ವರ್ಗ: National and International Current Affairs Kannada

  • ‘ಶಾಂತಿ’ (SHANTI) ಮಸೂದೆ | ಭಾರತ-ಓಮನ್ ಮುಕ್ತ ವ್ಯಾಪಾರ ಒಪ್ಪಂದ | ಪ್ಯಾಕ್ಸ್ ಸಿಲಿಕಾ ಉಪಕ್ರಮದಿಂದ ಭಾರತ ಹೊರಕ್ಕೆ | ಪ್ರೀಹ್ ವಿಹಾರ್ ದೇವಾಲಯ | ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (PMGKP)

    ‘ಶಾಂತಿ’ (SHANTI) ಮಸೂದೆ

    ಸಾಮಾನ್ಯ ಅಧ್ಯಯನ -3/ ಶಕ್ತಿ/ಇಂಧನ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸಚಿವ ಸಂಪುಟವು ‘ಶಾಂತಿ’ (SHANTI) ಎಂಬ ಶೀರ್ಷಿಕೆಯ ‘ಪರಮಾಣು ಶಕ್ತಿ ಮಸೂದೆ, 2025’ ಕ್ಕೆ ಅನುಮೋದನೆ ನೀಡಿದೆ.

    ಶಾಂತಿ (SHANTI) ಮಸೂದೆಯ ಬಗ್ಗೆ:

    • ಸಂಕ್ಷಿಪ್ತ ರೂಪ: “SHANTI”- ಸಸ್ಟೈನ್ಏಬಲ್ ಹಾರ್ನೆಸ್ಸಿಂಗ್ ಆಫ್ ಅಡ್ವಾನ್ಸಮೆಂಟ್ ಆಫ್ ನುಕ್ಲಿಯರ್ ಟೆಕ್ನಾಲಜಿ ಫಾರ್ ಇಂಡಿಯಾ (ಭಾರತಕ್ಕಾಗಿ ಪರಮಾಣು ತಂತ್ರಜ್ಞಾನದ ಪ್ರಗತಿಯನ್ನು ಸುಸ್ಥಿರವಾಗಿ ಬಳಸಿಕೊಳ್ಳುವುದು).
    • ಉದ್ದೇಶ: ಈ ಮಸೂದೆಯು ಭಾರತದ ಪರಮಾಣು ವಲಯಕ್ಕಾಗಿ ಏಕೀಕೃತ ಮತ್ತು ಆಧುನಿಕ ಕಾನೂನು ಚೌಕಟ್ಟನ್ನು ರೂಪಿಸಲು ಪ್ರಯತ್ನಿಸುತ್ತದೆ.

    ಭಾರತದ ಪರಮಾಣು ವಲಯದ ನಿರ್ವಹಣೆಯ ಬಗ್ಗೆ:

    • ಸಾಂಪ್ರದಾಯಿಕವಾಗಿ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು ಸರ್ಕಾರಿ ಸ್ವಾಮ್ಯದ ‘ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತ’ ಮತ್ತು ಅದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಭಾರತೀಯ ನಾಭಿಕೀಯ ವಿದ್ಯುತ್ ನಿಗಮ’ (BHAVINI) ದ ಒಡೆತನದಲ್ಲಿವೆ ಮತ್ತು ಅವುಗಳಿಂದಲೇ ನಿರ್ವಹಿಸಲ್ಪಡುತ್ತಿವೆ.
    • ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡಲು ಕೇಂದ್ರ ಸರ್ಕಾರವು ಈ ಕೆಳಗಿನ ಪ್ರಮುಖ ಶಾಸನಗಳಿಗೆ ತಿದ್ದುಪಡಿ ತರಬೇಕಿದೆ:
    • ಅಣುಶಕ್ತಿ ಕಾಯ್ದೆ, 1962:- ಇದು ಪರಮಾಣು ಶಕ್ತಿಯ ಅಭಿವೃದ್ಧಿ ಮತ್ತು ನಿಯಂತ್ರಣದ ಚೌಕಟ್ಟಾಗಿದೆ.
    • ಪರಮಾಣುವಿನ ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010:- ಇದು ಪರಮಾಣು ಅವಘಡಗಳಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ.

    ಶಾಂತಿ (SHANTI) ಮಸೂದೆಯ ಪ್ರಮುಖ ನಿಬಂಧನೆಗಳು:

    • ಪರಮಾಣು ಮೌಲ್ಯ ಸರಪಳಿಯ ಭಾಗಶಃ ಮುಕ್ತಗೊಳಿಸುವಿಕೆ:- ಈ ಮಸೂದೆಯು ಖಾಸಗಿ ಮತ್ತು ಜಾಗತಿಕ ಕಂಪನಿಗಳಿಗೆ ಪರಮಾಣು ಖನಿಜಗಳ ಅನ್ವೇಷಣೆ, ಪರಮಾಣು ಉಪಕರಣ ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ಭಾಗವಹಿಸಲು ಅನುಮತಿಸುತ್ತದೆ.
    • ರಿಯಾಕ್ಟರ್‌ಗಳ (ಕುಲುಮೆಗಳ) ಕಾರ್ಯಾಚರಣೆ ಮತ್ತು ಶಸ್ತ್ರಾಸ್ತ್ರ-ಸಂಬಂಧಿತ ಚಟುವಟಿಕೆಗಳಂತಹ ಪ್ರಮುಖ ಮತ್ತು ಕಾರ್ಯತಂತ್ರದ ಕ್ಷೇತ್ರಗಳು ಸರ್ಕಾರದ ನಿಯಂತ್ರಣದಲ್ಲಿಯೇ ಮುಂದುವರಿಯಲಿವೆ.
    • ಪರಮಾಣು ಸುರಕ್ಷತೆ ಪ್ರಾಧಿಕಾರ:- ಈ ಶಾಸನವು ಸ್ವತಂತ್ರ ಪರಮಾಣು ಸುರಕ್ಷತೆ ಪ್ರಾಧಿಕಾರವನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತದೆ.
    • ವಿಶೇಷ ಪರಮಾಣು ನ್ಯಾಯಮಂಡಳಿ:- ಪರಮಾಣು ಸಂಬಂಧಿತ ವಿವಾದಗಳನ್ನು ನಿರ್ವಹಿಸಲು ಇದು ವಿಶೇಷ ನ್ಯಾಯಮಂಡಳಿಯ ಸ್ಥಾಪನೆಗೆ ಅವಕಾಶ ಒದಗಿಸುತ್ತದೆ. ವಿವಾದಗಳ ಇತ್ಯರ್ಥವನ್ನು ಸುಗಮಗೊಳಿಸುವುದು ಮತ್ತು ಈ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

    ಭಾರತ-ಓಮನ್ ಮುಕ್ತ ವ್ಯಾಪಾರ ಒಪ್ಪಂದ

    ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ಓಮನ್ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

    ಭಾರತ ಮತ್ತು ಓಮನ್ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದದ (FTA) ಪ್ರಮುಖ ಅಂಶಗಳು:

    • ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ದೊಂದಿಗೆ, ಭಾರತವು ಓಮನ್‌ನಲ್ಲಿ ತನ್ನ 98% ರಷ್ಟು ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಮತ್ತು ಸೇವೆಗಳಲ್ಲಿಯೂ ಗಮನಾರ್ಹ ಪ್ರವೇಶವನ್ನು ಪಡೆಯಲಿದೆ.

    ಭಾರತ ಮತ್ತು ಓಮನ್ ನಡುವಿನ ಸಂಬಂಧಗಳು:

    • ರಾಜತಾಂತ್ರಿಕ ಸಂಬಂಧ:- ಭಾರತ-ಓಮನ್ ನಡುವೆ 1955 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಔಪಚಾರಿಕಗೊಳಿಸಲಾಯಿತು ಮತ್ತು 2008 ರಲ್ಲಿ ಇದನ್ನು ‘ಕಾರ್ಯತಂತ್ರದ ಪಾಲುದಾರಿಕೆ’ಗೆ ಮೇಲ್ದರ್ಜೆಗೇರಿಸಲಾಯಿತು.
    • ವ್ಯಾಪಾರ ಸಂಬಂಧ:- 2023-2024 ರ ಆರ್ಥಿಕ ವರ್ಷದಲ್ಲಿ 8.947 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಟ್ಟು ವ್ಯಾಪಾರದೊಂದಿಗೆ ಓಮನ್, ಭಾರತದ 30ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. 
    • ಓಮನ್‌ನ ಅಗ್ರ ವ್ಯಾಪಾರ ಪಾಲುದಾರರಲ್ಲಿ ಭಾರತವೂ ಒಂದಾಗಿದೆ ಮತ್ತು ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳ ಪೈಕಿ ಓಮನ್, ಭಾರತದ ಮೂರನೇ ಅತಿದೊಡ್ಡ ರಫ್ತು ತಾಣವಾಗಿದೆ.
    • ದಕ್ಷಿಣ ಕೊರಿಯಾದ ನಂತರ, 2023 ರ ಸಾಲಿನಲ್ಲಿ ಓಮನ್‌ನ ಕಚ್ಚಾ ತೈಲ ರಫ್ತಿಗೆ ಭಾರತವು 4ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
    • ರಕ್ಷಣಾ ಸಹಕಾರ: ಭಾರತ ಮತ್ತು ಓಮನ್ ಮೂರೂ ಪಡೆಗಳ (ಭೂಸೇನೆ, ವಾಯುಸೇನೆ, ನೌಕಾಪಡೆ) ನಡುವೆ ನಿಯಮಿತವಾಗಿ ದ್ವೈವಾರ್ಷಿಕ ದ್ವಿಪಕ್ಷೀಯ ಸಮರಾಭ್ಯಾಸಗಳು ನಡೆಯುತ್ತವೆ. ಅವುಗಳೆಂದರೆ:
      • ಭೂಸೇನೆ ಸಮರಾಭ್ಯಾಸ: ಅಲ್ ನಜಾಹ್ 
      • ವಾಯುಪಡೆ ಸಮರಾಭ್ಯಾಸ: ಈಸ್ಟರ್ನ್ ಬ್ರಿಡ್ಜ್ 
      • ನೌಕಾಸೇನೆ ಸಮರಾಭ್ಯಾಸ: ನಸೀಮ್ ಅಲ್ ಬಹ್ರ್
    • ಕಡಲ ಸಹಕಾರ: ಓಮನ್ ದೇಶವು ಹೋರ್ಮುಜ್ ಜಲಸಂಧಿಯ ಪ್ರವೇಶದ್ವಾರದಲ್ಲಿ ನೆಲೆಸಿದೆ; ಈ ಮಾರ್ಗದ ಮೂಲಕವೇ ಭಾರತವು ತನ್ನ ಒಟ್ಟು ತೈಲ ಆಮದಿನ ಐದನೇ ಒಂದು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.
    • ಓಮನ್‌ ದೇಶದ ಡುಕ್ಮ್  ಬಂದರನ್ನು ಪ್ರವೇಶಿಸಲು (ಬಳಸಿಕೊಳ್ಳಲು) ಭಾರತವು 2018 ರಲ್ಲಿ ಈ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.
    • ಡುಕ್ಮ್ ಬಂದರು ಓಮನ್‌ ದೇಶದ ಆಗ್ನೇಯ ಕರಾವಳಿಯಲ್ಲಿದ್ದು, ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಚಾಚಿಕೊಂಡಿದೆ. ಇದು ಕಾರ್ಯತಂತ್ರದ ಸ್ಥಳದಲ್ಲಿದ್ದು, ಇರಾನ್‌ನ ಚಬಹಾರ್ ಬಂದರಿಗೆ ಸಮೀಪದಲ್ಲಿದೆ.

    ಗಲ್ಫ್ ಸಹಕಾರ ಮಂಡಳಿ (GCC) ಯ ಬಗ್ಗೆ:

    • ಗಲ್ಫ್ ಸಹಕಾರ ಮಂಡಳಿಯು ಅರೇಬಿಯಾದ ಪರ್ಯಾಯ ದ್ವೀಪದ ಆರು ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.
    • ಸದಸ್ಯ ರಾಷ್ಟ್ರಗಳು: ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE).
    • ಸ್ಥಾಪನೆ: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸಹಿ ಹಾಕಲಾದ ಒಪ್ಪಂದದ ಮೂಲಕ ಮೇ 25, 1981 ರಂದು ಸ್ಥಾಪಿಸಲಾಯಿತು.
    • ಉದ್ದೇಶಗಳು: ಆರ್ಥಿಕ, ಭದ್ರತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಏಕತೆ ಮತ್ತು ಸಮನ್ವಯವನ್ನು ಸಾಧಿಸುವುದು.
    • ಪ್ರಧಾನ ಕಚೇರಿ: ರಿಯಾದ್ (ಸೌದಿ ಅರೇಬಿಯಾ)

    ಪ್ಯಾಕ್ಸ್ ಸಿಲಿಕಾ ಉಪಕ್ರಮದಿಂದ ಭಾರತ ಹೊರಕ್ಕೆ

    ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಅಮೇರಿಕಾ ನೇತೃತ್ವದ ಹೊಸ ನಿರ್ಣಾಯಕ ಖನಿಜ ವೈವಿಧ್ಯೀಕರಣ ಯೋಜನೆಯಾದ ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮದಿಂದ ಭಾರತವನ್ನು ಹೊರಗಿಡಲಾಗಿದೆ.

    ಪ್ಯಾಕ್ಸ್ ಸಿಲಿಕಾ ಉಪಕ್ರಮದ ಬಗ್ಗೆ:

    • ಉದ್ದೇಶ:- ಈ ಅಮೇರಿಕಾ ನೇತೃತ್ವದ ಕಾರ್ಯತಂತ್ರದ ಉಪಕ್ರಮವು ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ-ಚಾಲಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸುವುದು ಉದ್ದೇಶವಾಗಿದೆ.
    • ಸದಸ್ಯರು:- ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ (ದಕ್ಷಿಣ ಕೊರಿಯಾ), ಸಿಂಗಾಪುರ, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾ.

    ನಿರ್ಣಾಯಕ ಖನಿಜಗಳ ಬಗ್ಗೆ:

    • ವ್ಯಾಖ್ಯಾನ:- ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾದ ಖನಿಜಗಳನ್ನು ‘ನಿರ್ಣಾಯಕ ಖನಿಜಗಳು’ ಎಂದು ಕರೆಯಲಾಗುತ್ತದೆ.
    • ಸರ್ಕಾರವು ಭಾರತಕ್ಕಾಗಿ 30 ನಿರ್ಣಾಯಕ ಖನಿಜಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
    • 30 ನಿರ್ಣಾಯಕ ಖನಿಜಗಳು: ಆಂಟಿಮನಿ, ಬೆರಿಲಿಯಮ್, ಬಿಸ್ಮತ್, ಕೋಬಾಲ್ಟ್, ತಾಮ್ರ, ಗ್ಯಾಲಿಯಮ್, ಜರ್ಮೇನಿಯಮ್, ಗ್ರಾಫೈಟ್, ಹ್ಯಾಫ್ನಿಯಮ್, ಇಂಡಿಯಮ್, ಲಿಥಿಯಮ್, ಮಾಲಿಬ್ಡಿನಮ್, ನಿಯೋಬಿಯಮ್, ನಿಕಲ್, ಪಿಜಿಇ, ರಂಜಕ, ಪೊಟ್ಯಾಶ್, ಆರ್‌ಇಇ (REE – ವಿರಳ ಭೂ ಧಾತುಗಳು), ರೇನಿಯಮ್, ಸಿಲಿಕಾನ್, ಸ್ಟ್ರಾಂಷಿಯಮ್, ಟ್ಯಾಂಟಲಮ್, ಟೆಲೂರಿಯಮ್, ತವರ, ಟೈಟಾನಿಯಮ್, ಟಂಗ್‌ಸ್ಟನ್, ವೆನಾಡಿಯಮ್, ಜಿರ್ಕೋನಿಯಮ್, ಸೆಲೆನಿಯಮ್ ಮತ್ತು ಕ್ಯಾಡ್ಮಿಯಮ್.
    • “ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957” (MMDR Act, 1957) ದೇಶದ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳನ್ನು ಗುರುತಿಸಿದೆ.

    ಪ್ರೀಹ್ ವಿಹಾರ್ ದೇವಾಲಯ

    ಸಾಮಾನ್ಯ ಅಧ್ಯಯನ-1/ ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಪ್ರೀಹ್ ವಿಹಾರ್ ದೇವಾಲಯ ಸಂಕೀರ್ಣದಲ್ಲಿನ ಸಂರಕ್ಷಣಾ ಸೌಲಭ್ಯಗಳಿಗೆ ಹಾನಿಯಾಗಿರುವ ವರದಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

    ಪ್ರೀಹ್ ವಿಹಾರ್ ದೇವಾಲಯದ ಬಗ್ಗೆ:

    • ಸ್ಥಳ: ಇದು ಥೈಲ್ಯಾಂಡ್ ಗಡಿಯ ಸಮೀಪವಿರುವ ಕಾಂಬೋಡಿಯಾದಲ್ಲಿ ನೆಲೆಗೊಂಡಿರುವ, ಶಿವನಿಗೆ ಸಮರ್ಪಿತವಾದ ಪುರಾತನ ಹಿಂದೂ ದೇವಾಲಯವಾಗಿದೆ.
    • ಇದನ್ನು ಮುಖ್ಯವಾಗಿ ಖಮೇರ್ ರಾಜರಾದ ಒಂದನೇ ಸೂರ್ಯವರ್ಮನ್ ಮತ್ತು ಎರಡನೇ ಸೂರ್ಯವರ್ಮನ್ ಅವರ ಆಳ್ವಿಕೆಯಲ್ಲಿ (ಕ್ರಿ.ಶ. 9 ರಿಂದ 12 ನೇ ಶತಮಾನ) ನಿರ್ಮಿಸಲಾಯಿತು.
    • ಇದನ್ನು 2008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (PMGKP)

    ಸಾಮಾನ್ಯ ಅಧ್ಯಯನ-2/ ಕಲ್ಯಾಣ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ಕೋವಿಡ್‌ ಮಹಾಮಾರಿಯಿಂದ ಮೃತಪಟ್ಟ ಎಲ್ಲಾ ವೈದ್ಯರಿಗೆ ₹50 ಲಕ್ಷದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್’ ವಿಮೆಯನ್ನು ವಿಸ್ತರಿಸಲು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.

    ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನ ಬಗ್ಗೆ:

    • PMGKP ವಿಮಾ ಯೋಜನೆಯು ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾದ ಬೃಹತ್ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್‌’ನ ಅಡಿಯಲ್ಲಿನ ಒಂದು ನಿರ್ದಿಷ್ಟ ಘಟಕವಾಗಿದೆ.
    • ವ್ಯಾಪ್ತಿ:– ಅರ್ಹ ಆರೋಗ್ಯ ಕಾರ್ಯಕರ್ತರಿಗೆ ತಲಾ ₹50 ಲಕ್ಷದ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಇದು ಒದಗಿಸುತ್ತದೆ.
    • ಒಳಗೊಂಡಿರುವ ಅಪಾಯ:- ಕೋವಿಡ್-19 ಸೋಂಕಿನಿಂದ ಸಂಭವಿಸಿದ ಸಾವುಗಳು.
  • ಸರ್ದಾರ್ ವಲ್ಲಭಭಾಯಿ ಪಟೇಲ್ | ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ ನೃತ್ಯ | “ಗೊನೋರ್ರಿಹಾ” (Gonorrhea) ಚಿಕಿತ್ಸೆ | ಪೊಂಡೂರು ಖಾದಿ | ಮಹಾಕ್ರೈಮ್‌ಒಎಸ್ ಎಐ (MahaCrimeOS AI) | ಲೂನಾರ್‌ ಕ್ರೀಟ್ (Lunarcrete)

    ಸರ್ದಾರ್ ವಲ್ಲಭಭಾಯಿ ಪಟೇಲ್

    ಸಾಮಾನ್ಯ ಅಧ್ಯಯನ -1/ಸುದ್ದಿಯಲ್ಲಿರುವ ವ್ಯಕ್ತಿಗಳು

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 75ನೇ ಪುಣ್ಯತಿಥಿಯಂದು (15 ಡಿಸೆಂಬರ್ 1950), ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅವರಿಗೆ ಗೌರವ ನಮನ ಸಲ್ಲಿಸಿದರು.

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ:

    • ಜನನ:- ಅಕ್ಟೋಬರ್ 31, 1875 
    • ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು. 
    • ಅವರನ್ನು ಭಾರತದ “ರಾಷ್ಟ್ರೀಯ ಏಕೀಕರಣದ ಶಿಲ್ಪಿ” ಮತ್ತು “ಆಧುನಿಕ ಭಾರತದ ನಾಗರಿಕ ಸೇವೆಗಳ ಪಿತಾಮಹ” ಅಥವಾ “ಅಖಿಲ ಭಾರತ ಸೇವೆಗಳ ಪಿತಾಮಹ” ಎಂದು ವ್ಯಾಪಕವಾಗಿ ಪ್ರಸಿದ್ಧರಾಗಿದ್ದಾರೆ.
    • ಅವರಿಗೆ 1991 ರಲ್ಲಿ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಭಾರತ ರತ್ನ”ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.

    ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು:

    • ಖೇಡಾ ಸತ್ಯಾಗ್ರಹ, 1917:– ಗುಜರಾತ್‌ನ ಖೇಡಾ ಜಿಲ್ಲೆಯ ಪ್ರಮುಖ ಸ್ಥಳೀಯ ನಾಯಕರಾಗಿ, ಬ್ರಿಟಿಷರು ವಿಧಿಸಿದ ಅನ್ಯಾಯದ ಭೂ ಕಂದಾಯ ತೆರಿಗೆಗಳ ವಿರುದ್ಧ ಸತ್ಯಾಗ್ರಹವನ್ನು ಸಂಘಟಿಸುವಲ್ಲಿ ಪಟೇಲ್ ಅವರು ಮಹಾತ್ಮ ಗಾಂಧಿಯವರನ್ನು ಬೆಂಬಲಿಸಿದರು.
    • ಅಸಹಕಾರ ಚಳವಳಿ, 1920-22:– ಪಟೇಲ್ ಅವರು ಅಸಹಕಾರ ಚಳವಳಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದರು; ಸುಮಾರು 300,000 ಸದಸ್ಯರನ್ನು ಸೇರ್ಪಡೆಗೊಳಿಸಿದರು ಮತ್ತು ಸುಮಾರು 15 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು.
    • ಬಾರ್ಡೋಲಿ ಸತ್ಯಾಗ್ರಹ, 1928: ಪಟೇಲರು ಬಾರ್ಡೋಲಿ ಸತ್ಯಾಗ್ರಹದ ಸಮಯದಲ್ಲಿ, ಕ್ಷಾಮ ಮತ್ತು ಹೆಚ್ಚಿದ ಭೂ ಕಂದಾಯದಿಂದ ಬಳಲುತ್ತಿದ್ದ ಸ್ಥಳೀಯ ಜನಸಮುದಾಯವನ್ನು ಬೆಂಬಲಿಸಿದರು.
    • ಕಾನೂನು ಭಂಗ ಚಳವಳಿ 1930-34: ಬ್ರಿಟಿಷರ ಉಪ್ಪಿನ ಏಕಸ್ವಾಮ್ಯದ ವಿರುದ್ಧದ ಅಹಿಂಸಾತ್ಮಕ ಪ್ರತಿಭಟನೆಯಾದ “ಉಪ್ಪಿನ ಸತ್ಯಾಗ್ರಹದಲ್ಲಿ” ಅವರು ಸಕ್ರಿಯವಾಗಿ ಭಾಗವಹಿಸಿದರು.
    • ಭಾರತ ಬಿಟ್ಟು ತೊಲಗಿ ಚಳವಳಿ, 1942: ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಸಂಘಟಿಸಿದರು. ಭಾರತದಾದ್ಯಂತ ಅತ್ಯಂತ ಪ್ರಭಾವಶಾಲಿ ಮತ್ತು ರೋಮಾಂಚಕ ಭಾಷಣಗಳನ್ನು ಮಾಡುವ ಮೂಲಕ, ಸಾಮೂಹಿಕ ಪ್ರತಿಭಟನೆಗಳಿಗೆ ಸೇರಲು, ಕಾನೂನು ಭಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ತೆರಿಗೆ ಪಾವತಿಗಳನ್ನು ಬಹಿಷ್ಕರಿಸಲು ಮತ್ತು ನಾಗರಿಕ ಸೇವೆಗಳನ್ನು ಸ್ಥಗಿತಗೊಳಿಸಲು ಜನರನ್ನು ಪ್ರೇರೇಪಿಸಿದರು ಹಾಗೂ ಸಂಘಟಿಸಿದರು.

    ನಿಮಗಿದು ತಿಳಿದಿದೆಯೇ?

    • 2014 ರಿಂದ, ಸರ್ದಾರ್ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 31 ರಂದು ‘ರಾಷ್ಟ್ರೀಯ ಐಕ್ಯತೆ ದಿನ’ (ನ್ಯಾಷನಲ್ ಯುನಿಟಿ ಡೇ) ವನ್ನು ಆಚರಿಸಲಾಗುತ್ತದೆ.
    • ವಿಶ್ವದ ಅತಿ ಎತ್ತರದ ಪ್ರತಿಮೆಯಾದ “ಐಕ್ಯತೆ ಪ್ರತಿಮೆ” (ಸ್ಟ್ಯಾಚ್ಯೂ ಆಫ್ ಯೂನಿಟಿ) ಯನ್ನು ಗುಜರಾತ್‌ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143 ನೇ ಜನ್ಮದಿನ ಅಕ್ಟೋಬರ್ 31, 2018 ರಂದು ಅನಾವರಣಗೊಳಿಸಲಾಯಿತು.
    • ಸ್ವತಂತ್ರ ಭಾರತದ ನಾಗರಿಕ ಸೇವಾ ಅಧಿಕಾರಿಗಳ ಮೊದಲ ತಂಡವನ್ನು ಉದ್ದೇಶಿಸಿ 1947 ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಾಡಿದ ಭಾಷಣದ ನೆನಪಿಗಾಗಿ ಏಪ್ರಿಲ್ 21 ರಂದು ‘ನಾಗರಿಕ ಸೇವಾ ದಿನ’ವನ್ನು ಆಚರಿಸಲಾಗುತ್ತದೆ.

    ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ ನೃತ್ಯ

    ಸಾಮಾನ್ಯ ಅಧ್ಯಯನ-1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಛತ್ತೀಸ್‌ಗಢದ ಬಸ್ತಾರ್‌ ಪ್ರದೇಶದ ಜುಡಿಯಾ ಪಾರಾ ಗ್ರಾಮದಲ್ಲಿ ನಡೆದ ಜಾತ್ರೆಯ ಸಂದರ್ಭದಲ್ಲಿ ಸಾಂಪ್ರದಾಯಿಕ “ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ’ ನೃತ್ಯವನ್ನು ಮರಿಯಾ (ಗೋಂಡ್) ಜನಾಂಗದವರು ಪ್ರದರ್ಶಿಸಿದರು.

    “ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ” ನೃತ್ಯದ ಬಗ್ಗೆ:

    • ನೃತ್ಯ ಪ್ರದರ್ಶಿಸುವವರು:- ಛತ್ತೀಸ್‌ಗಢದ ಬಸ್ತಾರ್‌ನ ದಂಡಮಿ ಮಾಡಿಯಾ (ಮರಿಯಾ/ಗೌರ್ ಮರಿಯಾ) ಬುಡಕಟ್ಟು ಜನಾಂಗ.
    • ಮುಖ್ಯ ಲಕ್ಷಣಗಳು:-
    • ಗ್ರಾಮೀಣ ಜಾತ್ರೆ ಮತ್ತು ಪ್ರಮುಖ ಸಾಮುದಾಯಿಕ ಸಂದರ್ಭಗಳಲ್ಲಿ ಪುರುಷರು ಮತ್ತು ಮಹಿಳೆಯರಿಬ್ಬರೂ ಈ ನೃತ್ಯವನ್ನು ಪ್ರದರ್ಶಿಸುತ್ತಾರೆ.
    • ವಸ್ತ್ರವಿನ್ಯಾಸ:- ಪುರುಷ ನೃತ್ಯಗಾರರು ಬಿದಿರಿನಿಂದ ನಿರ್ಮಿಸಿದ ಕಾಡೆಮ್ಮೆಯ ಕೊಂಬುಗಳು, ಗರಿಗಳು, ಕವಡೆಗಳು ಮತ್ತು ವರ್ಣರಂಜಿತ ವಸ್ತ್ರದ ಪಟ್ಟಿಗಳಿಂದ ಅಲಂಕೃತಗೊಂಡ ಕಾಡೆಮ್ಮೆಯ ಕೊಂಬಿನ ಆಕಾರದ ಶಿರಸ್ತ್ರಾಣವನ್ನು ಧರಿಸುತ್ತಾರೆ.
    • ಮಹಿಳೆಯರು ಹಿತ್ತಾಳೆಯ ಶಿರೋಭೂಷಣಗಳನ್ನು ಮತ್ತು ಭಾರವಾದ ಕಂಠಿಹಾರಗಳನ್ನು ಧರಿಸುತ್ತಾರೆ.
    • ವಾದ್ಯಗಳು:- ಕತ್ತಿಗೆಗೆ ತೂಗುಹಾಕಿಕೊಂಡ ಮರದ ಡೋಲುಗಳು ಲಯಬದ್ಧವಾದ ತಾಳವನ್ನು ಒದಗಿಸುತ್ತವೆ.
    • ಪ್ರದರ್ಶನ:- ಪುರುಷರು ಕಾಡೆಮ್ಮೆಯ ಆಕ್ರಮಣ ಮತ್ತು ಬೇಟೆಯಾಡುವಿಕೆಯನ್ನು ಅನುಕರಿಸಿದರೆ, ಮಹಿಳೆಯರು ಕೋಲುಗಳನ್ನು ಹಿಡಿದು, ಅವರೊಂದಿಗೆ ಸಮನ್ವಯ ಮತ್ತು ಆಚರಣಾತ್ಮಕ ರೀತಿಯಲ್ಲಿ ನೃತ್ಯ ಮಾಡುತ್ತಾರೆ.
    • ಈ ನೃತ್ಯವು ಪ್ರಕೃತಿ, ಬೇಟೆ ಮತ್ತು ಸಮುದಾಯ ಜೀವನವನ್ನು ಪ್ರತಿಬಿಂಬಿಸುತ್ತದೆ.
    • ವಿಧಿವಿಧಾನದ ಮಂತ್ರಗಳು ‘ಬುಧದೇವ್’ ಮತ್ತು ‘ದಂತೇಶ್ವರಿ ಮಾಯಿ’ಯಂತಹ ದೇವತೆಗಳನ್ನು ಸ್ತುತಿಸುತ್ತವೆ; ಇದು ಅವರ ಆಧ್ಯಾತ್ಮಿಕ ಪರಂಪರೆಯ ನಿರಂತರತೆಯನ್ನು ಬಲಪಡಿಸುತ್ತದೆ.

    “ಗೊನೋರ್ರಿಹಾ” (Gonorrhea) ಚಿಕಿತ್ಸೆ

    ಸಾಮಾನ್ಯ ಅಧ್ಯಯನ- 2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (FDA) ಗೊನೋರ್ರಿಹಾ ಚಿಕಿತ್ಸೆಗಾಗಿ, ಬಾಯಿಯ ಮೂಲಕ ಸೇವಿಸುವ ಎರಡು ಹೊಸ ಔಷಧಗಳಿಗೆ ಅನುಮೋದನೆ ನೀಡಿದೆ.

    “ಗೊನೋರ್ರಿಹಾ” ಸೋಂಕಿನ ಬಗ್ಗೆ:

    • ರೋಗಕಾರಕ:– ಇದು “ನೆಯಿಸ್ಸೇರಿಯಾ ಗೊನೋರ್ರಿಹಾ” ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ, ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಲೈಂಗಿಕವಾಗಿ ಹರಡುವ ಸೋಂಕಾಗಿದೆ.
    • ಕಳವಳ:- ಗೊನೋರ್ರಿಹಾ ವಿರುದ್ಧ ಆಂಟಿಮೈಕ್ರೊಬಿಯಲ್ ಪ್ರತಿರೋಧವು (ಔಷಧ ನಿರೋಧಕ ಶಕ್ತಿ) ಗಂಭೀರ ಮತ್ತು ಹೆಚ್ಚುತ್ತಿರುವ ಸಮಸ್ಯೆಯಾಗಿದೆ.
    • ಹರಡುವಿಕೆ:- ಗರ್ಭಿಣಿ ತಾಯಿಯಿಂದ ತನ್ನ ಮಗುವಿಗೆ ಗೊನೋರ್ರಿಹಾ ಹರಡುವ ಸಾಧ್ಯತೆ ಇರುತ್ತದೆ.
    • ರೋಗ ನಿರ್ಣಯ:- ಆಣ್ವಿಕ ಪರೀಕ್ಷೆಗಳು, ಗ್ರಾಮ್ ಸ್ಟೇನ್ ಮೈಕ್ರೋಸ್ಕೋಪಿ.

    ಪೊಂಡೂರು ಖಾದಿ

    ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ‘ಪೊಂಡೂರು ಖಾದಿ’ಗೆ ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಮಾನ್ಯತೆ ಲಭಿಸಿದೆ.

    “ಪೊಂಡೂರು ಖಾದಿ”ಯ ಬಗ್ಗೆ:

    • ‘ಪೊಂಡೂರು ಖಾದಿ’ಯು ಸ್ಥಳೀಯವಾಗಿ ಬೆಳೆಯುವ ಗಿಡ್ಡ ಎಳೆಯ, ಬೆಟ್ಟದ ತಳಿಯ, ಕೀಟ ನಿರೋಧಕ ಹತ್ತಿಯಿಂದ ಪ್ರಾಥಮಿಕವಾಗಿ ಉತ್ಪಾದಿಸಲಾದ ಕೈಮಗ್ಗದ ಬಟ್ಟೆಯಾಗಿದೆ.
    • ಈ ಹತ್ತಿಯು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳಿಗೆ ಅನುವು ಮಾಡಿಕೊಡುತ್ತದೆ; ಆ ಮೂಲಕ ಈ ಪ್ರದೇಶಕ್ಕೆ ಸಾಂಪ್ರದಾಯಿಕವಾದ ಸುಸ್ಥಿರ ಕೃಷಿ ಮತ್ತು ಪರಿಸರ ಸ್ನೇಹಿ ಉತ್ಪಾದನಾ ವಿಧಾನಗಳನ್ನು ಉತ್ತೇಜಿಸುತ್ತದೆ.

    ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಮಾನ್ಯತೆಯ ಬಗ್ಗೆ:

    • ಜಿಐ ಟ್ಯಾಗ್ ಮಾನ್ಯತೆಯು ನಿರ್ದಿಷ್ಟ ಭೌಗೋಳಿಕ ಸ್ಥಳ ಅಥವಾ ಮೂಲಗಳಿಗೆ (ಒಂದು ಪ್ರದೇಶ, ಪಟ್ಟಣ ಅಥವಾ ದೇಶ) ಸಂಬಂಧಿಸಿದ ಕೆಲವು ಉತ್ಪನ್ನಗಳಿಗೆ ನೀಡಲಾಗುವ ಹೆಸರು ಅಥವಾ ಚಿಹ್ನೆಯಾಗಿದೆ.
    • ವಿಶಿಷ್ಟ ಉತ್ಪನ್ನಗಳಿಗೆ ಒಂದು ಪ್ರಮಾಣೀಕರಣ:- ಜಿಐ ಟ್ಯಾಗ್ ಅನ್ನು, ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುವ ಅಥವಾ ತನ್ನ ಭೌಗೋಳಿಕ ಮೂಲದ ಕಾರಣದಿಂದಾಗಿಯೇ ನಿರ್ದಿಷ್ಟ ಖ್ಯಾತಿಯನ್ನು ಹೊಂದಿರುವ ಉತ್ಪನ್ನಕ್ಕೆ ನೀಡುವ ಪ್ರಮಾಣೀಕರಣವೆಂದು ಪರಿಗಣಿಸಬಹುದು.
    • ಮದ್ಯ (ವೈನ್) ಮತ್ತು ಮದ್ಯಪಾನೀಯಗಳು, ಆಹಾರ ಪದಾರ್ಥ, ಕೃಷಿ ಉತ್ಪನ್ನ, ಕರಕುಶಲ ವಸ್ತು ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಜಿಐ ಟ್ಯಾಗ್‌ಗಳನ್ನು ನೀಡಬಹುದು.
    • ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳ (TRIPS):– ಅಂತರರಾಷ್ಟ್ರೀಯ ಮಟ್ಟದಲ್ಲಿ, ಜಿಐ ಟ್ಯಾಗ್ ಅನ್ನು ವಿಶ್ವ ವಾಣಿಜ್ಯ ಸಂಸ್ಥೆಯ (WTO) “ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳ” (TRIPS) ಒಪ್ಪಂದದ ಮೂಲಕ ನಿಯಂತ್ರಿಸಲಾಗುತ್ತದೆ.
    • ಸರಕುಗಳ ಭೌಗೋಳಿಕ ಸೂಚ್ಯಂಕಗಳ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999:- ಭಾರತದಲ್ಲಿ, ಸೆಪ್ಟೆಂಬರ್ 2003 ರಲ್ಲಿ ಜಾರಿಗೆ ಬಂದ ‘ಸರಕುಗಳ ಭೌಗೋಳಿಕ ಸೂಚ್ಯಂಕಗಳ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999’ ರ ಅಡಿಯಲ್ಲಿ ಭೌಗೋಳಿಕ ಸೂಚ್ಯಂಕಗಳ ನೋಂದಣಿಯನ್ನು ನಿರ್ವಹಿಸಲಾಗುತ್ತದೆ.
    • ಡಾರ್ಜಿಲಿಂಗ್ ಚಹಾ:- ಇದು 2004-05 ರಲ್ಲಿ ಜಿಐ ಟ್ಯಾಗ್ ಪಡೆದ ಭಾರತದ ಮೊದಲ ಉತ್ಪನ್ನವಾಗಿದೆ.

    ಮಹಾಕ್ರೈಮ್‌ಒಎಸ್ ಎಐ (MahaCrimeOS AI)

    ಸಾಮಾನ್ಯ ಅಧ್ಯಯನ -2/ಆಡಳಿತ; ಸಾಮಾನ್ಯ ಅಧ್ಯಯನ-3/ಕೃತಕ ಬುದ್ಧಿಮತ್ತೆ

    ಇದೀಗ ಸುದ್ದಿಯಲ್ಲಿದೆ:

    • ಮೈಕ್ರೋಸಾಫ್ಟ್ ಅಧ್ಯಕ್ಷ ಸತ್ಯ ನಾದೆಲ್ಲಾ ಅವರು, ಮಹಾರಾಷ್ಟ್ರದ ಪೊಲೀಸರಿಗಾಗಿ ಅಭಿವೃದ್ಧಿಪಡಿಸಲಾದ ಎಐ-ಚಾಲಿತ ತನಿಖಾ ವೇದಿಕೆಯಾದ ‘ಮಹಾಕ್ರೈಮ್‌ಒಎಸ್ ಎಐ’ ಅನ್ನು ಜಾರಿಗೊಳಿಸುವುದಾಗಿ ಘೋಷಿಸಿದರು.

    “ಮಹಾಕ್ರೈಮ್‌ ಒಎಸ್ ಎಐ” ನ ಬಗ್ಗೆ:

    • ಜಂಟಿ ಅಭಿವೃದ್ಧಿ:- ಮೈಕ್ರೋಸಾಫ್ಟ್ ಮತ್ತು ಮಹಾರಾಷ್ಟ್ರ ಸರ್ಕಾರ ಹಾಗೂ ಅದರ ವಿಶೇಷ ‘ಎಐ ಪೊಲೀಸಿಂಗ್’  ಉಪಕ್ರಮವಾದ ‘ಮಾರ್ವೆಲ್’ (MARVEL – ವರ್ಧಿತ ಕಾನೂನು ಜಾರಿಗಾಗಿ ಮಹಾರಾಷ್ಟ್ರ ಸಂಶೋಧನೆ ಮತ್ತು ಕಣ್ಗಾವಲು ವ್ಯವಸ್ಥೆ) ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ.

    ಪ್ರಮುಖ ವೈಶಿಷ್ಟ್ಯಗಳು ಮತ್ತು ಕಾರ್ಯನಿರ್ವಹಣೆ:

    • ತ್ವರಿತವಾಗಿ ಡಿಜಿಟಲ್ ಪ್ರಕರಣ ದಾಖಲಾತಿ/ರಚಿಸಲು:- ಈ ವ್ಯವಸ್ಥೆಯು ತ್ವರಿತವಾಗಿ ‘ಡಿಜಿಟಲ್ ಪ್ರಕರಣದ ಕಡತಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ; ತನ್ಮೂಲಕ ಮಾನವ ಶ್ರಮವನ್ನು ಕಡಿಮೆ ಮಾಡುತ್ತದೆ.
    • ಬಹು-ಮಾದರಿ ದತ್ತಾಂಶ ಸಂಗ್ರಹಣೆ/ಹೊರತೆಗೆದುಕೊಳ್ಳುವಿಕೆ:– ಇದು ಪಿಡಿಎಫ್‌ಗಳು, ಧ್ವನಿಯ ಕಡತಗಳು, ಕೈಬರಹದ ಟಿಪ್ಪಣಿಗಳು ಅಥವಾ ಚಿತ್ರಗಳಂತಹ ವಿವಿಧ ಸ್ವರೂಪಗಳಲ್ಲಿನ ದೂರುಗಳನ್ನು ಸ್ವೀಕರಿಸಬಲ್ಲದು ಮತ್ತು ವಿಶ್ಲೇಷಣೆಗಾಗಿ ಸಂಬಂಧಿತ ದತ್ತಾಂಶವನ್ನು ಹೊರತೆಗೆಯಬಲ್ಲದು.
    • ಕೃತಕ ಬುದ್ಧಿಮತ್ತೆ (AI)-ಚಾಲಿತ ತನಿಖೆ:- ಎಐ-ಆಧಾರಿತ ‘ರಿಟ್ರೀವಲ್-ಆಗ್ಮೆಂಟೆಡ್ ಜನರೇಷನ್’ (RAG) ತಂತ್ರಜ್ಞಾನವನ್ನು ಬಳಸುವ ಮೂಲಕ, ಸಂಬಂಧಿತ ಪ್ರಕರಣಗಳನ್ನು ಪರಸ್ಪರ ಸಂಪರ್ಕಿಸಲು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ತ್ವರಿತವಾಗಿ ವಿಶ್ಲೇಷಿಸಲು ಇದು ತನಿಖಾಧಿಕಾರಿಗಳಿಗೆ ನೆರವಾಗುತ್ತದೆ.
    • ಕಾನೂನು ನೆರವು:- ಇದು ಭಾರತದ ಅಪರಾಧ ಕಾನೂನುಗಳನ್ನು ಆಧರಿಸಿ, ಸಂದರ್ಭೋಚಿತ ಕಾನೂನು ನೆರವು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ; ಈ ಮೂಲಕ ಕಾನೂನು ಅನುಸರಣೆ ಮತ್ತು ಪ್ರಕ್ರಿಯೆಗಳಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

    ಲೂನಾರ್‌ ಕ್ರೀಟ್ (Lunarcrete)

    ಸಾಮಾನ್ಯ ಅಧ್ಯಯನ -3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಚಂದ್ರನ ಮೇಲೆ ಸುಸ್ಥಿರ ಮತ್ತು ದೀರ್ಘಕಾಲೀಕ ವಸತಿ ತಾಣಗಳನ್ನು ನಿರ್ಮಿಸುವ ನಿಟ್ಟಿನಲ್ಲಿ, ಚಂದ್ರನ ಮೇಲ್ಮೈ ವಸ್ತುಗಳನ್ನು ಬಳಸಿಕೊಂಡು ಉತ್ಪಾದಿಸಲಾಗುವ ‘ಲೂನಾರ್‌ ಕ್ರೀಟ್’ ಎಂಬ ಕಾಂಕ್ರೀಟ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸುತ್ತಿದ್ದಾರೆ.

    ‘ಲೂನಾರ್‌ಕ್ರೀಟ್’ ನ ಬಗ್ಗೆ:

    • ‘ಲೂನಾರ್‌ಕ್ರೀಟ್’ ಎಂಬುದು ‘ಚಂದ್ರನ ಮೇಲೆ ತಯಾರಿಸಲಾದ ಕಾಂಕ್ರೀಟ್’ ಎನ್ನುವುದನ್ನು ಸೂಚಿಸುವ ಒಂದು ಸಾಮಾನ್ಯ ಪದವಾಗಿದೆ.
    • ಇದು ಭೂಮಿಯ ಮರಳು ಮತ್ತು ಜಲ್ಲಿಕಲ್ಲುಗಳ ಬದಲಿಗೆ, ಚಂದ್ರನ ಮಣ್ಣು (ರೆಗೊಲಿತ್) ನ್ನು ಬಳಸಿಕೊಂಡು ತಯಾರಿಸಲು ಉದ್ದೇಶಿಸಲಾದ ನಿರ್ಮಾಣದ ವಸ್ತುವಾಗಿದೆ.
    • ಉದ್ದೇಶ: ಭೂಮಿಯಿಂದ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಅಗತ್ಯವಿಲ್ಲದೆಯೇ, ಚಂದ್ರನ ಮೇಲೆ ವಸತಿ ತಾಣಗಳು, ಲ್ಯಾಂಡಿಂಗ್ ಪ್ಯಾಡ್‌ಗಳು ಮತ್ತು ರಸ್ತೆಗಳನ್ನು ನಿರ್ಮಿಸಲು ಅನುವು ಮಾಡಿಕೊಡುವ ಮೂಲಕ, ಇದು ‘ಸ್ಥಳೀಯ ಸಂಪನ್ಮೂಲ ಬಳಕೆ’ಗೆ (ISRU) ಬೆಂಬಲ ನೀಡುತ್ತದೆ.
  • “ಆಪರೇಷನ್ ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ | ಗಾಜಾ ಪ್ರದೇಶದ ಹೊಸ ಗಡಿಯನ್ನು ನಿರ್ದಿಷ್ಟಗೊಳಿಸುವ “ಹಳದಿ ರೇಖೆ” (Yellow Line) | ಭಾರತದ ಅಕ್ಕಿಯ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ | ಬ್ಲೂ ಕಾರ್ನರ್ ನೋಟಿಸ್ | ಭಾರತ್ 6ಜಿ ಮೈತ್ರಿಕೂಟ (B6GA) | ಆಫ್ರಿಕಾದ ಪೆಂಗ್ವಿನ್‌ಗಳು

    “ಆಪರೇಷನ್ ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ

    ಸಾಮಾನ್ಯ ಅಧ್ಯಯನ- 2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಕಂದಾಯ ಗುಪ್ತಚರ ನಿರ್ದೇಶನಾಲಯವು, “ಹಿಂಟರ್‌ಲ್ಯಾಂಡ್ ಬ್ರೂ” ಕಾರ್ಯಾಚರಣೆ ಎಂಬ ಸಂಕೇತನಾಮದ ತಂತ್ರಾತ್ಮಕ ಕಾರ್ಯಾಚರಣೆಯ ಮೂಲಕ, ಮಹಾರಾಷ್ಟ್ರದ ವಾರ್ಧಾದಲ್ಲಿ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಮೆಫೆಡ್ರೋನ್ ಉತ್ಪಾದನಾ ಘಟಕವನ್ನು ಯಶಸ್ವಿಯಾಗಿ ಭೇದಿಸಿದೆ.

    ಮೆಫೆಡ್ರೋನ್ ನ ಬಗ್ಗೆ:

      • ಇದನ್ನು ‘4-ಮೀಥೈಲ್‌ಮೆಥ್ ಕ್ಯಾಥಿನೋನ್’ (4-MMC) ಅಥವಾ ‘4-ಮೀಥೈಲ್ ಎಫೆಡ್ರೋನ್’ ಎಂದು ಕರೆಯಲಾಗುತ್ತದೆ.
      • ಇದನ್ನು ‘ಹೊಸ ಮನೋಕ್ರಿಯಾತ್ಮಕ ವಸ್ತು’ (‘ನ್ಯೂ ಸೈಕೋಆಕ್ಟಿವ್ ಸಬ್‌ಸ್ಟೆನ್ಸ್’ -NPS) ಎಂದು ವರ್ಗೀಕರಿಸಲಾಗಿದೆ.
    • ಎನ್‌ಡಿಪಿಎಸ್ (NDPS) ಕಾಯ್ದೆ, 1985ರ ಅಡಿಯಲ್ಲಿ ಮೆಫೆಡ್ರೋನ್ ಅನ್ನು ನಿಷೇಧಿಸಲಾಗಿದೆ.

    ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಚೌಕಟ್ಟು:

    • ನಶಾ ಮುಕ್ತ ಭಾರತ ಅಭಿಯಾನ (ಆಗಸ್ಟ್ 15, 2020).
    • ಮಾದಕ ದ್ರವ್ಯಗಳ ಬೇಡಿಕೆ ಕಡಿತದ ರಾಷ್ಟ್ರೀಯ ಕ್ರಿಯಾ ಯೋಜನೆ (NAPDDR).

    ಗಾಜಾ ಪ್ರದೇಶದ ಹೊಸ ಗಡಿಯನ್ನು ನಿರ್ದಿಷ್ಟಗೊಳಿಸುವ “ಹಳದಿ ರೇಖೆ” (Yellow Line)

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟ 2025ರ ಕದನ ವಿರಾಮ ಒಪ್ಪಂದದ ಹಂತ-1ರ ವೇಳೆ ಅಂಗೀಕರಿಸಲಾದ, ಸೇನಾ ಪಡೆಗಳ ತಾತ್ಕಾಲಿಕ ಹಿಂತೆಗೆತದ ರೇಖೆಯಾಗಿರುವ “ಹಳದಿ ರೇಖೆ”ಯನ್ನು, ಇಸ್ರೇಲ್ ಸೇನೆಯು “ಹೊಸ ಗಡಿ” ಎಂದು ವಿವರಿಸಿದೆ.

    “ಹಳದಿ ರೇಖೆ” (Yellow Line) ಯ ಬಗ್ಗೆ:

    • ‘ಹಳದಿ ರೇಖೆ’ಯು ಗಾಜಾ ಪಟ್ಟಿಯ ಒಳಭಾಗದಲ್ಲಿ ಗುರುತಿಸಲಾದ ಒಂದು ತಾತ್ಕಾಲಿಕ “ಸೇನೆಯ ಸೀಮಾ ನಿರ್ಣಯ ರೇಖೆ”ಯಾಗಿದೆ.
    • ಈ ರೇಖೆಯ ಪೂರ್ವಕ್ಕಿರುವ ಪ್ರದೇಶವು ಇಸ್ರೇಲ್‌ನ ನೇರ ಕಾರ್ಯಾಚರಣೆಯ ನಿಯಂತ್ರಣದಲ್ಲಿ ಮುಂದುವರಿಯುತ್ತದೆ.

    ಇಸ್ರೇಲ್ ನಿಯಂತ್ರಣದಲ್ಲಿರುವ ಪ್ರದೇಶ:

    • ಗಾಜಾದ ಅರ್ಧಕ್ಕಿಂತ ಹೆಚ್ಚು ಭಾಗ (ಶೇ. 53–58 ರಷ್ಟು) ಇಸ್ರೇಲ್‌ನ ನಿಯಂತ್ರಣದಲ್ಲಿ ಉಳಿದಿದೆ. ಇದು ಬಹುಪಾಲು ಕೃಷಿ ಭೂಮಿ ಮತ್ತು ಈಜಿಪ್ಟ್‌ನೊಂದಿಗಿನ “ರಫಾ ಗಡಿ ದಾಟುವ” ಪ್ರದೇಶವನ್ನು ಒಳಗೊಂಡಿದೆ.

    ಭಾರತದ ಅಕ್ಕಿಯ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ

    ಸಾಮಾನ್ಯ ಅಧ್ಯಯನ -3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ವ್ಯಾಪಾರದ ಮಾತುಕತೆಗಳ ಯಾವುದೇ ಪ್ರಮುಖ ಪ್ರಗತಿಯಿಲ್ಲದೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಅಮೇರಿಕಾದ ಅಧ್ಯಕ್ಷರು ಕೃಷಿ ಆಮದುಗಳ ಮೇಲೆ, ವಿಶೇಷವಾಗಿ ಭಾರತದಿಂದ ಆಮದಾಗುವ ಅಕ್ಕಿಯ ಮೇಲೆ ಹೊಸ ಸುಂಕಗಳನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಭಾರತದ ಅಕ್ಕಿ ರಫ್ತಿನ ಬಗ್ಗೆ:

    • ಅಕ್ಕಿ ಉತ್ಪಾದನೆಯಲ್ಲಿ ಚೀನಾ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿದ್ದು, ನಂತರದ ಸ್ಥಾನಗಳಲ್ಲಿ ಭಾರತ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ದೇಶಗಳಿವೆ.
    • ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ರಾಷ್ಟ್ರವಾಗಿದ್ದು, 2023ರ ಅವಧಿಯಲ್ಲಿ ಜಾಗತಿಕ ಅಕ್ಕಿ ರಫ್ತಿನಲ್ಲಿ 33% ರಷ್ಟು ಪಾಲನ್ನು ಹೊಂದಿತ್ತು.
    • ಭಾರತವು 179 ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತದೆ.

    ಅಕ್ಕಿಯ ಬಗ್ಗೆ ಪ್ರಮುಖ ಸಂಗತಿಗಳು ಮತ್ತು ಪರಿಸ್ಥಿತಿಗಳು:

    • ಪ್ರಾಥಮಿಕ ಪ್ರಧಾನ ಆಹಾರ:- ಭಾರತದ ಬಹುಪಾಲು ಜನಸಂಖ್ಯೆಗೆ ಅಕ್ಕಿಯು ಪ್ರಾಥಮಿಕ ಪ್ರಧಾನ ಆಹಾರವಾಗಿದೆ.
    • ಉತ್ಪಾದನೆಯಲ್ಲಿ ಮುಂಚೂಣಿ:- ಭಾರತವು ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವಾಗಿದೆ ಮತ್ತು ಜಾಗತಿಕವಾಗಿ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ.
    • ವಾಯುಗುಣದ ಪರಿಸ್ಥಿತಿಗಳು:- ಇದೊಂದು ಖಾರಿಫ್ (ಮುಂಗಾರು) ಬೆಳೆಯಾಗಿದ್ದು, ಇದಕ್ಕೆ ಉಷ್ಣ ಮತ್ತು ತೇವಾಂಶಯುಕ್ತ ವಾಯುಗುಣದ ಅಗತ್ಯವಿದೆ.
    • ತಾಪಮಾನ:- ಈ ಬೆಳೆಗೆ ಹೆಚ್ಚಿನ ತಾಪಮಾನದ ಅಗತ್ಯವಿದ್ದು, ಸಾಮಾನ್ಯವಾಗಿ 25°C ಗಿಂತ ಅಧಿಕ ಉಷ್ಣಾಂಶವಿರಬೇಕು.
    • ಮಳೆ:- ಇದಕ್ಕೆ ಅಧಿಕ ವಾರ್ಷಿಕ ಮಳೆಯ, ಸಾಮಾನ್ಯವಾಗಿ 100 ಸೆಂ .ಮೀ ಗಿಂತ ಹೆಚ್ಚು ಅಗತ್ಯವಿರುತ್ತದೆ. (ಸಾಮಾನ್ಯವಾಗಿ 150-300 ಸೆಂ .ಮೀ). ಪಂಜಾಬ್ ಮತ್ತು ಹರಿಯಾಣದಂತಹ ಕಡಿಮೆ ಮಳೆಬೀಳುವ ಪ್ರದೇಶಗಳಲ್ಲಿ ಇದನ್ನು ನೀರಾವರಿ ಸೌಲಭ್ಯದೊಂದಿಗೆ ಬೆಳೆಯಲಾಗುತ್ತದೆ.
    • ಮಣ್ಣು:- ನೀರನ್ನು ಹಿಡಿದಿಟ್ಟುಕೊಳ್ಳಲು ಸಾಮರ್ಥ್ಯವಿರುವ ಫಲವತ್ತಾದ ಜೇಡಿ ಮಣ್ಣು ಅಥವಾ ಮಿಶ್ರ (ಲೋಮಿ) ಮಣ್ಣಿನಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ. ನದಿ ಕಣಿವೆಗಳು, ಪ್ರವಾಹ ಬಯಲುಗಳು, ಮುಖಜ ಭೂಮಿಗಳು ಮತ್ತು ಕರಾವಳಿ ಮೈದಾನಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಪಂಜಾಬ್.
    • ಅಧಿಕ ಇಳುವರಿ ನೀಡುವ ರಾಜ್ಯಗಳು:- ಪಂಜಾಬ್, ತಮಿಳುನಾಡು ಮತ್ತು ಹರಿಯಾಣ.

    ಬ್ಲೂ ಕಾರ್ನರ್ ನೋಟಿಸ್

    ಸಾಮಾನ್ಯ ಅಧ್ಯಯನ- 2/ಅಂತರರಾಷ್ಟ್ರೀಯ ಸಂಬಂಧಗಳು/ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಗೋವಾದ ನೈಟ್‌ಕ್ಲಬ್ ಒಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ನೈಟ್‌ಕ್ಲಬ್ ಗಳ ಮಾಲೀಕರನ್ನು ಪತ್ತೆಹಚ್ಚಲುಇಂಟರ್‌ಪೋಲ್” ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.
    • ಇಂಟರ್‌ಪೋಲ್‌ನಿಂದ ಈ ನೋಟಿಸ್ ಜಾರಿಗೊಳಿಸುವಂತೆ ಕೋರಿ ಗೋವಾ ಪೊಲೀಸರು “ಕೇಂದ್ರೀಯ ತನಿಖಾ ದಳಕ್ಕೆ” (CBI) ಮನವಿ ಸಲ್ಲಿಸಿದ್ದರು.

    ಇಂಟರ್‌ಪೋಲ್ ನೋಟಿಸ್‌ಗಳ ವಿಧಗಳು:

    • ರೆಡ್ ನೋಟಿಸ್:- ವಿಚಾರಣೆಗೆ ಒಳಪಡಬೇಕಾದ ಅಥವಾ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳ ಇರುವಿಕೆಯ ಸ್ಥಳವನ್ನು ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ಇದನ್ನು ಹೊರಡಿಸಲಾಗುತ್ತದೆ.
    • ಯೆಲ್ಲೋ ನೋಟಿಸ್:- ಕಾಣೆಯಾದ ವ್ಯಕ್ತಿಗಳನ್ನು (ಸಾಮಾನ್ಯವಾಗಿ ಅಪ್ರಾಪ್ತ ವಯಸ್ಕರು) ಪತ್ತೆಹಚ್ಚಲು ಅಥವಾ ತಮ್ಮನ್ನು ತಾವು ಗುರುತಿಸಿಕೊಳ್ಳಲು ಅಸಮರ್ಥರಾದ ವ್ಯಕ್ತಿಗಳನ್ನು ಗುರುತಿಸಲು ನೆರವಾಗುವಂತೆ ಇದನ್ನು ಬಳಸಲಾಗುತ್ತದೆ.
    • ಬ್ಲೂ ನೋಟಿಸ್:- ಅಪರಾಧ ತನಿಖೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಗುರುತು, ಇರುವ ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಇದನ್ನು ನೀಡಲಾಗುತ್ತದೆ.
    • ಬ್ಲ್ಯಾಕ್ ನೋಟಿಸ್:ಗುರುತಿಸಲಾಗದ ಮೃತದೇಹಗಳ ಕುರಿತು ಮಾಹಿತಿಯನ್ನು ಕೋರಲು ಇದನ್ನು ಹೊರಡಿಸಲಾಗುತ್ತದೆ.
    • ಗ್ರೀನ್ ನೋಟಿಸ್:- ಸಾರ್ವಜನಿಕ ಸುರಕ್ಷತೆಗೆ ಸಂಭವನೀಯ ಬೆದರಿಕೆ ಎಂದು ಪರಿಗಣಿಸಲಾದ ವ್ಯಕ್ತಿಯೊಬ್ಬರ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ಬಳಸಲಾಗುತ್ತದೆ.
    • ಆರೆಂಜ್ ನೋಟಿಸ್:- ಸಾರ್ವಜನಿಕ ಸುರಕ್ಷತೆಗೆ ಗಂಭೀರ ಮತ್ತು ಸನ್ನಿಹಿತ ಬೆದರಿಕೆಯನ್ನು ಒಡ್ಡುವ ಘಟನೆ, ವ್ಯಕ್ತಿ, ವಸ್ತು ಅಥವಾ ಪ್ರಕ್ರಿಯೆಯ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ಹೊರಡಿಸಲಾಗುತ್ತದೆ.
    • ಪರ್ಪಲ್ ನೋಟಿಸ್:ಅಪರಾಧಿಗಳು ಬಳಸುವ ಕಾರ್ಯವಿಧಾನ, ವಸ್ತುಗಳು, ಸಾಧನಗಳು ಮತ್ತು ಮರೆಮಾಚುವ ವಿಧಾನಗಳ ಕುರಿತು ಮಾಹಿತಿಯನ್ನು ಕೋರಲು ಅಥವಾ ಒದಗಿಸಲು ಇದನ್ನು ಬಳಸಲಾಗುತ್ತದೆ.
    • ಇಂಟರ್‌ಪೋಲ್–ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ನೋಟಿಸ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಗಳಿಗೆ  ಒಳಪಟ್ಟಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗಾಗಿ ಇದನ್ನು ನೀಡಲಾಗುತ್ತದೆ.

    ಭಾರತ್ 6ಜಿ ಮೈತ್ರಿಕೂಟ (B6GA)

    ಸಾಮಾನ್ಯ ಅಧ್ಯಯನ- 3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸಂವಹನ ಸಚಿವರು, ‘ಭಾರತ್ 6ಜಿ ಮಿಷನ್’ ಅಡಿಯಲ್ಲಿನ ಸರ್ವೋಚ್ಚ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು ಹಾಗೂ ಭಾರತ್ 6ಜಿ ಮೈತ್ರಿಕೂಟ (B6GA) ದ ಪ್ರಗತಿಯನ್ನು ಪರಿಶೀಲಿಸಿದರು.

    ಭಾರತ್ 6ಜಿ ಮೈತ್ರಿಕೂಟದ ಬಗ್ಗೆ:

    • ಇದು ‘ಭಾರತ್ 6ಜಿ ವಿಷನ್’ನ ಅನುಷ್ಠಾನದ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. 2030ರ ವೇಳೆಗೆ 6ಜಿ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸಲು ಮಾರ್ಚ್ 2023ರಲ್ಲಿ ಇದನ್ನು ಅನಾವರಣಗೊಳಿಸಲಾಯಿತು.

    6ಜಿ ತಂತ್ರಜ್ಞಾನದ ಕುರಿತು:

    • 6ಜಿ ತಂತ್ರಜ್ಞಾನವು ನಿಸ್ತಂತು (ವೈರ್‌ಲೆಸ್) ಸಂವಹನ ತಂತ್ರಜ್ಞಾನದ ಮುಂದಿನ ಬೆಳವಣಿಗೆಯನ್ನು  ಪ್ರತಿನಿಧಿಸುತ್ತದೆ. ಇದು ಮೊಬೈಲ್ ನೆಟ್‌ವರ್ಕ್‌ಗಳ ಆರನೇ ತಲೆಮಾರಾಗಿದ್ದು, 5ಜಿಯ ನಂತರದ ತಂತ್ರಜ್ಞಾನವಾಗಿದೆ.
    • 6ಜಿ ತಂತ್ರಜ್ಞಾನವು ಪ್ರತಿ ಸೆಕೆಂಡಿಗೆ 1 ಟೆರಾಬಿಟ್  ಗರಿಷ್ಠ ಡೇಟಾ ದರಗಳನ್ನು ಒದಗಿಸಲಿದೆ. 10 Gbps ವೇಗವನ್ನು ನೀಡುವ 5ಜಿಗಿಂತ ಇದು ಸುಮಾರು 100 ಪಟ್ಟು ಹೆಚ್ಚು ವೇಗವಾಗಿರುತ್ತದೆ.
    • 6ಜಿ ತಂತ್ರಜ್ಞಾನವು 5ಜಿಯ 1 ಮಿಲಿಸೆಕೆಂಡ್‌ಗೆ ಹೋಲಿಸಿದರೆ  0.1 ಮಿಲಿಸೆಕೆಂಡ್‌ಗಳ ‘ಅಲ್ಟ್ರಾ-ಲೋ ಲೇಟೆನ್ಸಿ’ಯನ್ನು (ಅತ್ಯಲ್ಪ ವಿಳಂಬ) ಸಾಧಿಸಲಿದೆ.

    ಆಫ್ರಿಕಾದ ಪೆಂಗ್ವಿನ್‌ಗಳು

    ಸಾಮಾನ್ಯ ಅಧ್ಯಯನ- 3/ಪರಿಸರ; ಸುದ್ದಿಯಲ್ಲಿರುವ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ: 

    • ದಕ್ಷಿಣ ಆಫ್ರಿಕಾದಲ್ಲಿ ಸಾರ್ಡೀನ್ ಮೀನುಗಳ ಅತಿಯಾದ ಮೀನುಗಾರಿಕೆಯಿಂದಾಗಿ, 2004 ರಿಂದ 2011ರ ನಡುವೆ, ವಿಶೇಷವಾಗಿ ಡಾಸೆನ್ ಮತ್ತು ರಾಬೆನ್ ದ್ವೀಪಗಳ ಸುತ್ತಮುತ್ತ, 60,000ಕ್ಕೂ ಹೆಚ್ಚು ಆಫ್ರಿಕಾದ ಪೆಂಗ್ವಿನ್‌ಗಳು ಸಾವನ್ನಪ್ಪಿವೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ.

    ಆಫ್ರಿಕಾದ ಪೆಂಗ್ವಿನ್‌ಗಳ ಬಗ್ಗೆ:

    • ವೈಜ್ಞಾನಿಕ ಹೆಸರು: ಸ್ಫೆನಿಸ್ಕಸ್ ಡೆಮರ್ಸಸ್.
    • ಇವು ಅತ್ಯಂತ ಚಿಕ್ಕ ಪೆಂಗ್ವಿನ್ ಪ್ರಭೇದಗಳಲ್ಲಿ ಒಂದಾಗಿದ್ದು, ವೇಗವಾಗಿ ಈಜುವ ಸಾಮರ್ಥ್ಯ ಹೊಂದಿವೆ. ಇವು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಕರಾವಳಿ ತೀರಗಳಲ್ಲಿ ವಾಸಿಸುತ್ತವೆ.
    • ಅಂಟಾರ್ಕ್ಟಿಕ್ ಪೆಂಗ್ವಿನ್‌ಗಳಿಗಿಂತ ಭಿನ್ನವಾಗಿ, ಇವು ಮಂಜುಗಡ್ಡೆಯ ಮೇಲೆ ವಾಸಿಸದೆ, ಮರಳು ತುಂಬಿದ ಕಡಲತೀರಗಳು ಮತ್ತು ಕಲ್ಲಿನ ದಡಗಳಲ್ಲಿ ವಾಸಿಸುತ್ತವೆ.
    • ಸ್ವರೂಪ: ದೇಹದ ಉಷ್ಣತೆಯನ್ನು ನಿಯಂತ್ರಿಸಲು ಕಣ್ಣುಗಳ ಮೇಲೆ ಗುಲಾಬಿ ಬಣ್ಣದ ಬೋಳು ಕಲೆ ಅಥವಾ ಚರ್ಮದ ಭಾಗವನ್ನು ಹೊಂದಿರುತ್ತವೆ. ಮಾನವರ ಬೆರಳಚ್ಚುಗಳಂತೆ, ಪ್ರತಿ ಪೆಂಗ್ವಿನ್ ತನ್ನ ಎದೆಯ ಮೇಲೆ ವಿಶಿಷ್ಟವಾದ ಚುಕ್ಕೆಗಳ ವಿನ್ಯಾಸವನ್ನು ಹೊಂದಿರುತ್ತದೆ.
    • IUCN ಕೆಂಪುಪಟ್ಟಿ 2024:- ‘ತೀವ್ರವಾಗಿ ಅಳಿವಿನಂಚಿನಲ್ಲಿರುವ’ (CR).

    ನಿಮಗಿದು ತಿಳಿದಿದೆಯೇ? 

    • ಜಾಗತಿಕವಾಗಿ 18 ಪೆಂಗ್ವಿನ್ ಪ್ರಭೇದಗಳಿವೆ — ಇವುಗಳಲ್ಲಿ ರಾಜ, ಚಕ್ರವರ್ತಿ ಮತ್ತು ರಾಕ್‌ಹಾಪ್ಪರ್ ಪೆಂಗ್ವಿನ್‌ಗಳು ಅತ್ಯಂತ ಚಿರ ಪರಿಚಿತವಾಗಿವೆ.
  • ವಂದೇ ಮಾತರಂಗೆ 150 ವರ್ಷಗಳು | ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ | IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ | ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) | ಸಿ. ರಾಜಗೋಪಾಲಾಚಾರಿ | ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ

    ವಂದೇ ಮಾತರಂಗೆ 150 ವರ್ಷಗಳು

    ಸಾಮಾನ್ಯ ಅಧ್ಯಯನ -1 / ಆಧುನಿಕ ಇತಿಹಾಸ

    ಇದೀಗ ಸುದ್ದಿಯಲ್ಲಿದೆ: 

    • ಭಾರತವು ತನ್ನ ರಾಷ್ಟ್ರೀಯ ಹಾಡು (National Song) ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

    ‘ವಂದೇ ಮಾತರಂ’ ಹಾಡಿನ ಐತಿಹಾಸಿಕ ಹಿನ್ನೆಲೆ:

    • ‘ವಂದೇ ಮಾತರಂ’ ಹಾಡನ್ನು “ಬಂಕಿಮಚಂದ್ರ ಚಟ್ಟೋಪಾಧ್ಯಾಯರು” ಸಂಸ್ಕೃತದಲ್ಲಿ ತಮ್ಮ 1882ರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲು ಪ್ರಕಟಿಸಲಾಯಿತು.
    • ರವೀಂದ್ರನಾಥ ಟ್ಯಾಗೋರ್ ಅವರು 1896ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಿದರು, ಇದು ಈ ಹಾಡಿಗೆ ರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು.
    • ಈ ಹಾಡು ಮಾತೃಭೂಮಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಬಣ್ಣಿಸುತ್ತದೆ ಹಾಗೂ ಭಾರತದ ಜಾಗೃತವಾಗುತ್ತಿರುವ ರಾಷ್ಟ್ರೀಯ ಪ್ರಜ್ಞೆಗೆ ಕಾವ್ಯಾತ್ಮಕ ಧ್ವನಿಯನ್ನು ನೀಡಿತು.

    ರಾಷ್ಟ್ರೀಯ ಪ್ರಜ್ಞೆಯ ಉದಯ:

    • 1905ರ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ, ‘ವಂದೇ ಮಾತರಂ’ ನಾಗರಿಕ ಪ್ರತಿರೋಧದ ಗೀತೆ ಅಥವಾ ಮಂತ್ರವಾಗಿ ಹೊರಹೊಮ್ಮಿತು.
    • ‘ವಂದೇ ಮಾತರಂ’ ಅನ್ನು ರಾಜಕೀಯ ಘೋಷಣೆಯಾಗಿ 1905ರ ಆಗಸ್ಟ್ 7 ರಂದು ಪ್ರಪ್ರಥಮ ಬಾರಿಗೆ ಬಳಸಲಾಯಿತು.
    • ಗಲ್ಲುಶಿಕ್ಷೆಯನ್ನು ಎದುರಿಸುತ್ತಿದ್ದ ಅನೇಕ ಯುವ ಕ್ರಾಂತಿಕಾರಿಗಳಿಗೆ, ಹುತಾತ್ಮರಾಗುವ ಮುನ್ನ ‘ವಂದೇ ಮಾತರಂ’ ಎಂಬುದು ಕೊನೆಯ ಉದ್ಘೋಷವಾಗಿತ್ತು; ಇದು ಈ ಹಾಡನ್ನು ತ್ಯಾಗದ ಸಂಕೇತವನ್ನಾಗಿ ಪರಿವರ್ತಿಸಿತು.
    • 1907ರಲ್ಲಿ, ಮೇಡಂ ಭಿಕಾಜಿ ಕಾಮಾ ಅವರು ಬರ್ಲಿನ್‌ನ ಸ್ಟಟ್‌ಗಾರ್ಟ್‌ನಲ್ಲಿ ಭಾರತದ ಹೊರಗೆ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಆ ಧ್ವಜದ ಮೇಲೆ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು.
    • ಮಾತೃಭೂಮಿಯ ಪರಿಕಲ್ಪನೆಯನ್ನು ಒಂದು ಧ್ಯೇಯ ಮತ್ತು ಧಾರ್ಮಿಕ ಭಾವನೆಯಾಗಿ ಉತ್ತೇಜಿಸಲು, 1905ರ ಅಕ್ಟೋಬರ್‌ನಲ್ಲಿ ಉತ್ತರ ಕಲ್ಕತ್ತಾದಲ್ಲಿ ‘ಬಂದೇ ಮಾತರಂ ಸಂಪ್ರದಾಯ’ವನ್ನು ಸ್ಥಾಪಿಸಲಾಯಿತು.
    • 1906ರಲ್ಲಿ, ಬಿಪಿನ್ ಚಂದ್ರ ಪಾಲ್ ಅವರ ಸಂಪಾದಕತ್ವದಲ್ಲಿ ‘ಬಂದೇ ಮಾತರಂ’ ಎಂಬ ಶೀರ್ಷಿಕೆಯ ಇಂಗ್ಲಿಷ್ ದಿನಪತ್ರಿಕೆಯನ್ನು ಪ್ರಾರಂಭಿಸಲಾಯಿತು; ನಂತರ ಅರವಿಂದೋ ಅವರು ಜಂಟಿ ಸಂಪಾದಕರಾಗಿ ಇದಕ್ಕೆ ಜೊತೆಯಾದರು.

    ರಾಷ್ಟ್ರೀಯ ಹಾಡು (National Song):

    • ಸ್ವಾತಂತ್ರ್ಯದ ನಂತರ, ಸಂವಿಧಾನ ರಚನಾ ಸಭೆಯು ‘ವಂದೇ ಮಾತರಂ’ನ ಸ್ಥಾನಮಾನದ ಕುರಿತು ಚರ್ಚಿಸಿತು.
    • 1950ರ ಜನವರಿ 24ರಂದು, ಇದರ ಮೊದಲ ಎರಡು ಚರಣಗಳನ್ನು ಭಾರತದ ‘ರಾಷ್ಟ್ರೀಯ ಹಾಡು’ ಎಂದು ಅಂಗೀಕರಿಸಲಾಯಿತು.

    ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಬಗ್ಗೆ:

    • ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ಆಧುನಿಕ ಭಾರತೀಯ ಸಾಹಿತ್ಯದ ನಿರ್ಮಾತೃಗಳಲ್ಲಿ ಒಬ್ಬರಾಗಿದ್ದಾರೆ.
    • ಪ್ರಖ್ಯಾತ ಕಾದಂಬರಿಕಾರ, ಕವಿ ಮತ್ತು ಪ್ರಬಂಧಕಾರರಾಗಿದ್ದ ಇವರ ಕೊಡುಗೆಗಳು, ಆಧುನಿಕ ಬಂಗಾಳಿ ಗದ್ಯದ ಬೆಳವಣಿಗೆ ಮತ್ತು ಉದಯೋನ್ಮುಖ ಭಾರತೀಯ ರಾಷ್ಟ್ರೀಯತೆಯ ಅಭಿವ್ಯಕ್ತಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದವು.
    • ಕೃತಿಗಳು: ದುರ್ಗೇಶನಂದಿನಿ (1865), ಕಪಾಲಕುಂಡಲ (1866), ಆನಂದಮಠ (1882) ಮತ್ತು ದೇವಿ ಚೌಧುರಾಣಿ (1884). ಇತ್ಯಾದಿ

    ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ

    ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಥೈಲ್ಯಾಂಡ್ ದೇಶವು ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ನಡೆಸಿತು.

    ಹಿನ್ನೆಲೆ:

    • ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷವು 1907ರಲ್ಲಿ ಫ್ರೆಂಚರು ಕೈಗೊಂಡ ವಸಾಹತುಶಾಹಿ ಕಾಲದ ‘ಗಡಿ ನಿರ್ಣಯಗಳಿಗೆ’ ಸಂಬಂಧಿಸಿದ ದೀರ್ಘಕಾಲದ ಪ್ರಾದೇಶಿಕ ವಿವಾದವನ್ನು ಆಧರಿಸಿದೆ.
    • ಈ ವಿವಾದದ ಕೇಂದ್ರಬಿಂದು ‘ಪ್ರಿಹ ವಿಹಾರ್ ದೇವಾಲಯ’ವಾಗಿದೆ. ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದ 11-12ನೇ ಶತಮಾನದ ಈ ಖಮೇರ್ ದೇಗುಲದ ಮೇಲೆ ಎರಡೂ ರಾಷ್ಟ್ರಗಳು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿವೆ.
    • ಅಂತರರಾಷ್ಟ್ರೀಯ ನ್ಯಾಯಾಲಯವು (ICJ) 1962ರಲ್ಲಿ (ಮತ್ತು 2013ರಲ್ಲಿ ಮರುದೃಢೀಕರಿಸಿ), ಕಾಂಬೋಡಿಯಾದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದೆ. ಆದಾಗ್ಯೂ, ಥೈಲ್ಯಾಂಡ್ ಈ ತೀರ್ಪುಗಳನ್ನು ತಿರಸ್ಕರಿಸಿದ್ದು, ಈ ಪ್ರದೇಶವು ತೀವ್ರವಾಗಿ ಸೈನ್ಯದ ನಿಯಂತ್ರಣಕ್ಕೆ ಒಳಪಡಿಸಲಾಗಿದೆ.

    IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ

    ಸಾಮಾನ್ಯ ಅಧ್ಯಯನ- 3/ಅರ್ಥವ್ಯವಸ್ಥೆ

    ಇದೀಗ ಸುದ್ದಿಯಲ್ಲಿದೆ: 

    • ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೂನ್ 2025 ರ ತನ್ನ “ಬೆಳೆಯುತ್ತಿರುವ ಚಿಲ್ಲರೆ ಡಿಜಿಟಲ್ ಪಾವತಿಗಳ (ಪರಸ್ಪರ ಕಾರ್ಯಸಾಧ್ಯತೆಯ ಮೌಲ್ಯ)” ವರದಿಯಲ್ಲಿ, ವಹಿವಾಟಿನ ಪ್ರಮಾಣದ ಆಧಾರದ ಮೇಲೆ ‘ಏಕೀಕೃತ ಪಾವತಿ ವ್ಯವಸ್ಥೆ’ (UPI) ಯನ್ನು ವಿಶ್ವದ ಅತಿದೊಡ್ಡ ‘ಚಿಲ್ಲರೆ ತ್ವರಿತ ಪಾವತಿ ವ್ಯವಸ್ಥೆ’ ಎಂದು ಗುರುತಿಸಿದೆ.

    ಏಕೀಕೃತ ಪಾವತಿ ವ್ಯವಸ್ಥೆ (UPI) ಯ ಬಗ್ಗೆ: 

    • ಆರಂಭ: UPI ಅನ್ನು ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) 2016 ರಲ್ಲಿ ವಿನ್ಯಾಸಗೊಳಿಸಿ, ಜಾರಿಗೆ ತಂದಿತು.
    • ಉದ್ದೇಶ: ಇದೊಂದು ಏಕೀಕೃತ ವ್ಯವಸ್ಥೆಯಾಗಿದ್ದು, ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ (ಯಾವುದೇ ಪಾಲ್ಗೊಳ್ಳುವ ಬ್ಯಾಂಕ್‌ನ) ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದು ವಿವಿಧ ಬ್ಯಾಂಕಿಂಗ್ ವೈಶಿಷ್ಟ್ಯಗಳು, ಸುಗಮ ಹಣ ವರ್ಗಾವಣೆ ಮತ್ತು ವ್ಯಾಪಾರ ಪಾವತಿ  ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ.
    • ಕಾರ್ಯನಿರ್ವಹಿಸುತ್ತಿರುವ ಅಥವಾ ಯೋಜಿತ ‘ಪರಸ್ಪರ ಕಾರ್ಯಸಾಧ್ಯತೆ’ಯನ್ನು ಹೊಂದಿರುವ ದೇಶಗಳು: ಸಿಂಗಾಪುರ (PayNow), ಯುಎಇ, ಫ್ರಾನ್ಸ್, ನೇಪಾಳ, ಭೂತಾನ್, ಮಾರಿಷಸ್, ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಇತರೆ.

    ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ದ ಬಗ್ಗೆ:

    • ಸ್ಥಾಪನೆ: ಇದು ಭಾರತದಲ್ಲಿನ ಚಿಲ್ಲರೆ ಪಾವತಿಗಳ ಕಾರ್ಯಾವನ್ನು ನಿರ್ವಹಿಸುವ ಒಂದು ‘ಸರ್ವೋಚ್ಚ (ಪ್ರಧಾನ) ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ.
    • ಸ್ಥಾಪಿಸಿದವರು: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಜಂಟಿಯಾಗಿ ಇದನ್ನು ಸ್ಥಾಪಿಸಿವೆ.
    • ಇದನ್ನು ‘ಪಾವತಿ ಮತ್ತು ನಿವಾರಣ ವ್ಯವಸ್ಥೆಗಳ ಕಾಯ್ದೆ, 2007’ ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ.

    NPCI ನ ಉತ್ಪನ್ನಗಳು: 

    • ರುಪೇ (RuPay)
    • ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)
    • ಭಾರತ್ ಇಂಟರ್‌ಫೇಸ್ ಫಾರ್ ಮನಿ (BHIM)
    • ಏಕೀಕೃತ ಪಾವತಿ ವ್ಯವಸ್ಥೆ (UPI)
    • ಭಾರತ್ ಬಿಲ್ ಪಾವತಿ ವ್ಯವಸ್ಥೆ

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA)

    ಸಾಮಾನ್ಯ ಅಧ್ಯಯನ – 3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA) ದ  ಅಡಿಯಲ್ಲಿನ ‘ದೊಡ್ಡ ಬೆಕ್ಕುಗಳ ಸಂರಕ್ಷಣೆಗಾಗಿ ಸಹಯೋಗದ ಉಪಕ್ರಮ’ದ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಮಾತನಾಡಿದರು.

    ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

    • ಪ್ರಧಾನ ಕಚೇರಿ: ಭಾರತ.
    • ಉದ್ದೇಶ : ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
    • ಆರಂಭ : 2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
    • ಗುರಿ:- ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.

    ಸದಸ್ಯ ರಾಷ್ಟ್ರಗಳು:- ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ.

    ದೊಡ್ಡ ಬೆಕ್ಕುಗಳು 

    ದೈಹಿಕ ನೋಟ

    IUCN ಸ್ಥಿತಿಗತಿ

    CITES ಸ್ಥಿತಿಗತಿ

    ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

    ಹುಲಿ (ಪ್ಯಾಂಥೆರಾ ಟೈಗ್ರಿಸ್)

    ಅಳಿವಿನಂಚಿನಲ್ಲಿರುವ (EN)

    ಅನುಬಂಧ I

    ಅನುಸೂಚಿ 1

    ಸಿಂಹ (ಪ್ಯಾಂಥೆರಾ ಲಿಯೋ)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚಿರತೆ (ಪ್ಯಾಂಥೆರಾ ಪಾರ್ಡಸ್)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಚೀತಾ (ಅಸಿನೋನಿಕ್ಸ್ ಜುಬಾಟಸ್)

    ದುರ್ಬಲ (VU)

    ಅನುಬಂಧ I

    ಅನುಸೂಚಿ 1

    ಜಾಗ್ವಾರ್ (ಪ್ಯಾಂಥೆರಾ ಓಂಕಾ)

    ಬಹುತೇಕ ಅಳಿವಿನಂಚಿನಲ್ಲಿರುವ (NT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ

    ಪೂಮಾ (ಪೂಮಾ ಕಾನ್ಕಲರ್)

    ಕನಿಷ್ಠ ಕಾಳಜಿ (LT)

    ಅನುಬಂಧ I

    ಭಾರತದಲ್ಲಿ ಕಂಡುಬರುವುದಿಲ್ಲ

    ಸಿ. ರಾಜಗೋಪಾಲಾಚಾರಿ

    ಸಾಮಾನ್ಯ ಅಧ್ಯಯನ-1/ಇತಿಹಾಸ

    ಇದೀಗ ಸುದ್ದಿಯಲ್ಲಿ: 

    • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ‘ರಾಜಾಜಿ’ ಎಂದೇ ಜನಪ್ರಿಯರಾಗಿದ್ದ ಸಿ. ರಾಜಗೋಪಾಲಾಚಾರಿ ಅವರ ಜನ್ಮ ದಿನವಾದ ಡಿಸೆಂಬರ್ 10 ರಂದು ಅವರಿಗೆ ಗೌರವ ನಮನ ಸಲ್ಲಿಸಿದರು.

    ಸಿ. ರಾಜಗೋಪಾಲಾಚಾರಿ ಅವರ ಬಗ್ಗೆ:

    ಆರಂಭಿಕ ಜೀವನ ಮತ್ತು ಶಿಕ್ಷಣ:

    • ಇವರು ಮಹಾತ್ಮ ಗಾಂಧೀಜಿಯವರ ಆಪ್ತ ಸಹವರ್ತಿಯಾಗಿದ್ದರು.
    • ಕಾನೂನು ಪದವಿಯನ್ನು (1899) ಪೂರೈಸಿ, ಸೇಲಂನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
    • ಲಾರ್ಡ್ ಕರ್ಜನ್‌ನ 1905ರ ಬಂಗಾಳ ವಿಭಜನೆ ನೀತಿ ಮತ್ತು ತಿಲಕರ “ಸ್ವರಾಜ್ಯ”ದ ಕರೆಯು ಇವರ ಆರಂಭಿಕ ರಾಜಕೀಯ ಪ್ರಜ್ಞೆಯನ್ನು ರೂಪಿಸಿತು.

    ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು:

      • 1919ರಲ್ಲಿ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದ ರಾಜಗೋಪಾಲಾಚಾರಿ ಅವರು, ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು, ಅಸಹಕಾರ ಚಳವಳಿ, ವೈಕೋಮ್ ಸತ್ಯಾಗ್ರಹ ಮತ್ತು ನಾಗರಿಕ ಅಸಹಕಾರ ಚಳುವಳಿ ಸೇರಿದಂತೆ ಹಲವು ಪ್ರಮುಖ ಹೋರಾಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
    • ಗಾಂಧೀಜಿಯವರ ದಂಡಿ ಯಾತ್ರೆಗೆ ಸಮಾಂತರವಾಗಿ ಮದ್ರಾಸ್ ಪ್ರಾಂತ್ಯದಲ್ಲಿ 1930ರ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದರು.
    • “ಭಾರತ ಬಿಟ್ಟು ತೊಲಗಿ” ಚಳುವಳಿಯ ನಂತರ, ಪಾಕಿಸ್ತಾನದ ವಿಷಯವಾಗಿ ಮುಸ್ಲಿಂ ಲೀಗ್‌ನೊಂದಿಗೆ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟನ್ನು ಪರಿಹರಿಸಲು ಸಿ.ಆರ್. ಸೂತ್ರವನ್ನು ಪ್ರಸ್ತಾಪಿಸುವ “ದಿ ವೇ ಔಟ್” ಕೃತಿಯನ್ನು ಪ್ರಕಟಿಸಿದರು.

    ಸ್ವಾತಂತ್ರ್ಯಾ ನಂತರದ ಕೊಡುಗೆಗಳು:

    • ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡರು ಮತ್ತು ತದನಂತರ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ (1947–1950) ಆಗಿ ಸೇವೆ ಸಲ್ಲಿಸಿದರು.
    • ಭಾರತದ ಜಾತ್ಯತೀತ ಸ್ವರೂಪವನ್ನು ಕಾಪಾಡಲು ಮತ್ತು ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರಿಸಲು ಶ್ರಮಿಸಿದರು.
    • ಸರ್ದಾರ್ ಪಟೇಲ್ ಅವರ ನಿಧನದ ನಂತರ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು; ರಾಷ್ಟ್ರೀಯ ಏಕೀಕರಣ ಮತ್ತು ಮೊದಲ ಪಂಚವಾರ್ಷಿಕ ಯೋಜನೆ ಸೇರಿದಂತೆ ದೇಶದ ಆರಂಭಿಕ ಯೋಜನಾ ಪ್ರಕ್ರಿಯೆಗಳಿಗೆ ಮಹತ್ವದ ಕೊಡುಗೆ ನೀಡಿದರು.
    • ‘ಭಾರತ ರತ್ನ’:- ರಾಜಕೀಯ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಅನನ್ಯ ಕೊಡುಗೆಗಳಿಗಾಗಿ ಇವರಿಗೆ 1954ರಲ್ಲಿ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.

    ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ

    ಸಾಮಾನ್ಯ ಅಧ್ಯಯನ-2/ಆಡಳಿತ + ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದರು.

    ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದ ಬಗ್ಗೆ:

    • ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನವು ಒಂದು ಮಹತ್ವಾಕಾಂಕ್ಷೆಯ ಉಪಕ್ರಮವಾಗಿದ್ದು, ಅಕ್ಟೋಬರ್ 2025ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
    • ನಾಗರಿಕರು ತಮ್ಮ ಹಕ್ಕಿನ ಸ್ವತ್ತುಗಳನ್ನು ಮರುಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಗುರಿ:- ಹಕ್ಕು ಕೋರದ ಠೇವಣಿಗಳು, ವಿಮಾ ಮೊತ್ತಗಳು, ಲಾಭಾಂಶಗಳು ಮತ್ತು ಇತರ ಹಣಕಾಸಿನ ಸ್ವತ್ತುಗಳನ್ನು ಮರುಪಡೆಯಲು ಜನರಿಗೆ ನೆರವಾಗುವ ಗುರಿಯನ್ನು ಇದು ಹೊಂದಿದೆ.
    • ಮಹತ್ವ:- ಇದು ವ್ಯಕ್ತಿಗಳಿಗೆ ತಮ್ಮ ಮರೆತುಹೋದ ಹಣಕಾಸಿನ ಸ್ವತ್ತುಗಳನ್ನು, ಬಳಸಬಹುದಾದ ನಿಧಿಗಳನ್ನಾಗಿ ಪರಿವರ್ತಿಸಲು ಒಂದು ಅವಕಾಶವನ್ನು ಕಲ್ಪಿಸುತ್ತದೆ.

    ಇದು ನಿಮಗೆ ತಿಳಿದಿದೆಯೇ?

    • ಪ್ರಸ್ತುತವಾಗಿ, ಭಾರತೀಯ ಬ್ಯಾಂಕುಗಳು ಸುಮಾರು ₹78,000 ಕೋಟಿ ಮೊತ್ತದ ಹಕ್ಕು ಕೋರದ ಠೇವಣಿಗಳನ್ನು ಹೊಂದಿವೆ.
    • ವಿಮಾ ಕಂಪನಿಗಳಲ್ಲಿ ಸುಮಾರು ₹14,000 ಕೋಟಿ, ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಸುಮಾರು ₹3,000 ಕೋಟಿ ಹಾಗೂ ಹಕ್ಕು ಕೋರದ ಲಾಭಾಂಶಗಳ ಮೊತ್ತವು ಸ್ಥೂಲವಾಗಿ ₹9,000 ಕೋಟಿಯಷ್ಟಿದೆ.

    ವಿವಿಧ ಉಪಕ್ರಮಗಳು

    ನಿಧಿಗಳ ಸುಲಭ ಪತ್ತೆ ಮತ್ತು ಹಕ್ಕು ಕೋರುವಿಕೆಯನ್ನು ಸಕ್ರಿಯಗೊಳಿಸಲು ಈ ಕೆಳಗಿನ ಮೀಸಲಾದ ಆನ್‌ಲೈನ್ ಪೋರ್ಟಲ್‌ಗಳನ್ನು ರಚಿಸಲಾಗಿದೆ:

    • ಹಕ್ಕು ಕೋರದ ಬ್ಯಾಂಕ್ ಠೇವಣಿಗಳಿಗಾಗಿ ಆರ್‌ಬಿಐ ನ ಉದ್ಗಮ್ ಪೋರ್ಟಲ್.
    • ಹಕ್ಕು ಕೋರದ ವಿಮಾ ಮೊತ್ತಗಳಿಗಾಗಿ ಐಆರ್‌ಡಿಎಐ ನ ಬಿಮಾ ಭರೋಸಾ ಪೋರ್ಟಲ್.
    • ಹಕ್ಕು ಕೋರದ ಮ್ಯೂಚುವಲ್ ಫಂಡ್ ಮೊತ್ತಗಳಿಗಾಗಿ ಸೆಬಿಯ ಮಿತ್ರ ಪೋರ್ಟಲ್.
    • ಪಾವತಿಯಾಗದ ಲಾಭಾಂಶಗಳು ಮತ್ತು ಹಕ್ಕು ಕೋರದ ಷೇರುಗಳಿಗಾಗಿ ಐಇಪಿಎಫ್‌ಎ ಪೋರ್ಟಲ್ (IEPFA Portal).

    ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸಿ, ದೇಶದಾದ್ಯಂತ 477 ಜಿಲ್ಲೆಗಳಲ್ಲಿ ಸೌಲಭ್ಯ ಶಿಬಿರಗಳನ್ನು ಆಯೋಜಿಸಲಾಗಿದೆ.

  • ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆ (TDF) | ರಫ್ತು ಉತ್ತೇಜನಾ ಗುರಿ (EPM)

    ತಂತ್ರಜ್ಞಾನ ಅಭಿವೃದ್ಧಿ ನಿಧಿ ಯೋಜನೆ (TDF)

    ಸಾಮಾನ್ಯ ಅಧ್ಯಯನ – 2/ಆಡಳಿತ; ಸಾಮಾನ್ಯ ಅಧ್ಯಯನ- 3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯು, ‘ತಂತ್ರಜ್ಞಾನ ಅಭಿವೃದ್ಧಿ ನಿಧಿ’ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಏಳು ತಂತ್ರಜ್ಞಾನಗಳನ್ನು ಮೂರು ರಕ್ಷಣಾ ಪಡೆಗಳಿಗೆ ಹಸ್ತಾಂತರಿಸಿದೆ.

    ‘ತಂತ್ರಜ್ಞಾನ ಅಭಿವೃದ್ಧಿ ನಿಧಿ’ ಯೋಜನೆಯ ಬಗ್ಗೆ:

    • ಈ ಯೋಜನೆಯು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಡಿಆರ್‌ಡಿಒ ಮೂಲಕ ಅನುಷ್ಠಾನಗೊಳ್ಳುತ್ತಿರುವ ರಕ್ಷಣಾ ಸಚಿವಾಲಯದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ.
    • ಉದ್ದೇಶ:- ಇದು ಭಾರತೀಯ ಕೈಗಾರಿಕೆಗಳಿಗೆ, ವಿಶೇಷವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSMEs) ಹಾಗೂ ನವೋದ್ಯಮಗಳಿಗೆ, ಸ್ವದೇಶಿ ರಕ್ಷಣಾ ಮತ್ತು ದ್ವಿ-ಬಳಕೆಯ ತಂತ್ರಜ್ಞಾನಗಳನ್ನು ಆವಿಷ್ಕರಿಸಲು, ಸಂಶೋಧಿಸಲು, ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಅನುದಾನವನ್ನು ಒದಗಿಸುತ್ತದೆ.

    ರಫ್ತು ಉತ್ತೇಜನಾ ಗುರಿ (EPM)

    ಸಾಮಾನ್ಯ ಅಧ್ಯಯನ –  3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ರಫ್ತುನ್ನು ಉತ್ತೇಜಿಸಲು, ವಿಶೇಷವಾಗಿ ಎಂಎಸ್ಎಂಇ ಗಳು ಮತ್ತು ಹೆಚ್ಚು ಕಾರ್ಮಿಕಾಧಾರಿತ ವಲಯಗಳಿಗೆ ಉತ್ತೇಜನ ನೀಡಲು, ಸರ್ಕಾರವು ₹25,060 ಕೋಟಿ ಮೊತ್ತದ “ರಫ್ತು ಉತ್ತೇಜನಾ ಗುರಿ” ಗೆ ಅನುಮೋದನೆ ನೀಡಿದೆ.

    ರಫ್ತು ಉತ್ತೇಜನಾ ಮಿಷನ್ ಬಗ್ಗೆ:

    • ಪ್ರಾರಂಭ:- 2025-26ರ ಕೇಂದ್ರ ಮುಂಗಡಪತ್ರದಲ್ಲಿ, ಹಣಕಾಸು ಸಚಿವರು ರಫ್ತು ಉತ್ತೇಜನಾ ಗುರಿ ಅನ್ನು ಘೋಷಿಸಿದರು.
    • ಉದ್ದೇಶ:- ಇದು ರಫ್ತು ಸಾಲಕ್ಕೆ ಸುಲಭ ಲಭ್ಯತೆಯನ್ನು, ಗಡಿಯಾಚೆಗಿನ ಅಪವರ್ತನೀಕರಣ (ಫ್ಯಾಕ್ಟರಿಂಗ್) ಬೆಂಬಲವನ್ನು ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿನ ಸುಂಕ ರಹಿತ ಕ್ರಮಗಳನ್ನು ನಿಭಾಯಿಸಲು ಎಂಎಸ್ಎಂಇ ಗಳಿಗೆ ಬೆಂಬಲವನ್ನು ಒದಗಿಸಲು ಸಹಕಾರಿಯಾಗುತ್ತದೆ.
    • ಅವಧಿ:- 2025-26 ರಿಂದ 2030-31ರ ಆರ್ಥಿಕ ವರ್ಷದವರೆಗೆ.
    • ಎರಡು ಸಮಗ್ರ ಉಪ-ಯೋಜನೆಗಳು:– 
    • ನಿರ್ಯಾತ್ ಪ್ರೋತ್ಸಾಹನ್  
    • ನಿರ್ಯಾತ್ ದಿಶಾ
    1. “ನಿರ್ಯಾತ್ ಪ್ರೋತ್ಸಾಹನ್”- ಹಣಕಾಸಿನ ಬೆಂಬಲ:
    • ರಫ್ತುದಾರರಿಗಾಗಿ ಸಾಲ ಖಾತರಿ ಯೋಜನೆ (CGSE): ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿ ನಿಯಮಿತ (NCGTC) ದಿಂದ 100% ರಕ್ಷಣೆಯನ್ನು (ವ್ಯಾಪ್ತಿ) ಒದಗಿಸುತ್ತದೆ.
    • ಅರ್ಹ ರಫ್ತುದಾರರಿಗೆ (‘ಎಂಎಸ್ಎಂಇ’ಗಳು ಸೇರಿದಂತೆ) ₹20,000 ಕೋಟಿಯವರೆಗೆ ಹೆಚ್ಚುವರಿ ಸಾಲ ಸೌಲಭ್ಯಗಳು.
    • ಇದು ಮೇಲಾಧಾರ-ರಹಿತ ಸಾಲವನ್ನು ಸಕ್ರಿಯಗೊಳಿಸುತ್ತದೆ ಹಾಗೂ ದ್ರವ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ.
    1. “ನಿರ್ಯಾತ್ ದಿಶಾ”- ಹಣಕಾಸೇತರ ಬೆಂಬಲ:
    • ಸುಂಕ ರಹಿತ ಅಡೆತಡೆಗಳ (NTBs) ನಿವಾರಣೆ: ನಿಯಮಗಳ ಅನುಸರಣೆ, ಪ್ರಮಾಣೀಕರಣ ಮತ್ತು ತಾಂತ್ರಿಕ ಮಾನದಂಡಗಳಿಗೆ ಧನಸಹಾಯ ಒದಗಿಸುವುದು.
    • ಮಾರುಕಟ್ಟೆ ಸ್ವಾಧೀನ ಮತ್ತು ಬ್ರ್ಯಾಂಡಿಂಗ್: ಅಂತರರಾಷ್ಟ್ರೀಯ ಪ್ರದರ್ಶನ, ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್‌ಗಾಗಿ ನೆರವು ನೀಡುವುದು.
    • ಸರಕು ಸಾಗಣೆ ಮತ್ತು ಪೂರೈಕೆ ನಿರ್ವಹಣೆ ವೆಚ್ಚ ಕಡಿತ: ಪೂರೈಕೆ ಸರಪಳಿ ದಕ್ಷತೆ ಮತ್ತು ವ್ಯಾಪಾರ ಸೌಲಭ್ಯಕ್ಕಾಗಿ ಬೆಂಬಲ ನೀಡುವುದು.
  • ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) | ‘ಹರಿಮಾವು ಶಕ್ತಿ’ ಸಮರಾಭ್ಯಾಸ

    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)

    ಸಾಮಾನ್ಯ ಅಧ್ಯಯನ – 2/ ಶಾಸನಬದ್ಧ ಸಂಸ್ಥೆಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಯೊಂದು ಬೃಹತ್ ಪ್ರಮಾಣದಲ್ಲಿ ವಿಮಾನಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ‘ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ’ವು (DGCA), ಹೊಸದಾಗಿ ಜಾರಿಗೆ ತಂದಿರುವ “ವಿಮಾನ ಸಿಬ್ಬಂದಿಯ ಕರ್ತವ್ಯ ಅವಧಿ ಮಿತಿಗಳ” (FDTL) ನಿಯಮಗಳಿಂದ ಒಂದು ಬಾರಿಯ ವಿನಾಯಿತಿಯನ್ನು ನೀಡಿದೆ.

    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ದ ಬಗ್ಗೆ:

    • ಸ್ಥಾಪನೆ: ಇದನ್ನು 1927 ರಲ್ಲಿ ಒಂದು ಸರ್ಕಾರಿ ಸಂಸ್ಥೆಯಾಗಿ ಸ್ಥಾಪಿಸಲಾಯಿತು.
    • ಕಾನೂನು ಸ್ಥಾನಮಾನ: ಇದು “ವಿಮಾನ ಕಾಯ್ದೆ”ಯ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಒಂದು ‘ಶಾಸನಬದ್ಧ ಸಂಸ್ಥೆ’ಯಾಗಿದೆ.
    • ಆಡಳಿತಾತ್ಮಕ ನಿಯಂತ್ರಣ: ಇದು ನಾಗರಿಕ ವಿಮಾನಯಾನ ಸಚಿವಾಲಯದ (MoCA) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಗುರಿ: ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಯ ಮಾನದಂಡಗಳ ಮೂಲಕ ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಿಮಾನ ಸಾರಿಗೆಯನ್ನು ಉತ್ತೇಜಿಸುವುದು.

    ‘ಹರಿಮಾವು ಶಕ್ತಿ’ ಸಮರಾಭ್ಯಾಸ

    ಸಾಮಾನ್ಯ ಅಧ್ಯಯನ -3 / ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ಮಲೇಷ್ಯಾ ದೇಶಗಳು, ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ‘ಹರಿಮೌ ಶಕ್ತಿ, 2025’ ಸಮರಾಭ್ಯಾಸದ 5ನೇ ಆವೃತ್ತಿಯನ್ನು ಪ್ರಾರಂಭಿಸಿವೆ.

    ಹರಿಮಾವು ಶಕ್ತಿ ಸಮರಾಭ್ಯಾಸದ ಬಗ್ಗೆ:

    • ಇದು ಭಾರತೀಯ ಸೇನೆ ಮತ್ತು ಮಲೇಷ್ಯಾ ಸೇನೆಗಳ ನಡುವಿನ ‘ದ್ವಿಪಕ್ಷೀಯ ಸೇನಾ ಸಮರಾಭ್ಯಾಸ’ವಾಗಿದೆ.

    ಈ ಸಮರಾಭ್ಯಾಸವು ಅರಣ್ಯ ಯುದ್ಧ, ಬಂಡಾಯ ನಿಗ್ರಹ ಕಾರ್ಯಾಚರಣೆಗಳು ಮತ್ತು ಅರೆ-ನಗರ ಪ್ರದೇಶದ ಯುದ್ಧ ಸನ್ನಿವೇಶಗಳಲ್ಲಿ ಎರಡೂ ಪಡೆಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಜೊತೆಗೆ, ಭವಿಷ್ಯದ ಕಾರ್ಯಾಚರಣೆಗಳಲ್ಲಿ ‘ಸುಗಮ ಸಹಕಾರ’ವನ್ನು ಸಾಧ್ಯವಾಗಿಸುವುದು ಇದರ ಉದ್ದೇಶವಾಗಿದೆ.

  • 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ | 70ನೇ ಮಹಾಪರಿನಿರ್ವಾಣ ದಿವಸ | ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟು

    23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ

    ಸಾಮಾನ್ಯ ಅಧ್ಯಯನ -2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ರಷ್ಯಾ ತಮ್ಮ 23ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯನ್ನು ನಡೆಸಿದವು. ಇದು 2000ನೇ ಇಸವಿಯ ‘ಕಾರ್ಯತಂತ್ರದ  ಪಾಲುದಾರಿಕೆಯ ಮೇಲೆ ಘೋಷಣೆ’ಯ 25 ವರ್ಷಗಳ ಆಚರಣೆಯನ್ನು ಗುರುತಿಸುವ ಪ್ರಮುಖ ಮೈಲಿಗಲ್ಲಾಗಿದೆ.

    ಭಾರತ -ರಷ್ಯಾ ಭೇಟಿಯ ಪ್ರಮುಖ ಫಲಿತಾಂಶಗಳು:

    • ಆರ್ಥಿಕ ಕಾರ್ಯಕ್ರಮ 2030: 2030 ರವರೆಗಿನ ಭಾರತ-ರಷ್ಯಾ ಆರ್ಥಿಕ ಸಹಕಾರದ ಕಾರ್ಯತಂತ್ರದ ಕ್ಷೇತ್ರಗಳ ಅಭಿವೃದ್ಧಿಗಾಗಿನ ಕಾರ್ಯಕ್ರಮದ (‘ಕಾರ್ಯಕ್ರಮ 2030’) ಅಳವಡಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು.
    • ವ್ಯಾಪಾರ ಗುರಿ, 2030: 2030 ರ ವೇಳೆಗೆ 100 ಶತಕೋಟಿ ಅಮೆರಿಕನ್ ಡಾಲರ್‌ಗಳ ಪರಿಷ್ಕೃತ ದ್ವಿಪಕ್ಷೀಯ ವ್ಯಾಪಾರ ಗುರಿಯನ್ನು ನಿಗದಿತ ಅವಧಿಯೊಳಗೆ ಸಾಧಿಸುವುದು.
    • ಸಹಿ ಹಾಕಲಾದ ಕಾರ್ಯತಂತ್ರದ ಒಪ್ಪಂದಗಳು: ರಕ್ಷಣೆ, ವ್ಯಾಪಾರ, ಆರ್ಥಿಕತೆ, ಆರೋಗ್ಯ ಸೇವೆ, ಶಿಕ್ಷಣ, ಸಂಸ್ಕೃತಿ ಮತ್ತು ಮಾಧ್ಯಮಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಭಾರತ ಮತ್ತು ರಷ್ಯಾ 16 ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡವು.
    • ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಒತ್ತು: ‘ಯುರೇಷಿಯನ್ ಆರ್ಥಿಕ ಒಕ್ಕೂಟ’ದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎರಡೂ ಕಡೆಯವರು ಕಾರ್ಯನಿರತರಾಗಿದ್ದಾರೆ.
    • ವಲಸೆ ಸಹಕಾರ: ರಷ್ಯಾದ ನಾಗರಿಕರಿಗಾಗಿ ಭಾರತವು ಶೀಘ್ರದಲ್ಲೇ ಉಚಿತ 30 ದಿನಗಳ ಇ-ಪ್ರವಾಸಿ ವೀಸಾ ಮತ್ತು 30 ದಿನಗಳ ‘ಗುಂಪು ಪ್ರವಾಸಿ ವೀಸಾ’ವನ್ನು ಜಾರಿಗೆ ತರಲಿದೆ.
    • ಜಾಗತಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ: ರಷ್ಯಾವು “ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ” (IBCA) ಕ್ಕೆ ಸೇರಲು ನಿರ್ಧರಿಸಿದೆ.

    70ನೇ ಮಹಾಪರಿನಿರ್ವಾಣ ದಿವಸ

    ಸಾಮಾನ್ಯ ಅಧ್ಯಯನ -1/ ಇತಿಹಾಸ

    ಇದೀಗ ಸುದ್ದಿಯಲ್ಲಿದೆ:

    • ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಸಂಸತ್ತಿನ ಆವರಣದಲ್ಲಿ, ಮಹಾಪರಿನಿರ್ವಾಣ  ದಿವಸ’ದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

    ಮಹಾಪರಿನಿರ್ವಾಣ ದಿವಸದ ಬಗ್ಗೆ:

    • ಅರ್ಥ: “ಪರಿನಿರ್ವಾಣ” ಎಂಬ ಪದವು ಬೌದ್ಧ ಧರ್ಮದ ಪ್ರಮುಖ ತತ್ವ ಹಾಗೂ ಗುರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಸಂಸ್ಕೃತ ಮೂಲದ ಪದವಾಗಿದ್ದು, ಇದು ಮರಣಾನಂತರದ ವಿಮೋಚನೆ ಅಥವಾ ಮುಕ್ತಿಯನ್ನು ಸೂಚಿಸುತ್ತದೆ.
    • ಬೌದ್ಧರ ಗ್ರಂಥವಾದ ಮಹಾಪರಿನಿಬ್ಬಾಣ ಸುತ್ತ’ ದ ಪ್ರಕಾರ, 80ನೇ ವಯಸ್ಸಿನಲ್ಲಿ ಸಂಭವಿಸಿದ ಭಗವಾನ್ ಗೌತಮ ಬುದ್ಧನ ಮರಣವನ್ನು ಮೂಲ ‘ಮಹಾಪರಿನಿರ್ವಾಣ’ ಎಂದು ಪರಿಗಣಿಸಲಾಗುತ್ತದೆ.
    • ಆಚರಣೆ: ಡಾ. ಭೀಮರಾವ್ ಅಂಬೇಡ್ಕರ್ ಅವರು ಸಮಾಜಕ್ಕೆ ಸಲ್ಲಿಸಿದ ಅನನ್ಯ ಸೇವೆ ಮತ್ತು ಅವರ ಸಾಧನೆಗಳನ್ನು ಸ್ಮರಿಸಲು ಪ್ರತಿವರ್ಷ ಡಿಸೆಂಬರ್ 6 ರಂದು ಈ ದಿನವನ್ನು ಆಚರಿಸಲಾಗುತ್ತದೆ.
    • ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮದ ಅಗ್ರಗಣ್ಯ ನಾಯಕರಾಗಿದ್ದರಿಂದ, ಅವರ ಪುಣ್ಯತಿಥಿಯನ್ನು ‘ಮಹಾಪರಿನಿರ್ವಾಣ ದಿವಸ’ ಎಂದು ಕರೆಯಲಾಗುತ್ತದೆ.

    ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಅವರ ಕುರಿತು: 

    • ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಶ್ರೇಷ್ಠ ಸಮಾಜ ಸುಧಾರಕ, ಕಾನೂನು ತಜ್ಞ, ಅರ್ಥಶಾಸ್ತ್ರಜ್ಞ, ಲೇಖಕ, ಬಹುಭಾಷಾ ಪಂಡಿತ, ವಾಗ್ಮಿ, ವಿದ್ವಾಂಸ ಮತ್ತು ಧಾರ್ಮಿಕ ಚಿಂತಕರಾಗಿದ್ದರು.
    • ಜನನ: ಇವರು 1891 ರಲ್ಲಿ ಸೆಂಟ್ರಲ್ ಪ್ರಾವಿನ್ಸ್‌ (ಪ್ರಸ್ತುತ  ಮಧ್ಯಪ್ರದೇಶ) ನ ಮಹೂವಿನಲ್ಲಿ (Mhow) ಜನಿಸಿದರು.
    • ಇವರನ್ನು ‘ಭಾರತೀಯ ಸಂವಿಧಾನದ ಪಿತಾಮಹ’ ಎಂದು ಕರೆಯಲಾಗುತ್ತದೆ. ಇವರು ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿದ್ದರು.
    • ಇವರು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು.
    • ಇವರು ದಲಿತರು ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಪ್ರಖ್ಯಾತ ಮುತ್ಸದ್ದಿಯಾಗಿದ್ದರು.

    ಪ್ರಮುಖ ಕೊಡುಗೆಗಳು:

    • ಮಹಾಡ್ ಸತ್ಯಾಗ್ರಹ, 1927: ಅಸ್ಪೃಶ್ಯರಿಗೆ ಮಹಾಡ್ ನಲ್ಲಿರುವ ಚೌಡರ ಕೆರೆಯ ನೀರನ್ನು ಬಳಸಲು ನಿರಾಕರಿಸಿದ ಮುನ್ಸಿಪಲ್ ಬೋರ್ಡ್‌ನ ಕ್ರಮ ಮತ್ತು ಅದನ್ನು ಬೆಂಬಲಿಸಿದ ಸವರ್ಣೀಯರ ವಿರುದ್ಧ, ಮಾರ್ಚ್ 1927 ರಲ್ಲಿ ಇವರು ‘ಮಹಾಡ್ ಸತ್ಯಾಗ್ರಹ’ದ ನೇತೃತ್ವ ವಹಿಸಿದರು. (1926 ರಲ್ಲೇ ಮಹಾಡ್ ಮುನ್ಸಿಪಲ್ ಬೋರ್ಡ್ ಕೆರೆಯನ್ನು ಎಲ್ಲರಿಗೂ ಮುಕ್ತಗೊಳಿಸಲು ಆದೇಶಿಸಿತ್ತು).
    • ಇವರು ಮೂರೂ ದುಂಡು ಮೇಜಿನ ಸಮ್ಮೇಳನಗಳಲ್ಲಿಭಾಗವಹಿಸಿದರು.
    • ಪೂನಾ ಒಪ್ಪಂದ, 1932: ಡಾ. ಅಂಬೇಡ್ಕರ್ ಅವರು ಮಹಾತ್ಮ ಗಾಂಧೀಜಿಯವರೊಂದಿಗೆ “ಪೂನಾ ಒಪ್ಪಂದ”ಕ್ಕೆ ಸಹಿ ಹಾಕಿದರು. ಇದರ ಅನ್ವಯ ಶೋಷಿತ ವರ್ಗಗಳಿಗೆ ನೀಡಲಾದ ಪ್ರತ್ಯೇಕ ಮತಕ್ಷೇತ್ರಗಳ (ಕೋಮು ತೀರ್ಪು) ಕಲ್ಪನೆಯನ್ನು ಕೈಬಿಡಲಾಯಿತು.
    • ಬದಲಾಗಿ, ಪ್ರಾಂತೀಯ ಶಾಸಕಾಂಗಗಳಲ್ಲಿ ಶೋಷಿತ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳನ್ನು 71 ರಿಂದ 147 ಕ್ಕೆ ಮತ್ತು ಕೇಂದ್ರ ಶಾಸಕಾಂಗದಲ್ಲಿ ಒಟ್ಟು ಸ್ಥಾನಗಳ 18% ಕ್ಕೆ ಹೆಚ್ಚಿಸಲಾಯಿತು.
    • ಆರ್‌ಬಿಐ ಸ್ಥಾಪನೆ: ಹಿಲ್ಟನ್ ಯಂಗ್ ಆಯೋಗದ ಮುಂದೆ ಇವರು ಮಂಡಿಸಿದ ಆರ್ಥಿಕ ಪರಿಕಲ್ಪನೆಗಳು ‘ಭಾರತೀಯ ರಿಸರ್ವ್ ಬ್ಯಾಂಕ್’ ನ ಸ್ಥಾಪನೆಗೆ ಬುನಾದಿಯಾದವು. ಈ ಬ್ಯಾಂಕ್ “ದಿ ಪ್ರಾಬ್ಲಮ್ ಆಫ್ ದಿ ರುಪೀ: ಇಟ್ಸ್ ಒರಿಜಿನ್ ಅಂಡ್ ಇಟ್ಸ್ ಸೊಲ್ಯೂಷನ್” ಎಂಬ ಅವರ ಪ್ರಬಂಧದ ಆಧಾರದ ಮೇರೆಗೆ ಸ್ಥಾಪನೆಯಾಯಿತು.

    ಚುನಾವಣೆ ಮತ್ತು ಹುದ್ದೆ:

    • 1937 ರಲ್ಲಿ, ಇವರು ಬಾಂಬೆ ಶಾಸನ ಸಭೆಗೆ ಶಾಸಕರಾಗಿ ಆಯ್ಕೆಯಾದರು.
    • 1942 ರಲ್ಲಿ ವೈಸ್‌ರಾಯ್ ಅವರ ಕಾರ್ಯಕಾರಿ ಮಂಡಳಿಗೆ ಕಾರ್ಮಿಕ ಸದಸ್ಯರಾಗಿ ನೇಮಕಗೊಂಡರು.
    • 1947 ರಲ್ಲಿ, ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಲು ಪ್ರಧಾನಿ ನೆಹರು ನೀಡಿದ ಆಹ್ವಾನವನ್ನು ಡಾ. ಅಂಬೇಡ್ಕರ್ ಒಪ್ಪಿಕೊಂಡರು.

    ಬೌದ್ಧ ಧರ್ಮಕ್ಕೆ ಮತಾಂತರ:

    • ‘ಹಿಂದೂ ಕೋಡ್ ಬಿಲ್’ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ 1951 ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. 1956 ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
    • 1990 ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ವನ್ನು (ಮರಣೋತ್ತರವಾಗಿ) ನೀಡಲಾಯಿತು.

    ಪ್ರಮುಖ ಪತ್ರಿಕೆಗಳು ಮತ್ತು ಕೃತಿಗಳು:

      • ಪತ್ರಿಕೆಗಳು: ಮೂಕನಾಯಕ (1920), ಬಹಿಷ್ಕೃತ ಭಾರತ (1927), ಸಮತಾ (1929), ಜನತಾ (1930).
      • ಕೃತಿಗಳು:
    • ಅನಿಹಿಲೇಷನ್ ಆಫ್ ಕಾಸ್ಟ್
        • ಬುದ್ಧ ಆರ್ ಕಾರ್ಲ್ ಮಾರ್ಕ್ಸ್
        • ದಿ ಅನ್ ಟಚೇಬಲ್ಸ್ : ಹೂ ಆರ್ ದೇ ಅಂಡ್ ವೈ ದೇ ಹ್ಯಾವ್ ಬಿಕಮ್ ಅನ್ ಟಚೇಬಲ್ಸ್ 
    • ಬುದ್ಧ ಅಂಡ್ ಹಿಸ್ ಧಮ್ಮ 
      • ದಿ ರೈಸ್ ಅಂಡ್ ಫಾಲ್ ಆಫ್ ಹಿಂದೂ ವುಮೆನ್

    ಸಂಘಟನೆಗಳು:

    • ಬಹಿಷ್ಕೃತ ಹಿತಕಾರಿಣಿ ಸಭೆ (1923)
    • ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಸ್ವತಂತ್ರ ಕಾರ್ಮಿಕ ಪಕ್ಷ – 1936)
    • ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್ (ಪರಿಶಿಷ್ಟ ಜಾತಿಗಳ ಒಕ್ಕೂಟ – 1942)

    ನಿಧನ:

    • ಡಾ. ಅಂಬೇಡ್ಕರ್ ಅವರು ಡಿಸೆಂಬರ್ 6, 1956 ರಂದು ನಿಧನರಾದರು.
    • ಮುಂಬೈನಲ್ಲಿರುವ ‘ಚೈತ್ಯ ಭೂಮಿ’ ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕವಾಗಿದೆ.

    ಪ್ರಸ್ತುತ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರ ಪ್ರಸ್ತುತತೆ: 

    • ಭಾರತದಲ್ಲಿ ಜಾತಿ ಆಧಾರಿತ ಅಸಮಾನತೆ ಇನ್ನೂ ಜೀವಂತವಾಗಿದೆ. ಮೀಸಲಾತಿ ಮತ್ತು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಸಂಘಟಿಸಿಕೊಳ್ಳುವ ಮೂಲಕ ದಲಿತರು ರಾಜಕೀಯ ಅಸ್ಮಿತೆಯನ್ನು ಕಂಡುಕೊಂಡಿದ್ದರೂ, ಸಾಮಾಜಿಕ (ಆರೋಗ್ಯ ಮತ್ತು ಶಿಕ್ಷಣ) ಮತ್ತು ಆರ್ಥಿಕ ಆಯಾಮಗಳಲ್ಲಿ ಅವರು ಇನ್ನೂ ಹಿಂದುಳಿದಿದ್ದಾರೆ.

    ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟು

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ಜಲಧಾರಗಳಲ್ಲಿ ವಿಷಕಾರಿ ಮಾಲಿನ್ಯಕಾರಕಗಳ ಪ್ರಮಾಣವು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದನ್ನು ‘ಕೇಂದ್ರ ಅಂತರ್ಜಲ ಮಂಡಳಿ’ (CGWB) ಎತ್ತಿ ತೋರಿಸಿದೆ.

    ಭಾರತದ ಅಂತರ್ಜಲ ಮಾಲಿನ್ಯ ಬಿಕ್ಕಟ್ಟಿನ ಬಗ್ಗೆ:

    • ಭಾರತವು ವಿಶ್ವದ ಜನಸಂಖ್ಯೆಯ 18% ರಷ್ಟನ್ನು ಹೊಂದಿದ್ದರೂ, ಕೇವಲ 4% ರಷ್ಟು ಸಿಹಿನೀರಿನ ಸಂಪನ್ಮೂಲಗಳನ್ನು ಹೊಂದಿದೆ. ಇದು ಲಭ್ಯವಿರುವ ನೀರಿನ ವ್ಯವಸ್ಥೆಗಳ ಮೇಲೆ ಭಾರೀ ಒತ್ತಡವನ್ನು ಹೇರುತ್ತಿದೆ.
    • ಭಾರತವು ತನ್ನ ಗ್ರಾಮೀಣ ಕುಡಿಯುವ ನೀರಿನ ಅಗತ್ಯಗಳಿಗಾಗಿ ಸುಮಾರು 85% ರಷ್ಟು ಮತ್ತು ನೀರಾವರಿಗಾಗಿ ಸುಮಾರು 60% ರಷ್ಟು ಅಂತರ್ಜಲವನ್ನೇ ಅವಲಂಬಿಸಿದೆ.
    • ಭಾರತದ ಜಲಧಾರಗಳು ಆರ್ಸೆನಿಕ್, ಫ್ಲೋರೈಡ್, ನೈಟ್ರೇಟ್, ಯುರೇನಿಯಂ, ಲವಣಾಂಶ ಮತ್ತು ಭಾರ ಲೋಹಗಳಿಂದ ಏಕಕಾಲದಲ್ಲಿ ಕಲುಷಿತಗೊಳ್ಳುತ್ತಿವೆ.

    ಸರ್ಕಾರಿ ಉಪಕ್ರಮಗಳು:

    • ಜಲ ಶಕ್ತಿ ಅಭಿಯಾನ, 2019:- ಇದು ನೀರಿನ ಸಂರಕ್ಷಣೆ ಮತ್ತು ನೀರಿನ ಅಭಾವವಿರುವ ಜಿಲ್ಲೆಗಳಲ್ಲಿ ಅಂತರ್ಜಲ ಮರುಪೂರಣದ/ ಪುನರ್‌ಭರ್ತಿ ಮೇಲೆ ಕೇಂದ್ರೀಕರಿಸುತ್ತದೆ.
    • ಅಮೃತ್ ಸರೋವರ್ ಮಿಷನ್: ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.
    • ರಾಷ್ಟ್ರೀಯ ಜಲಧಾರ ನಕ್ಷೆ ತಯಾರಿಕೆ ಮತ್ತು ನಿರ್ವಹಣಾ ಕಾರ್ಯಕ್ರಮ (NAQUIM): ಸುಸ್ಥಿರ ನಿರ್ವಹಣೆಗಾಗಿ ಜಲಧರಗಳ ವ್ಯಾಪ್ತಿಯನ್ನು ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
    • ಅಟಲ್ ಭೂಜಲ್ ಯೋಜನೆ: ನಿರ್ಣಾಯಕ ಮತ್ತು ಅತಿಯಾಗಿ ಬಳಸಿಕೊಂಡ ವಲಯಗಳನ್ನು ಹೊಂದಿರುವ ಆದ್ಯತೆಯ ಪ್ರದೇಶಗಳಲ್ಲಿ, ಅಂತರ್ಜಲ ನಿರ್ವಹಣೆಯನ್ನು ಸುಧಾರಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • ಪ್ರಧಾನ ಮಂತ್ರಿ ಜಿ-ವನ್ (PM JI-VAN) ಯೋಜನೆ | 2025ರಲ್ಲಿ ಅಂಟಾರ್ಕ್ಟಿಕಾದ ಓಜೋನ್ ರಂಧ್ರವು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಚ್ಚಿದೆ | ಅಸ್ಸಾಂನಲ್ಲಿ ಎರಡು ರಣಹದ್ದು ಪ್ರಭೇದಗಳನ್ನು ಮರು ಪರಿಚಯಿಸಲಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) | ಕುಷ್ಠರೋಗ (Leprosy) | ಉಸಿರಾಟದ ಮೂಲಕ ದೇಹದ ಒಳಗೆ ಸೇರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು (iMPs – Inhalable Microplastics) | ಭಾರತದಲ್ಲಿ ಆಕ್ರಮಣಕಾರಿ ವಿದೇಶಿ ಸಸ್ಯಗಳು (Invasive Alien Plants) | ವಿಶ್ವ ಮಣ್ಣಿನ ದಿನ | ಕೂನೋ ರಾಷ್ಟ್ರೀಯ ಉದ್ಯಾನವನ

    ಪ್ರಧಾನ ಮಂತ್ರಿ ಜಿ-ವನ್ (PM JI-VAN) ಯೋಜನೆ

    ಸಾಮಾನ್ಯ ಅಧ್ಯಯನ – 2/ ಸರ್ಕಾರಿ ನೀತಿ ಮತ್ತು ಹಸ್ತಕ್ಷೇಪ; ಸಾಮಾನ್ಯ ಅಧ್ಯಯನ- 3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜಿ-ವನ್ (PM JI-VAN) ಯೋಜನೆಯ ಕಾಲಮಿತಿಯನ್ನು ವಿಸ್ತರಿಸಿದ್ದು, ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಭದ್ರತೆಯ ಮೇಲಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

    ಪಿಎಂ ಜಿ-ವನ್ ಯೋಜನೆಯ ಬಗ್ಗೆ:

    • ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು.
    • ಅನುಷ್ಠಾನ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ. 
    • ಉದ್ದೇಶ:– 2ಜಿ ಎಥೆನಾಲ್ ಯೋಜನೆಗಳನ್ನು ಉತ್ತೇಜಿಸುವುದು, ಕೃಷಿ ತ್ಯಾಜ್ಯವನ್ನು (ಬಯೋಮಾಸ್) ಬಳಸುವುದು, ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಗುರಿಗಳನ್ನು ತಲುಪುವುದು, ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ನಿವ್ವಳ-ಶೂನ್ಯ ಹೊರಸೂಸುವಿಕೆಯಂತಹ ಪರಿಸರ ಸಂಬಂಧಿತ ಗುರಿಗಳಿಗೆ ಸಹಾಯ ಮಾಡುವುದು.
    • ವಿಧಾನ:– ಈ ಯೋಜನೆಯು ಪೆಟ್ರೋಕೆಮಿಕಲ್ ಮಾರ್ಗದ ಬದಲಾಗಿ ಕಾಕಂಬಿ ಮತ್ತು ಖಾದ್ಯವಲ್ಲದ ಕೃಷಿ ತ್ಯಾಜ್ಯದಂತಹ ಜೈವಿಕ ರಾಶಿಯಿಂದ ಎಥೆನಾಲ್ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ.

    ಈ ಯೋಜನೆಯ ಮಹತ್ವ:

    • ಇಂಧನ ಭದ್ರತೆ:- ಪಳೆಯುಳಿಕೆ ಇಂಧನ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು.
    • ಗ್ರಾಮೀಣ ಆರ್ಥಿಕತೆ:- ರೈತರಿಗೆ ತಮ್ಮ ಕೃಷಿ ತ್ಯಾಜ್ಯಗಳಿಗೆ ಹೊಸ ಮಾರುಕಟ್ಟೆಗಳನ್ನು ಒದಗಿಸುವುದು, ಆ ಮೂಲಕ ಅವರ ಆದಾಯವನ್ನು ಹೆಚ್ಚಿಸುವುದು.
    • ಪರಿಸರ:– ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ಮಾಲಿನ್ಯವನ್ನು ಎದುರಿಸುವುದು, ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗೆ ಕೊಡುಗೆ ನೀಡುವುದು.
    • ಹೂಡಿಕೆ:- 2ಜಿ ಎಥೆನಾಲ್ ವಲಯದಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸುವುದು.
    • ಉದಾಹರಣೆ:– ಈ ಯೋಜನೆಯಡಿ ಸ್ಥಾಪಿಸಲಾದ ಭಾರತದ ಮೊದಲ 2ಜಿ ಎಥೆನಾಲ್ ಯೋಜನೆಯನ್ನು ಪಾಣಿಪತ್‌ನಲ್ಲಿರುವ ಐಒಸಿಎಲ್ ನಲ್ಲಿ 2022 ರಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು.

    ಜೈವಿಕ ಇಂಧನಗಳ ಬಗ್ಗೆ:

    • ವ್ಯಾಖ್ಯಾನ:- ಜೈವಿಕ ಇಂಧನಗಳು ಸಸ್ಯ ಮತ್ತು ಸಸ್ಯಜನ್ಯ ಸಂಪನ್ಮೂಲಗಳಿಂದ ತಯಾರಿಸಿದ ಪರ್ಯಾಯ ಇಂಧನಗಳಾಗಿವೆ.
    • ಉದಾಹರಣೆ: ಬಯೋಎಥೆನಾಲ್, ಬಯೋಡೀಸೆಲ್, ಹಸಿರು ಡೀಸೆಲ್, ಜೈವಿಕ ಅನಿಲ ಇತ್ಯಾದಿ.

    ರಾಷ್ಟ್ರೀಯ ಜೈವಿಕ ಇಂಧನ ನೀತಿ, 2018 ರ ಬಗ್ಗೆ:

    • ಇದನ್ನು 2022 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇಂಧನ ಭದ್ರತೆಯನ್ನು ಹೆಚ್ಚಿಸಲು ಭಾರತದಲ್ಲಿ ಜೈವಿಕ ಇಂಧನಗಳ ಬಳಕೆಯನ್ನು ಹೆಚ್ಚಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ.

    ಜೈವಿಕ ಇಂಧನ ವಿಸ್ತರಣೆಗೆ ಸರ್ಕಾರದ ಪ್ರಯತ್ನಗಳು:

    • ಪ್ರಧಾನ ಮಂತ್ರಿ ಜಿ-ವನ್ ಯೋಜನೆ (ಜೈವಿಕ ಇಂಧನ – ವಾತಾವರಣ ಅನುಕೂಲ ಫಸಲ್ ಅವಶೇಷ ನಿವಾರಣ್ ಯೋಜನೆ):- ಇದು ಕೃಷಿ ತ್ಯಾಜ್ಯ ಮತ್ತು ಅವಶೇಷಗಳಿಂದ 2ಜಿ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
    • ಗೋಬರ್-ಧನ್ (GOBAR-Dhan- ಗ್ಯಾಲ್ವನೈಸಿಂಗ್ ಆರ್ಗ್ಯಾನಿಕ್ ಬಯೋ-ಅಗ್ರೋ ರಿಸೋರ್ಸಸ್ ಧನ್) ಯೋಜನೆ:- ಇದು ಜಾನುವಾರುಗಳ ಸಗಣಿ ಮತ್ತು ಸಾವಯವ ತ್ಯಾಜ್ಯದಿಂದ ಜೈವಿಕ ಅನಿಲ ಮತ್ತು ಜೈವಿಕ -ಸಿಎನ್‌ಜಿ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
    • ಸತತ್ (SATAT- ಕೈಗೆಟುಕುವ ಸಾರಿಗೆಯ ಕಡೆಗೆ ಸುಸ್ಥಿರ ಪರ್ಯಾಯ) ಯೋಜನೆ:- ಇದು ಇಂಧನ ಪರ್ಯಾಯವಾಗಿ ಸಂಕುಚಿತ ಜೈವಿಕ ಅನಿಲ (CBG) ಉತ್ಪಾದನೆಯನ್ನು ಉತ್ತೇಜಿಸುತ್ತದೆ.

    2025ರಲ್ಲಿ ಅಂಟಾರ್ಕ್ಟಿಕಾದ ಓಜೋನ್ ರಂಧ್ರವು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಚ್ಚಿದೆ

    ಸಾಮಾನ್ಯ ಅಧ್ಯಯನ- 3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಆಗಸ್ಟ್ 2025 ರಲ್ಲಿ ರೂಪುಗೊಂಡ ಅಂಟಾರ್ಕ್ಟಿಕಾದ ಓಝೋನ್ ರಂಧ್ರವು ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿಯೇ ಮುಚ್ಚಲ್ಪಟ್ಟಿದೆ. ಜಾಗತಿಕ ತಾಪಮಾನ ಏರಿಕೆಯ ದಾಖಲೆಯ ನಡುವೆಯೂ ಈ ವಿದ್ಯಮಾನವು ಪರಿಸರ ಚೇತರಿಕೆಯ ಭರವಸೆಯನ್ನು ಮೂಡಿಸಿದೆ.

    ಓಝೋನ್ ಪದರ (O3) ದ ಬಗ್ಗೆ:

    • ಇದು ಮೂರು ಆಮ್ಲಜನಕದ ಪರಮಾಣುಗಳನ್ನು ಹೊಂದಿರುವ ಅತ್ಯಂತ ಪ್ರತಿಕ್ರಿಯಾತ್ಮಕ ಅಣುವಾಗಿದೆ.
    • ಕಂಡುಬರುವ ಸ್ಥಳ:- ಇದು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿ.ಮೀ ನಿಂದ 50 ಕಿ.ಮೀ ನಡುವಿನ ಎತ್ತರದಲ್ಲಿರುವ, ಸಮೋಷ್ಣ ಮಂಡಲ (‘ಸ್ಟ್ರಾಟೋಸ್ಪಿಯರ್’) ಎಂದು ಕರೆಯಲ್ಪಡುವ ವಾತಾವರಣದ ಸ್ತರದಲ್ಲಿ ಕಂಡುಬರುತ್ತದೆ.
    • ಕಾರ್ಯ:- ಈ ಓಝೋನ್ ಪದರವು ಸೂರ್ಯನಿಂದ ಬರುವ ಹಾನಿಕಾರಕ ಅತಿನೇರಳೆ (UV) ವಿಕಿರಣವನ್ನು ತಡೆಯುವಲ್ಲಿ ನೈಸರ್ಗಿಕ ಶೋಧಕವಾಗಿ ಕಾರ್ಯನಿರ್ವಹಿಸುತ್ತದೆ.
    • ಮಹತ್ವ:- ಭೂಮಿಯ ಮೇಲಿನ ಮಾನವ ಜೀವ ಸಂಕುಲದ ಅಸ್ತಿತ್ವ ಮತ್ತು ಉಳಿವಿಗೆ ಈ ಓಝೋನ್ ರಕ್ಷಾ ಕವಚ ಅತ್ಯಗತ್ಯವಾಗಿದೆ.

    ಓಝೋನ್ ಪದರದ ಸವಕಳಿಯ ಬಗ್ಗೆ:

    • ವ್ಯಾಖ್ಯಾನ:- ವಾತಾವರಣದ ಮಧ್ಯದ ಸ್ತರಗಳಲ್ಲಿ – ಮುಖ್ಯವಾಗಿ ಸಮೋಷ್ಣ ಮಂಡಲದಲ್ಲಿ ಓಝೋನ್ ಸಾಂದ್ರತೆಯು ಕಡಿಮೆಯಾಗುವುದನ್ನು ಅಥವಾ ಕುಸಿಯುವುದನ್ನು ‘ಓಝೋನ್ ಪದರದ ಸವಕಳಿ’ ಎಂದು ಕರೆಯಲಾಗುತ್ತದೆ.
    • ಕಾರಣಗಳು:- ಸಿಎಫ್‌ಸಿಗಳು (CFCs), ಎಚ್‌ಸಿಎಫ್‌ಸಿಗಳು (HCFCs), ಹ್ಯಾಲೋನ್‌ಗಳು, ಕಾರ್ಬನ್ ಟೆಟ್ರಾಕ್ಲೋರೈಡ್ ಮತ್ತು ಮೀಥೈಲ್ ಬ್ರೋಮೈಡ್‌ನಂತಹ ಮಾನವ ನಿರ್ಮಿತ ಹ್ಯಾಲೋಜನೇಟೆಡ್ ಹೈಡ್ರೋಕಾರ್ಬನ್‌ಗಳ ಹೊರಸೂಸುವಿಕೆಯಿಂದ ಇದು ಉಂಟಾಗುತ್ತದೆ.

    ಸಮಭಾಜಕ ವೃತ್ತಕ್ಕಿಂತ ಅಂಟಾರ್ಕ್ಟಿಕಾದಲ್ಲಿ ಓಝೋನ್ ಪದರದ ಸವಕಳಿ ಏಕೆ ಹೆಚ್ಚಾಗಿದೆ?

    • ಜಗತ್ತಿನ ಬೇರೆಲ್ಲಿಯೂ ಇಲ್ಲದ ವಿಶಿಷ್ಟ ಹವಾಮಾನ ಪರಿಸ್ಥಿತಿಗಳು ಅಂಟಾರ್ಕ್ಟಿಕಾದಲ್ಲಿ ಇರುವುದರಿಂದ, ಅಲ್ಲಿ ಓಝೋನ್ ಪದರದ ತೀವ್ರ ಸವಕಳಿ ಉಂಟಾಗಿ “ಓಝೋನ್ ರಂಧ್ರ” ಸೃಷ್ಟಿಯಾಗುತ್ತಿದೆ.
    • ಅಂಟಾರ್ಕ್ಟಿಕಾದ ಸಮೋಷ್ಣ ಮಂಡಲದ  ಅತ್ಯಂತ ಕಡಿಮೆ ತಾಪಮಾನವು ‘ಧ್ರುವೀಯ ಸಮೋಷ್ಣ ಮಂಡಲದ ಮೋಡಗಳು’ (PSCs) ಎಂದು ಕರೆಯಲ್ಪಡುವ ಮಂಜುಗಡ್ಡೆಯ ರೀತಿಯ ಮೋಡಗಳನ್ನು ಸೃಷ್ಟಿಸುತ್ತದೆ (ಇದು ರಾಸಾಯನಿಕ ಕ್ರಿಯೆಗೆ ಪೂರಕವಾಗಿದೆ).

    ಓಝೋನ್ ಪದರದ ಸವಕಳಿಯನ್ನು ತಡೆಗಟ್ಟುವ ಕ್ರಮಗಳು:

    ವಿಯೆನ್ನಾ ಸಮಾವೇಶದ ಬಗ್ಗೆ:

    • ಉದ್ದೇಶ:- ಓಝೋನ್ ಪದರದ ಸವಕಳಿಯಿಂದ ಉಂಟಾಗುವ ಯಾವುದೇ ಹಾನಿಕಾರಕ ಪರಿಣಾಮಗಳಿಂದ ಮಾನವನ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸುವುದು.
    • ನಡೆದ ಸ್ಥಳ:- ವಿಯೆನ್ನಾ, ಆಸ್ಟ್ರಿಯಾ.
    • ಅಂಗೀಕಾರ – 1985 ರಲ್ಲಿ.
    • ಜಾರಿಗೆ ಬಂದಿದ್ದು – 1988 ರಲ್ಲಿ.

    ಮಾಂಟ್ರಿಯಲ್ ಶಿಷ್ಟಾಚಾರದ ಬಗ್ಗೆ

    • ಜಾರಿ:- ಇದನ್ನು 1987 ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ಅಂಗೀಕರಿಸಲಾಯಿತು ಮತ್ತು 1989 ರಲ್ಲಿ ಜಾರಿಗೆ ಬಂದಿತು.
    • ಉದ್ದೇಶ:- ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಓಝೋನ್ ಪದರವನ್ನು ರಕ್ಷಿಸುವುದು.
    • ಕಿಗಾಲಿ ತಿದ್ದುಪಡಿ:- 2016 ರಲ್ಲಿ ರುವಾಂಡಾದ ಕಿಗಾಲಿಯಲ್ಲಿ ಕಾನೂನುಬದ್ಧವಾಗಿ ಬದ್ಧವಾಗಿರುವ ಕಿಗಾಲಿ ತಿದ್ದುಪಡಿಯನ್ನು ಅನುಮೋದಿಸುವ ಮೂಲಕ ಈ ಪ್ರೋಟೋಕಾಲ್ ಅನ್ನು ಇನ್ನಷ್ಟು ಬಲಪಡಿಸಲಾಯಿತು.
    • ಮಹತ್ವ:- ಇದು 2040 ರ ದಶಕದ ಅಂತ್ಯದ ವೇಳೆಗೆ ಪ್ರಬಲ ಹಸಿರುಮನೆ ಅನಿಲಗಳಾಗಿರುವ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಉತ್ಪಾದನೆಯನ್ನು ಹಂತಹಂತವಾಗಿ ತೆಗೆದುಹಾಕುವ ಗುರಿಯನ್ನು ಇದು ಹೊಂದಿದೆ.

    ಅಸ್ಸಾಂನಲ್ಲಿ ಎರಡು ರಣಹದ್ದು ಪ್ರಭೇದಗಳನ್ನು ಮರು ಪರಿಚಯಿಸಲಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS)

    ಸಾಮಾನ್ಯ ಅಧ್ಯಯನ- 3/ ಪರಿಸರ

    ಅಪಾಯಗಳು:

    • ಡೈಕ್ಲೋಫೆನಾಕ್ ಬಳಕೆ: ಇದು ರಣಹದ್ದುಗಳು ಆಹಾರವಾಗಿ ಸೇವಿಸುವ ಜಾನುವಾರುಗಳ ಮೃತದೇಹದಲ್ಲಿ ಕಂಡುಬಂದಿರುವ ಪಶುವೈದ್ಯಕೀಯ ಸ್ಟಿರಾಯ್ಡ್ ರಹಿತ ಉರಿಯೂತ ಶಮನಕಾರಿ ಔಷಧ (NSAID) ವಾಗಿದೆ. ರಣಹದ್ದುಗಳ ಸಾವಿಗೆ ಪ್ರಮುಖ ಕಾರಣವಾದ ಡೈಕ್ಲೋಫೆನಾಕ್‌ನ ಪಶುವೈದ್ಯಕೀಯ ಬಳಕೆಯನ್ನು 2008 ರಲ್ಲಿ ನಿಷೇಧಿಸಲಾಗಿದೆ.
    • ಕೀಟನಾಶಕಗಳು: ಆರ್ಗನೋಕ್ಲೋರಿನ್ ಕೀಟನಾಶಕ, ಪಾಲಿಕ್ಲೋರಿನೇಟೆಡ್ ಬೈಫಿನೈಲ್ಸ್, ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಮತ್ತು ಭಾರ ಲೋಹಗಳ ಇರುವಿಕೆ ಕೂಡ ಮರಣಕ್ಕೆ ಪ್ರಮುಖ ಕಾರಣಗಳಾಗಿವೆ.
    • ಇತರೆ ಅಪಾಯಗಳು: ಗೂಡುಕಟ್ಟುವ ಮರಗಳ ಕೊರತೆ, ವಿದ್ಯುತ್ ತಂತಿಗಳಿಂದ ಉಂಟಾಗುವ ವಿದ್ಯುದಾಘಾತ, ಆಹಾರದ ಕೊರತೆ ಮತ್ತು ಕಲುಷಿತ ಆಹಾರ ಸೇವನೆ. 

    ಸಂರಕ್ಷಣಾ ಪ್ರಯತ್ನಗಳು:

    • ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಯು “ರಣಹದ್ದು ಸಂರಕ್ಷಣಾ ಕ್ರಿಯಾ ಯೋಜನೆ 2020-2025” ಕ್ಕೆ ಅನುಮೋದನೆ ನೀಡಿದೆ. 
    • ರಣಹದ್ದು ಸಂರಕ್ಷಣಾ ಕೇಂದ್ರ: ಉತ್ತರ ಪ್ರದೇಶ, ತ್ರಿಪುರಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರಗಳನ್ನು ಸ್ಥಾಪಿಸುವುದು. 
    • ಭಾರತವು ಪೂರ್ವೀಯ ಬಿಳಿ ಬೆನ್ನಿನ ರಣಹದ್ದು, ಉದ್ದನೆಯ ಕೊಕ್ಕಿನ ರಣಹದ್ದು ಮತ್ತು ತೆಳುವಾದ ಕೊಕ್ಕಿನ ರಣಹದ್ದು – ಈ ಮೂರು ಪ್ರಭೇದಗಳ 99% ರಷ್ಟು ಸಂತತಿಯನ್ನು ಈಗಾಗಲೇ ಕಳೆದುಕೊಂಡಿದೆ.

    ಸಂರಕ್ಷಣಾ ಸ್ಥಿತಿಗತಿ:

    • ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ:
    • ಅನುಸೂಚಿ-1: ಗಡ್ಡಧಾರಿ (ಬಿಯರ್ಡೆಡ್) ರಣಹದ್ದು, ಉದ್ದನೆಯ ಕೊಕ್ಕಿನ ರಣಹದ್ದು, ತೆಳುವಾದ ಕೊಕ್ಕಿನ ರಣಹದ್ದು, ಪೂರ್ವೀಯ ಬಿಳಿ ಬೆನ್ನಿನ ರಣಹದ್ದು.
    • ಉಳಿದವುಗಳನ್ನು ‘ಅನುಸೂಚಿ IV ರ ಅಡಿಯಲ್ಲಿ ರಕ್ಷಿಸಲಾಗಿದೆ.
    • IUCN ಕೆಂಪು ಪಟ್ಟಿ:
    • ತೀವ್ರ ಅಳಿವಿನಂಚಿನಲ್ಲಿರುವ (CR): ಪೂರ್ವೀಯ ಬಿಳಿ ಬೆನ್ನಿನ ರಣಹದ್ದು, ಉದ್ದನೆಯ ಕೊಕ್ಕಿನ ರಣಹದ್ದು, ತೆಳುವಾದ ಕೊಕ್ಕಿನ ರಣಹದ್ದು ಮತ್ತು ಕೆಂಪು ತಲೆಯ ರಣಹದ್ದು.
    • ಅಳಿವಿನಂಚಿನಲ್ಲಿರುವ (EN): ಈಜಿಪ್ಟಿನ ರಣಹದ್ದು.
    • ಕನಿಷ್ಠ ಕಾಳಜಿ ಇರುವ (LC): ಯುರೇಷಿಯನ್ ಗ್ರಿಫನ್.
    • ಅಪಾಯದ ಸಮೀಪದಲ್ಲಿರುವ (NT): ಹಿಮಾಲಯದ ಗ್ರಿಫಿನ್, ಗಡ್ಡಧಾರಿ (ಬಿಯರ್ಡೆಡ್) ರಣಹದ್ದು ಮತ್ತು ಬೂದು ಬಣ್ಣದ (ಸಿನಿರಿಯಸ್) ರಣಹದ್ದು.

    ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಯ ಬಗ್ಗೆ:

    • ಇದು ಭಾರತದ ಅತಿದೊಡ್ಡ ಮತ್ತು ಹಳೆಯ ಸರ್ಕಾರೇತರ ಸಂಸ್ಥೆಗಳಲ್ಲಿ (NGO) ಒಂದಾಗಿದೆ.
    • ಇದನ್ನು ಸೆಪ್ಟೆಂಬರ್ 15, 1883 ರಂದು ಮುಂಬೈನಲ್ಲಿ ಸ್ಥಾಪಿಸಲಾಯಿತು.
    • ಉದ್ದೇಶ:- ಸಂಶೋಧನೆ, ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಆಧಾರಿತ ಕ್ರಮಗಳ ಮೂಲಕ ಪ್ರಕೃತಿಯನ್ನು ಸಂರಕ್ಷಿಸುವುದು.

    ಕುಷ್ಠರೋಗ (Leprosy)

    ಸಾಮಾನ್ಯ ಅಧ್ಯಯನ- 2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಕುಷ್ಠರೋಗ ಪೀಡಿತ ವ್ಯಕ್ತಿಗಳು ಎದುರಿಸುತ್ತಿರುವ ತಾರತಮ್ಯವನ್ನು ನಿವಾರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನ ನೀಡಿದೆ.

    ಕುಷ್ಠರೋಗದ ಬಗ್ಗೆ:

    • ಕುಷ್ಠರೋಗವನ್ನು ಹ್ಯಾನ್ಸೆನ್ಸ್ ಕಾಯಿಲೆ ಎಂತಲೂ ಕರೆಯಲಾಗುತ್ತದೆ.
    • ರೋಗಕಾರಕ: ಇದು ‘ಮೈಕೋಬ್ಯಾಕ್ಟೀರಿಯಂ ಲೆಪ್ರೆ’ ಎಂಬ ಒಂದು ಬಗೆಯ ಬ್ಯಾಕ್ಟೀರಿಯಾದಿಂದ ಉಂಟಾಗುವ ದೀರ್ಘಕಾಲದ ಸಾಂಕ್ರಾಮಿಕ ರೋಗವಾಗಿದೆ.
    • ಇದು ಬಾಲ್ಯದಿಂದ ಮುಪ್ಪಿನವರೆಗೆ ಎಲ್ಲಾ ವಯಸ್ಸಿನವರಲ್ಲಿಯೂ ಕಂಡುಬರುತ್ತದೆ.
    • ರೋಗಲಕ್ಷಣಗಳು: ಈ ರೋಗವು ಪ್ರಮುಖವಾಗಿ ಚರ್ಮ ಮತ್ತು ಪರಿಧೀಯ ನರಗಳ ಮೇಲೆ ಪರಿಣಾಮ ಬೀರುತ್ತದೆ.
      • ರೋಗ ಪೀಡಿತ ಪ್ರದೇಶದಲ್ಲಿ ಸ್ಪರ್ಶ ಸಂವೇದನೆಯ ನಷ್ಟ ಉಂಟಾಗುತ್ತದೆ.
      • ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ಈ ಕಾಯಿಲೆಯು ಉಲ್ಬಣಗೊಂಡು ಶಾಶ್ವತ ಅಂಗವೈಕಲ್ಯಗಳಿಗೆ ಕಾರಣವಾಗಬಹುದು.
    • ಹರಡುವಿಕೆ: ಸೋಂಕಿತ ವ್ಯಕ್ತಿಯ ಮೂಗು ಮತ್ತು ಬಾಯಿಯಿಂದ ಹೊರಬರುವ ತುಂತುರು ಹನಿಗಳ ಮೂಲಕ ಇದು ಹರಡುತ್ತದೆ.
    • ಚಿಕಿತ್ಸೆ: ಕುಷ್ಠರೋಗವು “ಬಹು ಔಷಧ ಚಿಕಿತ್ಸೆ” (MDTಮಲ್ಟಿ-ಡ್ರಗ್ ಥೆರಪಿ) ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದೆ.

    ಭಾರತದಲ್ಲಿ ಕುಷ್ಠರೋಗ:

    • ವಿಶ್ವದಾದ್ಯಂತ ವರದಿಯಾಗುವ ಕುಷ್ಠರೋಗ ಪ್ರಕರಣಗಳಲ್ಲಿ ಸುಮಾರು 57% ರಷ್ಟು ಪ್ರಕರಣಗಳು ಭಾರತದಲ್ಲಿಯೇ ವರದಿಯಾಗುತ್ತಲೆ ಇವೆ.
    • ಕುಷ್ಠರೋಗದ ಹರಡುವಿಕೆ ಹೆಚ್ಚಿರುವ ರಾಜ್ಯಗಳು – ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾ.

    ಕುಷ್ಠರೋಗ ನಿರ್ಮೂಲನಾ ಪ್ರಯತ್ನಗಳು:

    • ರಾಷ್ಟ್ರೀಯ ಕಾರ್ಯತಂತ್ರ ಯೋಜನೆ (NSP) ಮತ್ತು ಕುಷ್ಠರೋಗ ಮಾರ್ಗಸೂಚಿ (2023-27): 2027 ರ ವೇಳೆಗೆ ಕುಷ್ಠರೋಗದ ಪ್ರಸರಣವನ್ನು ಶೂನ್ಯ ಮಟ್ಟಕ್ಕೆ ತಲುಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು 2023 ರಲ್ಲಿ ಪ್ರಾರಂಭಿಸಲಾಯಿತು.
    • ಸುಸ್ಥಿರ ಅಭಿವೃದ್ಧಿ ಗುರಿ (SDG) 3.3: ಇದು 2030 ರ ವೇಳೆಗೆ ಕುಷ್ಠರೋಗವನ್ನು ನಿರ್ಮೂಲನೆಗೊಳಿಸುವ ಗುರಿಯನ್ನು ಹೊಂದಿದೆ.
    • ವಿಶ್ವ ಆರೋಗ್ಯ ಸಂಸ್ಥೆಯು, ಜೋರ್ಡಾನ್ ದೇಶವನ್ನು 2024 ರಲ್ಲಿ ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ವಿಶ್ವದ ಮೊದಲ ರಾಷ್ಟ್ರವೆಂದು ಘೋಷಿಸಿತು.

    ಉಸಿರಾಟದ ಮೂಲಕ ದೇಹದ ಒಳಗೆ ಸೇರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು (iMPs – Inhalable Microplastics)

    ಸಾಮಾನ್ಯ ಅಧ್ಯಯನ- 2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಭಾರತದ ಪ್ರಮುಖ ಮಾರುಕಟ್ಟೆಗಳ ಗಾಳಿಯಲ್ಲಿ ಉಸಿರಾಟದ ಮೂಲಕ ದೇಹದ ಒಳಗೆ ಸೇರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ (iMPs) ಇರುವಿಕೆಯನ್ನು ಬಹಿರಂಗಪಡಿಸಿದೆ.
    • ಇವುಗಳನ್ನು PM2.5 ಮತ್ತು PM10 ಗೆ ಹೋಲಿಸಬಹುದಾದ ಹೊಸ ವರ್ಗದ ಮಾಲಿನ್ಯಕಾರಕಗಳಾಗಿ ಗುರುತಿಸಲಾಗಿದೆ.

    ಉಸಿರಾಟದ ಮೂಲಕ ದೇಹದ ಒಳಗೆ ಸೇರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳ (iMPs) ಬಗ್ಗೆ:

    • ಇವು 10 ಮೈಕ್ರೋಮೀಟರ್‌ಗಿಂತ (ಮೈಕ್ರಾನ್) ಕಡಿಮೆ ಗಾತ್ರದ ಪ್ಲಾಸ್ಟಿಕ್ ಕಣಗಳಾಗಿದ್ದು, ಮೂಗಿನ ಮೂಲಕ ಮಾನವನ ಶ್ವಾಸಕೋಶವನ್ನು ಪ್ರವೇಶಿಸಬಲ್ಲವು.
    • ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಇವುಗಳ ಅತಿ ಹೆಚ್ಚು ಸಾಂದ್ರತೆ ಕಂಡುಬಂದಿದ್ದು, ನಗರದ ‘ಕಣರೂಪಿ ವಸ್ತುಗಳಲ್ಲಿ’ (PM) iMP ಗಳು 5% ರಷ್ಟು ಪಾಲನ್ನು ಹೊಂದಿವೆ. ಇವು ಹೆಚ್ಚಾಗಿ ಕೃತಕ ಬಟ್ಟೆಗಳು, ಹೊದಿಕೆ ಸಾಮಗ್ರಿಗಳು, ಟೈರ್ ಸವಕಳಿ ಮತ್ತು ಪಾದರಕ್ಷೆಗಳಿಂದ ಬರುತ್ತವೆ.
    • ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಶ್ವಾಸಕೋಶದ ಆಳಕ್ಕೆ ತೂರಿಕೊಂಡು, ರಕ್ತಪ್ರವಾಹವನ್ನು ಪ್ರವೇಶಿಸಬಹುದು. ಅಲ್ಲದೆ, ಡೈಥೈಲ್ ಥಾಲೇಟ್ ಮತ್ತು ಸೀಸದಂತಹ ಭಾರ ಲೋಹಗಳಂತಹ ವಿಷಕಾರಿ ರಾಸಾಯನಿಕಗಳಿಗೆ ವಾಹಕಗಳಾಗಿ ವರ್ತಿಸುತ್ತವೆ.
    • ಇವು ಕ್ಯಾನ್ಸರ್, ಉಸಿರಾಟದ ಸಮಸ್ಯೆಗಳು, ಹಾರ್ಮೋನ್ ಮತ್ತು ನರವೈಜ್ಞಾನಿಕ ಕಾಯಿಲೆಗಳ ಅಪಾಯವನ್ನು ಒಡ್ಡುತ್ತವೆ.

    ಭಾರತದಲ್ಲಿ ಆಕ್ರಮಣಕಾರಿ ವಿದೇಶಿ ಸಸ್ಯಗಳು (Invasive Alien Plants)

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಹವಾಮಾನ ಬದಲಾವಣೆ, ಭೂ ಬಳಕೆಯಲ್ಲಾಗುತ್ತಿರುವ ಬದಲಾವಣೆಗಳು ಮತ್ತು ಜೀವವೈವಿಧ್ಯದ ನಷ್ಟದಿಂದಾಗಿ, ಆಕ್ರಮಣಕಾರಿ ವಿದೇಶಿ ಸಸ್ಯಗಳು ಭಾರತದ ಪರಿಸರ ವ್ಯವಸ್ಥೆಗಳನ್ನು ತ್ವರಿತವಾಗಿ ಪರಿವರ್ತಿಸುತ್ತಿವೆ. ಪಶ್ಚಿಮ ಘಟ್ಟಗಳು, ಹಿಮಾಲಯ ಮತ್ತು ಈಶಾನ್ಯ ಭಾರತದಂತಹ ಸೂಕ್ಷ್ಮ ಪರಿಸರ ವಲಯಗಳಲ್ಲಿ ಇವುಗಳ ವ್ಯಾಪ್ತಿ ಸುಮಾರು ದ್ವಿಗುಣಗೊಂಡಿದೆ.

    ಆಕ್ರಮಣಕಾರಿ ವಿದೇಶಿ ಸಸ್ಯಗಳ ಬಗ್ಗೆ:

    • ವ್ಯಾಖ್ಯಾನ:- ಆಕ್ರಮಣಕಾರಿ ಪ್ರಭೇದಗಳು ಸ್ಥಳೀಯವಲ್ಲದ ಪ್ರಭೇದಗಳಾಗಿದ್ದು, ಇವುಗಳನ್ನು ಹೊಸ ಪರಿಸರಕ್ಕೆ ಪರಿಚಯಿಸಿದಾಗ, ಅವು ಅಲ್ಲಿನ ಪರಿಸರ ವ್ಯವಸ್ಥೆ, ಆರ್ಥಿಕತೆ ಅಥವಾ ಮಾನವನ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ.
    • ಈ ಪ್ರಭೇದಗಳು ಸಾಮಾನ್ಯವಾಗಿ ಸ್ಥಳೀಯ ಪ್ರಭೇದಗಳೊಂದಿಗೆ ಸ್ಪರ್ಧಿಸಿ ಅವುಗಳನ್ನು ನಿಯಂತ್ರಿಸುತ್ತವೆ ಅಥವಾ ಅವುಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಅಲ್ಲದೆ ನೈಸರ್ಗಿಕ ಪ್ರಕ್ರಿಯೆಗಳನ್ನು ಅಡ್ಡಿಪಡಿಸುತ್ತವೆ ಮತ್ತು ಗಂಭೀರ ಸ್ವರೂಪದ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತವೆ.
    • ಇವು ಸಸ್ಯಗಳು, ಪ್ರಾಣಿಗಳು, ಶಿಲೀಂಧ್ರಗಳು ಅಥವಾ ಸೂಕ್ಷ್ಮಣು ಜೀವಿಗಳೂ ಆಗಿರಬಹುದು.

    ಆಕ್ರಮಣಕಾರಿ ಪ್ರಭೇದಗಳ ಲಕ್ಷಣಗಳು:

    • ಶೀಘ್ರುವಾಗಿ ಸಂತಾನೋತ್ಪತ್ತಿ ಮತ್ತು ಬೆಳವಣಿಗೆ.
    • ಅತ್ಯಧಿಕ ಪ್ರಸರಣ ಸಾಮರ್ಥ್ಯ.
    • ವಿಸ್ತೃತ ಆಹಾರ ಮೂಲಗಳ ಬಳಕೆ/ ವ್ಯಾಪ್ತಿ.
    • ಹೊಸ ಪರಿಸ್ಥಿತಿಗಳಿಗೆ ಶಾರೀರಿಕ ಹೊಂದಿಕೊಳ್ಳುವಿಕೆ.
    • ವಿವಿಧ ಪರಿಸರ ಅಂಶಗಳನ್ನು ತಡೆದುಕೊಳ್ಳುವ ಸಹಿಷ್ಣುತೆ.
    • ಸುತ್ತಮುತ್ತಲಿನ ಪರಿಸರಕ್ಕೆ ಅನುಗುಣವಾಗಿ ತಮ್ಮ ಬೆಳವಣಿಗೆಯ ಸ್ವರೂಪಗಳನ್ನು ಬದಲಾಯಿಸಿಕೊಳ್ಳುವ ಸಾಮರ್ಥ್ಯ.

    ಭಾರತದಲ್ಲಿ ಕಂಡುಬರುವ ಸಾಮಾನ್ಯ ಆಕ್ರಮಣಕಾರಿ ಪ್ರಭೇದಗಳು:

    • ವೈಪರ್ ಹುಲ್ಲು (Viper grass)
    • ಲ್ಯಾಂಟಾನಾ ಕಾಮಾರಾ ಸಸ್ಯ (Lantana camara)
    • ಪ್ರೊಸೊಪಿಸ್ ಜೂಲಿಫ್ಲೋರಾ/ ವಿಲಾಯತಿ ಬಾಬುಲ್ (Prosopis juliflora)
    • ನೀರಿನ ಹಯಸಿಂತ್ / ಜಲಕುಂಭಿ (Water hyacinth)
    • ಆಫ್ರಿಕಾದ ಕ್ಯಾಟ್‌ಫಿಶ್ (African catfish)
    • ಹತ್ತಿ ಮೀಲಿ ಕೀಟ (Cotton Mealy Bug)
    • ಪ್ರೈಮರೋಸ್ ವಿಲೋ ಸಸ್ಯ (Primrose Willow)

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಕ್ರಮಗಳು:

    • ಜೈವಿಕ ವೈವಿಧ್ಯತೆಯ ಮೇಲಿನ ವಿಶ್ವಸಂಸ್ಥೆಯ ಸಮಾವೇಶ (UNCBD – 1992):- ಪರಿಸರ ವ್ಯವಸ್ಥೆಗಳು, ಆವಾಸಸ್ಥಾನಗಳು ಅಥವಾ ಪ್ರಭೇದಗಳಿಗೆ ಬೆದರಿಕೆ ಒಡ್ಡುವ ಆಕ್ರಮಣಕಾರಿ ವಿದೇಶಿ ಪ್ರಭೇದಗಳ ಪರಿಚಯವನ್ನು ತಡೆಯುವ, ನಿಯಂತ್ರಿಸುವ ಅಥವಾ ನಿರ್ಮೂಲನೆ ಮಾಡುವ ಅಗತ್ಯವನ್ನು ಈ ಸಮಾವೇಶವು ಪ್ರತಿಪಾದಿಸುತ್ತದೆ.
    • ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೀವವೈವಿಧ್ಯ ಚೌಕಟ್ಟು (KMGBF – 2022):- ಇದನ್ನು ಯುಎನ್-ಸಿಬಿಡಿ (UN CBD) ಅಡಿಯಲ್ಲಿ ಅಂಗೀಕರಿಸಲಾಗಿದ್ದು, 2030 ರ ವೇಳೆಗೆ ಆಕ್ರಮಣಕಾರಿ ವಿದೇಶಿ ಪ್ರಭೇದಗಳ ಪರಿಚಯ ಮತ್ತು ಸ್ಥಾಪನೆಯ ಪ್ರಮಾಣವನ್ನು ಕನಿಷ್ಠ 50% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
    • ಜಾಗತಿಕ ಆಕ್ರಮಣಕಾರಿ ಪ್ರಭೇದಗಳ ಕಾರ್ಯಕ್ರಮ (GISP):– ಇದು ಪ್ರಪಂಚದಾದ್ಯಂತ ಆಕ್ರಮಣಕಾರಿ ಪ್ರಭೇದಗಳ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಸಂಶೋಧನೆ, ಸಾಮರ್ಥ್ಯ ವರ್ಧನೆ ಮತ್ತು ನಿರ್ವಹಣಾ ತಂತ್ರಗಳನ್ನು ಬೆಂಬಲಿಸುತ್ತದೆ.

    ರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಕ್ರಮಗಳು:

    • ಆಕ್ರಮಣಕಾರಿ ವಿದೇಶಿ ಪ್ರಭೇದಗಳ ಮೇಲಿನ ರಾಷ್ಟ್ರೀಯ ಕ್ರಿಯಾ ಯೋಜನೆ (NAPINVAS):– ಇದು ಆಕ್ರಮಣಕಾರಿ ಪ್ರಭೇದಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಹಚ್ಚುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ.
    • ರಾಷ್ಟ್ರೀಯ ಆಕ್ರಮಣಕಾರಿ ಪ್ರಭೇದಗಳ ಮಾಹಿತಿ ಕೇಂದ್ರ (NISIC):– ಇದು ಭಾರತದಲ್ಲಿನ ಆಕ್ರಮಣಕಾರಿ ಪ್ರಭೇದಗಳ ಕುರಿತು ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ.
    • ‘ಹಿಮಾಲಯನ್ ಎನ್ವಿರಾನ್ಮೆಂಟಲ್ ಫೌಂಡೇಶನ್’, ಹಿಮಾಲಯ ಭಾಗದಲ್ಲಿ ಲಂಟಾನ ಕ್ಯಾಮಾರಾದಂತಹ ಆಕ್ರಮಣಕಾರಿ ಪ್ರಭೇದಗಳನ್ನು ನಿಯಂತ್ರಿಸಲು ಶ್ರಮಿಸುತ್ತಿದೆ.

    ವಿಶ್ವ ಮಣ್ಣಿನ ದಿನ

    ಸಾಮಾನ್ಯ ಅಧ್ಯಯನ- 3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಆರೋಗ್ಯಕರ ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಣ್ಣಿನ ಸುಸ್ಥಿರ ನಿರ್ವಹಣೆಯನ್ನು ಪ್ರತಿಪಾದಿಸಲು ಪ್ರತಿ ವರ್ಷ ಡಿಸೆಂಬರ್ 5 ರಂದು ‘ವಿಶ್ವ ಮಣ್ಣಿನ ದಿನ’ವನ್ನು ಆಚರಿಸಲಾಗುತ್ತದೆ.

    ವಿಶ್ವ ಮಣ್ಣಿನ ದಿನದ ಬಗ್ಗೆ:

    • ಆಚರಣೆ ದಿನ:- ಡಿಸೆಂಬರ್ 5.
    • ಆಚರಿಸುವ ಸಂಸ್ಥೆ:- ಅಂತರರಾಷ್ಟ್ರೀಯ ಮಣ್ಣು ವಿಜ್ಞಾನ ಒಕ್ಕೂಟ (IUSS).
    • 2025 ರ ಘೋಷವಾಕ್ಯ:- “ಆರೋಗ್ಯಕರ ನಗರಗಳಿಗಾಗಿ ಆರೋಗ್ಯಕರ ಮಣ್ಣು”

    ಮಣ್ಣಿನ ಸಂರಕ್ಷಣೆಗಾಗಿ ಕೈಗೊಂಡ ಉಪಕ್ರಮಗಳು:

    • ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ:– ಈ ಯೋಜನೆಯು ರೈತರಿಗೆ ಮಣ್ಣಿನ ಪೋಷಕಾಂಶಗಳ ಸ್ಥಿತಿಗತಿ ವರದಿಗಳನ್ನು ಒದಗಿಸುತ್ತದೆ. ಸಮತೋಲಿತ ರಸಗೊಬ್ಬರ ಬಳಕೆಯನ್ನು ಉತ್ತೇಜಿಸುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
    • ಸಾವಯವ ಕೃಷಿಗೆ ಉತ್ತೇಜನ:– ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ “ಪರಂಪರಾಗತ ಕೃಷಿ ವಿಕಾಸ್ ಯೋಜನೆ” (PKVY) ಯಂತಹ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ.

    ಜಾಗತಿಕ ಉಪಕ್ರಮಗಳು:

    • ಜಾಗತಿಕ ಮಣ್ಣಿನ ಪಾಲುದಾರಿಕೆ (GSP):– ಇದು ಜಾಗತಿಕ ಮಣ್ಣಿನ ಆಡಳಿತವನ್ನು ಸುಧಾರಿಸಲು ಮತ್ತು ಸುಸ್ಥಿರ ಮಣ್ಣಿನ ನಿರ್ವಹಣೆಯನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಯ ನೇತೃತ್ವದ ಒಂದು ಉಪಕ್ರಮವಾಗಿದೆ.
    • ಮರುಭೂಮೀಕರಣವನ್ನು ತಡೆಗಟ್ಟುವ ವಿಶ್ವಸಂಸ್ಥೆಯ ಸಮಾವೇಶ (UNCCD):– ಇದು ಜಾಗತಿಕವಾಗಿ ಭೂ ಸವಕಳಿಯನ್ನು ತಡೆಗಟ್ಟಲು ಮತ್ತು ಸುಸ್ಥಿರ ಭೂ ನಿರ್ವಹಣೆಯನ್ನು ಉತ್ತೇಜಿಸಲು ಶ್ರಮಿಸುತ್ತದೆ.
    • ಇದು 2030 ರ ವೇಳೆಗೆ ‘ಭೂ ಸವಕಳಿ ತಟಸ್ಥತೆ’ (LDN) ಸಾಧಿಸುವ ಪ್ರತಿಜ್ಞೆಯನ್ನು ಹೊಂದಿದೆ.

    ಕೂನೋ ರಾಷ್ಟ್ರೀಯ ಉದ್ಯಾನವನ

    ಸಾಮಾನ್ಯ ಅಧ್ಯಯನ- 3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಅಂತರರಾಷ್ಟ್ರೀಯ ಚಿರತೆ ದಿನ (ಡಿಸೆಂಬರ್ 4) ದಂದು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಕೂನೋ ರಾಷ್ಟ್ರೀಯ ಉದ್ಯಾನವನದ ಮುಕ್ತ ಅರಣ್ಯಕ್ಕೆ ಮೂರು ಚಿರತೆಗಳನ್ನು ಬಿಡುಗಡೆ ಮಾಡಿದರು.

    ಕೂನೋ ರಾಷ್ಟ್ರೀಯ ಉದ್ಯಾನವನದ ಬಗ್ಗೆ:

    • ಸ್ಥಳ:- ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆ.
    • ನಿರಂತರವಾಗಿ ಹರಿಯುವ ಚಂಬಲ್ ನದಿಯ ಉಪನದಿಯಾದ “ಕೂನೋ ನದಿಯು” ಈ ಉದ್ಯಾನವನದ ಮೂಲಕ ಹರಿಯುವುದರಿಂದ, ಇದಕ್ಕೆ ಈ ಹೆಸರು ಬಂದಿದೆ.
    • ಅಧಿಸೂಚನೆ:- 1981 ರಲ್ಲಿ ಇದನ್ನು “ಕೂನೋ ವನ್ಯಜೀವಿ ಅಭಯಾರಣ್ಯ”ವನ್ನಾಗಿ ಅಧಿಸೂಚಿಸಲಾಯಿತು.
    • ಅರಣ್ಯದ ಪ್ರಕಾರ:- ಉತ್ತರದ ಉಷ್ಣವಲಯದ ಶುಷ್ಕ ಎಲೆ ಉದುರುವ ಕಾಡುಗಳು.

    ಹಿನ್ನೆಲೆ:

    • ದಶಕಗಳಿಂದ ಅತಿಯಾದ ಬೇಟೆ, ಆವಾಸಸ್ಥಾನಗಳ ವಿಘಟನೆ ಮತ್ತು ಬೇಟೆ ಪ್ರಭೇದಗಳ (ಆಹಾರದ) ಸಂಖ್ಯೆಯ ಕುಸಿತದ ಕಾರಣದಿಂದ, ಭಾರತ 1952 ರಲ್ಲಿ ಚಿರತೆಗಳು ಅಳಿದುಹೋಗಿವೆ ಎಂದು ಘೋಷಿಸಿತು.
    • ಪ್ರಾಜೆಕ್ಟ್ ಚೀತಾ, 2022 ರಲ್ಲಿ ಪ್ರಾರಂಭವಾಗಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಚಿರತೆಗಳ ಆಗಮನವು, ಬೃಹತ್ ಮಾಂಸಾಹಾರಿ ಪ್ರಾಣಿಯೊಂದರ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯನ್ನು ಸೃಷ್ಟಿಸಿತು.
    • ಬೋಟ್ಸ್ವಾನ:- ಇದು ಭೂ ಆವೃತ ರಾಷ್ಟ್ರವಾಗಿದ್ದು, ಇದರ ಭೂಪ್ರದೇಶದ ಸುಮಾರು 70% ರಷ್ಟು ಭಾಗ ಕಲಹರಿ ಮರುಭೂಮಿಯಿಂದ ಆವೃತವಾಗಿದೆ. ಇದು ವಿಶ್ವದ ಅತಿದೊಡ್ಡ ಅರಣ್ಯ ಚಿರತೆಗಳ ಸಂತತಿಯನ್ನು ಹೊಂದಿದೆ.

    ಪ್ರಾಜೆಕ್ಟ್ ಚೀತಾ (ಚೀತಾ ಯೋಜನೆ), 2022 ರ ಬಗ್ಗೆ:

    • ಪ್ರಾಜೆಕ್ಟ್ ಚೀತಾ ಎನ್ನುವುದು ಸೂಕ್ತವಾದ ಮುಕ್ತ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಗಳಲ್ಲಿ ಚಿರತೆಗಳನ್ನು ಮರು ಪರಿಚಯಿಸುವ ಭಾರತದ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.
    • ಪ್ರಾರಂಭಿಸಿದವರು:- ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA), ಇದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 (2006 ರ ತಿದ್ದುಪಡಿ) ರ ಅಡಿಯಲ್ಲಿನ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
    • ವೈಶಿಷ್ಟ್ಯ:- ಇದು ಬೃಹತ್ ಅರಣ್ಯ ಮಾಂಸಾಹಾರಿ ಪ್ರಾಣಿಯ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರವಾಗಿದೆ.
    • ಇಲ್ಲಿಯವರೆಗಿನ ಸ್ಥಳಾಂತರಗಳು:
      • 2022 ರಲ್ಲಿ ನಮೀಬಿಯಾದಿಂದ 8 ಚಿರತೆಗಳು.
      • 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳು.
      • ಬೋಟ್ಸ್ವಾನದಿಂದ 8 ಚಿರತೆಗಳು (2025 ರ ಘೋಷಣೆ).

    ಚಿರತೆಯ (ಅಸಿನೊನಿಕ್ಸ್ ಜುಬಾಟಸ್) ಬಗ್ಗೆ:

    • ಇದು ವಿಶ್ವದ ಅತ್ಯಂತ ವೇಗವಾಗಿ ಓಡುವ ಸಸ್ತನಿ ಮತ್ತು ಭಾರತದಲ್ಲಿ ಅಳಿದುಹೋದ (1952) ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿಯಾಗಿದೆ.
    • ಇತರ ದೊಡ್ಡ ಬೆಕ್ಕುಗಳಂತೆ, ಚಿರತೆಗಳು ಘರ್ಜಿಸುವುದಿಲ್ಲ. 
    • ಇದರಲ್ಲಿ ಎರಡು ಮುಖ್ಯ ಪ್ರಭೇದಗಳಿವೆ:
      1. ಆಫ್ರಿಕಾದ ಚಿರತೆ: ದುರ್ಬಲವಾಗಿವೆ (VU).
      2. ಏಷ್ಯಾದ ಚಿರತೆ: ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದ (CR), ಇವು ಪೂರ್ವ ಇರಾನ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ.

    ನಿಮಗಿದು ಗೊತ್ತೇ? 

    • ಗುಜರಾತ್‌ನಿಂದ ಕೆಲವು ಏಷ್ಯಾಟಿಕ್ ಸಿಂಹಗಳನ್ನು ಮಧ್ಯಪ್ರದೇಶದ ಕೂನೋಗೆ, ಅವುಗಳ ‘ಎರಡನೇ ಆವಾಸಸ್ಥಾನವಾಗಿ ಸ್ಥಳಾಂತರಿಸಲು 2013 ರಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. ಆದೇಶ ಬಂದು ಹನ್ನೆರಡು ವರ್ಷಗಳಾದರೂ, ಆ ಸ್ಥಳಾಂತರ ಪ್ರಕ್ರಿಯೆಯು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
  • ರೋಹಿಂಗ್ಯಾ ಗಡಿಪಾರು ಪ್ರಕರಣದ ಕುರಿತು ಸರ್ವೋಚ್ಚ ನ್ಯಾಯಾಲಯದ ವಿಚಾರಣೆ | ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ (IBC) | ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (CCUS) | ತೂಕ ಇಳಿಕೆಗಾಗಿ GLP-1 ಔಷಧಗಳ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲ | ಸಮಗ್ರ ಶಿಕ್ಷಣ ಯೋಜನೆ | ಮಲೇರಿಯಾ ಪರಾವಲಂಬಿಗಳು | ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ | ನುಮಾಲಿಗಢ ರಿಫೈನರಿ ಲಿಮಿಟೆಡ್‌ (NRL) ಗೆ ‘ನವರತ್ನ’ ಸ್ಥಾನಮಾನ | ಆಹಾರ ಮತ್ತು ಕೃಷಿಗಾಗಿ ವಿಶ್ವದ ಭೂ ಮತ್ತು ಜಲ ಸಂಪನ್ಮೂಲಗಳ ಸ್ಥಿತಿ (SOLAW 2025) | ಡಾ. ರಾಜೇಂದ್ರ ಪ್ರಸಾದ್

    ರೋಹಿಂಗ್ಯಾ ಗಡಿಪಾರು ಪ್ರಕರಣದ ಕುರಿತು ಸರ್ವೋಚ್ಚ ನ್ಯಾಯಾಲಯದ ವಿಚಾರಣೆ

    ಸಾಮಾನ್ಯ ಅಧ್ಯಯನ 2 / ಆಡಳಿತ / ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಕಳೆದ ಮೇ ತಿಂಗಳಿಂದ ದೆಹಲಿ ಪೊಲೀಸರ ವಶದಲ್ಲಿದ್ದ ಹಲವಾರು ರೋಹಿಂಗ್ಯಾ ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ್ದ ‘ಹೇಬಿಯಸ್ ಕಾರ್ಪಸ್’ (ಬಂದಿ ಪ್ರತ್ಯಕ್ಷೀಕರಣ) ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸಿತು.

    ರೋಹಿಂಗ್ಯಾ ಬಿಕ್ಕಟ್ಟಿನ ಬಗ್ಗೆ:

    • ರೋಹಿಂಗ್ಯಾ: ಇವರು ಪ್ರಧಾನವಾಗಿ ಪಶ್ಚಿಮ ಮ್ಯಾನ್ಮಾರ್‌ನ ರಾಖಿಣಿ ಪ್ರಾಂತ್ಯದಲ್ಲಿ ನೆಲೆಸಿರುವ, ಬಹುತೇಕ ಮುಸ್ಲಿಂ ಸಮುದಾಯವನ್ನು ಒಳಗೊಂಡ ಒಂದು ಜನಾಂಗೀಯ ಗುಂಪಿಗೆ ಸೇರಿದ್ದಾರೆ. 
    • ಮ್ಯಾನ್ಮಾರ್ ಸರ್ಕಾರವು ಇವರನ್ನು ದೇಶದ ಪ್ರಜೆಗಳೆಂದು ಪರಿಗಣಿಸದೆ, ‘ಅಕ್ರಮ ವಲಸಿಗರು’ ಮತ್ತು ‘ವಿದೇಶಿ ನಿವಾಸಿಗಳು’ ಎಂದು ವರ್ಗೀಕರಿಸಿದೆ.

    ನಿರಾಶ್ರಿತರ ಸ್ಥಾನಮಾನಕ್ಕೆ ಸಂಬಂಧಿಸಿದ ಸಮಾವೇಶದ ಬಗ್ಗೆ:

    • ಈ ಸಮಾವೇಶವನ್ನು ‘1951ರ ನಿರಾಶ್ರಿತರ ಸಮಾವೇಶ’ ಎಂದೂ ಕರೆಯಲಾಗುತ್ತದೆ.
    • ಜೀವ ಬೆದರಿಕೆ ಅಥವಾ ಸ್ವಾತಂತ್ರ್ಯ ಹರಣದ ಸಾಧ್ಯತೆಯಿರುವ ದೇಶಗಳಿಗೆ ನಿರಾಶ್ರಿತರನ್ನು ಬಲವಂತವಾಗಿ ಹಿಂದಿರುಗಿಸಬಾರದು ಎಂದು ವಿಶ್ವಸಂಸ್ಥೆಯ ಈ ಒಪ್ಪಂದವು ಬಲವಾಗಿ ಪ್ರತಿಪಾದಿಸುತ್ತದೆ.
    • ಭಾರತವು ಈ ಸಮಾವೇಶಕ್ಕೆ ಸಹಿದಾರ ರಾಷ್ಟ್ರವಾಗಿಲ್ಲ.

    ನಾಗರೀಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ಅಂತರರಾಷ್ಟ್ರೀಯ ಒಡಂಬಡಿಕೆ (ICCPR) ಯ ಬಗ್ಗೆ:

    • ಅಂಗೀಕಾರ: ಇದು 1966ರಲ್ಲಿ ವಿಶ್ವಸಂಸ್ಥೆಯಿಂದ ಅಂಗೀಕರಿಸಲ್ಪಟ್ಟ ಬಹುಪಕ್ಷೀಯ ಒಪ್ಪಂದವಾಗಿದೆ.
    • ಈ ಒಡಂಬಡಿಕೆಯು, ಜೀವಿಸುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಸಭೆ ಸೇರುವ ಸ್ವಾತಂತ್ರ್ಯ, ಚುನಾವಣಾ ಹಕ್ಕುಗಳು ಹಾಗೂ ಸೂಕ್ತ ಕಾನೂನು ಪ್ರಕ್ರಿಯೆ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕುಗಳನ್ನು ಒಳಗೊಂಡಂತೆ, ವ್ಯಕ್ತಿಗಳ ನಾಗರೀಕ ಮತ್ತು ರಾಜಕೀಯ ಹಕ್ಕುಗಳನ್ನು ಗೌರವಿಸಲು ತನ್ನ ಸದಸ್ಯ ರಾಷ್ಟ್ರಗಳಿಗೆ ಬದ್ಧತೆಯನ್ನು ವಿಧಿಸುತ್ತದೆ.

    ರೋಹಿಂಗ್ಯಾಗಳ ಕುರಿತು ಭಾರತದ ನಿಲುವು:

    • ಆಪರೇಷನ್ ಇನ್ಸಾನಿಯತ್: ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ಮಾನವೀಯ ನೆರವು ಒದಗಿಸುವ ಉದ್ದೇಶದಿಂದ ಭಾರತವು 2017ರಲ್ಲಿ “ಆಪರೇಷನ್ ಇನ್ಸಾನಿಯತ್” ಅನ್ನು ಪ್ರಾರಂಭಿಸಿತು.

    ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ (IBC)

    ಸಾಮಾನ್ಯ ಅಧ್ಯಯನ- 3 / ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ವ್ಯವಸ್ಥಿತ ಅಸಮರ್ಥತೆಗಳು ಮತ್ತು ರಚನಾತ್ಮಕ ವಿಳಂಬಗಳು ಭಾರತದ ‘ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ’ಯ ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತಿವೆ ಎಂದು ಇತ್ತೀಚೆಗೆ ಹಣಕಾಸಿನ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯು ಎಚ್ಚರಿಸಿದೆ.

    ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ 2016 ರ ಬಗ್ಗೆ:

    • ಇದು ಕಂಪನಿಗಳಲ್ಲಿ ಮತ್ತು ವ್ಯಕ್ತಿಗಳಲ್ಲಿನ ದಿವಾಳಿತನವನ್ನು ಪರಿಹರಿಸಲು ಕಾಲಮಿತಿಯ ಪ್ರಕ್ರಿಯೆಯನ್ನು ಒದಗಿಸುತ್ತದೆ.
    • ಹಣಕಾಸು ನಷ್ಟ (Insolvency) ದ ವ್ಯಾಖ್ಯಾನ: ಇದು ವ್ಯಕ್ತಿಗಳು ಅಥವಾ ಕಂಪನಿಗಳು ತಮ್ಮ ಬಾಕಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಒಂದು ಪರಿಸ್ಥಿತಿಯಾಗಿದೆ.
    • ದಿವಾಳಿ (Bankruptcy) ವ್ಯಾಖ್ಯಾನ: ಇದು ಸಕ್ಷಮ ಅಧಿಕಾರ ವ್ಯಾಪ್ತಿಯ ನ್ಯಾಯಾಲಯವು ವ್ಯಕ್ತಿ ಅಥವಾ ಇತರ ಘಟಕವನ್ನು ‘ದಿವಾಳಿ’ ಎಂದು ಘೋಷಿಸಿ, ಅದನ್ನು ಇತ್ಯರ್ಥಪಡಿಸಲು ಮತ್ತು ಸಾಲದಾತರ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಆದೇಶಗಳನ್ನು ಹೊರಡಿಸುವ ಪರಿಸ್ಥಿತಿಯಾಗಿದೆ. ಇದು ಸಾಲಗಳನ್ನು ತೀರಿಸುವಲ್ಲಿನ ಅಸಮರ್ಥತೆಯ ಕಾನೂನುಬದ್ಧ ಘೋಷಣೆಯಾಗಿದೆ.
    • ಮಹತ್ವ: ಇದು ಅಡೆತಡೆಗಳನ್ನು ನಿವಾರಿಸುವ, ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆಯನ್ನು ಸರಳೀಕರಿಸುವ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ವಲಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಅಂತಿಮ ಹಂತದ ಆರ್ಥಿಕ ನೆರವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

    ನ್ಯಾಯ ನಿರ್ಣಯ ಪ್ರಾಧಿಕಾರ:

    • ಕಂಪನಿ ಮತ್ತು ಎಲ್‌ಎಲ್‌ಪಿ ಗಳಿಗೆ: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT).
    • ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ: ಸಾಲ ವಸೂಲಾತಿ ನ್ಯಾಯಮಂಡಳಿ (DRT).

    ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಯ ಬಗ್ಗೆ: ಶಸ್ತ್ರಾಸ್ತ್ರ 

    • ಸ್ಥಾಪನೆ: ಇದು ಕಂಪನಿಗಳ ಕಾಯ್ದೆ, 2013ರ ಉಪಬಂಧ 408ರ ಅಡಿಯಲ್ಲಿ 2016ರಲ್ಲಿ ರಚಿಸಲಾದ ಒಂದು ಅರೆ-ನ್ಯಾಯಾಂಗ ಸಂಸ್ಥೆಯಾಗಿದೆ.
    • ದಿವಾಳಿತನ ಮತ್ತು ಕಂಪನಿಗಳ ಮುಚ್ಚುವಿಕೆಗೆ ಸಂಬಂಧಿಸಿದ ಕಾನೂನಿನ ಮೇಲಿನ ವಿ. ಬಾಲಕೃಷ್ಣ ಎರಾಡಿ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿದೆ.
    • ಉದ್ದೇಶ: ಈ ನ್ಯಾಯಮಂಡಳಿಯು ಮುಖ್ಯವಾಗಿ ಕಂಪನಿಗಳ ಕಾಯ್ದೆ ಮತ್ತು ದಿವಾಳಿ ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತದೆ.

    ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (CCUS)

    ಸಾಮಾನ್ಯ ಅಧ್ಯಯನ3 / ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (CCUS) ತಂತ್ರಜ್ಞಾನದ ಮೂಲಕ ಭಾರತದ ‘ನಿವ್ವಳ ಶೂನ್ಯ’  ಹೊರಸೂಸುವಿಕೆ ಗುರಿಗಳನ್ನು ತಲುಪಲು ನೆರವಾಗುವ, ದೇಶದ ಮೊಟ್ಟಮೊದಲ ‘ಸಂಶೋಧನೆ ಮತ್ತು ಅಭಿವೃದ್ಧಿ ಮಾರ್ಗಸೂಚಿ’ಯನ್ನು ಬಿಡುಗಡೆ ಮಾಡಲಾಗಿದೆ.

    ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (CCUS) ಯ ಬಗ್ಗೆ:

    • ಇದು ಕೈಗಾರಿಕಾ ಸ್ಥಾವರಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು ಅಥವಾ ಇತರೆ ಹೊರಸೂಸುವ ಮೂಲಗಳಿಂದ ಇಂಗಾಲದ ಡೈಆಕ್ಸೈಡ್ (CO₂) ಅನ್ನು ಸೆರೆಹಿಡಿಯುವ ಪ್ರಕ್ರಿಯೆಯಾಗಿದೆ.
    • ಹೀಗೆ ಸೆರೆಹಿಡಿದ ಇಂಗಾಲವನ್ನು ಮರುಬಳಕೆ ಮಾಡಲಾಗುತ್ತದೆ ಅಥವಾ ಅದನ್ನು ಶಾಶ್ವತವಾಗಿ ಸಂಗ್ರಹಿಸಿಡಲಾಗುತ್ತದೆ. ಉದಾಹರಣೆಗೆ: ಭೂಗರ್ಭದ ಆಳವಾದ ಶಿಲಾಸ್ತರಗಳಲ್ಲಿ ಸಂಗ್ರಹಿಸುವುದು.
    • ಉದ್ದೇಶಿತ ಬಳಕೆಯ ಮಾರ್ಗಗಳು: ಸೆರೆಹಿಡಿದ CO₂ ಅನ್ನು ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ಪರಿವರ್ತಿಸುವುದನ್ನು ಈ ಮಾರ್ಗಸೂಚಿ ಒಳಗೊಂಡಿದೆ. ಉದಾಹರಣೆಗೆ: ಹಸಿರು ಯೂರಿಯಾ (ರಸಗೊಬ್ಬರ), ಕಟ್ಟಡ ನಿರ್ಮಾಣ ಸಾಮಗ್ರಿಗಳು (ಕಾಂಕ್ರೀಟ್, ಜಲ್ಲಿ/ಅಗ್ಗಿ್ರಗೇಟ್ಸ್), ರಾಸಾಯನಿಕಗಳು (ಮೆಥನಾಲ್, ಎಥನಾಲ್), ಪಾಲಿಮರ್‌ಗಳು ಮತ್ತು ಜೈವಿಕ ಪ್ಲಾಸ್ಟಿಕ್‌ಗಳು.

    ನಿಮಗಿದು ಗೊತ್ತೇ ?

    • ಚೀನಾ ಮತ್ತು ಅಮೆರಿಕದ ನಂತರ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಇಂಗಾಲದ ಡೈಆಕ್ಸೈಡ್ (CO₂) ಹೊರಸೂಸುವ 3ನೇ ರಾಷ್ಟ್ರವಾಗಿದೆ. ಭಾರತದ ವಾರ್ಷಿಕ ಹೊರಸೂಸುವಿಕೆಯು ಅಂದಾಜು 2.6 ಗಿಗಾಟನ್ (gtpa) ನಷ್ಟಿದೆ.
    • ಭಾರತ ಸರ್ಕಾರವು 2050ರ ವೇಳೆಗೆ CO₂ ಹೊರಸೂಸುವಿಕೆಯನ್ನು 50% ರಷ್ಟು ತಗ್ಗಿಸಲು ಮತ್ತು 2070ರ ವೇಳೆಗೆ ‘ನಿವ್ವಳ ಶೂನ್ಯ’ ಹಂತವನ್ನು ತಲುಪಲು ಬದ್ಧತೆಯನ್ನು ವ್ಯಕ್ತಪಡಿಸಿದೆ.

    ತೂಕ ಇಳಿಕೆಗಾಗಿ GLP-1 ಔಷಧಗಳ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲ

    ಸಾಮಾನ್ಯ ಅಧ್ಯಯನ2 / ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಸ್ಥೂಲಕಾಯ ಅಥವಾ ಬೊಜ್ಜು ನಿರ್ವಹಣೆಗಾಗಿ ‘ಗ್ಲುಕಗನ್-ಲೈಕ್ ಪೆಪ್ಟೈಡ್-1’ (GLP-1) ಚಿಕಿತ್ಸೆಗಳನ್ನು ಬಳಸುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಇದೇ ಮೊದಲ ಬಾರಿಗೆ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ‘ಗ್ಲುಕಗನ್-ಲೈಕ್ ಪೆಪ್ಟೈಡ್-1’ (GLP-1) ಚಿಕಿತ್ಸೆಗಳ ಬಗ್ಗೆ: 

    • GLP-1 ಚಿಕಿತ್ಸೆಗಳು (ಗ್ಲುಕಗನ್-ಲೈಕ್ ಪೆಪ್ಟೈಡ್-1 ರಿಸೆಪ್ಟರ್ ಅಗೊನಿಸ್ಟ್‌ಗಳು) ಒಂದು ನಿರ್ದಿಷ್ಟ ವರ್ಗದ ಔಷಧಗಳಾಗಿವೆ.
    • ಇವು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ GLP-1 ಹಾರ್ಮೋನ್ ಅನ್ನು ಅನುಕರಿಸುತ್ತವೆ.
    • ಈ ಹಾರ್ಮೋನ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಈ ಮೂಲಕ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ.

    ಸ್ಥೂಲಕಾಯ (ಬೊಜ್ಜು) ದ ಬಗ್ಗೆ:

    • ಇದು ದೇಹದಲ್ಲಿ ಅತಿಯಾದ ಕೊಬ್ಬಿನ ಶೇಖರಣೆಯಿಂದ ಉಂಟಾಗುವ ದೀರ್ಘಕಾಲದ ಸಂಕೀರ್ಣ ಕಾಯಿಲೆಯಾಗಿದೆ.
    • ಇದು ‘ಟೈಪ್ 2 ಮಧುಮೇಹ’ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ಮೂಳೆಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರಬಹುದು.
    • ಇದು ನಿರ್ದಿಷ್ಟ ಬಗೆಯ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುವುದಲ್ಲದೆ, ನಿದ್ರೆ ಅಥವಾ ದೈಹಿಕ ಚಲನೆಯಂತಹ ಜೀವನದ ಗುಣಮಟ್ಟದ ಮೇಲೂ ಋಣಾತ್ಮಕ ಪ್ರಭಾವ ಬೀರುತ್ತದೆ.
    • ಭಾರತದ ಅಂಕಿ-ಅಂಶ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ (NFHS-5) ದತ್ತಾಂಶದ ಪ್ರಕಾರ, ಭಾರತದಲ್ಲಿ 24% ರಷ್ಟು ಮಹಿಳೆಯರು ಮತ್ತು 23% ರಷ್ಟು ಪುರುಷರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

    ಸಮಗ್ರ ಶಿಕ್ಷಣ ಯೋಜನೆ

    ಸಾಮಾನ್ಯ ಅಧ್ಯಯನ 2 / ಕಲ್ಯಾಣ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ‘ಸಮಗ್ರ ಶಿಕ್ಷಣ ಯೋಜನೆ’ಯ ಅಡಿಯಲ್ಲಿ ಕೇಂದ್ರದ ಅನುದಾನವನ್ನು ಬಿಡುಗಡೆ ಮಾಡಿಸಿಕೊಳ್ಳಲು, ರಾಜ್ಯಗಳು ಕಡ್ಡಾಯವಾಗಿ ಈ ಯೋಜನೆಯ ಷರತ್ತುಗಳನ್ನು ಪಾಲಿಸಲೇಬೇಕು ಎಂದು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

    ಸಮಗ್ರ ಶಿಕ್ಷಣ ಯೋಜನೆಯ ಬಗ್ಗೆ:

    • ಪ್ರಾರಂಭ: ಈ ಯೋಜನೆಯನ್ನು 2018-19ನೇ ಸಾಲಿನಲ್ಲಿ ಜಾರಿಗೆ ತರಲಾಯಿತು.
    • ಹಣಕಾಸು ನೆರವು: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಉದ್ದೇಶ: ಪೂರ್ವ ಪ್ರಾಥಮಿಕ ಹಂತದಿಂದ  ಹಿಡಿದು 12ನೇ ತರಗತಿಯವರೆಗೆ ಎಲ್ಲರಿಗೂ ಸಮಾನ, ಅಂತರ್ಗತ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
    • ವೈಶಿಷ್ಟ್ಯಗಳು: ಈ ಯೋಜನೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿವಿಧ ಶೈಕ್ಷಣಿಕ ಸುಧಾರಣಾ ಕ್ರಮಗಳ ಮೂಲಕ ಬೆಂಬಲ ನೀಡುತ್ತದೆ. ಇದರಲ್ಲಿ ಸಂಯೋಜಿತ ಶಾಲಾ ಅನುದಾನಗಳು, ಗ್ರಂಥಾಲಯಗಳ ಅಭಿವೃದ್ಧಿ, ಕ್ರೀಡೆ, ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳ ವಿತರಣೆ, ಐಸಿಟಿ ಉಪಕ್ರಮಗಳು, ಪರಿಹಾರಾತ್ಮಕ ಬೋಧನೆ ಮತ್ತು ನಾಯಕತ್ವದ ಗುಣಮಟ್ಟ ವೃದ್ಧಿಯಂತಹ ಅಂಶಗಳು ಸೇರಿವೆ.

    ಮಹತ್ವ: ಈ ಯೋಜನೆಯು ‘ರಾಷ್ಟ್ರೀಯ ಶಿಕ್ಷಣ ನೀತಿ 2020′ರ ಆಶಯಗಳಿಗೆ ಅನುಗುಣವಾಗಿ ರೂಪಿತವಾಗಿದೆ.

    ಮಲೇರಿಯಾ ಪರಾವಲಂಬಿಗಳು

    ಸಾಮಾನ್ಯ ಅಧ್ಯಯನ 2 / ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಮಾನವನ ದೇಹವನ್ನು ಪ್ರವೇಶಿಸುವ ಮಲೇರಿಯಾದ ಸಾಂಕ್ರಾಮಿಕ ರೂಪಗಳಾದ ‘ಮಲೇರಿಯಾ ಸ್ಪೋರೋಜೋಯೈಟ್‌ಗಳು’, ಚರ್ಮದ ಅಡಿಯಲ್ಲಿ ಬಲಗೈ ಸುರುಳಿಯಾಕಾರದ ಪಥಗಳಲ್ಲಿ ಚಲಿಸುತ್ತವೆ ಎಂದು ಇತ್ತೀಚಿನ ‘ನೇಚರ್ ಫಿಸಿಕ್ಸ್’ ಅಧ್ಯಯನವು ಬಹಿರಂಗಪಡಿಸಿದೆ.

    ಮಲೇರಿಯಾ ರೋಗದ ಬಗ್ಗೆ: 

    • ರೋಗಕಾರಕ ಜೀವಿ: ಮಲೇರಿಯಾವು ‘ಪ್ಲಾಸ್ಮೋಡಿಯಂ‘ ಎಂಬ ಪರಾವಲಂಬಿ ಜೀವಿಗಳಿಂದ ಉಂಟಾಗುವ ತೀವ್ರ ಸ್ವರೂಪದ ಜ್ವರದ ಕಾಯಿಲೆಯಾಗಿದೆ.
    • ರೋಗವಾಹಕ: ಇದು ಸೋಂಕಿತ ಹೆಣ್ಣುಅನಾಫಿಲಿಸ್‘ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದೊಂದು ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ರೋಗವಾಗಿದೆ.
    • ಹರಡುವಿಕೆ: ಮಲೇರಿಯಾವು ನೇರ ಸಂಪರ್ಕದಿಂದ ಹರಡುವ ಸಾಂಕ್ರಾಮಿಕ ರೋಗವಲ್ಲ. ಇದು ಸ್ಪರ್ಶದ ಮೂಲಕ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವುದಿಲ್ಲ; ಕೇವಲ ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಮಾತ್ರವೇ ಇದು ಹರಡುತ್ತದೆ.
    • ಪ್ರಭೇದಗಳು: ಮನುಷ್ಯರಲ್ಲಿ ಮಲೇರಿಯಾವನ್ನು ಉಂಟುಮಾಡುವ 5 ಪರಾವಲಂಬಿ ಪ್ರಭೇದಗಳಿವೆ. ಇವುಗಳಲ್ಲಿ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಮತ್ತು ಪ್ಲಾಸ್ಮೋಡಿಯಂ ವೈವಾಕ್ಸ್ – ಇವೆರಡು ಅತಿ ಹೆಚ್ಚು ಅಪಾಯಕಾರಿಯಾದ ಪ್ರಭೇದಗಳಾಗಿವೆ.

    ರೋಗದ ಲಕ್ಷಣಗಳು: 

    • ಶಿಶುಗಳು, 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು (ಎಚ್ಐವಿ /ಏಡ್ಸ್ ರೋಗಿಗಳು) ಮತ್ತು ಪ್ರಯಾಣಿಕರು ಈ ರೋಗಕ್ಕೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ತೀವ್ರತರವಾದ ರೋಗಲಕ್ಷಣಗಳು ಈ ಕೆಳಗಿನಂತಿವೆ:
    • ಅತಿಯಾದ ಸುಸ್ತು ಮತ್ತು ಬಳಲಿಕೆ.
    • ಪ್ರಜ್ಞಾಹೀನತೆ ಅಥವಾ ಪ್ರಜ್ಞೆ ತಪ್ಪುವುದು.
    • ಪದೇ ಪದೇ ಸೆಳೆತಗಳು ಬರುವುದು.
    • ಉಸಿರಾಟದ ತೊಂದರೆ.
    • ಗಾಢ ಬಣ್ಣದ ಅಥವಾ ರಕ್ತ ಮಿಶ್ರಿತ ಮೂತ್ರ ವಿಸರ್ಜನೆ.
    • ಕಾಮಾಲೆ (ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು).
    • ಅಸಹಜ ರಕ್ತಸ್ರಾವ.

    ವಿಶ್ವ ಆರೋಗ್ಯ ಸಂಸ್ಥೆಯಿಂದ ಮಲೇರಿಯಾ ನಿಯಂತ್ರಣಕ್ಕೆ ಕೈಗೊಂಡ ಉಪಕ್ರಮಗಳು:

    • ಮಲೇರಿಯಾ ಜಾಗತಿಕ ತಾಂತ್ರಿಕ ಕಾರ್ಯತಂತ್ರ, 2016–2030: 2015ರ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು, ಮಲೇರಿಯಾ ಪ್ರಕರಣಗಳು ಮತ್ತು ಮರಣ ಪ್ರಮಾಣವನ್ನು 2020ರ ವೇಳೆಗೆ 40% ರಷ್ಟು, 2025ರ ವೇಳೆಗೆ 75% ರಷ್ಟು ಮತ್ತು 2030ರ ವೇಳೆಗೆ 90% ರಷ್ಟು ತಗ್ಗಿಸುವ ಗುರಿಯನ್ನು ಇದು ಹೊಂದಿದೆ.
    • ‘E-2025 ಉಪಕ್ರಮ’: 2025ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಾಮರ್ಥ್ಯವಿರುವ 25 ದೇಶಗಳನ್ನು ಗುರುತಿಸಿ, ವಿಶ್ವ ಆರೋಗ್ಯ ಸಂಸ್ಥೆಯು ಈ ಉಪಕ್ರಮವನ್ನು ಜಾರಿಗೆ ತಂದಿದೆ.
    • ‘ಅಧಿಕ ಹೊರೆ – ಅಧಿಕ ಪರಿಣಾಮ’ (ಹೈ ಬರ್ಡನ್ ಟು ಹೈ ಇಂಪಾಕ್ಟ್- HBHI) ಉಪಕ್ರಮ: ಜಾಗತಿಕವಾಗಿ ಅತಿ ಹೆಚ್ಚು ಮಲೇರಿಯಾ ಹೊರೆ ಹೊಂದಿರುವ, ಭಾರತವೂ ಸೇರಿದಂತೆ 11 ದೇಶಗಳಲ್ಲಿ WHO ಈ ವಿಶೇಷ ಉಪಕ್ರಮವನ್ನು ಪ್ರಾರಂಭಿಸಿದೆ.

    ಮಲೇರಿಯಾ ನಿಯಂತ್ರಣಕ್ಕಾಗಿ ಭಾರತ ಸರ್ಕಾರದ ಉಪಕ್ರಮಗಳು:

    • ರಾಷ್ಟ್ರೀಯ ಗುರಿ: 2027ರ ವೇಳೆಗೆ ದೇಶದಿಂದ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.
    • ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಚೌಕಟ್ಟು (NFME): ಮಲೇರಿಯಾ ನಿರ್ಮೂಲನೆಗಾಗಿ ರೂಪಿಸಲಾದ “ಜಾಗತಿಕ ತಾಂತ್ರಿಕ ಕಾರ್ಯತಂತ್ರ” (GTS 2016-2030) ಕ್ಕೇ ಅನುಗುಣವಾಗಿ, ಭಾರತವು 2016ರಲ್ಲಿ ಈ ರಾಷ್ಟ್ರೀಯ ಚೌಕಟ್ಟನ್ನು ಅಭಿವೃದ್ಧಿಪಡಿಸಿ ಜಾರಿಗೆ ತಂದಿದೆ.
    • ಮಲೇರಿಯಾ ನಿರ್ಮೂಲನ ಸಂಶೋಧನಾ ಒಕ್ಕೂಟ – ಭಾರತ (MERA-India): ಮಲೇರಿಯಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪಾಲುದಾರರ ಒಂದು ಒಕ್ಕೂಟವಾಗಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ಇದನ್ನು ಸ್ಥಾಪಿಸಿದೆ.

    ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ

    ಸಾಮಾನ್ಯ ಅಧ್ಯಯನ : 2 / ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಒಂದು ವರ್ಷದ ಅವಧಿಯಲ್ಲಿ 1.25 ಲಕ್ಷ ಇಂಟರ್ನ್‌ಶಿಪ್ (ವೃತ್ತಿ ತರಬೇತಿ) ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದ ‘ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ’ಯ ಪ್ರಾಯೋಗಿಕ ಯೋಜನೆಯು, ಇದೀಗ ತನ್ನ ನಿಗದಿತ ಗುರಿಯನ್ನು ಮೀರಿ ಮಹತ್ವದ ಸಾಧನೆಯನ್ನು ದಾಖಲಿಸಿದೆ.

    ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಬಗ್ಗೆ:

    • ಉದ್ದೇಶ: ದೇಶದ ಮುಂಚೂಣಿ ಕಂಪನಿಗಳಲ್ಲಿ ಯುವಜನತೆಗೆ ವೃತ್ತಿ ತರಬೇತಿ ಅವಕಾಶಗಳನ್ನು ಕಲ್ಪಿಸುವುದು ಮತ್ತು ತನ್ಮೂಲಕ ಶೈಕ್ಷಣಿಕ ಜ್ಞಾನ ಹಾಗೂ ಪ್ರಾಯೋಗಿಕ ಕೌಶಲ್ಯಗಳ ನಡುವಿನ ಕಂದರವನ್ನು ನಿವಾರಿಸುವುದು. 
    • ಸಚಿವಾಲಯ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ.
    • ಅವಧಿ: ಈ ಇಂಟರ್ನ್‌ಶಿಪ್ 12 ತಿಂಗಳುಗಳ ಕಾಲಾವಧಿಯನ್ನು ಒಳಗೊಂಡಿರುತ್ತದೆ.
    • ಶಿಷ್ಯವೇತನ : ಇಂಟರ್ನ್‌ಗಳು (ವೃತ್ತಿ ತರಬೇತಿ ಪಡೆಯುವವರು) ಪೂರ್ಣ ಒಂದು ವರ್ಷದ ಅವಧಿಗೆ ಮಾಸಿಕ ₹5,000 ರೂಪಾಯಿಗಳ ಶಿಷ್ಯವೇತನವನ್ನು ಪಡೆಯುತ್ತಾರೆ.
    • ಅರ್ಹತಾ ಮಾನದಂಡಗಳು:
      • ಅಭ್ಯರ್ಥಿಯು ಕಡ್ಡಾಯವಾಗಿ ಭಾರತೀಯ ಪ್ರಜೆಯಾಗಿರಬೇಕು.
      • ಅಭ್ಯರ್ಥಿಯ ವಯೋಮಿತಿ 21 ರಿಂದ 24 ವರ್ಷಗಳ ನಡುವೆ ಇರಬೇಕು.
      • ಅಭ್ಯರ್ಥಿಯು ಪೂರ್ಣಾವಧಿಯ ಉದ್ಯೋಗದಲ್ಲಿರಬಾರದು ಅಥವಾ ಪೂರ್ಣಾವಧಿಯ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರಬಾರದು.

    ನುಮಾಲಿಗಢ ರಿಫೈನರಿ ಲಿಮಿಟೆಡ್‌ (NRL) ಗೆ ‘ನವರತ್ನ’ ಸ್ಥಾನಮಾನ

    ಸಾಮಾನ್ಯ ಅಧ್ಯಯನ-3 / ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ನುಮಾಲಿಗಢ ಶುದ್ಧಿಕರಣ ನಿಯಮಿತ (NRL) ಕ್ಕೇ ಪ್ರತಿಷ್ಠಿತ ‘ನವರತ್ನ’ ಸ್ಥಾನಮಾನವನ್ನು ನೀಡಲಾಗಿದೆ. ಈ ಗೌರವಕ್ಕೆ ಪಾತ್ರವಾದ 27ನೇ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (CPSE) ಇದಾಗಿದೆ.

    ನುಮಾಲಿಗಢ ಶುದ್ಧಿಕರಣ ನಿಯಮಿತ (NRL) ದ ಬಗ್ಗೆ:

    • ಸ್ಥಳ: ಇದು ಅಸ್ಸಾಂನ ಗೋಲಘಾಟ್ ಜಿಲ್ಲೆಯ ನುಮಾಲಿಗಢದಲ್ಲಿ ನೆಲೆಗೊಂಡಿರುವ ಪೆಟ್ರೋಲಿಯಂ ಶುದ್ಧಿಕರಣ ಘಟಕವಾಗಿದೆ.

    ಭಾರತದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (CPSEs) ಗಳ ಬಗ್ಗೆ:

    • ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ಮೂರು ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ – ಮಿನಿರತ್ನ, ನವರತ್ನ ಮತ್ತು ಮಹಾರತ್ನ.
    1. ಮಿನಿರತ್ನ ಸ್ಥಾನಮಾನ: ಮಿನಿರತ್ನ ಸ್ಥಾನಮಾನದ ಅಡಿಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ‘ಮಿನಿರತ್ನ-I’ ಮತ್ತು ‘ಮಿನಿರತ್ನ-II’ ಎಂಬ ಎರಡು ಉಪ-ವರ್ಗಗಳಲ್ಲಿ ವಿಂಗಡಿಸಲಾಗಿದೆ.
    2. ನವರತ್ನ ಸ್ಥಾನಮಾನ: ಮಿನಿರತ್ನ-I ಸ್ಥಾನಮಾನವನ್ನು ಹೊಂದಿರುವ ಮತ್ತು ಕಳೆದ 5 ವರ್ಷಗಳ ಪೈಕಿ 3 ವರ್ಷಗಳಲ್ಲಿ “ಅತ್ಯುತ್ತಮ”  ಅಥವಾ “ಬಹಳ ಉತ್ತಮ” ಎಂ.ಒ.ಯು ರೇಟಿಂಗ್ ಪಡೆದ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು ಈ ಸ್ಥಾನಮಾನಕ್ಕೆ ಅರ್ಹವಾಗಿರುತ್ತವೆ.
    3. ಮಹಾರತ್ನ ಸ್ಥಾನಮಾನ: ಕೇಂದ್ರ ಸಾರ್ವಜನಿಕ ವಲಯದ ಒಂದು ಉದ್ದಿಮೆಯು ಈ ಕೆಳಗಿನ ಮಾನದಂಡಗಳನ್ನು ಪೂರೈಸಿದಲ್ಲಿ “ಮಹಾರತ್ನ” ಸ್ಥಾನಮಾನವನ್ನು ಪಡೆಯಲು ಅರ್ಹವಾಗಿರುತ್ತದೆ:
    • “ನವರತ್ನ” ಸ್ಥಾನಮಾನವನ್ನು ಹೊಂದಿರಬೇಕು.
    • ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ನೋಂದಾಯಿತವಾಗಿರಬೇಕು.
    • ಕನಿಷ್ಠ ಷೇರು ಪಾಲುದಾರಿಕೆ ನಿಯಮಗಳನ್ನು ಪಾಲಿಸಬೇಕು.
    • ಕಳೆದ 3 ವರ್ಷಗಳಲ್ಲಿ ಸರಾಸರಿ ವಾರ್ಷಿಕ ವಹಿವಾಟು ₹25,000 ಕೋಟಿಗಿಂತ ಹೆಚ್ಚಿರಬೇಕು ಮತ್ತು ಸರಾಸರಿ ವಾರ್ಷಿಕ ನಿವ್ವಳ ಮೌಲ್ಯ ₹15,000 ಕೋಟಿಗಿಂತ ಹೆಚ್ಚಿರಬೇಕು.
    • ಕಳೆದ 3 ವರ್ಷಗಳಲ್ಲಿ ಸರಾಸರಿ ವಾರ್ಷಿಕ ನಿವ್ವಳ ಲಾಭ ₹5,000 ಕೋಟಿಗಿಂತ ಹೆಚ್ಚಿರಬೇಕು ಹಾಗೂ ಇದರೊಂದಿಗೆ ಗಮನಾರ್ಹ ಜಾಗತಿಕ ಅಸ್ತಿತ್ವವನ್ನು ಹೊಂದಿರಬೇಕು.
    • ಉದಾಹರಣೆ: BHEL, BPCL, ಕೋಲ್ ಇಂಡಿಯಾ, GAIL, HPCL, ಇಂಡಿಯನ್ ಆಯಿಲ್, NTPC ಮತ್ತು ONGC ಇವು ಕೆಲವು ಪ್ರಮುಖ ಮಹಾರತ್ನ ಸಾರ್ವಜನಿಕ ವಲಯದ ಉದ್ಯಮಗಳಾಗಿವೆ.

    ಆಹಾರ ಮತ್ತು ಕೃಷಿಗಾಗಿ ವಿಶ್ವದ ಭೂ ಮತ್ತು ಜಲ ಸಂಪನ್ಮೂಲಗಳ ಸ್ಥಿತಿ (SOLAW 2025)

    ಸಾಮಾನ್ಯ ಅಧ್ಯಯನ- 3 / ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ವಿಶ್ವಸಂಸ್ಥೆಯ “ಆಹಾರ ಮತ್ತು ಕೃಷಿ ಸಂಸ್ಥೆ” (FAO) ಯು ‘ಆಹಾರ ಮತ್ತು ಕೃಷಿಗಾಗಿ ವಿಶ್ವದ ಭೂ ಮತ್ತು ಜಲ ಸಂಪನ್ಮೂಲಗಳ ಸ್ಥಿತಿ’ (SOLAW 2025) ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

    SOLAW, 2025 ವರದಿಯ ಬಗ್ಗೆ:

    • ಪ್ರಕಟಿಸುವ ಸಂಸ್ಥೆ: ಆಹಾರ ಮತ್ತು ಕೃಷಿ ಸಂಸ್ಥೆ (FAO).
    • ಭೂ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿದ ಈ ವರದಿಯು, ಆಹಾರ ಭದ್ರತೆ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಸಾಧಿಸಲು ನೈಸರ್ಗಿಕ ಸಂಪನ್ಮೂಲಗಳ ‘ಸುಸ್ಥಿರ ಬಳಕೆಯನ್ನು’ ಉತ್ತೇಜಿಸುವ ಗುರಿಯನ್ನು ಹೊಂದಿದೆ.

    ವರದಿಯ ಇತ್ತೀಚಿನ ಪ್ರಮುಖಾಂಶಗಳು:

    • ಹೆಚ್ಚುತ್ತಿರುವ ಆಹಾರದ ಬೇಡಿಕೆ: ಜಾಗತಿಕ ಆಹಾರದ ಬೇಡಿಕೆಯನ್ನು ಪೂರೈಸಲು, ಕೃಷಿ ವಲಯವು 2050 ರ ವೇಳೆಗೆ 50% ಹೆಚ್ಚಿನ ಆಹಾರವನ್ನು ಉತ್ಪಾದಿಸಬೇಕು ಎಂದು ವರದಿಯು ಎಚ್ಚರಿಸಿದೆ. ಆದರೆ, ಈ ಪ್ರಕ್ರಿಯೆಯು ಈಗಾಗಲೇ ತೀವ್ರ ಒತ್ತಡದಲ್ಲಿರುವ ಭೂಮಿ, ಮಣ್ಣು ಮತ್ತು ಜಲ ಸಂಪನ್ಮೂಲಗಳ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
    • ಸಂಪನ್ಮೂಲಗಳ ಮೇಲಿನ ಒತ್ತಡ: ಪ್ರಸ್ತುತ ಕೃಷಿ ವಲಯವು ಭೂಮಿಯ ಒಟ್ಟು ಭೂಭಾಗದ ಮೂರನೇ ಒಂದರಷ್ಟು ಪ್ರದೇಶವನ್ನು ಆವರಿಸಿಕೊಂಡಿದೆ ಹಾಗೂ ಜಾಗತಿಕ ಸಿಹಿನೀರಿನ ಲಭ್ಯತೆಯಲ್ಲಿ 72% ರಷ್ಟು ಪಾಲನ್ನು ಬಳಸಿಕೊಳ್ಳುತ್ತಿದೆ.
    • ಭೂಮಿಯ ಅವನತಿ: ಕೃಷಿಯ ತೀವ್ರತೆಯು ನೀರಿನ ಅಭಾವ, ಅಂತರ್ಜಲದ ಅತಿಯಾದ ಬಳಕೆ ಮತ್ತು 1.6 ಶತಕೋಟಿ ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯ (ಇದರಲ್ಲಿ ಬಹುಪಾಲು ಕೃಷಿ ಭೂಮಿಯೇ ಆಗಿದೆ) ಅವನತಿಗೆ ಕಾರಣವಾಗಿದೆ.
    • ವಿಷವರ್ತುಲದ ಪರಿಣಾಮ: ಮಣ್ಣಿನ ಸಾರಗುಂದುವಿಕೆ, ಕ್ಷೀಣಿಸುತ್ತಿರುವ ಜಲ ಸಂಪನ್ಮೂಲ ಮತ್ತು ಅರಣ್ಯನಾಶದ ಈ ‘ವಿಷವರ್ತುಲ’ವು ಕೃಷಿಯ ತಳಹದಿಯನ್ನೇ ದುರ್ಬಲಗೊಳಿಸುತ್ತಿದೆ. ಅಲ್ಲದೆ, ಇದು ಜಾಗತಿಕ ಆಹಾರ ವ್ಯವಸ್ಥೆಯ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಅಥವಾ ಸ್ಥಿತಿಸ್ಥಾಪಕತ್ವವನ್ನು ಕುಂದಿಸುತ್ತಿದೆ.

    ಡಾ. ರಾಜೇಂದ್ರ ಪ್ರಸಾದ್

    ಸಾಮಾನ್ಯ ಅಧ್ಯಯನ- 1 / ಪ್ರಮುಖ ವ್ಯಕ್ತಿಗಳು

    ಇದೀಗ ಸುದ್ದಿಯಲ್ಲಿ:

    • ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ಜಯಂತಿಯ ಸ್ಮರಣಾರ್ಥವಾಗಿ, ರಾಷ್ಟ್ರಪತಿಗಳು ಅವರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದರು.

    ಆರಂಭಿಕ ಜೀವನ ಮತ್ತು ಶಿಕ್ಷಣ:

    • ಜನನ:– ಇವರು 1884ರಲ್ಲಿ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜನಿಸಿದರು.
    • ಶಿಕ್ಷಣ:- ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ಪೂರೈಸಿದರು. 1915ರಲ್ಲಿ, ಕಾನೂನು ವಿಷಯದಲ್ಲಿ ‘ಸ್ನಾತಕೋತ್ತರ ಪದವಿ’ಯನ್ನು (LLM) ಗೌರವಗಳೊಂದಿಗೆ ಪೂರ್ಣಗೊಳಿಸಿದರು.

    ಸ್ವಾತಂತ್ರ್ಯ ಹೋರಾಟದಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರ ಪಾತ್ರ:

    • ಚಂಪಾರಣ್ ಸತ್ಯಾಗ್ರಹ (1917): ಮಹಾತ್ಮ ಗಾಂಧೀಜಿಯವರ ಕರೆಯ ಮೇರೆಗೆ ಇವರು ಚಂಪಾರಣ್‌ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಈ ಘಟನೆಯು ಇವರ ಜೀವನಕ್ಕೆ ಮಹತ್ವದ ತಿರುವನ್ನು ನೀಡಿತು ಮತ್ತು ಇವರನ್ನು ರಾಷ್ಟ್ರ ಸೇವೆಯತ್ತ ಪ್ರೇರೇಪಿಸಿತು.
    • ಅಸಹಕಾರ ಚಳುವಳಿ (1920–22): ತಮ್ಮ ಯಶಸ್ವಿ ವಕೀಲ ವೃತ್ತಿಯನ್ನು ತ್ಯಜಿಸಿ, 1921ರಲ್ಲಿ ಪಾಟ್ನಾದಲ್ಲಿ ‘ನ್ಯಾಷನಲ್ ಕಾಲೇಜ್’ ಅನ್ನು ಸ್ಥಾಪಿಸಿದರು.
    • ಚೌರಿಚೌರಾ ಘಟನೆಯ ನಂತರವೂ ಇವರು ಗಾಂಧೀಜಿಯವರ ನಿರ್ಧಾರಕ್ಕೆ ಬದ್ಧರಾಗಿ ದೃಢವಾಗಿ ನಿಂತರು.
    • ಉಪ್ಪಿನ ಸತ್ಯಾಗ್ರಹ (1930): ಬಿಹಾರದ ಪಾಟ್ನಾದಲ್ಲಿರುವ ‘ನಖಾಸ್ ಹೊಂಡ’ಗಳಲ್ಲಿ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದರು. ಅಲ್ಲಿ ಸ್ವಯಂಸೇವಕರೊಂದಿಗೆ ಉಪ್ಪನ್ನು ತಯಾರಿಸಿ ಬಂಧನಕ್ಕೊಳಗಾದರು.
    • ಕಾಂಗ್ರೆಸ್ ಅಧ್ಯಕ್ಷತೆ: 1934ರಲ್ಲಿ ಬಾಂಬೆಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (INC) ಅಧಿವೇಶನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು. ತದನಂತರ, 1939ರಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ, ಡಾ. ಪ್ರಸಾದ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
    • ಸಂವಿಧಾನ ರಚನಾ ಸಭೆಯ ಅಧ್ಯಕ್ಷತೆ: ಜುಲೈ 1946ರಲ್ಲಿ, ಭಾರತದ ಸಂವಿಧಾನವನ್ನು ರೂಪಿಸಲು ರಚಿಸಲಾದ ‘ಸಂವಿಧಾನ ರಚನಾ ಸಭೆ’ಯ ಅಧ್ಯಕ್ಷರಾಗಿ ಇವರು ಅವಿರೋಧವಾಗಿ ಆಯ್ಕೆಯಾದರು.
    • ಭಾರತ ರತ್ನ: ದೇಶಕ್ಕೆ ಸಲ್ಲಿಸಿದ ಅಪ್ರತಿಮ ಸೇವೆಗಾಗಿ 1962ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ನೀಡಿ ಗೌರವಿಸಲಾಯಿತು.

    ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿದ್ದ ಸಂವಿಧಾನ ರಚನಾ ಸಭೆಯ ಪ್ರಮುಖ ಸಮಿತಿಗಳು:

    • ಕಾರ್ಯವಿಧಾನದ ನಿಯಮಗಳ ಸಮಿತಿ
    • ಸಂಚಾಲನಾ ಸಮಿತಿ 
    • ಹಣಕಾಸು ಮತ್ತು ಸಿಬ್ಬಂದಿ ಸಮಿತಿ 
    • ರಾಷ್ಟ್ರಧ್ವಜದ ಮೇಲಿನ ತಾತ್ಕಾಲಿಕ ಸಮಿತಿ

    ಸಾಹಿತ್ಯಿಕ ಕೊಡುಗೆಗಳು:

      • ಸತ್ಯಾಗ್ರಹ ಅಟ್ ಚಂಪಾರಣ್ (1922)
      • ಇಂಡಿಯಾ ಡಿವೈಡೆಡ್ (1946)
    • ಆತ್ಮಕಥಾ (1946)
    • ಮಹಾತ್ಮ ಗಾಂಧಿ ಅಂಡ್ ಬಿಹಾರ್, ಸಮ್ ರೆಮಿನಿಸೆನ್ಸಸ್ (1949)
    • ಬಾಪು ಕೆ ಕದಮೋಂ ಮೇ (1954)
  • ವಿಶೇಷಚೇತನರ ಹಕ್ಕುಗಳಿಗೆ ಭಾರತದ ಬದ್ಧತೆ | ಜಿಯೋ ಪಾರ್ಸಿ ಯೋಜನೆ | ಜಲ್ ಜೀವನ್ ಮಿಷನ್ (JJM) | ದೇಶೀಯ ವ್ಯವಸ್ಥಿತ ಮಹತ್ವದ ಬ್ಯಾಂಕುಗಳು (D-SIBs) | ಭಾರತೀಯ ಕಡಲ ಸಿದ್ಧಾಂತ, 2025 ರಲ್ಲಿ ನೌಕಾಪಡೆಯ ನೂತನ ವರ್ಗೀಕರಣ

    ವಿಶೇಷಚೇತನರ ಹಕ್ಕುಗಳಿಗೆ ಭಾರತದ ಬದ್ಧತೆ

    ಸಾಮಾನ್ಯ ಅಧ್ಯಯನ1/ ಸಮಾಜ

    ಇದೀಗ ಸುದ್ದಿಯಲ್ಲಿದೆ:

    • ವಿಶೇಷಚೇತನರ ಅಂತರರಾಷ್ಟ್ರೀಯ ದಿನವನ್ನು ಪ್ರತಿವರ್ಷ ಡಿಸೆಂಬರ್ 3 ರಂದು ಆಚರಿಸಲಾಗುತ್ತದೆ.

    ವಿಶೇಷಚೇತನರ ಅಂತರರಾಷ್ಟ್ರೀಯ ದಿನದ  ಗುರಿ ಮತ್ತು ಧ್ಯೇಯವಾಕ್ಯ:

    • ಗುರಿ : ವಿಶೇಷಚೇತನರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವುದು.
    • ಧ್ಯೇಯವಾಕ್ಯ 2025: “ಸಾಮಾಜಿಕ ಪ್ರಗತಿಯನ್ನು ಮುಂದುವರಿಸಲು ವಿಶೇಷಚೇತನರನ್ನು ಒಳಗೊಂಡ ಸಮಾಜಗಳನ್ನು ಪೋಷಿಸುವುದು”

    ವಿಶೇಷಚೇತನರ ಹಕ್ಕುಗಳಿಗೆ ಭಾರತದ ಬದ್ಧತೆ:

    • ವಿಶೇಷಚೇತನರಿಗೆ ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳಲು ‘ವಿಶೇಷಚೇತನರ  ಹಕ್ಕುಗಳ ಸಮಾವೇಶ (2006)’ ವನ್ನು ಅಳವಡಿಸಿಕೊಳ್ಳಲಾಯಿತು.
    • 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 2.68 ಕೋಟಿ ವಿಶೇಷಚೇತನರಿದ್ದಾರೆ, ಇದು ಭಾರತದ  ಒಟ್ಟು ಜನಸಂಖ್ಯೆಯ 2.21% ಆಗಿದೆ.

    ಸಾಂವಿಧಾನಿಕ ಉಪಬಂಧಗಳು:

    • ವಿಧಿ 21: ಇದು ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ, ಇದು ಘನತೆಯಿಂದ ಬದುಕುವ ಹಕ್ಕನ್ನು ಒಳಗೊಂಡಿದೆ.
    • ವಿಧಿ 41: ನಿರುದ್ಯೋಗ, ವೃದ್ಧಾಪ್ಯ, ಅನಾರೋಗ್ಯ ಮತ್ತು ಅಂಗವೈಕಲ್ಯದ ಸಂದರ್ಭಗಳಲ್ಲಿ ಕೆಲಸ, ಶಿಕ್ಷಣ ಮತ್ತು ಸಾರ್ವಜನಿಕ ನೆರವಿನ ಹಕ್ಕನ್ನು ಇದು ಒಳಗೊಂಡಿದೆ. 
    • 7ನೇ ಅನುಸೂಚಿ: ಸಂವಿಧಾನದ ರಾಜ್ಯ ಪಟ್ಟಿಯಲ್ಲಿ ‘ವಿಶೇಷಚೇತನರು ಮತ್ತು ಅಶಕ್ತರ (ಉದ್ಯೋಗಕ್ಕೆ ಅಸಮರ್ಥರಾದವರ) ಪರಿಹಾರ’ ಎಂಬ ವಿಷಯವನ್ನು ಸೇರಿಸಲಾಗಿದ್ದು, ಇದು ಈ ವಿಷಯಗಳ ಕುರಿತು ಶಾಸನ ರೂಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡುತ್ತದೆ.

    ಭಾರತದಲ್ಲಿ ವಿಶೇಷಚೇತನರ ಹಕ್ಕುಗಳಿಗಾಗಿ ಕಾನೂನಾತ್ಮಕ ಮತ್ತು ನೀತಿಯ ಚೌಕಟ್ಟು: 

    • ‘ವಿಶೇಷಚೇತನರ ಕಾಯ್ದೆ, 1995ರ ಬದಲಾಗಿ, ಹೆಚ್ಚು ಸಮಗ್ರವಾದ ‘ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016’ ಅನ್ನು ಜಾರಿಗೆ ತರಲಾಗಿದೆ.
    • ಭಾರತವು ‘ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಸಮಾವೇಶ’ಕ್ಕೆ (UNCRPD) ಸಹಿದಾರ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ, ಸುಗಮ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಸಮಾಜವನ್ನು ನಿರ್ಮಿಸಲು ಭಾರತ ಬದ್ಧವಾಗಿದೆ.

    ಸರ್ಕಾರದ ಉಪಕ್ರಮಗಳು ಮತ್ತು ಯೋಜನೆಗಳು: 

    • ಸುಗಮ್ಯ ಭಾರತ ಅಭಿಯಾನ (ಪ್ರವೇಶಿಸಬಹುದಾದ ಭಾರತ ಅಭಿಯಾನ): 2015 ರಲ್ಲಿ ಪ್ರಾರಂಭಿಸಲಾದ ಈ ಅಭಿಯಾನವು ವಿಶೇಷಚೇತನರು ಎದುರಿಸುತ್ತಿರುವ ದೀರ್ಘಕಾಲದ ಅಡೆತಡೆಗಳನ್ನು ಪರಿಹರಿಸುತ್ತದೆ.
    • ದಿವ್ಯಾಂಗನ್ ಕಾರ್ಡ್: ಇದನ್ನು ಇ-ಟಿಕೆಟಿಂಗ್ ಫೋಟೋ ಗುರುತಿನ ಚೀಟಿ (EPICS) ಎಂದೂ ಕರೆಯಲಾಗುತ್ತದೆ. ಇದು ವಿಶೇಷಚೇತನರಿಗಾಗಿ ಇರುವ ರೈಲ್ವೆ ಗುರುತಿನ ಚೀಟಿಯಾಗಿದ್ದು, ರೈಲು ಪ್ರಯಾಣದಲ್ಲಿ ರಿಯಾಯಿತಿಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
    • ವಿಶೇಷಚೇತನರಿಗಾಗಿ ವಿಶಿಷ್ಟ ಗುರುತಿನ ಚೀಟಿ: ವಿಶೇಷಚೇತನರ ರಾಷ್ಟ್ರೀಯ ದತ್ತಾಂಶವನ್ನು ರಚಿಸಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
    • ಪಿಎಂ-ದಕ್ಷ್ : ಇದು ರಾಷ್ಟ್ರೀಯ ಕೌಶಲ್ಯ ಮತ್ತು ಉದ್ಯೋಗ ಪರಿಸರ ವ್ಯವಸ್ಥೆಯ ಅಡಿಯಲ್ಲಿ ವಿಕಲಚೇತನರು, ತರಬೇತಿ ಸಂಸ್ಥೆಗಳು, ಉದ್ಯೋಗದಾತರು ಮತ್ತು ಉದ್ಯೋಗ ಒಗ್ಗೂಡಿಸುವವರನ್ನು ಸಂಪರ್ಕಿಸುವ ಒಂದು ವೇದಿಕೆಯಾಗಿದೆ.
    • ಭಾರತೀಯ ಸನ್ನೆ ಭಾಷೆಯ (ISL) ಉತ್ತೇಜನ: ವಿಶೇಷಚೇತನರ ಸಬಲೀಕರಣ ಇಲಾಖೆಯ ಅಡಿಯಲ್ಲಿ 2015 ರಲ್ಲಿ ಸ್ಥಾಪಿಸಲಾದ ‘ಭಾರತೀಯ ಸನ್ನೆ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರ’, ಭಾರತದಾದ್ಯಂತ ಸನ್ನೆ ಭಾಷೆಯನ್ನು ಮುನ್ನಡೆಸಲು ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
    • ‘ಪಿಎಂ ಇ-ವಿದ್ಯಾ ಚಾನೆಲ್ 31’: 2024ರಲ್ಲಿ, ಸರ್ಕಾರವು ಶ್ರವಣದೋಷವುಳ್ಳ ವಿದ್ಯಾರ್ಥಿಗಳು, ವಿಶೇಷ ಶಿಕ್ಷಕರು ಮತ್ತು ಅನುವಾದಕರಿಗಾಗಿ ಭಾರತೀಯ ಸನ್ನೆ ಭಾಷೆಯ ತರಬೇತಿಗಾಗಿಯೇ ಮೀಸಲಾದ ಡಿಟಿಎಚ್ ವಾಹಿನಿ ‘ಪಿಎಂ ಇ-ವಿದ್ಯಾ ಚಾನೆಲ್ 31’ ಅನ್ನು ಪ್ರಾರಂಭಿಸಿತು.

    ಜಿಯೋ ಪಾರ್ಸಿ ಯೋಜನೆ

    ಸಾಮಾನ್ಯ ಅಧ್ಯಯನ1/ ಸಮಾಜ, ಸಾಮಾನ್ಯ ಅಧ್ಯಯನ-2/ ಸಾಮಾಜಿಕ ನ್ಯಾಯ

    ಇದೀಗ ಸುದ್ದಿಯಲ್ಲಿದೆ: 

    • ‘ಜಿಯೋ ಪಾರ್ಸಿ ಯೋಜನೆ’ಯನ್ನು ಉತ್ತೇಜಿಸುವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮುಂಬೈನಲ್ಲಿ ಸಮಗ್ರವಾದ ‘ವಕಾಲತ್ತು ಮತ್ತು ಸಂಪರ್ಕ ಕಾರ್ಯಾಗಾರ’ವನ್ನು ಆಯೋಜಿಸಿತ್ತು.

    ಭಾರತದಲ್ಲಿ ಪಾರ್ಸಿ ಸಮುದಾಯದ ಸ್ಥಿತಿಗತಿ:

    • ಜನಸಂಖ್ಯೆ: 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಪಾರ್ಸಿಗಳ ಜನಸಂಖ್ಯೆ 57,264 ಆಗಿತ್ತು.
    • ಇಳಿಕೆ: 2001 ರ ಜನಗಣತಿಯಲ್ಲಿದ್ದ 69,601 ಕ್ಕೆ ಹೋಲಿಸಿದರೆ, ಇದು ಸರಿಸುಮಾರು 22% ರಷ್ಟು ಗಮನಾರ್ಹ ಇಳಿಕೆಯನ್ನು ಕಂಡಿದೆ.

    ಜಿಯೋ ಪಾರ್ಸಿ ಯೋಜನೆಯ  ಬಗ್ಗೆ:

    • ಪ್ರಾರಂಭ: 2013-14 ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು.
    • ಉದ್ದೇಶ: ವೈಜ್ಞಾನಿಕ ನಡಾವಳಿ ಮತ್ತು ರಚನಾತ್ಮಕ ಮಧ್ಯಸ್ಥಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ಪಾರ್ಸಿ ಜನಸಂಖ್ಯೆಯು ಕ್ಷೀಣಿಸುತ್ತಿರುವ ಪ್ರವೃತ್ತಿಯನ್ನು ತಡೆಗಟ್ಟುವುದು ಅಥವಾ ಹಿಮ್ಮೆಟ್ಟಿಸುವುದು ಇದರ ಪ್ರಮುಖ ಗುರಿಯಾಗಿದೆ.

    ಯೋಜನೆಯ ಮೂರು ಪ್ರಮುಖ ಘಟಕಗಳು:

    1. ವೈದ್ಯಕೀಯ ನೆರವು: ಇದು ಬಂಜೆತನ ನಿವಾರಣಾ ಚಿಕಿತ್ಸೆಗಳಾದ ಐವಿಎಫ್ , ಐಸಿಎಸ್‌ಐ, ಬಾಡಿಗೆ ತಾಯ್ತನ ಮತ್ತು ಗರ್ಭಧಾರಣೆಯ ನಂತರದ ಆರೈಕೆಗಾಗಿ ಆರ್ಥಿಕ ನೆರವನ್ನು ಒದಗಿಸುತ್ತದೆ.
    2. ವಕಾಲತ್ತು : ಸಂತಾನೋತ್ಪತ್ತಿ ಅಥವಾ ಫಲವತ್ತತೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ಆಪ್ತಸಮಾಲೋಚನೆಯನ್ನು ಒದಗಿಸುತ್ತದೆ.
    3. ಸಮುದಾಯದ ಆರೋಗ್ಯ: ಮಕ್ಕಳನ್ನು ಹೊಂದಿರುವ ಪಾರ್ಸಿ ದಂಪತಿಗಳಿಗೆ ಹಾಗೂ ಅವರ ಅವಲಂಬಿತ ಹಿರಿಯ ಸದಸ್ಯರ ಪೋಷಣೆಗಾಗಿ ಮಾಸಿಕ ಆರ್ಥಿಕ ಬೆಂಬಲವನ್ನು ನೀಡುತ್ತದೆ.

    ಜಲ್ ಜೀವನ್ ಮಿಷನ್ (JJM)

    ಸಾಮಾನ್ಯ ಅಧ್ಯಯನ: 2/ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಜಲ್ ಜೀವನ್ ಮಿಷನ್ ಅಡಿಯಲ್ಲಿನ ಆರ್ಥಿಕ ಅವ್ಯವಹಾರಗಳು ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳ ಕುರಿತು ಸ್ವೀಕರಿಸಲಾದ ಒಟ್ಟು ದೂರುಗಳಲ್ಲಿ, ಉತ್ತರ ಪ್ರದೇಶವು ಅತಿ ಹೆಚ್ಚು (ಸುಮಾರು 84% ರಷ್ಟು) ದೂರುಗಳನ್ನು ವರದಿ ಮಾಡಿದೆ.

    ಜಲ್ ಜೀವನ್ ಮಿಷನ್ ನ ಬಗ್ಗೆ:

    • ಪ್ರಾರಂಭ: ಈ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು.
    • ಉದ್ದೇಶ: ಪ್ರತಿ ಗ್ರಾಮೀಣ ಕುಟುಂಬಕ್ಕೆ ಕಾರ್ಯಾತ್ಮಕ ನಲ್ಲಿ ನೀರು ಸಂಪರ್ಕ (FHTC) ಒದಗಿಸುವುದು.
    • ಮಹತ್ವ : 2024 ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ, ತಲಾವಾರು ದಿನಕ್ಕೆ 55 ಲೀಟರ್ ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವುದನ್ನು ಖಾತ್ರಿಪಡಿಸುವುದು.
    • ಅನುಷ್ಠಾನದಲ್ಲಿನ ಸವಾಲುಗಳಿಂದಾಗಿ, ಈ ಯೋಜನೆಯ ಗಡುವನ್ನು ಈಗ 2028 ರವರೆಗೆ ವಿಸ್ತರಿಸಲಾಗಿದೆ.
    • ನೋಡಲ್ ಸಚಿವಾಲಯ : ಜಲ ಶಕ್ತಿ ಸಚಿವಾಲಯ
    • ಹಣಕಾಸು ಮಾದರಿ: ಇದೊಂದು ‘ಕೇಂದ್ರ ಪ್ರಾಯೋಜಿತ ಯೋಜನೆ’ ಆಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ನಡೆಯುತ್ತದೆ.

    ದೇಶೀಯ ವ್ಯವಸ್ಥಿತ ಮಹತ್ವದ ಬ್ಯಾಂಕುಗಳು (D-SIBs)

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ 2025ರ ಪಟ್ಟಿಯನ್ವಯ, ಭಾರತೀಯ ಸ್ಟೇಟ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ  ಬ್ಯಾಂಕ್‌ಗಳು ‘ದೇಶೀಯ ವ್ಯವಸ್ಥಿತ ಮಹತ್ವದ ಬ್ಯಾಂಕುಗಳಾಗಿ’ (D-SIBs) ಮುಂದುವರಿಯಲಿವೆ ಎಂದು ದೃಢಪಡಿಸಲಾಗಿದೆ.

    ‘ದೇಶೀಯ ವ್ಯವಸ್ಥಿತ ಮಹತ್ವದ ಬ್ಯಾಂಕುಗಳ’ ಬಗ್ಗೆ:

      • D-SIB ಗಳನ್ನು “ವಿಫಲವಾಗದಷ್ಟು ಬೃಹತ್” ಬ್ಯಾಂಕುಗಳು ಎಂದು ಪರಿಗಣಿಸಲಾಗುತ್ತದೆ.
      • ಈ ಬ್ಯಾಂಕುಗಳ ಪತನವು ಸಮಗ್ರ ಹಣಕಾಸು ವ್ಯವಸ್ಥೆಯಲ್ಲಿ ಅಸ್ಥಿರತೆಯನ್ನು ಉಂಟುಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಣದಿಂದಾಗಿ, ಇವುಗಳನ್ನು ವಿಶೇಷ ನಿಯಂತ್ರಣ ಹಾಗೂ ಉನ್ನತ ಮಟ್ಟದ ಮೇಲ್ವಿಚಾರಣೆಗೆ ಒಳಪಡಿಸಲಾಗುತ್ತದೆ.
      • 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಈ ಪರಿಕಲ್ಪನೆಯನ್ನು ಜಾಗತಿಕವಾಗಿ ಪರಿಚಯಿಸಲಾಯಿತು.
      • ಬೆಸೆಲ್-III  ಮಾರ್ಗಸೂಚಿಗಳನ್ನು ಆಧರಿಸಿ, ಭಾರತೀಯ ರಿಸರ್ವ್ ಬ್ಯಾಂಕ್ 2014ರಲ್ಲಿ D-SIB ಚೌಕಟ್ಟನ್ನು ಜಾರಿಗೆ ತಂದಿತು. ಈ ಚೌಕಟ್ಟು ಪ್ರಮುಖವಾಗಿ ಈ ಕೆಳಗಿನ ಮಾನದಂಡಗಳ ಆಧಾರದ ಮೇಲೆ ಬ್ಯಾಂಕುಗಳನ್ನು ಗುರುತಿಸುತ್ತದೆ:
    • ಗಾತ್ರ (ಒಟ್ಟು ಆಸ್ತಿ ಅಥವಾ ವಹಿವಾಟಿನ ವ್ಯಾಪ್ತಿ).
    • ಪರಸ್ಪರ ಸಂಪರ್ಕ.
    • ಪರ್ಯಾಯ ಲಭ್ಯತೆ (ಸೇವೆಗಳನ್ನು ಬದಲಿಸುವುದು ಕಷ್ಟಕರವಾಗಿರುವುದು).
    • ಸಂಕೀರ್ಣತೆ.

    ಭಾರತೀಯ ಕಡಲ ಸಿದ್ಧಾಂತ, 2025 ರಲ್ಲಿ ನೌಕಾಪಡೆಯ ನೂತನ ವರ್ಗೀಕರಣ

    ಸಾಮಾನ್ಯ ಅಧ್ಯಯನ 3 / ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು, ನೌಕಾಪಡೆಯ ಪರಿಷ್ಕೃತ ಕಾರ್ಯತಂತ್ರದ ದಾಖಲೆಯಾದ ‘ಭಾರತೀಯ ನೌಕಾಪಡೆಯ ಕಡಲ ಸಿದ್ಧಾಂತ 2025’ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ್ದಾರೆ.

    ಭಾರತೀಯ ನೌಕಾಪಡೆಯ ಕಡಲ ಸಿದ್ಧಾಂತದ ಬಗ್ಗೆ:

    • ಇದೊಂದು ಮೂಲಭೂತ ದಾಖಲೆಯಾಗಿದ್ದು, ಭಾರತದ ಸಾರ್ವಭೌಮತ್ವದ ರಕ್ಷಣೆ ಮತ್ತು ಕಡಲ ವಾಣಿಜ್ಯ ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಭಾರತೀಯ ನೌಕಾಪಡೆಗೆ ದಿಕ್ಸೂಚಿಯಂತೆ ಮಾರ್ಗದರ್ಶನ ನೀಡುತ್ತದೆ.
    • ಹಿಂದೂ ಮಹಾಸಾಗರ ಪ್ರದೇಶ ಹಾಗೂ ಅದರ ಆಚೆಗಿನ ಕಡಲ ಪ್ರದೇಶದಲ್ಲಿ ಉದ್ಭವಿಸುವ ಸವಾಲುಗಳಿಗೆ “ಪ್ರಥಮ ಸ್ಪಂದಕ“ನಾಗಿ ಕಾರ್ಯನಿರ್ವಹಿಸಲು ಇದು ನೌಕಾಪಡೆಯನ್ನು ಸಜ್ಜುಗೊಳಿಸುತ್ತದೆ.
    • ಈ ಸಿದ್ಧಾಂತವನ್ನು ಪ್ರಪ್ರಥಮವಾಗಿ 2004ರಲ್ಲಿ ಹೊರತರಲಾಯಿತು. ತದನಂತರ 2009ರಲ್ಲಿ ಇದನ್ನು ಪರಿಷ್ಕರಿಸಿ, 2015ರಲ್ಲಿ ಕಾಲಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಲಾಗಿತ್ತು.

    ಭಾರತೀಯ ನೌಕಾಪಡೆಯ ಕಡಲ ಸಿದ್ಧಾಂತ, 2025ರ ಪ್ರಮುಖಾಂಶಗಳು:

    • 2025ರ ಈ ನೂತನ ಆವೃತ್ತಿಯು ಬದಲಾಗುತ್ತಿರುವ ಜಾಗತಿಕ ರಾಜಕೀಯ ಸನ್ನಿವೇಶ ಮತ್ತು ಭಾರತದ ವ್ಯೂಹಾತ್ಮಕ ದೃಷ್ಟಿಕೋನದಲ್ಲಿನ ಪ್ರಮುಖ ಪಲ್ಲಟಗಳನ್ನು ಪ್ರತಿಬಿಂಬಿಸುತ್ತದೆ. ಇದು ಆಧುನಿಕ ಭದ್ರತಾ ಸವಾಲುಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಗುರಿಗಳ ಮೇಲೆ ಹೆಚ್ಚು ಒತ್ತು ನೀಡಿದೆ.
    • “ಯುದ್ಧವೂ ಅಲ್ಲದ, ಶಾಂತಿಯೂ ಅಲ್ಲದ” ಸ್ಥಿತಿಗೆ ಅಧಿಕೃತ ಮನ್ನಣೆ: ಇದೇ ಮೊದಲ ಬಾರಿಗೆ, ಶಾಂತಿ ಮತ್ತು ಪೂರ್ಣ ಪ್ರಮಾಣದ ಯುದ್ಧದ ನಡುವಿನ ಒಂದು ವಿಶಿಷ್ಟ ಕಾರ್ಯಾಚರಣೆಯ ಹಂತವಾಗಿ “ಯುದ್ಧವೂ ಅಲ್ಲದ, ಶಾಂತಿಯೂ ಅಲ್ಲದ” ವರ್ಗವನ್ನು ಈ ಸಿದ್ಧಾಂತವು ಅಧಿಕೃತವಾಗಿ ಗುರುತಿಸಿದೆ.
    • ಜಂಟಿ ಕಾರ್ಯಾಚರಣೆ ಮತ್ತು ಏಕೀಕರಣಕ್ಕೆ ಆದ್ಯತೆ: ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ನಡುವೆ ಪರಸ್ಪರ ಕಾರ್ಯಾಚರಣಾ ಸಾಮರ್ಥ್ಯ  ಮತ್ತು ಸಂಯೋಜನೆಯನ್ನು ಈ ಸಿದ್ಧಾಂತವು ಪ್ರಮುಖವಾಗಿ ಪ್ರತಿಪಾದಿಸುತ್ತದೆ.
    • ಈ ಸಿದ್ಧಾಂತವು ‘ವಿಕಸಿತ ಭಾರತ 2047’, ಸಾಗರಮಾಲಾ, ಪಿಎಂ ಗತಿ ಶಕ್ತಿ, ಮ್ಯಾರಿಟೈಮ್ ಇಂಡಿಯಾ ವಿಷನ್ 2030, ಮ್ಯಾರಿಟೈಮ್ ಅಮೃತ ಕಾಲ ವಿಷನ್ 2047 ಮತ್ತು ‘ಮಹಾಸಾಗರ್ (MAHASAGAR)’ ನಂತಹ ರಾಷ್ಟ್ರೀಯ ದೃಷ್ಟಿಕೋನಗಳೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆ ಹೊಂದಿದೆ.

    ಹೆಚ್ಚುವರಿ ಮಾಹಿತಿ:

    • ವಿಕಸಿತ ಭಾರತ 2047: ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಇದಾಗಿದೆ. ಇದು ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಪ್ರಗತಿಯ ಮೇಲೆ ಕೇಂದ್ರೀಕೃತವಾಗಿದೆ.
    • ಸಾಗರಮಾಲಾ ಯೋಜನೆ: ಬಂದರುಗಳ ಆಧುನೀಕರಣ, ಕರಾವಳಿ ಸಮುದಾಯಗಳ ಅಭಿವೃದ್ಧಿ ಮತ್ತು ದಕ್ಷ ಸರಕು ಸಾಗಣೆ ವ್ಯವಸ್ಥೆಯನ್ನು ರೂಪಿಸುವ ಮೂಲಕ ವೆಚ್ಚ ತಗ್ಗಿಸುವುದು ಮತ್ತು ವ್ಯಾಪಾರವನ್ನು ಉತ್ತೇಜಿಸುವುದು.
    • ಪಿಎಂ ಗತಿ ಶಕ್ತಿ: ಆರ್ಥಿಕ ಕಾರಿಡಾರ್‌ಗಳ ನಿರ್ಮಾಣಕ್ಕಾಗಿ ಸಮಗ್ರ ಮತ್ತು ಬಹು-ಮಾದರಿಯ ಸಂಪರ್ಕ ಕಲ್ಪಿಸುವ (ರೈಲು, ರಸ್ತೆ, ಬಂದರು, ಜಲಮಾರ್ಗ, ವಿಮಾನಯಾನ) ಒಂದು ರಾಷ್ಟ್ರೀಯ ಬೃಹತ್ ಯೋಜನೆ ಇದಾಗಿದೆ.
    • ಮ್ಯಾರಿಟೈಮ್ ಇಂಡಿಯಾ ವಿಷನ್ (MIV), 2030: 2030ರ ವೇಳೆಗೆ ಬಂದರುಗಳ ಸಾಮರ್ಥ್ಯ ಹೆಚ್ಚಳ, ಆಧುನೀಕರಣ, ಹಡಗು ನಿರ್ಮಾಣಕ್ಕೆ ಉತ್ತೇಜನ ಮತ್ತು ಕ್ರೂಸ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕಡಲ ವಲಯಕ್ಕೆ ರೂಪಿಸಲಾದ ಮಾರ್ಗಸೂಚಿ ಇದಾಗಿದೆ.
    • ಮ್ಯಾರಿಟೈಮ್ ಅಮೃತ ಕಾಲ ವಿಷನ್, 2047: ಇದು MIV 2030ರ ವಿಸ್ತರಣೆಯಾಗಿದ್ದು, 2047ರ ವೇಳೆಗೆ ಭಾರತವನ್ನು ‘ಜಾಗತಿಕ ಕಡಲ ಕೇಂದ್ರ’ವನ್ನಾಗಿ ರೂಪಿಸುವ ಗುರಿ ಹೊಂದಿದೆ. ಇದು ಹೊಸ ಬ್ರಹತ್ -ಬಂದರುಗಳು, ಹಡಗು ನಿರ್ಮಾಣ ಸಮೂಹ ಮತ್ತು ಹಸಿರು ಬಂದರು ಅಭಿವೃದ್ಧಿಯ (ಹರಿತ್ ಸಾಗರ್) ಮೇಲೆ ಗಮನ ಹರಿಸುತ್ತದೆ.
    • ಮಹಾಸಾಗರ್ (MAHASAGAR – ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಮತ್ತು ಸಮಗ್ರ ಪ್ರಗತಿ): ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮಗ್ರ ಕಡಲ ಭದ್ರತೆ, ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಒಂದು ವಿಶಾಲ ದೃಷ್ಟಿಕೋನ ಮತ್ತು ಸಿದ್ಧಾಂತವಾಗಿದೆ.