು ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ ವ್ಯವಸ್ಥೆ (MIRV system)

    ರಕ್ಷಣೆ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಒಡಿಶಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಿಂದ ಬಹು ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ (MIRV) ವ್ಯವಸ್ಥೆಯನ್ನು ಹೊಂದಿರುವ ಸುಧಾರಿತ ಅಗ್ನಿ ಕ್ಷಿಪಣಿಯ ಯಶಸ್ವಿ ಹಾರಾಟ-ಪರೀಕ್ಷೆಯನ್ನು ಇತ್ತೀಚೆಗೆ ಭಾರತ ನಡೆಸಿತು.

    MIRV ತಂತ್ರಜ್ಞಾನದ ಬಗ್ಗೆ:

    • MIRV ಸಂಕ್ಷಿಪ್ತ ರೂಪ: ಬಹುವಿಧದ ಸ್ವತಂತ್ರ ಗುರಿ-ನಿರ್ದೇಶಿತ ಮರು-ಪ್ರವೇಶ ವಾಹನ (Multiple Independently Targetable Reentry Vehicle)
    • ವಿಶಿಷ್ಟತೆ: ಈ ತಂತ್ರಜ್ಞಾನವು ಒಂದೇ ಕ್ಷಿಪಣಿಯ ಮೂಲಕ ಅನೇಕ ಸಿಡಿತಲೆಗಳನ್ನು ಹೊತ್ತೋಯ್ಯುವ ಮತ್ತು ಪ್ರತಿಯೊಂದು ಸಿಡಿತಲೆಯನ್ನೂ ಪ್ರತ್ಯೇಕವಾದ ಗುರಿಗಳಿಗೆ ನಿರ್ದೇಶಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದ ಕ್ಷಿಪಣಿಯ ವಿನಾಶಕಾರಿ ಶಕ್ತಿಯು ಗಣನೀಯವಾಗಿ ಹೆಚ್ಚಾಗುತ್ತದೆ.

    ಅಗ್ನಿ ಕ್ಷಿಪಣಿಗಳ (Agni Missiles) ಬಗ್ಗೆ:

    • ಅಗ್ನಿ ಕ್ಷಿಪಣಿ ವರ್ಗವು ಭಾರತದ ಪರಮಾಣು ಉಡಾವಣಾ ಸಾಮರ್ಥ್ಯದ ಬೆನ್ನೆಲುಬಾಗಿದೆ.
    • ಅಭಿವೃದ್ಧಿಪಡಿಸಿದವರು: ಅಗ್ನಿ-1 ರಿಂದ 5 ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.
    • ಅಗ್ನಿ ಕ್ಷಿಪಣಿಗಳ ಇತರ ಶ್ರೇಣಿಗಳು:
      • ಅಗ್ನಿ I: 700-800 ಕಿ.ಮೀ ವ್ಯಾಪ್ತಿ.
      • ಅಗ್ನಿ II: 2000 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿ.
      • ಅಗ್ನಿ III: 2,500 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿ.
      • ಅಗ್ನಿ IV: 3,500 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ ಮತ್ತು ಇದನ್ನು ರಸ್ತೆ-ಸಂಚಾರಿ ಉಡಾವಣಾ ವಾಹನದಿಂದ (Road-mobile launcher) ಉಡಾವಣೆ ಮಾಡಬಹುದು.
      • ಅಗ್ನಿ-V: ಅಗ್ನಿ ಸರಣಿಯಲ್ಲಿಯೇ ಅತ್ಯಂತ ಉದ್ದವಾದ, 5,000 ಕಿ.ಮೀ ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಖಂಡಾಂತರ ಕ್ಷಿಪಣಿಯಾಗಿದೆ (ICBM).

    ಸಮಗ್ರ ಮಾರ್ಗದರ್ಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ (Integrated Guided Missile Development Programme – IGMDP):

    • ಪ್ರಾರಂಭಿಸಿದ್ದು: 1983.
    • ಪರಿಕಲ್ಪನೆ : 1980ರ ದಶಕದಲ್ಲಿ IGMDP ಯ ಪರಿಕಲ್ಪನೆಯನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊಟ್ಟರು.
    • ಉದ್ದೇಶ: ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಅನುಕೂಲ ಮಾಡಿಕೊಡುವುದು.
    • IGMDP ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಕ್ಷಿಪಣಿಗಳು:
      • ಪೃಥ್ವಿ: ಅಲ್ಪ-ಶ್ರೇಣಿಯ, ಭೂಮಿಯಿಂದ-ಭೂಮಿಗೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ
      • ಅಗ್ನಿ: ಮಧ್ಯಮ-ಶ್ರೇಣಿಯ, ಭೂಮಿಯಿಂದ-ಭೂಮಿಗೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ
      • ತ್ರಿಶೂಲ್: ಅಲ್ಪ-ಶ್ರೇಣಿಯ, ಕಡಿಮೆ-ಮಟ್ಟದ, ಭೂಮಿಯಿಂದ-ಆಕಾಶಕ್ಕೆ ಚಿಮ್ಮುವ ಕ್ಷಿಪಣಿ.
      • ಆಕಾಶ್: ಮಧ್ಯಮ-ಶ್ರೇಣಿಯ, ಭೂಮಿಯಿಂದ-ಆಕಾಶಕ್ಕೆ ಚಿಮ್ಮುವ ಕ್ಷಿಪಣಿ.
    • ನಾಗ್: ಮೂರನೇ ತಲೆಮಾರಿನ ಟ್ಯಾಂಕ್ ನಿರೋಧಕ ಕ್ಷಿಪಣಿ.
  • ಜಲ ಜೀವನ್ ಮಿಷನ್ (JJM)

    ಜಲ ಜೀವನ್ ಮಿಷನ್ (JJM)

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಜಲ ಜೀವನ್ ಮಿಷನ್ (JJM) ಯೋಜನೆಯಡಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಬಾಕಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಜಲ ಜೀವನ್ ಮಿಷನ್ (JJM) ಬಗ್ಗೆ :

    • ಪ್ರಾರಂಭವಾದ ವರ್ಷ: 2019.
    • ಉದ್ದೇಶ: ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ‘ಕಾರ್ಯನಿರ್ವಹಿಸುವ ನಲ್ಲಿಯ ಸಂಪರ್ಕ’ವನ್ನು (Functional Household Tap Connections – FHTC) ಒದಗಿಸುವುದು.
    • ಮಹತ್ವ: 2024ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿದಿನ ಪ್ರತಿ ವ್ಯಕ್ತಿಗೆ ತಲಾ 55 ಲೀಟರ್‌ನಷ್ಟು ಶುದ್ಧ ಕುಡಿಯುವ ನೀರನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಗುರಿಯಾಗಿತ್ತು. ಆದರೆ, ಯೋಜನೆಯ ಅನುಷ್ಠಾನದಲ್ಲಿ ಎದುರಾದ ಕೆಲವು ಸವಾಲುಗಳಿಂದಾಗಿ, ಈ ಗುರಿಯನ್ನು ತಲುಪುವ ಗಡುವನ್ನು ಇದೀಗ 2028ಕ್ಕೆ ವಿಸ್ತರಿಸಲಾಗಿದೆ.
    • ಅನುಷ್ಠಾನ ಸಚಿವಾಲಯ : ಕೇಂದ್ರ ಜಲಶಕ್ತಿ ಸಚಿವಾಲಯ.
    • ಹಣಕಾಸು ಸ್ವರೂಪ: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
  • ಗಿರ್ಮಿತ್ಯಾ (Girmityas) : ಒಪ್ಪಂದಿತ ಕೂಲಿ ಕಾರ್ಮಿಕರು | ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳ ಸಂಘಟನೆ (IORA)

    ಗಿರ್ಮಿತ್ಯಾ (Girmityas) : ಒಪ್ಪಂದಿತ ಕೂಲಿ ಕಾರ್ಮಿಕರು

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಕೆರಿಬಿಯನ್ ರಾಷ್ಟ್ರದೊಂದಿಗಿನ ಭಾರತದ ಬಾಂಧವ್ಯವನ್ನು ಬಲಪಡಿಸಲು ಮತ್ತು ಗಿರ್ಮಿತ್ಯಾ ಸಮುದಾಯದ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ದೇಶಗಳಿಗೆ ಭೇಟಿ ನೀಡಿದರು.

    ಗಿರ್ಮಿತ್ಯಾ ಸಮುದಾಯದ ಬಗ್ಗೆ:

    • ಗಿರ್ಮಿತ್ಯಾ ಸಮುದಾಯವು 19ನೇ ಮತ್ತು 20ನೇ ಶತಮಾನದ ಆರಂಭದಲ್ಲಿ ತೋಟಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡಲು ಬ್ರಿಟಿಷ್ ಭಾರತದಿನಿಂದ ಒಪ್ಪಂದದ ಆಧಾರದ ಮೇಲೆ ಸಾಗಿಸಲ್ಪಟ್ಟ ವಲಸೆ ಕಾರ್ಮಿಕರಾಗಿದ್ದಾರೆ.
    • “ಗಿರ್ಮಿತ್ಯಾ” ಎಂಬ ಪದವು ಇಂಗ್ಲಿಷ್‌ನ “ಅಗ್ರಿಮೆಂಟ್” (ಒಪ್ಪಂದ) ಎಂಬ ಪದದಿಂದ ಬಂದಿದೆ, ವಸಾಹತುಶಾಹಿ ಅಧಿಕಾರವಧಿಯಲ್ಲಿ ಭಾರತೀಯ ಕಾರ್ಮಿಕರು ಸಹಿ ಮಾಡಿದ ಕರಾರು ಒಪ್ಪಂದಗಳನ್ನು ಇದು ಉಲ್ಲೇಖಿಸುತ್ತದೆ.
    • ಫಿಜಿ, ಮಾರಿಷಸ್, ಸೀಶೆಲ್ಸ್, ರಿಯೂನಿಯನ್, ದಕ್ಷಿಣ ಆಫ್ರಿಕಾ, ಟ್ರಿನಿಡಾಡ್ ಮತ್ತು ಟೊಬಾಗೊ, ಬ್ರಿಟಿಷ್ ಗಯಾನಾ (ಈಗಿನ ಗಯಾನಾ), ಸುರಿನಾಮೆ, ಮಲೇಷ್ಯಾ ಮತ್ತು ಕೀನ್ಯಾದಂತಹ ದೇಶಗಳಿಗೆ ಗಿರ್ಮಿತ್ಯಾರನ್ನು ಕಳುಹಿಸಲಾಗಿತ್ತು.

    ಟ್ರಿನಿಡಾಡ್ ಮತ್ತು ಟೊಬಾಗೊ ದೇಶಗಳಿಗೆ ಜನರ ವಲಸೆ:

    • 1845 ರಿಂದ 1917 ರ ನಡುವೆ ಭಾರತದಿಂದ ಟ್ರಿನಿಡಾಡ್‌ಗೆ ಅಂದಾಜು 143,000 ಒಪ್ಪಂದದ ಕಾರ್ಮಿಕರು ವಲಸೆ ಹೋದರು, ಈ ವಲಸಿಗರಲ್ಲಿ ಹೆಚ್ಚಿನವರು ಉತ್ತರ ಭಾರತ ಮತ್ತು ಬಿಹಾರದಿಂದ ಬಂದವರಾಗಿದ್ದರು.
    • ಅವರ ವಂಶಸ್ಥರು ಇಂದು ಟ್ರಿನಿಡಾಡ್ ಮತ್ತು ಟೊಬಾಗೊದ ಜನಸಂಖ್ಯೆಯ ಸುಮಾರು 40-45% ರಷ್ಟಿದ್ದಾರೆ, ಜೊತೆಗೆ ಆ ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.

    ಕೆರಿಬ್ಬಿಯನ್ ಸಮುದಾಯ (CARICOM – The Caribbean Community):

    • ಇದು 1973 ರಲ್ಲಿ ರಚನೆಯಾಗಿದೆ.
    • ಇದು ಆರ್ಥಿಕ ಏಕೀಕರಣ ಮತ್ತು ವಿದೇಶಾಂಗ ನೀತಿಯ ಸಮನ್ವಯದ ಗುರಿಯನ್ನು ಹೊಂದಿರುವ 15-ಸದಸ್ಯ ರಾಷ್ಟ್ರಗಳ ನಿರ್ಣಾಯಕ ಪ್ರಾದೇಶಿಕ ಒಕ್ಕೂಟವಾಗಿದೆ.
    • 15 ಸದಸ್ಯ ರಾಷ್ಟ್ರಗಳು: ಆಂಟಿಗುವಾ ಮತ್ತು ಬಾರ್ಬುಡಾ, ದ ಬಹಾಮಾಸ್, ಬಾರ್ಬಡೋಸ್, ಬೆಲೀಜ್, ಡೊಮಿನಿಕಾ, ಗ್ರೆನಡಾ, ಗಯಾನಾ, ಹೈತಿ, ಜಮೈಕಾ, ಮಾಂಟ್ಸೆರಾಟ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಸುರಿನಾಮೆ, ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೊ.
    • ಸ್ಥಳ: ಆಗ್ನೇಯ ಮೆಕ್ಸಿಕೋ ಕೊಲ್ಲಿ, ಮಧ್ಯ ಅಮೆರಿಕದ ಪೂರ್ವ ಹಾಗೂ ದಕ್ಷಿಣ ಅಮೆರಿಕದ ಉತ್ತರ.

    ಭಾರತ-CARICOM ಸಂಬಂಧಗಳು:

    • 2ನೇ ಶೃಂಗಸಭೆ, 2024: ಬಹುಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಗಯಾನಾದ ಜಾರ್ಜ್‌ಟೌನ್‌ನಲ್ಲಿ ಇದು ನಡೆಯಿತು.
    • ಸಹಕಾರದ ಕ್ಷೇತ್ರಗಳು: ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆ, ನವೀಕರಿಸಬಹುದಾದ ಇಂಧನ ಮತ್ತು ಹಣಕಾಸು ತಂತ್ರಜ್ಞಾನ (UPI).
    • ಪ್ರಮುಖ ಉಪಕ್ರಮ: ಭಾರತದ UPI ಅನ್ನು ಅಳವಡಿಸಿಕೊಂಡ ಮೊದಲ ಕೆರಿಬಿಯನ್ ರಾಷ್ಟ್ರವಾಗಿ ಟ್ರಿನಿಡಾಡ್ ಮತ್ತು ಟೊಬಾಗೊ ಹೊರಹೊಮ್ಮಿದೆ.

    ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳ ಸಂಘಟನೆ (IORA)

    ಅಂತರರಾಷ್ಟ್ರೀಯ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • “ರೂಪಾಂತರಗೊಳ್ಳುತ್ತಿರುವ ಜಗತ್ತಿನಲ್ಲಿ ಹಿಂದೂ ಮಹಾಸಾಗರ ಪ್ರದೇಶ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ 10ನೇ ಹಿಂದೂ ಮಹಾಸಾಗರ ಸಂವಾದ (IOD)ವು ಇತ್ತೀಚಿಗೆ ನವದೆಹಲಿಯಲ್ಲಿ ನಡೆಯಿತು.

    ಹಿಂದೂ ಮಹಾಸಾಗರ ತೀರದ ರಾಷ್ಟ್ರಗಳ ಸಂಘಟನೆ (IORA)ಯ ಬಗ್ಗೆ:

    • ಇದು ಹಿಂದೂ ಮಹಾಸಾಗರದ ಗಡಿಯಲ್ಲಿರುವ 23 ಸದಸ್ಯ ರಾಷ್ಟ್ರಗಳ ನಡುವಿನ ಪ್ರಾದೇಶಿಕ ಸಹಕಾರಕ್ಕಾಗಿ ಇರುವ ಒಂದು ಅಂತರ-ಸರ್ಕಾರಿ ಸಂಸ್ಥೆಯಾಗಿದೆ.
    • ಸ್ಥಾಪನೆ: ಮಾರ್ಚ್ 7, 1997 (ಹಿಂದೆ IOR-ARC ಎಂದು ಕರೆಯಲಾಗುತ್ತಿತ್ತು).
    • ಸಚಿವಾಲಯ: ಎಬೆನ್ (Ebène), ಮಾರಿಷಸ್.
    • ಸದಸ್ಯತ್ವ: 23 ಸದಸ್ಯ ರಾಷ್ಟ್ರಗಳು ಮತ್ತು 12 ಸಂವಾದ ಪಾಲುದಾರರು (ಉದಾ: ಚೀನಾ, USA, ಜಪಾನ್).
    • ಅಧ್ಯಕ್ಷತೆ: ಶ್ರೀಲಂಕಾದಿಂದ ಅಧಿಕಾರ ವಹಿಸಿಕೊಂಡಿರುವ ಭಾರತವು, ಪ್ರಸ್ತುತ 2025-2027ರ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿದೆ.
    • ಮೂಲ: ಸಾಮಾಜಿಕ-ಆರ್ಥಿಕ ಸಹಕಾರವನ್ನು ಪ್ರತಿಪಾದಿಸಿದ ನೆಲ್ಸನ್ ಮಂಡೇಲಾ ಅವರ 1995ರ ಭಾರತ ಭೇಟಿಯಿಂದ ಇದು ಪ್ರೇರಿತವಾಗಿದೆ.