ವರ್ಗ: National and International Current Affairs Kannada

  • ಮುಖ್ಯ ಚುನಾವಣಾ ಆಯುಕ್ತರ ವಜಾಗೊಳಿಸುವ ಪ್ರಕ್ರಿಯೆ | ಮೇಘಾಲಯದಲ್ಲಿ ಸ್ವಾಯತ್ತ ಜಿಲ್ಲಾ ಮಂಡಳಿಗಳು | ಸೈಟ್ಸ್ (CITES) | ನೀಲಗಿರಿ ತಾಹರ್ (Nilgiri Tahr) | ಲೋಕಪಾಲ್‌ನ ತನಿಖಾ ಮತ್ತು ಅಭಿಯೋಜನಾ (ದೋಷಾರೋಪ) ವಿಭಾಗ

    ಮುಖ್ಯ ಚುನಾವಣಾ ಆಯುಕ್ತರ ವಜಾಗೊಳಿಸುವ ಪ್ರಕ್ರಿಯೆ

    ರಾಜಕೀಯ

    ಇದೀಗ ಸುದ್ದಿಯಲ್ಲಿದೆ: 

    • ವಿರೋಧ ಪಕ್ಷಗಳು ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾದ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂಸತ್ತಿನಲ್ಲಿ ಅವರನ್ನು ವಜಾಗೊಳಿಸಲು ಮಹಾಭಿಯೋಗ ನಿರ್ಣಯವನ್ನು ಮಂಡಿಸಲು ಚಿಂತನೆ ನಡೆಸುತ್ತಿವೆ.

    ‘ಸಂವಿಧಾನದ 324ನೇ ವಿಧಿ’ಯ ಬಗ್ಗೆ:

      • ಭಾರತದ ಸಂವಿಧಾನದ 324ನೇ ವಿಧಿಯ ಪ್ರಕಾರ, ಭಾರತದ ಚುನಾವಣಾ ಆಯೋಗವು (ECI) ಒಬ್ಬರು ಮುಖ್ಯ ಚುನಾವಣಾ ಆಯುಕ್ತರನ್ನು (CEC) ಹಾಗೂ ರಾಷ್ಟ್ರಪತಿಗಳು ನಿರ್ಧರಿಸುವಷ್ಟು ಸಂಖ್ಯೆಯ ಇತರ ಚುನಾವಣಾ ಆಯುಕ್ತರನ್ನು (ECs) ಒಳಗೊಂಡಿರುತ್ತದೆ.
    • ಭಾರತದ ಚುನಾವಣಾ ಆಯೋಗವು ಈ ಕೆಳಗಿನ ಜವಾಬ್ದಾರಿಗಳನ್ನು ಹೊಂದಿದೆ:
    • ಸಂಸತ್ತು, ರಾಜ್ಯ ಶಾಸಕಾಂಗಗಳು ಹಾಗೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸುವುದು ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು.
    • ಚುನಾವಣಾ ಆಯುಕ್ತರನ್ನು ನೇಮಕ:- ಸಂಸತ್ತಿನ ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟು, ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ ಎಂದು ಸಂವಿಧಾನವು ಸ್ಪಷ್ಟಪಡಿಸುತ್ತದೆ.

    ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಸಾಂವಿಧಾನಿಕ ನಿಬಂಧನೆಗಳು:

      • ಭಾರತದ ಸಂವಿಧಾನದ 324(5) ನೇ ವಿಧಿಯ ಅನ್ವಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸುವ ಪ್ರಕ್ರಿಯೆಯ ರೀತಿಯಲ್ಲಿಯೇ ಮತ್ತು ಅದೇ ಆಧಾರಗಳ ಮೇರೆಗೆ ಮಾತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬಹುದು (ಪದಚ್ಯುತಿಗೊಳಿಸಬಹುದು).
      • ಮುಖ್ಯ ಚುನಾವಣಾ ಆಯುಕ್ತರ ವಜಾ ಕೋರುವ ನಿರ್ಣಯವನ್ನು ಸಂಸತ್ತಿನ ಯಾವುದೇ ಸದನದಲ್ಲಿ (ಲೋಕಸಭೆ ಅಥವಾ ರಾಜ್ಯಸಭೆ) ಮಂಡಿಸಬಹುದು. ಆದರೆ, ಆ ನಿರ್ಣಯದಲ್ಲಿ ವಜಾಗೊಳಿಸಲು ಇರುವ ನಿಖರವಾದ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
    • ಈ ನಿರ್ಣಯವನ್ನು ಮಂಡಿಸಲು ಕೆಳಕಂಡ ರೀತಿಯಲ್ಲಿ ಬೆಂಬಲ ಅಗತ್ಯವಿರುತ್ತದೆ:
        • ಲೋಕಸಭೆಯ ಕನಿಷ್ಠ 100 ಸದಸ್ಯರ ಬೆಂಬಲ, ಅಥವಾ
    • ರಾಜ್ಯಸಭೆಯ ಕನಿಷ್ಠ 50 ಸದಸ್ಯರ ಬೆಂಬಲ.
    • ಒಮ್ಮೆ ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಆರೋಪಗಳ ಕುರಿತು ತನಿಖೆ ನಡೆಸಲು ಲೋಕಸಭೆಯ ಸಭಾಧ್ಯಕ್ಷರು ಅಥವಾ ರಾಜ್ಯಸಭೆಯ ಸಭಾಪತಿಯವರು ಒಂದು ವಿಚಾರಣಾ ಸಮಿತಿಯನ್ನು ರಚಿಸುತ್ತಾರೆ.
    • ಒಂದು ವೇಳೆ ಈ ಸಮಿತಿಯು ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿದರೆ, ಆ ನಿರ್ಣಯವನ್ನು ಸಂಸತ್ತಿನಲ್ಲಿ ಮತದಾನಕ್ಕೆ ತೆಗೆದುಕೊಳ್ಳಲಾಗುತ್ತದೆ.
    • ನಂತರ, ಎರಡೂ ಸದನಗಳು ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (2/3ರಷ್ಟು) ‘ವಿಶೇಷ ಬಹುಮತ’ದೊಂದಿಗೆ ಆ ನಿರ್ಣಯವನ್ನು ಅಂಗೀಕರಿಸಬೇಕು. ಎರಡೂ ಸದನಗಳು ಈ ನಿರ್ಣಯವನ್ನು ಒಪ್ಪಿದ ನಂತರ, ಅಂತಿಮವಾಗಿ ರಾಷ್ಟ್ರಪತಿಗಳು ವಜಾಗೊಳಿಸುವ ಆದೇಶವನ್ನು ಹೊರಡಿಸುತ್ತಾರೆ.

    ಮೇಘಾಲಯದಲ್ಲಿ ಸ್ವಾಯತ್ತ ಜಿಲ್ಲಾ ಮಂಡಳಿಗಳು

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ‘ಪಶ್ಚಿಮ ಗಾರೊ ಹಿಲ್ಸ್’ ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಹಿಂಸಾಚಾರ ಮತ್ತು ಅಶಾಂತಿಯ ಹಿನ್ನೆಲೆಯಲ್ಲಿ, ಮೇಘಾಲಯದ ‘ಗಾರೊ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ’ಯ ಚುನಾವಣೆಯನ್ನು ಮುಂದೂಡಲಾಗಿದೆ.

    ಸ್ವಾಯತ್ತ ಜಿಲ್ಲಾ ಮಂಡಳಿಗಳ ಬಗ್ಗೆ ಸಾಂವಿಧಾನಿಕ ನಿಬಂಧನೆಗಳು:

    • ಭಾರತದ ಸಂವಿಧಾನದ 6ನೇ ಅನುಸೂಚಿಯ ವಿಧಿ 244(2) ಮತ್ತು 275(1) ರನ್ವಯ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂನಂತಹ ಈಶಾನ್ಯ ರಾಜ್ಯಗಳಲ್ಲಿರುವ ಬುಡಕಟ್ಟು ಪ್ರದೇಶಗಳಿಗೆ ವಿಶಿಷ್ಟವಾದ ಸ್ವಾಯತ್ತ ಆಡಳಿತ ವ್ಯವಸ್ಥೆಗಳನ್ನು ಒದಗಿಸುತ್ತದೆ.
    • ಮೇಘಾಲಯದಲ್ಲಿರುವ ‘ಸ್ವಾಯತ್ತ ಜಿಲ್ಲಾ ಮಂಡಳಿ’ಗಳು (ADCs) ಸ್ಥಳೀಯ ಬುಡಕಟ್ಟು ಸಮುದಾಯಗಳ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ 6ನೇ ಅನುಸೂಚಿಯ ಅಡಿಯಲ್ಲಿ ರಚಿಸಲಾದ ವಿಶೇಷ ಸ್ಥಳೀಯ ಸಾಯತ್ತ ಆಡಳಿತ ಸಂಸ್ಥೆಗಳಾಗಿವೆ.
    • ಈ ಮಂಡಳಿಗಳು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಹಣಕಾಸಿನ ಅಧಿಕಾರಗಳನ್ನು ಹೊಂದಿವೆ.

    ಪ್ರಮುಖ ಉದ್ದೇಶಗಳು:

    • ಬುಡಕಟ್ಟು ಜನಾಂಗದವರ ಭೂಮಿ ಮತ್ತು ಅವರ ಸಾಂಪ್ರದಾಯಿಕ ಪದ್ಧತಿಗಳನ್ನು ರಕ್ಷಿಸುವುದು.
    • ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಸ್ವಾಯತ್ತ ಆಡಳಿತವನ್ನು ಒದಗಿಸುವುದು.
    • ಬಾಹ್ಯ ಗುಂಪುಗಳಿಂದ ಈ ಸಮುದಾಯಗಳ ಮೇಲೆ ಆಗಬಹುದಾದ ಶೋಷಣೆಯನ್ನು ತಡೆಯಲು ಈ ಮಂಡಳಿಗಳು ಕಾರ್ಯನಿರ್ವಹಿಸುತ್ತವೆ.

    ಸೈಟ್ಸ್ (CITES)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ‘ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದ‘ದ (CITES) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ವಜಾಗೊಳಿಸಿದೆ.

    CITES ಒಪ್ಪಂದದ ಬಗ್ಗೆ:

    • CITES ಸಂಪೂರ್ಣ ರೂಪ:- ಕಾನ್ವೆಂಷನ್ ಆನ್ ಇಂಟರ್ನ್ಯಾಷನಲ್ ಟ್ರೇಡ್ ಇನ್ ಎಂಡೇಂಜೆರ್ಡ್ ಸ್ಪೆಷಿಸ್ ಆಫ್ ವೈಲ್ಡ್ ಫಾನಾ ಅಂಡ್ ಫ್ಲೋರಾ (ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದ).
    • ಕಾನೂನುಬದ್ಧವಾದ ಒಪ್ಪಂದ:- ಕಾಡು ಪ್ರಾಣಿಗಳ ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರವು ಆ ಪ್ರಭೇದಗಳ ಉಳಿವಿಗೆ ಅಪಾಯವಾಗದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.
    • ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ:- ಇದು ವನ್ಯಜೀವಿಗಳ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ; ಬದಲಾಗಿ, ಪರವಾನಗಿಗಳು ಮತ್ತು ವರ್ಗೀಕರಣಗಳ ವ್ಯವಸ್ಥೆಯ ಮೂಲಕ ಅದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
    • ಸಹಿ ಮತ್ತು ಜಾರಿ:- ಈ ಒಪ್ಪಂದಕ್ಕೆ 1973 ರಲ್ಲಿ ವಾಷಿಂಗ್ಟನ್ ಸಮ್ಮೇಳನದಲ್ಲಿ ಸಹಿ ಹಾಕಲಾಯಿತು ಹಾಗೂ ಇದು 1975 ರಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು.
    • ಆಡಳಿತ ನಿರ್ವಹಣೆ:- ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿರುವ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)ದ ಸಚಿವಾಲಯವು ಇದರ ಆಡಳಿತವನ್ನು ನಿರ್ವಹಿಸುತ್ತದೆ.
    • ಸದಸ್ಯ ರಾಷ್ಟ್ರಗಳು:- ಭಾರತವು ಸಹ ಸೇರಿದಂತೆ 180 ಕ್ಕೂ ಹೆಚ್ಚು ರಾಷ್ಟ್ರಗಳು.
    • ಸ್ವರೂಪ:- ಇದು ಸದಸ್ಯ ರಾಷ್ಟ್ರಗಳ ಮೇಲೆ ಕಾನೂನುಬದ್ಧವಾಗಿ ಬದ್ಧವಾಗಿರುತ್ತದೆ. ಆದರೆ, ಇದರ ಅನುಷ್ಠಾನವನ್ನು ಆಯಾ ದೇಶಗಳು ತಮ್ಮದೇ ಆದ ರಾಷ್ಟ್ರೀಯ ಕಾನೂನುಗಳ ಮೂಲಕ ಮಾಡಬೇಕಾಗುತ್ತದೆ.
    • ಸಾಂಸ್ಥಿಕ ಸ್ವರೂಪ:- ‘ಪಕ್ಷಗಳ ಸಮ್ಮೇಳನ’ (CoP) ಎಂಬುದು ಇದರ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಪ್ರತಿ 2-3 ವರ್ಷಗಳಿಗೊಮ್ಮೆ ಸಭೆ ಸೇರುತ್ತದೆ.

    ಮೂರು ಅನುಬಂಧಗಳು:

    • ಅನುಬಂಧ 1ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಒಳಗೊಂಡಿದೆ:- ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಇವುಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ. 
    • ಉದಾಹರಣೆ:- ಹುಲಿ, ಆನೆ (ಕೆಲವು ನಿರ್ದಿಷ್ಟ ಪ್ರಭೇದಗಳು) ಮತ್ತು ಖಡ್ಗಮೃಗ.
    • ಅನುಬಂಧ 2 – ತಕ್ಷಣವೆ ಅಳಿವಿನಂಚಿನಲ್ಲಿಲ್ಲದ, ಆದರೆ ಭವಿಷ್ಯದಲ್ಲಿ ಅಂತಹ ಅಪಾಯಕ್ಕೆ ಸಿಲುಕಬಹುದಾದ ಪ್ರಭೇದಗಳನ್ನು ಒಳಗೊಂಡಿದೆ:- ಇವುಗಳ ನಿಯಂತ್ರಿತ ವ್ಯಾಪಾರಕ್ಕೆ ಮಾತ್ರ ಅವಕಾಶವಿದೆ. 
    • ಉದಾಹರಣೆ:- ಅನೇಕ ಮರಮಟ್ಟುಗಳ ಪ್ರಭೇದಗಳು ಹಾಗೂ ಸಮುದ್ರ ಜೀವಿಗಳು (ಉದಾಹರಣೆಗೆ: ಶಾರ್ಕ್).
    • ಅನುಬಂಧ 3 – ಕನಿಷ್ಠ ಒಂದು ದೇಶದಲ್ಲಾದರೂ ಸಂರಕ್ಷಿಸಲ್ಪಟ್ಟಿರುವ ಪ್ರಭೇದಗಳನ್ನು ಒಳಗೊಂಡಿದೆ:- ಇವುಗಳ ವ್ಯಾಪಾರವನ್ನು ನಿಯಂತ್ರಿಸಲು ಇತರ ಸದಸ್ಯ ದೇಶಗಳು ಸಹಾಯ ಮಾಡುತ್ತವೆ.

    ಭಾರತ ಮತ್ತು CITES:

    • ಭಾರತವು 1976 ರಿಂದಲೇ ಈ ಒಪ್ಪಂದಕ್ಕೆ ಸಹಿ ಹಾಕಿದೆ:- ‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972’ ರ ಮೂಲಕ ಇದನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ.
    • ಪ್ರಮುಖ ಪ್ರಾಧಿಕಾರಗಳು:- 
    • ನಿರ್ವಹಣಾ ಪ್ರಾಧಿಕಾರ:- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
    • ವೈಜ್ಞಾನಿಕ ಪ್ರಾಧಿಕಾರ:- ಭಾರತೀಯ ವನ್ಯಜೀವಿ ಸಂಸ್ಥೆ (WII).

    ನೀಲಗಿರಿ ತಾಹರ್ (Nilgiri Tahr)

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿಯಿರುವ ಚೊಕ್ರಮುಡಿ ಬೆಟ್ಟಗಳು ಇದೀಗ ‘ನೀಲಗಿರಿ ತಾಹರ್’ಗಳ ಅತ್ಯುತ್ತಮ ನೈಸರ್ಗಿಕ ಆವಾಸಸ್ಥಾನವಾಗಿ ಮಾರ್ಪಟ್ಟಿವೆ.

    ನೀಲಗಿರಿ ತಾಹರ್ ಬಗ್ಗೆ:

    • ವೈಜ್ಞಾನಿಕ ಹೆಸರು:- ನೀಲಗಿರಿಟ್ರಾಗಸ್ ಹೈಲೋಕ್ರಿಯಸ್ (Nilgiritragus hylocrius).
    • ದೃಢಕಾಯದ ಪರ್ವತ ಕಾಡು ಮೇಕೆಯಾಗಿದೆ:- ಚಿಕ್ಕದಾದ ಮತ್ತು ಹಳದಿ-ಕಂದು ಬಣ್ಣದ ತುಪ್ಪಳವನ್ನು ಹೊಂದಿದೆ. 
    • ಇದು ತಮಿಳುನಾಡಿನ ರಾಜ್ಯ ಪ್ರಾಣಿಯಾಗಿದೆ.
    • ಆವಾಸಸ್ಥಾನ ಮತ್ತು ಭೌಗೋಳಿಕ ವ್ಯಾಪ್ತಿ:- ಇದು ಪ್ರಾಥಮಿಕವಾಗಿ ಕೇರಳ ಮತ್ತು ತಮಿಳುನಾಡಿನಾದ್ಯಂತ ಪಶ್ಚಿಮ ಘಟ್ಟಗಳ 400 ಕಿ.ಮೀ. ಉದ್ದದ ಪ್ರದೇಶಕ್ಕೆ ಮಾತ್ರ ಸೀಮಿತವಾದ (ಸ್ಥಳೀಯ) ಪ್ರಾಣಿಯಾಗಿದೆ.
    • ಸಂಪೂರ್ಣ ಸಸ್ಯಾಹಾರಿಯಾಗಿದೆ:- 120 ಕ್ಕೂ ಹೆಚ್ಚು ಪ್ರಭೇದದ ಹುಲ್ಲು, ಗಿಡಮೂಲಿಕೆಗಳು ಮತ್ತು ಪೊದೆಗಳನ್ನು ತಿನ್ನುತ್ತದೆ.
    • ಎದುರಿಸುತ್ತಿರುವ ಅಪಾಯಗಳು:- ಆವಾಸಸ್ಥಾನದ ನಾಶ (ಅರಣ್ಯನಾಶ, ತೋಟಗಾರಿಕೆ ವಿಸ್ತರಣೆ, ಜಲವಿದ್ಯುತ್ ಯೋಜನೆಗಳು), ಸಾಕುಪ್ರಾಣಿಗಳೊಂದಿಗಿನ ಸ್ಪರ್ಧೆ ಮತ್ತು ಬೇಟೆಯಾಡುವಿಕೆ.
    • ಸಂರಕ್ಷಣಾ ಸ್ಥಾನಮಾನ:-
    • IUCN ಕೆಂಪು ಪಟ್ಟಿಯಲ್ಲಿ:- ‘ಅಳಿವಿನಂಚಿನಲ್ಲಿರುವ’ (EN). 
    • ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ:-   1ನೇ ಅನುಸೂಚಿ.
    • ಕೇರಳದ ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಈ ಪ್ರಭೇದದ ಅತಿ ಹೆಚ್ಚು ಜನಸಂಖ್ಯೆ ಮತ್ತು ಅತಿ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ.

    ಲೋಕಪಾಲ್‌ನ ತನಿಖಾ ಮತ್ತು ಅಭಿಯೋಜನಾ (ದೋಷಾರೋಪ) ವಿಭಾಗ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ‘ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013’ರ ಅನ್ವಯ ‘ತನಿಖಾ ಮತ್ತು ಅಭಿಯೋಜನಾ ವಿಭಾಗ’ಗಳ ಕಾರ್ಯಾಚರಣೆಯ ಕುರಿತಂತೆ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರದಿಂದ ವಿವರಗಳನ್ನು ಕೋರಿದೆ. 
    • ಕಾಯ್ದೆ ಜಾರಿಯಾಗಿ ಒಂದು ದಶಕವೇ ಕಳೆದರೂ, ಈ ವಿಭಾಗಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿರುವ ಕುರಿತು ಸಮಿತಿಯು ಕಳವಳ ವ್ಯಕ್ತಪಡಿಸಿದೆ.

    ಲೋಕಪಾಲ್ ಬಗ್ಗೆ:

    • ಕೇಂದ್ರ ಮಟ್ಟದ ‘ಶಾಸನಬದ್ಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆ’ಯಾಗಿದೆ:- ಇದು “ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013”ರ ಅಡಿಯಲ್ಲಿ ರಚನೆಯಾಗಿದೆ. ಇದು 2019 ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಿತು. 
    • ಉದ್ದೇಶ:- ಸಾರ್ವಜನಿಕ ಹುದ್ದೆಗಳಲ್ಲಿರುವವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡುವ ಶಾಸನಬದ್ಧ ಜವಾಬ್ದಾರಿಯನ್ನು ಇದು ಹೊಂದಿದೆ.
    • ಸಾಂಸ್ಥಿಕ ರಚನೆ:- ಇದು, 
    1. ಒಬ್ಬ ಅಧ್ಯಕ್ಷರನ್ನು (ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಅಥವಾ ಗಣ್ಯ ವ್ಯಕ್ತಿಗಳು ಆಗಿರುತ್ತಾರೆ).
    2. 8 ಜನ ಸದಸ್ಯರು:- ಈ 8 ಜನ ಸದಸ್ಯರ ಪೈಕಿ 4 ಜನ ‘ನ್ಯಾಯಾಂಗ ಸದಸ್ಯರು’ ಆಗಿರಬೇಕು. ಮತ್ತು ಮಂಡಳಿಯ ಕನಿಷ್ಠ ಶೇ.50ರಷ್ಟು ಸದಸ್ಯರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗ (OBC), ಅಲ್ಪಸಂಖ್ಯಾತರು ಅಥವಾ ಮಹಿಳಾ ವರ್ಗಕ್ಕೆ ಸೇರಿದವರಾಗಿರಬೇಕು.
    • ನೇಮಕಾತಿ:- ಪ್ರಧಾನ ಮಂತ್ರಿಯವರ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಇವರನ್ನು ನೇಮಕ ಮಾಡುತ್ತಾರೆ. 
    • ಅಧಿಕಾರಾವಧಿ:- 5 ವರ್ಷಗಳು ಅಥವಾ 70 ವರ್ಷ ವಯಸ್ಸಾಗುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಇರುತ್ತದೆ.
    • ಅಧಿಕಾರ ವ್ಯಾಪ್ತಿ:- ಹಾಲಿ ಅಥವಾ ಮಾಜಿ ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಸಂಸತ್ ಸದಸ್ಯರು (MPs) ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು (ಎ, ಬಿ, ಸಿ ಮತ್ತು ಡಿ ವೃಂದಗಳು) ಇದರ ವ್ಯಾಪ್ತಿಗೆ ಬರುತ್ತಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಧನಸಹಾಯ ಪಡೆಯುವ ಅಥವಾ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯ ಸದಸ್ಯರು ಸಹ ಇದರ ತನಿಖಾ ವ್ಯಾಪ್ತಿಗೆ ಒಳಪಡುತ್ತಾರೆ.
    • ಅಧಿಕಾರಗಳು:- ಕೇಂದ್ರೀಯ ತನಿಖಾ ದಳದ (CBI) ಮೇಲೆ ಮೇಲ್ವಿಚಾರಣೆ ನಡೆಸುವ ಮತ್ತು ಅದಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಇದು ಹೊಂದಿದೆ. ಕೇಂದ್ರ ಸರ್ಕಾರಿ ನೌಕರರ ಮೇಲಿನ ದೂರುಗಳನ್ನು ‘ಕೇಂದ್ರ ಜಾಗೃತ ಆಯೋಗ’ಕ್ಕೆ (CVC) ವರ್ಗಾಯಿಸುವ ಅಧಿಕಾರವನ್ನೂ ಇದು ಹೊಂದಿದೆ.
    • ಪ್ರಧಾನಮಂತ್ರಿ ಹುದ್ದೆಗೆ ಇರುವ ವಿನಾಯಿತಿಗಳು:- ಅಂತರರಾಷ್ಟ್ರೀಯ ಸಂಬಂಧಗಳು, ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಪರಮಾಣು ಶಕ್ತಿ ಅಥವಾ ಬಾಹ್ಯಾಕಾಶ ಇಲಾಖೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯವರ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಇದು ವಿಚಾರಣೆ ಮಾಡುವಂತಿಲ್ಲ.
    • ಪ್ರಧಾನ ಮಂತ್ರಿಯವರ ವಿರುದ್ಧ ಯಾವುದೇ ವಿಚಾರಣೆಯನ್ನು ಪ್ರಾರಂಭಿಸಲು ಸಂಪೂರ್ಣ ಲೋಕಪಾಲ್ ಪೀಠದ ಪರಿಶೀಲನೆ ಮತ್ತು ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರ ಅನುಮೋದನೆ ಕಡ್ಡಾಯವಾಗಿ ಅಗತ್ಯವಿರುತ್ತದೆ.
  • ರಾಷ್ಟ್ರೀಯ ನೌಕಾಯಾನ ಮಂಡಳಿ (NSB) | ತೆಹ್ರಾನ್‌ನಲ್ಲಿ ಕಪ್ಪು ಮಳೆ | ವಿಶಾಖಪಟ್ಟಣದಲ್ಲಿ ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯ

    ರಾಷ್ಟ್ರೀಯ ನೌಕಾಯಾನ ಮಂಡಳಿ (NSB)

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಬದಲಾಗುತ್ತಿರುವ ಜಾಗತಿಕ ಭೂ-ರಾಜಕೀಯ ಸನ್ನಿವೇಶಗಳ ನಡುವೆ ಭಾರತದ ನೌಕಾಯಾನ ವಲಯದಲ್ಲಿ ಎದುರಾಗುತ್ತಿರುವ ಉದಯೋನ್ಮುಖ ಸವಾಲುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ನೌಕಾಯಾನ ಮಂಡಳಿ’ಯೊಂದಿಗೆ (NSB) ಉನ್ನತ ಮಟ್ಟದ ಸಂವಾದವನ್ನು ನಡೆಸಿದೆ.

    ರಾಷ್ಟ್ರೀಯ ನೌಕಾಯಾನ ಮಂಡಳಿಯ (NSB) ಬಗ್ಗೆ:

    • ಭಾರತದ ನೌಕಾಯಾನ ಮತ್ತು ಕಡಲ ಸಂಬಂಧಿತ ವಿಷಯಗಳ ಅತ್ಯುನ್ನತ ಸಲಹಾ ಸಂಸ್ಥೆಯಾಗಿದೆ:- ವಾಣಿಜ್ಯ ನೌಕಾಯಾನ ಕಾಯ್ದೆ, 1958ರ ಸೆಕ್ಷನ್ 23ರ ಅಡಿಯಲ್ಲಿ ಇದನ್ನು ಶಾಸನಬದ್ಧವಾಗಿ ರಚಿಸಲಾಗಿದೆ.
    • ಈ ಮಂಡಳಿಯು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಪ್ರಮುಖ ಉದ್ದೇಶ:- ರಾಷ್ಟ್ರೀಯ ನೌಕಾಯಾನ ನೀತಿಗಳು ಮತ್ತು ಕಡಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವುದು.
    • ಈ ಮಂಡಳಿಯ ಅಧ್ಯಕ್ಷರನ್ನು ಕೇಂದ್ರ ಸರ್ಕಾರವು ನೇಮಕ ಮಾಡುತ್ತದೆ.

    ತೆಹ್ರಾನ್‌ನಲ್ಲಿ ಕಪ್ಪು ಮಳೆ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ತೈಲ ನೆಲೆಗಳ ಮೇಲಿನ ದಾಳಿಯ ಬೆನ್ನಲ್ಲೇ ಇರಾನಿನ ರಾಜಧಾನಿ ತೆಹ್ರಾನ್‌ನಲ್ಲಿ “ಕಪ್ಪು ಮಳೆ” ಹಾಗೂ ತೀವ್ರ ಪ್ರಮಾಣದ ವಿಷಕಾರಿ ವಾಯುಮಾಲಿನ್ಯ ಉಂಟಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

    ಕಪ್ಪು ಮಳೆ (Black Rain) ಎಂದರೇನು?

    • ಬೃಹತ್ ಅಗ್ನಿ ಅನಾಹುತಗಳು ಅಥವಾ ಸ್ಫೋಟಗಳ ನಂತರ ವಾತಾವರಣಕ್ಕೆ ಬಿಡುಗಡೆಯಾಗುವ ಮಸಿ, ಬೂದಿ, ತೈಲದ ಕಣಗಳು ಮತ್ತು ರಾಸಾಯನಿಕ ಮಾಲಿನ್ಯಕಾರಕಗಳಿಂದ ಕಲುಷಿತಗೊಂಡ ಮಳೆಯನ್ನು ಇದು ಸೂಚಿಸುತ್ತದೆ.
    • ಸಾಮಾನ್ಯ ಮಳೆಯ ಶುದ್ಧ ನೀರಿನ ಹನಿಗಳ ಬದಲಾಗಿ, ಈ ಮಳೆಯು ಕಪ್ಪು ಬಣ್ಣದ ಎಣ್ಣೆಯುಕ್ತ ಕಣಗಳನ್ನು ಒಳಗೊಂಡಿರುತ್ತದೆ; ಇದರಿಂದಾಗಿ ಮಳೆಯ ನೀರು ಕಪ್ಪು ಅಥವಾ ಬೂದು ಬಣ್ಣಕ್ಕೆ ತಿರುಗುತ್ತದೆ.
    • ಬೃಹತ್ ಪ್ರಮಾಣದ ಬೆಂಕಿಯಿಂದಾಗಿ ಅಪಾರ ಮಾಲಿನ್ಯಕಾರಕಗಳು ಗಾಳಿಗೆ ಸೇರ್ಪಡೆಯಾದಾಗ ಮತ್ತು ಆ ಮಾಲಿನ್ಯದ ಕಣಗಳನ್ನು ಮಳೆಯು ಭೂಮಿಯನ್ನು ತಲುಪುವ ಮುನ್ನವೇ ಹೀರಿಕೊಂಡಾಗ ಸಾಮಾನ್ಯವಾಗಿ ಇಂತಹ ‘ಕಪ್ಪು ಮಳೆ’ ಸುರಿಯುತ್ತದೆ.
    • ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದರೆ, 1945 ರಲ್ಲಿ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯ ನಂತರ ವಿಕಿರಣಶೀಲ ಕಣಗಳು ಮತ್ತು ಛಿದ್ರಗೊಂಡ ಅವಶೇಷಗಳು ಮಳೆನೀರಿನೊಂದಿಗೆ ಬೆರೆತಾಗ ಇಂತಹದ್ದೇ ಭೀಕರ ವಿದ್ಯಮಾನಗಳು ಕಂಡುಬಂದಿದ್ದವು.

    ವಿಶಾಖಪಟ್ಟಣದಲ್ಲಿ ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ದೀರ್ಘಕಾಲೀನ ಪರಮಾಣು ಸಂಶೋಧನಾ ಕಾರ್ಯಕ್ರಮದ ಭಾಗವಾಗಿ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಉನ್ನತ-ಶಕ್ತಿಯ ‘ಪ್ರೋಟಾನ್ ವೇಗೋತ್ಕರ್ಷಕ’ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದೆ.

    ಪ್ರೋಟಾನ್ ಎಂದರೇನು?

    • ಪ್ರೋಟಾನ್ ಎಂಬುದು ಧನಾತ್ಮಕ ವಿದ್ಯುದಾವೇಶವನ್ನು ಹೊಂದಿರುವ ಉಪ-ಪರಮಾಣು ಕಣವಾಗಿದೆ. 
    • ಪ್ರೋಟಾನ್ ಪ್ರತಿಯೊಂದು ಮೂಲವಸ್ತುವಿನ ಪ್ರತಿಯೊಂದು ಪರಮಾಣು ನ್ಯೂಕ್ಲಿಯಸ್‌ನಲ್ಲಿ (ಕೇಂದ್ರದಲ್ಲಿ) ಕಂಡುಬರುತ್ತದೆ.

    ಪ್ರೋಟಾನ್ ವೇಗೋತ್ಕರ್ಷಕ ಸೌಲಭ್ಯದ ಬಗ್ಗೆ:

    • ವಿಶಾಖಪಟ್ಟಣದಲ್ಲಿ ಸ್ಥಾಪನೆಯಾಗುತ್ತಿರುವ ಈ ಉನ್ನತ-ಶಕ್ತಿಯ ಪ್ರೋಟಾನ್ ವೇಗೋತ್ಕರ್ಷಕವು, ‘ಥೋರಿಯಂ’ ಧಾತುವನ್ನು ಯುರೇನಿಯಂ ಇಂಧನವನ್ನಾಗಿ ಪರಿವರ್ತಿಸಲು ಅಗತ್ಯವಾದ ಉನ್ನತ-ಶಕ್ತಿಯ ನ್ಯೂಟ್ರಾನ್‌ಗಳನ್ನು ಉತ್ಪಾದಿಸುತ್ತದೆ.
    • ವಿಶಾಖಪಟ್ಟಣದಲ್ಲಿರುವ ಅತ್ಯುತ್ತಮ ತಾಂತ್ರಿಕ ಪರಿಸರ ವ್ಯವಸ್ಥೆ ಹಾಗೂ ರಿಯಾಕ್ಟರ್‌ಗಳನ್ನು ತಂಪುಗೊಳಿಸುವ ಪ್ರಕ್ರಿಯೆಗೆ ಸಮುದ್ರದ ನೀರು ಸುಲಭವಾಗಿ ಲಭ್ಯವಿರುವುದು ಈ ಯೋಜನೆಯ ಸ್ಥಾಪನೆಗೆ ವರದಾನವಾಗಿದೆ.
    • ಪ್ರಾಮುಖ್ಯತೆ:- ಈ ಪ್ರೋಟಾನ್ ವೇಗೋತ್ಕರ್ಷಕವನ್ನು ಭಾರತದ ಮಹತ್ವಾಕಾಂಕ್ಷೆಯ ದೀರ್ಘಕಾಲೀನ ಪರಮಾಣು ಕಾರ್ಯಕ್ರಮದ ಅತ್ಯಂತ ಪ್ರಮುಖ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
  • ಸಾವಿತ್ರಿಬಾಯಿ ಫುಲೆ | ಕುರುಂಬ ವರ್ಣಚಿತ್ರ ಕಲೆ | ಹಣಕಾಸು ಆರೋಗ್ಯ ಸೂಚ್ಯಂಕ, 2026

    ಸಾವಿತ್ರಿಬಾಯಿ ಫುಲೆ

    ಇತಿಹಾಸ

    ಇದೀಗ ಸುದ್ದಿಯಲ್ಲಿದ್ದಾರೆ: 

    • ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಾವಿತ್ರಿಬಾಯಿ ಫುಲೆ ಅವರ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿದರು.

    ಸಾವಿತ್ರಿಬಾಯಿ ಫುಲೆ (1831 – 1897) ಅವರ ಬಗ್ಗೆ:

    • ಇವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಯಿಗಾಂವ್ ಗ್ರಾಮದಲ್ಲಿ ಜನಿಸಿದರು.
    • ವಿವಾಹ:- 1840 ರಲ್ಲಿ, ತಮ್ಮ 9 ನೇ ವಯಸ್ಸಿನಲ್ಲಿ, ಇವರು 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು.
    • ಇವರನ್ನು ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂದು ಅಧಿಕೃತವಾಗಿ ಗುರುತಿಸಲಾಗಿದೆ.
    • ಹೆಣ್ಣುಮಕ್ಕಳಿಗಾಗಿ ದೇಶದ ಮೊದಲ ಶಾಲೆಯನ್ನು ಸ್ಥಾಪಿಸಿದರು:- ಈ ದಂಪತಿಗಳು 1848 ರಲ್ಲಿ, ಪುಣೆಯ ಭಿಡೆವಾಡದಲ್ಲಿ ಸ್ಥಾಪಿಸಿದರು.
    • ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಪ್ರಾರಂಭಿಸಿದರು:- ಈ ದಂಪತಿಗಳು 1863 ರಲ್ಲಿ, ಶಿಶುಹತ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ಭಾರತದ ಮೊದಲ ಶಿಶು ಆಶ್ರಯ ತಾಣವನ್ನು ಪ್ರಾರಂಭಿಸಿದರು.
    • ಇವರು ಅಂತರ್ಜಾತಿ ವಿವಾಹ ಹಾಗೂ ವಿಧವಾ ಪುನರ್ವಿವಾಹಗಳನ್ನು ಸಕ್ರಿಯವಾಗಿ ಪ್ರತಿಪಾದಿಸಿದರು. ಇದರೊಂದಿಗೆ ಬಾಲ್ಯವಿವಾಹ, ಸತಿ ಪದ್ಧತಿ ಮತ್ತು ವರದಕ್ಷಿಣೆ ಪಿಡುಗಿನ ನಿರ್ಮೂಲನೆ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದರು.
    • ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು:- ಫುಲೆ ದಂಪತಿಗಳು 1873 ರಲ್ಲಿ, ಸಮಾಜದಲ್ಲಿ ಸಮಾನತೆಯನ್ನು ತರುವ ಏಕೈಕ ಉದ್ದೇಶದಿಂದ ಸ್ಥಾಪಿಸಿದರು. ಇದು ಜಾತಿ, ಧರ್ಮ ಅಥವಾ ವರ್ಗ ತಾರತಮ್ಯವಿಲ್ಲದೆ ಎಲ್ಲರಿಗೂ ಮುಕ್ತವಾದ ವೇದಿಕೆಯಾಗಿತ್ತು.
    • ಸಾಹಿತ್ಯ ಕೃತಿಗಳು:- ಇವರು 1854 ರಲ್ಲಿ ‘ಕಾವ್ಯ ಫುಲೆ’ ಹಾಗೂ 1892 ರಲ್ಲಿ ‘ಬವನ್ ಕಾಶಿ ಸುಬೋಧ್ ರತ್ನಾಕರ್’ ಎಂಬ ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ.

    ಕುರುಂಬ ವರ್ಣಚಿತ್ರ ಕಲೆ

    ಇತಿಹಾಸ / ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಕುರುಂಬ ವರ್ಣಚಿತ್ರ ಕಲೆಯ ಪ್ರಕಾರವನ್ನು ರೂಢಿಸಿಕೊಂಡಿರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣ, ಈ ಪರಂಪರೆಯು ಪ್ರಸ್ತುತ ಅಳಿವಿನಂಚಿನಲ್ಲಿದೆ.

    ಕುರುಂಬ ವರ್ಣಚಿತ್ರಗಳ ಬಗ್ಗೆ:

    • ಕುರುಂಬ ಬುಡಕಟ್ಟು ಜನಾಂಗವು ರೂಢಿಸಿಕೊಂಡು ಬಂದಿರುವ ಈ ಕಲೆಯು 3000 ವರ್ಷಗಳಿಗಿಂತಲೂ ಹಳೆಯದಾದ ಇತಿಹಾಸವನ್ನು ಹೊಂದಿದೆ. ಇದು ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ‘ಎಳುತುಪಾರೈ’ಯಂತಹ ಶಿಲಾ ಕಲಾ ತಾಣಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ.
    • ಕುರುಂಬ ಬುಡಕಟ್ಟು ಜನಾಂಗವನ್ನು ‘ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು’ (PVTG) ಎಂದು ವರ್ಗೀಕರಿಸಲಾಗಿದೆ.
    • ಮೂಲತಃ ಈ ಚಿತ್ರಗಳನ್ನು ಮನೆ ಮತ್ತು ದೇವಾಲಯಗಳ ಗೋಡೆಗಳ ಮೇಲೆ ಅಥವಾ ಹಬ್ಬಗಳ ಸಂದರ್ಭದಲ್ಲಿ ಬಿಡಿಸಲಾಗುತ್ತಿತ್ತು. ಕಲಾವಿದರು ಮರದ ಅಂಟು ಸೇರಿದಂತೆ ನೈಸರ್ಗಿಕ ಅರಣ್ಯ ಮೂಲಗಳಿಂದ ಈ ವರ್ಣಚಿತ್ರಗಳಿಗೆ ಬೇಕಾದ ಬಣ್ಣಗಳನ್ನು ತಯಾರಿಸಿಕೊಳ್ಳುತ್ತಾರೆ.
    • ಈ ಜಾನಪದ ವರ್ಣಚಿತ್ರಗಳು ಸರಳವಾದ ರೇಖಾಕೃತಿಗಳು, ಚುಕ್ಕೆಗಳು ಮತ್ತು ಜ್ಯಾಮಿತೀಯ ವಿನ್ಯಾಸಗಳನ್ನು ಒಳಗೊಂಡಿರುತ್ತವೆ. ಇವುಗಳ ಮೂಲಕ ಬುಡಕಟ್ಟು ಆಚರಣೆಗಳು, ಹಬ್ಬಗಳು, ಜೇನುತುಪ್ಪ ಬೇಟೆ, ಪ್ರಕೃತಿ, ಪ್ರಾಣಿಗಳು ಹಾಗೂ ದೈನಂದಿನ ಸಮುದಾಯದ ಚಟುವಟಿಕೆಗಳನ್ನು ಚಿತ್ರಿಸಲಾಗುತ್ತದೆ.

    ಹಣಕಾಸು ಆರೋಗ್ಯ ಸೂಚ್ಯಂಕ, 2026

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ನೀತಿ ಆಯೋಗವು 2026ನೇ ಸಾಲಿನ ಎರಡನೇ ವಾರ್ಷಿಕ ‘ಹಣಕಾಸು ಆರೋಗ್ಯ ಸೂಚ್ಯಂಕ’ವನ್ನು (FHI) ಬಿಡುಗಡೆ ಮಾಡಿದೆ.

    ಹಣಕಾಸು ಆರೋಗ್ಯ ಸೂಚ್ಯಂಕದ ಬಗ್ಗೆ:

    • ಕಾರ್ಯವ್ಯಾಪ್ತಿ:- ಈ ಸೂಚ್ಯಂಕವು ಭಾರತದಲ್ಲಿನ ವಿವಿಧ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಅಥವಾ ಹಣಕಾಸಿನ ಆರೋಗ್ಯವನ್ನು ಮೌಲ್ಯಮಾಪನ ಮಾಡುತ್ತದೆ.
    • ಮಾನದಂಡಗಳು:- ವೆಚ್ಚದ ಗುಣಮಟ್ಟ, ಆದಾಯ ಕ್ರೂಢೀಕರಣ, ಆರ್ಥಿಕ ವಿವೇಚನೆ, ಸಾಲದ ಸೂಚ್ಯಂಕ ಮತ್ತು ಸಾಲದ ಸುಸ್ಥಿರತೆ ಮುಂತಾದ ಪ್ರಮುಖ ಮಾನದಂಡಗಳನ್ನು ಆಧರಿಸಿ ಈ ಮೌಲ್ಯಮಾಪನವನ್ನು ಮಾಡಲಾಗುತ್ತದೆ.
    • ದತ್ತಾಂಶ ಮೂಲ:- ಈ ವರದಿಗಾಗಿ ಅಗತ್ಯವಾದ ದತ್ತಾಂಶವನ್ನು ‘ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರು’ (CAG) ಅವರಿಂದ ಪಡೆಯಲಾಗಿದೆ.

    ಹಣಕಾಸು ಆರೋಗ್ಯ ಸೂಚ್ಯಂಕ, 2026ರ ಪ್ರಮುಖ ಅಂಶಗಳು:

    • ಒಟ್ಟಾರೆ ರಾಜ್ಯಗಳ ಶ್ರೇಯಾಂಕ:- 
    • ಅಗ್ರಸ್ಥಾನ:- ಒಡಿಶಾ ರಾಜ್ಯವು ತನ್ನ ಆರ್ಥಿಕ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 
    • ‘ಸಾಧಕ’ (Achiever) ರಾಜ್ಯಗಳು:- ಗೋವಾ ಮತ್ತು ಜಾರ್ಖಂಡ್
    • ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಗ್ರ ಐದು ಸ್ಥಾನಗಳಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿವೆ. 
    • ಹರಿಯಾಣ ರಾಜ್ಯವು ಮೂರು ಸ್ಥಾನಗಳಷ್ಟು ಮೇಲೇರುವ ಮೂಲಕ ಗಮನಾರ್ಹ ಸುಧಾರಣೆ ಕಂಡಿದೆ.
    • ಚೇತರಿಕೆ ತೋರಿಸುತ್ತಿರುವ ರಾಜ್ಯಗಳು:- ಬಿಹಾರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸಾಧಾರಣ ಮಟ್ಟದ ಸುಧಾರಣೆಯನ್ನು ಪ್ರದರ್ಶಿಸಿವೆ.
    • ಕಳಪೆ ಕಾರ್ಯಕ್ಷಮತೆಯ ರಾಜ್ಯಗಳು:- ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಶ್ರೇಯಾಂಕದ ಕೊನೆಯ ಸ್ಥಾನಗಳಲ್ಲಿ ಮುಂದುವರಿದಿದ್ದು, ಇದು ಈ ರಾಜ್ಯಗಳು ಎದುರಿಸುತ್ತಿರುವ ನಿರಂತರ ಆರ್ಥಿಕ ಸಂಕಷ್ಟವನ್ನು ಪ್ರತಿಬಿಂಬಿಸುತ್ತದೆ.
    • ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳು:- ಇದೇ ಮೊದಲ ಬಾರಿಗೆ ಈ ರಾಜ್ಯಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗಿದೆ. ಬಲವಾದ ಆದಾಯದ ಬೆಳವಣಿಗೆಯೊಂದಿಗೆ ಅರುಣಾಚಲ ಪ್ರದೇಶವು ‘ಸಾಧಕ’ ರಾಜ್ಯವಾಗಿ ಅಗ್ರಸ್ಥಾನದಲ್ಲಿದ್ದರೆ, ಉತ್ತರಾಖಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
  • ಅರಾವಳಿ ಬೆಟ್ಟಗಳು | ಭಾರತದ ಜೈವಿಕ ಆರ್ಥಿಕತೆಯು $300 ಶತಕೋಟಿ ಡಾಲರ್‌ಗಳತ್ತ ಮುನ್ನಡೆ | ರಿಲೀಫ್ (RELIEF) ಯೋಜನೆ | ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ | ವಿಶ್ವ ಸಂತೋಷದ ವರದಿ, 2026

    ಅರಾವಳಿ ಬೆಟ್ಟಗಳು

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ರಾಜಸ್ಥಾನದ ಅರಾವಳಿ ಬೆಟ್ಟಗಳ ಸಾಲಿನಲ್ಲಿ ನಡೆಯುತ್ತಿರುವ ಗಣಿಗಾರಿಕಾ ಪ್ರದೇಶಗಳನ್ನು ನಕ್ಷೆ ಮಾಡುವ ಮಹತ್ವದ ಕಾರ್ಯವನ್ನು ಸರ್ವೋಚ್ಚ ನ್ಯಾಯಾಲಯದ ‘ಕೇಂದ್ರೀಯ ಉನ್ನತಾಧಿಕಾರ ಸಮಿತಿ’ಯು ‘ಭಾರತೀಯ ಅರಣ್ಯ ಸಮೀಕ್ಷಾ ಸಂಸ್ಥೆ’ಗೆ (FSI) ವಹಿಸಿದೆ.

    ಅರಾವಳಿ ಬೆಟ್ಟಗಳ ಬಗ್ಗೆ:

    • ಉಗಮ:- ಪ್ರೊಟೆರೋಜೋಯಿಕ್ ಯುಗದಲ್ಲಿ (ಪ್ರಿ-ಕ್ಯಾಂಬ್ರಿಯನ್ ಅವಧಿ) ‘ಅರಾವಳಿ-ದೆಹಲಿ ಓರೊಜೆನಿ’ಯ (ಪರ್ವತ ನಿರ್ಮಾಣ ಪ್ರಕ್ರಿಯೆ) ಮೂಲಕ ಇವು ರೂಪುಗೊಂಡಿವೆ.
    • ಅತ್ಯಂತ ಪ್ರಾಚೀನ ‘ಮಡಿಕೆ ಪರ್ವತ ಶ್ರೇಣಿ ವ್ಯವಸ್ಥೆ’ಯಾಗಿದೆ:- ಲಕ್ಷಾಂತರ ವರ್ಷಗಳ ನಿರಂತರ ಸವೆತದಿಂದಾಗಿ ಪ್ರಸ್ತುತ ಇದು ಕೇವಲ “ಶೇಷ ಬೆಟ್ಟಗಳಾಗಿ” ಉಳಿದುಕೊಂಡಿದೆ.
    • ವ್ಯಾಪ್ತಿ:- ಗುಜರಾತ್‌ನಿಂದ (ಅಹಮದಾಬಾದ್) ಆರಂಭವಾಗಿ, ರಾಜಸ್ಥಾನ ಮತ್ತು ಹರಿಯಾಣದ ಮೂಲಕ ದೆಹಲಿಯವರೆಗೆ ಸುಮಾರು 670 ರಿಂದ 800 ಕಿ.ಮೀ ಉದ್ದಕ್ಕೂ ಈ ಪರ್ವತ ಶ್ರೇಣಿಯು ವಿಸ್ತರಿಸಿದೆ.
    • ಅತ್ಯುನ್ನತ ಶಿಖರ:- ರಾಜಸ್ಥಾನದ ಮೌಂಟ್ ಅಬುವಿನಲ್ಲಿರುವ ‘ಗುರು ಶಿಖರ’ (1,722 ಮೀಟರ್).
    • ಪ್ರಮುಖ ನದಿಗಳು:- ಬನಾಸ್, ಲೂನಿ, ಸಾಬರಮತಿ ಮತ್ತು ಸಾಹಿಬಿ ನದಿಗಳಿಗೆ ಈ ಬೆಟ್ಟಗಳು ಉಗಮ ಸ್ಥಾನವಾಗಿವೆ.
    • ಖನಿಜ ಸಂಪತ್ತು:- ತಾಮ್ರ, ಸತು, ಸೀಸ, ಬೆಳ್ಳಿ, ಅಮೃತಶಿಲೆ ಮತ್ತು ಗ್ರಾನೈಟ್‌ನಂತಹ ಬೆಲೆಬಾಳುವ ಖನಿಜ ಸಂಪನ್ಮೂಲಗಳಿಂದ ಈ ಪ್ರದೇಶವು ಸಮೃದ್ಧವಾಗಿದೆ.

    ಪರಿಸರ ವಿಜ್ಞಾನ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ:

    • ಹವಾಮಾನ ನಿಯಂತ್ರಕ:- ನೈಋತ್ಯ ಮುಂಗಾರು ಮಾರುತಗಳನ್ನು ಹಿಮಾಲಯದ ಕಡೆಗೆ ತಿರುವು ನೀಡುವ ಭೌಗೋಳಿಕ ತಡೆಗೋಡೆಯಾಗಿ ಇದು ಕಾರ್ಯನಿರ್ವಹಿಸುತ್ತದೆ; ತನ್ಮೂಲಕ ಉತ್ತರ ಭಾರತದ ಬಯಲು ಸೀಮೆಗಳಿಗೆ ಮಳೆ ತರಿಸಲು ನೆರವಾಗುತ್ತದೆ.
    • “ಹಸಿರು ಗೋಡೆ”:- ‘ಥಾರ್ ಮರುಭೂಮಿ’ಯು ಪೂರ್ವದ ಫಲವತ್ತಾದ ‘ಸಿಂಧೂ-ಗಂಗಾ ಬಯಲು ಸೀಮೆ’ಯತ್ತ ವಿಸ್ತರಿಸದಂತೆ ತಡೆಯುವ ನೈಸರ್ಗಿಕ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ.
    • ಅಂತರ್ಜಲ ಮರುಪೂರಣ:- ರಾಷ್ಟ್ರೀಯ ರಾಜಧಾನಿ ವಲಯ (NCR) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಇದು ಅಂತರ್ಜಲದ ಬಹುಮುಖ್ಯ ಮೂಲವಾಗಿದೆ.
    • ಜೀವವೈವಿಧ್ಯತೆ:- 300ಕ್ಕೂ ಹೆಚ್ಚು ಅಪರೂಪದ ಪಕ್ಷಿ ಪ್ರಭೇದಗಳಿಗೆ, ಹಾಗೂ ಚಿರತೆ, ಪಟ್ಟೆ ಕತ್ತೆಕಿರುಬ, ಮತ್ತು ‘ಹೊನ್ನರಿ’ಯಂತಹ ವನ್ಯಜೀವಿಗಳಿಗೆ ಇದು ನೆಚ್ಚಿನ ಆವಾಸಸ್ಥಾನವಾಗಿದೆ.

    ಭಾರತೀಯ ಅರಣ್ಯ ಸಮೀಕ್ಷಾ ಸಂಸ್ಥೆ(FSI)ಯ ಬಗ್ಗೆ:

    • ಸ್ಥಾಪನೆ:- 1981
    • ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
    • ಕಾರ್ಯ:- ಭಾರತದಾದ್ಯಂತ ಅರಣ್ಯ ಸಂಪನ್ಮೂಲಗಳನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿದೆ.
    • ಪ್ರಾಮುಖ್ಯತೆ:- ದೇಶದ ಅರಣ್ಯ ಹೊದಿಕೆಯಲ್ಲಿನ (ಅರಣ್ಯ ವ್ಯಾಪ್ತಿ) ಬದಲಾವಣೆಗಳನ್ನು ಮೌಲ್ಯಮಾಪನ ಮಾಡಲು ಪ್ರತಿ ಎರಡು ವರ್ಷಗಳಿಗೊಮ್ಮೆ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ’ (ISFR)ಯನ್ನು ಪ್ರಕಟಿಸುವುದು, ಹಾಗೂ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿನ ವೃಕ್ಷ ಸಂಪನ್ಮೂಲಗಳ ಸಮಗ್ರ ದಾಸ್ತಾನನ್ನು ನಿರ್ವಹಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ.

    ಭಾರತದ ಜೈವಿಕ ಆರ್ಥಿಕತೆಯು $300 ಶತಕೋಟಿ ಡಾಲರ್‌ಗಳತ್ತ ಮುನ್ನಡೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ‘ಜೈವಿಕ ಆರ್ಥಿಕತೆ’ಯು 2014ರಲ್ಲಿದ್ದ ಸುಮಾರು 10 ಶತಕೋಟಿ ಡಾಲರ್‌ಗಳಿಂದ, 2025ರ ಹೊತ್ತಿಗೆ 195 ಶತಕೋಟಿ ಡಾಲರ್‌ಗಳಿಗೂ ಅಧಿಕ ಮಟ್ಟಕ್ಕೆ ಏರಿಕೆಯಾಗುವ ಮೂಲಕ ಅಸಾಧಾರಣ ಬೆಳವಣಿಗೆಯನ್ನು ದಾಖಲಿಸಿದೆ; ಹಾಗೂ ಶೀಘ್ರದಲ್ಲೇ 300 ಶತಕೋಟಿ ಡಾಲರ್‌ಗಳ ಗುರಿಯನ್ನು ತಲುಪಲಿದೆ ಎಂದು ಕೇಂದ್ರ ಸಚಿವರು ಇತ್ತೀಚಿಗೆ ತಿಳಿಸಿದ್ದಾರೆ.

    ‘ಜೈವಿಕ ಆರ್ಥಿಕತೆ’ಯ ಬಗ್ಗೆ:

    • ‘ಜ್ಞಾನ-ಆಧಾರಿತ’ ಉತ್ಪಾದನಾ ಪ್ರಕ್ರಿಯೆ:- ಸುಸ್ಥಿರ ಆರ್ಥಿಕ ವ್ಯವಸ್ಥೆಯ ಚೌಕಟ್ಟಿನೊಳಗೆ ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ವಿವಿಧ ಆರ್ಥಿಕ ವಲಯಗಳಿಗೆ ಅಗತ್ಯವಿರುವ ಉತ್ಪನ್ನಗಳು, ಪ್ರಕ್ರಿಯೆಗಳು ಮತ್ತು ಸೇವೆಗಳನ್ನು ಒದಗಿಸುವ ‘ಜ್ಞಾನ-ಆಧಾರಿತ’ ಉತ್ಪಾದನಾ ಪ್ರಕ್ರಿಯೆಯನ್ನೇ ‘ಜೈವಿಕ ಆರ್ಥಿಕತೆ’ ಎನ್ನಲಾಗುತ್ತದೆ.
    • ಇದು ಕೃಷಿ, ಅರಣ್ಯ, ಮೀನುಗಾರಿಕೆ, ಆಹಾರ ಉತ್ಪಾದನೆ, ಜೈವಿಕ ತಂತ್ರಜ್ಞಾನ ಮತ್ತು ಜೈವಿಕ-ಇಂಧನ ಸೇರಿದಂತೆ ವೈವಿಧ್ಯಮಯ ವಲಯಗಳನ್ನು ಒಳಗೊಂಡಿದೆ.

    ಭಾರತದಲ್ಲಿನ ಜೈವಿಕ ಆರ್ಥಿಕತೆಯ ಪ್ರಮುಖ ಉಪ-ವಲಯಗಳು:

    • ಬಯೋಫಾರ್ಮಾ (ಜೈವಿಕ ಔಷಧ) ಅಥವಾ ಬಯೋಮೆಡಿಕಲ್ (ಜೈವ ವೈದ್ಯಕೀಯ):- ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಪ್ರಯೋಗಾಲಯದಲ್ಲಿ ಬೆಳೆಸಿದ ಅಂಗಾಂಶ ಮಾದರಿಗಳಂತಹ ವೈದ್ಯಕೀಯ ಉತ್ಪನ್ನಗಳು ಹಾಗೂ ಸೇವೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಇದು ಒಳಗೊಂಡಿದೆ.
    • ಬಯೋ-ಅಗ್ರಿ (ಜೈವಿಕ ಕೃಷಿ):- ಕುಲಾಂತರಿ (ತಳೀಯವಾಗಿ ಮಾರ್ಪಡಿಸಿದ) ಬೆಳೆಗಳು ಮತ್ತು ಪ್ರಾಣಿಗಳ ಅಭಿವೃದ್ಧಿ, ‘ನಿಖರ ಕೃಷಿ ತಂತ್ರಜ್ಞಾನ’ಗಳ ಅಳವಡಿಕೆ ಹಾಗೂ ಜೈವಿಕ-ಆಧಾರಿತ ಉತ್ಪನ್ನಗಳ ಉತ್ಪಾದನೆಯನ್ನು ಇದು ಒಳಗೊಂಡಿದೆ. (ಉದಾಹರಣೆಗೆ: ಬಿಟಿ ಹತ್ತಿ).
    • ಬಯೋ-ಇಂಡಸ್ಟ್ರಿಯಲ್ (ಜೈವಿಕ ಕೈಗಾರಿಕಾ ವಲಯ):- ಕಿಣ್ವಗಳು, ಜೈವಿಕ-ಸಂಶ್ಲೇಷಿತ ಮಾರ್ಗಗಳು ಮತ್ತು ಮರುಸಂಯೋಜಿತ ಡಿಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ಜೈವಿಕ-ಆಧಾರಿತ ರಾಸಾಯನಿಕಗಳು ಹಾಗೂ ಕೈಗಾರಿಕಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದನ್ನು ಇದು ಒಳಗೊಂಡಿದೆ.

    ಸರ್ಕಾರದ ಪ್ರಮುಖ ಉಪಕ್ರಮಗಳು:

    • ಬಯೋ-ಇ3 ನೀತಿ (BioE3 Policy):- ಇದು ಸುಸ್ಥಿರ ಜೈವಿಕ-ಉತ್ಪಾದನೆ ಮತ್ತು ಜೈವಿಕ-ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುತ್ತದೆ. ಸ್ಮಾರ್ಟ್ ಪ್ರೋಟೀನ್‌ಗಳು, ನಿಖರ ಚಿಕಿತ್ಸಕಗಳು ಮತ್ತು ‘ಹವಾಮಾನ-ಸ್ಥಿತಿಸ್ಥಾಪಕ ಕೃಷಿ’ಯ ಮೇಲೆ ಇದು ವಿಶೇಷ ಗಮನ ಹರಿಸಿದೆ.
    • ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ನಿಧಿ:- ಡೀಪ್-ಟೆಕ್ ಆವಿಷ್ಕಾರಗಳನ್ನು ಬೆಂಬಲಿಸಲು ಮತ್ತು ನವೋದ್ಯಮಗಳನ್ನು ಉನ್ನತ ಮಟ್ಟಕ್ಕೆ ಬೆಳೆಸಲು ₹1 ಲಕ್ಷ ಕೋಟಿ ಮೊತ್ತದ ಬೃಹತ್ ನಿಧಿಯನ್ನು ಸ್ಥಾಪಿಸಲಾಗಿದೆ.
    • ನವೋದ್ಯಮ ಮತ್ತು ಇನ್‌ಕ್ಯುಬೇಶನ್ ಬೆಂಬಲ:- ಭಾರತದಾದ್ಯಂತ ಜೈವಿಕ ತಂತ್ರಜ್ಞಾನ ವಲಯಗಳು ಮತ್ತು ನಾವೀನ್ಯತಾ ಕೇಂದ್ರಗಳನ್ನು ಬಲಪಡಿಸುವುದು ಇದರ ಗುರಿಯಾಗಿದೆ.
    • ಅಂತರ್ಗತ ಪ್ರತಿಭಾ ವಿಕಸನ:- 2ನೇ ಮತ್ತು 3ನೇ ದರ್ಜೆಯ (ಟೈರ್-2 & 3) ನಗರಗಳು, ಮಹಿಳಾ ಉದ್ಯಮಿಗಳು ಹಾಗೂ ಯುವ ಸಂಶೋಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ.

    ರಿಲೀಫ್ (RELIEF) ಯೋಜನೆ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಕಡಲ ಸಾರಿಗೆ ಅಡಚಣೆಗಳಿಂದ ಸಂಕಷ್ಟಕ್ಕೀಡಾಗಿರುವ ಭಾರತದ ರಫ್ತುದಾರರನ್ನು ಬೆಂಬಲಿಸಲು, ಕೇಂದ್ರ ಸರ್ಕಾರವು ‘ರಿಲೀಫ್’ (RELIEF) ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ.

    ರಿಲೀಫ್ ಯೋಜನೆ ( – RELIEF):

    • RELIEF ಸಂಪೂರ್ಣ ರೂಪ:- ರೆಸಿಲಿಯೆನ್ಸ್ ಅಂಡ್ ಲಾಜಿಸ್ಟಿಕ್ಸ್ ಇಂಟರ್ವೀನ್ಷನ್ ಫಾರ್ ಎಕ್ಸ್ಪೋರ್ಟ್ ಫಾಸೀಲಿಟೇಷನ್ (ರಫ್ತು ಸೌಲಭ್ಯಕ್ಕಾಗಿ ಸ್ಥಿತಿಸ್ಥಾಪಕತ್ವ ಮತ್ತು ಲಾಜಿಸ್ಟಿಕ್ಸ್ ಮಧ್ಯಸ್ಥಿಕೆ).
    • ಪ್ರಾರಂಭ:- 2026ರ ಮಾರ್ಚ್ 19ರಂದು ಭಾರತ ಸರ್ಕಾರವು ಪ್ರಾರಂಭಿಸಿದ ₹497 ಕೋಟಿ ವಿಶೇಷ ಉಪಕ್ರಮವಾಗಿದೆ.
    • ಉದ್ದೇಶ:- ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳಿಂದಾಗಿ ಎದುರಾಗಿರುವ ಸರಕು ಸಾಗಣೆ ದರಗಳ ಅಸಾಧಾರಣ ಏರಿಕೆ, ವಿಮಾ ಕಂತುಗಳ ತೀವ್ರ ಹೆಚ್ಚಳ ಮತ್ತು ಲಾಜಿಸ್ಟಿಕ್ಸ್ ಅಡಚಣೆಗಳನ್ನು ಎದುರಿಸುತ್ತಿರುವ ಭಾರತದ ರಫ್ತುದಾರರಿಗೆ ಅದರಲ್ಲೂ ವಿಶೇಷವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (MSMEs) ಆರ್ಥಿಕ ಬೆಂಬಲ ನೀಡುವುದು.
    • ಮಿಷನ್:- ಈ ಯೋಜನೆಯನ್ನು ‘ರಫ್ತು ಉತ್ತೇಜನಾ ಮಿಷನ್’ (EPM) ಅಡಿಯಲ್ಲಿ ಜಾರಿಗೊಳಿಸಲಾಗಿದೆ.
    • ಅನುಷ್ಠಾನ ಸಂಸ್ಥೆ:- ‘ಭಾರತೀಯ ರಫ್ತು ಸಾಲ ಖಾತರಿ ನಿಗಮ’ (ECGC).
    • ಗುರಿ ಪ್ರದೇಶ:- ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಸೌದಿ ಅರೇಬಿಯಾ, ಕುವೈತ್, ಕತಾರ್, ಓಮನ್, ಬಹ್ರೇನ್, ಇರಾಕ್, ಇರಾನ್, ಇಸ್ರೇಲ್ ಮತ್ತು ಯೆಮೆನ್ ದೇಶಗಳಿಗೆ ಸಾಗಿಸಲಾಗುತ್ತಿರುವ ಅಥವಾ ಆ ದೇಶಗಳ ಮೂಲಕ ಹಾದುಹೋಗುವ ಸರಕುಗಳಿಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ.
    • ಪ್ರಾಮುಖ್ಯತೆ:- ಕಡಲ ಮಾರ್ಗದ ಅಡಚಣೆಗಳ ಸಂದರ್ಭದಲ್ಲಿ ಆರ್ಥಿಕ ಅಪಾಯಗಳನ್ನು ತಗ್ಗಿಸುವುದು, ರಫ್ತು ಆದೇಶಗಳ ರದ್ದತಿಯನ್ನು ತಡೆಯುವುದು ಮತ್ತು ರಫ್ತು-ಸಂಯೋಜಿತ ವಲಯಗಳಲ್ಲಿನ ಉದ್ಯೋಗಗಳನ್ನು ರಕ್ಷಿಸುವುದು ಇದರ ಪ್ರಮುಖ ಮಹತ್ವವಾಗಿದೆ.

    ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಗ್ರಾಮೀಣ ಅಭಿವೃದ್ಧಿ ಹಾಗೂ ಶುದ್ಧ ಇಂಧನ (ಕಡಿಮೆ-ಹೊರಸೂಸುವಿಕೆಯ ನವೀಕರಿಸಬಹುದಾದ ಶಕ್ತಿ) ಉತ್ಪಾದನೆಯನ್ನು ಉತ್ತೇಜಿಸುವ ಮಹತ್ವಾಕಾಂಕ್ಷಿ ಗುರಿಯೊಂದಿಗೆ, ಕೇಂದ್ರ ಸಚಿವ ಸಂಪುಟವು 2026-31ರ ಅವಧಿಗೆ ಅನ್ವಯವಾಗುವಂತೆ ‘ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ’ಗೆ ಇತ್ತೀಚಿಗೆ ಅಧಿಕೃತ ಅನುಮೋದನೆ ನೀಡಿದೆ.

    ಸಣ್ಣ ಜಲವಿದ್ಯುತ್ (SHP) ಅಭಿವೃದ್ಧಿ ಯೋಜನೆಯ ಬಗ್ಗೆ:

    • ಇದೊಂದು ‘ಕೇಂದ್ರ ಪ್ರಾಯೋಜಿತ ಉಪಕ್ರಮ’ವಾಗಿದ್ದು, 2026ರ ಮಾರ್ಚ್‌ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಇದಕ್ಕೆ ಅನುಮೋದನೆ ದೊರೆತಿದೆ.
    • ಪ್ರಮುಖ ಉದ್ದೇಶ:- ದೇಶದ ದೂರದ, ಗುಡ್ಡಗಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಉತ್ತೇಜಿಸುವುದು ಹಾಗೂ ಗಣನೀಯವಾಗಿ ಹೆಚ್ಚಿಸುವುದು.
    • ಅನುಷ್ಠಾನ ಸಚಿವಾಲಯ:- ಕೇಂದ್ರ ‘ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ’ (MNRE).
    • ಗುರಿ:- 2026-27ನೇ ಹಣಕಾಸು ವರ್ಷದಿಂದ ಆರಂಭಿಸಿ 2030-31ನೇ ಹಣಕಾಸು ವರ್ಷದ ಒಳಗೆ, ಒಟ್ಟು 1,500 ಮೆಗಾವ್ಯಾಟ್ (MW) ಸಾಮರ್ಥ್ಯದ ನವೀಕರಿಸಬಹುದಾದ ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.

    ವಿಶ್ವ ಸಂತೋಷದ ವರದಿ, 2026

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಯುವಜನರು ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆಗೆ ವ್ಯಸನಿಗಳಾಗುತ್ತಿದ್ದು, ಇದು ಅವರ ಒಟ್ಟಾರೆ ಯೋಗಕ್ಷೇಮದ ಮೇಲೆ ತೀವ್ರ ಸ್ವರೂಪದ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಇತ್ತೀಚಿಗೆ ಬಿಡುಗಡೆಯಾದ ‘ವಿಶ್ವ ಸಂತೋಷದ ವರದಿ, 2026’ ತೀವ್ರ ಕಳವಳ ವ್ಯಕ್ತಪಡಿಸಿದೆ.

    ವಿಶ್ವ ಸಂತೋಷದ ವರದಿ, 2026 ರ ಬಗ್ಗೆ:

      • ಈ ವಾರ್ಷಿಕ ವರದಿಯನ್ನು ಸಿದ್ಧಪಡಿಸಿ ಪ್ರಕಟಿಸುವವರು:- ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’, ‘ಗ್ಯಾಲಪ್’ ಸಮೀಕ್ಷಾ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲ’ (SDSN) ಜಂಟಿಯಾಗಿ ಸಿದ್ಧಪಡಿಸಿ ಪ್ರಕಟಿಸುತ್ತವೆ.
      • ಸಂತೋಷದ ಶ್ರೇಯಾಂಕವನ್ನು ಮೌಲ್ಯಮಾಪನ ಮಾಡುವ 6 ಪ್ರಮುಖ ಮಾನದಂಡಗಳು:-
        1. ತಲಾದಾಯ (GDP per capita)
        2. ಆರೋಗ್ಯಕರ ಜೀವಿತಾವಧಿ
        3. ಸಾಮಾಜಿಕ ಬೆಂಬಲ ವ್ಯವಸ್ಥೆ
        4. ಬದುಕಿನ ಆಯ್ಕೆಗಳನ್ನು ನಿರ್ಧರಿಸುವ ಸ್ವಾತಂತ್ರ್ಯ 
        5. ಉದಾರತೆ
        6. ಭ್ರಷ್ಟಾಚಾರದ ಕುರಿತಾದ ಗ್ರಹಿಕೆ.
    • ಪ್ರಮುಖ ಶ್ರೇಯಾಂಕಗಳು:-
    • ಅಗ್ರ 3 ರಾಷ್ಟ್ರಗಳು:- ಫಿನ್‌ಲ್ಯಾಂಡ್ (1ನೇ ಸ್ಥಾನ – 2018 ರಿಂದ ಸತತವಾಗಿ ಅಗ್ರಸ್ಥಾನ ಕಾಯ್ದುಕೊಂಡಿದೆ), ಐಸ್‌ಲ್ಯಾಂಡ್ ಮತ್ತು ಡೆನ್ಮಾರ್ಕ್.
    • ಕೊನೆಯ 3 ರಾಷ್ಟ್ರಗಳು:- ಅಫ್ಘಾನಿಸ್ತಾನ (147ನೇ ಸ್ಥಾನ – ಅತ್ಯಂತ ಕೊನೆಯ ಸ್ಥಾನ), ಸಿಯೆರಾ ಲಿಯೋನ್ (146ನೇ ಸ್ಥಾನ) ಮತ್ತು ಮಲಾವಿ (145ನೇ ಸ್ಥಾನ).
    • ಪ್ರಸ್ತುತ ಭಾರತದ ಸ್ಥಾನ:- 116ನೇ ಸ್ಥಾನವನ್ನು ಪಡೆದುಕೊಂಡಿದೆ (2025ರ ವರದಿಯಲ್ಲಿ ಭಾರತ 118ನೇ ಸ್ಥಾನದಲ್ಲಿತ್ತು; ಹೀಗಾಗಿ ಪ್ರಸ್ತುತ ಶ್ರೇಯಾಂಕದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ).
  • ರಾಷ್ಟ್ರೀಯ ಲಸಿಕಾ ದಿನ – ಮಾರ್ಚ್ 16 | ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) | ಪಿಎಂ ಪೋಷಣ್ ಯೋಜನೆ (PM POSHAN Scheme) | ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA) | ಮೀಥೇನ್ ಹೊರಸೂಸುವಿಕೆಯ ತೀವ್ರ ತಾಣಗಳು

    ರಾಷ್ಟ್ರೀಯ ಲಸಿಕಾ ದಿನ – ಮಾರ್ಚ್ 16

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ರೋಗನಿರೋಧಕ ಲಸಿಕಾ ಅಭಿಯಾನದಲ್ಲಿ ಭಾರತವು ಸಾಧಿಸಿರುವ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸುವ ಉದ್ದೇಶದಿಂದ, ಮಾರ್ಚ್ 16 ರಂದು ‘ರಾಷ್ಟ್ರೀಯ ಲಸಿಕಾ ದಿನ’ವನ್ನು ಆಚರಿಸಲಾಯಿತು.
    • 1995ರಲ್ಲಿ ‘ಪಲ್ಸ್ ಪೋಲಿಯೊ ಕಾರ್ಯಕ್ರಮ’ದ ಅಡಿಯಲ್ಲಿ, ಮೊದಲ ಬಾರಿಗೆ ಬಾಯಿಯ ಮೂಲಕ ನೀಡುವ ಪೋಲಿಯೊ ಲಸಿಕೆಯ ಡೋಸ್ ಅನ್ನು ನೀಡಿದ ಐತಿಹಾಸಿಕ ದಿನದ ಸವಿನೆನಪಿಗಾಗಿ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

    ಸರ್ಕಾರದ ಪ್ರಮುಖ ಉಪಕ್ರಮಗಳು:

    • ಸಾರ್ವತ್ರಿಕ ಲಸಿಕಾ ಅಭಿಯಾನ ಕಾರ್ಯಕ್ರಮ (UIP):- 
    • ಪ್ರಾರಂಭ:- 1985
    • ಅನುಷ್ಠಾನ ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
    • ಪ್ರಮುಖ ಉದ್ದೇಶ:- ಮಕ್ಕಳು ಮತ್ತು ಗರ್ಭಿಣಿಯರಿಗೆ ವಿವಿಧ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಉಚಿತವಾಗಿ ಲಸಿಕೆಗಳನ್ನು ಒದಗಿಸುವುದು.
    • ಮಿಷನ್ ಇಂದ್ರಧನುಷ್:- 
    • ಪ್ರಾರಂಭ:- 2014ರ ಡಿಸೆಂಬರ್‌ನಲ್ಲಿ ಭಾರತ ಸರ್ಕಾರವು ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತು.
    • ಉದ್ದೇಶ:- ಇದುವರೆಗೂ ಲಸಿಕೆ ಪಡೆಯದ ಅಥವಾ ಭಾಗಶಃ ಮಾತ್ರ ಲಸಿಕೆ ಪಡೆದಿರುವ ಎಲ್ಲಾ ಮಕ್ಕಳು ಮತ್ತು ಗರ್ಭಿಣಿಯರನ್ನು ತಲುಪುವ ಮಹತ್ವಾಕಾಂಕ್ಷೆಯ ಉದ್ದೇಶ.

    ಇತ್ತೀಚಿನ ಉಪಕ್ರಮಗಳು (2026ರ ಗುರಿಗಳು):

    • ಎಚ್‌ಪಿವಿ ಲಸಿಕಾ ಅಭಿಯಾನ:- ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ, ದೇಶಾದ್ಯಂತ ಸುಮಾರು 1.15 ಕೋಟಿ ಹೆಣ್ಣುಮಕ್ಕಳಿಗೆ (14 ವರ್ಷ ವಯಸ್ಸಿನ) ಲಸಿಕೆ ನೀಡುವ ಬೃಹತ್ ಗುರಿಯನ್ನು ಇದು ಹೊಂದಿದೆ.
    • ಸ್ವದೇಶಿ ಟಿಡಿ(Td) ಲಸಿಕೆ:- ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ‘ಕೇಂದ್ರೀಯ ಸಂಶೋಧನಾ ಸಂಸ್ಥೆ’ಯಲ್ಲಿ (CRI) ಈ ಸ್ಥಳೀಯ ಲಸಿಕೆಯನ್ನು ಉತ್ಪಾದಿಸಲಾಗುತ್ತಿದ್ದು, ಸುಮಾರು 55 ಲಕ್ಷ ಡೋಸ್‌ಗಳನ್ನು ಪೂರೈಸಲು ಸರ್ಕಾರ ಯೋಜಿಸಿದೆ.

    ಡಿಜಿಟಲ್ ಉಪಕ್ರಮಗಳು:

    • ಇ-ವಿನ್ (eVIN):- ಇದು ಲಸಿಕೆಗಳ ದಾಸ್ತಾನು ಮತ್ತು ತಾಪಮಾನವನ್ನು ನೈಜ-ಸಮಯದಲ್ಲಿ ಮೇಲ್ವಿಚಾರಣೆ ಮಾಡುವ ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯಾಗಿದೆ.
    • ಯು-ವಿನ್ (U-Win):- ಇದೊಂದು ಡಿಜಿಟಲ್ ಲಸಿಕಾ ನೋಂದಣಿ ಮತ್ತು ಮೇಲ್ವಿಚಾರಣಾ ವೇದಿಕೆಯಾಗಿದೆ.
    • ಕೋ-ವಿನ್ (CoWIN):- ಭಾರತದಲ್ಲಿ 220 ಕೋಟಿಗೂ ಅಧಿಕ ಕೋವಿಡ್ ಲಸಿಕಾ ಡೋಸ್‌ಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಈ ಡಿಜಿಟಲ್ ವೇದಿಕೆಯು ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದೆ.

    ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO)

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ‘ಹಾರ್ಮುಜ್ ಜಲಸಂಧಿ’ಯ ಭದ್ರತೆಯನ್ನು ಕಾಪಾಡುವಲ್ಲಿ ನ್ಯಾಟೋ (NATO) ಮಿತ್ರರಾಷ್ಟ್ರಗಳು ನೆರವು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ’ಯಿಂದ (NATO) ಹೊರಬರುವ ಎಚ್ಚರಿಕೆಯನ್ನು ನೀಡಿದ್ದಾರೆ.

    ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO)ಯ ಬಗ್ಗೆ:

    • ಅಂತರ್‌-ಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ:- ‘ನ್ಯಾಟೋ’ (NATO)ವನ್ನು ‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’ (North Atlantic Alliance) ಎಂತಲೂ ಕರೆಯಲಾಗುತ್ತದೆ.
    • ಕೇಂದ್ರ ಕಚೇರಿ:- ಬ್ರಸೆಲ್ಸ್ (ಬೆಲ್ಜಿಯಂ)
    • ಸ್ಥಾಪನೆಯ ಹಿನ್ನೆಲೆ:- ಎರಡನೇ ಮಹಾಯುದ್ಧದ ನಂತರ, ಸೋವಿಯತ್ ಒಕ್ಕೂಟದ ಸಂಭವನೀಯ ದಾಳಿಗಳನ್ನು ಹಿಮ್ಮೆಟ್ಟಿಸಲು ‘ಸಾಮೂಹಿಕ ಭದ್ರತೆ’ಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ 1949ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. 
    • ಯುರೋಪ್ ಮತ್ತು ಉತ್ತರ ಅಮೆರಿಕದ 12 ರಾಷ್ಟ್ರಗಳು ‘ಉತ್ತರ ಅಟ್ಲಾಂಟಿಕ್ ಒಪ್ಪಂದ’ (ವಾಷಿಂಗ್ಟನ್ ಒಪ್ಪಂದ)ಕ್ಕೇ ಸಹಿ ಹಾಕುವ ಮೂಲಕ ಇದನ್ನು ಅಸ್ತಿತ್ವಕ್ಕೆ ತಂದವು.
    • ಸಾಮೂಹಿಕ ರಕ್ಷಣೆ:- ವಾಷಿಂಗ್ಟನ್ ಒಪ್ಪಂದದ 5ನೇ ವಿಧಿಯ ಅನ್ವಯ, ನ್ಯಾಟೋ ‘ಸಾಮೂಹಿಕ ರಕ್ಷಣೆ’ಯ ತತ್ವದಡಿ ಕಾರ್ಯನಿರ್ವಹಿಸುತ್ತದೆ. ಅಂದರೆ, 
    • ಯಾವುದೇ ಒಂದು ನ್ಯಾಟೋ ಸದಸ್ಯ ರಾಷ್ಟ್ರದ ಮೇಲಿನ ಶಸ್ತ್ರಾಸ್ತ್ರ ದಾಳಿಯನ್ನು, ಒಟ್ಟಾರೆ ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ.
    • 2001ರಲ್ಲಿ ಅಮೆರಿಕದ ಮೇಲೆ ನಡೆದ 9/11 ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಇತಿಹಾಸದಲ್ಲಿ ಇಲ್ಲಿಯವರೆಗೆ ಕೇವಲ ಒಮ್ಮೆ ಮಾತ್ರ ಈ 5ನೇ ವಿಧಿಯನ್ನು ಅಧಿಕೃತವಾಗಿ ಪ್ರಯೋಗಿಸಲಾಗಿದೆ.
    • ಸದಸ್ಯ ರಾಷ್ಟ್ರಗಳು:- ಪ್ರಸ್ತುತ ಈ ಸೇನಾ ಮೈತ್ರಿಕೂಟವು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
    • ಇತ್ತೀಚೆಗೆ ‘ಸ್ವೀಡನ್’ ದೇಶವು ಇದರ 32ನೇ ಸದಸ್ಯ ರಾಷ್ಟ್ರವಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದೆ.

    ಪಿಎಂ ಪೋಷಣ್ ಯೋಜನೆ (PM POSHAN Scheme)

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ‘ಪಿಎಂ ಪೋಷಣ್’ ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ಕಡ್ಡಾಯವಾಗಿ ಒದಗಿಸಬೇಕು ಹಾಗೂ ಈ ಯೋಜನೆಯ ವ್ಯಾಪ್ತಿಯನ್ನು 12ನೇ ತರಗತಿಯವರೆಗೆ ವಿಸ್ತರಿಸಬೇಕು ಎಂದು ‘ಸಂಸದೀಯ ಸ್ಥಾಯಿ ಸಮಿತಿ’ಯು ಕೇಂದ್ರ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.

    ಪಿಎಂ ಪೋಷಣ್ ಯೋಜನೆ (PM-POSHAN)ಯ ಬಗ್ಗೆ:

    • ಈ  ಮೊದಲು ‘ಮಧ್ಯಾಹ್ನದ ಬಿಸಿಯೂಟ ಯೋಜನೆ’ (MDMS) ಎಂದು ಕರೆಯಲ್ಪಡುತ್ತಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು 2021ರಲ್ಲಿ ‘ಪಿಎಂ ಪೋಷಣ್’ (ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್) ಎಂದು ಮರುನಾಮಕರಣ ಮಾಡಲಾಯಿತು.
    • ಇದು ಕೇಂದ್ರ ಶಿಕ್ಷಣ ಸಚಿವಾಲಯದ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2021-22 ರಿಂದ 2025-26ರ ವರೆಗಿನ ಅವಧಿಗೆ ಇದರ ಮುಂದುವರಿಕೆಗೆ ಸಂಪುಟದ ಅನುಮೋದನೆ ನೀಡಲಾಗಿದೆ.
    • ಇದೊಂದು ‘ಕೇಂದ್ರ ಪ್ರಾಯೋಜಿತ ಯೋಜನೆ’ಯಾಗಿದ್ದು (ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಿರ್ದಿಷ್ಟ ಅನುಪಾತದಲ್ಲಿ ಅನುದಾನ ಒದಗಿಸುತ್ತವೆ). ಸರ್ಕಾರಿ ಮತ್ತು ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ದಿನಕ್ಕೊಂದು ಬಿಸಿ ಊಟವನ್ನು ಒದಗಿಸುವುದು ಇದರ ಮೂಲ ಸ್ವರೂಪವಾಗಿದೆ.
    • ಪ್ರಮುಖ ಉದ್ದೇಶ:- ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ಹಾಗೂ ಹಸಿವನ್ನು (ಸಾಕಷ್ಟು ಆಹಾರ ಸೇವನೆಯ ಕೊರತೆ) ನೀಗಿಸುವುದು, ಹಾಗೂ ಅದೇ ಹೊತ್ತಿಗೆ ಶೈಕ್ಷಣಿಕ ಫಲಿತಾಂಶಗಳನ್ನು (ಶಾಲಾ ಹಾಜರಾತಿ ಹೆಚ್ಚಿಸುವುದು, ಶಾಲೆಯಲ್ಲೇ ಉಳಿಸಿಕೊಳ್ಳುವ ಪ್ರಮಾಣ ಹೆಚ್ಚಿಸುವುದು ಮತ್ತು ಕಲಿಕಾ ಸಾಮರ್ಥ್ಯವನ್ನು ಸುಧಾರಿಸುವುದು) ಏಕಕಾಲದಲ್ಲಿ ಉನ್ನತೀಕರಿಸುವುದು.

    ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA)

    ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಕೇಂದ್ರ ಸಚಿವ ಸಂಪುಟವು ₹33,660 ಕೋಟಿಗಳ ಬೃಹತ್ ಅನುದಾನದೊಂದಿಗೆ ‘ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ’ಗೆ (BHAVYA) ಅಧಿಕೃತ ಅನುಮೋದನೆ ನೀಡಿದೆ.

    ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA)ಯ ಬಗ್ಗೆ:

    • ಗುರಿ:- ‘ಪಿಎಂ ಗತಿಶಕ್ತಿ’ ರಾಷ್ಟ್ರೀಯ ಯೋಜನೆಯೊಂದಿಗೆ ಸಂಯೋಜನೆಗೊಂಡು, “ಭವಿಷ್ಯದ ಅಗತ್ಯತೆಗಳಿಗೆ ಸಜ್ಜಾದ 100 ಅತ್ಯಾಧುನಿಕ ಕೈಗಾರಿಕಾ ಪಾರ್ಕ್‌”ಗಳನ್ನು ನಿರ್ಮಿಸುವುದು ಇದರ ಪ್ರಮುಖ ಗುರಿಯಾಗಿದೆ. ಇದರಿಂದಾಗಿ ಈ ಪಾರ್ಕ್‌ಗಳಿಗೆ ‘ಬಹು-ಮಾದರಿ ಸಂಪರ್ಕ ವ್ಯವಸ್ಥೆ’ ಮತ್ತು ‘ಕೊನೆಯ ಹಂತದವರೆಗಿನ ಸಂಪರ್ಕ’ ಸುಲಭವಾಗಿ ಲಭ್ಯವಾಗಲಿದೆ.
    • ಈ ಕೈಗಾರಿಕಾ ಪಾರ್ಕ್‌ಗಳು ಕೈಗಾರಿಕಾ ಮೂಲಸೌಕರ್ಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದು, ದಕ್ಷತೆಯ ಕೊರತೆಯನ್ನು ತಗ್ಗಿಸುವುದು ಮತ್ತು ವಿವಿಧ ಕೈಗಾರಿಕಾ ವಲಯಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು ಇದರ ಮಹತ್ವಾಕಾಂಕ್ಷೆಯಾಗಿದೆ.
    • ಭೂಬಳಕೆ:- ಅಭಿವೃದ್ಧಿಗಾಗಿ 100 ರಿಂದ 1,000 ಎಕರೆಗಳವರೆಗಿನ ವಿಸ್ತೀರ್ಣದ ಕೈಗಾರಿಕಾ ಪಾರ್ಕ್‌ಗಳನ್ನು ಗುರುತಿಸಿ ನಿರ್ಮಿಸಲು ಉದ್ದೇಶಿಸಲಾಗಿದೆ.
    • ಹಣಕಾಸು ನೆರವು:- ಕೇಂದ್ರ ಸರ್ಕಾರವು ಪ್ರತಿ ಎಕರೆಗೆ 1 ಕೋಟಿ ರೂ.ಗಳವರೆಗೆ ಆರ್ಥಿಕ ನೆರವು ಒದಗಿಸಲಿದೆ. ಈ ಯೋಜನೆಯು ಕೇವಲ ಕೇಂದ್ರಕ್ಕೆ ಸೀಮಿತವಾಗಿರದೆ, ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನೂ ನಿರೀಕ್ಷಿಸುತ್ತದೆ.
    • ಮೂಲಸೌಕರ್ಯ:- ಆಂತರಿಕ ರಸ್ತೆಗಳು, ಭೂಗತ ಉಪಯುಕ್ತತೆಗಳು, ಒಳಚರಂಡಿ ವ್ಯವಸ್ಥೆ, ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳಂತಹ ಸುಸಜ್ಜಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
    • ಅನುಷ್ಠಾನ:- ಕೇಂದ್ರ ‘ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ’ (DPIIT) ಅಡಿಯಲ್ಲಿ ಬರುವ ‘ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ’ವು (NICDC) ಈ ಉಪಕ್ರಮದ ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
    • ಯೋಜನೆಯ ಅವಧಿ:- ಈ ಯೋಜನೆಯು 2026-27ನೇ ಸಾಲಿನಿಂದ ಪ್ರಾರಂಭವಾಗಿ ಒಟ್ಟು ಆರು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರಲಿದೆ.

    ‘ಪಿಎಂ ಗತಿಶಕ್ತಿ’ ಯೋಜನೆಯ ಬಗ್ಗೆ:

    • ಪ್ರಾರಂಭ:- 2021ರಲ್ಲಿ ಪ್ರಾರಂಭಿಸಲಾಯಿತು.
    • ಉದ್ದೇಶ:- ದೇಶದ ಸಮಗ್ರ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ವಿವಿಧ ವಲಯಗಳಾದ್ಯಂತ ತಡೆರಹಿತ ಸಂಪರ್ಕವನ್ನು ಉತ್ತೇಜಿಸುವುದು.
    • ಪ್ರಾಮುಖ್ಯತೆ:- ಇದು ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ‘ಪರಿವರ್ತನಾತ್ಮಕ ವಿಧಾನ’ವಾಗಿದೆ. 
    • ಈ ಯೋಜನೆಯ 7 ಪ್ರಮುಖ ಚಾಲಕ ಶಕ್ತಿಗಳೆಂದರೆ:- ರೈಲ್ವೆ, ರಸ್ತೆಗಳು, ಬಂದರುಗಳು, ಜಲಮಾರ್ಗಗಳು, ವಿಮಾನ ನಿಲ್ದಾಣಗಳು, ಸಮೂಹ ಸಾರಿಗೆ ಮತ್ತು ಸರಕು ಸಾಗಣೆ (ಲಾಜಿಸ್ಟಿಕ್ಸ್) ಮೂಲಸೌಕರ್ಯ.
    • ಅನುಷ್ಠಾನ:- ‘ಪಿಎಂ ಗತಿಶಕ್ತಿ’ಯು ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಸೌಕರ್ಯ ಯೋಜನೆಗಳಾದ ‘ಭಾರತಮಾಲಾ’, ‘ಸಾಗರಮಾಲಾ’, ಒಳನಾಡು ಜಲಮಾರ್ಗಗಳು, ಶುಷ್ಕ ಬಂದರುಗಳು, ಉಡಾನ್ (UDAN) ಮುಂತಾದವುಗಳನ್ನು ಒಂದೇ ವೇದಿಕೆಯಡಿ ಸಂಯೋಜಿಸುತ್ತದೆ.

    ಮೀಥೇನ್ ಹೊರಸೂಸುವಿಕೆಯ ತೀವ್ರ ತಾಣಗಳು

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಸ್ಟಾಪ್ ಮೀಥೇನ್ ಪ್ರಾಜೆಕ್ಟ್’ (UCLA) ನಡೆಸಿದ ಉಪಗ್ರಹ-ಆಧಾರಿತ ಸಂಶೋಧನೆಯು ಆಘಾತಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಕೇವಲ ಬೆರಳೆಣಿಕೆಯಷ್ಟು ತೈಲ ಮತ್ತು ಅನಿಲ ನಿಕ್ಷೇಪ ತಾಣಗಳು ಅಸಮಾನವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೀಥೇನ್ ಅನಿಲವನ್ನು ಹೊರಸೂಸುತ್ತಿವೆ ಎಂದು ಈ ವರದಿಯು ಎತ್ತಿ ತೋರಿಸಿದೆ.

    ಮೀಥೇನ್ (CH₄) ಕುರಿತಾದ ಮೂಲಭೂತ ಅಂಶಗಳು:

    • ಬಣ್ಣರಹಿತ, ವಾಸನೆರಹಿತ ಮತ್ತು ಹೆಚ್ಚು ದಹನಶೀಲವಾದ ಅನಿಲವಾಗಿದೆ:- ಇದು ‘ನೈಸರ್ಗಿಕ ಅನಿಲ’ದ ಪ್ರಾಥಮಿಕ ಹಾಗೂ ಪ್ರಮುಖ ಘಟಕವಾಗಿದೆ.
    • ಇಂಗಾಲದ ಡೈಆಕ್ಸೈಡ್‌ಗೆ (CO2) ಹೋಲಿಸಿದರೆ, ಮೀಥೇನ್ ವಾತಾವರಣದಲ್ಲಿ ಕೇವಲ 12 ವರ್ಷಗಳಷ್ಟು ಅಲ್ಪಾವಧಿಯ ಜೀವಿತಾವಧಿಯನ್ನು ಹೊಂದಿದೆ.
    • ಅತ್ಯಂತ ಪ್ರಬಲವಾದ ಹಸಿರುಮನೆ ಅನಿಲವಾಗಿದೆ (GHG):- ಅಲ್ಪಾವಧಿಯಲ್ಲಿ ತೀವ್ರತರವಾದ ತಾಪಮಾನ ಏರಿಕೆಗೆ ಕಾರಣವಾಗುತ್ತದೆ.
    • 20 ವರ್ಷಗಳ ಅವಧಿಯಲ್ಲಿ ವಾತಾವರಣದಲ್ಲಿ ಶಾಖವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ, ಇದು ಇಂಗಾಲದ ಡೈಆಕ್ಸೈಡ್‌ಗಿಂತ 80 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ.
    • ಕೈಗಾರಿಕಾ-ಪೂರ್ವ ಕಾಲಘಟ್ಟದಿಂದ ಇಲ್ಲಿಯವರೆಗೆ ಸಂಭವಿಸಿರುವ ಒಟ್ಟಾರೆ ಜಾಗತಿಕ ತಾಪಮಾನ ಏರಿಕೆಯಲ್ಲಿ, ಶೇಕಡಾ 30ರಷ್ಟು ಪಾಲು ಕೇವಲ ಮೀಥೇನ್ ಅನಿಲದ್ದೇ ಆಗಿದೆ.  
    • ಪ್ರಮುಖ ಮೂಲಗಳು:-
    • ಮಾನವ-ಪ್ರೇರಿತ ಮೂಲಗಳು:- ತೈಲ ಮತ್ತು ಅನಿಲ ಉತ್ಪಾದನೆ, ಕಲ್ಲಿದ್ದಲು ಗಣಿಗಾರಿಕೆ, ಜಾನುವಾರುಗಳ ಜೀರ್ಣಕ್ರಿಯೆ ಪ್ರಕ್ರಿಯೆ, ಮತ್ತು ಭೂಕುಸಿತ ಪ್ರದೇಶಗಳಲ್ಲಿ ತ್ಯಾಜ್ಯ ಕೊಳೆಯುವಿಕೆಯಿಂದ ಇದು ಹೆಚ್ಚಾಗಿ ಬಿಡುಗಡೆಯಾಗುತ್ತದೆ.
    • ನೈಸರ್ಗಿಕ ಮೂಲಗಳು:- ಜೌಗು ಪ್ರದೇಶಗಳು, ಸಾಗರ ಜಲಸಂಚಯಗಳು, ಹೈಡ್ರೇಟ್‌ಗಳು ಮತ್ತು ಜ್ವಾಲಾಮುಖಿಗಳಂತಹ ಭೌಗೋಳಿಕ ಮೂಲಗಳಿಂದ ಮೀಥೇನ್ ನೈಸರ್ಗಿಕವಾಗಿ ಬಿಡುಗಡೆಯಾಗುತ್ತದೆ.
  • ನಗೋಯಾ ಶಿಷ್ಟಾಚಾರದ ಕುರಿತು ಭಾರತದ ಮೊದಲ ರಾಷ್ಟ್ರೀಯ ವರದಿ (NR1) | 2027ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಆರಂಭ | ಗುಂಟೂರಿನಲ್ಲಿ ಗಜಪತಿ ರಾಜವಂಶದ ಶಾಸನ ಪತ್ತೆ | ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್ (Ladakh Magmatic Arc) | ದತ್ತು ಪಡೆಯುವ ತಾಯಂದಿರಿಗೆ ಸಮಾನ ಹೆರಿಗೆ ರಜೆ ಹಕ್ಕುಗಳು

    ನಗೋಯಾ ಶಿಷ್ಟಾಚಾರದ ಕುರಿತು ಭಾರತದ ಮೊದಲ ರಾಷ್ಟ್ರೀಯ ವರದಿ (NR1)

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಜೈವಿಕ ವೈವಿಧ್ಯತೆಯ ಆಡಳಿತದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿರುವ ‘ನಗೋಯಾ ಶಿಷ್ಟಾಚಾರ’ದ ಅನುಷ್ಠಾನದ ಕುರಿತಾದ ತನ್ನ ಮೊದಲ ರಾಷ್ಟ್ರೀಯ ವರದಿಯನ್ನು (NR1) ಭಾರತವು ಇತ್ತೀಚಿಗೆ ‘ಜೈವಿಕ ವೈವಿಧ್ಯತಾ ಸಮಾವೇಶದ ಸಚಿವಾಲಯ’ಕ್ಕೆ ಸಲ್ಲಿಸಿದೆ.

    ನಗೋಯಾ ಶಿಷ್ಟಾಚಾರದ ಬಗ್ಗೆ:

    • ಅಂಗೀಕಾರ:- 2010 ರ ಅಕ್ಟೋಬರ್ 29 ರಂದು ಜಪಾನ್‌ನ ‘ನಗೋಯಾ’ದಲ್ಲಿ ಈ ಅಂತರರಾಷ್ಟ್ರೀಯ ಶಿಷ್ಟಾಚಾರವನ್ನು ಅಂಗೀಕರಿಸಲಾಯಿತು.
    • ಜಾರಿ:- ಈ ಶಿಷ್ಟಾಚಾರವು 2014 ರ ಅಕ್ಟೋಬರ್ 12 ರಿಂದ ಜಾಗತಿಕವಾಗಿ ಜಾರಿಗೆ ಬಂದಿದೆ.
    • ಉದ್ದೇಶ:- ಜೈವಿಕ ಅಥವಾ ಆನುವಂಶಿಕ ಸಂಪನ್ಮೂಲಗಳ ನ್ಯಾಯಸಮ್ಮತ ಮತ್ತು ಸಮಾನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.
    • ಭಾರತವು ತನ್ನ ‘ಜೈವಿಕ ವೈವಿಧ್ಯತಾ ಕಾಯ್ದೆ, 2002’ ಕ್ಕೆ ಅನುಗುಣವಾಗಿ 2012 ರಲ್ಲಿಯೇ ಈ ಶಿಷ್ಟಾಚಾರವನ್ನು ಅಧಿಕೃತವಾಗಿ ಅಂಗೀಕರಿಸಿದೆ.

    2027ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಆರಂಭ

    ಪ್ರಶಸ್ತಿಗಳು/ಇತರೆ

    ಇದೀಗ ಸುದ್ದಿಯಲ್ಲಿದೆ: 

    • ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ‘2027ರ ಪದ್ಮ ಪ್ರಶಸ್ತಿ’ಗಳಿಗಾಗಿ ಕೇಂದ್ರ ಸರ್ಕಾರವು ನಾಮನಿರ್ದೇಶನ ಮತ್ತು ಶಿಫಾರಸುಗಳನ್ನು ಆಹ್ವಾನಿಸಿದೆ.

    ಪದ್ಮ ಪ್ರಶಸ್ತಿಗಳ ಬಗ್ಗೆ:

    • 1954 ರಲ್ಲಿ ಸ್ಥಾಪಿಸಲಾದ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ.
    • ಇವುಗಳನ್ನು ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ಪ್ರದಾನ ಮಾಡಲಾಗುತ್ತದೆ.
    • ‘ಪದ್ಮ ವಿಭೂಷಣ’ ಪ್ರಶಸ್ತಿಯನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
    • ‘ಪದ್ಮಭೂಷಣ’ ಪ್ರಶಸ್ತಿಯನ್ನು ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
    • ‘ಪದ್ಮಶ್ರೀ’ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
    • ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಗಳು ಅಥವಾ “ವಿಶಿಷ್ಟ ಕಾರ್ಯ”ಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
    • ಜಾತಿ, ಧರ್ಮ.ವೃತ್ತಿ, ಸ್ಥಾನಮಾನ ಅಥವಾ ಲಿಂಗ ಭೇದವಿಲ್ಲದೆ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ.
    • ಗಮನಿಸಿ: ಸಾರ್ವಜನಿಕ ವಲಯದ ಉದ್ಯಮಗಳ (PSU) ನೌಕರರು ಸೇರಿದಂತೆ ಯಾವುದೇ ಸರ್ಕಾರಿ ನೌಕರರು ಸಾಮಾನ್ಯವಾಗಿ ಈ ಪ್ರಶಸ್ತಿಗಳಿಗೆ ಅರ್ಹರಾಗಿರುವುದಿಲ್ಲ; ಆದರೆ, ವೈದ್ಯರು ಮತ್ತು ವಿಜ್ಞಾನಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
    • ಪದ್ಮ ಪ್ರಶಸ್ತಿಗಳನ್ನು “ಜನಸಾಮಾನ್ಯರ ಪದ್ಮ” ಪ್ರಶಸ್ತಿಗಳನ್ನಾಗಿ ಪರಿವರ್ತಿಸಲು ಸರ್ಕಾರವು ಬದ್ಧವಾಗಿದ್ದು, ಅರ್ಹ ಸಾಧಕರನ್ನು ನಾಮನಿರ್ದೇಶನ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸುತ್ತಿದೆ.
    • ಈ ಪ್ರಕ್ರಿಯೆಯಲ್ಲಿ ವ್ಯಕ್ತಿಗಳು ತಮ್ಮನ್ನು ತಾವೇ ನಾಮನಿರ್ದೇಶನ ಮಾಡಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ.
    • ಈ ನಾಮನಿರ್ದೇಶನಗಳು, ಆಯಾ ಕ್ಷೇತ್ರಗಳಲ್ಲಿ ನಾಮನಿರ್ದೇಶಿತ ವ್ಯಕ್ತಿ ಮಾಡಿರುವ ವಿಶಿಷ್ಟ ಸಾಧನೆಗಳ ಕುರಿತಾದ ವಿವರವಾದ ಮಾಹಿತಿಯನ್ನು ಕಡ್ಡಾಯವಾಗಿ ಒಳಗೊಂಡಿರಬೇಕು.
    • ನಾಮನಿರ್ದೇಶನಗಳನ್ನು ಆನ್‌ಲೈನ್ ಮೂಲಕ ಕೇವಲ ‘ರಾಷ್ಟ್ರೀಯ ಪುರಸ್ಕಾರ ಪೋರ್ಟಲ್’ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.
    • ಪ್ರತಿ ವರ್ಷ ಗಣರಾಜ್ಯೋತ್ಸವದ (ಜನವರಿ 26) ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
    • ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಧ್ಯುಕ್ತ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ.

    ಗುಂಟೂರಿನಲ್ಲಿ ಗಜಪತಿ ರಾಜವಂಶದ ಶಾಸನ ಪತ್ತೆ

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ:

    • ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಗಜಪತಿ ರಾಜವಂಶಕ್ಕೆ ಸೇರಿದ ಮಧ್ಯಕಾಲೀನ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ.
    • ದೇವಾಲಯದ ಮಂಟಪದಲ್ಲಿರುವ ಕಲ್ಲಿನ ಕಂಬವೊಂದರ ಮೇಲೆ ಈ ಶಾಸನವನ್ನು ಕೆತ್ತಲಾಗಿದೆ.
    • ಸಾ.ಶ. 15ನೇ ಶತಮಾನದಲ್ಲಿ ಪುರುಷೋತ್ತಮ ದೇವನ ಆಳ್ವಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಕುಮಾರಗುರು ಮಹಾಪಾತ್ರ’ ಎಂಬ ಅಧಿಕಾರಿಯ ಕುರಿತು ಈ ಶಾಸನವು ಉಲ್ಲೇಖಿಸುತ್ತದೆ.
    • ಆ ಕಾಲಘಟ್ಟದಲ್ಲಿ ನಡೆದ ಸತತ ಆಕ್ರಮಣಗಳ ಹಿನ್ನೆಲೆಯಲ್ಲಿ, ಕೊಂಡವೀಡು ಕೋಟೆಯಿಂದ ನರಸಿಂಹ ಸ್ವಾಮಿಯ ವಿಗ್ರಹ ಹಾಗೂ ಮಂಟಪದ ಕಂಬಗಳನ್ನು ಗುಂಟೂರಿಗೆ ಸ್ಥಳಾಂತರಿಸಲಾಯಿತು ಎಂಬ ಐತಿಹಾಸಿಕ ಮಾಹಿತಿಯನ್ನು ಈ ಶಾಸನವು ಒದಗಿಸುತ್ತದೆ.
    • ಮೂಲತಃ ಕೊಂಡವೀಡಿನ ಮಲ್ಲಿಕಾರ್ಜುನ ಸ್ವಾಮಿಗೆ ಸಮರ್ಪಿಸಲಾಗಿದ್ದ ಈ ಶಾಸನವನ್ನು, ತರುವಾಯ ಗುಂಟೂರು ದೇವಾಲಯಕ್ಕೆ ತಂದು ನಿಲ್ಲಿಸಲಾಗಿದೆ.

    ‘ಗಜಪತಿ ರಾಜವಂಶ’ದ ಬಗ್ಗೆ:

    • ಗಜಪತಿ ರಾಜವಂಶವು ಒಡಿಶಾದಲ್ಲಿ ಉಗಮಿಸಿ, 15 ಮತ್ತು 16ನೇ ಶತಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಪ್ರಬಲ ಮಧ್ಯಕಾಲೀನ ಸಾಮ್ರಾಜ್ಯವಾಗಿದೆ.
    • ಪೂರ್ವ ಗಂಗಾ ರಾಜವಂಶದ ಪತನದ ನಂತರ, ‘ಕಪಿಲೇಂದ್ರ ದೇವ’ ಎಂಬ ರಾಜನು ಈ ಗಜಪತಿ ರಾಜವಂಶವನ್ನು ಸ್ಥಾಪಿಸಿದನು.
    • ಈ ಸಾಮ್ರಾಜ್ಯವು ತನ್ನ ಉತ್ತುಂಗದ ಕಾಲದಲ್ಲಿ, ಪ್ರಸ್ತುತ ಪಶ್ಚಿಮ ಬಂಗಾಳದ ಕೆಲವು ಭಾಗಗಳಿಂದ ತಮಿಳುನಾಡಿನ ತಿರುಚಿರಾಪಳ್ಳಿಯವರೆಗೆ ವಿಸ್ತರಿಸಿತ್ತು. ‘ಕಟಕ’ (ಇಂದಿನ ಕಟಕ್) ನಗರವು ಈ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
    • ಗಜಪತಿ ಆಡಳಿತಗಾರರು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ್ಕೆ ನೀಡಿದ ಅಪಾರ ಪ್ರೋತ್ಸಾಹಕ್ಕಾಗಿ ಇತಿಹಾಸದಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ವಿಜಯನಗರ ಸಾಮ್ರಾಜ್ಯದೊಂದಿಗೆ ಇವರು ನಿರಂತರ ರಾಜಕೀಯ ಪೈಪೋಟಿಯನ್ನು ಹೊಂದಿದ್ದರು.

    ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್ (Ladakh Magmatic Arc)

    ಭೂಗೋಳ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಹಿಮಾಲಯನ್ ಭೂವಿಜ್ಞಾನದ ವಾಡಿಯಾ ಸಂಸ್ಥೆಯ’ ವಿಜ್ಞಾನಿಗಳು ವಾಯುವ್ಯ ಹಿಮಾಲಯದಲ್ಲಿರುವ ‘ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್’ನ (LMA) ವಿಕಸನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ (ಅರ್ಥೈಸಿದ್ದಾರೆ).

    ‘ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್’ನ ಬಗ್ಗೆ:

    • ಇದು ಭಾರತದ ಟ್ರಾನ್ಸ್-ಹಿಮಾಲಯನ್ ಪ್ರದೇಶದಲ್ಲಿ (ಹಿಮಾಲಯ ಶ್ರೇಣಿಯಾಚೆಯ ಪ್ರದೇಶ ) (ಮುಖ್ಯವಾಗಿ ಲಡಾಖ್) ಕಂಡುಬರುವ ಅಗ್ನಿಶಿಲೆಗಳ  ಒಂದು ಬೃಹತ್ ವಲಯವಾಗಿದೆ.
    • ಇದು ಬಹುಕಾಲದ ಹಿಂದೆಯೇ ಅಳಿದುಹೋದ ಪ್ರಾಚೀನ ‘ಜ್ವಾಲಾಮುಖಿ ಕಮಾನಿನ ವ್ಯವಸ್ಥೆ’ಯನ್ನು ಪ್ರತಿನಿಧಿಸುತ್ತದೆ.
    • ಪ್ರಸ್ತುತ ಅಸ್ತಿತ್ವದಲ್ಲಿರುವ ಲಡಾಖ್ ಪ್ರದೇಶವು ಒಂದು ಕಾಲದಲ್ಲಿ ‘ನಿಯೋ-ಟೆಥಿಸ್ ಮಹಾಸಾಗರ’ದ ಮೇಲ್ಭಾಗದಲ್ಲಿ ನೆಲೆಗೊಂಡಿತ್ತು ಎಂದು ಭೂವಿಜ್ಞಾನಿಗಳು ವಿವರಿಸಿದ್ದಾರೆ.
    • ಈ ಮಹಾಸಾಗರದ ತಳಭಾಗದಲ್ಲಿ, ‘ಭಾರತೀಯ ಭೂಫಲಕ’ದ ಸಾಗರ ಕವಚವು ‘ಯುರೇಷಿಯನ್ ಭೂಫಲಕ’ದ ಕಡೆಗೆ ನಿರಂತರವಾಗಿ ಚಲಿಸುತ್ತಿತ್ತು.
    • ಈ ಚಲನೆಯಿಂದಾಗಿ, ಹೆಚ್ಚಿನ ಸಾಂದ್ರತೆಯನ್ನು ಹೊಂದಿದ್ದ ಸಾಗರ ಫಲಕವು ಯುರೇಷಿಯನ್ ಫಲಕದ ಕೆಳಗೆ ಮುಳುಗಿತು/ನುಸುಳಿತು. (Subduction ಪ್ರಕ್ರಿಯೆ).
    • ಈ ಭೌಗೋಳಿಕ ಪ್ರಕ್ರಿಯೆಯು ಭೂಮಿಯ ಒಳಪದರವಾದ ‘ಮ್ಯಾಂಟಲ್’ (ಶಿಲಾಪಾಕ) ವಸ್ತುಗಳ ಕರಗುವಿಕೆಗೆ ಹಾಗೂ ‘ಮ್ಯಾಗ್ಮಾ’ (ಶಿಲಾರಸ) ಸೃಷ್ಟಿಗೆ ಕಾರಣವಾಯಿತು. ತದನಂತರ ಈ ಮ್ಯಾಗ್ಮಾ ಮೇಲಕ್ಕೆ ಚಿಮ್ಮಿ, ಜ್ವಾಲಾಮುಖಿ ಕಮಾನುಗಳು ರೂಪುಗೊಂಡವು.

    ದತ್ತು ಪಡೆಯುವ ತಾಯಂದಿರಿಗೆ ಸಮಾನ ಹೆರಿಗೆ ರಜೆ ಹಕ್ಕುಗಳು

    ಆಡಳಿತ ಮತ್ತು ಸಂವಿಧಾನ

    ಇದೀಗ ಸುದ್ದಿಯಲ್ಲಿದೆ: 

    • ಮಕ್ಕಳನ್ನು ದತ್ತು ಪಡೆಯುವ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ, ಮಗುವಿನ ವಯಸ್ಸನ್ನು ಪರಿಗಣಿಸದೆ 12 ವಾರಗಳ ‘ವೇತನ ಸಹಿತ ಹೆರಿಗೆ ರಜೆ’ ಪಡೆಯುವ ಹಕ್ಕಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

    ಕಾನೂನಿನ ಹಿನ್ನೆಲೆ:

    • ಭಾರತದಲ್ಲಿ ಹೆರಿಗೆ ಸೌಲಭ್ಯಗಳನ್ನು ಒದಗಿಸುವ ಕಾನೂನು ಚೌಕಟ್ಟು ‘ಹೆರಿಗೆ ಸೌಲಭ್ಯ ಕಾಯ್ದೆ, 1961’ರ ಅಡಿಯಲ್ಲಿ ರೂಪುಗೊಂಡಿದೆ. 2017ರಲ್ಲಿ ಈ ಕಾಯ್ದೆಗೆ ತರಲಾದ ತಿದ್ದುಪಡಿಯ ಮೂಲಕ, ಮೊದಲ ಬಾರಿಗೆ ದತ್ತು ಪಡೆಯುವ ತಾಯಂದಿರು ಮತ್ತು ಬಾಡಿಗೆ ತಾಯಂದಿರಿಗೆ 12 ವಾರಗಳ ಹೆರಿಗೆ ರಜೆಯನ್ನು ಮಂಜೂರು ಮಾಡಲಾಯಿತು.
    • ಆದಾಗ್ಯೂ, ದತ್ತು ಪಡೆದ ಮಗುವಿನ ವಯಸ್ಸು 3 ತಿಂಗಳಿಗಿಂತ ಕಡಿಮೆಯಿದ್ದರೆ ಮಾತ್ರ ಈ ಹೆರಿಗೆ ರಜೆ ಅನ್ವಯವಾಗುತ್ತದೆ ಎಂಬ ‘ನಿರ್ಬಂಧಿತ ಷರತ್ತನ್ನು’ ಕಾನೂನಿನಲ್ಲಿ ವಿಧಿಸಲಾಗಿತ್ತು.

    ಸರ್ವೋಚ್ಚ ನ್ಯಾಯಾಲಯದ ತೀರ್ಪು:

    • ಕಳವಳ:- ‘ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ’ದ (CARA) ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯುವ ಭಾರತದ ದತ್ತು ಪ್ರಕ್ರಿಯೆಯಲ್ಲಿ, ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಸಿಗುವುದು ಅತ್ಯಂತ ವಿರಳವಾಗಿದೆ.
    • ಇದರ ಪರಿಣಾಮವಾಗಿ, ದತ್ತು ಪಡೆಯುವ ಬಹುಪಾಲು ತಾಯಂದಿರಿಗೆ ಹೆರಿಗೆ ರಜೆಯ ಸೌಲಭ್ಯಗಳನ್ನು ವಾಸ್ತವವಾಗಿ ನಿರಾಕರಿಸಿದಂತಾಗಿತ್ತು. ಇದು ಕಾಯ್ದೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸಿ, ನಿಬಂಧನೆಯನ್ನು ಕೇವಲ ಭ್ರಮೆಯನ್ನಾಗಿಸಿತ್ತು.
    • ಮಗುವಿನ ವಯಸ್ಸಿನ ಆಧಾರದ ಮೇಲೆ ಮಾಡುವ ಇಂತಹ ವರ್ಗೀಕರಣವು ತಾರತಮ್ಯದಿಂದ ಕೂಡಿದ್ದು, ಸಂವಿಧಾನದ 14 ಮತ್ತು 21ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
    • ‘ದತ್ತು ಪಡೆಯುವಿಕೆ’ಯು ತಾಯ್ತನವನ್ನು ಹೊಂದುವ ಒಂದು ಸಮಾನ ಹಾಗೂ ಮಾನ್ಯವಾದ ಮಾರ್ಗವಾಗಿದೆ. ಹೀಗಾಗಿ, ದತ್ತು ಪಡೆಯುವ ತಾಯಂದಿರ ಹಕ್ಕುಗಳನ್ನು ‘ನೈಸರ್ಗಿಕ/ಜೈವಿಕ ಹೆರಿಗೆ’ಯ ಹಕ್ಕುಗಳಿಗಿಂತ ಭಿನ್ನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
  • ಭಾರತದ ಹಸ್ತಪ್ರತಿ ಪರಂಪರೆಯ ಸಮೀಕ್ಷೆ ಮತ್ತು ದಾಖಲೀಕರಣ | ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ (TFFF) | ಬುಡಕಟ್ಟು ಕಲಾ ಉತ್ಸವ, 2026 | ಎನ್.ಎಂ.ಡಿ.ಸಿ (NMDC) ಯಿಂದ ಕಬ್ಬಿಣದ ಅದಿರು ಉತ್ಪಾದನೆ | ಗೈನಾಂಡ್ರೊಮಾರ್ಫಿ (Gynandromorphy)

    ಭಾರತದ ಹಸ್ತಪ್ರತಿ ಪರಂಪರೆಯ ಸಮೀಕ್ಷೆ ಮತ್ತು ದಾಖಲೀಕರಣ

    ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಸಂಸ್ಕೃತಿ ಸಚಿವಾಲಯವು ಭಾರತದ ಅಗಾಧವಾದ ಹಸ್ತಪ್ರತಿ ಪರಂಪರೆಯನ್ನು ಗುರುತಿಸಲು ಮತ್ತು ಸಮಗ್ರವಾಗಿ ದಾಖಲಿಸಲು ಇದೇ ಮೊದಲ ಬಾರಿಗೆ ಮೂರು ತಿಂಗಳ ಅವಧಿಯ ‘ರಾಷ್ಟ್ರವ್ಯಾಪಿ ಸಮೀಕ್ಷೆ’ಯನ್ನು ಆರಂಭಿಸಿದೆ.
    • ಈ ಉಪಕ್ರಮವು 2025-26ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ‘ಜ್ಞಾನ ಭಾರತಂ ಅಭಿಯಾನ’ದ ಒಂದು ಪ್ರಮುಖ ಭಾಗವಾಗಿದೆ.

    ಈ ಉಪಕ್ರಮದ ಮಹತ್ವ:

    • ಪರಂಪರೆಯ ಸಂರಕ್ಷಣೆ:- ಡಿಜಿಟಲೀಕರಣ ಮತ್ತು ದಾಖಲೀಕರಣವು ನಶಿಸುತ್ತಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಸೂಕ್ಷ್ಮ ಹಸ್ತಪ್ರತಿಗಳನ್ನು ಸಂರಕ್ಷಿಸಲು ನೆರವಾಗುತ್ತದೆ.
    • ಸಂಶೋಧನೆಗೆ ಸುಲಭ ಲಭ್ಯತೆ:- ಕೇಂದ್ರೀಕೃತ ದತ್ತಾಂಶ ಸಂಗ್ರಹಣೆಯ ಸ್ಥಾಪನೆಯಿಂದಾಗಿ ಸಂಶೋಧಕರಿಗೆ ಹಾಗೂ ಸಾರ್ವಜನಿಕರಿಗೆ ಈ ಹಸ್ತಪ್ರತಿಗಳು ಅತ್ಯಂತ ಸುಲಭವಾಗಿ ಲಭ್ಯವಾಗಲಿವೆ.
    • ಬೌದ್ಧಿಕ ಚೌರ್ಯದ ತಡೆ:- ಕರಾರುವಕ್ಕಾದ ದಾಖಲೆಗಳು ಮತ್ತು ಮೆಟಾಡೇಟಾ ವ್ಯವಸ್ಥೆಯು ಹಸ್ತಪ್ರತಿಗಳ ಅಧಿಕೃತತೆಯನ್ನು ದೃಢೀಕರಿಸಲು ಹಾಗೂ ಅವುಗಳ ದುರ್ಬಳಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
    • ಸಾಂಸ್ಕೃತಿಕ ಪುನರುಜ್ಜೀವನ:- ಈ ಉಪಕ್ರಮದ ಮೂಲಕ ಭಾರತದ ಪ್ರಾಚೀನ ಜ್ಞಾನ ಮತ್ತು ಸಾಹಿತ್ಯ ಪರಂಪರೆಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಮಾನ್ಯತೆ ದೊರೆಯಲಿದೆ. 

    ಜ್ಞಾನ ಭಾರತಂ ಅಭಿಯಾನದ ಬಗ್ಗೆ:

    • ಪ್ರಮುಖ ಉದ್ದೇಶ:- ದೇಶದಾದ್ಯಂತ ಹಂಚಿಹೋಗಿರುವ ಐತಿಹಾಸಿಕ ಹಸ್ತಪ್ರತಿಗಳನ್ನು ಗುರುತಿಸಿ, ಸಂರಕ್ಷಿಸುವುದು.
    • ಗುರಿ:- ಶೈಕ್ಷಣಿಕ ಸಂಸ್ಥೆ, ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಗಳಲ್ಲಿ ಲಭ್ಯವಿರುವ 1 ಕೋಟಿಗೂ ಅಧಿಕ ಹಸ್ತಪ್ರತಿಗಳ “ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆ” ಕೈಗೊಳ್ಳುವುದು.
    • ಮಹತ್ವ:- ಐತಿಹಾಸಿಕ ಮೌಲ್ಯಗಳನ್ನು ಕಾಪಾಡುವುದು, ಪ್ರಾಚೀನ ಭಾರತೀಯ ಜ್ಞಾನ ಭಂಡಾರವನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ಹಸ್ತಪ್ರತಿಗಳ ದೀರ್ಘಕಾಲೀನ ಉಳಿವು ಮತ್ತು ಸಾರ್ವಕಾಲಿಕ ಲಭ್ಯತೆಯನ್ನು ಖಚಿತಪಡಿಸುವುದು..

    ಹಸ್ತಪ್ರತಿಗಳು ಎಂದರೇನು?

    • ಕೈಯಿಂದ ಬರೆಯಲಾದ ಪ್ರಾಚೀನ ಕೃತಿಗಳು:- ಕಾಗದ, ಮರದ ತೊಗಟೆ, ತಾಳೆಗರಿಗಳ ಮೇಲೆ ಕೈಯಿಂದ ಬರೆಯಲಾದ, ಕನಿಷ್ಠ 75 ವರ್ಷಗಳಷ್ಟು ಹಳೆಯದಾದ ಹಾಗೂ ಗಮನಾರ್ಹ ವೈಜ್ಞಾನಿಕ, ಐತಿಹಾಸಿಕ ಅಥವಾ ಸೌಂದರ್ಯಾತ್ಮಕ ಮೌಲ್ಯವನ್ನು ಹೊಂದಿರುವ ಪ್ರಾಚೀನ ಕೃತಿಗಳನ್ನು ‘ಹಸ್ತಪ್ರತಿ’ ಎಂದು ಕರೆಯಲಾಗುತ್ತದೆ. 
    • ಉದಾಹರಣೆ:- ಭೂರ್ಜ ಮರದ ತೊಗಟೆಯ ಮೇಲೆ ರಚಿಸಲಾದ, 3 ಅಥವಾ 4ನೇ ಶತಮಾನದ ‘ಬಕ್ಷಾಲಿ ಹಸ್ತಪ್ರತಿ’ಯು ಪ್ರಾಚೀನ ಭಾರತದ ಗಣಿತಶಾಸ್ತ್ರದ ಪಠ್ಯವಾಗಿದೆ. ಗಣಿತದಲ್ಲಿ ‘ಶೂನ್ಯದ’ (Zero) ಬಳಕೆಯನ್ನು ಉಲ್ಲೇಖಿಸಿರುವ ಅತ್ಯಂತ ಹಳೆಯ ಲಿಖಿತ ದಾಖಲೆ ಇದಾಗಿದೆ ಎಂದು ಪರಿಗಣಿಸಲಾಗಿದೆ.
    • ಬ್ರಾಹ್ಮಿ, ಕುಶಾನ್, ಗೌಡಿ, ಲೆಪ್ಚಾ ಮತ್ತು ಮೈಥಿಲಿ ಸೇರಿದಂತೆ ಸುಮಾರು 80 ಪ್ರಾಚೀನ ಲಿಪಿಗಳಲ್ಲಿ ರಚನೆಯಾಗಿರುವ ಅಂದಾಜು 1 ಕೋಟಿ ಹಸ್ತಪ್ರತಿಗಳನ್ನು ಭಾರತ ಹೊಂದಿದೆ.

    ಭಾರತದಲ್ಲಿ ಹಸ್ತಪ್ರತಿ ಸಂರಕ್ಷಣೆಗಾಗಿರುವ ಇತರ ಉಪಕ್ರಮಗಳು:

    • ರಾಷ್ಟ್ರೀಯ ಹಸ್ತಪ್ರತಿ ಅಭಿಯಾನ (NMM):- ಹಸ್ತಪ್ರತಿಗಳನ್ನು ಪತ್ತೆಹಚ್ಚಲು ಮತ್ತು ಸಂರಕ್ಷಿಸಲು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2003ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿತು.
    • ಭಾರತೀಯ ರಾಷ್ಟ್ರೀಯ ಗ್ರಂಥಾಲಯ, ಕೋಲ್ಕತ್ತಾ:- ಈ ಗ್ರಂಥಾಲಯವು ಸುಮಾರು 3,600 ಅಪರೂಪದ ಹಾಗೂ ಐತಿಹಾಸಿಕವಾಗಿ ಅತ್ಯಂತ ಪ್ರಮುಖವಾದ ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದೆ.
    • ಬಂಗಾಳದ ಏಷ್ಯಾಟಿಕ್ ಸೊಸೈಟಿ:- ಸರ್ ವಿಲಿಯಂ ಜೋನ್ಸ್ ಅವರು 1784ರ ಜನವರಿ 15ರಂದು ಇದನ್ನು ಸ್ಥಾಪಿಸಿದರು. ಇದು ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೊಳ್ಳುತ್ತದೆ.
    • ಅಭಿಲೇಖ್ ಪಟಲ್:- ಇದು ಹಸ್ತಪ್ರತಿಗಳು, ಪ್ರಾಚ್ಯ ದಾಖಲೆಗಳು ಮತ್ತು ಖಾಸಗಿ ಪತ್ರಗಳ ಅಪರೂಪದ ಸಂಗ್ರಹ ಸೇರಿದಂತೆ 1 ದಶಲಕ್ಷಕ್ಕೂ ಅಧಿಕ ಕಡತಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ‘ಭಾರತೀಯ ರಾಷ್ಟ್ರೀಯ ಅಭಿಲೇಖಾಗಾರ’ವು ರೂಪಿಸಿರುವ ಡಿಜಿಟಲ್ ವೇದಿಕೆಯಾಗಿದೆ.
    • ಜ್ಞಾನ-ಸೇತು:- ಹಸ್ತಪ್ರತಿಗಳ ಸಂರಕ್ಷಣೆ, ಲಿಪಿಗಳ ಅರ್ಥೈಸುವಿಕೆ, ಮರುಸ್ಥಾಪನೆ ಮತ್ತು ಸುಲಭ ಲಭ್ಯತೆಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನದ ಪರಿಹಾರಗಳನ್ನು ಕಂಡುಕೊಳ್ಳಲು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿ ಇದನ್ನು ಪ್ರಾರಂಭಿಸಲಾಗಿದೆ.
    • ಪ್ರಾಚೀನ ವಸ್ತುಗಳು ಮತ್ತು ಕಲಾ ನಿಧಿಗಳ ಕಾಯ್ದೆ, 1972:- ಬೆಲೆಬಾಳುವ ಹಸ್ತಪ್ರತಿಗಳು ಸೇರಿದಂತೆ ಭಾರತದ ಸಾಂಸ್ಕೃತಿಕ ಪರಂಪರೆಯ ಅಕ್ರಮ ರಫ್ತು ಮತ್ತು ಕಳ್ಳಸಾಗಣೆಯನ್ನು ತಡೆಯುವ ಪ್ರಮುಖ ಗುರಿಯನ್ನು ಈ ಕಾಯ್ದೆ ಹೊಂದಿದೆ.

    ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ (TFFF)

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ‘ಬೆಲೆಮ್‌’ನಲ್ಲಿ ಜರುಗಿದ “ಪಕ್ಷಗಳ ಸಮ್ಮೇಳನ- 30” (COP30) ಹವಾಮಾನ ಶೃಂಗಸಭೆಯು ಜಾಗತಿಕ ಅರಣ್ಯ ಸಂರಕ್ಷಣೆಯ ಕುರಿತು ಮಹತ್ವದ ಸಂದೇಶವನ್ನು ರವಾನಿಸಿದೆ. ಪರಿಣಾಮಕಾರಿ ಅರಣ್ಯ ಸಂರಕ್ಷಣೆಗೆ ಕೇವಲ ಆರ್ಥಿಕ ಬದ್ಧತೆಗಳಷ್ಟೇ ಸಾಲದು, ಬದಲಾಗಿ ‘ನಿರ್ಧಾರ ಕೈಗೊಳ್ಳುವ ಅಧಿಕಾರಗಳ’ ಮರುಹಂಚಿಕೆಯೂ ಅತ್ಯಗತ್ಯ ಎಂಬುದರತ್ತ ಜಾಗತಿಕ ಗಮನ ಸೆಳೆದಿದೆ.
    • ಈ ನಿಟ್ಟಿನಲ್ಲಿ, ಅರಣ್ಯ ಸಂರಕ್ಷಣಾ ಪ್ರಯತ್ನಗಳಿಗೆ ಹೊಸ ರೂಪು ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಬ್ರೆಜಿಲ್ ದೇಶವು ‘ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ’ (TFFF) ಎಂಬ ನೂತನ ಅರಣ್ಯ ಹಣಕಾಸು ವ್ಯವಸ್ಥೆಯನ್ನು ಪರಿಚಯಿಸಿದೆ.

    ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ (TFFF)ಯ ಬಗ್ಗೆ:

    • ‘ಕಾರ್ಯಕ್ಷಮತೆ-ಆಧಾರಿತ ಹಣಕಾಸು ಕಾರ್ಯವಿಧಾನವಾಗಿದೆ:- ಕೇವಲ ಅರಣ್ಯನಾಶದ ಪ್ರಮಾಣವನ್ನು ತಗ್ಗಿಸುವ ಗುರಿಗೆ ಸೀಮಿತವಾಗದೆ, ಅಸ್ತಿತ್ವದಲ್ಲಿರುವ ಅರಣ್ಯಗಳನ್ನು ಯಶಸ್ವಿಯಾಗಿ ಸಂರಕ್ಷಿಸಿ ಉಳಿಸುವ ರಾಷ್ಟ್ರಗಳಿಗೆ ಪ್ರೋತ್ಸಾಹ ನೀಡುವುದನ್ನು ಉದ್ದೇಶಿಸುತ್ತದೆ.
    • ದೀರ್ಘಕಾಲೀನ ಅರಣ್ಯ ಸಂರಕ್ಷಣೆಯನ್ನು ಬೆಂಬಲಿಸುವುದರ ಜೊತೆಗೆ, ಪಾಲುದಾರರಿಗೆ ಆರ್ಥಿಕ ಲಾಭವನ್ನು ತಂದುಕೊಡುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.
    • ಈ ನಿಧಿಗೆ ನಾರ್ವೆ ದೇಶವು $ 3 ಶತಕೋಟಿ ಡಾಲರ್‌ಗಳ ಗಣನೀಯ ಕೊಡುಗೆ ನೀಡಿದೆ. ಇದರೊಂದಿಗೆ ಈ ನಿಧಿಯು $ 5.5 ಶತಕೋಟಿ ಡಾಲರ್‌ಗಳಿಗೂ ಅಧಿಕ ಆರಂಭಿಕ ಬಂಡವಾಳವನ್ನು ಈಗಾಗಲೇ ಕ್ರೋಡೀಕರಿಸಿದೆ.

    ಬುಡಕಟ್ಟು ಕಲಾ ಉತ್ಸವ, 2026

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ನವದೆಹಲಿಯ ‘ಟ್ರಾವಂಕೂರ್ ಅರಮನೆ’ಯಲ್ಲಿ ಆಯೋಜಿಸಲಾಗಿದ್ದ ‘ಬುಡಕಟ್ಟು ಕಲಾ ಉತ್ಸವ 2026’ ಭಾರತದ ಶ್ರೀಮಂತ ಬುಡಕಟ್ಟು ಕಲಾ ಪರಂಪರೆಯನ್ನು ಜಗತ್ತಿಗೆ ಅನಾವರಣಗೊಳಿಸಿತು.

    ಪ್ರದರ್ಶನಗೊಂಡ ಪ್ರಮುಖ ಬುಡಕಟ್ಟು ಕಲಾ ಪ್ರಕಾರಗಳು:

    1. ವಾರ್ಲಿ ಚಿತ್ರಕಲೆ (Warli Painting):
    • ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿರುವ ಈ ಕಲೆಯನ್ನು ಪ್ರಮುಖವಾಗಿ ‘ವಾರ್ಲಿ’ ಬುಡಕಟ್ಟು ಜನಾಂಗದವರು ರೂಢಿಸಿಕೊಂಡಿದ್ದಾರೆ. 
    • ಇದರ ಮೂಲವು ನವಶಿಲಾಯುಗಕ್ಕೆ (ಕ್ರಿ. ಪೂ. 2500–3000) ಸೇರಿದೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.
    • ಪ್ರಮುಖ ಲಕ್ಷಣಗಳು:- 
    • ಮಣ್ಣಿನ ಗೋಡೆಗಳ ಮೇಲೆ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಬಿಳಿ ಬಣ್ಣವನ್ನು ಬಳಸಿ ಚಿತ್ರಗಳನ್ನು ರಚಿಸಲಾಗುತ್ತದೆ.
    • ವೃತ್ತಗಳು, ತ್ರಿಕೋನಗಳು ಮತ್ತು ಚೌಕಗಳಂತಹ ಮೂಲಭೂತ ಜ್ಯಾಮಿತೀಯ ಆಕಾರಗಳ ಮೂಲಕ ಮಾನವ ಹಾಗೂ ಪ್ರಕೃತಿಯ ನಡುವಿನ ಒಡನಾಟವನ್ನು ಬಿಂಬಿಸಲಾಗುತ್ತದೆ.
    • ಕೃಷಿ, ಧಾರ್ಮಿಕ ಆಚರಣೆಗಳು, ಬೇಟೆ ಮತ್ತು ‘ತರ್ಪಾ’ ನೃತ್ಯವು ಈ ಚಿತ್ರಕಲೆಯ ಪ್ರಮುಖ ಕಥಾವಸ್ತುಗಳಾಗಿವೆ.
    1. ರಾಭಾ ಮತ್ತು ತಮಾಂಗ್ ಮುಖಗವಸುಗಳು/ ಮುಖವಾಡಗಳು:
      • ಅಸ್ಸಾಂ ಮತ್ತು ಉತ್ತರ ಬಂಗಾಳದ ‘ರಾಭಾ’ ಬುಡಕಟ್ಟು ಜನಾಂಗದಲ್ಲಿ ಮುಖಗವಸುಗಳ ತಯಾರಿಕೆಯು ಅತ್ಯಂತ ಪ್ರಮುಖ ಕಲಾ ಪ್ರಕಾರವಾಗಿದೆ.
    • ಪ್ರಮುಖ ಲಕ್ಷಣಗಳು:- 
    • ಮರ, ಬಿದಿರು, ಸೋರೆಕಾಯಿ ಅಥವಾ ಜೇಡಿಮಣ್ಣನ್ನು ಬಳಸಿ ತಯಾರಿಸುವ ಈ ಮುಖಗವಸುಗಳನ್ನು ಆಕರ್ಷಕ ಬಣ್ಣಗಳಿಂದ ಸಿಂಗರಿಸಲಾಗುತ್ತದೆ.
    • ದೇವರು, ದುಷ್ಟಶಕ್ತಿಗಳು, ಪ್ರಾಣಿಗಳು ಹಾಗೂ ಪೌರಾಣಿಕ ಜೀವಿಗಳನ್ನು ಪ್ರತಿನಿಧಿಸುವ ಈ ಮುಖಗವಸುಗಳನ್ನು ಹೆಚ್ಚಾಗಿ ಧಾರ್ಮಿಕ ನೃತ್ಯಗಳು ಮತ್ತು ಜಾನಪದ ನಾಟಕಗಳಲ್ಲಿ ಬಳಸಲಾಗುತ್ತದೆ.
    1. ಗೋಂಡ ಕಲೆ:
    • ಗೋಂಡ ಚಿತ್ರಕಲೆಯು ಮಧ್ಯ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯಪ್ರದೇಶದಲ್ಲಿ ಉಗಮಿಸಿದೆ. 
    • ಇದು ‘ಭೌಗೋಳಿಕ ಸೂಚ್ಯಂಕ’’ (GI ಟ್ಯಾಗ್) ಮಾನ್ಯತೆಯನ್ನು ಪಡೆದಿದ್ದು, ಕಾನೂನಾತ್ಮಕ ಸಂರಕ್ಷಣೆ ಹಾಗೂ ಜಾಗತಿಕ ಮನ್ನಣೆಯನ್ನು ಗಳಿಸಿದೆ.
    • ಪ್ರಮುಖ ಲಕ್ಷಣಗಳು:- 
    • ಆಕರ್ಷಕ ಹಾಗೂ ಸಂಕೀರ್ಣ ವಿನ್ಯಾಸಗಳನ್ನು ರಚಿಸಲು ಚುಕ್ಕೆಗಳು ಮತ್ತು ರೇಖೆಗಳನ್ನು ಬಳಸುವುದು ಇದರ ವಿಶಿಷ್ಟತೆಯಾಗಿದೆ.
    • ಜಾನಪದ ಕಥೆಗಳು, ಪ್ರಾಣಿಗಳು, ಅರಣ್ಯ ಹಾಗೂ ಪರಿಸರ ವ್ಯವಸ್ಥೆಯನ್ನು ಆಧರಿಸಿದ ಕಥಾವಸ್ತುಗಳು ಈ ಕಲೆಯಲ್ಲಿ ಹಾಸುಹೊಕ್ಕಾಗಿವೆ.
    1. ಭಿಲ್ ಚಿತ್ರಕಲೆ:
    • ಇದು ಭಾರತದ ಅತ್ಯಂತ ಪ್ರಾಚೀನ ಬುಡಕಟ್ಟು ಕಲಾ ಸಂಪ್ರದಾಯಗಳಲ್ಲಿ ಒಂದಾಗಿದೆ.
    • ಭಾರತದ ಅತಿದೊಡ್ಡ ಮೂಲನಿವಾಸಿ ಬುಡಕಟ್ಟು ಗುಂಪುಗಳಲ್ಲಿ ಒಂದಾದ ‘ಭಿಲ್’ ಬುಡಕಟ್ಟು ಜನಾಂಗವು ಈ ಕಲೆಯನ್ನು ರೂಢಿಸಿಕೊಂಡಿದೆ. 
    • ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ ಮತ್ತು ರಾಜಸ್ಥಾನದಲ್ಲಿ ಇದನ್ನು ಪ್ರಮುಖವಾಗಿ ಕಾಣಬಹುದು.
    • ಪ್ರಮುಖ ಲಕ್ಷಣಗಳು:- 
    • ಬೀಜಗಳು ಮತ್ತು ಪ್ರಕೃತಿಯ ಲಯವನ್ನು ಸಂಕೇತಿಸುವ ಸಾವಿರಾರು ಬಣ್ಣ-ಬಣ್ಣದ ಚುಕ್ಕೆಗಳನ್ನು ಈ ಚಿತ್ರಕಲೆಯಲ್ಲಿ ಬಳಸಲಾಗುತ್ತದೆ.
    • ದೇವತೆಗಳು, ಪ್ರಾಣಿಗಳು, ದಟ್ಟ ಅರಣ್ಯಗಳು ಮತ್ತು ದೈನಂದಿನ ಜೀವನದ ಚಿತ್ರಣವು ಈ ಕಲೆಯ ಕಥಾವಸ್ತುಗಳಾಗಿವೆ.

    ಎನ್.ಎಂ.ಡಿ.ಸಿ (NMDC) ಯಿಂದ ಕಬ್ಬಿಣದ ಅದಿರು ಉತ್ಪಾದನೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು’ (NMDC Limited) ಒಂದೇ ಆರ್ಥಿಕ ವರ್ಷದಲ್ಲಿ (2025-26) 50 ಮಿಲಿಯನ್ ಟನ್ (MT) ಕಬ್ಬಿಣದ ಅದಿರನ್ನು ಉತ್ಪಾದಿಸಿದೆ. ಈ ಮೂಲಕ, ಇಂತಹ ಬೃಹತ್ ಸಾಧನೆ ಮಾಡಿದ ಭಾರತದ ‘ಮೊದಲ ಗಣಿಗಾರಿಕಾ ಕಂಪನಿ’ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕಬ್ಬಿಣದ ಅದಿರಿನ ಬಗ್ಗೆ:

    • ಲೋಹೀಯ ಕಬ್ಬಿಣವನ್ನು ಹೊರತೆಗೆಯಲು ಬಳಸುವ ಶಿಲೆಗಳು ಮತ್ತು ಖನಿಜಗಳನ್ನು ‘ಕಬ್ಬಿಣದ ಅದಿರು’ ಎಂದು ಕರೆಯಲಾಗುತ್ತದೆ.
    • ಅದಿರಿನಲ್ಲಿರುವ ಕಬ್ಬಿಣದ ಅಂಶ ಹಾಗೂ ಗುಣಮಟ್ಟದ ಆಧಾರದ ಮೇಲೆ ಇದನ್ನು ನಾಲ್ಕು ಮುಖ್ಯ ಪ್ರಕಾರಗಳಾಗಿ ವಿಂಗಡಿಸಲಾಗಿದೆ:
      • ಮ್ಯಾಗ್ನೆಟೈಟ್:- ಇದು ಅತ್ಯುತ್ತಮ ಗುಣಮಟ್ಟದ ಅದಿರಾಗಿದ್ದು, ಶೇ 70 ಕ್ಕಿಂತ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
      • ಹೆಮಟೈಟ್:- ಇದು ಅತ್ಯಂತ ಪ್ರಮುಖ ಕೈಗಾರಿಕಾ ಅದಿರಾಗಿದ್ದು, ಶೇ 60 ರಿಂದ 70 ರಷ್ಟು ಕಬ್ಬಿಣದ ಅಂಶವನ್ನು ಹೊಂದಿದೆ.
      • ಲಿಮೋನೈಟ್:- ಇದು ಕಡಿಮೆ ಗುಣಮಟ್ಟದ ಅದಿರಾಗಿದ್ದು, ಶೇ 40 ರಿಂದ 60 ರಷ್ಟು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
      • ಸಿಡೆರೈಟ್:- ಇದು ಅತ್ಯಂತ ಕಳಪೆ ಗುಣಮಟ್ಟದ ಅದಿರಾಗಿದ್ದು, ಶೇ 40 ಕ್ಕಿಂತ ಕಡಿಮೆ ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
    • ಆಸ್ಟ್ರೇಲಿಯಾ, ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳ ನಂತರ, ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ 4ನೇ ಅತಿದೊಡ್ಡ ರಾಷ್ಟ್ರವಾಗಿದೆ.
    • ಭಾರತದಲ್ಲಿ ಉತ್ಪಾದನೆಯ ದೃಷ್ಟಿಯಿಂದ ‘ಒಡಿಶಾ’ ರಾಜ್ಯವು ಮುಂಚೂಣಿಯಲ್ಲಿದ್ದು, ‘ಛತ್ತೀಸ್‌ಗಢ’ ಮತ್ತು ‘ಕರ್ನಾಟಕ’ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.

    ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (NMDC) ಬಗ್ಗೆ:

    • ಭಾರತದ ಕಬ್ಬಿಣದ ಅದಿರು ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ 1958 ರಲ್ಲಿ ಈ ನಿಗಮವನ್ನು ಸ್ಥಾಪಿಸಲಾಯಿತು. ಇದು ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆಯಾಗಿದೆ.
    • ಇದು ಕೇಂದ್ರ ಉಕ್ಕು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡುವ ‘ನವರತ್ನ’ ಸ್ಥಾನಮಾನ ಹೊಂದಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ (CPSE).
    • 2030ರ ವೇಳೆಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ತಲುಪುವ ಭಾರತದ ಗುರಿಯನ್ನು ಸಾಕಾರಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ.

    ಗೈನಾಂಡ್ರೊಮಾರ್ಫಿ (Gynandromorphy)

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಪಶ್ಚಿಮ ಘಟ್ಟಗಳಲ್ಲಿರುವ ಕೇರಳದ ‘ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ’ದಲ್ಲಿ ಕಂಡುಬರುವ ‘ವೆಲಾ ಕಾರ್ಲಿ’ ಎಂಬ ಸಿಹಿನೀರಿನ ಏಡಿ ಪ್ರಭೇದದಲ್ಲಿ ಅತ್ಯಂತ ಅಪರೂಪದ ‘ಗೈನಾಂಡ್ರೊಮಾರ್ಫಿ’ ಪ್ರಕರಣವು ಇತ್ತೀಚಿಗೆ ವರದಿಯಾಗಿದೆ.

    ಗೈನಾಂಡ್ರೊಮಾರ್ಫಿ ಎಂದರೆ ಏನು?

    • ‘ಗೈನಾಂಡ್ರೊಮಾರ್ಫಿ’ ಎಂದರೆ ಒಂದೇ ಜೀವಿಯಲ್ಲಿ ಗಂಡು ಮತ್ತು ಹೆಣ್ಣಿನ ಲಕ್ಷಣಗಳೆರಡೂ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವ (ಕಂಡುಬರುವ) ಒಂದು ಅತ್ಯಂತ ಅಪರೂಪದ ಜೈವಿಕ ಸ್ಥಿತಿಯಾಗಿದೆ.
    • ಕಾರಣಗಳು:- ಈ ಅಪರೂಪದ ಸ್ಥಿತಿಯು ಪ್ರಮುಖವಾಗಿ ಜೀವಕೋಶ ವಿಭಜನೆಯ ಪ್ರಕ್ರಿಯೆಯಲ್ಲಿನ (ಮೈಟೋಸಿಸ್ ಅಥವಾ ಮಿಯೋಸಿಸ್) ದೋಷಗಳಿಂದಾಗಿ ಅಥವಾ ಭ್ರೂಣದ ಆರಂಭಿಕ ಬೆಳವಣಿಗೆಯ ಹಂತದಲ್ಲಿ ಉಂಟಾಗುವ ವರ್ಣತಂತುಗಳ ವೈಪರೀತ್ಯಗಳಿಂದಾಗಿ ಸಂಭವಿಸುತ್ತದೆ.

    ಗೈನಾಂಡ್ರೊಮಾರ್ಫಿ ಸ್ಥಿತಿಯು ಈ ಕೆಳಗಿನ ಜೈವಿಕ ಸ್ಥಿತಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ:

    • ಹರ್ಮಾಫ್ರೋಡಿಟಿಸಂ (Hermaphroditism):- ಹರ್ಮಾಫ್ರೋಡಿಟಿಸಂ ಎಂಬ ಸ್ಥಿತಿಯಲ್ಲಿ ಜೀವಿಯು ಗಂಡು ಮತ್ತು ಹೆಣ್ಣು ಎರಡೂ ಲಿಂಗಗಳ ಕ್ರಿಯಾತ್ಮಕ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿರುತ್ತದೆ.
    • ಅಂತರ್ಲಿಂಗಿ (Intersex):- ಇಂಟರ್‌ಸೆಕ್ಸ್ ಎಂಬ ಸ್ಥಿತಿಯಲ್ಲಿ ಜೀವಿಯ ಲೈಂಗಿಕ ಗುಣಲಕ್ಷಣಗಳು ಮಿಶ್ರವಾಗಿರುತ್ತವೆಯೇ ಹೊರತು, ಅದರಲ್ಲಿ ಗಂಡು ಮತ್ತು ಹೆಣ್ಣಿನ ಲಕ್ಷಣಗಳ ಸ್ಪಷ್ಟವಾದ ಹಾಗೂ ಪ್ರತ್ಯೇಕವಾದ ಭಾಗಗಳು ಕಂಡುಬರುವುದಿಲ್ಲ.

    ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಗ್ಗೆ:

    • ಈ ರಾಷ್ಟ್ರೀಯ ಉದ್ಯಾನವು ಕೇರಳ ರಾಜ್ಯದ ‘ನೀಲಗಿರಿ ಬೆಟ್ಟ’ಗಳ ಸಾಲಿನಲ್ಲಿ ನೆಲೆಗೊಂಡಿದೆ.
    • ಸೈಲೆಂಟ್ ವ್ಯಾಲಿಯನ್ನು 1984 ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು ಹಾಗೂ 1985 ರಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
    • ನದಿಗಳು:- ಕಾವೇರಿ ನದಿಯ ಉಪನದಿಯಾದ ‘ಭವಾನಿ ನದಿ’ ಮತ್ತು ಭರತಪುಳ ನದಿಯ ಉಪನದಿಯಾದ ‘ಕುಂತಿಪುಳ ನದಿ’ಯು ಈ ಸೈಲೆಂಟ್ ವ್ಯಾಲಿಯ ಸಮೀಪದಲ್ಲಿಯೇ ಉಗಮಿಸುತ್ತವೆ.
    • ಬುಡಕಟ್ಟು ಜನಾಂಗ:- ಈ ಉದ್ಯಾನವನದ ಗಡಿಯೊಳಗೆ ವಾಸಿಸುವ ಪ್ರಮುಖ ಸ್ಥಳೀಯ ಬುಡಕಟ್ಟು ಗುಂಪುಗಳಲ್ಲಿ ಇರುಳರು, ಕುರುಂಬರು, ಮುಡುಗರು ಮತ್ತು ಕಾಟ್ಟುನಾಯ್ಕರು ಸೇರಿದ್ದಾರೆ.
  • ಸ್ವಾಮಿಹ್ (SWAMIH) ನಿಧಿ | ರಾಷ್ಟ್ರೀಯ ಚಂಬಲ್ ಅಭಯಾರಣ್ಯ | ಅಂತರರಾಷ್ಟ್ರೀಯ ಸೌರ ಒಕ್ಕೂಟ | ಕೆಸಿ-135 ಸ್ಟ್ರಾಟೋಟ್ಯಾಂಕರ್ | ಜಾಗತಿಕ ಸಾಂಕ್ರಾಮಿಕ ಒಪ್ಪಂದ

    ಸ್ವಾಮಿಹ್ (SWAMIH) ನಿಧಿ

    ಸರ್ಕಾರಿ ಯೋಜನೆಗಳು

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ವಸತಿ ನಿರ್ಮಾಣ ವಲಯದಲ್ಲಿ ಕೈಗೆಟುಕುವ ಹಾಗೂ ಮಧ್ಯಮ ಆದಾಯ ವರ್ಗದ ವಸತಿ ಗೃಹಗಳಿಗೆ ಹೂಡಿಕೆ ಮಾಡುವ ವಿಶೇಷ ನಿಧಿ” ವ್ಯವಸ್ಥೆ (SWAMIH) ಒಂದು ಕ್ರಾಂತಿಕಾರಿ ಹಾಗೂ ಪ್ರಮುಖ ನೀತಿಯಾಗಿ ಹೊರಹೊಮ್ಮಿದೆ.

    ಸ್ವಾಮಿಹ್ (SWAMIH) ನಿಧಿಯ ಬಗ್ಗೆ:

    • SWAMIH ಸಂಪೂರ್ಣ ರೂಪ:- ಸ್ಪೆಷಲ್ ವಿಂಡೋ ಫಾರ್ ಅಫರ್ಡಬಲ್ ಅಂಡ್ ಮಿಡ್ – ಇನ್ಕಮ್ ಹೌಸಿಂಗ್ ಇನ್ವೆಸ್ಟ್ಮೆಂಟ್ ಫಂಡ್ (ಕೈಗೆಟುಕುವ ಹಾಗೂ ಮಧ್ಯಮ ಆದಾಯ ವರ್ಗದ ವಸತಿ ಗೃಹಗಳಿಗೆ ಹೂಡಿಕೆ ಮಾಡುವ ವಿಶೇಷ ನಿಧಿ).
    • ಭಾರತ ಸರ್ಕಾರವು 2019 ರಲ್ಲಿ ಈ ಮಹತ್ವಾಕಾಂಕ್ಷಿ ಹೂಡಿಕೆ ನಿಧಿಯನ್ನು ಸ್ಥಾಪಿಸಿತು.
    • ಪ್ರಮುಖ ಉದ್ದೇಶ:- ಹಣಕಾಸಿನ ಮುಗ್ಗಟ್ಟಿನಿಂದಾಗಿ ನನೆಗುದಿಗೆ ಬಿದ್ದಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು, ‘ಅಂತಿಮ ಹಂತದ ಹಣಕಾಸು ನೆರವು’ ಒದಗಿಸುವುದು.
    • ಭಾರತ ಸರ್ಕಾರದ ಹಣಕಾಸು ಸಚಿವಾಲಯವು ಈ ನಿಧಿಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಸಮೂಹದ ಅಂಗಸಂಸ್ಥೆಯಾಗಿರುವ ‘ಎಸ್‌ಬಿಐ ಕ್ಯಾಪ್ ವೆಂಚರ್ಸ್ ಲಿಮಿಟೆಡ್’ ಇದರ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.
    • ಫಲಿತಾಂಶ ಮತ್ತು ಪ್ರಭಾವ:- ಈ ನಿಧಿಯ ಆರ್ಥಿಕ ನೆರವಿನಿಂದಾಗಿ ಇದುವರೆಗೆ ಸುಮಾರು 58,596 ಮನೆಗಳ ನಿರ್ಮಾಣ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡಿದೆ. ಭವಿಷ್ಯದಲ್ಲಿ 1 ಲಕ್ಷಕ್ಕೂ ಅಧಿಕ ಮನೆಗಳು ನಿರ್ಮಾಣಗೊಳ್ಳುವ ನಿರೀಕ್ಷೆಯಿದ್ದು, ಇದರಿಂದ 2.38 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಅನುಕೂಲವಾಗಲಿದೆ.

    ರಾಷ್ಟ್ರೀಯ ಚಂಬಲ್ ಅಭಯಾರಣ್ಯ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ರಾಷ್ಟ್ರೀಯ ಚಂಬಲ್ ಅಭಯಾರಣ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯು, ಅಳಿವಿನಂಚಿನಲ್ಲಿರುವ ‘ಘರಿಯಾಲ್’ ಮೊಸಳೆಗಳ ನೈಸರ್ಗಿಕ ಆವಾಸಸ್ಥಾನಕ್ಕೆ ತೀವ್ರ ಧಕ್ಕೆ ತರುತ್ತಿದೆ. 
    • ಈ ಕಳವಳಕಾರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತದ ಸರ್ವೋಚ್ಚ ನ್ಯಾಯಾಲಯವು, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ‘ಸ್ವಯಂಪ್ರೇರಿತ ವಿಚಾರಣೆ’ಯನ್ನು ಕೈಗೆತ್ತಿಕೊಂಡಿದೆ.

    ರಾಷ್ಟ್ರೀಯ ಚಂಬಲ್ ಅಭಯಾರಣ್ಯದ ಬಗ್ಗೆ:

    • ಸ್ಥಳ:- ಈ ಅಭಯಾರಣ್ಯವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಹರಿಯುವ ಚಂಬಲ್ ನದಿಪಾತ್ರದಲ್ಲಿ ಸುಮಾರು 1800 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ.
    • ಇದು ಭಾರತದ ಪ್ರಥಮ ಹಾಗೂ ಏಕೈಕ ‘ತ್ರಿ-ರಾಜ್ಯ ನದಿ ಸಂರಕ್ಷಿತ ಪ್ರದೇಶ’ ಎಂಬ ವಿಶಿಷ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.
    • ಇದು ತೀವ್ರವಾಗಿ ಅಳಿವಿನಂಚಿನಲ್ಲಿರುವ ‘ಘರಿಯಾಲ್’ ಮೊಸಳೆಗಳಿಗೆ ಅತ್ಯಂತ ಪ್ರಮುಖ ನೈಸರ್ಗಿಕ ಆವಾಸಸ್ಥಾನವನ್ನು ಒದಗಿಸಿದೆ.
    • ಜೀವವೈವಿಧ್ಯ:- ಘರಿಯಾಲ್‌ಗಳ ಹೊರತಾಗಿ, ಈ ಅಭಯಾರಣ್ಯವು ಜಲಾವೃತ ಹುಲ್ಲುಗಾವಲು ಮೊಸಳೆಗಳು (ಮುಗ್ಗೆರ್ಸ್), ಕೆಂಪು ಕಿರೀಟದ ಆಮೆಗಳು , ನಯವಾದ ಚರ್ಮದ ನೀರುನಾಯಿಗಳು ಮತ್ತು ಗಂಗಾ ನದಿ ಡಾಲ್ಫಿನ್‌ಗಳಿಗೆ ಸುರಕ್ಷಿತ ಆಶ್ರಯ ತಾಣವಾಗಿದೆ. ಇದರ ಜೊತೆಗೆ, ಭಾರತೀಯ ಚೀಲಹಕ್ಕಿ (ಇಂಡಿಯನ್ ಸ್ಕಿಮ್ಮರ್), ಕಪ್ಪು ಹೊಟ್ಟೆಯ ತುರಾಯಿ ಹಕ್ಕಿ, ಸಾರಸ್ ಕೊಕ್ಕರೆ ಮತ್ತು ಕಪ್ಪು ಕುತ್ತಿಗೆಯ ಕೊಕ್ಕರೆಯಂತಹ ಅತ್ಯಂತ ಅಪರೂಪದ ಪಕ್ಷಿಸಂಕುಲಗಳು ಇಲ್ಲಿ ಹೇರಳವಾಗಿ ಕಂಡುಬರುತ್ತವೆ.

    ಘರಿಯಾಲ್‌ಗಳ ಬಗ್ಗೆ:

    • ಗುಣಲಕ್ಷಣಗಳು:- ಈ ಜೀವಿಗಳಲ್ಲಿ ‘ಲೈಂಗಿಕ ದ್ವಿರೂಪತೆ’ ಎದ್ದು ಕಾಣುತ್ತದೆ. ಅಂದರೆ, ಗಂಡು ಮತ್ತು ಹೆಣ್ಣು ಘರಿಯಾಲ್‌ಗಳು ತಮ್ಮ ದೈಹಿಕ ಗಾತ್ರ ಹಾಗೂ ಬಾಹ್ಯ ನೋಟದಲ್ಲಿ ಗಮನಾರ್ಹವಾದ ವ್ಯತ್ಯಾಸಗಳನ್ನು ಹೊಂದಿರುತ್ತವೆ.
    • ಸಾಮಾನ್ಯ ಮೊಸಳೆಗಳಿಗೆ ಹೋಲಿಸಿದರೆ ಇವುಗಳ ಸ್ವಭಾವ ಭಿನ್ನವಾಗಿದ್ದು, ಘರಿಯಾಲ್‌ಗಳು ಕೇವಲ ಮೀನುಗಳನ್ನು ಮಾತ್ರ ತಮ್ಮ ಪ್ರಧಾನ ಆಹಾರವಾಗಿ ಸೇವಿಸುತ್ತವೆ. ಇವು ಮನುಷ್ಯರ ಮೇಲೆ ದಾಳಿ ಮಾಡುವ ನರಭಕ್ಷಕ ಪ್ರಾಣಿಗಳಲ್ಲ ಎಂಬುದು ವಿಶೇಷವಾಗಿದೆ. 
    • ಆವಾಸಸ್ಥಾನ:- ಇವು ಸಂಪೂರ್ಣವಾಗಿ ನದಿಪಾತ್ರದಲ್ಲಿ ಮಾತ್ರ ವಾಸಿಸುವ ಜೀವಿಗಳಾಗಿವೆ. ಇವುಗಳ ದೈನಂದಿನ ಬದುಕು ಮತ್ತು ಸಂತಾನೋತ್ಪತ್ತಿಗಾಗಿ ಆಳವಾದ, ಶುದ್ಧವಾದ ಹಾಗೂ ವೇಗವಾಗಿ ಹರಿಯುವ ನದಿ ನೀರು ಮತ್ತು ಕಡಿದಾದ ಮರಳು ದಂಡೆಗಳು ಅತ್ಯಗತ್ಯವಾಗಿವೆ.
    • ಚಂಬಲ್, ಗಿರ್ವಾ, ಕೆನ್, ಯಮುನಾ, ಬ್ರಹ್ಮಪುತ್ರ, ಘಾಘ್ರ ಮತ್ತು ಭಾಗೀರಥಿ – ಹೂಗ್ಲಿ ನದಿಗಳ ಪಾತ್ರದಲ್ಲಿ ಪ್ರಮುಖವಾಗಿ ಕಂಡುಬರುತ್ತವೆ.
    • ಸಂರಕ್ಷಣಾ ಸ್ಥಾನಮಾನ:-
    • IUCN ಕೆಂಪು ಪಟ್ಟಿಯಲ್ಲಿ:- ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದ (CR)
    • ‘ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972’ ರ ಅಡಿಯಲ್ಲಿ:- ‘ಅನುಸೂಚಿ-1’
    • ಪ್ರಾಜೆಕ್ಟ್ ಕ್ರೊಕೊಡೈಲ್ (1975):- ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಮತ್ತು ‘ಆಹಾರ ಹಾಗೂ ಕೃಷಿ ಸಂಸ್ಥೆ’ಯ (FAO) ಜಂಟಿ ಸಹಯೋಗದೊಂದಿಗೆ, ಮೊಸಳೆಗಳ ಕೃತಕ ಸಂತಾನೋತ್ಪತ್ತಿ ಮತ್ತು ಸಂರಕ್ಷಣೆಗಾಗಿ ಈ ಮಹತ್ವದ ಯೋಜನೆಯನ್ನು ಪ್ರಾರಂಭಿಸಲಾಯಿತು.

    ಅಂತರರಾಷ್ಟ್ರೀಯ ಸೌರ ಒಕ್ಕೂಟ

    ಪರಿಸರ

    ಇದೀಗ ಸುದ್ದಿಯಲ್ಲಿದೆ: 

    • ಸೌರಶಕ್ತಿಯ ಬಳಕೆಯತ್ತ ಹೆಚ್ಚುತ್ತಿರುವ ಜಾಗತಿಕ ಒಲವು ಹಾಗೂ ‘ಶುದ್ಧ ಇಂಧನ ಪರಿವರ್ತನೆ’ಯ ಪ್ರಕ್ರಿಯೆಯಲ್ಲಿ ‘ಅಂತರರಾಷ್ಟ್ರೀಯ ಸೌರ ಒಕ್ಕೂಟ’ವು (ISA) ವಹಿಸುತ್ತಿರುವ ನಿರ್ಣಾಯಕ ಪಾತ್ರವನ್ನು ಕೇಂದ್ರ ಸರ್ಕಾರವು ಇತ್ತೀಚಿಗೆ ಒತ್ತಿಹೇಳಿದೆ.

    ಅಂತರರಾಷ್ಟ್ರೀಯ ಸೌರ ಒಕ್ಕೂಟದ ಬಗ್ಗೆ:

    • ಪ್ರಾರಂಭ:- ಇದು ಭಾರತದ ಒಂದು ಪ್ರಮುಖ ಜಾಗತಿಕ ಉಪಕ್ರಮವಾಗಿದೆ. 2015ರ ನವೆಂಬರ್ 30ರಂದು ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಶೃಂಗಸಭೆಯ ಸಂದರ್ಭದಲ್ಲಿ, ಭಾರತದ ಪ್ರಧಾನ ಮಂತ್ರಿ ಹಾಗೂ ಫ್ರಾನ್ಸ್‌ನ ಅಧ್ಯಕ್ಷರು ಜಂಟಿಯಾಗಿ ಇದಕ್ಕೆ ಚಾಲನೆ ನೀಡಿದರು.
    • ಸೌರಶಕ್ತಿ ಹೇರಳವಾಗಿರುವ ದೇಶಗಳ ಒಕ್ಕೂಟ:- ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಸಂಪೂರ್ಣವಾಗಿ ಅಥವಾ ಭಾಗಶಃ ನೆಲೆಗೊಂಡಿರುವ, ಹೇರಳವಾದ ಸೌರ ಸಂಪನ್ಮೂಲಗಳನ್ನು ಹೊಂದಿರುವ 124 ರಾಷ್ಟ್ರಗಳನ್ನು ಒಳಗೊಂಡ ಉಪಕ್ರಮ ಇದಾಗಿದೆ.
    • ಪ್ರಮುಖ ಉದ್ದೇಶ:- ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿ ಸೌರಶಕ್ತಿಯ ಬಳಕೆಯನ್ನು ವ್ಯಾಪಕವಾಗಿ ವಿಸ್ತರಿಸುವಲ್ಲಿ ಎದುರಾಗುವ ಪ್ರಮುಖ ಸಾಮಾನ್ಯ ಸವಾಲುಗಳನ್ನು ಒಗ್ಗೂಡಿ ಎದುರಿಸುವುದು.
    • ಪ್ರಧಾನ ಕಚೇರಿ:- ಹರಿಯಾಣದ ಗುರುಗ್ರಾಮದಲ್ಲಿರುವ ‘ರಾಷ್ಟ್ರೀಯ ಸೌರ ಇಂಧನ ಸಂಸ್ಥೆ’ಯ (NISE) ಆವರಣದಲ್ಲಿ.
    • ಸದಸ್ಯತ್ವ:- 2026ರ ಮಾರ್ಚ್ ವೇಳೆಗೆ, ಅಂತರರಾಷ್ಟ್ರೀಯ ಸೌರ ಒಕ್ಕೂಟವು ಗಣನೀಯವಾಗಿ ವಿಸ್ತರಣೆಗೊಂಡಿದ್ದು, ಒಟ್ಟು 125 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಪೈಕಿ, ಸುಮಾರು 107 ದೇಶಗಳು ‘ISA ಚೌಕಟ್ಟಿನ ಒಪ್ಪಂದ’ವನ್ನು ಅಧಿಕೃತವಾಗಿ ಅನುಮೋದಿಸುವ ಮೂಲಕ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದುಕೊಂಡಿವೆ.

    ಕೆಸಿ-135 ಸ್ಟ್ರಾಟೋಟ್ಯಾಂಕರ್

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಇರಾನ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ, ಅಮೆರಿಕದ ಯುದ್ಧ ವಿಮಾನಗಳಿಗೆ ಆಗಸದಲ್ಲೇ ಇಂಧನ ತುಂಬುವ ‘ಕೆಸಿ-135 ಸ್ಟ್ರಾಟೋಟ್ಯಾಂಕರ್’ ವಿಮಾನವೊಂದು ಪಶ್ಚಿಮ ಇರಾಕ್ ಪ್ರದೇಶದಲ್ಲಿ ಪತನಗೊಂಡಿದೆ.

    ‘ಕೆಸಿ-135 ಸ್ಟ್ರಾಟೋಟ್ಯಾಂಕರ್’ನ ಬಗ್ಗೆ:

    • ವಿಮಾನದ ನಿರ್ಮಾಣ:- ಬೋಯಿಂಗ್ ಕಂಪನಿಯು 1950ರ ದಶಕದ ಅಂತ್ಯದಲ್ಲಿ ಹಾಗೂ 1960ರ ದಶಕದ ಆರಂಭದಲ್ಲಿ ನಿರ್ಮಿಸಿತು.
    • ವೈಮಾನಿಕ ಇಂಧನ ಮರುಪೂರಣ:- ಇದು ದಶಕಗಳಿಂದಲೂ ಅಮೆರಿಕದ ಸೇನಾಪಡೆಯ ‘ವೈಮಾನಿಕ ಇಂಧನ ಮರುಪೂರಣ ಪಡೆಯ’ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಯುದ್ಧ ವಿಮಾನಗಳು ಭೂಮಿಗೆ ಇಳಿಯದೆಯೇ ನಿರಂತರವಾಗಿ ತಮ್ಮ ಕಾರ್ಯಾಚರಣೆಗಳನ್ನು ಮುಂದುವರಿಸಲು ಈ ವಿಮಾನವು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
    • ಐತಿಹಾಸಿಕ ಬಳಕೆ:- ಮೊದಲ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಯುದ್ಧ ವಿಮಾನಗಳು ಮತ್ತು ಬಾಂಬರ್‌ಗಳ ಹಾರಾಟದ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲು ಇವುಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿತ್ತು.
    • ಕಾರ್ಯಾಚರಣೆಯ ಸಾಮರ್ಥ್ಯ:- ಈ ವಿಮಾನವು 30,000 ಅಡಿಗಳ (9,144 ಮೀಟರ್) ಎತ್ತರದಲ್ಲಿ, ಗಂಟೆಗೆ 530 ಮೈಲುಗಳಷ್ಟು ವೇಗದಲ್ಲಿ ಹಾರಾಟ ನಡೆಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ.

    ಜಾಗತಿಕ ಸಾಂಕ್ರಾಮಿಕ ಒಪ್ಪಂದ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿದೆ: 

    • ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಮುಂಬರುವ ‘ಜಾಗತಿಕ ಸಾಂಕ್ರಾಮಿಕ ಒಪ್ಪಂದ’ದ ಉನ್ನತ ಮಟ್ಟದ ಮಾತುಕತೆಗಳಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ‘ನ್ಯಾಯಸಮ್ಮತ ಲಾಭ-ಹಂಚಿಕೆ ಚೌಕಟ್ಟನ್ನು’ ಕಡ್ಡಾಯವಾಗಿ ಒದಗಿಸಬೇಕು ಎಂದು ಭಾರತವು ಪ್ರಬಲವಾಗಿ ಪ್ರತಿಪಾದಿಸುತ್ತಿದೆ.

    ಜಾಗತಿಕ ಸಾಂಕ್ರಾಮಿಕ ಒಪ್ಪಂದದ ಬಗ್ಗೆ:

    • ಅಂಗೀಕಾರ:- ಮೇ 2025 ರಲ್ಲಿ ನಡೆದ ‘ವಿಶ್ವ ಆರೋಗ್ಯ ಸಭೆಯಲ್ಲಿ ಅಧಿಕೃತವಾಗಿ ಅಂಗೀಕರಿಸಿದೆ.
    • ಉದ್ದೇಶ:- ಭವಿಷ್ಯದಲ್ಲಿ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ, ಸಮರ್ಪಕ ಸಿದ್ಧತೆ ನಡೆಸುವ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿರುವ ನ್ಯೂನತೆಗಳು ಹಾಗೂ ಅಸಮಾನತೆಗಳನ್ನು ನಿವಾರಿಸಲು, ‘ಕಾನೂನಾತ್ಮಕವಾಗಿ ಕಡ್ಡಾಯವಾಗಿರುವ’ ಅಂತರರಾಷ್ಟ್ರೀಯ ಚೌಕಟ್ಟೊಂದನ್ನು ಸ್ಥಾಪಿಸುವುದು.
    • ಮಾತುಕತೆಯ ಹಂತಗಳು:- ಜೈವಿಕ ಮಾದರಿಗಳು ಮತ್ತು ಆನುವಂಶಿಕ ದತ್ತಾಂಶಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು, ಇದರ ‘ರೋಗಕಾರಕ ಪ್ರವೇಶ ಮತ್ತು ಲಾಭ-ಹಂಚಿಕೆ’ (PABS) ವ್ಯವಸ್ಥೆಯ ಕುರಿತು ಪ್ರಸ್ತುತ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿವೆ.
    • ಜಾರಿ ಪ್ರಕ್ರಿಯೆ:- ಮೇ 2026 ರ ವೇಳೆಗೆ ಈ ಒಪ್ಪಂದವನ್ನು ಅಂತಿಮವಾಗಿ ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ತದನಂತರ ಇದು ವಿವಿಧ ದೇಶಗಳ ಸಹಿ ಮತ್ತು ಅಧಿಕೃತ ಅನುಮೋದನೆಗೆ ಮುಕ್ತವಾಗಲಿದ್ದು, ಕನಿಷ್ಠ 60 ದೇಶಗಳು ಅನುಮೋದಿಸಿದ 30 ದಿನಗಳ ನಂತರ ಇದು ಜಾಗತಿಕವಾಗಿ ಜಾರಿಗೆ ಬರಲಿದೆ.
  • ಸಂಗೀತ ಕಲಾನಿಧಿ ಪ್ರಶಸ್ತಿ | ಜ್ಞಾನಪೀಠ ಪ್ರಶಸ್ತಿ, 2025 | ಪಶ್ಚಿಮದ ಟ್ರಾಗೋಪನ್: ಪಕ್ಷಿಗಳ ರಾಜ | ಮಾಸಿಕ ಋತುಚಕ್ರ ರಜೆ ಮತ್ತು ಮಹಿಳಾ ವೃತ್ತಿ ಜೀವನ: ಸರ್ವೋಚ್ಚ ನ್ಯಾಯಾಲಯ ಕಳವಳ | ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ, 2026 | ಖರ್ಗ್ ದ್ವೀಪ

    ಸಂಗೀತ ಕಲಾನಿಧಿ ಪ್ರಶಸ್ತಿ

    ಇತರೆ / ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿದೆ: 

    • ಮದ್ರಾಸ್ ಸಂಗೀತ ಅಕಾಡೆಮಿಯ 100ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಸಿದ್ಧ ವೀಣಾ ವಾದಕಿ ಜಯಂತಿ ಕುಮಾರೇಶ್ ಅವರಿಗೆ ಪ್ರತಿಷ್ಠಿತ ‘ಸಂಗೀತ ಕಲಾನಿಧಿ’ ಪ್ರಶಸ್ತಿಯನ್ನು ಘೋಷಿಸಿದೆ. 
    • ಇದರ ಜೊತೆಗೆ, ಭರತನಾಟ್ಯ ಕಲಾವಿದ ನರೇಂದ್ರ ಜಿ. ಅವರು ಪ್ರತಿಷ್ಠಿತ ‘ನೃತ್ಯ ಕಲಾನಿಧಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಸಂಗೀತ ಕಲಾನಿಧಿ ಪ್ರಶಸ್ತಿಯ ಬಗ್ಗೆ:

    • 1942ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿತು.
    • ಕರ್ನಾಟಿಕ್ ಸಂಗೀತದ ನೊಬೆಲ್ ಪ್ರಶಸ್ತಿ:- ಇದು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಅತ್ಯುನ್ನತ ಪುರಸ್ಕಾರವಾಗಿದ್ದು, ಇದನ್ನು “ಕರ್ನಾಟಿಕ್ ಸಂಗೀತದ ನೊಬೆಲ್ ಪ್ರಶಸ್ತಿ” ಎಂದೇ ಪರಿಗಣಿಸಲಾಗುತ್ತದೆ.
    • ಈ ಪ್ರಶಸ್ತಿಯು ಚಿನ್ನದ ಪದಕ ಹಾಗೂ ‘ಬಿರುದು ಪತ್ರ’ವನ್ನು ಒಳಗೊಂಡಿರುತ್ತದೆ.

    ಮದ್ರಾಸ್ ಸಂಗೀತ ಅಕಾಡೆಮಿಯ ಬಗ್ಗೆ:

    • 1927ರಲ್ಲಿ ಚೆನ್ನೈನಲ್ಲಿ (ಮದ್ರಾಸ್) ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥವಾಗಿ ಈ ಅಕಾಡೆಮಿಯನ್ನು ಪ್ರಾರಂಭಿಸಲಾಯಿತು.
    • ಪ್ರಮುಖ ಉದ್ದೇಶ:- ಭಾರತದ ಭವ್ಯವಾದ ಕರ್ನಾಟಿಕ್ ಸಂಗೀತ ಸಂಪ್ರದಾಯವನ್ನು ಪೋಷಿಸುವ ಹಾಗೂ ಕ್ರಮಬದ್ಧಗೊಳಿಸುವುದು
    • ಪ್ರತಿ ವರ್ಷ ಈ ಅಕಾಡೆಮಿಯು ಆಯೋಜಿಸುವ ‘ಸಂಗೀತ ಮತ್ತು ನೃತ್ಯೋತ್ಸವ’ವು ಕರ್ನಾಟಕ ಸಂಗೀತ ಕ್ಷೇತ್ರದ ಅತ್ಯಂತ ಪ್ರಮುಖ ಸಾಂಸ್ಕೃತಿಕ ಹಬ್ಬವೆಂದು ಹೆಸರಾಗಿದೆ.
    • ‘ಸಂಗೀತ ಕಲಾನಿಧಿ’ಯ ಹೊರತಾಗಿ, ಸಂಗೀತ ಕಲಾ ಆಚಾರ್ಯ, ಟಿ.ಟಿ.ಕೆ ಪ್ರಶಸ್ತಿ ಮತ್ತು ಸಂಗೀತಶಾಸ್ತ್ರಜ್ಞ ಪುರಸ್ಕಾರಗಳನ್ನು ಸಹ ಈ ಅಕಾಡೆಮಿ ಸಾಧಕರಿಗೆ ಪ್ರದಾನ ಮಾಡುತ್ತದೆ.

    ಜ್ಞಾನಪೀಠ ಪ್ರಶಸ್ತಿ, 2025

    ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿದೆ: 

    • 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಸುಪ್ರಸಿದ್ಧ ತಮಿಳು ಕವಿ ಹಾಗೂ ಗೀತಸಾಹಿತಿ ವೈರಮುತ್ತು ಅವರು ಭಾಜನರಾಗಿದ್ದಾರೆ.

    ವೈರಮುತ್ತು ಅವರ ಸಾಧನೆಗಳು:

    • 3ನೇ ತಮಿಳು ಸಾಹಿತಿ:- ಅಖಿಲನ್ (1975) ಮತ್ತು ಜಯಕಾಂತನ್ (2002) ಅವರ ನಂತರ ಈ ಅತ್ಯುನ್ನತ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾದ 3ನೇ ತಮಿಳು ಸಾಹಿತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
    • ಈ ಹಿಂದಿನ ಇಬ್ಬರು ಸಾಹಿತಿಗಳನ್ನು ಅವರ ಗದ್ಯ ಸಾಹಿತ್ಯದ ಸಾಧನೆಗಾಗಿ ಪುರಸ್ಕರಿಸಲಾಗಿತ್ತು; ಆದರೆ ತಮಿಳು ಕಾವ್ಯಕ್ಕಾಗಿ ಈ ಮನ್ನಣೆ ಗಳಿಸಿದ ಚೊಚ್ಚಲ ಸಾಹಿತಿ ಎಂಬ ಕೀರ್ತಿ ವೈರಮುತ್ತು ಅವರಿಗೆ ಸಲ್ಲುತ್ತದೆ.
    • ಎಂಟು ಸಾವಿರಕ್ಕೂ (8,000) ಹೆಚ್ಚು ಗೀತೆಗಳನ್ನು ರಚಿಸಿರುವ ಇವರು, ಅತ್ಯುತ್ತಮ ಗೀತಸಾಹಿತ್ಯಕ್ಕಾಗಿ 7 ಬಾರಿ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ‘ಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ, ತಮಿಳು ಸಾಹಿತ್ಯ ವಲಯದಲ್ಲಿ ಇವರನ್ನು “ಕವಿಪೇರರಸು” (ಕವಿಗಳ ಚಕ್ರವರ್ತಿ) ಎಂಬ ಅಭಿದಾನದಿಂದ ಗೌರವಿಸಲಾಗುತ್ತದೆ.
    • ಟೀಕೆ ಮತ್ತು ವಿವಾದ:- ಭಾರತದಲ್ಲಿ ವ್ಯಾಪಕ ಸಂಚಲನ ಮೂಡಿಸಿದ್ದ ‘#MeToo’ (ಮಿಟೂ) ಅಭಿಯಾನದ ಸಂದರ್ಭದಲ್ಲಿ ವೈರಮುತ್ತು ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ, ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದನ್ನು ಖಂಡಿಸಿ ಕೆಲವು ಲೇಖಕರು, ಕಲಾವಿದರು ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಜ್ಞಾನಪೀಠ ಪ್ರಶಸ್ತಿಯ ಬಗ್ಗೆ:

    • ಭಾರತೀಯ ಜ್ಞಾನಪೀಠ ಸಂಸ್ಥೆಯು 1961ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.
    • ಇದು ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ನೀಡಲಾಗುವ ಅತ್ಯುನ್ನತ ಗೌರವವಾಗಿದೆ. ಸಾಹಿತ್ಯ ಲೋಕಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಭಾರತೀಯ ಲೇಖಕರಿಗೆ ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
    • ಉದ್ಯಮಿಗಳಾದ ಸಾಹು ಶಾಂತಿ ಪ್ರಸಾದ್ ಜೈನ್ ಮತ್ತು ರಮಾ ಜೈನ್ ಅವರು ಸ್ಥಾಪಿಸಿದ ‘ಭಾರತೀಯ ಜ್ಞಾನಪೀಠ’ ಪ್ರಶಸ್ತಿಯು ದೇಶದ ಪ್ರಮುಖ ಸಾಹಿತ್ಯಿಕ ಮತ್ತು ಸಂಶೋಧನಾ ಸಂಸ್ಥೆಯಾಗಿದೆ.
    • ಭಾರತದ ಸಂವಿಧಾನದ 8ನೇ ಅನುಸೂಚಿಯಲ್ಲಿ ಮಾನ್ಯ ಮಾಡಲಾದ 22 ಭಾಷೆಗಳಲ್ಲಿನ ಅತ್ಯುತ್ತಮ ಕೃತಿಗಳಿಗೆ ಹಾಗೂ 2013ರಿಂದ ಇಂಗ್ಲಿಷ್ ಭಾಷೆಯ ಸಾಹಿತ್ಯಕ್ಕೂ ಈ ಪ್ರಶಸ್ತಿಯನ್ನು ವಿಸ್ತರಿಸಲಾಗಿದೆ.
    • ಈ ಪುರಸ್ಕಾರವು 11 ಲಕ್ಷ ರೂಪಾಯಿಗಳ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ವಾಗ್ದೇವಿಯ (ಸರಸ್ವತಿ ದೇವಿ) ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ.
    • 1965ರಲ್ಲಿ ಮಲಯಾಳಂ ಭಾಷೆಯ ಶ್ರೇಷ್ಠ ಲೇಖಕ ಜಿ. ಶಂಕರ ಕುರುಪ್ ಅವರು ತಮ್ಮ ‘ಓಡಕ್ಕುಳಲ್’ ಕೃತಿಗಾಗಿ ಚೊಚ್ಚಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು.

    ಪಶ್ಚಿಮದ ಟ್ರಾಗೋಪನ್: ಪಕ್ಷಿಗಳ ರಾಜ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಹಿಮಾಲಯ ಶ್ರೇಣಿಯ ಅರಣ್ಯಗಳಲ್ಲಿ ಕಂಡುಬರುವ ಅತಿ ಅಪರೂಪದ ‘ವೆಸ್ಟರ್ನ್ ಟ್ರಾಗೋಪಾನ್’ ಎಂಬ ಫೆಸೆಂಟ್ ಪ್ರಭೇದದ ಪಕ್ಷಿಯು, ಹೆಚ್ಚುತ್ತಿರುವ ಅರಣ್ಯ ನಾಶ ಹಾಗೂ ಮಾನವನ ಹಸ್ತಕ್ಷೇಪದಿಂದಾಗಿ ಇದೀಗ ತೀವ್ರ ಅಳಿವಿನಂಚಿಗೆ ಸಿಲುಕಿದೆ.

    ಪಶ್ಚಿಮದ ಟ್ರಾಗೋಪನ್ ನ ಬಗ್ಗೆ:

    • ವೈಜ್ಞಾನಿಕ ಹೆಸರು:- ಟ್ರಾಗೋಪನ್ ಮೇಲಾನೋಸೆಂಫಲುಸ್ (Tragopan melanocephalus).
    • ಸ್ಥಳೀಯವಾಗಿ ‘ಜುಜುರಾನ’ ಅಥವಾ “ಪಕ್ಷಿಗಳ ರಾಜ” ಎಂದೇ ಪ್ರಖ್ಯಾತವಾಗಿರುವ ಇದು, ಪ್ರಪಂಚದ ಅತ್ಯಂತ ವಿರಳ ಹಾಗೂ ಅತ್ಯಾಕರ್ಷಕ ಫೆಸೆಂಟ್ ಪಕ್ಷಿ ಪ್ರಭೇದಗಳಲ್ಲಿ ಒಂದಾಗಿದೆ.
    • ಆವಾಸಸ್ಥಾನ:- ಈ ಪಕ್ಷಿಗಳು ಸಮುದ್ರ ಮಟ್ಟದಿಂದ 2,400 ರಿಂದ 3,600 ಮೀಟರ್ ಎತ್ತರದಲ್ಲಿರುವ ಸಮಶೀತೋಷ್ಣ ಮತ್ತು ಉಪ-ಆಲ್ಪೈನ್ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದಾಗ್ಯೂ, ಚಳಿಗಾಲದ ತೀವ್ರತೆಯಿಂದ ರಕ್ಷಣೆ ಪಡೆಯಲು ಇವು ಕೆಲವೊಮ್ಮೆ 2,000 ಮೀಟರ್‌ ಎತ್ತರದ ಕೆಳ ಪ್ರದೇಶಗಳಿಗೂ ವಲಸೆ ಬರುತ್ತವೆ.
    • ಭೌಗೋಳಿಕ ವ್ಯಾಪ್ತಿ:- ಪಾಕಿಸ್ತಾನದ ಸ್ವಾತ್ ಕಣಿವೆಯಿಂದ ಹಿಡಿದು, ಭಾರತದ ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದ ಮೂಲಕ ಉತ್ತರಾಖಂಡದವರೆಗೂ ಇವುಗಳ ಭೌಗೋಳಿಕ ನೆಲೆ ಹರಡಿಕೊಂಡಿದೆ.
    • ಸರ್ವಭಕ್ಷಕ ಜೀವಿಗಳಾಗಿವೆ:- ಅರಣ್ಯಗಳಲ್ಲಿ ದೊರೆಯುವ ಕಾಡುಹಣ್ಣುಗಳು, ಬೀಜಗಳು, ಮೊಗ್ಗುಗಳು, ಎಳೆಯ ಚಿಗುರುಗಳು ಮತ್ತು ಸಣ್ಣ ಕೀಟಗಳನ್ನು ಇವು ಆಹಾರವಾಗಿ ಸೇವಿಸುತ್ತವೆ.
    • ಅಪಾಯಗಳು:- ಅರಣ್ಯಗಳ ನಿರಂತರ ಅವನತಿ, ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು ಹಾಗೂ ಅತಿಯಾದ ಮಾನವನ ಹಸ್ತಕ್ಷೇಪ.
    • ಸಂರಕ್ಷಣಾ ಸ್ಥಾನಮಾನ:- ಈ ಪ್ರಭೇದದ ಅಸ್ತಿತ್ವಕ್ಕೆ ಎದುರಾಗಿರುವ ಅಪಾಯವನ್ನು ಗಮನಿಸಿ ‘ಬರ್ಡ್‌ಲೈಫ್ ಇಂಟರ್‌ನ್ಯಾಷನಲ್’ ಸಂಸ್ಥೆ ಹಾಗೂ ‘ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ’ವು (IUCN) ಈ ಪಕ್ಷಿಯನ್ನು ‘ದುರ್ಬಲ’ (VU) ವರ್ಗದ ಪಟ್ಟಿಗೆ ಸೇರ್ಪಡೆಗೊಳಿಸಿವೆ.

    ನಿಮಗಿದು ತಿಳಿದಿರಲಿ:

    • ಈ ಪಕ್ಷಿಯು ಹೊಂದಿರುವ ಅಪಾರ ಸಾಂಸ್ಕೃತಿಕ ಹಾಗೂ ಪರಿಸರಾತ್ಮಕ ಮಹತ್ವವನ್ನು ಗುರುತಿಸಿರುವ ಹಿಮಾಚಲ ಪ್ರದೇಶ ಸರ್ಕಾರವು, ಇದನ್ನು ‘ರಾಜ್ಯ ಪಕ್ಷಿ’ ಎಂದು ಅಧಿಕೃತವಾಗಿ ಘೋಷಿಸಿದೆ.

    ಮಾಸಿಕ ಋತುಚಕ್ರ ರಜೆ ಮತ್ತು ಮಹಿಳಾ ವೃತ್ತಿ ಜೀವನ: ಸರ್ವೋಚ್ಚ ನ್ಯಾಯಾಲಯ ಕಳವಳ

    ಆರೋಗ್ಯ ಮತ್ತು ಸಮಾಜ

    ಇದೀಗ ಸುದ್ದಿಯಲ್ಲಿದೆ: 

    • ಮಾಸಿಕ ಋತುಚಕ್ರದ ನೋವಿನ ಸಮಯದಲ್ಲಿ ವೇತನ ಸಹಿತ ರಜೆಯನ್ನು ಕಡ್ಡಾಯಗೊಳಿಸುವ ಕಾನೂನು ಜಾರಿಗೆ ಬಂದರೆ, ಅದು ಯುವ ಮಹಿಳೆಯರ ವೃತ್ತಿಜೀವನಕ್ಕೆ ಹಾನಿಯುಂಟುಮಾಡಬಹುದು ಹಾಗೂ ಅವರಿಗೆ ದೊರೆಯಬೇಕಾದ ಸಮಾನ ಉದ್ಯೋಗಾವಕಾಶಗಳನ್ನು ನಿರಾಕರಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಆತಂಕ ವ್ಯಕ್ತಪಡಿಸಿದೆ.

    ಮಾಸಿಕ ಋತುಚಕ್ರದ ರಜೆ ಎಂದರೇನು?

    ಮಹಿಳೆಯರು ತಮ್ಮ ಮಾಸಿಕ ಋತುಚಕ್ರದ ಅವಧಿಯಲ್ಲಿ ಎದುರಿಸುವ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ, ಅವರಿಗೆ ಒದಗಿಸಲಾಗುವ ವೇತನ ಸಹಿತ ಅಥವಾ ವೇತನ ರಹಿತ ರಜೆಯನ್ನು ‘ಮಾಸಿಕ ಋತುಚಕ್ರದ ರಜೆ’ ಎಂದು ಕರೆಯಲಾಗುತ್ತದೆ. ಆ ಪ್ರಮುಖ ಸಮಸ್ಯೆಗಳು ಈ ಕೆಳಗಿನಂತಿವೆ:

    • ಡಿಸ್ಮೆನೊರಿಯಾ (Dysmenorrhea):- ಋತುಚಕ್ರದ ಅವಧಿಯಲ್ಲಿ ಕಾಣಿಸಿಕೊಳ್ಳುವ ತೀವ್ರವಾದ ಹೊಟ್ಟೆ ನೋವು ಅಥವಾ ಸೆಳೆತವನ್ನು ಇದು ಸೂಚಿಸುತ್ತದೆ.
    • ಎಂಡೊಮೆಟ್ರಿಯಾಸಿಸ್ (Endometriosis):- ಗರ್ಭಾಶಯದ ಒಳಪದರದಂತಹ ಅಂಗಾಂಶವು ಗರ್ಭಾಶಯದ ಹೊರಭಾಗದಲ್ಲಿಯೂ ಅಸಹಜವಾಗಿ ಬೆಳೆಯುವ ಒಂದು ಸಂಕೀರ್ಣ ವೈದ್ಯಕೀಯ ಸ್ಥಿತಿಯಾಗಿದೆ.

    ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಮುಖ ಅಂಶಗಳು:

    • ಮಾಸಿಕ ಋತುಚಕ್ರದ ಸಮಯದಲ್ಲಿ ಮಹಿಳೆಯರು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣ ನೀಡಿ, ಅವರು ಪುರುಷರಿಗಿಂತ ಕೀಳು ಎಂಬ ಮಾನಸಿಕ ಕೀಳರಿಮೆಯನ್ನು ಇಂತಹ ಕಡ್ಡಾಯ ರಜೆಯ ಕ್ರಮವು ಸೃಷ್ಟಿಸುವ ಅಪಾಯವಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
    • ಮಾಸಿಕ ಋತುಚಕ್ರದ ನೋವಿಗಾಗಿ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ವಾರ್ಷಿಕವಾಗಿ 60 ದಿನಗಳವರೆಗೆ ರಜೆ ನೀಡುವ ಒಡಿಶಾ, ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳ “ಸ್ವಯಂಪ್ರೇರಿತ” ಉಪಕ್ರಮಗಳನ್ನು ನ್ಯಾಯಾಲಯವು ಪ್ರಶಂಸಿಸಿ, ಪ್ರೋತ್ಸಾಹಿಸಿದೆ.

    ವೇತನ ಸಹಿತ ಮಾಸಿಕ ಋತುಚಕ್ರ ರಜೆಯ ಪರವಾಗಿರುವ ವಾದಗಳು:

    • ಲಿಂಗ-ಸಂವೇದಿ ಕಾರ್ಯಕ್ಷೇತ್ರಗಳ ಉತ್ತೇಜನ:- ಇದು ಮಹಿಳೆಯರ ಜೈವಿಕ ವಾಸ್ತವಗಳನ್ನು ಗುರುತಿಸುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಎಲ್ಲರನ್ನೂ ಒಳಗೊಳ್ಳುವ ಹಾಗೂ ಸಹಾನುಭೂತಿಯ ವಾತಾವರಣವನ್ನು ಉತ್ತೇಜಿಸುತ್ತದೆ.
    • ಸಾಂವಿಧಾನಿಕ ತತ್ವಗಳೊಂದಿಗೆ ಸಮನ್ವಯ:- ಕೆಲಸದ ಸ್ಥಳದಲ್ಲಿ ನ್ಯಾಯೋಚಿತ ಮತ್ತು ಮಾನವೀಯ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳಿಗೆ ನಿರ್ದೇಶನ ನೀಡುವ ಭಾರತದ ಸಂವಿಧಾನದ 42ನೇ ವಿಧಿಯ ಆಶಯಗಳನ್ನು ಇದು ಬೆಂಬಲಿಸುತ್ತದೆ.
    • ಉತ್ಪಾದಕತೆ ಮತ್ತು ಯೋಗಕ್ಷೇಮದ ವೃದ್ಧಿ:- ನೋವು ಅಥವಾ ಅಸ್ವಸ್ಥತೆಯ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಪಡೆಯಲು ಇದು ಅವಕಾಶ ಕಲ್ಪಿಸುತ್ತದೆ; ಇದರಿಂದಾಗಿ ಅವರ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಸ್ಥೈರ್ಯವು ವೃದ್ಧಿಯಾಗುತ್ತದೆ.
    • ಆರೋಗ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆ:- ಇದು ಮಹಿಳೆಯರ ಆರೋಗ್ಯದ ಹಕ್ಕು, ಘನತೆ ಮತ್ತು ದೈಹಿಕ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ಪ್ರಮುಖ ಹೆಜ್ಜೆಯಾಗಿದೆ.
    • ಮಾಸಿಕ ಋತುಚಕ್ರದ ಬಗೆಗಿನ ಕಳಂಕ ನಿವಾರಣೆ:- ಕೆಲಸದ ಸ್ಥಳದ ನೀತಿ-ನಿಯಮಗಳಲ್ಲಿ ಋತುಚಕ್ರದ ಆರೋಗ್ಯವನ್ನು ಅಧಿಕೃತವಾಗಿ ಗುರುತಿಸುವುದು, ಸಮಾಜದಲ್ಲಿರುವ ನಿಷೇಧಗಳನ್ನು ಮುರಿಯಲು ಮತ್ತು ಲಿಂಗ ಸಮಾನತೆಯನ್ನು ಸಾಧಿಸಲು ನೆರವಾಗುತ್ತದೆ.
    • ಜಾಗತಿಕ ಮಾನದಂಡಗಳೊಂದಿಗೆ ಒಗ್ಗೂಡುವಿಕೆ:- ಜಪಾನ್, ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ತೈವಾನ್ ಮತ್ತು ಸ್ಪೇನ್‌ನಂತಹ ದೇಶಗಳು ಈಗಾಗಲೇ ಇಂತಹ ನೀತಿಗಳನ್ನು ಹೊಂದಿದ್ದು, ಇದು ಜಾಗತಿಕ ಮಟ್ಟದ ಅತ್ಯುತ್ತಮ ಆಡಳಿತಾತ್ಮಕ ಅಭ್ಯಾಸಗಳನ್ನು ಪ್ರತಿಬಿಂಬಿಸುತ್ತದೆ.

    ವೇತನ ಸಹಿತ ಮಾಸಿಕ ಋತುಚಕ್ರ ರಜೆಯ ವಿರುದ್ಧವಿರುವ ವಾದಗಳು:

    • ಕಾರ್ಯಕ್ಷೇತ್ರದಲ್ಲಿ ತಾರತಮ್ಯದ ಅಪಾಯ: ಮಹಿಳೆಯರನ್ನು ಕಡಿಮೆ ಉತ್ಪಾದಕರು ಅಥವಾ ಸಂಸ್ಥೆಗೆ ಹೆಚ್ಚು ವೆಚ್ಚದಾಯಕರು ಎಂದು ಪರಿಗಣಿಸುವ ಉದ್ಯೋಗದಾತರು, ಭವಿಷ್ಯದಲ್ಲಿ ಅವರನ್ನು ನೇಮಿಸಿಕೊಳ್ಳಲು ಅಥವಾ ಅವರಿಗೆ ಬಡ್ತಿ ನೀಡಲು ಹಿಂದೇಟು ಹಾಕುವ ಸಾಧ್ಯತೆಗಳಿರುತ್ತವೆ.
    • ಅಸಂಘಟಿತ ವಲಯದ ಪ್ರಾಬಲ್ಯ:- ಭಾರತದ ಶೇ 88 ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಈ ವಲಯದಲ್ಲಿ ಯಾವುದೇ ರೀತಿಯ ಔಪಚಾರಿಕ ರಜಾ ನೀತಿಗಳು ಅಸ್ತಿತ್ವದಲ್ಲಿಲ್ಲ.
    • ಖಾಸಗಿ ವಲಯದಲ್ಲಿ ಅನುಷ್ಠಾನದ ಸವಾಲು:- ವೈವಿಧ್ಯಮಯ ಕೈಗಾರಿಕೆಗಳಾದ್ಯಂತ ಈ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಮತ್ತು ಅದರ ಮೇಲ್ವಿಚಾರಣೆ ಮಾಡುವುದು ಆಡಳಿತಾತ್ಮಕವಾಗಿ ಅತ್ಯಂತ ಕಷ್ಟಕರವಾಗಬಹುದು.

    ಭಾರತದಲ್ಲಿ ಪ್ರಸ್ತುತ ಇರುವ ಮಾಸಿಕ ಋತುಚಕ್ರದ ರಜಾ ನೀತಿಗಳು:

    • ಮಾಸಿಕ ಋತುಚಕ್ರದ ರಜೆಗೆ ಸಂಬಂಧಿಸಿದಂತೆ ಭಾರತದಲ್ಲಿ ಸದ್ಯಕ್ಕೆ ಯಾವುದೇ ರಾಷ್ಟ್ರೀಯ ಮಟ್ಟದ ಕಾನೂನು ಅಸ್ತಿತ್ವದಲ್ಲಿಲ್ಲ; ಆದರೆ ಕೆಲವು ರಾಜ್ಯಗಳು ತಮ್ಮದೇ ಆದ ನೀತಿಗಳನ್ನು ರೂಪಿಸಿವೆ.
    • ಬಿಹಾರ ರಾಜ್ಯ 1992 ರಲ್ಲಿ ಸರ್ಕಾರಿ ನೌಕರರಿಗೆ ಮಾಸಿಕ ಋತುಚಕ್ರದ ರಜೆಯನ್ನು ಪರಿಚಯಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
    • ಜೊಮ್ಯಾಟೊ ಮತ್ತು ಸ್ವಿಗ್ಗಿ ಯಂತಹ ಕೆಲವು ಖಾಸಗಿ ಕಾರ್ಪೊರೇಟ್ ಕಂಪನಿಗಳು ಸ್ವಯಂಪ್ರೇರಿತವಾಗಿ ಮಾಸಿಕ ಋತುಚಕ್ರದ ರಜಾ ನೀತಿಗಳನ್ನು ಜಾರಿಗೆ ತಂದಿವೆ.

    ಕರ್ನಾಟಕ ಮಾಸಿಕ ಋತುಚಕ್ರ ರಜಾ ನೀತಿ-2025:

    • ಕರ್ನಾಟಕ ರಾಜ್ಯದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರು ವಾರ್ಷಿಕವಾಗಿ ಗರಿಷ್ಠ 12 ದಿನಗಳವರೆಗೆ ವೇತನ ಸಹಿತ ಮಾಸಿಕ ಋತುಚಕ್ರದ ರಜೆ ಪಡೆಯಲು ಅರ್ಹರಾಗಿರುತ್ತಾರೆ.
    • ಕೆಲಸದ ಸ್ಥಳದಲ್ಲಿ ಋತುಚಕ್ರದ ಆರೋಗ್ಯ ಮತ್ತು ಮಹಿಳಾ ಹಕ್ಕುಗಳನ್ನು ಸಾಂಸ್ಥಿಕವಾಗಿ ಗುರುತಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.
    • ಡಾ. ಸಪ್ನಾ ಎಸ್. ಸಮಿತಿ:- ರಾಜ್ಯದಲ್ಲಿ ಋತುಚಕ್ರದ ರಜಾ ನೀತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಮತ್ತು ಸೂಕ್ತ ಶಿಫಾರಸುಗಳನ್ನು ನೀಡಲು ಕರ್ನಾಟಕ ಸರ್ಕಾರವು ಈ ಸಮಿತಿಯನ್ನು ರಚಿಸಿತ್ತು.
    • ಪ್ರಾಮುಖ್ಯತೆ:- ಇದು ಎಲ್ಲಾ ಉದ್ಯೋಗಿಗಳನ್ನು ಸಮಾನವಾಗಿ ಒಳಗೊಳ್ಳುವ ಮತ್ತು ಕಳಂಕ-ಮುಕ್ತ ಕೆಲಸದ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇದು ಸರ್ಕಾರಿ ಮತ್ತು ಖಾಸಗಿ ವಲಯಗಳೆರಡನ್ನೂ ಸಮಗ್ರವಾಗಿ ಒಳಗೊಂಡಿರುವುದರಿಂದ, ಭಾರತದ ಮಟ್ಟಿಗೆ ಇದೊಂದು ಐತಿಹಾಸಿಕ ನಿರ್ಧಾರವೆಂದು ಪರಿಗಣಿಸಲಾಗಿದೆ.

    ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ, 2026

    ಆರೋಗ್ಯ ಮತ್ತು ಸಮಾಜ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು ‘ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ, 2026’ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.

    ಈ ಮಸೂದೆಯ ಪ್ರಮುಖ ಅಂಶಗಳು:

    • ಈ ನೂತನ ಮಸೂದೆಯು ಪ್ರಸ್ತುತ ಜಾರಿಯಲ್ಲಿರುವ ‘ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019’ ಅನ್ನು ತಿದ್ದುಪಡಿ ಮಾಡುವ ಪ್ರಧಾನ ಉದ್ದೇಶವನ್ನು ಹೊಂದಿದೆ.
    • ‘ತೃತೀಯಲಿಂಗಿ’ ಪದದ ವ್ಯಾಖ್ಯಾನ:- ಈ ಮಸೂದೆಯು “ತೃತೀಯಲಿಂಗಿ” ಪದದ ವ್ಯಾಖ್ಯಾನವನ್ನು ಮತ್ತಷ್ಟು ಸೀಮಿತಗೊಳಿಸಲು ಪ್ರಯತ್ನಿಸುತ್ತದೆ. ವಿಭಿನ್ನ ಲೈಂಗಿಕ ಒಲವುಗಳು ಅಥವಾ ಸ್ವಯಂ-ಗ್ರಹಿಸಿದ ಲೈಂಗಿಕ ಗುರುತುಗಳನ್ನು ಹೊಂದಿರುವ ವ್ಯಕ್ತಿಗಳು ಈ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ.
    • ಲಿಂಗ ಗುರುತಿನ ಮಾನ್ಯತೆಯಲ್ಲಿ ಬದಲಾವಣೆಗಳು:- ಮುಖ್ಯ ವೈದ್ಯಾಧಿಕಾರಿ (CMO) ಅಥವಾ ಉಪ ಮುಖ್ಯ ವೈದ್ಯಾಧಿಕಾರಿ ನೇತೃತ್ವದ ನಿಯೋಜಿತ ವೈದ್ಯಕೀಯ ಮಂಡಳಿಯ ಶಿಫಾರಸನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ, ಜಿಲ್ಲಾ ದಂಡಾಧಿಕಾರಿಯು ತೃತೀಯಲಿಂಗಿಗಳಿಗೆ ಗುರುತಿನ ಪ್ರಮಾಣಪತ್ರವನ್ನು ವಿತರಿಸುತ್ತಾರೆ.

    LGBTQIA+ ಸಮುದಾಯದ ವಿವರಣೆ:

    • LGBTQIA+ ಎಂಬ ಸಂಕ್ಷಿಪ್ತ ಪದದ ರೂಪ:- ಮಹಿಳಾ ಸಲಿಂಗಕಾಮಿಗಳು (Lesbian), ಪುರುಷ ಸಲಿಂಗಕಾಮಿಗಳು (Gay), ದ್ವಿಲಿಂಗಾಸಕ್ತರು (Bisexual), ತೃತೀಯಲಿಂಗಿಗಳು (Transgender), ವಿಭಿನ್ನ ಲಿಂಗತ್ವದವರು (Queer), ಅಂತರ್ಲಿಂಗಿಗಳು (Intersex) ಹಾಗೂ ಅಲೈಂಗಿಕ (Asexual) ವ್ಯಕ್ತಿಗಳನ್ನು ಸಮಗ್ರವಾಗಿ ಪ್ರತಿನಿಧಿಸಲು ಬಳಸಲಾಗುತ್ತದೆ.
    • ಈ ಪದದ ಕೊನೆಯಲ್ಲಿರುವ ‘+’ ಚಿಹ್ನೆಯು, ಮೇಲೆ ಉಲ್ಲೇಖಿಸಿದ ವರ್ಗಗಳಲ್ಲಿ ನಿರ್ದಿಷ್ಟವಾಗಿ ಸೇರ್ಪಡೆಗೊಳ್ಳದ ಇತರ ಎಲ್ಲ ವೈವಿಧ್ಯಮಯ ಲೈಂಗಿಕ ದೃಷ್ಟಿಕೋನ ಹಾಗೂ ಲಿಂಗತ್ವದ ಗುರುತುಗಳನ್ನು ಸೂಚಿಸುತ್ತದೆ.

    LGBTQIA+ ಹಕ್ಕುಗಳ ಕುರಿತು ಭಾರತದ ನಿಲುವು:

    • 2011ರ ಜನಗಣತಿಯ ಪ್ರಕಾರ, ಭಾರತದಲ್ಲಿ 4.87 ಲಕ್ಷ ವ್ಯಕ್ತಿಗಳು ತಮ್ಮ ಲಿಂಗ ವರ್ಗವನ್ನು “ಇತರೆ” ಎಂದು ನೋಂದಾಯಿಸಿದ್ದಾರೆ.
    • ಅಪರಾಧೀಕರಣದ ರದ್ದತಿ:- ನವತೇಜ್ ಸಿಂಗ್ ಜೋಹರ್ v/s ಭಾರತ ಒಕ್ಕೂಟ (2018) ಪ್ರಕರಣದಲ್ಲಿ, ವಯಸ್ಕರ ನಡುವಿನ ಪರಸ್ಪರ ಒಪ್ಪಿಗೆಯ ಸಲಿಂಗಕಾಮ ಕ್ರಿಯೆಗಳನ್ನು ಸರ್ವೋಚ್ಚ ನ್ಯಾಯಾಲಯ ಅಪರಾಧವಲ್ಲ ಎಂದು ತೀರ್ಪು ನೀಡಿದೆ (ಐಪಿಸಿ ಸೆಕ್ಷನ್ 377 ಅನ್ನು ಭಾಗಶಃ ರದ್ದುಗೊಳಿಸಲಾಗಿದೆ).
    • ತೃತೀಯ ಲಿಂಗಿಗಳ ಹಕ್ಕುಗಳು:- ನಾಲ್ಸಾ (NALSA) v/s ಭಾರತ ಒಕ್ಕೂಟ (2014) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ವಯಂ-ಗುರುತಿಸಿಕೊಳ್ಳುವ ಲಿಂಗದ ಹಕ್ಕನ್ನು ಮಾನ್ಯ ಮಾಡಿದೆ. ಇದು ತೃತೀಯಲಿಂಗಿಗಳನ್ನು “ಮೂರನೇ ಲಿಂಗ” ಎಂದು ಅಧಿಕೃತವಾಗಿ ಗುರುತಿಸುವ ಮೂಲಕ ಅವರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿದಿದೆ.
    • ಸಾಂವಿಧಾನಿಕ ನಿಬಂಧನೆಗಳು:- ಸಂವಿಧಾನದ 14ನೇ ವಿಧಿಯು ಸಮಾನತೆಯ ಹಕ್ಕನ್ನು, 15ನೇ ವಿಧಿಯು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡದಿರುವುದನ್ನು ಮತ್ತು 21ನೇ ವಿಧಿಯು ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ.
    • ಕಾನೂನು ರಚನೆ:- ‘ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019’ ತೃತೀಯಲಿಂಗಿ ಸಮುದಾಯದ ಗುರುತಿಗೆ ಕಾನೂನಾತ್ಮಕ ಮಾನ್ಯತೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ.

    ತೃತೀಯ ಲಿಂಗಿಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳು:

    • ಸಾಮಾಜಿಕ ಸವಾಲುಗಳು:- ತೃತೀಯ ಲಿಂಗಿಗಳು ಸಮಾಜದಲ್ಲಿ ಆಳವಾಗಿ ಬೇರೂರಿರುವ ಪೂರ್ವಾಗ್ರಹಗಳನ್ನು ನಿರಂತರವಾಗಿ ಎದುರಿಸುತ್ತಿದ್ದು, ಇದು ಕುಟುಂಬ ಮತ್ತು ಸಮುದಾಯಗಳಿಂದ ಅವರು ಬಹಿಷ್ಕಾರಕ್ಕೊಳಗಾಗಲು ಕಾರಣವಾಗಿದೆ.
    • ಶಿಕ್ಷಣದ ಕೊರತೆ:- ಶಾಲಾ-ಕಾಲೇಜುಗಳಲ್ಲಿ ನಡೆಯುವ ನಿರಂತರ ಬೆದರಿಕೆ, ಕಿರುಕುಳ ಮತ್ತು ಲಿಂಗ-ಆಧಾರಿತ ಹಿಂಸಾಚಾರದಿಂದಾಗಿ ಈ ಸಮುದಾಯದವರಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವವರ ಪ್ರಮಾಣವು ಅತ್ಯಧಿಕವಾಗಿದೆ.
    • ಉದ್ಯೋಗದಲ್ಲಿನ ಅಡೆತಡೆಗಳು:- ತೃತೀಯಲಿಂಗಿಗಳು ಉದ್ಯೋಗ ನೇಮಕಾತಿ ಮತ್ತು ಕೆಲಸದ ಸ್ಥಳದಲ್ಲಿ ವ್ಯಾಪಕ ತಾರತಮ್ಯವನ್ನು ಎದುರಿಸುತ್ತಿದ್ದಾರೆ; ಸೂಕ್ತ ಅವಕಾಶಗಳ ಕೊರತೆಯಿಂದಾಗಿ, ಅವರನ್ನು ಭಿಕ್ಷಾಟನೆ ಅಥವಾ ಲೈಂಗಿಕ ವೃತ್ತಿಯಂತಹ ಅಸುರಕ್ಷಿತ ಮತ್ತು ಶೋಷಣೆಯ ವಲಯಗಳಿಗೆ ಬಲವಂತವಾಗಿ ದೂಡಲಾಗುತ್ತಿದೆ.
    • ಆರೋಗ್ಯ ಸೇವೆಗಳ ನಿರಾಕರಣೆ:- ಇವರು ಲಿಂಗ-ದೃಢೀಕರಣದ ಆರೋಗ್ಯ ರಕ್ಷಣೆಯ ಕೊರತೆ, ವೈದ್ಯಕೀಯ ಸಿಬ್ಬಂದಿಯಿಂದ ತಾರತಮ್ಯ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಹಾರ್ಮೋನ್ ಹಾಗೂ ಶಸ್ತ್ರಚಿಕಿತ್ಸಾ ಸೇವೆಗಳ ಅಲಭ್ಯತೆಯನ್ನು ಎದುರಿಸುತ್ತಿದ್ದಾರೆ.
    • ಮಾನಸಿಕ ಆರೋಗ್ಯದ ಸಮಸ್ಯೆ:- ಸಾಮಾಜಿಕ ತಿರಸ್ಕಾರ ಮತ್ತು ಒಂಟಿತನದಿಂದಾಗಿ ಈ ಸಮುದಾಯದವರು ತೀವ್ರವಾದ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
    • ದೌರ್ಜನ್ಯ ಮತ್ತು ನಿಂದನೆ:- ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳೆರಡರಲ್ಲೂ ಇವರು ಮೌಖಿಕ, ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ.
    • ರಾಜಕೀಯ ಪ್ರಾತಿನಿಧ್ಯದ ಕೊರತೆ:- ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಇವರ ಗೋಚರತೆ ಮತ್ತು ಪ್ರಾತಿನಿಧ್ಯವು ಅತ್ಯಂತ ಕ್ಷೀಣವಾಗಿದೆ; ನೀತಿ-ರೂಪಿಸುವ ಪ್ರಕ್ರಿಯೆಯಲ್ಲಿ ಇವರ ಪಾಲ್ಗೊಳ್ಳುವಿಕೆಯ ಕೊರತೆಯು, ಇವರ ನೈಜ ಅಗತ್ಯಗಳನ್ನು ಈಡೇರಿಸಲು ಪ್ರಮುಖ ಅಡ್ಡಿಯಾಗಿದೆ.

    ಸರ್ಕಾರದ ಪ್ರಮುಖ ಉಪಕ್ರಮಗಳು:

    • ತೃತೀಯಲಿಂಗಿಗಳ ರಾಷ್ಟ್ರೀಯ ಪೋರ್ಟಲ್:- 2020 ರಲ್ಲಿ ಪ್ರಾರಂಭಿಸಲಾದ ಈ ಆನ್‌ಲೈನ್ ಪೋರ್ಟಲ್, ಗುರುತಿನ ಪ್ರಮಾಣಪತ್ರಗಳಿಗಾಗಿ ಅರ್ಜಿ ಸಲ್ಲಿಸಲು ಮತ್ತು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ.
    • ಸ್ಮೈಲ್ (SMILE) ಯೋಜನೆ:- 2022 ರಲ್ಲಿ ಪರಿಚಯಿಸಲಾದ ಈ ಮಹತ್ವಾಕಾಂಕ್ಷಿ ಯೋಜನೆಯು, ‘ಗರಿಮಾ ಗೃಹ’ ಕೇಂದ್ರಗಳು ಮತ್ತು ‘ಆಯುಷ್ಮಾನ್ ಭಾರತ್ ಟಿಜಿ ಪ್ಲಸ್’ ಆರೋಗ್ಯ ವಿಮೆಯ ಮೂಲಕ ಜೀವನೋಪಾಯ, ಕೌಶಲ್ಯ ತರಬೇತಿ ಮತ್ತು ವಸತಿ ಬೆಂಬಲವನ್ನು ಒದಗಿಸುತ್ತದೆ.
    • ತೃತೀಯಲಿಂಗಿಗಳ ರಾಷ್ಟ್ರೀಯ ಮಂಡಳಿ:- ಇದು ಭಾರತದಲ್ಲಿ ತೃತೀಯಲಿಂಗಿಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಒಂದು ಶಾಸನಬದ್ಧ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

    ಖರ್ಗ್ ದ್ವೀಪ

    ಭೂಗೋಳ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಅಮೆರಿಕದ ಸಶಸ್ತ್ರ ಪಡೆಗಳು ಇರಾನ್‌ನ ‘ಖರ್ಗ್ ದ್ವೀಪ’ದಲ್ಲಿರುವ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ.

    ಖರ್ಗ್ ದ್ವೀಪದ ಬಗ್ಗೆ:

    • ಅರಬ್ ಜಗತ್ತಿನಲ್ಲಿ ಈ ದ್ವೀಪವನ್ನು ‘ಅನಾಥ ಮುತ್ತು’ (Orphan pearl) ಎಂಬ ವಿಶೇಷಣದಿಂದ ಬಣ್ಣಿಸಲಾಗುತ್ತದೆ.
    • ಪರ್ಷಿಯನ್ ಕೊಲ್ಲಿಯ ಈಶಾನ್ಯ ಭಾಗದಲ್ಲಿ ನೆಲೆಗೊಂಡಿರುವ ಈ ಸಣ್ಣ ದ್ವೀಪವು, ಇರಾನ್‌ನ ಖುಜೆಸ್ತಾನ್ ಪ್ರಾಂತ್ಯದ ಕರಾವಳಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ.
    • ಭೌಗೋಳಿಕವಾಗಿ ಸಣ್ಣ ಗಾತ್ರ ಹೊಂದಿದ್ದರೂ, ಇದು ಇರಾನ್ ದೇಶದ ಅತ್ಯಂತ ಪ್ರಮುಖ ‘ತೈಲ ರಫ್ತು ಕೇಂದ್ರ’ವಾಗಿದೆ. ಅಷ್ಟೇ ಅಲ್ಲದೆ, ಜಾಗತಿಕ ಮಟ್ಟದ ಅತ್ಯಂತ ಕಾರ್ಯತಂತ್ರದ ಇಂಧನ ಪೂರೈಕೆ ಮಾರ್ಗಗಳಲ್ಲಿ ಇದೂ ಒಂದಾಗಿದೆ.
    • ಅಂತರರಾಷ್ಟ್ರೀಯ ಮಾರುಕಟ್ಟೆಗೆ ರಫ್ತಾಗುವ ಇರಾನ್‌ನ ಬಹುಪಾಲು ಕಚ್ಚಾ ತೈಲವನ್ನು ಈ ದ್ವೀಪದಲ್ಲೇ ಹಡಗುಗಳಿಗೆ ತುಂಬಿಸಲಾಗುತ್ತದೆ. ನಂತರ, ಈ ತೈಲ ಹಡಗುಗಳು ‘ಹಾರ್ಮುಜ್ ಜಲಸಂಧಿ’ಯ ಮೂಲಕ ಹಾದು ಜಾಗತಿಕ ಹಡಗು ಮಾರ್ಗಗಳನ್ನು ಪ್ರವೇಶಿಸುತ್ತವೆ.

    ನಿಮಗೆ ತಿಳಿದಿರಲಿ:

    • ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟವಾದ ‘ಒಪೆಕ್’ (OPEC) ಸಂಘಟನೆಯಲ್ಲಿ ಇರಾನ್ ಮೂರನೇ ಅತಿದೊಡ್ಡ ತೈಲ ಉತ್ಪಾದಕ ದೇಶವಾಗಿದೆ. ಜಾಗತಿಕ ತೈಲ ಪೂರೈಕೆಯಲ್ಲಿ ಇರಾನ್ ದೇಶವು ಸುಮಾರು 4.5% ರಷ್ಟು ಗಣನೀಯ ಪಾಲನ್ನು ಹೊಂದಿದೆ.
  • ರುಬಿಡಿಯಮ್ ಪರಮಾಣು ಗಡಿಯಾರ ವೈಫಲ್ಯ: ಇಸ್ರೋದ ‘ನಾವಿಕ್’ ವ್ಯವಸ್ಥೆಗೆ ಹಿನ್ನಡೆ | ಭಾರತದ ವಿದ್ಯುತ್ ಉತ್ಪಾದನಾ ಗುರಿ, 2047: ಥೋರಿಯಂ ಆಧಾರ | ರಾಜಸ್ಥಾನದ ನೂತನ ಆಸ್ತಿ ಮಸೂದೆ

    ರುಬಿಡಿಯಮ್ ಪರಮಾಣು ಗಡಿಯಾರ ವೈಫಲ್ಯ: ಇಸ್ರೋದ ‘ನಾವಿಕ್’ ವ್ಯವಸ್ಥೆಗೆ ಹಿನ್ನಡೆ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಸ್ವದೇಶಿ ನೌಕಾಯಾನ ಉಪಗ್ರಹ ವ್ಯವಸ್ಥೆಯಾದ ‘ನಾವಿಕ್’ಗೆ (NavIC) ತೀವ್ರ ಹಿನ್ನಡೆಯಾಗಿದ್ದು, IRNSS-1F ಉಪಗ್ರಹದಲ್ಲಿನ ಏಕೈಕ ಕಾರ್ಯನಿರತ ರುಬಿಡಿಯಮ್ ಪರಮಾಣು ಗಡಿಯಾರವು ವಿಫಲಗೊಂಡಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

    ನಾವಿಕ್ (NavIC) ಉಪಗ್ರಹ ವ್ಯವಸ್ಥೆಯ ಬಗ್ಗೆ:

    • NavIC ಸಂಪೂರ್ಣ ರೂಪ:- ನಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೇಲೇಷನ್ (Navigation with Indian Constellation).
    • ಈ ಉಪಗ್ರಹ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ನಿರ್ಮಿಸಿ, 2013ರಲ್ಲಿ ಉಡಾವಣೆ ಮಾಡಿತು.
    • ಭಾರತದ ಸ್ವಾಯತ್ತ, ಪ್ರಾದೇಶಿಕ ನೌಕಾಯಾನ ಉಪಗ್ರಹ ವ್ಯವಸ್ಥೆಯಾಗಿದೆ:- ಇದು ನಾಗರಿಕ ಮತ್ತು ಸೇನಾ ನೌಕಾಯಾನದ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
    • ನಾವಿಕ್ ಅನ್ನು ಈ ಮೊದಲು ಭಾರತೀಯ ಪ್ರಾದೇಶಿಕ ನೌಕಾಯಾನದ ಉಪಗ್ರಹ ವ್ಯವಸ್ಥೆ (IRNSS– ‘ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್’) ಎಂದು ಕರೆಯಲಾಗುತ್ತಿತ್ತು. 
    • ಪ್ರಮುಖ ಉದ್ದೇಶ:- ಭಾರತದಾದ್ಯಂತ ಹಾಗೂ ದೇಶದ ಗಡಿಯಿಂದ ಆಚೆಗೆ 1,500 ಕಿ.ಮೀ. ವ್ಯಾಪ್ತಿಯಲ್ಲಿ ನಿಖರವಾದ ಸ್ಥಾನ, ವೇಗ ಮತ್ತು ಸಮಯದ (PVT) ಸೇವೆಗಳನ್ನು ಒದಗಿಸುವುದು. ಈ ಭೌಗೋಳಿಕ ವ್ಯಾಪ್ತಿಯು ನಾವಿಕ್‌ನ ‘ಪ್ರಾಥಮಿಕ ಸೇವಾ ವಲಯ’ ಎನಿಸಿಕೊಂಡಿದೆ.
    • ನಾವಿಕ್ ವ್ಯವಸ್ಥೆಯ ರಚನೆ:- ಈ ವ್ಯವಸ್ಥೆಯು ಒಟ್ಟು 7 ಉಪಗ್ರಹಗಳ ಸಮೂಹವನ್ನು ಒಳಗೊಂಡಿದೆ. ಇದರ ಸುಗಮ ಕಾರ್ಯಾಚರಣೆಗಾಗಿ ದಿನದ 24 ಗಂಟೆಯೂ ನಿರಂತರವಾಗಿ ಕಾರ್ಯನಿರ್ವಹಿಸುವ ‘ಭೂಕೇಂದ್ರಗಳ ಜಾಲ’ವನ್ನು ಸ್ಥಾಪಿಸಲಾಗಿದೆ.
    • ಉಪಗ್ರಹಗಳ ಕಕ್ಷೆ:- ಈ 7 ಉಪಗ್ರಹಗಳ ಪೈಕಿ 3 ಉಪಗ್ರಹಗಳನ್ನು ‘ಭೂಸ್ಥಿರ ಕಕ್ಷೆ’ಯಲ್ಲಿ ನೆಲೆಗೊಳಿಸಲಾಗಿದೆ. ಉಳಿದ 4 ಉಪಗ್ರಹಗಳನ್ನು ‘ವಾಲಿದ ಭೂಸಮಕಾಲಿಕ ಕಕ್ಷೆ’ಯಲ್ಲಿ ಇರಿಸಲಾಗಿದೆ.
    • ಪ್ರಾಮುಖ್ಯತೆ:- ಈ ವ್ಯವಸ್ಥೆಯು ತನ್ನ ಸಂಪೂರ್ಣ ಸೇವಾ ವಲಯದಾದ್ಯಂತ 20 ಮೀಟರ್‌ಗಿಂತಲೂ ಕರಾರುವಕ್ಕಾದ ‘ಸ್ಥಾನಿಕ ನಿಖರತೆ’ಯನ್ನು ಮತ್ತು 40 ನ್ಯಾನೊ-ಸೆಕೆಂಡ್‌ಗಳಿಗಿಂತಲೂ ಅತ್ಯುನ್ನತ ಮಟ್ಟದ ‘ಕಾಲಮಾನದ ನಿಖರತೆ’ಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

    ಭಾರತದ ವಿದ್ಯುತ್ ಉತ್ಪಾದನಾ ಗುರಿ, 2047: ಥೋರಿಯಂ ಆಧಾರ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ‘ಶಾಂತಿ ಕಾಯ್ದೆ’ (SHANTI Act), 2025 ಭಾರತದ ಪರಮಾಣು ಶಕ್ತಿ ಕಾರ್ಯಕ್ರಮದಲ್ಲಿ ಒಂದು ಐತಿಹಾಸಿಕ ಘಟ್ಟವಾಗಿದೆ. ಆದರೆ, ಥೋರಿಯಂ ಬಳಕೆಯಲ್ಲಿ ಎದುರಾಗುವ ಸವಾಲುಗಳನ್ನು ತುರ್ತಾಗಿ ಪರಿಹರಿಸಬೇಕಾದ ಅಗತ್ಯವಿದೆ.

    ಭಾರತದಲ್ಲಿನ ಥೋರಿಯಂ ನಿಕ್ಷೇಪಗಳು:

    • ಭಾರತವು ವಿಶ್ವದ ಅತಿದೊಡ್ಡ ಥೋರಿಯಂ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.
    • ದೇಶದ ಒಟ್ಟು ಥೋರಿಯಂ ನಿಕ್ಷೇಪಗಳಲ್ಲಿ ಶೇ 70ರಷ್ಟು ಕೇವಲ ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲೇ ಲಭ್ಯವಿದೆ.
    • ಭಾರತವು ಮೂರು-ಹಂತದ ಪರಮಾಣು ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತಿದ್ದು, ಥೋರಿಯಂ ಆಧಾರಿತ ರಿಯಾಕ್ಟರ್‌ಗಳು ಈ ಕಾರ್ಯಕ್ರಮದ ಮೂರನೇ ಹಂತದ ನಿರ್ಣಾಯಕ ಭಾಗವಾಗಿವೆ.
    • ಸವಾಲುಗಳು:- ಅದಿರಿನಿಂದ ಥೋರಿಯಂ ಅನ್ನು ಹೊರತೆಗೆಯಲು ಹೆಚ್ಚಿನ ಪ್ರಮಾಣದ ಶಕ್ತಿಯ ಅಗತ್ಯವಿರುತ್ತದೆ ಹಾಗೂ ಇದು ಗಣನೀಯ ಪ್ರಮಾಣದ ತ್ಯಾಜ್ಯವನ್ನು ಸೃಷ್ಟಿಸುತ್ತದೆ. ಜೊತೆಗೆ, ಸುಧಾರಿತ ರಿಯಾಕ್ಟರ್ ತಂತ್ರಜ್ಞಾನದ ಅಗತ್ಯತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಯಂತಹ ಸವಾಲುಗಳೂ ಇದರಲ್ಲಿವೆ.

    ಥೋರಿಯಂ ಬಳಕೆಯ ಅಗತ್ಯತೆ:

    • ಆಮದು ಮೇಲಿನ ಅವಲಂಬನೆ ಕಡಿತ:- ಪ್ರಸ್ತುತ ಭಾರತದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಬೆಳವಣಿಗೆಯು ಆಮದು ಮಾಡಿಕೊಂಡ ಯುರೇನಿಯಂ ಅನ್ನು ಅತಿಯಾಗಿ ಅವಲಂಬಿಸಿದೆ.
    • ದೇಶೀಯ ಯುರೇನಿಯಂ ಅದಿರುಗಳು ಕಳಪೆ ಗುಣಮಟ್ಟದ್ದಾಗಿದ್ದು, ಅವುಗಳನ್ನು ಗಣಿಗಾರಿಕೆ ಮಾಡುವುದು ದುಬಾರಿಯಾಗಿದೆ:- ಆದರೂ, ಇದು ಯುರೇನಿಯಂ ಪೂರೈಕೆಯಲ್ಲಿನ ವ್ಯತ್ಯಯಗಳ ವಿರುದ್ಧ ಸ್ವಲ್ಪಮಟ್ಟಿನ ಭದ್ರತೆಯನ್ನು ಒದಗಿಸುತ್ತದೆ.

    ಭಾರತಕ್ಕೆ ಥೋರಿಯಂನ ಪ್ರಾಮುಖ್ಯತೆ:

    • ಸಂಪನ್ಮೂಲಗಳ ಲಭ್ಯತೆ:- ಭಾರತದಲ್ಲಿ ಯುರೇನಿಯಂ ನಿಕ್ಷೇಪಗಳು ಸೀಮಿತವಾಗಿವೆ. ಆದರೆ ಕರಾವಳಿ ಮತ್ತು ನದಿಪಾತ್ರದ ಮರಳಿನಲ್ಲಿ ಥೋರಿಯಂ ನಿಕ್ಷೇಪಗಳು ಹೇರಳವಾಗಿ ಲಭ್ಯವಿದೆ.
    • ಪರಮಾಣು ವಿದಳನ ಪ್ರಕ್ರಿಯೆ:- ಥೋರಿಯಂ ಧಾತುವಿನ ಗುಣಲಕ್ಷಣಗಳು ಯುರೇನಿಯಂನಂತೆ ನೇರವಾಗಿ ವಿದಳನಶೀಲವಲ್ಲ (non-fissile). ಬದಲಾಗಿ, ಇದು ಒಂದು ಪರಿವರ್ತನಶೀಲ (fertile) ವಸ್ತುವಾಗಿದ್ದು, ನ್ಯೂಟ್ರಾನ್‌ಗಳನ್ನು ಹೀರಿಕೊಂಡ ನಂತರ ‘ಯುರೇನಿಯಂ-233’ ಎಂಬ ವಿದಳನಶೀಲ ಐಸೋಟೋಪ್ ಆಗಿ ಮಾರ್ಪಾಡುಗೊಳ್ಳುತ್ತದೆ. ಈ ರೂಪಾಂತರದ ಬಳಿಕವಷ್ಟೇ ಇದು ಸತತವಾದ ಪರಮಾಣು ವಿದಳನ (Nuclear fission) ಪ್ರಕ್ರಿಯೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತದೆ.
    • ಕಾರ್ಯತಂತ್ರದ ಹೊಂದಾಣಿಕೆ:- ಇದು ಭಾರತದ ದೀರ್ಘಾವಧಿಯ ‘ಮೂರು-ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮ’ಕ್ಕೆ ಅವಿಭಾಜ್ಯ ಅಂಗವಾಗಿದೆ.

    ಭಾರತದ ಮೂರು-ಹಂತದ ಪರಮಾಣು ಕಾರ್ಯಕ್ರಮ:

    • ಭಾರತವು 1948ರಲ್ಲಿ ಪರಮಾಣು ಶಕ್ತಿ ಆಯೋಗವನ್ನು ಸ್ಥಾಪಿಸಿತು.
    • ‘ಅಪ್ಸರಾ’:- 1956ರಲ್ಲಿ ಟ್ರಾಂಬೆಯಲ್ಲಿರುವ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ (BARC) ಏಷ್ಯಾದ ಮೊಟ್ಟಮೊದಲ ಸಂಶೋಧನಾ ರಿಯಾಕ್ಟರ್ ‘ಅಪ್ಸರಾ’ ಕಾರ್ಯಾರಂಭ ಮಾಡಿತು.
    • ಭಾರತದ ಪರಮಾಣು ಕಾರ್ಯಕ್ರಮದ ಪಿತಾಮಹ ಡಾ. ಹೋಮಿ ಜೆ. ಭಾಭಾ ಅವರು ಭಾರತದ ಅಣುಶಕ್ತಿ ಕಾರ್ಯಕ್ರಮದ ಮೂರು ಹಂತಗಳನ್ನು ರೂಪಿಸಿದರು. ಅವುಗಳೆಂದರೆ:
      1. ಮೊದಲನೇ ಹಂತ:- ಒತ್ತಡದ ಭಾರಜಲ ರಿಯಾಕ್ಟರ್‌ಗಳು (PHWRs).
      2. ಎರಡನೇ ಹಂತ:- ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳು (FBRs).
      3. ಮೂರನೇ ಹಂತ:- ಸುಧಾರಿತ ಭಾರಜಲ ರಿಯಾಕ್ಟರ್‌ಗಳು (AHWRs).

    ಗಮನಿಸಿ:- ಜಪಾನ್‌ನ ನಂತರ ಏಷ್ಯಾದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಿದ ಎರಡನೇ ರಾಷ್ಟ್ರ ಭಾರತ. ಚೀನಾಕ್ಕಿಂತಲೂ ಮುಂಚಿತವಾಗಿ 1969ರಲ್ಲೇ ಭಾರತವು ಮಹಾರಾಷ್ಟ್ರದ ತಾರಾಪುರದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಿತು.

    ರಾಜಸ್ಥಾನದ ನೂತನ ಆಸ್ತಿ ಮಸೂದೆ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ರಾಜಸ್ಥಾನ ಶಾಸನಸಭೆಯು ‘ಅಶಾಂತ ಪ್ರದೇಶಗಳಲ್ಲಿನ ಸ್ಥಿರಾಸ್ತಿ ವರ್ಗಾವಣೆ ನಿಷೇಧ ಮಸೂದೆ’ಯನ್ನು ಅಂಗೀಕರಿಸಿದೆ. 
    • ಗುಜರಾತ ನಂತರ ಇಂತಹ ಕಠಿಣ ಮಾಸೂದೆಯನ್ನು ಜಾರಿಗೆ ತಂದ ದೇಶದ ಎರಡನೇ ರಾಜ್ಯವಾಗಿ ರಾಜಸ್ಥಾನ ಹೊರಹೊಮ್ಮಿದೆ.

    ಈ ಮಸೂದೆಯ ಪ್ರಮುಖ ಅಂಶಗಳು:

    • ಪ್ರಮುಖ ಉದ್ದೇಶ:- ಸರ್ಕಾರವು “ಅಶಾಂತ” (Disturbed) ಎಂದು ಘೋಷಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಚಿರಾಸ್ತಿ ವಹಿವಾಟುಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು.
    • ಪ್ರಸ್ತಾವಿತ ಮಸೂದೆಯ ಸೆಕ್ಷನ್ 3(1,2) ರ ಪ್ರಕಾರ, ಯಾವುದೇ ಪ್ರದೇಶದಲ್ಲಿ ಕೋಮು ಗಲಭೆ ಅಥವಾ ಸಾರ್ವಜನಿಕ ಅಶಾಂತಿ ಉಂಟಾಗುವ ಸಾಧ್ಯತೆಗಳಿದ್ದರೆ, ಅಂತಹ ಪ್ರದೇಶವನ್ನು ‘ಅಶಾಂತ ಪ್ರದೇಶ’ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಹೊಂದಿದೆ.
    • ಒಮ್ಮೆ ಯಾವುದೇ ಪ್ರದೇಶವನ್ನು ಅಶಾಂತ ಪ್ರದೇಶವೆಂದು ಅಧಿಸೂಚಿಸಿದರೆ, ಅಲ್ಲಿ ಭೂಮಿ, ಮನೆ ಅಥವಾ ವಾಣಿಜ್ಯ ಮಳಿಗೆಗಳಂತಹ ಯಾವುದೇ ಸ್ಥಿರಾಸ್ತಿಯನ್ನು ವರ್ಗಾಯಿಸಲು ಜಿಲ್ಲಾ ದಂಡಾಧಿಕಾರಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
    • ಜಿಲ್ಲಾ ದಂಡಾಧಿಕಾರಿಯ ಅನುಮತಿಯಿಲ್ಲದೆ ನಡೆಸುವ ಎಲ್ಲಾ ಚಿರಾಸ್ತಿ ವಹಿವಾಟುಗಳು ಕಾನೂನುಬಾಹಿರ ಎನಿಸಿಕೊಳ್ಳುತ್ತವೆ.
    • ಅಷ್ಟೇ ಅಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಚಿರಾಸ್ತಿ ವರ್ಗಾವಣೆ ಮಾಡಿದರೆ, ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ದಂಡ ವಿಧಿಸಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
    • “ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂಬುದನ್ನು ಖಾತರಿಪಡಿಸುವ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುವ ಸಾಧ್ಯತೆಗಳ ಬಗ್ಗೆ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

    ನಿಮಗಿದು ಗೊತ್ತೇ?

    • 44ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1978 ರ ಮೂಲಕ ‘ಆಸ್ತಿಯ ಹಕ್ಕನ್ನು’ ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
    • ಪ್ರಸ್ತುತ, ಇದು ಸಂವಿಧಾನದ 300A ವಿಧಿಯ ಅಡಿಯಲ್ಲಿ ಕೇವಲ ‘ಕಾನೂನಾತ್ಮಕ ಹಕ್ಕು’ ಆಗಿ ರಕ್ಷಿಸಲ್ಪಟ್ಟಿದೆ.
    • ಕಾನೂನಿನ ಅಧಿಕಾರವಿಲ್ಲದೆ ಯಾವುದೇ ವ್ಯಕ್ತಿಯನ್ನು ಆತನ ಆಸ್ತಿಯ ಹಕ್ಕಿನಿಂದ ವಂಚಿತಗೊಳಿಸುವಂತಿಲ್ಲ ಎಂದು ಈ ವಿಧಿ ಸ್ಪಷ್ಟಪಡಿಸುತ್ತದೆ.