ಕರ್ ಸಾಥಿ (Kar Saathi) – ನೇರ ತೆರಿಗೆ ವಿಷಯಗಳ ಕುರಿತು AI ಆಧಾರಿತ ಚಾಟ್‌ಬಾಟ್ ವೇದಿಕೆ
ಆರ್ಥಿಕತೆ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಹೊಸ ಆದಾಯ ತೆರಿಗೆ ಕಾಯ್ದೆ, 2025ರ ಚೌಕಟ್ಟಿನಡಿಯಲ್ಲಿ ನೇರ ತೆರಿಗೆ ವಿಷಯಗಳ ಕುರಿತು 24×7 ಮಾರ್ಗದರ್ಶನ ನೀಡಲು ಆದಾಯ ತೆರಿಗೆ ಇಲಾಖೆಯು ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ಚಾಟ್‌ಬಾಟ್ ವೇದಿಕೆಯನ್ನು ಪ್ರಾರಂಭಿಸಿದೆ.
‘ಕರ್ ಸಾಥಿ’ ಚಾಟ್‌ಬಾಟ್ ವೇದಿಕೆಯ ಬಗ್ಗೆ:
- ನೇರ ತೆರಿಗೆ ವಿಷಯಗಳ ಕುರಿತು 24×7 ಮಾರ್ಗದರ್ಶನ ಒದಗಿಸುತ್ತದೆ:- ಅವುಗಳೆಂದರೆ ಐಟಿಆರ್ (ITR) ಸಲ್ಲಿಕೆ, ತೆರಿಗೆ ನಿಯಮಗಳು, ನಮೂನೆಗಳು, ನೋಟಿಸ್‌ಗಳು, ಕಡಿತಗಳು, ಮರುಪಾವತಿ ಮತ್ತು ಅನುಸರಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಹಾಯವನ್ನು ಒದಗಿಸುತ್ತದೆ.
- ಎಲ್ಲಾ ನೇರ ತೆರಿಗೆಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಒಂದೇ ವೇದಿಕೆಯಡಿ ತರುತ್ತದೆ:- ಅವುಗಳೆಂದರೆ ನಮೂನೆಗಳು, ಸ್ವೀಕೃತಿ, ಇ-ಪಾವತಿ, ಇ-ಪರಿಶೀಲನೆ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs).
ತೆರಿಗೆದಾರರ ಕುಂದುಕೊರತೆ ನಿವಾರಣೆ ಮತ್ತು ತೆರಿಗೆ ಅನುಸರಣೆಯ ಪ್ರಶ್ನೆಗಳನ್ನು ಪರಿಹರಿಸಲು ಬೆಂಬಲ ನೀಡುತ್ತದೆ.
E-20 ಪೆಟ್ರೋಲ್ (E20 Petrol)
ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತವು ಏಪ್ರಿಲ್ 1, 2025 ರಿಂದ ದೇಶದ ಎಲ್ಲಾ ಇಂಧನ ಕೇಂದ್ರಗಳಲ್ಲಿ ಇ20 (E20) ಪೆಟ್ರೋಲ್ ವಿತರಣೆಯನ್ನು ಅಧಿಕೃತವಾಗಿ ಕಡ್ಡಾಯಗೊಳಿಸಿದೆ.
E-20 ಪೆಟ್ರೋಲ್ ಉಪಕ್ರಮದ ಬಗ್ಗೆ:
- ಇದು 20% ಎಥೆನಾಲ್ ಮತ್ತು 80% ಪೆಟ್ರೋಲ್ ಒಳಗೊಂಡಿರುವ ಇಂಧನ ಮಿಶ್ರಣವನ್ನು ಸೂಚಿಸುತ್ತದೆ.
- ಭಾರತದ “ಎಥೆನಾಲ್ ಮಿಶ್ರಿತ ಪೆಟ್ರೋಲ್” (EBP) ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ:- ಇದು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ವಾಹನಗಳ ಹೊರಸೂಸುವಿಕೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.
- 20% ಎಥೆನಾಲ್ ಮಿಶ್ರಣದ ಗುರಿ, 2025-26:- ಆರಂಭದಲ್ಲಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ಗುರಿಯನ್ನು 2030ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ತಿದ್ದುಪಡಿ ಮಾಡಲಾದ ರಾಷ್ಟ್ರೀಯ ಜೈವಿಕ ಇಂಧನ ನೀತಿ, 2022ರ ಅಡಿಯಲ್ಲಿ ಈ ಗುರಿಯನ್ನು 2025-26ನೇ ವರ್ಷಕ್ಕೆ ಮುಂಚಿತವಾಗಿ ಸಾಧಿಸಲು ನಿರ್ಧರಿಸಲಾಗಿದೆ.
ಭಾರತಕ್ಕೆ ಇದರ ಪ್ರಾಮುಖ್ಯತೆ:
- ಇಂಧನ ಭದ್ರತೆ:- ಇದು ಭಾರತದ ಅಗತ್ಯಗಳ ಸುಮಾರು 85% ರಷ್ಟು ಆಮದು ಮಾಡಿಕೊಳ್ಳಲಾಗುತ್ತಿರುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
- ವಿದೇಶಿ ವಿನಿಮಯವನ್ನು ಉಳಿತಾಯ:- ಇದು ವಾರ್ಷಿಕವಾಗಿ ಸರಿಸುಮಾರು ₹30,000 ರಿಂದ ₹50,000 ಕೋಟಿಗಳಷ್ಟು ವಿದೇಶಿ ವಿನಿಮಯವನ್ನು ಉಳಿತಾಯ ಮಾಡುತ್ತದೆ.
- ಪರಿಸರ ಸಂರಕ್ಷಣೆ:- ಇದು ಇಂಗಾಲದ ಮೊನಾಕ್ಸೈಡ್, ಹೈಡ್ರೋಕಾರ್ಬನ್‌ಗಳು ಮತ್ತು ಸೂಕ್ಷ್ಮ ಕಣಗಳ ಹೊರಸೂಸುವಿಕೆಯನ್ನು 30-50% ರಷ್ಟು ಕಡಿಮೆ ಮಾಡುತ್ತದೆ.
- ಗ್ರಾಮೀಣ ಆದಾಯ ಹೆಚ್ಚಿಸುವುದು:- ಇದು ಕಬ್ಬು, ಮೆಕ್ಕೆಜೋಳ ಮತ್ತು ಹಾನಿಗೊಳಗಾದ ಆಹಾರ ಧಾನ್ಯಗಳಂತಹ ಬೆಳೆಗಳಿಗೆ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಆದಾಯವನ್ನು ಹೆಚ್ಚಿಸುತ್ತದೆ.
ಕೊಳವೆ ನೈಸರ್ಗಿಕ ಅನಿಲದ (PNG) ಬಳಕೆಗೆ ಭಾರತದ ಉತ್ತೇಜನ
ವಿಜ್ಞಾನ ಮತ್ತು ತಂತ್ರಜ್ಜಾನ
ಇತ್ತೀಚೆಗೆ ಸುದ್ದಿಯಲ್ಲಿದೆ:
- ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಇಂಧನ ಭದ್ರತೆಯನ್ನು ಹೆಚ್ಚಿಸಲು ಮತ್ತು ಶುದ್ಧ ಇಂಧನಗಳ ಬಳಕೆಯತ್ತ ಸಾಗಲು ಭಾರತವು ಕೊಳವೆ ನೈಸರ್ಗಿಕ ಅನಿಲ (PNG) ಸಂಪರ್ಕಗಳ ವಿಸ್ತರಣೆಯನ್ನು ವೇಗಗೊಳಿಸುತ್ತಿದೆ.
ಅನಿಲಗಳ ವಿಧಗಳು:
ದ್ರವೀಕೃತ ಪೆಟ್ರೋಲಿಯಂ ಅನಿಲ (LPG):
- ಅನಿಲಗಳ ಸಂಯೋಜನೆ:- ಪ್ರೊಪೇನ್ (Propane) ಮತ್ತು ಬ್ಯೂಟೇನ್ (Butane).
- ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ಸಾಧಾರಣ ಒತ್ತಡದಲ್ಲಿ ಸಿಲಿಂಡರ್‌ಗಳಲ್ಲಿ ದ್ರವರೂಪದಲ್ಲಿ ಸಂಗ್ರಹಿಸಲಾಗುತ್ತದೆ.
- ಬಳಕೆ:- ಇದನ್ನು ಗೃಹಬಳಕೆಯ ಅಡುಗೆ, ನೀರು ಕಾಯಿಸುವಿಕೆ ಮತ್ತು ಸಣ್ಣ-ಪ್ರಮಾಣದ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
- ಪ್ರಮುಖ ಲಕ್ಷಣ:- ಇದು ಗಾಳಿಗಿಂತ ಭಾರವಾಗಿರುತ್ತದೆ; ಆದ್ದರಿಂದ ಸೋರಿಕೆಯಾದರೆ ನೆಲದ ಮೇಲೆ ಶೇಖರಗೊಳ್ಳುತ್ತದೆ.
ಕೊಳವೆ ನೈಸರ್ಗಿಕ ಅನಿಲ (PNG):
- ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
- ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ನೆಲದಡಿಯ ಕೊಳವೆಗಳ ಮೂಲಕ ಅನಿಲ ರೂಪದಲ್ಲಿ ವಿತರಿಸಲಾಗುತ್ತದೆ.
- ಬಳಕೆ:- ಇದನ್ನು ವಸತಿ ಸಮುಚ್ಚಯಗಳ ಅಡುಗೆಕೋಣೆಗಳು, ವಾಣಿಜ್ಯ ಅಡುಗೆ ಮತ್ತು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
- ಪ್ರಮುಖ ಲಕ್ಷಣ:- ಇದು ನಿರಂತರ ಪೂರೈಕೆಯನ್ನು ಒದಗಿಸುತ್ತದೆ; ಆದ್ದರಿಂದ ಯಾವುದೇ ಸಿಲಿಂಡರ್ ಸಂಗ್ರಹಣೆಯ ಅಗತ್ಯವಿರುವುದಿಲ್ಲ.
ಸಂಕುಚಿತ ನೈಸರ್ಗಿಕ ಅನಿಲ (CNG):
- ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
- ಸ್ಥಿತಿ ಮತ್ತು ಸಂಗ್ರಹಣೆ:- ಇದನ್ನು ಟ್ಯಾಂಕ್‌ಗಳಲ್ಲಿ ಅತಿ ಹೆಚ್ಚಿನ ಒತ್ತಡದಲ್ಲಿ (200-250 bar) ಸಂಕುಚಿತಗೊಳಿಸಿ ಸಂಗ್ರಹಿಸಲಾಗುತ್ತದೆ.
- ಬಳಕೆ:- ಇದನ್ನು ವಾಹನಗಳಲ್ಲಿ (ಕಾರು, ಬಸ್, ರಿಕ್ಷಾ) ಮತ್ತು ಕಡಿಮೆ-ಒತ್ತಡದ ಕೈಗಾರಿಕಾ ದಹನ ಸಾಧನಗಳಲ್ಲಿ ಬಳಸಲಾಗುತ್ತದೆ.
- ಪ್ರಮುಖ ಲಕ್ಷಣ:- ಇದು ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಹೆಚ್ಚು ಮಾಲಿನ್ಯಮುಕ್ತವಾಗಿ ಮತ್ತು ಶುದ್ಧವಾಗಿ ದಹನಗೊಳ್ಳುತ್ತದೆ.
ದ್ರವೀಕೃತ ನೈಸರ್ಗಿಕ ಅನಿಲ (LNG):
- ಅನಿಲಗಳ ಸಂಯೋಜನೆ:- ಪ್ರಾಥಮಿಕವಾಗಿ ‘ಮಿಥೇನ್’.
- ಸ್ಥಿತಿ ಮತ್ತು ಸಂಗ್ರಹಣೆ:- ಸಾಗಾಣಿಕೆಗಾಗಿ ಇದನ್ನು ದ್ರವರೂಪಕ್ಕೆ ಪರಿವರ್ತಿಸಲು ಸುಮಾರು –160°C ತಾಪಮಾನಕ್ಕೆ ತಂಪುಗೊಳಿಸಲಾಗುತ್ತದೆ.
- ಬಳಕೆ:- ಸಮುದ್ರ ಮಾರ್ಗದ ಮೂಲಕ ನೈಸರ್ಗಿಕ ಅನಿಲವನ್ನು ದೂರದ ಸ್ಥಳಗಳಿಗೆ ಸಾಗಿಸಲು ಮತ್ತು ವಿದ್ಯುತ್ ಉತ್ಪಾದನೆಗೆ ಇದನ್ನು ಬಳಸಲಾಗುತ್ತದೆ.
- ಪ್ರಮುಖ ಲಕ್ಷಣ:- ಇದನ್ನು ಬೃಹತ್ ಪ್ರಮಾಣದಲ್ಲಿ ಸುಲಭವಾಗಿ ಸಂಗ್ರಹಿಸಲು, ಇದರ ಗಾತ್ರವನ್ನು 600 ಪಟ್ಟು ಕಡಿಮೆಗೊಳಿಸಲಾಗುತ್ತದೆ.
ಕೊಳವೆ ನೈಸರ್ಗಿಕ ಅನಿಲದ (PNG) ಕಡೆಗೆ ಭಾರತದ ಒಲವು:
- ಆಮದು ಅವಲಂಬನೆ ಕಡಿತಗೊಳಿಸಲು:- ಭಾರತವು ತನ್ನ ಎಲ್‌ಪಿಜಿ (LPG) ಅಗತ್ಯತೆಯ ಸುಮಾರು 60% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಹೆಚ್ಚಿನ ಪಾಲು ಪಶ್ಚಿಮ ಏಷ್ಯಾದಿಂದ ಬರುತ್ತದೆ ಮತ್ತು ಹಾರ್ಮುಜ್ ಜಲಸಂಧಿಯಂತಹ ಪೂರೈಕೆಯ ಮಾರ್ಗಗಳು ಭೂ-ರಾಜಕೀಯವಾಗಿ ಸೂಕ್ಷ್ಮವಾಗಿವೆ.
- ಸರಕು ಸಾಗಣೆ ವೆಚ್ಚವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ:- ಸಿಲಿಂಡರ್ ಸಾಗಾಟ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ವ್ಯವಸ್ಥಾಪನಾ ವೆಚ್ಚವನ್ನು ನಿವಾರಿಸುತ್ತದೆ.
- ಬೆಲೆಯು ಹೆಚ್ಚು ಸ್ಥಿರವಾಗಿರುತ್ತದೆ:- ಜಾಗತಿಕ ತೈಲ ಬೆಲೆಗಳಿಗೆ ಸೂಕ್ಷ್ಮವಾಗಿರುವ ಎಲ್‌ಪಿಜಿ (LPG) ಬೆಲೆಗೆ ಹೋಲಿಸಿದರೆ, ಪಿಎನ್‌ಜಿ (PNG) ಬೆಲೆಯು ಹೆಚ್ಚು ಸ್ಥಿರವಾಗಿರುತ್ತದೆ.
- ನೈಸರ್ಗಿಕ ಅನಿಲವು ಎಲ್‌ಪಿಜಿಗಿಂತ (LPG) ಹೆಚ್ಚು ಶುದ್ಧವಾಗಿ ಉರಿಯುತ್ತದೆ:- ಇದು ಕಡಿಮೆ ಮಾಲಿನ್ಯಕಾರಕಗಳು ಮತ್ತು ಹಸಿರುಮನೆ ಅನಿಲಗಳನ್ನು ಉತ್ಪಾದಿಸುತ್ತದೆ.
ಭಾರತದ ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆ (MHEW-DSS)
ಪರಿಸರ

ಇತ್ತೀಚೆಗೆ ಸುದ್ದಿಯಲ್ಲಿದೆ:
- ಭಾರತೀಯ ಹವಾಮಾನ ಇಲಾಖೆಯು (IMD) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆಗಾಗಿ (MHEW-DSS) ಇ-ಆಡಳಿತ 2025ರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬಹು-ವಿಪತ್ತು ಮುನ್ನೆಚ್ಚರಿಕೆ ನಿರ್ಧಾರ ಸಹಾಯಕ ವ್ಯವಸ್ಥೆ (MHEW-DSS)ಯ ಬಗ್ಗೆ:
- 2024 ರಲ್ಲಿ ಪ್ರಾರಂಭಿಸಲಾದ ಸ್ವಯಂಚಾಲಿತ ಡಿಜಿಟಲ್ ವೇದಿಕೆಯಾಗಿದೆ:- ನಿರ್ಣಾಯಕ ಹವಾಮಾನ ಮುನ್ಸೂಚನೆ ಪ್ರಕ್ರಿಯೆಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸ್ವಯಂಚಾಲಿತಗೊಳಿಸುತ್ತದೆ. ಇದು ಸಾರ್ವಜನಿಕರು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಹಾಗೂ ನಿರ್ದಿಷ್ಟ ಪಾಲುದಾರರಿಗೆ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ಸೇವೆಗಳನ್ನು ಒದಗಿಸುತ್ತದೆ.
- ಮಿಷನ್ ಮೌಸಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ:- ಈ ವ್ಯವಸ್ಥೆಯು ಹವಾಮಾನ ದತ್ತಾಂಶ ಸಂಸ್ಕರಣೆಯನ್ನು 90% ರಷ್ಟು ಸ್ವಯಂಚಾಲಿತಗೊಳಿಸಿದೆ. ಇದು ಮುನ್ಸೂಚನೆಯ ನಿಖರತೆಯನ್ನು 30% ರಷ್ಟು ಸುಧಾರಿಸಿದೆ ಮತ್ತು ಸಿದ್ಧತೆಯ ಸಮಯವನ್ನು 6 ಗಂಟೆಗಳಿಂದ 3 ಗಂಟೆಗಳಿಗೆ ಇಳಿಸಿದೆ.
- ನೈಜ-ಸಮಯದ ದತ್ತಾಂಶಗಳನ್ನು ಕೇಂದ್ರೀಕೃತ GIS-ಆಧಾರಿತ ವೇದಿಕೆಗೆ ಸಂಯೋಜಿಸುತ್ತದೆ:- ಇದು ಉಪಗ್ರಹಗಳು, ರಾಡಾರ್‌ಗಳು ಮತ್ತು ಭೂಮಿ ಹಾಗೂ ಮೇಲಿನ ವಾತಾವರಣದ ಸಂವೇದಕಗಳಿಂದ (ಸೆನ್ಸಾರ್ ಗಳು) ಬರುವ ನೈಜ-ಸಮಯದ ದತ್ತಾಂಶಗಳನ್ನು ಸಂಯೋಜಿಸುವ ಮೂಲಕ ಹಳೆಯ ಮಾನವ-ಚಾಲಿತ ಕಾರ್ಯವಿಧಾನಗಳನ್ನು ಇದು ಬದಲಾಯಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD)ಯ ಬಗ್ಗೆ:
- ಇದನ್ನು 1875 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು 2025 ರಲ್ಲಿ ತನ್ನ 150 ವರ್ಷಗಳ ಸೇವೆಯನ್ನು ಪೂರೈಸಿದೆ.
- ಕಾರ್ಯನಿರ್ವಹಣೆ:- ಇದು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಉದ್ದೇಶ:- ಇದು ಭಾರತದಲ್ಲಿ ಹವಾಮಾನ ವೀಕ್ಷಣೆಗಳು, ಹವಾಮಾನ ಮುನ್ಸೂಚನೆ ಮತ್ತು ಭೂಕಂಪನಶಾಸ್ತ್ರಗಳ ಬಗ್ಗೆ ಮಾಹಿತಿ ಒದಗಿಸಿವ ಒಂದು ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾಗಿದೆ.
‘ಮಿಷನ್ ಮೌಸಮ್’ ಉಪಕ್ರಮದ ಬಗ್ಗೆ:
- ಇದು ಭೂ ವಿಜ್ಞಾನ ಸಚಿವಾಲಯವು (MoES) ಪ್ರಾರಂಭಿಸಿದ ಮಹತ್ವಾಕಾಂಕ್ಷೆಯ ಬಹುಮುಖಿ ಉಪಕ್ರಮವಾಗಿದೆ.
- ಗುರಿ:- ಇದು ದೇಶವನ್ನು “ಹವಾಮಾನ-ಸಿದ್ಧ ಮತ್ತು ಹವಾಮಾನ-ಸ್ಮಾರ್ಟ್” ರಾಷ್ಟ್ರವನ್ನಾಗಿ ಪರಿವರ್ತಿಸುವುದು.
- ಉದ್ದೇಶ:- ಹವಾಮಾನ ಮುನ್ಸೂಚನೆಗಳ ನಿಖರತೆ ಮತ್ತು ಮುನ್ನೆಚ್ಚರಿಕೆ ನೀಡುವ ಸಮಯವನ್ನು ಗಣನೀಯವಾಗಿ ಸುಧಾರಿಸುವುದು.
ಇಂಡೋನೇಷ್ಯಾ
ಭೂಗೋಳ

ಇತ್ತೀಚೆಗೆ ಸುದ್ದಿಯಲ್ಲಿದೆ
- ಇಂಡೋನೇಷ್ಯಾದ ಟರ್ನೇಟ್ ದ್ವೀಪದ ಸಮೀಪವಿರುವ ಉತ್ತರ ಮೊಲುಕ್ಕಾ ಸಮುದ್ರದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಇಂಡೋನೇಷ್ಯಾ ದೇಶದ ಬಗ್ಗೆ:
- ಜಗತ್ತಿನ ಅತ್ಯಂತ ದೊಡ್ಡ ದ್ವೀಪಸಮೂಹ ರಾಷ್ಟ್ರವಾಗಿದೆ:- ಇದು ಆಗ್ನೇಯ ಏಷ್ಯಾದ ಪ್ರಮುಖ ಭೂಭಾಗದ ಸಮೀಪ, ಹಿಂದೂ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ನೆಲೆಗೊಂಡಿದೆ.
- ಪ್ರಮುಖ ದ್ವೀಪಗಳು:- ಸುಮಾತ್ರಾ, ಜಾವಾ, ಕಾಲಿಮಂತನ್ (ಬೋರ್ನಿಯೊ), ಸುಲವೇಸಿ ಮತ್ತು ಪಪುವಾ.
- ಗಡಿ ಹಂಚಿಕೆ:- ಪೂರ್ವ ಟಿಮೋರ್ (ಟಿಮೋರ್-ಲೆಸ್ಟೆ), ಪಪುವಾ ನ್ಯೂಗಿನಿಯಾ ಮತ್ತು ಮಲೇಷ್ಯಾದೊಂದಿಗೆ ಭೂ ಗಡಿಗಳನ್ನು ಹಂಚಿಕೊಂಡಿದೆ.
- ರಾಜಧಾನಿ:- ಜಕಾರ್ತಾ (ಜಾವಾ ದ್ವೀಪದಲ್ಲಿದೆ); ಹೊಸ ರಾಜಧಾನಿಯಾಗಿ ಕಾಲಿಮಂತನನಲ್ಲಿರುವ ನುಸಂತಾರಾವನ್ನು (Nusantara) ಅಭಿವೃದ್ಧಿಪಡಿಸಲಾಗುತ್ತಿದೆ.
- ಪೆಸಿಫಿಕ್ ರಿಂಗ್ ಆಫ್ ಫೈರ್ ಪ್ರದೇಶದಲ್ಲಿ ನೆಲೆಗೊಂಡಿದೆ:- ಇದು ಭೂಕಂಪನಗಳ ಸಕ್ರಿಯ ವಲಯವಾಗಿದ್ದು, ಪ್ರಪಂಚದ ಸುಮಾರು 90% ರಷ್ಟು ಭೂಕಂಪಗಳು ಇಲ್ಲಿಯೇ ಸಂಭವಿಸುತ್ತವೆ.
- ಇತ್ತೀಚೆಗೆ ಭೂಕಂಪ ಸಂಭವಿಸಿದ ಮೊಲುಕ್ಕಾ ಸಮುದ್ರವು ಇಂಡೋನೇಷ್ಯಾದ ಉತ್ತರ ಭಾಗದಲ್ಲಿರುವ ಅತ್ಯಂತ ಸಕ್ರಿಯವಾದ ಭೂಪಟಲ ಚಲನೆಯ ಪ್ರದೇಶವಾಗಿದೆ.
ಪೆಸಿಫಿಕ್ ‘ರಿಂಗ್ ಆಫ್ ಫೈರ್’ (ಅಗ್ನಿವಲಯ)ನ ಬಗ್ಗೆ:

- ಪೆಸಿಫಿಕ್ ಮಹಾಸಾಗರ ಸುತ್ತುವರಿದ ವಲಯ (ಸರ್ಕ್ಯೂಮ್ -ಪೆಸಿಫಿಕ್ ಬೆಲ್ಟ್) ಎಂತಲೂ ಕರೆಯುತ್ತಾರೆ:- ಇದು ಪೆಸಿಫಿಕ್ ಮಹಾಸಾಗರದ ಅಂಚುಗಳ ಸುತ್ತಲಿನ ಕುದುರೆ-ಲಾಳದ ಆಕಾರದ ಪ್ರದೇಶವಾಗಿದೆ.
- ಇದನ್ನು ಅದರ ಆಕಾರದಿಂದಾಗಿ ‘ಕುದುರೆ-ಲಾಳದ ಆಕಾರದ ಪಟ್ಟಿ’ ಎಂತಲೂ ಕರೆಯುತ್ತಾರೆ
- ಲಕ್ಷಣಗಳು:- ಇಲ್ಲಿ ಪ್ರಪಂಚದ ಅತ್ಯಂತ ಹೆಚ್ಚು ಅಂದರೆ 90% ಭೂಕಂಪಗಳು ಮತ್ತು 75% ಕ್ಕಿಂತ ಹೆಚ್ಚು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತವೆ. ಅಂದರೆ 450 ಕ್ಕೂ ಹೆಚ್ಚು ಜ್ವಾಲಾಮುಖಿಗಳು ರಿಂಗ್ ಆಫ್ ಫೈರ್‌ನ ಅಂಚಿನುದ್ದಕ್ಕೂ ನೆಲೆಗೊಂಡಿವೆ.
- ಅತ್ಯಂತ ಸಕ್ರಿಯವಾದ ಭೂಪಟಲ ಚಲನೆಯು ಈ ಪ್ರಕ್ರಿಯೆಗಳಿಗೆ ಕಾರಣವಾಗಿದೆ:- ಈ ಪ್ರದೇಶದಲ್ಲಿನ ಟೆಕ್ಟಾನಿಕ್ ಭೂ ಫಲಕಗಳ ನಿರಂತರ ಚಲನೆಯೇ, ರಿಂಗ್ ಆಫ್ ಫೈರ್‌ನ ಅಂಚಿನುದ್ದಕ್ಕೂ ಜ್ವಾಲಾಮುಖಿಗಳು ಮತ್ತು ಭೂಕಂಪಗಳು ಹೇರಳವಾಗಿ ಕಂಡುಬರಲು ಪ್ರಮುಖ ಕಾರಣವಾಗಿದೆ.
ಭಾರತದಲ್ಲಿನ ಜ್ವಾಲಾಮುಖಿಗಳು:
- ಬ್ಯಾರೆನ್ ದ್ವೀಪ, ಅಂಡಮಾನ್ ದ್ವೀಪಗಳು (ಇದು ಭಾರತದ ಏಕೈಕ ಸಕ್ರಿಯ ಜ್ವಾಲಾಮುಖಿಯಾಗಿದೆ)
- ನಾರ್ಕೊಂಡಮ್, ಅಂಡಮಾನ್ ದ್ವೀಪಗಳು
- ಬಾರಾಟಾಂಗ್, ಅಂಡಮಾನ್ ದ್ವೀಪಗಳು
- ದಖ್ಖನ್ ಲಾವಾ ಸ್ತರಗಳು (ಡೆಕ್ಕನ್ ಟ್ರ್ಯಾಪ್ಸ್), ಮಹಾರಾಷ್ಟ್ರ
‘NCERT’ಗೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಮಾನ್ಯತೆ
ಸರ್ಕಾರಿ ಉಪಕ್ರಮಗಳು
ಇತ್ತೀಚೆಗೆ ಸುದ್ದಿಯಲ್ಲಿದೆ:
- ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯನ್ನು ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಎಂದು ಘೋಷಿಸಿದೆ.
ಈ ನಿರ್ಧಾರದ ಪ್ರಭಾವ:
- ಪದವಿಗಳನ್ನು ಪ್ರದಾನ ಮಾಡಬಹುದು:- ಹಾಗೆಯೇ ಈ ಮಾನ್ಯತೆಯಿಂದಾಗಿ NCERT ಯು ಈಗ ಹೊಸ ಪಠ್ಯಕ್ರಮಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಬಹುದು.
- ಸಂಶೋಧನಾ ಕಾರ್ಯಕ್ರಮಗಳು, ಡಾಕ್ಟರೇಟ್ ಕಾರ್ಯಕ್ರಮಗಳು ಮತ್ತು ನವೀನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವಂತೆಯೂ ಸಂಸ್ಥೆಯನ್ನು ಕೇಳಿಕೊಳ್ಳಲಾಗಿದೆ.
- ಯುಜಿಸಿ (UGC) ನಿಯಮಗಳು ಮತ್ತು ನಿಬಂಧನೆಗಳು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಕ್ಕೆ ಅನುಗುಣವಾಗಿ, NCERT ಇತರ ಶೈಕ್ಷಣಿಕ ಕ್ಷೇತ್ರಗಳಿಗೂ ಕ್ರಮೇಣ ತನ್ನ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ಸೂಚಿಸಲಾಗಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯ ಬಗ್ಗೆ:
- ಇದು 1961 ರಲ್ಲಿ ಸ್ಥಾಪನೆಯಾದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
- ಧ್ಯೇಯೋದ್ದೇಶ:- ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿರುವ ನೀತಿಗಳು ಮತ್ತು ಕಾರ್ಯಕ್ರಮಗಳ ಕುರಿತು ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಗತ್ಯ ಸಹಾಯ ಹಾಗೂ ಸಲಹೆಗಳನ್ನು ನೀಡುತ್ತದೆ.
NCERT ಯ ಪ್ರಮುಖ ಪಾತ್ರಗಳು ಮತ್ತು ಕಾರ್ಯಗಳು:
- ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (NCF) ಅಭಿವೃದ್ಧಿಪಡಿಸುವ ನೋಡಲ್ ಸಂಸ್ಥೆಯಾಗಿದೆ:- ಇದು ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ನಿಗದಿಪಡಿಸುತ್ತದೆ.
- ಪಠ್ಯಪುಸ್ತಕಗಳ ಪ್ರಕಟಣೆ:- ಇದು ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ I ರಿಂದ XII ನೇ ತರಗತಿಗಳಿಗೆ ಮಾದರಿ ಪಠ್ಯಪುಸ್ತಕಗಳನ್ನು ಪ್ರಕಟಿಸುತ್ತದೆ. ಈ ಪುಸ್ತಕಗಳನ್ನು ಸಿಬಿಎಸ್‌ಇ (CBSE) ಸಂಯೋಜಿತ ಶಾಲೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಯುಪಿಎಸ್‌ಸಿ (UPSC), ಜೆಇಇ (JEE) ಹಾಗೂ ನೀಟ್ (NEET) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇವು ಅತ್ಯಗತ್ಯವಾಗಿವೆ.
- ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ:- ಇದು ಶಾಲಾ ಶಿಕ್ಷಣದಲ್ಲಿ ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಶಿಕ್ಷಕರಿಗೆ ಸೇವಾ-ಪೂರ್ವ ಹಾಗೂ ಸೇವಾನಿರತ ತರಬೇತಿಯನ್ನು ಒದಗಿಸುತ್ತದೆ.
- ಡಿಜಿಟಲ್ ಉಪಕ್ರಮಗಳು:- ಇ-ಪಾಠಶಾಲಾ ಮತ್ತು ದೀಕ್ಷಾ (DIKSHA) ದಂತಹ ವೇದಿಕೆಗಳ ಮೂಲಕ, ಇದು ಪಠ್ಯಪುಸ್ತಕಗಳು, ಆಡಿಯೋ ಮತ್ತು ವಿಡಿಯೋ ಸಂಪನ್ಮೂಲಗಳಿಗೆ ಉಚಿತ ಡಿಜಿಟಲ್ ಪ್ರವೇಶವನ್ನು ನೀಡುತ್ತದೆ.





















