ವರ್ಗ: National and International Current Affairs Kannada

  • 16ನೇ ಹಣಕಾಸು ಆಯೋಗ | ಸಂತ ಗುರು ರವಿದಾಸ | ಬೌದ್ಧ ತೀರ್ಥಯಾತ್ರಾ ಮಾರ್ಗಗಳು | ಕೇಂದ್ರ ಮುಂಗಡ ಪತ್ರ, 2026-27: ತೆಂಗು, ಕೋಕೋ, ಗೋಡಂಬಿಗೆ ಆದ್ಯತೆ

    16ನೇ ಹಣಕಾಸು ಆಯೋಗ

    ರಾಜಕೀಯ

    ಇದೀಗ ಸುದ್ದಿಯಲ್ಲಿದೆ:

    • ಡಾ. ಅರವಿಂದ್ ಪನಗರಿಯಾ ಅವರ ಅಧ್ಯಕ್ಷತೆಯಲ್ಲಿ 2023 ರಲ್ಲಿ ರಚಿಸಲಾದ 16ನೇ ಹಣಕಾಸು ಆಯೋಗದ ಪ್ರಮುಖ ಶಿಫಾರಸುಗಳನ್ನು, 2026–27 ರಿಂದ 2030–31 ರ ಅವಧಿಯ ಅನುಷ್ಠಾನಕ್ಕಾಗಿ ಸರ್ಕಾರವು ಅಂಗೀಕರಿಸಿದೆ.

    ಹಣಕಾಸು ಆಯೋಗದ ಬಗ್ಗೆ:

    • ಸಂವಿಧಾನಾತ್ಮಕ ಸಂಸ್ಥೆ:- ಇದನ್ನು ಭಾರತ ಸಂವಿಧಾನದ 280ನೇ ವಿಧಿಯ ಅಡಿಯಲ್ಲಿ ಸ್ಥಾಪಿಸಲಾಗಿದೆ.
    • ಭಾರತದ ರಾಷ್ಟ್ರಪತಿಗಳಿಂದ ರಚನೆ:- ಪ್ರತಿ 5 ವರ್ಷಗಳಿಗೊಮ್ಮೆ (ಅಥವಾ ಅದಕ್ಕಿಂತ ಮುಂಚಿತವಾಗಿ) ಭಾರತದ ರಾಷ್ಟ್ರಪತಿಗಳಿಂದ ಇದು ತಿ ರಚಿಸಲ್ಪಡುತ್ತದೆ.
    • ಸಂಯೋಜನೆ:- ಇದು ಒಬ್ಬ ಅಧ್ಯಕ್ಷರು ಮತ್ತು ಇತರ ನಾಲ್ವರು ಸದಸ್ಯರನ್ನು ಒಳಗೊಂಡಿರುತ್ತದೆ.
    • ಪ್ರಮುಖ ಕಾರ್ಯ:- ಇದು ಈ ಕೆಳಗಿನವುಗಳನ್ನು ಶಿಫಾರಸು ಮಾಡುವ ಮೂಲಕ ‘ವಿತ್ತೀಯ (ಹಣಕಾಸು) ಒಕ್ಕೂಟ ವ್ಯವಸ್ಥೆಯ ಸಮತೋಲನ ಚಕ್ರ‘ವಾಗಿ ಕಾರ್ಯನಿರ್ವಹಿಸುತ್ತದೆ:
      • ಲಂಬ ಹಂಚಿಕೆ (Vertical Devolution): ಕೇಂದ್ರ ಮತ್ತು ರಾಜ್ಯಗಳ ನಡುವೆ ನಿವ್ವಳ ತೆರಿಗೆ ಆದಾಯದ ಹಂಚಿಕೆ.
      • ಸಮಾನಾಂತರ ಹಂಚಿಕೆ (Horizontal Devolution):- ರಾಜ್ಯ ರಾಜ್ಯಗಳ ನಡುವೆಯೇ ನಿವ್ವಳ ತೆರಿಗೆ ಆದಾಯದ ಹಂಚಿಕೆ.
      • ಸಹಾಯಾನುದಾನ (Grants-in-Aid):- ಭಾರತದ ಸಂಚಿತ ನಿಧಿಯಿಂದ (ವಿಧಿ 275) ರಾಜ್ಯಗಳಿಗೆ ನೀಡುವ ಆರ್ಥಿಕ ಸಹಾಯವನ್ನು ನಿಯಂತ್ರಿಸುವ ತತ್ವಗಳು.
      • ಸ್ಥಳೀಯ ಸಂಸ್ಥೆಗಳು:- ಪಂಚಾಯತಿಗಳು ಮತ್ತು ಪುರಸಭೆಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ರಾಜ್ಯದ ಸಂಚಿತ ನಿಧಿಯನ್ನು ಬಲಪಡಿಸಲು ಅಗತ್ಯವಾದ ಕ್ರಮಗಳು.
      • ಶಿಫಾರಸುಗಳ ಸ್ವರೂಪ:- ಇವು ಸಲಹಾತ್ಮಕ ಸ್ವರೂಪದ್ದಾಗಿರುತ್ತವೆ (ಕಾನೂನುಬದ್ಧವಾಗಿ ಬದ್ಧವಲ್ಲ). ಆದಾಗ್ಯೂ, ಸಾಂಪ್ರದಾಯಿಕವಾಗಿ ಸರ್ಕಾರವು ಇವುಗಳನ್ನು ಒಪ್ಪಿಕೊಳ್ಳುತ್ತದೆ.

    ಸಂತ ಗುರು ರವಿದಾಸ

    ಇತಿಹಾಸ

    ಇದೀಗ ಸುದ್ದಿಯಲ್ಲಿದ್ದಾರೆ:

    • ಸಂತ ಗುರು ರವಿದಾಸ ಅವರ 649ನೇ ಜನ್ಮದಿನದ ಸ್ಮರಣಾರ್ಥವಾಗಿ, ಆದಂಪುರ ವಿಮಾನ ನಿಲ್ದಾಣವನ್ನು ‘ಶ್ರೀ ಗುರು ರವಿದಾಸ ಜೀ ವಿಮಾನ ನಿಲ್ದಾಣ, ಆದಂಪುರ’ ಎಂದು ಮರುನಾಮಕರಣ ಮಾಡಲಾಗಿದೆ.

    ‘ಸಂತ ರವಿದಾಸ’ರ ಬಗ್ಗೆ:

    • ಇವರು 14ನೇ ಶತಮಾನದಲ್ಲಿ ಜನಿಸಿದರು.
    • ಭಾರತದಲ್ಲಿ 14 ಮತ್ತು 17ನೇ ಶತಮಾನಗಳ ನಡುವೆ ನಡೆದ ಸಾಮಾಜಿಕ-ಧಾರ್ಮಿಕ ಕ್ರಾಂತಿಯಾದ ‘ಭಕ್ತಿ ಚಳವಳಿ’ಯ ಪ್ರಮುಖ ಸಂತರಲ್ಲಿ ಇವರು ಒಬ್ಬರಾಗಿದ್ದರು.
    • ಇವರು ಸಂತ ಕಬೀರರ ಶಿಷ್ಯರಾಗಿದ್ದರು ಮತ್ತು ‘ರವಿದಾಸಿಯಾ’ ಧರ್ಮದ ಸ್ಥಾಪಕರಾಗಿದ್ದರು. ಮೀರಾಬಾಯಿ ಇವರ ಶಿಷ್ಯೆಯಾಗಿದ್ದರು.

    ಇವರ ಜೀವನ ಮತ್ತು ಬೋಧನೆಗಳು:

    • ಇವರು ಒಬ್ಬ ಮಹಾನ್ ಸಮಾಜ ಸುಧಾರಕರಾಗಿದ್ದರು ಹಾಗೂ ಶಾಂತಿ, ಪ್ರೀತಿ ಮತ್ತು ಭ್ರಾತೃತ್ವದ ಹರಿಕಾರರಾಗಿದ್ದರು.
    • ಜಾತಿ ಮತ್ತು ಧರ್ಮ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ಇವರು ಅವಿರತವಾಗಿ ಶ್ರಮಿಸಿದರು ಮತ್ತು ತುಳಿತಕ್ಕೊಳಗಾದವರ ಏಳಿಗೆಗಾಗಿ ದುಡಿದರು.
    • ಇವರ ಜೀವನವು ತ್ಯಾಗ ಮತ್ತು ತಪಸ್ಸಿನ ಒಂದು ಅನನ್ಯ ಉದಾಹರಣೆಯಾಗಿದೆ. ಇವರು ವಿವಿಧ ಸಾಮಾಜಿಕ ವಿಷಯಗಳ ಕುರಿತು ಅನೇಕ ಕೃತಿಗಳನ್ನು ರಚಿಸಿದರು.
    • ‘ಮನ್ ಚಂಗಾ ತೋ ಕಥೌಟಿ ಮೇ ಗಂಗಾ’ (ಮನಸ್ಸು ಶುದ್ಧವಾಗಿದ್ದರೆ ಗಂಗೆಯು ಪಾತ್ರೆಯಲ್ಲೇ ಇರುತ್ತಾಳೆ) ಎಂಬ ಜನಪ್ರಿಯ ಹಿಂದಿ ಹೇಳಿಕೆಯನ್ನು ನೀಡುವ ಮೂಲಕ, ಇವರು ಸಮಾಜಕ್ಕೆ ‘ಕರ್ಮ’ದ ಸಿದ್ಧಾಂತದ ಬಗ್ಗೆ ಬಹಳ ವಿಶಾಲವಾದ ಸಂದೇಶವನ್ನು ನೀಡಿದರು.

    ಪರಂಪರೆ:

    • ಸಿಖ್ಖರ ಪವಿತ್ರ ಗ್ರಂಥವಾದ ‘ಗುರು ಗ್ರಂಥ ಸಾಹೇಬ’, ಇವರ 41 ಭಕ್ತಿಗೀತೆಗಳು ಮತ್ತು ಪದ್ಯಗಳನ್ನು ಒಳಗೊಂಡಿದೆ.
    • ನಮ್ಮ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು, ಗುರು ರವಿದಾಸ ಜೀ ಅವರು ವ್ಯಕ್ತಪಡಿಸಿದ ಮೌಲ್ಯಗಳ ಸುತ್ತ ಸಂವಿಧಾನಾತ್ಮಕ ತತ್ವಗಳನ್ನು ಅಳವಡಿಸಿಕೊಂಡಿದ್ದರು.

    ಬೌದ್ಧ ತೀರ್ಥಯಾತ್ರಾ ಮಾರ್ಗಗಳು

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಮುಂಗಡಪತ್ರದಲ್ಲಿ, 20 ಪ್ರತಿಷ್ಠಿತ ಪ್ರವಾಸಿ ತಾಣಗಳಲ್ಲಿನ 10,000 ಪ್ರವಾಸಿ ಮಾರ್ಗದರ್ಶಿಗಳ ಕೌಶಲ್ಯಾಭಿವೃದ್ಧಿಗಾಗಿ ಒಂದು ಪ್ರಾಯೋಗಿಕ ಯೋಜನೆಯನ್ನು ಹಾಗೂ ಈ ವಲಯದ ವೃತ್ತಿಪರರಿಗೆ ತರಬೇತಿ ನೀಡಲು ‘ರಾಷ್ಟ್ರೀಯ ಆತಿಥ್ಯ ಸಂಸ್ಥೆ‘ಯನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

    ಈ ಉಪಕ್ರಮದ ಬಗ್ಗೆ:

    • ರಾಷ್ಟ್ರೀಯ ತಾಣಗಳ ಡಿಜಿಟಲ್ ಜ್ಞಾನ ಜಾಲ:- ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವದ ಎಲ್ಲಾ ತಾಣಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಈ ಜಾಲವನ್ನು ಸ್ಥಾಪಿಸಲಾಗುವುದು.
    • ಸರ್ಕಾರವು ಈ ಪ್ರದೇಶದಲ್ಲಿ ‘ಬೌದ್ಧ ತೀರ್ಥಯಾತ್ರಾ ಮಾರ್ಗ’ಗಳ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ಪ್ರಸ್ತಾಪಿಸಿದೆ.
    • ಈ ರಾಜ್ಯಗಳಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಸೇರಿವೆ.

    ಬೌದ್ಧ ತೀರ್ಥಯಾತ್ರಾ ಮಾರ್ಗಗಳು ಬಗ್ಗೆ:

    • ಘೋಷಣೆ:- 2016ರಲ್ಲಿ, ಪ್ರವಾಸೋದ್ಯಮ ಸಚಿವಾಲಯವು ‘ಬೌದ್ಧ ತೀರ್ಥಯಾತ್ರಾ ಮಾರ್ಗ’ಗಳನ್ನು ದೇಶದ ಮೊದಲ ‘ಅಂತರರಾಷ್ಟ್ರೀಯ ಪ್ರವಾಸಿ ಪಥ’ ಎಂದು ಘೋಷಿಸಿತು. ಇದು ಭಾರತದಲ್ಲಿನ ತಾಣಗಳ ಜೊತೆಗೆ ನೇಪಾಳ ಮತ್ತು ಶ್ರೀಲಂಕಾದ ತಾಣಗಳನ್ನೂ ಒಳಗೊಂಡಿದೆ.
    • ಉದ್ದೇಶ:- ಪ್ರವಾಸಿಗರಿಗೆ ಮತ್ತು ಯಾತ್ರಾರ್ಥಿಗಳಿಗೆ ಭಗವಾನ್ ಬುದ್ಧನ ಬೋಧನೆಗಳನ್ನು ಪ್ರತ್ಯಕ್ಷವಾಗಿ ಅನುಭವಿಸಲು ಮತ್ತು ಬುದ್ಧನ ಹೆಜ್ಜೆಯ ಜಾಡುಗಳನ್ನು ಅನ್ವೇಷಿಸಲು ನೆರವಾಗುವುದು.
    • ಈ ಪಥದ ಅಡಿಯಲ್ಲಿ ಬರುವ ಪ್ರಮುಖ ತಾಣಗಳು:- ಬುದ್ಧನ ಜನನದಿಂದ ಹಿಡಿದು ಅವರ ಪರಿನಿರ್ವಾಣದವರೆಗಿನ ಜೀವನಘಟ್ಟಗಳನ್ನು ಒಳಗೊಂಡಿವೆ. ಇವುಗಳಲ್ಲಿ ಬೋಧಗಯಾ, ವೈಶಾಲಿ, ರಾಜಗೀರ್, ಕುಶಿನಗರ, ಸಾರನಾಥ ಮತ್ತು ಶ್ರಾವಸ್ತಿ ಹಾಗೂ ಕಪಿಲವಸ್ತು ಮತ್ತು ಲುಂಬಿನಿ ಸೇರಿವೆ.

    4 ಪವಿತ್ರ ಬೌದ್ಧ ತೀರ್ಥಯಾತ್ರಾ ತಾಣಗಳು (ಚತುರ್ಮಹಾಸ್ಥಾನ):

    • ಲುಂಬಿನಿ (ನೇಪಾಳ):- ಗೌತಮ ಬುದ್ಧನ ಜನ್ಮಸ್ಥಳ.
    • ಬೋಧಗಯಾ (ಬಿಹಾರ):- ಬೋಧಿ ವೃಕ್ಷದ ಅಡಿಯಲ್ಲಿ ಜ್ಞಾನೋದಯ ಪಡೆದ ಸ್ಥಳ.
    • ಸಾರನಾಥ (ಉತ್ತರ ಪ್ರದೇಶ):- ಮೊದಲ ಬೋಧನೆ ಅಥವಾ ಧರ್ಮಚಕ್ರ ಪ್ರವರ್ತನ.

    ಕುಶಿನಗರ (ಉತ್ತರ ಪ್ರದೇಶ):- ಮಹಾಪರಿನಿರ್ವಾಣ (ಮರಣ).

    ಕೇಂದ್ರ ಮುಂಗಡ ಪತ್ರ, 2026-27: ತೆಂಗು, ಕೋಕೋ, ಗೋಡಂಬಿಗೆ ಆದ್ಯತೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • 2026-27ರ ಕೇಂದ್ರ ಮುಂಗಡಪತ್ರವು, ರೈತರ ಆದಾಯ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೆಂಗು, ಗೋಡಂಬಿ, ಕೋಕೋ, ಶ್ರೀಗಂಧ ಮತ್ತು ಆಯ್ದ ಕಾಯಿ ಬೆಳೆಗಳಿಗೆ ನಿರ್ದಿಷ್ಟ ಬೆಂಬಲವನ್ನು ನೀಡುವ ಮೂಲಕ, ‘ಅಧಿಕ ಮೌಲ್ಯದ ಕೃಷಿ’ಗೆ ವಿಶೇಷ ಒತ್ತು ನೀಡಿದೆ.

    ತೆಂಗು ಉತ್ಪಾದನೆ:

    • ಬಹುವಾರ್ಷಿಕ ತೋಟಗಾರಿಕೆ ಬೆಳೆ:- ತೆಂಗು ‘ಅರೆಕೇಸಿ’ ಕುಟುಂಬಕ್ಕೆ ಸೇರಿದ ಹಾಗೂ ಏಕದಳ (ಮೊನೋಕಟಿಲೆಡೊನೌಸ್) ತಾಳೆ ಜಾತಿಗೆ ಸೇರಿದ ಸಸ್ಯವಾಗಿದೆ.
    • ಇಂಡೋ-ಪೆಸಿಫಿಕ್ ಪ್ರದೇಶದ ಸ್ಥಳೀಯ ಸಸ್ಯ:- ಇದರ ಮೂಲವನ್ನು ಸಾಮಾನ್ಯವಾಗಿ ಆಗ್ನೇಯ ಏಷ್ಯಾದಲ್ಲಿ ಗುರುತಿಸಲಾಗುತ್ತದೆ.
    • ವಾಯುಗುಣ:- ತೆಂಗಿನ ಅತ್ಯುತ್ತಮ ಬೆಳವಣಿಗೆಗೆ, 
    • ಬೆಚ್ಚಗಿನ ಮತ್ತು ತೇವಾಂಶಯುಕ್ತ ಉಷ್ಣವಲಯದ ವಾತಾವರಣ.
    • ತಾಪಮಾನ:- 25°C ನಿಂದ 30°ಸಿ
    • ಮಳೆ:- ಸಮನಾಗಿ ಹಂಚಿಕೆಯಾದ ಅಧಿಕ ಮಳೆಯಾಗುವ ಪ್ರದೇಶ, ಅವಶ್ಯಕವಾಗಿದೆ.
    • ಮಣ್ಣು:- ತೆಂಗು ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು, ಮೆಕ್ಕಲು ಮಣ್ಣು, ಜಂಬಿಟ್ಟಿಗೆ ಮತ್ತು ಕರಾವಳಿ ಮಣ್ಣಿನಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಗೋವಾ ಮತ್ತು ಪಶ್ಚಿಮ ಬಂಗಾಳ.
    • ಭಾರತವು ವಿಶ್ವದ ಅತಿದೊಡ್ಡ ತೆಂಗು ಉತ್ಪಾದಕ ರಾಷ್ಟ್ರವಾಗಿದ್ದು, ಸುಮಾರು 10 ದಶಲಕ್ಷ ರೈತರು ಸೇರಿದಂತೆ ಸುಮಾರು 30 ದಶಲಕ್ಷ ಜನರ ಜೀವನೋಪಾಯವನ್ನು ಇದು ಬೆಂಬಲಿಸುತ್ತದೆ.

    ಕೋಕೋ ಉತ್ಪಾದನೆ:

    • ನಿತ್ಯಹರಿದ್ವರ್ಣ ಬಹುವಾರ್ಷಿಕ ಮರ:- ಕೋಕೋ ‘ಮಾಲ್ವೇಸಿ’ ಕುಟುಂಬಕ್ಕೆ ಸೇರಿದೆ.
    • ದಕ್ಷಿಣ ಅಮೆರಿಕದ ಅಮೆಜಾನ್ ಮೇಲ್ದಂಡೆ ಜಲಾನಯನ ಪ್ರದೇಶದ ಸ್ಥಳೀಯ ಸಸ್ಯ:- ವಾಣಿಜ್ಯ ಕೃಷಿಗಾಗಿ ವಸಾಹತುಶಾಹಿ ಕಾಲದಲ್ಲಿ ಇದನ್ನು ಏಷ್ಯಾ ಮತ್ತು ಆಫ್ರಿಕಾಕ್ಕೆ ಪರಿಚಯಿಸಲಾಯಿತು.
    • ವಾಯುಗುಣ:- ಕೋಕೋ ಅತ್ಯುತ್ತಮ ಬೆಳವಣಿಗೆಗೆ, 
    • ಬೆಚ್ಚಗಿನ, ಆರ್ದ್ರ ಮತ್ತು ಸಮಭಾಜಕ ಮಾದರಿಯ ವಾತಾವರಣ.
    • ತಾಪಮಾನ:- 21°C ನಿಂದ 32°C
    • ಮಳೆ:- ವರ್ಷವಿಡೀ ಉತ್ತಮವಾಗಿ ಹಂಚಿಕೆಯಾದ ಮಳೆಯಾಗುವ ಪ್ರದೇಶ, ಅವಶ್ಯಕವಾಗಿದೆ.
    • ಮಣ್ಣು:- ಸಾವಯವ ವಸ್ತುಗಳಿಂದ ಸಮೃದ್ಧವಾಗಿರುವ ಆಳವಾದ, ಫಲವತ್ತಾದ ಮತ್ತು ನೀರು ಬಸಿದು ಹೋಗುವ ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ.

    ಗೋಡಂಬಿ ಉತ್ಪಾದನೆ:

    • ನಿತ್ಯಹರಿದ್ವರ್ಣ ಉಷ್ಣವಲಯದ ಮರ:- ಗೋಡಂಬಿಯು ‘ಅನಕಾರ್ಡಿಯೇಸಿ’ ಕುಟುಂಬಕ್ಕೆ ಸೇರಿದೆ. 
    • ದಕ್ಷಿಣ ಅಮೆರಿಕದ ಈಶಾನ್ಯ ಬ್ರೆಜಿಲ್‌ನ ಕರಾವಳಿ ಪ್ರದೇಶಗಳ ಸ್ಥಳೀಯ ಸಸ್ಯ:- ಗೋಡಂಬಿ ಮರವು (ಅನಕಾರ್ಡಿಯಮ್ ಆಕ್ಸಿಡೆಂಟೇಲ್) ದಕ್ಷಿಣ ಅಮೆರಿಕದ ಸ್ಥಳೀಯ ಸಸ್ಯವಾಗಿದೆ.
    • ‘ಪೋರ್ಚುಗೀಸ್’ನ ಸಾಹಸಿ ಪ್ರವಾಸಿಗರು 16ನೇ ಶತಮಾನದಲ್ಲಿ ಇದನ್ನು ಭಾರತ ಮತ್ತು ಆಫ್ರಿಕಾಕ್ಕೆ ಪರಿಚಯಿಸಿದರು.
    • ವಾಯುಗುಣ:- ಗೋಡಂಬಿಗೆ, 
    • ನಿರ್ದಿಷ್ಟವಾದ ಒಣ ಋತುವಿನೊಂದಿಗೆ ಕೂಡಿದ ಉಷ್ಣವಲಯದ ವಾತಾವರಣ. 
    • ತಾಪಮಾನ:- 20°C ನಿಂದ 35°C 
    • ಮಳೆ:- ಸಾಧಾರಣದಿಂದ ಹೆಚ್ಚಿನ ಮಳೆ ಬೀಳುವ ಪ್ರದೇಶ, ಅವಶ್ಯಕವಾಗಿದೆ.
    • ಮಣ್ಣು:- ಜಂಬಿಟ್ಟಿಗೆ, ಕೆಂಪು ಮರಳು ಮತ್ತು ಕರಾವಳಿ ಮಣ್ಣಿನಲ್ಲಿ ಬೆಳೆಯುತ್ತದೆ ಹಾಗೂ ಕಳಪೆ ಮತ್ತು ಸಾರಹೀನ ಭೂಮಿಯಲ್ಲೂ ಉತ್ತಮ ಇಳುವರಿ ನೀಡುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ಕೇರಳ, ಕರ್ನಾಟಕ, ಗೋವಾ ಮತ್ತು ತಮಿಳುನಾಡು.
  • ಲೋನಾರ್ ಸರೋವರ | ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In)ಲೋನಾರ್ ಸರೋವರ

    ಲೋನಾರ್ ಸರೋವರ

    ಭೂಗೋಳ

    ಇದೀಗ ಸುದ್ದಿಯಲ್ಲಿದೆ:

    • ಮಹಾರಾಷ್ಟ್ರದಲ್ಲಿರುವ ಪ್ರಸಿದ್ಧ ‘ಲೋನಾರ್ ಸರೋವರ’ದ ನೀರಿನ ಮಟ್ಟದಲ್ಲಿ ಇತ್ತೀಚಿಗೆ ನಿರಂತರವಾಗಿ ಬರೋಬ್ಬರಿ 20 ಅಡಿಗಳಷ್ಟು ಗಣನೀಯ ಏರಿಕೆಯಾಗಿರುವುದು ವರದಿಯಾಗಿದೆ.

    ಲೋನಾರ್ ಸರೋವರದ ಬಗ್ಗೆ:

    • ಸ್ಥಳ:- ‘ಲೋನಾರ್ ಕುಳಿ’ ಎಂದೂ ಕರೆಯಲ್ಪಡುವ ಈ ಸರೋವರವು ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯಲ್ಲಿದೆ. 
    • ವೈಶಿಷ್ಟ್ಯ:- ಇದು ಲವಣಯುಕ್ತ ಮತ್ತು ಕ್ಷಾರೀಯ ಗುಣಗಳನ್ನು ಹೊಂದಿರುವ ಸರೋವರವಾಗಿದ್ದು, ಇದನ್ನು ಅಧಿಕೃತವಾಗಿ ‘ರಾಷ್ಟ್ರೀಯ ಭೂ- ಪರಂಪರೆಯ ಸ್ಮಾರಕ’ ಎಂದು ಘೋಷಿಸಲಾಗಿದೆ.
    • ರಚನೆ:- ಇದು ಜ್ವಾಲಾಮುಖಿ ಸ್ಫೋಟಗಳಿಂದ ನಿರ್ಮಾಣವಾದ ಬೃಹತ್ ‘ಬಸಾಲ್ಟ್ ಶಿಲಾ’ ಬಯಲಾದ ‘ದಖನ್ ಪ್ರಸ್ಥಭೂಮಿ’ಯ ಒಳಗಡೆ ನೆಲೆಗೊಂಡಿದೆ.
    • ಉಲ್ಕಾಶಿಲೆಯ ಅಪ್ಪಳಿಸುವಿಕೆ:- ಸುಮಾರು 52,000 ವರ್ಷಗಳ ಹಿಂದೆ ಬೃಹತ್ ‘ಉಲ್ಕಾಶಿಲೆ’ ಭೂಮಿಗೆ ಅಪ್ಪಳಿಸಿದ ಪರಿಣಾಮವಾಗಿ ಈ ವಿಶಿಷ್ಟವಾದ ಕುಳಿ ಸರೋವರವು ನಿರ್ಮಾಣವಾಗಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

    ನಿಮಗಿದು ತಿಳಿದಿದೆಯೇ?

    • ಭೂ-ಪರಂಪರೆಯ ಸ್ಮಾರಕ:- ‘ಭೌಗೋಳಿಕ-ಪರಂಪರೆ’ ಎಂಬುದು ಅಂತರ್ಗತವಾಗಿ ಅಥವಾ ಸಾಂಸ್ಕೃತಿಕವಾಗಿ ಅಪಾರ ಮಹತ್ವವನ್ನು ಹೊಂದಿರುವ ವಿಶಿಷ್ಟ ಭೌಗೋಳಿಕ ಲಕ್ಷಣಗಳನ್ನು ಸೂಚಿಸುತ್ತದೆ. ಭೂಮಿಯ ವಿಕಾಸ ಅಥವಾ ಇತಿಹಾಸದ ಕುರಿತು ಭೂವಿಜ್ಞಾನಕ್ಕೆ ಒಳನೋಟವನ್ನು ಒದಗಿಸುವ ಈ ತಾಣಗಳನ್ನು ಶೈಕ್ಷಣಿಕ ಅಧ್ಯಯನ ಮತ್ತು ಸಂಶೋಧನೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ.
    • ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI):- ‘ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ’ಯು ಇಂತಹ ಭೌಗೋಳಿಕ-ಪರಂಪರೆಯ ತಾಣಗಳನ್ನು ಗುರುತಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಭಾರತದ ಪ್ರಮುಖ ನೋಡಲ್ ಸಂಸ್ಥೆಯಾಗಿದೆ.

    ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In)

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • 2025ರ ಸಾಲಿನಲ್ಲಿ ‘ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ’ವು (CERT-In) ಬರೋಬ್ಬರಿ 29.44 ಲಕ್ಷಕ್ಕೂ ಅಧಿಕ ಸೈಬರ್ ಘಟನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. 
    • ಇದು ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬೃಹತ್ ಸೈಬರ್ ಭದ್ರತಾ ಪ್ರತಿಕ್ರಿಯೆ ಸಾಮರ್ಥ್ಯವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.

    CERT-In ಬಗ್ಗೆ:

    • ರಾಷ್ಟ್ರೀಯ ಸಂಸ್ಥೆ:- ಇದು ಭಾರತದಲ್ಲಿ ಸೈಬರ್ ಭದ್ರತಾ ಘಟನೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಪ್ರಮುಖ ರಾಷ್ಟ್ರೀಯ ನೋಡಲ್ ಸಂಸ್ಥೆಯಾಗಿದೆ.
    • ಸಚಿವಾಲಯ:- ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY).
    • ಕಾನೂನು ಮಾನ್ಯತೆ:- ‘ಮಾಹಿತಿ ತಂತ್ರಜ್ಞಾನ (IT) ಕಾಯ್ದೆ, 2000’ ರ ಸೆಕ್ಷನ್ 70B ಅಡಿಯಲ್ಲಿ ಈ ಸಂಸ್ಥೆಯು ತನ್ನ ಅಧಿಕಾರ ವ್ಯಾಪ್ತಿ ಮತ್ತು ಕಾರ್ಯಾದೇಶವನ್ನು ಪಡೆದುಕೊಂಡಿದೆ.
    • ಪ್ರಮುಖ ಕಾರ್ಯಗಳು:- ಇದು ಸೈಬರ್ ದಾಳಿಗಳನ್ನು ತಡೆಗಟ್ಟುವುದು, ಸೈಬರ್ ಬೆದರಿಕೆಗಳ ಮೇಲೆ ನೈಜ-ಸಮಯದ ಕಣ್ಗಾವಲು ಇಡುವುದು ಮತ್ತು ಸೈಬರ್ ಘಟನೆಗಳನ್ನು ತಗ್ಗಿಸಲು ಹಾಗೂ ನಿಯಂತ್ರಿಸಲು ಪಾಲುದಾರರೊಂದಿಗೆ ತ್ವರಿತ ಸಮನ್ವಯ ಸಾಧಿಸುವುದನ್ನು ಒಳಗೊಂಡಿದೆ.
  • ಬ್ಯಾಕ್ಟ್ರಿಯನ್ ಒಂಟೆಗಳು | ಟಾಮ್‌ಟಾಮ್ ಟ್ರಾಫಿಕ್ ಸೂಚ್ಯಂಕ, 2025

    ಬ್ಯಾಕ್ಟ್ರಿಯನ್ ಒಂಟೆಗಳು

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ದೆಹಲಿಯ ಕರ್ತವ್ಯ ಪಥದಲ್ಲಿ ಜರುಗಿದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ‘ಗಲ್ವಾನ್’ ಮತ್ತು ‘ನುಬ್ರಾ’ ಹೆಸರಿನ ಎರಡು ಗಾಂಭೀರ್ಯಪೂರ್ಣ ‘ಬ್ಯಾಕ್ಟ್ರಿಯನ್ ಒಂಟೆ’ಗಳನ್ನು ಪ್ರದರ್ಶಿಸಲಾಯಿತು.
    • ಭಾರತದಲ್ಲಿ ಈ ಪ್ರಭೇದದ ಒಂಟೆಗಳು ಕೇವಲ ಲಡಾಖ್‌ನ ಶೀತ ಮರುಭೂಮಿಯಲ್ಲಿ ಮಾತ್ರ ಕಂಡುಬರುತ್ತವೆ. ಆ ಪ್ರದೇಶಗಳ ಹೆಸರನ್ನೇ ಈ ಎರಡು ಒಂಟೆಗಳಿಗೆ ನಾಮಕರಣ ಮಾಡಲಾಗಿದೆ.

    ಬ್ಯಾಕ್ಟ್ರಿಯನ್ ಒಂಟೆಗಳ ಬಗ್ಗೆ:

    • ವೈಜ್ಞಾನಿಕ ಹೆಸರು:- ಕ್ಯಾಮೆಲಸ್ ಬ್ಯಾಕ್ಟ್ರಿಯನಸ್ 
    • ಹೆಸರಿನ ಮೂಲ:- ಅಫ್ಘಾನಿಸ್ತಾನ, ಇರಾನ್ ಮತ್ತು ಕಝಾಕಿಸ್ತಾನ್ ನಡುವೆ ಇರುವ ‘ಬ್ಯಾಕ್ಟ್ರಿಯಾ’ ಎಂಬ ಐತಿಹಾಸಿಕ ಪ್ರದೇಶದಿಂದ (ಒಂದು ಕಾಲದಲ್ಲಿ ಅಲೆಕ್ಸಾಂಡರ್ ದಿ ಗ್ರೇಟ್ ವಶಪಡಿಸಿಕೊಂಡಿದ್ದ ಸಾಮ್ರಾಜ್ಯ) ಈ ಹೆಸರು ಬಂದಿದೆ.
    • ದೈಹಿಕ ಲಕ್ಷಣಗಳು:- ಇದು ವಿಶಿಷ್ಟವಾಗಿ ‘ಎರಡು ಡುಬ್ಬಗಳನ್ನು’ ಹೊಂದಿರುವ ಒಂಟೆಯಾಗಿದ್ದು, ಇದನ್ನು ಏಷ್ಯದ ಅಥವಾ ಮಂಗೋಲಿಯಾದ ಒಂಟೆ ಎಂತಲೂ ಕರೆಯಲಾಗುತ್ತದೆ.
    • ಸಂರಕ್ಷಣಾ ಸ್ಥಾನಮಾನ:- ‘ಐಯುಸಿಎನ್’ (IUCN) ಕೆಂಪು ಪಟ್ಟಿಯಲ್ಲಿ ಇದನ್ನು ‘ತೀವ್ರ ಅಳಿವಿನಂಚಿನಲ್ಲಿರುವ’ (CR) ಪ್ರಭೇದ ಎಂದು ವರ್ಗೀಕರಿಸಲಾಗಿದೆ.
    • ಹಂಚಿಕೆ:- ಇವು ಮುಖ್ಯವಾಗಿ ಉತ್ತರ ಪಾಕಿಸ್ತಾನ, ಇರಾನ್, ಟರ್ಕಿ ಮತ್ತು ಭಾರತದಲ್ಲಿ (ಲಡಾಖ್) ಕಂಡುಬರುತ್ತವೆ. ಇದರ ಅತಿ ದೊಡ್ಡ ದೇಶೀಯ (ಸಾಕಣೆ) ಜನಸಂಖ್ಯೆ ಚೀನಾದಲ್ಲಿದೆ.
    • ಆಹಾರ ಕ್ರಮ:- ಬ್ಯಾಕ್ಟ್ರಿಯನ್ ಒಂಟೆಗಳನ್ನು ಸರ್ವಭಕ್ಷಕ ಎಂದು ಪರಿಗಣಿಸಲಾಗಿದ್ದರೂ, ಅವು ಪ್ರಾಥಮಿಕವಾಗಿ ಸಸ್ಯಾಹಾರಿಗಳಾಗಿವೆ. ಇತರ ಪ್ರಾಣಿಗಳು ತಿನ್ನಲು ನಿರಾಕರಿಸುವ ಮುಳ್ಳಿನ, ಕಠಿಣವಾದ ಅಥವಾ ಒಣಗಿದ ಸಸ್ಯಗಳನ್ನು ಸಹ ಇವು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ.
    • ಐತಿಹಾಸಿಕ ಮಹತ್ವ: ಪ್ರಾಚೀನ ಕಾಲದಲ್ಲಿ ಇವುಗಳನ್ನು ‘ರೇಷ್ಮೆ ಮಾರ್ಗದ ಹಡಗುಗಳು’ ಎಂದು ಕರೆಯಲಾಗುತ್ತಿತ್ತು. ಮಧ್ಯ ಏಷ್ಯಾದ ಅತ್ಯಂತ ಕಠಿಣವಾದ ಮತ್ತು ನಿರ್ದಯ ಹವಾಮಾನದ ವ್ಯಾಪಾರ ಮಾರ್ಗಗಳನ್ನು ದಾಟುವಲ್ಲಿ ಈ ಒಂಟೆಗಳು ನಿರ್ಣಾಯಕ ಪಾತ್ರ ವಹಿಸಿದ್ದವು.

    ಟಾಮ್‌ಟಾಮ್ ಟ್ರಾಫಿಕ್ ಸೂಚ್ಯಂಕ, 2025

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿನ, ‘2025 ರ ಟಾಮ್‌ಟಾಮ್ ಟ್ರಾಫಿಕ್ ಸೂಚ್ಯಂಕ’ದ ವರದಿಯ ಪ್ರಕಾರ, ವಿಪರೀತ ಸಂಚಾರ ದಟ್ಟಣೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಜಾಗತಿಕವಾಗಿ ಐದನೇ (5ನೇ) ಸ್ಥಾನವನ್ನು ಮತ್ತು ಏಷ್ಯಾ ಖಂಡದಲ್ಲಿ ಎರಡನೇ (2ನೇ) ಸ್ಥಾನವನ್ನು ಪಡೆದುಕೊಂಡಿದೆ.

    ಟಾಮ್‌ಟಾಮ್ ಟ್ರಾಫಿಕ್ ಸೂಚ್ಯಂಕದ ಬಗ್ಗೆ:

    • ಮೌಲ್ಯಮಾಪನದ ಮಾನದಂಡಗಳು:- ಈ ಸೂಚ್ಯಂಕವು ಮುಖ್ಯವಾಗಿ ಸರಾಸರಿ ಪ್ರಯಾಣದ ಸಮಯ, ಸಂಚಾರ ದಟ್ಟಣೆಯ ಮಟ್ಟಗಳು ಮತ್ತು ವಾಹನಗಳ ವೇಗದ ಆಧಾರದ ಮೇಲೆ ವಿಶ್ವದಾದ್ಯಂತ ಪ್ರಮುಖ ನಗರಗಳನ್ನು ಮೌಲ್ಯಮಾಪನ ಮಾಡುತ್ತದೆ.
    • ಬಳಕೆ ಮತ್ತು ಮಹತ್ವ:- ನಗರ ಚಲನಶೀಲತೆಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಹಾಗೂ ವಿವಿಧ ಪ್ರದೇಶಗಳು ಮತ್ತು ದೇಶಗಳಾದ್ಯಂತ ಸಂಚಾರ ದಟ್ಟಣೆಯ ಪ್ರವೃತ್ತಿಗಳನ್ನು ವಿಶ್ಲೇಷಿಸಿ ಹೋಲಿಸಲು ಈ ಸೂಚ್ಯಂಕವನ್ನು ವಿಶ್ವದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ.

    ಈ ವರದಿಯ ಪ್ರಮುಖ ಅಂಶಗಳು:

    • ಬೆಂಗಳೂರಿಗೆ ಮೊದಲ ಸ್ಥಾನ: ಬರೋಬ್ಬರಿ ಶೇ. 74.4 ರಷ್ಟು ಸರಾಸರಿ ಸಂಚಾರ ದಟ್ಟಣೆಯ ಮಟ್ಟವನ್ನು ದಾಖಲಿಸುವ ಮೂಲಕ ಬೆಂಗಳೂರು ನಗರವು ಭಾರತದ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರವಾಗಿ ಹೊರಹೊಮ್ಮಿದೆ.
    • ವಿಶ್ವದ ಅತಿ ನಿಧಾನಗತಿಯ ನಗರಗಳು:- ವಾಹನಗಳ ಚಲನೆಯ ವೇಗದ ಆಧಾರದ ಮೇಲೆ, ವಿಶ್ವದ ಅತ್ಯಂತ ನಿಧಾನಗತಿಯ ಅಗ್ರ 5 ನಗರಗಳ ಪಟ್ಟಿಯಲ್ಲಿ ಭಾರತದ ಎರಡು ನಗರಗಳಾದ ಬೆಂಗಳೂರು ಮತ್ತು ಕೋಲ್ಕತ್ತಾ ಸ್ಥಾನ ಪಡೆದಿವೆ.
    • ಏಷ್ಯಾದ ಅಗ್ರ 10 ರಲ್ಲಿ ಭಾರತದ ಹಲವು ನಗರಗಳು:- ಏಷ್ಯಾದ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಅಗ್ರ 10 ನಗರಗಳ ಪೈಕಿ ಬರೋಬ್ಬರಿ 6 ನಗರಗಳು ಭಾರತದ್ದಾಗಿವೆ.
    • ಅವುಗಳೆಂದರೆ: ಬೆಂಗಳೂರು (1ನೇ ಸ್ಥಾನ), ಪುಣೆ (2ನೇ ಸ್ಥಾನ), ಮುಂಬೈ (6), ನವದೆಹಲಿ (7), ಕೋಲ್ಕತ್ತಾ (9), ಮತ್ತು ಜೈಪುರ (10ನೇ ಸ್ಥಾನ).
  • ಶ್ರೀ ನಾರಾಯಣ್ ರಾಮಚಂದ್ರನ್ ಸಮಿತಿ | ಅಗರ್‌ವುಡ್ (Agarwood)

    ಶ್ರೀ ನಾರಾಯಣ್ ರಾಮಚಂದ್ರನ್ ಸಮಿತಿ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು’ (PFRDA) ‘ಕಾರ್ಯತಂತ್ರದ ಆಸ್ತಿ ಹಂಚಿಕೆ ಮತ್ತು ಅಪಾಯ ನಿರ್ವಹಣಾ ಸಮಿತಿ’ (SAARG) ಎಂಬ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.

    ಈ ಸಮಿತಿಯ ಬಗ್ಗೆ:

    • ಅಧ್ಯಕ್ಷತೆ:- ಶ್ರೀ ನಾರಾಯಣ್ ರಾಮಚಂದ್ರನ್
    • ಉದ್ದೇಶ:- ‘ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ’ಯ (NPS) ಹೂಡಿಕೆ ಚೌಕಟ್ಟನ್ನು ಸಂಪೂರ್ಣವಾಗಿ ಆಧುನೀಕರಿಸಲು ಮತ್ತು ಸಮಗ್ರವಾಗಿ ಪರಿಶೀಲಿಸುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆ.

    ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಯ ಬಗ್ಗೆ:

    • ಸ್ವಭಾವ:- ಇದು 18 ರಿಂದ 70 ವರ್ಷದೊಳಗಿನ ಭಾರತೀಯ ನಾಗರಿಕರಿಗಾಗಿ ರೂಪಿಸಲಾದ ಸ್ವಯಂಪ್ರೇರಿತ ಮತ್ತು ಮಾರುಕಟ್ಟೆ ಸಂಯೋಜಿತ ನಿವೃತ್ತಿ ಉಳಿತಾಯ ಯೋಜನೆಯಾಗಿದೆ.
    • ನಿಯಂತ್ರಣ:- ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ (PFRDA).
    • ಉದ್ದೇಶ:- ನಾಗರಿಕರ ನಿವೃತ್ತಿಯ ನಂತರ ಅವರಿಗೆ ನಿಯಮಿತವಾದ ಪಿಂಚಣಿ ಆದಾಯವನ್ನು ಒದಗಿಸುವ ದೃಷ್ಟಿಯಿಂದ, ದುಡಿಯುವ ವಯಸ್ಸಿನಲ್ಲಿ ವ್ಯವಸ್ಥಿತ ಉಳಿತಾಯವನ್ನು ಮಾಡಲು ಇದು ಜನರನ್ನು ಪ್ರೋತ್ಸಾಹಿಸುತ್ತದೆ.

    ಅಗರ್‌ವುಡ್ (Agarwood)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ತ್ರಿಪುರಾದಲ್ಲಿ 80 ಕೋಟಿ ರೂ. ವೆಚ್ಚದ ‘ಅಗರ್‌ವುಡ್ ಮೌಲ್ಯ ಸರಪಳಿ ಅಭಿವೃದ್ಧಿ ಯೋಜನೆ’ಗೆ ಕೇಂದ್ರ ಸಚಿವರು ಇತ್ತೀಚಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈಶಾನ್ಯ ಭಾರತದ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

    ಅಗರ್‌ವುಡ್ ಬಗ್ಗೆ:

    • ರೂಪುಗೊಳ್ಳುವಿಕೆ:- ಅಗರ್‌ವುಡ್ ಎಂಬುದು ಅತ್ಯಂತ ಅಪರೂಪದ ಹಾಗೂ ಸುವಾಸನೆಭರಿತ ಮರವಾಗಿದೆ. ‘ಅಕ್ವಿಲೇರಿಯಾ’ ಜಾತಿಗೆ ಸೇರಿದ ಮರಗಳಿಗೆ ಗಾಯವಾದಾಗ ಅಥವಾ ಸೋಂಕು ತಗುಲಿದಾಗ, ಮರವು ತನ್ನ ರಕ್ಷಣೆಗಾಗಿ ವಿಶೇಷವಾದ ಕಪ್ಪು ಬಣ್ಣದ ರಾಳವನ್ನು ಉತ್ಪಾದಿಸುತ್ತದೆ.ರಾಳ-ಭರಿತ ಭಾಗವೇ ‘ಅಗರ್‌ವುಡ್’ ಆಗಿ ಮಾರ್ಪಡುತ್ತದೆ.
    • ಉಪಯೋಗಗಳು ಮತ್ತು ವಹಿವಾಟು:- ರಾಳದಿಂದ ಸಮೃದ್ಧವಾಗಿರುವ ಈ ಮರವನ್ನು ಹೆಚ್ಚಿನ ಮೌಲ್ಯದ ಸುಗಂಧ ತೈಲಗಳು (ಔದ್), ಅಗರಬತ್ತಿ ಮತ್ತು ಸಾಂಪ್ರದಾಯಿಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಇದು ಜಾಗತಿಕವಾಗಿ ಅತಿ ಹೆಚ್ಚು ವಹಿವಾಟು ಹೊಂದಿದೆ.
    • ಬೆಳೆಯುವ ಪ್ರದೇಶಗಳು:- ತ್ರಿಪುರಾ ಮತ್ತು ಈಶಾನ್ಯ ಭಾರತದ ಇತರ ಭಾಗಗಳು ಸೇರಿದಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಉಷ್ಣವಲಯದ, ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಇದು ಪ್ರಮುಖವಾಗಿ ಕಂಡುಬರುತ್ತದೆ. ಇಲ್ಲಿನ ಹವಾಮಾನ ಮತ್ತು ಮಣ್ಣು ಅಕ್ವಿಲೇರಿಯಾ ಮರಗಳ ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿದೆ.
    • ಅಪರೂಪ ಮತ್ತು ದುಬಾರಿ:- ನೈಸರ್ಗಿಕವಾಗಿ ಕೇವಲ ಕೆಲವೇ ಕೆಲವು ಮರಗಳು ಮಾತ್ರ ಈ ರಾಳವನ್ನು ಉತ್ಪಾದಿಸುತ್ತವೆ. ಅಲ್ಲದೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು ದಶಕಗಳೇ ಬೇಕಾಗಬಹುದು. ಇದೇ ಕಾರಣಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಗರ್‌ವುಡ್ ಅತ್ಯಂತ ಅಪರೂಪ ಹಾಗೂ ದುಬಾರಿಯಾಗಿದೆ (ಇದನ್ನು ‘ದ್ರವ ಚಿನ್ನ’ ಎಂದೂ ಕರೆಯಲಾಗುತ್ತದೆ).
  • ನೇತಾಜಿ ಸುಭಾಷ್ ಚಂದ್ರ ಬೋಸ್ | ‘ಎಎಸ್‌ಸಿ ಅರ್ಜುನ್’ ಹ್ಯೂಮನಾಯ್ಡ್ ರೋಬೋಟ್

    ನೇತಾಜಿ ಸುಭಾಷ್ ಚಂದ್ರ ಬೋಸ್

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ:

    • ಭಾರತದ ರಾಷ್ಟ್ರಪತಿಯವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರ ಜನ್ಮದಿನವನ್ನು ದೇಶಾದ್ಯಂತ ‘ಪರಾಕ್ರಮ ದಿವಸ’ ಎಂದು ಆಚರಿಸಲಾಗುತ್ತದೆ.

    ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ:

    • ಜನನ:- 1897 ರ ಜನವರಿ 23 ರಂದು ಒಡಿಶಾದ ಕಟಕ್‌.
    • ಆರಂಭಿಕ ಜೀವನ:- ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ನಂತರ ‘ಭಾರತೀಯ ನಾಗರಿಕ ಸೇವೆ’ (ICS) ಪರೀಕ್ಷೆಗಾಗಿ ಇಂಗ್ಲೆಂಡ್‌ಗೆ ತೆರಳಿದರು.
    • ಇವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಪ್ರತಿಮ ರಾಷ್ಟ್ರೀಯವಾದಿ ನಾಯಕರಾಗಿದ್ದಾರೆ.  
    • ರಾಜಕೀಯ ಜೀವನ:- ದೇಶಸೇವೆಗಾಗಿ ಪ್ರತಿಷ್ಠಿತ ಐಸಿಎಸ್ (ICS) ಹುದ್ದೆಯ ಆಕಾಂಕ್ಷೆಯನ್ನು ತ್ಯಜಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸೇರಿದರು. ಮಂದಗಾಮಿ ಸುಧಾರಣೆಗಳಿಗಿಂತ ಬ್ರಿಟಿಷರಿಂದ ‘ಸಂಪೂರ್ಣ ಸ್ವಾತಂತ್ರ್ಯ’ವನ್ನು ಪಡೆಯಬೇಕೆಂದು ಇವರು ಬಲವಾಗಿ ಪ್ರತಿಪಾದಿಸಿದರು.
    • 1938 ರ ಹರಿಪುರ ಅಧಿವೇಶನ ಮತ್ತು 1939 ರ ತ್ರಿಪುರಿ ಅಧಿವೇಶನದ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ, ಹೋರಾಟದ ಅಹಿಂಸಾತ್ಮಕ ತಂತ್ರಗಳ ಕುರಿತು ಮಹಾತ್ಮ ಗಾಂಧಿ ಮತ್ತು ಇತರ ನಾಯಕರೊಂದಿಗಿನ ತೀವ್ರ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

    ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್ ಅವರ ಕೊಡುಗೆಗಳು: 

    • ಎರಡನೇ ಮಹಾಯುದ್ಧದ (WW II) ಸಮಯದಲ್ಲಿ ಬ್ರಿಟಿಷರ ವಿರುದ್ಧ ‘ಅಕ್ಷ ರಾಷ್ಟ್ರಗಳ’ ಬೆಂಬಲವನ್ನು ಬಳಸಿಕೊಳ್ಳುವುದು ಭಾರತದ ಸ್ವಾತಂತ್ರ್ಯಕ್ಕಾಗಿ ಬೋಸ್ ಅವರು ರೂಪಿಸಿದ್ದ ಕಾರ್ಯತಂತ್ರವಾಗಿತ್ತು.
    • 1941 ರಲ್ಲಿ ಭಾರತದಲ್ಲಿ ಗೃಹಬಂಧನದಿಂದ ತಮ್ಮ ತಂತ್ರಗಾರಿಕೆಯಿಂದ ತಪ್ಪಿಸಿಕೊಂಡು, ಅಫ್ಘಾನಿಸ್ತಾನದ ಮೂಲಕ ಜರ್ಮನಿಗೆ ಪ್ರಯಾಣ ಬೆಳೆಸಿ ಅಡಾಲ್ಫ್ ಹಿಟ್ಲರ್‌ನ ಬೆಂಬಲ ಕೋರಿದರು.
    • 1943 ರಲ್ಲಿ ಜಪಾನ್‌ಗೆ ತೆರಳಿದ ಅವರು, ಭಾರತೀಯ ಯುದ್ಧ ಕೈದಿಗಳು ಮತ್ತು ವಲಸಿಗರಿಂದ ರಚನೆಯಾಗಿದ್ದ ‘ಭಾರತೀಯ ರಾಷ್ಟ್ರೀಯ ಸೇನೆ’ (INA – ಆಜಾದ್ ಹಿಂದ್ ಫೌಜ್) ಯ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರು.
    • ಐಎನ್‌ಎ (INA) ಕಾರ್ಯಾಚರಣೆಗಳು ಮತ್ತು ಯುದ್ಧದ ನಂತರ ಕೆಂಪುಕೋಟೆಯಲ್ಲಿ ನಡೆದ ಐಎನ್‌ಎ ವಿಚಾರಣೆಗಳು ಭಾರತೀಯರಲ್ಲಿ ಬಲವಾದ ಮಾನಸಿಕ ಪ್ರಭಾವ ಬೀರಿ, ಬ್ರಿಟಿಷ್ ಆಡಳಿತದ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದವು.

    ನಿಧನ:

    • ಆಗಸ್ಟ್ 1945 ರಲ್ಲಿ ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟರು ಎಂದು ನಂಬಲಾಗಿದೆ; ಆದಾಗ್ಯೂ ಈ ಘಟನೆಯ ಸುತ್ತಲಿನ ಸಂದರ್ಭಗಳು ಇಂದಿಗೂ ನಿಗೂಢ ಮತ್ತು ವಿವಾದಾತ್ಮಕವಾಗಿವೆ.

    ಪರಂಪರೆ ಮತ್ತು ಗೌರವ:

    • ಇವರನ್ನು ಅಗಾಧ ಧೈರ್ಯ ಮತ್ತು ದೃಢಸಂಕಲ್ಪದ ಸಂಕೇತವಾಗಿ ಸ್ಮರಿಸಲಾಗುತ್ತದೆ; ಅವರ ಗೌರವಾರ್ಥವಾಗಿ ದೇಶದ ಹಲವಾರು ಸಂಸ್ಥೆಗಳು, ಸ್ಮಾರಕಗಳು ಮತ್ತು ಪ್ರಶಸ್ತಿಗಳಿಗೆ ಅವರ ಹೆಸರಿಡಲಾಗಿದೆ.
    • 2018 ರಲ್ಲಿ, ಭಾರತ ಸರ್ಕಾರವು ನೇತಾಜಿ ಅವರ ಸ್ಮರಣಾರ್ಥ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಮೂರು ಪ್ರಮುಖ ದ್ವೀಪಗಳನ್ನು ಮರುನಾಮಕರಣ ಮಾಡಿತು. ಅವುಗಳೆಂದರೆ:
      • ರಾಸ್ ದ್ವೀಪ → ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ
      • ನೀಲ್ ದ್ವೀಪ → ಶಹೀದ್ ದ್ವೀಪ
      • ಹ್ಯಾವ್ಲಾಕ್ ದ್ವೀಪ → ಸ್ವರಾಜ್ ದ್ವೀಪ
      • ಮರುನಾಮಕರಣದ ಮಹತ್ವ:- ಅಂಡಮಾನ್ ಮತ್ತು ನಿಕೋಬಾರ್‌ನ ಹ್ಯಾವ್ಲಾಕ್ ದ್ವೀಪದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ಅದನ್ನು ‘ಭಾರತದ ಮೊದಲ ಸ್ವತಂತ್ರ ಭೂಪ್ರದೇಶ’ ಎಂದು ಘೋಷಿಸಿದ ನೇತಾಜಿಯವರ ಐತಿಹಾಸಿಕ ಸಾಧನೆಯನ್ನು ಗೌರವಿಸಲು ಈ ಮೂಲಕ ಗೌರವ ನಮನ ಸಲ್ಲಿಸಲಾಗಿದೆ.

    ‘ಎಎಸ್‌ಸಿ ಅರ್ಜುನ್’ ಹ್ಯೂಮನಾಯ್ಡ್ ರೋಬೋಟ್

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಭಾರತೀಯ ರೈಲ್ವೆಯು ಆಂಧ್ರಪ್ರದೇಶದ ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ‘ಎಎಸ್‌ಸಿ ಅರ್ಜುನ್’ (ASC ARJUN) ಹೆಸರಿನ ಅತ್ಯಾಧುನಿಕ ಹ್ಯೂಮನಾಯ್ಡ್ (ಮಾನವರೂಪಿ) ರೋಬೋಟ್ ಅನ್ನು ಇತ್ತೀಚೆಗೆ ಕಾರ್ಯಾಚರಣೆಗೆ ನಿಯೋಜಿಸಿದೆ.

    ‘ಎಎಸ್‌ಸಿ ಅರ್ಜುನ್’ ಬಗ್ಗೆ:

    • ಕಾರ್ಯನಿರ್ವಹಣೆ:- ‘ಎಎಸ್‌ಸಿ ಅರ್ಜುನ್’ ಒಂದು ಮಾನವರೂಪಿ ರೋಬೋಟ್ ಆಗಿದ್ದು, ಇದು ರೈಲು ನಿಲ್ದಾಣದಲ್ಲಿ ಭದ್ರತೆ, ಕಣ್ಗಾವಲು ಮತ್ತು ಪ್ರಯಾಣಿಕರಿಗೆ ಅಗತ್ಯ ಸಹಾಯ ಒದಗಿಸುವ ನಿಟ್ಟಿನಲ್ಲಿ ‘ರೈಲ್ವೆ ರಕ್ಷಣಾ ಪಡೆ’ಯೊಂದಿಗೆ (RPF) ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ.
    • ಸ್ವದೇಶಿ ತಂತ್ರಜ್ಞಾನ:- ಇದು ಸಂಪೂರ್ಣವಾಗಿ ಸ್ಥಳೀಯ (ಸ್ವದೇಶಿ) ತಂತ್ರಜ್ಞಾನವನ್ನು ಆಧರಿಸಿದ್ದು, ವಿಶಾಖಪಟ್ಟಣಂನ ವಿಶೇಷ ತಾಂತ್ರಿಕ ತಂಡವು ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

    ಮಹತ್ವ:

    • ಸುರಕ್ಷತಾ ವೃದ್ಧಿ:- ಅತಿ ಹೆಚ್ಚು ಜನದಟ್ಟಣೆಯಿಂದ ಕೂಡಿರುವ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸುವುದು.
    • ಮಾನವ ಸಂಪನ್ಮೂಲದ ಅತ್ಯುತ್ತಮ ಬಳಕೆ:- ನಿಲ್ದಾಣದ ದೈನಂದಿನ ಗಸ್ತು ಮತ್ತು ಮೇಲ್ವಿಚಾರಣೆಯಂತಹ ಸಾಮಾನ್ಯ ಕಾರ್ಯಗಳನ್ನು ಈ ರೋಬೋಟ್ ವಹಿಸಿಕೊಳ್ಳುವುದರಿಂದ, ಆರ್‌ಪಿಎಫ್ (RPF) ಸಿಬ್ಬಂದಿಯು ಇತರ ನಿರ್ಣಾಯಕ ಮತ್ತು ಕ್ಲಿಷ್ಟಕರ ಭದ್ರತಾ ಕಾರ್ಯಗಳತ್ತ ಗಮನಹರಿಸಲು ಸಾಧ್ಯವಾಗುತ್ತದೆ.
    • ತಂತ್ರಜ್ಞಾನದ ಅಳವಡಿಕೆ:- ಸೇವಾ ವಿತರಣೆಯನ್ನು ಸುಧಾರಿಸಲು ಮತ್ತು ರೈಲ್ವೆ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಆಧುನೀಕರಿಸಲು ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮತ್ತು ರೊಬೊಟಿಕ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು.
  • ಒಂದು ಜಿಲ್ಲೆ ಒಂದು ಉತ್ಪನ್ನ (ODOP) | ಗ್ರಂಥ್ ಕುಟಿರ್ ಗ್ರಂಥಾಲಯ

    ಒಂದು ಜಿಲ್ಲೆ ಒಂದು ಉತ್ಪನ್ನ (ODOP)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಸ್ಥಳೀಯ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ‘ಒಂದು ಜಿಲ್ಲೆ ಒಂದು ಉತ್ಪನ್ನ’ (ODOP) ಉಪಕ್ರಮವು ತನ್ನ 8 ವರ್ಷಗಳ ಯಶಸ್ವಿ ಕಾರ್ಯಾಚರಣೆಯನ್ನು ಪೂರೈಸಿದ್ದು, ಪ್ರಾದೇಶಿಕ ಆರ್ಥಿಕತೆಯಲ್ಲಿ ಮಹತ್ತರವಾದ ಪರಿವರ್ತನೆಯನ್ನು ತಂದಿದೆ.

    ‘ಒಂದು ಜಿಲ್ಲೆ ಒಂದು ಉತ್ಪನ್ನ’ (ODOP) ಉಪಕ್ರಮದ ಬಗ್ಗೆ:

    • ಮಹತ್ವಾಕಾಂಕ್ಷಿ ಯೋಜನೆ:- ಇದು ಭಾರತ ಸರ್ಕಾರದ ಅತ್ಯಂತ ಪ್ರಮುಖ ಉಪಕ್ರಮವಾಗಿದೆ. ದೇಶದ ಪ್ರತಿಯೊಂದು ಜಿಲ್ಲೆಯಿಂದ ಕನಿಷ್ಠ ಒಂದು ವಿಶಿಷ್ಟ ಉತ್ಪನ್ನವನ್ನು ಗುರುತಿಸಿ, ಅದಕ್ಕೆ ಉತ್ತೇಜನ ನೀಡುವ ಮೂಲಕ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಸಾಧಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಪ್ರೇರಣೆ:- ಈ ಯೋಜನೆಯು ಜಪಾನ್ ದೇಶದ ಪ್ರಸಿದ್ಧ “ಒಂದು ಗ್ರಾಮ, ಒಂದು ಉತ್ಪನ್ನ” ಮಾದರಿಯಿಂದ ಪ್ರೇರಿತವಾಗಿದೆ.
    • ಉದ್ದೇಶ:- ಪ್ರತಿಯೊಂದು ಜಿಲ್ಲೆಯನ್ನೂ ಒಂದು ‘ರಫ್ತು ಕೇಂದ್ರ’ವನ್ನಾಗಿ ಪರಿವರ್ತಿಸುವುದು ಹಾಗೂ ಆ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದು.

    ಈ ಉಪಕ್ರಮದ ಸಾಧನೆಗಳು ಮತ್ತು ಮುಖ್ಯಾಂಶಗಳು:

    • ರಾಷ್ಟ್ರವ್ಯಾಪಿ ವ್ಯಾಪ್ತಿ:- ‘ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ’ (DPIIT) ನೇತೃತ್ವದಲ್ಲಿ ಜಾರಿಯಾಗುತ್ತಿರುವ ಈ ಉಪಕ್ರಮವು, 2026ರ ಆರಂಭದ ವೇಳೆಗೆ ದೇಶದ 777 ಜಿಲ್ಲೆಗಳಿಂದ ಒಟ್ಟು 1,241 ವಿಶಿಷ್ಟ ಉತ್ಪನ್ನಗಳನ್ನು ಗುರುತಿಸಿದೆ.
    • ಉತ್ಪನ್ನಗಳ ವೈವಿಧ್ಯತೆ:- ಕೃಷಿ (ಉದಾ: ಅಲ್ಫೋನ್ಸೊ ಮಾವು), ಕರಕುಶಲ ವಸ್ತುಗಳು (ಉದಾ: ಬನಾರಸಿ ರೇಷ್ಮೆ), ಜವಳಿ, ಲೋಹದ ಕರಕುಶಲ ವಸ್ತುಗಳು ಮತ್ತು ಆಹಾರ ಸಂಸ್ಕರಣಾ ವಲಯಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಇದು ಒಳಗೊಂಡಿದೆ.
    • ಹಣಕಾಸಿನ ನೆರವು:- ‘ಪಿಎಂ ಎಫ್‌ಎಂಇ’ (PMFMEಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಅಧಿಕೃತೀಕರಣ ಯೋಜನೆ) ಯೋಜನೆಯ ಅಡಿಯಲ್ಲಿ, ODOP ಉತ್ಪನ್ನಗಳ ಮೇಲೆ ಕೇಂದ್ರೀಕರಿಸುವ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳಿಗೆ ಸಾಲ ಸಂಯೋಜಿತ ಸಹಾಯಧನವನ್ನು(ಯೋಜನಾ ವೆಚ್ಚದ ಗರಿಷ್ಠ ಶೇ. 35ರಷ್ಟು) ಒದಗಿಸಲಾಗುತ್ತಿದೆ.
    • ಮೂಲಸೌಕರ್ಯ ಅಭಿವೃದ್ಧಿ:- ODOP ಮತ್ತು ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಉತ್ಪನ್ನಗಳ ಮಾರಾಟಕ್ಕಾಗಿ ಮೀಸಲಾದ ಚಿಲ್ಲರೆ ವ್ಯಾಪಾರ ಮಳಿಗೆಗಳನ್ನು ಒದಗಿಸಲು, ಸರ್ಕಾರವು ದೇಶದ ಪ್ರತಿ ರಾಜ್ಯದಲ್ಲಿ ‘ಪಿಎಂ ಏಕತಾ ಮಾಲ್‌’ಗಳನ್ನು ಸ್ಥಾಪಿಸುತ್ತಿದೆ.

    ಗ್ರಂಥ್ ಕುಟಿರ್ ಗ್ರಂಥಾಲಯ

    ಕಲೆ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಭಾರತದ ರಾಷ್ಟ್ರಪತಿಯವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ‘ಗ್ರಂಥ್ ಕುಟಿರ’ ಗ್ರಂಥಾಲಯವನ್ನು ಅಧಿಕೃತವಾಗಿ ಉದ್ಘಾಟಿಸಿದರು.

    ‘ಗ್ರಂಥ್ ಕುಟಿರ್’ ಗ್ರಂಥಾಲಯದ ಬಗ್ಗೆ:

    • ಗ್ರಂಥಾಲಯ:- ‘ಗ್ರಂಥ್ ಕುಟಿರ್’ ಎಂಬುದು ರಾಷ್ಟ್ರಪತಿ ಭವನದಲ್ಲಿ ಸ್ಥಾಪಿಸಲಾಗಿರುವ ಒಂದು ವಿಶೇಷ ಗ್ರಂಥಾಲಯವಾಗಿದೆ.
    • ಸಂಗ್ರಹ:- ಇದು 11 ಭಾರತೀಯ ಶಾಸ್ತ್ರೀಯ ಭಾಷೆಗಳಲ್ಲಿನ ಸುಮಾರು 2,300 ಪುಸ್ತಕಗಳು ಮತ್ತು 50ಕ್ಕೂ ಹೆಚ್ಚು ಅಪರೂಪದ ಹಸ್ತಪ್ರತಿಗಳ ಭವ್ಯ ಸಂಗ್ರಹವನ್ನು ಹೊಂದಿದೆ.
    • ಪರಂಪರೆಯ ಪ್ರತಿಬಿಂಬ:- ಈ ಗ್ರಂಥಗಳ ಸಂಗ್ರಹವು ಭಾರತದ ಶ್ರೀಮಂತ ಸಾಂಸ್ಕೃತಿಕ, ತಾತ್ವಿಕ, ಸಾಹಿತ್ಯಿಕ ಮತ್ತು ಬೌದ್ಧಿಕ ಪರಂಪರೆಯನ್ನು ಅತ್ಯದ್ಭುತವಾಗಿ ಪ್ರತಿಬಿಂಬಿಸುತ್ತದೆ.
    • ಒಳಗೊಂಡಿರುವ ವಿಷಯಗಳು:- ಮಹಾಕಾವ್ಯಗಳು, ತತ್ವಶಾಸ್ತ್ರ, ಭಾಷಾಶಾಸ್ತ್ರ, ಇತಿಹಾಸ, ಆಡಳಿತ, ವಿಜ್ಞಾನ, ಭಕ್ತಿ ಸಾಹಿತ್ಯ ಮತ್ತು ವಿಶೇಷವಾಗಿ ಶಾಸ್ತ್ರೀಯ ಭಾಷೆಗಳಿಗೆ ಅನುವಾದಿಸಲಾಗಿರುವ ‘ಭಾರತದ ಸಂವಿಧಾನ’ದ ಪ್ರತಿಗಳನ್ನು ಈ ಗ್ರಂಥಾಲಯ ಒಳಗೊಂಡಿದೆ.
    • ಸಾಂಪ್ರದಾಯಿಕ ವಸ್ತುಗಳ ಬಳಕೆ:- ತಾಳೆಗರಿ, ಕಾಗದ, ಮರದ ತೊಗಟೆ ಮತ್ತು ಬಟ್ಟೆಯಂತಹ ಸಾಂಪ್ರದಾಯಿಕ ವಸ್ತುಗಳ ಮೇಲೆ ಕೈಯಿಂದಲೇ ಬರೆಯಲಾಗಿರುವ ಹಲವಾರು ಪುರಾತನ ಹಸ್ತಪ್ರತಿಗಳನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ.
    • ಜ್ಞಾನ್ ಭಾರತಂ ಮಿಷನ್:- ‘ಗ್ರಂಥ್ ಕುಟಿರ್’ ಸ್ಥಾಪನೆಯು ‘ಜ್ಞಾನ್ ಭಾರತಂ ಮಿಷನ್’ನ ಧ್ಯೇಯೋದ್ದೇಶಗಳನ್ನು ಬೆಂಬಲಿಸುತ್ತದೆ. ಸಾಂಪ್ರದಾಯಿಕತೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆಯುವ ಮೂಲಕ, ಭಾರತದ ಹಸ್ತಪ್ರತಿ ಪರಂಪರೆಯನ್ನು ಸಂರಕ್ಷಿಸುವುದು, ಡಿಜಿಟಲೀಕರಣಗೊಳಿಸುವುದು ಮತ್ತು ಅದರ ಜ್ಞಾನವನ್ನು ಎಲ್ಲೆಡೆ ಪಸರಿಸುವುದು ಈ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ.

    ಗಮನಿಸಿ:

    11 ಭಾರತೀಯ ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು:- ತಮಿಳು, ಸಂಸ್ಕೃತ, ಕನ್ನಡ, ತೆಲುಗು, ಮಲಯಾಳಂ, ಒಡಿಯಾ, ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳು.

  • ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ (IPOI)- ಸ್ಪೇನ್ ಸೇರ್ಪಡೆ | ದೀರ್ಘ ಶ್ರೇಣಿಯ ನೌಕಾ ವಿರೋಧಿ ಅತಿವೇಗ (ಹೈಪರ್‌ಸಾನಿಕ್) ಕ್ಷಿಪಣಿ (LR-AShM)

    ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ (IPOI)- ಸ್ಪೇನ್ ಸೇರ್ಪಡೆ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಭಾರತದ ನೇತೃತ್ವದ ‘ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ’ಕ್ಕೆ (IPOI) ಸ್ಪೇನ್ ಅಧಿಕೃತವಾಗಿ ಸೇರ್ಪಡೆಗೊಂಡಿರುವುದನ್ನು ಭಾರತವು ಸ್ವಾಗತಿಸಿದೆ.

    ಇಂಡೋ-ಪೆಸಿಫಿಕ್ ಸಾಗರ ಉಪಕ್ರಮದ (IPOI) ಬಗ್ಗೆ:

      • ಪ್ರಾರಂಭ:- 2019ರ ನವೆಂಬರ್‌ನಲ್ಲಿ ಬ್ಯಾಂಕಾಕ್‌ನಲ್ಲಿ ಜರುಗಿದ ಆಸಿಯಾನ್ (ASEAN) ನೇತೃತ್ವದ ‘ಪೂರ್ವ ಏಷ್ಯಾ ಶೃಂಗಸಭೆ’ಯಲ್ಲಿ (EAS) ಭಾರತವು ಈ ಮಹತ್ವಾಕಾಂಕ್ಷಿ ಉಪಕ್ರಮವನ್ನು ಘೋಷಿಸಿತು.
    • ಪ್ರಮುಖ ಉದ್ದೇಶಗಳು:
    • ಮುಕ್ತ ಮತ್ತು ಒಳಗೊಳ್ಳುವ ವಲಯ:- ‘ಮುಕ್ತ, ತೆರೆದ ಮತ್ತು ಒಳಗೊಳ್ಳುವ ಇಂಡೋ-ಪೆಸಿಫಿಕ್’ ವಲಯವನ್ನು ಉತ್ತೇಜಿಸುವುದು.
    • ನಿಯಮಾಧಾರಿತ ವ್ಯವಸ್ಥೆ:- ನಿಯಮಾಧಾರಿತ ಪ್ರಾದೇಶಿಕ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ರಾಷ್ಟ್ರಗಳ ನಡುವೆ ಸಹಕಾರವನ್ನು ವೃದ್ಧಿಸುವುದು.
    • ಸಮಗ್ರ ಅಭಿವೃದ್ಧಿ:- ಸಾಗರ ಕಡಲ ವಲಯದಲ್ಲಿ ಸುರಕ್ಷತೆ, ಭದ್ರತೆ, ಸುಸ್ಥಿರತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು.
    • ಕಾರ್ಯತಂತ್ರದ ಚೌಕಟ್ಟು:- ಈ ಉಪಕ್ರಮವು ಪ್ರಾದೇಶಿಕ ಸಹಕಾರದ ಅಸ್ತಿತ್ವದಲ್ಲಿರುವ ಚೌಕಟ್ಟುಗಳು ಮತ್ತು ಕಾರ್ಯವಿಧಾನಗಳ ಆಧಾರದ ಮೇಲೆ ರೂಪುಗೊಂಡಿದ್ದು, ಪ್ರಮುಖವಾಗಿ 7 ಆದ್ಯತಾ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತದೆ. ಅವುಗಳೆಂದರೆ,
    • ಕಡಲ ಭದ್ರತೆ 
    • ಕಡಲ ಪರಿಸರ ವಿಜ್ಞಾನ
    • ಕಡಲ ಸಂಪನ್ಮೂಲಗಳು
    • ಸಾಮರ್ಥ್ಯ ವೃದ್ಧಿ ಮತ್ತು ಸಂಪನ್ಮೂಲ ಹಂಚಿಕೆ
    • ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣೆ
    • ವಿಜ್ಞಾನ, ತಂತ್ರಜ್ಞಾನ ಮತ್ತು ಶೈಕ್ಷಣಿಕ ಸಹಕಾರ
    • ವ್ಯಾಪಾರ, ಸಂಪರ್ಕ ಮತ್ತು ಕಡಲ ಸಾರಿಗೆ

    ದೀರ್ಘ ಶ್ರೇಣಿಯ ನೌಕಾ ವಿರೋಧಿ ಅತಿವೇಗ (ಹೈಪರ್‌ಸಾನಿಕ್) ಕ್ಷಿಪಣಿ (LR-AShM)

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ನವದೆಹಲಿಯ ಕರ್ತವ್ಯ ಪಥದಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ತನ್ನ ‘ದೀರ್ಘ ಶ್ರೇಣಿಯ ನೌಕಾ ವಿರೋಧಿ ಅತಿವೇಗ (ಹೈಪರ್‌ಸಾನಿಕ್) ಕ್ಷಿಪಣಿ’ಯನ್ನು (LR-AShM) ಅದರ ಉಡಾವಣಾ ವಾಹನದೊಂದಿಗೆ ಅಧಿಕೃತವಾಗಿ ಪ್ರದರ್ಶಿಸಿತು.

    ದೀರ್ಘ ಶ್ರೇಣಿಯ ನೌಕಾ ವಿರೋಧಿ ಅತಿವೇಗ (ಹೈಪರ್‌ಸಾನಿಕ್) ಕ್ಷಿಪಣಿ (LR-AShM)ಯ ಬಗ್ಗೆ:

    • ಅಭಿವೃದ್ಧಿಪಡಿಸಿದ ಸಂಸ್ಥೆ:- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO).
    • ವಿನ್ಯಾಸ ಮತ್ತು ಉದ್ದೇಶ:- ಇದು ಪ್ರಮುಖವಾಗಿ ಭಾರತೀಯ ನೌಕಾಪಡೆಯ ಕರಾವಳಿ ರಕ್ಷಣೆ ಮತ್ತು ನಿಖರ ದಾಳಿಯ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ‘ಹೈಪರ್‌ಸಾನಿಕ್ ಗ್ಲೈಡ್ ಕ್ಷಿಪಣಿ’ ಆಗಿದೆ.
    • ಸ್ವದೇಶಿ ತಂತ್ರಜ್ಞಾನ:- ಇದು ತನ್ನದೇ ಮಾದರಿಯ ಚೊಚ್ಚಲ ಸ್ವದೇಶಿ ವ್ಯವಸ್ಥೆಯಾಗಿದ್ದು, ಸಂಪೂರ್ಣ ದೇಶೀಯ ವಿಮಾನಯಾನ ವಿದ್ಯುನ್ಮಾನ ಮತ್ತು ಅತ್ಯಂತ ನಿಖರವಾದ ಸಂವೇದಕ ವ್ಯವಸ್ಥೆಗಳನ್ನು ಹೊಂದಿದೆ.
    • ವೇಗ:- ಈ ಕ್ಷಿಪಣಿಯು ‘ಮ್ಯಾಕ್ 10’ (ಶಬ್ದದ ವೇಗಕ್ಕಿಂತ 10 ಪಟ್ಟು ಹೆಚ್ಚು) ವರೆಗಿನ ಗರಿಷ್ಠ ವೇಗವನ್ನು ತಲುಪಬಲ್ಲದು ಹಾಗೂ ‘ಮ್ಯಾಕ್ 5’ ರ ಸರಾಸರಿ ಹೈಪರ್‌ಸಾನಿಕ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

    ಈ ಕ್ಷಿಪಣಿಯ ಮಹತ್ವ:

    • ರಹಸ್ಯ ಕಾರ್ಯಾಚರಣೆ:- ಇದರ ಕಡಿಮೆ ಎತ್ತರದ ಹಾರಾಟ, ಅತಿ ಹೆಚ್ಚಿನ ವೇಗ ಮತ್ತು ಅಸಾಧಾರಣ ಚಲನಾ ನಮ್ಯತೆಯು (ತ್ವರಿತವಾಗಿ ದಿಕ್ಕು ಬದಲಿಸುವ ಸಾಮರ್ಥ್ಯ) ಶತ್ರುಗಳ ನೆಲ-ಆಧಾರಿತ ಮತ್ತು ಹಡಗು-ಆಧಾರಿತ ರೇಡಾರ್‌ಗಳ ಕಣ್ಣಿಗೆ ಬೀಳದಂತೆ ಗುರಿಯತ್ತ ತಲುಪಲು ಗಣನೀಯವಾಗಿ ಸಹಾಯ ಮಾಡುತ್ತದೆ. (ಇದರಿಂದ ಶತ್ರುಗಳು ಈ ಕ್ಷಿಪಣಿಯನ್ನು ತಡೆಯುವುದು ಅಸಾಧ್ಯವಾಗುತ್ತದೆ).
  • ಕವಚ್ 4.0 | ವಿಶ್ವ ಪರಮಾಣು ಮುನ್ನೋಟ ವರದಿ | ಹಿರಾಕುಡ್ ಜೌಗು ಪ್ರದೇಶ

    ಕವಚ್ 4.0

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತೀಯ ರೈಲ್ವೆಯು 472.3 ಮಾರ್ಗ ಕಿಲೋಮೀಟರ್  ಉದ್ದದ ರೈಲು ಜಾಲದಲ್ಲಿ ಸ್ವದೇಶಿ ನಿರ್ಮಿತ ‘ಕವಚ್ ಆವೃತ್ತಿ 4.0’ ಅನ್ನು ಅಧಿಕೃತವಾಗಿ ಕಾರ್ಯಾಚರಣೆಗೆ ತಂದಿದೆ.

    ‘ಕವಚ್’ ವ್ಯವಸ್ಥೆಯ ಬಗ್ಗೆ:

    • ಹಿನ್ನೆಲೆ:- ಈ ತಂತ್ರಜ್ಞಾನವನ್ನು ಮೂಲತಃ ‘ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ’ (TCAS) ಎಂದು ಕರೆಯಲಾಗುತ್ತಿತ್ತು.
    • ಅಭಿವೃದ್ಧಿಪಡಿಸಿದ ಸಂಸ್ಥೆ:- ಭಾರತೀಯ ರೈಲ್ವೆಯ ‘ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ’ಯು (RDSO) ಇದನ್ನು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದೆ.
    • ಉದ್ದೇಶ:- ರೈಲು ಚಾಲಕರು (ಲೊಕೊ ಪೈಲಟ್) ನಿಗದಿತ ಸಮಯದಲ್ಲಿ ರೈಲು ನಿಲ್ಲಿಸಲು ವಿಫಲರಾದಾಗ ಅಥವಾ ಅಪಾಯದ ಸಂಕೇತವನ್ನು ಮೀರಿ ಚಲಿಸಿದಾಗ (SPAD), ಈ ವ್ಯವಸ್ಥೆಯು ಸ್ವಯಂಚಾಲಿತವಾಗಿ ರೈಲು ನಿಲ್ಲಿಸುವ ಮೂಲಕ ರೈಲುಗಳ ನಡುವಿನ ಮುಖಾಮುಖಿ ಡಿಕ್ಕಿಯನ್ನು ತಡೆಯುತ್ತದೆ. ಅಲ್ಲದೆ, ಇದು ರೈಲಿನ ವೇಗದ ಮೇಲೆ ನೈಜ-ಸಮಯದ ನಿರಂತರ ಮೇಲ್ವಿಚಾರಣೆಯನ್ನು ಒದಗಿಸುತ್ತದೆ.
    • ಗಮನಿಸಿ:- ಕವಚ್ 4.0 ಆವೃತ್ತಿಯು ಅತ್ಯಾಧುನಿಕ ಸಂವಹನ ಮತ್ತು ತಂತ್ರಜ್ಞಾನದ ಘಟಕಗಳನ್ನು ಸಂಯೋಜಿಸುವ ಮೂಲಕ ರೈಲುಗಳ ಸುರಕ್ಷತೆಗಾಗಿ ಅತ್ಯಂತ ಬಲವಾದ “ಡಿಜಿಟಲ್ ಗುರಾಣಿ”ಯನ್ನು ಸೃಷ್ಟಿಸುತ್ತದೆ.

    ವಿಶ್ವ ಪರಮಾಣು ಮುನ್ನೋಟ ವರದಿ

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿನ ‘ವಿಶ್ವ ಪರಮಾಣು ಮುನ್ನೋಟ ವರದಿ’ಯ ಪ್ರಕಾರ, ಚೀನಾ, ಫ್ರಾನ್ಸ್, ಭಾರತ, ರಷ್ಯಾ ಮತ್ತು ಅಮೆರಿಕ (ಯುಎಸ್ಎ) – ಈ ಐದು ಪ್ರಮುಖ ರಾಷ್ಟ್ರಗಳು 2050ರ ವೇಳೆಗೆ ಜಾಗತಿಕ ಪರಮಾಣು ವಿದ್ಯುತ್ ಸಾಮರ್ಥ್ಯದಲ್ಲಿ ಒಟ್ಟಾರೆಯಾಗಿ ಸುಮಾರು 980 GWe (ಗಿಗಾವ್ಯಾಟ್ ಎಲೆಕ್ಟ್ರಿಕ್) ನಷ್ಟು ಪಾಲು ಹೊಂದಲಿವೆ.

    ವಿಶ್ವ ಪರಮಾಣು ಮುನ್ನೋಟ ವರದಿಯ ಬಗ್ಗೆ:

    • ಈ ವರದಿಯು ಪರಮಾಣು ವಿದ್ಯುತ್ ಸಾಮರ್ಥ್ಯದ ಕುರಿತಾದ ವಿವಿಧ ರಾಷ್ಟ್ರಗಳ ಗುರಿಗಳನ್ನು ವಿಮರ್ಶಿಸುತ್ತದೆ.
    • 2050 ರ ವೇಳೆಗೆ ಜಾಗತಿಕ ಪರಮಾಣು ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಜಾಗತಿಕ ಗುರಿಯ ಹಿನ್ನೆಲೆಯಲ್ಲಿ ಈ ರಾಷ್ಟ್ರೀಯ ಗುರಿಗಳನ್ನು ಮೌಲ್ಯಮಾಪನ ಮಾಡುವುದು ಈ ವರದಿಯ ಪ್ರಮುಖ ಉದ್ದೇಶವಾಗಿದೆ.

    ಈ ವರದಿಯ ಪ್ರಮುಖ ಅಂಶಗಳು:

    • ಗುರಿ ಮೀರಿದ ಸಾಮರ್ಥ್ಯ:- ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ರಿಯಾಕ್ಟರ್‌ಗಳು, ಯೋಜಿತ ಕಾರ್ಯಕ್ರಮಗಳು ಹಾಗೂ ಸರ್ಕಾರಿ-ಪ್ರೇರಿತ ಉಪಕ್ರಮಗಳ ಆಧಾರದ ಮೇಲೆ, 2050ರ ವೇಳೆಗೆ ಜಾಗತಿಕ ಪರಮಾಣು ಸಾಮರ್ಥ್ಯವು 1,446 GWe ತಲುಪುವ ನಿರೀಕ್ಷೆಯಿದೆ. ಇದು ನಿಗದಿತ ಗುರಿಯಾದ 1,200 GWe ಗಿಂತ (ಮೂರು ಪಟ್ಟು ಹೆಚ್ಚಳದ ಗುರಿ) ಗಣನೀಯವಾಗಿ ಹೆಚ್ಚಾಗಿರಲಿದೆ.
    • ಮುಂಚೂಣಿಯಲ್ಲಿರುವ ರಾಷ್ಟ್ರಗಳು:- ಚೀನಾ, ಫ್ರಾನ್ಸ್, ಭಾರತ, ರಷ್ಯಾ ಮತ್ತು ಅಮೆರಿಕ ದೇಶಗಳು ಜಾಗತಿಕ ಪರಮಾಣು ಸಾಮರ್ಥ್ಯದ ಬಹುಪಾಲು ಪಾಲನ್ನು ಹೊಂದಲಿವೆ. ಅದೇ ಸಮಯದಲ್ಲಿ, ಈ ವಲಯಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವ ರಾಷ್ಟ್ರಗಳು ಒಟ್ಟಾರೆಯಾಗಿ 157 GWe ಸಾಮರ್ಥ್ಯದ ಗುರಿಯನ್ನು ಹೊಂದಿವೆ.
    • ದಕ್ಷಿಣ ಏಷ್ಯಾದ ಬೆಳವಣಿಗೆ:- ನಿರಂತರವಾಗಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ, ತೀವ್ರಗತಿಯ ನಗರೀಕರಣ ಮತ್ತು ಕೈಗಾರೀಕರಣದ ಹಿನ್ನೆಲೆಯಲ್ಲಿ, ಭಾರತದ ನೇತೃತ್ವದಲ್ಲಿ ದಕ್ಷಿಣ ಏಷ್ಯಾ ವಲಯವು ಪರಮಾಣು ಶಕ್ತಿ ವಲಯದಲ್ಲಿ ಒಂದು ಪ್ರಮುಖ ಬೆಳವಣಿಗೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

    ಹಿರಾಕುಡ್ ಜೌಗು ಪ್ರದೇಶ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಒಡಿಶಾದ ಸಂಬಲ್‌ಪುರ್ ಜಿಲ್ಲೆಯಲ್ಲಿರುವ ‘ಹಿರಾಕುಡ್ ಜೌಗು ಪ್ರದೇಶ’ವು ಪ್ರಸ್ತುತ ವಲಸೆ ಋತುವಿನಲ್ಲಿ ಬರೋಬ್ಬರಿ 4.21 ಲಕ್ಷ ವಲಸೆ ಪಕ್ಷಿಗಳ ಆಗಮನವನ್ನು ದಾಖಲಿಸುವ ಮೂಲಕ ಸುದ್ದಿಯಲ್ಲಿದೆ.

    ಹಿರಾಕುಡ್ ಜೌಗು ಪ್ರದೇಶದ ಬಗ್ಗೆ:

    • ಸ್ಥಳ:- ಈ ಜೌಗು ಪ್ರದೇಶವು ಹಿರಾಕುಡ್ ಜಲಾಶಯದ ಒಂದು ಪ್ರಮುಖ ಭಾಗವಾಗಿದೆ. 
    • ವಿಸ್ತಾರ:- ಮಹಾನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಜಲಾಶಯವು ಸುಮಾರು 26 ಕಿಲೋಮೀಟರ್ ಉದ್ದವಿದ್ದು, ಭಾರತದ ಅತಿದೊಡ್ಡ ಮಾನವ ನಿರ್ಮಿತ ಜಲಾಶಯಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
    • ಬಹುಪಯೋಗಿ ಜಲಾಶಯ:- ಈ ಜಲಾಶಯವು ಕೇವಲ ಜೀವವೈವಿಧ್ಯಕ್ಕೆ ಮಾತ್ರವಲ್ಲದೆ, ಸುಮಾರು 350 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಹಾಗೂ 4,36,000 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಮೂಲಕ ಆರ್ಥಿಕವಾಗಿಯೂ ಮಹತ್ವದ್ದಾಗಿದೆ.

    ಈ ಜೌಗು ಪ್ರದೇಶದ ಪರಿಸರ ಪ್ರಾಮುಖ್ಯತೆ ಮತ್ತು ಜೀವವೈವಿಧ್ಯ:

    • ಜೀವವೈವಿಧ್ಯತೆಯ ತಾಣ:- ಇದು ‘ಮಧ್ಯ ಏಷ್ಯಾದ ವಲಸೆ ಮಾರ್ಗ’ದಲ್ಲಿನ ವಲಸೆ ಹಕ್ಕಿಗಳಿಗೆ ಒಂದು ನಿರ್ಣಾಯಕ ತಂಗುದಾಣವಾಗಿದೆ. ಇಲ್ಲಿ ಸುಮಾರು 128 ವಿವಿಧ ಪ್ರಭೇದದ ಪಕ್ಷಿಗಳು ಆಶ್ರಯ ಪಡೆಯುತ್ತವೆ.
    • ಪ್ರಮುಖ ಪಕ್ಷಿ ಪ್ರಭೇದಗಳು:- ಪಿನ್‌ಟೈಲ್, ಶೋವೆಲರ್, ಟೀಲ್, ಪೋಚಾರ್ಡ್, ಪಟ್ಟೆ-ತಲೆಯ ಬಾತುಕೋಳಿ, ಮತ್ತು ಯುರೇಷಿಯಾ ಮೂಲದ ಅಪರೂಪದ ಪ್ರಭೇದವಾದ ರಫ್ಸ್ ಹಕ್ಕಿಗಳು ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
    • ರಾಮ್ಸರ್ ಮಾನ್ಯತೆ:- ಇದರ ಜಾಗತಿಕ ಪರಿಸರ ಪ್ರಾಮುಖ್ಯತೆಯನ್ನು ಪರಿಗಣಿಸಿ, 2021 ರಲ್ಲಿ ಇದನ್ನು ಅಧಿಕೃತವಾಗಿ ‘ರಾಮ್ಸರ್ ತಾಣ’ ಎಂದು ಘೋಷಿಸಲಾಗಿದೆ.

    ಗಮನಿಸಿ:

    ಫೆಬ್ರವರಿ 2026 ರ ಅಂಕಿ-ಅಂಶಗಳ ಪ್ರಕಾರ, ಭಾರತವು ಒಟ್ಟು 98 ರಾಮ್ಸರ್ ತಾಣಗಳನ್ನು ಹೊಂದಿದೆ. ಇತ್ತೀಚೆಗೆ ಉತ್ತರ ಪ್ರದೇಶದ ‘ಪಟ್ನಾ ಪಕ್ಷಿಧಾಮ’ ಮತ್ತು ಗುಜರಾತಿನ ‘ಚಾರಿ-ಧಂಡ್’ ಜೌಗು ಪ್ರದೇಶಗಳನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಿದ ನಂತರ ಭಾರತದ ಒಟ್ಟು ರಾಮ್ಸರ್ ತಾಣಗಳ ಸಂಖ್ಯೆ 98 ಕ್ಕೆ ಏರಿಕೆಯಾಗಿದೆ.

  • ಸಂಪೂರ್ಣತಾ ಅಭಿಯಾನ 2.0 | ಮಾಸಿಕ ಋತುಚಕ್ರದ ಆರೋಗ್ಯವು ಮೂಲಭೂತ ಹಕ್ಕಾಗಿದೆ: ಸರ್ವೋಚ್ಚ ನ್ಯಾಯಾಲಯ | ಕಲ್ಬೇಲಿಯಾ ಸಮುದಾಯ

    ಸಂಪೂರ್ಣತಾ ಅಭಿಯಾನ 2.0

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ನೀತಿ ಆಯೋಗವು ‘ಸಂಪೂರ್ಣತಾ ಅಭಿಯಾನ 2.0’ ಎಂಬ ವಿನೂತನ ಅಭಿಯಾನವನ್ನು ಜಾರಿಗೊಳಿಸಿದೆ.

    ಸಂಪೂರ್ಣತಾ ಅಭಿಯಾನ 2.0 ರ ಬಗ್ಗೆ:

    • ದೇಶದಾದ್ಯಂತ ಗುರುತಿಸಲಾಗಿರುವ ‘ಮಹತ್ವಾಕಾಂಕ್ಷೆಯ ಜಿಲ್ಲೆಗಳು’ ಮತ್ತು ‘ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ’ ನಿರ್ಣಾಯಕ ಅಭಿವೃದ್ಧಿ ಸೂಚಕಗಳ 100% ರಷ್ಟು ಸಾಧನೆಯನ್ನು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ಈ ಅಭಿಯಾನವನ್ನು ರೂಪಿಸಲಾಗಿದೆ.
    • ನಿರ್ದಿಷ್ಟ ‘ಪ್ರಮುಖ ಕಾರ್ಯಕ್ಷಮತಾ ಸೂಚಕಗಳನ್ನು’ (KPIs) ಸಾಧಿಸುವ ಉದ್ದೇಶದಿಂದ, ಈ ಅಭಿಯಾನವು ದೇಶದ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು 513 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳನ್ನು ಗುರಿಯಾಗಿಸಿಕೊಂಡಿದೆ.

    ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಿಗಾಗಿ ಪ್ರಮುಖ ಕಾರ್ಯಕ್ಷಮತಾ ಸೂಚಕಗಳು:

    • ಪೌಷ್ಟಿಕಾಂಶ:- ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ (ICDS) 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳಿಗೆ ನಿಯಮಿತವಾಗಿ ಪೂರಕ ಪೌಷ್ಟಿಕಾಂಶವನ್ನು ಒದಗಿಸುವುದು.
    • ಮೇಲ್ವಿಚಾರಣೆ:- ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಬೆಳವಣಿಗೆಯ ಮಾಸಿಕ ಅಳತೆ ಮತ್ತು ದಾಖಲಾತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
    • ಮೂಲಸೌಕರ್ಯ:- ಕುಡಿಯುವ ನೀರು ಮತ್ತು ಕಾರ್ಯನಿರ್ವಹಿಸುವ ಶೌಚಾಲಯದ ಸೌಲಭ್ಯವನ್ನು ಹೊಂದಿರುವ ಸುಸಜ್ಜಿತ ಅಂಗನವಾಡಿ ಕೇಂದ್ರಗಳನ್ನು ಹೊಂದುವುದು.
    • ಶಿಕ್ಷಣ:- ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸುವುದು.
    • ಕೃಷಿ ಮತ್ತು ಪಶುಸಂಗೋಪನೆ:- ಕಾಲು ಮತ್ತು ಬಾಯಿ ರೋಗವನ್ನು (FMD) ತಡೆಗಟ್ಟಲು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು.

    ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗಾಗಿ ಪ್ರಮುಖ ಕಾರ್ಯಕ್ಷಮತಾ ಸೂಚಕಗಳು:

    • ಇದು ಪ್ರಾಥಮಿಕವಾಗಿ ಆರೋಗ್ಯ, ಪೌಷ್ಟಿಕಾಂಶ ಮತ್ತು ಶಿಕ್ಷಣ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸುತ್ತದೆ. ಜನನದ ಸಮಯದಲ್ಲಿ ತೂಕ ಮಾಡಲಾದ ಶಿಶುಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಕ್ಷಯರೋಗ (TB) ಪ್ರಕರಣಗಳ ವರದಿ ಮಾಡುವಿಕೆಯನ್ನು ಸುಧಾರಿಸುವುದು ಈ ಸೂಚಕಗಳಲ್ಲಿ ಸೇರಿದೆ.

    ‘ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ’ದ ಬಗ್ಗೆ:

    • ಪ್ರಾರಂಭ:- 2018
    • ಉದ್ದೇಶ:- ದೇಶಾದ್ಯಂತ ಹಿಂದುಳಿದಿರುವ 112 ಜಿಲ್ಲೆಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ.
    • 5 ಆದ್ಯತಾ ಕ್ಷೇತ್ರಗಳು:- ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲ, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಮೂಲಸೌಕರ್ಯ.

    ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮ’ದ ಬಗ್ಗೆ:

    • ಪ್ರಾರಂಭ:- 2023
    • ಉದ್ದೇಶ:- ದೇಶಾದ್ಯಂತ 513 ಬ್ಲಾಕ್‌ಗಳಲ್ಲಿ (329 ಜಿಲ್ಲೆಗಳ ವ್ಯಾಪ್ತಿಯಲ್ಲಿ) ಅಗತ್ಯ ಸರ್ಕಾರಿ ಸೇವೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ (ಸಂಪೂರ್ಣ ಅನುಷ್ಠಾನ) ಉದ್ದೇಶವನ್ನು ಹೊಂದಿದೆ.
    • 5 ಆದ್ಯತಾ ಕ್ಷೇತ್ರಗಳು:- ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಸಂಬಂಧಿತ ಸೇವೆಗಳು, ಮೂಲಸೌಕರ್ಯ ಹಾಗೂ ಸಾಮಾಜಿಕ ಅಭಿವೃದ್ಧಿ.

    ಮಾಸಿಕ ಋತುಚಕ್ರದ ಆರೋಗ್ಯವು ಮೂಲಭೂತ ಹಕ್ಕಾಗಿದೆ: ಸರ್ವೋಚ್ಚ ನ್ಯಾಯಾಲಯ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ‘ಡಾ. ಜಯಾ ಠಾಕೂರ್ v/s ಭಾರತ ಸರ್ಕಾರ’ ಪ್ರಕರಣದಲ್ಲಿ, ಮಾಸಿಕ ಋತುಚಕ್ರದ ನೈರ್ಮಲ್ಯದ ಹಕ್ಕು ಸಂವಿಧಾನದ 21ನೇ ವಿಧಿಯಡಿ ‘ಜೀವಿಸುವ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

    ನ್ಯಾಯಾಂಗದ ಮಧ್ಯಪ್ರವೇಶದ ಪ್ರಮುಖ ಮುಖ್ಯಾಂಶಗಳು:

    • ಮೂಲಭೂತ ಹಕ್ಕು:- ಮಾಸಿಕ ಋತುಚಕ್ರದ ಆರೋಗ್ಯವನ್ನು ಇದೀಗ ಸಂವಿಧಾನದ ವಿಧಿ 21ರ ‘ಜೀವಿಸುವ ಹಕ್ಕು’ ಮತ್ತು ವಿಧಿ 21 A ಯ ‘ಶಿಕ್ಷಣದ ಹಕ್ಕಿನ’ ಅತ್ಯಾವಶ್ಯಕ ಭಾಗವೆಂದು ಕಾನೂನುಬದ್ಧವಾಗಿ ಗುರುತಿಸಲಾಗಿದೆ.
    • ಉಚಿತ ಜೈವಿಕ-ವಿಘಟಣೆಯ ಪ್ಯಾಡ್‌ಗಳು:- ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು 6 ರಿಂದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಜೈವಿಕ-ವಿಘಟಣೆಯ ಮಾಸಿಕ ಸ್ವಚ್ಛತಾ (ಸ್ಯಾನಿಟರಿ) ಪ್ಯಾಡ್‌ಗಳನ್ನು ಕಡ್ಡಾಯವಾಗಿ ವಿತರಿಸಬೇಕು.
    • ಕಡ್ಡಾಯ ಮೂಲಸೌಕರ್ಯ:- ಶಾಲೆಗಳಲ್ಲಿ ನೀರಿನ ಸೌಲಭ್ಯವಿರುವ ಹಾಗೂ ಲಿಂಗಾಧಾರಿತ ಪ್ರತ್ಯೇಕ ಶೌಚಾಲಯಗಳನ್ನು ಹೊಂದುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಉಲ್ಲಂಘಿಸುವ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸುವ ಅಧಿಕಾರವಿದೆ.
    • ಕಳಂಕ ನಿವಾರಣೆ:- ಮಾಸಿಕ ಋತುಚಕ್ರದ ಕುರಿತಾದ ಮುಜುಗರ ಮತ್ತು ಕಳಂಕವನ್ನು ಹೋಗಲಾಡಿಸಲು, ಹುಡುಗರು ಮತ್ತು ಹುಡುಗಿಯರಿಬ್ಬರಿಗೂ ಸಮರ್ಪಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಲಿಂಗ-ಸೂಕ್ಷ್ಮ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವಂತೆ ನ್ಯಾಯಾಲಯವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (NCERT) ನಿರ್ದೇಶನ ನೀಡಿದೆ.

    ಸಂವಿಧಾನದ 21ನೇ ವಿಧಿಯ ವಿವರಣೆ:

      • 21ನೇ ವಿಧಿಯು ಭಾರತದ ಸಂವಿಧಾನದ ಭಾಗ-III ರಲ್ಲಿನ ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುತ್ತದೆ.
      • ಇದು ನಾಗರಿಕರು ಮತ್ತು ನಾಗರಿಕರಲ್ಲದವರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ.
      • ಕಾನೂನಿನಿಂದ ಸ್ಥಾಪಿಸಲ್ಪಟ್ಟ ಪ್ರಕ್ರಿಯೆಯ ಮೂಲಕ ಹೊರತುಪಡಿಸಿ, ಯಾವುದೇ ವ್ಯಕ್ತಿಯನ್ನು ಅವನ ಜೀವಿಸುವ ಹಕ್ಕು ಅಥವಾ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿಸುವಂತಿಲ್ಲ ಎಂದು ಈ ವಿಧಿಯು ಸ್ಪಷ್ಟಪಡಿಸುತ್ತದೆ.
    • ಯಾವುದಾದರೂ ವ್ಯಕ್ತಿಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಸರ್ಕಾರವು ಅನಿಯಂತ್ರಿತವಾಗಿ ಹಸ್ತಕ್ಷೇಪ ಮಾಡುವುದನ್ನು ಇದು ಕಟ್ಟುನಿಟ್ಟಾಗಿ ನಿರ್ಬಂಧಿಸುತ್ತದೆ.
      • ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಮೂಲಕ 21ನೇ ವಿಧಿಯ ವಿಸ್ತೃತ ವ್ಯಾಪ್ತಿ:- ಘನತೆಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಮೇಲೆ ಸಕಾರಾತ್ಮಕ ಜವಾಬ್ದಾರಿಗಳನ್ನು ವಿಧಿಸುವಂತೆ ನ್ಯಾಯಾಲಯಗಳು ಈ ವಿಧಿಯನ್ನು ವಿಸ್ತೃತವಾಗಿ ಕಾಲಕಾಲಕ್ಕೆ ಅರ್ಥೈಸಿವೆ. ಈ ಕೆಳಗಿನ ಹಕ್ಕುಗಳು 21ನೇ ವಿಧಿಯ ವ್ಯಾಪ್ತಿಗೆ ಬರುತ್ತವೆ:
    • ಮಾನವ ಘನತೆಯೊಂದಿಗೆ ಜೀವಿಸುವ ಹಕ್ಕು.
    • ಖಾಸಗಿತನದ ಹಕ್ಕು (ಪುಟ್ಟಸ್ವಾಮಿ ಪ್ರಕರಣ, 2017).
    • ಜೀವನೋಪಾಯದ ಹಕ್ಕು (ಓಲ್ಗಾ ಟೆಲ್ಲಿಸ್ ಪ್ರಕರಣ).
    • ಆರೋಗ್ಯ ಮತ್ತು ವೈದ್ಯಕೀಯ ಆರೈಕೆಯ ಹಕ್ಕು.
    • ಸ್ವಚ್ಛ ಪರಿಸರದ ಹಕ್ಕು.
    • ಕಾನೂನು ನೆರವು ಮತ್ತು ತ್ವರಿತ ವಿಚಾರಣೆಯ ಹಕ್ಕು.
    • ಶಿಕ್ಷಣದ ಹಕ್ಕು (ನಂತರ 21 A ವಿಧಿಯ ಮೂಲಕ ಇದನ್ನು ಸ್ಪಷ್ಟಪಡಿಸಲಾಗಿದೆ).
    • ಪೊಲೀಸ್ ಬಂಧನದಲ್ಲಿನ ಚಿತ್ರಹಿಂಸೆಯ ವಿರುದ್ಧದ ರಕ್ಷಣೆಯ ಹಕ್ಕು.
    • ನಿದ್ರೆ, ಆಶ್ರಯ ಮತ್ತು ಆಹಾರದ ಹಕ್ಕು.

    ಮಾಸಿಕ ಋತುಚಕ್ರದ ಆರೋಗ್ಯಕ್ಕೆ ಸಂಬಂಧಿಸಿದ ಭಾರತ ಸರ್ಕಾರದ ನೀತಿಗಳು ಮತ್ತು ಯೋಜನೆಗಳು:

    • ಮಾಸಿಕ ಋತುಚಕ್ರ ನೈರ್ಮಲ್ಯ ಯೋಜನೆ (MHS):- ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಬೆಂಬಲದೊಂದಿಗೆ, ಆಶಾ (ASHA) ಕಾರ್ಯಕರ್ತೆಯರು 6 ಪ್ಯಾಡ್‌ಗಳಿರುವ ‘ಫ್ರೀಡೇಸ್’ ಪೊಟ್ಟಣವನ್ನು 6 ರೂಪಾಯಿಗಳ ರಿಯಾಯಿತಿ ದರದಲ್ಲಿ ವಿತರಿಸುತ್ತಾರೆ.
    • ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ:- ದೇಶದಾದ್ಯಂತ 16,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ‘ಸುವಿಧಾ’ (ಆಮ್ಲಜನಕ ಪ್ರೇರಿತ -ಜೈವಿಕ ವಿಘಟಣೆಯ) ಪ್ಯಾಡ್‌ಗಳನ್ನು ಕೇವಲ 1 ರೂಪಾಯಿಗೆ ಒದಗಿಸುತ್ತಿವೆ.
    • ಸಮಗ್ರ ಶಿಕ್ಷಣ:- ಶಾಲೆಗಳಲ್ಲಿ ವಿತರಣಾ (ವೆಂಡಿಂಗ್) ಯಂತ್ರಗಳು ಮತ್ತು ತ್ಯಾಜ್ಯ ಸುಡುವ ಯಂತ್ರ (ಇನ್ಸಿನರೇಟರ್‌)ಗಳನ್ನು ಅಳವಡಿಸಲು ಈ ಯೋಜನೆಯು ಹಣಕಾಸು ಒದಗಿಸುತ್ತದೆ. 2026ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಗಳು ಇದೀಗ ಜೈವಿಕ-ವಿಘಟಣೆಯ ಆಯ್ಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
    • ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ 2:- ಪರಿಸರ ಮಾಲಿನ್ಯವನ್ನು ತಡೆಗಟ್ಟಲು, ಸಣ್ಣ-ಪ್ರಮಾಣದ ತ್ಯಾಜ್ಯ ಸುಡುವ ಯಂತ್ರ (ಇನ್ಸಿನರೇಟರ್‌)ಗಳು ಮತ್ತು ಆಳವಾದ ಹೂಳುವ ಗುಂಡಿಗಳನ್ನು ಬಳಸಿಕೊಂಡು ‘ಮಾಸಿಕ ಋತುಚಕ್ರದ ತ್ಯಾಜ್ಯ ನಿರ್ವಹಣೆ’ಯ (MWM) ಕಡೆಗೆ ಇದು ಗಮನ ಹರಿಸುತ್ತದೆ.
    • ಮಾಸಿಕ ಋತುಚಕ್ರ ನೈರ್ಮಲ್ಯ ನೀತಿ (2024-25):- ಆರೋಗ್ಯ ಸಚಿವಾಲಯವು ರೂಪಿಸಿರುವ ಈ ನೀತಿಯು ಕಡಿಮೆ-ವೆಚ್ಚದ ಉತ್ಪನ್ನಗಳ ಲಭ್ಯತೆಯನ್ನು ಸುಗಮಗೊಳಿಸುತ್ತದೆ, “ಹಸಿರು” (ಜೈವಿಕ-ವಿಘಟಣೆಯ) ಉಪಕ್ರಮಗಳಿಗೆ ಆದ್ಯತೆ ನೀಡುತ್ತದೆ ಮತ್ತು ಶಾಲಾ ಪಠ್ಯಕ್ರಮದಲ್ಲಿ ಮಾಸಿಕ ಋತುಚಕ್ರದ ನೈರ್ಮಲ್ಯ ನಿರ್ವಹಣೆಯನ್ನು (MHM) ವ್ಯವಸ್ಥಿತವಾಗಿ ಸಂಯೋಜಿಸುತ್ತದೆ.
    • ಉತ್ಪನ್ನಗಳ ಪ್ರಮಾಣೀಕರಣ:- ಗ್ರಾಮೀಣ ಮಹಿಳೆಯರಲ್ಲಿ ಮಾಸಿಕ ಋತುಚಕ್ರದ ಕಪ್‌ಗಳು ಮತ್ತು ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳಂತಹ ಸುಸ್ಥಿರ ಪರ್ಯಾಯಗಳ ಸುರಕ್ಷತೆ ಮತ್ತು ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು ‘ಆರೋಗ್ಯ ಸಂಶೋಧನಾ ಇಲಾಖೆ’ಯು ಅಧ್ಯಯನ ನಡೆಸುತ್ತಿದೆ.

    ಕಲ್ಬೇಲಿಯಾ ಸಮುದಾಯ

    ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ರಾಜಸ್ಥಾನದ ಬಾರ್ಮರ್‌ನಲ್ಲಿ ‘ಕಾಲ್ಬೇಲಿಯಾ’ ಸಮುದಾಯದವರು ತಮ್ಮದೇ ಆದ ಪ್ರತ್ಯೇಕ ಸ್ಮಶಾನ ಒದಗಿಸುವಂತೆ ಆಗ್ರಹಿಸಿ, ರಸ್ತೆಯ ಮೇಲೆ ಶವವನ್ನಿಟ್ಟು ತೀವ್ರ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

    ಕಲ್ಬೇಲಿಯಾ ಸಮುದಾಯದ ಬಗ್ಗೆ:

    • ಕಲ್ಬೇಲಿಯಾ ಸಮುದಾಯವು ಭಾರತದ ರಾಜಸ್ಥಾನ ಮೂಲದ ಪ್ರಸಿದ್ಧ ಜಾನಪದ ಸಮುದಾಯವಾಗಿದ್ದು, ಇವರು ಸಾಂಪ್ರದಾಯಿಕವಾಗಿ ಹಾವು ಆಡಿಸುವ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ.
    • ಹಾವುಗಳನ್ನು ಹಿಡಿಯುವುದು ಮತ್ತು ಹಾವಿನ ವಿಷವನ್ನು ವ್ಯಾಪಾರ ಮಾಡುವುದು ಇವರ ಸಾಂಪ್ರದಾಯಿಕ ಕಸುಬಾಗಿತ್ತು.
    • ಈ ಸಮುದಾಯವು ತನ್ನ ರೋಮಾಂಚಕ ಜಾನಪದ ನೃತ್ಯಗಳು ಹಾಗೂ ವಿಶಿಷ್ಟವಾದ ಕಪ್ಪು ಬಣ್ಣದ ಕಸೂತಿ ಉಡುಪುಗಳಿಗೆ ಹೆಸರುವಾಸಿಯಾಗಿದೆ.

    ಕಲ್ಬೇಲಿಯಾ ನೃತ್ಯದ ಬಗ್ಗೆ:

    • ಕಲ್ಬೇಲಿಯಾ ನೃತ್ಯವನ್ನು ‘ಸಪೇರಾ ನೃತ್ಯ’ ಎಂತಲೂ ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಹಾವು ಆಡಿಸುವವರು ಎಂದು ಕರೆಯಲ್ಪಡುವ ಈ ಅಲೆಮಾರಿ ಬುಡಕಟ್ಟಿನ ಸಂಸ್ಕೃತಿಯ ಕೇಂದ್ರಬಿಂದುವೇ ಈ ಜಾನಪದ ನೃತ್ಯವಾಗಿದೆ.
    • ಈ ನೃತ್ಯದ ಹಾವಭಾವಗಳು, ಚಲನೆಗಳು ಮತ್ತು ವೇಷಭೂಷಣಗಳು ಹಾವುಗಳೊಂದಿಗಿನ ಅವರ ನಿಕಟ ಒಡನಾಟವನ್ನು ಅದ್ಭುತವಾಗಿ ಪ್ರತಿಬಿಂಬಿಸುತ್ತವೆ.
    • ಯುನೆಸ್ಕೋ ಮಾನ್ಯತೆ:- ಅವರ ಅಸ್ಮಿತೆಯ ಪ್ರಮುಖ ಸಂಕೇತವೆಂದು ಗುರುತಿಸಿ 2010 ರಲ್ಲಿ ಅವರ ಹಾಡುಗಳು ಮತ್ತು ನೃತ್ಯಗಳನ್ನು ಯುನೆಸ್ಕೋದ ‘ಅಮೂರ್ತ ಸಾಂಸ್ಕೃತಿಕ ಪರಂಪರೆಯ’ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
  • ಭಾರತ-ಸೌದಿ ಅರೇಬಿಯಾ ಭದ್ರತಾ ಕಾರ್ಯಪಡೆ | ಜಾರಿ ನಿರ್ದೇಶನಾಲಯ (ED) | ಗೀತಾ ಮಿತ್ತಲ್ ಸಮಿತಿ

    ಭಾರತ-ಸೌದಿ ಅರೇಬಿಯಾ ಭದ್ರತಾ ಕಾರ್ಯಪಡೆ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, 3ನೇ ‘ಭಾರತ-ಸೌದಿ ಅರೇಬಿಯಾ ಭದ್ರತಾ ಕಾರ್ಯಪಡೆ’ಯ ಸಭೆಯು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಯಶಸ್ವಿಯಾಗಿ ಜರುಗಿತು.

    ಈ ಸಭೆಯ ಪ್ರಮುಖ ಮುಖ್ಯಾಂಶಗಳು:

    • ಭಯೋತ್ಪಾದನಾ ನಿಗ್ರಹ:- ಉದಯೋನ್ಮುಖ ಅಪಾಯಗಳು ಸೇರಿದಂತೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಉಭಯ ದೇಶಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
    • ಉಗ್ರವಾದ ತಡೆ:- ಉಗ್ರವಾದ ಮತ್ತು ಮೂಲಭೂತವಾದವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಜಂಟಿ ಕ್ರಮಗಳನ್ನು ಕೈಗೊಳ್ಳಲಾಗುವುದು.
    • ಭಯೋತ್ಪಾದಕ ನಿಧಿ ನಿಯಂತ್ರಣ:- ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ನಿರ್ಧರಿಸಲಾಗಿದೆ.
    • ತಂತ್ರಜ್ಞಾನದ ದುರ್ಬಳಕೆ ತಡೆ:- ಭಯೋತ್ಪಾದಕ ಉದ್ದೇಶಗಳಿಗಾಗಿ ಆಧುನಿಕ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಸಭೆಯಲ್ಲಿ ಒತ್ತು ನೀಡಲಾಗಿದೆ.
    • ಸಂಘಟಿತ ಅಪರಾಧಗಳ ನಿಗ್ರಹ:- ಗಡಿಯಾಚೆಗಿನ ಸಂಘಟಿತ ಅಪರಾಧಗಳು ಮತ್ತು ಭಯೋತ್ಪಾದನೆಯ ನಡುವಿನ ನಂಟನ್ನು ಬೇರುಸಹಿತ ಕಿತ್ತುಹಾಕಲು ಚರ್ಚಿಸಲಾಗಿದೆ.
    • ಸಾಂಸ್ಥಿಕ ಚೌಕಟ್ಟು:- ಈ ದ್ವಿಪಕ್ಷೀಯ ಭದ್ರತಾ ಮಾತುಕತೆಯು ‘ಭಾರತ-ಸೌದಿ ಅರೇಬಿಯಾ ಕಾರ್ಯತಂತ್ರದ ಪಾಲುದಾರಿಕಾ ಮಂಡಳಿ’ಯ (SPC) ಅಡಿಯಲ್ಲಿ ನಡೆಯುತ್ತದೆ. ಇದು ಉಭಯ ದೇಶಗಳ ಸಹಕಾರಕ್ಕೆ ನಿರಂತರತೆ ಮತ್ತು ಭವಿಷ್ಯದ ಮುನ್ನೋಟವನ್ನು ಒದಗಿಸುತ್ತದೆ.

    ಭಾರತ ಮತ್ತು ಸೌದಿ ಅರೇಬಿಯಾ ಸಂಬಂಧಗಳು:

    • ರಾಜಕೀಯ ಸಂಬಂಧಗಳು:- ಎರಡೂ ದೇಶಗಳು 1947 ರಲ್ಲಿ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು.
    • 2006 ರ ಸೌದಿ ದೊರೆಯ ಐತಿಹಾಸಿಕ ಭೇಟಿಯ ಪರಿಣಾಮವಾಗಿ ‘ದೆಹಲಿ ಘೋಷಣೆ’ಗೆ ಸಹಿ ಹಾಕಲಾಯಿತು. ತದನಂತರ 2010 ರಲ್ಲಿ ‘ರಿಯಾದ್ ಘೋಷಣೆ’ಯ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ‘ಕಾರ್ಯತಂತ್ರದ ಪಾಲುದಾರಿಕೆ’ಯ ಮಟ್ಟಕ್ಕೆ ಏರಿಸಲಾಯಿತು.
    • 2019 ರಲ್ಲಿ ಭಾರತದ ಪ್ರಧಾನಮಂತ್ರಿಯವರ ರಿಯಾದ್ ಭೇಟಿಯ ಸಂದರ್ಭದಲ್ಲಿ ‘ಕಾರ್ಯತಂತ್ರದ ಪಾಲುದಾರಿಕಾ ಮಂಡಳಿ’ (SPC) ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇಂಡೋ-ಸೌದಿ ಸಂಬಂಧವನ್ನು ಉನ್ನತ ಮಟ್ಟದಲ್ಲಿ ಮುನ್ನಡೆಸಲು ಇದು ಒಂದು ಪ್ರಬಲ ಮಂಡಳಿಯನ್ನು ಸ್ಥಾಪಿಸಿದೆ.
    • ಆರ್ಥಿಕ ಸಂಬಂಧಗಳು:- ಆರ್ಥಿಕ ವಲಯದಲ್ಲಿ ಭಾರತವು ಸೌದಿ ಅರೇಬಿಯಾದ 2 ನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ ಮತ್ತು ಸೌದಿ ಅರೇಬಿಯಾವು ಭಾರತದ 4 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
    • ಇಂಧನ ಸಹಕಾರ:- 2023 ರ ಆರ್ಥಿಕ ವರ್ಷದಲ್ಲಿ (FY23) ಸೌದಿ ಅರೇಬಿಯಾವು ಭಾರತದ 3 ನೇ ಅತಿದೊಡ್ಡ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆದಾರ ರಾಷ್ಟ್ರವಾಗಿತ್ತು.
    • ರಕ್ಷಣಾ ಸಹಕಾರ:- ರಕ್ಷಣಾ ವಲಯದಲ್ಲಿ ಸೌದಿ ಅರೇಬಿಯಾವು ಭಾರತದ ‘ಭಾರತ್ ಫೋರ್ಜ್’ ಸಂಸ್ಥೆಯಿಂದ 155 ಎಂಎಂ ‘ಸುಧಾರಿತ ಎಳೆಯುವ ಫಿರಂಗಿ ವ್ಯವಸ್ಥೆ(ATAGS)‘ಯನ್ನು ಖರೀದಿಸಿದೆ.
    • ಅನಿವಾಸಿ ಭಾರತೀಯರು:- 2025 ರ ಅಂಕಿ-ಅಂಶಗಳ ಪ್ರಕಾರ, ಸೌದಿ ಅರೇಬಿಯಾದಲ್ಲಿ ಸುಮಾರು 2.7 ದಶಲಕ್ಷ ಭಾರತೀಯರಿದ್ದಾರೆ. ಬಾಂಗ್ಲಾದೇಶದ ನಂತರ ಸೌದಿ ಅರೇಬಿಯಾದಲ್ಲಿರುವ ಅತಿ ದೊಡ್ಡ ವಿದೇಶಿ ಕಾರ್ಮಿಕರ ಗುಂಪು ಇದಾಗಿದೆ.

    ಜಂಟಿ ಸಮರಾಭ್ಯಾಸಗಳು:

    • ಸದಾ ತನ್ಸೀಕ್:- ಇದು 2024 ರ ಜನವರಿಯಲ್ಲಿ ರಾಜಸ್ಥಾನದಲ್ಲಿ ನಡೆದ ಉಭಯ ದೇಶಗಳ ಚೊಚ್ಚಲ ಜಂಟಿ ಸೇನಾ ಸಮರಾಭ್ಯಾಸವಾಗಿದೆ.
    • ತರಂಗ್ ಶಕ್ತಿ:- ಭಾರತದ ಅತಿದೊಡ್ಡ ವಾಯುಪಡೆಯ ಸಮರಾಭ್ಯಾಸವಾದ ಇದರಲ್ಲಿ ಸೌದಿ ಅರೇಬಿಯಾವು ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿತ್ತು.
    • ಅಲ್ ಮೊಹೆದ್ ಅಲ್ ಹಿಂದಿ:- ಇದು ಉಭಯ ದೇಶಗಳ ನಡುವೆ 2022 ರಲ್ಲಿ ಪ್ರಾರಂಭಿಸಲಾದ ದ್ವಿಪಕ್ಷೀಯ ನೌಕಾಭ್ಯಾಸವಾಗಿದೆ.

    ಜಾರಿ ನಿರ್ದೇಶನಾಲಯ (ED)

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಪರಿಹಾರವನ್ನು ಕೋರಿ ಸಾಂವಿಧಾನಿಕ ನ್ಯಾಯಾಲಯಗಳ ‘ರಿಟ್’ (Writ) ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ (ED) ಕಾನೂನುಬದ್ಧ ಹಕ್ಕಿದೆಯೇ ಎಂಬುದನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ಸಮ್ಮತಿಸಿದೆ.

    ಜಾರಿ ನಿರ್ದೇಶನಾಲಯದ ಬಗ್ಗೆ:

      • ಸ್ಥಾಪನೆ:- 1 ಮೇ 1956 ರಂದು ‘ಜಾರಿ ಘಟಕ’ವನ್ನು (Enforcement Unit) ಅಧಿಕೃತವಾಗಿ ರಚಿಸಲಾಯಿತು. ತದನಂತರ 1957 ರಲ್ಲಿ, ಈ ಘಟಕವನ್ನು ‘ಜಾರಿ ನಿರ್ದೇಶನಾಲಯ’ (ED) ಎಂದು ಮರುನಾಮಕರಣ ಮಾಡಲಾಯಿತು.
      • ಆಡಳಿತಾತ್ಮಕ ಕಾರ್ಯನಿರ್ವಾಹಣೆ:- ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ವಿಶೇಷ ಆರ್ಥಿಕ ತನಿಖಾ ಸಂಸ್ಥೆಯಾಗಿದೆ.
      • ಪ್ರಮುಖ ಕಾರ್ಯಗಳು:- ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಜಾರಿ ನಿರ್ದೇಶನಾಲಯವು ಈ ಕೆಳಗಿನ ಪ್ರಮುಖ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ:
    • ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999
    • ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002

    ಗೀತಾ ಮಿತ್ತಲ್ ಸಮಿತಿ

    ಸಮಾಜ

    ಇದೀಗ ಸುದ್ದಿಯಲ್ಲಿದೆ: 

    • ಮಣಿಪುರ ಹಿಂಸಾಚಾರದ ಸಂತ್ರಸ್ತರಿಗೆ ಮಾನವೀಯ ನೆರವು ಮತ್ತು ಪರಿಹಾರ ಒದಗಿಸುವ ಕಾರ್ಯದ ಮೇಲ್ವಿಚಾರಣೆಯನ್ನು ಮುಂದುವರಿಸಲು, ಭಾರತದ ಸರ್ವೋಚ್ಚ ನ್ಯಾಯಾಲಯವು ‘ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿ’ಯ ಅಧಿಕಾರಾವಧಿಯನ್ನು 2026 ರ ಜುಲೈ 31 ರವರೆಗೆ (6 ತಿಂಗಳ ಕಾಲ) ವಿಸ್ತರಿಸಿದೆ.

    ‘ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿ’ಯ ಬಗ್ಗೆ:

    • ರಚನೆ:- ಈ ಉನ್ನತ ಮಟ್ಟದ ಸಮಿತಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ರಚಿಸಿದೆ.
    • ಉದ್ದೇಶ:- ಮಣಿಪುರದಲ್ಲಿ ಹಿಂಸಾಚಾರಕ್ಕೆ ತುತ್ತಾದ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ, ಹಾನಿಗೊಳಗಾದ ಮನೆಗಳು ಹಾಗೂ ಧಾರ್ಮಿಕ ಪ್ರಾರ್ಥನಾ ಸ್ಥಳಗಳ ಮರುಸ್ಥಾಪನಾ ಕಾರ್ಯಗಳ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆ.
    • ಸಮಿತಿಯ ಸದಸ್ಯರು:- ಇದು ಮೂವರು ಸದಸ್ಯರನ್ನೊಳಗೊಂಡ ಸಮಿತಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರು ಇದರ ನೇತೃತ್ವ ವಹಿಸಿದ್ದಾರೆ. ನ್ಯಾಯಮೂರ್ತಿಗಳಾದ ಶಾಲಿನಿ ಫನ್ಸಾಲ್ಕರ್ ಜೋಶಿ ಮತ್ತು ಆಶಾ ಮೆನನ್ ಅವರು ಈ ಸಮಿತಿಯ ಇತರ ಇಬ್ಬರು ಸದಸ್ಯರಾಗಿದ್ದಾರೆ.