ವರ್ಗ: National and International Current Affairs Kannada

  • ರಾಷ್ಟ್ರೀಯ ಗುಪ್ತಚರ ಜಾಲ (NATGRID) | 11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF) | ಸರಸ್ ಆಹಾರ ಮೇಳ, 2025

    ರಾಷ್ಟ್ರೀಯ ಗುಪ್ತಚರ ಜಾಲ (NATGRID)

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್) ಪ್ರತಿ ತಿಂಗಳು ಸುಮಾರು 45,000 ವಿನಂತಿಗಳನ್ನು ಸ್ವೀಕರಿಸುತ್ತಿದ್ದು, ಇದು ಕೇಂದ್ರ ಮತ್ತು ರಾಜ್ಯ ಭದ್ರತಾ ಸಂಸ್ಥೆಗಳಿಂದ ಈ ವ್ಯವಸ್ಥೆಯ ಬಳಕೆಯು ಗಮನಾರ್ಹವಾಗಿ ಏರಿಕೆಯಾಗಿರುವುದನ್ನು ಪ್ರತಿಬಿಂಬಿಸುತ್ತದೆ.

    ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್‌)ದ ಬಗ್ಗೆ:

    • ಇದು 2008ರ 26/11ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಅಭಿವೃದ್ಧಿಪಡಿಸಲಾದ ನೈಜ-ಸಮಯದ ಗುಪ್ತಚರ ಮಾಹಿತಿ ಮತ್ತು ದತ್ತಾಂಶ ಪ್ರವೇಶ ವೇದಿಕೆಯಾಗಿದೆ.
    • ಉದ್ದೇಶ:- ವಿವಿಧ ಭದ್ರತಾ ಮತ್ತು ತನಿಖಾ ಸಂಸ್ಥೆಗಳ ನಡುವೆ ತಡೆರಹಿತ ಮಾಹಿತಿ ಹಂಚಿಕೆಯನ್ನು ಸುಗಮಗೊಳಿಸುವುದು.
    • ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ದತ್ತಾಂಶಗಳ ಕ್ರೂಢೀಕರಣ:- ಇದು ಬ್ಯಾಂಕ್ ವಹಿವಾಟುಗಳು, ಟೆಲಿಕಾಂ ಬಳಕೆ, ಪಾಸ್‌ಪೋರ್ಟ್/ವಲಸೆ ದಾಖಲೆಗಳು, ತೆರಿಗೆ ಗುರುತಿನ ಸಂಖ್ಯೆಗಳು (PAN), ಪೊಲೀಸ್ ಪ್ರಥಮ ಮಾಹಿತಿ ವರದಿಗಳು (CCTNS/FIRs) ಮತ್ತು ಇತರ ಇ-ಆಡಳಿತ ಮೂಲಗಳನ್ನೊಳಗೊಂಡ 20ಕ್ಕೂ ಹೆಚ್ಚು ವಿಭಾಗಗಳ ನಾಗರಿಕ ಹಾಗೂ ವಾಣಿಜ್ಯ ದತ್ತಾಂಶಗಳನ್ನು ಕ್ರೂಢೀಕರಿಸುತ್ತದೆ.
    • ದತ್ತಾಂಶ ಪ್ರವೇಶಾವಕಾಶ:- ಆರಂಭದಲ್ಲಿ ಪ್ರವೇಶವನ್ನು 
    1. ಗುಪ್ತಚರ ಕಚೇರಿ (IB), 
    2. ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW), 
    3. ರಾಷ್ಟ್ರೀಯ ತನಿಖಾ ಸಂಸ್ಥೆ (NIA), 
    4. ಜಾರಿ ನಿರ್ದೇಶನಾಲಯ (ED), 
    5. ಹಣಕಾಸು ಗುಪ್ತಚರ ಘಟಕ (FIU), 
    6. ಮಾದಕ ದ್ರವ್ಯ ನಿಯಂತ್ರಣ ಕಚೇರಿ (NCB),
    7. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮುಂತಾದ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು.
    • ಪ್ರಸ್ತುತ, ನ್ಯಾಟ್‌ಗ್ರಿಡ್ ದತ್ತಾಂಶಗಳ ಪ್ರವೇಶಾವಕಾಶವನ್ನು ಪೊಲೀಸ್ ಅಧೀಕ್ಷಕರ (SP) ಶ್ರೇಣಿಯ ಅಧಿಕಾರಿಗಳಿಗೂ ವಿಸ್ತರಿಸಲಾಗಿದೆ.

    ನ್ಯಾಟ್‌ಗ್ರಿಡ್‌ನ ಮಹತ್ವ:

    • ಭಯೋತ್ಪಾದನಾ ನಿಗ್ರಹ:- ವ್ಯಕ್ತಿಗಳ ಪ್ರಯಾಣದ ಮಾದರಿ, ಹಣಕಾಸು ವಹಿವಾಟು, ಟೆಲಿಕಾಂ ದತ್ತಾಂಶ ಮತ್ತು ಸಾಮಾಜಿಕ ಸಂಪರ್ಕಗಳನ್ನು ಪರಸ್ಪರ ವಿಶ್ಲೇಷಿಸುವ ಮೂಲಕ ಭಯೋತ್ಪಾದಕ ಜಾಲಗಳನ್ನು ಪತ್ತೆಹಚ್ಚುವ ಹಾಗೂ ಹತ್ತಿಕ್ಕುವ ಸಾಮರ್ಥ್ಯವನ್ನು ನ್ಯಾಟ್‌ಗ್ರಿಡ್ ವೃದ್ಧಿಸುತ್ತದೆ.
    • ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಸುಧಾರಣೆ: ಸಂಘಟಿತ ಅಪರಾಧ, ಮಾದಕ ದ್ರವ್ಯ ಜಾಲಗಳು, ಮಾನವ ಅಕ್ರಮ ಸಾಗಣೆ, ಸೈಬರ್ ಅಪರಾಧ, ನಕಲಿ ನೋಟಿನ ಜಾಲ ಮತ್ತು ಗಡಿಯಾಚೆಗಿನ ಅಕ್ರಮ ಸಾಗಣೆಗೆ ಸಂಬಂಧಿಸಿದ ತನಿಖೆಗಳಿಗೆ ಈ ವೇದಿಕೆಯು ವ್ಯವಸ್ಥಿತ ನೆರವು ನೀಡುತ್ತದೆ.

    11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)ದ 11ನೇ ಆವೃತ್ತಿಯು ಹರಿಯಾಣದ ಪಂಚಕುಳದಲ್ಲಿ ಆರಂಭವಾಯಿತು.

    ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬದ ಬಗ್ಗೆ:

    • ಪ್ರಾರಂಭ:- ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
    • ಇದು ವೈಜ್ಞಾನಿಕ ವಿನಿಮಯ, ನಾವೀನ್ಯತೆ, ಜನಸಂಪರ್ಕ ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ ಒಂದು ಪ್ರಮುಖ ವೇದಿಕೆಯಾಗಿದೆ.
    • 2025ರ ಧ್ಯೇಯವಾಕ್ಯ:- “ವಿಜ್ಞಾನದಿಂದ ಸಮೃದ್ಧಿ: ಆತ್ಮನಿರ್ಭರ ಭಾರತಕ್ಕಾಗಿ”

    IISF, 2025 ಐದು ಪ್ರಮುಖ ಧ್ಯೇಯಗಳ ಮೇಲೆ ಕೇಂದ್ರೀಕರಿಸುತ್ತದೆ:

    • ವಾಯುವ್ಯ ಭಾರತ ಮತ್ತು ಹಿಮಾಲಯ ಪ್ರದೇಶದ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ವಿಜ್ಞಾನ;
    • ಸಮಾಜ ಮತ್ತು ಶಿಕ್ಷಣಕ್ಕಾಗಿ ವಿಜ್ಞಾನ;
    • ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆತ್ಮನಿರ್ಭರ ಭಾರತ;
    • ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕತೆ;
    • ಆಧುನಿಕ ವಿಜ್ಞಾನದೊಂದಿಗೆ ಸಾಂಪ್ರದಾಯಿಕ ಜ್ಞಾನದ ಸಂಯೋಜನೆ.

    ಸರಸ್ ಆಹಾರ ಮೇಳ, 2025

    ಇತರೆ

    ಇದೀಗ ಸುದ್ದಿಯಲ್ಲಿದೆ:

    • ದೆಹಲಿಯ ಸುಂದರ್ ನರ್ಸರಿಯಲ್ಲಿ ಆಯೋಜಿಸಲಾದ ‘ಸರಸ್ ಆಹಾರ ಮೇಳ, 2025’, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (NRLM)ಯ ಅಡಿಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ ಒಂದು ಉಜ್ವಲ ಪ್ರದರ್ಶನವಾಗಿ ಮೂಡಿಬಂದಿದೆ.

    ಸರಸ್ ಆಹಾರ ಮೇಳ, 2025 ರ ಬಗ್ಗೆ:

    • ಈ ಮೇಳವು ಹರಿಯಾಣ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಕೇರಳ, ಅಸ್ಸಾಂ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 62 ಮಳಿಗೆಗಳಲ್ಲಿ 500 ಕ್ಕೂ ಹೆಚ್ಚು ಸಾಂಪ್ರದಾಯಿಕ ಖಾದ್ಯಗಳನ್ನು ಒಳಗೊಂಡಿತ್ತು.
    • ಇದು ಮಹಿಳಾ ಉದ್ಯಮಶೀಲತೆ ಮತ್ತು ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತಿದ್ದು, ಭಾರತದಾದ್ಯಂತ ಇರುವ ಸ್ವಸಹಾಯ ಸಂಘಗಳ ಸುಮಾರು 300 “ಲಖ್ಪತಿ ದೀದಿಯರು” ಈ ಮೇಳದಲ್ಲಿ ವಿವಿಧ ಆಹಾರ ಪದಾರ್ಥ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ.

    ಸರಸ್ ಅಜೀವಿಕ ಮೇಳದ ಬಗ್ಗೆ:

    • ಆಯೋಜಕರು:- ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಅಡಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದನ್ನು ಆಯೋಜಿಸುತ್ತದೆ.
    • ಇದು ಗ್ರಾಮೀಣ ಮಹಿಳೆಯರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಪ್ರಮುಖ ಮಾರುಕಟ್ಟೆ ಮಾನ್ಯತೆಯನ್ನು ಪಡೆಯಲು ಒಂದು ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ.
    • ಮುಚ್ಚಳಿಕರಣ (ಪ್ಯಾಕೇಜಿಂಗ್), ವಿನ್ಯಾಸ, ಸಂವಹನ ಮತ್ತು ಮಾರುಕಟ್ಟೆ ಪ್ರಕ್ರಿಯೆಗಳ ಕುರಿತಾದ ಕಾರ್ಯಾಗಾರಗಳ ಮೂಲಕ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸಲು, ಆದಾಯವನ್ನು ಹೆಚ್ಚಿಸಲು ಮತ್ತು ದೇಶ-ವಿದೇಶಗಳ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಾದ ಕೌಶಲಗಳನ್ನು ಈ ಮೇಳಗಳು ಅವರಿಗೆ ಒದಗಿಸುತ್ತವೆ.
  • ವರದಕ್ಷಿಣೆ ವಿರೋಧಿ ಕಾನೂನುಗಳು | ಪರಿಶೀಲನೆಯ ನಂತರವಷ್ಟೇ ಸಿಎಎ (CAA) ಅಡಿಯಲ್ಲಿ ಪೌರತ್ವ: ಸರ್ವೋಚ್ಚ ನ್ಯಾಯಾಲಯ | ಪಕ್ಷಾಂತರ ನಿಷೇಧ ಕಾಯ್ದೆ

    ವರದಕ್ಷಿಣೆ ವಿರೋಧಿ ಕಾನೂನುಗಳು

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ವರದಕ್ಷಿಣೆ ವಿರೋಧಿ ಕಾನೂನುಗಳ ಜಾರಿಯನ್ನು ಬಲಪಡಿಸಲು ಸರ್ವೋಚ್ಚ ನ್ಯಾಯಾಲಯವು ವ್ಯವಸ್ಥಿತ ನಿರ್ದೇಶನಗಳನ್ನು ನೀಡಿದೆ.

    ಭಾರತದಲ್ಲಿ ವರದಕ್ಷಿಣೆ ಪ್ರಕರಣಗಳು:

    • ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)“ಭಾರತದಲ್ಲಿ ಅಪರಾಧಗಳು, 2023” ವರದಿಯು, 2022 ರಲ್ಲಿ ದಾಖಲಾಗಿದ್ದ 13,479 ಪ್ರಕರಣಗಳಿಗೆ ಹೋಲಿಸಿದರೆ 2023 ರಲ್ಲಿ ‘ವರದಕ್ಷಿಣೆ ನಿಷೇಧ ಕಾಯ್ದೆ,1961’ ರ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ 14% ರಷ್ಟು ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 15,489 ಕ್ಕೆ ತಲುಪಿದೆ ಎಂದು ದೃಢಪಡಿಸಿದೆ. ಇದರೊಂದಿಗೆ ದೇಶದಾದ್ಯಂತ 6,156 ವರದಕ್ಷಿಣೆ ಸಂಬಂಧಿತ ಸಾವುಗಳು ಸಂಭವಿಸಿವೆ.
    • ಉತ್ತರ ಪ್ರದೇಶವು 7,151 ಪ್ರಕರಣಗಳು ಮತ್ತು 2,122 ಸಾವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಬಿಹಾರ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಿವೆ.

    ಭಾರತದಲ್ಲಿ ಕಾನೂನು ಸ್ಥಿತಿಗತಿ:

    • ಭಾರತದ ಕಾನೂನುಗಳ ಅಡಿಯಲ್ಲಿ ವರದಕ್ಷಿಣೆ ಪದ್ಧತಿಯನ್ನು ದೀರ್ಘಕಾಲದಿಂದ ನಿಷೇಧಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವು:

    ವರದಕ್ಷಿಣೆ ನಿಷೇಧ ಕಾಯ್ದೆ, 1961

    • ಉದ್ದೇಶ:- ವರದಕ್ಷಿಣೆ ನೀಡುವುದನ್ನು ಅಥವಾ ಪಡೆಯುವುದನ್ನು ನಿಷೇಧಿಸುವುದು.
    • ಜೈಲು ಶಿಕ್ಷೆ: ಈ ಕಾನೂನನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂ.ಗಳಿಗಿಂತ ಕಡಿಮೆಯಿಲ್ಲದ ದಂಡವನ್ನು ವಿಧಿಸಲು ಅವಕಾಶವಿದೆ.

    ಪರಿಶೀಲನೆಯ ನಂತರವಷ್ಟೇ ಸಿಎಎ (CAA) ಅಡಿಯಲ್ಲಿ ಪೌರತ್ವ: ಸರ್ವೋಚ್ಚ ನ್ಯಾಯಾಲಯ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಪೌರತ್ವ (ತಿದ್ದುಪಡಿ) ಕಾಯ್ದೆ, 2019ರ ಅಡಿಯಲ್ಲಿ ಪೌರತ್ವವು ‘ಸ್ವಯಂಚಾಲಿತ’ ಪ್ರಕ್ರಿಯೆಯಲ್ಲ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಸ್ಪಷ್ಟಪಡಿಸಿದೆ. 
    • ಅರ್ಜಿದಾರರು ನಾಗರಿಕತೀಕರಣದ ಎಲ್ಲಾ ಶಾಸನಬದ್ಧ ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸಬೇಕು ಮತ್ತು ಕೇಂದ್ರ ಸರ್ಕಾರವು ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು ಎಂದು ಘನ ನ್ಯಾಯಾಲಯ ಸ್ಪಷ್ಟಪಡಿಸಿದೆ.

    ಪೌರತ್ವ (ತಿದ್ದುಪಡಿ) ಕಾಯ್ದೆ, 2019ರ ಪ್ರಮುಖ ಲಕ್ಷಣಗಳು:

    • ಉದ್ದೇಶ ಮತ್ತು ಗುರಿ:- ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಂತಹ ನೆರೆಯ ರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದಿರುವ ನಿರ್ದಿಷ್ಟ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ಕಲ್ಪಿಸಲು ಈ ಕಾಯ್ದೆಯು 1955ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತದೆ.
    • ಅರ್ಹ ಸಮುದಾಯಗಳು:- ಈ ಕಾಯ್ದೆಯು ನಿರ್ದಿಷ್ಟವಾಗಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಎಂಬ ಆರು ಮುಸ್ಲಿಮೇತರ ಧಾರ್ಮಿಕ ಸಮುದಾಯಗಳನ್ನು ಒಳಗೊಂಡಿದೆ.
    • ಈ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳು ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಮಾನ್ಯತೆ ನೀಡಿದ ಪ್ರಯಾಣ ದಾಖಲೆಗಳಿಲ್ಲದೆ ಅಥವಾ ಅವಧಿ ಮುಗಿದ ದಾಖಲೆಗಳೊಂದಿಗೆ ಭಾರತಕ್ಕೆ ಪ್ರವೇಶಿಸಿದ್ದರೆ, ಅಂತಹವರು ಪೌರತ್ವಕ್ಕೆ ಅರ್ಹರಾಗಿರುತ್ತಾರೆ.
    • ‘ಅಕ್ರಮ ವಲಸಿಗ’ ಸ್ಥಾನಮಾನದಿಂದ ವಿನಾಯಿತಿ: ಇಂತಹ ವ್ಯಕ್ತಿಗಳನ್ನು ಈ ಕಾಯ್ದೆಯಡಿ ‘ಅಕ್ರಮ ವಲಸಿಗರು’ ಎಂದು ಪರಿಗಣಿಸಲಾಗುವುದಿಲ್ಲ. ಇದು ಅವರು ನಾಗರಿಕತೀಕರಣದ ಮೂಲಕ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.
    • ಈ ಗುಂಪುಗಳಿಗೆ ನಾಗರಿಕತೀಕರಣದ ಮೂಲಕ ಪೌರತ್ವ ಪಡೆಯಲು ಭಾರತದಲ್ಲಿ ವಾಸಿಸಬೇಕಾದ ಅಗತ್ಯ ಅವಧಿಯನ್ನು 11 ವರ್ಷಗಳಿಂದ 5 ವರ್ಷಗಳಿಗೆ ಇಳಿಸಲಾಗಿದೆ.

    ಅನ್ವಯವಾಗದ ಪ್ರದೇಶಗಳು (ವಿನಾಯಿತಿಗಳು):

    ಈ ಕಾಯ್ದೆಯು ಈ ಕೆಳಗಿನ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ:

    • ಸಂವಿಧಾನದ 6ನೇ ಅನುಸೂಚಿಯಲ್ಲಿ ಸೇರಿಸಲ್ಪಟ್ಟ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದ ಬುಡಕಟ್ಟು ಪ್ರದೇಶಗಳು.
    • ಆಂತರಿಕ ಪ್ರವೇಶ ಅನುಮತಿ” (ILP- ಇನ್ನರ್ ಲೈನ್ ಪರ್ಮಿಟ್) ವ್ಯವಸ್ಥೆಯಡಿ ಬರುವ ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮಣಿಪುರ ರಾಜ್ಯಗಳ ಪ್ರದೇಶಗಳು.

    ಭಾರತೀಯ ಪೌರತ್ವ ಪಡೆಯುವ ಮಾರ್ಗಗಳು:

    ಸಾಂವಿಧಾನಿಕ ಅಡಿಪಾಯ:- ಭಾರತೀಯ ಸಂವಿಧಾನದ 2ನೇ ಭಾಗದ 5 ರಿಂದ 11 ನೇ ವಿಧಿಗಳು ಸಂವಿಧಾನ ಜಾರಿಗೆ ಬಂದ ಸಮಯದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಆರಂಭಿಕ ಚೌಕಟ್ಟನ್ನು ರೂಪಿಸುತ್ತವೆ:

    • ವಿಧಿ 5:- ಸಂವಿಧಾನ ಜಾರಿಗೆ ಬಂದ ಸಮಯದಲ್ಲಿ ಭಾರತದಲ್ಲಿ ಶಾಶ್ವತವಾಗಿ ವಾಸಸ್ಥಳ (Domicile) ಹೊಂದಿದ್ದ ವ್ಯಕ್ತಿಗಳಿಗೆ ಪೌರತ್ವವನ್ನು ನೀಡುತ್ತದೆ.
    • ವಿಧಿ 6:- ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರಿಗೆ ಕೆಲವು ಷರತ್ತುಗಳ ಅಡಿಯಲ್ಲಿ ಪೌರತ್ವವನ್ನು ಕಲ್ಪಿಸುತ್ತದೆ.
    • ವಿಧಿ 7:- ಪಾಕಿಸ್ತಾನಕ್ಕೆ ವಲಸೆ ಹೋಗಿ ನಂತರ ಭಾರತಕ್ಕೆ ಮರಳಿದವರ ಪೌರತ್ವದ ಬಗ್ಗೆ ತಿಳಿಸುತ್ತದೆ.
    • ವಿಧಿ 8:- ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳ ಪೌರತ್ವದ ಹಕ್ಕುಗಳನ್ನು ಒದಗಿಸುತ್ತದೆ.
    • ವಿಧಿ 9:- ದ್ವಿಪೌರತ್ವವನ್ನು ನಿಷೇಧಿಸುತ್ತದೆ; ಒಬ್ಬ ವ್ಯಕ್ತಿಯು ಸ್ವಯಂಪ್ರೇರಿತವಾಗಿ ಬೇರೆ ದೇಶದ ಪೌರತ್ವವನ್ನು ಪಡೆದರೆ, ಅವರು ಭಾರತೀಯ ಪೌರತ್ವವನ್ನು ಕಳೆದುಕೊಳ್ಳುತ್ತಾರೆ.
    • ವಿಧಿ 10:- ಕಾನೂನಿನ ಅಡಿಯಲ್ಲಿ ರದ್ದುಗೊಳಿಸದ ಹೊರತು ಅಸ್ತಿತ್ವದಲ್ಲಿರುವ ಪೌರರು ಪೌರತ್ವದ ಹಕ್ಕುಗಳನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ.
    • ವಿಧಿ 11:- ಪೌರತ್ವದ ಹಕ್ಕನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಂಸತ್ತಿಗೆ ಅಧಿಕಾರ ನೀಡುತ್ತದೆ.

    ಶಾಸನಬದ್ಧ ನಿಬಂಧನೆಗಳು: ಪೌರತ್ವ ಕಾಯ್ದೆ, 1955

    ಇದು ಭಾರತೀಯ ಪೌರತ್ವವನ್ನು ಪಡೆಯುವ ಮತ್ತು ರದ್ದುಗೊಳಿಸುವ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಪೌರತ್ವ ಪಡೆಯುವ ಪ್ರಮುಖ ವಿಧಾನಗಳು:

    1. ಜನನದ ಮೂಲಕ (ವಿಭಾಗ 3)
    2. ವಂಶಪಾರಂಪರ್ಯವಾಗಿ (ವಿಭಾಗ 4)
    3. ನೋಂದಣಿ ಮೂಲಕ (ವಿಭಾಗ 5)
    4. ನಾಗರಿಕತೀಕರಣದ ಮೂಲಕ (ವಿಭಾಗ 6)
    5. ಪ್ರದೇಶಗಳ ಸೇರ್ಪಡೆಯ ಮೂಲಕ (ವಿಭಾಗ 7)

    ಪಕ್ಷಾಂತರ ನಿಷೇಧ ಕಾಯ್ದೆ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಲೋಕಸಭೆಯಲ್ಲಿ “ಸಂವಿಧಾನ (ತಿದ್ದುಪಡಿ) ಮಸೂದೆ, 2025 (10ನೇ ಅನುಸೂಚಿಯ ತಿದ್ದುಪಡಿ)” ಎಂಬ ಶೀರ್ಷಿಕೆಯ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಲಾಗಿದೆ. 
    • ಸಾಮಾನ್ಯವಾಗಿ ಕರೆಯಲ್ಪಡುವ ‘ಪಕ್ಷಾಂತರ ನಿಷೇಧ ಕಾಯ್ದೆ’ಯು ಸಂವಿಧಾನದ 10ನೇ ಅನುಸೂಚಿಯನ್ನು, 52ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1985 ರ ಮೂಲಕ ಭಾರತದ ಸಂವಿಧಾನಕ್ಕೆ ಸೇರಿಸಲಾಯಿತು.

    ವಿಪ್ (Whip) ನ ಬಗ್ಗೆ:

    • ‘ವಿಪ್’ ಅಥವಾ ‘ಸಚೇತಕ’ ಎನ್ನುವುದು ಸದನದಲ್ಲಿರುವ ರಾಜಕೀಯ ಪಕ್ಷದ ಸದಸ್ಯರು ಪಕ್ಷದ ನಿರ್ದಿಷ್ಟ ನಿರ್ದೇಶನಕ್ಕೆ ಬದ್ಧವಾಗಿರಲು ಹೊರಡಿಸುವ ಆದೇಶವಾಗಿದೆ.
    • ರಾಜಕೀಯ ಪಕ್ಷಗಳು ತಮ್ಮ ಸಂಸದರಿಗೆ ಆಯಾ ಪಕ್ಷದ ನಿಲುವಿಗೆ ಅನುಗುಣವಾಗಿ ಮಸೂದೆಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಲು ವಿಪ್ ಜಾರಿಗೊಳಿಸುತ್ತವೆ.
    • ಒಮ್ಮೆ ವಿಪ್ ಜಾರಿಯಾದ ನಂತರ, ಪ್ರತಿ ಪಕ್ಷದ ಸಂಸದರು ಕಡ್ಡಾಯವಾಗಿ ಅದನ್ನು ಪಾಲಿಸಬೇಕು; ತಪ್ಪಿದಲ್ಲಿ ಅವರು ಸಂಸತ್ತಿನಲ್ಲಿ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ.
    • ವಿಪ್ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ, ಆದರೆ ಇದನ್ನು ಒಂದು ಸಂಸದೀಯ ಸಂಪ್ರದಾಯವೆಂದು ಪರಿಗಣಿಸಲಾಗುತ್ತದೆ.
    • ರಾಜಕೀಯ ಪಕ್ಷಗಳು ವಿಪ್ ಜಾರಿಗೊಳಿಸಲು ಸದನದ ಸದಸ್ಯರ ಪೈಕಿ ಒಬ್ಬ ಹಿರಿಯ ಸದಸ್ಯರನ್ನು ನೇಮಿಸುತ್ತವೆ  ಈ ಸದಸ್ಯರನ್ನು ‘ಮುಖ್ಯ ಸಚೇತಕ’ (Chief Whip) ಎಂದು ಕರೆಯಲಾಗುತ್ತದೆ ಮತ್ತು ಇವರಿಗೆ ಹೆಚ್ಚುವರಿ ಸಚೇತಕರು ನೆರವಾಗುತ್ತಾರೆ.

    ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ:

    • ರಾಜಕೀಯ ಪಕ್ಷಾಂತರಗಳನ್ನು ತಡೆಗಟ್ಟುವ ಉದ್ದೇಶದಿಂದ ಸಂವಿಧಾನದ 10ನೇ ಅನುಸೂಚಿಯನ್ನು ಅಳವಡಿಸಿಕೊಳ್ಳಲಾಗಿದೆ.
    • ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ:- ರಾಜಕೀಯ ಪಕ್ಷವೊಂದಕ್ಕೆ ಸೇರಿದ ಸಂಸದರು/ಶಾಸಕರು ಈ ಕೆಳಗಿನ ಸಂದರ್ಭಗಳಲ್ಲಿ ಅನರ್ಹಗೊಳ್ಳುತ್ತಾರೆ:
    1. ತಮ್ಮ ಪಕ್ಷದ ಸದಸ್ಯತ್ವವನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿದರೆ.
    2. ತಮ್ಮ ರಾಜಕೀಯ ಪಕ್ಷವು ನೀಡಿದ ನಿರ್ದೇಶನಕ್ಕೆ ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ ಅಥವಾ ಮತದಾನದಿಂದ ದೂರವುಳಿದರೆ ಅನರ್ಹಗೊಳ್ಳುತ್ತಾರೆ. 
    3. ಪಕ್ಷೇತರ ಸದಸ್ಯರು ಸದನಕ್ಕೆ ಚುನಾಯಿತರಾದ ನಂತರ ಯಾವುದಾದರೂ ರಾಜಕೀಯ ಪಕ್ಷವನ್ನು ಸೇರಿದರೆ ಅವರು ಅನರ್ಹಗೊಳ್ಳುತ್ತಾರೆ.
    4. ನಾಮನಿರ್ದೇಶಿತ ಸದಸ್ಯರು ನಾಮನಿರ್ದೇಶನಗೊಂಡ ಆರು ತಿಂಗಳ ನಂತರ ಯಾವುದೇ ರಾಜಕೀಯ ಪಕ್ಷವನ್ನು ಸೇರಿದರೆ ಅನರ್ಹಗೊಳ್ಳುತ್ತಾರೆ.
    5. ಸದಸ್ಯರು ತಮ್ಮ ಪಕ್ಷದಿಂದ ಮುಂಚಿತವಾಗಿ ಅನುಮತಿ ಪಡೆದಿದ್ದರೆ ಅಥವಾ ಮತದಾನದ ನಿಯಮ ಉಲ್ಲಂಘನೆ ಅಥವಾ ಗೈರುಹಾಜರಿಯನ್ನು ಪಕ್ಷವು 15 ದಿನಗಳೊಳಗೆ ಕ್ಷಮಿಸಿದರೆ, ಅವರು ಅನರ್ಹಗೊಳ್ಳುವುದಿಲ್ಲ.
    • ವಿಲೀನದ ಸಂದರ್ಭಗಳಲ್ಲಿ ವಿನಾಯಿತಿಗಳು:- ಮೂಲ ರಾಜಕೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರು ಮತ್ತೊಂದು ರಾಜಕೀಯ ಪಕ್ಷದೊಂದಿಗೆ ವಿಲೀನಗೊಂಡಾಗ ಅಂತಹ ಸದಸ್ಯರಿಗೆ ಅನರ್ಹತೆಯಿಂದ ವಿನಾಯಿತಿ ನೀಡಲಾಗುತ್ತದೆ.
    • ಈ ಸದಸ್ಯರು ತಾವು ವಿಲೀನಗೊಂಡ ಪಕ್ಷದ ಸದಸ್ಯರಾಗಿರಬೇಕು, ಅಥವಾ
    • ಅವರು ಅಂತಹ ವಿಲೀನವನ್ನು ಒಪ್ಪಿಕೊಳ್ಳದೆ ಪ್ರತ್ಯೇಕ ಗುಂಪಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿರಬೇಕು.
    • ತೀರ್ಪು ನೀಡುವ ಅಧಿಕಾರ:- ಸದಸ್ಯರನ್ನು ಸದನದಿಂದ ಅನರ್ಹಗೊಳಿಸುವ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವು ಆಯಾ ಸದನದ ಸಭಾಪತಿ ಅಥವಾ ಸಭಾಧ್ಯಕ್ಷರಿಗೆ ಇರುತ್ತದೆ.
  • ಗೋವಾ ವಿಮೋಚನಾ ದಿನ | ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025 | ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (RRBs) ಹೊಸ ಲೋಗೋ (ಚಿಹ್ನೆ) | ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಮಾರ್ಗ (ಕಾರಿಡಾರ್) (Andhra’s Rare Earth Corridor) | ರಾಟ್ಲೆ ಜಲವಿದ್ಯುತ್ ಯೋಜನೆ | ರಿಸ್ಪಾಂಡ್ (RESPOND) ಬಾಸ್ಕೆಟ್, 2025

    ಗೋವಾ ವಿಮೋಚನಾ ದಿನ

    ಸಾಮಾನ್ಯ ಅಧ್ಯಯನ-1/ ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • 1961ರಲ್ಲಿ ಪೋರ್ಚುಗೀಸರ ಆಳ್ವಿಕೆಯಿಂದ ಗೋವಾ ವಿಮೋಚನೆಗೊಂಡು ಅಧಿಕೃತವಾಗಿ ಭಾರತದೊಂದಿಗೆ ವಿಲೀನಗೊಂಡ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 19 ರಂದು ‘ಗೋವಾ ವಿಮೋಚನಾ ದಿನ’ವನ್ನು ಆಚರಿಸಲಾಗುತ್ತದೆ.

    ಐತಿಹಾಸಿಕ ಹಿನ್ನೆಲೆ:

    • ಪೋರ್ಚುಗೀಸರು ಮೊದಲಬಾರಿಗೆ ವಶಪಡಿಸಿಕೊಂಡಿದ್ದು 1510 ರಲ್ಲಿ: ಪೋರ್ಚುಗೀಸರ ನೌಕಾಪಡೆಯ ಮುಖ್ಯಸ್ಥ ಅಲ್ಬುಕರ್ಕ್, ಸ್ಥಳೀಯ ಮುಖ್ಯಸ್ಥ ತಿಮೋಜಿಯ ಸಹಾಯದೊಂದಿಗೆ ಗೋವಾವನ್ನು ವಶಪಡಿಸಿಕೊಂಡನು.
    • ಬಿಜಾಪುರದ “ಆದಿಲ್ ಶಾಹಿಯ” ಪಡೆಗಳು ಗೋವಾವನ್ನು ವಶಪಡಿಸಿಕೊಂಡವು: ಮಳೆಗಾಲದ ಸಮಯದಲ್ಲಿ ಆದಿಲ್ ಶಾಹಿಯ ಪಡೆಗಳು ಗೋವಾವನ್ನು ಪೋರ್ಚುಗೀಸರಿಂದ ಮರುಪಡೆಯುವಲ್ಲಿ ಯಶಸ್ವಿಯಾದವು.
    • ಅಂತಿಮ ವಿಜಯ (ನವೆಂಬರ್ 1510): ಅಲ್ಬುಕರ್ಕ್ ಹೆಚ್ಚಿನ ಸೈನ್ಯದೊಂದಿಗೆ ಮರಳಿ ಬಂದು ಬಿಜಾಪುರ ಪಡೆಗಳನ್ನು ನಿರ್ಣಾಯಕವಾಗಿ ಸೋಲಿಸಿ ಗೋವಾವನ್ನು ಪೂರ್ಣವಾಗಿ ವಶಪಡಿಸಿಕೊಂಡನು.

    ಪೋರ್ಚುಗೀಸರ ಯಶಸ್ಸಿಗೆ ಕಾರಣಗಳು:

      • ಅತ್ಯುನ್ನತ ನೌಕಾ ಶಕ್ತಿ ಮತ್ತು ಫಿರಂಗಿ ದಳದ ಬಳಕೆ.
      • ಬಿಜಾಪುರ ಸುಲ್ತಾನರ ದುರ್ಬಲ ಆಂತರಿಕ ನಿಯಂತ್ರಣ.
      • ಅತೃಪ್ತ ಸ್ಥಳೀಯ ಗುಂಪುಗಳಿಂದ ದೊರೆತ ಬೆಂಬಲ.
    • ಅಲ್ಬುಕರ್ಕ್‌ನ ಸಮರ್ಥ ನಾಯಕತ್ವ.

    ಪರಿಣಾಮಗಳು:

    • ಗೋವಾ ಭಾರತದಲ್ಲಿರುವ ಪೋರ್ಚುಗೀಸರ ವಸಾಹತುಗಳ (Estado da Índia) ರಾಜಧಾನಿಯಾಯಿತು.
    • ಇದು ಭಾರತದಲ್ಲಿ ಯುರೋಪಿನ ಪ್ರಾದೇಶಿಕ ವಸಾಹತುಶಾಹಿಯ ಆರಂಭಕ್ಕೆ ನಾಂದಿ ಹಾಡಿತು.
    • ಗೋವಾ ವ್ಯಾಪಾರ, ಆಡಳಿತ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿತು.

    ಗಮನಿಸಿ:- ಯುರೋಪಿನ ವಸಾಹತುಶಾಹಿಗಳಿಂದ ವಶಪಡಿಸಿಕೊಳ್ಳಲ್ಪಟ್ಟ ಭಾರತದ ಮೊದಲ ಭೂಪ್ರದೇಶ ಮತ್ತು ಸ್ವಾತಂತ್ರ್ಯ ಪಡೆದ ಕೊನೆಯ ಪ್ರದೇಶವೂ ಇದೇ ಆಗಿತ್ತು.

    ವಿಮೋಚನೆಯ ಹಿನ್ನೆಲೆ:

    • 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಗೋವಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಹೈದರಾಬಾದ್‌ನಂತಹ ಪ್ರದೇಶಗಳ ವಿಲೀನವು ಸರ್ಕಾರದ ಮುಂದಿದ್ದ ಪ್ರಮುಖ ಸವಾಲುಗಳಾಗಿದ್ದವು.
    • ರಾಜತಾಂತ್ರಿಕ ಪ್ರಯತ್ನಗಳು:- ಗೋವಾವನ್ನು ಶಾಂತಿಯುತವಾಗಿ ಹಸ್ತಾಂತರಿಸುವಂತೆ ಪೋರ್ಚುಗಲ್ ದೇಶವನ್ನು ಮನವೊಲಿಸಲು ಭಾರತ ಸರ್ಕಾರವು ಹಲವಾರು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿತು.
    • ಸುಮಾರು 451 ವರ್ಷಗಳ ಕಾಲ ಗೋವಾವನ್ನು ಆಳಿದ್ದ ಪೋರ್ಚುಗಲ್, ಭಾರತದ ಎಲ್ಲಾ ವಿನಂತಿಗಳನ್ನು ತಿರಸ್ಕರಿಸಿತು.
    • ಇದು ಸ್ಥಳೀಯ ನಾಯಕರು ಮತ್ತು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ‘ಗೋವಾ ವಿಮೋಚನಾ ಚಳವಳಿ’ಗೆ ಕಾರಣವಾಯಿತು.

    ಆಪರೇಷನ್ ವಿಜಯದ ಬಗ್ಗೆ:

    • ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕಾರವಧಿಯಲ್ಲಿ ಗೋವಾವನ್ನು ಭಾರತದೊಂದಿಗೆ ವಿಲೀನಗೊಳಿಸಲು ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ವಿಜಯ್’ ಅನ್ನು ಪ್ರಾರಂಭಿಸಿದವು.
    • ಈ ಕಾರ್ಯಾಚರಣೆಯು 36 ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದು, ಭೂ, ಜಲ ಮತ್ತು ವಾಯುಪಡೆಗಳ ಸಮನ್ವಯದ ದಾಳಿಗಳನ್ನು ಒಳಗೊಂಡಿತ್ತು.

    ಫಲಿತಾಂಶ:-

    • ಪೋರ್ಚುಗೀಸ್ ಪಡೆಗಳು ಡಿಸೆಂಬರ್ 19, 1961 ರಂದು ಶರಣಾದವು, ಇದರಿಂದಾಗಿ ‘ಗೋವಾ’ವು ದಮನ್ ಮತ್ತು ದಿಯು ಜೊತೆಗೆ ವಿಮೋಚನೆಗೊಂಡಿತು.
    • ಮೇ 30, 1987 ರಂದು ಅಂದಿನ ಕೇಂದ್ರಾಡಳಿತ ಪ್ರದೇಶವನ್ನು ವಿಭಜಿಸಿ, ಗೋವಾವನ್ನು ಭಾರತದ 25ನೇ ರಾಜ್ಯವನ್ನಾಗಿ ಮಾಡಲಾಯಿತು.
    • ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳಾಗಿಯೇ ಮುಂದುವರಿದವು.

    ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಹಣಕಾಸು ಸಚಿವರು ಲೋಕಸಭೆಯಲ್ಲಿ ‘ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025’ ಅನ್ನು ಮಂಡಿಸಿದ್ದಾರೆ.

    ಮಸೂದೆಯ ಉದ್ದೇಶ:

    ಈ ಮಸೂದೆಯು ಅಸ್ತಿತ್ವದಲ್ಲಿರುವ ಈ ಕೆಳಗಿನ ಪ್ರಮುಖ ಕಾನೂನುಗಳನ್ನು ಕ್ರೂಢೀಕರಿಸಲು  ಪ್ರಸ್ತಾಪಿಸುತ್ತದೆ:

    • ಭದ್ರತಾ ಪತ್ರಗಳ ಒಪ್ಪಂದಗಳು (ನಿಯಂತ್ರಣ) ಕಾಯ್ದೆ, 1956.
    • ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (SEBI) ಕಾಯ್ದೆ, 1992.
    • ಠೇವಣಿ ಕಾಯ್ದೆ, 1996 

    ಪ್ರಮುಖ ನಿಬಂಧನೆಗಳು:

    • SEBI ಮಂಡಳಿಯ ರಚನೆಯಲ್ಲಿ ಸುಧಾರಣೆ: SEBI ಮಂಡಳಿಯ ಸದಸ್ಯರ ಸಂಖ್ಯೆಯನ್ನು ಅಧ್ಯಕ್ಷರು ಸೇರಿದಂತೆ ಪ್ರಸ್ತುತ ಇರುವ 9 ರಿಂದ 15ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
    • ಪರಿಷ್ಕೃತ ಮಂಡಳಿಯ ಸಂಯೋಜನೆ: ಮರುರಚನೆಯಾದ ಮಂಡಳಿಯು ಈ ಕೆಳಗಿನ ಸಂಯೋಜನೆಯನ್ನು ಒಳಗೊಂಡಿರುತ್ತದೆ:
      • ಅಧ್ಯಕ್ಷರು
      • ಕೇಂದ್ರ ಸರ್ಕಾರದಿಂದ ನೇಮಕಗೊಂಡ ಇಬ್ಬರು ಅಧಿಕಾರಿಗಳು.
      • ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಒಬ್ಬರು ಪದನಿಮಿತ್ತ ಸದಸ್ಯರು.
      • ಹನ್ನೊಂದು ಇತರ ಸದಸ್ಯರು; ಇವರಲ್ಲಿ ಕನಿಷ್ಠ ಐವರು ಪೂರ್ಣಾವಧಿ ಸದಸ್ಯರಾಗಿರುತ್ತಾರೆ (ಪ್ರಸ್ತುತ ಕೇವಲ ಮೂವರು ಪೂರ್ಣಾವಧಿ ಸದಸ್ಯರಿದ್ದಾರೆ).

    ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (SEBI)ಯ ಬಗ್ಗೆ:

    • ಇದು ಭಾರತದ ಭದ್ರತಾ ಪತ್ರಗಳ ಮತ್ತು ಬಂಡವಾಳ ಮಾರುಕಟ್ಟೆಗಳ ಪ್ರಾಥಮಿಕ ನಿಯಂತ್ರಕ ಸಂಸ್ಥೆಯಾಗಿದೆ.
    • ಇದನ್ನು 1992ರಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಯಿತು ಮತ್ತು ಇದು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಅಧ್ಯಕ್ಷರು: ತುಹಿನ್ ಕಾಂತ ಪಾಂಡೆ (ಪ್ರಸ್ತುತ).
    • ಪ್ರಧಾನ ಕಚೇರಿ:– ಮುಂಬೈ
    • ಪ್ರಾದೇಶಿಕ ಕಚೇರಿಗಳು:- ನವದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಅಹಮದಾಬಾದ.
    • ಉದ್ದೇಶ:- ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು, ಮಾರುಕಟ್ಟೆ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಭದ್ರತಾ ಪತ್ರಗಳ ಮಾರುಕಟ್ಟೆಯನ್ನು ನಿಯಂತ್ರಿಸುವುದು.

    ಪ್ರಮುಖ ಕಾರ್ಯಗಳು ಮತ್ತು ಅಧಿಕಾರಗಳು:

    • ರಕ್ಷಣಾತ್ಮಕ ಕಾರ್ಯಗಳು: ಆಂತರಿಕ ವ್ಯಾಪಾರ (ಇನ್ಸೈಡರ್ ಟ್ರೇಡಿಂಗ್), ಬೆಲೆ ಅಕ್ರಮಗಳು ಮತ್ತು ವಂಚನೆಯ ಅಭ್ಯಾಸಗಳನ್ನು ತಡೆಗಟ್ಟುವುದು.
    • ಅಭಿವೃದ್ಧಿ ಕಾರ್ಯಗಳು: ಹೂಡಿಕೆದಾರರ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಮಾರುಕಟ್ಟೆ ಪಾರದರ್ಶಕತೆಯನ್ನು ಹೆಚ್ಚಿಸಲು ಮಧ್ಯವರ್ತಿಗಳಿಗೆ ತರಬೇತಿ ನೀಡುವುದು.
    • ನಿಯಂತ್ರಕ ಕಾರ್ಯಗಳು: ನಿಯಮಾವಳಿಗಳನ್ನು ರೂಪಿಸುವುದು, ಲೆಕ್ಕಪರಿಶೋಧನೆ ನಡೆಸುವುದು ಮತ್ತು ಮಧ್ಯವರ್ತಿಗಳು ಹಾಗೂ ಮ್ಯೂಚುವಲ್ ಫಂಡ್‌ಗಳಂತಹ ಮಾರುಕಟ್ಟೆ ಪಾಲುದಾರರನ್ನು ನೋಂದಾಯಿಸುವುದು.

    ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (RRBs) ಹೊಸ ಲೋಗೋ (ಚಿಹ್ನೆ)

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತ ಸರ್ಕಾರವು ನಬಾರ್ಡ್ನ ಸಹಯೋಗದೊಂದಿಗೆ, ದೇಶದಾದ್ಯಂತ ಇರುವ ಎಲ್ಲಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಗುರುತನ್ನು ಏಕೀಕರಿಸುವ ಉದ್ದೇಶದಿಂದ “ಒಂದು ಆರ್.ಆರ್.ಬಿ, ಒಂದು ಲೋಗೋ (ಚಿಹ್ನೆ)” ಉಪಕ್ರಮದ ಅಡಿಯಲ್ಲಿ ಸಾಮಾನ್ಯ ಲೋಗೋವನ್ನು ಅನಾವರಣಗೊಳಿಸಿದೆ. ಇದು ದೇಶದಾದ್ಯಂತ RRBಗಳ ಗುರುತನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

    “ಒಂದು ಆರ್.ಆರ್.ಬಿ, ಒಂದು ಲೋಗೋ” ಉಪಕ್ರಮದ ಬಗ್ಗೆ:

    • ಗುರಿ:- ಇದು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಏಕೈಕ ಮತ್ತು ಏಕರೂಪದ ದೃಶ್ಯ ಗುರುತನ್ನುಪರಿಚಯಿಸುವ ಸುಧಾರಣಾ ಕ್ರಮವಾಗಿದೆ.
    • ಜಂಟಿ ಅನುಷ್ಠಾನ:- ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (DFS) ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD).

    ಈ ಉಪಕ್ರಮದ ಉದ್ದೇಶಗಳು:

    • ಏಕೀಕೃತ ಗುರುತು:- ಆರ್.ಆರ್.ಬಿ ಗಳನ್ನು ಪ್ರತ್ಯೇಕ ಪ್ರಾದೇಶಿಕ ಘಟಕಗಳಿಗಿಂತ ಹೆಚ್ಚಾಗಿ ಒಂದು ಸಮಗ್ರ ರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿ ಬಿಂಬಿಸುವುದು.
    • ಗ್ರಾಹಕರ ವಿಶ್ವಾಸ:- ಸುಲಭ ಗುರುತಿಸುವಿಕೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವುದು.
    • ಕಾರ್ಯಾಚರಣೆಯ ಏಕೀಕರಣ:- ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಇತ್ತೀಚಿನ ವಿಲೀನ ಮತ್ತು ಕ್ರೂಢೀಕರಣ ಪ್ರಕ್ರಿಯೆಗೆ ಪೂರಕ ಬೆಂಬಲ ನೀಡುವುದು.
    • ಡಿಜಿಟಲ್ ಸಿದ್ಧತೆ:- ಆಧುನಿಕ ಬ್ಯಾಂಕಿಂಗ್ ಮತ್ತು ಡಿಜಿಟಲ್ ಹಣಕಾಸು ಸೇವೆಗಳಿಗೆ ಅನುಗುಣವಾಗಿ ಆರ್.ಆರ್.ಬಿ ಬ್ರ್ಯಾಂಡಿಂಗ್ ಅನ್ನು ಸಜ್ಜುಗೊಳಿಸುವುದು.

    ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBs) ಬಗ್ಗೆ:

    • ಸ್ಥಾಪನೆ:- ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾಯ್ದೆ, 1976 ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
    • ಉದ್ದೇಶ:- ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಥಿಕ ಸಾಲವನ್ನು ವಿಸ್ತರಿಸುವುದು ಮತ್ತು ಸಣ್ಣ ರೈತರು, ಸ್ವಸಹಾಯ ಗುಂಪುಗಳು, ಕುಶಲಕರ್ಮಿಗಳು ಹಾಗೂ ಸೂಕ್ಷ್ಮ, ಸಣ್ಣ, ಮತ್ತು ಮಾಧ್ಯಮ ಕೈಗಾರಿಕೆ (MSME) ಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸುವುದು.
    • ತ್ರಿಪಕ್ಷೀಯ ಮಾಲೀಕತ್ವದ ಮಾದರಿ:-
      • ಭಾರತ ಸರ್ಕಾರ – 50%
      • ಸಂಬಂಧಿತ ರಾಜ್ಯ ಸರ್ಕಾರ – 15%
      • ಪ್ರಾಯೋಜಕ ಬ್ಯಾಂಕ್ – 35%

    ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಮಾರ್ಗ (ಕಾರಿಡಾರ್) (Andhra’s Rare Earth Corridor)

    ಸಾಮಾನ್ಯ ಅಧ್ಯಯನ-3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶದ 974 ಕಿಮೀ ಉದ್ದದ ಕರಾವಳಿಯು ಸಮುದ್ರ ತೀರದ ಮರಳಿನಲ್ಲಿರುವ ವಿರಳ ಭೂ ಧಾತುಗಳ (REEs) ಅಪಾರ ಸಂಗ್ರಹದಿಂದಾಗಿ ಕಾರ್ಯತಂತ್ರದ ಮಹತ್ವವನ್ನು ಪಡೆದುಕೊಂಡಿದೆ.

    ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಕಾರಿಡಾರ್ ನ ಬಗ್ಗೆ:

    • ಸ್ಥಳ:- ಆಂಧ್ರಪ್ರದೇಶದ ಉತ್ತರದ ಶ್ರೀಕಾಕುಳಂನಿಂದ ದಕ್ಷಿಣದ ನೆಲ್ಲೂರು ವರೆಗಿನ ನಿರಂತರ ಖನಿಜಯುಕ್ತ ಕರಾವಳಿ ವಲಯ.
    • ದೊರೆಯುವ ಪ್ರಮುಖ ಖನಿಜಗಳು:-
      • ಮೋನಾಜೈಟ್: ಇದು ವಿರಳ ಭೂ ಧಾತುಗಳ (REEs) ಮತ್ತು ಥೋರಿಯಂನ ಪ್ರಾಥಮಿಕ ಮೂಲವಾಗಿದೆ.
      • ಇಲ್ಮನೈಟ್, ರೂಟೈಲ್, ಜಿರ್ಕಾನ್, ಗಾರ್ನೆಟ್ ಮತ್ತು ಸಿಲಿಮನೈಟ್ ಇತ್ಯಾದಿ.

    ಗಮನಿಸಿ:- ಭಾರತದ ಒಟ್ಟು ಮೋನಾಜೈಟ್ ಸಂಗ್ರಹದಲ್ಲಿ ಆಂಧ್ರಪ್ರದೇಶವು 30-35% ರಷ್ಟು ಪಾಲನ್ನು ಹೊಂದಿದೆ.

    ವಿರಳ ಭೂ ಧಾತುಗಳ (REEs) ಬಗ್ಗೆ:

    • ಇವು 17 ಮೂಲವಸ್ತುಗಳ ಒಂದು ಗುಂಪಾಗಿದ್ದು, 15 ಲ್ಯಾಂಥನೈಡ್‌ಗಳು + ಸ್ಕ್ಯಾಂಡಿಯಂ + ಯಟ್ರಿಯಂ ಅನ್ನು ಒಳಗೊಂಡಿವೆ.

    ಇವುಗಳನ್ನು ವಿರಳ ಭೂ ಧಾತುಗಳು (ಅಪರೂಪದ ಲೋಹಗಳು) ಎಂದು ಏಕೆ ಕರೆಯಲಾಗುತ್ತದೆ? 

    ಇವು ಭೂವೈಜ್ಞಾನಿಕವಾಗಿ ಹೇರಳವಾಗಿ ದೊರೆತರೂ, ಈ ಕೆಳಗಿನ ಕಾರಣಗಳಿಗಾಗಿ ಇವುಗಳನ್ನು “ವಿರಳ” ಭೂ ಧಾತುಗಳು ಎಂದು ಪರಿಗಣಿಸಲಾಗುತ್ತದೆ:

    • ಇವು ಅತ್ಯಂತ ಕಡಿಮೆ ಸಾಂದ್ರತೆಯಲ್ಲಿ ಸಿಗುತ್ತವೆ.
    • ಇವುಗಳ ಹೊರತೆಗೆಯುವಿಕೆ ಮತ್ತು ಸಂಸ್ಕರಣೆಯು ಅತ್ಯಂತ ಕಠಿಣವಾಗಿದ್ದು, ಹೆಚ್ಚಿನ ಬಂಡವಾಳ ಮತ್ತು ಸುಧಾರಿತ ತಂತ್ರಜ್ಞಾನದ ಅಗತ್ಯವಿರುತ್ತದೆ.

    ವಿರಳ ಭೂ ಧಾತು (REE)ಗಳ ವರ್ಗೀಕರಣ:

    1. ಹಗುರ REEಗಳು: ಲ್ಯಾಂಥನಮ್, ಸಿರಿಯಮ್, ನಿಯೋಡೈಮಿಯಮ್, ಪ್ರಾಸಿಯೊಡೈಮಿಯಮ್, ಸಮೇರಿಯಮ್ ಇತ್ಯಾದಿ.
    2. ಭಾರೀ REEಗಳು: ಡಿಸ್ಪ್ರೋಸಿಯಮ್, ಟೆರ್ಬಿಯಮ್, ಯಟ್ರಿಯo ಇತ್ಯಾದಿ.

    ರಾಟ್ಲೆ ಜಲವಿದ್ಯುತ್ ಯೋಜನೆ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ 850 ಮೆಗಾವ್ಯಾಟ್ ಸಾಮರ್ಥ್ಯದ ರಾಟ್ಲೆ ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಕಾರ್ಮಿಕರು ಉಗ್ರಗಾಮಿ ಸಂಪರ್ಕ ಅಥವಾ ಅಪರಾಧ ಹಿನ್ನೆಲೆಯನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೇಘಾ ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ ನಿಯಮಿತ (MEIL) ಕಂಪನಿಗೆ ಮಾಹಿತಿ ನೀಡಿದ್ದಾರೆ.

    ರಾಟ್ಲೆ ಜಲವಿದ್ಯುತ್ ಯೋಜನೆ (850 MW) ಯ ಬಗ್ಗೆ:

    • ಸ್ಥಳ:- ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕಿಶ್ತ್ವಾರ್ ಜಿಲ್ಲೆಯ ದ್ರಬ್ಶಾಲಾ ಬಳಿ ಚೆನಾಬ್ ನದಿಯ ಮೇಲೆ ಈ ಯೋಜನೆಯನ್ನು ನಿರ್ಮಿಸಲಾಗುತ್ತಿದೆ.
    • ವಿಧ ಮತ್ತು ಸಾಮರ್ಥ್ಯ:- ಇದು ‘ರನ್-ಆಫ್-ದಿ-ರಿವರ್’ (ನದಿಯ ನೈಸರ್ಗಿಕ ಹರಿವು) ಮಾದರಿಯ ಯೋಜನೆಯಾಗಿದ್ದು, ಒಟ್ಟು 850 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
    • ತಾಂತ್ರಿಕ ವಿವರಗಳು:- ಈ ಯೋಜನೆಯು 133 ಮೀಟರ್ ಎತ್ತರದ ಕಾಂಕ್ರೀಟ್ ಗುರುತ್ವಾಕರ್ಷಣೆಯ ಅಣೆಕಟ್ಟು (ಕಾಂಕ್ರೀಟ್ ಗ್ರಾವಿಟಿ ಡ್ಯಾಮ್) ಮತ್ತು ಸಂಬಂಧಿತ ಭೂಗತ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಒಳಗೊಂಡಿದೆ.

    ರಿಸ್ಪಾಂಡ್ (RESPOND) ಬಾಸ್ಕೆಟ್, 2025

    ಸಾಮಾನ್ಯ ಅಧ್ಯಯನ-3/ ವಿಜ್ಞಾನ ಮತ್ತು ತಂತ್ರಜ್ಞಾನ)

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ‘ರಿಸ್ಪಾಂಡ್ ಬಾಸ್ಕೆಟ್, 2025’ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

    ರಿಸ್ಪಾಂಡ್ ಬಾಸ್ಕೆಟ್, 2025 ರ ಬಗ್ಗೆ:

    • ಇದು ‘ಇಸ್ರೋ’ದ ಮುಂಬರುವ ಕಾರ್ಯಾಚರಣೆಗಳು ಮತ್ತು ರಾಷ್ಟ್ರೀಯ ಆದ್ಯತೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿವಿಧ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಇತರ ಮಾನ್ಯತೆ ಪಡೆದ ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಂದ ಸಂಶೋಧನಾ ಪ್ರಸ್ತಾವನೆಗಳನ್ನು ಸಲ್ಲಿಸಲು ಆಹ್ವಾನಿಸುತ್ತದೆ.
    • ಇದು ಭಾರತೀಯ ಅಂತರಿಕ್ಷ ನಿಲ್ದಾಣ, ಚಂದ್ರಯಾನ-4, ಗಗನಯಾನ ಮಿಷನ್, ಶುಕ್ರ ಕಕ್ಷೆಗಾಮಿ ಮತ್ತು ಮಾನವ ಚಂದ್ರನ ಮೇಲೆ ಇಳಿಯುವಿಕೆ ಸೇರಿದಂತೆ ‘ಇಸ್ರೊ’ದ ಮುಂಬರುವ ಯೋಜನೆಗಳನ್ನು ಬೆಂಬಲಿಸುತ್ತದೆ.
  • ಸಹಜೀವನ (ಲಿವ್-ಇನ್) ಸಂಬಂಧಗಳು ಕಾನೂನುಬಾಹಿರವಲ್ಲ: ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ತೀರ್ಪು | ಮಕ್ಕಳ ಕಳ್ಳಸಾಗಣೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಲೈಂಗಿಕ ಶೋಷಣೆ | ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPFs) ಗಳಲ್ಲಿ ಮಾಜಿ ಅಗ್ನಿವೀರರಿಗೆ ಮೀಸಲಾತಿ 50% ಕ್ಕೆ ಹೆಚ್ಚಳ | ‘ಬಡ ಕೈದಿಗಳಿಗೆ ಬೆಂಬಲ’ ಯೋಜನೆ | ಕರ್ನಾಟಕದ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಇಂಡಿ ನಿಂಬೆ ಒಮನ್ ಮಾರುಕಟ್ಟೆಗೆ ಪ್ರವೇಶ | ಟಂಡ್ರಾ ಜೀವವಲಯ (ಬಯೋಮ್) | ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ (ಬಂದರು ಭದ್ರತಾ ಬ್ಯೂರೋ)

    ಸಹಜೀವನ (ಲಿವ್-ಇನ್) ಸಂಬಂಧಗಳು ಕಾನೂನುಬಾಹಿರವಲ್ಲ: ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ತೀರ್ಪು

    ಸಾಮಾನ್ಯ ಅಧ್ಯಯನ-2/ ಆರೋಗ್ಯ ಮತ್ತು ಸಮಾಜ

    ಇದೀಗ ಸುದ್ದಿಯಲ್ಲಿದೆ:

    • ಲಿವ್-ಇನ್ ಅಥವಾ ಸಹಜೀವನ ಸಂಬಂಧಗಳು ಕಾನೂನುಬಾಹಿರವಲ್ಲ ಎಂದು ಸ್ಪಷ್ಟಪಡಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ಪರಸ್ಪರ ಸಮ್ಮತಿಯುಳ್ಳ ವಯಸ್ಕರು ತಮ್ಮ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಘನತೆ ಹಾಗೂ ಸುರಕ್ಷತೆಯಿಂದ ಒಟ್ಟಿಗೆ ವಾಸಿಸುವುದು ಅವರ ಸಾಂವಿಧಾನಿಕ ಹಕ್ಕಾಗಿದೆ ಎಂದು ಮಹತ್ವದ ತೀರ್ಪು ನೀಡಿದೆ.

    ಅಲಹಾಬಾದ್ ಉಚ್ಚ ನ್ಯಾಯಾಲಯದ ಪ್ರಮುಖ ಅವಲೋಕನಗಳು:

    • ಸಹಜೀವನ ಸಂಬಂಧವು ಅಪರಾಧವಲ್ಲ: ಸಹಜೀವನ ಸಂಬಂಧದಲ್ಲಿರುವ ಇಬ್ಬರೂ ವಯಸ್ಕರಾಗಿದ್ದು, ಮುಕ್ತ ಸಮ್ಮತಿಯಿಂದ ವಿವಾಹವಾಗದೆ ಒಟ್ಟಿಗೆ ವಾಸಿಸುವುದು ಭಾರತದಲ್ಲಿ ಯಾವುದೇ ಕಾನೂನಿನ ಉಲ್ಲಂಘನೆಯಲ್ಲ.
    • ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು: ಭಾರತದ ಸಂವಿಧಾನದ 21ನೇ ವಿಧಿಯು ಸಹಜೀವನ ಸಂಬಂಧದಲ್ಲಿರುವವರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ, ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಭರವಸೆ ನೀಡುತ್ತದೆ ಎಂದು ನ್ಯಾಯಾಲಯ ಒತ್ತಿಹೇಳಿದೆ.
    • ರಕ್ಷಣೆ ನೀಡುವುದು ದೇಶದ/ರಾಜ್ಯದ ಕರ್ತವ್ಯ: ವಯಸ್ಕರು ಸ್ವಯಂ ಇಚ್ಛೆಯಿಂದ ಒಟ್ಟಿಗೆ ಸಹಜೀವನ ನಡೆಸಲು ನಿರ್ಧರಿಸಿದಾಗ, ಕುಟುಂಬ ಅಥವಾ ಸಮಾಜದಿಂದ ಬೆದರಿಕೆ ಎದುರಾದರೆ ಅವರಿಗೆ ರಕ್ಷಣೆ ಒದಗಿಸುವುದು ದೇಶದ/ರಾಜ್ಯದ ಹೊಣೆಯಾಗಿದೆ.
    • ಸಾಂವಿಧಾನಿಕ ನೈತಿಕತೆ v/s ಸಾಮಾಜಿಕ ನೈತಿಕತೆ: ಘನ ನ್ಯಾಯಾಲಯವು ಸಾಮಾಜಿಕ ನೈತಿಕತೆಗಿಂತ ಸಾಂವಿಧಾನಿಕ ನೈತಿಕತೆಗೆ ಹೆಚ್ಚಿನ ಆದ್ಯತೆ ನೀಡಿದೆ.
    • ವಿವಾಹದ ಸಾಕ್ಷ್ಯಾಧಾರಿತ ಪೂರ್ವಾನ್ವಯ: ನ್ಯಾಯಾಲಯವು ಭಾರತೀಯ ಸಾಕ್ಷ್ಯ ಕಾಯ್ದೆ 1872ರ ಸೆಕ್ಷನ್ 114 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023ರ ಸೆಕ್ಷನ್ 119(1) ಅನ್ನು ಉಲ್ಲೇಖಿಸಿದೆ. ಪುರುಷ ಮತ್ತು ಮಹಿಳೆ ದೀರ್ಘಕಾಲದವರೆಗೆ ಪತಿ-ಪತ್ನಿಯಂತೆ ಸಹಬಾಳ್ವೆ ನಡೆಸಿದರೆ, ಕಾನೂನು ಅವರನ್ನು ವಿವಾಹಿತರು ಎಂದು ಊಹಿಸಬಹುದು ಎಂದು ಈ ನಿಬಂಧನೆಗಳು ತಿಳಿಸುತ್ತವೆ.

    ಸಹಜೀವನ  ಸಂಬಂಧಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ಪ್ರಮುಖ ತೀರ್ಪುಗಳು:

    • ತುಳಸಾ ವಿರುದ್ಧ ದುರ್ಘಟಿಯಾ, 2008: ದೀರ್ಘಕಾಲದ ಸಹಜೀವನ ಸಂಬಂಧದಿಂದ ಜನಿಸಿದ ಮಕ್ಕಳನ್ನು ಕಾನೂನುಬಾಹಿರ ಎಂದು ಪರಿಗಣಿಸುವಂತಿಲ್ಲ. ಇದು ಮಕ್ಕಳ ಘನತೆ ಮತ್ತು ಆಸ್ತಿ ಉತ್ತರಾಧಿಕಾರವನ್ನು ಖಚಿತಪಡಿಸುತ್ತದೆ.
    • ಡಿ. ವೇಲುಸಾಮಿ ವಿರುದ್ಧ ಡಿ. ಪಚೈಯಮ್ಮಾಳ್, 2010: ‘ಗೃಹ ಹಿಂಸಾಚಾರ ಕಾಯ್ದೆ’ ಅಡಿಯಲ್ಲಿ “ವಿವಾಹದ ಸ್ವರೂಪದಲ್ಲಿನ ಸಹಜೀವನ ಸಂಬಂಧ” ಎಂಬ ಪರಿಕಲ್ಪನೆಯನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ದಂಪತಿಗಳು ಸಮಾಜದ ಮುಂದೆ ಪತಿ-ಪತ್ನಿಯಂತೆ ಇರಬೇಕು, ವಿವಾಹಕ್ಕೆ ಅರ್ಹ ವಯಸ್ಸನ್ನು ಹೊಂದಿರಬೇಕು ಮತ್ತು ಮದುವೆಯಾಗಲು ಇತರೆ ಕಾನೂನುಬದ್ಧ ಅರ್ಹತೆಗಳನ್ನು ಹೊಂದಿರಬೇಕು ಎಂಬ ನಿಬಂಧನೆಗಳನ್ನು ವಿಧಿಸಿದೆ.
    • ಇಂದ್ರ ಶರ್ಮಾ ವಿರುದ್ಧ ವಿ.ಕೆ.ವಿ. ಶರ್ಮಾ,2013: ಸಹಜೀವನ  ಸಂಬಂಧಗಳ ಬಗ್ಗೆ ನೈತಿಕ ಚರ್ಚೆಗಳಿರಬಹುದು, ಆದರೆ ನ್ಯಾಯಾಲಯಗಳು ಸಾಮಾಜಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಬೇಕು.
    • ಶಫಿನ್ ಜಹಾನ್ ವಿರುದ್ಧ ಅಶೋಕನ್ ಕೆ.ಎಂ, 2018: ತಮಗೆ ಇಷ್ಟಬಂದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಸಂವಿಧಾನದ 21ನೇ ವಿಧಿಯ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

    ಮಕ್ಕಳ ಕಳ್ಳಸಾಗಣೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಲೈಂಗಿಕ ಶೋಷಣೆ

    ಸಾಮಾನ್ಯ ಅಧ್ಯಯನ -2/ ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಸರ್ವೋಚ್ಚ ನ್ಯಾಯಾಲಯವು ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆಗೆ ಬಲಿಯಾಗಿರುವ ಅಪ್ರಾಪ್ತ ವಯಸ್ಸಿನ ಸಂತ್ರಸ್ತರ ಸಾಕ್ಷ್ಯಗಳನ್ನು ನ್ಯಾಯಾಲಯಗಳು ಎಷ್ಟು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು ಎಂಬುದರ ಕುರಿತು ಮಹತ್ವದ ಮಾರ್ಗಸೂಚನೆಗಳನ್ನು ಹೊರಡಿಸಿದೆ.

    ಭಾರತದಲ್ಲಿನ ಸಾಂವಿಧಾನಿಕ ಉಪಬಂಧಗಳು:

    • ವಿಧಿ 23: ಮಾನವ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯನ್ನು ನಿಷೇಧಿಸುತ್ತದೆ.
    • ವಿಧಿ 21: ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುನ್ನು ಖಾತರಿಪಡಿಸುತ್ತದೆ; ಇದನ್ನು ಘನತೆಯಿಂದ ಜೀವಿಸುವ ಹಕ್ಕು ಎಂದು ವ್ಯಾಖ್ಯಾನಿಸಲಾಗಿದೆ.
    • ವಿಧಿ 39(e): ರಾಜ್ಯವು ಕಾರ್ಮಿಕರು ಮತ್ತು ಮಕ್ಕಳ ಆರೋಗ್ಯ ಹಾಗೂ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಹಾಗೆಯೇ ನಾಗರಿಕರನ್ನು ಅವರ ವಯಸ್ಸು ಅಥವಾ ಶಕ್ತಿಗೆ ಹೊಂದಿಕೆಯಾಗದ ಉದ್ಯೋಗಗಳನ್ನು ಬಲವಂತವಾಗಿ ತೆಗೆದುಕೊಳ್ಳುವಂತೆ ಮಾಡಬಾರದು.

    ಕಳ್ಳಸಾಗಣೆ ವಿರೋಧಿ ಅಪರಾಧಗಳನ್ನು ನಿಯಂತ್ರಿಸುವ ಕಾನೂನುಗಳು:

    • ಅನೈತಿಕ ಕಳ್ಳಸಾಗಣೆ (ತಡೆ) ಕಾಯ್ದೆ, 1956 (ITPA): ಇದು ಅನೈತಿಕ ಕಳ್ಳಸಾಗಣೆ ಮತ್ತು ಲೈಂಗಿಕ ವೃತ್ತಿಯನ್ನು ತಡೆಯುವ ಗುರಿಯನ್ನು ಹೊಂದಿದೆ. ಈ ಕಾಯ್ದೆಯು 1978 ಮತ್ತು 1986ರಲ್ಲಿ ತಿದ್ದುಪಡಿಗಳಿಗೆ ಒಳಪಟ್ಟಿದೆ.
    • ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986: ಇದು ಮಕ್ಕಳು ನಿರ್ದಿಷ್ಟ ಉದ್ಯೋಗಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯುತ್ತದೆ ಮತ್ತು ಇತರ ಕ್ಷೇತ್ರಗಳಲ್ಲಿನ ಕೆಲಸದ ಪರಿಸ್ಥಿತಿಗಳನ್ನು ನಿಯಂತ್ರಿಸುತ್ತದೆ.
    • ಬಂಧಿತ ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, 1976: ಸಾಲ ತೀರಿಸಲು ಮಕ್ಕಳು ಸೇರಿದಂತೆ ವ್ಯಕ್ತಿಗಳು ಗುಲಾಮಗಿರಿಗೆ ಒಳಗಾಗುವುದನ್ನು ಇದು ನಿಷೇಧಿಸುತ್ತದೆ ಮತ್ತು ಬಿಡುಗಡೆಯಾದ ಕಾರ್ಮಿಕರ ಪುನರ್ವಸತಿಗೆ ಚೌಕಟ್ಟನ್ನು ಒದಗಿಸುತ್ತದೆ.
    • ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015: ಕಾನೂನುಭಂಗಕ್ಕೆ ಒಳಪಟ್ಟಿದ್ದಾರೆ ಎಂದು ಆರೋಪಿಸಲ್ಪಟ್ಟ ಹಾಗೂ ಅಂತಹವರಾಗಿ ಕಂಡುಬಂದ ಮಕ್ಕಳ ಆರೈಕೆಗೆ ಸಂಬಂಧಿಸಿದ ಕಾನೂನುಗಳನ್ನು ನಿಯಂತ್ರಿಸುವ ಕಾಯಿದೆ.
    • ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, 2012: ಇದು ಮಕ್ಕಳ ವಾಣಿಜ್ಯ ಲೈಂಗಿಕ ಶೋಷಣೆಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ.
    • ಮಾನವ ಕಳ್ಳಸಾಗಣೆ ವಿರೋಧಿ ಘಟಕ: ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಭಾರತವು 2007ರಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು ಸ್ಥಾಪಿಸಿತು.

    ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPFs) ಗಳಲ್ಲಿ ಮಾಜಿ ಅಗ್ನಿವೀರರಿಗೆ ಮೀಸಲಾತಿ 50% ಕ್ಕೆ ಹೆಚ್ಚಳ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPFs) ಗ್ರೂಪ್ ‘ಸಿ’ ಹುದ್ದೆಗಳಲ್ಲಿ ಮಾಜಿ ಅಗ್ನಿವೀರರಿಗೆ ನೀಡಲಾಗುತ್ತಿದ್ದ ಪ್ರಸ್ತುತ ಇರುವ 10% ಮೀಸಲಾತಿಯನ್ನು 50% ಕ್ಕೆ ಹೆಚ್ಚಿಸಲು ಕೇಂದ್ರ ಗೃಹ ಸಚಿವಾಲಯವು ನಿರ್ಧರಿಸಿದೆ.

    ಅಗ್ನಿಪಥ ಯೋಜನೆಯ ಬಗ್ಗೆ:

    • ಉದ್ದೇಶ: ದೇಶಭಕ್ತಿ ಮತ್ತು ಪ್ರೇರಣೆ ಹೊಂದಿರುವ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವುದು.

    ಯೋಜನೆಯ ವೈಶಿಷ್ಟ್ಯಗಳು:

    • ಅಗ್ನಿವೀರ: ಈ ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ‘ಅಗ್ನಿವೀರ’ ಎಂದು ಕರೆಯಲಾಗುತ್ತದೆ. ಇವರು ಅಲ್ಪಾವಧಿಗೆ ಸೇನೆಯಲ್ಲಿ ನೇಮಕಗೊಳ್ಳುತ್ತಾರೆ.
    • ಅಲ್ಪಾವಧಿ ನೇಮಕಾತಿ: ಈ ಯೋಜನೆಯಡಿ ವಾರ್ಷಿಕವಾಗಿ ಸುಮಾರು 45,000 ರಿಂದ 50,000 ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರಲ್ಲಿ ಹೆಚ್ಚಿನವರು ನಾಲ್ಕು ವರ್ಷಗಳ ನಂತರ ಸೇವೆಯಿಂದ ಹೊರಬರುತ್ತಾರೆ.
    • ಸ್ಥಿರ ನೇಮಕಾತಿ: ನಾಲ್ಕು ವರ್ಷಗಳ ನಂತರ, ಪ್ರತಿ ಬ್ಯಾಚ್‌ನ ಕೇವಲ 25% ಸಿಬ್ಬಂದಿಯನ್ನು ಮಾತ್ರ ಮುಂದಿನ 15 ವರ್ಷಗಳ ಅವಧಿಗೆ ಆಯಾ ಪಡೆಗಳಿಗೆ ಮರುನೇಮಕ ಮಾಡಿಕೊಳ್ಳಲಾಗುತ್ತದೆ.

    ಅರ್ಹತಾ ಮಾನದಂಡಗಳು:

    • ಇದು ಅಧಿಕಾರಿ ಹುದ್ದೆಗಿಂತ ಕೆಳಗಿನ ಸಿಬ್ಬಂದಿಗೆ ಮಾತ್ರ ಅನ್ವಯಿಸುತ್ತದೆ.
    • 17.5 ವರ್ಷದಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

    ಅಗ್ನಿವೀರರಿಗೆ ದೊರೆಯುವ ಸೌಲಭ್ಯಗಳು:

    • ಸೇವಾ ನಿಧಿ ಪ್ಯಾಕೇಜ್: 4 ವರ್ಷಗಳ ಸೇವೆ ಪೂರ್ಣಗೊಂಡ ನಂತರ, ಅಗ್ನಿವೀರರಿಗೆ 11.71 ಲಕ್ಷ ರೂ. ಗಳ ಒಂದು ಬಾರಿಯ ‘ಸೇವಾ ನಿಧಿ’ ಪ್ಯಾಕೇಜ್ ಪಾವತಿಸಲಾಗುತ್ತದೆ.
    • ಜೀವ ವಿಮೆ: ಸೇವೆಯ 4 ವರ್ಷಗಳ ಅವಧಿಯಲ್ಲಿ ಅವರಿಗೆ 48 ಲಕ್ಷ ರೂ. ಗಳ ಜೀವ ವಿಮಾ ರಕ್ಷಣೆ ಇರುತ್ತದೆ. ಒಂದು ವೇಳೆ ಸಾವನ್ನಪ್ಪಿದರೆ, ಪಾವತಿಸದ ಅವಧಿಯ ವೇತನ ಸೇರಿದಂತೆ ಒಟ್ಟು 1 ಕೋಟಿ ರೂ.ಗೂ ಅಧಿಕ ಮೊತ್ತವನ್ನು ನೀಡಲಾಗುತ್ತದೆ.
    • ಪುನರ್ವಸತಿ: ಸೇವೆಯಿಂದ ಹೊರಬರುವ ಸೈನಿಕರಿಗೆ ಕೌಶಲ್ಯ ಪ್ರಮಾಣಪತ್ರಗಳು ಮತ್ತು ಬ್ರಿಡ್ಜ್ ಕೋರ್ಸ್‌ಗಳ ಮೂಲಕ ಪುನರ್ವಸತಿಗೆ ಸರ್ಕಾರ ನೆರವು ನೀಡುತ್ತದೆ.

    ಸಂಬಂಧಿತ ಕಾಳಜಿಗಳು:

    • ಮರು-ಉದ್ಯೋಗದ ಸವಾಲು: ನಾಲ್ಕು ವರ್ಷಗಳ ಅಲ್ಪಾವಧಿ ಒಪ್ಪಂದದ ನಂತರ 75% ಮಂದಿ ಸೇವೆಯಿಂದ ಹೊರಬರುವುದರಿಂದ ಮತ್ತೊಂದು ಉದ್ಯೋಗ ಹುಡುಕುವುದು ಕಷ್ಟವಾಗಬಹುದು ಎಂಬ ಆತಂಕವಿದೆ.
    • ಪಿಂಚಣಿ ಸೌಲಭ್ಯವಿಲ್ಲ: ಅಗ್ನಿಪಥ ಯೋಜನೆಯಡಿ ನೇಮಕಗೊಂಡವರಿಗೆ ಯಾವುದೇ ಪಿಂಚಣಿ ಸೌಲಭ್ಯವಿರುವುದಿಲ್ಲ.
    • ತರಬೇತಿಯ ಸದುಪಯೋಗ: ಅನುಭವಿ ಸೈನಿಕರು ನಾಲ್ಕು ವರ್ಷಗಳಲ್ಲೇ ನಿರ್ಗಮಿಸುವುದರಿಂದ ಪಡೆಗಳಲ್ಲಿ ಶೂನ್ಯತೆ ಸೃಷ್ಟಿಯಾಗಬಹುದು ಮತ್ತು ತರಬೇತಿಯು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದಿರಬಹುದು.

    ದೇಶಕ್ಕೆ ಈ ಕ್ರಮದ ಮಹತ್ವ:

    • ಭವಿಷ್ಯದ ಸೈನಿಕರು: ಇದು ತಾಂತ್ರಿಕವಾಗಿ ಸಜ್ಜಾದ ‘ಭವಿಷ್ಯದ ಸೈನಿಕರನ್ನು’ ಸೃಷ್ಟಿಸುತ್ತದೆ.
    • ಹೆಚ್ಚಿನ ಉದ್ಯೋಗಾವಕಾಶ: ಸೇವೆಯ ಅವಧಿಯಲ್ಲಿ ಗಳಿಸಿದ ಕೌಶಲ್ಯ ಮತ್ತು ಅನುಭವದ ಆಧಾರದ ಮೇಲೆ ಸೈನಿಕರು ವಿವಿಧ ಕ್ಷೇತ್ರಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.

    ‘ಬಡ ಕೈದಿಗಳಿಗೆ ಬೆಂಬಲ’ ಯೋಜನೆ

    ಸಾಮಾನ್ಯ ಅಧ್ಯಯನ -2/ ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಬಡ ಕೈದಿಗಳಿಗೆ ಬೆಂಬಲ’ ಯೋಜನೆಯ ಅನುಷ್ಠಾನವು ನಿರೀಕ್ಷಿತ ಮಟ್ಟದಲ್ಲಿಲ್ಲದ ಕಾರಣ, ಕೇಂದ್ರ ಗೃಹ ಸಚಿವಾಲಯವು ಈ ಯೋಜನೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

    ‘ಬಡ ಕೈದಿಗಳಿಗೆ ಬೆಂಬಲ’ ಯೋಜನೆಯ ಬಗ್ಗೆ:

    ಉದ್ದೇಶ:

    • ಹಣಕಾಸಿನ ಸಮಸ್ಯೆಗಳಿಂದಾಗಿ ದಂಡವನ್ನು ಪಾವತಿಸಲು ಸಾಧ್ಯವಾಗದೆ, ಜಾಮೀನು ಪಡೆಯಲು ಅಥವಾ ಜೈಲಿನಿಂದ ಬಿಡುಗಡೆಯಾಗಲು ವಿಫಲರಾದ ಬಡ ಕೈದಿಗಳಿಗೆ ಪರಿಹಾರವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
    • ಅಂತಹ ಕೈದಿಗಳಿಗೆ ಆರ್ಥಿಕ ನೆರವು ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಯೋಜನೆಯಡಿ ಧನಸಹಾಯವನ್ನು ನೀಡಲಾಗುತ್ತದೆ.

    ಕರ್ನಾಟಕದ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಇಂಡಿ ನಿಂಬೆ ಒಮನ್ ಮಾರುಕಟ್ಟೆಗೆ ಪ್ರವೇಶ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    ಕರ್ನಾಟಕದ ವಿಜಯಪುರ ಜಿಲ್ಲೆಯಿಂದ 3 ಮೆಟ್ರಿಕ್ ಟನ್ ಭೌಗೋಳಿಕ ಸೂಚ್ಯಂಕ ಮಾನ್ಯತೆ (ಜಿಐ-ಟ್ಯಾಗ್) ಹೊಂದಿರುವ ಇಂಡಿ ನಿಂಬೆಯನ್ನು ಒಮನ್‌ ದೇಶಕ್ಕೆ ರಫ್ತು ಮಾಡುವ ಮೂಲಕ ಭಾರತವು ಕೃಷಿ ರಫ್ತು ಉತ್ತೇಜನ ಪಡೆದಿದೆ.

    ಇಂಡಿ ನಿಂಬೆ (Indi Lime) ಯ ಬಗ್ಗೆ:

    • ವೈಶಿಷ್ಟ್ಯಗಳು:- ಇಂಡಿ ನಿಂಬೆಯು ತನ್ನ ವಿಶಿಷ್ಟ ಸುಗಂಧ, ಹೆಚ್ಚಿನ ರಸದ ಅಂಶ ಮತ್ತು ದೀರ್ಘ ಬಾಳಿಕೆ ಅವಧಿಗೆ ಹೆಸರುವಾಸಿಯಾಗಿದೆ.
    • ಕೃಷಿ ಪರಂಪರೆ:- ಇದು ಉತ್ತರ ಕರ್ನಾಟಕದ ಕೃಷಿ ಪರಂಪರೆಯನ್ನು ಪ್ರತಿನಿಧಿಸುತ್ತದೆ.
    • ಜಿಐ ಮಾನ್ಯತೆಯ ಪಾತ್ರ:- ಇಂಡಿ ನಿಂಬೆಹಣ್ಣಿಗೆ ದೊರೆತಿರುವ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಈ ಹಣ್ಣನ್ನು ಸ್ಪರ್ಧಾತ್ಮಕವಾಗಿ ಸ್ಥಾನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

    ಮಹತ್ವ:

    • ಆರ್ಥಿಕ ಒಪ್ಪಂದ: ಈ ರಫ್ತು ಭಾರತ-ಒಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) / ಮುಕ್ತ ವ್ಯಾಪಾರ ಒಪ್ಪಂದದ (FTA) ಅಡಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
    • ಮಾರುಕಟ್ಟೆ ವಿಸ್ತರಣೆ: ಈ ಒಪ್ಪಂದವು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

    ನಿಮಗಿದು ತಿಳಿದಿದೆಯೇ?

    ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA): ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಾದೇಶಿಕ ಉತ್ಪನ್ನಗಳನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಗುರುತಿಸಿ, ಜಿಐ-ಟ್ಯಾಗ್ ಪಡೆದ ಕೃಷಿ ಉತ್ಪನ್ನಗಳ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ರಫ್ತಿಗೆ APEDA ಬೆಂಬಲ ನೀಡುತ್ತದೆ.

    ಟಂಡ್ರಾ ಜೀವವಲಯ (ಬಯೋಮ್)

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಆರ್ಕ್ಟಿಕ್ ನ ಅಲಾಸ್ಕಾದಲ್ಲಿ ನಡೆದ ಇತ್ತೀಚಿನ ವೈಜ್ಞಾನಿಕ ಅಧ್ಯಯನವೊಂದರ ಪ್ರಕಾರ, ಕಳೆದ ಶತಮಾನದಲ್ಲಿ ಟಂಡ್ರಾ ಜೀವವಲಯದಲ್ಲಿ ಸಂಭವಿಸಿದ ಕಾಡ್ಗಿಚ್ಚುಗಳ ಪ್ರಮಾಣವು ಕಳೆದ 3,000 ವರ್ಷಗಳ ಇತಿಹಾಸದಲ್ಲೇ ಅತ್ಯಧಿಕವಾಗಿದೆ ಎಂದು ತಿಳಿದುಬಂದಿದೆ.

    ಟಂಡ್ರಾ ಜೀವವಲಯ (ಬಯೋಮ್)ದ ಬಗ್ಗೆ:

    • ಟಂಡ್ರಾ ಜೀವವಲಯ ಎಂಬುದು ಉನ್ನತ ಅಕ್ಷಾಂಶದ (ಆರ್ಕ್ಟಿಕ್) ಮತ್ತು ಉನ್ನತ ಎತ್ತರದ (ಆಲ್ಪೈನ್) ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ತಂಪಾದ ಹಾಗೂ ಮರಗಳಿಲ್ಲದ ಜೀವವಲಯವಾಗಿದೆ.
    • “ಟಂಡ್ರಾ” ಎಂಬ ಪದವು ಫಿನ್ನಿಷ್ (ಫಿನ್ ಲ್ಯಾಂಡ್) ಮೂಲದ ಪದದಿಂದ ಬಂದಿದ್ದು, ಇದರರ್ಥ “ಮರಗಳಿಲ್ಲದ ಬಯಲು” ಎಂಬುವುದಾಗಿದೆ.

    ಟಂಡ್ರಾದ ವಿಧಗಳು:

    • ಉನ್ನತ ಅಕ್ಷಾಂಶದ (ಆರ್ಕ್ಟಿಕ್) ಟಂಡ್ರಾ:- ಇದು ಉತ್ತರ ಅಲಾಸ್ಕಾ, ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ಸೈಬೀರಿಯಾ ಪ್ರದೇಶಗಳಲ್ಲಿ ಕಂಡುಬರುತ್ತದೆ.
    • ಉನ್ನತ ಎತ್ತರದ (ಆಲ್ಪೈನ್) ಟಂಡ್ರಾ:- ಇದು ಹಿಮಾಲಯ, ಆಂಡಿಸ್ ಮತ್ತು ರಾಕಿಸ್‌ನಂತಹ ಪರ್ವತಗಳ ಅತಿ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇಲ್ಲಿ ಶೀತ ಕೆಳಭೂಸ್ತರ (ಪರ್ಮಾಫ್ರಾಸ್ಟ್) ಇರುವುದಿಲ್ಲ, ಆದರೆ ಹವಾಮಾನ ಪರಿಸ್ಥಿತಿಯು ಅತ್ಯಂತ ಶೀತಲವಾಗಿರುತ್ತದೆ.

    ಹವಾಮಾನ ಗುಣಲಕ್ಷಣಗಳು:

    • ತಾಪಮಾನ:- ಇಲ್ಲಿ ತಾಪಮಾನವು ಅತ್ಯಂತ ಕಡಿಮೆಯಿರುತ್ತದೆ; ಚಳಿಗಾಲದಲ್ಲಿ ತಾಪಮಾನವು −30°C ನಿಂದ −50°C ವರೆಗೆ ಇರುತ್ತದೆ.
    • ಮಳೆ/ಹಿಮಪಾತ:- ವಾರ್ಷಿಕವಾಗಿ 150–250 ಮಿಮೀ ನಷ್ಟು ಅತ್ಯಂತ ಕಡಿಮೆ ಪ್ರಮಾಣದ ಮಳೆ ಅಥವಾ ಹಿಮಪಾತವಾಗುತ್ತದೆ.

    ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ (ಬಂದರು ಭದ್ರತಾ ಬ್ಯೂರೋ)

    ಸಾಮಾನ್ಯ ಅಧ್ಯಯನ-3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ದೇಶದಾದ್ಯಂತ ಹಡಗುಗಳ ಮತ್ತು ಬಂದರು ಸೌಲಭ್ಯಗಳ ಭದ್ರತೆಯನ್ನು ಹೆಚ್ಚಿಸಲು ಮೀಸಲಾದ ‘ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ’ (BoPS)  ಸ್ಥಾಪನೆಗೆ ಚಾಲನೆ ನೀಡಲು ಇತ್ತೀಚಿಗೆ ಕೇಂದ್ರ ಗೃಹ ಸಚಿವರು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
    • ಪರಿಷ್ಕೃತ ಭದ್ರತಾ ಚೌಕಟ್ಟಿನಡಿಯಲ್ಲಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (CISF) ಬಂದರುಗಳಿಗಾಗಿ ‘ಗುರುತಿಸಲ್ಪಟ್ಟ ಭದ್ರತಾ ಸಂಸ್ಥೆ’ ಎಂದು ನಿಯೋಜಿಸಲಾಗಿದೆ.

    ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ (BoPS) ಯ ಬಗ್ಗೆ:

    • ಸ್ಥಾಪನೆ:- ಇದನ್ನು ವ್ಯಾಪಾರಿ ಹಡಗುಸಾಗಣೆ (ಮರ್ಚೆಂಟ್ ಶಿಪ್ಪಿಂಗ್) ಕಾಯ್ದೆ, 2025 ರ ಸೆಕ್ಷನ್ 13ರ ಅಡಿಯಲ್ಲಿ ಒಂದು ಶಾಸನಬದ್ಧವಾದ ಸಂಸ್ಥೆಯಾಗಿ ಸ್ಥಾಪಿಸಲಾಗುವುದು.
    • ಸಚಿವಾಲಯ:- ಇದು ಬಂದರುಗಳು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ನೇತೃತ್ವ:- ಐಪಿಎಸ್ ದರ್ಜೆಯ ಅಧಿಕಾರಿಯು ಮಹಾ ನಿರ್ದೇಶಕರ ರೂಪದಲ್ಲಿ ಇದರ ನೇತೃತ್ವ ವಹಿಸುತ್ತಾರೆ.

    ಪ್ರಮುಖ ಕಾರ್ಯಗಳು:-

    • ಹಡಗುಗಳ ಮತ್ತು ಬಂದರು ಮೂಲಸೌಕರ್ಯಗಳ ಭದ್ರತೆಗೆ ಸಂಬಂಧಿಸಿದಂತೆ ನಿಯಂತ್ರಕ ಮೇಲ್ವಿಚಾರಣೆ ಮತ್ತು ಸಮನ್ವಯತೆಯ ಜವಾಬ್ದಾರಿಯನ್ನು ಈ ಬ್ಯೂರೋ ಹೊಂದಿರುತ್ತದೆ.
  • ಅರಾವಳಿ ಪರ್ವತ ಶ್ರೇಣಿಯ ಗಡಿಗಳ ಸ್ಪಷ್ಟೀಕರಣ | ಜಾಗತಿಕ ಉದ್ದೀಪನಾ ಮದ್ದು ಸೇವನೆ ಉಲ್ಲಂಘನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ: WADA ವರದಿ, 2024 | ಪಾಮಿರ್ ಪರ್ವತಗಳು / ಪಾಮಿರ್-ಕಾರಾಕೋರಂ ಅಸಂಗತತೆ | ‘ಡೆಸರ್ಟ್ ಸೈಕ್ಲೋನ್, 2025’ ಸಮರಾಭ್ಯಾಸ | “ಸೀಹಾಕ್ಸ್ ಸ್ಕ್ವಾಡ್ರನ್” ಹೆಲಿಕಾಪ್ಟರ್ | ಪರಮ ವೀರ ಚಕ್ರ ಪುರಸ್ಕಾರ

    ಅರಾವಳಿ ಪರ್ವತ ಶ್ರೇಣಿಯ ಗಡಿಗಳ ಸ್ಪಷ್ಟೀಕರಣ

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಸರ್ವೋಚ್ಚ ನ್ಯಾಯಾಲಯವು, ತನ್ನ ಆದೇಶದಲ್ಲಿ, ಅರಾವಳಿ ಬೆಟ್ಟಗಳು ಮತ್ತು ಪರ್ವತ ಶ್ರೇಣಿಗಳಿಗೆ ಏಕರೂಪದ ವ್ಯಾಖ್ಯಾನವನ್ನು ಅಂತಿಮಗೊಳಿಸಿದೆ ಮತ್ತು ದೆಹಲಿ, ಹರಿಯಾಣ, ರಾಜಸ್ಥಾನ ಹಾಗೂ ಗುಜರಾತ್‌ ರಾಜ್ಯಗಳಾದ್ಯಂತ ಹೊಸ ಗಣಿಗಾರಿಕೆ ಗುತ್ತಿಗೆಗಳ ಮಂಜೂರಾತಿಯನ್ನು ತಡೆಹಿಡಿದಿದೆ.

    ಅರಾವಳಿ ಪರ್ವತ ಶ್ರೇಣಿಯ ಬಗ್ಗೆ:

    • ಸ್ಥಳ:- ಸುಮಾರು 692 ಕಿಲೋಮೀಟರ್‌ (430 ಮೈಲುಗಳು) ನಷ್ಟು ಈಶಾನ್ಯ ದಿಕ್ಕಿನಲ್ಲಿ ವಿಸ್ತರಿಸಿರುವ ಅರಾವಳಿ ಪರ್ವತ ಶ್ರೇಣಿ, ಗುಜರಾತ್, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳ ಮೂಲಕ ಹಾದುಹೋಗಿ ಕೊನೆಯಲ್ಲಿ ದೆಹಲಿಯಲ್ಲಿ ಅಂತ್ಯಗೊಳ್ಳುತ್ತದೆ.
    • ವೈಶಿಷ್ಟ್ಯತೆ :- ಇದು ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿಯಾಗಿದೆ.
    • ಪ್ರಾಮುಖ್ಯತೆ:- ಅರಾವಳಿ ಪರ್ವತ ಶ್ರೇಣಿಯು ಮರುಭೂಮೀಕರಣದ ವಿರುದ್ಧ ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹವಾಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ವೈವಿಧ್ಯಮಯ ಪರಿಸರ ವ್ಯವಸ್ಥೆಗಳಿಗೆ ಆಧಾರವಾಗಿದ್ದು, ಸಾಬರಮತಿ, ಲೂನಿ ಮತ್ತು ಬನಾಸ್ ಸೇರಿದಂತೆ ಹಲವಾರು ನದಿಗಳಿಗೆ ಜಲಾನಯನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತದೆ.

    ಅರಾವಳಿ ಹಸಿರು ಗೋಡೆ ಯೋಜನೆ (AGWP) ಯ ಬಗ್ಗೆ:

    • ಈ ಯೋಜನೆಯು ವಾಯುವ್ಯ ಭಾರತದ ನಾಲ್ಕು ರಾಜ್ಯಗಳಲ್ಲಿ (ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ದೆಹಲಿ) 11.5 ಲಕ್ಷ ಹೆಕ್ಟೇರ್ ಹಾಳಾದ (ಅವಸಾನಗೊಂಡ) ಭೂಮಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮವಾಗಿದೆ.
    • ರಾಷ್ಟ್ರೀಯ ಗುರಿಗಳು:2030ರ ವೇಳೆಗೆ ಹೆಚ್ಚುವರಿಯಾಗಿ 2.5 ಬಿಲಿಯನ್ ಟನ್‌ಗಳಷ್ಟು ‘ಇಂಗಾಲದ ತೊಟ್ಟಿಯನ್ನು ಸೃಷ್ಟಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಯೋಜನೆಯು ಭಾರತದ ಪ್ರಯತ್ನದ ಭಾಗವಾಗಿದೆ.
    • ವ್ಯಾಪಕ ಪ್ರಭಾವ:– ಈ ಯೋಜನೆಯು ಅಂತರರಾಷ್ಟ್ರೀಯ ಸಮಾವೇಶಗಳ ಅಡಿಯಲ್ಲಿನ ಭಾರತದ ಬದ್ಧತೆಗಳಿಗೆ ಕೊಡುಗೆ ನೀಡುತ್ತದೆ, ಅವುಗಳೆಂದರೆ:
      • UNCCD– ಮರುಭೂಮೀಕರಣವನ್ನು ತಡೆಗಟ್ಟುವ ವಿಶ್ವಸಂಸ್ಥೆಯ ಸಮಾವೇಶ,
      • UNCBD– ಜೈವಿಕ ವೈವಿಧ್ಯತೆ ಕುರಿತ ವಿಶ್ವಸಂಸ್ಥೆಯ ಸಮಾವೇಶ,
      • UNFCCC– ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ.
      • ಉದ್ದೇಶಗಳು ಮತ್ತು ವೈಶಿಷ್ಟ್ಯಗಳು:- ಈ ಯೋಜನೆಯು ಮರುಭೂಮೀಕರಣ, ಭೂ ಸವಕಳಿ ಮತ್ತು ಬರ ಪರಿಸ್ಥಿತಿಯನ್ನು ಎದುರಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ.

    ಜಾಗತಿಕ ಉದ್ದೀಪನಾ ಮದ್ದು ಸೇವನೆ ಉಲ್ಲಂಘನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ: WADA ವರದಿ, 2024

    ಸಾಮಾನ್ಯ ಅಧ್ಯಯನ -2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ವಿಶ್ವ ಉದ್ದೀಪನಾ ಮದ್ದು ತಡೆ ಸಂಸ್ಥೆ (WADA)ಯ 2024ರ ವರದಿಯು, ಸತತ ಮೂರನೇ ವರ್ಷವೂ ಜಾಗತಿಕವಾಗಿ ಅತಿ ಹೆಚ್ಚು ಉದ್ದೀಪನಾ ಮದ್ದು ಸೇವನೆ (Doping) ಉಲ್ಲಂಘನೆ ಮಾಡಿದ ರಾಷ್ಟ್ರವಾಗಿ ಭಾರತಕ್ಕೆ ಅಗ್ರಸ್ಥಾನ ನೀಡಿದೆ.

    ಉದ್ದೀಪನಾ ಮದ್ದು ಸೇವನೆ ಮತ್ತು ಅದರ ಕಾಳಜಿಗಳು:

    • ಕ್ರೀಡಾಪಟುಗಳು ‘ಸಾಮರ್ಥ್ಯ ವರ್ಧಕ ಔಷಧಗಳು’ ಎಂದು ಕರೆಯಲ್ಪಡುವ ನಿಷೇಧಿತ ರಾಸಾಯನಿಕ ವಸ್ತುಗಳನ್ನು ಬಳಸುವ ಪದ್ಧತಿಯನ್ನು ‘ಡೋಪಿಂಗ್’ ಅಥವಾ ‘ಉದ್ದೀಪನಾ ಮದ್ದು ಸೇವನೆ’ ಎಂದು ಕರೆಯಲಾಗುತ್ತದೆ.

    ಉದ್ದೀಪನಾ ಮದ್ದು ಸೇವನೆಯನ್ನು ತಡೆಗಟ್ಟುವ ಜಾಗತಿಕ ಪ್ರಯತ್ನಗಳು:

    ಕೋಪನ್‌ಹೆಗನ್ ಘೋಷಣೆ: ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆಗೆ ತಡೆ

      • ಹಿನ್ನೆಲೆ:- 2003ರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೆಗನ್‌ನಲ್ಲಿ ನಡೆದ ‘ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ’ ಕುರಿತ ಎರಡನೇ ವಿಶ್ವ ಸಮ್ಮೇಳನದಲ್ಲಿ, ಸರ್ಕಾರಗಳು ‘ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ ತಡೆ ಕುರಿತ ಕೋಪನ್‌ಹೆಗನ್ ಘೋಷಣೆ’ಗೆ ಒಪ್ಪಿಗೆ ನೀಡಿದವು.
      • ಉದ್ದೇಶ:- ಈ ಘೋಷಣೆಯು ಒಂದು ರಾಜಕೀಯ ದಾಖಲೆಯಾಗಿದ್ದು, ಇದರ ಮೂಲಕ ಸರ್ಕಾರಗಳು ವಿಶ್ವ ಉದ್ದೀಪನಾ ಮದ್ದು ತಡೆ ಸಂಹಿತೆಯನ್ನು ಔಪಚಾರಿಕವಾಗಿ ಗುರುತಿಸಲು ಮತ್ತು ಅನುಷ್ಠಾನಗೊಳಿಸಲು ತಮ್ಮ ಇರಾದೆಯನ್ನು ವ್ಯಕ್ತಪಡಿಸಿದವು.
      • ಪ್ರಾಮುಖ್ಯತೆ:- ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ ವಿರುದ್ಧದ ಯುನೆಸ್ಕೋ ಅಂತರರಾಷ್ಟ್ರೀಯ ಸಮಾವೇಶದ ಸಿದ್ಧತೆಯ ಹಾದಿಯಲ್ಲಿ ಈ ಘೋಷಣೆಯು ಮೊದಲ ಹೆಜ್ಜೆಯಾಗಿತ್ತು.
    • ಭಾರತವು 2003ರಲ್ಲಿ ಈ ಘೋಷಣೆಗೆ ಒಪ್ಪಿಗೆ ನೀಡಿತು.

    ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ ವಿರುದ್ಧದ ಅಂತರರಾಷ್ಟ್ರೀಯ ಸಮಾವೇಶದ ಬಗ್ಗೆ:

      • ಇದನ್ನು ‘ಯುನೆಸ್ಕೋ  ಉದ್ದೀಪನಾ ಮದ್ದು ತಡೆ ಸಮಾವೇಶ’ ಎಂತಲೂ ಕರೆಯಲಾಗುತ್ತದೆ.
      • ಇದನ್ನು 2005ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋ ನ ಸಾಮಾನ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು. ಇದು 2007ರಲ್ಲಿ ಜಾರಿಗೆ ಬಂದಿತು.
      • ಉದ್ದೇಶ:- ಕ್ರೀಡೆಯಲ್ಲಿ ಉದ್ದೀಪನಾ ಮದ್ದು ಸೇವನೆಯನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ, ಅದನ್ನು ತಡೆಗಟ್ಟುವ ಮತ್ತು ಅದರ ವಿರುದ್ಧದ ಹೋರಾಟವನ್ನು ಉತ್ತೇಜಿಸುವುದು.
    • ಭಾರತವು 2007ರಲ್ಲಿ ಈ ಸಮಾವೇಶವನ್ನು ದೃಢೀಕರಿಸಿತು. ಇದಕ್ಕಾಗಿ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿನ ಸ್ವಾಯತ್ತ ಸಂಸ್ಥೆಯಾದ ‘ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಸಂಸ್ಥೆ'(NADA)ಯು , ಭಾರತದಲ್ಲಿ ಉದ್ದೀಪನಾ ಮದ್ದು ತಡೆ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ, ಅನುಷ್ಠಾನಗೊಳಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.

    ವಿಶ್ವ ಉದ್ದೀಪನಾ ಮದ್ದು ತಡೆ ಸಂಸ್ಥೆ (WADA)ಯ ಬಗ್ಗೆ:

    • ಲೌಸನ್ನೆ ಘೋಷಣೆಯ ನಂತರ 1999ರಲ್ಲಿ ಇದನ್ನು ಸ್ಥಾಪಿಸಲಾಯಿತು.
    • ಪ್ರಧಾನ ಕಚೇರಿ:- ಕೆನಡಾದ ಮಾಂಟ್ರಿಯಲ್‌ನಲ್ಲಿದೆ.
    • ಪ್ರಾದೇಶಿಕ ಕಚೇರಿಗಳು:- ಲೌಸನ್ನೆ (ಯುರೋಪ್), ಕೇಪ್ ಟೌನ್ (ದ. ಆಫ್ರಿಕಾ) ಮತ್ತು ಮಾಂಟೆವಿಡಿಯೊ (ಲ್ಯಾಟಿನ್ ಅಮೇರಿಕಾ).
    • ಪ್ರಕಟಣೆ:- ವಿಶ್ವ ಉದ್ದೀಪನಾ ಮದ್ದು ತಡೆ ಸಂಹಿತೆ ಮತ್ತು ವಾರ್ಷಿಕ ನಿಷೇಧಿತ ಪಟ್ಟಿಯನ್ನು ಪ್ರಕಟಿಸುತ್ತದೆ.

    ಉದ್ದೀಪನಾ ಮದ್ದು ಸೇವನೆಯನ್ನು ತಡೆಗಟ್ಟಲು ಭಾರತದ ಪ್ರಯತ್ನಗಳು:

    • ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಕಾಯ್ದೆ, 2022: ಈ ಕಾಯ್ದೆಯು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಸಂಸ್ಥೆ (NADA) ಮತ್ತು ರಾಷ್ಟ್ರೀಯ ಉದ್ದೀಪನಾ ಮದ್ದು ಪರೀಕ್ಷಾ ಪ್ರಯೋಗಾಲಯಕ್ಕೆ ಶಾಸನಬದ್ಧ ಸ್ಥಾನಮಾನವನ್ನು ನೀಡಿತು.
    • ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ (ತಿದ್ದುಪಡಿ) ಮಸೂದೆ, 2025: ಸಾಂಸ್ಥಿಕ ಸ್ವಾಯತ್ತತೆಯನ್ನು ಬಲಪಡಿಸಲು ಇದನ್ನು ಇತ್ತೀಚೆಗೆ ಮಂಡಿಸಲಾಗಿದೆ.
    • ಭಾರತವು, ‘ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ ವಿರುದ್ಧದ ಯುನೆಸ್ಕೋ ಅಂತರರಾಷ್ಟ್ರೀಯ ಸಮಾವೇಶ’ಕ್ಕೆ ಸಹಿ ಹಾಕಿದ ರಾಷ್ಟ್ರವಾಗಿದೆ.
    • ಕ್ರೀಡಾಪಟುಗಳ ಪಾಸ್‌ಪೋರ್ಟ್ ನಿರ್ವಹಣಾ ಘಟಕ (APMU): ಕ್ರೀಡಾಪಟುಗಳ ಜೈವಿಕ ಪಾಸ್‌ಪೋರ್ಟ್ ಅನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಉದ್ದೀಪನಾ ಮದ್ದು ಪರೀಕ್ಷಾ ಪ್ರಯೋಗಾಲಯದಲ್ಲಿ ಒಂದು ಮೀಸಲಾದ ಘಟಕವನ್ನು 2025ರಲ್ಲಿ ಉದ್ಘಾಟಿಸಲಾಯಿತು.
    • NIDAMS ಪೋರ್ಟಲ್: ‘ನಾಡಾ ಭಾರತೀಯ ದತ್ತಾಂಶ ಆಡಳಿತ ಮತ್ತು ನಿರ್ವಹಣಾ ವ್ಯವಸ್ಥೆ’ಯನ್ನು 2025ರಲ್ಲಿ ಪ್ರಾರಂಭಿಸಲಾಯಿತು. ಇದು ಪರೀಕ್ಷೆಗಳನ್ನು ಯೋಜಿಸುವುದರಿಂದ ಹಿಡಿದು, ಉದ್ದೀಪನಾ ಮದ್ದು ನಿಯಂತ್ರಣಾ ಅಧಿಕಾರಿಗಳಿಗೆ ಕಾರ್ಯಾದೇಶಗಳನ್ನು ರಚಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುತ್ತದೆ.
    • “ನೋ ಯುವರ್ ಮೆಡಿಸಿನ್”(KYM) ಆ್ಯಪ್: ಇದೊಂದು ಮೊಬೈಲ್ ಸಾಧನವಾಗಿದ್ದು, ಕ್ರೀಡಾಪಟುಗಳು ಔಷಧಿಗಳನ್ನು ಪತ್ತೇ ಹಚ್ಚಲು ಅಥವಾ ಹುಡುಕಲು ಅನುವು ಮಾಡಿಕೊಡುತ್ತದೆ. WADA ನಿಷೇಧಿಸಿರುವ ಪದಾರ್ಥಗಳು ಆ ಔಷಧಿಯಲ್ಲಿವೆಯೇ ಎಂಬುದನ್ನು ಪರಿಶೀಲಿಸಲು ಇದು ನೆರವಾಗುತ್ತದೆ.

    ಪಾಮಿರ್ ಪರ್ವತಗಳು / ಪಾಮಿರ್-ಕಾರಾಕೋರಂ ಅಸಂಗತತೆ

    ಸಾಮಾನ್ಯ ಅಧ್ಯಯನ -1/ ಭೂಗೋಳಶಾಸ್ತ್ರ

    ಇದೀಗ ಸುದ್ದಿಯಲ್ಲಿದೆ: 

    • ಜಾಗತಿಕ ತಾಪಮಾನ ಏರಿಕೆಯ ಹೊರತಾಗಿಯೂ ಪಾಮಿರ್ ಪರ್ವತಗಳಲ್ಲಿನ ಹಿಮನದಿಗಳು ಕರಗುವಿಕೆಯನ್ನು ಏಕೆ ಪ್ರತಿರೋಧಿಸಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಅಲ್ಲಿನ ‘ಐಸ್ ಕೋರ್‌’ಗಳನ್ನು (ಹಿಮದ ಆಳದ ಮಾದರಿಗಳು) ಅಧ್ಯಯನ ಮಾಡಲಾಗುತ್ತಿದೆ.

    ಪಾಮಿರ್-ಕಾರಾಕೋರಂ ಅಸಂಗತತೆಯ ಬಗ್ಗೆ:

    • ಇದು ಪಾಮಿರ್ ಮತ್ತು ಕಾರಾಕೋರಂ ಪರ್ವತ ಶ್ರೇಣಿಗಳ ಭಾಗಗಳಲ್ಲಿರುವ ಹಿಮನದಿಗಳ ಅಸಾಮಾನ್ಯ ನಡವಳಿಕೆಯನ್ನು ಸೂಚಿಸುತ್ತದೆ.

    ವಿಶ್ವದಾದ್ಯಂತ ಇರುವ ಬಹುತೇಕ ಹಿಮನದಿಗಳಿಗಿಂತ ಭಿನ್ನವಾಗಿ, ಇಲ್ಲಿನ ಹಿಮನದಿಗಳು ಈ ಕೆಳಗಿನ ಲಕ್ಷಣಗಳನ್ನು ಸೂಚಿಸುತ್ತಿವೆ:

    • ಕರಗುವಿಕೆಗೆ ಪ್ರತಿರೋಧವನ್ನು ತೋರಿವೆ.
    • ಇತ್ತೀಚಿನ ದಶಕಗಳಲ್ಲಿ ದ್ರವ್ಯರಾಶಿಯಲ್ಲಿ ಅಲ್ಪ ಪ್ರಮಾಣದ ಏರಿಕೆಯನ್ನು ದಾಖಲಿಸಿವೆ.
    • ಇದು ‘ಹಿಮನದಿ ಮತ್ತು ಹವಾಮಾನದ’ ನಡುವಿನ ಪರಸ್ಪರ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುಲು ಮಹತ್ವದ್ದಾಗಿದೆ..

    ಪಾಮಿರ್ ಪರ್ವತಗಳ ಬಗ್ಗೆ:

    • ಭೂಗರ್ಭಶಾಸ್ತ್ರ:- ಭಾರತೀಯ ಮತ್ತು ಯುರೇಷಿಯನ್ ಭೂಫಲಕಗಳ (ಟೆಕ್ಟೋನಿಕ್ ಪ್ಲೇಟ್‌ಗಳ) ಪರಸ್ಪರ ಘರ್ಷಣೆಯಿಂದ ಇವು ರಚನೆಯಾಗಿದ್ದು, ಇದನ್ನು ಭೂಕಂಪಗಳಿಗೆ ಒಳಗಾಗುವ (ಭೂಕಂಪ ಸಕ್ರಿಯ) ಪ್ರದೇಶವಾಗಿಸಿದೆ.
    • ವ್ಯಾಪಿಸಿರುವ ದೇಶಗಳು:- ತಜಕಿಸ್ತಾನ್, ಅಫ್ಘಾನಿಸ್ತಾನ್, ಚೀನಾ ಮತ್ತು ಕಿರ್ಗಿಸ್ತಾನ್‌.
    • ಬೃಹತ್ ಸಂಗಮ ವಲಯ (ಪಾಮಿರ್ ಗಾಂಠ್):- “ಪ್ರಪಂಚದ ಮೇಲ್ಛಾವಣಿ” ಎಂದು ಕರೆಯಲ್ಪಡುವ ಪಾಮಿರ್ ಪರ್ವತಗಳು; ಹಿಮಾಲಯ, ಕಾರಾಕೋರಂ, ಹಿಂದೂಖುಷ್, ಕುನ್ಲುನ್ ಷಾ ಮತ್ತು ತಿಯನ್ ಶಾನ್ ಪರ್ವತ ಶ್ರೇಣಿಗಳೊಂದಿಗೆ ಸೇರಿ ಒಂದು ಬೃಹತ್ ಸಂಗಮ ವಲಯವನ್ನು (ಪಾಮಿರ್ ಗಂಟು) ರೂಪಿಸುತ್ತವೆ.
    • ಪ್ರಾಚೀನ ಮಾರ್ಗಗಳು:- 13ನೇ ಶತಮಾನದ ಇಟಲಿಯ ಪ್ರವಾಸಿಗ “ಮಾರ್ಕೊ ಪೊಲೊ” ಅವರು ಉಲ್ಲೇಖಿಸಿರುವ ಈ ಪ್ರದೇಶವು ಐತಿಹಾಸಿಕವಾಗಿ ರೇಷ್ಮೆ ಮಾರ್ಗದ ಭಾಗವಾಗಿತ್ತು.
    • ಪ್ರಮುಖ ಶಿಖರಗಳು:- ಇಸ್ಮಾಯಿಲ್ ಸೋಮೋನಿ ಶಿಖರ (ತಜಿಕಿಸ್ತಾನ್), ಕಾಂಗುರ್ ಟಾಗ್ ಮತ್ತು ಮುಜ್ತಾಗ್ ಅಟಾ (ಚೀನಾ) ಮುಂತಾದವುಗಳು.
    • ತಜಿಕ್ ರಾಷ್ಟ್ರೀಯ ಉದ್ಯಾನವನ:– ಪಾಮಿರ್‌ನ ಬಹುಭಾಗವನ್ನು ಒಳಗೊಂಡಿರುವ ದೊಡ್ಡ ಸಂರಕ್ಷಿತ ಪ್ರದೇಶವಾಗಿದ್ದು, ಇದೊಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.
    • ನದಿ ವ್ಯವಸ್ಥೆ: ಪಾಮಿರ್ ಪರ್ವತಗಳು ದಟ್ಟವಾದ ಹಿಮನದಿಗಳನ್ನು ಹೊಂದಿದ್ದು, ಫೆಡ್ಚೆಂಕೊ ಹಿಮನದಿಯು ಮಧ್ಯ ಏಷ್ಯಾದ ಅತಿದೊಡ್ಡ ಹಿಮನದಿಯಾಗಿದೆ.
    • ಹಿಮನದಿಗಳು ಕರಗಿದ ನೀರು ಪಂಜ್ ನದಿ ಮತ್ತು ವಾಖ್ಷ್ ನದಿಯಂತಹ ಪ್ರಮುಖ ನದಿಗಳಿಗೆ ಜಲಮೂಲವಾಗಿದೆ. ಈ ನದಿಗಳು ಮಧ್ಯ ಏಷ್ಯಾದ ಪ್ರಮುಖ ನದಿ ವ್ಯವಸ್ಥೆಯಾದ ಅಮುದರ್ಯಾ ನದಿ ವ್ಯವಸ್ಥೆಯ ಭಾಗವಾಗಿವೆ.

    ‘ಡೆಸರ್ಟ್ ಸೈಕ್ಲೋನ್, 2025’ ಸಮರಾಭ್ಯಾಸ

    ಸಾಮಾನ್ಯ ಅಧ್ಯಯನ – 3/ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತ ಮತ್ತು ಯುಎಇ ನಡುವಿನ ಜಂಟಿ ಸೇನಾ ಸಮರಾಭ್ಯಾಸ ‘ಡೆಸರ್ಟ್ ಸೈಕ್ಲೋನ್’ ಯುಎಇಯಲ್ಲಿ ಆರಂಭವಾಗಲಿದೆ.

    ‘ಡೆಸರ್ಟ್ ಸೈಕ್ಲೋನ್’ ಸಮರಾಭ್ಯಾಸದ ಕುರಿತು:

    • ‘ಡೆಸರ್ಟ್ ಸೈಕ್ಲೋನ್’ ಸಮರಾಭ್ಯಾಸದ ಮೊದಲ ಆವೃತ್ತಿಯು 2024ರಲ್ಲಿ ಭಾರತದ ರಾಜಸ್ಥಾನದಲ್ಲಿ ಜರುಗಿತ್ತು.
    • ಭಾರತೀಯ ಸೇನೆ ಮತ್ತು ಯುಎಇ ಭೂಸೇನೆಗಳ ನಡುವೆ ಪರಸ್ಪರ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ರಕ್ಷಣಾ ಸಹಕಾರವನ್ನು ವೃದ್ಧಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿದೆ.

    “ಸೀಹಾಕ್ಸ್ ಸ್ಕ್ವಾಡ್ರನ್” ಹೆಲಿಕಾಪ್ಟರ್

    ಸಾಮಾನ್ಯ ಅಧ್ಯಯನ – 3/ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತೀಯ ನೌಕಾಪಡೆಯು ತನ್ನ ಎರಡನೇ MH 60R ಹೆಲಿಕಾಪ್ಟರ್ ಸ್ಕ್ವಾಡ್ರನ್ ಆಗಿರುವ ‘INAS 335’ ಅನ್ನು ಗೋವಾದ INS ಹನ್ಸಾದಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸಿತು.

    “ಸೀಹಾಕ್ಸ್ ಸ್ಕ್ವಾಡ್ರನ್” ಹೆಲಿಕಾಪ್ಟರ್ ನ ಬಗ್ಗೆ:

    • ಭಾರತವು ಅಮೆರಿಕದಿಂದ ಜಲಾಂತರ್ಗಾಮಿಗಳನ್ನು ಬೇಟೆಯಾಡುವ ಇಂತಹ 24 ಹೆಲಿಕಾಪ್ಟರ್‌ಗಳನ್ನು ಪಡೆದುಕೊಂಡಿದೆ.
    • ಇವು ಅಮೆರಿಕ ಮೂಲದ ‘ಸೀಹಾಕ್ಸ್’ ಹೆಲಿಕಾಪ್ಟರ್‌ಗಳಾಗಿದ್ದು, ಇವು ಕಡಲ ಕಾರ್ಯಾಚರಣೆಯ ‘ಬ್ಲ್ಯಾಕ್ ಹಾಕ್’ ಹೆಲಿಕಾಪ್ಟರ್‌ಗಳ ಆವೃತ್ತಿಗಳಾಗಿವೆ.
    • ಈ ಹೆಲಿಕಾಪ್ಟರ್ ಅನ್ನು ಜಲಾಂತರ್ಗಾಮಿ ನಿರೋಧಕ ಯುದ್ಧ (ASW), ಮೇಲ್ಮೈ ಯುದ್ಧ (ASuW), ಶೋಧ ಮತ್ತು ರಕ್ಷಣೆ (SAR) ಕಾರ್ಯಾಚರಣೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
    • ದೀರ್ಘಕಾಲದಿಂದ ಸೇವೆಯಲ್ಲಿದ್ದ ಬ್ರಿಟನ್ ಮೂಲದ ಹಳೆಯ ‘ಸೀ ಕಿಂಗ್’ ಹೆಲಿಕಾಪ್ಟರ್‌ಗಳನ್ನು ಈ ಹೆಲಿಕಾಪ್ಟರ್‌ಗಳು ಬದಲಾಯಿಸಲಿವೆ.

    ಪರಮ ವೀರ ಚಕ್ರ ಪುರಸ್ಕಾರ

    ಇತರೆ ವಿಷಯಗಳು -ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿದೆ: 

    • ರಾಷ್ಟ್ರಪತಿ ಭವನದಲ್ಲಿ, 96 ಬ್ರಿಟಿಷ್ ‘ಏಡ್-ಡಿ-ಕ್ಯಾಂಪ್‌’ಗಳ (ADCs) ಭಾವಚಿತ್ರಗಳನ್ನು ತೆರವುಗೊಳಿಸಿ, ಅವುಗಳ ಸ್ಥಾನದಲ್ಲಿ ಪರಮ ವೀರ ಚಕ್ರ ಪುರಸ್ಕೃತರಾದ ಎಲ್ಲಾ 21 ವೀರಯೋಧರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.
    • ಈ ಕ್ರಮವು ವಸಾಹತುಶಾಹಿ ಪರಂಪರೆಗಳನ್ನು ನಿರ್ಮೂಲನೆ ಮಾಡುವ ಸರ್ಕಾರದ ವ್ಯಾಪಕ ಪ್ರಯತ್ನದ ಒಂದು ಭಾಗವಾಗಿದೆ.

    ಪರಮ ವೀರ ಚಕ್ರ ಪುರಸ್ಕಾರದ ಬಗ್ಗೆ:

    • ಇದನ್ನು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು 1950ರ ಜನವರಿ 26 ರಂದು (ಗಣರಾಜ್ಯೋತ್ಸವ ದಿನ) ಸ್ಥಾಪಿಸಿದರು.
    • ‘ಪರಮ ವೀರ ಚಕ್ರ’ ಎಂಬ ಹೆಸರು “ಅತ್ಯುನ್ನತ ಶೂರರ ಚಕ್ರ” ಎಂಬ ಅರ್ಥವನ್ನು ನೀಡುತ್ತದೆ.
    • ಈ ಪದಕವನ್ನು ಸಾವಿತ್ರಿ ಖಾನೋಲ್ಕರ್ ಅವರು ವಿನ್ಯಾಸಗೊಳಿಸಿದರು. ಅವರು ತಮ್ಮ ಪ್ರೇರಣೆಯನ್ನು ದೇವತೆಗಳು ವಜ್ರಾಯುಧವನ್ನು ತಯಾರಿಸಲು ಅನುವು ಮಾಡಿಕೊಡುವ ಸಲುವಾಗಿ ತಮ್ಮ ಬೆನ್ನುಮೂಳೆಯನ್ನೇ ತ್ಯಾಗ ಮಾಡಿದ ವೈದಿಕ ಋಷಿ ದಧೀಚಿ ಅವರಿಂದ ಇವರು ಸ್ಫೂರ್ತಿ ಪಡೆದಿದ್ದರು.
    • ಈ ಪದಕವನ್ನು ಕಂಚಿನಿಂದ ತಯಾರಿಸಲಾಗಿದೆ. ಇದರ ಮಧ್ಯದಲ್ಲಿ, ಉಬ್ಬಿದ ವೃತ್ತದ ಮೇಲೆ ರಾಷ್ಟ್ರ ಲಾಂಛನವಿದ್ದು, ಇದು ಇಂದ್ರನ ವಜ್ರಾಯುಧದ ನಾಲ್ಕು ಪ್ರತಿಗಳಿಂದ ಆವೃತವಾಗಿದೆ ಹಾಗೂ ಶಿವಾಜಿಯ ಖಡ್ಗ ಚಿತ್ರಿತವಾಗಿದೆ. ಇದನ್ನು ತಿರುಗುವ ಪಟ್ಟಿಕೆಯಿಂದ ತೂಗುಹಾಕಲಾಗಿರುತ್ತದೆ ಮತ್ತು 32 ಮಿಮೀ ಅಳತೆಯ ನೇರಳೆ ಬಣ್ಣದ ರಿಬ್ಬನ್‌ನೊಂದಿಗೆ ಇದನ್ನು ಧರಿಸಲಾಗುತ್ತದೆ.

    ಶೌರ್ಯ ಪ್ರಶಸ್ತಿಗಳ ಬಗ್ಗೆ:

    • ಗೌರವಿಸುವವರು:- ಭಾರತ ಸರ್ಕಾರ.
    • ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಮತ್ತು ನಾಗರಿಕರ ಸಾಹಸ, ತ್ಯಾಗ ಮತ್ತು ಅಪ್ರತಿಮ ಧೈರ್ಯದ ಕಾರ್ಯಗಳನ್ನು ಗೌರವಿಸಲು ಇವುಗಳನ್ನು ನೀಡಲಾಗುತ್ತದೆ.
    • ಇವುಗಳನ್ನು ಯುದ್ಧಕಾಲದ (ಶತ್ರುವಿನ ಸಮ್ಮುಖದಲ್ಲಿ ತೋರುವ ಶೌರ್ಯ) ಮತ್ತು ಶಾಂತಿಕಾಲದ ಪ್ರಶಸ್ತಿಗಳೆಂದು ವರ್ಗೀಕರಿಸಲಾಗಿದೆ.
    • ನಿರ್ವಹಣೆ:- ರಕ್ಷಣಾ ಸಚಿವಾಲಯ (ಸಶಸ್ತ್ರ ಪಡೆಗಳಿಗೆ) ಮತ್ತು ಗೃಹ ಸಚಿವಾಲಯ (ಪೊಲೀಸ್ ಮತ್ತು ನಾಗರಿಕರಿಗೆ).
    • ಪ್ರದಾನ ಮಾಡುವವರು:- ಭಾರತದ ರಾಷ್ಟ್ರಪತಿಗಳು.
    • ಈ ಶೌರ್ಯ ಪ್ರಶಸ್ತಿಗಳನ್ನು ವರ್ಷದಲ್ಲಿ ಎರಡು ಬಾರಿ ಘೋಷಿಸಲಾಗುತ್ತದೆ. ಮೊದಲು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮತ್ತು ನಂತರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. 
    • ಯುದ್ಧಕಾಲದ ಶೌರ್ಯ ಪ್ರಶಸ್ತಿಗಳು:- ಪರಮ ವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರ.
    • ಶಾಂತಿಕಾಲದ ಶೌರ್ಯ ಪ್ರಶಸ್ತಿಗಳು: ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ.
    • ಆದ್ಯತೆಯ ಕ್ರಮ: ಪರಮ ವೀರ ಚಕ್ರ (PVC), ಅಶೋಕ ಚಕ್ರ (AC), ಮಹಾವೀರ ಚಕ್ರ (MVC), ಕೀರ್ತಿ ಚಕ್ರ (KC), ವೀರ ಚಕ್ರ (VrC), ಶೌರ್ಯ ಚಕ್ರ (SC).
    • ಈ ಎಲ್ಲಾ ಆರೂ ಪ್ರಶಸ್ತಿಗಳನ್ನು ಮರಣೋತ್ತರವಾಗಿಯೂ ನೀಡಬಹುದು.
  • ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿ | ಹೊಸ ರಾಮ್‌ಸರ್ ತಾಣಗಳು: ಸಿಲಿಸೇರ್ ಸರೋವರ ಮತ್ತು ಕೊಪ್ರಾ ಜಲಾಶಯ | ಪೆರುಂಬಿಡುಗು ಮುತ್ತರೈಯರ್ | ಪ್ರಧಾನ ಮಂತ್ರಿಯವರು ಜೋರ್ಡಾನ್ ದೇಶಕ್ಕೇ ಭೇಟಿ ನೀಡಿದ್ದಾರೆ | ವಿಶ್ವಸಂಸ್ಥೆಯ ನಾಗರಿಕತೆಗಳ ಒಕ್ಕೂಟ (UNAOC) | ರಾಷ್ಟ್ರೀಯ ರಕ್ತ ವರ್ಗಾವಣೆ ಮಸೂದೆ, 2025 | ಧ್ರುವ್ 64 (DHRUV 64) | ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ, 2025

    ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿ

    ಸಾಮಾನ್ಯ ಅಧ್ಯಯನ-2/ ರಾಜ್ಯಶಾಸ್ತ್ರ ಮತ್ತು ಆಡಳಿತ; ಶಾಸನಬದ್ಧ ಸಂಸ್ಥೆ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ರಾಷ್ಟ್ರಪತಿಯವರು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ನೇಮಕವಾದ ರಾಜ್ ಕುಮಾರ್ ಗೋಯಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

    ಕೇಂದ್ರ ಮಾಹಿತಿ ಆಯೋಗ (CIC)ದ ಬಗ್ಗೆ:

    • ಸ್ಥಾಪನೆ: ಮಾಹಿತಿ ಹಕ್ಕು (RTI) ಕಾಯ್ದೆ, 2005ರ ನಿಬಂಧನೆಗಳ ಅಡಿಯಲ್ಲಿ 2005ರಲ್ಲಿ ಕೇಂದ್ರ ಸರ್ಕಾರವು ಈ ಆಯೋಗವನ್ನು ಸ್ಥಾಪಿಸಿತು.
    • ಉದ್ದೇಶ: 
    • ಸಾರ್ವಜನಿಕರಿಗೆ ತೃಪ್ತಿದಾಯಕವಾಗಿ ಮಾಹಿತಿ ನೀಡದ ಸಾರ್ವಜನಿಕ ಪ್ರಾಧಿಕಾರಗಳ ವಿರುದ್ಧದ ಮೇಲ್ಮನವಿಗಳನ್ನು ಸ್ವೀಕರಿಸುತ್ತದೆ.
    • ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ನಿರ್ವಹಿಸುತ್ತದೆ.
    • ವಾರ್ಷಿಕ ವರದಿ: ಮಾಹಿತಿ ಹಕ್ಕು ಕಾಯ್ದೆಯ ನಿಬಂಧನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ವಾರ್ಷಿಕ ವರದಿಯನ್ನು ಸಲ್ಲಿಸುತ್ತದೆ.

    ಕೇಂದ್ರ ಮಾಹಿತಿ ಆಯೋಗದ ಸಂಯೋಜನೆ:

    • ಮುಖ್ಯಸ್ಥರು:- ಈ ಆಯೋಗವು ಒಬ್ಬರು ಮುಖ್ಯ ಮಾಹಿತಿ ಆಯುಕ್ತರು
    • ಸದಸ್ಯರು:- ಗರಿಷ್ಠ 10 ಮಂದಿ ಮಾಹಿತಿ ಆಯುಕ್ತರು
    • ಅವಧಿ: ಮುಖ್ಯ ಮಾಹಿತಿ ಆಯುಕ್ತರು 5 ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಾಗುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಅಧಿಕಾರದಲ್ಲಿರುತ್ತಾರೆ. ಇವರು ಮರುನೇಮಕಾತಿಗೆ ಅರ್ಹರಲ್ಲ.
    • ಆಯುಕ್ತರ ನೇಮಕಾತಿ: ಆಯುಕ್ತರನ್ನು ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ.
    • ಆಯ್ಕೆ ಸಮಿತಿ: ಈ ಸಮಿತಿಯು ಪ್ರಧಾನ ಮಂತ್ರಿಯನ್ನು ಅಧ್ಯಕ್ಷರನ್ನಾಗಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಒಬ್ಬ ಕೇಂದ್ರ ಸಂಪುಟ ಸಚಿವರನ್ನು ಸದಸ್ಯರನ್ನಾಗಿ ಒಳಗೊಂಡಿರುತ್ತದೆ.

    ರಾಜ್ಯ ಮಾಹಿತಿ ಆಯೋಗದ ಬಗ್ಗೆ:

    • ಮಾಹಿತಿ ಹಕ್ಕು ಕಾಯ್ದೆ, 2005ರ ಅಡಿಯಲ್ಲಿ ರಾಜ್ಯ ಮಟ್ಟದಲ್ಲಿ ‘ರಾಜ್ಯ ಮಾಹಿತಿ ಆಯೋಗ’ದ ರಚನೆಗೆ ಅವಕಾಶ ಕಲ್ಪಿಸುತ್ತದೆ.
    • ಇದು ರಾಜ್ಯ ಮಟ್ಟದಲ್ಲಿ ಉನ್ನತ ಅಧಿಕಾರ ಹೊಂದಿರುವ ಸ್ವತಂತ್ರ ಸಂಸ್ಥೆಯಾಗಿದ್ದು, ತನಗೆ ಬರುವ ದೂರುಗಳ ವಿಚಾರಣೆ ನಡೆಸಿ ಮೇಲ್ಮನವಿಗಳ ಕುರಿತು ನಿರ್ಧಾರ ಕೈಗೊಳ್ಳುತ್ತದೆ.
    • ಸಂಬಂಧಿತ ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಚೇರಿಗಳು, ಹಣಕಾಸು ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ (PSUs) ಸಂಬಂಧಿಸಿದ ದೂರು ಹಾಗೂ ಮೇಲ್ಮನವಿಗಳನ್ನು ಇದು ಸ್ವೀಕರಿಸುತ್ತದೆ.
    • ಸಂಯೋಜನೆ:- ಈ ಆಯೋಗವು ರಾಜ್ಯಪಾಲರಿಂದ ನೇಮಕಗೊಳ್ಳುವ,
    • ಒಬ್ಬರು ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಗರಿಷ್ಠ ಹತ್ತು ಮಂದಿ ರಾಜ್ಯ ಮಾಹಿತಿ ಆಯುಕ್ತರನ್ನು ಒಳಗೊಂಡಿರುತ್ತದೆ.

    ಹೊಸ ರಾಮ್‌ಸರ್ ತಾಣಗಳು: ಸಿಲಿಸೇರ್ ಸರೋವರ ಮತ್ತು ಕೊಪ್ರಾ ಜಲಾಶಯ

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಭಾರತವು ರಾಜಸ್ಥಾನದ ಸಿಲಿಸೇರ್ ಸರೋವರ ಮತ್ತು ಛತ್ತೀಸ್‌ಗಢದ ಕೊಪ್ರಾ ಜಲಾಶಯಗಳನ್ನು ಕ್ರಮವಾಗಿ ದೇಶದ 95ನೇ ಮತ್ತು 96ನೇ ರಾಮ್‌ಸರ್ ತಾಣಗಳೆಂದು ಅಧಿಕೃತವಾಗಿ ಘೋಷಿಸಿದೆ.
    • ಈ ಹೊಸ ಸೇರ್ಪಡೆಗಳೊಂದಿಗೆ ಭಾರತದ ಒಟ್ಟು ರಾಮ್‌ಸರ್ ತಾಣಗಳ ಸಂಖ್ಯೆಯು 96ಕ್ಕೆ ಏರಿಕೆಯಾಗಿದ್ದು, 2014ರಲ್ಲಿ ಈ ಸಂಖ್ಯೆಯು ಕೇವಲ 26 ಆಗಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ.

    ಹೊಸದಾಗಿ ಘೋಷಿಸಲ್ಪಟ್ಟ ರಾಮ್‌ಸರ್ ತಾಣಗಳ ಬಗ್ಗೆ:

    ಸಿಲಿಸೇರ್ ಸರೋವರ (ರಾಜಸ್ಥಾನ):

    • ಇದು 1845ರಲ್ಲಿ ಆಳ್ವರ್‌ನ ಮಹಾರಾಜ ವಿನಯ್ ಸಿಂಗ್ ಅವರಿಂದ ನಿರ್ಮಿಸಲ್ಪಟ್ಟ ಒಂದು ಮಾನವ ನಿರ್ಮಿತ ಸಿಹಿನೀರಿನ ಸರೋವರವಾಗಿದೆ.
    • ಮೂಲತಃ ಆಳ್ವರ್‌ ನಗರದ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವ ಮಹತ್ತರ ಉದ್ದೇಶದಿಂದ ಈ ಸರೋವರವನ್ನು ನಿರ್ಮಿಸಲಾಗಿತ್ತು.
    • ಈ ಸರೋವರವು ಪ್ರಖ್ಯಾತ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ಅತ್ಯಂತ ಸಮೀಪದಲ್ಲಿದ್ದು, ಈ ಭಾಗದ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಹೆಚ್ಚಿನ ಜೈವಿಕ ಮಹತ್ವವನ್ನು ಪಡೆದುಕೊಂಡಿದೆ.

    ಕೊಪ್ರಾ ಜಲಾಶಯ (ಛತ್ತೀಸ್‌ಗಢ):

    • ಬಿಲಾಸ್ಪುರ್ ನ ಸಮೀಪದಲ್ಲಿರುವ ಈ ಜಲಾಶಯವು ಛತ್ತೀಸ್‌ಗಢ ರಾಜ್ಯದ ಮೊಟ್ಟಮೊದಲ ರಾಮ್‌ಸರ್ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
    • ಇದು ಮಹಾನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿರುವ ಪ್ರಮುಖ ಜಲಾಶಯವಾಗಿದ್ದು, ಸಿಹಿನೀರಿನ ಪ್ರಮುಖ ಮೂಲವಾಗಿ ಮತ್ತು ಜೀವವೈವಿಧ್ಯತೆಯ ಆವಾಸಸ್ಥಾನವಾಗಿ ಕಾರ್ಯನಿರ್ವಹಿಸುತ್ತದೆ.

    ಪೆರುಂಬಿಡುಗು ಮುತ್ತರೈಯರ್

    ಸಾಮಾನ್ಯ ಅಧ್ಯಯನ -1/ ಪ್ರಾಚೀನ ಇತಿಹಾಸ

    ಇದೀಗ ಸುದ್ದಿಯಲ್ಲಿ:

    • ರಾಜ ಪೆರುಂಬಿಡುಗು ಮುತ್ತರೈಯರ್ II (ಸುವರನ್ ಮಾರನ್) ಅವರ ಗೌರವ ಸ್ಮರಣಾರ್ಥವಾಗಿ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

    ಪೆರುಂಬಿಡುಗು ಮುತ್ತರೈಯರ್ (ಕ್ರಿ.ಶ. 705 – ಕ್ರಿ.ಶ. 745) ಅವರ ಬಗ್ಗೆ:

    • ಪರಿಚಯ: ‘ಸುವರನ್ ಮಾರನ್’ ಎಂದೂ ಕರೆಯಲ್ಪಡುವ ಇವರು ಪಲ್ಲವರ ಸಾಮಂತರಾಗಿದ್ದ ಮುತ್ತರೈಯರ್ ವಂಶದ ಆಡಳಿತಗಾರರಾಗಿದ್ದರು.
    • ವಂಶಾವಳಿ: ಇವರು ಕ್ರಿ.ಶ. 7 ಮತ್ತು 9ನೇ ಶತಮಾನಗಳ ನಡುವೆ ತಮಿಳುನಾಡಿನ ಮಧ್ಯ ಭಾಗಗಳನ್ನು ಆಳಿದ ಸುಪ್ರಸಿದ್ಧ ಮುತ್ತರೈಯರ್ ರಾಜವಂಶಕ್ಕೆ ಸೇರಿದವರಾಗಿದ್ದಾರೆ.
    • ಆಡಳಿತ: ಇವನು ಸುಮಾರು ನಾಲ್ಕು ದಶಕಗಳ ಕಾಲ ತಿರುಚಿರಾಪಳ್ಳಿಯಿಂದ ಆಳ್ವಿಕೆ ನಡೆಸಿದನು. ಇವರ ಆಳ್ವಿಕೆಯು ಆಡಳಿತಾತ್ಮಕ ಸ್ಥಿರತೆ, ಪ್ರಾದೇಶಿಕ ವಿಸ್ತರಣೆ, ಸಾಂಸ್ಕೃತಿಕ ಪೋಷಣೆ ಮತ್ತು ಸೇನಾ ಪರಾಕ್ರಮಕ್ಕೆ ಹೆಸರುವಾಸಿಯಾಗಿತ್ತು.
    • ಸೈನಿಕ ಸಾಧನೆ: ಪೆರುಂಬಿಡುಗು ಮುತ್ತರೈಯರ್ ಅವರು ಪಲ್ಲವರ ರಾಜ ನಂದಿವರ್ಮನ್ ಅವರ ಪರವಾಗಿ ಹಲವಾರು ಯುದ್ಧಗಳಲ್ಲಿ ಶೌರ್ಯದಿಂದ ಹೋರಾಡಿದ್ದನು ಎಂದು ನಂಬಲಾಗಿದೆ; ಇವರನ್ನು ಒಬ್ಬ ಶ್ರೇಷ್ಠ ಆಡಳಿತಗಾರ ಎಂದು ಸ್ಮರಿಸಲಾಗುತ್ತದೆ.

    ಧಾರ್ಮಿಕ ನೀತಿಗಳು:

    • ಧಾರ್ಮಿಕ ಪುನರುತ್ಥಾನ: ಪಲ್ಲವರ ಆಳ್ವಿಕೆಯ ಅವಧಿಯಲ್ಲಿ ಜೈನ ಮತ್ತು ಬೌದ್ಧ ಧರ್ಮಗಳ ಪ್ರಾಬಲ್ಯದ ನಡುವೆಯೇ ಹಿಂದೂ ಧರ್ಮದ ಪುನರುತ್ಥಾನ ಕಂಡುಬಂದಿತು.
    • ದೇವಾಲಯಗಳ ನಿರ್ಮಾಣ: ಪಲ್ಲವರ ಸಾಮಂತರಾಗಿದ್ದ ಮುತ್ತರೈಯರ್ ದೊರೆಗಳು ಶ್ರೇಷ್ಠ ದೇವಾಲಯ ನಿರ್ಮಾಣಕಾರರಾಗಿದ್ದರು.

    ಪ್ರಧಾನ ಮಂತ್ರಿಯವರು ಜೋರ್ಡಾನ್ ದೇಶಕ್ಕೇ ಭೇಟಿ ನೀಡಿದ್ದಾರೆ

    ಸಾಮಾನ್ಯ ಅಧ್ಯಯನ -2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಜೋರ್ಡಾನ್ ಪ್ರವಾಸವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.
    • ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 75 ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಈ ಭೇಟಿ ನಡೆದಿದೆ.
    • ಇದು ಕಳೆದ 37 ವರ್ಷಗಳಲ್ಲಿ ಭಾರತದ ಪ್ರಧಾನ ಮಂತ್ರಿಯೊಬ್ಬರು ಜೋರ್ಡಾನ್‌ಗೆ ನೀಡಿದ ಮೊದಲ ಪೂರ್ಣ ಪ್ರಮಾಣದ ದ್ವಿಪಕ್ಷೀಯ ಭೇಟಿಯಾಗಿದೆ.

    ಪ್ರಮುಖ ಮುಖ್ಯಾಂಶಗಳು:

    • ಈ ಭೇಟಿಯ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಐದು ಪ್ರಮುಖ ತಿಳುವಳಿಕಾ ಒಪ್ಪಂದಗಳಿಗೆ (MoUs) ಸಹಿ ಹಾಕಲಾಯಿತು:
      • ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ.
      • ಜಲಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿ.
      • ಐತಿಹಾಸಿಕ ತಾಣಗಳಾದ ಪೆಟ್ರಾ ಮತ್ತು ಎಲ್ಲೋರಾ ನಡುವೆ ಅವಳಿ ತಾಣ (‘ಟ್ವಿನ್ನಿಂಗ್’) ಒಪ್ಪಂದ.
      • 2025-2029ರ ಅವಧಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ.
      • ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಮತ್ತು ಡಿಜಿಟಲ್ ಪರಿಹಾರಗಳ ಹಂಚಿಕೆಗಾಗಿ ಒಪ್ಪಂದ.
    • ಭಾರತವು ಜೋರ್ಡಾನ್‌ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದ್ದು, ಮುಂದಿನ 5 ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು $5 ಬಿಲಿಯನ್ ಗೆ ಹೆಚ್ಚಿಸಲು ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದರು.
    • ಜೋರ್ಡಾನ್‌ನ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಭಾರತದ ಏಕೀಕೃತ ಪಾವತಿ ವ್ಯವಸ್ಥೆ (UPI) ನಡುವೆ ಸಹಯೋಗ ಏರ್ಪಡಿಸಲು ಉತ್ತೇಜನ ನೀಡಲಾಯಿತು.

    ಜೋರ್ಡಾನ್ ದೇಶದ ಬಗ್ಗೆ:

    • ಸ್ಥಳ: ಇದು ಮಧ್ಯಪ್ರಾಚ್ಯದ ಪಶ್ಚಿಮ ಏಷ್ಯಾದಲ್ಲಿರುವ ಒಂದು ದೇಶವಾಗಿದೆ.
    • ಗಡಿ ಹಂಚಿಕೊಂಡ ದೇಶಗಳು: ಪಶ್ಚಿಮಕ್ಕೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ (ವೆಸ್ಟ್ ಬ್ಯಾಂಕ್), ದಕ್ಷಿಣ ಮತ್ತು ಪೂರ್ವಕ್ಕೆ ಸೌದಿ ಅರೇಬಿಯಾ, ಪೂರ್ವಕ್ಕೆ ಇರಾಕ್ ಮತ್ತು ಉತ್ತರಕ್ಕೆ ಸಿರಿಯಾ.
    • ಮೃತ ಸಮುದ್ರ (Dead Sea): ಇದು ಇಸ್ರೇಲ್ ಮತ್ತು ಜೋರ್ಡಾನ್ ನಡುವೆ ಇರುವ ಅತ್ಯಂತ ಕಡಿಮೆ ಎತ್ತರದ ಭೂಬಂಧಿತ ಉಪ್ಪು ನೀರಿನ ಸರೋವರವಾಗಿದೆ.
    • ಸಮುದ್ರ ಸಂಪರ್ಕ: ಅಕಾಬಾ (ಕೆಂಪು ಸಮುದ್ರ) ಕರಾವಳಿಯ ಸುಮಾರು 26 ಕಿ.ಮೀ ಪ್ರದೇಶವನ್ನು ಹೊರತುಪಡಿಸಿ ಇದು ಸಂಪೂರ್ಣವಾಗಿ ಭೂಆವೃತ  ದೇಶವಾಗಿದೆ.

    ಗಮನಿಸಿ: ಜೋರ್ಡಾನ್ ದೇಶವು ಭಾರತದ ರಸಗೊಬ್ಬರ ಉದ್ಯಮಕ್ಕೆ ಅಗತ್ಯವಿರುವ ಫಾಸ್ಫೇಟ್ ಮತ್ತು ಪೊಟ್ಯಾಶ್ ಪೂರೈಕೆ ಮಾಡುವ ಪ್ರಮುಖ ರಾಷ್ಟ್ರವಾಗಿದೆ.

    ವಿಶ್ವಸಂಸ್ಥೆಯ ನಾಗರಿಕತೆಗಳ ಒಕ್ಕೂಟ (UNAOC)

    ಸಾಮಾನ್ಯ ಅಧ್ಯಯನ -2/ ಪ್ರಾದೇಶಿಕ ಗುಂಪುಗಳು

    ಇದೀಗ ಸುದ್ದಿಯಲ್ಲಿದೆ:

    • ವಿಶ್ವಸಂಸ್ಥೆಯ ನಾಗರಿಕತೆಗಳ ಒಕ್ಕೂಟವು (UNAOC) ಭಿನ್ನಾಭಿಪ್ರಾಯಗಳನ್ನು ನಿವಾರಿಸಲು, ಧ್ರುವೀಕರಣವನ್ನು ತಗ್ಗಿಸಲು ಮತ್ತು ಅಂತರ-ಸಾಂಸ್ಕೃತಿಕ ಸಂವಾದವನ್ನು ಉತ್ತೇಜಿಸಲು ಕಳೆದ ಎರಡು ದಶಕಗಳಿಂದ ನಡೆಸುತ್ತಿರುವ ತನ್ನ ಪ್ರಯತ್ನಗಳನ್ನು ಪೂರೈಸಿದೆ.

    ವಿಶ್ವಸಂಸ್ಥೆಯ ನಾಗರಿಕತೆಗಳ ಒಕ್ಕೂಟ (UNAOC) ದ ಬಗ್ಗೆ:

    • ಸಚಿವಾಲಯ: ನ್ಯೂಯಾರ್ಕ್.
    • ಸ್ಥಾಪನೆ: ಈ ಒಕ್ಕೂಟವನ್ನು 2005ರಲ್ಲಿ ಪ್ರಾರಂಭಿಸಲಾಯಿತು.
    • ಸ್ಥಾಪಿಸಿದವರು: ಇದನ್ನು ವಿಶ್ವಸಂಸ್ಥೆಯ ಆಶ್ರಯದಲ್ಲಿ ಟರ್ಕಿ ಮತ್ತು ಸ್ಪೇನ್ ದೇಶಗಳು ಜಂಟಿಯಾಗಿ ಆರಂಭಿಸಿದವು.

    ಪ್ರಮುಖ ಉದ್ದೇಶಗಳು:

    • ವಿವಿಧ ರಾಷ್ಟ್ರ ಮತ್ತು ಸಮುದಾಯಗಳ ನಡುವೆ ಅಂತರ-ಸಾಂಸ್ಕೃತಿಕ ಹಾಗೂ ಅಂತರ-ಧರ್ಮೀಯ ಸಂಬಂಧಗಳನ್ನು ವೃದ್ಧಿಸುವುದು.
    • ಧ್ರುವೀಕರಣ, ಉಗ್ರವಾದ, ವಿದೇಶಿಯರ ಬಗೆಗಿನ ದ್ವೇಷ ಮತ್ತು ದ್ವೇಷದ ಭಾಷಣಗಳನ್ನು ಸಮರ್ಥವಾಗಿ ಎದುರಿಸುವುದು.
    • ಪರಸ್ಪರ ತಿಳುವಳಿಕೆ, ಒಳಗೊಳ್ಳುವಿಕೆ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವುದು.

    ಭಾರತಕ್ಕೆ ಇರುವ ಪ್ರಸ್ತುತತೆ:

    • ಈ ಒಕ್ಕೂಟದ ಗುರಿಗಳು ಭಾರತದ ಸಾಂಸ್ಕೃತಿಕ ಪರಂಪರೆಯಾದ ಬಹುತ್ವ ಮತ್ತು ‘ವಸುಧೈವ ಕುಟುಂಬಕಂ’ ಎಂಬ ಉದಾತ್ತ ತತ್ವಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತವೆ.

    ರಾಷ್ಟ್ರೀಯ ರಕ್ತ ವರ್ಗಾವಣೆ ಮಸೂದೆ, 2025

    ಸಾಮಾನ್ಯ ಅಧ್ಯಯನ -2/ ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಭಾರತದಲ್ಲಿ ರಕ್ತ ವರ್ಗಾವಣೆ ಸೇವೆಗಳಿಗಾಗಿ ಒಂದು ಸಮರ್ಪಿತ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸುವ ಉದ್ದೇಶದಿಂದ ‘ರಾಷ್ಟ್ರೀಯ ರಕ್ತ ವರ್ಗಾವಣೆ ಮಸೂದೆ, 2025’ ಅನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು.

    ಮಸೂದೆಯ ಹಿನ್ನೆಲೆ:

    • ಪ್ರಸ್ತುತ, ರಕ್ತ ವರ್ಗಾವಣೆ ಸೇವೆಗಳನ್ನು ‘ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940’ ರ ಅಡಿಯಲ್ಲಿ ನಿಯಂತ್ರಿಸಲಾಗುತ್ತಿದೆ.
    • ರಕ್ತವನ್ನು ಜೀವ ಉಳಿಸುವ ಪ್ರಮುಖ ಸಾರ್ವಜನಿಕ ಸಂಪನ್ಮೂಲವಾಗಿ ನಿರ್ವಹಿಸಲು ಈ ಹಳೆಯ ಕಾಯ್ದೆಯು ಅಸಮರ್ಪಕವಾಗಿದೆ ಎಂದು ಪರಿಗಣಿಸಿ ಈ ಹೊಸ ಮಸೂದೆಯನ್ನು ರೂಪಿಸಲಾಗಿದೆ.

    ಮಸೂದೆಯ ಪ್ರಮುಖ ನಿಬಂಧನೆಗಳು:

    • ರಾಷ್ಟ್ರೀಯ ರಕ್ತ ವರ್ಗಾವಣೆ ಪ್ರಾಧಿಕಾರ (NBTA) ಸ್ಥಾಪನೆ: ಈ ಮಸೂದೆಯು ‘ರಾಷ್ಟ್ರೀಯ ರಕ್ತ ವರ್ಗಾವಣೆ ಪ್ರಾಧಿಕಾರ’ವನ್ನು ಒಂದು ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲು ಅವಕಾಶ ಕಲ್ಪಿಸುತ್ತದೆ.
    • ಏಕರೂಪದ ರಾಷ್ಟ್ರೀಯ ಮಾನದಂಡಗಳು: ಈ ಕೆಳಗಿನ ಪ್ರಕ್ರಿಯೆಗಳಿಗಾಗಿ ಏಕರೂಪದ ರಾಷ್ಟ್ರೀಯ ಮಾನದಂಡಗಳನ್ನು ನಿಗದಿಪಡಿಸುವ ಅಧಿಕಾರವನ್ನು ಈ ಪ್ರಾಧಿಕಾರವು (NBTA) ಹೊಂದಿರುತ್ತದೆ:
      • ರಕ್ತದ ಸಂಗ್ರಹಣೆ, ಪರೀಕ್ಷೆ ಮತ್ತು ಸಂಸ್ಕರಣೆ.
      • ರಕ್ತ ಮತ್ತು ರಕ್ತದ ಘಟಕಗಳ ಶೇಖರಣೆ, ವಿತರಣೆ, ಹಂಚಿಕೆ ಮತ್ತು ವರ್ಗಾವಣೆ.
    • ಕಡ್ಡಾಯ ನೋಂದಣಿ: ದೇಶದಾದ್ಯಂತ ಇರುವ ಎಲ್ಲಾ ರಕ್ತ ಕೇಂದ್ರಗಳ ನೋಂದಣಿಯನ್ನು ಈ ಮಸೂದೆಯು ಕಡ್ಡಾಯಗೊಳಿಸುತ್ತದೆ.
    • ಕಠಿಣ ದಂಡನೆ: ಅಸುರಕ್ಷಿತ, ಅನೈತಿಕ ಅಥವಾ ನಿಯಮಗಳನ್ನು ಪಾಲಿಸದ ಅಭ್ಯಾಸಗಳ ವಿರುದ್ಧ ಕಠಿಣ ದಂಡ ವಿಧಿಸುವ ನಿಬಂಧನೆಗಳನ್ನು ಅಳವಡಿಸಲಾಗಿದೆ.
    • ಸ್ವಯಂಪ್ರೇರಿತ ರಕ್ತದಾನ: ಸಂಘಟಿತ ರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವ ಗುರಿ.
    • ರಾಷ್ಟ್ರೀಯ ರಕ್ತ ಸುರಕ್ಷತಾ ನಿಗಾ ವ್ಯವಸ್ಥೆ: ರಕ್ತ ವರ್ಗಾವಣೆಗೆ ಸಂಬಂಧಿಸಿದ ಪ್ರತಿಕೂಲ ಪರಿಣಾಮಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥೆಯೊಂದನ್ನು ರೂಪಿಸಲಾಗುವುದು.

    ಧ್ರುವ್ 64 (DHRUV 64)

    ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ಭಾರತವು ‘ಧ್ರುವ್ 64’ ಎಂಬ ಮೈಕ್ರೋಪ್ರೊಸೆಸರ್ (ಸೂಕ್ಷ್ಮ ಸಂಸ್ಕಾರಕ) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

    ‘ಧ್ರುವ್ 64′ – ಮೈಕ್ರೋಪ್ರೊಸೆಸರ್ ನ ಬಗ್ಗೆ:

    • ವಿಧ:– ಇದು ಒಂದು ಸಾಮಾನ್ಯ ಉದ್ದೇಶದ ಮೈಕ್ರೋಪ್ರೊಸೆಸರ್ ಆಗಿದೆ.
    • ಅಭಿವೃದ್ಧಿಪಡಿಸಿದವರು:- ಭಾರತ ಸರ್ಕಾರದ ‘ಮೈಕ್ರೋಪ್ರೊಸೆಸರ್ ಅಭಿವೃದ್ಧಿ ಕಾರ್ಯಕ್ರಮದ’ ಅಡಿಯಲ್ಲಿ ಅತ್ಯಾಧುನಿಕ ಗಣನೆ (ಕಂಪ್ಯೂಟಿಂಗ್) ಅಭಿವೃದ್ಧಿ ಕೇಂದ್ರ (C-DAC) ಅಭಿವೃದ್ಧಿಪಡಿಸಿದೆ.
    • ತಾಂತ್ರಿಕ ವಿನ್ಯಾಸ:- ಇದು 64-ಬಿಟ್, ಡ್ಯುಯಲ್-ಕೋರ್ ವಿನ್ಯಾಸವನ್ನು ಹೊಂದಿದೆ.
    • ಗಡಿಯಾರದ ವೇಗ (ಕ್ಲಾಕ್ ಸ್ಪೀಡ್): 1.0 GHz.
    • ಸ್ಥಿತಿ:- ಇದು ಸಂಪೂರ್ಣವಾಗಿ ಸ್ವದೇಶಿ ಆಗಿದ್ದು, ಇದರ ವಿನ್ಯಾಸ ಮತ್ತು ಅಭಿವೃದ್ಧಿ ಭಾರತದಲ್ಲೇ ನಡೆದಿದೆ.
    • ಕಾರ್ಯಗಳು:- ಇದು ಕಂಪ್ಯೂಟರ್‌, ಮೊಬೈಲ್‌, ನಿರ್ದಿಷ್ಟ ಕಾರ್ಯಕ್ಕಾಗಿ ವಿನ್ಯಾಸಗೊಳಿಸಲಾದ ವ್ಯವಸ್ಥೆ ಮತ್ತು ನಿಯಂತ್ರಣ ಘಟಕಗಳಂತಹ ಎಲೆಕ್ಟ್ರಾನಿಕ್ ಸಾಧನಗಳ “ಮೆದುಳಿನಂತೆ” ಕಾರ್ಯನಿರ್ವಹಿಸುತ್ತದೆ.

    ಮಹತ್ವ:

    • ಬಹುಮುಖಿ ಬಳಕೆ: ಇದು 5G ಮೂಲಸೌಕರ್ಯ, ವಾಹನ ಉದ್ಯಮ, ಗ್ರಾಹಕ ಎಲೆಕ್ಟ್ರಾನಿಕ್ಸ್, ಕೈಗಾರಿಕಾ ಸ್ವಯಂಚಾಲಿತ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಕಾರ್ಯತಂತ್ರದ ಉದ್ದೇಶಗಳಿಗೆ ಅತ್ಯಂತ ಸೂಕ್ತವಾಗಿದೆ.
    • ಆಮದು ಅವಲಂಬನೆ ಕಡಿತ: ಜಾಗತಿಕ ಮೈಕ್ರೋಪ್ರೊಸೆಸರ್ ಬಳಕೆಯಲ್ಲಿ ಭಾರತವು ಸುಮಾರು 20% ರಷ್ಟು ಪಾಲನ್ನು ಹೊಂದಿದ್ದು, ಈ ದೇಶೀಯ ಆವಿಷ್ಕಾರವು ವಿದೇಶಿ ಆಮದಿನ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

    ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ, 2025

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು (KREDL), ‘ರಾಜ್ಯ ಇಂಧನ ದಕ್ಷತೆ ಸಾಧನೆ ಪ್ರಶಸ್ತಿ’ (SDA ಗ್ರೂಪ್-1) ವಿಭಾಗದಲ್ಲಿ ಪ್ರತಿಷ್ಠಿತ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ 2025’ ಅನ್ನು ಮುಡಿಗೇರಿಸಿಕೊಂಡಿದೆ.

    ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಯ ಬಗ್ಗೆ:

    • ಸ್ಥಾಪನೆ: ಈ ಪ್ರಶಸ್ತಿಗಳನ್ನು ‘ಇಂಧನ ದಕ್ಷತೆ ಬ್ಯೂರೋ’ (BEE) ಸ್ಥಾಪಿಸಿದೆ.
    • ಸಚಿವಾಲಯ: ಇದು ಭಾರತ ಸರ್ಕಾರದ ಇಂಧನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶಗಳು:
      • ಇಂಧನ ದಕ್ಷತೆ ಮತ್ತು ಸಂರಕ್ಷಣಾ ಕ್ಷೇತ್ರದಲ್ಲಿ ತೋರಿದ ಅಪ್ರತಿಮ ಅಥವಾ ಆದರ್ಶಪ್ರಾಯ ಸಾಧನೆಯನ್ನು ಗುರುತಿಸಿ ಗೌರವಿಸುವುದು.
      • ಇಂಧನ ಬಳಕೆಯ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ, ಕೈಗಾರಿಕೆ ಮತ್ತು ವಿವಿಧ ಸಂಸ್ಥೆಗಳಿಗೆ ಉತ್ತೇಜನ ನೀಡುವುದು.
      • ಹಿನ್ನೆಲೆ: ಈ ಪ್ರಶಸ್ತಿ ಯೋಜನೆಯನ್ನು ಮೊಟ್ಟಮೊದಲ ಬಾರಿಗೆ 1991 ರಲ್ಲಿ ಜಾರಿಗೆ ತರಲಾಯಿತು.
  • ಓಮನ್ ಕೊಲ್ಲಿ | ASPIRE (ಆಸ್ಪೈರ್) ಯೋಜನೆ | ವ್ಯಾಪಾರ ಕೊರತೆ | ಜಿಗುಟುವ ವಂಶವಾಹಿಗಳು (Jumping Genes) | ಎಹೆಚ್‌-64ಇ (AH-64E) ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳು | ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025

    ಓಮನ್ ಕೊಲ್ಲಿ

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು; ಸಾಮಾನ್ಯ ಅಧ್ಯಯನ-1/ ಸುದ್ದಿಯಲ್ಲಿರುವ ಸ್ಥಳಗಳು

    ಇದೀಗ ಸುದ್ದಿಯಲ್ಲಿದೆ: 

    • ಓಮನ್ ಕೊಲ್ಲಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ದಶಲಕ್ಷ ಲೀಟರ್ ಡೀಸೆಲ್ ಹೊಂದಿದ್ದ ವಿದೇಶಿ ತೈಲ ಟ್ಯಾಂಕರ್ ಅನ್ನು ಇರಾನ್ ವಶಪಡಿಸಿಕೊಂಡಿದೆ.

    ಓಮನ್ ಕೊಲ್ಲಿಯ ಬಗ್ಗೆ:

    • ಓಮನ್ ಕೊಲ್ಲಿಯು ಅರಬ್ಬಿ ಸಮುದ್ರದ ವಾಯುವ್ಯಭಾಗದಲ್ಲಿದೆ.
    • ಸಂಪರ್ಕ: ಇದು ಹಾರ್ಮುಜ್ ಜಲಸಂಧಿಯ ಮೂಲಕ ಹಿಂದೂ ಮಹಾಸಾಗರವನ್ನು ಪರ್ಷಿಯನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಅತ್ಯಂತ ಪ್ರಮುಖ ಸಮುದ್ರ ಸಾರಿಗೆ ಮಾರ್ಗವಾಗಿದೆ.
    • ವಿಶೇಷತೆ:- ಹಾರ್ಮುಜ್ ಜಲಸಂಧಿಯ ಮೂಲಕ ಪರ್ಷಿಯನ್ ಕೊಲ್ಲಿಗೆ ಪ್ರವೇಶವನ್ನು ಒದಗಿಸುವ ಈ ಮಾರ್ಗವು, ಜಾಗತಿಕ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ವ್ಯಾಪಾರಕ್ಕೆ ಅತ್ಯಂತ ನಿರ್ಣಾಯಕ ಮಾರ್ಗವಾಗಿದೆ.

    ASPIRE (ಆಸ್ಪೈರ್) ಯೋಜನೆ

    ಸಾಮಾನ್ಯ ಅಧ್ಯಯನ -2/ ಕಲ್ಯಾಣ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವ ಉದ್ದೇಶದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು (MSME) ‘ASPIRE’ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

    ASPIRE (ಆಸ್ಪೈರ್)ಯೋಜನೆಯ ಬಗ್ಗೆ:

    • ಆರಂಭ: 2015 ರಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು (MSME) ಪ್ರಾರಂಭಿಸಿತು.
    • ಉದ್ದೇಶ: ಸೂಕ್ಷ್ಮ ಉದ್ಯಮಗಳಿಗೆ ಕೌಶಲ್ಯ ಅಭಿವೃದ್ಧಿ, ಇನ್ಕ್ಯುಬೇಷನ್ (ಮಾರ್ಗದರ್ಶನ, ಮೂಲಸೌಕರ್ಯ, ಹಣಕಾಸು ಮತ್ತು ತಾಂತ್ರಿಕ ಸಹಾಯ) ಮತ್ತು ಅಗತ್ಯ ಬೆಂಬಲ ಒದಗಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು. 

    ಪ್ರಮುಖ ಘಟಕಗಳು:

    • ಜೀವನೋಪಾಯ ವ್ಯವಹಾರ ಇನ್ಕ್ಯುಬೇಟರ್‌ಗಳು (LBIs): ಇವು ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು ಮತ್ತು ಗ್ರಾಮೀಣ ವ್ಯಾಪಾರಗಳಲ್ಲಿ ತರಬೇತಿ ನೀಡುವ ಮೂಲಕ ಕೃಷಿ ಆಧಾರಿತ ಉದ್ಯಮಗಳಿಗೆ ಬೆಂಬಲ ನೀಡುತ್ತವೆ. ಈ ಉದ್ದೇಶಕ್ಕಾಗಿ ಅನುದಾನ:
    • ಖಾಸಗಿ ಸಂಸ್ಥೆಗಳಿಗೆ ₹75 ಲಕ್ಷದವರೆಗೆ,
    • ಸರ್ಕಾರಿ ಸಂಸ್ಥೆಗಳಿಗೆ ₹1 ಕೋಟಿಯವರೆಗೆ ನೀಡಲಾಗುತ್ತಿದೆ.
    • ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್‌ಗಳು (TBIs): ಇವು ಇದೇ ರೀತಿಯ ಧನಸಹಾಯದೊಂದಿಗೆ ತಂತ್ರಜ್ಞಾನ ಆಧಾರಿತ ಗ್ರಾಮೀಣ ನಾವೀನ್ಯತೆಗಳನ್ನು ಉತ್ತೇಜಿಸುವತ್ತ ಗಮನ ಹರಿಸುತ್ತವೆ.
    • ನಿಧಿಗಳ ನಿಧಿ: ಕೃಷಿ-ಗ್ರಾಮೀಣ ವಲಯದ ನವೋದ್ಯಮಗಳಿಗೆ ಬೆಂಬಲ ನೀಡಲು SIDBI ಮೂಲಕ ನಿರ್ವಹಿಸಲ್ಪಡುವ ₹200 ಕೋಟಿ ಮೊತ್ತದ ನಿಧಿಯನ್ನು ಇದು ಒಳಗೊಂಡಿದೆ.

    ಇದು ನಿಮಗೆ ತಿಳಿದಿದೆಯೇ?

    • ಮಾರಾಟಗಾರ ಅಭಿವೃದ್ಧಿ ಕಾರ್ಯಕ್ರಮ:- MSMEಗಳಿಗಾಗಿ ಇರುವ ಸಾರ್ವಜನಿಕ ಸಂಗ್ರಹಣೆ ನೀತಿಯ ಅಡಿಯಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗಾಗಿ ಆಯೋಜಿಸಲಾಗುತ್ತಿದೆ.
    • ಯಶಸ್ವಿನಿ ಅಭಿಯಾನ:- ಮಹಿಳಾ ಉದ್ಯಮಿಗಳಲ್ಲಿ ಔಪಚಾರಿಕೀಕರಣ, ಸಾಲದ ಲಭ್ಯತೆ, ಸಾಮರ್ಥ್ಯ ವೃದ್ಧಿ ಮತ್ತು ಮಾರ್ಗದರ್ಶನದ ಬಗ್ಗೆ ಅರಿವು ಮೂಡಿಸಿ ಅವರನ್ನು ಸಬಲೀಕರಣಗೊಳಿಸಲು ಜೂನ್ 2024 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
    • ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP):- ಸೂಕ್ಷ್ಮ ಉದ್ಯಮಗಳ ಮೂಲಕ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಚಿವಾಲಯವು ಸಾಲ-ಸಂಯೋಜಿತ ಸಹಾಯಧನ ಯೋಜನೆಯಾದ ಇದನ್ನು ಜಾರಿಗೊಳಿಸುತ್ತಿದೆ.

    ವ್ಯಾಪಾರ ಕೊರತೆ

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ನವೆಂಬರ್ 2025ರಲ್ಲಿ ಭಾರತದ ವ್ಯಾಪಾರ ಕೊರತೆಯು 61% ಕ್ಕೂ ಅಧಿಕ ಕುಸಿತ ಕಂಡು 660 ಕೋಟಿ ಅಮೇರಿಕ ಡಾಲರ್‌ಗಳಿಗೆ ತಲುಪಿದೆ.
    • ಸರಕು ರಫ್ತಿನಲ್ಲಿನ ಸದೃಢ ಬೆಳವಣಿಗೆ ಮತ್ತು ಸರಕು ಆಮದಿನಲ್ಲಿನ ಇಳಿಕೆಯು ಈ ಗಮನಾರ್ಹ ಸುಧಾರಣೆಗೆ ಪ್ರಮುಖ ಕಾರಣವಾಗಿದೆ. 

    ವ್ಯಾಪಾರ ಕೊರತೆಯ ಬಗ್ಗೆ:

    • ವ್ಯಾಖ್ಯಾನ: ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಆಮದಿನ ಮೌಲ್ಯವು ಅದರ ರಫ್ತಿನ ಮೌಲ್ಯಕ್ಕಿಂತ ಹೆಚ್ಚಾದಾಗ ‘ವ್ಯಾಪಾರ ಕೊರತೆ’ ಸಂಭವಿಸುತ್ತದೆ. 
    • ಈ ಸ್ಥಿತಿಯು ಋಣಾತ್ಮಕ ವ್ಯಾಪಾರ ಸಮತೋಲನಕ್ಕೇ ಕಾರಣವಾಗುತ್ತದೆ.
    • ವ್ಯಾಪಾರ ಸಮತೋಲನ/ಬಾಕಿ (BoT) ಸೂತ್ರ:

    ವ್ಯಾಪಾರ ಸಮತೋಲನ (BoT) = ಒಟ್ಟು ರಫ್ತುಗಳು – ಒಟ್ಟು ಆಮದುಗಳು

    ವ್ಯಾಪಾರ ಕೊರತೆಯ ವಿಧಗಳು:

    • ಸರಕುಗಳ ವ್ಯಾಪಾರ ಕೊರತೆ:- ಇದು ಭೌತಿಕ ಸರಕುಗಳ ರಫ್ತು ಮತ್ತು ಆಮದುಗಳ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ.
    • ಸೇವೆಗಳ ವ್ಯಾಪಾರ ಕೊರತೆ / ಹೆಚ್ಚುವರಿ:- ಇದು ಸೇವಾ ರಫ್ತುಗಳು (ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಹಣಕಾಸು) ಮತ್ತು ಸೇವಾ ಆಮದುಗಳ ನಡುವಿನ ವ್ಯತ್ಯಾಸವಾಗಿದೆ.
    • ಭಾರತವು ಸಾಮಾನ್ಯವಾಗಿ ಸೇವಾ ವಲಯದಲ್ಲಿ ವ್ಯಾಪಾರ ಹೆಚ್ಚುವರಿಯನ್ನು ಹೊಂದಿರುತ್ತದೆ.
    • ದ್ವಿಪಕ್ಷೀಯ ವ್ಯಾಪಾರ ಕೊರತೆ:- ಇದು ಚೀನಾದಂತಹ ಒಂದು ನಿರ್ದಿಷ್ಟ ದೇಶದೊಂದಿಗಿನ ಭಾರತದ ವ್ಯಾಪಾರ ಕೊರತೆಯನ್ನು ಸೂಚಿಸುತ್ತದೆ.
    • ನಿವ್ವಳ ಬಾಹ್ಯ ಬೇಡಿಕೆಯ ಸೂಚಕ:- ಇದು ಜಾಗತಿಕ ವ್ಯಾಪಾರದಲ್ಲಿ ಒಂದು ದೇಶವು ನಿವ್ವಳ ಆಮದುದಾರ ಅಥವಾ ನಿವ್ವಳ ರಫ್ತುದಾರ ಎಂಬುದನ್ನು ಪ್ರತಿಬಿಂಬಿಸುವ ಪ್ರಮುಖ ಸೂಚಕವಾಗಿದೆ.

    ಜಿಗುಟುವ ವಂಶವಾಹಿಗಳು (Jumping Genes)

    ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ದಕ್ಷಿಣ ಗ್ರೀನ್‌ಲ್ಯಾಂಡಿನ ಧ್ರುವ ಕರಡಿಗಳಲ್ಲಿ ‘ಜಿಗಿಯುವ ವಂಶವಾಹಿ’ಗಳಿಗೆ ಸಂಬಂಧಿಸಿದಂತೆ ತ್ವರಿತ ಆನುವಂಶಿಕ ಬದಲಾವಣೆಗಳು ಕಂಡುಬಂದಿವೆ.
    • ಈ ಬದಲಾವಣೆಗಳು ಬೆಚ್ಚಗಾಗುತ್ತಿರುವ ಆರ್ಕ್ಟಿಕ್ ಪರಿಸರದಲ್ಲಿ ಅವುಗಳ ಬದುಕುಳಿಯುವಿಕೆಗೆ ಸಹಕಾರಿಯಾಗುವ ಸಾಧ್ಯತೆಯಿದೆ.

    ಜಿಗುಟುವ ವಂಶವಾಹಿಗಳ ಬಗ್ಗೆ:

    • ವೈಜ್ಞಾನಿಕವಾಗಿ ‘ಟ್ರಾನ್ಸ್ಪೋಸಬಲ್ ಎಲಿಮೆಂಟ್ಸ್’ (ಸ್ಥಾನಾಂತರಗೊಳ್ಳುವ ವಂಶವಾಹಿಗಳ ಅಂಶಗಳು) ಎಂದು ಕರೆಯಲ್ಪಡುವ ಇವು ಜೀನೋಮ್‌ನ ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಸ್ಥಳಾಂತರಗೊಳ್ಳಬಲ್ಲ ಡಿಎನ್‌ಎ ಅನುಕ್ರಮಗಳಾಗಿವೆ.
    • ಇವುಗಳನ್ನು ಮೆಕ್ಕೆಜೋಳದಲ್ಲಿ ಪತ್ತೆಹಚ್ಚಿದ ವಿಜ್ಞಾನಿ ಬಾರ್ಬರಾ ಮೆಕ್ಲಿಂಟಾಕ್ ಅವರಿಗೆ 1983ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    • ಮಾನವನ ಜೀನೋಮ್‌ನಲ್ಲಿ ಇವುಗಳ ಪಾಲು ಸುಮಾರು 45% ರಷ್ಟಿದೆ.

    ಎಹೆಚ್‌-64ಇ (AH-64E) ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳು

    ಸಾಮಾನ್ಯ ಅಧ್ಯಯನ -3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಭಾರತೀಯ ಭೂಸೇನೆಯು ಮೂರು ಎಹೆಚ್‌-64ಇ ಅಪಾಚೆ ಅಟ್ಯಾಕ್ (ಅಕ್ರಮಣಕಾರಿ) ಹೆಲಿಕಾಪ್ಟರ್‌ಗಳ ಅಂತಿಮ ಹಂತದ ಬ್ಯಾಚ್ ಅನ್ನು ಅಮೇರಿಕಾದಿಂದ ಸ್ವೀಕರಿಸಿದೆ.

    ಎಹೆಚ್‌-64ಇ (AH-64E) ಅಪಾಚೆ ಅಟ್ಯಾಕ್ (ಅಕ್ರಮಣಕಾರಿ) ಹೆಲಿಕಾಪ್ಟರ್‌ಗಳ ಬಗ್ಗೆ:

    • ಈ ಅಪಾಚೆ ಹೆಲಿಕಾಪ್ಟರ್‌ಗಳನ್ನು 2020 ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದೊಂದಿಗೆ ಏರ್ಪಟ್ಟ 600 ದಶ ಲಕ್ಷ ಡಾಲರ್ ಮೊತ್ತದ ಒಪ್ಪಂದದ ಅಡಿಯಲ್ಲಿ ಖರೀದಿಸಲಾಗಿದೆ.
    • ಇದನ್ನು ವಿಶ್ವದ ಅತ್ಯಂತ ಸುಧಾರಿತ ‘ಬಹು-ಪಾತ್ರದ ಯುದ್ಧಗಳ ಹೆಲಿಕಾಪ್ಟರ್’ ಎಂದು ಪರಿಗಣಿಸಲಾಗಿದೆ.
    • ವಿಶೇಷತೆ:- ಇದು ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನ, ಸಂವೇದಕಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ಯಾವುದೇ ಹವಾಮಾನ ಮತ್ತು ಕಠಿಣ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ದಕ್ಷತೆಯನ್ನು ಹೊಂದಿದೆ.

    ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025

    ಸಾಮಾನ್ಯ ಅಧ್ಯಯನ-2/ ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಸಚಿವರು ‘ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025′ ಅನ್ನು ಲೋಕಸಭೆಯಲ್ಲಿ ಮಂಡಿಸಿದರು.

    ಮಸೂದೆಯ ಪ್ರಮುಖ ಅಂಶಗಳು:

    • ಈ ಮಸೂದೆಯು 2005ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA)ಯನ್ನು ಬದಲಿಸಲಿದೆ.
    • ಈ ಕ್ರಮವು ಉದ್ಯೋಗ ಖಾತರಿ ವ್ಯವಸ್ಥೆಯನ್ನು ಪ್ರಸ್ತುತ ಇರುವ “ಬೇಡಿಕೆ-ಆಧಾರಿತ ಚೌಕಟ್ಟಿನಿಂದ” “ಪೂರೈಕೆ-ಆಧಾರಿತ ಯೋಜನೆಗೆ” ಪರಿವರ್ತಿಸುತ್ತದೆ.

    ಪ್ರಮುಖ ಶಾಸನಬದ್ಧ ನಿಬಂಧನೆಗಳು:

    • ಸುಧಾರಿತ ಜೀವನೋಪಾಯ ಖಾತ್ರಿ: ಕೌಶಲ್ಯ ರಹಿತ ದೈಹಿಕ ಕೆಲಸ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುವ ವಯಸ್ಕರನ್ನು ಹೊಂದಿರುವ ಪ್ರತಿ ಗ್ರಾಮೀಣ ಕುಟುಂಬಕ್ಕೆ, ಪ್ರತಿ ಆರ್ಥಿಕ ವರ್ಷದಲ್ಲಿ ಶಾಸನಬದ್ಧ ವೇತನ ಸಹಿತ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಈ ಮಸೂದೆಯು ಹೆಚ್ಚಿಸುತ್ತದೆ.
    • ಕೇಂದ್ರ ಪ್ರಾಯೋಜಿತ ಯೋಜನೆ: ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾದ ಜವಾಬ್ದಾರಿಗಳೊಂದಿಗೆ ‘ಕೇಂದ್ರ ಪ್ರಾಯೋಜಿತ ಯೋಜನೆ’ಯಾಗಿ ಅನುಷ್ಠಾನಗೊಳಿಸಲಾಗುತ್ತದೆ.
    • ನಿಧಿ ಹಂಚಿಕೆ ಮಾದರಿ: ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ನಿಧಿ ಹಂಚಿಕೆಯ ಅನುಪಾತವು 90:10 ರಷ್ಟಿರುತ್ತದೆ. ಉಳಿದ ಎಲ್ಲಾ ರಾಜ್ಯಗಳಿಗೆ ಈ ಅನುಪಾತವು 60:40 ರಷ್ಟಿರುತ್ತದೆ.
    • ರಾಜ್ಯಗಳಿಗೆ ನಿಯಮಿತ ಹಂಚಿಕೆ: ಪಂಚಾಯತಿಗಳ ವರ್ಗೀಕರಣ ಮತ್ತು ಸ್ಥಳೀಯ ಅಭಿವೃದ್ಧಿ ಅಗತ್ಯಗಳನ್ನು ಪರಿಗಣಿಸಿ, ರಾಜ್ಯಗಳು ಜಿಲ್ಲೆ ಮತ್ತು ಗ್ರಾಮ ಪಂಚಾಯತ್‌ಗಳ ನಡುವೆ ಪಾರದರ್ಶಕ ಹಾಗೂ ಅಗತ್ಯ-ಆಧಾರಿತವಾಗಿ ನಿಧಿ ವಿತರಣೆಯನ್ನು ಖಚಿತಪಡಿಸಲಿವೆ.
    • ವೇತನ ದರಗಳ ನಿರ್ಧಾರ: ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸುತ್ತದೆ; ಪ್ರತ್ಯೇಕ ದರಗಳನ್ನು ಅಧಿಸೂಚಿಸುವವರೆಗೆ, ಪ್ರಸ್ತುತ ಚಾಲ್ತಿಯಲ್ಲಿರುವ ನರೇಗಾ (MGNREGA) ವೇತನ ದರಗಳೇ ಅನ್ವಯವಾಗುತ್ತವೆ.
    • ಕೃಷಿ ಚಟುವಟಿಕೆಗಳ ಗರಿಷ್ಠ ಸಮಯದ ಸಂರಕ್ಷಣೆ: ಬಿತ್ತನೆ ಮತ್ತು ಕೊಯ್ಲಿನಂತಹ ನಿರ್ಣಾಯಕ ಸಮಯಗಳಲ್ಲಿ ಕೃಷಿ ಕಾರ್ಮಿಕರ ಲಭ್ಯತೆಯನ್ನು ಸುಗಮಗೊಳಿಸಲು, ಒಂದು ಆರ್ಥಿಕ ವರ್ಷದಲ್ಲಿ ಒಟ್ಟು 60 ದಿನಗಳವರೆಗೆ ಈ ಮಸೂದೆಯ ಅಡಿಯಲ್ಲಿ ಯಾವುದೇ ಕೆಲಸಗಳನ್ನು ಕೈಗೊಳ್ಳದಂತೆ ಮುಂಚಿತವಾಗಿ ಅಧಿಸೂಚಿಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.
    • ನಿರುದ್ಯೋಗ ಭತ್ಯೆ: ನಿಗದಿತ ಅವಧಿಯೊಳಗೆ ಅರ್ಹ ಅರ್ಜಿದಾರರಿಗೆ ಕೆಲಸ ನೀಡಲು ವಿಫಲವಾದರೆ, ಸಂಬಂಧಿತ ರಾಜ್ಯ ಸರ್ಕಾರಗಳು ನಿರುದ್ಯೋಗ ಭತ್ಯೆಯನ್ನು ಪಾವತಿಸಲು ಬದ್ಧವಾಗಿರುತ್ತವೆ.
    • ಆರು ತಿಂಗಳೊಳಗೆ ರಾಜ್ಯ ಸರ್ಕಾರಗಳ ಯೋಜನೆಗಳು: ಈ ಮಸೂದೆಯು ಜಾರಿಗೆ ಬಂದ ಆರು ತಿಂಗಳ ಒಳಗೆ ಪ್ರತಿಯೊಂದು ರಾಜ್ಯ ಸರ್ಕಾರವು ಉದ್ಯೋಗ ಖಾತರಿಯನ್ನು ಕಾರ್ಯಗತಗೊಳಿಸಲು ತನ್ನದೇ ಆದ ಯೋಜನೆಯನ್ನು ಅಧಿಸೂಚಿಸಬೇಕು.
    • ವಿಕಸಿತ ಗ್ರಾಮ ಪಂಚಾಯತ್ ಯೋಜನೆ (VGPP) ಆಧಾರಿತ ಯೋಜನೆ: ಗ್ರಾಮ ಪಂಚಾಯತ್‌ಗಳು ಸಿದ್ಧಪಡಿಸಿದ ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ (VGPP)ಗಳ ಮೂಲಕ ಯೋಜನೆಯನ್ನು ರೂಪಿಸಲಾಗುತ್ತದೆ ಮತ್ತು ಇವುಗಳನ್ನು ರಾಷ್ಟ್ರೀಯ ಪ್ರಾದೇಶಿಕ ಯೋಜನಾ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ.
    • ಸಾಂಸ್ಥಿಕ ಮೇಲ್ವಿಚಾರಣೆ: ಶಾಸನದ ನಿಬಂಧನೆಗಳ ಪರಿಶೀಲನೆ, ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯಾ ಹಂತಗಳಲ್ಲಿ ‘ಕೇಂದ್ರ ಗ್ರಾಮೀಣ ಉದ್ಯೋಗ ಖಾತ್ರಿ ಮಂಡಳಿ’ ಮತ್ತು ‘ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ಮಂಡಳಿ’ಗಳನ್ನು ರಚಿಸಲಾಗುವುದು.
  • ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ, 2025 | ದೀಪಾವಳಿ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ | ವಿಶ್ವ ಅಸಮಾನತೆ ವರದಿ, 2026 | ಸೌರ ಬಿರುಗಾಳಿಯನ್ನು ಅಧ್ಯಯನ ಮಾಡಲು ಜಾಗತಿಕ ಪ್ರಯತ್ನಕ್ಕೆ ಕೈಜೋಡಿಸಿದ ಆದಿತ್ಯ-L1 | ಜಾಗತಿಕ ಪರಿಸರ ಮುನ್ನೋಟ (Global Environment Outlook)

    ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ, 2025

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ತಮಿಳುನಾಡಿನ ಐಎಎಸ್ ಅಧಿಕಾರಿಯಾದ ಸುಪ್ರಿಯಾ ಸಾಹು ಅವರಿಗೆ ಸ್ಫೂರ್ತಿ ಮತ್ತು ಕ್ರಿಯೆ ವಿಭಾಗದಲ್ಲಿ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ‘2025 ರ ಸಾಲಿನ “ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗಿದೆ.

    ಸುಪ್ರಿಯಾ ಸಾಹು ಅವರು ಪರಿಸರಕ್ಕೇ ನೀಡಿದ ಕೊಡುಗೆಗಳು:

    • 2000ನೇ ಇಸವಿಯಲ್ಲಿ, ನೀಲಗಿರಿಯಲ್ಲಿ ‘ಏಕ-ಬಳಕೆಯ ಪ್ಲಾಸ್ಟಿಕ್’ ನಿರ್ಮೂಲನೆಗಾಗಿ ಸುಪ್ರಿಯಾ ಸಾಹು ಅವರು ‘ಆಪರೇಷನ್ ಬ್ಲೂ ಮೌಂಟೇನ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದರು.
    • “ಕೂಲ್ ರೂಫ್ ಪ್ರಾಜೆಕ್ಟ್” ಅಡಿಯಲ್ಲಿ ಶಾಲಾ ಕಟ್ಟಡಗಳ ಮೇಲ್ಛಾವಣಿಗಳಿಗೆ ಬಿಳಿ ಬಣ್ಣ ಬಳಿಯುವುದರಿಂದ ಹಿಡಿದು, ಮ್ಯಾಂಗ್ರೋವ್‌ಗಳು (ಕಾಂಡ್ಲಾ ಕಾಡುಗಳು) ಮತ್ತು ಜೌಗು ಪ್ರದೇಶಗಳನ್ನು ಪುನಃಸ್ಥಾಪಿಸುವವರೆಗೆ ಹಾಗೂ 65 ಹೊಸ ಮೀಸಲು ಅರಣ್ಯಗಳನ್ನು ರಚಿಸುವವರೆಗೆ, ಅವರು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಡಿಮೆ ವೆಚ್ಚದ ಪರಿಹಾರಗಳನ್ನು ಪರಿಚಯಿಸಿದರು.
    • ಅವರ ‘ಪ್ರಕೃತಿ-ಮೊದಲು’ ಎಂಬ ವಿಧಾನವು 2.5 ದಶಲಕ್ಷ ‘ಹಸಿರು ಉದ್ಯೋಗ’ಗಳನ್ನು ಸೃಷ್ಟಿಸಿದೆ ಮತ್ತು ಭಾರತದ ರಾಷ್ಟ್ರೀಯ ಇಂಗಾಲದ ಹೊರಸೂಸುವಿಕೆ ಕಡಿತದ ಗುರಿಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.

    ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಯ ಬಗ್ಗೆ:

      • ಈ ಪ್ರಶಸ್ತಿಯನ್ನು 2005 ರಲ್ಲಿ ಪ್ರಾರಂಭಿಸಲಾಯಿತು.
      • ಈ ಪ್ರಶಸ್ತಿಯು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ.
      • ಪರಿಸರದ ಮೇಲೆ ಸಕಾರಾತ್ಮಕ ಪ್ರಭಾವ ಮತ್ತು ಪರಿವರ್ತನೆಯನ್ನು ಉಂಟುಮಾಡಿದ ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಹಾಗೂ ನಾಗರಿಕ ಸಮಾಜದ ಗಣ್ಯ ವ್ಯಕ್ತಿಗಳನ್ನು ಇದು ಗುರುತಿಸುತ್ತದೆ.
      • ಈ ಪ್ರಶಸ್ತಿಯನ್ನು ಐದು ವಿಭಾಗಗಳಲ್ಲಿ ನೀಡಲಾಗುತ್ತದೆ:
    • ನೀತಿ ನಾಯಕತ್ವ 
    • ಉದ್ಯಮಶೀಲತಾ ದೃಷ್ಟಿಕೋನ
    • ವಿಜ್ಞಾನ ಮತ್ತು ನಾವೀನ್ಯತೆ
    • ಜೀವಮಾನದ ಸಾಧನೆ
    • ಸ್ಫೂರ್ತಿ ಮತ್ತು ಕ್ರಿಯೆ – (ಸುಪ್ರಿಯಾ ಸಾಹು ಅವರಿಗೆ ಈ ವಿಭಾಗದಲ್ಲಿ ಗೌರವಿಸಲಾಗಿದೆ).
    • ಈ ಹಿಂದೆ ಪ್ರಶಸ್ತಿ ಪಡೆದ ಭಾರತೀಯರು: ಮಾಧವ್ ಗಾಡ್ಗೀಳ್ (2024), ನರೇಂದ್ರ ಮೋದಿ (2018), ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (2018) ಮತ್ತು ಅಫ್ರೋಜ್ ಶಾ (2016).

    ದೀಪಾವಳಿ ಹಬ್ಬವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ

    ಸಾಮಾನ್ಯ ಅಧ್ಯಯನ -1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ನವದೆಹಲಿಯಲ್ಲಿ ನಡೆದ ಯುನೆಸ್ಕೋದ ಅಂತರ-ಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ, ದೀಪಾವಳಿ ಹಬ್ಬವನ್ನು ಯುನೆಸ್ಕೋದ ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ’ಗೆ ಸೇರ್ಪಡೆಗೊಳಿಸಲಾಗಿದೆ.
    • ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಯುನೆಸ್ಕೋ ಅಂತರ-ಸರ್ಕಾರಿ ಸಮಿತಿಯ 20ನೇ ಅಧಿವೇಶನವನ್ನು (2025), ಭಾರತವು ನವದೆಹಲಿಯ ಕೆಂಪು ಕೋಟೆ ಸಂಕೀರ್ಣದಲ್ಲಿ ಇತ್ತೀಚಿಗೆ ಆಯೋಜಿಸಿತ್ತು. 

    ದೀಪಾವಳಿ ಹಬ್ಬದ ಬಗ್ಗೆ:

    • ದೀಪಾವಳಿ ಹಬ್ಬವನ್ನು “ದೀವಾಳಿ” ಎಂತಲೂ ಕರೆಯುತ್ತಾರೆ. ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ; ಇದು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬರುತ್ತದೆ.
    • ಇದರ ಆಚರಣೆಯ ನಂತರ ನರಕ ಚತುರ್ದಶಿಯೂ ಬರುತ್ತದೆ.
    • ದೀಪಾವಳಿಯ ಮೂರನೇ ದಿನ ಹಬ್ಬದ ಪ್ರಮುಖ ದಿನವಾಗಿದ್ದು, ಅಂದು ಪವಿತ್ರ ಲಕ್ಷ್ಮಿ-ಗಣೇಶ ಪೂಜೆಯನ್ನು ನೆರವೇರಿಸಲಾಗುತ್ತದೆ.

    ದೀಪಾವಳಿ ಹಬ್ಬದ ಜನಪ್ರಿಯ ಪೌರಾಣಿಕ ಕಥೆಗಳು:

    • ರಾಮಾಯಣದಲ್ಲಿ:– ದೀಪಾವಳಿಯು 14 ವರ್ಷಗಳ ವನವಾಸದ ನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಮರಳಿದ ಮತ್ತು ರಾವಣನ ಮೇಲೆ ಅವರು ಸಾಧಿಸಿದ ವಿಜಯದ ಸಂಕೇತವಾಗಿದೆ; ದೀಪಗಳನ್ನು ಹಚ್ಚುವ ಮೂಲಕ ಅವರ ಹಾದಿಯನ್ನು ಬೆಳಗಿಸಿ ಇದನ್ನು ಆಚರಿಸಲಾಗುತ್ತದೆ.
    • ಮಹಾಭಾರತದಲ್ಲಿ:- ಪಾಂಡವರು ತಮ್ಮ ವನವಾಸದ ನಂತರ ಮರಳಿದ ಪೌರಾಣಿಕ ಕಥೆ.
    • ನರಕ ಚತುರ್ದಶಿ:– ದುಷ್ಟಶಕ್ತಿಯ ಅಂತ್ಯದ ಸಂಕೇತವಾಗಿ, ನರಕಾಸುರನ ಮೇಲೆ ಶ್ರೀಕೃಷ್ಣನು ಸಾಧಿಸಿದ ವಿಜಯವನ್ನು ಇದು ಸ್ಮರಿಸುತ್ತದೆ.
    • ಭಗವಾನ್ ಮಹಾವೀರನ ನಿರ್ವಾಣ:- 24ನೇ ತೀರ್ಥಂಕರರಾದ ಭಗವಾನ್ ಮಹಾವೀರನು ದೀಪಾವಳಿ ಹಬ್ಬದಂದು ಪಾವಾಪುರಿಯಲ್ಲಿ ನಿರ್ವಾಣ ಹೊಂದಿದನು. ಜೈನ ಧರ್ಮದ ಭಕ್ತರು ಈ ಹಬ್ಬವನ್ನು ‘ನಿರ್ವಾಣ ದಿನ’ವನ್ನಾಗಿ ಆಚರಿಸುತ್ತಾರೆ.
    • ಬಲಿ ಚಕ್ರವರ್ತಿಯ ಪುನರಾಗಮನ:- ಮಹಾರಾಷ್ಟ್ರದಲ್ಲಿ, ದೀಪಾವಳಿಯು ಬಲಿ ಚಕ್ರವರ್ತಿಯ ಭೇಟಿಯನ್ನು ಸೂಚಿಸುತ್ತದೆ; ಇದು ನ್ಯಾಯ ಮತ್ತು ಔದಾರ್ಯವನ್ನು ಸಂಕೇತಿಸುತ್ತದೆ.
    • ಕಾಳಿ ಪೂಜೆ:- ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ, ದೀಪಾವಳಿಯು ರಕ್ಷಣೆ ಮತ್ತು ಆಂತರಿಕ ಶಕ್ತಿಗಾಗಿ ಕಾಳಿ ದೇವಿಯ ಆರಾಧನೆಯೊಂದಿಗೆ ಏಕಕಾಲದಲ್ಲಿ ಆಚರಿಸಲ್ಪಡುತ್ತದೆ.
    • ಲಕ್ಷ್ಮೀ ದೇವಿಯ ಅವತರಣ:- ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತ.

    ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ತಾಣಗಳ ಕುರಿತು:

    ಯುನೆಸ್ಕೋ “ಅಮೂರ್ತ” ಎಂಬ ಪದವನ್ನು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿರುವ ಅಭಿವ್ಯಕ್ತಿಗಳೆಂದು ವ್ಯಾಖ್ಯಾನಿಸುತ್ತದೆ:

      • ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದುಬಂದ ಸಂಪ್ರದಾಯಗಳು.
      • ತಮ್ಮ ಪರಿಸರಕ್ಕೆ ಪ್ರತಿಕ್ರಿಯೆಯಾಗಿ ವಿಕಸನಗೊಂಡ ಸಂಪ್ರದಾಯಗಳು. 
    • ನಮಗೆ ಅಸ್ಮಿತೆ ಮತ್ತು ನಿರಂತರತೆಯ ಪ್ರಜ್ಞೆಯನ್ನು ಒದಗಿಸುವಲ್ಲಿ ಕೊಡುಗೆ ನೀಡಿರುವ ಸಂಪ್ರದಾಯಗಳು. 

    ಯುನೆಸ್ಕೋದ ಅಧಿಕೃತ ದಾಖಲೆಯನ್ವಯ, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ಯು ಈ ಕೆಳಗಿನವುಗಳನ್ನು ಒಳಗೊಂಡಿದೆ: “ಮೌಖಿಕ ಸಂಪ್ರದಾಯಗಳು, ಪ್ರದರ್ಶನ ಕಲೆಗಳು, ಸಾಮಾಜಿಕ ಆಚರಣೆಗಳು, ವಿಧಿವಿಧಾನಗಳು, ಹಬ್ಬದ ಸಂದರ್ಭಗಳು, ಪ್ರಕೃತಿ ಮತ್ತು ವಿಶ್ವಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಆಚರಣೆಗಳು ಅಥವಾ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಉತ್ಪಾದಿಸುವ ಜ್ಞಾನ ಮತ್ತು ಕೌಶಲಗಳು.”

    ಯುನೆಸ್ಕೋ ಪ್ರತಿನಿಧಿ ಪಟ್ಟಿಯಲ್ಲಿರುವ ಭಾರತದ 16 ಅಮೂರ್ತ ಸಾಂಸ್ಕೃತಿಕ ಪರಂಪರೆಗಳು:

    • ದೀಪಾವಳಿ (2025)
    1. ಗುಜರಾತಿನ ಗರ್ಬಾ (2023)
    2. ಕೋಲ್ಕತ್ತಾದ ದುರ್ಗಾ ಪೂಜೆ (2021)
    3. ಕುಂಭ ಮೇಳ (2017)
    4. ನವರೋಜ್ (2016)
    5. ಯೋಗ (2016)
    6. ಪಂಜಾಬ್‌ನ ಜಂಡಿಯಾಲ ಗುರುವಿನ ‘ತಾಥೇರ’ರ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಪಾತ್ರೆ ತಯಾರಿಕೆ ಕಲೆ (2014)
    7. ಮಣಿಪುರದ ಸಂಕೀರ್ತನೆ (2013)
    8. ಲಡಾಖ್‌ನ ಬೌದ್ಧ ಮಂತ್ರ ಪಠಣ: ಜಮ್ಮು ಮತ್ತು ಕಾಶ್ಮೀರದ ಹಿಮಾಲಯದಾಚೆಗಿನ ಲಡಾಖ್ ಪ್ರದೇಶದಲ್ಲಿ ಪವಿತ್ರ ಬೌದ್ಧ ಗ್ರಂಥಗಳ ಪಠಣ (2012)
    9. ಪಶ್ಚಿಮ ಬಂಗಾಳದ ಛೌ ನೃತ್ಯ (2010)
    10. ರಾಜಸ್ಥಾನದ “ಕಾಲ್ಬೆಲಿಯಾ” ಜಾನಪದ ಹಾಡುಗಳು ಮತ್ತು ನೃತ್ಯಗಳು (2010)
    11. ಕೇರಳದ ಮುಡಿಯೆಟ್ಟು, ಧಾರ್ಮಿಕ ರಂಗಭೂಮಿ ಮತ್ತು ನೃತ್ಯ ನಾಟಕ (2010)
    12. ಗರ್ವಾಲ್ ಹಿಮಾಲಯದ ರಮ್ಮಾನ್, ಧಾರ್ಮಿಕ ಹಬ್ಬ ಮತ್ತು ಧಾರ್ಮಿಕ ರಂಗಭೂಮಿ (2009)
    13. ಕೇರಳದ ಕೂಡಿಯಟ್ಟಂ, ಸಂಸ್ಕೃತ ರಂಗಭೂಮಿ (2008)
    14. ವೇದ ಮಂತ್ರ ಪಠಣ ಸಂಪ್ರದಾಯ (2008)
    15. ಉತ್ತರ ಪ್ರದೇಶದ ರಾಮಲೀಲಾ, ರಾಮಾಯಣದ ಸಾಂಪ್ರದಾಯಿಕ ಪ್ರದರ್ಶನ (2008)

    ವಿಶ್ವ ಅಸಮಾನತೆ ವರದಿ, 2026

    ಸಾಮಾನ್ಯ ಅಧ್ಯಯನ- 2/ಸಾಮಾಜಿಕ ವಿಷಯಗಳು; ಸಾಮಾನ್ಯ ಅಧ್ಯಯನ- 3/ಒಳಗೊಳ್ಳುವ ಬೆಳವಣಿಗೆ

    ಇದೀಗ ಸುದ್ದಿಯಲ್ಲಿದೆ:

    • ವಿಶ್ವ ಅಸಮಾನತೆ ಲ್ಯಾಬ್’, ವಿಶ್ವ ಅಸಮಾನತೆ ವರದಿಯ 3ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

    ವಿಶ್ವ ಅಸಮಾನತೆ ವರದಿ, 2026 ರ ಪ್ರಮುಖ ಅಂಶಗಳು:

    • ಸಂಪತ್ತಿನ ಕೇಂದ್ರೀಕರಣ:- ಜಾಗತಿಕ ಜನಸಂಖ್ಯೆಯ ಅತ್ಯಂತ ಶ್ರೀಮಂತ 10% ಜನರು, ವಿಶ್ವದ ಒಟ್ಟು ಸಂಪತ್ತಿನ ಸರಿಸುಮಾರು 75% ರಷ್ಟು ಪಾಲನ್ನು ಹೊಂದಿದ್ದಾರೆ.

    ಭಾರತದ ಕುರಿತ ವರದಿಯಲ್ಲಿರುವ ಪ್ರಮುಖ ಅಂಶಗಳು:

    • ಜಾಗತಿಕವಾಗಿ ಅತಿ ಹೆಚ್ಚು ಅಸಮಾನತೆಯನ್ನು ಹೊಂದಿರುವ ಅತೀ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿ ಭಾರತವನ್ನು ಗುರುತಿಸಲಾಗಿದೆ.
    • ಆದಾಯ:– ಅತಿ ಹೆಚ್ಚು ಆದಾಯ ಗಳಿಸುವ ಅಗ್ರ 10% ರಷ್ಟು ಜನರು ರಾಷ್ಟ್ರೀಯ ಆದಾಯದ 58% ರಷ್ಟನ್ನು ತಮ್ಮದಾಗಿಸಿಕೊಂಡಿದ್ದರೆ, ಕೆಳಸ್ತರದ 50% ಜನರು ಕೇವಲ 15% ರಾಷ್ಟ್ರೀಯ ಆದಾಯವನ್ನು ಮಾತ್ರ ಪಡೆಯುತ್ತಾರೆ.
    • ಸಂಪತ್ತು:- ಭಾರತದ ಒಟ್ಟು ಸಂಪತ್ತಿನ ಪೈಕಿ ಸುಮಾರು 65% ರಷ್ಟು ಪಾಲನ್ನು ಅತ್ಯಂತ ಶ್ರೀಮಂತ 10% ಜನರು ಹೊಂದಿದ್ದಾರೆ; ಕೇವಲ ಅಗ್ರ 1% ರಷ್ಟು ಜನರು ಸುಮಾರು 40% ರಷ್ಟು ಸಂಪತ್ತನ್ನು ಹೊಂದಿದ್ದಾರೆ.
    • ಲಿಂಗ:– ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು ಅತ್ಯಂತ ಕಡಿಮೆಯಿದ್ದು, 15.7% ರ ಮಟ್ಟದಲ್ಲಿಯೇ ನಿಶ್ಚಲವಾಗಿದೆ.

    ಸೌರ ಬಿರುಗಾಳಿಯನ್ನು ಅಧ್ಯಯನ ಮಾಡಲು ಜಾಗತಿಕ ಪ್ರಯತ್ನಕ್ಕೆ ಕೈಜೋಡಿಸಿದ ಆದಿತ್ಯ-L1

    ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ : 

    • ಭಾರತದ ಸೌರ ವೀಕ್ಷಣಾಲಯವಾದ ಆದಿತ್ಯ-L1, ಮೇ 2024ರಲ್ಲಿ ಸಂಭವಿಸಿದ “ಗ್ಯಾನನ್‌ನ ಸ್ಟಾರ್ಮ್ (Gannon’s storm)” ಎಂದು ಕರೆಯಲ್ಪಡುವ ಸೌರ ಬಿರುಗಾಳಿಯ ಅಸಾಮಾನ್ಯ ವರ್ತನೆಯನ್ನು ಬಹಿರಂಗಪಡಿಸಿದೆ.
    • ಈ ಬಿರುಗಾಳಿ ಸೂರ್ಯನಲ್ಲಿ ಸಂಭವಿಸಿದ “ಕೊರೊನಲ್ ಮಾಸ್ ಇಜೆಕ್ಷನ್‌ಗಳು” (Coronal Mass Ejections – CMEs) ಎನ್ನುವ ದೈತ್ಯ ಪ್ರಮಾಣದ ಸ್ಫೋಟಗಳ ಸರಣಿಯಿಂದ ಉಂಟಾಗಿದೆ.

    ‘ಸೌರ ಬಿರುಗಾಳಿ’ಯ ಬಗ್ಗೆ:

    • ಸೌರ ಬಿರುಗಾಳಿಯು ಸೂರ್ಯನ ಮೇಲೆ ಸಂಭವಿಸುವ ‘ಕರೋನಲ್ ಮಾಸ್ ಇಜೆಕ್ಷನ್‌ಗಳು’ (CMEs) ಎಂದು ಕರೆಯಲ್ಪಡುವ ದೈತ್ಯ ಸ್ಫೋಟಗಳ ಸರಣಿಯಿಂದ ಕೂಡಿದೆ.
    • ಒಂದು ಕರೋನಲ್ ಮಾಸ್ ಇಜೆಕ್ಷನ್‌ ಎಂದರೆ ಸೂರ್ಯನಿಂದ ಬಾಹ್ಯಾಕಾಶಕ್ಕೆ ಉಗುಳಲ್ಪಡುವ ಬಿಸಿಯಾದ ಅನಿಲ ಮತ್ತು ಕಾಂತೀಯ ಶಕ್ತಿಯ ಬೃಹತ್ ಗುಳ್ಳೆಯಾಗಿದೆ.
    • ಭೂಮಿಯ ಮೇಲೆ ಬಿರುವ ಪರಿಣಾಮ:- ಈ ಗುಳ್ಳೆಗಳು ಭೂಮಿಗೆ ಅಪ್ಪಳಿಸಿದಾಗ, ಇವು ಭೂಮಿಯ ಕಾಂತೀಯ ಕವಚವನ್ನು ಅಸ್ಥಿರಗೊಳಿಸಬಹುದು. ಇದರಿಂದಾಗಿ ಉಪಗ್ರಹ, ಸಂಪರ್ಕ ವ್ಯವಸ್ಥೆ, ಜಿಪಿಎಸ್ ಹಾಗೂ ವಿದ್ಯುತ್ ಜಾಲಗಳಿಗೆ ಗಂಭೀರ ತೊಂದರೆ ಉಂಟಾಗಬಹುದು.

    ಆದಿತ್ಯ-L1 ಯೋಜನೆಯ ಬಗ್ಗೆ:

    • ವಿಶಿಷ್ಟತೆ: ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಿದೆ. ಇದನ್ನು PSLV-C57 ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತದೆ.
    • ಈ ಸೌರ ಯೋಜನೆಯು ಬಾಹ್ಯಾಕಾಶ ನೌಕೆಯನ್ನು ನೇರವಾಗಿ ಸೂರ್ಯನ ಬಳಿಗೆ ಕಳುಹಿಸುವುದಿಲ್ಲ; ಬದಲಿಗೆ, ಗ್ರಹಣದ ಸಮಯದಲ್ಲೂ ಸೂರ್ಯನನ್ನು ತಡೆರಹಿತವಾಗಿ ವೀಕ್ಷಿಸಲು ಸಾಧ್ಯವಾಗುವಂತಹ ಬಾಹ್ಯಾಕಾಶ ವೀಕ್ಷಣಾಲಯವನ್ನು ಇದು ಸೃಷ್ಟಿಸುತ್ತದೆ.
    • ಭೂಮಿ-ಸೂರ್ಯ ವ್ಯವಸ್ಥೆಯ, ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ‘ಲ್ಯಾಗ್ರೇಂಜ್ ಬಿಂದು 1’ರ (L1) ಸುತ್ತಲಿನ ಹ್ಯಾಲೋ ಕಕ್ಷೆಯಲ್ಲಿ ಈ ಬಾಹ್ಯಾಕಾಶ ನೌಕೆಯನ್ನು ಇರಿಸಲು ಯೋಜಿಸಲಾಗಿದೆ.

    ಯೋಜನೆಯ ಪ್ರಮುಖ ಉದ್ದೇಶಗಳು:

    • ಈ ಯೋಜನೆಯು ಸೂರ್ಯನ ಮೇಲ್ಮೈ ವಾತಾವರಣದ (ವರ್ಣಗೋಳ ಮತ್ತು ಕರೋನಾ) ಚಲನಶೀಲತೆಯ ಅಧ್ಯಯನದ ಮೇಲೆ ಗಮನಹರಿಸುತ್ತದೆ.
    • ಇದು ಬಾಹ್ಯಾಕಾಶ ಹವಾಮಾನಕ್ಕೆ ಕಾರಣವಾಗುವ ಅಂಶಗಳನ್ನು ಗುರುತಿಸುವುದರ ಜೊತೆಗೆ, ಸೌರ ಮಾರುತದ ಮೂಲ, ಸಂಯೋಜನೆ ಮತ್ತು ಚಲನಶೀಲತೆಯನ್ನು ಗುರುತಿಸುತ್ತದೆ.

    ಸೂರ್ಯನಿಗೆ ಸಂಬಂಧಿಸಿದ ಇತರ ಪ್ರಮುಖ ಯೋಜನೆಗಳು:

    • 2018 ರಲ್ಲಿ ಉಡಾವಣೆಯಾದ ನಾಸಾದ (NASA) ‘ಪಾರ್ಕರ್ ಸೋಲಾರ್ ಪ್ರೋಬ್’ ಈಗಾಗಲೇ ಸೂರ್ಯನಿಗೆ ಸಾಕಷ್ಟು ಹತ್ತಿರ ಹೋಗಿದೆ – ಆದರೆ ಅದು ಸೂರ್ಯನಿಂದಾಚೆಗೆ ಹೋಗುವ ಗುರಿಯನ್ನು ಇಟ್ಟುಕೊಂಡಿದೆ..
    • ಸೂರ್ಯನ ಮೇಲ್ಮೈ ಪ್ರಕ್ರಿಯೆಗಳನ್ನು ತನಿಖೆ ಮಾಡಲು ನಾಸಾ ಮತ್ತು ಅಂದಿನ ಪಶ್ಚಿಮ ಜರ್ಮನಿಯ ಬಾಹ್ಯಾಕಾಶ ಸಂಸ್ಥೆಯ ಜಂಟಿ ಯೋಜನೆಯಾದ ‘ಹೆಲಿಯೋಸ್ 2’ ಸೌರ ಪ್ರೋಬ್ ಅನ್ನು 1976 ರಲ್ಲಿ ಉಡಾವಣೆ ಮಾಡಲಾಯಿತು.

    ಜಾಗತಿಕ ಪರಿಸರ ಮುನ್ನೋಟ (Global Environment Outlook)

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಕೀನ್ಯಾದ ನೈರೋಬಿಯಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಸಭೆಯ 7ನೇ ಅಧಿವೇಶನದಲ್ಲಿ, ‘ಜಾಗತಿಕ ಪರಿಸರ ಮುನ್ನೋಟ, 7ನೇ ಆವೃತ್ತಿ: ಎ ಫ್ಯೂಚರ್ ವೀ ಚೂಸ್/ನಾವು ಆರಿಸಿಕೊಳ್ಳುವ ಭವಿಷ್ಯ (GEO-7) ದ ವರದಿಯನ್ನು ಬಿಡುಗಡೆ ಮಾಡಲಾಯಿತು.

    ಜಾಗತಿಕ ಪರಿಸರ ಮುನ್ನೋಟ (GEO) ವರದಿಯ ಬಗ್ಗೆ:

    • ಪ್ರಕಟಿಸಿದವರು:- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP).
    • ಉದ್ದೇಶ:- ಭೂಗ್ರಹದ ಪರಿಸರ ಆರೋಗ್ಯದ ಕುರಿತು ಸಮಗ್ರ ಮೌಲ್ಯಮಾಪನವನ್ನು ಒದಗಿಸುವುದು.
    • ಮಹತ್ವ:– ಸುಸ್ಥಿರ ಅಭಿವೃದ್ಧಿಯೆಡೆಗಿನ ಜಾಗತಿಕ ಕ್ರಮಗಳಿಗೆ ಮಾರ್ಗದರ್ಶನ ನೀಡಲು, ದತ್ತಾಂಶ-ಆಧಾರಿತ ಒಳನೋಟಗಳು ಮತ್ತು ನೀತಿ ಆಯ್ಕೆಗಳನ್ನು ಒದಗಿಸುವ ಮೂಲಕ ವಿಜ್ಞಾನ ಮತ್ತು ನೀತಿಯ ನಡುವಿನ ಅಂತರವನ್ನು ಕಡಿಮೆ ಮಾಡುವುದು.
    • ಇತ್ತೀಚಿನ ಆವೃತ್ತಿ: ಡಿಸೆಂಬರ್ 2025 ರಲ್ಲಿ, “ಎ ಫ್ಯೂಚರ್ ವೀ ಚೂಸ್” (ನಾವು ಆರಿಸಿಕೊಳ್ಳುವ ಭವಿಷ್ಯ) ಎಂಬ ಶೀರ್ಷಿಕೆಯಡಿ GEO ನ 7ನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

    2025 ರ GEO-7 ವರದಿಯ ಪ್ರಮುಖ ಅಂಶಗಳು:

    • ಹವಾಮಾನ ಬದಲಾವಣೆ ಮತ್ತು ನಿರ್ಣಾಯಕ ಹಂತಗಳು: ಜಾಗತಿಕ ತಾಪಮಾನ ಏರಿಕೆಯು ವೇಗಗೊಳ್ಳುತ್ತಿದೆ; ವಿಶ್ವವು ಈಗಾಗಲೇ ಸರಿಸುಮಾರು 1.3°C ನಷ್ಟು ತಾಪಮಾನ ಏರಿಕೆಯನ್ನು ಕಂಡಿದೆ.
    • ಮಾಲಿನ್ಯ ಮತ್ತು ಆರೋಗ್ಯ: ವಾಯು, ಜಲ ಮತ್ತು ಮಣ್ಣಿನ ಮಾಲಿನ್ಯವು ಜಾಗತಿಕವಾಗಿ ಪ್ರತಿ ವರ್ಷ ಸುಮಾರು 90 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ. ಕೇವಲ ವಾಯು ಮಾಲಿನ್ಯವೊಂದೇ ಪ್ರತಿ ವರ್ಷ ಲಕ್ಷಾಂತರ ಅಕಾಲಿಕ ಮರಣಗಳಿಗೆ ಕಾರಣವಾಗುತ್ತಿದೆ.
    • ಜೀವವೈವಿಧ್ಯತೆಯ ನಷ್ಟ ಮತ್ತು ಭೂಮಿಯ ಅವನತಿ: ಸುಮಾರು 10 ಲಕ್ಷ ಪ್ರಭೇದಗಳು ಅಳಿವಿನಂಚಿನಲ್ಲಿವೆ ಮತ್ತು 20-40% ರಷ್ಟು ಭೂಮಿ ಅವನತಿ ಹೊಂದಿದ್ದು, ಇದು 3 ಬಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ.

    ಸ್ವಾಹಿದ್ ದಿವಸ್ (ದಿನ)

    ಸಾಮಾನ್ಯ ಅಧ್ಯಯನ -1/ಇತಿಹಾಸ; ಸಾಮಾನ್ಯ ಅಧ್ಯಯನ-2/ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಸ್ವಾಹಿದ್ ದಿವಸ್’ ಸಂದರ್ಭದಲ್ಲಿ, ಐತಿಹಾಸಿಕ ಅಸ್ಸಾಂ ಚಳವಳಿಯಲ್ಲಿ ಭಾಗವಹಿಸಿದವರ ಧೈರ್ಯವನ್ನು ಸ್ಮರಿಸಿ ಗೌರವ ಸಲ್ಲಿಸಿದರು.

    “ಸ್ವಾಹಿದ್ ದಿನದ” ಬಗ್ಗೆ:

    • ಇದನ್ನು ಪ್ರತಿ ವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ.
    • ಉದ್ದೇಶ:- ಅಸ್ಸಾಂ ಚಳವಳಿಯ ಸಮಯದಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದವರನ್ನು ನೆನಪಿಸಿ ಗೌರವಿಸುವುದು.

    ಅಸ್ಸಾಂ ಚಳವಳಿಯ ಬಗ್ಗೆ:

    • ಇದು ಬಾಂಗ್ಲಾದೇಶದಿಂದ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಅಕ್ರಮ ಒಳನುಸುಳುವಿಕೆಯ ವಿರುದ್ಧ, 1979 ರಲ್ಲಿ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ  ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ ಪರಿಷತ್  ಆರಂಭಿಸಿದ ಸಾಮೂಹಿಕ ಆಂದೋಲನವಾಗಿದೆ.
    • ಈ ಚಳವಳಿಯು 1985 ರಲ್ಲಿ ಐತಿಹಾಸಿಕ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಮುಕ್ತಾಯವಾಯಿತು.
    • ಈ ಒಪ್ಪಂದವು ಅಕ್ರಮ ವಿದೇಶಿಯರ ಪತ್ತೆ ಹಚ್ಚುವಿಕೆ ಮತ್ತು ಗಡಿಪಾರು ಮಾಡುವುದನ್ನು ಖಚಿತಪಡಿಸುತ್ತದೆ; ಜೊತೆಗೆ ಅಸ್ಸಾಮಿ ಅಸ್ಮಿತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಸಾಂವಿಧಾನಿಕ, ಶಾಸನಬದ್ಧ ಮತ್ತು ಆಡಳಿತಾತ್ಮಕ ರಕ್ಷಣೆಗಳನ್ನು ಖಾತರಿಪಡಿಸುತ್ತದೆ.

    ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB)

    ಸಾಮಾನ್ಯ ಅಧ್ಯಯನ -3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB), 2026ನೇ ಆರ್ಥಿಕ ವರ್ಷದ (FY26) ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಶೇ. 6.5 ರಿಂದ ಶೇ. 7.2 ಕ್ಕೆ ಹೆಚ್ಚಿಸಿದೆ.

    ‘ಏಷ್ಯನ್ ಅಭಿವೃದ್ಧಿ ಬ್ಯಾಂಕ್’ ನ ಬಗ್ಗೆ:

    • ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ, 1966 ರಲ್ಲಿ ಸ್ಥಾಪಿತವಾದ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದೆ.
    • ಕೇಂದ್ರ ಕಚೇರಿ:- ಫಿಲಿಪ್ಪೀನ್ಸ್‌ನ ಮನಿಲಾದಲ್ಲಿರುವ ‘ಮಂಡಲುಯಾಂಗ್’ನಲ್ಲಿದೆ.
    • ಸದಸ್ಯತ್ವ:- ಪ್ರಾದೇಶಿಕ (ಏಷ್ಯಾ-ಪೆಸಿಫಿಕ್) ಮತ್ತು ಪ್ರಾದೇಶಿಕೇತರ ದೇಶಗಳೆರಡನ್ನೂ ಒಳಗೊಂಡಿದೆ; ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP) ದ ಸುಮಾರು ಮೂರನೇ ಎರಡರಷ್ಟು ಸದಸ್ಯ ರಾಷ್ಟ್ರಗಳು ಹಾಗೂ ಅಭಿವೃದ್ಧಿ ಹೊಂದಿದ ದಾನಿ ರಾಷ್ಟ್ರಗಳು ಇದರಲ್ಲಿ ಪಾಲ್ಗೊಂಡಿವೆ.
    • ಭಾರತವು 1966 ರಲ್ಲಿ ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗೆ ಸೇರ್ಪಡೆಗೊಂಡಿತು.
    • ಪ್ರಮುಖ ಷೇರುದಾರರು:- ಜಪಾನ್ ಮತ್ತು ಅಮೆರಿಕ (ತಲಾ 15.6%) ಸೇರಿವೆ; ನಂತರದ ಸ್ಥಾನಗಳಲ್ಲಿ ಚೀನಾ (6.4%), ಭಾರತ (6.3%) ಮತ್ತು ಆಸ್ಟ್ರೇಲಿಯಾ (5.8%) ಇವೆ. ಈ ಅಂಕಿಅಂಶಗಳು ಬ್ಯಾಂಕ್‌ನಲ್ಲಿನ ಪ್ರಾದೇಶಿಕ ಮತ್ತು ಪ್ರಾದೇಶಿಕೇತರ ಪಾಲುದಾರಿಕೆಗಳೆರಡನ್ನೂ ಪ್ರತಿಬಿಂಬಿಸುತ್ತವೆ.

    ಗ್ಲೋ ಕ್ಯಾಸ್ 9 (GlowCas9)

    ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಡಿಎನ್‌ಎ ಪರಿಷ್ಕರಿಸುವಾಗ ಬೆಳಕನ್ನು ಹೊರಸೂಸುವ, ಹೊಸದಾಗಿ ವಿನ್ಯಾಸಗೊಳಿಸಲಾದ ‘ಕ್ರಿಸ್ಪರ್ ಕ್ಯಾಸ್ 9’ (CRISPR Cas9) ಕಿಣ್ವದ ಒಂದು ರೂಪಾಂತರವೇ ‘ಗ್ಲೋ ಕ್ಯಾಸ್ 9’ ಆಗಿದೆ. 

    ಗ್ಲೋಕ್ಯಾಸ್9 ನ ಬಗ್ಗೆ: 

    • ಇದನ್ನು ಕೋಲ್ಕತ್ತಾದ ಬೋಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೃಷ್ಟಿಸಲಾದ, ಸ್ವಯಂ-ಬೆಳಗುವ ಅಥವಾ ‘ಜೈವಿಕ ದೀಪ್ತಿ’ ಹೊಂದಿರುವ ‘ಕ್ರಿಸ್ಪರ್ ಕ್ಯಾಸ್9’ ಆಗಿದೆ.
    • ಆಳ ಸಮುದ್ರದ ಸಿಗಡಿ ಪ್ರೋಟೀನ್‌ಗಳಿಂದ ಪಡೆಯಲಾದ ‘ವಿಭಜಿತ ನ್ಯಾನೊ-ಲೂಸಿಫೆರೇಸ್’ ಕಿಣ್ವದೊಂದಿಗೆ ಕ್ಯಾಸ್9 ಅನ್ನು ಸಂಯೋಜಿಸುವ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ.

    ಜೀನ್ ಪರಿಷ್ಕರಿಸುವ (ಎಡಿಟಿಂಗ್) ತಂತ್ರಜ್ಞಾನದ ಬಗ್ಗೆ:

    • ಇದು ಜೀವಿಯೊಂದರ ಜೀನೋಮ್‌ನಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಆನುವಂಶಿಕ ವಸ್ತುವನ್ನು ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವ ತಂತ್ರಜ್ಞಾನವಾಗಿದೆ; ಈ ಮೂಲಕ ಆ ಜೀವಿಯ ಡಿಎನ್‌ಎ ಬದಲಾವಣೆಗೆ ಅವಕಾಶ ನೀಡುತ್ತದೆ.

    ಕ್ರಿಸ್ಪರ್ ಕ್ಯಾಸ್9  ತಂತ್ರಜ್ಞಾನದ ಬಗ್ಗೆ:

    • ಸಂಕ್ಷಿಪ್ತ ರೂಪ:- CRISPR- ಕ್ಲಸ್ಟರ್ಡ್ ರೆಗ್ಯುಲರ್ಲಿ ಇಂಟರ್‌ಸ್ಪೇಸ್ಡ್ ಶಾರ್ಟ್ ಪ್ಯಾಲಿಂಡ್ರೋಮಿಕ್ ರಿಪೀಟ್ಸ್.
    • ಮಹತ್ವ:- CRISPR ಎಂಬ ಜೀನ್ ಪರಿಷ್ಕರಿಸುವ ತಂತ್ರದ ಬಳಕೆಯೊಂದಿಗೆ, ಸಂಶೋಧಕರು ಜೀವಿಗಳ ಡಿಎನ್‌ಎ ಅನ್ನು ಮಾರ್ಪಡಿಸಬಹುದು.
    • ಕಾರ್ಯವಿಧಾನ:– ಕ್ಯಾಸ್ 9  ಎಂಬ ಕಿಣ್ವವು ‘ಆಣ್ವಿಕ ಕತ್ತರಿ’ಯಂತೆ ಕಾರ್ಯನಿರ್ವಹಿಸುತ್ತದೆ. ನಿರ್ದಿಷ್ಟ ಡಿಎನ್‌ಎ ಅನುಕ್ರಮಕ್ಕೆ ನಿಖರವಾಗಿ ಹೊಂದಿಕೆಯಾಗುವಂತೆ ಸೃಷ್ಟಿಸಲಾದ ಆರ್‌ಎನ್‌ಎ ಅಣುಗಳು ಇದಕ್ಕೆ ಮಾರ್ಗದರ್ಶನ ನೀಡುತ್ತವೆ.
    • ಜಿಇ (ಜೀನೋಮ್ ಪರಿಷ್ಕರಿಸುವ):– ಇದು ಯಾವುದೇ ಬಾಹ್ಯ (ಅನ್ಯ) ಜೀನ್‌ಗಳನ್ನು ಪರಿಚಯಿಸದೆಯೇ, ಜೀವಿಯೊಂದರ ಜೀನೋಮ್‌ನೊಳಗಿನ ನಿರ್ದಿಷ್ಟ ಜೀನ್‌ಗಳ ನಿಖರವಾದ ಮಾರ್ಪಾಡನ್ನು ಒಳಗೊಂಡಿರುತ್ತದೆ; ಇದು ಉದ್ದೇಶಿತ ಆನುವಂಶಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ.
    • ಜಿಎಂ (ತಳೀಯವಾಗಿ ಮಾರ್ಪಡಿಸಿದ/ಕುಲಾಂತರಿ):- ನಿರ್ದಿಷ್ಟ ಗುಣಲಕ್ಷಣಗಳು ಅಥವಾ ವೈಶಿಷ್ಟ್ಯಗಳನ್ನು ನೀಡಲು, ಸಂಬಂಧವಿಲ್ಲದ ಜೀವಿಗಳಿಂದ ಅನ್ಯ ಜೀನ್‌ಗಳನ್ನು ಜೀವಿಯೊಂದರ ಜೀನೋಮ್‌ಗೆ ಸೇರಿಸುವುದನ್ನು ಇದು ಒಳಗೊಂಡಿರುತ್ತದೆ.

    ನಿಯಂತ್ರಕ ಸಂಸ್ಥೆಗಳು:

    • ಜಿಇಎಸಿ (GEAC- ಅನುವಂಶಿಕ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ): ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ನಿಯಂತ್ರಕ ಸಂಸ್ಥೆಯಾಗಿದೆ. ಕುಲಾಂತರಿ ಜೀವಿಗಳನ್ನು ಮೌಲ್ಯಮಾಪನ ಮಾಡುವ ಮತ್ತು ಅನುಮೋದಿಸುವ ಜವಾಬ್ದಾರಿಯನ್ನು ಜಿಇಎಸಿ ಹೊಂದಿದೆ.
    • ಜೈವಿಕ ಸುರಕ್ಷತೆಗೆ ಕಾರ್ಟಜೆನಾ ಶಿಷ್ಟಾಚಾರ (CPB): ಜೈವಿಕ ವೈವಿಧ್ಯತೆಯ ಸಮಾವೇಶದ (CBD) ಅಡಿಯಲ್ಲಿ, ಜೀವವೈವಿಧ್ಯದ ಮೇಲೆ ಪರಿಣಾಮ ಬೀರಬಹುದಾದ ಕುಲಾಂತರಿ ಜೀವಿಗಳ ಸುರಕ್ಷಿತ ನಿರ್ವಹಣೆಯನ್ನು ಇದು ಖಚಿತಪಡಿಸುತ್ತದೆ.

    CITES ಪಕ್ಷಗಳ ಸಮ್ಮೇಳನ (CoP20)

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • “ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶದ” (CITES) ಪಕ್ಷಗಳ ಸಮ್ಮೇಳನದ 20ನೇ ಸಭೆಯು (CoP20) ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ಮುಕ್ತಾಯಗೊಂಡಿತು. ಇದು ಈ ಸಮಾವೇಶದ 50ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

    CITES ನ ಬಗ್ಗೆ:

    • ಪೂರ್ಣ ರೂಪ:- CITES- ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ.
    • 1963 ರಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟ (IUCN) ದ ಸಭೆಯಲ್ಲಿ CITES ಪರಿಕಲ್ಪನೆಯನ್ನು ರೂಪಿಸಲಾಯಿತು.
    • ಸ್ಥಾಪನೆ:- ಇದು 1975 ರಲ್ಲಿ ಜಾರಿಗೆ ಬಂದಿತು ಮತ್ತು 183 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
    • ಕೇಂದ್ರ ಕಚೇರಿ:- ಜಿನೀವಾ (ಸ್ವಿಟ್ಜರ್ಲೆಂಡ್).
    • ಆಡಳಿತ ನಿರ್ವಹಣೆ:- ವಿಶ್ವಸಂಸ್ಥೆಯು ತನ್ನ ‘ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ’ (UNEP) ವಿಭಾಗದ ಅಡಿಯಲ್ಲಿ ಇದರ ಆಡಳಿತವನ್ನು ನಿರ್ವಹಿಸುತ್ತದೆ.
    • CITES ಒಪ್ಪಂದವು ಪಕ್ಷಗಳಿಗೆ (ಸದಸ್ಯ ರಾಷ್ಟ್ರಗಳಿಗೆ) ಕಾನೂನುಬದ್ಧವಾಗಿದೆ, ಆದರೆ ಇದು ರಾಷ್ಟ್ರೀಯ ಕಾನೂನುಗಳ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ.

    CITES ಒಳಗೊಂಡಿರುವ ಅನುಬಂಧಗಳು:

    • ಅನುಬಂಧ 1:- ಇದು ಅಳಿವಿನಂಚಿನಲ್ಲಿರುವ ಮತ್ತು ವ್ಯಾಪಾರದಿಂದ ಪ್ರಭಾವಿತವಾಗಿರುವ ಅಥವಾ ಪ್ರಭಾವಿತವಾಗಬಹುದಾದ ಪ್ರಭೇದಗಳನ್ನು ಪಟ್ಟಿ ಮಾಡುತ್ತದೆ.
    • ಅನುಬಂಧ 2:- ಅಳಿವಿನಂಚಿನಲ್ಲಿಲ್ಲದಿದ್ದರೂ, ಅವುಗಳ ಉಳಿವಿಗಾಗಿ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಾದ ಅಗತ್ಯವಿರುವ ಪ್ರಭೇದಗಳನ್ನು ಈ ಪಟ್ಟಿ ಒಳಗೊಂಡಿದೆ (ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ತಡೆಯಲು).
    • ಅನುಬಂಧ 3:- ಕನಿಷ್ಠ ಒಂದು ದೇಶದಲ್ಲಿ ಸಂರಕ್ಷಿಸಲ್ಪಟ್ಟಿರುವ ಮತ್ತು ಆ ಪ್ರಭೇದಗಳ ವ್ಯಾಪಾರವನ್ನು ನಿಯಂತ್ರಿಸಲು ಇತರೆ CITES ಪಕ್ಷಗಳ (ರಾಷ್ಟ್ರಗಳ) ನೆರವು ಕೋರಲಾಗಿರುವ ಪ್ರಭೇದಗಳನ್ನು ಇದು ಒಳಗೊಂಡಿದೆ.

    ಗ್ರೇಟ್ ಬ್ಯಾರಿಯರ್ ರೀಫ್ (ಹವಳದ ದಿಬ್ಬ)

    ಸಾಮಾನ್ಯ ಅಧ್ಯಯನ -3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ತೀವ್ರ ತಾಪಮಾನದ ಒತ್ತಡ ಮತ್ತು ಅಪರೂಪದ ಹವಳದ ಕಾಯಿಲೆಯ ಸಂಯೋಜನೆಯು ಗ್ರೇಟ್ ಬ್ಯಾರಿಯರ್ ರೀಫ್‌ನ ಒಂದು ತಾಣದಲ್ಲಿ 75% ರಷ್ಟು ‘ಗೊನಿಯೊಪೊರಾ’ ಹವಳದ ಸಮುದಾಯಗಳನ್ನು ನಾಶಪಡಿಸಿದೆ.

    ಹವಳದ ದಿಬ್ಬಗಳ ಬಗ್ಗೆ:

    • ಹವಳದ ದಿಬ್ಬಗಳು ಭೂಮಿಯ ಮೇಲಿನ ಅತ್ಯಂತ ಜೈವಿಕ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಾಗಿವೆ. ರಚನೆ ಮತ್ತು ಸಹಜೀವನದ ಸಂಬಂಧ – (ಕೋರಲ್  ಪಾಲಿಪ್ಸ್ + ಝೂಕ್ಸಾಂಥೆಲೆ).
    • ಹವಳದ ದಿಬ್ಬಗಳನ್ನು ನಿರ್ಮಿಸಲು ಪ್ರಾಥಮಿಕವಾಗಿ ಕಾರಣವಾಗುವ ಪ್ರಾಣಿಗಳಾದ ‘ಕೋರಲ್ ಪಾಲಿಪ್ಸ್’ , ತಮ್ಮ ಅಂಗಾಂಶಗಳಲ್ಲಿ ವಾಸಿಸುವ ‘ಝೂಕ್ಸಾಂಥೆಲೆ’ ಎಂಬ ದ್ಯುತಿಸಂಶ್ಲೇಷಕ ಪಾಚಿಗಳೊಂದಿಗೆ ಸಹಜೀವನದ ಸಂಬಂಧವನ್ನು ಬೆಳೆಸಿಕೊಂಡಾಗ ಇವು ರೂಪುಗೊಳ್ಳುತ್ತವೆ.
    • ರಚನೆ:- ಮುಕ್ತವಾಗಿ ಈಜುವ ಹವಳದ ಲಾರ್ವಾಗಳು, ದ್ವೀಪಗಳು ಅಥವಾ ಖಂಡಗಳ ಅಂಚುಗಳಲ್ಲಿರುವ ಮುಳುಗಿದ ಬಂಡೆಗಳಿಗೆ ಅಥವಾ ಇತರ ಗಟ್ಟಿಯಾದ ಮೇಲ್ಮೈಗಳಿಗೆ ಅಂಟಿಕೊಂಡಾಗ ಹವಳದ ದಿಬ್ಬಗಳು ರಚನೆಯಾಗಲು ಪ್ರಾರಂಭಿಸುತ್ತವೆ.
    • ಹವಳವು ಪಾಚಿಗೆ ಸಂರಕ್ಷಿತ ವಾತಾವರಣವನ್ನು ಮತ್ತು ದ್ಯುತಿಸಂಶ್ಲೇಷಣೆಗೆ ಅಗತ್ಯವಿರುವ ಸಂಯುಕ್ತಗಳನ್ನು ಒದಗಿಸುತ್ತದೆ.
    • ಇದರ ಪ್ರತಿಯಾಗಿ, ಪಾಚಿಯು ಹವಳಗಳ ಆಹಾರಕ್ಕಾಗಿ ಬಳಸುವ ಕಾರ್ಬೋಹೈಡ್ರೇಟ್‌ಗಳನ್ನು ಹಾಗೂ ಆಮ್ಲಜನಕವನ್ನು ಉತ್ಪಾದಿಸುತ್ತದೆ. ತ್ಯಾಜ್ಯವನ್ನು ಹೊರಹಾಕಲು ಸಹ ಪಾಚಿಯು ಹವಳಕ್ಕೆ ಸಹಾಯ ಮಾಡುತ್ತದೆ.

    ಹವಳದ ದಿಬ್ಬಗಳ ರಚನೆಗೆ ಅನುಕೂಲಕರ ಪರಿಸ್ಥಿತಿಗಳು:

      • ಕನಿಷ್ಠ 20 ಡಿಗ್ರಿ ತಾಪಮಾನವಿರುವ ಬೆಚ್ಚಗಿನ ಉಷ್ಣವಲಯದ ಸಾಗರಗಳು (30 ಡಿಗ್ರಿ ಉತ್ತರ ಮತ್ತು 25 ಡಿಗ್ರಿ ದಕ್ಷಿಣ ಅಕ್ಷಾಂಶಗಳು).
    • ಹೂಳು ರಹಿತವಾದ ಸಾಗರದ ನೀರು.
    • ಸ್ವಚ್ಛ ಹಾಗೂ ಪಾರದರ್ಶಕ ಸಾಗರಗಳ ನೀರಿನ ಭಾಗಗಳು (ಸೂರ್ಯನ ಬೆಳಕು ಬೀಳುವಂತಿರಬೇಕು).
    • ತುಲನಾತ್ಮಕವಾಗಿ ಕಡಿಮೆ ಲವಣಾಂಶವಿರುವ ಸಾಗರದ ನೀರು.

    ಹವಳದ ದಿಬ್ಬಗಳ ರಚನೆಯ ವಿಧಗಳು:

    • ಅಂಚಿನ ದಿಬ್ಬಗಳು:– ಇವು ಅತ್ಯಂತ ಸಾಮಾನ್ಯವಾಗಿವೆ; ಇವು ತೀರದಿಂದ ನೇರವಾಗಿ ಸಮುದ್ರದ ಕಡೆಗೆ ಚಾಚಿಕೊಂಡಿದ್ದು, ತೀರದ ಉದ್ದಕ್ಕೂ ಮತ್ತು ದ್ವೀಪಗಳ ಸುತ್ತಲೂ ಗಡಿಗಳನ್ನು ರೂಪಿಸುತ್ತವೆ.
    • ತಡೆಗೋಡೆ ದಿಬ್ಬಗಳು:- ಇವು ತೀರದ ಗಡಿಗಳಲ್ಲಿ ಬೆಳೆಯುತ್ತವೆ, ಆದರೆ ಹೆಚ್ಚಿನ ದೂರದಲ್ಲಿರುತ್ತವೆ. ಇವು ತೆರೆದ, ಸಾಮಾನ್ಯವಾಗಿ ಆಳವಾದ ನೀರಿನ ಲಗೂನ್‌ನಿಂದ ತಮ್ಮ ಪಕ್ಕದ ಭೂಭಾಗದಿಂದ ಬೇರ್ಪಟ್ಟರುತ್ತವೆ.
    • ಹವಳದ ದ್ವೀಪ (ಅಟಾಲ್): ಜ್ವಾಲಾಮುಖಿ ದ್ವೀಪದ ಸುತ್ತಲೂ ರೂಪುಗೊಂಡ ಅಂಚಿನ ದಿಬ್ಬವು ಸಮುದ್ರ ಮಟ್ಟಕ್ಕಿಂತ ಸಂಪೂರ್ಣವಾಗಿ ಕೆಳಗೆ ಕುಸಿದಾಗ, ಹವಳವು ಮೇಲ್ಮುಖವಾಗಿ ಬೆಳೆಯುವುದನ್ನು ಮುಂದುವರೆಸಿದರೆ, ಒಂದು ಹವಳದ ದ್ವೀಪ (ಅಟಾಲ್) ರಚನೆಯಾಗುತ್ತದೆ. ಅಟಾಲ್‌ಗಳು ಸಾಮಾನ್ಯವಾಗಿ ವೃತ್ತಾಕಾರ ಅಥವಾ ಅಂಡಾಕಾರದಲ್ಲಿದ್ದು, ಮಧ್ಯದಲ್ಲಿ ಲಗೂನ್ ಅನ್ನು ಹೊಂದಿರುತ್ತವೆ.

    ಭಾರತದಲ್ಲಿ ಹಂಚಿಕೆ:

    • ಗುಜರಾತಿನ ಕಚ್ ಖಾರಿ
    • ಭಾರತದ ಪಶ್ಚಿಮ ಕರಾವಳಿ
    • ಲಕ್ಷದ್ವೀಪ
    • ತಮಿಳುನಾಡಿನ ಮನ್ನಾರ್ ಖಾರಿ
    • ಪಾಕ್ ಕೊಲ್ಲಿ 
    • ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ

    ಅಪಾಯಗಳು:

    • ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳು, ಮಿತಿಮೀರಿದ ಮೀನುಗಾರಿಕೆ, ಅಜಾಗರೂಕ ಪ್ರವಾಸೋದ್ಯಮ, ಮಾಲಿನ್ಯ, ಹೂಳು ತುಂಬುವಿಕೆ, ಹವಳದ ಗಣಿಗಾರಿಕೆ, ಹವಾಮಾನ ಬದಲಾವಣೆ.

    ಹವಳದ  ವಿವರ್ಣವಾಗುವಿಕೆ/ವರ್ಣನಾಶನ (ಕೋರಲ್ ಬ್ಲೀಚಿಂಗ್):

    • ತಾಪಮಾನ, ಬೆಳಕು ಅಥವಾ ಪೋಷಕಾಂಶಗಳಂತಹ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದ ಹವಳಗಳು ಒತ್ತಡವನ್ನು ಎದುರಿಸಿದಾಗ, ಅವು ತಮ್ಮ ಅಂಗಾಂಶಗಳಲ್ಲಿ ವಾಸಿಸುವ ಸಹಜೀವನದ ಪಾಚಿಯಾದ ‘ಝೂಕ್ಸಾಂಥೆಲೆ’ಯನ್ನು ಹೊರಹಾಕುತ್ತವೆ. ಇದರಿಂದಾಗಿ ಅವು ಸಂಪೂರ್ಣವಾಗಿ ಬಿಳಿಯಾಗಿ ಬದಲಾಗುತ್ತವೆ. ಈ ವಿದ್ಯಮಾನವನ್ನು ‘ಹವಳದ ವಿವರ್ಣವಾಗುವಿಕೆ/ಬ್ಲೀಚಿಂಗ್’ ಎಂದು ಕರೆಯಲಾಗುತ್ತದೆ.

    ಹವಳದ ವಿವರ್ಣವಾಗುವಿಕೆಗೆ ಕಾರಣಗಳು:

    • ಸಮುದ್ರದ ತಾಪಮಾನದಲ್ಲಿ ಏರಿಕೆ
    • ಸಾಗರದ ಆಮ್ಲೀಕರಣ
    • ಸೌರ ವಿಕಿರಣ ಮತ್ತು ನೇರಳಾತೀತ ವಿಕಿರಣ
    • ಸಾಂಕ್ರಾಮಿಕ ರೋಗಗಳು
    • ರಾಸಾಯನಿಕ ಮಾಲಿನ್ಯ
    • ಹೆಚ್ಚಿದ ಹೂಳು ತುಂಬುವಿಕೆ
    • ಬೆಳಕಿನ ಕಡಿಮೆ ಲಭ್ಯತೆ (ಕದಡಿದ ಸ್ಥಿತಿ)
    • ಮಾನವ ಪ್ರೇರಿತ ಅಪಾಯಗಳು

    ಪಶ್ಚಿಮದ ಟ್ರಾಗೋಪನ್ (Western Tragopan)

    ಸಾಮಾನ್ಯ ಅಧ್ಯಯನ- 3/ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿನ ಅಧ್ಯಯನಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ‘ಪಶ್ಚಿಮ ಟ್ರಾಗೋಪನ್’ ಪಕ್ಷಿಗೆ ಸೂಕ್ತವಾದ ಆವಾಸಸ್ಥಾನಗಳಿರುವುದನ್ನು ದೃಢಪಡಿಸಿವೆ; ಆದರೆ ಮಾನವ ಅಡಚಣೆ ಮತ್ತು ಆವಾಸಸ್ಥಾನಗಳ ವಿಘಟನೆಯು ಈ ಪಕ್ಷಿಯ ಉಳಿವಿಗೆ ಬಲವಾದ ಅಪಾಯವನ್ನು ಒಡ್ದುತ್ತಿದೆ. 

    ಪಶ್ಚಿಮ ಟ್ರಾಗೋಪನ್ ಪಕ್ಷಿಯ ಬಗ್ಗೆ:

    • ಪಶ್ಚಿಮ ಟ್ರಾಗೋಪನ್, ಭಾರತದ ಅತ್ಯಂತ ಅಪರೂಪದ ಬಣ್ಣದ ಕಾಡುಕೋಳಿ ಜಾತಿ (ಫೆಸೆಂಟ್‌) ಗಳಲ್ಲಿ  ಒಂದಾಗಿದೆ ಮತ್ತು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿದೆ.
    • ಇದು ಪ್ರಸ್ತುತ ಪಶ್ಚಿಮ ಹಿಮಾಲಯದಾದ್ಯಂತ ಸಣ್ಣ ಪ್ರಮಾಣದಲ್ಲಿ ವಿಘಟಿತ ತಾಣಗಳಲ್ಲಿ ಮಾತ್ರ ಉಳಿದುಕೊಂಡಿದೆ.
    • ಕೇವಲ 3,000 ರಿಂದ 9,500 ರಷ್ಟು ಪ್ರೌಢ ಹಂತದ ಪಕ್ಷಿಗಳು ಮಾತ್ರ ಉಳಿದಿವೆ ಎಂದು ಐಯುಸಿಎನ್ ಸಂಸ್ಥೆ ಅಂದಾಜಿಸಿದೆ.
    • ಅಪಾಯಗಳು: ಆವಾಸಸ್ಥಾನದ ನಾಶ, ಬೇಟೆ ಮತ್ತು ಇತರ ಮಾನವಜನ್ಯ ಕಾರಣಗಳು.
    • IUCN ಕೆಂಪು ಪಟ್ಟಿಯಲ್ಲಿ:- ‘ದುರ್ಬಲ’ (VU)
    • ಸಂರಕ್ಷಣಾ ಪ್ರಯತ್ನಗಳು:- ಶಿಮ್ಲಾದಲ್ಲಿರುವ ‘ಸರಾಹನ್ ಫೆಸಂಟ್ರಿ’ಯಲ್ಲಿ ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಟ್ರಾಗೋಪನ್‌ನ ‘ಬಂಧಿತ ಸಂತಾನೋತ್ಪತ್ತಿ’ ಯಶಸ್ವಿಯಾಗಿದೆ.
  • “ನಾರ್ಕೋ ಪರೀಕ್ಷೆ” | ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆ | ಕೆಂಪು ಕಾಲುಳ್ಳ ಡೌಕ್ ಕೋತಿಗಳು (Red-Shanked Douc Monkeys) | ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆ | ಮೊದಲ ಸ್ವದೇಶಿ ಮುಳುಗುಗಾರರ (ಡೈವಿಂಗ್) ಬೆಂಬಲ ನೌಕೆ (DSC A20)

    “ನಾರ್ಕೋ ಪರೀಕ್ಷೆ”

    ಸಾಮಾನ್ಯ ಅಧ್ಯಯನ-2/ಆಡಳಿತ; ಸಾಮಾನ್ಯ ಅಧ್ಯಯನ-3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಬಲವಂತದ ಅಥವಾ ಅನೈಚ್ಛಿಕ ನಾರ್ಕೋ ಪರೀಕ್ಷೆಗಳು ಅಸಾಂವಿಧಾನಿಕ ಮತ್ತು ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.

    ನಾರ್ಕೋ ಪರೀಕ್ಷೆಯ ಬಗ್ಗೆ:

    • ನಾರ್ಕೋ ಪರೀಕ್ಷೆಯು ತನಿಖೆಯ ಒಂದು ಪ್ರಕ್ರಿಯೆಯಾಗಿದ್ದು, ಇದರಲ್ಲಿ ಪರೀಕ್ಷೆಗೆ ಒಳಗಾಗುವ ಆರೋಪಿಯು ಮುಚ್ಚಿಟ್ಟಿರುವ ಸತ್ಯಗಳನ್ನು ವ್ಯಕ್ತಪಡಿಸುವನೆಂದು ನಿರೀಕ್ಷಿಸಲಾಗುತ್ತದೆ.
    • ಈ ಪರೀಕ್ಷೆಯಲ್ಲಿ, ನಿರ್ದಿಷ್ಟ ವರ್ಗದ ವಸ್ತುಗಳನ್ನು ನೀಡುವ ಮೂಲಕ ಆರೋಪಿಯನ್ನು ಅರೆ ಪ್ರಜ್ಞಾವಸ್ಥೆಗೆ ತಳ್ಳಲಾಗುತ್ತದೆ. ಉದಾಹರಣೆಗೆ – ಸೋಡಿಯಂ ಪೆಂಟೊಥಾಲ್. ಇದು ವ್ಯಕ್ತಿಯ ಪ್ರತಿಬಂಧಕಗಳು ಮತ್ತು ತಾರ್ಕಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
    • ಇದು ಪಾಲಿಗ್ರಾಫ್‌ಗಳು ಅಥವಾ ಬ್ರೈನ್ ಮ್ಯಾಪಿಂಗ್‌ನಂತೆಯೇ ಅಹಿಂಸಾತ್ಮಕ ವಿಧಾನವಾಗಿದೆ.

    ನಾರ್ಕೋ ಪರೀಕ್ಷೆಯ ಕಾನೂನುಬದ್ಧತೆಯ ಬಗ್ಗೆ:

    • ಸೆಲ್ವಿ ಮಾರ್ಗಸೂಚಿಗಳು:ಮುಕ್ತ ಒಪ್ಪಿಗೆಯಿಲ್ಲದೆ ನಡೆಸಿದ ಯಾವುದೇ ಪರೀಕ್ಷೆಯು ಅಸಾಂವಿಧಾನಿಕ ಮತ್ತು ಅದರ ಫಲಿತಾಂಶಗಳನ್ನು ಸಾಕ್ಷಿಯಾಗಿ ಬಳಸಲಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
    • ವಿಧಿ 20:- ಇದು ಪೂರ್ವಾನ್ವಯವಾಗುವ ಕಾನೂನುಗಳು, ಒಂದೇ ಅಪರಾಧಕ್ಕೆ ಎರಡು ಬಾರಿ ಶಿಕ್ಷೆ (ಡಬಲ್ ಜಿಯೋಪಾರ್ಡಿ) ಮತ್ತು ತನ್ನ ವಿರುದ್ಧವೇ ಸಾಕ್ಷಿ ನುಡಿಯುವಂತೆ ಒತ್ತಾಯಿಸುವುದರ ವಿರುದ್ಧ ರಕ್ಷಣೆ ನೀಡುತ್ತದೆ.
    • ವಿಧಿ 21:– ನಾರ್ಕೋ ಪರೀಕ್ಷೆಯು ಸಂವಿಧಾನದ ವಿಧಿ 21 ರ ಅಡಿಯಲ್ಲಿನ “ಗೌಪ್ಯತೆಯ ಹಕ್ಕ”ನ್ನೂ ಉಲ್ಲಂಘಿಸುತ್ತದೆ.
    • ವಿಧಿ 14 ಮತ್ತು 19:- ಇವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುತ್ತವೆ.
    • ಮನೋಜ್ ಕುಮಾರ್ ಸೈನಿ v/s ಮಧ್ಯಪ್ರದೇಶ ರಾಜ್ಯ (2023) ಮತ್ತು ವಿನೋಭಾಯಿ v/s ಕೇರಳ ರಾಜ್ಯ (2025):- ನಾರ್ಕೋ ಪರೀಕ್ಷೆಯ ಫಲಿತಾಂಶಗಳು ಮಾತ್ರವೇ ತಪ್ಪಿತಸ್ಥರೆಂದು ಸಾಬೀತುಪಡಿಸುವುದಿಲ್ಲ ಮತ್ತು ಇತರ ಸಾಕ್ಷ್ಯಾಧಾರಗಳೊಂದಿಗೆ ಅದನ್ನು ದೃಢೀಕರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

    ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆ

    ಸಾಮಾನ್ಯ ಅಧ್ಯಯನ-3/ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಭಾರತವು ವಾರಣಾಸಿಯಲ್ಲಿ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾದ ತನ್ನ ಮೊದಲ ಜಲಜನಕ (ಹೈಡ್ರೋಜನ್) ಇಂಧನ ಕೋಶ ಪ್ರಯಾಣಿಕ ನೌಕೆಯನ್ನು ಲೋಕಾರ್ಪಣೆ ಮಾಡಿದೆ. ಇದು ಹಸಿರು ಕಡಲ ಸಾರಿಗೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

    ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆಯ ಬಗ್ಗೆ:

    • ನಿರ್ಮಾಣ ಮತ್ತು ಒಡೆತನ:- ಇದನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದು, ಇದರ ಒಡೆತನವನ್ನು ‘ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ’ವು ಹೊಂದಿದೆ.
    • ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ (ಪ್ರೋಟಾನ್ ವಿನಿಮಯ ಪೊರೆ) ತಂತ್ರಜ್ಞಾನವನ್ನು ಆಧರಿಸಿದ ಜಲಜನಕ ಇಂಧನ ಕೋಶ ವ್ಯವಸ್ಥೆಗಳು, ಭಾರತದ ಶುದ್ಧ ಇಂಧನ ಮತ್ತು ಹಸಿರು ಚಲನಶೀಲತೆಯ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
    • ಕಾರ್ಯವಿಧಾನ: ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ ಫ್ಯೂಯಲ್ ಸೆಲ್ (PEMFC), ದಹನಕ್ರಿಯೆಯಿಲ್ಲದೆ ಜಲಜನಕ ಮತ್ತು ಆಮ್ಲಜನಕದ ನಡುವಿನ ವಿದ್ಯುದ್ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಇದು ಇದನ್ನು ಒಂದು ಶುದ್ಧ ಮತ್ತು ಪರಿಣಾಮಕಾರಿ ಶಕ್ತಿಯ ಮೂಲವನ್ನಾಗಿ ಮಾಡುತ್ತದೆ.

    ಮಹತ್ವ:

    • ಈ ಚಾಲನೆಯು 2070 ರ ವೇಳೆಗೆ ಭಾರತದ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಯನ್ನು ಬೆಂಬಲಿಸುತ್ತದೆ. ಜೊತೆಗೆ, ಶುದ್ಧ ಮತ್ತು ಸುಸ್ಥಿರ ಜಲಮಾರ್ಗಗಳನ್ನು ಉತ್ತೇಜಿಸುವ ‘ಮ್ಯಾರಿಟೈಮ್ ಇಂಡಿಯಾ ವಿಷನ್ 2030’ ಹಾಗೂ ‘ಮ್ಯಾರಿಟೈಮ್ ಅಮೃತ್ ಕಾಲ್ ವಿಷನ್ 2047’ ನೊಂದಿಗೆ ಇದು ಹೊಂದಿಕೆಯಾಗುತ್ತದೆ.
    • ಈ ನೌಕೆಯು ಶಬ್ದರಹಿತ ಮತ್ತು ಮಾಲಿನ್ಯರಹಿತ ಪ್ರಯಾಣವನ್ನು ಒದಗಿಸುತ್ತದೆ, ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಂಪೂರ್ಣ ದೇಶೀಯ ಹಸಿರು ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ.

    ಕೆಂಪು ಕಾಲುಳ್ಳ ಡೌಕ್ ಕೋತಿಗಳು (Red-Shanked Douc Monkeys)

    ಸಾಮಾನ್ಯ ಅಧ್ಯಯನ-3/ ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು “ಕೆಂಪು ಕಾಲುಳ್ಳ ಡೌಕ್ ಕೋತಿ”ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.

    ಕೆಂಪು ಕಾಲುಳ್ಳ ಡೌಕ್ ಕೋತಿಗಳ (ಪೈಗಾಥ್ರಿಕ್ಸ್ ನೆಮಿಯಸ್) ಬಗ್ಗೆ:

    • ಇದು ತನ್ನ ಅತ್ಯಂತ ಆಕರ್ಷಕ ಮತ್ತು ವರ್ಣರಂಜಿತವಾದ ದೇಹ ರಚನೆಯುಳ್ಳ ‘ಹಳೆಯ ಪ್ರಪಂಚದ ಕೋತಿಗಳ’ ಪ್ರಭೇದವಾಗಿದ್ದು, ಇವುಗಳನ್ನು ಸಾಮಾನ್ಯವಾಗಿ “ಸಸ್ತನಿಗಳ ರಾಣಿ” ಎಂದು ಕರೆಯಲಾಗುತ್ತದೆ.
    • ಹಂಚಿಕೆ:- ಈ ಕೋತಿಗಳು ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾದ ಕಾಡುಗಳಿಗೆ ಸ್ಥಳೀಯವಾಗಿರುವ, ಮರಗಳಲ್ಲಿ ವಾಸಿಸುವ ಮತ್ತು ಹಗಲಿನಲ್ಲಿ ಸಕ್ರಿಯವಾಗಿರುವ ಸಸ್ತನಿಗಳಾಗಿವೆ.
    • ಆವಾಸಸ್ಥಾನ:- ಇವು ಸಮುದ್ರಮಟ್ಟದಿಂದ ಸುಮಾರು 2,000 ಮೀಟರ್ (6,600 ಅಡಿ) ಎತ್ತರದವರೆಗಿನ ನಿತ್ಯಹರಿದ್ವರ್ಣ ಮತ್ತು ಅರೆ-ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಭಾಗದಲ್ಲಿ ವಾಸಿಸುತ್ತವೆ.
    • ದೈಹಿಕ ನೋಟ:- ಬೂದು ಬಣ್ಣದ ದೇಹ, ಗಾಢವಾದ ಕಡುಗೆಂಪು- ಕೆಂಪು ಬಣ್ಣದ ಕೆಳಕಾಲುಗಳು, ಬಿಳಿ ಮುಂಗೈಗಳು ಮತ್ತು ಬಾಲ ಹಾಗೂ ತಿಳಿ ನೀಲಿ ಕಣ್ಣುರೆಪ್ಪೆಗಳೊಂದಿಗೆ ಕೂಡಿದ ಕಿತ್ತಳೆ-ಹಳದಿ ಮುಖ – ಇವು ಈ ಪ್ರಭೇಧದ ಮಂಗಗಳ ವಿಶಿಷ್ಟ ಲಕ್ಷಣಗಳಾಗಿವೆ.
    • ಗಂಡು ಕೋತಿಗಳನ್ನು ಅವುಗಳ ಹಿಂಭಾಗದಲ್ಲಿರುವ ಬಿಳಿ ಕಲೆಗಳಿಂದ ಪ್ರತ್ಯೇಕಿಸಬಹುದು.
    • IUCN ಸ್ಥಿತಿಗತಿ: ತೀವ್ರ ಅಳಿವಿನಂಚಿನಲ್ಲಿರುವ (CR).

    ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆ

    ಸಾಮಾನ್ಯ ಅಧ್ಯಯನ-3/ಮೂಲಸೌಕರ್ಯ

    ಇದೀಗ ಸುದ್ದಿಯಲ್ಲಿದೆ: 

    • ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆಗೆ ನಿಧಿ ಸಂಗ್ರಹಿಸಲು, ಅರಣ್ಯ ಭೂಮಿಯಲ್ಲಿರುವ ಆಸ್ತಿಗಳನ್ನು ಭದ್ರತೆಯಾಗಿ ಬಳಸಿಕೊಳ್ಳುವ ಎನ್‌ಎಚ್‌ಪಿಸಿ (NHPC) ಪ್ರಸ್ತಾಪವನ್ನು ಪರಿಸರ ಸಚಿವಾಲಯವು ತಿರಸ್ಕರಿಸಿದೆ.

    ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆಯ ಬಗ್ಗೆ:

    • ಇದು ಬ್ರಹ್ಮಪುತ್ರ ನದಿಯ ಉಪನದಿಯಾದ ಸುಬನ್ಸಿರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಯೋಜನೆಯಾಗಿದೆ.
    • ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಗಡಿಯಲ್ಲಿರುವ ಗೆರುಕಾಮುಖ್‌ನಲ್ಲಿ ಇದು ನೆಲೆಗೊಂಡಿದೆ.
    • ಸಾಮರ್ಥ್ಯ ಮತ್ತು ವಿಧ : ಇದು 2,000 ಮೆಗಾವ್ಯಾಟ್ (8 × 250 ಮೆಗಾವ್ಯಾಟ್) ಒಟ್ಟು ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
    • ಕಾರ್ಯತಂತ್ರದ ಮಹತ್ವ:
      • ಇದು ಈಶಾನ್ಯ ಭಾರತದಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
      • ಇದು ವಿದ್ಯುತ್ ಜಾಲದ ಸ್ಥಿರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳನ್ನು ಬೆಂಬಲಿಸುತ್ತದೆ.

    ಮೊದಲ ಸ್ವದೇಶಿ ಮುಳುಗುಗಾರರ (ಡೈವಿಂಗ್) ಬೆಂಬಲ ನೌಕೆ (DSC A20)

    ಸಾಮಾನ್ಯ ಅಧ್ಯಯನ-3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ನೌಕಾಪಡೆ ಸ್ವದೇಶಿಯಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಮುಳುಗುಗಾರರ ಬೆಂಬಲ ನೌಕಾ (Diving Support Craft – DSC) ಸರಣಿಯ ಮೊದಲ ನೌಕೆ DSC A20 ಅನ್ನು ದಕ್ಷಿಣ ನೌಕಾ ಕಮಾಂಡ್‌ನ ಆಶ್ರಯದಲ್ಲಿ, ಕೊಚ್ಚಿಯಲ್ಲಿ ಸೇವೆಗೆ ಸೇರ್ಪಡೆಗೊಳಿಸಲು ಸಿದ್ಧವಾಗಿದೆ.

    ಡಿಎಸ್‌ಸಿ ಎ20 (DSC A20) ಯ ಬಗ್ಗೆ:

    • ನಿರ್ಮಾಣ:- ಇದನ್ನು ಕೋಲ್ಕತ್ತಾದ ಮೆಸರ್ಸ್ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು ನಿರ್ಮಿಸಿರುವ ಐದು ‘ಮುಳುಗುಗಾರರ ಬೆಂಬಲ ನೌಕೆ”ಗಳಲ್ಲಿ ಮೊದಲನೆಯದಾಗಿದೆ.
    • ತಾಂತ್ರಿಕ ವೈಶಿಷ್ಟ್ಯಗಳು:- ಈ ನೌಕೆಯು ಸುಮಾರು 390 ಟನ್‌ಗಳಷ್ಟು ಸ್ಥಳಾಂತರ ಸಾಮರ್ಥ್ಯ ಹೊಂದಿದೆ.
      • ಇದು ಅತ್ಯುತ್ತಮ ಸ್ಥಿರತೆ, ವಿಸ್ತಾರವಾದ ಹಡಗುಕಟ್ಟೆ (ಡೆಕ್) ಪ್ರದೇಶ ಮತ್ತು ಸುಧಾರಿತ ನೌಕಾ ಸ್ಥಿರತೆಯ (ಕಡಲ ಅಲೆಗಳ ನಡುವೆ ಸುಗಮವಾಗಿ ಚಲಿಸುವ) ಗುಣಲಕ್ಷಣಗಳನ್ನು ಒಳಗೊಂಡಿದೆ.
    • ಕಾರ್ಯಾಚರಣೆಯ ಮಹತ್ವ:- ಇದರ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಈ ಕೆಳಗಿನ ಸಾಮರ್ಥ್ಯಗಳು ಹೆಚ್ಚಲಿವೆ:
      • ಮುಳುಗುಗಾರರಿಗೆ (ಡೈವಿಂಗ್) ಬೆಂಬಲ
      • ಜಲಾಂತರ್ಗಾಮಿ ತಪಾಸಣೆ
      • ಮುಳುಗಿದ ವಸ್ತುಗಳ ಚೇತರಿಕೆ ಅಥವಾ ರಕ್ಷಣೆ
      • ಕರಾವಳಿ ಕಾರ್ಯಾಚರಣೆಯ ನಿಯೋಜನೆ.
  • ರಾಷ್ಟ್ರೀಯ ಮಖಾನಾ ಮಂಡಳಿ | ಕೋಲ್-ಸೇತು ನೀತಿ (CoalSETU Policy) | ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD) | “ಪ್ರಾಜೆಕ್ಟ್ ಸನ್‌ಕ್ಯಾಚರ್” (Project Suncatcher) | ಪೋಶ್ (POSH) ಕಾಯ್ದೆ, 2013

    ರಾಷ್ಟ್ರೀಯ ಮಖಾನಾ ಮಂಡಳಿ

    ಸಾಮಾನ್ಯ ಅಧ್ಯಯನ-3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ರಾಷ್ಟ್ರೀಯ ಮಖಾನಾ ಮಂಡಳಿಯ ಮೊದಲ ಸಭೆಯಲ್ಲಿ ಮಖಾನಾದ ಸಮಗ್ರ ಅಭಿವೃದ್ಧಿಗಾಗಿ ₹476.03 ಕೋಟಿ ಮೊತ್ತದ ‘ಕೇಂದ್ರ ವಲಯದ ಯೋಜನೆ’ಯನ್ನು ಜಾರಿಗೆ ತರಲಾಯಿತು.

    ರಾಷ್ಟ್ರೀಯ ಮಖಾನಾ ಮಂಡಳಿಯ ಬಗ್ಗೆ:

    • ಉದ್ದೇಶ:- ಭಾರತದ ಮಖಾನಾ ವಲಯವನ್ನು ಬಲಪಡಿಸುವುದು ಮತ್ತು ಆಧುನೀಕರಿಸುವುದು.
    • ಪ್ರಧಾನ ಕಚೇರಿ:- ಬಿಹಾರದ ಪೂರ್ಣಿಯಾದಲ್ಲಿದೆ.

    ಮಖಾನಾ (Euryale ferox) ಹೂಬಿಡುವ ಸಸ್ಯದ ಬಗ್ಗೆ: 

    • ಇದು ಜಲ ಕಮಲ (ನೀಲೋತ್ಪಲ) ಕುಟುಂಬಕ್ಕೆ (Nymphaeaceae) ಸೇರಿದ ಒಂದು ಹೂಬಿಡುವ ಸಸ್ಯವಾಗಿದೆ.
    • ಹವಾಮಾನ ಪರಿಸ್ಥಿತಿ:- ಇದಕ್ಕೆ 20-35°C ತಾಪಮಾನ ಶ್ರೇಣಿ ಮತ್ತು 100-250 ಸೆಂ.ಮೀ. ವಾರ್ಷಿಕ ಮಳೆಯ ಅಗತ್ಯವಿದೆ.
    • ಇದು ಸಂಪೂರ್ಣವಾಗಿ ಸಾವಯವ, ಧಾನ್ಯವಲ್ಲದ ಆಹಾರವಾಗಿದ್ದು, ಪ್ರಮುಖವಾಗಿ ಭಾರತದಲ್ಲಿ ಕಂಡುಬರುತ್ತದೆ; ಜೊತೆಗೆ ಕೊರಿಯಾ, ಜಪಾನ್ ಹಾಗೂ ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.
    • ಭಾರತದ ಮಖಾನಾ ಉತ್ಪಾದನೆಯಲ್ಲಿ ಬಿಹಾರವು ಸುಮಾರು 90% ರಷ್ಟು ಪಾಲನ್ನು ಹೊಂದಿದೆ.
    • ಜಿಐ ಟ್ಯಾಗ್ : 2022 ರಲ್ಲಿ, ‘ಮಿಥಿಲಾ ಮಖಾನಾ’ಕ್ಕೇ ಜಿಐ ಟ್ಯಾಗ್ ನೀಡಲಾಯಿತು.

    ಕೋಲ್-ಸೇತು ನೀತಿ (CoalSETU Policy)

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಕೇಂದ್ರ ಸಚಿವ ಸಂಪುಟವು ‘ಕೋಲ್-ಸೇತು ನೀತಿ’ಗೆ ಅನುಮೋದನೆ ನೀಡಿದೆ.

    ಕೋಲ್-ಸೇತು ನೀತಿಯ ಬಗ್ಗೆ:

    • ಉದ್ದೇಶ:- ಕೈಗಾರಿಕಾ ಬಳಕೆಗಾಗಿ ಕಲ್ಲಿದ್ದಲು ಹಂಚಿಕೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನಮ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ, ಕಲ್ಲಿದ್ದಲು ಸಂಯೋಜನೆ ಹರಾಜಿಗಾಗಿ ಹೊಸ ವ್ಯವಸ್ಥೆಯನ್ನು ಇದು ಪರಿಚಯಿಸುತ್ತದೆ.

    ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD)

    ಸಾಮಾನ್ಯ ಅಧ್ಯಯನ-3/ ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • ರೋಮ್‌ನಲ್ಲಿ ನಡೆದ ಐಎಫ್‌ಎಡಿ (IFAD)-ಇಂಡಿಯಾ ಡೇ ದಿನಾಚರಣೆ ಕಾರ್ಯಕ್ರಮದಲ್ಲಿ, ಭಾರತವು ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿಯಲ್ಲಿನ ತನ್ನ ಸಾಧನೆಗಳನ್ನು ಪ್ರದರ್ಶಿಸಿತು.

    ‘ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ’(IFAD) ಉಪಕ್ರಮದ ಬಗ್ಗೆ:

    • ಪ್ರಧಾನ ಕಚೇರಿ:- ಇಟಲಿಯ ರೋಮ್‌ನಲ್ಲಿದೆ.
    • ಇದು 1977 ರಲ್ಲಿ ಸ್ಥಾಪನೆಯಾದ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ:- ಗುರಿಪಡಿಸಿದ ಹಣಕಾಸಿನ ನೆರವಿನ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮೀಣ ಬಡತನವನ್ನು ನಿವಾರಿಸಲು ಪ್ರಯತ್ನಿಸುವುದು.
    • ಮಹತ್ವ:- ಇದು ಮುಖ್ಯವಾಗಿ ಸಣ್ಣ ಹಿಡುವಳಿದಾರ ರೈತರು, ಪಶುಪಾಲಕರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ರಿಯಾಯಿತಿ ದರದ ಸಾಲಗಳು, ಅನುದಾನಗಳು ಮತ್ತು ತಾಂತ್ರಿಕ ನೆರವನ್ನು ಒದಗಿಸುತ್ತದೆ. ಕೃಷಿ, ಹವಾಮಾನ ಸ್ಥಿತಿಸ್ಥಾಪಕತ್ವ, ಮೌಲ್ಯ ಸರಪಳಿ ಅಭಿವೃದ್ಧಿ ಮತ್ತು ಜೀವನೋಪಾಯದ ವೈವಿಧ್ಯೀಕರಣಕ್ಕೆ ಇದು ಒತ್ತು ನೀಡುತ್ತದೆ.

    “ಪ್ರಾಜೆಕ್ಟ್ ಸನ್‌ಕ್ಯಾಚರ್” (Project Suncatcher)

    ಸಾಮಾನ್ಯ ಅಧ್ಯಯನ-3/ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಗೂಗಲ್ ಸಿಇಒ ಸುಂದರ್ ಪಿಚೈ ಅವರು 2027 ರ ವೇಳೆಗೆ ಬಾಹ್ಯಾಕಾಶದಲ್ಲಿ ಸೌರಶಕ್ತಿ ಚಾಲಿತ ದತ್ತಾಂಶ ಕೇಂದ್ರ (ಡೇಟಾ ಸೆಂಟರ್‌) ಗಳನ್ನು ನಿಯೋಜಿಸಲು ‘ಪ್ರಾಜೆಕ್ಟ್ ಸನ್‌ಕ್ಯಾಚರ್’ ಎಂಬ ದೀರ್ಘಕಾಲೀನ ಸಂಶೋಧನಾ ಉಪಕ್ರಮವನ್ನು ಘೋಷಿಸಿದ್ದಾರೆ.

    ‘ಪ್ರಾಜೆಕ್ಟ್ ಸನ್‌ಕ್ಯಾಚರ್’ ನ ಬಗ್ಗೆ:

    • ಉಪಗ್ರಹ ನಕ್ಷತ್ರಪುಂಜಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಸೌರಶಕ್ತಿ ಚಾಲಿತ, ಎಐ ಆಧಾರಿತ ದತ್ತಾಂಶ ಕೇಂದ್ರಗಳನ್ನು ನಿರ್ಮಿಸುವುದು ಗೂಗಲ್‌ನ ಮಹತ್ವಾಕಾಂಕ್ಷೆಯ ಉಪಕ್ರಮವಾಗಿದೆ.

    ಪ್ರಯೋಜನಗಳು:

    • ಪರಿಸರ ಅನುಕೂಲ: ಸಾಂಪ್ರದಾಯಿಕ ದತ್ತಾಂಶ ಕೇಂದ್ರಗಳಿಗೆ ಅಗತ್ಯವಿರುವ ಭೂಮಿ, ನೀರು ಮತ್ತು ತಂಪಾಗಿಸುವ ವ್ಯವಸ್ಥೆಗಳ ಅಗತ್ಯವನ್ನು ಇದು ನಿವಾರಿಸುತ್ತದೆ.
    • ನಿರಂತರ ಶಕ್ತಿ: ಸ್ಥಿರ ಕಾರ್ಯಾಚರಣೆಗಾಗಿ ತಡೆರಹಿತ ಸೌರಶಕ್ತಿಯ ಲಭ್ಯತೆ ದೊರೆಯುತ್ತದೆ.
    • ಸ್ಥಿತಿಸ್ಥಾಪಕತ್ವ: ವಿದ್ಯುತ್ ಕಡಿತ, ನೈಸರ್ಗಿಕ ವಿಕೋಪಗಳು ಮತ್ತು ಸಮುದ್ರದಾಳದ ತಂತಿ ವೈಫಲ್ಯಗಳಿಂದ ಉಂಟಾಗುವ ಅಪಾಯಗಳನ್ನು ಇದು ತಪ್ಪಿಸುತ್ತದೆ.

    ಸವಾಲುಗಳು:

    • ತಾಂತ್ರಿಕ ತೊಂದರೆಗಳು: ಅತೀ ವೇಗದ ಲೇಸರ್ ಸಂವಹನಕ್ಕಾಗಿ ಉಪಗ್ರಹಗಳ ನಡುವೆ ಬಿಗಿಯಾದ ಅಂತರವನ್ನು (1 ಕಿ.ಮೀ ಒಳಗೆ) ಕಾಯ್ದುಕೊಳ್ಳುವುದು ಸಂಕೀರ್ಣ ಸವಾಲಾಗಿದೆ.
    • ಕಾರ್ಯಾಚರಣೆಯ ಅಡೆತಡೆಗಳು: ಬಾಹ್ಯಾಕಾಶ ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ತಗಲುವ ಅಧಿಕ ವೆಚ್ಚ ಹಾಗೂ ಕಕ್ಷೆಯಲ್ಲಿನ ದುರಸ್ತಿ ಕಾರ್ಯದ ಕಷ್ಟಕರ ಪರಿಸ್ಥಿತಿಯು ಪ್ರಮುಖ ಕಾಳಜಿಯ ವಿಷಯಗಳಾಗಿವೆ.
    • ಪರಿಸರ ಪರಿಸ್ಥಿತಿಗಳು: ಯಂತ್ರೋಪಕರಣಗಳು ವಿಕಿರಣ-ನಿರೋಧಕವಾಗಿರಬೇಕು ಮತ್ತು ನಿರ್ವಾತದಲ್ಲಿ ಶಾಖವನ್ನು ಪರಿಣಾಮಕಾರಿಯಾಗಿ ಹೊರಹಾಕುವ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರಬೇಕು

    ಪೋಶ್ (POSH) ಕಾಯ್ದೆ, 2013

    ಸಾಮಾನ್ಯ ಅಧ್ಯಯನ -2/ ರಾಜ್ಯಶಾಸ್ತ್ರ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013’ (ಪೋಸ್ ಕಾಯ್ದೆ) ರ ಅಡಿಯಲ್ಲಿ ‘ಆಂತರಿಕ ದೂರು ಸಮಿತಿಗಳ’ ಅಧಿಕಾರ ವ್ಯಾಪ್ತಿಯನ್ನು ಸರ್ವೋಚ್ಚ ನ್ಯಾಯಾಲಯವು ವಿಸ್ತರಿಸಿದೆ.
    • ಲೈಂಗಿಕ ದೌರ್ಜನ್ಯದ ದೂರುಗಳನ್ನು ಆರೋಪಿಯ ಕೆಲಸದ ಸ್ಥಳದಲ್ಲಿ ಮಾತ್ರವಲ್ಲದೆ, ದೂರುದಾರರ ಕೆಲಸದ ಸ್ಥಳದಲ್ಲಿ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಸ್ಥಳದಲ್ಲಿಯೂ ಸಲ್ಲಿಸಬಹುದು ಎಂದು ನ್ಯಾಯಾಲಯವು ಆದೇಶಿಸಿದೆ.

    ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 ರ ಬಗ್ಗೆ:

    • ಲೈಂಗಿಕ ದೌರ್ಜನ್ಯದ ವ್ಯಾಖ್ಯಾನ:- ನೇರವಾಗಿ ಅಥವಾ ಸೂಚಕವಾಗಿ ಎಸಗಲಾದ ಈ ಕೆಳಗಿನ “ಯಾವುದೇ ಒಂದು ಅಥವಾ ಹೆಚ್ಚಿನ ಅನಪೇಕ್ಷಿತ ಕೃತ್ಯಗಳು ಅಥವಾ ನಡವಳಿಕೆಗಳು” ಲೈಂಗಿಕ ದೌರ್ಜನ್ಯದ ಅಡಿಯಲ್ಲಿ ಬರುತ್ತವೆ:
      • ದೈಹಿಕ ಸಂಪರ್ಕ ಮತ್ತು ಮುನ್ನುಗ್ಗುವಿಕೆ.
      • ಲೈಂಗಿಕ ಅನುಕೂಲಗಳಿಗಾಗಿ ಬೇಡಿಕೆ ಅಥವಾ ವಿನಂತಿ.
      • ಲೈಂಗಿಕ ಪ್ರೇರಿತ ಅಶ್ಲೀಲ ಟೀಕೆಗಳು.
      • ಅಶ್ಲೀಲ ಚಿತ್ರಗಳನ್ನು ತೋರಿಸುವುದು.
      • ಲೈಂಗಿಕ ಸ್ವರೂಪದ ಯಾವುದೇ ಇತರ ಅನಪೇಕ್ಷಿತ ದೈಹಿಕ, ಮೌಖಿಕ ಅಥವಾ ಮೌಖಿಕವಲ್ಲದ ನಡವಳಿಕೆ.
    • ಬಾಧ್ಯತೆ:- 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಪ್ರತಿಯೊಂದು ಕಚೇರಿ ಅಥವಾ ಶಾಖೆಯಲ್ಲಿ ಉದ್ಯೋಗದಾತರು ಕಡ್ಡಾಯವಾಗಿ ‘ಆಂತರಿಕ ದೂರು ಸಮಿತಿ’  (‘ಐಸಿಸಿ’) ಯನ್ನು ರಚಿಸಬೇಕು.
    • ದೂರು ಸಮಿತಿಗಳು:- ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಕರೆಸುವ (ಸಮನ್ಸ್ ನೀಡುವ), ಪ್ರಮಾಣವಚನದ ಮೇಲೆ ವಿಚಾರಣೆ ನಡೆಸುವ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಲು ಆದೇಶಿಸುವ ವಿಷಯದಲ್ಲಿ ‘ಐಸಿಸಿ’ಯು ಸಿವಿಲ್ ನ್ಯಾಯಾಲಯಕ್ಕೆ ಇರುವಂತಹ ಅಧಿಕಾರಗಳನ್ನು ಹೊಂದಿದೆ.
    • ಸಮಯದ ಮಿತಿ:- ದೌರ್ಜನ್ಯದ ಘಟನೆ ನಡೆದ ದಿನಾಂಕದಿಂದ “3 ತಿಂಗಳೊಳಗೆ” ದೂರನ್ನು ಸಲ್ಲಿಸಬೇಕು.
    • ಸಂಧಾನ:ನೊಂದ ಮಹಿಳೆಯ ಕೋರಿಕೆಯ ಮೇರೆಗೆ, ಐಸಿಸಿಯು ವಿಷಯವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲು ಅನುಮತಿಸಬಹುದು. ಆದರೆ, ಇಲ್ಲಿ ಯಾವುದೇ ಹಣಕಾಸಿನ ಇತ್ಯರ್ಥಕ್ಕೆ ಅವಕಾಶವಿಲ್ಲ.
    • ಶಿಕ್ಷೆ:- ಕಾಯ್ದೆಯ ನಿಬಂಧನೆಗಳನ್ನು ಪಾಲಿಸದ ಉದ್ಯೋಗದಾತರಿಗೆ 50,000 ರೂ.ಗಳವರೆಗೆ ದಂಡ ವಿಧಿಸಲು ಅವಕಾಶವಿದೆ.