Blog

  • ಅಲ್ಬಿನೋ ಹಾಗ್ ಜಿಂಕೆ | ಬಬೆಸಿಯಾ ಸೋಂಕು

    ಅಲ್ಬಿನೋ ಹಾಗ್ ಜಿಂಕೆ

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಇತ್ತೀಚೆಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಅಲ್ಬಿನೋ ಹಾಗ್ ಜಿಂಕೆಯು ಅಲೆದಾಡುತ್ತಿರುವುದು ಕಂಡುಬಂದಿದೆ.

    ಅಲ್ಬಿನೋ ಹಾಗ್ ಜಿಂಕೆಯ ಬಗ್ಗೆ: 

    • ಅಲ್ಬಿನೋ ಹಾಗ್ ಜಿಂಕೆಯು ಭಾರತೀಯ ಉಪಖಂಡ ಮತ್ತು ಇಂಡೋ-ಗಂಗಾ ಬಯಲಿಗೆ ಸ್ಥಳೀಯವಾಗಿರುವ ಸಣ್ಣ ಜಿಂಕೆ ಪ್ರಭೇದವಾಗಿದೆ.
    • ಇದು ಬಿಳಿ ತುಪ್ಪಳ, ಗುಲಾಬಿ ಕಣ್ಣುಗಳು ಮತ್ತು ತಿಳಿಬಣ್ಣದ ಗೊರಸುಗಳಿಂದ ಕೂಡಿದ ಬಾಹ್ಯ ಲಕ್ಷಣಗಳನ್ನು ಒಳಗೊಂಡಿದೆ.
    • ಅಲ್ಬಿನಿಸಂ ಎಂದು ಕರೆಯಲ್ಪಡುವ ಅಪರೂಪದ ಆನುವಂಶಿಕ ರೂಪಾಂತರದಿಂದಾಗಿ, ಈ ಪ್ರಾಣಿಯು ದೇಹದ ಬಣ್ಣಕ್ಕೆ ಕಾರಣವಾಗುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಸಂಪೂರ್ಣವಾಗಿ ಹೊಂದಿರುವುದಿಲ್ಲ.
    • ಈ ಪ್ರಾಣಿಗಳಿಗೆ ಪರಿಸರದೊಂದಿಗೆ ಬೆರೆಯುವ (camouflage) ಸಾಮರ್ಥ್ಯವಿಲ್ಲದಿರುವುದು, ಪರಭಕ್ಷಕಗಳಿಗೆ ಸುಲಭವಾಗಿ ಗೋಚರಿಸುವುದು ಮತ್ತು ಸೂರ್ಯನ ಬೆಳಕಿಗೆ ಸೂಕ್ಷ್ಮವಾಗಿರುವುದು ಇತ್ಯಾದಿ ಸವಾಲುಗಳನ್ನು ಎದುರಿಸುವುದರಿಂದ, ಅಲ್ಬಿನಿಸಂ ಪ್ರಕೃತಿಯಲ್ಲಿ ಇವುಗಳ ಬದುಕುಳಿಯುವಿಕೆಯನ್ನು ಕಷ್ಟಕರವಾಗಿಸುತ್ತದೆ.
    • ಹಾಗ್ ಜಿಂಕೆಗಳಷ್ಟೇ ಅಲ್ಲದೆ, ಕಾಡೆಮ್ಮೆ, ಭಾರತೀಯ ನಾಗರಹಾವು ಮತ್ತು ರಿಸಸ್ ಮಕಾಕ್‌ನಂತಹ ಪ್ರೈಮೇಟ್ (ಸಸ್ತನಿ ವರ್ಗದ ಪ್ರಾಣಿ) ವರ್ಗದ ಜೀವಿಗಳನ್ನು ಒಳಗೊಂಡಂತೆ ವಿವಿಧ ಅಲ್ಬಿನೋ ಪ್ರಭೇದಗಳಿಗೆ ಭಾರತವು ನೆಲೆಯಾಗಿದೆ. 
    • ಒಡಿಶಾದ ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನವು ಅಪರೂಪದ ಅಲ್ಬಿನೋ ಉಪ್ಪುನೀರಿನ ಮೊಸಳೆಗಳಿಗೆ ನೆಲೆಯಾಗಿದೆ.

    ಬಬೆಸಿಯಾ ಸೋಂಕು

    ಪರಿಸರ

    ಇದೀಗ ಸುದ್ದಿಯಲ್ಲಿ:

    • ಶಂಕಿತ ಬಬೆಸಿಯಾ ಸೋಂಕಿನಿಂದಾಗಿ ಗುಜರಾತ್‌ನಲ್ಲಿ ಎಂಟು ಸಿಂಹದ ಮರಿಗಳು ಸಾವನ್ನಪ್ಪಿದ್ದು, ಏಷ್ಯಾಟಿಕ್ ಸಿಂಹಗಳ ಸಂಖ್ಯೆಯ ಆರೋಗ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

    ಬಬೆಸಿಯಾ ಸೋಂಕಿನ ಬಗ್ಗೆ: 

    • ಬಬೆಸಿಯಾ ಉಣ್ಣೆಗಳ ಮೂಲಕ ಹರಡುವ ಪರಾವಲಂಬಿ ರೋಗವಾಗಿದ್ದು, ಸೋಂಕಿತ ಪ್ರಾಣಿಗಳಲ್ಲಿ ದೌರ್ಬಲ್ಯ, ಜ್ವರ, ಕೆಮ್ಮು ಮತ್ತು ಮೂಗಿನ ಸ್ರವಿಸುವಿಕೆಗೆ ಕಾರಣವಾಗಬಹುದು.
    • ಇದು ಪ್ರಾಣಿಜನ್ಯ (ಝೂನೋಟಿಕ್) ಕಾಯಿಲೆಯಾಗಿದೆ, ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.
    • ಸೌಮ್ಯ ಹಾಗೂ ಸಾಧಾರಣ ಸ್ವರೂಪದ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅಟೊವಾಕ್ವೋನ್ ಜೊತೆಗೆ ಅಜಿತ್ರೊಮೈಸಿನ್ ಅನ್ನು ಬಳಸಲಾಗುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ 7 ರಿಂದ 10 ದಿನಗಳವರೆಗೆ ತೆಗೆದುಕೊಳ್ಳಲಾಗುತ್ತದೆ.

    ಏಷ್ಯಾಟಿಕ್ ಸಿಂಹದ ಬಗ್ಗೆ (Panthera leo persica)

    • ಇದು ಭಾರತದಲ್ಲಿ ಕಂಡುಬರುವ ಐದು ಬೃಹತ್ ಮಾರ್ಜಾಲ ಪ್ರಭೇದಗಳಲ್ಲಿ ಒಂದಾಗಿದೆ.
    • ಭೌತಿಕ ಲಕ್ಷಣಗಳು: ಏಷ್ಯಾಟಿಕ್ ಸಿಂಹಗಳು ಆಫ್ರಿಕನ್ ಸಿಂಹಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತವೆ.
    • ಗಂಡು ಸಿಂಹಗಳು ಕತ್ತಿನ ಸುತ್ತ ಕಡಿಮೆ ಕೂದಲನ್ನು (ಕೇಸರವನ್ನು) ಹೊಂದಿರುತ್ತವೆ, ಇದರಿಂದಾಗಿ ಅವುಗಳ ಕಿವಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
    • ಹೊಟ್ಟೆಯ ಉದ್ದಕ್ಕೂ ಚರ್ಮದ ಪ್ರಮುಖ ಉದ್ದುದ್ದವಾದ ಮಡಿಕೆಯನ್ನು ಹೊಂದಿರುತ್ತವೆ(ಇದು ಆಫ್ರಿಕನ್ ಸಿಂಹಗಳಿಂದ ಒಂದು ವಿಶಿಷ್ಟ ಲಕ್ಷಣವಾಗಿದೆ).
    • ಹಂಚಿಕೆ : ಭಾರತದಲ್ಲಿ, ಗುಜರಾತ್ ರಾಜ್ಯದಲ್ಲಿ ಗಿರ್ ಅರಣ್ಯದ ಒಳಗೆ ಮತ್ತು ಸುತ್ತಮುತ್ತ ಇದು ಕೇಂದ್ರೀಕೃತವಾಗಿದೆ; ಮುಖ್ಯವಾಗಿ:
      1. ಗಿರ್ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯ
      2. ಪಾನಿಯಾ ವನ್ಯಜೀವಿ ಅಭಯಾರಣ್ಯ
      3. ಮಿತ್ಯಾಲ ವನ್ಯಜೀವಿ ಅಭಯಾರಣ್ಯ
      4. ಬರ್ಡಾ ವನ್ಯಜೀವಿ ಅಭಯಾರಣ್ಯ

    ಸಂರಕ್ಷಣಾ ಸ್ಥಿತಿ:

    • IUCN ಕೆಂಪು ಪಟ್ಟಿ ಸ್ಥಿತಿ: ಅಳಿವಿನಂಚಿನಲ್ಲಿರುವ (EN).
    • ಸೈಟ್ಸ್ (CITES): ಅನುಬಂಧ I
    • ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972: ಅನುಸೂಚಿ I
  • INS ಸುದರ್ಶಿನಿ ಮತ್ತು ಲೋಕಾಯನ್ 26 ಸಾಹಸಯಾನ | ಕಲೈ-II ಜಲವಿದ್ಯುತ್ ಯೋಜನೆ

    INS ಸುದರ್ಶಿನಿ ಮತ್ತು ಲೋಕಾಯನ್ 26 ಸಾಹಸಯಾನ

    ರಕ್ಷಣೆ

    ಇದೀಗ ಸುದ್ದಿಯಲ್ಲಿ: 

    • ಲೋಕಾಯನ್ 26 ಸಾಹಸಯಾನದ ಭಾಗವಾಗಿ INS ಸುದರ್ಶಿನಿ ಐತಿಹಾಸಿಕ ಟ್ರಾನ್ಸ್- ಅಟ್ಲಾಂಟಿಕ್ (trans-Atlantic) ಮಾರ್ಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಆಂಟಿಗುವಾ ಮತ್ತು ಬಾರ್ಬುಡಾ ತಲುಪಿದೆ.

    INS ಸುದರ್ಶಿನಿ ಬಗ್ಗೆ: 

    • INS  ಸುದರ್ಶಿನಿ ಎಂಬುದು ಭಾರತೀಯ ನೌಕಾಪಡೆಯ ಒಂದು ತರಬೇತಿ ನೌಕೆಯಾಗಿದ್ದು, ನೌಕಾ ಸಿಬ್ಬಂದಿಗೆ ಸಾಂಪ್ರದಾಯಿಕ ನೌಕಾಯಾನ ಮತ್ತು ಸಮುದ್ರಯಾನ ಕೌಶಲ್ಯಗಳಲ್ಲಿ ತರಬೇತಿ ನೀಡಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
    • ಈ ಹಡಗನ್ನು ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ ಮತ್ತು 2012ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.

    ‘ಲೋಕಾಯನ್ 26 ಸಾಹಸಯಾನ’ದ ಬಗ್ಗೆ: 

    • ಲೋಕಾಯನ್ 26 ಸಾಹಸಯಾನ ಎನ್ನುವುದು ಭಾರತೀಯ ನೌಕಾಪಡೆಯ ನೌಕಾಯಾನ ತರಬೇತಿ ಹಡಗು, INS ಸುದರ್ಶಿನಿ ಕೈಗೊಂಡಿರುವ 10 ತಿಂಗಳ ಮತ್ತು 22,000 ನಾಟಿಕಲ್ ಮೈಲಿಗಳ ಮಹತ್ವದ ಸಾಗರೋತ್ತರ ಪಯಣವಾಗಿದೆ.
    • ಕಡಲ ರಾಜತಾಂತ್ರಿಕತೆಯನ್ನು ಉತ್ತೇಜಿಸುವುದು, ಸ್ನೇಹಪರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸುವುದು ಮತ್ತು ನೌಕಾ ಸಿಬ್ಬಂದಿಗಳಲ್ಲಿ ವೃತ್ತಿಪರ ನೌಕಾಯಾನ ಕೌಶಲ್ಯಗಳನ್ನು ಹೆಚ್ಚಿಸುವುದು ಈ ಸಾಹಸಯಾನದ ಉದ್ದೇಶವಾಗಿದೆ.
    • ಈ ಪ್ರಯಾಣವು INS ಸುದರ್ಶಿನಿಯ ಮೊದಲ ಅಟ್ಲಾಂಟಿಕ್ ಕ್ರಾಸಿಂಗ್ ಆಗಿದ್ದರೆ, ಇದಕ್ಕೂ ಮುನ್ನ 2007ರಲ್ಲಿ INS ತರಂಗಿಣಿ ಇಂತಹ ಕ್ರಾಸಿಂಗ್ ಅನ್ನು ಕೈಗೊಂಡಿತ್ತು.

    ಆಂಟಿಗುವಾ ಮತ್ತು ಬಾರ್ಬುಡಾ ಬಗ್ಗೆ: 

    • ಇದು ಕೆರಿಬಿಯನ್ ಸಮುದ್ರದಲ್ಲಿರುವ ಅವಳಿ-ದ್ವೀಪ ದೇಶವಾಗಿದ್ದು, ಆಂಟಿಗುವಾ ಮತ್ತು ಬಾರ್ಬುಡಾ ಎಂಬ ಎರಡು ಪ್ರಮುಖ ಜನವಸತಿ ದ್ವೀಪಗಳೊಂದಿಗೆ ಕೆಲವು ಸಣ್ಣ, ನೆರೆಯ ದ್ವೀಪಗಳಿಂದ ಕೂಡಿದೆ.
    • ಈ ದ್ವೀಪಗಳು 1981ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಿಂದ ಸ್ವಾತಂತ್ರ್ಯವನ್ನು ಪಡೆದವು.
    • ಆಂಟಿಗುವಾ: ದೊಡ್ಡ ದ್ವೀಪವಾಗಿರುವ ಇದು ಆರ್ಥಿಕ ಕೇಂದ್ರವಾಗಿದ್ದು, ರಾಜಧಾನಿ ಸೇಂಟ್ ಜಾನ್ಸ್ ಅನ್ನು ಹೊಂದಿದೆ.
    • ಬಾರ್ಬುಡಾ: ಆಂಟಿಗುವಾದಿಂದ ಸುಮಾರು 25 ಮೈಲುಗಳಷ್ಟು ಉತ್ತರಕ್ಕೆ ನೆಲೆಗೊಂಡಿರುವ ಈ ದ್ವೀಪವು ಹೆಚ್ಚು ಸಮತಟ್ಟಾಗಿದೆ, ಕಡಿಮೆ ಅಭಿವೃದ್ಧಿಗೊಂಡಿದೆ ಮತ್ತು ತನ್ನ ಪ್ರಾಚೀನ ನೈಸರ್ಗಿಕ ಸೌಂದರ್ಯ ಹಾಗೂ ಪಕ್ಷಿಧಾಮಗಳಿಗೆ ಹೆಸರುವಾಸಿಯಾಗಿದೆ.

    ಕಲೈ-II ಜಲವಿದ್ಯುತ್ ಯೋಜನೆ

    ಪರಿಸರ

    ಇದೀಗ ಸುದ್ದಿಯಲ್ಲಿ: 

    • ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿಯು (FAC) ಕಲೈ-II ಜಲವಿದ್ಯುತ್ ಯೋಜನೆಗೆ ತಾತ್ವಿಕವಾಗಿ ಅರಣ್ಯ ಅನುಮೋದನೆಯನ್ನು ನೀಡಿದ್ದು, ಇದು ಬಿಳಿ-ಹೊಟ್ಟೆಯ ಬಕಪಕ್ಷಿ (White-Bellied Heron) ಪ್ರಭೇದದ ಮೇಲೆ ಉಂಟುಮಾಡಬಹುದಾದ ಸಂಭಾವ್ಯ ಪರಿಣಾಮದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

    ‘ಕಲೈ-II ಜಲವಿದ್ಯುತ್ ಯೋಜನೆ’ಯ ಬಗ್ಗೆ

    • ಈ ಯೋಜನೆಯು THDC ಇಂಡಿಯಾ ಲಿಮಿಟೆಡ್ ಪ್ರಸ್ತಾಪಿಸಿರುವ 1,200 ಮೆಗಾವ್ಯಾಟ್ ಸಾಮರ್ಥ್ಯದ ನದಿಯ ಹರಿವಿನ ಜಲವಿದ್ಯುತ್ ಯೋಜನೆಯಾಗಿದೆ.

    • ಇದು ಭಾರತ-ಚೀನಾ ಗಡಿಯ ಬಳಿ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ನೆಲೆಗೊಂಡಿದೆ.

    • ಈ ಯೋಜನೆಯು 128.5 ಮೀಟರ್ ಕಾಂಕ್ರೀಟ್ ಗುರುತ್ವಾಕರ್ಷಣೆಯ ಅಣೆಕಟ್ಟು ಮತ್ತು ಭೂಗತ ವಿದ್ಯುತ್ ಕೇಂದ್ರದ ನಿರ್ಮಾಣವನ್ನು ಒಳಗೊಂಡಿದೆ.

    • ಕಳವಳಗಳು: 638 ಹೆಕ್ಟೇರ್ ಅರಣ್ಯ ಪ್ರದೇಶದ ಮುಳುಗಡೆ ಸೇರಿದಂತೆ ಸುಮಾರು 869 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುವುದು.

    • ಅರುಣಾಚಲ ಪ್ರದೇಶವು ತನ್ನ ಭೌಗೋಳಿಕ ಪ್ರದೇಶದ ಮೂರನೇ ಎರಡರಷ್ಟು ಭಾಗವನ್ನು ಅರಣ್ಯಗಳ ಅಡಿಯಲ್ಲಿ ಹೊಂದಿರುವುದರಿಂದ, ಮಧ್ಯಪ್ರದೇಶದಲ್ಲಿ ಪರಿಹಾರ ಅರಣ್ಯೀಕರಣವನ್ನು ಕೈಗೊಳ್ಳಲಾಗುವುದು.

    ಬಿಳಿ-ಹೊಟ್ಟೆಯ ಬಕಪಕ್ಷಿ (White-Bellied Heron)

    • ವೈಜ್ಞಾನಿಕ ಹೆಸರು: ಅರ್ಡಿಯಾ ಇನ್ಸಿಗ್ನಿಸ್ (Ardea insignis).

    • ಮಹತ್ವ: ಈ ಪ್ರಭೇದವು ಆರೋಗ್ಯಕರ ನದಿಪಾತ್ರದ ಪರಿಸರ ವ್ಯವಸ್ಥೆಗಳ ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.

    • IUCN ಸ್ಥಿತಿ: ತೀವ್ರವಾಗಿ ಅಳಿವಿನಂಚಿನಲ್ಲಿರುವ (CR).

    • ಇದರ ಜಾಗತಿಕ ಭೌಗೋಳಿಕ ವ್ಯಾಪ್ತಿಯು ಮುಖ್ಯವಾಗಿ ಭೂತಾನ್, ಭಾರತ ಮತ್ತು ಮ್ಯಾನ್ಮಾರ್‌ಗೆ ಸೀಮಿತವಾಗಿದೆ.

    • ಭಾರತದಲ್ಲಿ, ಇದು ಪ್ರಾಥಮಿಕವಾಗಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.

    • ಕಳವಳಗಳು: ಅರಣ್ಯ ಮತ್ತು ನದಿ ಪ್ರದೇಶಗಳ ಮುಳುಗಡೆಯು ಈ ಪಕ್ಷಿಯ ಗೂಡುಕಟ್ಟುವ, ಆಹಾರಕ್ಕಾಗಿ ಬಳಸುವ ಮತ್ತು ಸಂತಾನೋತ್ಪತ್ತಿಯ ಆವಾಸಸ್ಥಾನಗಳನ್ನು ನಾಶಪಡಿಸಬಹುದು.

  • ಕರ್ನಾಟಕದಲ್ಲಿ ವಿಕೇಂದ್ರೀಕೃತ ಹವಾಮಾನ ಕ್ರಿಯಾ ಯೋಜನೆಗಳು

    ಕರ್ನಾಟಕದಲ್ಲಿ ವಿಕೇಂದ್ರೀಕೃತ ಹವಾಮಾನ ಕ್ರಿಯಾ ಯೋಜನೆಗಳು

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಪ್ರತ್ಯೇಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಕೇಂದ್ರೀಕೃತ ಹವಾಮಾನ ಕ್ರಿಯಾ ಯೋಜನೆಗಳನ್ನು ರೂಪಿಸಲು ಮುಂದಾಗಿರುವ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

    ಈ ಯೋಜನೆಯ ಕುರಿತು:

    • ಉದ್ದೇಶ: ಹವಾಮಾನ ಬದಲಾವಣೆಯ ನಿಯಂತ್ರಣದ ಹೊಣೆಗಾರಿಕೆಯನ್ನು ತಳಮಟ್ಟದವರೆಗೆ ವಿಕೇಂದ್ರೀಕರಿಸುವುದು.
    • ಮಹತ್ವ: ಭಾರತದ ‘ನಿವ್ವಳ-ಶೂನ್ಯ ಹೊರಸೂಸುವಿಕೆ’ ಗುರಿಯನ್ನು ತಲುಪುವಲ್ಲಿ ಸ್ಥಳೀಯ ಪಂಚಾಯತ ನಾಯಕರಿಂದ ಹಿಡಿದು ಗ್ರಾಮೀಣ ರೈತರವರೆಗಿನ ಪ್ರತಿಯೊಬ್ಬರ ಸಕ್ರಿಯ ಪಾತ್ರವನ್ನು ಇದು ಖಚಿತಪಡಿಸುತ್ತದೆ.

    ವಿಕೇಂದ್ರೀಕೃತ ಮಾರ್ಗಸೂಚಿಯ ಪ್ರಮುಖ ಲಕ್ಷಣಗಳು:

    • ಕಾರ್ಯತಂತ್ರದ ಸಂಯೋಜನೆ: ‘ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ’ಯನ್ನು (KSAPCC) ಆಧರಿಸಿರುವ ಈ ಉಪಕ್ರಮವು, ತಳಮಟ್ಟದ ಪ್ರಯತ್ನಗಳನ್ನು ಭಾರತದ ‘ಪ್ಯಾರಿಸ್ ಒಪ್ಪಂದ’ದ ಬದ್ಧತೆಗಳೊಂದಿಗೆ ಸಂಯೋಜಿಸುತ್ತದೆ.
    • ವಿವಿಧ ಇಲಾಖೆಗಳಾದ್ಯಂತ ಮೇಲ್ವಿಚಾರಣೆ: ಕೃಷಿ, ಅರಣ್ಯ ಮತ್ತು ತೋಟಗಾರಿಕೆಯಂತಹ 50 ಸರ್ಕಾರಿ ಇಲಾಖೆಗಳಾದ್ಯಂತ 105 ‘ಪ್ರಮುಖ ಕಾರ್ಯಕ್ಷಮತೆ ಸೂಚಕ’ಗಳನ್ನು ( KPIs) ಇದು ಬಳಸುತ್ತದೆ.
    • ಉನ್ನತ ಮಟ್ಟದ ಹೊಣೆಗಾರಿಕೆ: ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಅತ್ಯುನ್ನತ ಮಟ್ಟದಲ್ಲಿ ಈ ಯೋಜನೆಯ ಮಾಸಿಕ ಪ್ರಗತಿಯನ್ನು ನೇರವಾಗಿ ಪರಿಶೀಲಿಸುತ್ತಾರೆ.
    • ಸಾಮರ್ಥ್ಯ ವೃದ್ಧಿ: ಹವಾಮಾನಕ್ಕೆ ಸಂಬಂಧಿಸಿದ KPI ಗಳ ಬಗ್ಗೆ ಅರ್ಥಮಾಡಿಕೊಳ್ಳಲು ಮತ್ತು ಅದರಂತೆ ಕಾರ್ಯನಿರ್ವಹಿಸಲು ಸ್ಥಳೀಯ ಪಾಲುದಾರರನ್ನು ಗುರಿಯಾಗಿಸಿಕೊಂಡು ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

    ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ (KSAPCC):

    • ಕಾರ್ಯಾದೇಶ: ಇದು ಹವಾಮಾನ ಬದಲಾವಣೆಯ ಅಪಾಯಗಳನ್ನು ಎದುರಿಸಲು ಮತ್ತು ಭಾರತದ ರಾಷ್ಟ್ರೀಯ ಹವಾಮಾನ ಗುರಿಗಳೊಂದಿಗೆ ಹೊಂದಿಕೊಳ್ಳಲು ವಿನ್ಯಾಸಗೊಳಿಸಲಾದ ರಾಜ್ಯ ನೀತಿ ಚೌಕಟ್ಟಾಗಿದೆ.
    • ಕಾಲಮಿತಿ: ಈ ಯೋಜನೆಯ ಸಕ್ರಿಯ ಹಂತವು 2024 ರಿಂದ 2030 ರವರೆಗಿನ ಅವಧಿಯನ್ನು ಒಳಗೊಂಡಿದೆ.
    • ಬಜೆಟ್: ಯೋಜನೆಗೆ 52,827 ಕೋಟಿ ರೂ.ಗಳ ಅಂದಾಜು ಹಣಕಾಸಿನ ಅಗತ್ಯವಿದೆ.
    • ನಿರ್ವಹಣಾ ಸಂಸ್ಥೆ: ‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ (EMPRI) ಇದರ ನೇತೃತ್ವ ವಹಿಸಿದೆ.
    • ವ್ಯಾಪ್ತಿ: ರಾಜ್ಯದ 13 ಇಲಾಖೆಗಳಾದ್ಯಂತ ಹವಾಮಾನ ಗುರಿಗಳನ್ನು ಸಾಧಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ.
    • ಪ್ರಮುಖ ವಲಯದ ಗುರಿಗಳು:
    1. ಕೃಷಿ: ಬರ-ನಿರೋಧಕ ಬೆಳೆಗಳನ್ನು ಬೆಳೆಯುವುದು ಮತ್ತು ಸ್ಥಳೀಯ ಹವಾಮಾನ ಮುನ್ಸೂಚನಾ ಸಾಧನಗಳನ್ನು ಅಳವಡಿಸುವುದು.
    2. ನೀರು: ಮಳೆನೀರು ಕೊಯ್ಲು ಮತ್ತು ಕೃತಕ ಅಂತರ್ಜಲ ಮರುಪೂರಣ ವ್ಯವಸ್ಥೆಗಳನ್ನು ಹೆಚ್ಚಿಸುವುದು.
    3. ಅರಣ್ಯ: ಗುರಿ-ಆಧಾರಿತ ಅರಣ್ಯೀಕರಣದ ಮೂಲಕ ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು.
    4. ಶಕ್ತಿ: ಸೌರಶಕ್ತಿ ಗ್ರಿಡ್ ಸಂಯೋಜನೆಯನ್ನು ವೇಗಗೊಳಿಸುವುದು ಮತ್ತು ಪ್ರಸರಣ ನಷ್ಟವನ್ನು ತಗ್ಗಿಸುವುದು.
    5. ನಗರಾಭಿವೃದ್ಧಿ: ‘ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ’ಯಂತಹ ಸ್ಥಳೀಯ ಹಸಿರು ಮಹಾಯೋಜನೆಗಳನ್ನು ಜಾರಿಗೊಳಿಸುವುದು.
    6. ಪ್ರಗತಿ ಮೇಲ್ವಿಚಾರಣೆ : ಸಾರ್ವಜನಿಕವಾಗಿ ಲಭ್ಯವಿರುವ ಮೀಸಲಾದ ‘KSAPCC ಮೇಲ್ವಿಚಾರಣೆ ಡ್ಯಾಶ್‌ಬೋರ್ಡ್’ ಮೂಲಕ ಪ್ರಗತಿಯನ್ನು ಟ್ರ್ಯಾಕ್ ಮಾಡಲಾಗುತ್ತದೆ.
    7. ಸ್ಥಳೀಯ ಮಟ್ಟದ ಗುರಿಗಳು: ಈ ಗುರಿಗಳನ್ನು ನೇರವಾಗಿ ಹಳ್ಳಿ ಮಟ್ಟದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳಲ್ಲಿ ಸಂಯೋಜಿಸಲಾಗಿದೆ.
  • ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)-6 | ಭಾರತದ GDP ಮೂಲ ವರ್ಷದ ಪರಿಷ್ಕರಣೆ

    ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS)-6

    ವರದಿ ಮತ್ತು ಸೂಚ್ಯಂಕ

    ಇದೀಗ ಸುದ್ದಿಯಲ್ಲಿ:

    • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2023-24ರ ಅವಧಿಗೆ 6ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು (NFHS-6) ಬಿಡುಗಡೆ ಮಾಡಿದೆ.

    ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಬಗ್ಗೆ: 

    • ನೋಡಲ್ ಸಂಸ್ಥೆ: ಮುಂಬೈನಲ್ಲಿರುವ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ (International Institute for Population Sciences – IIPS) ಈ ಸಮೀಕ್ಷೆಯ ಅಧಿಕೃತ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ: ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ಕಡೆಗೆ ಭಾರತದ ಪ್ರಗತಿಯನ್ನು ಮೌಲ್ಯಮಾಪನ ಮಾಡುವುದು.
    • ವ್ಯಾಪ್ತಿ: ಮಣಿಪುರವನ್ನು ಹೊರತುಪಡಿಸಿ, 715 ಜಿಲ್ಲೆಗಳಾದ್ಯಂತ 6.79 ಲಕ್ಷ ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದೆ.
    • ಧನಸಹಾಯ: ಭಾರತ ಸರ್ಕಾರದಿಂದ 100% ದೇಶೀಯ ಧನಸಹಾಯವನ್ನು ಒದಗಿಸಲಾಗಿದೆ (ಯಾವುದೇ ಬಾಹ್ಯ ನೆರವಿಲ್ಲ).
    • ಪ್ರಮುಖ ಹೊರಗಿಡುವಿಕೆಗಳು: ಹಿಂದಿನ ಸೂಚಕಗಳಾದ ರಕ್ತಹೀನತೆ (anaemia), ಅಂಗವೈಕಲ್ಯ ಮತ್ತು ಕ್ಯಾನ್ಸರ್ ತಪಾಸಣೆಗಳನ್ನು (cancer screenings) ಕೈಬಿಡಲಾಗಿದೆ.

    NFHS-5 vs NFHS-6

    • ಒಟ್ಟು ಫಲವತ್ತತೆ ದರ (TFR): 2.0 ದರದಲ್ಲಿ ಸ್ಥಿರವಾಗಿದೆ (2.1 ಬದಲಿ ಮಟ್ಟಕ್ಕಿಂತ ಕಡಿಮೆ).
    • ಸಾಂಸ್ಥಿಕ ಹೆರಿಗೆಗಳು: ಶೇ. 88.6 ರಿಂದ ಶೇ. 90.6 ಕ್ಕೆ ಏರಿದೆ.
    • ಸಂಪೂರ್ಣ ಲಸಿಕಾ ವ್ಯಾಪ್ತಿ: 83.8% ರಿಂದ  87.1% ಕ್ಕೆ ಹೆಚ್ಚಾಗಿದೆ.
    • ಮಕ್ಕಳ ಕುಂಠಿತ ಬೆಳವಣಿಗೆ (Child Stunting – 5 ವರ್ಷಕ್ಕಿಂತ ಕಡಿಮೆ): 35.5% ರಿಂದ 29.3% ಕ್ಕೆ ಗಮನಾರ್ಹವಾಗಿ ಇಳಿದಿದೆ.
    • ಆರೋಗ್ಯ ವಿಮಾ ರಕ್ಷಣೆ: ಆಯುಷ್ಮಾನ್ ಭಾರತ್ ಪ್ರಭಾವದಿಂದ ಇದು 41.0% ರಿಂದ 60.2% ಕ್ಕೆ ಜಿಗಿದಿದೆ.
    • ಮಹಿಳೆಯರಿಂದ ಇಂಟರ್ನೆಟ್ ಬಳಕೆ: 33.3% ರಿಂದ 64.3% ಕ್ಕೆ ಏರಿಕೆಯಾಗಿದೆ.

    ಪ್ರಮುಖ ಸವಾಲುಗಳು:

    • ಜೀವನಶೈಲಿ ರೋಗಗಳ ಹೆಚ್ಚಳ: ಮಧುಮೇಹವು ಪುರುಷರಿಗೆ 20.9% ಮತ್ತು ಮಹಿಳೆಯರಿಗೆ 17.8% ರಷ್ಟು ಏರಿಕೆಯಾಗಿದೆ.
    • ಬೊಜ್ಜಿನ ದುಪ್ಪಟ್ಟು ಹೊರೆ: ಅಧಿಕ ತೂಕ ಹೊಂದಿರುವ ಮಹಿಳೆಯರ ಪ್ರಮಾಣವು ಜಾಗತಿಕವಾಗಿ 30.7% ತಲುಪಿದೆ (ನಗರ ಪ್ರದೇಶಗಳಲ್ಲಿ 42.8%).
    • ಹೆಚ್ಚಿನ ಶಸ್ತ್ರಚಿಕಿತ್ಸಾ ಹೆರಿಗೆಗಳು: ಅನಗತ್ಯ ಸಿಸೇರಿಯನ್ ಹೆರಿಗೆಗಳು ವಿಶ್ವ ಆರೋಗ್ಯ ಸಂಸ್ಥೆಯ (WHO) ಸುರಕ್ಷತಾ ಮಿತಿಗಳನ್ನು ಮೀರಿ ಮುಂದುವರಿಯುತ್ತಿವೆ.
    • ದತ್ತಾಂಶಗಳಲ್ಲಿ ಅಂತರಗಳು: ರಕ್ತಹೀನತೆಯ ಮಾನದಂಡಗಳನ್ನು ಕೈಬಿಟ್ಟಿರುವುದು ದೀರ್ಘಕಾಲೀನ ನೀತಿ ಮೇಲ್ವಿಚಾರಣೆಯನ್ನು ಕಷ್ಟಕರವಾಗಿಸುತ್ತದೆ.

    ಭಾರತದ GDP ಮೂಲ ವರ್ಷದ ಪರಿಷ್ಕರಣೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಆರ್ಥಿಕತೆಯ ಪ್ರಸ್ತುತ ರಚನೆಯನ್ನು ಉತ್ತಮವಾಗಿ ಪ್ರತಿಬಿಂಬಿಸುವ ಸಲುವಾಗಿ, GDP ಅಂದಾಜುಗಳು ಮತ್ತು ಬೆಳವಣಿಗೆಯ ದರಗಳಲ್ಲಿ ಬದಲಾವಣೆ ತರಲು ಭಾರತವು ತನ್ನ GDP ಮೂಲ ವರ್ಷವನ್ನು (GDP base year) 2011–12 ರಿಂದ 2022–23 ಕ್ಕೆ ಪರಿಷ್ಕರಿಸಿದೆ.

    GDP ಸರಣಿಯನ್ನು ಏಕೆ ಪರಿಷ್ಕರಿಸಲಾಗಿದೆ? 

    • ಆರ್ಥಿಕತೆಯ ರಚನೆ, ಉತ್ಪಾದನಾ ಮಾದರಿಗಳು, ಬಳಕೆಯ ನಡವಳಿಕೆ ಮತ್ತು ದತ್ತಾಂಶ, ಲಭ್ಯತೆಯ ಬದಲಾವಣೆಗಳನ್ನು ಪ್ರತಿಬಿಂಬಿಸಲು ಭಾರತವು ಕಾಲಕಾಲಕ್ಕೆ ತನ್ನ GDP ಮೂಲ ವರ್ಷವನ್ನು ಪರಿಷ್ಕರಿಸುತ್ತದೆ.
    • ಇಂತಹ ಪರಿಷ್ಕರಣೆಗಳನ್ನು ಸಾಮಾನ್ಯವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಕೈಗೊಳ್ಳಲಾಗುತ್ತದೆ, ಆದರೆ GST ಅನುಷ್ಠಾನ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ಕಸರತ್ತು ವಿಳಂಬವಾಯಿತು.
    • ರಾಷ್ಟ್ರೀಯ ಆದಾಯದ ಅಂದಾಜುಗಳ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.

    ಒಟ್ಟು ದೇಶಿಯ ಉತ್ಪನ್ನ (Gross Domestic Product – GDP)

    • ವ್ಯಾಖ್ಯಾನ: ಇದು ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಭೌಗೋಳಿಕ ಗಡಿಯೊಳಗೆ ಉತ್ಪಾದಿಸಲಾದ ಎಲ್ಲಾ ಅಂತಿಮ ಸರಕು ಮತ್ತು ಸೇವೆಗಳ ಒಟ್ಟು ಹಣಕಾಸಿನ ಮೌಲ್ಯವಾಗಿದೆ.
    • ಬಿಡುಗಡೆ ಮಾಡುವವರು : ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿನ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (National Statistical Office – NSO).
    • GDP ಲೆಕ್ಕಾಚಾರ: GDP ಯನ್ನು ಮೂರು ಮುಖ್ಯ ವಿಧಾನಗಳನ್ನು ಬಳಸಿ ಲೆಕ್ಕಹಾಕಲಾಗುತ್ತದೆ:
    1. ವೆಚ್ಚದ ವಿಧಾನ: ಈ ವಿಧಾನವು ಆರ್ಥಿಕತೆಯಲ್ಲಿನ ಅಂತಿಮ ಸರಕು ಮತ್ತು ಸೇವೆಗಳ ಮೇಲಿನ ಎಲ್ಲಾ ವೆಚ್ಚಗಳನ್ನು ಒಟ್ಟುಗೂಡಿಸುತ್ತದೆ.
    2. ಆದಾಯದ ವಿಧಾನ: ಈ ವಿಧಾನವು ಉತ್ಪಾದನಾ ಅಂಶಗಳಿಂದ (ಶ್ರಮ, ಬಂಡವಾಳ) ಗಳಿಸಿದ ಎಲ್ಲಾ ಆದಾಯಗಳನ್ನು ಕ್ರೋಢೀಕರಿಸುತ್ತದೆ.
    3. ಉತ್ಪಾದನೆ/ಮೌಲ್ಯ-ವರ್ಧಿತ ವಿಧಾನ: ಈ ವಿಧಾನವು ಉತ್ಪಾದನೆಯ ಪ್ರತಿಯೊಂದು ಹಂತದಲ್ಲೂ ಪ್ರತಿಯೊಂದು ಉದ್ಯಮವು ಸೇರಿಸಿದ ಮೌಲ್ಯವನ್ನು ಲೆಕ್ಕಹಾಕುತ್ತದೆ.

    ನಾಮಮಾತ್ರ ಮತ್ತು ನೈಜ GDP (Nominal Vs Real GDP)

    • ನಾಮಮಾತ್ರ GDPಯು (Nominal GDP) ಪ್ರಸ್ತುತ ಮಾರುಕಟ್ಟೆ ಬೆಲೆಗಳಲ್ಲಿ ದೇಶದ ಆರ್ಥಿಕ ಉತ್ಪಾದನೆಯನ್ನು ಅಳೆಯುತ್ತದೆ; ಇದರಿಂದಾಗಿ ಹಣದುಬ್ಬರದ ಪರಿಣಾಮಗಳನ್ನು ಸೇರಿಸಿಕೊಂಡು ಆರ್ಥಿಕತೆಯ ಗಾತ್ರವನ್ನು ಪ್ರಸ್ತುತ ಮೌಲ್ಯದಲ್ಲಿ ನಿರ್ಣಯಿಸಲು ಇದು ಉಪಯುಕ್ತವಾಗಿದೆ.
    • ನೈಜ GDPಯು (Real GDP) ಸ್ಥಿರವಾದ ಮೂಲ ವರ್ಷದ ಬೆಲೆಗಳಲ್ಲಿ ಉತ್ಪಾದನೆಯನ್ನು ಮೌಲ್ಯಮಾಪನ ಮಾಡುವ ಮೂಲಕ ಹಣದುಬ್ಬರವನ್ನು ಸರಿಹೊಂದಿಸುತ್ತದೆ ಮತ್ತು ಕಾಲಾನಂತರದಲ್ಲಿ ಉತ್ಪಾದನೆಯಲ್ಲಿನ ನೈಜ ಬೆಳವಣಿಗೆಯ ನಿಖರವಾದ ಅಳತೆಯನ್ನು ಒದಗಿಸುತ್ತದೆ.

    ಮೂಲ ವರ್ಷ (Base Year)

    • ಮೂಲ ವರ್ಷವು ಆರ್ಥಿಕ ಮತ್ತು ಸಂಖ್ಯಾಶಾಸ್ತ್ರೀಯ ಲೆಕ್ಕಾಚಾರಗಳಲ್ಲಿ ಹೋಲಿಕೆಗಾಗಿ ಬಳಸಲಾಗುವ ಮಾನದಂಡದ ವರ್ಷವಾಗಿದೆ.
    • ನೈಜ ಬದಲಾವಣೆಗಳನ್ನು ವಿಶ್ಲೇಷಿಸಲು, GDP, CPI ಮತ್ತು IIP ಯಂತಹ ಸೂಚಕಗಳ ಪ್ರಸ್ತುತ ಮೌಲ್ಯಗಳನ್ನು ಅಳೆಯುವ ಆಧಾರ ಬಿಂದುವನ್ನು ಇದು ಒದಗಿಸುತ್ತದೆ.
  • ದೇಶದ ಮೊದಲ ಡಿಜಿಟಲ್ ಔಷಧ ಮೇಲ್ವಿಚಾರಣಾ ವ್ಯವಸ್ಥೆ : ಬೆಂಗಳೂರು

    ದೇಶದ ಮೊದಲ ಡಿಜಿಟಲ್ ಔಷಧ ಮೇಲ್ವಿಚಾರಣಾ ವ್ಯವಸ್ಥೆ : ಬೆಂಗಳೂರು

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಔಷಧೀಯ ಮಾರುಕಟ್ಟೆಯನ್ನು ನೈಜ-ಸಮಯದಲ್ಲಿ ಮೇಲ್ವಿಚಾರಣೆ ಮಾಡಲು, ಕರ್ನಾಟಕವು ಇತ್ತೀಚೆಗೆ ಬೆಂಗಳೂರಿನಲ್ಲಿ ಭಾರತದ ಮೊದಲ ತಂತ್ರಜ್ಞಾನ-ಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು (Technology-driven surveillance system) ಜಾರಿಗೊಳಿಸಿದೆ.

    ಡಿಜಿಟಲ್ ಔಷಧ ಮೇಲ್ವಿಚಾರಣಾ ವ್ಯವಸ್ಥೆಯ ಕುರಿತು:

    • ಪರಿಚಯಿಸಿದವರು: ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA).
    • ಉದ್ದೇಶ: ಔಷಧ ಗುಣಮಟ್ಟದ ಮಾನದಂಡಗಳನ್ನು ಜಾರಿಗೊಳಿಸಲು ಮತ್ತು ನಿರ್ಣಾಯಕ ಔಷಧಿಗಳ ಪತ್ತೆಹಚ್ಚುವಿಕೆಯನ್ನು ನಿಯಂತ್ರಿಸಲು ವಿನ್ಯಾಸಗೊಳಿಸಲಾದ ನೈಜ-ಸಮಯದ, ತಂತ್ರಜ್ಞಾನ-ಚಾಲಿತ ನಿಯಂತ್ರಣ ಚೌಕಟ್ಟನ್ನು ಸ್ಥಾಪಿಸುವುದು ಈ ಉಪಕ್ರಮದ ಗುರಿಯಾಗಿದೆ.

    ಈ ಹೊಸ ಡಿಜಿಟಲ್ ಉಪಕ್ರಮವು ಎರಡು ಮೀಸಲಾದ ಮೇಲ್ವಿಚಾರಣಾ ಪೋರ್ಟಲ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ:

    1. ಕಳಪೆ ಔಷಧಗಳ ನಿರ್ಬಂಧ ವ್ಯವಸ್ಥೆ (Substandard Medicine Block System): ಪೂರೈಕೆ ಜಾಲದಲ್ಲಿ ಪತ್ತೆಯಾದ ‘ಗುಣಮಟ್ಟವಿಲ್ಲದ (NSQ)’ ಔಷಧದ ಬ್ಯಾಚ್‌ಗಳನ್ನು ಇದು ಸ್ವಯಂಚಾಲಿತವಾಗಿ ಲಾಕ್ ಮಾಡುತ್ತದೆ ಮತ್ತು ಅವುಗಳ ಮಾರಾಟವನ್ನು ತಡೆಯುತ್ತದೆ. ಇದು ನೈಜ-ಸಮಯದ ದಾಸ್ತಾನನ್ನು ಪತ್ತೆಹಚ್ಚುತ್ತದೆ. ಮತ್ತು ಹಿಂಪಡೆಯಲಾದ ಉತ್ಪನ್ನಗಳನ್ನು ಪೂರೈಕೆದಾರರಿಗೆ ಹಿಂದಿರುಗಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ.
    2. NDPS ಮೇಲ್ವಿಚಾರಣಾ ವ್ಯವಸ್ಥೆ: ಮಾದಕ ದ್ರವ್ಯಗಳು ಮತ್ತು ಮಾನಸಿಕ-ಪರಿಣಾಮ ಬೀರಬಲ್ಲ ವಸ್ತುಗಳ ವಿತರಣೆಯನ್ನು ಇದು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
  • ಅಬ್ರಹಾಂ ಒಪ್ಪಂದಗಳು | ಸಾರ್ಥಕ್-PDS ಯೋಜನೆ (SARTHAK-PDS) | ಭಾರತ- US ನಿರ್ಣಾಯಕ ಖನಿಜಗಳ ಚೌಕಟ್ಟು

    ಅಬ್ರಹಾಂ ಒಪ್ಪಂದಗಳು

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿ:

    • ಇಸ್ರೇಲ್‌ನೊಂದಿಗೆ ಸಂಬಂಧವನ್ನು ಸಹಜಗೊಳಿಸುವ ಉದ್ದೇಶದಿಂದ ಅಬ್ರಹಾಂ ಒಪ್ಪಂದಗಳಿಗೆ ಪಾಕಿಸ್ತಾನ ಸೇರ್ಪಡೆಯಾಗುವುದನ್ನು ತಾವು ಬೆಂಬಲಿಸುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಹೇಳಿದ್ದಾರೆ.

    ಅಬ್ರಹಾಂ ಒಪ್ಪಂದಗಳ ಬಗ್ಗೆ:

      • ಅಬ್ರಹಾಂ ಒಪ್ಪಂದಗಳು 2020ರಲ್ಲಿ ಇಸ್ರೇಲ್ ಮತ್ತು ಹಲವಾರು ಅರಬ್ ರಾಷ್ಟ್ರಗಳ ನಡುವೆ ಟ್ರಂಪ್ ಆಡಳಿತದ ಅಡಿಯಲ್ಲಿ ಅಮೆರಿಕ (USA) ಮಧ್ಯಸ್ಥಿಕೆಯಲ್ಲಿ ಸಹಿ ಮಾಡಲಾದ ಸಂಬಂಧ ಸಹಜಗೊಳಿಸುವಿಕೆ ಒಪ್ಪಂದಗಳ ಸರಣಿಯನ್ನು ಉಲ್ಲೇಖಿಸುತ್ತವೆ.
      • ಪ್ಯಾಲೇಸ್ಟಿನಿಯನ್ ಸಮಸ್ಯೆಯು ಇತ್ಯರ್ಥವಾಗುವವರೆಗೂ ಇಸ್ರೇಲ್ ಅನ್ನು ಗುರುತಿಸಲು ದಶಕಗಳ ಕಾಲ ಹೆಚ್ಚಿನ ಅರಬ್ ರಾಷ್ಟ್ರಗಳು ನಿರಾಕರಿಸಿದ್ದವು.
      • ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಪೂರ್ವ ಪರಿಹಾರವಿಲ್ಲದೆ ಇಸ್ರೇಲ್ ಮತ್ತು ಕೆಲವು ಅರಬ್ ರಾಷ್ಟ್ರಗಳ ನಡುವೆ ಮುಕ್ತ ಸಂಬಂಧಗಳನ್ನು ಸ್ಥಾಪಿಸುವ ಮೂಲಕ ಅಬ್ರಹಾಂ ಒಪ್ಪಂದಗಳು ಮಧ್ಯಪ್ರಾಚ್ಯ ರಾಜತಾಂತ್ರಿಕತೆಯಲ್ಲಿ ಪ್ರಮುಖ ಬದಲಾವಣೆಯನ್ನು ತಂದಿವೆ.
      • ಅಬ್ರಹಾಂ ಒಪ್ಪಂದಗಳ ಭಾಗವಾಗಿ 2020ರಲ್ಲಿ ಇಸ್ರೇಲ್‌ನೊಂದಿಗೆ ಸಂಬಂಧವನ್ನು ಸಹಜಗೊಳಿಸಿದ ಮೊದಲ ಕೊಲ್ಲಿ ರಾಷ್ಟ್ರವಾಗಿ UAE ಹೊರಹೊಮ್ಮಿತು.
    • ಈ ಒಪ್ಪಂದದಲ್ಲಿರುವ ರಾಷ್ಟ್ರಗಳು: USA, ಇಸ್ರೇಲ್, UAE, ಬಹ್ರೇನ್, ಸುಡಾನ್, ಮೊರಾಕೊ ಮತ್ತು ಕಝಾಕಿಸ್ತಾನ್.

    ಮುಖ್ಯ ಉದ್ದೇಶಗಳು: 

    • ರಾಯಭಾರ ಕಚೇರಿಗಳು, ನೇರ ವಿಮಾನಯಾನಗಳು, ವ್ಯಾಪಾರ, ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ ಸಹಕಾರದಂತಹ ರಾಜತಾಂತ್ರಿಕ ಸಂಬಂಧಗಳ ಸಹಜಗೊಳಿಸುವಿಕೆ.
    • ಭದ್ರತೆ ಮತ್ತು ಗುಪ್ತಚರ ಸಹಕಾರ, ವಿಶೇಷವಾಗಿ ಇರಾನ್‌ನ ಪ್ರಾದೇಶಿಕ ಪ್ರಭಾವದ ವಿರುದ್ಧ ಕೈಜೋಡಿಸುವುದು.
    • ನಾವೀನ್ಯತೆ, ಕೃಷಿ, ರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಆರ್ಥಿಕ ಸಹಯೋಗ ಏರ್ಪಡಿಸುವುದು.
    • ಯಹೂದಿ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳಲ್ಲಿ ಪೂಜಿಸಲ್ಪಡುವ ಮೂಲಪುರುಷರಾದ ಅಬ್ರಹಾಂ ಅವರ ಹೆಸರಿನಲ್ಲಿ ಅಂತರ್‌ಧರ್ಮೀಯ ತಿಳುವಳಿಕೆಯನ್ನು ಉತ್ತೇಜಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.

    ಸಾರ್ಥಕ್-PDS ಯೋಜನೆ (SARTHAK-PDS)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿ:

    • ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು (CCEA), “ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸ್ವಯಂಚಾಲನೆಯೊಂದಿಗೆ ಪಡಿತರ ಸಾಗಣೆ ಮತ್ತು ನಿರ್ವಹಣೆ-ಆದಾಯದ ಸಹಾಯ ಯೋಜನೆ” (Scheme for Assistance in Ration Transport and Handling-Income with Automation in PDS – SARTHAK-PDS) ಎಂಬ ಹೊಸ ಸಮಗ್ರ ಕಾರ್ಯಕ್ರಮದ ಅಡಿಯಲ್ಲಿ ಎರಡು ಪ್ರಮುಖ ಆಹಾರ ವಿತರಣಾ ಯೋಜನೆಗಳ ಮುಂದುವರಿಕೆ ಮತ್ತು ಸಂಯೋಜನೆಯನ್ನು ಅನುಮೋದಿಸಿದೆ.

    ಸಾರ್ಥಕ್-PDS ಯೋಜನೆಯ ಬಗ್ಗೆ: 

    • ಈ ಯೋಜನೆಯು ಪ್ರಸ್ತುತ ಇರುವ ಎರಡು ಉಪಕ್ರಮಗಳನ್ನು ಸಂಯೋಜಿಸುತ್ತದೆ:
      1. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಅಡಿಯಲ್ಲಿ ಆಹಾರ ಧಾನ್ಯಗಳ ಅಂತರ್-ರಾಜ್ಯ ಸಾಗಾಣಿಕೆ ಮತ್ತು ನ್ಯಾಯಬೆಲೆ ಅಂಗಡಿ ವಿತರಕರ ಲಾಭಾಂಶಕ್ಕಾಗಿ ರಾಜ್ಯ ಏಜೆನ್ಸಿಗಳಿಗೆ ನೆರವು ನೀಡುವ ಯೋಜನೆ.
      2. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನವನ್ನು ಬಲಪಡಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ ಮತ್ತು ಸುಧಾರಣೆಗಳ ಯೋಜನೆ (SMART PDS).
    • ಮಹತ್ವ:  PDS ಕಾರ್ಯಾಚರಣೆಗಳನ್ನು ಆಧುನೀಕರಿಸಲು ಮತ್ತು ಅತ್ಯುತ್ತಮವಾಗಿಸಲು ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (ML), ನೈಸರ್ಗಿಕ ಭಾಷಾ ಸಂಸ್ಕರಣೆ (Natural Language Processing – NLP) ಮತ್ತು ಬ್ಲಾಕ್‌ಚೈನ್‌ನಂತಹ ಸುಧಾರಿತ ತಂತ್ರಜ್ಞಾನಗಳ ಬಳಕೆಯನ್ನು ಈ ಯೋಜನೆಯು ಪ್ರಸ್ತಾಪಿಸುತ್ತದೆ.

    ‘PDS ವ್ಯವಸ್ಥೆ’ಯ ಬಗ್ಗೆ: 

    • ಸಾರ್ವಜನಿಕ ವಿತರಣಾ ವ್ಯವಸ್ಥೆಯು (PDS) ಭಾರತದಲ್ಲಿನ ಆಹಾರ ಭದ್ರತಾ ಕಾರ್ಯವಿಧಾನವಾಗಿದ್ದು, ಇದರ ಮೂಲಕ ಅರ್ಹ ಫಲಾನುಭವಿಗಳಿಗೆ ಅಗತ್ಯ ಆಹಾರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳ (FPSs) ಮೂಲಕ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ.
    • ಈ ವ್ಯವಸ್ಥೆಯು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಪ್ರಮುಖವಾಗಿ ಅಕ್ಕಿ, ಗೋಧಿ ಮತ್ತು ಸಿರಿಧಾನ್ಯಗಳನ್ನು ವಿತರಿಸುತ್ತದೆ.
    • PDS ವ್ಯವಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿಯಾಗಿದೆ.
    • ಕೇಂದ್ರ ಸರ್ಕಾರವು ಭಾರತೀಯ ಆಹಾರ ನಿಗಮದ (FCI) ಮೂಲಕ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತದೆ, ಶೇಖರಿಸುತ್ತದೆ, ಸಾಗಿಸುತ್ತದೆ ಮತ್ತು ಹಂಚಿಕೆ ಮಾಡುತ್ತದೆ.

    ಭಾರತ- US ನಿರ್ಣಾಯಕ ಖನಿಜಗಳ ಚೌಕಟ್ಟು

    ಭೂಗೋಳ

    ಇದೀಗ ಸುದ್ದಿಯಲ್ಲಿ:

    • ನಿರ್ಣಾಯಕ ಖನಿಜಗಳು ಮತ್ತು ವಿರಳ ಭೂ ಧಾತುಗಳ (REEs) ಪೂರೈಕೆ, ಗಣಿಗಾರಿಕೆ, ಸಂಸ್ಕರಣೆ, ಮರುಬಳಕೆ ಮತ್ತು ನಿರ್ವಹಣೆಯಲ್ಲಿ ಸಹಕಾರವನ್ನು ಬಲಪಡಿಸಲು ಭಾರತ ಮತ್ತು ಅಮೆರಿಕ (USA) ಪ್ರಮುಖ ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕಿವೆ. 
    • ಜಾಗತಿಕ ತಂತ್ರಜ್ಞಾನ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಿದ ವಿರಳ ಭೂ ಧಾತುಗಳ (REEs) ಮೇಲಿನ ಚೀನಾದ 2025 ರ ರಫ್ತು ನಿಯಂತ್ರಣಗಳ ಬಗ್ಗೆ ಕಳವಳಗಳನ್ನು ಅನುಸರಿಸಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.

    ನಿರ್ಣಾಯಕ ಖನಿಜಗಳ ಪಟ್ಟಿ: 

    • ಭಾರತಕ್ಕೆ ಒಟ್ಟು 30 ಖನಿಜಗಳು ಅತ್ಯಂತ ನಿರ್ಣಾಯಕವೆಂದು ಕಂಡುಬಂದಿದೆ: ಆಂಟಿಮನಿ, ಬೆರಿಲಿಯಮ್, ಬಿಸ್ಮತ್, ಕೋಬಾಲ್ಟ್, ತಾಮ್ರ, ಗ್ಯಾಲಿಯಂ, ಜರ್ಮೇನಿಯಮ್, ಗ್ರ್ಯಾಫೈಟ್, ಹಾಫ್ನಿಯಮ್, ಇಂಡಿಯಮ್, ಲಿಥಿಯಂ, ಮಾಲಿಬ್ಡಿನಮ್, ನಿಯೋಬಿಯಂ, ನಿಕ್ಕಲ್, ಪಿಜಿಇ (PGE), ರಂಜಕ, ಪೊಟ್ಯಾಶ್, ವಿರಳ ಭೂ ಧಾತುಗಳು (REEs), ರೇನಿಯಮ್, ಸಿಲಿಕಾನ್, ಸ್ಟ್ರಾಂಟಿಯಂ, ಟ್ಯಾಂಟಲಮ್, ಟೆಲ್ಯುರಿಯಮ್, ತವರ, ಟೈಟಾನಿಯಂ, ಟಂಗ್‌ಸ್ಟನ್, ವೆನಾಡಿಯಮ್, ಜಿರ್ಕೋನಿಯಮ್, ಸೆಲೆನಿಯಮ್ ಮತ್ತು ಕ್ಯಾಡ್ಮಿಯಮ್.

    ಖನಿಜ ಶೋಧನೆಗಾಗಿ ಭಾರತದ ನೀತಿಯ ಉತ್ತೇಜನ: 

    • ದೇಶೀಯ ನಿಕ್ಷೇಪಗಳು: ಜಮ್ಮು ಮತ್ತು ಕಾಶ್ಮೀರ (J&K) ಹಾಗೂ ರಾಜಸ್ಥಾನದಲ್ಲಿ ಲಿಥಿಯಂ ಮತ್ತು ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ವಿರಳ ಭೂ ಧಾತುಗಳೊಂದಿಗೆ (REEs) ಭಾರತವು ಅಪಾರವಾದ ಬಳಕೆಯಾಗದ ಖನಿಜ ಸಾಮರ್ಥ್ಯವನ್ನು ಹೊಂದಿದೆ.
    • ನೀತಿ ಉಪಕ್ರಮಗಳು: ರಾಷ್ಟ್ರೀಯ ಖನಿಜ ಶೋಧನಾ ನೀತಿ (NMEP), 2016 ಮತ್ತು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 2021 ಖಾಸಗಿ ಭಾಗವಹಿಸುವಿಕೆ ಮತ್ತು ಸುಧಾರಿತ ಸಮೀಕ್ಷೆಗಳ ಮೂಲಕ ಅನ್ವೇಷಣೆಯನ್ನು ವೇಗಗೊಳಿಸಿವೆ.
    • ಪೂರೈಕೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಾಬಿಲ್ (ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್- KABIL) ಸಾಗರೋತ್ತರ ಖನಿಜ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ.
    • ಈ ಮಿಷನ್ ಖನಿಜಗಳ ಅನ್ವೇಷಣೆಯಿಂದ ಹಿಡಿದು ಅವುಗಳ ಮರುಪಡೆಯುವಿಕೆಯವರೆಗಿನ ಸಂಪೂರ್ಣ ಮೌಲ್ಯ ಸರಪಳಿಯನ್ನು ಬಲಪಡಿಸುವ ಪ್ರಮುಖ ಗುರಿಯನ್ನು ಹೊಂದಿದೆ

    ವಿರಳ ಭೂ ಧಾತುಗಳು (REEs)

    • REE ಗಳು ಸ್ಕ್ಯಾಂಡಿಯಂ ಮತ್ತು ಯಟ್ರಿಯಂ ಜೊತೆಗೆ 15 ಲ್ಯಾಂಥನೈಡ್‌ಗಳನ್ನು ಒಳಗೊಂಡಿರುವ 17 ಲೋಹೀಯ ಅಂಶಗಳ ಗುಂಪಾಗಿದೆ.
    • ಗ್ರಾಹಕ ಎಲೆಕ್ಟ್ರಾನಿಕ್ಸ್, ರಕ್ಷಣಾ ವ್ಯವಸ್ಥೆಗಳು, ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು, ಎಲೆಕ್ಟ್ರಿಕ್ ವಾಹನಗಳು (EVs), ಸಂವಹನ ವ್ಯವಸ್ಥೆಗಳು ಮತ್ತು ಪರಮಾಣು ಶಕ್ತಿಯಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
    • ಭಾರತವು ವಿಶ್ವದ ಮೂರನೇ ಅತಿದೊಡ್ಡ ವಿರಳ ಭೂ ಧಾತುಗಳ ನಿಕ್ಷೇಪಗಳನ್ನು ಹೊಂದಿದ್ದು, ಇದು ಮುಖ್ಯವಾಗಿ ಮೊನಾಜೈಟ್ ಖನಿಜಗಳಲ್ಲಿ ಕಂಡುಬರುತ್ತದೆ.

    ‘ಪ್ಯಾಕ್ಸ್ ಸಿಲಿಕಾ’

    • ಪ್ರಾರಂಭ: ಡಿಸೆಂಬರ್ 2025.
    • ಇದು ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಗ್ರೀಸ್, ಇಸ್ರೇಲ್, ಜಪಾನ್, ಕತಾರ್, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ್, UAE, UK ಮತ್ತು ಇದೀಗ ಭಾರತವನ್ನು ಒಳಗೊಂಡಿರುವ ಒಕ್ಕೂಟವಾಗಿದೆ.
    • ಉದ್ದೇಶ: ಇದು ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ-ಚಾಲಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸಲು US ನೇತೃತ್ವದ ಕಾರ್ಯತಂತ್ರದ ಉಪಕ್ರಮವಾಗಿದೆ.
    • ಲ್ಯಾಟಿನ್ ಪದ ‘ಪ್ಯಾಕ್ಸ್‘ (ಶಾಂತಿ) ಮತ್ತು ‘ಸಿಲಿಕಾ’ (ಅರೆವಾಹಕಗಳಲ್ಲಿನ ಪ್ರಮುಖ ಸಂಯುಕ್ತ) ದಿಂದ ‘ಪ್ಯಾಕ್ಸ್ ಸಿಲಿಕಾ’ ಎಂಬ ಪದವನ್ನು ಪಡೆಯಲಾಗಿದೆ.
    • ಮಹತ್ವ: ಸ್ಥಿತಿಸ್ಥಾಪಕ, ಪಾರದರ್ಶಕ ಮತ್ತು ಸಹಕಾರಿ ಪೂರೈಕೆ ಸರಪಳಿಗಳ ಮೂಲಕ ತಾಂತ್ರಿಕ ಶಾಂತಿ ಮತ್ತು ಸಮೃದ್ಧಿಯ ಅನ್ವೇಷಣೆಯನ್ನು ಇದು ಸಂಕೇತಿಸುತ್ತದೆ.
  • ಇ-ಖಾತಾ (e-Khata)

    ಇ-ಖಾತಾ (e-Khata)

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ಇ-ಖಾತೆಗಳನ್ನು ಯಾವುದೇ ವಿಳಂಬವಿಲ್ಲದೆ ಪ್ರಕ್ರಿಯೆಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಾಯ ಸ್ಥಳೀಯ ಅಧಿಕಾರಿಗಳು ಮತ್ತು ನಿರ್ವಹಣಾ ನ್ಯಾಯಾಲಯಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೂಲ ಮಾಲೀಕರು ಅಥವಾ ಜಡ್ಜ್‌ಮೆಂಟ್ ಡೆಬ್ಟರ್ (Judgment-debtor) ಅರ್ಜಿಯನ್ನು ಸಲ್ಲಿಸಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಮುನ್ಸಿಪಲ್ ಸಂಸ್ಥೆಗಳು ಇ-ಖಾತೆಯನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ.

    ಇ-ಖಾತಾ (e-Khata) ಎಂದರೇನು?

    • ಇದು ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಗೆ ಒಳಪಡುವ ಆಸ್ತಿಗಳ, ಡಿಜಿಟಲ್ ಆಸ್ತಿ ಮಾಲೀಕತ್ವ ಮತ್ತು ತೆರಿಗೆ ದಾಖಲೆಯಾಗಿದೆ.
    • ಇದು ಹಸ್ತಚಾಲಿತ ನೋಂದಣಿ ಪುಸ್ತಕಗಳನ್ನು ಬದಲಾಯಿಸಿದ್ದು, ಆಸ್ತಿ ವಹಿವಾಟುಗಳು, ನೋಂದಣಿಗಳು ಮತ್ತು ಕಟ್ಟಡ ಅನುಮೋದನೆಗಳಲ್ಲಿ ಪಾರದರ್ಶಕತೆಯನ್ನು ತಂದಿದೆ.
    • ಪ್ರಮುಖ ಲಕ್ಷಣಗಳು:
    1. ಎಲ್ಲಿ ಪ್ರವೇಶಿಸಬಹುದು?: ನಿಮ್ಮ ಇ-ಖಾತೆಯನ್ನು BBMP ಯ ಅಧಿಕೃತ ‘ಇ-ಆಸ್ತಿ’ (e-Aasthi) ಪೋರ್ಟಲ್‌ನಲ್ಲಿ ನೇರವಾಗಿ ಹುಡುಕಬಹುದು, ಟ್ರ್ಯಾಕ್ ಮಾಡಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.
    2. ಕಡ್ಡಾಯ ಬಳಕೆ: ಇ-ಖಾತಾ ವ್ಯವಸ್ಥೆಯು ಸಂಪೂರ್ಣವಾಗಿ ಮುಖಾಮುಖಿಯಾಗದ ಮತ್ತು ಸಂಪರ್ಕರಹಿತ ವ್ಯವಸ್ಥೆಯಾಗಿದೆ. ಆಸ್ತಿಗಳನ್ನು ಖರೀದಿಸಲು/ಮಾರಾಟ ಮಾಡಲು, ತೆರಿಗೆ ಪಾವತಿಸಲು ಅಥವಾ ಬ್ಯಾಂಕ್ ಸಾಲಗಳಿಗೆ ಅರ್ಜಿ ಸಲ್ಲಿಸಲು ಇದು ನಿಮ್ಮ ಅಧಿಕೃತ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.
    3. ನಿಮ್ಮ ಆಸ್ತಿಯನ್ನು ಹುಡುಕುವುದು: ನಿಮ್ಮ ‘ಸ್ವಯಂ ಘೋಷಿತ ಆಸ್ತಿ ತೆರಿಗೆ ಐಡಿ’ (SAS Property Tax ID) ಅಥವಾ ಆಸ್ತಿಯ ‘ಇ-ಪಿಐಡಿ’ (Property ePID) ಬಳಸಿಕೊಂಡು ನಿಮ್ಮ ಕರಡು ಇ-ಖಾತೆಯನ್ನು (Draft e-Khata) ನೀವು ಹುಡುಕಬಹುದು.
  • ‘ಭೂ ಗ್ಯಾರಂಟಿ’ ಯೋಜನೆ (ನನ್ನ ಖಾತೆ, ನನ್ನ ಹಕ್ಕು)

    ‘ಭೂ ಗ್ಯಾರಂಟಿ’ ಯೋಜನೆ (ನನ್ನ ಖಾತೆ, ನನ್ನ ಹಕ್ಕು)

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕರ್ನಾಟಕ ರಾಜ್ಯ ಸರ್ಕಾರವು ‘ಭೂ ಗ್ಯಾರಂಟಿ’ (ನನ್ನ ಖಾತೆ, ನನ್ನ ಹಕ್ಕು) ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಬಿ-ಖಾತೆಯಿಂದ (B-Khata) ಎ-ಖಾತೆಗೆ (A-Khata) ಆಸ್ತಿ ಪರಿವರ್ತಿಸುವ ಶುಲ್ಕವನ್ನು ಆಸ್ತಿಯ ಮಾರ್ಗಸೂಚಿ ಮೌಲ್ಯದ 5% ರಿಂದ 2% ಕ್ಕೆ ಕಡಿತಗೊಳಿಸಲಾಗಿದೆ.

    ‘ಭೂ ಗ್ಯಾರಂಟಿ’ (ನನ್ನ ಖಾತೆ, ನನ್ನ ಹಕ್ಕು) ಯೋಜನೆಯ ಬಗ್ಗೆ:

      • ಉದ್ದೇಶ: ಇದು ಕರ್ನಾಟಕದ ಆರನೇ ಕಲ್ಯಾಣ ಯೋಜನೆಯಾಗಿದ್ದು, ಬೆಂಗಳೂರಿನ 23 ಲಕ್ಷ ಆಸ್ತಿ ಮಾಲೀಕರಿಗೆ ಸುರಕ್ಷಿತವಾದ ಮತ್ತು ಡಿಜಿಟಲೀಕರಣಗೊಂಡ ಆಸ್ತಿ ದಾಖಲೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
    • ಪ್ರಮುಖ ಲಕ್ಷಣಗಳು:
    1. ಮನೆಬಾಗಿಲಿಗೆ ಸೇವೆ: ಅಧಿಕಾರಿಗಳು ಉಚಿತವಾಗಿ ಡಿಜಿಟಲ್ ಇ-ಖಾತೆಗಳನ್ನು (e-Khatas) ನೇರವಾಗಿ ಮನೆಬಾಗಿಲಿಗೆ ತಲುಪಿಸುತ್ತಾರೆ.
    2. ಹಸ್ತಕ್ಷೇಪ-ನಿರೋಧಿತ (Tamper-Proof): ವಂಚನೆಗಳನ್ನು ತಡೆಗಟ್ಟಲು, ದಾಖಲೆಗಳು ಜಿಪಿಎಸ್ ಮ್ಯಾಪಿಂಗ್, ಮಾಲೀಕರ ಭಾವಚಿತ್ರಗಳು ಮತ್ತು ಆಧಾರ್ ಜೋಡಣೆಯನ್ನು ಒಳಗೊಂಡಿರುತ್ತವೆ.
    3. ನಿಯಮಗಳ ಉಲ್ಲಂಘನೆ ಸಕ್ರಮಗೊಳಿಸುವಿಕೆ: ಕಟ್ಟಡ ನಿರ್ಮಾಣ ನಿಯಮಗಳ ಸಣ್ಣಪುಟ್ಟ ಉಲ್ಲಂಘನೆಗಳನ್ನು ಸಡಿಲಗೊಳಿಸುವ ಮೂಲಕ, ಕಾನೂನುಬದ್ಧವಾಗಿ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಇದು ಅನುವು ಮಾಡಿಕೊಡುತ್ತದೆ.

    ಪ್ರಮುಖ ಆರ್ಥಿಕ ಉಳಿತಾಯ:

    • ಶೇ. 60% ಶುಲ್ಕ ಕಡಿತ: ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸುವ ಶುಲ್ಕವನ್ನು ಮಾರ್ಗಸೂಚಿ ಮೌಲ್ಯದ 5% ರಿಂದ 2% ಕ್ಕೆ ಇಳಿಸಲಾಗಿದೆ.
    • 100-ದಿನಗಳ ಅವಕಾಶ: ಈ ರಿಯಾಯಿತಿ ಶುಲ್ಕವು 2026ರ ಮೇ ಮಧ್ಯಭಾಗದಿಂದ ಮುಂದಿನ 100 ದಿನಗಳವರೆಗೆ ಮಾತ್ರ ಮಾನ್ಯವಾಗಿರುವ ಒಂದು ಬಾರಿಯ ಕೊಡುಗೆಯಾಗಿದೆ .
    • BDA ರಿಯಾಯಿತಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ತನ್ನ ಇತ್ಯರ್ಥ ಶುಲ್ಕವನ್ನು (Settlement charges) 50% ರಷ್ಟು ಕಡಿತಗೊಳಿಸಿದೆ.

    ಸಾಪ್ತಾಹಿಕ ಶಿಬಿರಗಳು:

    • ಯಾವಾಗ?: ಮುಂದಿನ ಮೂರು ತಿಂಗಳ ಕಾಲ ಪ್ರತಿ ಶನಿವಾರ.
    • ಎಲ್ಲಿ/: ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತೆರೆದ ಮನೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
    • ಉದ್ದೇಶ: ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಆಸ್ತಿ ಪರಿವರ್ತನೆ, ತಿದ್ದುಪಡಿಗಳು ಹಾಗೂ ತೆರಿಗೆ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಈ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
  • ಓರೆಶ್ನಿಕ್ ಕ್ಷಿಪಣಿ (Oreshnik Missile) | ಅಲ್ಗೋಝಾ (Algoza) | ಖಜುರಾಹೊ ವಿಶ್ವ ಪರಂಪರೆ ತಾಣ

    ಓರೆಶ್ನಿಕ್ ಕ್ಷಿಪಣಿ (Oreshnik Missile)

    ರಕ್ಷಣೆ

    ಇದೀಗ ಸುದ್ದಿಯಲ್ಲಿ:

    • ರಷ್ಯಾ ತನ್ನ ಪ್ರಬಲವಾದ ಓರೆಶ್ನಿಕ್ ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (Oreshnik hypersonic ballistic missile) ಉಕ್ರೇನ್‌ನ ಕೀವ್ ಪ್ರದೇಶದ ಮೇಲೆ ರಾತ್ರಿ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಬಳಸಿದೆ.

    ಓರೆಶ್ನಿಕ್ (Oreshnik) ಕ್ಷಿಪಣಿಯ ಬಗ್ಗೆ: 

    • ಇದು ಮಧ್ಯಮ ಶ್ರೇಣಿಯ ಹೈಪರ್‌ಸಾನಿಕ್ ಅಸ್ತ್ರವಾಗಿದ್ದು, ರಷ್ಯಾದ RS-26 ರುಬೆಜ್ ವ್ಯವಸ್ಥೆಯನ್ನು (RS-26 Rubezh system) ಆಧರಿಸಿದೆ ಎಂದು ನಂಬಲಾಗಿದೆ.
    • ಈ ಕ್ಷಿಪಣಿಯು ಪರಮಾಣು ಮತ್ತು ಸಾಂಪ್ರದಾಯಿಕ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
    • ಇದರ ದಾಳಿಯ ವ್ಯಾಪ್ತಿಯು ಅಂದಾಜು 3,000 ದಿಂದ 5,500 ಕಿಲೋಮೀಟರ್‌ಗಳಷ್ಟಿದ್ದು, ಯುರೋಪ್‌ನ ಬಹುಪಾಲು ಪ್ರದೇಶಗಳನ್ನು ಗುರಿಯಾಗಿಸಲು ಇದು ಅನುವು ಮಾಡಿಕೊಡುತ್ತದೆ.
    • ಮ್ಯಾಕ್ 10ರ ವೇಗದಲ್ಲಿ, ಅಂದರೆ ಪ್ರತಿ ಸೆಕೆಂಡಿಗೆ ಸುಮಾರು 2.5 ರಿಂದ 3 ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ಕ್ಷಿಪಣಿಯನ್ನು ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳಿಂದ ತಡೆಗಟ್ಟುವುದು ಬಹುತೇಕ ಅಸಾಧ್ಯವಾಗಿದೆ.

    ಅಲ್ಗೋಝಾ (Algoza)

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ಅಲ್ಗೋಝಾ (Algoza) ಎಂಬ ಪ್ರಾಚೀನ ವಾದ್ಯದ ಮೂಲಕ ಸಾಂಪ್ರದಾಯಿಕ ರಾಜಸ್ಥಾನಿ ಜಾನಪದ ಸಂಗೀತವನ್ನು ಸಂರಕ್ಷಿಸಿದ ಮತ್ತು ಉತ್ತೇಜಿಸಿದ ಜೈಸಲ್ಮೇರ್‌ನ ‘ತಗಾ ರಾಮ್ ಭೀಲ್’ ಅವರಿಗೆ 2026ರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

    ಅಲ್ಗೋಝಾ ವಾದ್ಯದ ಬಗ್ಗೆ: 

    • ಅಲ್ಗೋಝಾ ರಾಜಸ್ಥಾನ, ಪಂಜಾಬ್, ಸಿಂಧ್, ಹಾಗೂ ಪಶ್ಚಿಮ ಭಾರತ ಮತ್ತು ಪಾಕಿಸ್ತಾನದ ಕೆಲವು ಭಾಗಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಜಾನಪದ ವಾದ್ಯವಾಗಿದೆ.
    • ಇದು ಏಕಕಾಲದಲ್ಲಿ ನುಡಿಸಲಾಗುವ ಎರಡು ಮರದ ಕೊಳಲುಗಳನ್ನು ಒಳಗೊಂಡಿರುತ್ತದೆ; ಇದರಲ್ಲಿ ಒಂದು ಕೊಳಲು ಮಧುರವಾದ ರಾಗವನ್ನು ಸೃಷ್ಟಿಸಿದರೆ, ಮತ್ತೊಂದು ಲಯಬದ್ಧ ಶ್ರುತಿಯನ್ನು ಒದಗಿಸುತ್ತದೆ.
    • ವಾದ್ಯಗಾರರು ಉಸಿರಾಡಲು ನಿಲ್ಲಿಸದೆ ನಿರಂತರವಾಗಿ ಸಂಗೀತವನ್ನು ನುಡಿಸಲು ಅನುವು ಮಾಡಿಕೊಡುವ ವೃತ್ತಾಕಾರದ ಉಸಿರಾಟದ ಕಠಿಣ ತಂತ್ರವನ್ನು ಬಳಸುವುದು ಈ ವಾದ್ಯದ ವಿಶಿಷ್ಟತೆಯಾಗಿದೆ.
    • ಥಾರ್ ಮರುಭೂಮಿಯ ‘ಜಾನಪದ ಸಂಗೀತದ ಆತ್ಮ’ ಎಂದು ಕರೆಯಲ್ಪಡುವ ಅಲ್ಗೋಝಾವನ್ನು ಸಾಂಪ್ರದಾಯಿಕವಾಗಿ ಹಬ್ಬಗಳು, ವಿವಾಹಗಳು, ಕಥೆ ಹೇಳುವ ಸ್ಥಳಗಳು ಮತ್ತು ಭಕ್ತಿ ಕೂಟಗಳಲ್ಲಿ ನುಡಿಸಲಾಗುತ್ತದೆ.

    ಖಜುರಾಹೊ ವಿಶ್ವ ಪರಂಪರೆ ತಾಣ

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿ:

    • ವಿಶ್ವ ಪರಂಪರೆಯ ತಾಣವಾದ ಖಜುರಾಹೊ, 2026ಅಂತರರಾಷ್ಟ್ರೀಯ ಯೋಗ ದಿನದ (IDY) 25 ದಿನಗಳ ಕ್ಷಣಗಣನೆ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧವಾಗಿದೆ.

    ಖಜುರಾಹೊ ತಾಣದ ಬಗ್ಗೆ: 

    • ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿರುವ ಹಿಂದೂ ಮತ್ತು ಜೈನ ದೇವಾಲಯಗಳ ಸಮೂಹವಾದ ಖಜುರಾಹೊ ಸ್ಮಾರಕಗಳ ಸಮೂಹವನ್ನು 1986ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಸೇರ್ಪಡೆಗೊಳಿಸಲಾಗಿದೆ.
    • ಈ ದೇವಾಲಯಗಳು ನಾಗರ ಶೈಲಿಯ ವಾಸ್ತುಶಿಲ್ಪದ ಸಂಕೇತ ಮತ್ತು ಕಾಮಪ್ರಚೋದಕ ಶಿಲ್ಪಗಳಿಗೆ ಪ್ರಸಿದ್ಧವಾಗಿವೆ.

    ಐತಿಹಾಸಿಕ ದಾಖಲೆಗಳು:

    • ಬಹುಪಾಲು ಖಜುರಾಹೊ ದೇವಾಲಯಗಳನ್ನು ಚಂದೇಲ ರಾಜವಂಶವು  ಸಾ.ಶ 950 ಮತ್ತು 1050ರ ನಡುವೆ ನಿರ್ಮಿಸಿದೆ.
    • ಖಜುರಾಹೊ ದೇವಾಲಯ ಸಂಕೀರ್ಣವು ಒಂದು ಕಾಲದಲ್ಲಿ 20 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದ್ದ 85 ದೇವಾಲಯಗಳನ್ನು ಹೊಂದಿತ್ತು ಎಂದು ಐತಿಹಾಸಿಕ ದಾಖಲೆಗಳು ಉಲ್ಲೇಖಿಸುತ್ತವೆ.
    • ಪ್ರಸ್ತುತ, ಕೇವಲ 25 ದೇವಾಲಯಗಳು ಮಾತ್ರ ಉಳಿದುಕೊಂಡಿದ್ದು, ಅವು ಆರು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿವೆ.
  • ಏಕಕಾಲಿಕ ಚುನಾವಣೆ ಮಸೂದೆ | ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)@2047 ಮಾರ್ಗಸೂಚಿ | ಪಕ್ಷಾಂತರ ನಿಷೇಧ ಕಾಯ್ದೆ | ರಾಷ್ಟ್ರೀಯ ಗೌರವಕ್ಕೆ (ಅಪಮಾನ) ತಡೆ ಕಾಯ್ದೆ, 1971

    ಏಕಕಾಲಿಕ ಚುನಾವಣೆ ಮಸೂದೆ

    ರಾಜ್ಯಶಾಸ್ತ್ರ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ:

    • ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಕುರಿತ ಜಂಟಿ ಸಂಸದೀಯ ಸಮಿತಿಯು (JPC) ತನ್ನ ವರದಿಯನ್ನು ನೀಡಿದೆ. ಏಕಕಾಲಿಕ ಚುನಾವಣೆಗಳಿಂದ ಸುಮಾರು 7 ಲಕ್ಷ ಕೋಟಿ ರೂಪಾಯಿಗಳ ಉಳಿತಾಯವಾಗುತ್ತದೆ, ಆಡಳಿತದ ದಕ್ಷತೆ ಹೆಚ್ಚುತ್ತದೆ ಮತ್ತು ಭಾರತದ ಜಿಡಿಪಿ (GDP) ಬೆಳವಣಿಗೆಯನ್ನು 1.6% ರಷ್ಟು ಹೆಚ್ಚಿಸಬಹುದು ಎಂದು ವರದಿ ಹೇಳಿದೆ.

    ಹಿನ್ನೆಲೆ:

    • ಏಕಕಾಲಿಕ ಚುನಾವಣೆಗಳನ್ನು ದೇಶದಲ್ಲಿ ಜಾರಿಗೊಳಿಸುವ ಉದ್ದೇಶದಿಂದ, 2024ರಲ್ಲಿ ಲೋಕಸಭೆಯಲ್ಲಿ ಸಂವಿಧಾನದ (129ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ, 2024 ಅನ್ನು ಮಂಡಿಸಲಾಗಿತ್ತು.

    ಈ ಮಸೂದೆಗಳ ಪ್ರಮುಖ ಲಕ್ಷಣಗಳು:

    • ಜವಾಬ್ದಾರಿಯುತ ಸಂಸ್ಥೆಗಳು: ಸಂವಿಧಾನದ (129ನೇ ತಿದ್ದುಪಡಿ) ಮಸೂದೆ, 2024, ಲೋಕಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುತ್ತದೆ.
    • ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ (ತಿದ್ದುಪಡಿ) ಮಸೂದೆ, 2024 ಈ ಚೌಕಟ್ಟನ್ನು ಕೇಂದ್ರಾಡಳಿತ ಪ್ರದೇಶಗಳ (UT) ವಿಧಾನಸಭೆಗಳಿಗೂ ವಿಸ್ತರಿಸುತ್ತದೆ.
    • ಏಕಕಾಲಿಕ ಚುನಾವಣೆಗಳ ಪ್ರಾರಂಭ: ಅಧಿಸೂಚನೆಯ ದಿನಾಂಕದ ನಂತರ ರಚನೆಯಾಗುವ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಅಧಿಕಾರಾವಧಿಯು, ಲೋಕಸಭೆಯ ಪೂರ್ಣ ಅಧಿಕಾರಾವಧಿ ಮುಕ್ತಾಯದೊಂದಿಗೆ ಕೊನೆಗೊಳ್ಳುತ್ತದೆ.
    • ಆದ್ದರಿಂದ, ಆ ಬಳಿಕ ಲೋಕಸಭೆ ಮತ್ತು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಿಗೆ ಒಟ್ಟಾರೆಯಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆ.
    • ಲೋಕಸಭೆ ಅಥವಾ ವಿಧಾನಸಭೆಗಳ ಅವಧಿಗೂ ಮುನ್ನ ವಿಸರ್ಜನೆ: ಐದು ವರ್ಷಗಳ ಪೂರ್ಣ ಅವಧಿಗೆ ಮುನ್ನವೇ ಲೋಕಸಭೆ ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯು ವಿಸರ್ಜನೆಗೊಂಡರೆ, ಐದು ವರ್ಷಗಳ ಉಳಿದ ಅವಧಿಗೆ ಮಾತ್ರ ಹೊಸದಾಗಿ ಚುನಾವಣೆ ನಡೆಸಲಾಗುತ್ತದೆ.
    • ಈ ನಿಯಮವು ಪ್ರತಿ ಐದು ವರ್ಷಗಳಿಗೊಮ್ಮೆ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸಮನ್ವಯಗೊಳಿಸುತ್ತದೆ.
    • ರಾಜ್ಯ ಚುನಾವಣೆಯನ್ನು ಮುಂದೂಡುವುದು: ನಿರ್ದಿಷ್ಟ ರಾಜ್ಯ ವಿಧಾನಸಭೆಯ ಚುನಾವಣೆಯನ್ನು ಏಕಕಾಲಿಕ ಚುನಾವಣೆಗಳ ಭಾಗವಾಗಿ ನಡೆಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಅಭಿಪ್ರಾಯಪಟ್ಟರೆ, ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬಹುದು.
    • ನಂತರ, ಆ ರಾಜ್ಯದ ವಿಧಾನಸಭೆಗೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಸುವಂತೆ ರಾಷ್ಟ್ರಪತಿಗಳು ಆದೇಶ ಹೊರಡಿಸಬಹುದು.
    • ಆದರೆ, ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆಗಳ ತಿದ್ದುಪಡಿ ಮಸೂದೆಯು ಇಂತಹ ಯಾವುದೇ ನಿಬಂಧನೆಗಳನ್ನು ಹೊಂದಿಲ್ಲ.

    ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)@2047 ಮಾರ್ಗಸೂಚಿ

    ಆರ್ಥಿಕತೆ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ನೀತಿ ಆಯೋಗವು ‘ವಿಕಸಿತ ಭಾರತ’ಕ್ಕಾಗಿ DPI@2047 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದು ಒಳಗೊಳ್ಳುವಿಕೆ ಮತ್ತು ಉತ್ಪಾದಕತೆ ಆಧಾರಿತ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮುಂದಿನ ಹಂತದ ಮಾರ್ಗಸೂಚಿಯಾಗಿದೆ.

    ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)ದ ಬಗ್ಗೆ:

    • ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಿರುವ, ಸುರಕ್ಷಿತವಾದ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ, ಹಾಗೂ ಅಗತ್ಯ ಸಾರ್ವಜನಿಕ ಸೇವೆಗಳನ್ನು ಬೆಂಬಲಿಸುವ ಮೂಲಭೂತ ಡಿಜಿಟಲ್ ವ್ಯವಸ್ಥೆಗಳನ್ನು ಇದು ಸೂಚಿಸುತ್ತದೆ.
    • ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ‘ಜಾಮ್ ತ್ರಿವಳಿ’ (JAM Trinity) ಅಂದರೆ ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಗುರುತು ಮತ್ತು ಮೊಬೈಲ್ ಸಂಪರ್ಕದೊಂದಿಗೆ ಪ್ರಾರಂಭವಾಯಿತು. ಇದು ನಾಗರಿಕರನ್ನು ನೇರವಾಗಿ ಸರ್ಕಾರದ ವ್ಯವಸ್ಥೆಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡಿದೆ.
    • ಮಹತ್ವ: ಇದು ಕಲ್ಯಾಣ ಯೋಜನೆಗಳ ಪ್ರಯೋಜನಗಳ ನೇರ ನಗದು ವರ್ಗಾವಣೆಯನ್ನು (DBT) ಸಕ್ರಿಯಗೊಳಿಸಿತು. ಇದರಿಂದಾಗಿ ಮಧ್ಯವರ್ತಿಗಳ ಹಸ್ತಕ್ಷೇಪ, ವಿಳಂಬ ಮತ್ತು ಸೋರಿಕೆಗಳು ಕಡಿಮೆಯಾದವು ಹಾಗೂ ಭಾರತದ ವ್ಯಾಪಕ ಡಿಜಿಟಲ್ ರೂಪಾಂತರಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು.

    ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ (DPI) ಪ್ರಾಮುಖ್ಯತೆ:

    • ಆಡಳಿತದ ದಕ್ಷತೆ: ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ನೇರ ಲಾಭ ವರ್ಗಾವಣೆ, ಸಬ್ಸಿಡಿ ವಿತರಣೆ ಮತ್ತು ಇ-ಆಡಳಿತ ವೇದಿಕೆಗಳನ್ನು ಸಕ್ರಿಯಗೊಳಿಸುವ ಮೂಲಕ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ.
    • ಹಣಕಾಸು ಒಳಗೊಳ್ಳುವಿಕೆ: ಏಕೀಕೃತ ಪಾವತಿ ವ್ಯವಸ್ಥೆ (UPI)ಯನ್ನು ಸಂಪೂರ್ಣವಾಗಿ ರೂಪಾಂತರಿಸಿದೆ. ಇದು ಪ್ರಸ್ತುತ 8 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗಡಿಯಾಚೆಗಿನ ವಹಿವಾಟುಗಳನ್ನು ಬೆಂಬಲಿಸುತ್ತಿದೆ.
    • ಆರ್ಥಿಕ ಬೆಳವಣಿಗೆ: ಭಾರತವು ವಿಶ್ವದ 3ನೇ ಅತಿದೊಡ್ಡ ಡಿಜಿಟಲೀಕರಣಗೊಂಡ ಆರ್ಥಿಕತೆಯಾಗಿದೆ. ಡಿಜಿಟಲ್ ವೇದಿಕೆಗಳು ದೈನಂದಿನ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಆಳವಾಗಿ ಬೇರೂರಿವೆ.

    ಪ್ರಮುಖ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಮತ್ತು ಡಿಜಿಟಲ್ ಪರಿಹಾರಗಳು:

    • ಆಧಾರ್ (Aadhaar): ಇದು ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ಗುರುತಿನ ವೇದಿಕೆಯಾಗಿದೆ. ಸಮರ್ಥ ಸೇವಾ ವಿತರಣೆಗಾಗಿ ನಿವಾಸಿಗಳ ವಿಶಿಷ್ಟ ಗುರುತಿಸುವಿಕೆ ಮತ್ತು ದೃಢೀಕರಣವನ್ನು ಇದು ಸಕ್ರಿಯಗೊಳಿಸುತ್ತದೆ.
    • ಯುಪಿಐ (UPI): ತ್ವರಿತ, ಪರಸ್ಪರ ಕಾರ್ಯನಿರ್ವಹಿಸಬಲ್ಲ ಮತ್ತು ಸುರಕ್ಷಿತವಾದ, ವ್ಯಕ್ತಿಯಿಂದ-ವ್ಯಕ್ತಿಗೆ ಮತ್ತು ವ್ಯಾಪಾರ ವಹಿವಾಟುಗಳನ್ನು ಸಕ್ರಿಯಗೊಳಿಸುವ ನೈಜ-ಸಮಯದ ಡಿಜಿಟಲ್ ಪಾವತಿಯ ಏಕಿಕೃತ ವ್ಯವಸ್ಥೆಯಾಗಿದೆ.
    1. ಯುಪಿಐ ಪ್ರಸ್ತುತ 8 ದೇಶಗಳಲ್ಲಿ ಸಕ್ರಿಯವಾಗಿದೆ. ಇದು ಗಡಿಯಾಚೆಗಿನ ಪಾವತಿಗಳು, ಹಣ ರವಾನೆ ಮತ್ತು ಹಣಕಾಸು ಒಳಗೊಳ್ಳುವಿಕೆಯನ್ನು ಸುಧಾರಿಸಿದ್ದು, ಜಾಗತಿಕವಾಗಿ ಭಾರತದ ಫಿನ್‌ಟೆಕ್ ಪ್ರಭಾವವನ್ನು ಬಲಪಡಿಸುತ್ತಿದೆ.
    • ಕೋವಿನ್ (CoWIN): ನೋಂದಣಿ, ವೇಳಾಪಟ್ಟಿ ನಿಗದಿಪಡಿಸುವಿಕೆ ಮತ್ತು ಪ್ರಮಾಣೀಕರಣವನ್ನು ಒಳಗೊಂಡಂತೆ ಲಸಿಕೆ (ವ್ಯಾಕ್ಸಿನೇಷನ್) ಸೇವೆಗಳ ಸಂಪೂರ್ಣ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ವೇದಿಕೆಯಾಗಿದೆ.
    • ಎಪಿಐ ಸೇತು (API Setu): ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (APIs) ಮೂಲಕ ಸರ್ಕಾರದ ದತ್ತಾoಶ ಮತ್ತು ಸೇವೆಗಳನ್ನು ಸುರಕ್ಷಿತವಾಗಿ ಹಾಗೂ ಪ್ರಮಾಣೀಕೃತವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುವ ವೇದಿಕೆಯಾಗಿದೆ.
    • ಡಿಜಿಲಾಕರ್ (DigiLocker): ನಾಗರಿಕರಿಗೆ ದೃಢೀಕೃತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂಗ್ರಹಿಸಲು, ವೀಕ್ಷಿಸಲು ಮತ್ತು ಹಂಚಿಕೊಳ್ಳಲು ಅನುಮತಿಸುವ ಡಿಜಿಟಲ್ ಡಾಕ್ಯುಮೆಂಟ್ ವ್ಯಾಲೆಟ್ (Digital document wallet) ಆಗಿದೆ.
    • ಆರೋಗ್ಯ ಸೇತು (Aarogya Setu): ಅಪಾಯದ ಮೌಲ್ಯಮಾಪನ, ಆರೋಗ್ಯ ಸಲಹೆಗಳು ಮತ್ತು ಆರೋಗ್ಯ ಸಂಬಂಧಿತ ಸೇವೆಗಳಿಗೆ ಪ್ರವೇಶವನ್ನು ಒದಗಿಸುವ ಡಿಜಿಟಲ್ ಆರೋಗ್ಯ ಅಪ್ಲಿಕೇಶನ್ ಆಗಿದೆ.
    • ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM): ಸರ್ಕಾರಿ ಘಟಕಗಳಿಂದ ಸರಕು ಮತ್ತು ಸೇವೆಗಳ ಪಾರದರ್ಶಕ ಹಾಗೂ ಸಮರ್ಥ ಸಂಗ್ರಹಣೆಗಾಗಿ ರೂಪಿಸಲಾದ ಆನ್‌ಲೈನ್ ವೇದಿಕೆಯಾಗಿದೆ.
    • ಉಮಂಗ್ (UMANG): ವ್ಯಾಪಕ ಶ್ರೇಣಿಯ ಸರ್ಕಾರಿ ಸೇವೆಗಳಿಗೆ ಏಕ-ಗವಾಕ್ಷಿ ಪ್ರವೇಶವನ್ನು ಒದಗಿಸುವ ಏಕೀಕೃತ ಮೊಬೈಲ್ ಮತ್ತು ವೆಬ್ ವೇದಿಕೆಯಾಗಿದೆ.
    • ದೀಕ್ಷಾ (DIKSHA): ಇ-ಕಂಟೆಂಟ್, ತರಬೇತಿ ಮತ್ತು ಶೈಕ್ಷಣಿಕ ಸಂಪನ್ಮೂಲಗಳೊಂದಿಗೆ ಶಿಕ್ಷಕರು ಮತ್ತು ಕಲಿಯುವವರನ್ನು ಬೆಂಬಲಿಸುವ ರಾಷ್ಟ್ರೀಯ ಡಿಜಿಟಲ್ ವೇದಿಕೆಯಾಗಿದೆ.
    • ಇ-ಸಂಜೀವಿನಿ (e-Sanjeevani): ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ದೂರದಿಂದಲೇ ವೈದ್ಯರು ಮತ್ತು ರೋಗಿಗಳ ನಡುವೆ ಸಮಾಲೋಚನೆಗಳನ್ನು ಸಕ್ರಿಯಗೊಳಿಸುವ ಟೆಲಿಮೆಡಿಸಿನ್ ವೇದಿಕೆಯಾಗಿದೆ.
    • ಇ-ಆಸ್ಪತ್ರೆ (e-Hospital): ಇದು ಆನ್‌ಲೈನ್ ನೋಂದಣಿ, ವೈದ್ಯರ ಭೇಟಿಗೆ ಸಮಯ ನಿಗದಿ, ರೋಗನಿರ್ಣಯ ಮತ್ತು ಶುಲ್ಕ ಪಾವತಿ ಸೇವೆಗಳನ್ನು ಒದಗಿಸುವ ಸಮಗ್ರ ಆಸ್ಪತ್ರೆ ನಿರ್ವಹಣಾ ವ್ಯವಸ್ಥೆಯಾಗಿದೆ.
    • ಇ-ಆಫೀಸ್ (e-Office): ಸರ್ಕಾರಿ ಕಚೇರಿಗಳಲ್ಲಿ ಎಲೆಕ್ಟ್ರಾನಿಕ್ ಕಡತ ನಿರ್ವಹಣೆ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸಕ್ರಿಯಗೊಳಿಸುವ ಮೂಲಕ ಕಾಗದರಹಿತ ಆಡಳಿತವನ್ನು ಬೆಂಬಲಿಸುವ ಡಿಜಿಟಲ್ ವೇದಿಕೆಯಾಗಿದೆ.
    • ಇ-ಕೋರ್ಟ್ಸ್ (eCourts): ಇದು ನ್ಯಾಯಾಲಯದ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಜನಸಾಮಾನ್ಯರಿಗೆ ನ್ಯಾಯಾಂಗ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ರೂಪಿಸಲಾದ ನಿರ್ದಿಷ್ಟ ಗುರಿ ಮತ್ತು ಕಾಲಮಿತಿಯ ಯೋಜನೆಯಾಗಿದೆ.
    • ಪೋಷಣ್ ಟ್ರ್ಯಾಕರ್ (POSHAN Tracker): ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಅಡಿಯಲ್ಲಿ ಪೌಷ್ಟಿಕಾಂಶ ಸೇವೆಗಳ ವಿತರಣೆಯ ನೈಜ-ಸಮಯದ ಮೇಲ್ವಿಚಾರಣೆಗಾಗಿ ಬಳಸಲಾಗುವ ಮೊಬೈಲ್ ಆಧಾರಿತ ಅಪ್ಲಿಕೇಶನ್ ಆಗಿದೆ.
    • ರಾಷ್ಟ್ರೀಯ ಸಾಂಕ್ರಾಮಿಕವಲ್ಲದ ರೋಗಗಳ ವೇದಿಕೆ (NCD): ಪ್ರಮುಖ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ, ರೋಗನಿರ್ಣಯ ಮತ್ತು ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ವೇದಿಕೆಯಾಗಿದೆ.
    • ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (SIDH): ಕೌಶಲ್ಯ ಅಭಿವೃದ್ಧಿ, ತರಬೇತಿ ಮತ್ತು ಉದ್ಯೋಗ ಸಂಬಂಧಿತ ಸೇವೆಗಳನ್ನು ಸಂಯೋಜಿಸುವ ಏಕೀಕೃತ ಡಿಜಿಟಲ್ ವೇದಿಕೆಯಾಗಿದೆ.
    • ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS): ಸರ್ಕಾರಿ ನಿಧಿಗಳ ವಿತರಣೆ ಮತ್ತು ನೇರ ಲಾಭ ವರ್ಗಾವಣೆಯನ್ನು (DBT) ಸಮಗ್ರವಾಗಿ ಮೇಲ್ವಿಚಾರಣೆ ಮಾಡುವ ವೇದಿಕೆಯಾಗಿದೆ.
    • ಪಿಎಂ ಗತಿಶಕ್ತಿ (PM GatiShakti): ಮೂಲಸೌಕರ್ಯ ಯೋಜನೆಗಳ ಸಮಗ್ರ ಯೋಜನೆ ಮತ್ತು ಸಂಘಟಿತ ಅನುಷ್ಠಾನಕ್ಕಾಗಿ ರೂಪಿಸಲಾದ ಜಿಐಎಸ್ (GIS) ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.

    ಪಕ್ಷಾಂತರ ನಿಷೇಧ ಕಾಯ್ದೆ

    ರಾಜ್ಯಶಾಸ್ತ್ರ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಮೂರನೇ ಎರಡರಷ್ಟು (2/3) ಸಂಸದರು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯಿಸುವಿಕೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    ಪಕ್ಷಾಂತರ ನಿಷೇಧ ಕಾಯ್ದೆಯ ಹಿನ್ನೆಲೆ:

    • 1967ರಲ್ಲಿ ಹರಿಯಾಣದ ಶಾಸಕ ಗಯಾ ಲಾಲ್ ಒಂದೇ ದಿನದಲ್ಲಿ ಮೂರು ಬಾರಿ ತಮ್ಮ ಪಕ್ಷವನ್ನು ಬದಲಾಯಿಸಿದ ನಂತರ, ಭಾರತೀಯ ರಾಜಕೀಯದಲ್ಲಿ ‘ಆಯಾ ರಾಮ್ ಗಯಾ ರಾಮ್‘ ಎಂಬ ನುಡಿಗಟ್ಟು ಜನಪ್ರಿಯವಾಯಿತು.
    • ರಾಜಕೀಯ ಪಕ್ಷಾಂತರಗಳನ್ನು ತಡೆಯುವ ಉದ್ದೇಶದಿಂದ 1985ರಲ್ಲಿ 52ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸಂವಿಧಾನದ ಹತ್ತನೇ ಅನುಸೂಚಿಗೆ ಸೇರಿಸಲಾಯಿತು.

    ಸಾಂವಿಧಾನಿಕ ಅನರ್ಹತೆಗಳು [ವಿಧಿ 102(1) ಮತ್ತು 191(1)]

    ಒಬ್ಬ ವ್ಯಕ್ತಿಯು ಈ ಕೆಳಗಿನ ಸಂದರ್ಭಗಳಲ್ಲಿ ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಸದಸ್ಯತ್ವದಿಂದ ಅನರ್ಹನಾಗುತ್ತಾನೆ:

    • ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು (Office of profit) ಹೊಂದಿದ್ದರೆ.
    • ಸಮರ್ಥ ನ್ಯಾಯಾಲಯದಿಂದ ಮಾನಸಿಕ ಅಸ್ವಸ್ಥ ಎಂದು ಘೋಷಿಸಲ್ಪಟ್ಟಿದ್ದರೆ.
    • ತೀರಿಸಲಾಗದ ದಿವಾಳಿ (Undischarged insolvent) ಯಾಗಿದ್ದರೆ.
    • ಭಾರತದ ಪ್ರಜೆಯಾಗಿಲ್ಲದಿದ್ದರೆ, ಅಥವಾ ಸ್ವಯಂಪ್ರೇರಣೆಯಿಂದ ವಿದೇಶಿ ರಾಷ್ಟ್ರದ ಪೌರತ್ವವನ್ನು ಪಡೆದುಕೊಂಡಿದ್ದರೆ, ಅಥವಾ ವಿದೇಶಿ ರಾಷ್ಟ್ರಕ್ಕೆ ನಿಷ್ಠೆಯನ್ನು ತೋರಿದರೆ.
    • ಸಂಸತ್ತು ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿದ್ದರೆ.

    ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಮುಖ ಲಕ್ಷಣಗಳು:

    • ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ: ರಾಜಕೀಯ ಪಕ್ಷಕ್ಕೆ ಸೇರಿದ ಶಾಸಕನೊಬ್ಬ ಸ್ವಯಂಪ್ರೇರಣೆಯಿಂದ ತನ್ನ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ, ಅಥವಾ ತನ್ನ ರಾಜಕೀಯ ಪಕ್ಷ ಹೊರಡಿಸಿದ ನಿರ್ದೇಶನಕ್ಕೆ (Whip) ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ ಅಥವಾ ಮತದಾನದಿಂದ ದೂರವುಳಿದರೆ, ಆತನನ್ನು ಅನರ್ಹಗೊಳಿಸಲಾಗುತ್ತದೆ.
    • ಸದಸ್ಯನು ತನ್ನ ಪಕ್ಷದಿಂದ ಪೂರ್ವಾನುಮತಿ ಪಡೆದಿದ್ದರೆ, ಅಥವಾ ಆತನ ಮತದಾನ ಅಥವಾ ಗೈರುಹಾಜರಿಯನ್ನು ಪಕ್ಷವು 15 ದಿನಗಳೊಳಗೆ ಕ್ಷಮಿಸಿದರೆ ಆತನನ್ನು ಅನರ್ಹಗೊಳಿಸಲಾಗುವುದಿಲ್ಲ.
    • ಸ್ವತಂತ್ರ ಸದಸ್ಯರು ಸದನಕ್ಕೆ ಆಯ್ಕೆಯಾದ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅವರನ್ನು ಅನರ್ಹಗೊಳಿಸಲಾಗುತ್ತದೆ.
    • ನಾಮನಿರ್ದೇಶಿತ ಸದಸ್ಯರು ನಾಮನಿರ್ದೇಶನಗೊಂಡ ಆರು ತಿಂಗಳ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅವರು ಅನರ್ಹರಾಗುತ್ತಾರೆ.
    • ಸದನದ ಸದಸ್ಯನನ್ನು ಅನರ್ಹಗೊಳಿಸುವ ನಿರ್ಧಾರವು ಸದನದ ಸಭಾಪತಿ ಅಥವಾ ಸಭಾಧ್ಯಕ್ಷರ ವಿವೇಚನೆಗೆ ಒಳಪಟ್ಟಿರುತ್ತದೆ.

    ವಿನಾಯಿತಿಗಳು:

    ಹತ್ತನೇ ಅನುಸೂಚಿಯು ಮೂಲತಃ ಸದಸ್ಯರನ್ನು ಅನರ್ಹಗೊಳಿಸದಂತೆ ಎರಡು ವಿನಾಯಿತಿಗಳನ್ನು ಒಳಗೊಂಡಿತ್ತು:

    • ‘ಶಾಸಕಾಂಗ ಪಕ್ಷ’ದ ಮೂರನೇ ಒಂದು (1/3) ಸದಸ್ಯರು ವಿಭಜನೆಗೊಂಡು ಪ್ರತ್ಯೇಕ ಗುಂಪನ್ನು ರಚಿಸುವುದು.
    • ‘ಶಾಸಕಾಂಗ ಪಕ್ಷ’ದ ಮೂರನೇ ಎರಡರಷ್ಟು (2/3) ಸದಸ್ಯರ ಅನುಮೋದನೆಯೊಂದಿಗೆ ತಮ್ಮ ರಾಜಕೀಯ ಪಕ್ಷವನ್ನು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸುವುದು.
    • ಆದರೆ, ಕಾನೂನನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2003ರಲ್ಲಿ 91ನೇ ತಿದ್ದುಪಡಿಯ ಮೂಲಕ ಮೊದಲ ವಿನಾಯಿತಿಯನ್ನು ( ಮೂರನೇ ಒಂದು ವಿಭಜನೆ) ತೆಗೆದುಹಾಕಲಾಯಿತು.

    ಸರ್ವೋಚ್ಚ ನ್ಯಾಯಾಲಯದ ಪ್ರಮುಖ ತೀರ್ಪುಗಳು

    • ಕಿಹೋಟೊ ಹೊಲ್ಲೋಹಾನ್ v/s ಜಚಿಲ್ಹು (1992): ಸಂವಿಧಾನದ ಹತ್ತನೇ ಅನುಸೂಚಿಯ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಅನರ್ಹತೆಗೆ ಸಂಬಂಧಿಸಿದಂತೆ ಸಭಾಪತಿ ನೀಡುವ ನಿರ್ಧಾರಗಳು ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗ ವಿಮರ್ಶೆಗೆ ಒಳಪಟ್ಟಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
    • ಕೀಶಮ್ ಮೇಘಚಂದ್ರ ಸಿಂಗ್ v/s ಸ್ಪೀಕರ್, ಮಣಿಪುರ (2020): ಅನರ್ಹತೆಯ ಅರ್ಜಿಯ ಮೇಲೆ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಗರಿಷ್ಠ ಮೂರು ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿದೆ.

    ರಾಷ್ಟ್ರೀಯ ಗೌರವಕ್ಕೆ (ಅಪಮಾನ) ತಡೆ ಕಾಯ್ದೆ, 1971

    ರಾಜ್ಯಶಾಸ್ತ್ರ ಮತ್ತು ಆಡಳಿತ

    ಇತ್ತೀಚೆಗೆ ಸುದ್ದಿಯಲ್ಲಿದೆ: 

    • ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆ, 1971 ಅನ್ನು ತಿದ್ದುಪಡಿ ಮಾಡಲು ಅನುಮೋದನೆ ನೀಡಿದೆ.

    ಈ ಕಾಯ್ದೆಯ ಕುರಿತು:

    • ಉದ್ದೇಶ: ರಾಷ್ಟ್ರೀಯ ಹಾಡು ವಂದೇ ಮಾತರಂ ಅನ್ನು ಹಾಡುವುದಕ್ಕೆ ಮಾಡುವ ಯಾವುದೇ ಅವಮಾನ ಅಥವಾ ಅಡ್ಡಿಪಡಿಸುವಿಕೆಯನ್ನು ದಂಡಾರ್ಹ ಅಪರಾಧವನ್ನಾಗಿಸುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ.
    • ಪ್ರಸ್ತುತ ಚಾಲ್ತಿಯಲ್ಲಿರುವ 1971ರ ಕಾಯ್ದೆಯ ಪ್ರಕಾರ ರಾಷ್ಟ್ರಗೀತೆ, ರಾಷ್ಟ್ರಧ್ವಜ ಮತ್ತು ಭಾರತದ ಸಂವಿಧಾನಕ್ಕೆ ಅಪಚಾರ ಎಸಗುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

    ರಾಷ್ಟ್ರೀಯ ಹಾಡು ವಂದೇ ಮಾತರಂ ಹಿನ್ನೆಲೆ:

    • ವಂದೇ ಮಾತರಂ ಗೀತೆಯನ್ನು ಸಂಸ್ಕೃತ ಭಾಷೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದರು. ಇದು ಮೊದಲ ಬಾರಿಗೆ 1882ರಲ್ಲಿ ಪ್ರಕಟವಾದ ‘ಆನಂದಮಠ‘ ಕಾದಂಬರಿಯಲ್ಲಿ ಸೇರ್ಪಡೆಯಾಯಿತು.
    • ಆನಂದಮಠ ಕಾದಂಬರಿಯನ್ನು 1769–73ರ ಬಂಗಾಳದ ಭೀಕರ ಬರಗಾಲ ಮತ್ತು ಸನ್ಯಾಸಿ ದಂಗೆಯ ಹಿನ್ನೆಲೆಯಲ್ಲಿ ರಚಿಸಲಾಗಿದೆ.
    • 1896ರ ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಇದನ್ನು ಮೊದಲ ಬಾರಿಗೆ ಹಾಡುವ ಮೂಲಕ ಇದಕ್ಕೆ ರಾಷ್ಟ್ರೀಯ ಮಾನ್ಯತೆ ತಂದುಕೊಟ್ಟರು.
    • ವಂದೇ ಮಾತರಂ ಅನ್ನು ಒಂದು ರಾಜಕೀಯ ಘೋಷಣೆಯಾಗಿ ಮೊದಲ ಬಾರಿಗೆ ಆಗಸ್ಟ್ 7, 1905ರಂದು ಬಳಸಲಾಯಿತು.
    • 1905ರ ಸ್ವದೇಶಿ ಚಳವಳಿಯ ಸಮಯದಲ್ಲಿ ವಂದೇ ಮಾತರಂ ಗೀತೆಯು ನಾಗರಿಕ ಪ್ರತಿರೋಧದ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿತು.
    • ರಾಷ್ಟ್ರೀಯ ಹಾಡು: ಜನವರಿ 24, 1950ರಂದು ಸಂವಿಧಾನ ಸಭೆಯು ವಂದೇ ಮಾತರಂ ಅನ್ನು ಭಾರತದ ಅಧಿಕೃತ ರಾಷ್ಟ್ರೀಯ ಹಾಡು (National Song) ಎಂದು ಅಂಗೀಕರಿಸಿತು.

    ಸಾಂವಿಧಾನಿಕ ನಿಬಂಧನೆಗಳು:

    • ವಿಧಿ 51A(a) ಮೂಲಭೂತ ಕರ್ತವ್ಯಗಳು: ಪ್ರತಿಯೊಬ್ಬ ನಾಗರಿಕನು ಸಂವಿಧಾನಕ್ಕೆ ಬದ್ಧನಾಗಿರಬೇಕು ಮತ್ತು ಅದರ ಆದರ್ಶಗಳು, ಸಂಸ್ಥೆಗಳು, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸಬೇಕೆಂದು ಇದು ಕಡ್ಡಾಯಗೊಳಿಸುತ್ತದೆ.
    • ಸ್ಪಷ್ಟ ಸಾಂವಿಧಾನಿಕ ರಕ್ಷಣೆಯ ಕೊರತೆ: ‘ಜನಗಣಮನ’ ರಾಷ್ಟ್ರಗೀತೆಯಂತೆ, ವಂದೇ ಮಾತರಂ ಗೀತೆಗೆ ಸಂವಿಧಾನದಲ್ಲಿ ಯಾವುದೇ ನೇರ ಅಥವಾ ಸ್ಪಷ್ಟವಾದ ರಕ್ಷಣೆ ಇರಲಿಲ್ಲ.
    • ಇದರ ಪ್ರಸ್ತುತ ಸ್ಥಾನಮಾನವು ಕೇವಲ ಸಂವಿಧಾನ ಸಭೆಯ ನಿರ್ಣಯಗಳಿಂದ ಬಂದಿದೆಯೇ ಹೊರತು, ಜಾರಿಗೊಳಿಸಬಹುದಾದ ಯಾವುದೇ ಸಾಂವಿಧಾನಿಕ ನಿಯಮಗಳಿಂದಲ್ಲ.